Advertisement
“ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ -ನೆನಪಿನ ಬಾಳೆ”: ಪೂರ್ಣೇಶ್‌ ಮತ್ತಾವರ ಸರಣಿ

“ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ -ನೆನಪಿನ ಬಾಳೆ”: ಪೂರ್ಣೇಶ್‌ ಮತ್ತಾವರ ಸರಣಿ

ಕಾಲು ಗಂಟೆಗೂ ಮೊದಲು ನಾನು “ಬಾಳೆ ಎಲೆಯ ಛತ್ರಿ” ನಡಿಗೆ ನಡೆಸಿದ್ದು ನಮ್ಮ ಜೂನಿಯರ್‌ಗಳಿಗೆ ನನ್ನ ನಿರೀಕ್ಷೆಯನ್ನೂ ಮೀರಿ ಅತ್ಯಾಕರ್ಷಕವಾಗಿ ಕಂಡಿದೆ. ಅದೆಷ್ಟು ಅತ್ಯಾಕರ್ಷಕವೆಂದರೆ ಅವರು ಊಟ ಮುಗಿಸಿ ತಮ್ಮ ತಮ್ಮ ಡಾರ್ಮಿಟರಿಗಳಿಗೆ ಹೋಗುವ ಬದಲು ನೇರ ಎಂ.ಪಿ.ಹಾಲ್ ನ ಹಿಂಬದಿಯಲ್ಲಿದ್ದ ಬಾಳೆ ತೋಟಕ್ಕೆ ನುಗ್ಗಿದ್ದಾರೆ. ಎಲ್ಲರೂ “ನನಗೊಂದು ಎಲೆ.. ನನಗೊಂದು ಎಲೆ..” ಎನ್ನುತ್ತಾ ಇಡೀ ಬಾಳೆ ತೋಟವನ್ನೇ ಲೂಟಿ ಮಾಡಲು ಶುರು ಮಾಡಿದ್ದಾರೆ. ತಮ್ಮ ಒರಿಜಿನಲ್ ಛತ್ರಿಗಳನ್ನು‌ ಬಿಸಾಕಿ “ಬಾಳೆ ಎಲೆಯ ಛತ್ರಿ”ಗಳನ್ನು ಹಿಡಿದು ನಡೆಯಲಾರಂಭಿಸಿದ್ದಾರೆ.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹತ್ತನೆಯ ಬರಹ

“ಹೃದಯದ ಅಂಚಿನಲಿ ಮುಂಗಾರಿನ ಮಿಂಚು…”
ಮಿನುಗುತ ಮರೆಯಾಯ್ತು ಮುಂಗಾರಿನ ಮಿಂಚು..” ಹಾಡನ್ನು ಗುನುಗುತ್ತಲೇ ಅದೊಂದು ಭಾನುವಾರ ನಾನು ಶಾಲಾ ಗೇಟ್ ಎದುರಿನ ಸಿ.ಆರ್.ಎಸ್ ಬಸ್ ಸ್ಟಾಪ್‌ನಲ್ಲಿ ಬಸ್ ಇಳಿಯುವ ವೇಳೆಗೆ ಮಧ್ಯಾಹ್ನವಾಗಿತ್ತು. ಮಧ್ಯಾಹ್ನವಾಗಿದ್ದರೂ ಮಳೆಗಾಲದ ದಿನವಾದ್ದರಿಂದ ಆಗಸದ ತುಂಬೆಲ್ಲಾ ಮೋಡ ಆವರಿಸಿ ವಾತಾವರಣ ಮಾತ್ರ ಸಂಜೆಯಾದಂತಿತ್ತು.

ಹುಷಾರಿಲ್ಲವೆಂದೋ ಅಥವಾ ಹಬ್ಬ, ಮದುವೆಗೆಂದೋ ವಾರದ ಮಧ್ಯದಲ್ಲಿ ರಜೆ ಮಾಡಿ ಚಿಕ್ಕಮಗಳೂರಿನಲ್ಲಿದ್ದ ನನ್ನ ಮನೆಗೆ ಹೋಗಿದ್ದ ನಾನು ಅಂದು ಶಾಲೆಗೆ ಮರಳಿದ್ದೆ. ಹೀಗೆ ಮನೆಗೆ ಹೋಗಿದ್ದವನು ಆಗ ತಾನೇ ಬಿಡುಗಡೆಗೊಂಡಿದ್ದ ನನ್ನ ನೆಚ್ಚಿನ ನಟ ರಮೇಶ್ ನಟಿಸಿದ್ದ “ಮುಂಗಾರಿನ ಮಿಂಚು” ಸಿನಿಮಾವನ್ನು ನೋಡಿ ಬಂದಿದ್ದೆ. ಮನದಲ್ಲೆಲ್ಲಾ ಮೋಡ, ಮಿಂಚು, ಮಳೆ, ಮಲೆನಾಡು ತುಂಬಿಕೊಂಡು ಬಂದಿದ್ದೆ. ಮತ್ತೆ ಮತ್ತೆ “ಹೃದಯದ ಅಂಚಿನಲಿ..” ಗುನುಗುತ್ತಲೇ ಇದ್ದೆ.

ಸರಿ, “ಕಾಮನಬಿಲ್ಲಿನಲ್ಲಿ ಇನ್ನೇನಿದೆ.. ಪ್ರೇಮದ ಬಣ್ಣಗಳು ಏನಾದವೋ.. ಓ ಮೇಘವೇ ದೂರಾಗಿರು.. ಇನ್ನೇತಕೆ ಸಂದೇಶವು..” ಎಂದು ಗುನುಗುತ್ತಲೇ ಡಾರ್ಮಿಟರಿ ತಲುಪಿದೆ. ನೋಡಿದರೆ ಗೆಳೆಯರೆಲ್ಲಾ ಅದಾಗಲೇ ಮಧ್ಯಾಹ್ನದ ಊಟಕ್ಕೆಂದು ಮೆಸ್‌ಗೆ ಹೋಗಿಯಾಗಿತ್ತು. ನಾನೂ ಊಟಕ್ಕೆ ಹೋಗಬೇಕಿತ್ತು. ಊಟಕ್ಕೆ ಹೋಗುವ ಮುನ್ನ ಬಸ್ ಪ್ರಯಾಣದ ಆಯಾಸ ಕಳೆಯಲೆಂದು, ಮಿಗಿಲಾಗಿ ರಮೇಶನಂತೆ ಮುದ್ದು ಮುದ್ದಾಗಿ ಕಾಣಲೆಂದು ಪಕ್ಕದಲ್ಲಿದ್ದ ಬಾತ್ ರೂಮ್‌ಗೆ ಹೋಗಿ ಸೋಪ್ ಹಾಕಿ ಮುಖ ತೊಳೆದೆ. ಮತ್ತೆ ಡಾರ್ಮಿಟರಿಗೆ ಮರಳಿ ಮುಖಕ್ಕೆ ಪೌಡರ್ ಹಾಕಿಕೊಂಡು, ತಲೆ ಬಾಚಿಕೊಂಡು, ಆಗ ರಮೇಶ್ ಸಿನಿಮಾಗಳಲ್ಲಿ ಹೆಚ್ಚಾಗಿ ಹಾಕುತ್ತಿದ್ದ ರೀತಿಯಲ್ಲೇ ಹಾಫ್ ಸ್ವೆಟರ್ ಹಾಕಿಕೊಂಡು ಮೆಸ್‌ಗೆ ಹೊರಡಲು ಅನುವಾದೆ. “ಹೃದಯದ ಅಂಚಿನಲಿ..” ಗುನುಗುವುದು ಮುಂದುವರೆದೇ ಇತ್ತು.

ಸರಿ, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ನಾನು ಗುನುಗುತ್ತಿದ್ದ “ಓ ಮೇಘವೇ ನೀ ಬಾರೆಯಾ.. ಸಂದೇಶವ ನೀ ತಾರೆಯ..” ಸಾಲಿನ ಪ್ರಭಾವವೋ ಎಂಬಂತೆ ಜೋರಾದ ಗುಡುಗಿನೊಂದಿಗೆ ಸಣ್ಣನೆಯ ತುಂತುರು ಶುರುವಾಯ್ತು. ಛತ್ರಿಗಾಗಿ ಹುಡುಕಿದೆ. ಅದ್ಯಾಕೋ ಸಿಗಲಿಲ್ಲ. ಯಾರೋ ಹೊತ್ತೊಯ್ದಿದ್ದರೆನಿಸುತ್ತೆ.

ಹೀಗೆ ಛತ್ರಿ ಕಳೆದು ಹೋಗುವುದು ನನಗೇನು ಹೊಸದಾಗಿರಲಿಲ್ಲ. ಏಳನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಪ್ರತಿವರ್ಷ ಛತ್ರಿ ಕಳೆದುಕೊಂಡ ವಿಶೇಷ ದಾಖಲೆಯನ್ನೇ ನಾನು ನಿರ್ಮಿಸಿದ್ದೆ. ಹಿಂದೆಲ್ಲಾ ಜೂನಿಯರ್ ಆಗಿದ್ದಾಗ ಛತ್ರಿಯನ್ನು ಅದ್ಯಾರೋ ಸೀನಿಯರ್‌ಗಳು ಎತ್ತಿ, ನಾನು ಅಳುತ್ತಲೇ ಹುಡುಕಿ, ಅದು ಸಿಗದೇ ಹೌಸ್ ಮಾಸ್ಟರ್‌ಗಳಿಗೆ ಅಳುತ್ತಲೇ ದೂರಿತ್ತು, ಮತ್ತೂ ಸಿಗದೇ ಅಳುತ್ತಿದ್ದದ್ದೇ ಆಗುತ್ತಿತ್ತು. ಛತ್ರಿ ಕಳೆದು ಹೋಗಿ ಎರಡು ಮೂರು ದಿನವಾದರೂ ನನ್ನ ಕಣ್ಣೀರಿನ ಕೋಡಿ ಬರಿದಾಗುತ್ತಲೇ ಇರಲಿಲ್ಲ.

ಆಗೆಲ್ಲಾ ಹೀಗೆ ಛತ್ರಿಯನ್ನು ಸೀನಿಯರ್‌ಗಳಿಂದ ರಕ್ಷಿಸಿಕೊಳ್ಳಲಾದರೂ ನಾನು ಸೀನಿಯರ್ ಆಗಬೇಕೆಂದುಕೊಳ್ಳುತ್ತಿದ್ದೆ. ಆದರೆ, ಈಗ ಸೀನಿಯರ್ ಆಗಿ ಹನ್ನೊಂದನೆಯ ತರಗತಿಯಲ್ಲಿದ್ದರೂ ಛತ್ರಿ ಕಳೆದುಕೊಳ್ಳುವ ಚಾಳಿ ಮಾತ್ರ ನನ್ನ ಹಣೆ ಬರಹದಿಂದ ಅಳಿಸಿ ಹೋಗಿರಲಿಲ್ಲ. ಆದರೆ ಸೀನಿಯರ್ ಆಗುತ್ತಲೇ ಗೊಳೋ ಎಂದು ಅಳುವ ಕಾಯಕಕ್ಕೆ ಮಾತ್ರ ಸಂಪೂರ್ಣ ಬ್ರೇಕ್ ಬಿದ್ದಿತ್ತು. ಛತ್ರಿ ಕಳೆದು ಹೋಗುತ್ತಲೇ ಇನ್ಯಾರದೋ ಗೆಳೆಯರ ಛತ್ರಿಯಲ್ಲಿ ನುಸುಳಿ ಹೋಗುವುದು, ಇಲ್ಲವೇ ಯಾರದೋ ಛತ್ರಿಯನ್ನು ಹೇಳದೆ ಕೇಳದೆ ಹೊತ್ತುಕೊಂಡು ಹೋಗುವುದು ಅಭ್ಯಾಸವಾಗಿ ಬಿಟ್ಟಿತ್ತು.

ಈಗ ಮಾತ್ರ ಗೆಳೆಯರೆಲ್ಲಾ ಅದಾಗಲೇ ಊಟಕ್ಕೆ ಹೋಗಿದ್ದರಾದ್ದರಿಂದ ಮತ್ತು ಹೋಗುವವರು ಮಳೆಯ ನಿರೀಕ್ಷೆಯಿಂದ ತಮ್ಮ, ತಮ್ಮದಲ್ಲದ ಛತ್ರಿಗಳನ್ನೆಲ್ಲಾ ಎತ್ತಿಕೊಂಡು ಹೋಗಿದ್ದರಾದ್ದರಿಂದ ಎಂದಿನ ಅಭ್ಯಾಸಗಳಿಗೆ ಅವಕಾಶವಿಲ್ಲದಂತಾಗಿತ್ತು.

ಸರಿ, ಮತ್ತಿನ್ನೇನು ಮಾಡುವುದು!? ಮತ್ತದೇ “ಮುಂಗಾರಿನ ಮಿಂಚು” ನೆನಪಾಯ್ತು. ಅದರಲ್ಲಿ ರಮೇಶ್ ನಾಯಕಿಯ ಕಣ್ಣೀರಿಗೆ ಕರಗಿ “ಡೋಂಟ್ ವರಿ, ನೋಡಿ ಲೈಫಲ್ಲಿ ಪ್ರಾಬ್ಲಮ್ ಬಂದಾಗ ಧೈರ್ಯವಾಗಿ ಫೇಸ್ ಮಾಡ್ಬೇಕು… ಲೈಫ್ ಈಸ್ ಫುಲ್ ಆಫ್ ಪ್ರಾಬ್ಲೆಮ್ಸ್.. ವಿ ಶುಡ್ ಫೈಂಡ್ ಸೊಲೂಷನ್ಸ್.. ಸೀಕ್ರೆಟ್ ಏನು ಅಂದ್ರೆ ಲೈಫನ್ನ ಈಝಿಯಾಗಿ ತಗೋಬೇಕು.. ಪ್ರಭುದೇವ ಹೇಳಿದ್ದೆ ಸರಿ.. ಊರ್ವಶಿ, ಊರ್ವಶಿ….. ಟೇಕ್ ಇಟ್ ಈಝಿ ಪಾಲಿಸಿ..

ಈಝಿಯಾಗಿ ತಗೊಂಡ್ರೆ ಪ್ರಾಬ್ಲಮ್ ಎಲ್ಲಾ ಐಸ್ ಕ್ರೀಮ್ ತರಹ ಕರಗಿ ಹೋಗುತ್ತೆ..” ಎಂದು ಹೇಳುವ ಮಾತುಗಳು ನೆನಪಾದವು. ಅಷ್ಟೇ ಅಲ್ಲದೇ ಈ ಮಾತು ಹೇಳುವ ವೇಳೆಗೆ ರಮೇಶ್ ಮಳೆಗೆ ಛತ್ರಿ ಇಲ್ಲದೆ ಬಾಳೆ ಎಲೆ ಅಡ್ಡಲಾಗಿ ಹಿಡಿದು ನಡೆಯುವ ದೃಶ್ಯ, ಪೋಸ್ಟರ್‌ನಲ್ಲಿದ್ದ ಇದೇ ದೃಶ್ಯದ ಚಿತ್ರ, ಜೊತೆಗೆ ನಮ್ಮ ಡಾರ್ಮಿಟರಿಯ ಹತ್ತಿರವಿದ್ದ ಶಾಲಾ ಎಂ.ಪಿ ಹಾಲ್‌ನ ಹಿಂಬದಿಯಲ್ಲಿದ್ದ ನಮ್ಮದೇ ಬಾಳೆ ತೋಟ.., ಎಲ್ಲವೂ ನೆನಪಾದವು!

“ಅರೆ! ಡೋಂಟ್ ವರಿ ಮಾಡ್ಕೊಂಡ್ರೆ, ಪ್ರಾಬ್ಲಮ್ ಎಲ್ಲಾ ಐಸ್ ಕ್ರೀಮ್ ತರ ಕರಗ್ತಾವೆ ಅನ್ನೋದು ಎಷ್ಟು ಸರಿ ಅಲ್ವಾ!” ಎಂದುಕೊಂಡು ಖುಷಿಯಾದೆ. ಕನ್ನಡಿಯಲ್ಲಿ ಮತ್ತೊಮ್ಮೆ ಮುಖ ನೋಡಿಕೊಂಡು, ಕೂದಲು ಸರಿ ಮಾಡಿಕೊಂಡು ಬಾಳೆ ತೋಟದತ್ತ ನಡೆದೆ.

ಹೌದು, ಶಾಲೆಯಲ್ಲಿ ಒಂದು ಬಾಳೆ ತೋಟವಿತ್ತು. ಅದೂ ನಾವೇ ಅಂದರೆ, ವಿಶೇಷವಾಗಿ ನಮ್ಮ ತರಗತಿಯವರೇ ಮಾಡಿದ್ದ ಬಾಳೆ ತೋಟ! ನಾವೇ ಮಾಡಿದ್ದ ಎನ್ನುವುದಕ್ಕಿಂತ ನಮ್ಮಿಂದ ಮಾಡಿಸಿದ್ದ ಅಥವಾ ಬಲವಂತವಾಗಿ ಮಾಡಿಸಿದ್ದ ತೋಟ ಎಂದರೂ ಆಗಬಹುದೇನೋ!

ಅದು ತೊಂಭತ್ತಾರರ ಕ್ರಿಕೆಟ್ ವಿಶ್ವ ಕಪ್ ನಮ್ಮದೇ ಭಾರತದಲ್ಲಿ ನಡೆಯುತ್ತಿದ್ದ ಕಾಲ. ಹೇಳಿ ಕೇಳಿ ಕ್ರಿಕೆಟ್ ಎಂಬುದು ನಮ್ಮ ಪಾಲಿನ ಧರ್ಮವಾಗಿದ್ದ ಕಾಲ. ಮಲೆನಾಡಿನ ಸುಗ್ಗಿ ಹಬ್ಬಗಳಲ್ಲಿ ಅದೆಷ್ಟು ಕೆಲಸ ಕಾರ್ಯಗಳಿದ್ದರೂ ಜನರು ಎಲ್ಲವನ್ನೂ ಬದಿಗಿಟ್ಟು ದೇವರು ದಿಂಡಿರ ಹೆಸರೇಳುತ್ತಾ, ಧಾರ್ಮಿಕ ಕೆಲಸ ಕಾರ್ಯಗಳಲ್ಲೇ ಹತ್ತಾರು ದಿನ ಮುಳುಗುತ್ತಾರಲ್ಲ ಹಾಗೆಯೇ ನಾವುಗಳು ಉದ್ಘಾಟನಾ ಪಂದ್ಯದಿಂದ ಫೈನಲ್ ಪಂದ್ಯದವರೆಗೆ ಕ್ರಿಕೆಟ್‌ನಲ್ಲಿಯೇ ಮುಳುಗಿರಬೇಕೆಂದು ನಿಶ್ಚಯಿಸಿದ್ದ ಕಾಲ.

ಅದಕ್ಕೆಂದೇ ಸಿಗುತ್ತಿದ್ದ ಲಂಚ್ ಬ್ರೇಕ್, ಆಫ್ಟರ್‌ನೂನ್ ಬ್ರೇಕ್, ಸೈಲೆಂಟ್ ರೀಡಿಂಗ್ ಬ್ರೇಕ್, ಸ್ಪೋರ್ಟ್ಸ್ ಬ್ರೇಕ್ ಎಂದೆನ್ನುತ್ತಾ ಒಂದು ಸೆಕೆಂಡ್ ಸಮಯ ಸಿಕ್ಕರೂ ಮಿಸ್ ಮಾಡಿಕೊಳ್ಳದೆ ಸಿಕ್ಕ ಸಿಕ್ಕ ಶಿಕ್ಷಕರು, ಇತರೆ ಸ್ಟಾಫ್‌ಗಳ ಮನೆಗೆ ನುಗ್ಗಿ ಕ್ರಿಕೆಟ್ ನೋಡುತ್ತಾ ಕುಳಿತು ಬಿಡುತ್ತಿದ್ದೆವು.

ಹೀಗೆ ನೋಡುತ್ತಾ ಕುಳಿತುಕೊಳ್ಳಲು ನಮಗೆ ಭಾರತದ ಪಂದ್ಯಗಳೇ ಆಗಬೇಕೆಂದೇನು ಇರಲಿಲ್ಲ. ಕೀನ್ಯಾ, ನೆದರ್ಲ್ಯಾಂಡ್, ಯು.ಎ.ಇಗಳ ಪಂದ್ಯವಿದ್ದರೂ ನಮ್ಮ ಭಾರತವೇ ಫೈನಲ್ ಆಡುತ್ತಿದೆಯೇನೋ ಎಂಬಷ್ಟರ ಮಟ್ಟಿಗಿನ ಆಸಕ್ತಿಯಿಂದ ಬಾಲ್ ಬೈ ಬಾಲ್ ಪಂದ್ಯ ವೀಕ್ಷಿಸುತ್ತಿದ್ದೆವು.

ಹೀಗಿರಲಾಗಿ ಅದೊಂದು ಶನಿವಾರ ನಮ್ಮ ಹೌಸ್ ಮಾಸ್ಟರ್ ಬಂದು ನಾವು ಕ್ರಿಕೆಟ್ ನೋಡುವುದನ್ನು ಬಿಟ್ಟು ಅವರ ಜೊತೆಗೆ ಬಾಳೆ ಗಿಡ ತರಲು ಹೊರಡಬೇಕು ಎಂದು ಬಿಡಬೇಕೆ! ಇದೋ ಒಂದು ರೀತಿಯಲ್ಲಿ ಬ್ಯಾಟ್ಸ್‌ಮನ್ ಒಬ್ಬ ಇನ್ನೇನು ಸೆಂಚುರಿ ಹೊಡೆದು ಬ್ಯಾಟ್ ಎತ್ತುತ್ತಾನೆ ಎನ್ನುವಾಗ ಎದುರಾಳಿ ಬೌಲರ್ ಅನಿರೀಕ್ಷಿತ ಬೌನ್ಸರ್ ಕುಕ್ಕಿ, ನರ್ವಸ್ ನೈಂಟಿಯೊಂದಿಗೆ ಪೆವಿಲಿಯನ್ ಸೇರುವಂತೆ ಮಾಡಿದ ಆಘಾತದಂತಿತ್ತು.

ನಾವು ಸುತಾರಾಂ ಒಪ್ಪಲಿಲ್ಲ. ಅವರೋ ಬಿಡಲೊಪ್ಪಲಿಲ್ಲ. ಹೀಗೆ ಒಂದಷ್ಟು ಚೌಕಾಸಿ ನಡೆದು ಕೊನೆಗೆ ನಾವು ಗಿಡ ತರಲು ಹೊರಡದಿದ್ದರೆ ಮುಂದಿನ ಯಾವ ಪಂದ್ಯಗಳನ್ನು ನೋಡದಂತೆ ಫರ್ಮಾನು ಹೊರಡಿಸಿ ಕ್ರಿಕೆಟ್ ವೀಕ್ಷಣೆಯನ್ನೇ ಬ್ಯಾನ್ ಮಾಡುವ ಬೆದರಿಕೆ ಹಾಕಿಬಿಟ್ಟರು. ಇನ್ನೇನು ತಾನೆ ಮಾಡುವುದು! “ಅಂಪೈರ್ ತೀರ್ಮಾನವೇ ಅಂತಿಮ” ಎನ್ನುವಂತೆ “ಹೌಸ್ ಮಾಸ್ಟರ್ ತೀರ್ಮಾನವೇ ಅಂತಿಮ” ಎಂದು ತಲೆದೂಗಿದೆವು.

“ಹರುಷದ ಕೂಳಿಗೆ ವರುಷದ ಕೂಳು ಕಳೆದುಕೊಂಡರು” ಎಂಬ ಗಾದೆಯಂತೆ “ಕೀನ್ಯಾ, ನೆದರ್ಲ್ಯಾಂಡ್, ಯು.ಎ.ಇ.ಗಳನ್ನೆಲ್ಲಾ ಗೆಲ್ಲಿಸುವ ಹಠಕ್ಕೆ ಬಿದ್ದು, ಬಾಳೆ ತರಲು‌ ಹೋಗದೇ ಹೌಸ್ ಮಾಸ್ಟರರ ಕೆಂಗಣ್ಣಿಗೆ ಗುರಿಯಾಗಿ ಇಡೀ ಟೂರ್ನಮೆಂಟ್ ನೋಡದಂತಾದರೆ. ಅದರಲ್ಲೂ ಮುಂದಿನ ಭಾರತದ ಪಂದ್ಯವನ್ನೂ ಮಿಸ್ ಮಾಡಿಕೊಂಡರೆ ಭಾರತವನ್ನು ಗೆಲ್ಲಿಸುವವರು ಯಾರು!?” ಎಂದೆಲ್ಲಾ ಚಿಂತಿಸಿ ಬಾಳೆ ಗಿಡ ತರಲು ಒಪ್ಪಿದೆವು.

ಗಿಡ ತರಬೇಕಾದುದ್ದೋ ಶಾಲೆಯಿಂದ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ದೇವಗೋಡು ಎಸ್ಟೇಟಿನಿಂದ. “ತೀರಾ ಭಾರವಿಲ್ಲ..” ಎಂದು ಹೊತ್ತುಕೊಂಡ ಗಿಡಗಳೂ ಕೂಡ ಬರು ಬರುತ್ತಾ ಯಮಭಾರ ಎನಿಸಿ ಸಾಕು ಸಾಕೆನಿಸಿಬಿಡುತ್ತಿದ್ದವು.

ಬೇರೆ ದಿನಗಳಲ್ಲಾಗಿದ್ದರೆ “ಈ ಬಾಳೆ ಗಿಡಗಳನ್ನ ಹೊರೋದೂ ಬೇಡ. ಮುಂದೆ ಬಾಳೆಹಣ್ಣು ತಿನ್ನೋದು ಬೇಡ…” ಎಂದು ಹರತಾಳ ಶುರುಮಾಡಿ ಬಿಡುತ್ತಿದ್ದೆವೇನೊ! ಆದರೆ, ಈಗ ಹೇಳಿ ಕೇಳಿ ಭಾರತದಲ್ಲಿಯೇ ನಡೆಯುತ್ತಿದ್ದ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲಿಸಲೇಬೇಕಾದ ಜವಾಬ್ದಾರಿ ನಮ್ಮ ಮೇಲಿತ್ತು! ಅಪ್ಪಿ ತಪ್ಪಿ ನಮ್ಮ ಹೌಸ್ ಮಾಸ್ಟರ್‌ರ ಮನಸ್ಸು ಸ್ವಲ್ಪ ಬದಲಾದರೂ ನಮ್ಮ ಕ್ರಿಕೆಟ್ ವೀಕ್ಷಣೆಗೆ ಬ್ರೇಕ್ ಬೀಳುತಲಿತ್ತು.

“ಹೀಗೆ ನಮ್ಮಂತಹ ‘ಹಾರ್ಡ್ ಕೋರ್ ಫ್ಯಾನ್ಸ್’ ಗಳೇ ಕ್ರಿಕೆಟ್ ನೋಡದಿದ್ದರೆ, ಪ್ರೋತ್ಸಾಹಿಸದಿದ್ದರೆ ನಮ್ಮ ಸಚಿನ್ ಶತಕ ಸಿಡಿಸುವುದು,‌ ಸಿದ್ದು ಸಿಕ್ಸರ್ ಎತ್ತುವುದು, ಕುಂಬ್ಳೆ ಲೆಗ್ ಬ್ರೇಕ್ ಹಾಕುವುದು, ಶ್ರೀನಾಥ್ ಯಾರ್ಕರ್ ಎಸೆಯುವುದು ಹೇಗೆ!?” ಎಂದೆಲ್ಲಾ ಚಿಂತಿಸಿ ರೌಂಡ್ ಮೇಲೆ ರೌಂಡ್‌ನಂತೆ ಬಾಳೆ ಗಿಡ ಹೊತ್ತೆವು.

ಸಾಲದು ಎಂಬಂತೆ ಮರುದಿನ ಗುಂಡಿ ತೆಗೆಯಲೆಂದು ಬಂದಿದ್ದ ಒಂದಿಬ್ಬರು ಕೆಲಸಗಾರರ ಜೊತೆ ಸೇರಿ ನಾವೇ ಗಿಡಗಳನ್ನು ಏಂ.ಪಿ.ಹಾಲ್‌ನ ಹಿಂದೆ ನೆಟ್ಟೆವು. ಜೊತೆಗೆ ಗರ್ಲ್ಸ್ ಡಾರ್ಮಿಟರಿಗಳ ಬಳಿಯೂ ಒಂದಷ್ಟು ಗಿಡ ಸಾಗಿಸಿ ಬಂದೆವು.

ಮುಂದೆ ಈ ಗಿಡಗಳು ದೊಡ್ಡವಾಗುವುದು, ಗೊನೆ ಬಿಡುವುದು, ಹಣ್ಣು ತಿನ್ನುವುದು .., ಎಂಬೆಲ್ಲಾ ಮಾತುಗಳು ಬಂದಾಗ ಒಂದಷ್ಟು ಸಮಾಧಾನಿತರಾದೆವು.

ಮುಂದೆ ಬಾಳೆಹಣ್ಣುಗಳು ಬಿಟ್ಟಾಗ ಬೇರೆಯವರಿಗೆಲ್ಲ ಒಂದೊಂದು ಹಣ್ಣು ಕೊಟ್ಟರೆ ನಮ್ಮ ಬ್ಯಾಚ್‌ನವರಿಗೆ ಮಾತ್ರ ಎರಡೆರಡು ಹಣ್ಣು ನೀಡುವುದಾಗಿ ನಮ್ಮ ಹೌಸ್‌ ಮಾಸ್ಟರರು ಆಶ್ವಾಸನೆ ನೀಡಿದಾಗಲಂತೂ ನಾವು ಬಾಳೆ ಗಿಡಗಳನ್ನು ನೆಟ್ಟು ಸಾರ್ಥಕ ಕಾರ್ಯವನ್ನು ಮಾಡಿದೆವೆಂದುಕೊಂಡೆವು.

ಹೀಗೆ ಗಿಡ ನೆಟ್ಟು ವರ್ಷವಾಗುತ್ತ ಬರುತ್ತಲೇ ಯಾವಾಗ ಬಾಳೆ ಗೊನೆಗಳು ಬಿಡಲಾರಂಭಿಸಿದವೋ ಅನಿರೀಕ್ಷಿತ ತಿರುವುಗಳು ಎದುರಾದವು.

ನಮ್ಮ ಹೌಸ್ ಮಾಸ್ಟರರ ಆಶ್ವಾಸನೆಯಂತೆ ಬೇರೆಯವರು ಒಂದು ಹಣ್ಣು ತಿನ್ನುವಾಗ ನಾವು ಎರಡು ಹಣ್ಣು ತಿನ್ನುವುದಿರಲಿ ಗೊನೆಯಲ್ಲಿನ‌ ಕಾಯಿ ಹಣ್ಣಾಗುವುದನ್ನು ನೋಡುವ ಭಾಗ್ಯವೂ ನಮ್ಮದಾಗಿರಲಿಲ್ಲ. “ಗೊನೆ ಇನ್ನೇನು ದೊಡ್ಡದಾಯಿತು” ಎನ್ನುವಾಗಲೇ ನನ್ನ ಛತ್ರಿಗಳು ವರ್ಷ ವರ್ಷ ಮಾಯವಾದಷ್ಟೇ ನಿಗೂಢವಾಗಿ‌ ಗೊನೆಗಳು ಮಾಯವಾಗಲಾರಂಭಿಸಿದ್ದವು.

‌‌‌ ನೋಡಿದರೆ, ನಮ್ಮ ಬಾಳೆ ತೋಟದ ಪಕ್ಕದ ಎಂ.ಪಿ.ಹಾಲ್ ಅನ್ನೇ ಡಾರ್ಮಿಟರಿಯನ್ನಾಗಿಸಿಕೊಂಡಿದ್ದ ನಮ್ಮ ಸೀನಿಯರ್‌ಗಳು ರಾತ್ರಿ ವೇಳೆಯಲ್ಲಿ ಗೊನೆ ಕೊಯ್ದು ಶೌಚಾಲಯದಲ್ಲಿ, ಬೇಲಿ ಸಂಧಿಯಲ್ಲಿ, ಟೆರೆಸ್ ಮೇಲೆ, ಹೀಗೆ ಎಲ್ಲೆಂದರಲ್ಲಿ ಚೀಲಕ್ಕೆ ಹಾಕಿ ಹಣ್ಣಾಗಿಸಿ ತಾವೇ ತಿನ್ನಲಾರಂಭಿಸಿದ್ದರು.
ಅವರಷ್ಟೇ ಅಲ್ಲ, ಮುಂದೆ ನಮ್ಮ ತರಗತಿಯ ಹೆಣ್ಣು ಮಕ್ಕಳು ಕೂಡಾ ತಾವು ತಮ್ಮ ಡಾರ್ಮಿಟರಿಯ ಪಕ್ಕ ಹಾಕಿದ್ದ ಬಾಳೆ ಗಿಡಗಳಿಂದ ಬಾಳೆ ಗೊನೆಗಳನ್ನು ‘ಸ್ಮಗ್ಲಿಂಗ್’ ಮಾಡಿ ತಮ್ಮ ಡಾರ್ಮಿಟರಿಗೆ ಹೊತ್ತೊಯ್ದು, ಹಣ್ಣು ಮಾಡಿ, ರಾತ್ರಿ ವೇಳೆಯಲ್ಲಿ “ಬಾಳೆ ಪಾರ್ಟಿ”ಗಳನ್ನು ಮಾಡುತ್ತಿದ್ದ ಬಗೆಯನ್ನು ವಿವರಿಸಿದ್ದಿದೆ.

ಹಾಗಾಗಿಯೇ ಗಿಡ ನೆಟ್ಟು ಎರಡು ವರುಷಗಳಾದರೂ ನಾವು ನೆಟ್ಟ ಬಾಳೆ ತೋಟದಲ್ಲಿನ ಒಂದೇ ಒಂದು ಹಣ್ಣನ್ನು ನಾವೇ ತಿನ್ನಲಾರದೆ ಬಾಳೆ ತೋಟ ನಮ್ಮ ಪಾಲಿಗೆ “ಉಳಿ ಬಾಳೆ” ತೋಟವಾಗಿತ್ತು.

ಇನ್ನೇನು ತಾನೆ ಮಾಡುವುದು! ನಾವು ನಮ್ಮಿಂದ ಗಿಡ ನೆಡಿಸಿದ್ದ ಹೌಸ್ ಮಾಸ್ಟರರ ಬಳಿ ಕೆಲವೊಮ್ಮೆ “ಬಾಳೆ ತೋಟದ ಹಣ್ಣುಗಳನ್ನು ಬೇರೆಲ್ಲರೂ ಒಂದೊಂದು ತಿಂದರೆ ನಮ್ಮ ಬ್ಯಾಚ್‌ನವರು ಮಾತ್ರ ಎರಡೆರಡು ತಿಂತಾ ಇದ್ದೀವಿ!” ಎಂದು ಅಸಮಾಧಾನ, ಹತಾಶೆ ತೋಡಿಕೊಳ್ಳುತ್ತಿದ್ದೆವು. ಅವರಿಗೋ ಇದು ಹೀಯಾಳಿಕೆ ಅಂತೆನಿಸಿ ಒಳಗೊಳಗೆ ಹೀಗೆ ಮಾತನಾಡಿದ ನಮ್ಮ ಮೇಲೂ ಬಹಿರಂಗವಾಗಿ ಬಾಳೆ ‘ಸ್ಮಗ್ಲರ್’ಗಳ ಮೇಲೂ ಕೋಪಗೊಳ್ಳುತ್ತಿದ್ದರು.

ಮನಸ್ಸಿನಲ್ಲೇ “ಬಾಳೆ ‘ಸ್ಮಗ್ಲರ್’ಗಳು ಸಿಗ್ಲಿ, ಅವ್ರ ಜನ್ಮ ಜಾಲಾಡ್ತೀನಿ” ಎಂದುಕೊಳ್ಳುತ್ತಿದ್ದರೇನೋ! ಜೊತೆಗೆ ಅವರಿಗಾಗಿ ಕಾಯುತ್ತಲೇ ಇದ್ದರೇನೋ! ಆದರೆ, ಏನು ಮಾಡುವುದು, ‘ಸ್ಮಗ್ಲರ್’ಗಳಿಗಾಗಿ ಕಾಯುವವರು ಒಬ್ಬರೇ ಆದರೆ ‘ಸ್ಮಗ್ಲರ್’ಗಳು ಬ್ಯಾಚು ಬ್ಯಾಚೇ ಇರುತ್ತಿದ್ದರು. ಇನ್ನೂ ಕಾಯುವವರು ದಿನದಲ್ಲಿ ಅಬ್ಬಬ್ಬಾ ಎಂದರೆ ಐದು ನಿಮಿಷ ಈ ಬಗ್ಗೆ ಯೋಚಿಸಬಲ್ಲರಾದರೆ ಬಾಳೆ ‘ಸ್ಮಗ್ಲಿಂಗ್’ ಮಾಡುವವರು ದಿನದ ಇಪ್ಪತ್ನಾಲ್ಕು ಗಂಟೆಯನ್ನೂ ಅದಕ್ಕಾಗಿ ಮೀಸಲಿಡಬಲ್ಲವರಾಗಿದ್ದರು. ಹೀಗಿದ್ದಾಗ ‘ಸ್ಮಗ್ಲರ್’ಗಳು ಸಿಕ್ಕಿಹಾಕಿಕೊಳ್ಳುವುದಾದರೂ ಹೇಗೆ!

ಸರಿ, ಅದೆಲ್ಲಾ ಇರಲಿ.. ಈಗ ಮತ್ತೆ ನಾನು ತುಂತುರು ಮಳೆಯಲ್ಲೇ ಬಾಳೆ ತೋಟದತ್ತ ನಡೆದ ಕಥೆಗೆ ಬರೋಣ.

ನಾನು ಬಾಳೆ ಗಿಡದಿಂದ ದೊಡ್ಡದಾದ ಎಲೆಯೊಂದನ್ನು‌ ಕೊಯ್ಯಲು ಮುಂದಾಗುತ್ತಲೇ ಮನಸ್ಸು ಮಾತ್ರ “ನಾವೇ ನೆಟ್ಟ ಬಾಳೆ ಗಿಡದಿಂದ ನಾನೇ ಬಾಳೆ ಎಲೆಯನ್ನು ಕೀಳುತ್ತಿರುವುದು ಸರಿಯೇ!?” ಎಂದು ಪಿಸುಗುಟ್ಟಿತು. ಹಾಗೆಂದು ಉದುರುತ್ತಿರುವ ಮಳೆಯಲ್ಲಿ ಹೆಚ್ಚು ಹೊತ್ತು ನೆನೆಯುತ್ತಾ ಸರಿ, ತಪ್ಪುಗಳನ್ನು ತರ್ಕಿಸುವಂತೆಯೂ ಇರಲಿಲ್ಲ. ಅದಕ್ಕಾಗಿಯೇ, ಕೆಲವೊಮ್ಮೆ ಅಪ್ಪಂದಿರು ತಮ್ಮ ಮಕ್ಕಳು ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ತೆಗೆದುಕೊಳ್ಳುವಾಗ “ಎಷ್ಟಾದರೂ ನಾವೇ ಕೊಟ್ಟ ಹಣವಲ್ಲವೇ” ಎಂದು ಸಮರ್ಥನೆ ಮಾಡಿಕೊಳ್ಳುತ್ತಾರಲ್ಲ ಹಾಗೆ “ಅರೆ! ಈ ಗಿಡವನ್ನು ಎಷ್ಟಾದರೂ ನಾವೇ ನೆಟ್ಟಿದ್ದಲ್ಲವೇ! ನಾವೇ ನೆಟ್ಟ ಗಿಡದಿಂದ ನಾವೇ ಎಲೆ ಕೀಳುವುದು ಅದೇಗೆ ತಪ್ಪು!” ಎಂಬ ಮರು ಉತ್ತರವನ್ನು ಹೇಳುತ್ತಾ, “ಒಂದು ಹಣ್ಣನ್ನಾದರೂ ತಿನ್ನಲಿಲ್ಲ.. ಎಲೆಯನ್ನಾದರೂ ಬಳಸಿ ಸಮಾಧಾನಿತನಾಗಿ ಬಿಡೋಣ..” ಎಂಬ ಸಮರ್ಥನೆಯನ್ನು ಕೊಟ್ಟು ಕೊಳ್ಳುತ್ತಾ ಒಂದಷ್ಟು ಹರಸಾಹಸದೊಂದಿಗೆ ಎಲೆಯನ್ನು ಕಿತ್ತುಕೊಂಡಿದ್ದಾಯಿತು.

ಈಗ ಬಾಳೆ ಎಲೆಯನ್ನು ಉದುರುವ ಮಳೆಗೆ ಅಡ್ಡಲಾಗಿ ಹಿಡಿದು ರಮೇಶನಂತೆಯೇ ಮುಖಭಾವ ಮಾಡುತ್ತಾ, ವಿಷಲ್ ಊದುತ್ತಾ, ಸಂಜೆಯಾದಂತಿದ್ದ ವಾತಾವರಣಕ್ಕೆ ತಕ್ಕಂತೆ “ಈ ಸುಂದರ ಸಂಜೆ ಬರಿ ಬಂಜೆ.. ಈ ಸುಂದರ ಸಂಜೆ ಬರಿ ಬಂಜೆ.. ನೀನಿಲ್ಲದೆ ಗೆಳತಿ…” ಎಂದು ಗುನುಗುತ್ತಲೇ ಥೇಟು ರಮೇಶನನ್ನೇ ಆವಾಹಿಸಿಕೊಂಡವನಂತೆ ನಡೆದೆ.

ಜೂನಿಯರ್‌ಗಳು ಅದಾಗಲೇ ಊಟ ಮುಗಿಸಿ ಮೆಸ್‌ನ ಕಡೆಯಿಂದ ಎದುರಾದರು. ಅವರಿಗೋ ನನ್ನ ನಡೆ, ಮಂದಹಾಸ ಹೊತ್ತ ಮುಖ, ಅದಕ್ಕೂ ಮಿಗಿಲಾಗಿ ಹೊಚ್ಚ ಹೊಸ ಬಗೆಯ “ಬಾಳೆ ಎಲೆಯ ಛತ್ರಿ” ಅತ್ಯಾಕರ್ಷಕವಾಗಿ ಕಂಡಿರಬಹುದು. ಬೆಂಗಳೂರಿನ ಬೀದಿಗಳಲ್ಲಿನ ಕರಗದ ಮೆರವಣಿಗೆವನ್ನು ಹಿರಿಯ ಮಹಿಳೆಯರು ನೋಡುವ ಆರಾಧನಾ ಭಾವದಿಂದಲೇ, ಹಳ್ಳಿಯನ್ನು ಹೊಕ್ಕ ಕರಡಿಯ ಕುಣಿತವನ್ನು ಚಿಕ್ಕ ಮಕ್ಕಳು ಕಾಣುವ ಬೆರಗಿನಿಂದಲೇ ನನ್ನತ್ತ ನೋಡುತ್ತಾ ಸಾಗಲಾರಂಭಿಸಿದರು.

ನಾನೋ ಅವರ ನೋಟದಿಂದ ಮತ್ತಷ್ಟು ಪ್ರೇರಿತನಾಗಿ ಬಣ್ಣದ ತಗಡಿನ ತುತ್ತೂರಿಯನ್ನೂದುತ್ತಾ ಜಂಭದ ಭಾವದಿಂದ ನಡೆವ ಕಸ್ತೂರಿಯಂತೆ ನನ್ನ ಬಳಿಯಿದ್ದ ವಿಶಿಷ್ಟ “ಬಾಳೆ ಎಲೆಯ ಛತ್ರಿ”ಯನ್ನು ಹಿಡಿದು ಮೆಸ್ ತಲುಪಿದೆ.

ಈ ನಡುವೆ ನಮ್ಮ ಹೌಸ್ ಮಾಸ್ಟರರು ಮೆಸ್ಸಿನಿಂದ ಹೊರಟವರು ನನ್ನ ನಡೆಯನ್ನು ಗಮನಿಸಿಯೂ ಗಮನಿಸಿದವರಂತೆ ಹೊರಟು ಹೋಗಿದ್ದರು. ಇನ್ನೂ ಮೆಸ್ ತಲುಪಿದವನು ಅದಾಗಲೇ ಊಟ ಆರಂಭಿಸಿದ್ದ ಗೆಳೆಯರೊಡನೆ ಊಟ ಮಾಡಿ, ಮತ್ತೆ ಡಾರ್ಮಿಟರಿಗಳ ಕಡೆಗೆ ಹಿಂದಿರುಗುವ ವೇಳೆಗೆ ಅನಿರೀಕ್ಷಿತ ಘಟನೆಯೊಂದು ಜರುಗುತ್ತಿತ್ತು. ಅಥವಾ ಅದಕ್ಕಿಂತಲೂ ಹೆಚ್ಚಾಗಿ ನನ್ನ “ಬಾಳೆ ಎಲೆಯ ಛತ್ರಿ” ನಡಿಗೆ ಆ ಘಟನೆಯನ್ನು ಜರುಗುವಂತೆ ಮಾಡಿತ್ತೆನ್ನಬಹುದು.

ನಮ್ಮ ಹೌಸ್ ಮಾಸ್ಟರರು, ಒಬ್ಬರೇ ಸಾಲದೆಂಬಂತೆ ಅವರ ಜೊತೆಯಲ್ಲಿ ಮತ್ತೊಂದಿಬ್ಬರು ಮಾಸ್ಟರುಗಳು ಸೇರಿ ನಮ್ಮ ಜೂನಿಯರ್‌ಗಳನ್ನು ಬೆರೆಸಿ ಬೆರೆಸಿ ಮನಸೋಇಚ್ಛೆ ಹೊಡೆಯುತ್ತಿದ್ದರು. ಹೊಡೆಯುತ್ತಿದ್ದರು ಎನ್ನುವುದಕ್ಕಿಂತ ಥೇಟು ಗಲಭೆಯನ್ನು ಚದುರಿಸಲು ಪೊಲೀಸರು “ಕಂಡಲ್ಲಿ ಗುಂಡು” ಎಂದು ಆರ್ಡರ್ ಮಾಡಿ ಮೈ ಮೂಳೆ ಮುರಿಯುವ ಹಾಗೆ ಸಿಕ್ಕ ಸಿಕ್ಕವರ ಮೇಲೆ ಲಾಠಿ ಬೀಸುತ್ತಾರಲ್ಲ ಹಾಗೆ ಬಾರಿಸುತ್ತಿದ್ದರು!

ಇನ್ನೂ ಆ ಸಂದರ್ಭದ ತೀವ್ರತೆಯನ್ನು ವರ್ಣಿಸಬೇಕೆಂದರೆ ಪ್ರತಿದಿನ ಗುಡುಗು ಸಿಡಿಲಿನ ಆರ್ಭಟದಲ್ಲಿ ನಮ್ಮ ಧ್ವನಿ ಕೇಳದಾಗುತ್ತಿದ್ದರೆ ಈ ದಿನ ನಮ್ಮ ಹೌಸ್ ಮಾಸ್ಟರರ ಆರ್ಭಟದ ಮುಂದೆ ಗುಡುಗು ಸಿಡಿಲು ಕೂಡ ಸದ್ದು ಕಳೆದುಕೊಂಡಿದ್ದವೆನ್ನಬಹುದು. ಅವರ ಕೋಪಾಗ್ನಿಯ ಮುಂದೆ ಪಾಪ ಮಿಂಚು ಕೂಡಾ ಮಂಕಾಗಿತ್ತೆನ್ನಬಹುದು.

ಈ ರೇಂಜಿಗೆ ಹೊಡೆಯುವುದು ನಮ್ಮ ಶಾಲೆಯಲ್ಲಿ ತೀರಾ ಅಪರೂಪದ ಸಂಗತಿಯಾಗಿತ್ತೆನ್ನಬಹುದು.

ಸರಿ, ಹತ್ತಿರಾಗಿ ಘಟನೆಯ ಮಾಹಿತಿ ಪಡೆದೆವು.

ಕಾಲು ಗಂಟೆಗೂ ಮೊದಲು ನಾನು “ಬಾಳೆ ಎಲೆಯ ಛತ್ರಿ” ನಡಿಗೆ ನಡೆಸಿದ್ದು ನಮ್ಮ ಜೂನಿಯರ್‌ಗಳಿಗೆ ನನ್ನ ನಿರೀಕ್ಷೆಯನ್ನೂ ಮೀರಿ ಅತ್ಯಾಕರ್ಷಕವಾಗಿ ಕಂಡಿದೆ. ಅದೆಷ್ಟು ಅತ್ಯಾಕರ್ಷಕವೆಂದರೆ ಅವರು ಊಟ ಮುಗಿಸಿ ತಮ್ಮ ತಮ್ಮ ಡಾರ್ಮಿಟರಿಗಳಿಗೆ ಹೋಗುವ ಬದಲು ನೇರ ಎಂ.ಪಿ.ಹಾಲ್ ನ ಹಿಂಬದಿಯಲ್ಲಿದ್ದ ಬಾಳೆ ತೋಟಕ್ಕೆ ನುಗ್ಗಿದ್ದಾರೆ. ಎಲ್ಲರೂ “ನನಗೊಂದು ಎಲೆ.. ನನಗೊಂದು ಎಲೆ..” ಎನ್ನುತ್ತಾ ಇಡೀ ಬಾಳೆ ತೋಟವನ್ನೇ ಲೂಟಿ ಮಾಡಲು ಶುರು ಮಾಡಿದ್ದಾರೆ. ತಮ್ಮ ಒರಿಜಿನಲ್ ಛತ್ರಿಗಳನ್ನು‌ ಬಿಸಾಕಿ “ಬಾಳೆ ಎಲೆಯ ಛತ್ರಿ”ಗಳನ್ನು ಹಿಡಿದು ನಡೆಯಲಾರಂಭಿಸಿದ್ದಾರೆ.

ಇವರು ಹೀಗೆ “ಬಾಳೆ ಎಲೆಯ ಛತ್ರಿ” ಗಳನ್ನು ಹಿಡಿದು ಒಬ್ಬರ ಪಕ್ಕ ಒಬ್ಬರು ನಡೆಯುತ್ತಿದ್ದರೆ ಹಿಂಬದಿಯೇ ಬಂದ ಹೌಸ್ ಮಾಸ್ಟರ್‌ಗೆ ಒಂದು ಕ್ಷಣ ಬಾಳೆ ತೋಟವೇ ಎಂ.ಪಿ.ಹಾಲ್‌ನ ಹಿಂಬದಿಯನ್ನು ಬಿಟ್ಟು ಮುಂಬದಿಯ ಫೀಲ್ಡ್‌ಗೆ ನಡೆದು ಬರುತ್ತಿದೆಯೇನೋ ಎನಿಸಿದೆ. ಅರೆ ಗಳಿಗೆಯಲ್ಲೇ ಕೆಲ ಹೊತ್ತಿನ ಹಿಂದೆ ನಾನು “ಬಾಳೆ ಎಲೆಯ ಛತ್ರಿ” ಹಿಡಿದು ನಡೆದು ಹೋದ ದೃಶ್ಯ ನೆನಪಾಗಿ ವಾಸ್ತವದ ಅರಿವಾಗಿದೆ.

ಈ ಅರಿವಿನ ಜೊತೆ ಜೊತೆಗೆ ಬಾಳೆಗೊನೆ ಮಾಯ ಮಾಡುವವರನ್ನು ಇಷ್ಟು ದಿನವಾದರೂ ತಾನು ಹಿಡಿಯಲಾಗದ ಸಿಟ್ಟು, ಈ ಬಗ್ಗೆ ನಮ್ಮದೇ ಕುಹಕದ ಮಾತುಗಳು, ಬಾಳೆ ಎಲೆ ಹಿಡಿದುಕೊಂಡು ಹೋಗುತ್ತಿದ್ದರು ನಾವೇ ನೆಟ್ಟ ಗಿಡಗಳಾದ್ದರಿಂದ ನಮಗೆ ಜೋರು ಮಾಡಲಾಗದ‌ ನೈತಿಕ ಅಸಹಾಯಕತೆ, ಎಲ್ಲವೂ ಒಂದುಗೂಡಿವೆ.

ತಕ್ಷಣವೇ ನಮ್ಮ ಹೌಸ್ ಮಾಸ್ಟರು ಕೆಲವೊಮ್ಮೆ ರಾತ್ರಿ ವೇಳೆಯಲ್ಲಿ ಆನೆಗಳು ತೋಟವನ್ನು ದೊಡ್ಡ ಮಟ್ಟದಲ್ಲಿ ಲೂಟಿ‌ಮಾಡಿ ಹೋದಾಗ ಏನೂ ಮಾಡಲಾಗದೆ ಹಗಲು ವೇಳೆಯಲ್ಲಿ ತೋಟಕ್ಕೆ ನುಗ್ಗುವ ಮಂಗಗಳನ್ನೇ ಢಂ ಎನಿಸುವ ಪ್ಲಾಂಟರುಗಳ ಹಾಗೆ, ‘ಶ್’ ಸಿನಿಮಾದಲ್ಲಿ ಪೊಲೀಸ್ ಆಫೀಸರ್‌ನ ವೇಷ ಹಾಕಿ ತನ್ನನ್ನು ಅರೆಸ್ಟ್ ಮಾಡಲು ಬಂದು‌ ಗಾಬರಿ ಬೀಳಿಸುವ ಉಪೇಂದ್ರ ತನ್ನ ಮುಂದೆ ಆ್ಯಕ್ಟಿಂಗ್ ಕೆಪಾಸಿಟಿ ತೋರಿಸಲು ಬಂದ ಮಾದೇವ ಎಂದು ಗೊತ್ತಾಗುತ್ತಲೇ ನಿರ್ದೇಶಕ ಕಾಶೀನಾಥ್ “ಬಡ್ಡೀ ಮಗನ್ನ ಹಾಕ್ಕೊಂಡು ಚಚ್ರೋ, ಒದಿರ್ರೋ..” ಎಂದು‌ ಮುಗಿಬೀಳುವ ಹಾಗೆ ಸಿಕ್ಕ ಸಿಕ್ಕವರಿಗೆ ಸಿಕ್ಕ ಸಿಕ್ಕದ್ದರಲ್ಲಿ ಬಾರಿಸಲಾರಂಭಿಸಿದ್ದಾರೆ. ಸಾಲದ್ದಕ್ಕೆ ಹಿಂದೆ ಬರುತ್ತಿದ್ದ ಮತ್ತಿಬ್ಬರು ಸನ್ಮಿತ್ರರನ್ನೂ ಜೊತೆಗೆ ಹಾಕಿಕೊಂಡಿದ್ದಾರೆ.

ಪಾಪ ನಮ್ಮ ಜೂನಿಯರ್‌‌ಗಳು! ಆಗ ಬರುತ್ತಿದ್ದದ್ದು ತುಂತುರು ಮಳೆಯೇ ಆದರೂ ನಮ್ಮ ಹೌಸ್ ಮಾಸ್ಟರರ ದಾಳಿಯ ಮುಂದೆ ‌ ಬಿರುಗಾಳಿ ಸಹಿತ ಮಳೆಗೆ ತರಗೆಲೆಗಳು ಉದುರುವಂತೆ ಅಥವಾ ಬಾಳೆ ಎಲೆಗಳು ಹರಿಯುವಂತೆ ನಲುಗಿ ಹೋಗಿದ್ದರು! ಎತ್ತಿನ ಜ್ವರಕ್ಕೆ ಬರೆ ಹಾಕಿಸಿ‌ಕೊಳ್ಳಬೇಕಾದ ಎಮ್ಮೆಗಳಾಗಬೇಕಾದ ಸ್ಥಿತಿ ಅವರದಾಗಿತ್ತು!

About The Author

ಪೂರ್ಣೇಶ್ ಮತ್ತಾವರ

ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. "ದೇವರಿದ್ದಾನೆ! ಎಚ್ಚರಿಕೆ!!" ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ..

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ