ಇಬ್ಬರೂ ಮಾತನಾಡಿಕೊಳ್ಳುತ್ತಿರುವಂತೆಯೇ ಟ್ರ್ಯಾಕ್ಟರ್ ತುಂಬಾ ಕೂಲಿಗಳ ಮಂದೆ ದಬದಬನೆ ಇಳಿಯಿತು. ನಾಲ್ಕು ಬೆರಳಿಗೆ ನಾಲ್ಕು ಉಂಗುರಗಳು, ಡೊಳ್ಳು ಹೊಟ್ಟೆಯ ವ್ಯಕ್ತಿ ಸ್ಕೂಟರಿನಲ್ಲಿ ಬಂದು ಕೂಲಿಗಳಿಗೆ ತಲಾ ಹತ್ತು ರುಪಾಯಿ ಹಿಡಿದುಕೊಂಡು ತೊಂಭತ್ತು ರುಪಾಯಿ ಮಾತ್ರ ಕೊಡುತ್ತಿದ್ದಾನೆ. ಏಕೆಂದು ಅವರು ಕೇಳಲಿಲ್ಲ, ಇವನು ಹೇಳಲೂ ಇಲ್ಲ. ‘ಇವನು ಗುತ್ತಿಗೆದಾರ. ಸ್ಕೂಟರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ರೌಂಡ್ ಹಾಕುತ್ತಾನೆ. ಸದ್ಯ ಇವತ್ತು ಪರವಾಗಿಲ್ಲ. ಒಂದೊಂದು ದಿನ ಅರ್ಧಕ್ಕರ್ಧ ಗೋತ. ಎದುರು ತಿರುಗಿದರೆ ಹುಟ್ಟಲಿಲ್ಲವೆನಿಸಿಬಿಡುತ್ತಾನೆ. ಕೂಲಿ ಸಿಗುವುದಿಲ್ಲ’ ಅಕ್ಕ ಹೇಳಿದಳು. ಇಬ್ಬರೂ ಬಜಾರಿನ ರಸ್ತೆಗೆ ಬಂದರು. ಅದೊಂದು ಮಾಯಾಲೋಕ.
ಎಂ. ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ತೆಲುಗು ಕಥೆ ‘ಬಂಧಿ’ ನಿಮ್ಮ ಓದಿಗೆ

 

ಮೂವರು ಅತಿ ಸುಂದರ ಅಕ್ಕತಂಗಿಯರು. ಒಮ್ಮೆ ನೋಡಿದರೆ ಮತ್ತೆ ಮತ್ತೆ ಸೆಳೆಯುವ ಸಮ್ಮೋಹನಾಂಗಿಯರು. ಅಮೃತ ಕುಡಿದಿರುವಂತೆ ಎಂದಿಗೂ ಅದೇ ರೂಪ, ಲಾವಣ್ಯ! ಅದೇ ಮಂದಹಾಸ!

ಒಬ್ಬಳಿಗೆ ದವಸ, ಧಾನ್ಯ, ಹಾಲು, ಹಣ್ಣು, ತರಕಾರಿ ಯಾವುದಕ್ಕೂ ಕೊರತೆಯಿಲ್ಲ. ಇನ್ನೊಬ್ಬಳಿಗೆ ಹಸಿವು, ದಾಹಗಳ ಬಾಧೆಯಿಲ್ಲ. ಮತ್ತೊಬ್ಬಳಿಗೆ ಭೋಗಭಾಗ್ಯಗಳಿಗೆ ಕೊರತೆಯಿಲ್ಲ. ಹೀಗೆ ಮೂವರೂ ಅನುಕೂಲವಾಗಿದ್ದರೂ ಯಾವುದೋ ದುಗುಡದಲ್ಲಿದ್ದಾರೆ. ಒಮ್ಮೆ ಎಲ್ಲರೂ ಒಟ್ಟಿಗೆ ಸೇರಿದರು. ತಂತಮ್ಮ ದುಗುಡಗಳನ್ನು ಮರೆಮಾಚಿ ಮೂವರೂ ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ.

‘ಅಕ್ಕಾ ಹೇಗಿದ್ದೀಯ.. ಏನು ಮಾಡ್ತಿದೀಯ’ ಅಕ್ಕನನ್ನು ದೊಡ್ಡ ಮತ್ತು ಚಿಕ್ಕ ತಂಗಿಯರು ಕೇಳಿದರು.

‘ಏನು ಹೇಳಲಿ.. ಸಪ್ತ ಸಮುದ್ರಗಳನ್ನು ನೆತ್ತಿಯ ಮೇಲೆ ಹೊರುತ್ತಿರುವವಳು. ಏಳು ಖಂಡಗಳಾಗಿ ವಿಸ್ತರಿಸಿರುವವಳು. ಗಟ್ಟ, ದಿಬ್ಬ, ಬಂಡೆಯಾಗಿ, ಬೆಟ್ಟವಾಗಿ, ಪ್ರಪಾತವಾಗಿ, ಪ್ರವಾಹವಾಗಿ, ಸೈಟಾಗಿ, ಎಸ್ಟೇಟಾಗಿ ಅನೇಕ ರೂಪ ತಾಳುತ್ತಿರುವವಳು. ರಾಜ್ಯವಾಗಿ, ಸಾಮ್ರಾಜ್ಯವಾಗಿ, ದೇಶವಾಗಿ, ರಾಷ್ಟ್ರವಾಗಿ ಅವತಾರ ಬದಲಿಸುತ್ತಿರುವವಳು..’ ಅಕ್ಕ ಹೇಳುವುದನ್ನು ತಂಗಿಯರು ಕೇಳಿಸಿಕೊಳ್ಳುತ್ತಿದ್ದಾರೆ.

‘ಬೆಳೆಯಾಗಿ ಬಡವರ ಹಸಿವು ನೀಗಿಸುತ್ತಿದ್ದೇನೆ, ಕಾಡಾಗಿ ಖುಷಿಪಡಿಸುತ್ತಿದ್ದೇನೆ, ರಾಜ್ಯವಾಗಿ ಶಾಂತಿ ಸೌಲಭ್ಯ ನೀಡುತ್ತಿದ್ದೇನೆ, ಗಡಿಯಾಗಿ ಆಸ್ತಿ, ಸರಿಹದ್ದಾಗಿ ಭದ್ರತೆಯನ್ನು ನೀಡುತ್ತಿದ್ದೇನೆ..’ ಹೇಳಿ ನಿಲ್ಲಿಸಿದಳು.

‘ಅಬ್ಬಾ ಅಕ್ಕ ಎಷ್ಟು ಮಾತನಾಡುತ್ತಿದ್ದಾಳೆ, ಕೇಳುವುದಕ್ಕೆ ಮಾತ್ರ ಚೆನ್ನಾಗಿದೆ!..’ ತಂಗಿಯರು ವ್ಯಂಗ್ಯವಾಡಿದರು.

‘ತಂಗಿಯರೇ.. ಅಲ್ಲಿ ನನ್ನ ಹೆಸರು ರೋಮ್.. ಚಕ್ರವರ್ತಿಗಳ ಇತಿಹಾಸ.. ಜೂಲಿಯಸ್ ಸೀಸರನ ಆಳ್ವಿಕೆಯಲ್ಲಿದ್ದೇನೆ.. ಸಕಲ ಸಂಪತ್ತು, ಕಲೆಗಳ ನಿಲಯ…’

‘ಅಕ್ಕಾ.. ನಿಲ್ಲಿಸು.. ಬಲಹೀನ ಪಾಂಪೆಯನ್ನು ಸಾಯಿಸಿ ತಾನೇ ಸೀಸರ್ ರಾಜನಾದದ್ದು’ ಕೇಳಿದಳು ದೊಡ್ಡ ತಂಗಿ.

‘ತಂಗೀ! ಒಂದು ಕಡೆ ನಾನು ಫ್ರಾನ್ಸ್. ಅರಸರ ವಾರಸತ್ವದ ಬುನಾದಿ, ಪ್ರಜೆಗಳಿಗೆ ಸುಖಶಾಂತಿ ನೀಡಿದವಳು.. ಸಂಸ್ಕೃತಿಯನ್ನು ಕಲಿಸಿದವಳು..’

‘ಅಯ್ಯೋ ಅಕ್ಕಾ.. ನೆಪೋಲಿಯನ್ ಎಷ್ಟು ಜನರನ್ನು ಸಾಯಿಸಿ ನಿನ್ನನ್ನು ವಶಪಡಿಸಿಕೊಂಡದ್ದು? ಅದನ್ನೇಕೆ ಹೇಳುತ್ತಿಲ್ಲ..’ ಮತ್ತೆ ದೊಡ್ಡ ತಂಗಿಯ ಪ್ರಶ್ನೆ.

‘ಅಲ್ಲಿ ನಾನು ಪರ್ಷಿಯಾ. ತಕ್ಷಶಿಲೆಯಾಗಿ ಸರಸ್ವತಿಯ ತವರಿನವಳು. ವಾಣಿಜ್ಯ ವ್ಯಾಪಾರ ಕಲಿಸಿದವಳು. ಬುದ್ಧನ ಬೋಧನೆಗಳ ಪ್ರತಿ ಹೆಜ್ಜೆಗೂ ಆರತಿ ಹಿಡಿದವಳು..’

‘ಅಕ್ಕಾ.. ನಿಲ್ಲು.. ರಾಜ್ಯದಾಹವುಳ್ಳ ಅಲೆಗ್ಜಾಂಡರನಿಗಲ್ಲವಾ.. ಅಲ್ಲಿ ಪಟ್ಟ ಕಟ್ಟಿದ್ದು’ ಚಿಕ್ಕ ತಂಗಿ ಗಡುಸಾಗಿ ಕೇಳಿದಳು.
ಅಕ್ಕ ಮೌನವಾಗಿ ಇಬ್ಬರನ್ನೂ ನೋಡಿದಳು.

ತಂಗಿಯರಿಬ್ಬರೂ ‘ಶಾಂತಿ, ಸೌಖ್ಯ ಎಲ್ಲಿಯದು, ಎಲ್ಲ ರಕ್ತಪಾತವೇ’ ಎಂದು ಮೂಗು ಮುರಿದರು.

‘ಅಕ್ಕಾ.. ಅಯ್ಯೋ.. ಕೌಟಿಲ್ಯನ ಕುಟಿಲ ತಂತ್ರಕ್ಕೆ, ಚಂದ್ರಗುಪ್ತನ ಅಧಿಕಾರ ವ್ಯಾಮೋಹಕ್ಕೇ ಅಲ್ಲವಾ ನೀನು ಆರತಿ ಹಿಡಿದದ್ದು’ ದೊಡ್ಡ ತಂಗಿ ಮತ್ತೆ ಚುಚ್ಚಿ ನುಡಿಯುತ್ತ.

‘ತಂಗೀ.. ಅಲ್ಲಿ ನಾನು ದೆಹಲಿ..’ ಅಕ್ಕ ಹೇಳತೊಡಗಿದಳು.

‘ದೆಹಲಿಯಾ.. ಅಬ್ಬಾ ಸ್ವಲ್ಪ ತಡಿ..’ ಅಕ್ಕನ ಮಾತಿಗೆ ತಂಗಿಯರು ಅಡ್ಡಿಪಡಿಸಿದರು.

ಅದರಲ್ಲೂ ಚಿಕ್ಕ ತಂಗಿ ಅಕ್ಕ ಬಾಯಿ ಬಿಡಲು ಅವಕಾಶ ನೀಡದೆ, ‘ಗೊತ್ತು ಅಕ್ಕಾ.. ಜಯಚಂದ್ರನ ಜಯಭೇರಿ ನೀನು. ಪೃಥ್ವೀರಾಜನ ಮರಣ ಶಾಸನ ಬರೆದವಳು. ಮಹಮ್ಮದ್ ಘೋರಿಯ ಘೋರ ಕೃತ್ಯಗಳಿಗೆ ತುಟಿ ಬಿಚ್ಚದವಳು…’ ಎಂದಳು.

ದೊಡ್ಡ ತಂಗಿ, ‘ಅಕ್ಕಾ.. ಆದರೆ ನಿನ್ನ ಕಥೆ ಎಲ್ಲರಿಗೂ ಗೊತ್ತಿರುವುದೇ ಬಿಡು. ಅಧೀನ ರೇಖೆಯ ಬಳಿ ಸಿಯಾಚಿನ್. ಪಾಕೀಸ್ತಾನದ ದುರಾಕ್ರಮಣಕ್ಕೆ ವಶವಾದವಳು. ನೇಪಾಳದ ಬಳಿ ಕಾಲಾಪಾನಿ. ಬಾಂಗ್ಲಾ ಬಳಿ ತೀನ್ ಬಿಗಾವಿ. ಲಾವೋಸ್ ಬಳಿ ವಿಯೆಟ್ನಾಂ’.

ಚಿಕ್ಕತಂಗಿ, ‘ಅಕ್ಕಾ.. ಎಲ್ಲ ಗೊತ್ತಾಯಿತು ಬಿಡು. ಯೂರೋಪಿನ ಪ್ರೇಯರೀಯಾದರೂ, ಉತ್ತರ ಅಮೆರಿಕದ ಸ್ಟೆಪ್ಪೀ, ನಲ್ಲಮಲ, ನಾಗಾ ಅರಣ್ಯಗಳಾದರೂ, ಹಳ್ಳಿಗಳಲ್ಲಿ ಕೆರೆ, ಪಟ್ಟಣಗಳಲ್ಲಿ ಎಸ್ಟೇಟ್, ದೇವಸ್ಥಾನ.. ಹೊಲವಾದರೂ.. ಬಲಾಢ್ಯರಿಗೇ ಅಧೀನಳು. ಹೌದು ತಾನೇ!’ ಗಟ್ಟಿಯಾಗಿ ಕೇಳಿದಳು.

‘ತಂಗಿಯರೇ.. ನಿಮ್ಮ ಬಳಿ ಮುಚ್ಚುಮರೆಯೇನು? ಅಂದಿಗೂ ಇಂದಿಗೂ ನಾನು ಬಲಾಢ್ಯರ ಕೈಬಂದಿಯೇ. ಇದು ನೆನಪಾದಾಗೆಲ್ಲ ನಡುಗಿಹೋಗುತ್ತೇನೆ. ಎದೆಬಡಿತ ಜೋರಾಗುತ್ತದೆ, ಸಂಕಟವಾಗುತ್ತದೆ. ನನಗೆ ಸ್ವಾತಂತ್ರ್ಯ ಬೇಕು ಸ್ವಾತಂತ್ರ್ಯ..’ ಅಕ್ಕನಿಗೆ ದುಃಖ ಉಮ್ಮಳಿಸಿತು.

ತಂಗಿಯರಿಬ್ಬರೂ ಕೂರಿಸಿ ಅಕ್ಕನನ್ನು ಸಂತೈಸಿದರು.

ಮತ್ತೆ ನಿನ್ನ ಸಮಾಚಾರ ಏನಕ್ಕಾ.. ತಂಗಿ ಎರಡನೆಯ ಅಕ್ಕನನ್ನು ಕೇಳಿದಳು.

‘ನನಗೇನು.. ಖುಷಿಯಾಗಿದ್ದೇನೆ. ಸ್ವತಂತ್ರಳಾಗಿ ಓಡಾಡಬಲ್ಲೆ, ಆಡಬಲ್ಲೆ, ಹಾಡಬಲ್ಲೆ..’ ಎಂದು ಹೇಳಿ ಸುಮ್ಮನಾದಳು.

ಆದರೆ ತಂಗಿ ಅಷ್ಟಕ್ಕೇ ಬಿಡಲಿಲ್ಲ. ‘ಸರಿ.. ಕೇಳಿ.. ಸಪ್ತ ಸಮುದ್ರಗಳಾಗಿ ವಿಸ್ತರಿಸಿರುವವಳು. ಜೀವನದಿಯಾಗಿ ಉಕ್ಕಿ ಜೀವಿಸುತ್ತಿರುವವಳು. ನದಿಯಾಗಿ ಹರಿಯುವವಳು.. ಚಿಕ್ಕ ನದಿಯಾಗಿ ನಕ್ಕವಳು. ನನ್ನ ಓಟ ಬಡವನ ಕಣ್ಣೀರು ಅಳಿಸುವುದಕ್ಕಾಗಿಯೇ. ಕೆರೆಯಾಗಿ.. ಕುಂಟೆಯಾಗಿ, ಚಿಲುಮೆಯಾಗಿ.. ಸೇದುವ ಬಾವಿಯಾಗಿ ಬಡವರ ಜೀವನದಲ್ಲಿ ನಗು ತುಂಬುತ್ತಿರುವವಳು. ಧರ್ಮವನ್ನು ನಂಬಿರುವವಳು’ ಹೆಮ್ಮೆಯಿಂದ ಹೇಳಿಕೊಂಡಳು.

ಅಕ್ಕ ಆಶ್ಚರ್ಯದಿಂದ ನೋಡುತ್ತಿದ್ದಾಳೆ.
ತಂಗಿ ಗಂಭೀರವಾಗಿ ಆಲಿಸುತ್ತಿದ್ದಾಳೆ.

‘ಸಮುದ್ರದಿಂದ ಆಕಾಶಕ್ಕೆ, ಆಕಾಶದಿಂದ ಭೂಮಿಗೆ, ನೆಲದಿಂದ ಸಮುದ್ರಕ್ಕೆ.. ಸಾಮಾನ್ಯ ಜನರಿಗಾಗಿ ಚಕ್ರಭ್ರಮಣ ಮಾಡುತ್ತಿರುವವಳು…
ಮಂಜುಗಡ್ಡೆಯಾಗಿ ಒಂದುಕಡೆ.. ಶುದ್ಧನೀರಾಗಿ ಮತ್ತೊಂದು ಕಡೆ.. ಗರ್ಭಜಲವಾಗಿ ಒಳಗೊಳಗೇ ರೂಪ ಅವತಾರಗಳನ್ನು ಬದಲಾಯಿಸುತ್ತಿರುವವಳು..’
ಅಕ್ಕ ಅಮಾಯಕಳಾಗಿ ‘ಹೌದಾ’ ಎಂದರೆ, ತಂಗಿ ಕೋಪದಿಂದ ನೋಡುತ್ತಿದ್ದಾಳೆ.

‘ಅಲ್ಲಿ ನನ್ನ ಹೆಸರು ನೈಲ್. ಈಜಿಪ್ಟಿಗೆ ವರದಾನವಾಗಿರುವವಳು. ಅಸ್ವಾನ್ ಡ್ಯಾಂ ಆಗಿ ನಿಂತು ಸಾವಿರಾರು ಮೆಗಾವ್ಯಾಟ್ ವಿದ್ಯುತ್ತನ್ನು ಲಕ್ಷಾಂತರ ಎಕರೆ ಬೆಳೆಗಳಿಗೆ ನೀಡಿದವಳು..’

‘ನಿಲ್ಲಿಸು..’ ಅಕ್ಕ ಧ್ವನಿಯೇರಿಸಿ, ‘ಅಯ್ಯೋ.. ತಂಗೀ.. ಅದಾ ನಿನ್ನ ಕತೆ. ನೈಲ್ ಆಗಿ ನೀನು ನಡೆಯುತ್ತಿರುವ ದಾರಿಯಲ್ಲಿ ಕಟ್ಟಕಡೆಯ ದೇಶ ಅಲ್ಲವಾ ಈಜಿಪ್ಟ್. ನಿನಗೆ ಸಂಪೂರ್ಣತೆಯನ್ನು ನೀಡಿದ ಇಥಿಯೋಪಿಯಾವನ್ನು ಒಣಗಿಸಿ, ಓಟ ಕಲಿತ ಸೂಡಾನ್ ಅನ್ನು ಪಕ್ಕಕ್ಕಿಟ್ಟು ಈಜಿಪ್ಟಿಗೇ ಏಕೆ ವರ ನೀಡುತ್ತಿದ್ದೀಯ. ಅವರಿಗೆ ಬಾಯಿಲ್ಲವೆಂದು ಮತ್ತು ದೊಡ್ಡ ರಾಷ್ಟ್ರಗಳ ಬೆಂಬಲ ಇಲ್ಲವೆಂದೇ ತಾನೇ!’

‘ಅಕ್ಕಾ.. ಅಲ್ಲಿ ನಾನು ಡಾನ್ಯೂಬ್..’ ದೊಡ್ಡ ತಂಗಿ ಹೇಳಹೊರಟಳು.

‘ಏಳು ದೇಶಗಳನ್ನು ಆಳುತ್ತಿದ್ದೀಯ.. ಯಾವ ದೇಶಕ್ಕೆ ವರ ನೀಡುತ್ತಿದ್ದೀಯ ಗೊತ್ತಾ?’ ತಂಗಿ ಕೇಳಿದಳು.

‘ಹಿಮಾಲಯ ಪ್ರಾಂತ್ಯದಲ್ಲಿ ಸಿಂಧು. ಪವಿತ್ರ ಕೈಲಾಸಗಿರಿಯನ್ನು ಸುತ್ತಿ ಪಂಜಾಬಿಗೆ ಹೆಜ್ಜೆಯಿಟ್ಟೆ..’ ತನ್ನ ಪಾಡಿಗೆ ಹೇಳತೊಡಗಿದಳು.

‘ಅದು ಗೊತ್ತಮ್ಮಾ.. ಭಾರತ ಪಾಕಿಸ್ತಾನಕ್ಕೆ ತಗಲಿಟ್ಟು ಅಲ್ಲವಾ.. ಬಾಯಿರುವ ಪಂಜಾಬಿಗೆ ಹರಿಯುತ್ತಿದ್ದೀಯ’ ಅಕ್ಕ ತಿವಿದು ಕೇಳಿದಳು.

‘ಅಕ್ಕಾ.. ಸ್ವಲ್ಪ ಕೇಳಿಲ್ಲಿ. ನಾನು ಒಂದುಕಡೆ ನರ್ಮದಾ. ಬೆಟ್ಟಗಳಲ್ಲಿ ಹುಟ್ಟಿದ ಕನ್ಯೆ. ಧೈರ್ಯ ಮಾಡಿ ಲೋಕವಿರುದ್ಧವಾಗಿ ಪಶ್ಚಿಮಕ್ಕೆ ಹರಿದವಳು.. ರಾಜಾಸ್ಥಾನದ ಮರಳುಗಾಡಿನಲ್ಲಿ ಹಸಿರು ಹುಲ್ಲಾಗಿ ನಕ್ಕವಳು. ಮೂರು ರಾಜ್ಯಗಳ ಮುದ್ದಿನ ತಾಯಿ…’

‘ಆದರೆ ನಾಲ್ಕನೇ ರಾಜ್ಯ ರಾಜಾಸ್ಥಾನಕ್ಕೆ ಮಾತ್ರ ಏಕೆ ವರ ನೀಡುತ್ತಿರುವುದು.. ಧರ್ಮ ನ್ಯಾಯ ಅಂದೆಯಲ್ಲವಾ.. ಮಹಾರಾಷ್ಟ್ರದ ಮೇಲಿನ ಪ್ರೀತಿ ಯಾವ ಧರ್ಮವಮ್ಮಾ..’ ತಂಗಿ ಚುಚ್ಚುಮಾತಿನಿಂದ ಕೇಳಿದಳು. ದೊಡ್ಡಕ್ಕ ಫಕ್ಕನೆ ನಕ್ಕಳು.

ಮನಸು ಮುದುಡಿದಂತಾದರೂ ಬಾರದ ನಗು ತಂದುಕೊಳ್ಳುತ್ತ ‘ಪಶ್ಚಿಮ ಘಟ್ಟಗಳಲ್ಲಿ ಕೃಷ್ಣಾ. ಮೂರು ರಾಜ್ಯಗಳ ಮುಂದೆ ರಂಗೋಲಿ ಹಾಕುತ್ತ, ಆಲಮಟ್ಟಿಯಲ್ಲಿ ಕಾಲಿಟ್ಟು, ನಾರಾಯಣಪೂರ್ ನಲ್ಲಿ ನಕ್ಕು ನಾಗಾರ್ಜುನದಲ್ಲಿ ನಾಟ್ಯವಾಡಿದವಳು..’

‘ಸ್ವಲ್ಪ ತಡಿ.. ಆಲಮಟ್ಟಿಯ ಆಟ ತಿಳಿಯದಿರುವುದೇನಲ್ಲ. ಕರ್ನಾಟಕದ ಗಾಯ ನೋಡದಿರುವುದೇನಲ್ಲ. ಅದು ನ್ಯಾಯವಾ’

ಮುಂದುವರಿಸಿ ‘ಅಕ್ಕಾ.. ಅಲ್ಲಿ ನಾನು ಗಂಗೆ. ಪವಿತ್ರ ಕಾರ್ಯಕ್ಕಾಗಿ ಶಂಭುವಿನ ಶಿರದಿಂದ ಜಾರಿದವಳು. ನನ್ನ ಜನ್ಮರಹಸ್ಯ ನಿಮಗೆ ತಿಳಿಯಬೇಕೆಂದರೆ ಮಹಾಭಾರತ ಓದಬೇಕು’…

ಅಕ್ಕನಿಗೆ ತಡೆಯಲಾಗಲಿಲ್ಲ. ‘ನನಗೂ ಇದೆಯಮ್ಮಾ ತಂಗೀ ಜನ್ಮರಹಸ್ಯ. ಸಾಕ್ಷಾತ್ ಮಹಾವಿಷ್ಣುವಿನ ಮಡದಿ ಗೊತ್ತಾ..’ ಹೆಮ್ಮೆಯಿಂದ ಬೀಗಿದಳು. ಒಬ್ಬರಿಗೊಬ್ಬರು ವಾದಿಸಿಕೊಳ್ಳುತ್ತಿರುವಾಗ ನಡುವೆ ತಂಗಿ ‘ನೀನು ಗಂಗೆಯಾದರೂ, ಗೋದಾವರಿಯಾದರೂ, ಕಾವೇರಿಯಾದರೂ ಎಲ್ಲಾದರೂ ನೀತಿ ನಿಯಮ ಪಾಲಿಸಿದ್ದೀಯಾ. ಕಾವೇರಿಯಾಗಿ ಕರ್ನಾಟಕದ ಪಕ್ಷಪಾತಿ. ಕೋರ್ಟ್ ತೀರ್ಪನ್ನು ಲೆಕ್ಕಿಸದೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ.
ಗೋದಾವರಿಯಾಗಿ ಮಹಾರಾಷ್ಟ್ರದ ಮಾಯೆಯಲ್ಲಿ ಬಿದ್ದೆ..’ ಎಂದಳು.

ತಂಗಿಯ ಚುಚ್ಚುಮಾತಿನಿಂದ ಚಿಕ್ಕ ಅಕ್ಕನಿಗೆ ದುಃಖ ಒತ್ತರಿಸಿ ಬರುತ್ತಿದೆ. ಆದರೂ ತಂಗಿ ತನ್ನ ಪಾಡಿಗೆ ಮಾತನಾಡುತ್ತಲೇ ಇದ್ದಾಳೆ.

‘ದೊಡ್ಡಕ್ಕಾ.. ಚಿಕ್ಕ ಅಕ್ಕನ ಕಥೆ ಕೇಳಿದೆಯಾ. ಗಂಗೆಯಾಗಿ ಹುಟ್ಟಿ ಉತ್ತರಪ್ರದೇಶ, ಬಿಹಾರ, ಬೆಂಗಾಲ್ ನಿಂದ ಬಾಂಗ್ಲಾಗೆ ಹೆಜ್ಜೆಯಿಡುತ್ತಾಳಲ್ಲವಾ… ಅಲ್ಲಿ ದೇಶಗಳ ನಡುವೆ ಕಿಚ್ಚು. ಪರಕ್ಕಾಬ್ಯಾರೇಜ್ ಬಳಿ ನಿಂತು ಬಾಯಿಲ್ಲದ ಬಾಂಗ್ಲಾಕ್ಕೆ ಎಷ್ಟು ಮೋಸ ಮಾಡಿದಳೋ ಬಾಯಿರುವ ಬೆಂಗಾಲಿಗಳನ್ನು ಅಷ್ಟೇ ಉದ್ಧಾರ ಮಾಡಿದ್ದಾಳೆ.’

ದೊಡ್ಡಕ್ಕ ಕೂಡ ಧ್ವನಿಗೂಡಿಸುತ್ತ, ‘ಅಯ್ಯೋ ತಂಗೀ.. ಅಷ್ಟೇ ಅಲ್ಲ. ಗರ್ಭದಲ್ಲಿ ಅಡಗಿ ಹೊಲಗಳಲ್ಲಿ ಬೆಳೆಯಾಗಿ ಮೊಳಕೆಯೊಡೆಯುತ್ತೇನೆ ಎಂದಳಲ್ಲವಾ, ಎಲ್ಲಿನ ಬೆಳೆ, ಗೊಬ್ಬರ. ಅಲ್ಲಿ ಬಾಯಿರುವವನದೇ ಊರು. ಇನ್ನೊಂದು ವಿಚಾರ ನಿನಗೆ ಗೊತ್ತಿಲ್ಲ. ಬಡ ರೈತರ ಮೂಳೆ ಮುರಿದು ಬಹುರಾಷ್ಟ್ರೀಯ ಕಂಪನಿಗಳಿಗೆ ಕೋಲಾ ಹೆಸರಿನಲ್ಲಿ ಹಣದ ಹೊಳೆ ಹರಿಸುತ್ತಿದ್ದಾಳೆ’ ಎಂದಳು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಚಿಕ್ಕ ತಂಗಿ ಅಕ್ಕ ಬಾಯಿ ಬಿಡಲು ಅವಕಾಶ ನೀಡದೆ, ‘ಗೊತ್ತು ಅಕ್ಕಾ.. ಜಯಚಂದ್ರನ ಜಯಭೇರಿ ನೀನು. ಪೃಥ್ವೀರಾಜನ ಮರಣ ಶಾಸನ ಬರೆದವಳು. ಮಹಮ್ಮದ್ ಘೋರಿಯ ಘೋರ ಕೃತ್ಯಗಳಿಗೆ ತುಟಿ ಬಿಚ್ಚದವಳು…’ ಎಂದಳು.

ಚಿಕ್ಕ ಅಕ್ಕನಿಗೀಗ ಹೃದಯ ಚುಚ್ಚಿದಂತಾಯಿತು. ತನ್ನ ರಹಸ್ಯ ಬಚ್ಚಿಟ್ಟರೂ ಪ್ರಯೋಜನವಿಲ್ಲ ಎನಿಸಿತು.

‘ಅಕ್ಕಾ.. ಅಕ್ಕಾ.. ನೀನು ಬಾಯಿರುವವನ ಆಸ್ತಿ, ಹೌದಾ ಅಲ್ಲವಾ..’ ಕೇಳಿದಳು ತಂಗಿ.

ಅಕ್ಕ ದುಃಖ ತಡೆಯಲಾರದೆ ದೊಡ್ಡಕ್ಕನನ್ನು ತಬ್ಬಿಕೊಂಡು ‘ಹೌದು ನಿಜ. ಬಾಯುಳ್ಳವನ ಊರಾಗಿದ್ದೇನೆ. ನೀತಿ ರೀತಿಗಳಿಲ್ಲ. ನನ್ನ ನೋವೆಲ್ಲ ಅದೇ. ಅದಕ್ಕೇ ಯಾರಿಗೂ ಮುಖ ತೋರಿಸದೆ ಪಾತಾಳದೊಳಗೆ ಹೋಗಿಬಿಟ್ಟೆ.. ನನಗೂ ಸ್ವಲ್ಪ ಸ್ವಾತಂತ್ರ್ಯ ಬೇಕು.. ಸ್ವಾತಂತ್ರ್ಯ’ ಗದ್ಗದಿತಳಾದಳು.
ಅಕ್ಕ-ತಂಗಿಯರ ಬಾಧೆ ಒಂದೇ ಎಂದು ತಿಳಿದ ಮೇಲೆ ಇಬ್ಬರ ಮನಸು ಹಗುರಾಯಿತು.

‘ತಂಗೀ ನಿನ್ನ ಕತೆ ಹೇಳಲ್ವಾ..’ ಅಕ್ಕಂದಿರು ಕೇಳಿದರು.

ತಂಗಿ ಕಿಲಕಿಲನೆ ನಗುತ್ತ ‘ಏನಿಲ್ಲ.. ಗುಟ್ಟಾಗಿ ಜೀವಿಸುತ್ತಿರುವವಳು.. ನನಗೆ ಶ್ರೀಮಂತ ಬಡವನೆಂಬ ಬೇಧವಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ’ ಎಂದಳು.

ಅಕ್ಕಂದಿರು ಮೂತಿ ತಿರುಗಿಸುತ್ತ ಎಲ್ಲಾದರೂ ಸಿಕ್ಕಿ ಹಾಕಿಕೊಳ್ಳದೆ ಹೋಗುತ್ತೀಯಾ ಎಂದುಕೊಂಡರು.

‘ನಿಮ್ಮಂತೆ ಪವಿತ್ರವಾದ ಹೆಸರುಗಳಿಲ್ಲ. ಹೆಸರಿಗೊಂದು ಇತಿಹಾಸವಿಲ್ಲ. ವಿಶಾಲ ಹೃದಯವೂ ಅಲ್ಲ. ವಿಷಣ್ಣ ವದನವೂ ಅಲ್ಲ. ಯಾರಿಗೂ ದಾಸೋಹ ಮಾಡುವುದಿಲ್ಲ. ಶ್ರಮಕ್ಕೆ ಪ್ರತಿಫಲ. ಯಾರು ಎಷ್ಟು ಕಷ್ಟಪಟ್ಟರೆ ಅಷ್ಟು ಫಲ ನೀಡುತ್ತೇನೆ. ನಿಮ್ಮಂತೆ ನನ್ನನ್ನು ಯಾರೂ ಮಾಯೆ ಮಾಡಲಾಗುವುದಿಲ್ಲ. ಮೋಸ ಮಾಡಲಾಗುವುದಿಲ್ಲ.’ ಎಂದಳು.

‘ಸಾಕು.. ನಿನ್ನ ಸತ್ಯವಾದ ವಿಚಾರ ಹೇಳು’ ಎರಡನೆಯ ಅಕ್ಕ ಕೇಳಿದಳು.

ತಂಗಿ ಎದ್ದು ಓಡಲಾರಂಭಿಸಿದಳು. ಓಡುತ್ತಲೇ ‘ಉಗಾಂಡಾದಲ್ಲಿ ಸಿಲ್ಲಿಂಗ್, ಪೆರುವಿನಲ್ಲಿ ಸೋಲ್, ಸ್ಪೈನ್ ನಲ್ಲಿ ಪೆಸೆಟಾನ್, ಫ್ರಾನ್ಸ್ ನಲ್ಲಿ ಫ್ರಾಂಕ್. ದೇಶ ಯಾವುದಾದರೂ, ಯಾವ ಪ್ರಾಂತ್ಯವಾದರೂ ನಾನು ಶ್ರಮಜೀವಿಗೆ ಒಲಿಯುವವಳು’ ಎಂದಳು.

ಅಕ್ಕಂದಿರಿಬ್ಬರೂ ತಂಗಿಯನ್ನು ಹಿಡಿಯಲು ಓಡಲಾರಂಭಿಸಿ ಬಹಳ ದೂರ ಕ್ರಮಿಸಿದರು.. ಸಿಕ್ಕಂತೆಯೇ ಮಾಯವಾದಳು ತಂಗಿ.

‘ನೋಡಿದೆಯಾ ಅಕ್ಕ ಅವಳ ಆಟ. ನಮ್ಮಿಬ್ಬರನ್ನೂ ನಿಂದಿಸಿ ತಾನು ಮಾತ್ರ ತಪ್ಪಿಸಿಕೊಂಡಳು’ ಎರಡನೆಯವಳು ಹೇಳಿದಳು.

ಓಟ.. ಓಟ.. ಸಿಗುತ್ತಿಲ್ಲ. ಅದೇ ಮಾತು, ನಗು. ಸಿಕ್ಕಂತೆಯೇ ಸಿಕ್ಕು ಕೈಗೆ ಸಿಗದೆ ದೂರ ಹೋಗುತ್ತಿದ್ದಾಳೆ.

‘ಅಕ್ಕಾ.. ಅಬ್ಬ… ಸುಸ್ತಾಗುತ್ತಿದೆ. ನಾನು ಯಾವತ್ತೂ ಇಷ್ಟು ಓಡಿಲ್ಲ. ಇನ್ನು ಒಂದು ಹೆಜ್ಜೆ ಮುಂದೆ ಹಾಕಲಾರೆ. ಅವಳ ಕತೆಯೂ ಬೇಡ.. ಅವಳೂ ಬೇಡ. ನಮಗೆ ಹೇಳಿದರೆ ನಾವೆಲ್ಲಿ ಚುಚ್ಚು ಮಾತನಾಡುತ್ತೇವೋ ಎಂದು ಹೀಗೆ ಸಿಕ್ಕೂ ಸಿಗದೆ ಓಡುತ್ತಿದ್ದಾಳೆ. ಅವಳು ಯಾವಾಗಲೂ ಅಷ್ಟೇ. ಮಾಯಾವಿ.’ ತಂಗಿ ಸುಸ್ತುಹೊಡೆದಳು. ಅಕ್ಕ ನಿಂತಳು.

ಎಲ್ಲಿ, ಹೇಗೆ ಹಿಡಿಯುವುದು ಇವಳನ್ನು ಎಂದು ಇಬ್ಬರೂ ಚರ್ಚಿಸಿದರು. ಅಕ್ಕ ‘ಕಷ್ಟ ಜೀವಿಯನ್ನು ನೋಡೋಣ. ಅವಳು ಕಷ್ಟಜೀವಿಗೆ ಸ್ವಂತ ಎಂದಳಲ್ಲವಾ..’ ಎಂದಳು, ಅದಕ್ಕೆ ತಂಗಿ ‘ಸರಿ ಪ್ರಯತ್ನಿಸೋಣ’ ಎಂದು ಒಪ್ಪಿದಳು.

‘ಅಕ್ಕಾ.. ಅಕ್ಕಾ.. ಅಲ್ಲಿ ನೋಡು. ಬಾಳೆಹಣ್ಣಿನ ಗಾಡಿ. ಒಣಗಿ ಶಕ್ತಿಹೀನಳಾಗಿರುವ ಆ ತಾಯಿ ಹೇಗೆ ಬಿಸಿಲಿನಲ್ಲಿ ಹಣ್ಣು ಮಾರುತ್ತಿದ್ದಾಳೋ. ಈಕೆ ಶ್ರಮಜೀವಿಯಲ್ಲವಾ..’ ತಂಗಿ ಹೇಳಿದಳು.

‘ಹೌದು. ಅಬ್ಬ.. ಎಷ್ಟು ಗಿರಾಕಿಗಳ ನೋಡು. ಅರೇ.. ಹಣ್ಣುಗಳೆಲ್ಲ ಎಷ್ಟು ಬೇಗ ಮಾರಾಟವಾಗುತ್ತಿವೆ ನೋಡು. ಬೆಲೆ ಕೂಡ ಜಾಸ್ತೀನೇ’ ದೊಡ್ಡ ಅಕ್ಕ ಹೇಳಿದಳು.

‘ಅಕ್ಕಾ.. ಇಷ್ಟು ಹಣ್ಣುಗಳನ್ನು ಮಾರುತ್ತಿದ್ದಾಳೆ. ಇಷ್ಟು ಗಿರಾಕಿಗಳಿದ್ದಾರೆ. ಇಷ್ಟು ಬೆಲೆಯಿದೆ. ಆದರೂ ಈಕೆಯ ಜೀವನ ಹೀಗೇಕಿದೆ? ಮುಖದಲ್ಲಿ ಆತಂಕ, ತಲೆಗೆ ಎಣ್ಣೆಯಿಲ್ಲ, ಮೈತುಂಬಾ ಬಟ್ಟೆಯಿಲ್ಲ. ಹೊಟ್ಟೆಗೆ ತಿಂಡಿಯಿಲ್ಲ’ ತಂಗಿ ಕೇಳಿದಳು.

‘ಅದೇ ತಂಗಿ ನಮ್ಮ ತಂಗಿಯ ಮಹಿಮೆ. ನೋಡುತ್ತಿರು ಕಾಣಿಸುತ್ತಾಳೆ’ ಅಕ್ಕ ಹೇಳಿದಳು.

‘ಅಬ್ಬಾ.. ನೋಟು, ಚಿಲ್ಲರೆಗಳಿಂದ ಗಲ್ಲಾಪೆಟ್ಟಿಗೆ ತುಂಬಿಸಿದ್ದಾಳೆ ನೋಡು’ ತಂಗಿ ಆಶ್ಚರ್ಯದಿಂದ ಕೇಳಿದಳು.

‘ನೋಡುತ್ತಿರು ಅವು ಎಲ್ಲಿ ಸೇರುತ್ತದೆಯೋ..’ ಎಂದಳು ಅಕ್ಕ.

‘ಅಕ್ಕಾ ಆ ವ್ಯಕ್ತಿ ಯಾರು. ಹಣವೆಲ್ಲ ಅವನ ಕೈಗೆ ಸುರಿಯುತ್ತಿದ್ದಾಳೆ. ಅಯ್ಯೋ.. ಎರಡು ಹಳೆಯ ಹತ್ತರ ನೋಟುಗಳು ಮಾತ್ರ ಉಳಿದಿವೆ. ಅವನು ಆಕೆಯನ್ನು ಹೇಗೆ ಕೆಂಡಾಮಂಡಲವಾಗಿ ನೋಡುತ್ತಿದ್ದಾನೆ. ಹಳೆಯ ನೋಟುಗಳೆಂದು ಒದ್ದಾಡುತ್ತಿದ್ದಾನೆ.’

‘ಅವನು ಬಡ್ಡಿ ವ್ಯಾಪಾರಿ. ಕೂತ ಕಡೆಯಿಂದ ಏಳುವ ಅಗತ್ಯವಿಲ್ಲ. ಬೆಳಗ್ಗೆ ಯಾರಿಗೆಷ್ಟು ಬೇಕೋ ಅಷ್ಟು ಸಾಲ ಅವರಿಗೆ ನೀಡುತ್ತಾನೆ. ರಾತ್ರಿ ಹೀಗೆ ಬಂದು ವಸೂಲಿ ಮಾಡಿಕೊಳ್ಳುತ್ತಾನೆ. ಐದು ವರ್ಷಗಳ ಹಿಂದೆ ಚಿಕ್ಕ ಮನೆಯಿದ್ದ ಅವನು ಈಗ ದೊಡ್ಡ ಬಂಗಲೆಯ ಯಜಮಾನನಾಗಿದ್ದಾನೆ’.

‘ಅದು ಶ್ರಮಜೀವಿಗಳ ಚಾವಡಿ..’ ಇನ್ನೊಂದು ದಿಕ್ಕಿನತ್ತ ತೋರಿಸುತ್ತ ಅಕ್ಕ ಹೇಳಿದಳು.

‘ಕೂಲಿ ಚೆನ್ನಾಗೇ ಇದೆ. ನೂರು ರುಪಾಯಿ.. ಆಡುತ್ತ ಹಾಡುತ್ತ ಕೆಲಸ, ಒಳ್ಳೆಯ ಕೂಲಿ’.

ಇಬ್ಬರೂ ಮಾತನಾಡಿಕೊಳ್ಳುತ್ತಿರುವಂತೆಯೇ ಟ್ರ್ಯಾಕ್ಟರ್ ತುಂಬಾ ಕೂಲಿಗಳ ಮಂದೆ ದಬದಬನೆ ಇಳಿಯಿತು. ನಾಲ್ಕು ಬೆರಳಿಗೆ ನಾಲ್ಕು ಉಂಗುರಗಳು, ಡೊಳ್ಳು ಹೊಟ್ಟೆಯ ವ್ಯಕ್ತಿ ಸ್ಕೂಟರಿನಲ್ಲಿ ಬಂದು ಕೂಲಿಗಳಿಗೆ ತಲಾ ಹತ್ತು ರುಪಾಯಿ ಹಿಡಿದುಕೊಂಡು ತೊಂಭತ್ತು ರುಪಾಯಿ ಮಾತ್ರ ಕೊಡುತ್ತಿದ್ದಾನೆ. ಏಕೆಂದು ಅವರು ಕೇಳಲಿಲ್ಲ, ಇವನು ಹೇಳಲೂ ಇಲ್ಲ. ‘ಇವನು ಗುತ್ತಿಗೆದಾರ. ಸ್ಕೂಟರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ರೌಂಡ್ ಹಾಕುತ್ತಾನೆ. ಸದ್ಯ ಇವತ್ತು ಪರವಾಗಿಲ್ಲ. ಒಂದೊಂದು ದಿನ ಅರ್ಧಕ್ಕರ್ಧ ಗೋತ. ಎದುರು ತಿರುಗಿದರೆ ಹುಟ್ಟಲಿಲ್ಲವೆನಿಸಿಬಿಡುತ್ತಾನೆ. ಕೂಲಿ ಸಿಗುವುದಿಲ್ಲ’ ಅಕ್ಕ ಹೇಳಿದಳು.

ಇಬ್ಬರೂ ಬಜಾರಿನ ರಸ್ತೆಗೆ ಬಂದರು. ಅದೊಂದು ಮಾಯಾಲೋಕ. ಒಬ್ಬೊಬ್ಬರದು ಒಂದೊಂದು ರೀತಿಯ ವಂಚನೆ. ಕುತಂತ್ರದಿಂದ ಕಾಳಸಂತೆ ಮಾಡುವ ದಂಧೆಕೋರರು, ಕಲಬೆರಕೆ ಮಾಡುವವರು, ನಂಬಿಕೆ ದ್ರೋಹ ಮಾಡುವವರು, ಬಂಡವಾಳ ಹೂಡಿ ದಬ್ಬಾಳಿಕೆ ಮಾಡುವವರು, ಜಾಣತನದಿಂದ ವ್ಯಾಪಾರ ಮಾಡುವವರು ತಂತಮ್ಮ ವ್ಯವಹಾರಗಳಲ್ಲಿ ತೊಡಗಿದ್ದಾರೆ.

ಇದಾವುದರ ಅರಿವಿಲ್ಲದ ಶ್ರಮವನ್ನೇ ನಂಬಿರುವವನು ತನ್ನ ಶಕ್ತಿಯನ್ನೆಲ್ಲ ಪ್ರಯೋಗಿಸಿ ರಿಕ್ಷಾ ತುಳಿಯುತ್ತಿದ್ದಾನೆ.

‘ತಂಗೀ.. ಸಂಪದಾ… ಎಲ್ಲಿದ್ದೀಯಮ್ಮಾ.. ಎಲ್ಲಿ ಬಚ್ಚಿಟ್ಟುಕೊಂಡಿದ್ದೀಯ.. ಯಾರ ಸೊತ್ತಾಗಿದ್ದೀಯ.. ಯಾರಿಗೆ ಸ್ವಾಧೀನಳಾಗಿದ್ದೀಯ. ಹೇಳಮ್ಮಾ ಬಾಯ್ಬಿಟ್ಟು ಹೇಳು’ ದೊಡ್ಡಕ್ಕ ಕೇಳಿದಳು.

ಈಗ ಆ ನಗುವಿಲ್ಲ. ಓಟವಿಲ್ಲ. ಎಲ್ಲ ನಿಶ್ಯಬ್ದ. ಎಲ್ಲೋ ಮಾಯವಾದಳು. ಅಕ್ಕಂದಿರಿಬ್ಬರಿಗೂ ಭಯವಾಯಿತು.

‘ತಂಗೀ ಲಕ್ಷ್ಮೀದೇವಿ, ನಾನು ಭೂದೇವಿ ಕರೆಯುತ್ತಿದ್ದೇನೆ…’ ವಿಶ್ವಕಣ್ಣು ತೆರೆದು ಹುಡುಕುತ್ತ ಕರೆದಳು ದೊಡ್ಡಕ್ಕ.

‘ಅಮ್ಮಾ.. ಲಕ್ಷ್ಮೀ, ನಾನು ಗಂಗಾದೇವಿ ಕರೆಯುತ್ತಿದ್ದೇನೆ..’ ರಭಸದಿಂದ ಕರೆದಳು ಎರಡನೆಯ ಅಕ್ಕ.

ನೀರವ ಮೌನ..

ಏನೋ ನೆನಪಾದಂತಾಗಿ ‘ಅಕ್ಕಾ.. ಇವಳಿಗೆ ಇನ್ನಾವುದಾದರೂ ರೂಪಗಳಿವೆಯಾ?’ ತಂಗಿ ಕೇಳಿದಳು.

‘ಇಲ್ಲದೆ ಏನು.. ಕಪ್ಪುಮುಖ ಒಂದಿದೆ. ಆಗಾಗ ಆ ರೂಪದಲ್ಲಿಯೂ ತಿರುಗುತ್ತಿರುತ್ತಾಳೆ’ ಅಕ್ಕ ಕೋಪದಿಂದ ಹೇಳಿದಳು.

‘ಅಂದರೆ’

‘ಹೇಳಿದರೆ ಅರ್ಥವಾಗುವುದಿಲ್ಲಮ್ಮಾ. ಕಣ್ತುಂಬಾ ನೋಡಬೇಕು’ ಎಂದು ತಂಗಿಯನ್ನು ಕತ್ತಲ ಕೋಣೆಯೊಂದಕ್ಕೆ ಕರೆದೊಯ್ದಳು. ಅಮೆರಿಕಾದಲ್ಲಿ ದೇವರ ಹೆಸರು ಹೇಳಿ ನೂರು ಕೋಟಿ ವಸೂಲು ಮಾಡಿದ ಒಬ್ಬ ಧಾರ್ಮಿಕ ಮುಖಂಡನನ್ನು ನೋಡಿದರು. ಪಾಪ ಮಾಡಿದ ಜನ ಹಣ ನೀಡಿ ತಮ್ಮ ಪಾಪವನ್ನು ತೊಳೆದುಕೊಳ್ಳುತ್ತಿದ್ದಾರೆ. ಅವನ ವಸೂಲಿ ಇನ್ನೂ ಹೆಚ್ಚುತ್ತಲೇ ಇದೆ.

‘ಅಕ್ಕಾ.. ಅಷ್ಟು ಸಂಪತ್ತನ್ನು ಏನು ಮಾಡುತ್ತಾನೆ.’

ಅಕ್ಕ ನಕ್ಕು ‘ಬಡವರಿಗಾಗಿ ಖರ್ಚು ಮಾಡುತ್ತಾನೆ.

‘ಹೋಗಲಿ ಬಿಡು.. ಇದೊಂದಾದರೂ ಒಳ್ಳೆಯ ಕೆಲಸ. ಬಡವರಿಗಾಗಿ ಖರ್ಚಾಗುತ್ತಿದೆ. ಹೇಗೆ ಖರ್ಚು ಮಾಡುತ್ತಾರೆ’ ತಂಗಿ ಕೇಳಿದಳು.

ಅಕ್ಕ ಮತ್ತೆ ನಕ್ಕು ‘ಶಿಕ್ಷಣ ಕೊಡಿಸುತ್ತಾರೆ… ರಸ್ತೆ ಹಾಕಿಸುತ್ತಾರೆ. ಮನೆ ಕಟ್ಟಿಸುತ್ತಾರೆ. ಸಾಲ ನೀಡುತ್ತಾರೆ.. ಹಾಸು-ಹೊದಿಕೆ.. ಅಕ್ಕಿ’

‘ಹೌದಾ..?’ ತಂಗಿ ಆಶ್ಚರ್ಯದಿಂದ,
ಅಲ್ಲಿ ಭಾರತದಲ್ಲಿ ಒಂದು ಎನ್ ಜಿ ಒ ಸಂಸ್ಥೆಗೆ ಎರಡು ಕೋಟಿ ಹಣ ನೀಡಿದ್ದಾನೆ ಧಾರ್ಮಿಕ ಮುಖಂಡ. ತೆರಿಗೆ ಇಲ್ಲ. ಪ್ರತಿಫಲವಾಗಿ ಕೋಟಿ ರುಪಾಯಿ ವಾಪಸು ಆ ಮುಖಂಡನ ಖಾತೆಗೆ ಬಿಳಿ ಹಣವಾಗಿ ಸೇರುತ್ತದೆ. ಇನ್ನೊಂದು ಕೋಟಿ ರುಪಾಯಿ ಅನೇಕ ಕೈಗಳು ಬದಲಾಗಿ ಕರಗಿಹೋಯಿತು. ಎರಡು ಲಕ್ಷ ಖರ್ಚು ಮಾಡಿ ಎರಡು ಕೋಟಿ ಖರ್ಚು ವೆಚ್ಚದ ಲೆಕ್ಕ ಬರೆದಿದ್ದಾರೆ. ‘ಇದೇನಮ್ಮಾ ಕಪ್ಪು ಬಿಳುಪು’ ಅಕ್ಕ ಹೇಳಿದಳು.

‘ಅಯ್ಯೋ ಅಕ್ಕಾ.. ಅವಳು ಹೇಳಿಕೊಳ್ಳುವುದಿಲ್ಲವಾಗಲೀ ಇರುವವರ ಕೈಗೇ ಸೇರುತ್ತ ಅವರ ಸೇವೆ ಮಾಡುತ್ತಿದ್ದಾಳೆ.. ಅವಳು ಕೂಡ ಸ್ವಾತಂತ್ರ್ಯವನ್ನೇ ಬಯಸುತ್ತಾಳೆ’ ತಂಗಿ ಹೇಳಿದಳು.

‘ಅವಳನ್ನೂ ಕರೆದುಕೊಂಡು ನಾವೆಲ್ಲರೂ ಸ್ವೇಚ್ಛೆಯಾಗಿ ಎಲ್ಲಾದರೂ ಓಡಿಹೋಗೋಣ..’ ಅಕ್ಕ ಹೇಳಿದಳು.

ಇಬ್ಬರೂ ಹಾರಿಹೋಗಿ ತಪ್ಪಿಸಿಕೊಳ್ಳಲು ನೋಡಿದರು. ಆದರೆ ಸಾಧ್ಯವಾಗಲಿಲ್ಲ.

ತಾವು ಬಂದಿಗಳೆಂಬುದನ್ನು ಗ್ರಹಿಸಿದರು. ತಮ್ಮಂತೆ ತಂಗಿಯನ್ನೂ ಬಂಧಿಸಿದ್ದಾರೆಂಬುದರ ಅರಿವಾಯಿತು. ಭಯದಿಂದ ತಂಗಿ ಅಕ್ಕನನ್ನು ತಬ್ಬಿಕೊಂಡಳು. ಧೈರ್ಯ ನೀಡುತ್ತ ತಂಗಿಯನ್ನು ಬರಸೆಳೆದುಕೊಂಡಳು ಅಕ್ಕ.

ಕಾಣದ ತಂಗಿಗಾಗಿ ಒಬ್ಬ ಅಕ್ಕ ಮರ, ಗುಡ್ಡ, ಬೆಟ್ಟ, ಪ್ರಪಾತ ಹೀಗೆ ಇಡೀ ಭೂ ಮಂಡಲದಲ್ಲಿ ಹುಡುಕುತ್ತಿದ್ದಾಳೆ. ಮತ್ತೊಬ್ಬ ಅಕ್ಕ ಸುತ್ತಲೂ ತಿರುಗುತ್ತ ಇಡೀ ಆಕಾಶದಲ್ಲಿ ಹುಡುಕಾಡುತ್ತಿದ್ದಾಳೆ. ಈಗ ಮೂವರೂ ಬಂಧಿಗಳಾಗಿಯೇ ಇದ್ದಾರೆ.

 

ಪೆದ್ದಿಂಟಿ ಅಶೋಕ್ ಕುಮಾರ್

ವೃತ್ತಿಯಲ್ಲಿ ಗಣಿತ ಶಿಕ್ಷಕರಾಗಿರುವ ಪೆದ್ದಿಂಟಿ ಅಶೋಕ್ ಕುಮಾರ್ ತೆಲುಗು ಕಥಾ ಸಾಹಿತ್ಯದಲ್ಲಿ ಚಿರಪರಿಚಿತರು. ಇವರು ಇನ್ನೂರು ಕಥೆಗಳು, ಆರು ಕಾದಂಬರಿಗಳು, ನಾಲ್ಕು ನಾಟಕಗಳು, ನೂರಕ್ಕೂ ಹೆಚ್ಚು ಸಾಮಾಜಿಕ ಕಳಕಳಿಯ ಕವನಗಳನ್ನು ಬರೆದಿದ್ದಾರೆ. ಇವರು ಬರೆದಿರುವ ‘ಜಿಗಿರಿ’ ಕಾದಂಬರಿ ಒಂಭತ್ತು ಭಾಷೆಗಳಿಗೆ ಅನುವಾದಗೊಂಡಿದೆ. ಊಟಬಾಯಿ, ಮಾಯಿಮುಂತ, ವಲಸ ಬದುಕುಲು, ಮಾಊರಿ ಬಾಗೋತಂ, ಭೂಮುಡು, ಜುಮ್ಮೇಕಿ ರಾತ್ ಮೇ, ಪೊರುಗಡ್ಡ ಕಥಾಸಂಕಲನಗಳು ಪ್ರಕಟವಾಗಿವೆ. ಇವರ ಅನೇಕ ಕಥೆಗಳು ಹಿಂದಿ, ಮರಾಥಿ, ಇಂಗ್ಲಿಷಿಗೆ ಅನುವಾದಗೊಂಡಿವೆ.. ಇವರು ಸಿನಿಮಾ ಗೀತ ರಚನೆಕಾರರು, ಸಂಭಾಷಣೆಕಾರರಾಗಿಯೂ ಖ್ಯಾತಿ ಪಡೆದಿದ್ದಾರೆ. ಇವರು ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ನಂದಿ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.