ಸಾಮಾಜಿಕ ಬಂಧನದ ಭಾರ ಹಗುರಾಗುತ್ತಿದ್ದರೂ ದೈನಿಕದ ಬದುಕಿನ ಪಟ್ಟು ಕಟ್ಟು ಬಿಗಿಯಾಗುತ್ತಿದೆ. ಅಂಗಡಿ ವ್ಯಾಪಾರಗಳು ಸುರಕ್ಷತೆಯ ಹೊಸ ನಿಯಮಗಳನ್ನು ಪಾಲಿಸುತ್ತ ತೆರೆದುಕೊಂಡರೂ ಬರಬೇಕಾದಷ್ಟು ಜನರು ಬರುವುದಿಲ್ಲ ವ್ಯವಹಾರಗಳು ಎಷ್ಟು ಬೇಕೋ ಅಷ್ಟು ನಡೆಯುವುದಿಲ್ಲ. ಇಷ್ಟುದಿನ ಅವ್ಯಾಹತವಾಗಿ ಕಾಡಿದ ದೈತ್ಯಶಕ್ತಿಯ ಜೀವಿಯೊಂದು ಅರೆಸತ್ತೋ ಬಸವಳಿದೋ ನಟನೆಯಲ್ಲೋ ಕಣ್ಣೆದುರು ಮಲಗಿದಾಗ ಅದರಿಂದ ಇಷ್ಟು ದಿನ ಸಂತ್ರಸ್ತರಾದವರು ಇನ್ನೂ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಆಗಾಗ ಹತ್ತಿರ ಹೋಗಿ ಮುಟ್ಟಿ ಮುಟ್ಟಿ ಆಮೇಲೆ ದೂರ ಓಡಿ ನಿಂತು ನೋಡುವಂತೆ ಇಲ್ಲಿ ಈಗ ನಾವು ಕೂಡ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಅಗತ್ಯ ಇದ್ದೋ ಇಲ್ಲದೆಯೋ ಓಡಾಡಿಕೊಂಡು ಅಲೆದಾಡಿಕೊಂಡು ಇರುವುದು ಹುಟ್ಟಿನ ಜೊತೆಗೇ ಬಂದ ಸಿದ್ಧಿ ಹಾಗು ಅಧಿಕಾರ ಎನ್ನುವ ತಿಳುವಳಿಕೆ ನಂಬಿಕೆಗಳ ದಿಕ್ಕು ದೆಸೆ ಬದಲಿಸುವ ಸಂಗತಿಗಳ ಸುಳಿಯಲ್ಲಿ ನಾವು ಈಗಲೂ ಇದ್ದೇವೆ. ಒಂದು ವೇಳೆ ಹೊರಬಂದರೆ ಈ ಹಿಂದೆ ತುಳಿಯದ ಹಾದಿಯಲ್ಲಿ ಇನ್ನು ಮುಂದೆ ಗಮಿಸಬೇಕಾದ ಅವಶ್ಯಕತೆ ಅನಿವಾರ್ಯತೆಗಳೂ ಎದುರಿಗಿವೆ. ಮಾರ್ಚ್ ತಿಂಗಳ ಕೊನೆಯ ವಾರದವರೆಗೂ, ಇಲ್ಲಿನ ಆಕಾಶದಲ್ಲಿ ಹಾಯಾಗಿ ಹಾರಿಕೊಂಡಿರುವ ಹಕ್ಕಿಪಿಕ್ಕಿಗಳ ಸ್ವತಂತ್ರ ಪ್ರವೃತ್ತಿಯನ್ನೂ ಮನೆಯೊಳಗೆ ಮುದ್ದಿಸಿಕೊಂಡು ಬಾಳುವ ಸಾಕುನಾಯಿ ಬೆಕ್ಕುಗಳ ಸಂರಕ್ಷಿತ ಭಾವವನ್ನೂ ಜೊತೆಜೊತೆಗೆ ಹುಲುಮಾನವರಾದ ನಾವೂ ಅನುಭೋಗಿಸಿಕೊಂಡಿದ್ದವರು.

ಬಿಡಿ, ಇವೆಲ್ಲ ಮರೆವೆ ಆಗುವಂತೆ, ಬಣ್ಣದ ಪುಡಿಯಲ್ಲಿ ಒಬ್ಬರು ಎಳೆದ ಚಿತ್ರರೇಖೆಗಳನ್ನು ಕ್ಷಣ ಮಾತ್ರದಲ್ಲಿ ಒರೆಸಿ ಇನ್ನೊಬ್ಬರು ಹೊಸ ಆಕಾರ ಬರೆಯುವಂತೆ ಧುತ್ತನೆ ಏಕಾಏಕಿ ಆಗಿ ಬಂಧನಕ್ಕೆ ನಾವೆಲ್ಲಾ ತಳ್ಳಲ್ಪಟ್ಟಿದ್ದು ಇಲ್ಲೇ ಸಮೀಪದಲ್ಲಿ ಇನ್ನೂ ಹರಿದಾಡಿಕೊಂಡಿರುವ ಸಣ್ಣ ಕ್ರಿಮಿಯಿಂದ ಹಿಡಿದು ದೂರದಲ್ಲಿ ಕುಳಿತು ಇಡೀ ದೇಶದ ಅಧಿಕಾರ ಆಡಳಿತ ಸೂತ್ರಗಳ ಬಿಗಿ ಹಿಡಿದವರು ಎಲ್ಲವೂ ಎಲ್ಲರೂ ಸೇರಿಕೊಂಡು ಜೀವ ಜೀವನಗಳ ಬದುಕು ಸಾವುಗಳ ಬೇಕು ಬೇಡಗಳ ಆಗುಹೋಗುಗಳ ನಿರ್ಣಯ ನಿರ್ಧಾರ ಮಾಡುವಂತಾಗಿದ್ದು ಎಲ್ಲ ಕಡೆಯಂತೆ ಇಲ್ಲಿಯೂ; ಎಲ್ಲೆಲ್ಲೂ ಹೀಗೇ ನಡೆಯುತ್ತಿರುವುದರಿಂದ ಇದು ವಿಶೇಷವೂ ಅಲ್ಲ.

ಸದ್ಯದ ವಿಶಿಷ್ಟ ವರ್ತಮಾನ ಎಂದರೆ ತಲೆಯಿಂದ ಕಾಲಿನವರೆಗೆ ಸರಪಳಿಯಲ್ಲಿ ಬಂಧಿತನಾದ ಖೈದಿಯಂತಿರುವ ನಮ್ಮ ಸಂಕೋಲೆಗಳನ್ನು ಹಂತಹಂತವಾಗಿ ಸಡಿಲಿಸಿ ಬಿಡುಗಡೆ ಮಾಡುವ ಸಿದ್ಧತೆ ಸಾಗಿರುವುದು; ಹಲವು ಸುತ್ತಿನ ಬಿಗಿ ಬಂಧನದಲ್ಲಿ ಇದ್ದ ನಾವು ಸೆರೆಮನೆಯ ಒಳಗಿನಿಂದ ಹೊರದ್ವಾರದ ತನಕದ ಹಾದಿಯನ್ನು ಹೆಜ್ಜೆಹೆಜ್ಜೆಯಾಗಿ ಕ್ರಮಿಸುತ್ತಿರುವುದು. ಲಾಕ್ಡೌನ್ ಹೆಸರಿನ ಈ ಕಾಲದ ನವನವೀನ ಮಾದರಿಯ ಇಹಪರದ ಬಂಧನವನ್ನು ನಮ್ಮ ಮೇಲೆ ಹೇರಲು ಹೆಚ್ಚು ವೇಳೆ ಬೇಕಿಲ್ಲವಾಗಿತ್ತಾದರೂ ಅದರಿಂದ ಮುಕ್ತವಾಗಲಿಕ್ಕೆ ಹಲವು ಘಟ್ಟಗಳ ಹಲವು ಸಣ್ಣಸಣ್ಣ ಸಡಿಲಿಕೆಗಳು ತೊಡರುಗಳು ಎಚ್ಚರಿಕೆಗಳು ಕಿವಿಮಾತುಗಳು ಆಮೇಲೆ ಒಂದಿಷ್ಟು ಸಂದೇಹಗಳು ಕೂಡಿದ ದೀರ್ಘಕಾಲೀನ ತಯಾರಿ ಪ್ರಯಾಣ ಜಾರಿಯಲ್ಲಿದೆ.

ಅಂತರ, ದೂರ, ಮುಖಗವಸು, ಕೈತೊಳೆಯುವಿಕೆ, ಎಚ್ಚರಿಕೆ, ಭಯ, ಸಂಶಯ, ಇತ್ಯಾದಿಗಳು ಈಗಲೂ ಇಲ್ಲೇ ನಮ್ಮ ಆಜುಬಾಜುವಿನಲ್ಲೇ ವೈರಾಣುವಿನಂತೆಯೇ ಹಾಯಾಗಿ ಸುಳಿದಾಡಿಕೊಂಡಿದ್ದರೂ ನಾವೀಗ ಸ್ವತಂತ್ರರು ಎಂದು ನಂಬಿಸುವ ಮತ್ತೆ ನಮ್ಮ ಹಿಂದಿನ ಬದುಕನ್ನು ನಮಗೆ ಕಂತಿನಲ್ಲಿ ಮರಳಿಸಿದಂತೆ ಕಾಣುವ ಕೆಲಸ ಶುರುವಾಗಿದೆ.

ಬಂಧನ ಹಾಗು ಬಿಡುಗಡೆ ಪದಗಳ ಅರ್ಥ ನಮ್ಮ ನಮ್ಮ ಮನಸ್ಸಿನಲ್ಲಿ ಅನುಭವದಲ್ಲಿ ಪರಿಸ್ಥಿತಿಯಲ್ಲಿ ಬೇರೆಬೇರೆಯಾದರೂ ಇಲ್ಲಿನ ಜನಮನದ ಸಂಸ್ಕೃತಿ ಜೀವನಕ್ರಮಗಳಿಗೆ ಅನುಗುಣವಾಗಿ ಹಾಗು ಇಲ್ಲಿಯ ತನಕ ಬಂಧನದ ಹಲವು ಸಡಿಲಿಕೆಯ ಮಜಲುಗಳನ್ನು ದಾಟಿದ್ದರೂ ಅವೆಲ್ಲವಕ್ಕಿಂತ ಮಹತ್ವವೂ ಆಪ್ತವೂ ಆದ ಮೈಲಿಗಲ್ಲಾಗಿ ಮೊನ್ನೆಮೊನ್ನಿನ ಶನಿವಾರ ಇಲ್ಲಿನ ಪಬ್, ರೆಸ್ಟೋರೆಂಟ್ ಹಾಗು ಕ್ಷೌರದ ಅಂಗಡಿಗಳ ಬಾಗಿಲು ತೆರೆದವು. ಬಾಗಿಲುಗಳು ಇರುವುದೇ ತೆರೆಯುವ ಮುಚ್ಚುವ ನಿರಂತರ ಅಗತ್ಯ ಇರುವುದಕ್ಕೆ. ಬರೇ ತೆಗೆದೇ ಇಡುವ ಅನುಕೂಲ ಇದ್ದರೆ ಅಂತಹಲ್ಲಿ ಬಾಗಿಲೇ ಬೇಡವೇನೋ, ಇನ್ನು ಖಾಯಂ ಮುಚ್ಚಿಯೇ ಇಡಬೇಕಾದ ಅನಿವಾರ್ಯತೆ ಇರುವ ದ್ವಾರವಾದರೆ ಅಲ್ಲಿ ಗೋಡೆ ಕಟ್ಟಿದರೂ ನಡೆದೀತು. ಅಂತೂ ತೆರೆಯಬೇಕಾದ ವಿಶೇಷ ಕದಗಳನ್ನು ಈಗ ತೆರೆದಾಗಿದೆ.

ಸ್ವಭಾವ ಗುಣಧರ್ಮಗಳಲ್ಲಿ ಈ ಪಬ್ ಹಾಗು ರೆಸ್ಟೋರೆಂಟ್ ಒಂದಕ್ಕೊಂದು ಹತ್ತಿರದವಾದರೂ ಇವೆರಡೂ ಪೂರ್ತಿ ಒಂದೇ ಅಲ್ಲ. ಮತ್ತೆ ಇವೆರಡು ಬಹಳ ಬಳಕೆಗಳಲ್ಲಿ ಜೊತೆಜೊತೆಯಾಗಿ ಕೈಕೈಹಿಡಿದುಕೊಂಡೆ ಓಡಾಡುತ್ತವೆ. ಒಂದು ಮುಖ್ಯವಾಗಿ ಮದ್ಯಪಾನ ಸೇವಿಸಲು ಹೋಗುವ ಸ್ಥಳವಾದರೆ ಇನ್ನೊಂದು ತಿನ್ನಲು ಹೋಗುವ ಜಾಗ. ಹಾಗಂತ ಎರಡೂ ಕಡೆ ತಿನ್ನುವ ಕುಡಿಯುವ ಸೌಕರ್ಯ ಸೌಲಭ್ಯ ಇರುತ್ತದೆ. ಆದರೆ ಯಾವುದಕ್ಕೆ ಎಲ್ಲಿ ಹೆಚ್ಚು ಸಾಧ್ಯತೆ ಎನ್ನುವ ಮೇಲೆ ಈ ಪಬ್ ಹಾಗು ರೆಸ್ಟೋರೆಂಟ್ ಗಳ ನಡುವಿನ ವ್ಯತ್ಯಾಸ ಕಂಡುಕೊಳ್ಳಬಹುದು. ಇನ್ನು ಇವರ ಸಾಮಾಜಿಕ ಸಮತೋಲನಕ್ಕೆ ಮಾನಸಿಕ ಸ್ವಾಸ್ಥ್ಯಕ್ಕೆ ಸೌಹಾರ್ದಯುತ ಸಮ್ಮಿಲನಕ್ಕೆ ಈ ಎರಡೂ ಸ್ಥಳಗಳೂ ಬೇಕು. ಆದರೆ ಇವುಗಳ ಹದ ತಪ್ಪಿದ ಭೇಟಿ ಮಿತಿಮೀರಿದ ಬಳಕೆಯಿಂದಲೇ ಸ್ವಾಸ್ಥ್ಯ ಕಳಕೊಂಡವರ ದೊಡ್ಡ ಪಟ್ಟಿಯೂ ಇದೆ.

ಇಲ್ಲಿನ ಜನರು ಪಬ್ ಹಾಗು ರೆಸ್ಟೋರೆಂಟ್ ಗಳನ್ನು ಬರೇ ಕುಡಿಯುವ ತಾಣವಾಗಿಯೋ ತಿನ್ನುವ ಜಾಗವಾಗಿಯೋ ಕಾಣುವುದಿಲ್ಲ, ಬದಲಿಗೆ ಒಬ್ಬರಿನ್ನೊಬ್ಬರೊಡನೆ ಬೆರೆಯುವ, ಬೆರೆತು ಹಗುರಾಗುವ ಠಾವಾಗಿ ಪರಿಗಣಿಸುತ್ತಾರೆ. ಒಂಟಿಯಾಗಿಯೋ ಜೋಡಿಗಳಾಗಿಯೋ ಕುಟುಂಬವಾಗಿಯೋ ಬೆರೆಯುವ ಸ್ಥಳವೆಂದು ಭಾವಿಸುತ್ತಾರೆ. ಇನ್ನು ಈ ಕ್ಷೌರದ ಅಂಗಡಿಗಳೂ ಇವರ ಸೌಂದರ್ಯದ ಶಿಸ್ತು ಪ್ರಜ್ಞೆಗಳ ಮೇಲೆ ಸೂಕ್ಷ್ಮವಾಗಿ ಕಣ್ಣಿಡುವ ಸಾಮಾಜಿಕ ಅನಿವಾರ್ಯತೆಯ ವಿಷಯಯಗಳಲ್ಲಿ ಬರುತ್ತವೆ. ಸ್ವಲ್ಪ ಹಣ ಉಳಿಸುವ ಎಂದೋ ತಮ್ಮಿಂದಲೂ ಇದು ಸಾಧ್ಯ ಎಂದೋ ಮನೆಯಲ್ಲೇ ಸಲಕರಣೆಗಳನ್ನು ತಂದಿಟ್ಟುಕೊಂಡು ಕ್ಷೌರಮಾಡಿಕೊಳ್ಳುವವರು ಇಲ್ಲಿ ಕೋವಿಡ್ ಕಾಲದ ಮೊದಲೂ ಇದ್ದರಾದರೂ ಮತ್ತೆ ಈ ಕಾಲಕ್ಕೆ ತುಸು ಹೆಚ್ಚು ಜನ ಸ್ವಯಂಕೃತ ಕ್ಷೌರವನ್ನು ಅನುಸರಿಸಿದರಾದರೂ ಸಮೃದ್ಧಿಯಲ್ಲಿ ಬೆಳೆಯುತ್ತಿದ್ದ ಕೂದಲುಗಳನ್ನು ಅವುಗಳಷ್ಟಕ್ಕೆ ಬೆಳೆಯಲು ಬಿಟ್ಟು ಸಲೂನುಗಳು ಎಂದು ತೆರೆದಾವೋ ತಮ್ಮ ಮೆಚ್ಚಿನ ಕ್ಷೌರಿಕರ ಕತ್ತರಿಗಳಿಗೆ ಎಂದು ಒಪ್ಪಿಸಿಯೇವೋ ಎಂದು ಕಾದುಕೂತವರು ಬಹಳ ಇದ್ದಾರೆ.

ವ್ಯಾಪಾರ ವ್ಯವಹಾರಗಳಲ್ಲೇ ಬದುಕು ಕಟ್ಟಿಕೊಂಡವರು ತುರ್ತಾಗಿ ಎಲ್ಲವೂ ಮೊದಲಿನಂತಾಗಬೇಕಾದ ಅನಿವಾರ್ಯತೆಯಲ್ಲಿಯೂ ವಾಸ್ತವದ ಅತಂತ್ರತೆಯಲ್ಲಿಯೂ ಸಿಕ್ಕಿಕೊಂಡಿದ್ದಾರೆ.

ಯಾವ ಊರಿಗೆ ಹೋದರೂ ಅಲ್ಲಿನ ಪೇಟೆಯ ಬೀದಿ ಬೀದಿಗಳಲ್ಲಿ ಪಬ್ ಗಳು ರೆಸ್ಟೋರೆಂಟ್ ಗಳು ಹಾಗು ಸಲೂನ್ ಗಳು ಕಾಣಲು ಸಿಗುತ್ತವೆ. ಇನ್ನು ಯುರೋಪಿನಿಂದ ಏಶಿಯಾದಿಂದ ವಲಸೆ ಬಂದು ಈ ಉದ್ಯೋಗ ಉದ್ಯಮಗಳಲ್ಲಿ ತೊಡಗಿಸಿಕೊಂಡವರ ದೊಡ್ಡ ಸಮೂಹವೇ ಇದೆ. ಒಂದು ಅಂದಾಜಿನ ಪ್ರಕಾರ ಇಲ್ಲಿನ ಕ್ಷೌರದ ಹಾಗು ಸೌಂದರ್ಯವರ್ಧನ ಸೇವೆ ಒದಗಿಸುವ ವ್ಯವಸ್ಥೆಯಲ್ಲಿ ವರ್ಷಕ್ಕೆ ಎಂಟು ಬಿಲಿಯನ್ ಪೌಂಡ್ ಗಳ ವಹಿವಾಟು ನಡೆಯುತ್ತದೆ, ನಲವತ್ತು ಸಾವಿರಕ್ಕಿಂತ ಮಿಕ್ಕಿ ಸಲೂನುಗಳಿವೆ ಇಲ್ಲಿ. ಇನ್ನು ಬಾರ್, ಪಬ್ ಹಾಗು ರೆಸ್ಟೋರೆಂಟ್ ಗಳಲ್ಲಿ ಸೇರಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಇಷ್ಟು ದಿನ ಆರೋಗ್ಯವನ್ನು ಆಯುಸ್ಸನ್ನು ಕಾಪಾಡಿಕೊಳ್ಳುವ ಅನಿವಾರ್ಯ ಯತ್ನದ ಭಾಗವಾಗಿ ಮುಚ್ಚಿದ್ದ ವ್ಯಾಪಾರ ವ್ಯವಹಾರಗಳು ಅವನ್ನು ನಂಬಿದ ಲಕ್ಷಾಂತರ ಬದುಕುಗಳು ಎಂದಿನ ದೈನಿಕವನ್ನು ಮತ್ತೆ ಚಾಲನೆ ನೀಡುವ ವೈಯಕ್ತಿಕವಾಗಿ ಸಾಮೂಹಿಕವಾಗಿ ಆರ್ಥಿಕ ಚೈತನ್ಯ ಪಡೆಯುವ ಸಲುವಾಗಿ ಇದೀಗ ತೆರೆಯಲ್ಪಟ್ಟಿವೆ. ಇಲ್ಲಿನ ಬಹುಜನರಿಂದ “ಸೂಪರ್ ಸಾಟರ್ಡೆ” ಎಂದು ಬಣ್ಣಿಸಲ್ಪಟ್ಟ ಕಳೆದ ಶನಿವಾರ ಸುಮಾರು ನೂರು ದಿನಗಳ ಕಾಲದ ನಿರ್ಬಂಧಗಳು ಅಂತ್ಯವಾಗುತ್ತಿರುವುದನ್ನು ಸಾರುತ್ತಿದೆ.

ಸರಕಾರದ ಈ ಹೆಜ್ಜೆ, ಸಹಜವಾಗಿ ವ್ಯಾಪಾರಗಳ ಮಾಲಿಕ ನೌಕರರಿಗೆ ಸಣ್ಣ ಭರವಸೆ ನೀಡಿದ್ದಲ್ಲದೇ, ಪ್ರತಿ ವಾರವೂ ಪಬ್ ಹಾಗು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಲು ಇಷ್ಟ ಪಡುವವರಿಗೆ, ತಿಂಗಳಲ್ಲಿ ಕನಿಷ್ಠ ಒಮ್ಮೆಯಾದರೂ ಕ್ಷೌರದ ಅಂಗಡಿಯಲ್ಲಿ ಕೂದಲು ಟ್ರಿಮ್ ಮಾಡಿಕೊಂಡು ಬರುವ ವರ್ಗದಿಂದ ಹೃತ್ಪೂರ್ವಕ ಸ್ವಾಗತವನ್ನು ಪಡೆದಿದೆ. ನಿರ್ಬಂಧ ಸಡಿಲಿಕೆಯ ಕಾನೂನಿನ ಪ್ರಕಾರ ಕಳೆದ ಶುಕ್ರವಾರದ ನಡುಇರುಳು ಕಳೆದು ಒಂದು ನಿಮಿಷ ಆಗುವಾಗ ಅಂದರೆ ಗಡಿಯಾರ ಶನಿವಾರದ ದಿನದ ಬಾಬತ್ತಿನ ಮೊದಲ ನಿಮಿಷ ಟಿಕ್ ಅನಿಸಿದಾಗ ಬಾಗಿಲು ತೆರೆದ ಕ್ಷೌರದ ಅಂಗಡಿಗಳೂ ಇವೆ. ನಡುರಾತ್ರಿಯ ಆ ಹೊತ್ತಿಗೇ ಕಾದು ಕ್ಷೌರದ ಸೇವೆ ಪಡೆದ ಗ್ರಾಹಕರಿದ್ದಾರೆ.

ಲಂಡನ್ನಿನಲ್ಲಿ ಮಹಿಳೆಯೊಬ್ಬಾಕೆ ಮನೆಯಲ್ಲಿ ಕನ್ನಡಿಯ ಎದುರು ನಿಂತು ಹೇಗೇಗೋ ಕೂದಲು ಕತ್ತರಿಸಿಕೊಳ್ಳುತ್ತ ತಾನು ಯಾರ್ಯಾರಂತೆಯೋ ಕಾಣುತ್ತಿದ್ದೆ, ಇದೀಗ ತಮ್ಮ ಮಾಮೂಲಿ ಕಟಿಂಗ್ ಶಾಪ್ ಅಲ್ಲಿ ತಾನು ಯಾವಾಗಲೂ ಏರುವ ತಿರುಗುವ ಕುರ್ಚಿಯಲ್ಲಿ ಕುಳಿತು ಹರಟೆ ಹೊಡೆಯುತ್ತ ಮಾಡಿಕೊಂಡ ಕೇಶ ಸೇವೆಯಿಂದ ತನ್ನಂತೆಯೇ ಕಾಣಲು ಶುರು ಆಗಿದ್ದೇನೆ ಎಂದು ಖುಷಿ ಪಟ್ಟಿದ್ದಾಳೆ. ನಾವು ನಮ್ಮಂತೆ ಕಾಣಿಸಿಕೊಳ್ಳಲು ಬರೇ ನಮ್ಮ ಪ್ರಯತ್ನ ಪ್ರಯಾಸ ಸಾಕಾಗುವುದಿಲ್ಲ, ಇನ್ನೊಬ್ಬರ ಹಸ್ತಕ್ಷೇಪ ಭಾಗವಹಿಸುವಿಕೆಯೂ ಅಗತ್ಯ ಎನ್ನುವ ದೃಷ್ಟಾಂತ ಇದು.

ಇನ್ನು ಪ್ರತಿ ವಾರಾಂತ್ಯಕ್ಕೂ ಪಬ್ ಗೆ ಭೇಟಿ ನೀಡಿ ಅಲ್ಲಿ ತಮ್ಮ ಪರಿಚಯಸ್ಥ ಸ್ನೇಹಿತರ ಜೊತೆಗೆ ನಗೆ ಕೇಕೆಗಳ ಕಡಲಲ್ಲಿ ಮುಳುಗುವ ಅಥವಾ ಅಪರಿಚಿತರ ಜೊತೆ ಹೊಸ ಮಿತ್ರತ್ವ ಕುದುರಿಸುವ ಅವಕಾಶದ ಪುನಃರಾರಂಭ ಆಗಿದೆ, ಲಾಕ್ಡೌನ್ ಕಾಲದ ಬಂಧನವನ್ನು ಏಕತಾನತೆಯನ್ನು ಮರೆಸುವ “ಎಂದಿನಂತಲ್ಲದ” ಸವಿದಿನಗಳು ಬಂದಿವೆ ಎಂದು ಸಂತಸ ಪಟ್ಟಿದ್ದಾರೆ. “ಸೂಪರ್ ಸಾಟರ್ಡೆ”ಯ ಆಗಮನ ಒಂದಷ್ಟು ಜನರನ್ನು ಉಲ್ಲಸಿತರಾಗಿ ಮಾಡಿದ್ದರೂ ಇಲ್ಲಿ ಮಾಮೂಲಿಯಾಗಿ ವಾರಾಂತ್ಯದ ಸಂಜೆಯನ್ನು ಪಬ್ ಗಳಲ್ಲಿ ಕಳೆಯುತ್ತಿದ್ದ ಎಲ್ಲರೂ ಹಾಗು ಕೇಶವಿನ್ಯಾಸದ ಅಗತ್ಯ ಬಿದ್ದಾಗೆಲ್ಲ ಖಾಯಂ ಕ್ಷೌರದ ಅಂಗಡಿಗಳಲ್ಲೇ ಸೇವೆ ಪಡೆಯುವ ಎಲ್ಲರೂ ಬಂಧಮುಕ್ತಿಯ ಸ್ವಾಗತದ ಮೇಳದಲ್ಲಿ ತೊಡಗಿಸಿಕೊಳ್ಳಲಿಲ್ಲ. ಸರಕಾರವು ವ್ಯಾಪಾರ ವ್ಯವಹಾರಗಳ ಒತ್ತಡದಲ್ಲಿ ಸಾಮಾಜಿಕ ಅಂತರವನ್ನು ಎರಡು ಮೀಟರುಗಳಿಂದ ಒಂದು ಮೀಟರ್ ಗೆ ಇಳಿಸಿದ್ದರೂ ಇದು ಸುರಕ್ಷಿತವೋ ಅಲ್ಲವೋ ಎನ್ನುವ ಸಂದೇಹ ಇರುವವರು ಈಗಲೂ ಮನೆಯೊಳಗೇ ಕೂತು ಎಲ್ಲವನ್ನು ಗಮನಿಸುತ್ತಿದ್ದಾರೆ.

ಕಳೆದ ಶನಿವಾರ ಕೆಲವು ಪಬ್ ಗಳಲ್ಲಿ ಜನಸ್ತೋಮ ಉನ್ಮಾದಲ್ಲಿ ನೆರೆದು ಸಾಮಾಜಿಕ ಅಂತರ ಹಾಗು ಇತರ ಮುನ್ನೆಚ್ಚರಿಕೆಗಳನ್ನು ಮರೆತು ತಮ್ಮ ಮೋಜಿನ ದಿನಗಳು ಮರುಕಳಿಸಿತು ಎಂದು ಖುಷಿಪಟ್ಟಿದ್ದಾರೆ. ಈಗಲೂ ಸಂಶಯ ಎಚ್ಚರದಲ್ಲಿ ವ್ಯವಹರಿಸುವವರು ಅಜಾಗರೂಕರಾಗಿ ಜನರು ಗುಂಪುಗಟ್ಟುವುದನ್ನು ಕಂಡು ಸೋಂಕು ಇನ್ನೊಂದು ಏರಿಕೆಯನ್ನೋ ಕಂಡೀತೋ ಎನ್ನುವ ಕಳವಳದಲ್ಲಿ ಇದ್ದಾರೆ. ಶನಿವಾರ ಪಬ್ ಗಳಿಗೆ ಭೇಟಿ ಕೊಟ್ಟು ಮರಳಿದವರು ಸೋಂಕಿತರಾಗಿರುವುದು ಗೊತ್ತಾಗಿ ಅಂತಹ ಎರಡು ಮೂರು ಪಬ್ ಗಳು ಇದೀಗ ಮತ್ತೆ ತಾತ್ಕಾಲಿಕವಾಗಿ ಬಾಗಿಲು ಹಾಕಿದ ಉದಾಹರಣೆಗಳೂ ಇವೆ. ಎಂದಿನಂತಲ್ಲದ ದಿನಗಳು ನಮ್ಮೆದುರು ಬಂದು ಆಶಾವಾದ ಉತ್ಸಾಹಗಳನ್ನು ಹುಟ್ಟಿಸುತ್ತಿದ್ದರೂ ಅವೆಲ್ಲವೂ ಯಾವ ಘಳಿಗೆಯಲ್ಲೂ ಉಡುಗಬಹುದಾದ ಮೃದುವಾದ ನಾಜೂಕಿನ ಉಲ್ಲಾಸವಾಗಿ ಕಾಣಿಸುತ್ತಿವೆ.

ಸಂಕಟದ ಸಂದಿಗ್ಧತೆಯ ಸುಮಾರು ನೂರು ದಿನಗಳು ಈಗ ಕಳೆದಿವೆ. ಕೊರೊನ ಸಂಬಂಧಿತ ಹರಡುವಿಕೆ ಸಾವುಗಳು ಇನ್ನೂ ಆಗುತ್ತಿದ್ದರೂ ಹಿಂದಿಗಿಂತ ತುಂಬಾ ಕಡಿಮೆಯಾಗಿವೆ, ನಿರ್ಬಂಧಗಳೂ ಸಡಿಲಗೊಳ್ಳುತ್ತಿವೆ, ಆರ್ಥಿಕ ಪುನಶ್ಚೇತನದ ಮಹಾಭಾರವನ್ನು ಹೊತ್ತ ಸರಕಾರ ವ್ಯಾಪಾರ ವ್ಯವಹಾರಗಳನ್ನು ಜೊತೆಗೆ ಗ್ರಾಹಕರನ್ನು ಪುಸಲಾಯಿಸುತ್ತಿದೆ. ಮತ್ತೆ ಅಂತಹ ವ್ಯಾಪಾರ ವ್ಯವಹಾರಗಳಲ್ಲೇ ಬದುಕು ಕಟ್ಟಿಕೊಂಡವರು ತುರ್ತಾಗಿ ಎಲ್ಲವೂ ಮೊದಲಿನಂತಾಗಬೇಕಾದ ಅನಿವಾರ್ಯತೆಯಲ್ಲಿಯೂ ವಾಸ್ತವದ ಅತಂತ್ರತೆಯಲ್ಲಿಯೂ ಸಿಕ್ಕಿಕೊಂಡಿದ್ದಾರೆ.

ಸಾಮಾಜಿಕ ಬಂಧನದ ಭಾರ ಹಗುರಾಗುತ್ತಿದ್ದರೂ ದೈನಿಕದ ಬದುಕಿನ ಪಟ್ಟು ಕಟ್ಟು ಬಿಗಿಯಾಗುತ್ತಿದೆ. ಅಂಗಡಿ ವ್ಯಾಪಾರಗಳು ಸುರಕ್ಷತೆಯ ಹೊಸ ನಿಯಮಗಳನ್ನು ಪಾಲಿಸುತ್ತ ತೆರೆದುಕೊಂಡರೂ ಬರಬೇಕಾದಷ್ಟು ಜನರು ಬರುವುದಿಲ್ಲ ವ್ಯವಹಾರಗಳು ಎಷ್ಟು ಬೇಕೋ ಅಷ್ಟು ನಡೆಯುವುದಿಲ್ಲ. ಇಷ್ಟುದಿನ ಅವ್ಯಾಹತವಾಗಿ ಕಾಡಿದ ದೈತ್ಯಶಕ್ತಿಯ ಜೀವಿಯೊಂದು ಅರೆಸತ್ತೋ ಬಸವಳಿದೋ ನಟನೆಯಲ್ಲೋ ಕಣ್ಣೆದುರು ಮಲಗಿದಾಗ ಅದರಿಂದ ಇಷ್ಟು ದಿನ ಸಂತ್ರಸ್ತರಾದವರು ಇನ್ನೂ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಆಗಾಗ ಹತ್ತಿರ ಹೋಗಿ ಮುಟ್ಟಿ ಮುಟ್ಟಿ ಆಮೇಲೆ ದೂರ ಓಡಿ ನಿಂತು ನೋಡುವಂತೆ ಇಲ್ಲಿ ಈಗ ನಾವು ಕೂಡ. ಕೆಲವು ಕ್ಷಣಗಳ ಮಟ್ಟಿಗೆ ಎಲ್ಲವೂ ಸಹಜ ಸ್ಥಿತಿಗೆ ಮರಳಿವೆ ಅಥವಾ ಸದ್ಯದಲ್ಲೇ ಮರಳಲಿವೆ ಎಂದೆನ್ನಿಸಿದರೂ ಇದೀಗ ಎದುರಾಗುತ್ತಿರುವ ಜಗತ್ತು ಅದರೊಳಗಿನ ಬದುಕು ಅಜ್ಞಾತವೂ ಅನಾಮಿಕವೂ ಆದ ಒಂದು ತಾಜಾ ಯಥಾಸ್ಥಿತಿಯಾಗಿ ಕಾಣುತ್ತಿದೆ.

ಮೊದಲೇ ಕರೆ ಮಾಡಿ ಕಾದಿರಿಸಿಕೊಂಡು ಒಳಹೋಗಬೇಕಾದ ಕ್ಷೌರದ ಅಂಗಡಿಗಳು, ರೆಸ್ಟೋರೆಂಟ್ ಗಳ ಕಿರಾಣಿ ಅಂಗಡಿಗಳ ಮುಂದೆ ಒಬ್ಬರಿನ್ನೊಬ್ಬರಿಂದ ಮಾರು ದೂರದಲ್ಲಿ ಸರತಿಯ ಸಾಲಿನಲ್ಲಿ ನಿಲ್ಲುವುದು ಅಥವಾ ಮತ್ತೆಂತಹದೋ ನಿಯಮ ಕರಾರುಗಳಿರುವ ಸುತ್ತಲಿನ ನೂರಾರು ವ್ಯವಸ್ಥೆಗಳು ಮತ್ತೆ ಅಲ್ಲೆಲ್ಲ ಯಾರೋ ಕೆಮ್ಮಿದರೆ ಇನ್ಯಾರೋ ಹತ್ತಿರ ಸುಳಿದರೆ ಸೋಂಕು ಹಬ್ಬೀತೆ ಎಂದು ಸಂದೇಹ ಪಡುವುದು, ಯಾವ ಹೊತ್ತಿಗೂ ಲಾಕ್ಡೌನ್ ಮರುಕಳಿಸಬಹುದಾದ ಸಾಧ್ಯತೆ ಇರುವುದು ಇತ್ಯಾದಿಗಳು ನವೀನ ಮತ್ತು ಅಪರಿಚಿತ ಜಗತ್ತಿನ ಬಗೆಬಗೆಯ ಮುಖಗಳಾಗಿ ಖುಲಾಸೆಗೊಳ್ಳುತ್ತಿವೆ.

ಮಾಮೂಲಿ ಸ್ಥಿತಿಗೆ ಮರಳುವ ಈ ಹಾದಿಯಲ್ಲಿ ಇದೀಗ ನಮ್ಮೆದುರಿರುವುದು ನೂರು ದಿನಗಳ ನಂತರದ ಬಿಡುಗಡೆಯ ಖುಷಿಯ ಎಂದಿನಂತಲ್ಲದ ದಿನಗಳು; ಮತ್ತೆ ಅದೇ ನೂರು ದಿನಗಳಲ್ಲಿ ಸುತ್ತಮುತ್ತಲಲ್ಲಿ ಆದ ತೀವ್ರ ಮಾರ್ಪಾಟಿನಿಂದಾಗಿ ಹುಟ್ಟಿದ ಅಪರಿಚಿತ ಹೊಸ ವ್ಯವಸ್ಥೆಗಳು ಪರಿಸ್ಥಿತಿಗಳು ಹಾಗು ಅವುಗಳ ಜೊತೆ ಬಲವಂತದಲ್ಲಿ ರಾಜಿ ಮಾಡಿಕೊಂಡ ಮೊದಲಿನಂತಲ್ಲದ ದಿವಸಗಳು.