ಮಾಧ್ಯಮದ ತಪ್ಪಿನಿಂದಾಗಿ ಅಲ್ಲೋಲಕಲ್ಲೋಲವಾಗಿಬಿಡುವ ಜಗತ್ತಿನ ಜವಾಬ್ದಾರಿಯ ಅರಿವು ನಮ್ಮ ಮಾಧ್ಯಮಗಳಿಗೆ ಇದ್ದಿದ್ದು ಕಮ್ಮಿಯೇ. ಸಣ್ಣ ಅಡುಗೆಯ ಸುಳ್ಳನ್ನೇ ಜಾಗತಿಕವಾಗಿ ಪಸರಿಸಿಬಿಡುವ ನಾವು ಇಂದು ಈ ಸೋಷಿಯಲ್ ಮೀಡೀಯಾ ಜಗತ್ತಲ್ಲಿ ಬೆರಳಂಚಲ್ಲಿ ಮಾಹಿತಿ ಸಿಗುವಾಗ ಬಿಡುವೆವೆ? ಏನೆಲ್ಲಾ ಸುಳ್ಳು ಸುದ್ದಿ ನಿತ್ಯ ವಾಟ್ಸಾಪಿನಲ್ಲಿ ಬರುತ್ತದೆ. ಇಂಥವನ್ನು ಫಾರ್ವರ್ಡ್ ಕೂಡ ಮಾಡುತ್ತಾರಲ್ಲ ಜನ ಎಂದು ಒಮ್ಮೊಮ್ಮೆ ಕಿರಿಕಿರಿಯಾಗುತ್ತದೆ. ಅದರಲ್ಲೂ ವಾಟ್ಸಾಪಿನಲ್ಲಿ ಆರೋಗ್ಯ, ವೈದ್ಯಕೀಯ, ಆಹಾರದ ಬಗ್ಗೆ ಬರುವಷ್ಟು ಸುಳ್ಳು ಮಾಹಿತಿ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲವೇನೋ. ಯಾರಿಗೆ ಇದರಿಂದ ಏನು ಲಾಭವೋ?!
ವೈಶಾಲಿ ಹೆಗಡೆ ಬರೆಯುವ ಪಾಕ್ಷಿಕ ಅಂಕಣ.

 

ಪ್ರಜಾಪ್ರಭುತ್ವವೆಂಬ ಕುರ್ಚಿಯ ನಾಲ್ಕನೇ ಕಾಲು ಸದಾ ಡೊಂಕು, ಅಂತೆಯೇ ಆ ಕುರ್ಚಿ ಸದಾ ಡೊಗ್ಗು. ನಮ್ಮ ಮಾಧ್ಯಮ, ಮೀಡಿಯ, ಸುದ್ದಿ, ಅದೇ “ದ ಫೋರ್ಥ್ ಎಸ್ಟೇಟ್” ಎಂಬ ನಾಲ್ಕನೇ ಆಯಾಮ ಇತ್ತೀಚೆಗೆ ಸದಾ ಸುದ್ದಿಯಲ್ಲಿದೆ. ಎಲ್ಲೆಡೆ ತಾಂತ್ರಿಕ ಕ್ರಾಂತಿಯಿಂದಾಗಿ ಸುಳ್ಳು ಸುದ್ದಿ ಸೃಷ್ಟಿಯಾಗುತ್ತಿದೆ ಎಂಬ ಗುಮಾನಿಯಿದೆ. ಅಮೆರಿಕಾದ ಕಳೆದ ಸಲದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹ್ಯಾಕರ್ ಗಳು ಹಲವು ಸುಳ್ಳುಸುದ್ದಿಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟ ಪರಿಣಾಮ ಜನಾಭಿಪ್ರಾಯ ಬದಲಾಗಿ ಜನ ತಮ್ಮ ಮತ ಬದಲಿಸಿದ್ದಾರೆಂದು ಬಯಲಿಗೆ ಬಂದಾಗಿನಿಂದ ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಹುಟ್ಟಿಕೊಳ್ಳಬಹುದಾದ ಸುಳ್ಳು ಸುದ್ದಿಯ ಸಾಧ್ಯತೆಗಳ ತನಿಖೆಯಾಗುತ್ತಿದೆ.

ನಾವು ಚಿಕ್ಕವರಿದ್ದಾಗ ಇದ್ದಿದ್ದೊಂದೇ ದೂರದರ್ಶನ. ಆ ಚಕ್ರ ತಿರುಗುವಾಗಿನ ಸಂಗೀತ ಇಂದಿಗೂ ಹಳೆಯ ನೆನಪುಗಳ ಸಂತೆ. ಅದೊಂದೇ ಚಾನೆಲ್ಲು, ಅದೊಂದೇ ಸುದ್ದಿವಾಹಿನಿ. ಕ್ರಮೇಣ ಸುದ್ದಿ ಮಾಧ್ಯಮಗಳ ಖಾಸಗೀಕರಣವಾದ ಮೇಲೆ ನಿಧಾನಕ್ಕೆ ಬೆಳಕಿಗೆ ಬಂದ ಸತ್ಯವೆಂದರೆ ದೂರದರ್ಶನ ಸರ್ಕಾರದ ಮುಖವಾಣಿಯಾಗಿ ಬಹುತೇಕ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸರ್ಕಾರದ ಹಿಡಿತದಲ್ಲಿದ್ದ ವಾಹಿನಿ, ಸುದ್ದಿಯ ಮೇಲಿನ ನಿಯಂತ್ರಣವನ್ನು ಸರ್ಕಾರದ ಆದೇಶದಂತೆ ವಹಿಸುತ್ತಿತ್ತು. ಯಾವ ಸುದ್ದಿ ಎಲ್ಲಿ ಹೇಗೆ ತಲುಪಬೇಕೋ ಅಷ್ಟೇ ತಲುಪುತ್ತಿತ್ತು. ಅಂದರೆ ನಾಲ್ಕನೇ ಆಯಾಮ ಆಗಲೂ ಡೊಂಕಾಗಿಯೇ ಇತ್ತು. ಇಂದು ಎಲ್ಲ ದೇಶಗಳ ನೂರಾರು ಚಾನೆಲ್ಲುಗಳು ಎಲ್ಲ ಬಗೆಯ ಸುದ್ದಿ ಬಿತ್ತರಿಸುತ್ತವೆ. ಖಾಸಗಿ ವಾಹಿನಿಗಳ ಜೀವನ ನಿರ್ವಹಣೆ ಹಲವು ಬಗೆಯ ಜಾಹೀರಾತು, ಹೂಡಿಕೆದಾರರ ಹಣದಿಂದ ಬರುತ್ತವೆ. ಆ ಹಣದ ಮೂಲ ಕೂಡ ಸುದ್ದಿವಾಹಿನಿಯ ನಿಷ್ಠೆಯ ಮೂಲವಾಗಿರುತ್ತವೆ. ಅಂದ ಮೇಲೆ ನಾಲ್ಕನೇ ಆಯಾಮ ಇಂದಿಗೂ ಡೊಂಕೇ.

ಇನ್ನು ನೇರಾನೇರ ಸುಳ್ಳುಸುಳ್ಳೇ ಸೃಷ್ಟಿಯಾಗುವ , ಮೂಲವೇ ಇಲ್ಲದ ಸುಳ್ಳು ಸುದ್ದಿಗಳೂ ಕೂಡ ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಶರವೇಗದಲ್ಲಿ ನಿಜವೆಂಬಂತೆ ಪ್ರಸಾರಗೊಂಡು ಪಸರಿಸುತ್ತವೆ. ಇಂಥ ಸುಳ್ಳುಸುದ್ದಿ ಸೃಷ್ಟಿಸುವ ಕಾರ್ಖಾನೆಗಳೇ ಹೊಸ ಉದ್ಯೋಗ ಸೃಷ್ಟಿಸುವ ಒಂದು ಉದ್ಯಮವಾಗಿದೆಯೆಂದರೆ ನಂಬಲು ಕಷ್ಟವಾದರೂ ನಿಜ. ತಂತ್ರಜ್ಞಾನ ಇಂದು ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ, “ಡೀಪ್ ಫೇಕ್” ತಂತ್ರಜ್ಞಾನ ಬಳಸಿ, ಯಾರದೇ ಮುಖಕ್ಕೆ ಸುಳ್ಳು ಭಾಷಣವನ್ನು ಅಳವಡಿಸಿ ಅದು ಆ ವ್ಯಕ್ತಿಯೇ ಮಾಡಿದ ಭಾಷಣವೆಂಬಂತೆ ಬಿಂಬಿಸಿ ಪ್ರಸರಿಸಬಹುದು. ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇರದ ವ್ಯಕ್ತಿಗಳನ್ನು ಸೃಷ್ಟಿಸಿ ಸುಳ್ಳು ಪ್ರೊಫೈಲ್ ಗಳನ್ನು ಸೃಷ್ಟಿಸಬಹುದು. ಜಗತ್ತಿನಲ್ಲಿ ನಡೆಯದೇ ಇರದ ಘಟನೆಯೊಂದನ್ನು ಹೂಬೇಹೂಬು ನಡೆದಿದೆಯಂಬಂತೆ ಸೃಷ್ಟಿಸಬಹುದು. ನಿಜಕ್ಕೂ ನಡೆದ ವಾಸ್ತವವೊಂದನ್ನು ಇನ್ನಿಲ್ಲದಂತೆ ಅಳಿಸಿ ಹಾಕಬಹುದು. ಯಾಕೆಂದರೆ ಇಂದು ಎಲ್ಲ “ಆರ್ಟಿಫಿಶಿಯಲ್ ಇಂಟೆಲಿಜೆನ್ಸಿನ” ಕರಾಮತ್ತು. ಅಂತರ್ಜಾಲದಲ್ಲಿ ಕಾಣುವುದೆಲ್ಲ ಮಾಯೆ. ಹಾಗಿರುವಾಗ ಅಲ್ಲಿ ನಾವು ಎಡವುವ ಸಂಗತಿಗಳಲ್ಲಿ ಸತ್ಯ ಯಾವುದು? ಸುಳ್ಳು ಯಾವುದು? ಇಂದು ಆ ಗೆರೆ ಬಹುಮಟ್ಟಿಗೆ ಅಳಿಸಿಹೋಗುವಷ್ಟರ ಮಟ್ಟಿಗೆ ತಂತ್ರಜ್ಞಾನ ಕೈಯಾಡಿಸಿಬಿಟ್ಟಿದೆ.

ನಾವು ಇಂದು ತಂತ್ರಜ್ಞಾವನ್ನು ಬೈದು ಸಮಾಧಾನಿಸಿಕೊಂಡುಬಿಡೋಣವೆಂದರೆ ಲಂಡನ್ ಈಗಷ್ಟೇ ಸ್ಫೋಟಕ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ೧೯೪೮ರಲ್ಲಿ ಸ್ಥಾಪಿತವಾದ ಬ್ರಿಟನ್ನಿನ “ಇನ್ಫಾರ್ಮಶನ್ ರಿಸರ್ಚ್ ಡಿಪಾರ್ಟ್ಮೆಂಟ್” ನಿಜಕ್ಕೂ ನಡೆಸಿದ್ದು ಸೋವಿಯೆತ್ ಯೂನಿಯನ್ನಿನ ಕಬಂಧ ಬಾಹುಗಳ ಕತ್ತರಿಸುವ ಸಲುವಾಗಿ ಸುಳ್ಳು ಸುದ್ದಿಯ ಸೃಷ್ಟಿ. ಉದ್ದೇಶ ಒಳ್ಳೆಯದಿದ್ದರೆ ಸಾಧಿಸುವ ಹಾದಿ ಹೇಗಿದ್ದರೂ ಆದೀತು ಎಂಬುದು ಆಗ ತಮಗೆ ತಾವೇ ಬ್ರಿಟನ್ ಕೊಟ್ಟುಕೊಂಡ ಸಮಜಾಯಿಷಿ. ಶೀತಲ ಸಮರದ ಅರವತ್ತರ ದಶಕದಲ್ಲಿ ಈ ವಿಭಾಗ ಸುಮಾರು ೪೦೦ ಸರಕಾರೀ ಫೈಲುಗಳನ್ನು ಬದಲಿಸಿದೆ. ಆಫ್ರಿಕಾವನ್ನು ಸೋವಿಯೆತ್ ವಿರುದ್ಧ ಎತ್ತಿ ಕಟ್ಟಿದೆ. ಈ ಕೆಲಸಕ್ಕೆ ನಂಬಿಕಸ್ಥ ಒಂದಿಷ್ಟು ಜರ್ನಲಿಸ್ಟ್ ಗಳನ್ನು ವೃತ್ತಪತ್ರಿಕೆಗಳನ್ನು ಬಳಸಿಕೊಂಡಿದೆ. ಅಂದಿನ ಸುದ್ದಿ ಮಾಧ್ಯಮಗಳು ಬ್ರಿಟಿಷ್ ಐಆರ್ಡಿ ಕೊಡುವ ಸುದ್ದಿಯನ್ನು ಅತಿ ಮುತುವರ್ಜಿಯಿಂದ ಬಹಳ ರಹಸ್ಯ ಮಾಹಿತಿ ಎಂದುಕೊಂಡು ಎಲ್ಲ ಪತ್ರಿಕೆಗಳು ಪ್ರಕಟಿಸುತ್ತಿದ್ದವು. ಅಂತೆಯೇ ಆ ವಿಭಾಗ ಸುಳ್ಳುಸುದ್ದಿಗಳನ್ನು ಹುಟ್ಟಿಸುತ್ತಿತ್ತು. ಅದು ಎಲ್ಲ ಪತ್ರಿಕೆಗಳಲ್ಲಿ ಹಬ್ಬಿ ಜಗತ್ತಿನಾದ್ಯಂತ ತರಂಗ ಪರಿಣಾಮವೆಂಬಂತೆ ಹೊಸ ಅಲೆಯನ್ನೇ ಎಬ್ಬಿಸುತ್ತಿತ್ತು. ಅಂದರೆ ನಾಲ್ಕನೇ ಆಯಾಮ ನಿಜಕ್ಕೂ ಪ್ರಜಾಪ್ರಭುತ್ವದ ಸರ್ವತಂತ್ರ ಸ್ವತಂತ್ರ ಕಾವಲುಗಾರ ಎಂದಾದರೂ ಆಗಲು ಸಾಧ್ಯವೇ? ಸರ್ಕಾರವೇ ಇಷ್ಟೊಂದು ಬಗೆಯಲ್ಲಿ ಪಲ್ಲಟಿಸುವ ಕೆಲಸ ಮಾಡುವಾಗ ತಂತ್ರಜ್ಞಾನದ ಇಂದಿನ ಯುಗದಲ್ಲಿ ನಡೆಯುತ್ತಿರುವ ಅನವಶ್ಯಕ ಮಧ್ಯಸ್ಥಿಕೆ ಹೊಸದೇನೂ ಎನಿಸುತ್ತಿಲ್ಲ.

ಮೊದಲನೇ ಮಹಾಯುದ್ಧದ ಹೊತ್ತಿಗೆ ವೂಡ್ರೋ ವಿಲ್ಸನ್ ಸರಕಾರ ಕೂಡ ಇಂಥದ್ದೊಂದು ಸುಳ್ಳು ಸುದ್ದಿ ಡಿಪಾರ್ಟ್ಮೆಂಟ್ ಒಂದನ್ನು ಸೃಷ್ಟಿಸಿತ್ತು. ಯುದ್ಧವನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ವಿಲ್ಸನ್ ಈಗ ಅಮೆರಿಕಾವನ್ನು ಯುದ್ಧಕಾಗಿ ಒಲಿಸಬೇಕಿತ್ತು. ಹಾಗಾಗಿ ವೂಡ್ರೋ ವಿಲ್ಸನ್ ಒಂದು ಹೊಸ ವಿಭಾಗವನ್ನೇ ತೆರೆದ. “ಕಮಿಟಿ ಆನ್ ಪಬ್ಲಿಕ್ ಇನ್ಫಾರ್ಮೇಶನ್” . ಅದಕ್ಕೆ ಮಹಾ ಮುತ್ಸದ್ದಿ ಜಾರ್ಜ್ ಕ್ರೀನ್ ಅನ್ನು ಮುಖಂಡನಾಗಿ ನೇಮಿಸಿದ. ಈ ವಿಭಾಗ ಯುದ್ಧದ ಬಗೆಗೆ ಹಲವು ಬಗೆಯ ಮಾಹಿತಿಗಳನ್ನು ನಿಯಮಿತವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಹೋಯಿತು. ರಾಷ್ಟ್ರೀಯ ಸುಭದ್ರತೆಗೆ ಧಕ್ಕೆಬಾರದಂತ ಮಾಹಿತಿಗಳನೆಲ್ಲ ಮುಕ್ತವಾಗಿ ಜನತೆಗೆ ನೀಡುತ್ತಾ ವಿಶ್ವಾಸ ಗಳಿಸಿಕೊಳ್ಳುತ್ತ ಹೋಯಿತು. ನಿಧಾನಕ್ಕೆ ಯುದ್ಧದ ಕಾವೇರುತ್ತಿದ್ದಂತೆ ಶತ್ರುರಾಷ್ಟ್ರಗಳನ್ನು ಇರುವದಕ್ಕಿಂತಲೂ ಕ್ರೂರವೆಂದು ಬಿಂಬಿಸಿತು. ಜರ್ಮನಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕ್ರೌರ್ಯವನ್ನು ವಿಜೃಂಭಿಸಿ ಚಿತ್ರಿಸಿತು. ಅದರಿಂದ ಅಮೆರಿಕಾದಲ್ಲಿದ್ದ ಜರ್ಮನ್ನರಿಗೆ ಉಂಟಾದ ಹಾನಿಗಳನ್ನು ಕಂಡೂ ಕಡಗಣಿಸಬೇಕಾದ ಅನಿವಾರ್ಯತೆಯಾಯಿತು. ಯಾಕೆಂದರೆ ಯುದ್ಧವನ್ನು ಪರಿಣಾಮಕಾರಿಯಾಗಿ ಅಮೆರಿಕಾ ಸರಕಾರ ಜನರಿಗೆ ಮಾರುತ್ತಿತ್ತು. ಸಾವಿರಾರು ಯುವಕರು ಹೊಸದಾಗಿ ಸೈನ್ಯಕ್ಕೆ ಸೇರಿಕೊಳ್ಳಲು ತಾಮುಂದು ನಾ ಮುಂದೆಂದು ಬರುತ್ತಿದ್ದರು. ಜಾರ್ಜ್ ಡಬ್ಲ್ಯೂ ಬುಷ್ ಸರಕಾರ ಸದ್ದಾಂ ಹುಸೇನ್ ಪಟ್ಟವನ್ನು ಉರುಳಿಸಿದ್ದು ಕೂಡ ಸುಳ್ಳು ಸುದ್ದಿಎಂಬ ಮಹಾದಾಳದಿಂದಲೇ. “ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್” ಉಪಾಧ್ಯಕ್ಷ ಡಿಕ್ ಚೇನಿಯ ತಲೆಯಲ್ಲಿ ಮೂಡಿದ್ದ ಅಸ್ತ್ರ. ಜನತೆಗೆ ಇರಾಕ್ ಯುದ್ಧವನ್ನು ಮಾರಲು ಹುಟ್ಟಿಕೊಂಡ ಸುಳ್ಳು ಸುದ್ದಿ. ಯಾರ್ಯಾರ ಆಸೆಗೋ ಅವಶ್ಯಕತೆಗೊ ಸತ್ತ ಸೈನಿಕರಿಗೆ ಹೋಗಿ ಹೇಳುವರಾರು ಅದೊಂದು ಸುಳ್ಳು ಸುದ್ದಿಯೆಂದು? ಫೋರ್ಥ್ ಎಸ್ಟೇಟ್ ತನ್ನ ಘನತೆಯನ್ನು ಸದಾ ಮಾರಿಕೊಂಡಿದೆ.

ಸುಳ್ಳುಸುಳ್ಳೇ ಸೃಷ್ಟಿಯಾಗುವ , ಮೂಲವೇ ಇಲ್ಲದ ಸುಳ್ಳು ಸುದ್ದಿಗಳೂ ಕೂಡ ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಶರವೇಗದಲ್ಲಿ ನಿಜವೆಂಬಂತೆ ಪ್ರಸಾರಗೊಂಡು ಪಸರಿಸುತ್ತವೆ. ಇಂಥ ಸುಳ್ಳುಸುದ್ದಿ ಸೃಷ್ಟಿಸುವ ಕಾರ್ಖಾನೆಗಳೇ ಹೊಸ ಉದ್ಯೋಗ ಸೃಷ್ಟಿಸುವ ಒಂದು ಉದ್ಯಮವಾಗಿದೆಯೆಂದರೆ ನಂಬಲು ಕಷ್ಟವಾದರೂ ನಿಜ.

ಪತ್ರಿಕೆಗಳಲ್ಲಿ ಒಂದು ಸುದ್ದಿ ಬಂದಾಗ, ಅದರಲ್ಲೂ ಜನರಿಂದ ಮಾನ್ಯತೆಗೊಳಗಾದ ಪತ್ರಿಕೆಯೊಂದು ಸುಳ್ಳುಸುದ್ದಿಯನ್ನು ಸರಿಯಾದ ವಿವೇಚನೆಯಿಲ್ಲದೆ ಪ್ರಕಟಿಸಿದಾಗ ಜನ ಅದನ್ನು ಪರಾಮರ್ಶಿಸುವ ಗೋಜಿಗೆ ಹೋಗುವುದಿಲ್ಲ. ಮುಂದೆ ಎಲ್ಲೋ ಯಾರೋ ಆ ಸುದ್ದಿಯನ್ನು ಅಲ್ಲಗಳೆದರೂ ಜನಮಾನಸದಲ್ಲಿ ಈಗಾಗಲೇ ನಿಜವೆಂದು ನಂಬಿ ಹೋಗಿರುವ ಸುದ್ದಿಯ ಮುಂದೆ ಸತ್ಯಕ್ಕೆ ಸುಳ್ಳನ್ನು ಅಲ್ಲಗಳೆಯುವ ಶಕ್ತಿ ಕೂಡ ಇರುವುದಿಲ್ಲ. ಅದು ಎಷ್ಟೇ ಕ್ಷುಲ್ಲಕ ಸುದ್ದಿಯಾಗಿರಬಹುದು ಅಥವಾ ಜಾಗತಿಕ ಚಿತ್ರಣ ಬದಲಾಯಿಸಬಹುದಾದ ಮಾಹಿತಿಯಾಗಿರಬಹುದು. ಪ್ರಕಟಿಸುವ ಮೂಲದ ಖ್ಯಾತಿ ಆ ಸುದ್ದಿಯ ಪರಿಣಾಮವನ್ನು ನಿರ್ಧರಿಸುತ್ತದೆ. ಒಂದು ಸ್ವಾರಸ್ಯಕರ ಉದಾಹರಣೆಯೆಂದರೆ, ಚೀನೀ ಅಡುಗೆಗಳಲ್ಲಿ ಬಳಸುವ ಅಜಿನೊಮೊಟೊ ಅಥವಾ ಮೊನೊಸೋಡಿಯಂ ಗ್ಲುಟಮೇಟ್ ಸುತ್ತ ಇರುವ ಸುಳ್ಳುಮಾಹಿತಿ.

೧೯೦೮ರಲ್ಲಿ ಜಪಾನೀ ಕೆಮಿಸ್ಟ್ “ಕಿಕೂನೇ ಐಕೆಡ” ತನ್ನ ಮನೆಯಲ್ಲಿ ಸಮುದ್ರಸಸ್ಯ ಅಥವಾ ಸೀವೀಡ್ ಬಳಸಿ ತಯಾರಿಸಿದ ಅಡುಗೆಗಳಲ್ಲಿ ಒಂದು ವಿಶಿಷ್ಟ ಹೆಚ್ಚಿನ ರುಚಿ ಇರುವುದನ್ನು ಗಮನಿಸಿದ. ಆ ಉಪ್ಪು, ಹುಳಿ ಊರ್ಜಿತ ಸ್ವಾದಕ್ಕೆ “ಉಮಾಮೀ” ಎಂದು ಕರೆದ. ಆ ಸ್ವಾದ ಎಲ್ಲಿಂದ ಬಂತು ಎಂದು ಸೀವೀಡ್ ಗಳ ಮೇಲೆ ನಡೆಸಿದ ರಾಸಾಯನಿಕ ಕ್ರಿಯೆಯಿಂದ ಅದು ಮೊನೊಸೋಡಿಯಂ ಗ್ಲುಟಮೇಟ್ ಅನ್ನುವ ರಾಸಾಯನಿಕದ ರುಚಿಯೆಂದು ಗುರುತಿಸಿದ. ಅದನ್ನು ಸೀವೀಡ್ ಗಳಿಂದ ಬೇರ್ಪಡಿಸಿ ಕೃತಕವಾಗಿ ತಯಾರಿಸಿ ಅಡುಗೆಗಳಲ್ಲಿ ಬಳಸಬಲ್ಲ ಸಾಧನವಾಗಿಸಿದ. ಅಂದಿನಿಂದ ಕಮರ್ಷಿಯಲ್ ಓರಿಯೆಂಟಲ್ ಅಡುಗೆಗಳ ರುಚಿ ಬದಲಾಗಿ ಹೋಯಿತು. ಎಲ್ಲದಕ್ಕೂ ಸೀವೀಡ್ ಬಳಸದೆಯೂ ಆ ಸ್ವಾದವನ್ನು ನೀಡಬಲ್ಲ ಅಜಿನೊಮೊಟೊ ಜನಪ್ರಿಯವಾಯಿತು. ಅದು ಚೈನೀಸ್ ಅಡುಗೆ, ಪ್ಯಾಕೇಜಿಂಗ್ ಇತ್ಯಾದಿ ಜಾಗತಿಕವಾಗಿ ಹಬ್ಬಲೂ ಕಾರಣವಾಯಿತು.

ಅರವತ್ತರ ದಶಕದಲ್ಲಿ ಅಮೆರಿಕಾದ ಬಾಯಿರುಚಿ ಜಾಗತಿಕವಾಗಿ ತೆರೆದುಕೊಳ್ಳುತ್ತಿದ್ದ ಹೊತ್ತಲ್ಲಿ ಅತಿ ವಿಭಿನ್ನವಾಗಿದ್ದ ಚೈನೀಸ್ ಖಾದ್ಯಗಳ ಬಗೆಗೊಂದು ಸಂಶಯವಿದ್ದೇ ಇತ್ತು. ಏನೆಲ್ಲಾ ತಿನ್ನುವ ಚೀನೀಯರ ಬಗ್ಗೆ ಇಂದಿಗೂ ಎಷ್ಟೊಂದು ಭ್ರಮೆಗಳಿವೆ, ಹಾಗಿರುವಾಗ ಅರವತ್ತರ ದಶಕದ ಸಂಶಯ ಸಹಜವೇ. ಆಗ ತನ್ನ ಬರಹವೊಂದನ್ನು ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಾದ, ಹಾರ್ವರ್ಡ್ ವಿಶ್ವವಿದ್ಯಾಲಯದ ಬಹುತೇಕ ವೈದ್ಯವಿಭಾಗ ಪ್ರಕಟಿಸುತ್ತಿದ್ದ ಬಾಸ್ಟನ್ನಿನ “ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್” ಪತ್ರಿಕೆಯಲ್ಲಿ ತನ್ನ ಬರಹವೊಂದನ್ನು ಪ್ರಕಟಿಸಬೇಕೆಂದು ಸಣ್ಣ ಪ್ರಮಾಣದ ವೈದ್ಯನೊಬ್ಬ ಒದ್ದಾಡುತ್ತಿದ್ದ. ಆತ “ರಾಬರ್ಟ್ ಹೊ ಮ್ಯಾನ್ ಕ್ವಾಕ್” ಎಂಬ ಸುಳ್ಳು ಹೆಸರಲ್ಲಿ ಚೈನೀಸ್ ಖಾದ್ಯಗಳನ್ನು ತಿಂದರೆ ವಿಚಿತ್ರ ತಲೆ ನೋವು, ಹೊಟ್ಟೆ ತೊಳಸು ಬರುತ್ತದೆ ಅದಕ್ಕೆ ಕಾರಣ ಈ “ಎಂ ಎಸ ಜಿ” ಎಂಬ ಯಾವುದೇ ಆಧಾರವಿಲ್ಲದ ತನ್ನದೇ ಪೂರ್ವಗ್ರಹಪೀಡಿತ ಲೇಖನವೊಂದನ್ನು ವೈದ್ಯನೆಂಬ ಕಾರಣಕ್ಕೆ ಬರೆದ. ಅಂಥಾ ಪ್ರತಿಷ್ಠಿತ ಪತ್ರಿಕೆ ಕೂಡ ಈ ಸುಳ್ಳು ಹೆಸರಿನ ವೈದ್ಯನನ್ನಾಗಲೀ ಆತ ಬರೆದ ದಾಖಲೆ ಪುರಾವೆಗಳಿಲ್ಲದ ಸುಳ್ಳು ಸುದ್ದಿಯನ್ನಾಗಲೀ ಸ್ವಲ್ಪವೂ ಪರಾಮರ್ಶಿಸದೆ ಪ್ರಕಟಿಸಿತು. ಬಹುಶ ಅದರ ಸಂಪಾದಕರಿಗೂ ಚೈನೀಸ್ ಅಡುಗೆಗಳ ಬಗ್ಗೆ ಇದ್ದ ಪೂರ್ವಗ್ರಹವೋ, ಆ ಲೇಖನ ಪ್ರಕಟವಾಗಿಬಿಟ್ಟಿತು. ಅದು ಜಗತ್ತಿನಾದ್ಯಂತ ಸುಳ್ಳು ಸುದ್ದಿಯ ಸರಮಾಲೆಯನ್ನೇ ಸೃಷ್ಟಿಸಿತು. ಚೈನೀಸ್ ಖಾದ್ಯಗಳ ಬೇಡಿಕೆ ಕಡಿಮೆಯಾಯಿತು. ರೆಸ್ಟೋರೆಂಟುಗಳು “ನಾವು ಅಜಿನೊಮೊಟೊ ಬಳಸುವುದಿಲ್ಲ” ಎಂಬಂಥ ಬೋರ್ಡು ಕೂಡ ತಗಲಾಕಿಕೊಂಡವು. ಆ ನಂತರ ಎಷ್ಟೊಂದು ಜನ ಸಂಶೋಧಕರು ಅಜಿನೋ ಮೋಟೋ ಬರೀ ಒಂದು ಅಮೀನೊಆಸಿಡ್ ಅದು ಯಾವ ಹಾನಿಯನ್ನೂ ಮಾಡಲಾರದು ಎಂದು ಎಷ್ಟು ಪ್ರಕಟಿಸಿದರೂ ಜನಮಾನಸದಲ್ಲಿದ್ದ ಭಯ ಒಂದು ಸುಳ್ಳು ಸುದ್ದಿಯಿಂದಾಗಿ, ಅದು ಪ್ರಕಟಗೊಂಡ ಪ್ರತಿಷ್ಠಿತ ಪತ್ರಿಕೆಯಿಂದಾಗಿ ಹಾಗೆಯೇ ಅಲ್ಲಲ್ಲಿ ಉಳಿದುಬಿಟ್ಟಿತು.

ಆ ಲೇಖನ ಪ್ರಕಟಿಸಿದ ವೈದ್ಯ ಕಳೆದ ವರ್ಷ ತಪ್ಪೊಪ್ಪಿಕೊಂಡು ಇಷ್ಟು ದಿನ ಸುಮ್ಮನಿದ್ದ ಆ ಕಲಂಕಿತ ತಾನೇ. ಅದು ಪ್ರಕಟಗೊಳ್ಳಬಹುದೆಂಬ ನಂಬಿಕೆಯೇ ಇರಲಿಲ್ಲ. ಹಾಗಾಗಿ ಸುಳ್ಳು ವೈದ್ಯ ಎನ್ನುವ ಸೂಚನೆಕೊಡಬಲ್ಲ “ಕ್ವಾಕ್” ಹೆಸರನ್ನು ಬಳಸಿದ್ದೆ, ಆದರೆ ಸಂಪಾದಕರು ಲಕ್ಷ್ಯ ಕೊಡಲಿಲ್ಲ. ಆ ನಾಚಿಕೆಯಿಂದ ತಾನೂ ಎಲ್ಲೂ ಏನೂ ಹೇಳಲಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಇಂಥ ಹಲವಾರು ಸತ್ಯಗಳಿವೆ ನಮ್ಮ ನಡುವೆ. ಮಾಧ್ಯಮದ ತಪ್ಪಿನಿಂದಾಗಿ ಅಲ್ಲೋಲಕಲ್ಲೋಲವಾಗಿಬಿಡುವ ಜಗತ್ತಿನ ಜವಾಬ್ದಾರಿಯ ಅರಿವು ನಮ್ಮ ಮಾಧ್ಯಮಗಳಿಗೆ ಇದ್ದಿದ್ದು ಕಮ್ಮಿಯೇ. ಸಣ್ಣ ಅಡುಗೆಯ ಸುಳ್ಳನ್ನೇ ಜಾಗತಿಕವಾಗಿ ಪಸರಿಸಿಬಿಡುವ ನಾವು ಇಂದು ಈ ಸೋಷಿಯಲ್ ಮೀಡೀಯಾ ಜಗತ್ತಲ್ಲಿ ಬೆರಳಂಚಲ್ಲಿ ಮಾಹಿತಿ ಸಿಗುವಾಗ ಬಿಡುವೆವೆ? ಏನೆಲ್ಲಾ ಸುಳ್ಳು ಸುದ್ದಿ ನಿತ್ಯ ವಾಟ್ಸಾಪಿನಲ್ಲಿ ಬರುತ್ತದೆ. ಇಂಥವನ್ನು ಫಾರ್ವರ್ಡ್ ಕೂಡ ಮಾಡುತ್ತಾರಲ್ಲ ಜನ ಎಂದು ಒಮ್ಮೊಮ್ಮೆ ಕಿರಿಕಿರಿಯಾಗುತ್ತದೆ. ಅದರಲ್ಲೂ ವಾಟ್ಸಾಪಿನಲ್ಲಿ ಆರೋಗ್ಯ, ವೈದ್ಯಕೀಯ, ಆಹಾರದ ಬಗ್ಗೆ ಬರುವಷ್ಟು ಸುಳ್ಳು ಮಾಹಿತಿ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲವೇನೋ. ಯಾರಿಗೆ ಇದರಿಂದ ಏನು ಲಾಭವೋ?! ದಯವಿಟ್ಟು ವಾಟ್ಸಾಪಿನಲ್ಲಿ ಬಂದಿದ್ದೆಲ್ಲ ಸತ್ಯವಲ್ಲ. ವಿಕಿಪೀಡಿಯದಲ್ಲಿ ಇರುವುದೆಲ್ಲವೂ ಅಧಿಕೃತ ದಾಖಲೆಯಲ್ಲ. ಅಂಥದ್ದರಲ್ಲಿ ವಾಟ್ಸಾಪ್ ಯಾವ ಲೆಕ್ಕ?

ಇಂದು ನಮಗೆ ಬೇಕಾಗಿರುವುದು ತ್ವರಿತತೃಪ್ತಿ. ಅದು ಮನರಂಜನೆಯಾಗಲೀ, ಮಾಹಿತಿಯಾಗಲೀ, ಅದು ತಕ್ಷಣ ಲಭ್ಯವಾಗಿಬಿಟ್ಟರೆ ಸಾಕು. ಸತ್ಯಾಸತ್ಯತೆಯ ಗೋಜಿಗೆ ಹೋಗುವವರು ಯಾರೂ ಇಲ್ಲ. ಹಿಂದೆ ಸರಕಾರ ತನ್ನ ಜನರ ಓಲೈಕೆಗೆಂದು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿತ್ತು. ಈಗ ಯಾವ್ಯಾವುದೋ ದೇಶದ ಜನ ಇನ್ಯಾವುದೋ ದೇಶದ ಹಾದಿ ತಪ್ಪಿಸಲು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಾರೆ. ಸುದ್ದಿಯ ಸಾಧನ ಬದಲಾಗಿದೆ, ವಿಸ್ತೀರ್ಣ ಬದಲಾಗಿದೆ. ಸುಳ್ಳು ಸುದ್ದಿ ಇಂದಿನದಲ್ಲ, ಎಂದಿಗೂ ಇದೆ. ಪ್ರಜಾಪ್ರಭುತ್ವದ ಕುರ್ಚಿಯ ನಾಲ್ಕನೇ ಕಾಲು ಯಾವತ್ತಿಗೂ ಸ್ವಲ್ಪ ಸಡಿಲವೇ. ಅದನ್ನು ತಿರುಗಿಸಿ ಬಿಗಿಯಾಗಿಸುವ ಕೈ ಬದಲಾಗುತ್ತಲೇ ಇರುತ್ತದೆ, ಡೊಗ್ಗು ಕುರ್ಚಿ ಅಲ್ಲಾಡುತ್ತಲೇ ಇರುತ್ತದೆ.