ಈ ಕೃತಿಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುವಾದರೆ, ಘೋಷ್ ಕ್ಷೇತ್ರಕಾರ್ಯಕ್ಕಾಗಿ ಇಜಿಪ್ಟಿನಲ್ಲಿ ಬಾಳ್ವೆ ನಡೆಸಿದ ದಿನಗಳ ಅನುಭವಗಳ ಕತೆ ಪ್ರವಾಸಕಥನಕ್ಕೆ ಸಂಬಂಧಿಸಿದ ವಸ್ತು. ಯಹೂದಿ-ಅರೇಬಿಕ್ ಭಾಷೆ ಕಲಿಯುವ ಸಲುವಾಗಿ ಘೋಷ್ ಲತಾಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದು ಯಾಕೆ ಈ ಹಳ್ಳಿಗಳಲ್ಲಿ ವಾಸ ಮಾಡಬೇಕಾಗಿ ಬರುತ್ತದೆ ಎನ್ನುವುದೂ ಕೂಡ ಮುಖ್ಯವೇ. ಕೈರೋದ ಜೆನಿಜಾದಲ್ಲಿ ಸಂಶೋಧಕರಿಗೆ ಬೆನ್ ಯಿಜುನ ಹಲವಾರು ಕಾಗದಪತ್ರಗಳು ಸಿಕ್ಕುತ್ತವೆ.
ಕಮಲಾಕರ ಕಡವೆ ಬರೆಯುವ ಅಂಕಣ

ಇತಿಹಾಸವೆನ್ನುವುದು ಹೇಗೆ ಹಲಬಗೆಯ ವಾದ-ವಾಗ್ವಾದಗಳ, ಸಿದ್ಧಾಂತಗಳ, ಲೋಕನೋಟಗಳ ರಣಕ್ಷೇತ್ರವಾಗಬಲ್ಲದು ಎಂದು ಭಾರತದಲ್ಲಿ ಕಳೆದ ಕೆಲ ದಶಕಗಳಲ್ಲಿ ನಮಗೆ ಮತ್ತೆಮತ್ತೆ ಅರಿವಿಗೆ ಬಂದಿದೆ. ಅಮಾಯಕ ಶಾಲಾಹುಡುಗನೊಬ್ಬನಿಗೆ ಇತಿಹಾಸವೆಂದರೆ ನಿನ್ನೆಗಳ ಕುರಿತಾದ ಸುಸಂಬದ್ಧ ವಿವರಣೆ. ಈ ವಿವರಣೆ ನಮಗೆ ಯಾವುದೇ ಸಂಗತಿಯನ್ನು ಶುರುವಿನಿಂದ ಅಂತ್ಯದವರೆಗೆ ತಾರ್ಕಿಕವಾಗಿ, ನೆಟ್ಟಗೆ, ನೇರ ಗೆರೆಯಂತೆ ಒಮ್ಮುಖವಾಗಿ ಸಾಗುವ, ವಾಸ್ತವಿಕ ಘಟನೆಗಳನ್ನಾಧರಿಸಿದ “ಸತ್ಯವಚನ”. ಇತಿಹಾಸವು ಘಟನೆಗಳ ಯಥಾವತ್ ಪ್ರಸ್ತುತಿ ಎಂದು, ಅಥವಾ ಹಾಗಿರಬೇಕೆಂದು, ಈಗಲೂ ಬಹಳ ಜನ ನಂಬುತ್ತಾರೆ.

ಇಪ್ಪತ್ತನೇ ಶತಮಾನದ ಕೊನೆಯ ದಶಕಗಳಲ್ಲಿ ಇತಿಹಾಸವೆನ್ನುವ ಸಂಕಥನದ ಕುರಿತಾಗಿಯೇ ಹಲಬಗೆಯ ಸಂಶಯಗಳನ್ನು ಸೂಚಿಸಲಾಗಿದೆ. ಪ್ರಾಬಲ್ಯದ ಹೇರಿಕೆಗೆ, ಅಧಿಕಾರದ ಸಾತತ್ಯಕ್ಕೆ, ಯಜಮಾನತ್ವದ (ಹೆಜೆಮನಿ) ಪ್ರಸ್ಥಾಪನೆಗೆ ಸಾಧನವಾಗಿ ಇತಿಹಾಸ ರಚನೆಯಾಗುತ್ತದೆಯೆನ್ನುವ, ಭೂತದ ಕುರಿತು ಯಥಾವತ್ ನಿರೂಪಣೆ ಅಸಾಧ್ಯವೆನ್ನುವ ಸಾಕ್ಷೇಪ ಸಿದ್ಧಾಂತಗಳು ಮುನ್ನೆಲೆಗೆ ಬಂದವು. ಇತಿಹಾಸ ಮತ್ತು ಕಾದಂಬರಿಗಳೆರಡೂ ಸಹ ಕಥನಗಳೇ – ಒಂದು ವಾಸ್ತವವನ್ನು, ಇನ್ನೊಂದು ಕಲ್ಪಿತ ಘಟನೆಗಳನ್ನು ಆಧರಿಸಿದ್ದು ಎಂಬ ನಂಬಿಕೆಯ ಜಾಗದಲ್ಲಿ, ಇತಿಹಾಸವೂ ಸಹ ಕಾದಂಬರಿಯಂತೆ ನಿರೂಪಿತ ವಾಸ್ತವ – ಅಂದರೆ ನಿರೂಪಣೆಯ ಶಿಸ್ತಿಗೆ ಒಳಗಾಗಿ, ಅದಕ್ಕನುಗುಣವಾಗಿ ರೂಪಿಸಲ್ಪಟ್ಟದ್ದು ಎನ್ನುವ ವಾದವೊಂದು ಬಂತು. ಇತಿಹಾಸದಿಂದ ವರ್ಜ್ಯಗೊಂಡ ಸಂಗತಿಗಳನ್ನು ಒಳಗೊಳ್ಳುವ ಸಲುವಾಗಿ ಸ್ಮೃತಿಕಥನಗಳ ಅಧ್ಯಯನವೂ ಮೊದಲಾಯಿತು.

ಈ ಹಿನ್ನೆಲೆಯಲ್ಲಿ ಇತಿಹಾಸ-ಲೇಖನ ಅನೇಕ ಬದಲಾವಣೆಗಳನ್ನು ಕಂಡಿದೆ. ಆಳುವವರ ಜೀವನಗಾಥೆಯಾಗಿ ಶಾಲಾ ಮಕ್ಕಳಿಗೆ ಪರಿಚಯಿಸಲಾಗುತ್ತಿದ್ದ ಇತಿಹಾಸ-ಲೇಖನದ ಶೈಲಿಯನ್ನು ಬದಿಗಿರಿಸಿ, ಸಾಮಾನ್ಯರ ಬದುಕನ್ನು ಕೂಡ ಅನ್ವೇಷಿಸುವ ಉದ್ದೇಶದಿಂದ “ತಳದಿಂದ ಇತಿಹಾಸ” ಬರೆಯುವ ಪ್ರಯತ್ನ ಮಾಡಲಾಯಿತು. ಭಾರತದಲ್ಲಿ ಕೂಡ, ವಸಾಹತುಶಾಹಿ ಇತಿಹಾಸ-ಲೇಖನ ಮತ್ತು ರಾಷ್ಟ್ರವಾದಿ ಇತಿಹಾಸ-ಲೇಖನ ಪದ್ಧತಿಗಳು ಕೆಲವೇ ಜನರನ್ನು ಕರ್ತೃತ್ವಶಕ್ತಿ ಹೊಂದಿರುವ ಇತಿಹಾಸ-ನಿರ್ಮಾಪಕರನ್ನಾಗಿ ನೋಡಿ, ಸಾಮಾನ್ಯ ಜನರನ್ನು ಕೇವಲ ಹಿಂಬಾಲಕರನ್ನಾಗಿ ನೋಡುವ ರೀತಿಯನ್ನು ಟೀಕಿಸಿ ಸಬಾಲ್ಟರ್ನ್ ಸ್ಟಡೀಸ್ ಎಂಬ ಇತಿಹಾಸ-ಲೇಖನ ಪದ್ಧತಿ ೧೯೮೦ರ ಸುಮಾರಿಗೆ ಮುನ್ನೆಲೆಗೆ ಬಂತು. ಸ್ಥೂಲವಾಗಿ, ಜನರು ತಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸಕ್ರಿಯ ಪಾತ್ರವಹಿಸುತ್ತಾರೆ, ಅವರು ಸ್ವಂತ ಕರ್ತೃತ್ವವಿಲ್ಲದ ಕುರುಡು ಹಿಂಬಾಲಕರಲ್ಲ ಎನ್ನುವುದನ್ನು ಪುಷ್ಟೀಕರಿಸುವ ಇತಿಹಾಸ-ಲೇಖನ ಪದ್ಧತಿ ಇದಾಗಿದೆ.

“ಇನ್ ಆನ್ ಆಂಟೀಕ್ ಲ್ಯಾಂಡ್” ಎಂಬ ಕೃತಿಯ ಚರ್ಚೆಗೆ ಮೊದಲಾಗುವ ಮುನ್ನ ಇಂತಹ ಪೀಠಿಕೆಯೊಂದು ಅವಶ್ಯವೆನಿಸುವಂತಹ ಪ್ರಯೋಗಾತ್ಮಕ ಕೃತಿ ಇದು. ಇತಿಹಾಸ-ಲೇಖನ, ಮಾನವಶಾಸ್ತ್ರಗಳಲ್ಲಿ ನಡೆದಿರುವ ಸ್ವವಿಮರ್ಶೆಗಳ ಸಂಧರ್ಭದಲ್ಲಿ, ಕಥನದ ಮೂಲಕ ಒಂದು ಪರ್ಯಾಯ ಪ್ರಸ್ತುತಿ ಪದ್ಧತಿಯನ್ನು ಸೂಚಿಸುವ ಮಹಾತ್ವಾಕಾಂಕ್ಷೆಯ ಕೃತಿ ಇದು. ೧೯೯೨ರಲ್ಲಿ ಪ್ರಕಟವಾದ “ಆಂಟೀಕ್ ಲ್ಯಾಂಡ್”ಅನ್ನು ಕಾದಂಬರಿಯಾಗಿ ನೋಡಬೇಕೋ, ಪ್ರವಾಸಕಥನವಾಗಿ ನೋಡಬೇಕೋ, ಸಮಾಜಶಾಸ್ತ್ರೀಯ ಅಧ್ಯಯನವೆಂದು ಗ್ರಹಿಸಬೇಕೋ ಎಂಬ ಗೊಂದಲವನ್ನು ಈ ಅನನ್ಯ ಬರವಣಿಗೆ ಹುಟ್ಟು ಹಾಕಿತು.

(ಅಮಿತಾವ್ ಘೋಷ್)

ಇದನ್ನು ಬರೆದ ಅಮಿತಾವ್ ಘೋಷ್ ಅದಾಗಲೇ ಭಾರತೀಯ ಮೂಲದ ಆಂಗ್ಲ ಲೇಖಕರಲ್ಲಿ ಅಗ್ರಗಣ್ಯರೆಂದು ಹೆಸರು ಮಾಡುವಷ್ಟು ಅವರ ಆವರೆಗಿನ ಕೃತಿಗಳಾದ “ದ ಸರ್ಕಲ್ ಆಫ್ ರೀಸನ್” (೧೯೮೬) ಮತ್ತು “ದ ಶ್ಯಾಡೋ ಲೈನ್ಸ್” (೧೯೮೮) ಯಶಸ್ಸು ಕಂಡಿದ್ದವು. ಮುಂದೆ ಅವರು “ಡಾನ್ಸಿಂಗ್ ಇನ್ ಕಂಬೋಡಿಯಾ, ಅಟ್ ಲಾರ್ಜ್ ಇನ್ ಬರ್ಮಾ” (೧೯೯೮), “ಕೌಂಟ್ ಡೌನ್” (೧೯೯೯), “ದ ಇಮಾಮ್ ಅಂಡ್ ದ ಇಂಡಿಯನ್” (೨೦೦೨),”ಇನಸೆಂಡಿಯರಿ ಸರ್ಕಮಸ್ಟನ್ಸಸ್” (೨೦೦೫), “ದ ಗ್ರೇಟ್ ಡಿರೇಂಜಮೆಂಟ್” (೨೦೧೬) ಎಂಬ ಕಥನೇತರ ಕೃತಿಗಳನ್ನು ರಚಿಸಿದ್ದಾರೆ. ಅಂತೆಯೇ ಐತಿಹಾಸಿಕ ವಿಷಯವುಳ್ಳ ವಾಸ್ತವವಾದಿ ನಿರೂಪಣಾ ಶೈಲಿಯಲ್ಲಿ ಬರೆದ “ಐಬಿಸ್ ಟ್ರಿಲಾಜಿ” ಕೂಡ ಘೋಷ್ ಅವರ ಜಾಗತಿಕ ಪ್ರಸಿದ್ಧಿಯನ್ನು ಖಾಯಂ ಆಗಿಸಿತು.

ಇವೆಲ್ಲವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಚಿಸಿದರೂ ಸಹ, “ಆಂಟೀಕ್ ಲ್ಯಾಂಡ್” ಬಹಳ ಅಪರೂಪದ ಕೃತಿಯಾಗಿದೆ. ಈ ಲೇಖನದಲ್ಲಿ ನಾನು ಅದು ಯಾಕೆ ಅಷ್ಟು ಅನನ್ಯ ಕೃತಿ ಎನ್ನುವುದರ ವಿವರಣೆ ಕೊಡುತ್ತ, ಬರಹಗಾರನೊಬ್ಬ ಹೇಗೆ ತನ್ನದೇ ಆದ ಒಂದು ನೈತಿಕ ದರ್ಶನವನ್ನು ಕೃತಿಯಿಂದ ಕೃತಿಗೆ ಬೆಳೆಸುತ್ತ, ತಾನು ಬಳಸುತ್ತಿರುವ ಬರವಣಿಗೆಯ ಪದ್ಧತಿ/ಪ್ರಕಾರಗಳ ಪರಿಧಿಯನ್ನೇ ವಿಸ್ತರಿಸುತ್ತಾನೆ ಎಂದು ವಿವರಿಸುವ ಪ್ರಯತ್ನ ಮಾಡಬಯಸುತ್ತೇನೆ. ಕನ್ನಡದಲ್ಲಿಯೂ ಕುವೆಂಪು, ದೇವನೂರು, ತೇಜಸ್ವಿ, ಮತ್ತಿತತರ ಬರಹಗಾರರು ಇದನ್ನು ನಮ್ಮ ಅರಿವಿಗೆ ತಂದಿದ್ದಾರೆ.

ಯಾರು ಏನೇ ಅಂದುಕೊಳ್ಳಲಿ, ನಾನಂತೂ ಅಮಿತಾವ್ ಘೋಷ್ ಅವರನ್ನು ಭಾರತೀಯ ಆಂಗ್ಲ ಲೇಖಕರುಗಳಲ್ಲಿ, ವಿಶಿಷ್ಟ ಬರಹಗಾರರು ಎಂದೇ ಪರಿಗಣಿಸುತ್ತೇನೆ. ಅಥವಾ ಇದನ್ನೇ ಸ್ವಲ್ಪ ಪ್ರಚೋದನಕಾರಿಯಾಗಿ ಹೇಳಬೇಕೆಂದರೆ, ಭಾರತೀಯ ಆಂಗ್ಲ ಸಾಹಿತಿಗಳಲ್ಲಿ ಭಾರತೀಯ ಭಾಷೆಗಳಲ್ಲಿ ಬರೆಯುವ ಸಾಹಿತಿಗಳಂತೆ ಅನುಭವದ ಆಳವಿಟ್ಟುಕೊಂಡ ಬರೆಯುವ ಏಕೈಕ ಸಾಹಿತಿ ಘೋಷ್.

“ದ ಗ್ಲಾಸ್ ಪ್ಯಾಲೇಸ್”, (೨೦೦೦) ಮತ್ತು “ಐಬಿಸ್ ಟ್ರಿಲಾಜಿ”ಯ ಮೂರು ಕಾದಂಬರಿಗಳಲ್ಲಿ ದಟ್ಟ ಐತಿಹಾಸಿಕ ವಿವರಗಳ ಮೂಲಕ ಮರೆತೇ ಹೋಗಿದ್ದ ಜಗವನ್ನು, ಘಟನೆಗಳನ್ನೂ, ದುರಂತಗಳನ್ನೂ ಮುಂದಿನ ಪೀಳಿಗೆಗಳಿಗಾಗಿ ಕಣ್ಣಿಗೆ ಕಟ್ಟುವಷ್ಟು ಸ್ಫುಟವಾಗಿ ಬರೆದಿರುವ ಘೋಷ್, “ದ ಕಲ್ಕತ್ತಾ ಕ್ರೋಮೋಸೋಮ್” (೧೯೯೫) ಮೂಲಕ ವೈಜ್ಞಾನಿಕ ಕಥನ ಮತ್ತು “ದ ಹಂಗ್ರಿ ಟೈಡ್” ಹಾಗೂ “ಗನ್ ಐಲ್ಯಾಂಡ್” (೨೦೧೯) ಮೂಲಕ ಪರಿಸರಕಾಳಜಿಯ ಕಥನಗಳಲ್ಲಿಯೂ ತಮ್ಮ ಪ್ರಾವೀಣ್ಯತೆಯನ್ನು ದರ್ಶಿಸುವ ಮುಖಾಂತರ ಅಪ್ಪಟ ಕಾದಂಬರಿಕಾರನೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮಿತಾವ್ ಘೋಷ್ ಅವರ ಕೃತಿಗಳಲ್ಲಿ ಒಂದಕ್ಕಿಂತ ಇನ್ನೊಂದು ಸೊಗಸಾಗಿದೆ ಅನ್ನಬೇಕಾಗಿರುವಾಗ, ಅವೆಲ್ಲವುಗಳಿಗಿಂತ ಭಿನ್ನವೂ, ಅಸಾಮಾನ್ಯವೂ ಆದ “ಇನ್ ಆನ್ ಆಂಟೀಕ್ ಲ್ಯಾಂಡ್” ಕೃತಿ ಒಂದು ವಿಶೇಷ ಸಾಧನೆ ಎಂದೇ ನಂಬಿರುವವರಲ್ಲಿ ನಾನೂ ಒಬ್ಬ. ಇತಿಹಾಸ, ಆತ್ಮಕತೆ, ಮಾನವಶಾಸ್ತ್ರೀಯ ಅಧ್ಯಯನ ವರದಿ, ಪ್ರವಾಸಕಥನ ಹೀಗೆ ಬಹುಪ್ರಕಾರಗಳನ್ನು ಒಳಗೊಂಡ ಇದೊಂದು ಅನನ್ಯ ಕಥನ.

ಪುರಾತನ ಇಜಿಪ್ಟಿನಿಂದ, ಸಮಕಾಲೀನ ಇಜಿಪ್ಟು, ಭಾರತ, ಇಂಗ್ಲಂಡು, ಅಮೇರಿಕ, ಇರಾಕ್ ಹೀಗೆ ನಮ್ಮನ್ನು ಕಾಲದೇಶಗಳ ಬೇಲಿಗಳಾಚೆ ಕರೆದೊಯ್ಯುವ “ಆಂಟೀಕ್ ಲ್ಯಾಂಡ್” ಕೃತಿಯ ಉಗಮ ಹಸ್ತಪ್ರತಿಯೊಂದರಲ್ಲಿ ಘೋಷ್ ಕಂಡ ಆಶ್ಚರ್ಯಜನಕ ಉಲ್ಲೇಖದಿಂದ ಆಯಿತು. ಮಾನವಶಾಸ್ತ್ರದ ವಿಧ್ಯಾರ್ಥಿಯಾಗಿ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ, ಹನ್ನೆರಡನೇ ಶತಮಾನದ ಇಜಿಪ್ಟಿನ ಒಂದು ಪಟ್ಟಣದಲ್ಲಿ ಭಾರತೀಯ ಜೀತದಾಳಿನ ಮಾಲಿಕನಾಗಿದ್ದ ಯಹೂದಿ ವರ್ತಕನ ಕುರಿತು ಘೋಷ್ ಒಂದು ಉಲ್ಲೇಖವನ್ನು ಕಾಣುತ್ತಾರೆ. ಈ ಭಾರತೀಯ ಜೀತದಾಳು ಯಾರು, ಅವನು ಜೀತದಾಳಾಗಿದ್ದು ಹೇಗೆ, ಇಜಿಪ್ಟಿನ ಯಹೂದಿ ವರ್ತಕ ಅದೇಕೆ ಭಾರತೀಯ ಜೀತದಾಳನ್ನು ಇಜಿಪ್ಟಿಗೆ ಕರೆತಂದಿದ್ದ, ಅವರಿಬ್ಬರ ನಡುವೆ ಇದ್ದ ಸಂಬಂಧ ಯಾವ ಬಗೆಯದು, ಮುಂತಾದ ನಿಗೂಢಗಳು ಘೋಷ್ ಅವರನ್ನು ಕಾಡುತ್ತ, ಇವುಗಳಿಗೆ ಉತ್ತರ ಹುಡುಕಲು ಅವರು ನಡೆಸಿದ ಪ್ರಯತ್ನ ಮತ್ತು ಅದು ತಂದಿತ್ತ ಮಾಹಿತಿಗಳನ್ನು ಒಂದರೊಳಗೊಂದು ಹೆಣೆದಿರುವ ಕಥಾನಕಗಳ ಜಾಲ “ಇನ್ ಆನ್ ಆಂಟೀಕ್ ಲ್ಯಾಂಡ್”.

ಮೂಲತಃ, ಇದು ಹನ್ನೆರಡನೇ ಶತಮಾನದಲ್ಲಿ ಬದುಕಿದ್ದ “ಬೊಮ್ಮ” ಎಂಬ ಸಾಮಾನ್ಯ ಭಾರತೀಯನೊಬ್ಬನ ಬದುಕಿನ ಕುರಿತಾದ ಅನ್ವೇಷಣೆಯ ಕತೆ. ಈತ ಅಬ್ರಹಾಮ್ ಬೆನ್ ಯಿಜು ಎಂಬ ಯಹೂದಿ-ಅರಬ್ ವರ್ತಕನ ಜೀತದಾಳಾಗಿ ಕೆಲಸ ಮಾಡುತ್ತಿದ್ದ ಎನ್ನುವ ಪುರಾವೆ ಮೊತ್ತಮೊದಲು ಲೇಖಕರ ಕಣ್ಣಿಗೆ ಬಿದ್ದದ್ದು ಕ್ರಿ.ಶ. ೧೧೩೯ರಲ್ಲಿ ಖಲಾಫ಼್ ಇಬ್ನ್ ಇಶಕ್ ಎಂಬ ವರ್ತಕ ತನ್ನ ಮಿತ್ರನಾದ ಅಬ್ರಹಾಂ ಬೆನ್ ಯಿಜುವಿಗೆ ಬರೆದ ಒಂದು ಪುರಾತನ ಪತ್ರದಲ್ಲಿ. ಖಲಾಫ಼್ ಇಬ್ನ್ ಇಶಕ್ ಎನ್ನುವವನ ಕುರಿತಾಗಿ ವಿವರಗಳು ದೊರಕುತ್ತಿರುವುದೇ ಪವಾಡಸದೃಶವೆಂದು ಎಂದು ಘೋಷ್ ಚಕಿತರಾಗುತ್ತಾರೆ. ಯಾಕೆಂದರೆ, ಇತಿಹಾಸ ನೆನಪಿನಲ್ಲಿಡಬೇಕಾದ ಯಾವುದೇ ಗಮನಾರ್ಹ ಕೆಲಸ ಮಾಡಿರದ ಸಾವಿರಾರು ವರ್ತಕರಲ್ಲಿ ಆತ ಒಬ್ಬನಾಗಿದ್ದ. ಹಾಗಿದ್ದರೆ ಇತಿಹಾಸದ ಪುಟಗಳಲ್ಲಿ ಈತ ಮೂಡಿದ್ದು ಹೇಗೆ? ಅದರ ಹಿಂದಿರುವ ಕಾರಣವೂ ಕೂಡ ನಮಗೆ ಕುತೂಹಲಕಾರಿಯಾದುದೇ.

ಮಧ್ಯ ಯುಗದ ಯಹೂದಿಗಳ ನಂಬಿಕೆಯ ಪ್ರಕಾರ ದೇವರ ಹೆಸರನ್ನು ಬರೆದಿರಬಹುದಾದ ಕಾಗದವನ್ನು ಆಕಸ್ಮಿಕವಾಗಿಯೂ ನಾಶ ಮಾಡುವುದು ಧರ್ಮಬಾಹಿರ ಕ್ರಿಯೆಯಾಗಿತ್ತು. ಅದಕ್ಕೆಂದೇ ಯಹೂದಿ ಸಮುದಾಯಗಳು ಕಾಗದ ಪತ್ರಗಳನ್ನು ಒಂದೆಡೆ ಕೂಡಿಡಲು ತಮ್ಮ ದೇಗುಲದಲ್ಲಿಯೇ “ಜೆನಿಜಾ” ಎಂದು ಕರೆಯಲಾಗುತ್ತಿದ್ದ ದಾಸ್ತಾನು ಕೋಣೆ ಮಾಡಿಕೊಂಡಿದ್ದರು. ಹತ್ತೊಂಬತ್ತನೇ ಶತಮಾನದಲ್ಲಿ ಐರೋಪ್ಯ ಸಂಶೋಧಕರು – ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಜನಾಂಗಶಾಸ್ತ್ರಜ್ಞರು ವಸಾಹತು ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಯ ಭಾಗವಾಗಿ ಈ ಮಾಹಿತಿ ಸಂಪನ್ಮೂಲಗಳನ್ನು ಯುರೋಪಿನ ಗ್ರಂಥಾಲಯಗಳಿಗೆ ಕೊಂಡುಹೋದರು. ಘೋಷ್ ಅವರ ಕೃತಿಯ ವಿಮರ್ಶಾತ್ಮಕ ಭಾಗಗಳಲ್ಲಿ ಸಂಶೋಧನೆಯ ಈ ವಸಾಹತುಶಾಹಿ ಇತಿಹಾಸದ ವಿಮರ್ಶೆಯೂ ಸೇರಿದೆ. ಮತ್ತು ತನ್ಮೂಲಕ ಘೋಷ್ ವಸಾಹತುಶಾಹಿಯ ಜ್ಞಾನರಾಜಕಾರಣದ ನೆಲೆಗಳ ಕಡೆ ಗಮನ ಸೆಳೆಯುತ್ತಾರೆ.

ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದ ಭಾಗವಾಗಿ ಕೈಗೊಂಡ ಸಂಶೋಧನೆಯಿಂದಲೇ ಬೆನ್ ಯಿಜು ಮತ್ತವನ ಜೀತದಾಳು ಬೊಮ್ಮನ ಕತೆಯನ್ನು ಮರುರೂಪಿಸುತ್ತಿರುವ ಘೋಷ್ ಅವರಿಗೆ ತಮ್ಮ ಜ್ಞಾನಶಾಖೆಯ, ಮತ್ತು ತಾವು ನಡೆಸಿರುವ ಸಂಶೋಧನಾ ಕಾರ್ಯವನ್ನು ಸಾಧ್ಯವಾಗಿಸಿರುವ ಸಂಸ್ಥೆಗಳು ಮತ್ತು ಸಂಕಥನಗಳ ಕುರಿತು ಸಹ ವಿಮರ್ಶಾತ್ಮಕ ಚಿಂತನೆಯ ಅಗತ್ಯದ ಅರಿವಿದೆ ಎಂದು ಸ್ಪಷ್ಟವಾಗುತ್ತದೆ.

ಸ್ವಲ್ಪ ಪ್ರಚೋದನಕಾರಿಯಾಗಿ ಹೇಳಬೇಕೆಂದರೆ, ಭಾರತೀಯ ಆಂಗ್ಲ ಸಾಹಿತಿಗಳಲ್ಲಿ ಭಾರತೀಯ ಭಾಷೆಗಳಲ್ಲಿ ಬರೆಯುವ ಸಾಹಿತಿಗಳಂತೆ ಅನುಭವದ ಆಳವಿಟ್ಟುಕೊಂಡ ಬರೆಯುವ ಏಕೈಕ ಸಾಹಿತಿ ಘೋಷ್.

ಸರಳವಾಗಿ ಹೇಳಬೇಕೆಂದರೆ, ಬೆನ್ ಯಿಜುವಿನ ಕತೆಯೆಂದರೆ ಇಫ್ರೀಕಿಯಾ ಮೂಲದ ವರ್ತಕನೊಬ್ಬ ೧೧೩೦ರ ಸುಮಾರಿಗೆ ಮಂಗಳೂರಿಗೆ ಬರುತ್ತಾನೆ. ವ್ಯಾಪಾರ ಕಾರಣಗಳಿಗಾಗಿ ಎರಡು ದಶಕಗಳ ಕಾಲ ಅಲ್ಲಿ ವಾಸ್ತವ್ಯ ಮಾಡುತ್ತಾನೆ. ಅಲ್ಲಿಯೇ ಅವನು ಆಶು ಎಂಬ ಮಹಿಳಾ ಜೀತದಾಳನ್ನು ೧೧೩೨ರಲ್ಲಿ ಜೀತದಿಂದ ಮುಕ್ತಿಗೊಳಿಸಿ, ಅವಳನ್ನೇ ಮದುವೆಯಾಗಿ ಸಂಸಾರ ಸಾಗಿಸುತ್ತಾನೆ. ತಾಮ್ರ ವಸ್ತುಗಳ ಕಾರ್ಖಾನೆ ನಡೆಸುತ್ತ ಸಂಪತ್ತು ಗಳಿಸಿದ ಅವನು, ಮುಂದೆ, ೧೧೪೯ರಲ್ಲಿ ಅಂದಿನ ವ್ಯಾಪಾರ ಕೇಂದ್ರಗಳಲ್ಲಿ ಪ್ರಮುಖವಾಗಿದ್ದ ಆಡೆನ್ ಶಹರಕ್ಕೆ ಹೋದ ಪುರಾವೆಗಳಿವೆ. ಆ ನಂತರ ಫುಸ್ತತ್ ಎಂದು ಆ ಕಾಲದಲ್ಲಿ ಕರೆಯಲ್ಪಡುತ್ತಿದ್ದ, ಇಂದಿನ ʼಹಳೆಯ ಕೈರೋ’, ಪಟ್ಟಣದಲ್ಲಿ ವಿಶ್ರಾಂತ ಜೀವನಕ್ಕೆ ಹೊರಳುತ್ತಾನೆ.

ಇದು ಈ ಕೃತಿಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುವಾದರೆ, ಘೋಷ್ ಕ್ಷೇತ್ರಕಾರ್ಯಕ್ಕಾಗಿ ಇಜಿಪ್ಟಿನಲ್ಲಿ ಬಾಳ್ವೆ ನಡೆಸಿದ ದಿನಗಳ ಅನುಭವಗಳ ಕತೆ ಪ್ರವಾಸಕಥನಕ್ಕೆ ಸಂಬಂಧಿಸಿದ ವಸ್ತು. ಯಹೂದಿ-ಅರೇಬಿಕ್ ಭಾಷೆ ಕಲಿಯುವ ಸಲುವಾಗಿ ಘೋಷ್ ಲತಾಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದು ಯಾಕೆ ಈ ಹಳ್ಳಿಗಳಲ್ಲಿ ವಾಸ ಮಾಡಬೇಕಾಗಿ ಬರುತ್ತದೆ ಎನ್ನುವುದೂ ಕೂಡ ಮುಖ್ಯವೇ. ಕೈರೋದ ಜೆನಿಜಾದಲ್ಲಿ ಸಂಶೋಧಕರಿಗೆ ಬೆನ್ ಯಿಜುನ ಹಲವಾರು ಕಾಗದಪತ್ರಗಳು ಸಿಕ್ಕುತ್ತವೆ. ಆದರೆ, ಇಂದಿನ ಕೈರೋ ಮತ್ತು ಬೆನ್ ಯಿಜುನ ಕಾಲದ ಕೈರೋದ ಒಂದು ಭಿನ್ನತೆ ಎಂದರೆ ಆಗ ಬಳಸಲಾಗುತ್ತಿದ್ದ ಅರೇಬಿಕ್ ಭಾಷೆ. ಬೆನ್ ಯಿಜು ತನ್ನ ಕಾಗದಪತ್ರಗಳಲ್ಲಿ ಬಳಸುತ್ತಿದ್ದುದು ಪುರಾತನ ಅರೇಬಿಕ್ ಭಾಷೆಯಾಗಿರಲಿಲ್ಲ, ಬದಲಿಗೆ ಬರಹಕ್ಕಿಂತಲೂ ಮೌಖಿಕ ಶೈಲಿಗೆ ಹತ್ತಿರವಿದ್ದ ಯಹೂದಿ-ಅರೇಬಿಕ್ ಎನ್ನುವ ಉಪಭಾಷೆ. ಆಧುನಿಕ ಕಾಲದಲ್ಲಿ ಈ ಭಾಷೆಯನ್ನು ಬಲ್ಲ ವಿದ್ವಾಂಸರು ಯಾರೂ ಇಲ್ಲವಾದ್ದರಿಂದ, ಯಹೂದಿ-ಅರೇಬಿಕ್ ಭಾಷೆಯನ್ನು ಹೋಲುವ ಭಾಷೆಯಾಡುವ ಲತಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ಘೊಷ್ ಒಂದು ವರ್ಷ ಕಳೆಯುತ್ತಾರೆ.

ಅಲ್ಲಿ ಓರ್ವ ಭಾರತೀಯನಾಗಿ, ಅನ್ಯಧರ್ಮೀಯನಾಗಿ, ವಿಶ್ವರಾಜಕಾರಣದಲ್ಲಿ ಹೆಸರಿರದ ಬಡದೇಶದ ನಾಗರಿಕನೆಂಬ ಗುರುತಿನಲ್ಲಿ, “ವಿಚಿತ್ರ” ಸಂಸ್ಕೃತಿಯೊಂದರ ಪ್ರತಿನಿಧಿಯಾಗಿ ಘೋಷ್ ಸ್ಥಳೀಯರ ಜೊತೆ ಹಲವಾರು ವಿಶಿಷ್ಟ ಅನುಭವ ಪಡೆಯುತ್ತಾರೆ. ಈ ಸ್ಥಳೀಯರಲ್ಲಿ ಅವರ ವಾಸ್ತವ್ಯದ ಬಾಡಿಗೆ ಮನೆಯ ಮಾಲಿಕ ಅಬು ಅಲಿ, ನೇಕಾರ ಜಘುಲ್, ಖಮೀಸ್, ಇಮಾಮ್ ಇತ್ಯಾದಿ ಜನರಿದ್ದಾರೆ. ಅವರು ಭಾರತದ ಕುರಿತು ಹೊಂದಿದ್ದ ಗ್ರಹಿಕೆಗಳು, ಅವರಿಗೆ ಹಿಂದು ಧರ್ಮದ ಕುರಿತಿದ್ದ ಪೂರ್ವಾಗ್ರಹಗಳು, ಘೋಷ್ ಅವರನ್ನು ಮತ್ತೆ ಮತ್ತೆ ಭಾರತದ ಸಂಸ್ಕೃತಿಯ ರಾಯಭಾರಿಯ ರೂಪದಲ್ಲಿ ಆ ಹಳ್ಳಿಗರ ಮುಂದಿಡುತ್ತದೆ. ಭಾರತದ ಸಂಸ್ಕೃತಿ ಕುರಿತು ವಿವರಣೆ ಕೊಡುವ ಸವಾಲು ಅವರ ಪಾಲಾಗುತ್ತದೆ.

ಇಲ್ಲಿ, ಯಾರು ಮಾಹಿತಿ ಪಡೆಯಲು ಬಂದಿರುವನೋ, ಅವನೇ ಮಾಹಿತಿ ಕೊಡುವವನಾಗಿ ಮಾರ್ಪಾಟಾಗುವ ಪರಿಸ್ಥಿತಿಯನ್ನು ಕಾಣುತ್ತೇವೆ. ಒಂದು ರೀತಿಯಲ್ಲಿ ಮಾನವಶಾಸ್ತ್ರವೆಂಬ ಜ್ಞಾನಶಾಖೆ ತಾನು ಯಾರ ಕುರಿತು ಸಂಶೋಧನೆ ನಡೆಸಿದೆಯೋ ಅವರನ್ನು “ಇತರ”ರನ್ನಾಗಿಸುವುದರ ಕುರಿತಾಗಿದ್ದ ವಿಮರ್ಶೆಗೆ ಸೂಕ್ತವೆನ್ನುವಂತೆ, ಇಲ್ಲಿ ಮಾನವಶಾಸ್ತ್ರಜ್ಞನೇ “ಇತರ”ನಾಗುವ ವಿಲೋಮ ಪರಿಸ್ಥಿತಿ ಇರುವುದು ಒಂದು ವಿಶೇಷ.

ಹನ್ನೆರಡನೇ ಶತಮಾನದ ವ್ಯಾಪಾರವಿಶ್ವದ ಒಂದು ಕಣಮಾತ್ರದ ಶೋಧಕ್ಕಾಗಿ ಮಾಹಿತಿ, ಕಾಗದಪತ್ರಗಳ ಸಂಶೋಧನೆಯಲ್ಲಿ ತೊಡಗಿಕೊಂಡು, ಅದಕ್ಕಾಗಿ ಚಾಲ್ತಿಯಲ್ಲಿಲ್ಲದ ಭಾಷೆಯೊಂದನ್ನು ಕರಗತ ಮಾಡಿಕೊಂಡು, ವಿಶ್ವದೆಲ್ಲೆಡೆ ಹರಿದುಹಂಚಿಹೋದ ಕಾಗದಪತ್ರಗಳಲ್ಲಿ ಸುಳುಹುಗಳಿಗಾಗಿ ಹುಡುಕಾಡುತ್ತ, ಸಮಕಾಲೀನ ಇಜಿಪ್ಟಿನ ಹಳ್ಳಿಗಳಲ್ಲಿ ಒಬ್ಬ ಪರದೇಶಿಯಾಗಿ ಬದುಕುತ್ತ, ತಮ್ಮ ಈ ಎಲ್ಲ ಅಪರೂಪದ ಸಂಶೋಧನೆ, ಅನುಭವ, ಎಂಟು ನೂರು ವರ್ಷಗಳಷ್ಟು ಹಿಂದೆ ನಡೆದಿರಬಹುದಾದ ಘಟನೆಗಳು, ಅವುಗಳನ್ನು ಸಾಧ್ಯವಾಗಿಸಿದ ಸಂಗತಿಗಳು, ವ್ಯಕ್ತಿಗಳು, ಅವೆಲ್ಲದರ ಹಿಂದಿನ ಕಾರ್ಯಕಾರಣಗಳ ಕುರಿತಂತೆ ಖಚಿತ ಕಲ್ಪನೆಯ ಆಧಾರದ ಮೇಲೊಂದು ಕಥನವನ್ನು ರೂಪುಗೊಳಿಸುವುದು – ಇದು ಹಲವು ಸ್ತರಗಳಲ್ಲಿ ಅಮಿತಾವ್ ಘೋಷ್ ನಡೆಸುವ ಸಾಹಸ.
ಇತಿಹಾಸ, ಪ್ರವಾಸಕಥನಗಳಂತೆಯೇ, “ಆಂಟೀಕ್ ಲ್ಯಾಂಡ್”, ಈ ಒಟ್ಟಾರೆ ಸಂಶೋಧನೆಯ ಕತೆಯನ್ನೂ ಹೇಳುತ್ತದೆ.

ಹನ್ನೆರಡನೇ ಶತಮಾನದ ಈ ವ್ಯಾಪಾರ-ವಹಿವಾಟಿನ ಕುರಿತಾದ ವಿಷಯಗಳ ಕುರಿತು ಹತ್ತೊಂಬತ್ತನೇ ಶತಮಾನದಿಂದ ನಡೆದಿರುವ ಸಂಶೋಧನೆ ಮತ್ತು ಅದು ಅನಾವರಣಗೊಳಿಸಿರುವ ಮಾಹಿತಿಗಳ ಕುರಿತಾದ ಕತೆಯ ಮುಖಾಂತರ ಘೋಷ್ ವಸಾಹತುಶಾಹಿ ಜ್ಞಾನಶಿಸ್ತುಗಳ ಕುರಿತಾದ ವಿಷ್ಲೇಷಣೆ, ವಿಮರ್ಶೆಯ ಸ್ತರವೊಂದನ್ನು ತೆರೆಯುತ್ತಾರೆ. ವಸಾಹತುಶಾಹಿ ಕಾಲದಲ್ಲಿ ಇಜಿಪ್ಟಿನ ಜೆನಿಜಾಗಳಲ್ಲಿದ್ದ ಕಾಗದಪತ್ರಗಳನ್ನು ಐರೋಪ್ಯ ವಿದ್ವಾಂಸರು ಅಧ್ಯಯನದ ಹೆಸರಲ್ಲಿ ದೋಚಿಕೊಂಡು ಹೋಗುವುದು ಸಂಸ್ಕೃತಿಯೊಂದಕ್ಕೆ ಅದರದ್ದೇ ಸಂಪನ್ಮೂಲಗಳನ್ನು ನಿರಾಕರಿಸುವ ಹಿಂಸೆಯಲ್ಲವೇ? ಇಂತಹ ದರೋಡೆಗಳ ಮೂಲಕ ಪ್ರಸ್ಥಾಪಿತಗೊಂಡಿರುವ ಜ್ಞಾನಶಿಸ್ತುಗಳನ್ನು ಹೇಗೆ ಕಾಣಬೇಕು, ಹೇಗೆ ವಿಮರ್ಶಿಸಬಹುದು ಎನ್ನುವ ಅನ್ವೇಷಣೆಯೂ ನಮಗೆ ಈ ಕೃತಿಯಲ್ಲಿ ಕಂಡು ಬರುವುದು ಇದರ ವಿಶೇಷಗಳಲ್ಲೊಂದು.

ಘೋಷ್ ತಮ್ಮ ಕೃತಿಗೆ “ಪ್ರವಾಸಕಥನದ ಮುಸುಕಿನಲ್ಲಿ ಇತಿಹಾಸ” ಎಂಬ ಉಪ-ಶೀರ್ಷಿಕೆ ಕೊಟ್ಟಿದ್ದಾರೆ. ಹಾಗಾದರೆ, ಇತಿಹಾಸ ಬರವಣಿಗೆಯೇ ಅವರ ಪ್ರಮುಖ ಉದ್ದೇಶವಲ್ಲವೇ! ಮತ್ತೆ, ಎಲ್ಲರಂತೆ, ತಾರೀಕು, ಅಂಕಿಸಂಖ್ಯೆಗಳು, ನಾಮ ನಿರ್ದೇಶನಗಳಿಂದ ತುಂಬಿದ “ನೆಟ್ಟಗಿನ” ಇತಿಹಾಸ ನಿರೂಪಣೆ ಯಾಕೆ ಮಾಡುವುದಿಲ್ಲ? ಇದಕ್ಕೆ ಉತ್ತರ ಇತಿಹಾಸ ಬರವಣಿಗೆಯ ಆಂತರಿಕ ಸ್ತಿತ್ಯಂತರಗಳ ಕಡೆ ನಮ್ಮನ್ನು ಒಯ್ಯುತ್ತದೆ. ಘೋಷ್ ತಮ್ಮ ಐತಿಹಾಸಿಕ ಕಥನಗಳನ್ನು – ಅವು ಐತಿಹಾಸಿಕ ಕಾದಂಬರಿಯೂ ಇರಬಹುದು – ವಿಘಟಿತ ನಿರೂಪಣೆಗೆ ಒಳಪಡಿಸಿ, ಹೈಬ್ರಿಡ್ ಬರವಣಿಗೆಯ ಪ್ರಕಾರವೊಂದನ್ನು ಪರಿಷ್ಕರಿಸಿಕೊಂಡು ಸಂಕೀರ್ಣ ನಿರೂಪಣೆಯ ಕೃತಿರಚನೆಗೆ ತೊಡಗುವುದನ್ನು ಅವರ ಎಲ್ಲ ಬರಹಗಳಲ್ಲಿಯೂ ಕಾಣುತ್ತೇವೆ.

ಘೋಷ್ ಅವರ ಕಾದಂಬರಿಗಳನ್ನೂ ಸೇರಿಸಿ ಅವರ ಒಟ್ಟಾರೆ ಕೃತಿಗಳಲ್ಲಿ ಓದುಗರು, ವಿದ್ವಾಂಸರು ಕಂಡುಕೊಂಡಿರುವ ಒಂದು ಅಂಶವೆಂದರೆ, ಜನರನ್ನು ರಾಷ್ಟ್ರ, ವರ್ಗ, ಧರ್ಮ, ಸಂಸ್ಕೃತಿ ಮುಂತಾದ ಗುಂಪುಗಳಾಗಿ ವಿಂಗಡಿಸುವ ಕಾಲ್ಪನಿಕ ಗಡಿಗಳನ್ನು ಪ್ರಶ್ನಿಸುವಲ್ಲಿನ ಅವರ ಆಸಕ್ತಿ. ಹಾಗಾಗಿಯೇ ಅವರ ಕೃತಿಗಳಲ್ಲಿ ಅತ್ಯಂತ ಗಮನಾರ್ಹ ಪಾತ್ರಗಳು ಗಡಿಗಳ ಆಚೆಗಿನ ಸಂಬಂಧಗಳನ್ನು ಹೊಂದಿರುವವರು ಮತ್ತು ಅಂತಹ ಪಾತ್ರಗಳ ಜೊತೆಜೊತೆ ಅವರ ಎಲ್ಲ ಕೃತಿಗಳೂ ಕೂಡ ಸತತವಾಗಿ ಕಾಲದೇಶಗಳ ಗಡಿಗಳನ್ನು ದಾಟುತ್ತ ಕಟ್ಟಿರುವ ಕಥನಗಳು.

ದೇಶ ದೇಶಗಳ ನಡುವಿನ, ಜ್ಞಾನಶಿಸ್ತುಗಳ ನಡುವಿನ, ವಾಸ್ತವ-ಕತೆಗಳ ನಡುವಿನ ಗಡಿಗಳ ಸೃಷ್ಟಿಶೀಲ ಉಲ್ಲಂಘನೆಯನ್ನು ಮಾಡುವ ಬರಹಗಳು. ಗಡಿಗಳ ವಿಚಾರದಲ್ಲಿ ಗ್ರಹೀತಗಳನ್ನು ಸದಾ ಪ್ರಶ್ನಿಸುವ ಅವರ ಬರಹಗಳಲ್ಲಿ ಎದ್ದುಕಾಣುವ ಮೌಲ್ಯವೆಂದರೆ “ಸಂಕರತೆ” (hybridity). ತಮ್ಮ ಬರಹಗಳಲ್ಲಿ ವಸಾಹತುಶಾಹಿ ಹುಟ್ಟುಹಾಕಿದ ಅಧಿಕಾರದ ವಿಶ್ವರೂಪದ ಅನಾವರಣ ಮಾಡುವ ಘೋಷ್ ಅವರು ಮತ್ತೆ ಮತ್ತೆ ಮರಳುವ ವಿಷಯವೆಂದರೆ ಜ್ಞಾನವೆನ್ನುವುದು ಹೇಗೆ ಪ್ರಾಬಲ್ಯದ ಹೇರಿಕೆಯ ಸಾಧನವೆನ್ನುವ ಮಾತು. ಕಾದಂಬರಿ ಪ್ರಕಾರದಲ್ಲಿಯೂ ಘೋಷ್ ಪ್ರಯೋಗ ನಿಷ್ಣಾತರೇ. ಈ ಪ್ರಯೋಗಾತ್ಮಕತೆಗೆ ಕಾರಣವೂ ಸಹ ಜ್ಞಾನದ ಉತ್ಪಾದನೆ ಮತ್ತು ಪ್ರಸಾರದಲ್ಲಿ ಒತ್ತಾಯಪೂರ್ವಕ ಹೇರುವಿಕೆ ಇರಬಾರದು ಎನ್ನುವ ವಿನಯವಂತಿಕೆ.

ಇದೇ ವಿನಯವಂತ ನಿರೂಪಣಾ ಶೈಲಿ ಅಮಿತಾವ್ ಘೋಷ್ ಅವರನ್ನು ಇಂದು ಜಾಗತಿಕ ಸ್ತರದ ಪ್ರಮುಖ ಬರಹಗಾರರ ಸಾಲಿಗೆ ಸೇರಿಸಿದೆ. ೧೯೮೦ರ ದಶಕದಿಂದ ಸತತವಾಗಿ ಘೋಷ್ ನಡೆಸಿರುವ ಕತೆಗಾರಿಕೆ ತುಂಬ ಮೌಲಿಕವಾಗಿ ಕಾಣಲು ನನಗೆ ತೋರುವ ಕಾರಣ ಬರವಣಿಗೆಯ ಕುರಿತಾಗಿ ಅವರಿಗಿರುವ ಗಾಂಭೀರ್ಯ. ಅಂತೆಯೇ, ವಸಾಹತುಶಾಹಿ ವಿಶ್ವದ ಬಳುವಳಿಕೆಯಾಗಿ ಇಂದು ಜಗತ್ತಿನಾದ್ಯಂತ ಹೊತ್ತಿಕೊಂಡಿರುವ ಹಲಬಗೆಯ ಕಾಡ್ಗಿಚ್ಚುಗಳನ್ನು ಘೋಷ್ ತಮ್ಮ ಬರಹಗಳಲ್ಲಿ ಪುನರಪಿ ಅಭಿವ್ಯಕ್ತಿಸಿದ್ದಾರೆ.

ಜನರ, ಸಮುದಾಯಗಳ ನಡುವೆ ಎಳೆದಿರುವ ಬಗೆಬಗೆಯ ಅದೃಶ್ಯ ಗಡಿಗಳ ಬಗೆಗೆ ಅಥವಾ ವಿಪರೀತ ವಾತಾವರಣ ವಿಶ್ವದೆದುರು ತೆರೆದಿಟ್ಟಿರುವ ಸವಾಲುಗಳ ಬಗೆಗೆ ಸಾಹಿತ್ಯವನ್ನು ಮಾಧ್ಯಮವಾಗಿಸಿಕೊಂಡು ಸಾರ್ವಜನಿಕ ಚರ್ಚೆ ಹುಟ್ಟುಹಾಕುವುದು ಕೂಡ ಅವರ ಬರಹಗಳ ವಿಶೇಷ. ನೈತಿಕ ಹೊಣೆಗಾರಿಕೆಯನ್ನು ತಮ್ಮ ಕಥನಗಳ ಮತ್ತು ಕಥನೇತರ ಬರಹಗಳ ಅಡಿಗಲ್ಲಾಗಿ ಮಾಡಿಕೊಂಡು ಅಧ್ಯಯನಶೀಲ ಬರವಣಿಗೆಯಲ್ಲಿ ತೊಡಗುವ ಅಮಿತಾವ್ ಘೋಷ್ ಹೊಸ ಬರಹಗಾರರಿಗೆ ಒಂದು ಮಾದರಿ.