ಕೆಲವು ಎಮ್ಮೆಗಳು ಬಹಳ ಸೂಕ್ಷ್ಮ. ಎಮ್ಮೆ ಕರುಹಾಕಿ ನಂತರದಲ್ಲಿ ಒಬ್ಬರೇ ಹಾಲು ಕರೆಯುತ್ತಿದ್ದರೆ ಅದು ಕೆಲವು ದಿನಗಳ ನಂತರ ಇನ್ನೊಬ್ಬರಿಗೆ ಹಾಲನ್ನು ಕೊಡುವುದಿಲ್ಲ. ಸೊರವು ಬಿಡದೆ ಸುಮ್ಮನೆ ನಿಂತಿರುತ್ತದೆ. ಮೊಲೆಗಳನ್ನು ಎಷ್ಟೇ ಜಗ್ಗಿದರೂ ಮೊಲೆಗೆ ಹಾಲು ಇಳಿಸುವುದೇ ಇಲ್ಲ. ಇದನ್ನು ನಮ್ಮೂರಕಡೆ ಕೈಮರ್ಚಲು ಎನ್ನುತ್ತಾರೆ. ಇನ್ನೊಬ್ಬರು ಹಾಲು ಕರೆಯಬೇಕೆಂದರೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ಹೆಚ್ಚಾಗಿ ಮನೆಯಲ್ಲಿ ಹೆಂಗಸರು ಹಾಲು ಕರೆಯುವ ರೂಢಿ. ಅವರೇನಾದರು ಎರಡ್ಮೂರು ದಿನಗಳ ಕಾಲ ಬೇರೆಯೂರಿಗೆ ಹೋದರೆ ಮನೆಯವರಿಗೆ ಹಾಲು ಸಿಗುವ ಗ್ಯಾರಂಟಿ ಇರುವುದಿಲ್ಲ.
ಎಮ್ಮೆಯ ಕುರಿತು ಹಲವು ಕುತೂಹಲಕರ ಪ್ರಸಂಗಗಳನ್ನು ಬರೆದಿದ್ದಾರೆ ಚಂದ್ರಮತಿ ಸೋಂದಾ

ಮನುಷ್ಯನ ಸ್ವಭಾವವೇ ವಿಚಿತ್ರ. ಸಾಧು ಸ್ವಭಾವದವರನ್ನು ಹುಸುವಿಗೆ ಹೋಲಿಸುತ್ತಾರೆ. ಆದರೆ ಅದೇ ಕೊಟ್ಟಿಗೆಯಲ್ಲಿ ಇರುವ ಎಮ್ಮೆ ಬಗ್ಗೆ ಮಾತ್ರ ಮೂಗುಮುರಿಯುವುದೇ ಹೆಚ್ಚು. `ಎಮ್ಮೆ ಹಾಲು ಕುಡಿದರೆ ಮಂದ ಬುದ್ಧಿಯಾಗುತ್ತದೆ’ ಎನ್ನುವ ನಂಬಿಕೆ ಬಹಳ ಹಳೆಯದು. ಇದಕ್ಕಿಂತ ಕುತೂಹಲದ್ದು ಯಾರಿಗಾದರೂ ಬೈಯ್ಯುವಾಗ `ಅವನದು ಎಮ್ಮೆಚರ್ಮ, ಹೇಳಿದ್ದು ತಾಗುವುದೇ ಇಲ್ಲ’ ಎನ್ನುವ ಮಾತು ಸಾಮಾನ್ಯ. `ಎಮ್ಮೆ ಮೈಮೇಲೆ ಮಳೆ ಹೊಯ್ದಾಂಗೆ; ಯಾವದೂ ಒಳಗೆ ಹೋಗುವುದಿಲ್ಲ’ ಎನ್ನುವ ಒಗ್ಗರಣೆ ಬೇರೆ. `ಕೋಣನ ಮುಂದೆ ಕಿನ್ನೂರಿ ಬಾರಿಸಿದಂತೆ’ ಎನ್ನುವುದು ಇದರದೇ ಮತ್ತೊಂದು ರೂಪ. ಆಯುರ್ವೇದ ವೈದ್ಯರನ್ನು ಕೇಳಿದರೆ ಎಮ್ಮೆ ಹಾಲು, ಮೊಸರು, ಬೆಣ್ಣೆ, ತುಪ್ಪದ ಬಗೆಗೆಗ ಒಳ್ಳೆಯ ಅಭಿಪ್ರಾಯ ಸಿಗುವುದಿಲ್ಲ. ಹಸುವಿನ ಹಾಲಿನಲ್ಲಿ ಪುಡಿ ತೆಗೆದುಕೊಳ್ಳಿ ಎಂದೋ, ಲೇಹ್ಯ ಮಾಡಲು ಹಸುವಿನ ತುಪ್ಪ ಒಳ್ಳೆಯದು ಎಂದೋ ಹೇಳುತ್ತಾರೆ. ಎಮ್ಮೆ ಮತ್ತು ಅದರ ಹಾಲು ಉತ್ಪನ್ನಗಳ ಬಗ್ಗೆ ಇಂಥ ನೇತ್ಯಾತ್ಮಕ ಭಾವನೆ ಇದ್ದಾಗಲೂ ಎಮ್ಮೆ ಸಾಕುವುದನ್ನು ಜನ ಬಿಟ್ಟಿಲ್ಲ. `ನಮ್ಮನೆಯಲ್ಲಿ ಮಾಡುವ ಎಮ್ಮೆ ಹಾಲಿನ ಚಹಾ ಎಷ್ಟು ದಪ್ಪ ಇರುತ್ತೆ ಗೊತ್ತಾ’ ಎನ್ನುವುದರಿಂದ ಹಿಡಿದು ಮೊಸರು, ಬೆಣ್ಣೆ, ತುಪ್ಪ ಎಲ್ಲವುದರ ಬಗೆಗೂ ಹೆಮ್ಮೆಯಿಂದ ಹೇಳಿಕೊಳ್ಳುವುದು ಅಪರೂಪವೇನಲ್ಲ. ಎಮ್ಮೆ ಬಗ್ಗೆ ಏನೇ ಅನ್ನಿ ನಮ್ಮ ಸಿನಿಮಾದವರನ್ನು ನೋಡಿ ಎಂತಹ ಶಹಬಾಸ್‌ಗಿರಿ ಎಮ್ಮೆಗೆ. `ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ…. ಎಮ್ಮೆ ನಿನಗೆ ಸಾಟಿಯಿಲ್ಲ. ಬಿಸಿಲು ಬಿರುಗಾಳಿ ಮಳೆ ಚಳಿಗೆ ಅಳುಕದೆ ಮುಂದೆ ಸಾಗುವೆ’ ಎಂಥ ಅದ್ಭುತ ಕಲ್ಪನೆ.

ಜನಪದರು ಬಹಳ ಜಾಣರು. ಬಾಳಂತನ ಮುಗಿಸಿ ತವರಿನಿಂದ ಹೊರಟ ಮಗಳೊಂದಿಗೆ ಎಮ್ಮೆಯನ್ನು ಹೊಡೆದು ಕಳಿಸುವುದಿತ್ತು, ಮಗುವಿಗೆ, ಗಟ್ಟಿಯಾದ ಹಾಲು ಸಿಗಲೆಂದು. ಅದಕ್ಕೆ ಆಕೆ
“ತೊಟ್ಟಿಲು ಹೊತ್ಗೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪಕೊಟ್ಟೆಮ್ಮೆ ಹೊಡಕೊಂಡು ತೌರೂರ
ತಿಟ್ಹತ್ತಿ ತಿರುಗಿ ನೋಡ್ಯಾಳು”
ಇಷ್ಟು ಸಮೃದ್ಧಿಯಿಂದ ಇರುವ ತವರನ್ನು ಹೇಗೆ ಮರೆಯಲಿ ಎನ್ನುವ ಅಕರಾಸ್ತೆ ಅವಳದು.
ಒಮ್ಮೆ ತವರವರು ಎಮ್ಮೆಯನ್ನು ಮಗಳಿಗೆ ಕೊಟ್ಟಿಲ್ಲ ಅಂತಾದರೆ ಆಕೆ
“ಹಟ್ಟೀಲಿ ಆರೆಮ್ಮೆ ಕೊಟ್ಟಿಗ್ಯಾಗ ಮೂರೆಮ್ಮೆ
ಕೊಟ್ಟಾರ ಕೊಡಿರೊ ನನಗೊಂದ ಹಡೆದಪ್ಪ
ಹುಟ್ಟಿಲ್ಲೇನು ನಾನು ಮನೆಯಾಗ”
ಎಂದು ತನ್ನ ಹಕ್ಕನ್ನು ಪ್ರತಿಪಾದಿಸಿದ್ದೂ ಇದೆ. ಆದರೆ ಹಸು ಕೊಡಿ ಅಂತ ಆಕೆ ಕೇಳಲಿಲ್ಲ.

ನಮ್ಮ ಬಂಧುವೊಬ್ಬರು ಇದ್ದಾರೆ, ಅವರಿಗೆ ಎಮ್ಮೆ ಹಾಲಿನ ಚಹಾವೇ ಆಗಬೇಕು. ೮೪ ವರ್ಷದಲ್ಲೂ ಆಕೆ ಎಷ್ಟೊಂದು ಚುರುಕು. ಮನೆಗೆ ಬರುವ ನೆಂಟರಲ್ಲಿ ಯಾರಿಗೆ ಯಾವುದು ಇಷ್ಟ ಎನ್ನುವುದನ್ನು ಅರಿತು ಅಡಿಗೆ ಮಾಡುತ್ತಿದ್ದ ಆಕೆ ಈಗಲೂ ಮನೆಯ ಇತರರಿಗೆ ಈ ವಿಷಯದಲ್ಲಿ ಮಾರ್ಗದರ್ಶಕರು. ಆರೇಳು ದಶಕಗಳಿಂದ ಎಮ್ಮೆ ಹಾಲಿನ ಚಹಾ, ಅದೇ ಹಾಲಿನ ಮೊಸರು ಮಜ್ಜಿಗೆ ಎಲ್ಲವನ್ನೂ ಬಳಸುತ್ತಿದ್ದರೂ ಅವರ ಚಟುವಟಿಕೆ ಕುಂಠಿತವಾಗಿಲ್ಲ. ಅಂದರೆ ಎಮ್ಮೆ ಹಾಲಿನ ಬಗೆಗಿನ ಆಪಾದನೆ ಸುಳ್ಳು ಎಂದಾಯಿತು. ಎಮ್ಮೆ ಮೊಸರಿನಷ್ಟು ಗಟ್ಟಿಯಾದ ಮೊಸರು ಹಸುವಿನ ಹಾಲಿನ ಮೊಸರಲ್ಲ. ನಾವು ಚಿಕ್ಕವರಿದ್ದಾಗ ಗಟ್ಟಿಯಾದ ಮೊಸರಿಗೆ ಕಪ್ಪೆಮೊಸರು ಎನ್ನುತ್ತಿದ್ದೆವು. ನಮ್ಮ ಎಲೆಗೆ ಮೊಸರು ಬಡಿಸಿದರೆ ಅದು ಹರಡದೆ ಗಟ್ಟಿಯಾಗಿ ಕುಳಿತಿರುತಿತ್ತು. ಹಾಗಾಗಿ ಅದಕ್ಕೆ ಕಪ್ಪೆಮೊಸರು ಎನ್ನುವ ಬಿರುದಾನ.

ಎಮ್ಮೆ ಕುರಿತು ಕೆಲವರು ಅಪಸ್ವರ ಎತ್ತುತ್ತಿದ್ದರೂ ಹಿಂದಿನವರು ಊರಿಗೆ ಎಮ್ಮೆ ಮೂಲದ ಹೆಸರನ್ನು ಇಟ್ಟಿರುವುದು ಕಂಡುಬರುತ್ತದೆ. ಮಹಿಷಪುರ, ಮಹಿಷಮಂಡಲ, ಎಮ್ಮೆಗನೂರು ಇತ್ಯಾದಿ. ಈಗಿನ ಮೈಸೂರಿನ ಮೂಲ ಹೆಸರು ಮಹಿಷೂರು ಎಂದೇ ಆಗಿತ್ತು. ಪ್ರಾಯಶಃ ನರಕಾಧಿಪತಿ ಯಮನ ವಾಹನ ಕೋಣ ಆಗಿರುವುದರಿಂದ ಅದರ ಹೆಣ್ಣುರೂಪದ ಎಮ್ಮೆಯನ್ನು ಅಪಶಕುನವೆಂದು ನಂಬುವವರೂ ಇದ್ದಾರೆ. ಒಳ್ಳೆಯ ಕೆಲಸಕ್ಕೆ ಹೊರಟಾಗ ಎದುರಿನಿಂದ ಹಸು ಬಂದರೆ ಶುಭವಂತೆ, ಎಮ್ಮೆ ಎದುರಾದರೆ ಹೊರಟ ಕೆಲಸ ಆಗುವುದಿಲ್ಲವಂತೆ.

ಮಲೆನಾಡಿನ ಭಾಗದಲ್ಲಿ ಈಗಲೂ ಎಮ್ಮೆ ಹಾಲಿಗೆ, ತುಪ್ಪಕ್ಕೆ ಇನ್ನಿಲ್ಲದ ಬೇಡಿಕೆ. ಅದು ಗಟ್ಟಿಯಾಗಿರುತ್ತದೆ ಎಂದು. ಹಸುವಿನ ಹಾಲಿನ ದರ ಲೀಟರಿಗೆ ಮೂವತೈದು ಇದ್ದರೆ ಎಮ್ಮೆ ಹಾಲಿಗೆ ನಲವತ್ತು ರುಪಾಯಿ. ತುಪ್ಪವೂ ದುಬಾರಿಯೇ. ಹರಳುಹರಳಾಗಿರುತ್ತದೆ ಎಂದು ಗಿರಾಕಿಗಳು ಎಮ್ಮೆತುಪ್ಪಕ್ಕಾಗಿ ಎಲ್ಲಕಡೆ ಹುಡುಕಾಡುತ್ತಾರೆ. ಕರೋನಾದ ಕಾರಣದಿಂದ ನಾನು ಒಂದಿಷ್ಟು ದಿನಗಳ ಕಾಲ ಊರಿನಲ್ಲಿದ್ದೆ. ಎಮ್ಮೆತುಪ್ಪ ಇದೆಯಾ? ಎಂದು ಎಷ್ಟೊಂದು ಜನರ ದೂರವಾಣಿ ಕರೆಗಳು. ಒಂದು ಕೇಜಿ ತುಪ್ಪ ಸಿಗದು ಎಂದರೆ ಅರ್ಧ ಇದ್ದರೂ ಆದೀತು ಎನ್ನುವ ಬೇಡಿಕೆ. ಇಲ್ಲ ಅಂದರೆ ಮುಂದಿನವಾರ ಸಿಕ್ಕರೂ ಆದೀತು ಎನ್ನುವ ಕೋರಿಕೆ. ಇಷ್ಟೊಂದು ಬೇಡಿಕೆ ಇದೆಯೆಂದು ಕೆಲವರು ಕಷ್ಟವಾದರೂ ಎಮ್ಮೆಯನ್ನು ಸಾಕುತ್ತಾರೆ.

ಆದರೆ ಜನ ಅಂದಕೊಂಡ ಹಾಗೆ ಎಮ್ಮೆ ಸೂಕ್ಷ್ಮಜೀವಿಯಲ್ಲ ಎನ್ನುವುದನ್ನು ನಾನಂತೂ ನಂಬುವುದಿಲ್ಲ. ಎಮ್ಮೆ ಕುರಿತ ನನ್ನ ಅನುಭವವೇ ಬಹಳ ಭಿನ್ನವಾದುದು. ಇದು ನನ್ನೊಬ್ಬಳದೇ ಅಲ್ಲ, ನಮ್ಮನೆಯ ಎಲ್ಲ ಸದಸ್ಯರದು ಹೌದು. ಮಲೆನಾಡಿನ ಮನೆ ಎಂದ ಮೇಲೆ ಎಮ್ಮೆ ಇಲ್ಲದಿದ್ದರೆ ಹೇಗೆ? ಕರೆಯುತ್ತಿರುವ ಎಮ್ಮೆ ಗಬ್ಬ ಇದ್ದಿದ್ದರಿಂದ ಮುಡಿಸಿಕೊಂಡಿತ್ತು. ಇನ್ನೊಂದು ಎಮ್ಮೆ ತರಬೇಕೆಂದು ಮನೆಯಲ್ಲಿ ಮಾತು ನಡೆದಿತ್ತು. ಅದಕ್ಕೆ ಸರಿಯಾಗಿ ಊರಿಂದೂರಿಗೆ ದನಕರುಗಳನ್ನು ಹೊಡೆದುಕೊಂಡು ಹೋಗುವ ಕೊರಚರ ಗುಂಪು ನಮ್ಮೂರಿಗೆ ಬಂದಿತ್ತು. (ವರ್ಷಕ್ಕೋ ಎರಡು ವರ್ಷಕ್ಕೋ ಹೀಗೆ ಊರಿಂದೂರಿಗೆ ಬರುತ್ತಿದ್ದರು) ಎರಡನೆಯ ಕರುವನ್ನು ಹಾಕಲಿರುವ ಎಮ್ಮೆಯೊಂದು ಅಪ್ಪಯ್ಯನಿಗೆ ಇಷ್ಟವಾಗಿತ್ತು. ದರ ಹೊಂದದೆ ಬೇಡ ಎನ್ನುವ ಹಂತ ತಲುಪಿತು. ಆ ಗುಂಪಿನ ಯಜಮಾನ ನಾನೂರು ಹದಿನೈದು ರುಪಾಯಿಗಿಂತ ಕಡಿಮೆಗೆ ಕೊಡುವುದಿಲ್ಲವೆಂದು ಹಟಹಿಡಿದಿದ್ದ. ಅಪ್ಪಯ್ಯ ನಾನೂರು ರುಪಾಯಿಯ ಮೇಲೆ ಒಂದು ಬಿಡಿಗಾಸೂ ಕೊಡುವುದಿಲ್ಲ ಎನ್ನುತ್ತಿದ್ದರು. ಕೊನೆಗೆ ನಮ್ಮ ಅಕ್ಕ ಮಧ್ಯಸ್ಥಿಕೆ ವಹಿಸಿ ನಾನೂರೈದು ರುಪಾಯಿಗೆ ಎಮ್ಮೆ ನಮ್ಮ ಕೊಟ್ಟಿಗೆಯನ್ನು ಸೇರಿತ್ತು. ಎಂಟ್ಹತ್ತು ದಿನಗಳಲ್ಲಿ ಹೆಣ್ಣುಕರು ಹುಟ್ಟಿದಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ಆರೈಕೆಯ ನಂತರ ಹೊತ್ತಿಗೆ ಎರಡು ಲೀಟರ್ ಹಾಲು ಕೊಡುತ್ತಿದ್ದ ಎಮ್ಮೆ ಎಲ್ಲರಿಗೂ ಅಚ್ಚುಮೆಚ್ಚು. ಮೊದಲ ಮೂರು ತಿಂಗಳವರೆಗೆ ಮೂರುಹೊತ್ತು ಹಾಲು ಹಿಂಡಬೇಕಿತ್ತು. ಗಟ್ಟಿಯಾದ ಹಾಲು, ಮೊಸರು. ಇವೆಲ್ಲವೂ ಸರಿ. ಆದರೆ ಎಮ್ಮೆಯನ್ನು ಮೇಯಿಸುವುದು ಮಾತ್ರ ಬಹಳ ಕಷ್ಟದ್ದಾಗಿತ್ತು.

ನಾನು ನಾಲ್ಕನೆಯ ತರಗತಿ ಮುಗಿಸಿ, ಮನೆಯಲ್ಲಿದ್ದ ಸಮಯ. ನಮ್ಮೂರಿನಲ್ಲಿ ಮಾಧ್ಯಮಿಕ ಶಾಲೆ ಇಲ್ಲದ್ದರಿಂದ ಎಮ್ಮೆ ಕಾಯುವ ಕೆಲಸ ನನ್ನ ಪಾಲಿಗೆ. ಉಳಿದ ದನಗಳ ಜೊತೆಗೆ ಮೇಯಲು ಬಿಟ್ಟರೆ ಅದನ್ನು ಹುಡುಕುವುದು ತಲೆನೋವು. ಅದು ಎಂಥ ಗಾಂಚಾಲಿ ಎಂದರೆ ಎಲ್ಲೋ ದೂರದಲ್ಲಿ ಅದರ ಸದ್ದು ಕೇಳಿಸಿಕೊಂಡು ಹತ್ತಿರ ಹೋಗುವಷ್ಟರಲ್ಲಿ ಅದು ಅಡಗಿರುತ್ತಿತ್ತು. ಅದು ಮೇಯುವಾಗ ಸದ್ದು ಕೇಳಿಸಲಿ ಎನ್ನುವ ಉದ್ದೇಶದಿಂದ ಅಣ್ಣ ಅದರ ಕುತ್ತಿಗೆಗೆ ಒಂದು ಮರದ ಲೊಟ್ಟೆ ಕಟ್ಟಿದ್ದ. ದೂರದಲ್ಲಿ ಲೊಟ್ಟೆ ಸದ್ದು ಕೇಳಿಸುವುದೆಂದು ಅವನು ಹೋಗುವಷ್ಟರಲ್ಲಿ ಸದ್ದು ಇರುತ್ತಿರಲಿಲ್ಲವಂತೆ. ಮತ್ತೆ ತುಸುದೂರ ಹೋದಮೇಲೆ ಲೊಟ್ಟೆಯ ಸದ್ದು. ಮನುಷ್ಯನ ಹೆಜ್ಜೆ ಸದ್ದು ಕೇಳಿಸುತ್ತಿದ್ದಂತೆ ಎಮ್ಮೆ ಪೊದೆಗಳ ಮಧ್ಯದಲ್ಲಿ ಅಲ್ಲಾಡದೆ ನಿಂತಿರುತ್ತಿತ್ತಂತೆ. ಹೀಗಾದರೆ ತಪ್ಪಿಸಿಕೊಳ್ಳುವ ಎಮ್ಮೆಯನ್ನು ಹುಡುಕುವುದು ಹೇಗೆಂದು ಎಮ್ಮೆಕಾಯಲು ನನಗೆ ಹೇಳಿದ್ದ ಅಣ್ಣ.

`ನಮ್ಮನೆಯಲ್ಲಿ ಮಾಡುವ ಎಮ್ಮೆ ಹಾಲಿನ ಚಹಾ ಎಷ್ಟು ದಪ್ಪ ಇರುತ್ತೆ ಗೊತ್ತಾ’ ಎನ್ನುವುದರಿಂದ ಹಿಡಿದು ಮೊಸರು, ಬೆಣ್ಣೆ, ತುಪ್ಪ ಎಲ್ಲವುದರ ಬಗೆಗೂ ಹೆಮ್ಮೆಯಿಂದ ಹೇಳಿಕೊಳ್ಳುವುದು ಅಪರೂಪವೇನಲ್ಲ. ಎಮ್ಮೆ ಬಗ್ಗೆ ಏನೇ ಅನ್ನಿ ನಮ್ಮ ಸಿನಿಮಾದವರನ್ನು ನೋಡಿ ಎಂತಹ ಶಹಬಾಸ್‌ಗಿರಿ ಎಮ್ಮೆಗೆ. `ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ…. ಎಮ್ಮೆ ನಿನಗೆ ಸಾಟಿಯಿಲ್ಲ. ಬಿಸಿಲು ಬಿರುಗಾಳಿ ಮಳೆ ಚಳಿಗೆ ಅಳುಕದೆ ಮುಂದೆ ಸಾಗುವೆ’ ಎಂಥ ಅದ್ಭುತ ಕಲ್ಪನೆ.

ದಿನವೂ ತಿಂಡಿಯಾದ ಮೇಲೆ ಹತ್ತಿರದಲ್ಲಿ ಇದ್ದ ಹಿತ್ತಿಲಿಗೆ ಅಣ್ಣ ಎಮ್ಮೆಯನ್ನು ಕೂಡುತ್ತಿದ್ದ, ಅದು ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಹೋಗದಂತೆ ಕಾಯುವ ಕೆಲಸ ನನ್ನದು. ಹಿತ್ತಿಲು ಆಗಿದ್ದರಿಂದ ಬೇಲಿ ಇರುತ್ತಿತ್ತು. ನಾನು ನೋಡುತ್ತಿರುವಷ್ಟು ಹೊತ್ತು ಅದು ತಲೆತಗ್ಗಿಸಿ ಮೇಯುತ್ತಿತ್ತು. ಎಷ್ಟುಹೊತ್ತು ಅಂತ ನಾನು ಸುಮ್ಮನೆ ಕೂತಿರಲು ಸಾಧ್ಯ. ಯಾವುದೋ ಕಾದಂಬರಿ ಅಥವಾ ಕಸ್ತೂರಿ ಓದಲು ಶುರುಮಾಡಿದರೆ ಎಮ್ಮೆ ಮಂಗಮಾಯ. ಬೇಲಿಯನ್ನು ಕೋಡಿನಿಂದ ಎತ್ತಿ ಬೇಲಿಮುರಿದು ಮನಬಂದಕಡೆ ಹೋಗಿರುತ್ತಿತ್ತು. `ಪುಸ್ತಕ ಹಿಡಿದರೆ ನಿಂಗೆ ಮೈಮೇಲೆ ಪ್ರಜ್ಞೆ ಇರಲ್ಲ’ ಅನ್ನುವ ಬೈಗುಳ ನನಗೆ. ಯಾಕಾದರೂ ಈ ಎಮ್ಮೆ ನಮ್ಮನೆಗೆ ಬಂತೇನೋ ಎಂದು ಬೈದುಕೊಳ್ಳುತ್ತಿದ್ದೆ. ಕೆಲವು ಬಾರಿ ರಜೆಯ ದಿನ ನನ್ನ ತಮ್ಮ ನನ್ನೊಂದಿಗೆ ಬರುತ್ತಿದ್ದ. ನಾವು ಮಾತಾಡುತ್ತ ಕೂತಿದ್ದರೆ ಅದು ಮೇಯ್ತಾ ಇರುತ್ತಿತ್ತು. ನಾವು ಆಡಲು ಶುರುಮಾಡಿ ತುಸು ಹೊತ್ತಿನಲ್ಲಿ ಅದು ನಮ್ಮ ಕಣ್ತಪ್ಪಿಸಿ ಹಿತ್ತಿಲಿನಿಂದ ಮಾಯವಾಗುತ್ತಿತ್ತು. ಒಮ್ಮೆ ಬೈಗುಳ ತಪ್ಪಿಸಿಕೊಳ್ಳುವ ಉದ್ದೇಶದಿಂದ ಎಮ್ಮೆ ತಪ್ಪಿಸಿಕೊಂಡಾಗ ನಾನು ತಮ್ಮ ಎಮ್ಮೆ ಹುಡುಕಿಕೊಂಡು ಹೊರಟೆವು. ಹಿತ್ತಿಲಿನ ಪಕ್ಕದಲ್ಲಿಯೇ ಕಾಡು. ಅಲ್ಲೆಲ್ಲ ಸುತ್ತುತ್ತಿರುವಾಗ ಒಂದು ಸೀಳುನಾಯಿಯ ಹಿಂಡು ಓಡಿಹೋಯಿತು. ನಾವಿಬ್ಬರೂ ಕಂಗಾಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ಹತ್ತಿ ನಿಂತೆವು. ಎದೆ ಹೊಡೆದುಕೊಳ್ಳುತ್ತಿತ್ತು, ಕಾಲು ನಡುಗುತ್ತಿತ್ತು. ಒಂದು ಕ್ಷಣ ಕಳೆದ ಮೇಲೆ ತಮ್ಮ `ಅಕ್ಕ’ ಎಂದು ಕರೆದ. ಉಸಿರು ತೆಗೆದೆ. ದಿಮ್ಮಿಯ ಮೇಲಿನಿಂದ ಇಳಿಯಲು ಹೆದರಿಕೆ. ಹಾಗಂತ ಅಲ್ಲಿ ಎಷ್ಟುಹೊತ್ತು ಇರಲು ಸಾಧ್ಯ. `ಇವತ್ತು ಅಪ್ಪಯ್ಯನ ಹತ್ತಿರ ಇಬ್ಬರಿಗೂ ಕಡುಬು ಬೀಳುತ್ತದೆ’ ಎಂದು ಹೆದರಿಕೊಂಡೇ ಮನೆಗೆ ಬಂದೆವು. `ಎಮ್ಮೆ ಎಲ್ಲಿ? ಇಷ್ಟುಹೊತ್ತು ಎಲ್ಲಿಗೆ ಹೋಗಿದ್ರಿ’ ಅಂತ ಮನೆಯಲ್ಲಿ ವಿಚಾರಣೆ. ಹೆದರುತ್ತ ವಿಷಯ ತಿಳಿಸಿದ ಮೇಲೆ ಮಂತ್ರಾಕ್ಷತೆ.

ಇಂತಹ ಚಾಳಿ ಇರುವ ಎಮ್ಮೆಯನ್ನು ಮಾರೋದೆ ಸರಿ ಅಂತ ಮನೆಯಲ್ಲಿ ಮಾತುಕತೆ. ಆದರೆ ಗಟ್ಟಿಯಾದ ಹಾಲು, ಮೊಸರಿನ ಆಕರ್ಷಣೆ. ಜೊತೆಗೆ ತಿಂಗಳಿಗೆ ಎರಡೋ ಮೂರೋ ಕೇಜಿ ತುಪ್ಪವನ್ನು ಮಾರುವಷ್ಟು ತುಪ್ಪದ ಸಂಗ್ರಹ. ಮಾರೋದು ಬ್ಯಾಡ ಎನ್ನುವ ಮಾತೇ ಗೆದ್ದಿತು. ನಾವೆಷ್ಟೇ ಎಚ್ಚರಿಕೆಯಿಂದ ಎಮ್ಮೆಯನ್ನು ನೋಡಿಕೊಳ್ಳುತ್ತಿದ್ದಾಗ್ಯೂ ಒಮ್ಮೆ ಎಮ್ಮೆ ತಪ್ಪಿಸಿಕೊಂಡು ಹೋಯಿತು. ಈ ಬಾರಿ ಮನೆಯ ಇನ್ನೊಂದು ಎಮ್ಮೆಯೂ ಇದ್ದಿದ್ದರಿಂದ ಅವು ಬೇರೆ ಊರಿಗೆ ಹೋಗಿದ್ದವು. ಎರಡು ದಿನಗಳ ನಂತರ ಆ ಇನ್ನೊಂದು ಎಮ್ಮೆ ಕಟ್ಟಿದ್ದ ಹಗ್ಗವನ್ನು ಹರಿದುಕೊಂಡು ಹಗ್ಗದ ಸಮೇತ ಮಧ್ಯರಾತ್ರಿ ಮನೆಗೆ ಬಂದಿತ್ತು. ಈ ಎಮ್ಮೆ ಮೂರನೆಯ ದಿನ ಯಾರ ಮನೆಯಲ್ಲಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಅದನ್ನು ಅವರ ಮನೆಯಿಂದ ಹೊಡೆದುಕೊಂಡು ಬರಲು ಅಣ್ಣ ಆಳಿನ ಸಮೇತ ಹೋಗಿದ್ದ. ಕಟ್ಟಿ ಹಾಕಿದವರು ನಿಮ್ಮ ಎಮ್ಮೆಯನ್ನು ಗುರುತಿಸಿ ಎಂದರಂತೆ. `ಇದು ನಮ್ಮ ಎಮ್ಮೆ’ ಎಂದರೆ ಅಲ್ಲ ಎಂದು ವಾದಿಸಿದರಂತೆ. ಎಮ್ಮೆಯ ಹತ್ತಿರ ಹೋಗುತ್ತಿದ್ದಂತೆ ಎಮ್ಮೆ ಅಣ್ಣನ ಕೈ ನೆಕ್ಕಲು ಪ್ರಾರಂಭಿಸಿದ್ದರಿಂದ ಆ ಮನೆಯ ಯಜಮಾನ ಅನಿವಾರ್ಯವಾಗಿ ಕಟ್ಟಿದ ಎಮ್ಮೆಯನ್ನು ಬಿಟ್ಟುಕೊಟ್ಟನಂತೆ.

ಮತ್ತೆ ಎರಡು ಕರು ಹಾಕುವವರೆಗೆ ಮನೆಯಲ್ಲಿ ಅದನ್ನು ಸುಧಾರಿಸಿದ್ದಾಯಿತು. ಆಮೇಲೆ ಅದನ್ನು ನಮ್ಮ ಸಂಬಂಧಿಯೊಬ್ಬರಿಗೆ ಮಾರಿದರು. ನಮ್ಮ ಕೊಟ್ಟಿಗೆಯಿಂದ ಹೋಗಿ ಮೂರುದಿನಕ್ಕೆ ಮತ್ತೆ ಹಾಜರ್. ಎರಡು ಬಾರಿ ಹೀಗಾದ ಮೇಲೆ ತಿಂಗಳೊಪ್ಪತ್ತು ಮನೆಯಲ್ಲಿ ಕಟ್ಟಿಹಾಕಿ ಮತ್ತೆ ನಮ್ಮನೆಗೆ ಬರದಂತೆ ನೋಡಿಕೊಂಡರು.

ಕೆಲವು ಎಮ್ಮೆಗಳು ಬಹಳ ಸೂಕ್ಷ್ಮ. ಎಮ್ಮೆ ಕರುಹಾಕಿ ನಂತರದಲ್ಲಿ ಒಬ್ಬರೇ ಹಾಲು ಕರೆಯುತ್ತಿದ್ದರೆ ಅದು ಕೆಲವು ದಿನಗಳ ನಂತರ ಇನ್ನೊಬ್ಬರಿಗೆ ಹಾಲನ್ನು ಕೊಡುವುದಿಲ್ಲ. ಸೊರವು ಬಿಡದೆ ಸುಮ್ಮನೆ ನಿಂತಿರುತ್ತದೆ. ಮೊಲೆಗಳನ್ನು ಎಷ್ಟೇ ಜಗ್ಗಿದರೂ ಮೊಲೆಗೆ ಹಾಲು ಇಳಿಸುವುದೇ ಇಲ್ಲ. ಇದನ್ನು ನಮ್ಮೂರಕಡೆ ಕೈಮರ್ಚಲು ಎನ್ನುತ್ತಾರೆ. ಇನ್ನೊಬ್ಬರು ಹಾಲು ಕರೆಯಬೇಕೆಂದರೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ಹೆಚ್ಚಾಗಿ ಮನೆಯಲ್ಲಿ ಹೆಂಗಸರು ಹಾಲು ಕರೆಯುವ ರೂಢಿ. ಅವರೇನಾದರು ಎರಡ್ಮೂರು ದಿನಗಳ ಕಾಲ ಬೇರೆಯೂರಿಗೆ ಹೋದರೆ ಮನೆಯವರಿಗೆ ಹಾಲು ಸಿಗುವ ಗ್ಯಾರಂಟಿ ಇರುವುದಿಲ್ಲ. ಅದಕ್ಕೆ ಮೊದಲೆಲ್ಲ ಒಂದು ಉಪಾಯ ಮಾಡುತ್ತಿದ್ದರು. ಅವರು ಉಟ್ಟಿದ್ದ ಸೀರೆಯನ್ನು ತೊಳೆಯದೆ ಹಾಗೆ ಬಿಚ್ಚಿಟ್ಟು ಹೋಗುತ್ತಿದ್ದರು. ಮನೆಯಲ್ಲಿರುವವರು ಅದನ್ನು ಉಟ್ಟು ತಲೆಗೆ ಮುಸುಕು ಹಾಕಿಕೊಂಡು ಹಾಲು ಕರೆಯಲು ಹೋದರೆ ಮೂಸಿ ನೋಡಿ ಎಮ್ಮೆ ಮೊಲೆಗೆ ಹಾಲು ಇಳಿಸುತ್ತಿತ್ತು. ಒಮ್ಮೆ ನಮ್ಮ ಸೋದರ ಮಾವನ ಸೊಸೆ ತವರಿಗೆ ಮದುವೆಗೆಂದು ಊರಿಗೆ ಹೋಗುವಾಗ ಹೀಗೆಯೇ ಹಿಂದಿನ ದಿನ ಉಟ್ಟಿದ್ದ ಸೀರೆಯನ್ನು ಬಿಚ್ಚಿಟ್ಟು ಹೋಗಿದ್ದರಂತೆ. ಅವರ ಮನೆಯೆದುರಿನ ರಸ್ತೆಯನ್ನು ದಾಟಿ ಕೊಟ್ಟಿಗೆಗೆ ಹೋಗಬೇಕಿತ್ತು. ಗಂಡನಿಗೆ ಪೀಕಲಾಟ. ಹೆಂಡತಿಯ ಸೀರೆಯುಟ್ಟು ಹೇಗೆ ಹೋಗುವುದು ಎಂದು. ಕೊನೆಗೆ ಕೊಟ್ಟಿಗೆಗೆ ಹೋಗಿ ಅಲ್ಲಿಯೇ ಸೀರೆಯುಟ್ಟು ಹಾಲು ಕರೆದರಂತೆ.

ಇಷ್ಟೊಂದು ಸೂಕ್ಷ್ಮ ಜೀವಿಯಾದ ಎಮ್ಮೆಯನ್ನು ಒರಟು, ದಡ್ಡ ಎಂದೆಲ್ಲ ಯಾಕೆ ಹೇಳುತ್ತಾರೋ ಕಾಣೆ. ಸೆಕೆಗಾಲದಲ್ಲಿ ನಾವೆಲ್ಲ ಉಶ್ಶಪ್ಪಾ ಸೆಕೆ ಎಂದು ಗೋಳಾಡುತ್ತೇವೆ. ಆದರೆ ಎಮ್ಮೆ ನೋಡಿ, ನೀರುಕಂಡರೆ ಅದರಲ್ಲಿ ಹೊರಳಾಡಿ ತನ್ನ ಸೆಕೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ. ಅದಕ್ಕೆ ದೇಹ ತಂಪಾಗಿಸಲಿಕ್ಕೆ ನೀರೇ ಬೇಕು ಅಂತಿಲ್ಲ, ಕೊಚ್ಚೆ ನೀರಿನ ಹೊಂಡವಾದರೂ ಆಗುತ್ತದೆ. ಹಾಗಾಗಿ, ಸಾಕುವುದು ಕಷ್ಟವಲ್ಲ. ಹಸುವಿನ ವಿಷಯ ಹಾಗಲ್ಲ. ಬಹಳ ಎಚ್ಚರಿಕೆ ಬೇಕು ಅದನ್ನು ಸಾಕಲಿಕ್ಕೆ. ಏನು ತಿಂಡಿಕೊಟ್ಟರೂ ಅದನ್ನು ತಿನ್ನುವ ಎಮ್ಮೆಗೆ ರೋಗಬಾಧೆ ಕಡಿಮೆ. ಅದರ ಸಾಕಣೆ ಆರ್ಥಿಕವಾಗಿ ಲಾಭದಾಯಕ ಎನ್ನುತ್ತಾರೆ ಸಾಕಣೆದಾರರು. ಎಮ್ಮೆ ಕಲಗಚ್ಚು ಕುಡಿಯುವುದನ್ನು ಗಮನಿಸಿದರೆ ಸಾಕು, ಅದರ ಬುದ್ಧಿವಂತಿಕೆ ತಿಳಿಯುತ್ತದೆ. ಮೇಲಿನ ತಿಳಿಯನ್ನಷ್ಟೆ ಕುಡಿಯುವುದಿಲ್ಲ, ಮೂತಿಯನ್ನು ತಳದವರೆಗೆ ಹಾಕಿ ಅಲ್ಲಿರುವ ದಪ್ಪವಾಗಿರುವ ಕಲಗಚ್ಚೋ ಅಥವಾ ಹಿಂಡಿಯನ್ನೋ ಕಬಳಿಸುವ ಉಪಾಯ ಅದಕ್ಕೆ ಸಿದ್ಧಿಸಿದೆ. ಆದರೆ ಅದು ಕುಡಿಯುವುದು ಮಾತ್ರ ಸದ್ದು ಮಾಡಿಯೇ. ಅದಕ್ಕೇ ಯಾರಾದರೂ ಕುಡಿಯುವಾಗ ಸದ್ದು ಮಾಡಿದರೆ `ಎಮ್ಮೆ ಕಲಗಚ್ಚು ಕುಡಿದಂತೆ ಕುಡಿತೀಯೆ’ ಎಂದು ಹಂಗಿಸುವುದಿದೆ. ಸುರಿದು ಉಂಡರೂ ಅಷ್ಟೆ.

ಎಮ್ಮೆ ಹೇಳಿಕೇಳಿ ದೇಸೀಯದು, ಅಥವಾ ಜವಾರಿ ತಳಿ. ನಾಡಹಸು, ಸೀಮೆಹಸು ಅಂತ ಕರೆಯುವ ಹಾಗೆ ಎಮ್ಮೆಯನ್ನು ಕರೆಯುವುದನ್ನು ನಾನಂತೂ ಎಲ್ಲಿಯೂ ಕೇಳಿಲ್ಲ. ಹಾಗಂತ ಅದರಲ್ಲಿಯೂ ಸಾಕಷ್ಟು ತಳಿಗಳಿವೆ. ಧಾರವಾಡ ಎಮ್ಮೆ, ಮುರ್ರಾ, ಸ್ಫೂರ್ತಿ, ಗೋಳೀರ, ಕಿಲಾರಿ, ಸಾಂಗಲಿ, ಗುಜ್ಜಾರ ಇತ್ಯಾದಿಯಾಗಿ. ಕೆಲವು ಹೆಚ್ಚು ಹಾಲನ್ನು ಕೊಡುವ ತಳಿಗಳಾದರೆ ಕೆಲವು ಸಾಕಲು ಅನುಕೂಲಕರವಾದ ಸಣ್ಣದೇಹದ ತಳಿಗಳು. ಇಷ್ಟೆಲ್ಲ ಇದ್ದರೂ ಯಾಕೋ ಏನೋ `ಸೊಸೆ ಬಂದು ಆರುದಿನ, ಎಮ್ಮೆ ಬಂದು ಮೂರುದಿನ’ ಎನ್ನುವ ಗಾದೆ ಇದೆ. `ಹೊಗಳಿದ ಎಮ್ಮೆ ಮಜ್ಜಿಗೆ ಹುಳಿಹುಳಿ’ ಎಂದೂ ಹಳಿಯುವುದಿದೆ. `ಸತ್ತ ಎಮ್ಮೆ ಒಕ್ಕಳು ಹಾಲು ಕರೆದಿತ್ತು’ ಎನ್ನುವ ಗಾದೆ ಮಾತೂ ಬಳಕೆಯಲ್ಲಿದೆ. ಏನೇ ಇರಲಿ, ಎಮ್ಮೆ ಹಾಲಿನಿಂದ ತಯಾರಿಸುವ ಕರದಂಟು, ಕುಂದಾಗಳ ರುಚಿಯ ಮುಂದೆ ಉಳಿದುದೆಲ್ಲ ಗೌಣವೇ. ಅಂದಮೇಲೆ ಹೈನುಗಾರಿಕೆ ಇರಲಿ, ಬಿಳಿಕ್ರಾಂತಿ ಇರಲಿ ಎಮ್ಮೆ ಇಲ್ಲದೆ ಅದು ಅಸ್ತಿತ್ವ ಉಳಿಸಿಕೊಳ್ಳಲು ಹೇಗೆ ಸಾಧ್ಯ?