ಮುಂದಿನ ಬೆಟ್ಟವನ್ನು ತೋರಿಸಿ ಗುಡದಪ್ಪ ಇದನ್ನು ದಾಟಬೇಕು ಎಂದ. ನಾನು ಹೌಹಾರಿದೆ. ಮತ್ತೆ ಮುಂದಿನ ಬೆಟ್ಟ ಏರತೊಡಗಿದೆವು. ಮೊದಲಿಗಿಂತಲೂ ಸ್ವಲ್ಪ ಕಡಿದಾಗೇ ಇತ್ತು. ದಾರಿಯಿಲ್ಲದ ಕಲ್ಲುಗಳ ನಡುವೆ ದಾರಿ ಹುಡುಕುತ್ತಾ ನಡೆಯುವುದು ಕಷ್ಟವಾಯಿತು. ಅರ್ಧ ಗಂಟೆಯ ಚಾರಣದ ನಂತರ ಎದೆ ಝಲ್ಲೆನ್ನುವಂತಿತ್ತು ದೃಶ್ಯ, ಅದೆಷ್ಟು ರುದ್ರ ಭಯಂಕರ ಅಂತರ್‌ ಜಾಲದ ಮಾಹಿತಿಯಂತೆ 49 ಎಕರೆಗಳಷ್ಟು ವಿಸ್ತಾರವನ್ನು ಮೊದಲ ಬಾರಿಗೆ ನೋಡಿದವರಿಗೆ ಭೂತಗಳು ವಾಸಿಸುವ ಊರಿಗೆ ಬಂದಿದ್ದೇವೆ ಎನಿಸದೇ ಇರದು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕತೆ “ಡಾಲ್ಮೆನ್‌ಗಳು” ನಿಮ್ಮ ಓದಿಗೆ

ಶಿಲಾಯುಗದ ಮೌರೇರ್‌ ಸಮಾಧಿಗಳ ಸಂಶೋಧನೆ ಕೈಗೊಂಡಿದ್ದ ಪ್ರೊ ಚಿಚಿಡಿ ನಿಗೂಢವಾಗಿ ಕೊಲೆಯಾಗಿದ್ದಾರೆಂದು ಸುದ್ದಿವಾಹಿನಿಗಳು ಯಾವುದೇ ಭಾವನೆಗಳನ್ನು ತೋರ್ಪಡಿಸದೇ ಕಿವುಡುಗಚ್ಚುವಂತೆ ಚೀರುತ್ತಿವೆ. ಪ್ರೊ. ನಾಗರಾಜ್‌ ಚಿಚಿಡಿಯವರ ಸಾವಿಗೆ ಕಾರಣವೇನಿರಬಹುದು? ಹಳೆಯ ದ್ವೇಷವಿರಬಹುದೇ,   ಈ ಸಂಶೋಧನೆ  ಯಶಸ್ಸು ಅವರಿಗೆ ದೊರಕಬಾರದೆಂದು ಕೊಲೆ ಮಾಡಿರಬಹುದೇ?  ಮೌರೇರ್‌ ಆತ್ಮಗಳು ಸೇಡು ತೀರಿಸಿಕೊಂಡಿರಬಹುದೇ? ಹೀಗೆ  ಒಂದಾದ ಮೇಲೊಂದರಂತೆ ಚಾನೆಲ್‌ನ ಟಿ.ಆರ್.ಪಿ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಶ್ನೆಗಳನ್ನು  ಉತ್ತರ ಹೇಳದೇ ಪುನರಪಿಸುತ್ತಿದ್ದವು. ಒಂದೊಂದು ವಾಹಿನಿಯದು ಒಂದೊಂದು ರೀತಿಯ ವಿಶ್ಲೇಷಣೆ.
 ಅಂತ್ಯ ಕ್ರಿಯೆಗಳಾಗಿ ಹದಿನೈದು ದಿನಗಳಾದರೂ ಹೆಂಡತಿ ಮೀನಾಕ್ಷಮ್ಮ ಮನೆಯ ಮೂಲೆಯಿಂದ ಅಲ್ಲಾಡಿರಲಿಲ್ಲ. ʼಚಿತೆ, ಚಿಂತೆಗಿರುವ ವ್ಯತ್ಯಾಸದ ನೆನಪು ಮಾಡಿಕೊಳ್ಳುತ್ತಿದ್ದ ಮಹೇಶ ಸಮಾಧಿ ಸ್ಥಿತಿಯನ್ನು ತಲುಪಿದ್ದ ಅಮ್ಮನಿಗೆ ಧೈರ್ಯ ತುಂಬಲಾಗದೇ ತಲೆ ಮೇಲೆ ಕೈ ಹೊತ್ತು ಕೂತಿದ್ದ.  ಒತ್ತಾಯಿಸಿದರೆ ಮಾತ್ರ  ಒಂದೆರಡು ತುತ್ತು ತಿನ್ನುವವಳು, ಒತ್ತಾಯವಿಲ್ಲದಿದ್ದರೆ ಉಪವಾಸವೇ ಇರುತ್ತಿದ್ದಳು. ಒಬ್ಬರ ಸಾವಿನಿಂದ ಆಪ್ತರು ಅನುಭವಿಸುವ ಖಾಲೀತನಕ್ಕೆ ಪರಿಹಾರವಿಲ್ಲ ಎಂಬುದನ್ನು ಮಹೇಶ  ಅಮ್ಮನ ಮತ್ತು ಪರಿಸ್ಥಿತಿಯಿಂದ ಅರಿತಿದ್ದ.  ಹುಟ್ಟಿದೊಡನೆ ಸಾವಿನ ಬುತ್ತಿಯನ್ನು ಬೆನ್ನಿಗೆ ಕಟ್ಟಿಕೊಂಡು ಹುಟ್ಟುವ ನಾವು ಈ ಸ್ಥಿತಿಯನ್ನು ಅನುಭವಿಸಲೇಬೇಕು. ಯೋಚಿಸುತ್ತಿದ್ದವನಿಗೆ ಏನಾದರೂ ಪರಿಹಾರ ಕಂಡುಕೊಳ್ಳದಿದ್ದರೆ ಅಮ್ಮ ಹುಚ್ಚಿಯಾಗುತ್ತಾಳೆ ಅನಿಸತೊಡಗಿತು. ಆದರೆ ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಕೊನೆಗೆ  ಅಮ್ಮನನ್ನು ಅತಿಯಾಗಿ ಪ್ರೀತಿಸುತ್ತಿದ್ದ  ಅಂತ್ಯಕ್ರಿಯೆ ಮುಗಿಸಿ ಅಲ್ಲಿಯೇ ಉಳಿಯಬಾರದೆಂದು ಊರಿಗೆ ಹೋಗಿದ್ದ  ಚಿಕ್ಕಮ್ಮನ್ನು ಕರೆಸಬೇಕೆಂದು ತೀರ್ಮಾನಿಸಿ ಫೋನ್‌ ಮಾಡಿದ.  ಪರಿಸ್ಥಿತಿಯನ್ನು ವಿವರಿಸಿ ಹೇಳಿದಾಗ ಸುಜಾತಾ  ಆಯ್ತು ಬಂದು ನಾಲ್ಕು ದಿನ ಇರುತ್ತೇನೆ. ಎಂದು ಒಪ್ಪಿಕೊಂಡಳು.    ಮರುದಿನ ಪುಟ್ಟ ಬ್ಯಾಗ್‌ನೊಂದಿಗೆ ಸುಜಾತಾ ಹಾಜರಾಗಿದ್ದಳು.  ಚಿಕ್ಕಮ್ಮನನ್ನು ನೋಡುತ್ತಲೇ ಮಹೇಶನಿಗೆ ಸ್ವಲ್ಪ ಧೈರ್ಯ ಬಂದಿತು.  ಅಮ್ಮನ ಮುಖದಲ್ಲೂ ಕಂಡೂ ಕಾಣದಂತೆ ಸಣ್ಣ ನಗುವೊಂದು ಹಾದು ಹೋದದ್ದನ್ನು ಮಹೇಶ ಗಮನಿಸಿದ.
ಸಹೋದರಿಯ ಆರೈಕೆ, ಮಗನ ಪ್ರೀತಿಯಿಂದ ದಿನಗಳೆದಂತೆ ಮೀನಾಕ್ಷಮ್ಮ ಚೇತರಿಸಿಕೊಳ್ಳತೊಡಗಿದಳು. ಇಬ್ಬರೂ ಮೀನಾಕ್ಷಮ್ಮನಿಗೆ ಧೈರ್ಯ ತುಂಬಿದ್ದರು. ಕಾಲ ನೋವುಗಳ ಹುಣ್ಣುಗಳನ್ನು ಮರೆ  ಮಾಡುತ್ತದೆ. ತಾಳ್ಮೆಯ ಜೊತೆ ಪ್ರೀತಿ ಸೇರಿದರೆ  ಒಣ ಕೊರಡೂ ಚಿಗುರುವಂತೆ ಮೀನಾಕ್ಷಮ್ಮ ನಿಧಾನವಾಗಿ ಪರಿಸ್ಥಿತಿಯನ್ನು ಒಪ್ಪುವ ಹಂತಕ್ಕೆ ಬರುತ್ತಿದ್ದಳು.  ಆದರೆ  ಮೊದಲಿನಂತೆ ಗೆಲುವಾಗಲಿಲ್ಲ.  ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದ  ಮಹೇಶನ ಚಿಕ್ಕಮ್ಮ ನೋವುಗಳೊಂದಿಗೆ  ತಳಕು ಹಾಕಿಕೊಂಡು  ನೆನಪುಗಳೊಂದಿಗೆ ಬೆಸೆದಿರುತ್ತವೆ.  ಇವೆರಡನ್ನೂ ಬೇರೆ  ಮಾಡಬೇಕು  ಸುಜಾತಾ  ಮುಂದೆಯೇ ಕುಳಿತಿದ್ದ ಮಹೇಶನಿಗೆ ‘ನೋಡು  ಈಗ ಪರವಾಗಿಲ್ಲ, ಇದೇ ಜಾಗದಲ್ಲಿದ್ದರೆ ಮತ್ತೆ ಮತ್ತೆ ಅವಳನ್ನು ನೆನಪುಗಳು  ಕಿತ್ತು ತಿನ್ನುತ್ತವೆ. ನಾಲ್ಕು ದಿನ ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ  ಜಾಗ ಬದಲಾದರೆ ಗೆಲುವಾಗಬಹುದುʼ
‘ಹಾಗಂತೀಯಾ.. ಅಲ್ಲ ಚಿಕ್ಕಮ್ಮ ಅಮ್ಮ ಮೊದಲಿಗಿಂತ ಈಗ ಉತ್ತಮ,  ಇನ್ನೊಂದ್‌ ನಾಲ್ಕು ದಿನದಲ್ಲಿ ಸರಿಯಾಗಬಹುದು …ʼ
 ‘ಅದು ಸರಿ ಮಹೇಶ ನಾನು ಬಂದು ಬಹಳ ದಿನ ಆತು. ಚಿಕ್ಕಪ್ಪನಿಗೆ ಶುಗರ್‌, ಬಿಪಿ… ಅಲ್ಲಿ ಹೋದ್ರೆ  ಚಿಕ್ಕಪ್ಪನಿಗೂ ಅನುಕೂಲ, ನೀನೂ ಬಂದು ಬಿಡು ನಾಲ್ಕು ದಿನ ಇದ್ದು ಬರುವಂತೆʼ
ಮಹೇಶ ಏನು ಹೇಳಬೇಕೆಂದು ತೋಚದೇ ಸುಮ್ಮನೇ ಕುಳಿತು ಸ್ವಲ್ಪ ಹೊತ್ತಿನ ನಂತರ ‘ಸರಿ ಚಿಕ್ಕಮ್ಮ  ಹಾಗೇ ಮಾಡು ಆದ್ರೆ ನಾನು ಬರೋದಿಲ್ಲ ಕೆಲ್ಸ ಇದೆʼ
ಮಹೇಶನ ಮಾತಿಗೆ ಏನೂ ಹೇಳದೇ ಸುಜಾತ ಸ್ವಲ್ಪ ಹೊತ್ತಿನ ನಂತರ ‘ಅಲ್ಲ ಮಹೇಶ. ಕರಡಿ ದಾಳಿ ಆದ್ರೆ ತಲೆಗೇಕೇ ಪೆಟ್ಟು ಬಿತ್ತು, ನಿಂಗೆ ನೆನಪಿದೆಯಾ ನಿಮ್ಮಪ್ಪನ ತಲೆಯ ಹಿಂಭಾಗದಲ್ಲಿ  ಕೆಳ ಭಾಗದ ತಲೆಗೆ ದೊಡ್ಡ ಗಾಯವಾಗಿತ್ತು. ಆ ಗಾಯ ಕರಡಿ ದಾಳಿಯಿಂದ ಆದದ್ದಲ್ಲʼ
‘ಪೋಲೀಸರನ್ನು ಕೇಳಿದೆ ಚಿಕ್ಕಮ್ಮ, ಅವರು ಕರಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದಾಗ ಆದ ಗಾಯ ಎಂದರು. ಆದರೆ ನಿನ್ನಂತೆ ನನಗೂ ಅನುಮಾನ ಇದೆ. ಪೋಲೀಸರು  ಸುಮ್ಮನೆ  ಕ್ಲೋಸ್‌ ಮಾಡಿದ್ದಾರೆ ಅನಿಸುತ್ತೆʼ ತನ್ನ ಅನುಮಾನವನ್ನು ಮಹೇಶ ತನ್ನ ಚಿಕ್ಕಮ್ಮನ ಮುಂದಿಟ್ಟ.  ಸ್ವಲ್ಪ ಹೊತ್ತು ಇಬ್ಬರ ನಡುವೆ ಮೌನ.
‘ಆಯ್ತು ಮಹೇಶ  ಅಕ್ಕನನ್ನು ಕರೆದುಕೊಂಡು ಹೋಗುತ್ತೇನೆ ನಾಳೇನೆ ಹೊರಡಲೇ?ʼ
 ‘ಆಯ್ತು  ನೀನು ಹೇಗೆ ಹೇಳ್ತೀಯೋ ಹಾಗೆ, ಕರೆದುಕೊಂಡು ಹೋಗುʼ
 ‘ನೀನೂ ಬಂದು ಬಿಡೋʼ
‘ನಾನು ಬಂದು ಹೋಗಿ ಮಾಡುತ್ತೇನೆ, ನನ್ನನ್ನು ಒತ್ತಾಯಿಸಬೇಡʼ
ಮಹೇಶನ ಮುಖ ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಳು…
‘ಇಲ್ಲ ಚಿಕ್ಕಮ್ಮ ನನ್‌ ಚಿಂತೆ ಬಿಡು.. ಅಮ್ಮನನ್ನು  ನೋಡ್ಕೋ ಸಾಕುʼ
‘ಆಯ್ತಪ್ಪಾ ನಿನ್ನ ಹಠ ನೀ ಬಿಡೋಲ್ಲಾ..ʼ ಸ್ವಲ್ಪ ಹೊತ್ತು ಬಿಟ್ಟು ‘ನಾಳೆ ಒಂದು ಕಾರಿಗೆ ಹೇಳಿ ಬಿಡು. ಬೆಳಿಗ್ಗೆಯೇ  ಹೊರಡುತ್ತೇವೆʼ ಎಂದಳು.
ಆಯ್ತು ಎಂದ ಮಹೇಶ  ಬಾಡಿಗೆ ಟ್ಯಾಕ್ಸಿ ಓಡಿಸುತ್ತಿದ್ದ  ತನ್ನ ಸಹಪಾಠಿ ಮಂಜನಿಗೆ ನಾಳೆ  ಒಂಬತ್ತರ ಸುಮಾರಿಗೆ ಬರಲು ಹೇಳಿದ.
ಮಹೇಶನಿಗೆ ಅಪ್ಪನ ತಲೆಯ ಗಾಯದ್ದೇ ಚಿಂತೆ, ಕರಡಿಗಳು ಸುಖಾ  ಸುಮ್ಮನೇ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ.  ಅವುಗಳ ಆವಾಸಕ್ಕೆ, ಆಹಾರಕ್ಕೆ ತೊಂದರೆ ಆದರೆ ಮಾತ್ರ ದಾಳಿ ಮಾಡುತ್ತವೆ. ದಾಳಿ ಮಾಡಿದರೂ ತರಚಿದ ಪರಚಿದ ಗಾಯಗಳಿರಬೇಕಾಗಿತ್ತು. ಆದರೆ ಅಂತಹ ಪ್ರಾಣಾಂತಿಕ ಗಾಯಗಳಿಲ್ಲ. ಪೋಲೀಸರು ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಬಿದ್ದಿರಬೇಕು ಎಂದು ಫೈಲ್‌ ಕ್ಲೋಸ್‌ ಮಾಡಿದ್ದ ಅವರು ನೀಡಿದ ವಿವರ ತನ್ನ ಅನುಮಾನವನ್ನು ಸಂಪೂರ್ಣವಾಗಿ  ಹೋಗಲಾಡಿಸಿರಲಿಲ್ಲ.  ಬಹಳ ಹೊತ್ತು ಅದೇ ಯೋಚನೆಯಲ್ಲಿ ಯಾವಾಗ ನಿದ್ದೆ ಹತ್ತಿತೋ ಗೊತ್ತೇ ಆಗಲಿಲ್ಲ.
*****
ಬೆಳಿಗ್ಗೆ ಮಹೇಶ ಸಂತೆಹೊಂಡದ ಹತ್ತಿರವಿರುವ ಭಟ್ಟರ ಹೋಟೇಲಿನಿಂದ ಇಡ್ಲಿ ಕಟ್ಟಿಸಿಕೊಂಡು ಬಂದಿದ್ದ.  ಅಮ್ಮ ಚಿಕ್ಕಮ್ಮನೊಂದಿಗೆ ತಾನೂ ಉಪಹಾರ ಮಾಡಲು ಕುಳಿತ. ಅನಿವಾರ್ಯ ಎನ್ನುವಂತೆ ಒಂದೊಂದೇ ತುತ್ತುಗಳನ್ನು ಬಾಯಿಗಿಟ್ಟುಕೊಳ್ಳುತ್ತಿದ್ದ ಅಮ್ಮನನ್ನು ನೋಡಿ ‘ಚಿಕ್ಕಮ್ಮನ ಮನೆಗೆ ಹೋಗಿ ನಾಲ್ಕು  ದಿನ ಇದ್ದು ಬಾಮ್ಮʼ ಎಂದ.  ಅಮ್ಮ ಮಾತನಾಡಲಿಲ್ಲ. ಅವಳ ಕಣ್ಣಲ್ಲಿ ಕಣ್ಣೀರು  ಕಾಣದಂತಿದ್ದರೂ  ಅವನಿಗೆ  ಮಾತ್ರ ಕಾಣುತ್ತಿತ್ತು. ಮಹೇಶನೂ ತನ್ನನ್ನು ತಾನು ನಿಯಂತ್ರಿಸಿಕೊಂಡ. ಅಮ್ಮ ಕ್ಷೀಣ ಧ್ವನಿಯಲ್ಲಿ ‘ನೀನು.ʼ ಅಂದಳು, ಅದಕ್ಕೆ ಮಹೇಶ ‘ಶಾಲೆ ಮುಗಿಸಿಕೊಂಡು ಶನಿವಾರ ಬರುತ್ತೇನಮ್ಮʼ  ಕಣ್ಣಲ್ಲಿ ನೀರು ತುಂಬಿಕೊಂಡು ಎತ್ತಲೋ ನೋಡುತ್ತಾ ಹೇಳಿದ. ನೋಡು ನೋಡುತ್ತಾ ಎಲ್ಲಿಯೋ ಮನಸ್ಸನ್ನು ಹರಿಯಬಿಟ್ಟು ಕಳೆದುಹೋಗುವುದು ಅವನ ಗುಣ. ದುಃಖವೇ ಹಾಗೆ; ಒಬ್ಬರೇ ಇದ್ದಾಗ ಒಳಗೇ ಬೆಂದು ಮನುಷ್ಯ ಸುಣ್ಣವಾದಾಗ ತಣ್ಣಗಾಗುತ್ತದೆ,  ಒಂಟಿಯಾಗಿದ್ದಾಗ ನಮ್ಮನ್ನು ಮೆತ್ತಗಾಗಿಸುತ್ತವೆ. ಜೊತೆಗೆ ಒಬ್ಬರಿದ್ದರೆ ಮನಸ್ಸಿನ ದುಃಖವನ್ನು ಕಣ್ಣೀರಲ್ಲಿ ಮಾತುಗಳಲ್ಲಿ ಹೊರಹಾಕಬಹುದು.   ಮಹೇಶ ತನಗೆ ತಿಳಿದಂತೆ ಯೋಚಿಸುತ್ತಲೇ ಇದ್ದ.
ಮಂಜ ಒಳ ಬಂದದ್ದನ್ನು ನೋಡಿ ‘ಬಾ ತಿಂಡಿ ತಿನ್ನುʼ ಎಂದು ಕರೆದ.  ಮನೆಯವನಂತಿದ್ದ ಮಂಜ ಹಿಂದು ಮುಂದು ನೋಡದೇ ಉಳಿದೆರಡು ಇಡ್ಲಿಗಳನ್ನು ಪ್ಲೇಟಿಗೆ ಹಾಕಿ  ಅವರೊಂದಿಗೆ ತಿನ್ನತೊಡಗಿದ. ಕಲ್ಪನೆಯಲ್ಲಿ ಕಳೆದುಹೋಗಿದ್ದ ಮಹೇಶನನ್ನು ಮಂಜ ಹೊರಡೋಣವಾ ಎಂದಾಗಲೇ ಎಚ್ಚರವಾಗಿದ್ದು.
ಲಗೇಜ್‌ ಕಾರ್‌ನಲ್ಲಿಟ್ಟು ಇಬ್ಬರನ್ನೂ ಕಾರಿನಲ್ಲಿ ಕುಳ್ಳಿರಿಸಿದ ‘ನಿಮ್ಮಪ್ಪನ  ಮಾಹಿತಿ ಏನಾದರೂ ದೊರೆತರೆ ತಿಳಿಸು ಎಂದು ತನ್ನ ಕಿವಿಯಲ್ಲಿ ಚಿಕ್ಕಮ್ಮ ಉಸಿರಿದ್ದನ್ನು ಕೇಳಿಸಿಕೊಂಡು  ಬೀಳ್ಕೊಟ್ಟ.  ಅವರು ಹೋದ ನಂತರ ಒಳಗೆ ಹೋಗಲು ಮನಸ್ಸಾಗಲಿಲ್ಲ.
 ಮಧ್ಯಾಹ್ನದ ಬಿಸಿಲು ಚುರುಗುಟ್ಟುವವರೆಗೆ ಅಲ್ಲಿಯೇ ಕುಳಿತ.  ಕೊನೆಗೆ ಬಿಸಿಲ  ತಾಪ ತಾಳಲಾರದೇ  ಒಳಗೆ ಹೋದ.  ಊಟ  ಬೇಡವೆನ್ನಿಸಿದ್ದರಿಂದ  ಲಿವಿಂಗ್‌ ರೂಮಿನ ಸೋಫಾದಲ್ಲಿಯೇ ಮಲಗಿದ. ನಿದ್ದೆ ಬಾರದೆ   ಬೇಸರವಾಗಿ ಟಿ.ವಿ. ಆನ್‌ ಮಾಡಿದ  ಸುದ್ದಿ ವಾಹಿನಿಗಳಲ್ಲಿ ಬದಲಾಗದ ಸುದ್ದಿಗಳನ್ನು  ಹೆಸರು ಬದಲಿಸಿ ಪ್ರತಿ ದಿನದಂತೆ  ಪಟ್ಟಿ ಮಾಡುತ್ತಿದ್ದರು. ತಮ್ಮ ಸಂಪತ್ತನ್ನೇ  ಖರ್ಚು ಮಾಡಿ ಯೋಜನೆಗಳನ್ನು ಸಂಪನ್ನಗೊಳಿಸಿದವರಂತೆ ಮಂತ್ರಿಗಳ ಉದ್ಘಾಟನೆಯನ್ನೂ ವರದಿ ಮಾಡುತ್ತಿದ್ದರು. ಆದರೆ ಒಂದು ವಾಹಿನಿಯಲ್ಲಿ ಮಾತು ಚರ್ಚೆ ಮುಂದುವರೆದಿತ್ತು. ಪ್ರೊ. ನಾಗರಾಜ್‌ರವರ ಸಾವಿಗೆ ಕಾರಣವೇನಿರಬಹುದು?  ಈ ಸಂಶೋಧನೆ  ಯಶಸ್ಸು ಅವರಿಗೆ ದೊರಕಬಾರದೆಂದು  ಯಾರಾದರೂ ಅವರ ಕೊಲೆ ಮಾಡಿರಬಹುದೇ, ಮೌರೇರ್‌ ಆತ್ಮಗಳನ್ನು ಕೆಣಕಿದ್ದಕ್ಕೆ ಆತ್ಮಗಳು ಸೇಡು ತೀರಿಸಿಕೊಂಡಿರಬಹುದೇ?ʼ ಪುನರ್‌ ಪ್ರಸಾರದ ಕಾರ್ಯಕ್ರಮವಾಗಿದ್ದರಿಂದ ತಲೆ ಕೊಡವಿ  ಟಿ.ವಿ ಆಫ್‌ ಮಾಡಿದ.
ಅಮ್ಮ ಚಿಕ್ಕಮ್ಮನ ಮನೆಗೆ ಹೋದ ಮೇಲೆ ಮನೆ ಖಾಲಿ  ಎಂದು  ಮಹೇಶನಿಗೆ ಅನಿಸತೊಡಗಿತು. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸದ ಉಪನ್ಯಾಸಕರಾಗಿದ್ದ ತಂದೆಯವರ  ಇತಿಹಾಸದ  ಜ್ಞಾನ, ಇನ್ನೂ ಕಲಿಯಬೇಕೆಂಬ ಅವರ ಆಸ್ಥೆ ಇತರರಿಗೆ ಅನುಕರಣೀಯವಾಗಿತ್ತು. ನಾಡಿನಲ್ಲಿ ತಕ್ಕ ಮಟ್ಟಿಗೆ ಹೆಸರನ್ನೂ ಗಳಿಸಿದ್ದರು.
ಅಷ್ಟರಲ್ಲಿ  ಹೊರಗಿನ ಬಾಗಿಲಿನಿಂದ “ಸಾರ್‌..” ಎಂಬ ಧ್ವನಿ ಕೇಳಿಸಿ. ‘ಯಾರು?ʼ ಎಂದ. ನಾವು ಕೋರಿಯರ್‌ನವರು.. ಸರ್‌  ಪ್ರೊ.  ಚಿಚಿಡಿಯವರ ಹೆಸರಿನಲ್ಲಿ ಪೋಸ್ಟ್‌ ಇದೆʼ…  ‘ಆಯ್ತುʼ ಎಂದು ಹೊರಗೆ ನಿಂತಿದ್ದ ಕೋರಿಯರ್‌ ಹುಡುಗನಿಂದ  ಪೋಸ್ಟ್‌ ಸ್ವೀಕರಿಸಿದ.   ಕವರ್‌ ಮೇಲಿನ ವಿಳಾಸ  ಮಲ್ಲಿಗೆ ಹೋಟೇಲ್‌, ಹೊಸಪೇಟೆಯದಾಗಿತ್ತು.   ಹೋಟೇಲ್‌ನಿಂದ ಅಪ್ಪನ  ಹೆಸರಿನಲ್ಲಿ ಇಷ್ಟು ಭಾರದ ಪೋಸ್ಟ್‌ ಏಕೆ ಎಂದು ಕುತೂಹಲ ತಾಳಲಾರದೇ ಒಳ ಹೋಗುವುದಕ್ಕಿಂತ ಮುಂಚೆಯೇ  ಒಡೆದು ನೋಡಿದ. ಒಂದು ಡೈರಿ, ಕೆಲವು ಪುಸ್ತಕಗಳು ಹಾಗೂ  ಕವರೊಳಗಿನ ಪೇಪರಿನಲ್ಲಿ ಈ ರೀತಿ ಬರೆದಿತ್ತು.
ಮಾನ್ಯರೇ,
‘ನಿಮ್ಮ ತಂದೆಯವರಿಗೆ ಸಂಬಂಧಿಸಿದ ಕೆಲವು ವಸ್ತುಗಳು ನಮ್ಮ ಹೋಟೇಲ್ಲಿನಯೇ ಉಳಿದಿವೆ. ಪ್ರೊ. ಚಿಚಿಡಿಯವರ ಅನಿರೀಕ್ಷಿತ ಸಾವಿಗಾಗಿ ವಿಷಾದ ವ್ಯಕ್ತಪಡಿಸುತ್ತಾ, ಅವರು ನಮ್ಮ ಹೋಟೇಲ್‌ನಲ್ಲಿ ಉಳಿದುಕೊಂಡಾಗಿನ  ಅವರ ವಸ್ತುಗಳನ್ನು ತಮಗೆ ಮರಳಿ ಕಳುಹಿಸಿಕೊಡುತ್ತಿದ್ದೇವೆ.
ಧನ್ಯವಾದಗಳೊಂದಿಗೆ,
ಇಂತಿ ತಮ್ಮ  ವಿಶ್ವಾಸಿ
ಸಹಿ
ಅಪ್ಪನ ಪರ್ಸನ್ನು ತೆರೆದು ನೋಡಿದ; ಒಂದೆಡೆ  ಅವರ ಜೊತೆ ಫೋಟೋ ಇನ್ನೊಂದೆಡೆ ನನ್ನ ಪೋಟೋ. ಅಪ್ಪ ಅಮ್ಮ ಇಬ್ಬರ ಚಿತ್ರಗಳು  ಕೋರಿಯರ್‌ನಲ್ಲಿ ಬಂದ ಡೈರಿಯನ್ನು ನೋಡಿ ಅಪ್ಪ  ಹೊಸಪೇಟೆಗೆ ಹೋದಾಗಿನ ಸೂಟ್‌ ಕೇಸ್‌ ನೆನಪಾಗಿ   ಒಳಗೆ ಬಂದ.  ತಂದೆಯ ಸೂಟ್‌ ಕೇಸ್‌ ತೆರೆದೊಡನೆ ಅಪ್ಪನ ಬಿಳಿಯ ಹಾಫ್‌ ಶರ್ಟ್‌, ಪ್ಯಾಂಟ್‌, ಮೇಲೆಯೇ ಇದ್ದವು. ಅದರಡಿಯಲ್ಲಿ  ಒಂದು ಟೀ ಶರ್ಟ್‌, ನೈಟ್‌ ಪ್ಯಾಂಟ್‌, ಎರಡು ಅಂಡರ್‌ ವೇರ್‌, ಎರಡು ಬನಿಯನ್‌, ಟವೆಲ್‌, ಒಂದೆರಡು ಕರ್ಚೀಫ್‌, ಬ್ರಷ್‌, ಟೂತ್‌ ಪೇಸ್ಟ್‌,  ಒಂದು ವಾರದ ಅವಶ್ಯಕತೆಗಳನ್ನೆಲ್ಲಾ ಅದು ಒಳಗೊಂಡಿತ್ತು. ಅದರಡಿ ಪ್ರಪಂಚದ ವಿವಿಧ  ಶಿಲಾಯುಗದ ಮಾಹಿತಿ ಪುಸ್ತಕಗಳು, ಭಾರತದ ಮೌರೇರ್‌ ಸಮಾಧಿಗಳಿಗೆ ಸಂಬಂಧಿಸಿದ ಕೆಲವು ಪುಸ್ತಕಗಳು ಇದ್ದವು. ಮಹೇಶ ಕೋರಿಯರ್‌ನಲ್ಲಿ ಬಂದಿದ್ದ  ಅಪ್ಪನ ಡೈರಿಯನ್ನು ತೆಗೆದುಕೊಂಡ,    ಅಪ್ಪ ಪ್ರತಿ ದಿನದ ಮುಖ್ಯ ಸಂಗತಿಗಳನ್ನು ಅದರಲ್ಲಿ  ದಾಖಲಿಸುತ್ತಿದ್ದರು. ಚಿಕ್ಕಂದಿನಿಂದಲೂ ಗಮನಿಸುತ್ತಿದ್ದ ಅವನು ಕುತೂಹಲದಿಂದ ಅದನ್ನು ತೆರೆದ, ಪ್ರತಿ ದಿನವೂ ತಮ್ಮ ಇತಿಹಾಸಕ್ಕೆ ಸಂಬಂಧಿಸಿದ ಓದು, ಸ್ನೇಹಿತರೊಂದಿಗಿನ ಚರ್ಚೆಯೇ ಪ್ರಮುಖವಾಗಿ ಬರೆದಿದ್ದರು.  ಮಹೇಶ ಎಲ್ಲವನ್ನೂ ಓದದೇ ಅವರು ಹಿರೇ ಬೆಣಕಲ್‌ಗೆ ಭೇಟಿ ನೀಡಿದ ಹಿಂದು- ಮುಂದಿನ ದಿನಗಳ ಡೈರಿಯ ಓದಲಾರಂಭಿಸಿದ.
ದಿನಾಂಕ: 02-01-2022
ನಿಜಕ್ಕೂ ಈ ಮೌರೇರ್‌ ಬೆಟ್ಟಗಳ ಇತಿಹಾಸವನ್ನು ಪ್ರತಿಯೊಬ್ಬ ಭಾರತೀಯ ತಿಳಿದುಕೊಳ್ಳಲೇಬೇಕು. ಜಗತ್ತು ಸ್ಟೋನ್‌ ಹೆಂಜ್‌ ಅನ್ನು ಶಿಲಾಯುಗದ ಅದ್ಭುತವೆಂದು ಕರೆಯುತ್ತಾರೆ. ನಾವು ನಮ್ಮ ಇಂತಹ ಅದ್ಭುತ ಶಿಲಾಯುಗದ ತಾಣವನ್ನು ಸಂರಕ್ಷಿಸುವುದರಲ್ಲಿ, ಜಗತ್ತಿಗೆ ತಿಳಿಸುವುದರಲ್ಲಿ ಸೋತಿದ್ದೇವೆ  ಅನಿಸುತ್ತಿದೆ.
ಮಹೇಶನಿಗೆ ಸ್ಟೋನ್‌ ಹೆಂಜ್‌ ಬಗ್ಗೆ ತಿಳಿದಿತ್ತು. ಅಪ್ಪ ಹೇಳಿದ ಮೌರೇರ್‌ ಬೆಟ್ಟಗಳ ಬಗ್ಗೆ ತಿಳಿದಿರಲಿಲ್ಲ. ಗೂಗಲ್‌ನಲ್ಲಿ ಇದರ ಕುರಿತು ಹುಡುಕಿದಾಗ ಇದು 3೦೦೦ ವರ್ಷಗಳ ಹಿಂದೆ ಇದ್ದಂತಹ ಶಿಲಾಯುಗ ಕಾಲದ ಸಮಾಧಿಗಳು, ಈ ಜಾಗ 1೦೦೦ ಕ್ಕೂ ಅಧಿಕ ಕುರುಹುಗಳನ್ನು ಇಲ್ಲಿಯವರೆಗೆ ಕಾಪಿಟ್ಟುಕೊಂಡಿದೆ, ಅದರಲ್ಲಿ ಶಿಲಾಯುಗ ಕಾಲದ  ಚಿತ್ರಗಳೂ ಇವೆ. ಈ ಚಿತ್ರಗಳು ಅವರು ಬೇಟೆಗೆ  ಕಬ್ಬಿಣವನ್ನು ಬಳಸಿದ, ಸಂತಸ ಸಮಯದಲ್ಲಿ ನೃತ್ಯ ಮಾಡುತ್ತಿರುವ ಕುರಿತು ಮಾಹಿತಿ ನೀಡುತ್ತವೆ. ಇದಕ್ಕೂ ಪ್ರಮುಖವಾಗಿ ಮಹಿಳೆಯೋರ್ವಳ ಹೆರಿಗೆಯ ಚಿತ್ರವೊಂದು  ಸಂಶೋಧಕರ ಸಂಶೋಧನೆಗೆ ಕೈ ಮಾಡಿ ಕರೆಯುತ್ತದೆ.  ಇದಲ್ಲದೆ   ವಿಶೇಷವಾಗಿ 2 ಮೀಟರ್‌ ವ್ಯಾಸವುಳ್ಳ ಅರ್ಧಗೋಳಾಕಾರದಲ್ಲಿರುವ ಶಿಲೆಯೊಂದಿದೆ.  ಈ ನಗಾರಿಯಾಕಾರದ ಶಿಲೆಯನ್ನು ಬಾರಿಸಿದಾಗ ಒಂದು ಕಿಲೋಮೀಟರ್‌ವರೆಗೂ ಧ್ವನಿ ಕೇಳಿಸುತ್ತದಂತೆ.  ಮಹೇಶನಿಗೆ  ಕುತೂಹಲ  ಹೆಚ್ಚಾಯಿತು.  ಮೊಬೈಲ್‌ ಬಿಟ್ಟು ಮತ್ತೆ ಡೈರಿಯ ಮುಂದಿನ ಪುಟ ತಿರುವಿದ.
 03-01-2022
ಈ ದಿನ ಎರಡನೇ ಬಾರಿ  ಮೌರೇರ್‌ ಬೆಟ್ಟಕ್ಕೆ ಹೊರಟೆ,  ಹೊಸಪೇಟೆಯಿಂದ  ಬಾಡಿಗೆ ಕಾರಿನಲ್ಲಿ ಹೋಗಲು ನಿರ್ಧರಿಸಿದ್ದರಿಂದ ಹೋಟೇಲಿನಿಂದಲೇ ಕಾರಿನವ ಪಿಕ್‌ಅಪ್‌  ಮಾಡಿದ.
ಹಿರೇ ಬೆಣಕಲ್‌  ಊರಿನ  ಸುಡುಗಾಡ್‌ ಗುಡದಪ್ಪನನ್ನು ಬೂದುಗುಂಪಿಯಲ್ಲಿ ‌ಕಾಯಲು ಹೇಳಿದ್ದೆ.  ಈ ಸುಡುಗಾಡ್‌ ಗುಡದಪ್ಪ ಈ ಮೌರೇರ್‌ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಖಾಯಂ ಗೈಡ್.‌  ಯಾರೇ ಹೊಸಪೇಟೆಗೆ ಬಂದರೂ ಯಾವುದೇ ಹೋಟೇಲ್‌ನಲ್ಲಿ ಕೇಳಿದರೂ ಗುಡದಪ್ಪನ ನಂಬರ್‌ ಕೊಡುತ್ತಿದ್ದರು.  ಕೊಪ್ಪಳದಿಂದ ಬೂದುಗುಂಪ ಮಾರ್ಗವಾಗಿ ಗಂಗಾವತಿಗೆ ಹೋಗುವ ಹೆದ್ದಾರಿಯಲ್ಲಿ 15 ಕಿಮೀ. ದೂರದಲ್ಲಿ ಎಡಕ್ಕೆ  ತಿರುಗಿದರೆ  ಹಿರೇಬೆಣಕಲ್‌ ಹಾದಿ. ಕಾರು ಹಿರೇ ಬೆಣಕಲ್‌ ತಲುಪಿದೊಡನೆ ಸ್ವಲ್ಪ ಹೊತ್ತು ಕಾಯಲು ಹೇಳಿ ಕೊಡಲಿ, ಉದ್ದನೆಯ ಕೋಲುಗಳನ್ನು ತೆಗೆದುಕೊಂಡು ಬಂದು ಕಾರು ಹತ್ತಿದ. ಹಿರೇ ಬೆಣಕಲ್‌ ದಾಟಿ ಚಿಕ್‌ ಬೆಣಕಲ್‌ ಹಾದಿಯಲ್ಲಿ ಸಾಗಿ  ನಂತರ ಬಲ ತಿರುವಿನ ಕಾಲು ಹಾದಿಯಲ್ಲಿ ತೋಟ, ಹೊಲಗಳನ್ನೆಲ್ಲಾ ದಾಟಿದರೆ  ಮೌರೇರ್‌ ಬೆಟ್ಟದ ಬುಡಕ್ಕೆ ಬಂದು ತಲುಪುತ್ತೇವೆ. ಬೆಟ್ಟದ ಮೇಲೆ  ಹೋಗಲು ಊರವರ ಸಹಾಯ ಬೇಕೇಬೇಕು. ಬೆಟ್ಟದಡಿಯಲ್ಲಿ ಪುರಾತತ್ವ ಇಲಾಖೆಗೆ ಸಂಬಂಧಿಸಿದ ತಾಣವೆನ್ನುವ ಬೋರ್ಡನ್ನು ಬಿಟ್ಟರೆ ಯಾವುದೇ ಬೇರೆ ಮಾಹಿತಿಯೂ ಇಲ್ಲ, ಹೆದರಿಕೊಳ್ಳುವಂತಹ ದಟ್ಟವಾದ ಕಾಡೇನು ಅಲ್ಲ.  ಕುರುಚಲು ಕಾಡು.  ಬೆಟ್ಟಗಳ ಸಾಲು..  ದಾರಿ ಕಾಣದೇ ಮಹೇಶ ನಿಂತಲ್ಲಿಯೇ ನಿಂತು ನೋಡತೊಡಗಿದ. ತುಂಗಭದ್ರ ಜಲಾಶಯದ ನೀರನ್ನು ಪಡೆದ ಭತ್ತದ ಗದ್ದೆಗಳು.  ಎತ್ತ ನೋಡಿದರತ್ತ ಹಸಿರೋ ಹಸಿರು.  ರೋಡಿನಿಂದ ಬೆಟ್ಟದ ಬುಡಕ್ಕೆ ಬರುವವರೆಗೆ ಕಾಲು ಹಾದಿ.
ಸುಡಗಾಡ್‌ ಗುಡದಪ್ಪ ಒಂದು ಕೊಡಲಿಯ ಜೊತೆ  ತನಗೆ ದಾರಿ ತೋರುತ್ತಾ ಮುಂದೆ ಹೋಗುತ್ತಿದ್ದ.  ಕೊಡಲಿಯೇಕೆ ಎಂದು ಕೇಳಲು   ಇಲ್ಲಿ ಚಿರತೆಗಳು, ಕರಡಿಗಳು ಇರುವುದರಿಂದ ರಕ್ಷಣೆಗಾಗಿ ಎಂದ. ಅವನೇ ಹೇಳುವಂತೆ ಸುಡಗಾಡ್‌ ಗುಡದಪ್ಪ ಒಬ್ಬ ವಿದುರ. ನೆಚ್ಚಿ, ಮೆಚ್ಚಿ ಮಾವನ ಮಗಳನ್ನು  ಮದುವೆಯಾದ.   ಗುಡದಪ್ಪನಿಗೆ  ಹೆಂಡತಿಯನ್ನು ಕಳೆದುಕೊಂಡಾಗ ಜಗತ್ತೇ ಹೊರೆಯಾಗಿ ಕಂಡಿತು.  ಹೆಂಡತಿಯ ಕಳೆದುಕೊಂಡ ನಂತರ ಅರೆ ಹುಚ್ಚನಂತೆ ಊರ ಗುಡಿಯಲ್ಲಿ, ಶಾಲೆಯ ಕಟ್ಟೆಯ ಮೇಲೆ ಮಲಗುತ್ತಿದ್ದನು.  ಹುಚ್ಚನಂತಿದ್ದ ಅವನ ಮೇಲೆ  ಮಕ್ಕಳು ಅವನ ಕಲ್ಲು ಎಸೆಯುವುದು, ಅವನ  ಬಟ್ಟೆ ಎಳೆಯುವುದು, ಮಲಗಿದಾಗ ಕೀಟಲೆ ಮಾಡುವುದು ಮಾಡತೊಡಗಿದಾಗ  ತಾಳಲಾದೇ, ಮೌರೇರ್‌ ಬೆಟ್ಟ ಹತ್ತಿ ಹಗಲೆಲ್ಲಾ ಅಲ್ಲಿಯೇ ಕಾಲ ಕಳೆಯುತ್ತಿದ್ದ,  ಜನ ಅವನ ಅವಸ್ಥೆ  ನೋಡಿ  ಮೌರೇರ್‌ ಸುಡುಗಾಡ್‌ ಕಾಯುತ್ತಿದ್ದವನನ್ನು ಸುಡಗಾಡ್‌ ಗುಡದಪ್ಪ ಕೆಲವೊಮ್ಮೆ ಮೌರೇರ್‌ ಗುಡದಪ್ಪ  ಎಂದು ಕರೆಯಲಾರಂಭಿಸಿದರು. ಅವನಿಗೆ ಹಗಲೆಲ್ಲಾ ಆ ಬೆಟ್ಟವೇ ಮನೆಯಾಗಿತ್ತು.  ಸುಧಾರಿಸಿದ ನಂತರ ತನ್ನ ಗುಡಿಸಲಿಗೆ ಹಿಂದಿರುಗಿದ್ದ.  ಜನ ಅಲ್ಲಿಗೆ ಬರುವ ಪ್ರವಾಸಿಗರಿಗೆ ಮೌರೇರ್‌ ಬೆಟ್ಟಕ್ಕೆ ಕರೆದುಕೊಂಡು ಹೋಗಲು ಸಹಾಯ ಕೇಳಿದಾಗ ಗುಡದಪ್ಪನನ್ನು ಗಂಟು ಹಾಕುತ್ತಿದ್ದರು.  ಹೀಗಾಗಿ ಪ್ರವಾಸಿಗರಿಗೆ ಅವನೇ ಖಾಯಂ ಗೈಡ್‌ ಆಗಿ ಬದಲಾಗಿದ್ದ. ಗುಡದಪ್ಪ ಊರಿಗೆ ಬರುವ ಮೊದಲು ಅವನಿಗೆ ಫೋನ್‌ ಮಾಡಿಯೇ ಬರುವ ಮಟ್ಟಿಗೆ ಅವನು ಹೆಸರುವಾಸಿಯಾಗಿದ್ದ. ಡೈರಿ  ಡೈರಿ ಮುಂದಿನ ಪುಟಕ್ಕೂ ಮುಂದುವರಿದಿತ್ತು.
ಮಹೇಶ ಪುಟ ತಿರುವುತ್ತಾ ಒಂದು ರೀತಿಯಲ್ಲಿ ಇಂತಹ ವಿಶೇಷ ಸ್ಥಳಗಳನ್ನು ತಲುಪಲು ಸುಲಭವಾಗಿ ಹೋಗುವಂತಿದ್ದರೆ ನಮ್ಮ ಜನ ಬಾಟಲಿ. ಪ್ಲಾಸ್ಟಿಕ್‌ ವಸ್ತುಗಳನ್ನು ಎಸೆದು  ಎಲ್ಲಿ  ಹಾಳು ಮಾಡುತ್ತಿದ್ದರೋ?  ಈ ಹೆದರಿಕೆ ಇರುವುದೇ ಒಳ್ಳೆಯದು ಎಂದುಕೊಂಡ.

ಗುಡದಪ್ಪ ಮುಂದೆ ಮುಂದೆ ಹೋದಂತೆಲ್ಲಾ ಹಿಂದೆ ಹಿಂದೆ ಹೋಗುತ್ತಿದ್ದೆ.  ದಾರಿಯ ಲವಲೇಶವೂ ಇಲ್ಲ.  ದನ ಕಾಯುವ ಹುಡುಗರು ಒಂದಿಬ್ಬರು ಭೇಟಿ ಆದರು. ಮೊದಲ ಗುಡ್ಡವನ್ನು ದೊಡ್ಡ ದೊಡ್ಡ ಕಲ್ಲುಗಳ ಸಂದಿಯಲ್ಲಿ ಕೆಲವೊಮ್ಮೆ ಕಲ್ಲುಗಳನ್ನು ಹತ್ತಿ, ಮುಳ್ಳುಕಂಟಿಗಳನ್ನು ಸರಿಸುತ್ತಾ ಹೋಗುತ್ತಿದ್ದೆ.  ಗುಡದಪ್ಪ ಅಲ್ಲಲ್ಲಿ ನಿಂತು ನನ್ನ ದಾರಿಯನ್ನು ಕಾಯುತ್ತಿದ್ದ. ಮೊದಲ ಬೆಟ್ಟ  ದಾಟಿದೊಡನೆ ಗುಡ್ಡಗಳಿಂದ ಆವೃತವಾದ ಮಧ್ಯ ಬಯಲಿನಂತಹ ಪ್ರದೇಶ. ಸಣ್ಣಗೆ ಹರಿಯುತ್ತಿದ್ದ  ನೀರಿನ ಹರಿವು.  ಮುಂದಿನ ಬೆಟ್ಟವನ್ನು ತೋರಿಸಿ ಗುಡದಪ್ಪ ಇದನ್ನು ದಾಟಬೇಕು ಎಂದ.  ನಾನು ಹೌಹಾರಿದೆ.  ಮತ್ತೆ ಮುಂದಿನ ಬೆಟ್ಟ ಏರತೊಡಗಿದೆವು. ಮೊದಲಿಗಿಂತಲೂ ಸ್ವಲ್ಪ ಕಡಿದಾಗೇ ಇತ್ತು.  ದಾರಿಯಿಲ್ಲದ ಕಲ್ಲುಗಳ ನಡುವೆ ದಾರಿ ಹುಡುಕುತ್ತಾ ನಡೆಯುವುದು ಕಷ್ಟವಾಯಿತು.   ಅರ್ಧ ಗಂಟೆಯ ಚಾರಣದ ನಂತರ ಎದೆ ಝಲ್ಲೆನ್ನುವಂತಿತ್ತು ದೃಶ್ಯ, ಅದೆಷ್ಟು ರುದ್ರ ಭಯಂಕರ  ಅಂತರ್‌ ಜಾಲದ ಮಾಹಿತಿಯಂತೆ 49 ಎಕರೆಗಳಷ್ಟು ವಿಸ್ತಾರವನ್ನು   ಮೊದಲ ಬಾರಿಗೆ ನೋಡಿದವರಿಗೆ   ಭೂತಗಳು ವಾಸಿಸುವ   ಊರಿಗೆ ಬಂದಿದ್ದೇವೆ ಎನಿಸದೇ ಇರದು. ಎತ್ತ ನೋಡಿದರತ್ತ ಒಡೆದ ಬಂಡೆಗಳು ಕೆಲವು ದೊಡ್ಡವು, ಕೆಲವು ಚಿಕ್ಕವು ಯಾವುದೋ ದೊಡ್ಡ ಪ್ರಕೃತಿ ವಿಕೋಪವೊಂದು ಉಂಟಾಗಿ ಹಾಳಾದ ಊರಿನಂತಿತ್ತು.

ಮಹೇಶನಿಗೆ ಅಪ್ಪನ ತಲೆಯ ಗಾಯದ್ದೇ ಚಿಂತೆ, ಕರಡಿಗಳು ಸುಖಾ  ಸುಮ್ಮನೇ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ.  ಅವುಗಳ ಆವಾಸಕ್ಕೆ, ಆಹಾರಕ್ಕೆ ತೊಂದರೆ ಆದರೆ ಮಾತ್ರ ದಾಳಿ ಮಾಡುತ್ತವೆ. ದಾಳಿ ಮಾಡಿದರೂ ತರಚಿದ ಪರಚಿದ ಗಾಯಗಳಿರಬೇಕಾಗಿತ್ತು. ಆದರೆ ಅಂತಹ ಪ್ರಾಣಾಂತಿಕ ಗಾಯಗಳಿಲ್ಲ. ಪೋಲೀಸರು ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಬಿದ್ದಿರಬೇಕು ಎಂದು ಫೈಲ್‌ ಕ್ಲೋಸ್‌ ಮಾಡಿದ್ದ ಅವರು ನೀಡಿದ ವಿವರ ತನ್ನ ಅನುಮಾನವನ್ನು ಸಂಪೂರ್ಣವಾಗಿ  ಹೋಗಲಾಡಿಸಿರಲಿಲ್ಲ. 

ಅಲ್ಲಲ್ಲಿ ಪುಟ್ಟ ಪುಟ್ಟ ಕಲ್ಲುಚಪ್ಪಡೆಯಿಂದ ರಚನೆಯಾದ ಗುಡಿಸಿಲಿನಂತಹ ಆಕಾರಗಳು.  ಇತಿಹಾಸಕಾರರು ಈ ಆಕಾರಗಳನ್ನು  ಡಾಲ್ಮೆನ್ಸ್‌ಗಳೆಂದು ಕರೆದಿರುವರು.  ಡಾಲ್ಮೆನ್‌ಗಳೆಂದರೆ ಟೇಬಲ್‌ ಎಂಬ ಅರ್ಥವಿದ್ದರೂ,  ಇಲ್ಲಿ  ಸಮಾಧಿಗಳು ಎಂಬ ಅರ್ಥವಿದೆ.  ಈ ಸಮಾಧಿಗಳು  ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಂಡೆಗಳನ್ನು ನಿಲ್ಲಿಸಿ ಅದರ ಮೇಲೊಂದು ಬಂಡೆಯನ್ನು ಹಾಸಿ ಟೇಬಲ್‌ ಆಕಾರದಲ್ಲಿರುತ್ತವೆ. ಜಗತ್ತಿನಾದ್ಯಂತ 12 ವಿವಿಧ ಆಕಾರದ ಡಾಲ್ಮೆನ್‌ಳನ್ನು ಕಾಣಬಹುದಾದರೆ ಎಂಟನ್ನು ಇಲ್ಲಿಯೇ ನೋಡಬಹುದು.  ಅಚ್ಚರಿಯೆಂದರೆ ಕೆಲವೊಂದು ಡಾಲ್ಮೆನ್ಸ್‌ಗಳಲ್ಲಿ ಸಮಾಧಿಯ ಸುತ್ತಲಿನ ಚಪ್ಪಡಿಗಳಲ್ಲಿ  ಒಂದು ಶಿಲಾ ಚಪ್ಪಡಿಯಲ್ಲಿ  ವೃತ್ತಾಕಾರವಾಗಿ ಕಿಂಡಿಯನ್ನು ನಿರ್ಮಿಸಿರುವುದು.  ಇವರು ಚಪ್ಪಡಿ  ಒಡೆಯದಂತೆ ಕೊರೆದ ವೃತ್ತಾಕಾರದ ಭಾಗವೂ ಅಲ್ಲಿಯೇ ಸಿಗುತ್ತದೆ.  ಅಂದರೆ  ದೊಡ್ಡ ದೊಡ್ಡ ಬಂಡೆಗಳನ್ನು ಚಪ್ಪಡಿಗಳಾಗಿಸುವ ಚಪ್ಪಡಿಗೆ ರಂಧ್ರ ಕೊರೆಯುವ ಇವರ ತಂತ್ರಜ್ಞಾನ ಅದ್ಭುತವೆನಿಸುತ್ತದೆ.
ಮಹೇಶನಿಗೆ ಓದುತ್ತಾ ಹೋದಂತೆ ಯಾವುದೋ ಪತ್ತೇದಾರಿ ಕಾದಂಬರಿ ಓದಿದಂತಾಗುತ್ತಿತ್ತು. ಓದುತ್ತಾ ಕುಳಿತ ಅವನಿಗೆ ಹಸಿವಾಗಿ ಸಮಯದ ಕಡೆ ನೋಡಿದ.  ಮಧ್ಯಾಹ್ನದ ಊಟದ ಸಮಯ ಮೀರಿದ್ದರಿಂದ  ಉಪಹಾರ ಸೇವಿಸಿ ಬಂದರಾಯಿತೆಂದು ಹೊರಗೆ  ಹೊರಟ.  ಒಬ್ಬನೇ ಬೆಳಗಿನಿಂದ ಇದ್ದು ಬೇಸರವಾಗಿ  ಗೆಳೆಯ ಅತೀಫ್‌ನಿಗೆ ಫೋನ್‌ ಮಾಡಿದ.  ಅತೀಫ್‌ ಮಹೇಶನಂತೆ ಪ್ರೌಢ ಶಾಲಾ ಶಿಕ್ಷಕನಾಗಿದ್ದ. ವ್ಯತಾಸವೆಂದರೆ ಮಹೇಶ ಗಣಿತ ಶಿಕ್ಷಕನಾದರೆ ಅವನು ಸಮಾಜ ವಿಜ್ಞಾನದ ಶಿಕ್ಷಕ.  ಆಡು ಮಲ್ಲೇಶ್ವರದ ತಿರುವಿನಲ್ಲಿದ್ದ ಟೀ ಸ್ಟಾಲ್‌ಗೆ ಬರಹೇಳಿ ತಾನು ಆ ಕಡೆ ಹೊರಟ.  ಬೈಕ್‌ನಲ್ಲಿ  ಮಹೇಶ  ತಲುಪುವುದರೊಳಗೆ ಅತೀಫ್‌  ಹೊರಗೆ ನಿಂತಿದ್ದ.
“ಹ್ಯಾಗಿದ್ದೀಯಾ..” ಎಂದು ಅತೀಫ್‌ ಕೇಳುವುದೊಂದೇ ತಡ; ಅತೀಫನ ಕೈ  ಬಿಗಿಯಾಗಿ ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು  ದುಃಖವನ್ನು ಕಷ್ಟಪಟ್ಟು ತಡೆಹಿಡಿದು ಚೆನ್ನಾಗಿದ್ದೇನೆನ್ನುವಂತೆ ತಲೆ ಆಡಿಸಿದ.
 ಅತೀಫ್‌ನಿಗೆ ಅವನ ಮುಖ ನೋಡುತ್ತಲೇ ಅವನು ಉಂಡಿಲ್ಲವೆಂದು  ಗೊತ್ತಾಯಿತು. ಇಬ್ಬರಿಗೂ  ಇಡ್ಲಿ ತರಲು ಹೋಟೇಲ್‌ ಮಾಣಿಗೆ  ಹೇಳಿ ಮಹೇಶ ಕುಳಿತ ಟೇಬಲ್ಲಿನ ಎದುರು ಕುಳಿತು ‘ಹೇಳು ಏನ್‌ ವಿಷಯ,  ಅಮ್ಮ ಹ್ಯಾಗಿದ್ದಾರೆ?ʼ… ಅಮ್ಮನ್ನ ಚಿಕ್ಕಮ್ಮ  ಶಿವಮೊಗ್ಗಕ್ ಕರ್ಕೊಂಡ್ಹೋದ್ರು ಮಂಜನ ಕಾರಿನಲ್ಲಿ ಕಳುಹಿಸಿಕೊಟ್ಟೆʼ… ‘ಒಳ್ಳೆದಾಯಿತು, ಅಮ್ಮ ಇಲ್ಲೇ ಇದ್ದಿದ್ದರೆ  ಹಳೇ ನೆನಪುಗಳಿಂದ ಹೊರಬರುತ್ತಿರಲಿಲ್ಲ.ʼ
 ಟಿಫಿನ್‌ ಮಾಡಿದ ನಂತರ ಮಹೇಶ ಏನೋ ಯೋಚಿಸಿದವನಂತೆ ಅತೀಫ್‌ನನ್ನು ಮನೆಗೆ ಕರೆದ. ಸರಿ ಎಂದು ಅತೀಫ್‌ ಮಹೇಶನನ್ನು ಹಿಂಬಾಲಿಸಿದ. ಮಹೇಶನಿಗೆ ಕುಳಿತುಕೊಳ್ಳಲು ಹೇಳಿ, ಅಪ್ಪಾಜಿಯ ಡೈರಿಯನ್ನು  ಓದಲು ಹೇಳಿದ ವಿಶೇಷವಾಗಿ ಮೌರೇರ್‌ ಸಮಾಧಿಗಳ ಬಗ್ಗೆ ಬರೆದ ಜನವರಿ  2,3,4 ದಿನಾಂಕದಂದು ಮಹೇಶ ಡೈರಿಯನ್ನು ಪಡೆದು ಓದಲಾರಂಭಿಸಿದ, ಕೆಲ ಹೊತ್ತು ಅದರೊಳಗೇ ತಲ್ಲೀನನಾದ.  ಅವನ ಓದು ಮುಗಿದಿದೆ ಎನ್ನುವಂತೆ ತಲೆ ಎತ್ತಿದೊಡನೆ ‘ನೀನು ಇತಿಹಾಸದ ವಿದ್ಯಾರ್ಥಿ ಹಾಗಾಗಿ ಕೇಳುತ್ತೇನೆ, ಇಂತಹ ಅವಶೇಷಗಳು ಮತ್ತೆಲ್ಲಿ ಸಿಗುತ್ತವೆ?ʼ.  ನನಗೆ ನೆನಪಿರೋ ಹಾಗೆ ಕೋರಿಯಾದಲ್ಲಿ ಪ್ರಪಂಚದ ಹೆಚ್ಚು ಡಾಲ್ಮೆನ್‌ಗಳನ್ನು ನೋಡಬಹುದು, actually ಡಾಲ್ಮೆನ್‌  ಈ ಶಬ್ದ ಟೇಬಲ್‌ ಆಕಾರ ಎಂಬುದನ್ನು ಸೂಚಿಸುತ್ತದೆ.  ಹಾಗೂ ಈ ಸಮಾಧಿಗಳೂ ಟೇಬಲ್‌ ಆಕಾರದಲ್ಲಿಯೇ ಇವೆ.ʼ
‘ಅತೀಫ್‌ ಅಪ್ಪಾಜಿ ತಮ್ಮ ಡೈರಿಯಲ್ಲಿ ಕೆಲವೊಂದು ಅನುಮಾನಗಳನ್ನು ಬರೆದಿದ್ದಾರೆ, ಇವು ಸಮಾಧಿಗಳೇ ಆಗಿದ್ದರೆ  ಸಾವಿರಾರು ಕಿ.ಮಿ. ಅಂತರದಲ್ಲಿರುವ ಇವರೆಲ್ಲರ ಸಂಸ್ಕಾರದ ಆಚರಣೆಗಳು ಒಂದೇ ರೀತಿಯಲ್ಲಿ ಇರಲು ಹೇಗೆ ಸಾಧ್ಯ,  ಇವರ ಈ ಡಾಲ್ಮೆನ್‌ಗಳ ಆಕಾರಗಳೆಲ್ಲವೂ ಟೇಬಲ್‌ ಆಕಾರದಲ್ಲಿಯೇ ಇರಲು ಕಾರಣಗಳೇನು?  ಮನುಜ ನಿರ್ಮಿತ ಎಂದು ಕರೆಯಲ್ಪಡುವ ಇಂತಹ ದೊಡ್ಡ ದೊಡ್ಡ ಕಲ್ಲುಗಳನ್ನು ಯಂತ್ರಗಳ ಸಹಾಯವಿಲ್ಲದೆ ನಿಲ್ಲಿಸಿದ್ದಾದರೂ ಹೇಗೆ, ಹಿರೇ ಬೆಣಕಲ್‌ನ  ತಬಲದಾಕಾರದ ರಚನೆ, ದೊಡ್ಡ ದೊಡ್ಡ ಹಲಗೆಗಳಂತಿರುವ ಕಲ್ಲಿನ ಹಾಸುಗಳನ್ನು ಬಂಡೆಗಳಿಂದ ಕೊರೆದ ಬಗೆ.. ನಮಗೆಲ್ಲಾ ದೊಡ್ಡ ಪ್ರಶ್ನೆಯೇ ಸರಿ ಈ ಕುರಿತು ನೀನೇನು ಹೇಳುತ್ತೀಯಾ?ʼ
‘ಅಪ್ಪಾಜಿ ಎತ್ತಿರುವ ಪ್ರಶ್ನೆಗಳು ನಮ್ಮೆಲ್ಲರ ಪ್ರಶ್ನೆಗಳೂ ಹೌದು,  ಅದೇ ನೋಡು ನಾಗರೀಕತೆಗಳ ಕಾಲದ ಐತಿಹಾಸಿಕ ಕುರುಹುಗಳು ಒಂದೊಕ್ಕೊಂದು ಭಿನ್ನವೇ ಇದ್ದರೂ ಹೋಲಿಕೆ ಇವೆ. ನೂರಿನ್ನೂರು ಕಿ.ಮೀ ಅಂತರದಲ್ಲಿ ಶವ ಸಂಸ್ಕಾರ ಮಾಡುವ ರೀತಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿರುವಾಗ ಇವರ ಆಚರಣೆಗಳಲ್ಲಿರುವ ಸಾಮ್ಯತೆ ಆಶ್ಚರ್ಯವೆನಿಸದೇ ಇರದು.  ಜೊತೆಗೆ ಸ್ಟೋನ್‌ ಹೆಂಜ್‌ ಸಹ ಇದೇ ಆಕಾರದ ಒಂದು ಮಾದರಿ. ನನಗೆ, ಈ ಆಕೃತಿಗಳ ಎತ್ತರಗಳು ಬೇರೆ ಬೇರೆ ಆಗಿವೆಯೇ ಹೊರತು ಉದ್ದೇಶ ಮಾತ್ರ ಒಂದೇ ಎಂಬುದು ಸ್ಪಷ್ಟʼ  ಮಹೇಶನಿಗೆ ಅಪ್ಪನನ್ನು ಕಳೆದುಕೊಂಡಾಗಿನಿಂದ ನೀರು, ಆಹಾರ ವಿಶ್ರಾಂತಿ ಇವುಗಳ ಕಡೆ ಆಸಕ್ತಿಯೇ ಕಡಿಮೆಯಾಗಿ ಯಾಂತ್ರಿಕವಾಗಿ ದಿನ ಕಳೆಯುತ್ತಿದ್ದ. ಅವನಿಗೂ ವಾತಾವರಣ ಬದಲಾದಂತಾಗುತ್ತದೆ ಎನ್ನಿಸಿ  ಅತೀಫ್‌  ಮೌರೇರ್‌ ಬೆಟ್ಟಕ್ಕೆ ಹೋಗೋಣವಾ ಎಂದು ಸುಮ್ಮನೆ ಹೇಳಿದ.  ಕ್ಷಣ ಮಾತ್ರವೂ ತಡಮಾಡದೇ ಮಹೇಶ ನಾಳೆಯೇ ಹೋಗೋಣ.. ಎಂದ.
*****
 ಹೊಸಪೇಟೆಯಲ್ಲಿ ಉಪಹಾರ ಸೇವಿಸಿ ಬಂದಿದ್ದರಿಂದ ಸ್ವಲ್ಪ ನಿರಾಳವೆನಿಸಿತ್ತು. ಬೂದುಗುಂಪದಿಂದ  ಗೂಗಲ್‌ ಮ್ಯಾಪ್‌ ದಾರಿ ತೋರಿದಂತೆ 20 ನಿಮಿಷದಲ್ಲಿ ಹಿರೇ ಬೆಣಕಲ್‌ನಲ್ಲಿದ್ದರು.  ಅಲ್ಲಿಯೇ ನಿಂತಿದ್ದ ಒಬ್ಬ ಹುಡುಗನಿಗೆ ‘ಸುಡುಗಾಡ ಗುಡದಪ್ಪ ಅಂತ ಇದ್ದಾರಲ್ಲ ಅವರ ಮನೆ ಎಲ್ಲಿದೆʼ ಎಂದು ಕೇಳಿದೊಡನೆ ‘ಅವರ ಮನೆ ಕೇರಿಕಡೆ ಬರುತ್ತದೆʼ ಎಂದವನಿಗೆ ‘ದಯವಿಟ್ಟು ಅವರನ್ನು ಕರೆದುಕೊಂಡು ಬರುತ್ತೀಯಾ.. ನಾವು ಚಿತ್ರದುರ್ಗದಿಂದ ಬಂದಿದ್ದೇವೆʼ ಎಂದಾಗ ‘ಆಯ್ತು  ಇಲ್ಲೇ  ಇರಿʼ ಎಂದಾಗ ಆ ಊರ ಅಂಚಿನಲ್ಲಿದ್ದ ಸರಕಾರಿ ಶಾಲೆಯಲ್ಲಿ ಕುಳಿತು ಗುಡದಪ್ಪನನ್ನು ಕಾಯತೊಡಗಿದರು.  ಕೆಲವು ನಿಮಿಷಗಳಲ್ಲಿ ಪಂಚೆ  ಬನಿಯನ್‌ನಲ್ಲಿದ್ದ 50 ರ ಆಸು ಪಾಸಿನ ವ್ಯಕ್ತಿಯೊಬ್ಬನನ್ನು ಆ ಯುವಕ ಕರೆದುಕೊಂಡು ಬಂದ.  ‘ನಾನೇ ಗುಡದಪ್ಪ  ಹೇಳಿ ಏನಾಗಬೇಕುʼ ಎಂದ ‘ನನ್ನೆಸರು ಅತೀಫ್‌, ಇವರು ಮಹೇಶ ನಾವು ಚಿತ್ರದುರ್ಗದಿಂದ ಬಂದಿದ್ದೇವೆ.  ಮೊನ್ನೆ ನಾಗರಾಜ್‌ ತೀರ್ಕೊಂಡ್ರಲ್ಲ ಇವರ ತಂದೆಯವರುʼ ಹಾಗೇ ಹೇಳಿದ್ದೇ ತಡ ಗುಡದಪ್ಪ ‘ನಾನ್‌ ಹೇಳಿದ್ದೆ ಅವ್ರಿಗೆ… ಒಬ್ರ ಹೋಗ್ಬ್ಬಾಡ್ರಿ ಅಲ್ಲೆಲ್ಲ ಅಂತ.
ಮೊದಲೆರಡು ಸಲ ನನ್‌ ಕರ್ಕೊಂಡ್‌ ಹೋದ್ರು, ಮರುದಿನ ನಾನು ಅರ್ಜೆಂಟಾಗಿ ಬೇರೆ ಕಡೆ ಹೋಗೋದಿತ್ತು.  ಹಾಗಾಗಿ ನಾಡಿದ್ದು ಹೋಗೋಣ ಎಂದೆ. ಆದ್ರೆ ನನ್ನ ಮಾತ್‌  ಕೇಳ್ಲಿಲ್ಲ.  ಅಲ್ಲಿಯೇ ಇದ್ದ ಒಬ್ಬ ದನ ಕಾಯೋ ಹುಡುಗನ್ನ ಕರೆದುಕೊಂಡು  ಹೋದ್ರುʼ ಎಂದು ಕಣ್ಣಲ್ಲಿ ನೀರು ತುಂಬಿಕೊಂಡ.  ಅತೀಫ್ ಅವರನ್ನು  ಕುಳಿತುಕೊಳ್ಳುವಂತೆ ‌ ಹೇಳಿದಾಗ  ಇವರ ಪಕ್ಕದಲ್ಲಿಯೇ ಕಂಬಕ್ಕೆ ಒರಗಿ ಕುಳಿತ. ‘ಟಿ.ವಿ ಯಲ್ಲಿ ಏನೇನೋ ತೋರಿಸ್ತಿದ್ದಾರಲ್ಲಾ .. ನಿಜವಾಗ್ಲೂ ನಡೆದದ್ದೇನು?ʼ ಅವರು ಹಾಗೇ ಸುಳ್ಳು ಹೇಳ್ತಿದ್ದಾರೆ ಸಾರ್.‌  ಸ್ವಲ್ಪ ದೂರದಲ್ಲಿ ದನಕಾಯುತ್ತಿದ್ದ ಹುಡುಗರು ಊರಿಗೆ ಮಾಹಿತಿ ತಿಳಿಸಿದ್ದರು.  ನಂತರ ನಮ್ಮೂರಿನವರೇ ಹೆಣ ಜತನದಿಂದ ಕಾದು ಪೋಲೀಸರಿಗೆ ಹೇಳಿ ಕಳುಹಿಸಿದ್ದು.ʼ ಮಹೇಶನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಸ್ವಲ್ಪ ಹೊತ್ತು ಅತೀಫ್‌, ಗುಡದಪ್ಪ  ಮಹೇಶನನ್ನೇ ನೋಡುತ್ತಾ ಕುಳಿತಿದ್ದರು.  ಸ್ವಲ್ಪ ಹೊತ್ತಿನ ನಂತರ ‘ಮೌರೇರ್‌ ಅಂದ್ರೆ ಯಾವ ಜನ? ಇವರ ಬಗ್ಗೆ ನಿಮಗೇನಾದ್ರು ತಿಳಿದಿದೆಯಾ?ʼ ಎಂದು ಕೇಳಿದಾಗ ‘ನಮ್ಮೂರಲ್ಲಿ ನಮ್ಮ ಹಿರೀಕರಿಂದಲೂ ಕೇಳಿದ ಮಾಹಿತಿ ಪ್ರಕಾರ ಅದೊಂದು ಕುಳ್ಳ ಜನಾಂಗ ಅವು ಅವರ ಸಮಾಧಿಗಳು, ಅವರ ಆತ್ಮಗಳು ಆ ಸಮಾಧಿಗಳನ್ನು ಕಾಯುತ್ತಿರುತ್ತವೆ, ಹಾಗಾಗಿ ಯಾರೂ ನಮ್ಮೂರವರು ಹೆಚ್ಚಾಗಿ ಹೋಗುವುದಿಲ್ಲ. ಇತ್ತೀಚೆಗೆ ಹೊರಗಿನವರು ಬಂದು ಹೋಗುವವರು ಜಾಸ್ತಿ ಆಗಿದೆ, ಹೊರಗಿನವರೇ ನಿಧಿಯ ಆಸೆಗೆ ಸಮಾಧಿಗಳನ್ನು ಹಾಳು ಮಾಡಿದ್ದಾರೆʼ ಎಂದ. ‘ಇವತ್ತು ನಮ್ಜೊತೆ ಬರೋಕ್ಕಾಗುತ್ತಾ ನಾವೂ ನೋಡಬೇಕು.ʼ ಎಂದ ಅತೀಫ್.‌ ‘ಆಯ್ತು ಹೋಗೋಣ. ನಾನೊಮ್ಮೆ ಮನೆಗೆ ಹೋಗಿ ಬರ್ತೇನೆ.. ಒಂದ್‌ ಹತ್ತು ನಿಮಿಷ ʼ ಎಂದು, ಮನೆಗೆ ಹೊರಟ.  ಹತ್ತು ನಿಮಿಷದ ನಂತರ ಒಂದು ಕೊಡಲಿ, ಒಂದೆರಡು ದೊಣ್ಣೆ, ಜೊತೆಗೆ ಒಬ್ಬ ಯುವಕನನ್ನು ಕರೆದುಕೊಂಡು ಬಂದ.  ಅಲ್ಲಿಗೆ ಒಬ್ಬರೂ ಇಬ್ರೂ ಹೋಗೋದು ಒಳ್ಳೇದಲ್ಲಾ ಸರ್‌ ಗುಂಪಾಗಿ ಹೋಗಬೇಕು.  ದೊಣ್ಣೆ, ಕೊಡಲಿಗಳು ರಕ್ಷಣೆಗೆ ಎಂದು ಅರ್ಥ ಮಾಡಿಕೊಂಡ ಅತೀಫ್.‌ ಮಹೇಶ ಕಾರಿನೆಡೆ ನಡೆದರು.  ಹಿಂದೆ ಗುಡದಪ್ಪ ಜೊತೆಗಿದ್ದ ಯುವಕನೊಂದಿಗೆ ಕುಳಿತರೆ ಡ್ರೈವಿಂಗ್‌ ಸೀಟಿನಲ್ಲಿ ಅತೀಫ್‌, ಪಕ್ಕದಲ್ಲಿ ಮಹೇಶ ಕುಳಿತರು. ಕಾರು ಹತ್ತೇ ನಿಮಿಷದಲ್ಲಿ ಮೌರೇರ್‌ ಬೆಟ್ಟದಡಿಯ ಹೊಲಗಳಲ್ಲಿತ್ತು.
ಸಾವಿರ ಸಾವಿರ ವರ್ಷಗಳಿಂದ ಬಿಸಿಲು, ಮಳೆ, ಗಾಳಿ, ಗುಡುಗು, ಸಿಡಿಲುಗಳ ಹೊಡೆತಕ್ಕೆ ಬೆದರದೇ ಬೆಟ್ಟಗಳ ಸಾಲು ಆಗಸಕ್ಕೆ ಮುಖಮಾಡಿದ್ದವು. ತನ್ನೊಳಗೆ ಅಡಗಿಸಿಕೊಂಡಿರುವ ಒಂದೊಂದು ಕಾಲದ ಪುಟಗಳನ್ನು ಕಲ್ಲುಕಲ್ಲುಗಳಲ್ಲಿ ಹುಡುಕಲು ಆಹ್ವಾನಿಸುವಂತೆ  ಎರಡೂ ಕೈಗಳನ್ನು ಚಾಚಿದಂತಿತ್ತು ಆ ಏಳು ಬೆಟ್ಟಗಳ ಸಾಲು. ‘ಎಷ್ಟು ಸಮಯ ಬೇಕು ಮೇಲೆ ತಲುಪಲುʼ ‘ಸರಿ ಸುಮಾರು ಒಂದು ಗಂಟೆʼ ಆಗಬಹುದು.  ಎಲ್ಲರ ಕೈಯಲ್ಲೂ ಒಂದೊಂದು ದೊಣ್ಣೆಯನ್ನೂ ನೀಡಿ, ಆಹಾರದ ಲಗೇಜನ್ನು ಜೊತೆಗಿದ್ದ ಯುವಕನಿಗೆ ನೀಡಿ ‘ಬನ್ನಿ ಹೋಗುವʼ ಎಂದು ಮುಂದೆ ಮುಂದೆ ಗುಡದಪ್ಪ ನಡೆದ. ಅವನ ಹಿಂದೆ ಮಹೇಶ, ಮಹೇಶನ ಹಿಂದೆ ಅತೀಫ, ಅತೀಫನ ಹಿಂದೆ ಯುವಕ ಅವನನ್ನು ಹಿಂಬಾಲಿಸಿದರು.  ದಾರಿಯೇ ಇಲ್ಲದ ದಾರಿಯಲ್ಲಿ ಕಲ್ಲುಗುಂಡುಗಳನ್ನು ದಾಟಿ, ಬಂಡೆಗಳ ಮೇಲೆ, ಮುಳ್ಳು ಕಂಟಿಗಳ ಮಧ್ಯ ನಡೆಯುತ್ತಿದ್ದರೆ  ಕಾಡಿನಲ್ಲಿ ದಾರಿತಪ್ಪಿದವರು ದಾರಿ ಹುಡುಕುವಂತಿತ್ತು.  ಅವರ ನಡಿಗೆ.
ಮುಕ್ಕಾಲು ಗಂಟೆಯಲ್ಲಿ ಅವರು ಸಮಾಧಿಗಳ ಪಳಿಯುಳಿಕೆಗಳ  ಸ್ಥಳಕ್ಕೆ ತಲುಪಿದ್ದರು.  ಅತೀಫ ಈ ಎತ್ತರದಲ್ಲಿ ಅವರು ರಚಿಸಿರುವ ಸ್ಮಶಾನ ಸಾಮ್ರಾಜ್ಯವನ್ನು ನೋಡಿದೊಡನೆ ದಿಗ್ಮೂಢನಾಗಿದ್ದ.  ಬಹಳ ಸಮಯ ಒಂದೊಂದೇ  ಡಾಲ್ಮೆನ್‌ಗಳನ್ನು ಇಬ್ಬರೂ ಅವಲೋಕಿಸುತ್ತಿದ್ದರು.  ರಂಧ್ರಗಳಿರುವ ಡಾಲ್ಮೆನ್‌ಗಳ ಪಕ್ಕದಲ್ಲಿ ಬಿದ್ದ ವೃತ್ತಾಕಾರದ ದೊಡ್ಡ ಬಿಲ್ಲೆಯನ್ನು ವೃತ್ತಾಕಾರಕ್ಕೆ ಜೋಡಿಸಲು ನೋಡಿದರು.  ಸ್ವಲ್ಪವೇ ಕಡಿಮೆಯಿದ್ದರೂ ಅದರದೇ ಭಾಗವಾಗಿರುವುದನ್ನು ಮನಗಂಡರು. ಹಾಗೆಯೇ ಮುಂದೆ ಸಾಗಿದಾಗ ಗುಡದಪ್ಪ ಗವಿಯಂತಿಹ ನೆರಳಿಗೆ ಕರೆತಂದು ಅಲ್ಲಿಯೇ ಇದ್ದ  ಚಿತ್ರಗಳನ್ನು ತೋರಿಸಿದ. 3000 ವರ್ಷಗಳಿಂದ ಉಳಿದಿರುವ ಆ ಬಣ್ಣವನ್ನು ನೋಡಿ ಇಬ್ಬರಿಗೂ ಆಶ್ಚರ್ಯವಾಯಿತು. ಸ್ವಲ್ಪ ನೀರನ್ನು ಆ ಚಿತ್ರಗಳಿಗೆ ಎರಚಿದಾಗ  ಚಿತ್ರದ ಬಣ್ಣ ಗಾಢವಾಗಿ ಚಿತ್ರ ಹೆಚ್ಚು ಸ್ಪಷ್ಟವಾಯಿತು. ಅಲ್ಲಿಯೇ ಎಲ್ಲರೂ ಕುಳಿತು ತಂದಿದ್ದ ಆಹಾರವನ್ನು ಬಿಡಿಸಿ  ತಿನ್ನುತ್ತಾ ಬಹಳ ಹೊತ್ತು ಇದ್ದು ನಂತರ ಚಿತ್ರಗಳನ್ನು ನೋಡುತ್ತಾ ಕಲ್ಲು ಬಂಡೆಯ  ಮೇಲೆಯೇ ಮಲಗಿದರು.  ಯಾವುದೋ ಲೋಕಕ್ಕೆ ಬಂದಂತಾಗಿತ್ತು ಅವರಿಗೆ. ‘ಸಮಯ 3 ಗಂಟೆ ದಾಟಿದೆ,  ಬನ್ನಿ ಇನ್ನೂ ಸ್ವಲ್ಪ ಮುಂದೆ ಹೋಗುವʼ ಎಂದು ಗುಡದಪ್ಪ  ಹೇಳಿದಾಗಲೇ ಎಲ್ಲರೂ ಎದ್ದದ್ದು.
ಸಮತಟ್ಟಾಗಿದ್ದ ಪ್ರದೇಶದಲ್ಲಿ ಗುಡದಪ್ಪ ಮುಂದೆ ಹೋದಂತೆ ಎಲ್ಲರೂ ಹಿಂಬಾಲಿಸಿದರು.  ಸ್ವಲ್ಪ ದೂರ ನಡೆದು ನಿಂತು ಗುಡದಪ್ಪ ‘ಅಗೋ ಅಲ್ಲಿ ನೋಡಿ  ನಗಾರಿಯಾಕಾರದ ಕಲ್ಲುʼ ಎಂದು ತೋರಿಸಿದ. ‘ಅದನ್ನು ಬಾರಿಸಿದರೆ ಒಂದು ಕಿ.ಮಿ. ಗೂ ಹೆಚ್ಚು ದೂರದವರೆಗೆ ಕೇಳುತ್ತದಂತೆʼ  ಎಂದ ‘ಅಲ್ಲಿಗೆ ಹೋಗೋಣವಾʼ ಎಂದ ಅತೀಫ.. ‘ಬೇಡ ಬಹುಶಃ ಅದನ್ನು ನೋಡಬೇಕೆಂದೇ ನಿಮ್ಮ ತಂದೆಯವರು ಸಮಯದ ಪರಿವೇ ಇಲ್ಲದೇ ಸಾವಿಗೆ ಈಡಾದದ್ದು. ದನ ಕಾಯುವ ಹುಡುಗ  ಅಲ್ಲಿಗೆ ಬರುವುದಿಲ್ಲವೆಂದಾಗ ಒಬ್ಬರೇ ಅಲ್ಲಿಗೆ ಹೋಗಿ ಹಿಂತಿರುಗಿ ಬರುವಾಗ  ಸ್ವಲ್ಪ ಮುಂದಿದ್ದ ಜಾಗ ತೋರಿಸಿ ಇದೇ ಜಾಗದಲ್ಲಿ ಕರಡಿ ದಾಳಿ ಮಾಡಿದೆ. ಕರಡಿ ನಿಮ್ಮ ತಂದೆಯವರಿಗೆ ಅಂಥ ಗಾಯವನ್ನೇನು ಮಾಡಿಲ್ಲ. ಆದರೆ ಆ ಹೆದರಿಕೆಯಿಂದಲೇ ಅವರಿಗೆ ಹೃದಯಾಘಾತವಾಗಿದೆ.  ಇದೇ ಜಾಗದಲ್ಲೇ ನಿಮ್ಮ ತಂದೆಯವರ ದೇಹ ಸಿಕ್ಕಿದ್ದು.  ಮಹೇಶ ಆ ಜಾಗದಲ್ಲಿ ಕುಳಿತ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ‘ನಿಜ ಹೇಳು ಗುಡದಪ್ಪ ಅಪ್ಪನ ತಲೆಯ ಹಿಂಭಾಗದಲ್ಲಿ ಗಾಯ ಆಗಿತ್ತು. ಅದು ಕರಡಿ  ಮಾಡಿದ ಗಾಯವೂ ಅಲ್ಲ, ಬಿದ್ದದ್ದೂ ಅಲ್ಲ. ಪ್ಲೀಸ್‌ ಏನಾಯ್ತು ಹೇಳುʼ ಮಹೇಶ ದಯನೀಯವಾಗಿ ಗೋಗೆರೆದ. ಗುಡದಪ್ಪ ಅತೀಫನೆಡೆ ನೋಡಿದ ಅತೀಫನೂ  ಕೈ ಮುಗಿದ. ‘ಇದರಲ್ಲಿ ಆ ಹುಡುಗನದೇನೂ ತಪ್ಪಿಲ್ಲ. ಅವನು ಇವರ ಜೊತೆ ದಾರಿ ತೋರಿಸಲು ಬಂದಿದ್ದ. ಎಲ್ಲ ನೋಡಿಯಾದ ಮೇಲೆ ನಗಾರಿ ಕಲ್ಲು ನೋಡಿ ತಿರುಗಿ ಬರುವಾಗ ಕರಡಿ ಹಿಂದಿನಿಂದ ಬಂದಿದೆ. ನಿಮ್ಮ ತಂದೆ ಗಾಬರಿಯಾಗಿ ಓಡಲು ಪ್ರಯತ್ನಿಸಿದಾಗ ಕರಡಿ ದಾಳಿ ಮಾಡಿದೆ.  ಆ ಹುಡುಗ ಕರಡಿಯನ್ನು ಓಡಿಸಲು ಕಲ್ಲು ಎಸೆದಿದ್ದಾನೆ. ಆದರೆ ತಪ್ಪಿ ನಿಮ್ಮ ತಂದೆಯವರ ತಲೆಗೆ ಬಿದ್ದಿದೆ.  ಇದು ಆಕಸ್ಮಿಕ ಎಂದು ಪೋಲೀಸರಿಗೆ ಹೇಳಿ ಕೇಸ್‌ ಕ್ಲೋಸ್‌ ಮಾಡಿಸಿದ್ದಾರೆ. ಇದರಲ್ಲಿ ಅವನದೇನೂ ತಪ್ಪಿಲ್ಲ. ನಿಮ್ಮ ದುಃಖ ನೋಡಲಾರದೇ ನಿಜ ಹೇಳಿದ್ದೇನೆʼ ಎಂದು ಕಣ್ಣೀರು ಒರೆಸಿಕೊಂಡ. ಅತೀಫ, ಗುಡದಪ್ಪ ಆ ಯುವಕ ದೂರದಲ್ಲಿಯೇ ನಿಂತು ನೋಡುತ್ತಿದ್ದರು. ಆ ಬಿಸಿಲಿನಲ್ಲಿಯೂ ಅರ್ಧ ಗಂಟೆ  ಮಹೇಶ ಆ ಜಾಗವನ್ನು ಬಿಟ್ಟೇಳಲಿಲ್ಲ.  ನಂತರ  ಆ ಜಾಗಕ್ಕೆ ಮಹೇಶ ಹಣೆ ಹಚ್ಚಿ ನಮಸ್ಕರಿಸಿದ. ಕೆಲ ಕಾಲ ಕಣ್ಣು ಮುಚ್ಚಿ ಕುಳಿತ. ಬಿಸಿ ಬಂಡೆಯ ಮೇಲೇ ಮಲಗಿದ. ಕೆಲ ಹೊತ್ತು ಮೇಲೇಳಲಿಲ್ಲ.  ಬಹುಶಃ ಅರ್ಧ ಗಂಟೆಯವರೆಗೆ ಯಾರೂ ಅವನನ್ನು ಮಾತನಾಡಿಸಲಿಲ್ಲ. ವಾಸ್ತವದ ಅರಿವಿನಿಂದ ಅವನ ಎಲ್ಲಾ ಭಾರಗಳು ಹಗುರವಾದಂತೆನಿಸಿ, ಎಲ್ಲಾ ಕೊಡವಿಕೊಂಡ.  ಹೊಸ ಚೈತನ್ಯ ಪಡೆದವನಂತೆ  ಮೇಲೆದ್ದು   ಅತೀಫನೆಡೆಗೆ ಬಂದ.  ಮೌರೇರ್‌ ಆತ್ಮಗಳ ಜೊತೆ ತನ್ನ ತಂದೆಯ ಆತ್ಮ ಈ ಪರಿಸರದಲ್ಲಿ ಒಂದಾದಂತೆ ಯಾವುದೋ ನಿಗೂಢ ಮಾತುಕತೆ ನಡೆಸುತ್ತಿರುವಂತೆ ಬಂಡೆಗಳು, ಬೆಟ್ಟಗಳ ಸಾಲು ಅವರ ಕಾವಲಿಗೆ ನಿಂತಂತೆ ಮಹೇಶನಿಗೆ ಇಡೀ ದೃಶ್ಯ ಕಾಣುತ್ತಿತ್ತು.