ದಾರ್ಶನಿಕ ಸಾಹಿತ್ಯ ರಚಿಸುವುದು ಅಷ್ಟು ಸುಲಭವಲ್ಲ! ಅಂತಹ ಸಾಹಿತ್ಯ ರಚಿಸಲು ಲೇಖಕ ಸ್ವತಃ ತಾನುದಾರ್ಶನಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಮೆಚ್ಚುವಂತಹ ಓದುವಂತಹ ದಾರ್ಶನಿಕ ಸಾಹಿತ್ಯವೆಲ್ಲವೂ ದಾರ್ಶನಿಕರಿಂದಲೇ ಬರೆಸಿಕೊಂಡಿರುವುದು.ಯಾವ ದಾರ್ಶನಿಕ ಸಾಹಿತ್ಯ ಸತ್ತುಹೋಗಿದೆಯೋ ಅದು ದಾರ್ಶನಿಕನಿಂದ ಬರೆಸಿಕೊಂಡಿಲ್ಲವೆಂದರ್ಥ. ಗಮನಿಸಿ, ಇಂತಹ ಸಾಹಿತ್ಯವೆಲ್ಲವೂ ಹಿರಿಯ ವಯಸ್ಸಿನಲ್ಲಿ ಬರೆದಿರುವುದು. ಕನಿಷ್ಟ ಮುವತ್ತೈದಾದರೂದಾಟಿರಬೇಕು. ಆದ್ದರಿಂದಲೇ ನನಗೆ ಉದ್ದುದ್ದ ಜಡೆ ಬಿಟ್ಟ ಆರ್ಟ್ ಆಫ್ ಲಿವಿಂಗ್ ನ ನವ ಯುವಕರು ಅಥವಾ ನುಣ್ಣಗೆ ಬೋಳಿಸಿಕೊಂಡು ಆಂಟೆನಾ ಜುಟ್ಟು ಬಿಟ್ಟ ಇಸ್ಕಾನಿನ ನವಯುವಕರು ಪ್ರವಚನಕ್ಕೆ ಕೂತರೆ ನಗು ಬರುತ್ತದೆ.
ಇಂದಿನಿಂದ ಹೊಸ ತಲೆಮಾರಿನ ಕಥೆಗಾರ ಮಧುಸೂದನ ವೈ. ಎನ್. ಬರೆಯುವ ಅಂಕಣ

 

ಮೂರ್ನಾಲ್ಕು ತಿಂಗಳುಗಳ ಹಿಂದೆ ಕನ್ನಡದ ಇತ್ತೀಚೆಗಿನ ಕಾದಂಬರಿಗಳನ್ನು ಎತ್ತಿಕೊಳ್ಳುವ ಸಲುವಾಗಿ ನಾಡಿನ ಹೆಸರಾಂತ ಮಳಿಗೆಗೆ ಕಾಲಿಟ್ಟು ಬಹಳ ನಿರಾಸೆಗೊಂಡಿದ್ದೆ. ಕಾರಣ ಆ ಮಳಿಗೆಯ ಕಾದಂಬರಿ ವಿಭಾಗದಲ್ಲಿ ಸಾಲು ಸಾಲಾಗಿ ಇನ್ನೂ ತ್ರಿವೇಣಿ, ಎಂ ಕೆ ಇಂದಿರಾ ಸಾಯಿಸುತೆ ಅವರ ಕಾಲದವೇ ಕಾದಂಬರಿಗಳನ್ನು ಒಟ್ಟಿದ್ದರು. ಇನ್ನು ಮಿಕ್ಕಂತೆ ಪ್ರಶಸ್ತಿ ಪುರಸ್ಕೃತ ವಿಭಾಗದಲ್ಲಿಕುವೆಂಪು, ಕಾರಂತರ ಕಾಲದವು. ಅದು ಬಿಟ್ಟರೆ ಭೈರಪ್ಪನವರ ಕಾದಂಬರಿಗಳನ್ನು ಸೆಪರೇಟು ಅಟ್ಟದಲ್ಲಿ ಜೋಡಿಸಲಾಗಿತ್ತು.

ಮೊನ್ನೆ ಭಾಷಾ ಸಂಬಂಧ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದ ಆಕೃತಿ ಮಳಿಗೆಗೆ ಹೋದಾಗ ಅದೃಷ್ಟವಶಾತ್ ನನಗೆ ಈ ಕಾಲದ ಕಾದಂಬರಿಗಳು ಕಂಡುಬಂದವು. ಅವತ್ತು ಕಾರಣಾಂತರದಿಂದ ನನ್ನ ಪುಟ್ಟ ಮಗಳನ್ನೂ ಕರೆದೊಯ್ಯಬೇಕಾಗಿ ಬಂದಿದ್ದರಿಂದ ಕಾರ್ಯಕ್ರಮ ಮುಗಿಯುವ ಮುಂಚೆಯೆ ಅವಳು ಹೋಗೋಣವೆಂದು ವರಾತ ಶುರುವಿಟ್ಟುಕೊಂಡು ಸರಿಯಾಗಿ ಪುಸ್ತಕಗಳನ್ನುಗಮನಿಸಲಾಗಲಿಲ್ಲ. ಆಕೃತಿ ಮಳಿಗೆಯಲ್ಲಿರುವ ಪುಸ್ತಕಗಳ ಜೋಡಣೆಗೆ ಅದೇನೋ ಮಾಂತ್ರಿಕ ಶಕ್ತಿಯಿದೆ. ಹಳೇ ಹೊಸಾ ಪುಸ್ತಕಗಳ ಸಂಯೋಜನೆ ಕಣ್ಣಿಗೆ ಹಬ್ಬ. ಹೀಗೆ ಕಾದಂಬರಿ ವಿಭಾಗದಲ್ಲಿ ಕೈಯಾಡಿಸುತ್ತಿರುವಾಗ ಅಪರೂಪದ ಪುಸ್ತಕವೊಂದು ಕಂಡು ಅದನ್ನು ಇರಿದುಕೊಂಡು ಕೈಹಿಡಿದು ಜಗ್ಗುತ್ತಿದ್ದ ಮಗಳಿಗೆ ಮನ್ನಣೆ ಕೊಟ್ಟು ಮನೆಗೆ ಬಂದೆ.

ಅಪರೂಪ ಅಂತ ಯಾಕೆಂದೆನಂದರೆ ಅದು ಕಾದಂಬರಿ ವಿಭಾಗದಲ್ಲಿ ಅವಿತುಕೊಂಡಿದ್ದರಿಂದ ಮತ್ತು ಅದು ಕಾದಂಬರಿಯಲ್ಲದರಿಂದ. ಅದು ಇರಬೇಕಾದ ಜಾಗದಲ್ಲಿ ಇದ್ದಿದ್ದರೆ ನನಗೆ ಆ ಪುಸ್ತಕದ ಬಗ್ಗೆ ಗೊತ್ತೇ ಆಗುತ್ತಿರಲಿಲ್ಲ. ಅಥವಾ ಕಂಡಿದ್ದರೂ ಕೈಗೆತ್ತಿಕೊಳ್ಳುತ್ತಿರಲಿಲ್ಲ. ಏನೋ ಹುಡುಕಿಕೊಂಡು ಹೋದರೆ ಮತ್ತಿನ್ನೇನೋ ಸಿಗುವುದು ಸಾಹಿತ್ಯದ ವಿಶಿಷ್ಟ ಗುಣ.

ಹಿಂದೆ ಒಂದೆರಡು ಬಾರಿ ಮನೋವಿಜ್ಞಾನದ ಪುಸ್ತಕಗಳನ್ನು ಓದುವ ಪ್ರಯತ್ನ ಮಾಡಿ ಕೈಲಾಗದೆ ಸುಮ್ಮನಾಗಿದ್ದೆ. ಸಾಮಾನ್ಯವಾಗಿ ಇಂಗ್ಲೀಷಿನ ಮನೋವೈಜ್ಞಾನಿಕ ಪುಸ್ತಕಗಳು ಸಣ್ಣ ಸಣ್ಣ ಅಕ್ಷರಗಳಲ್ಲಿದ್ದು ಒಟ್ಟಾರೆ ಗಾತ್ರ ಸುಮಾರಾಗೇ ಇದ್ದು ಒಳಗಿನ ಪದಾರ್ಥವಂತೂ ತಲೆ ಮೇಲೆ ಹಾರಿಹೋಗುವಂತಿರುತ್ತದೆ. ಅದೇನೋ ಈ ಪುಸ್ತಕ ಕನ್ನಡದಲ್ಲಿದ್ದು ತಕ್ಷಣಕ್ಕೆ ಸೆಳೆಯಿತು. ಅರ್ಧ ಪುಸ್ತಕಓದುವಷ್ಟರಲ್ಲೇ ತಡಕೊಳ್ಳಲಾಗದೆ ಲೇಖಕರ ಸಂಪರ್ಕ ಹುಡುಕಿ ಅವರಿಗೆ ಮೆಸೇಜು ಹಾಕಿ, ಪೂರ್ತಿ ಪುಸ್ತಕ ಓದುವಷ್ಟರಲ್ಲಿ ಕೆಲವಾರು ಗೆಳೆಯರಿಗೆ “ರೆಕಮೆಂಡ್” ಮಾಡಿ ಓದಿಸಿದೆ.

ಇತ್ತೀಚೆಗೆ ನಾನು ಓದಿದ ಅಚ್ಚುಮೆಚ್ಚಿನ ಪುಸ್ತಕವಾಗಿದೆ ಅದು. ಎಂ ಎಸ್ ಶ್ರೀರಾಮ್ ಅವರ “ಕಥನ ಕುತೂಹಲ” ಓದಿದಾನಂತರ ಮಿಲನ್ ಕುಂದೆರಾ ಪುಸ್ತಕಗಳ ಪರಿಚಯವಾಯಿತು. ಹಾಗೆ ನೋಡಿದರೆ ಶ್ರೀರಾಮ್ ಅವರ ಲೈಬ್ರರಿಯನ್ನು ಕಿಂಡಿಯಲ್ಲಿ ಇಣುಕಿ ಬಂದಂತಾಗಿತ್ತು. ಎಲ್ ಸಿ ಸುಮಿತ್ರಾ ಅವರ “ಓದಿನ ಸುಖ” ಓದಿದಾನಂತರ ಓದನ್ನು ಹಂಚುವ ಸುಖ ಏನೆಂಬ ಅನುಭವವಾಯಿತು.

“ಈಡಿಪಸ್ ಕಾಂಪ್ಲೆಕ್ಸ್”, ಮನಃಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ನಿವೃತ್ತ ಉಪನ್ಯಾಸಕರಾದ ಎಂ ಬಸವಣ್ಣ ಅವರ ಮನೋವೈಜ್ಞಾನಿಕ ಲೇಖನಗಳನ್ನು ಒಳಗೊಂಡ ಪುಸ್ತಕ. ಬಹಳ ಸರಳವಾಗಿ, ಆಪ್ತವಾಗಿ ಮನೋವಿಜ್ಞಾನಕ್ಕೆ ಪ್ರವೇಶಿಕೆ ಒದಗಿಸುತ್ತದೆ. ಪ್ರೇಮ, ದುಃಖದಿಂದ ಹಿಡಿದು ಸ್ವಸ್ಥ ವ್ಯಕ್ತಿತ್ವ, ಮಕ್ಕಳು, ಸಾಹಿತ್ಯದವರೆಗೆ ಲೇಖನಗಳು ಆಯಾ ವಸ್ತುವನ್ನು ಮನೋವೈಜ್ಞಾನಿಕವಾಗಿವಿಶ್ಲೇಷಿಸುತ್ತ ಹೊಸ ಹೊಳಹುಗಳನ್ನು ತೆರೆದಿಡುತ್ತದೆ. ಇನ್ನೇನಿಲ್ಲ, ಮನೋವಿಜ್ಞಾನದ ಬಗೆಗಿರುವ ಅಗಾಧ ಸಾಹಿತ್ಯವನ್ನು ಲೇಖಕರು ಕುಟ್ಟಿ ಪುಡಿ ಮಾಡಿ ಚೊಕ್ಕದಾಗಿ ಸರಳವಾಗಿ ಅತ್ಯಂತ ಸಂಕ್ಷಿಪ್ತವಾಗಿ ಓದುಗನ ಎದುರಿಗಿಟ್ಟಿದ್ದಾರೆ. ಇರಲಿ, ಮಿಕ್ಕಿದ್ದೆಲ್ಲ ನೀವು ಓದಿದರೆ ತಿಳಿಯುತ್ತದೆ.

ಇಲ್ಲಿ ನನಗೆ ಆಸಕ್ತಿಯಿಂದ ಹಂಚಿಕೊಳ್ಳಬೇಕೆನಿಸಿದ ವಿಷಯ ಸ್ವಸ್ಥ ವ್ಯಕ್ತಿತ್ವ ಮತ್ತು ಸಾಹಿತ್ಯ; ಇವುಗಳ ಬಗ್ಗೆ ಮನಃಶಾಸ್ತ್ರ ಏನು ಹೇಳುತ್ತದೆ? ಅವುಗಳ ನಡುವಿನ ಸಂಬಂಧ ಎಂಥದು? ಎಂಬುದರ ಬಗ್ಗೆ. ಮೊದಲಿಗೆ ಸ್ವಸ್ಥ ವ್ಯಕ್ತಿತ್ವವೆಂದರೇನು ಎಂಬ ಪ್ರಶ್ನೆಗೆ ಸಿಗ್ಮಂಡ್ ಫ್ರಾಯ್ಡ್ ನ ಸಂಕ್ಷಿಪ್ತ ಉತ್ತರ- ಚನ್ನಾಗಿ ಪ್ರೇಮಿಸುವುದು; ಚೆನ್ನಾಗಿ ದುಡಿಯುವುದು. ಬಿಡಿಸಿ ಹೇಳಬೇಕೆಂದರೆ ನಿರಪೇಕ್ಷಿತನಾಗಿಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುವುದು, ನೂರಕ್ಕೆ ನೂರರಷ್ಟು ಮೈಮನಸ್ಸುಗಳನ್ನು ದುಡಿಮೆಯಲ್ಲಿ ತೊಡಗಿಸಿಕೊಂಡು ಅದರಲ್ಲಿ ತೃಪ್ತಿ ಹೊಂದುವುದು.

(ಸಿಗ್ಮಂಡ್ ಫ್ರಾಯ್ಡ್)

ವ್ಯಕ್ತಿತ್ವಕ್ಕೆ ಇದಕ್ಕಿಂತ ಮಿಗಿಲಾದ ಅರ್ಥ ಇರಲಿಕ್ಕಿಲ್ಲ ಎನಿಸಿತು ನನಗೆ. ನಾವು ಏನೆಲ್ಲ ಉದ್ದುದ್ದ ಪ್ರಬಂಧ ಬರೆದರೂ ಸ್ವಸ್ಥ ವ್ಯಕ್ತಿತ್ವವನ್ನು ಇದಕ್ಕಿಂತ ಭಿನ್ನವಾಗಿ ವಿವರವಾಗಿ ವ್ಯಾಖ್ಯಾನಿಸಲಾರೆವು. ಇದೇ ಪುಸ್ತಕದಲ್ಲಿ ಅಬ್ರಹಾಂ ಮಾಸ್ಲೋ ಎಂಬ ಇನ್ನೋರ್ವ ವಿಜ್ಞಾನಿ ಸ್ವಸ್ಥ ವ್ಯಕ್ತಿತ್ವಕ್ಕೆ ಬಹಳ ವಿಸ್ತೃತವಾದ ವಿವರಣೆ ಕೊಟ್ಟಿದ್ದರೂ ಅದು ಸ್ವಸಹಾಯ ಪುಸ್ತಕಗಳ ಪದಾರ್ಥದಂತೆನಿಸಿ ಅದೆಲ್ಲದರಹೂರಣ ಫ್ರಾಯ್ಡ್ ನ ಎರಡು ಸಾಲುಗಳಲ್ಲೇ ಅಡಕವಾಗಿದೆ ಅನಿಸುತ್ತದೆ. ಮಾಸ್ಲೋನ ವಿವರಣೆ ಹೆಚ್ಚಾಗಿ ಸಮಾಜದಲ್ಲಿ ಎತ್ತರಕ್ಕೆ ಏರಿರುವ ಯಶಸ್ವೀ ಪುರುಷರ ವ್ಯಕ್ತಿತ್ವದ ಸಾರಾಂಶದಂತಿದೆ. ಒಪ್ಪಲು ಮನಸ್ಸಾಗದು.

ಹಾಗಿದ್ದರೆ ನಾವೆಲ್ಲ ಸ್ವಸ್ಥರೇ? ಓದುತ್ತ ಓದುತ್ತ ಇದು ನಮ್ಮಲ್ಲಿ ಹುಟ್ಟುವ ಸಹಜವಾದ ಪ್ರಶ್ನೆ. ಫ್ರಾಯ್ಡ್ ನ ಎರಡು ಮಾನದಂಡಗಳನುಸಾರ ನಮ್ಮನ್ನು ನಾವು ಅಳೆದರೆ ತಕ್ಕಡಿ ಮುಳ್ಳು ಎತ್ತ ಹೊಡೆಯುತ್ತಿದೆ, ಎಲ್ಲಿ ನಿಲ್ಲುತ್ತದೆ ಎಂದು ನಿರ್ದಿಷ್ಟವಾಗಿ ಗುರುತಿಸಬಲ್ಲೆವು. ನಮ್ಮ ಸುತ್ತಮುತ್ತಲಿನವರಲ್ಲಿ ಯಾರು ಯಾರು ಸ್ವಸ್ಥ ವ್ಯಕ್ತಿತ್ವದವರೆಂದು ನಿಖರವಾಗಿ ಕಂಡುಹಿಡಿಯಬಲ್ಲೆವು. ನನ್ನಲ್ಲಿತಮಾಷೆಯಾಗಿ ಹುಟ್ಟಿದ ಪ್ರಶ್ನೆಯೆಂದರೆ ಸಾಮಾನ್ಯವಾಗಿ ಈ ಸ್ವಸ್ಥರೆನಿಸಿಕೊಂಡವರು ಎಡದವರೇ, ಬಲದವರೇ, ಮೋದಿ ಪ್ರಿಯರೇ, ಮೋದಿ ವಿರೋಧಿಗಳೇ…. ಎಂದು. ಈಗಿನ ಟ್ರೆಂಡಿನ ಪ್ರಕಾರ ಮೋದಿ ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಅತಿರೇಕದ ಮಟ್ಟದಲ್ಲಿ ಮಾನದಂಡ ವ್ಯಕ್ತಿಯಾಗಿಬಿಟ್ಟಿದ್ದಾರೆ. ಈ “ದೇವರು” ಅನ್ನೋದಿದೆಯಲ್ಲಾ ಹಾಗೆ. ನಂಬುಗರಿಗೆ ಆತ ಹನ್ನೊಂದನೆಯ(ಹನ್ನೆರಡೋ?)ಅವತಾರ. ನಂಬದವರಿಗೆ ಆಧುನಿಕ ಹಿಟ್ಲರ್. ನಾವು ಪ್ರತಿದಿನ ಆತನನ್ನು ನೆನೆಸಿಕೊಳ್ಳುವ ಮೂಲಕ ನಮ್ಮ ಬದುಕಿನ ಅದೆಷ್ಟು ಅತ್ಯಮೂಲ್ಯ ಕ್ಷಣಗಳನ್ನು ಯಾರೋ ಒಬ್ಬ ಕಂಡೇ ಇರದ ಮುಟ್ಟಿ ಮಾತಾಡಿಸದೇ ಇರದ ವ್ಯಕ್ತಿಗೆ ಮೀಸಲಿಟ್ಟುಬಿಟ್ಟಿದ್ದೇವೆ ಎನ್ನುವುದು ನನ್ನನ್ನು ವಿಪರೀತ ಕಾಡಿದೆ. ವಾಪಸ್ಸು ವಿಷಯಕ್ಕೆ ಬರೋಣ. ಇಲ್ಲವಾದರೆ ಈ ಕ್ಷಣವೂ ಆತನ ಜಪದಲ್ಲೇ ಕರಗುತ್ತದೆ.

ಈ ಪ್ರಶ್ನೆ ಹುಟ್ಟಿದ ತಕ್ಷಣಕ್ಕೆ ನನಗೆ ನನ್ನ ನೆರೆಮನೆಯ ಹಿರಿಯರು ನೆನಪಾದರು. ದಿನ ಬೆಳಗ್ಗೆ ಎದುರಾಗುವುದರಿಂದ ನನ್ನ ಚಿಂತನಾ ಲಹರಿ ಅರಿತಿದ್ದೂ ನನ್ನನ್ನು ಬಹಳ ಗೌರವದಿಂದ ಪ್ರೀತಿಯಿಂದ ಕಾಣುವ ಅವರ ಬಗ್ಗೆ ನಾನು ತುಂಬಾ ಯೋಚಿಸಿದ್ದೇನೆ. ಬಹಳ ಒಳ್ಳೆಯವರಾದ ಅವರು ಮೋದಿ ಬೆಂಬಲಿಗರು. ಎಣಿಸಿದಂತೆ ಮೇಲ್ವರ್ಗಕ್ಕೆ ಸೇರಿದ ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ, ಎಲ್ಲರನ್ನೂ ಪ್ರೀತಿಸುವ, ಎಲ್ಲರಲ್ಲೂ ಬೆರೆಯುವ, ಒಂಚೂರೂ ಕಪಟತೆ ಇರದಂತವರು. ನಾವು ಅಪ್ಪಿತಪ್ಪಿಯೂ ಇಲ್ಲೀವರೆಗೆ ಪರಸ್ಪರ ರಾಜಕೀಯ ಮಾತಾಡಿಲ್ಲ. ಅವರ ಮಡದಿ ನನ್ನ ಕಪಾಟಿಂದ ಪುಸ್ತಕ ಒಯ್ದು ಓದುತ್ತಾರೆ. ತುಂಬಾ ಹಿಂದೆ ನನ್ನ ಮನೆಯ ಓನರ್ ಒಬ್ಬರು ಮೋದಿ ಬೆಂಬಲಿಗರೇ ಆಗಿದ್ದು ಬಾಡಿಗೆಗಿರುವವರನ್ನೆಲ್ಲ ತನ್ನ ಋಣದಲ್ಲಿರುವವರಂತೆ ಕಾಣುತ್ತ ಅತ್ಯಂತ ದರ್ಪದಿಂದವರ್ತಿಸುತ್ತ ನನ್ನಿಂದ ಚನ್ನಾಗಿ ಉಗಿಸಿಕೊಂಡಿದ್ದರು. ಹೀಗಾಗಿ ಇವರನ್ನೆಲ್ಲ ಹೋಲಿಸಿ ನೋಡಿದರೆ ನನ್ನೊಳಗೆ ಹುಟ್ಟಿದ ಪ್ರಶ್ನೆಗೆ ಅರ್ಥವೇ ಇಲ್ಲವೆನಿಸಿತು. ಸ್ವಸ್ಥರು ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುತ್ತಾರೆ. ನನಗೆ ಅದು ಸಾಧ್ಯವಾಗದಿದ್ದಲ್ಲಿ ಅದು ನನ್ನ ಅಸ್ವಸ್ಥತೆಯೇ ಎಂದು ನನಗೀಗ ಅನುಮಾನ ಹುಟ್ಟಿದೆ.

ಸ್ವಸ್ಥ ವ್ಯಕ್ತಿತ್ವ ಮತ್ತು ಸಾಹಿತ್ಯ; ಇವುಗಳ ಬಗ್ಗೆ ಮನಃಶಾಸ್ತ್ರ ಏನು ಹೇಳುತ್ತದೆ? ಅವುಗಳ ನಡುವಿನ ಸಂಬಂಧ ಎಂಥದು? ಎಂಬುದರ ಬಗ್ಗೆ. ಮೊದಲಿಗೆ ಸ್ವಸ್ಥ ವ್ಯಕ್ತಿತ್ವವೆಂದರೇನು ಎಂಬ ಪ್ರಶ್ನೆಗೆ ಸಿಗ್ಮಂಡ್ ಫ್ರಾಯ್ಡ್ ನ ಸಂಕ್ಷಿಪ್ತ ಉತ್ತರ- ಚನ್ನಾಗಿ ಪ್ರೇಮಿಸುವುದು; ಚೆನ್ನಾಗಿ ದುಡಿಯುವುದು. ಬಿಡಿಸಿ ಹೇಳಬೇಕೆಂದರೆ ನಿರಪೇಕ್ಷಿತನಾಗಿಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುವುದು.

ಹಾಗಂದ ಮಾತ್ರಕ್ಕೆ ಅಸ್ವಸ್ಥತೆ ಅಪರಾಧವಲ್ಲ. ಸ್ವಸ್ಥತೆ ಒಳ್ಳೆಯತನಕ್ಕೆ ಮಾನದಂಡವೂ ಅಲ್ಲ. ಅದೊಂದು ವ್ಯಕ್ತಿತ್ವದ ಬಗೆಯಷ್ಟೆ. ಜಗತ್ತಿನ ತೊಂಭತ್ತು ಮಂದಿ ಒಂದಲ್ಲಾ ಒಂದು ರೀತಿ ಅಸ್ವಸ್ಥರೇ. ಈ ಲೋಕದಲ್ಲಿ ಅದೆಷ್ಟು ಜನಕ್ಕೆ ದುಡಿಯಲಿಕ್ಕೆ ಅವಕಾಶವಿದೆ? ಅದೆಷ್ಟು ಮಂದಿಗೆ ಅಗಾಧ ಪ್ರೇಮ ಲಭಿಸಿದೆ? ತಾನು ಅನುಭವಿಸಿದ್ದನಷ್ಟೇ ವ್ಯಕ್ತಿ ಇತರರೆಡೆಗೆ ಅಭಿವ್ಯಕ್ತಿಸಬಲ್ಲ. ಕಂಡೇ ಇರದವಸ್ತುವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಅಂತಾರಲ್ಲ ಹಾಗೆ.

ಹಾಗೆ ನೋಡಿದರೆ ಮನೋವಿಜ್ಞಾನಿಗಳ ಪ್ರಕಾರ ಉತ್ತಮ ಸಾಹಿತ್ಯ ಹುಟ್ಟುವುದು ಅಸ್ವಸ್ಥ ಮನೋಸ್ಥಿತಿಗಳಿಂದಲೇ. ಮನುಷ್ಯ ತನಗೆ ದಕ್ಕದ್ದೆಲ್ಲವನ್ನು ಸುಪ್ತ ಮನಸ್ಸಿನಲ್ಲಿ ಪೇರಿಸಿಕೊಳ್ಳುತ್ತಾ ಹೋಗುತ್ತಾನೆ. ಅಕಸ್ಮಾತ್ ಆತ ಕಲೆಗಾರನಾದರೆ ಅದು ಯಾವಾಗಲಾದರೊಮ್ಮೆ ಸ್ಫೋಟಗೊಂಡು ಅತ್ಯುತ್ತಮ ಕಲಾಕೃತಿಯಾಗಿ ರೂಪ ತಾಳುತ್ತದೆ. ಅದು ವ್ಯಾನ್ ಗೋ “ಸ್ಟಾರಿ ನೈಟ್” ಇರಬಹುದು, ಟಾಲ್ ಸ್ಟಾಯ್ ನ “ಅನ್ನ ಕರೇನಿನ” ಇರಬಹುದು. ಕಾಯ್ಕಿಣಿಯವರ “ಕೊಲ್ಲು ಹುಡುಗಿ ಒಮ್ಮೆ ನನ್ನ…” ಸಾಲಿರಬಹುದು.

ಫ್ರಾಯ್ಡ್ ನ ಪ್ರಕಾರ ಸುಪ್ತ ಮನಸ್ಸಿನ ಅತೃಪ್ತ ಲೈಂಗಿಕ ಬಯಕೆಗಳು ಸಾಹಿತ್ಯದ ರೂಪದಲ್ಲಿ ರಂಜನೀಯವಾಗಿ ಹೊರಹೊಮ್ಮುತ್ತವೆ. ಆತ ಸಾಹಿತ್ಯವನ್ನು ಲಂಚವೆನ್ನುತ್ತಾನೆ. ಮತ್ತು ಓದುಗ ಇಷ್ಟ ಪಡುವ ಲಂಚವೆನ್ನುತ್ತಾನೆ. ಇನ್ನೊಬ್ಬ ವಿಜ್ಞಾನಿ ಒಟೋ ರ್ಯಾಂಕ್ ಸಾಹಿತಿ ಕನಸಿಗನಿಗೂ ಮನೋರೋಗಿಗೂ ನಡುವೆ ಇರುವವನು ಎನ್ನುತ್ತಾನೆ. ಮತ್ತು The writer is a self cured neurotic ಅಂತಾನೆ.

ಇದನ್ನ ಓದುತ್ತ ನನಲ್ಲಿ ಹುಟ್ಟಿದ ಇನ್ನೊಂದು ತಮಾಷೆಯ ಪ್ರಶ್ನೆಯಂದರೆ, ಹಾಗಾದರೆ ಈ ಬೇಂದ್ರೆ ಕುವೆಂಪು ಕಾರಂತರೆಲ್ಲ ಅಸ್ವಸ್ಥರಾಗಿದ್ದರೇ? ಎಂದು. ನನಗೇನೋ ಹಾಗಲ್ಲವೆನಿಸುತ್ತದೆ. ರ್ಯಾಂಕ್ ಪ್ರಕಾರ our sweetest expressions originate from our worst pains ಎನ್ನುವುದಾದರೆ ಅಸ್ವಸ್ಥ ಮನಸ್ಥಿತಿಯಲ್ಲಿ ಬರೆದ ಸಾಹಿತ್ಯವು ಸತ್ಯವನ್ನು ಹಸಿಹಸಿಯಾಗಿ ನಿರೂಪಿಸುತ್ತದೆ. ಕಾಮ, ಕ್ರೋಧ, ಲೋಭ, ಮೋಹಗಳು ಲಜ್ಜೆ ಮೀರಿ ಭಿತ್ತರಗೊಂಡಿರುತ್ತವೆ. ಅಲ್ಲಿ ಸಾಹಿತಿ ದಾರ್ಶನಿಕ ನಯ-ವಿನಯಕ್ಕೆ ಜೋತುಬೀಳುವುದಿಲ್ಲ. ಆದರೆ ಕಾರಂತ ಕುವೆಂಪು ಇಂತವರ ಸಾಹಿತ್ಯದಲ್ಲಿ ಹೆಚ್ಚಾಗಿ ದಾರ್ಶನಿಕ ವಿಚಾರಗಳು ಕಂಡುಬರುತ್ತವೆ. ಇವರೆಲ್ಲ ದಾರ್ಶನಿಕರೆನಿಸುತ್ತಾರೆ.

ದೇವನೂರರ ಕತೆಗಳೂ ಇದೇ ಸಾಲಿಗೆ ಸೇರುತ್ತವೆ. ಆಶ್ಚರ್ಯವೂ ಒಪ್ಪತಕ್ಕಂತ ಸಂಗತಿಯೂ ಏನೆಂದರೆ ಮನೋವಿಜ್ಞಾನಿಗಳ ಆಸಕ್ತಿಯಿರುವುದು ಇಂತಹ ದಾರ್ಶನಿಕ ಸಾಹಿತ್ಯದಲ್ಲೇ ಹೊರತು ಮನೋವೈಜ್ಞಾನಿಕ ಥಿಯರಿಗಳನ್ನು ಸೆರೆಹಿಡಿದ ಸಾಹಿತ್ಯದಲ್ಲಲ್ಲ. ಕಾರಣ ವಿಜ್ಞಾನಿಗಳಿಗೆ ಮನೋವೈಜ್ಞಾನಿಕ ಸಾಹಿತ್ಯ ಹೇಗೆ ಹುಟ್ಟಿತು ಎಂಬುದು ಮೊದಲೇ ಗೊತ್ತಿರುತ್ತದೆ. ಕಾರಣ ಅದು ಅವರ ಅಧ್ಯಯನದ ಅವಿಭಾಜ್ಯ ಅಂಗ. ಆದರೆ ದಾರ್ಶನಿಕ ಸಾಹಿತ್ಯದ ಹುಟ್ಟು ನಿಗೂಢ ಅಂತಾರೆ ವಿಜ್ಞಾನಿಗಳು. ಮೇಲ್ನೋಟಕ್ಕೆ ನಮಗೆಲ್ಲ ಇದರಲ್ಲಿ ನಿಗೂಢವೇನಿದೆ, ದಾರ್ಶನಿಕವಾಗಿರಬೇಕೆಂಬುದು ಜನಜ್ಜನಿತ ಮೌಲ್ಯ. ಹಾಗಾಗಿ ಹಿರಿಯರು ದಾರ್ಶನಿಕ ಸಾಹಿತ್ಯ ರಚಿಸಿರುತ್ತಾರೆ ಎಂದೆನಿಸಬಹುದು. ನನ್ನಲ್ಲೂ ಇದೇ ಗೊಂದಲ ಹುಟ್ಟಿತ್ತು. ಯೋಚಿಸುತ್ತ ಹೊಳೆದ್ದದ್ದೇನಂದರೆ ದಾರ್ಶನಿಕ ಸಾಹಿತ್ಯ ರಚಿಸುವುದು ಅಷ್ಟು ಸುಲಭವಲ್ಲ! ಅಂತಹ ಸಾಹಿತ್ಯ ರಚಿಸಲು ಲೇಖಕ ಸ್ವತಃ ತಾನುದಾರ್ಶನಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಮೆಚ್ಚುವಂತಹ ಓದುವಂತಹ ದಾರ್ಶನಿಕ ಸಾಹಿತ್ಯವೆಲ್ಲವೂ ದಾರ್ಶನಿಕರಿಂದಲೇ ಬರೆಸಿಕೊಂಡಿರುವುದು.ಯಾವ ದಾರ್ಶನಿಕ ಸಾಹಿತ್ಯ ಸತ್ತುಹೋಗಿದೆಯೋ ಅದು ದಾರ್ಶನಿಕನಿಂದ ಬರೆಸಿಕೊಂಡಿಲ್ಲವೆಂದರ್ಥ. ಗಮನಿಸಿ, ಇಂತಹ ಸಾಹಿತ್ಯವೆಲ್ಲವೂ ಹಿರಿಯ ವಯಸ್ಸಿನಲ್ಲಿ ಬರೆದಿರುವುದು. ಕನಿಷ್ಟ ಮುವತ್ತೈದಾದರೂದಾಟಿರಬೇಕು. ಆದ್ದರಿಂದಲೇ ನನಗೆ ಉದ್ದುದ್ದ ಜಡೆ ಬಿಟ್ಟ ಆರ್ಟ್ ಆಫ್ ಲಿವಿಂಗ್ ನ ನವ ಯುವಕರು ಅಥವಾ ನುಣ್ಣಗೆ ಬೋಳಿಸಿಕೊಂಡು ಆಂಟೆನಾ ಜುಟ್ಟು ಬಿಟ್ಟ ಇಸ್ಕಾನಿನ ನವಯುವಕರು ಪ್ರವಚನಕ್ಕೆ ಕೂತರೆ ನಗು ಬರುತ್ತದೆ. ಮೂವತ್ತರ ಆಸುಪಾಸಿನ ಯುವಕ ಐವತ್ತು ಅರವತ್ತರ ಹಿರಿಯರಿಗೆ ಯಾವ ಬಗೆಯ ಪ್ರವಚನ ಮಾಡಬಹುದು? ಇದ್ಯಾಕೋ ನನಗೆ ಸರಿ ಕಂಡುಬಂದಿಲ್ಲ. ಇದೇರೀತಿಯಲ್ಲಿ ಇನ್ನೂ ಇಪ್ಪತ್ತೈದರಿಂದ ಮೂವತ್ತೈದರ ಒಳಗಿನ ಬರಹಗಾರರು ದಾರ್ಶನಿಕವೆನಿಸಿಕೊಳ್ಳುವಂತಹ ಸಾಹಿತ್ಯ ಬರೆದರೆ ಓದಲು ಹಿಂಜರಿಯುತ್ತೇನೆ. ನಾನೇನಾದರೂ ಅಂಥದು ಬರೆದಿದ್ದು ವಯಸ್ಸಿನಲ್ಲಿ ಹಿರಿಯರು ಓದಿದರೆ ಅವರಿಗೆ ಹೇಗೆ ಕಾಣಿಸಬಹುದು ಎಂಬ ಕಲ್ಪನೆ ಮೈ ರೋಮವನ್ನು ಎದ್ದು ನಿಲ್ಲುವಂತೆ ಮಾಡುತ್ತದೆ.

ಬಹುಶಃ ಹಿರಿಯರು ಯಾರೂ ಈ ಮುಜುಗರದ ಸತ್ಯವನ್ನು ನಮ್ಮಲ್ಲಿ ಹಂಚಿಕೊಳ್ಳುವುದಿಲ್ಲ; ಯುವಕರ ಬರಹಗಳು ಯುವಕರಿಗಷ್ಟೇ ಓದಲು ಚಂದ; ವಯಸ್ಕರಿಗೆ ನಮ್ಮ ಬರಹಗಳೆಲ್ಲ ತಮ್ ತಮಾಷೆಯಾಗಿ ತೋರುತ್ತಿರಬಹುದು. ಮನುಷ್ಯ ಮೂವತ್ತೈದಕ್ಕೂ ಮುಂಚೆ ಎಲ್ಲ ಬಗೆಯಲ್ಲೂ ಚಂಚಲನಾಗಿರುತ್ತಾನೆ. ಉಣ್ಣುವುದಕ್ಕೆ ಇವತ್ತು ಒಂದು ತಟ್ಟೆ ಹಿಡಿದರೆ ನಾಳೆ ಇನ್ನೊಂದು ಎತ್ತಿಕೊಳ್ಳುತ್ತಾನೆ. ದಿನವೂ ಅಂಗಿ ಬದಲಾಯಿಸುತ್ತಾನೆ. ಸುಂದರ ಹುಡುಗಿಯರನ್ನ ಬಯಸುತ್ತಾನೆ. ಜೋರಾಗಿ ನಗಲಿಕ್ಕೆ ಅಳಲಿಕ್ಕೆ ಹಿಂದೇಟು ಹಾಕುವುದಿಲ್ಲ. ಒಟ್ಟಾರೆ ಕ್ರೀಡಾಂಗಣದ ನಟ್ಟ ನಡುವಲ್ಲಿರುತ್ತಾನೆ. ಮೂವತ್ತೈದರ ನಂತರ ಕ್ರೀಡಾಂಗಣದಿಂದ ಹಿಂದೆ ಸರಿಯಲಾರಂಭಿಸುತ್ತಾನೆ. ಯಾವಾಗ ಅವನು ಒಂದು ಬಗೆಯ ನಿತ್ಯಗಟ್ಟಳಗೆ ಹೊಂದಿಕೊಳ್ಳುತ್ತಾ ಹೋಗುತ್ತಾನೋ ಆಗ ಅವನು ವಯಸ್ಕನಾದನೆಂದರ್ಥ. ದಿನವೂ ಅದೇ ಚೇರಿನ ಮೇಲೆ ಕೂರುವುದು, ಅದೇ ತಟ್ಟೆಯಲ್ಲಿ ಉಣ್ಣುವುದು, ಇಂದು ತೊಟ್ಟ ಅಂಗಿ ನಾಳೆ ನಾಡಿದ್ದು… ಮಾಸಲಾಗುವವರೆಗೆ ತೊಡುವುದು, ಅಸ್ತವ್ಯಸ್ತವಾಗಿದ್ದವನು ಚೊಕ್ಕಟನಾಗಲಾರಂಭಿಸುವುದು… ಇದರರ್ಥ ಅವನಿಗೆ ಇವೆಲ್ಲ ಕ್ಷುಲ್ಲಕವೆಂದೆನಿಸಿ ಬದುಕಿನ ಅರ್ಥ, ಹುಟ್ಟು ಸಾವಿನ ಅರ್ಥ, ಭೂಮಿ ಮೇಲೆ ಮನುಷ್ಯನ ಪಾತ್ರ, ಗಂಡು ಹೆಣ್ಣಿನ ಪಾತ್ರ ಇತ್ಯಾದಿಯಾಗಿ ಯೋಚಿಸುತ್ತ ಹೊಸಹೊಳಹು ಸಿಕ್ಕಿದರೆ ಅದನ್ನು ದಾಖಲಿಸುತ್ತ ತನ್ನದೇ ಬಗೆಯಲ್ಲಿ ತನ್ನ ಅನುಭವಗಳನ್ನು ದಾಖಲಿಸುತ್ತ ದಾರ್ಶನಿಕನಾಗುವ ದಿಕ್ಕಿನಲ್ಲಿ ಬೆಳೆಯುತ್ತಾನೆ. ನನಗೆ ಅನ್ನಿಸಿದ ಹಾಗೆ ಹಿರಿಯರೆಲ್ಲರೂ ಒಂದಲ್ಲಾ ಒಂದು ರೀತಿ ದಾರ್ಶನಿಕರೇ. ಯಾವ ಪ್ರಮಾಣದಲ್ಲಿ ಎಂಬುದಷ್ಟೇ ಅವರನ್ನು ಭಿನ್ನರನ್ನಾಗಿಸುತ್ತದೆ.

ಒಟ್ಟಿನಲ್ಲಿ ಮನುಷ್ಯ ಹುಟ್ಟುತ್ತ ಸ್ವಸ್ಥನಾಗಿದ್ದು ಕ್ರಮೇಣ ಕೆಲವು ಕೊರತೆಗಳಿಂದ ಅಸ್ವಸ್ಥನಾಗಿ ತನ್ಮೂಲಕ ಕಲೆಯ ಮೂಲಕ ಲೋಕಕ್ಕೆ ಕನ್ನಡಿ ತೋರಿಸಿ ಅದರ ಅಸ್ವಸ್ಥತೆಯ ಪರಿಚಯ ಮಾಡಿಸಿ ಕೊನೆ ಕೊನೆಗೆ ಸ್ವಸ್ಥನಾಗುವ ಹಾದಿಯಲ್ಲಿ ಚಲಿಸುತ್ತಾನೆ ಅನಿಸುತ್ತದೆ. ಹೆಮ್ಮಿಂಗ್ ವೇ the old man and the sea ಬರೆದಿದ್ದು ತನ್ನ ಐವತ್ಮೂರನೇ ವೈಸಿನಲ್ಲಿ. ಮತ್ತು ಅವನ ಪ್ರಕಾರ ಆ ಕಾದಂಬರಿ “the best I can write ever for all of my life”. ಮೇಲೆ ಹೆಸರಿಸಿದ ಕನ್ನಡ ಲೇಖಕರ ಮೊದಮೊದಲ ಬರಹಗಳನ್ನು ಓದಿ ನೋಡಿ, ಅಷ್ಟೇನು ರುಚಿಸಲ್ಲ. ಅವರೆಲ್ಲ ಚನ್ನಾಗಿ ಮಾಗಿ ದಾರ್ಶನಿಕ ಸಾಹಿತ್ಯ ರಚಿಸಿ ಅದನ್ನು ನಾವು ಓದಿ ನಮ್ಮ ಮನದಲ್ಲೀಗ ಅವರು ದಾರ್ಶನಿಕರಾಗಿಯೆ ಉಳಿದಿದ್ದಾರೆ. ಅವರ ಎಳಸು ವಯಸ್ಸಿನ ಬರಹಗಳನ್ನು ಕಂಡರೆ ಮೈ ಝುಮ್ಮೆನ್ನುತ್ತದೆ.

ಕೊನೆಯದಾಗಿ, ಪುಸ್ತಕದಲ್ಲಿ ಸಾಹಿತ್ಯದಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಕಾಣಿಸಿಕೊಂಡಿದೆಯಾ ಎಂಬುದರ ಬಗ್ಗೆ ಚರ್ಚೆಯಿದೆ. ಈಡಿಪಸ್ ಕಾಂಪ್ಲೆಕ್ಸ್ ನಿಮಗೆಲ್ಲ ಗೊತ್ತಿರುವಂಥದೇ. ಅಕಸ್ಮಾತ್ ಗೊತ್ತಿಲ್ಲದಿದ್ದರೆ- ಬಾಲ್ಯಾವಸ್ಥೆಯಲ್ಲಿ ಗಂಡು ಮಗುವಿಗೆ ತಾಯಿಯ ಮೇಲೆ ಹೆಣ್ಣು ಮಗುವಿಗೆ ತಂದೆಯ ಮೇಲೆ ಮೋಹ ಉಕ್ಕುವುದು ಈಡಿಪಸ್ ಕಾಂಪ್ಲೆಕ್ಸ್. ಮನೋವಿಜ್ಞಾನ ಸಾಹಿತ್ಯದಲ್ಲಿ ಹೇರಳವಾಗಿ ಉದಾಹರಣೆಗಳನ್ನು ಗುರುತಿಸುತ್ತದೆ. ಪುರಾಣಗಳೂ ಸಾಹಿತ್ಯದ ಪ್ರಕಾರವೇ ಅಂತಾದರೆ ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ವರಿಸುವುದೂ ಈಡಿಪಸ್ ಕಾಂಪ್ಲೆಕ್ಸೇ ಎನ್ನುವುದು ಮನೋವಿಜ್ಞಾನದ ವಾದ. ಇದೆಲ್ಲ ಹೊರತಾಗಿ ಪುಸ್ತಕವು ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತದೆ. ಗಾತ್ರದಲ್ಲಿ ಸಣ್ಣದೇ ಆದರೂ. ಹಾಗಾಗಿ ಪ್ರತಿಯೊಂದು ಪದವೂ ಬಿಡದೆ ಓದುವಂತಿದೆ, ಓದಿ.