”ನಮ್ಮ ಕಣ್ಣಿಗೆ ಎರಡೂ ಪಟ್ಟೆ ಹುಲಿಗಳಾಗಿ, ಅದೇ ಬಣ್ಣದ ಮೈಮುಖಗಳ, ಅಷ್ಟೇ ಗರ್ವ ಗಾಂಭೀರ್ಯಗಳ ಅತಿ ಹೋಲಿಕೆಯ ಬಂಧುಗಳಾಗಿಯೋ ಜೀವಿಗಳಾಗಿಯೋ ಕಂಡರೂ ಆ ಆ ಹುಲಿಗಳ ಕಣ್ಣಿನಲ್ಲಿ ಸಹಜವಾಗಿ ವಾತ್ಸಲ್ಯ ತಕ್ಷಣಕ್ಕೆ ಹುಟ್ಟುವುದಿಲ್ಲ. ಖಂಡಿತವಾಗಿ ಪ್ರೀತಿ ಮೂಡಿಯೇ ಬಿಡುತ್ತದೆ ಎನ್ನುವುದೂ ಖಾತ್ರಿ ಇಲ್ಲ. ಅಥವಾ ಒತ್ತಾಯ ಮಾಡಿ ಮೊದಲು ಮದುವೆ ಮಾಡಿ, ನಂತರ ಎಲ್ಲ ಸರಿ ಹೋಗುತ್ತದೆ ಎಂಬ ಅನುಭವಿಗಳ ಮಾತು ಕೇಳಿ ಒಂದು ಪಂಜರದಲ್ಲಿ ಎರಡನ್ನೂ ಕೂಡಿ ಹಾಕುವ ಹಾಗೂ ಇಲ್ಲ” ಯೋಗೀಂದ್ರ ಮರವಂತೆ ಅಂಕಣ.

 

ಒಬ್ಬರಿಗೆ ಬದುಕಲು ಎಷ್ಟು ಜಾಗ ಬೇಕು ಅಥವಾ ಎಷ್ಟು ಸಾಕು ಎನ್ನುವುದು ಕಾಲಕಾಲಕ್ಕೆ ಎದುರಾಗುವ ಪ್ರಶ್ನೆ, ಮನೆಮನೆಗಳಲ್ಲಿ ನಡೆಯುವ ಚರ್ಚೆ ಮನಮನಗಳಲ್ಲಿ ಜರಗುವ ತುಮುಲ; ಮತ್ತೆ ಸಮಯದ ಜೊತೆಗೆ ಚಲಿಸುವ ಲೌಕಿಕ ಹಾಗು ಪಾರಮಾರ್ಥಗಳ ಪುರಾತನ ಜಿಜ್ಞಾಸೆ. ಅನಾದಿಕಾಲದಿಂದಲೂ ಯಾರಿಗೆಷ್ಟು ಜಾಗ ಎನ್ನುವ ವಾದ ವಿವಾದಗಳಲ್ಲಿ ಚಕ್ರಾಧಿಪತ್ಯಗಳು ತುಂಡಾಗಿವೆ, ರಾಷ್ಟ್ರಗಳು ಭಾಗವಾಗಿವೆ, ಕುಟುಂಬಗಳು ಹೋಳಾಗಿವೆ, ನೆರೆಹೊರೆಯವರ ಮನಸ್ಸುಗಳು ಒಡೆದು ಹೋಗಿವೆ. ಮನುಷ್ಯರಿಗೂ, ಪ್ರಾಣಿಗಳಿಗೂ, ಹಕ್ಕಿಗಳಿಗೂ, ಗಿಡಮರಗಳಿಗೂ, ಎಲ್ಲವುಗಳಿಗೂ ಇದೆ ಅವವುಗಳದೇ ಸ್ಥಳದ ಹಕ್ಕು ಮತ್ತು ಗಡಿಯ ಕಲ್ಪನೆ. ಮನುಷ್ಯರಿಗೆ ಮಾತ್ರ ನಿನ್ನೆ ಇದ್ದಷ್ಟರಲ್ಲಿ ಇವತ್ತು ಬದುಕುವುದು ಆಗುತ್ತಿಲ್ಲ, ಇಂದಿರುವುದು ನಾಳೆ ಸಾಕಾಗುತ್ತದೋ ಇಲ್ಲವೋ ಗೊತ್ತಿಲ್ಲ.

ಕೆಲವರ ಸುತ್ತಲಿನ ಜಾಗ ಕಡಿಮೆ ಆಗುತ್ತಿದೆ ಮತ್ತೆ ಕೆಲವರದು ಹೆಚ್ಚಾಗುತ್ತಿದೆ. ಭೂಮಿ ಹುಟ್ಟಿದಂದಿನಿಂದ ಇಂದಿನವರೆಗೂ ಯಾರ್ಯಾರಿಗೆ ಎಷ್ಟೆಷ್ಟು ಜಾಗ ಎನ್ನುವುದು ಹೊಂದಾಣಿಕೆಯಲ್ಲಿ ತೀರ್ಮಾನ ಆದ ವಿಷಯವಲ್ಲ. ಅಥವಾ ಅಂತಹ ಯಾವುದೇ ಪ್ರಾಕೃತಿಕ ಸಂಧಾನಕ್ಕೆ ಮನುಷ್ಯರ ಸಹಕಾರ ಖಂಡಿತ ಇಲ್ಲ. ಎಲ್ಲವೂ ನಮ್ಮದೇ ಎನ್ನುವ ಮಹಾನುಭಾವರು ನಾವು. ಸಣ್ಣ ಅವಕಾಶದಲ್ಲಿ ಬದುಕೂ ಸುವಿಶಾಲ ಅರಮನೆಯೊಳಗಿನ ಬಾಳ್ವೆಯೂ ಜೊತೆಜೊತೆಗೇ ನಿತ್ಯವೂ ಕಾಣುತ್ತದೆ. ಸ್ಥಳಾವಕಾಶದ ಕಲ್ಪನೆ ಹಾಗು ಔಚಿತ್ಯ ಮುಂಬೈಯಿಯ ಚಾಲ್ ಗಳಲ್ಲಿ ಬದುಕುವವರಿಗೂ ಹಳ್ಳಿಯ ತೋಟದ ಮಧ್ಯ ಮನೆ ಮಾಡಿಕೊಂಡು ಇರುವವರಿಗೂ ಒಂದೇ ಅಲ್ಲವಲ್ಲ. ಹಾಗೆ ಕಾಡಿನಲ್ಲಿ ಸ್ವಚ್ಛಂದ ಓಡಾಡುವ ಪ್ರಾಣಿಗಳಿಗೂ ಸಂಗ್ರಹಾಲಯದ ಬೋನಿನಲ್ಲಿ ಶತಪಥ ತಿರುಗುತ್ತ ಆಯಸ್ಸು ಕಳೆಯುವ ಜೀವಿಗಳಿಗೂ ಕೂಡ ಸಮಾನ ಅಲ್ಲ. ಭೂಮಿಯ ಗಾತ್ರ ಹೆಚ್ಚುಕಮ್ಮಿ ಆಗುತ್ತಿದೆಯೋ ಇಲ್ಲವೋ ಖಗೋಳ ವಿಜ್ಞಾನಿಗಳು ತಿಳಿಸಬೇಕು, ಆದರೆ ಜನಸಂಖ್ಯೆ ಹೆಚ್ಚುವುದು ಮತ್ತೆ ಆ ಜನರು ತಮ್ಮ ಅನುಕೂಲಗಳಿಗೆ ಆಸೆಗಳಿಗೆ ಹೆಚ್ಚು ಹೆಚ್ಚು ಜಾಗವನ್ನು ಬಳಸಲು ಪ್ರಯತ್ನ ಪಡುವುದು ಈ ಭುವಿಯ ಮೇಲಿನ ಜನವಸತಿ ಪ್ರದೇಶವನ್ನು ಕೈಗಾರಿಕೆಗಳ ಹರಹನ್ನು ವಿಸ್ತರಿಸುತ್ತಿರುವುದು ನೈಸರ್ಗಿಕ ವಸ್ತು ವಿಷಯಗಳನ್ನು ಮನಸ್ಸು ಬಂದಂತೆ ಬಳಸಿಕೊಳ್ಳುವುದು, ಜೀವವೈವಿಧ್ಯಗಳನ್ನು ಆಪೋಶನ ತೆಗೆದುಕೊಳ್ಳುವುದು ಇವೆಲ್ಲ ಕೇಳುವ ಓದುವ ನೋಡುವ ನಿತ್ಯಸತ್ಯಗಳೇ.

ದೊಡ್ಡದಾದ ಪ್ರಾಕೃತಿಕ ಅಪಘಾತ ಆಪತ್ತು ಬಂದೆರಗಿದಾಗ ಕೆಲವು ದಿನ, ತುಸು ಹೊತ್ತು ಬಂದು ಹೋಗುವ ಸಣ್ಣ ಎಚ್ಚರ, ಕಿರುದನಿಯ ಕೂಗು ಎಂದೂ ಸಾರ್ವತ್ರಿಕವಾಗಿ ಜಗತ್ತಿನ ಎಲ್ಲ ಅಲ್ಲದಿದ್ದರೆ ಬಹುತೇಕ ಮನುಷ್ಯರ ಯೋಚನಾಕ್ರಮವನ್ನು ಜೀವನಕ್ರಮವನ್ನು ಬದಲಾಯಿಸುವಂತಹ ವ್ಯಾಪಕ ಪರಿಣಾಮವನ್ನು ಬೀರಿದ್ದೇ ಇಲ್ಲ. ಭೂಮಿ ಉದ್ಭವಗೊಂಡು ಜೀವಿಗಳು ಹುಟ್ಟಿ ಮಾನವರ ವಿಕಾಸವಾಗಿ ಇಷ್ಟು ವರ್ಷಗಳಾಗುವಾಗ ನಮ್ಮೊಳಗೇ ಏರುಪೇರು ಅಸಮಾನತೆ ಶ್ರೇಣಿಗಳ ಗೋಜಲುಗಳನ್ನು ಹೆಣೆದ ನಾವು ನಮ್ಮಹೊರಗೆ ಅಂದರೆ ಮನುಷ್ಯರಲ್ಲದ ಸುತ್ತಲಿನ ಜೀವಸಮೂಹದ ಮೇಲೂ ನಮ್ಮ ಅಧಿಕಾರ ದೌಷ್ಟ್ಯ ಹೇರಿ ಅದರೊಳಗಿನ ನಿಯಮಗಳನ್ನು ಮುರಿದ ಕೀರ್ತಿವಂತರು. ಭೂಮಿ ಕಾಡು ನದಿ ಸಾಗರ ಆಕಾಶ ಎಲ್ಲವೂ ನಮ್ಮದೇ ಎಂದುಕೊಂಡು ನೆಮ್ಮದಿಯಲ್ಲಿ ದಿನವೂ ಮೈಮರೆತವರು.

ಇಂತಹ ನಿತ್ಯವಾಸ್ತವದ ನಡುವೆಯೇ ಮೊನ್ನೆ ಮೊನ್ನೆ ಅಂದರೆ ಫೆಬ್ರವರಿಯ ಎಂಟರಂದು ಲಂಡನ್ನಿನ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಯೊಂದರ ಸಾವಾಯಿತು. ಯಃಕಶ್ಚಿತ ಹುಲಿಯ ಸಾವು ಹೆಸರು ಮೆಲಾತಿ, ವಯಸ್ಸು ಹತ್ತು ವರ್ಷ, ಲಿಂಗ ಹೆಣ್ಣು, ಮಕ್ಕಳು ಏಳು, ತವರುಮನೆ ಸುಮಾತ್ರಾ, ಜಾತಿ ಮತ ಪಂಥದ ಬಗ್ಗೆ ಪ್ರಶ್ನಿಸಿದರೆ ವಿರಳ ಹುಲಿಸಂತತಿಯೊಳಗಿನ ಅತಿವಿರಳದ್ದು ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ . ಮೆಲಾತಿಯ ಮೊದಲ ಏಳು ಮರಿಗಳ ಅಪ್ಪ ಜೆಜೆ ಜನವರಿ ಇಪ್ಪತ್ತೊಂಬತ್ತರಂದು ಫ್ರಾನ್ಸ್ ನ ಪ್ರಾಣಿ ಉದ್ಯಾನವನಕ್ಕೆ ಸಾಗಿಸಲ್ಪಟ್ಟಿದ್ದಾನೆ. ಈತನ ಸಹಧರ್ಮಿಣಿಯೋ ಸ್ನೇಹಿತೆಯೋ ಪರಿಚಯಸ್ಥೆಯೋ ಆದ ಮೆಲಾತಿ ಯ ಅಪ್ಪಣೆಯನ್ನು ಪಡೆದು ಹುಲಿರಾಯನನ್ನು ಹೀಗೆ ವರ್ಗಾವಣೆ ಮಾಡಿದ್ದರೋ ಇಲ್ಲವೋ ಎನ್ನುವ ಸಾಕ್ಷಿಗೀಕ್ಷಿ ಇನ್ನು ಹುಡುಕಬೇಕು .

ಸಾಮಾನ್ಯವಾಗಿ ಇಪ್ಪತ್ತು ವರ್ಷ ಬದುಕಬಹುದಾದ ಹುಲಿಗೆ ಇದೊಂದು ಅಕಾಲಿಕ ಮರಣ. ಹುಲಿ ಸಂರಕ್ಷಣೆ ಮಾಡುವ ವಿವಿಧ ಸಂಸ್ಥೆಗಳು ಉಷ್ಣ ಹವಾಮಾನದ ಕಾಡುಗಳಲ್ಲಿ ಇದಿಷ್ಟು ಜಾಗ ತನ್ನದು ಎಂದು ವಾಸನೆ ದೃಷ್ಟಿಗಳಿಂದ ಗೆರೆ ಹಾಕಿಕೊಂಡು ಬದುಕುವ ಹುಲಿಗಳು ಈಗ ಅವಸಾನದ ಅಂಚಿನಲ್ಲಿರುವುದು ಗೊತ್ತಿರುವುದೇ. ಇಡೀ ಜಗತ್ತಿನಲ್ಲಿ ಈಗಿನ ಒಟ್ಟು ಹುಲಿಗಳ ಸಂಖ್ಯೆ ನಾಲ್ಕು ಸಾವಿರಕ್ಕಿಂತ ಸ್ವಲ್ಪ ಕಡಿಮೆ. ಅವುಗಳಲ್ಲಿ ಎರಡು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಭಾರತದಲ್ಲಿವೆ . ಬ್ರಿಟನ್ ಮಾತ್ರ ಅಲ್ಲದೆ ಹುಲಿಯ ಸಂರಕ್ಷಣೆಗೆಂದು ಸಂಗ್ರಹಾಲಯ ಕಟ್ಟಿ ಆರೈಕೆ ಮಾಡುವ ಇನ್ನೂ ಕೆಲ ದೇಶಗಳು ಯುರೋಪಿನಲ್ಲಿ ವಿಶ್ವದ ಬೇರೆಡೆಯಲ್ಲಿ ಇವೆ.

ಹುಲಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಹೌದು, ಸರಕಾರದ ಮೇರು ಯೋಜನೆಗಳ ಲಾಂಛನವೂ ಹೌದು. ಇಷ್ಟೆಲ್ಲಾ ಇದ್ದೂ ಅನೇಕ ಅಸಂಖ್ಯ ಅನಂತ ಅಪರಿಮಿತ ಇಂತಹ ಶಬ್ದಗಳೆಲ್ಲ ಹುಲಿಗಳ ನಿಘಂಟಿನಲ್ಲಿ ಈಗಂತೂ ಇಲ್ಲ. ಅದಕ್ಕಾಗಿಯೇ ಜಗದ ಯಾವ ಮೂಲೆಯಲ್ಲಿ ಒಂದು ಹುಲಿ ಸತ್ತರೂ ಹುಲಿಸಂತಾನದ ಮಟ್ಟಿಗೆ ಅದೊಂದು ಕಳವಳದ ವಿಷಾದಪೂರ್ಣ ದಿನ. ಮತ್ತೆ ಹುಲಿಗಳು ಸಹಜವಾಗಿ ಹುಟ್ಟದ ಬದುಕದ ಊರು ದೇಶಗಳವರೆಲ್ಲ ಹುಲಿ ವಂಶವೃದ್ಧಿಯ ಕೈಂಕರ್ಯಕ್ಕೆ ಕೈಹಾಕಬೇಕಾದ ಪರಿಸ್ಥಿತಿಯೇ ಪ್ರಕೃತಿಯ ಸಕಲ ಆಗುಹೋಗುಗಳು ಅಧ್ವಾನದಲ್ಲಿರುವುದಕ್ಕೆ ನಿದರ್ಶನ. ಮತ್ತೆ ಆ ಕೀರ್ತಿ ಜಾಣ ಬುದ್ಧಿವಂತ ವಿವೇಕಿ ಬಿರುದುಗಳ ಒಡೆಯರಾದ ಮನುಷ್ಯರಿಗೇ ಸಿಗಬೇಕಾದದ್ದರ ಬಗ್ಗೆ ವಿವಾದಗಳಿಲ್ಲ. ಹಾಗಾಗಿ ಹುಲಿಯ ಸಾವೆಂದರೆ ಇಂದು ಬರೇ ಹುಲಿಯ ಸಾವಲ್ಲ, ಹುಲಿಗಳಿಗೆ ಮತ್ತು ಅಂತಹ ಅನೇಕಾನೇಕ ಜೀವ ಜಂತುಗಳಿಗೆ ಗಿಡ ಮರಗಳಿಗೆ ಬೆಟ್ಟ ಗುಡ್ಡಗಳಿಗೆ ಕಣಿವೆ ಪ್ರಪಾತಗಳಿಗೆ ನದಿ ಸಾಗರಗಳಿಗೆ ನಾವು ಲಗ್ಗೆ ಇಟ್ಟದ್ದರ ಪ್ರತೀಕ ಮತ್ತು ಇವೆಲ್ಲವೂ ಜೊತೆಯಾಗಿ ಸೇರಿ ಹೊಸೆದ ರೂಪಕ .

ಫೆಬ್ರವರಿ ಎಂಟರ ದುರಂತ ನಡೆದದ್ದು ಲಂಡನ್ ನ ಮೃಗಾಲಯದಲ್ಲಿ, ಮೃಗಾಲಯ ಸಂಸ್ಥೆಯ ಸುವ್ಯವಸ್ಥೆ ಸದುದ್ದೇಶ ಜಾಗರೂಕತೆಗಳಿದ್ದೂ ಕೂಡ. ಹುಲಿಗಳ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಬೇರೆ ಬೇರೆ ದೇಶಗಳಿಂದ ಹುಲಿಗಳನ್ನು ಇಲ್ಲಿ ತರಿಸಿಕೊಳ್ಳಲಾಗುತ್ತದೆ ಅವುಗಳನ್ನು ಸಾಕಲಾಗುತ್ತದೆ ಅವುಗಳ ನಡುವೆ ಸಂಬಂಧ ಬೆಳೆಸಿ ಸಂತಾನವೃದ್ಧಿಯ ಪ್ರಯತ್ನವೂ ನಡೆಯುತ್ತದೆ. ಇಂತಹದೇ ಆಶೋತ್ತರವಿರುವ ಯೂರೋಪಿನ ಇತರ ಸಂಗ್ರಹಾಲಯಗಳಿಗೂ ಹುಲಿಗಳನ್ನು ವರ್ಗಾಯಿಸಲಾಗುತ್ತದೆ . ಯಾವುದೊ ಊರಿನ ಗಂಡು ಎಲ್ಲೋ ಹುಟ್ಟಿದ ಹೆಣ್ಣು ಲಂಡನ್ ಪ್ರಾಣಿ ಸಂಗ್ರಹಾಲಯದಲ್ಲಿ ಒಟ್ಟಿಗೆ ಬದುಕಿದ ಸಂತಾನಪಡೆದ ಉದಾಹರಣೆಗಳು ಹಿಂದೆ ಕೂಡ ಇವೆ.

ಸುಮೇತಿಯ ಮೊದಲಿನ ಮಕ್ಕಳ ತಂದೆಯನ್ನು ಫ್ರಾನ್ಸ್ ಗೆ ವರ್ಗಾಯಿಸುವಾಗ ಆಕೆಯ ಮುಂದಿನ ಸಂತಾನವೃದ್ಧಿಗೆ ಅನುಕೂಲ ಆಗಲೆಂದು ಡೆನ್ಮಾರ್ಕಿನಿಂದ ಅಸಿಮ್ ಎಂಬ ಗಂಡು ಹುಲಿಯನ್ನು ತರಲಾಗಿತ್ತು. ಒಂದು ಗಂಡು ಹುಲಿ ಇನ್ನೊಂದು ಹೆಣ್ಣು ಹುಲಿ ಹತ್ತಿರ ಬಿಟ್ಟರೆ ಸ್ನೇಹ ಪ್ರೀತಿ ಪ್ರಣಯ ಆಗಿ ಮರಿಗಳು ಹುಟ್ಟುತ್ತವೆ ಎಂದು ತಿಳಿಯಬೇಡಿ. ಸಬಲೆಯೊ ಅಬಲೆಯೊ ಆದ ಒಂಟಿ ಹೆಣ್ಣೊಂದು ಹತ್ತಿರದಲ್ಲಿ ಸಿಕ್ಕಿದರೆ ಆಕೆಯ ಮೈಮೇಲೆ ಹಾರಿ ರಮಿಸುವುದಕ್ಕೋ ತೀಟೆ ತೀರಿಸಿಕೊಳ್ಳುವುದಕ್ಕೋ ಅವೇನು ಜೀವವಿಕಾಸದಲ್ಲಿ ಅತಿ ಎತ್ತರದ ಶ್ರೇಣಿಯಲ್ಲಿರುವ ಪ್ರಾಣಿಗಳಲ್ಲ ನೆನಪಿರಲಿ. ಹೇಳಿಕೇಳಿ ಹುಲು ಹುಲಿಗಳವು. ಎಲ್ಲಿಯದೋ ಗಂಡು ಎಲ್ಲಿಯದೋ ಹೆಣ್ಣು ಎರಡರದ್ದೂ ಅಲ್ಲದ ದೇಶದ ಸಂಗ್ರಹಾಲಯದಲ್ಲಿ ಒಂದನ್ನೊಂದು ನೋಡುವುದು, ನೋಡಿ ಸ್ನೇಹ ಅಂಕುರಿಸುವುದು ಸುಲಭ ಅಲ್ಲ. ಇದನ್ನು ಚೆನ್ನಾಗಿ ಅರಿತಿರುವ ಲಂಡನ್ ಮೃಗಾಲಯದ ಪ್ರಾಣಿ ಶಾಸ್ತ್ರಜ್ಞರು ಇವೆರಡರ ಪರಿಚಯ ಆಗಲಿ ಪ್ರೇಮ ಕುದುರಲಿ ಎಂದು ಅಕ್ಕ ಪಕ್ಕದ ವಾಸ್ತವ್ಯ ಒದಗಿಸಿದ್ದಾರೆ.

ಜಗದ ಯಾವ ಮೂಲೆಯಲ್ಲಿ ಒಂದು ಹುಲಿ ಸತ್ತರೂ ಹುಲಿಸಂತಾನದ ಮಟ್ಟಿಗೆ ಅದೊಂದು ಕಳವಳದ ವಿಷಾದಪೂರ್ಣ ದಿನ. ಮತ್ತೆ ಹುಲಿಗಳು ಸಹಜವಾಗಿ ಹುಟ್ಟದ ಬದುಕದ ಊರು ದೇಶಗಳವರೆಲ್ಲ ಹುಲಿ ವಂಶವೃದ್ಧಿಯ ಕೈಂಕರ್ಯಕ್ಕೆ ಕೈಹಾಕಬೇಕಾದ ಪರಿಸ್ಥಿತಿಯೇ ಪ್ರಕೃತಿಯ ಸಕಲ ಆಗುಹೋಗುಗಳು ಅಧ್ವಾನದಲ್ಲಿರುವುದಕ್ಕೆ ನಿದರ್ಶನ.

ನಮ್ಮ ಕಣ್ಣಿಗೆ ಎರಡೂ ಪಟ್ಟೆ ಹುಲಿಗಳಾಗಿ, ಅದೇ ಬಣ್ಣದ ಮೈಮುಖಗಳ, ಅಷ್ಟೇ ಗರ್ವ ಗಾಂಭೀರ್ಯಗಳ ಅತಿ ಹೋಲಿಕೆಯ ಬಂಧುಗಳಾಗಿಯೋ ಜೀವಿಗಳಾಗಿಯೋ ಕಂಡರೂ ಆ ಆ ಹುಲಿಗಳ ಕಣ್ಣಿನಲ್ಲಿ ಸಹಜವಾಗಿ ವಾತ್ಸಲ್ಯ ತಕ್ಷಣಕ್ಕೆ ಹುಟ್ಟುವುದಿಲ್ಲ. ಖಂಡಿತವಾಗಿ ಪ್ರೀತಿ ಮೂಡಿಯೇ ಬಿಡುತ್ತದೆ ಎನ್ನುವುದೂ ಖಾತ್ರಿ ಇಲ್ಲ. ಅಥವಾ ಒತ್ತಾಯ ಮಾಡಿ ಮೊದಲು ಮದುವೆ ಮಾಡಿ, ನಂತರ ಎಲ್ಲ ಸರಿ ಹೋಗುತ್ತದೆ ಎಂಬ ಅನುಭವಿಗಳ ಮಾತು ಕೇಳಿ ಒಂದು ಪಂಜರದಲ್ಲಿ ಎರಡನ್ನೂ ಕೂಡಿ ಹಾಕುವ ಹಾಗೂ ಇಲ್ಲ. ಛೆ ! ಇಷ್ಟು ಶತಮಾನಗಳ ಯುಗಗಳ ಸಂಸರ್ಗದಲ್ಲಿ ಈ ಹುಲಿಗಳಾದರೂ ಮನುಷ್ಯರಿಂದ ಎಷ್ಟೆಲ್ಲಾ ಕಲಿತುಕೊಳ್ಳಬಹುದಿತ್ತು. ಇವ್ಯಾವುದೂ ಹುಲಿಗಳಲ್ಲಿ ನಡೆಯದ ಕಾರಣ, ಹುಲಿಧರ್ಮಕ್ಕೆ ತಕ್ಕಂತೆ ಮೆಲಾತಿ ಮತ್ತು ಅಸಿಮ್ ರ ನಡುವೆ ಸ್ನೇಹ ಆಗಲಿ ಎಂದು ಎರಡನ್ನು ಹತ್ತಿರ ಹತ್ತಿರ ಇಡಲಾಗಿತ್ತು ಅಷ್ಟೇ.

ಒಂದನ್ನೊಂದು ಕಣ್ಣಲ್ಲಿ ನೋಡದಿದ್ದರೂ ವಾಸನೆ ಶಬ್ದಗಳಲ್ಲೇ ಅವುಗಳ ಮಧ್ಯ ಪರಿಚಯ ಸಂವಹನ ನಡೆಯುತ್ತಿತ್ತು. ಒಂಬತ್ತು ದಿನಗಳ ಕಾಲ ಹೀಗೆ ಕಳೆಯುವ ಹೊತ್ತಿಗೆ ಅವು ಮಾಡುವ ಒಂದು ವಿಶಿಷ್ಟ ಶಬ್ದದಿಂದ ಇವೆರಡರ ಮಧ್ಯೆ ಮಿತ್ರತ್ವ ಬೆಳೆದೀತು ಎಂದು ಸಂಗ್ರಹಾಲಯದ ಪರಿಣಿತರಿಗೆ ಅನಿಸಿತ್ತು. ಹತ್ತನೆಯ ದಿನ ಇವುಗಳನ್ನು ಮುಖಾಮುಖಿ ಮಾಡಿಸಿ ಸ್ನೇಹ ಇನ್ನಷ್ಟು ವೃದ್ಧಿಯಾಗಲಿ ಎಂದು ಕೂಡಿಟ್ಟ ಕೋಣೆಯ ಬಾಗಿಲು ತೆರೆದು ಭೇಟಿ ಮಾಡಿಸಿದ್ದಾರೆ. ಭೇಟಿಯಾದ ತುಸು ಹೊತ್ತಲ್ಲೇ ಎರಡು ಹುಲಿಗಳ ನಡುವೆ ಆಕ್ರಮಣಕಾರಿ ಕೂಗುಗಳು ಕೇಳಿವೆ, ಕಾದಾಟ ಶುರು ಆಗಿದೆ. ಸಿಬ್ಬಂದಿಗಳ ಬಹಳ ಪ್ರಯತ್ನದ ನಂತರ ಅಸಿಮ್ ನನ್ನೂ ಮೆಲಾತಿಯನ್ನೂ ದೂರ ದೂರ ಮಾಡಿದ್ದಾರೆ. ಈ ಕಾದಾಟದಲ್ಲಿ ಮೆಲಾತಿ ಗಾಯಗೊಂಡು, ವೈದ್ಯರ ಶುಶ್ರೂಷೆಗೆ ಪ್ರತಿಕ್ರಿಯಿಸದೆ ಮೃತವಾಗಿದೆ. ಎರಡು ಹುಲಿಗಳ ನಡುವೆ ಸ್ನೇಹ ಆಗುವುದು ಸರಳ ಸುಲಭವಲ್ಲ ಎನ್ನುವುದಕ್ಕೆ ಮತ್ತೊಂದು ದೃಷ್ಟಾಂತ ದೊರಕಿಸಿದೆ .

ಈ ಘಟನೆ ನಡೆದು ನಾಲ್ಕು ದಿನಗಳಲ್ಲಿ, ಫೆಬ್ರವರಿ ಹನ್ನೊಂದರಂದು ಇಲ್ಲಿನ ವಾರ್ಮಿನಿಸ್ಟರ್ ಎನ್ನುವಲ್ಲಿನ ಲಾಂಗ್ ಲೀಟ್ ಸಫಾರಿ ಪಾರ್ಕ್ ಅಲ್ಲಿ ಶೌರಿ ಎನ್ನುವ ಹೆಣ್ಣು ಹುಲಿ ಸತ್ತು ಹೋಯಿತು. ಹದಿಮೂರು ವರ್ಷ ವಯಸ್ಸಿನ ಶೌರಿ ನೆಲೆಸಿರುವ ಆವರಣದ ಒಂದು ಬಾಗಿಲನ್ನು ಅಚಾತುರ್ಯದಿಂದ ಸಿಬ್ಬಂದಿಗಳು ತೆಗೆದಾಗ ರೆಡ್ ಮತ್ತು ಯಾನ ಎನ್ನುವ ಗಂಡು ಹೆಣ್ಣು ಹುಲಿಗಳ ಜೋಡಿ ವಾಸಿಸುತ್ತಿರುವ ಆವರಣವನ್ನು ಪ್ರವೇಶಿಸಿದೆ. ತಾವು ಬದುಕುವ ಪ್ರಾಂತ್ಯದ ಬಗ್ಗೆ ಅತ್ಯಂತ ಸೂಕ್ಷ್ಮವಾಗಿರುವ ಹುಲಿಗಳು ತಮ್ಮ ಸೀಮೆಯನ್ನು ಇನ್ನೊಂದು ಹುಲಿಯೊಡನೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಇನ್ನೊಂದು ಆವರಣದ ಶೌರಿ ತಮ್ಮ ಪ್ರದೇಶಕ್ಕೆ ಕಾಲಿಟ್ಟಾಗ ಧಾಳಿಮಾಡಿ ಕೊಂದಿವೆ.

ಹುಲಿಗಳ ಬಗ್ಗೆ ಬಹಳ ತಿಳುವಳಿಕೆ ಅನುಭವ ಇರುವವರ, ಜಾಗರೂಕತೆಯಲ್ಲಿ ಹುಲಿಗಳನ್ನು ನಿರ್ವಹಿಸುವವರ ಸುಪರ್ದಿಯಲ್ಲಿ ಒಂದು ವಾರದಲ್ಲಿ ಎರಡು ಹುಲಿಗಳು ಹೀಗೆ ಮೃತವಾಗಿವೆ. ಸದುದ್ದೇಶ ಹಾಗು ಸುರಕ್ಷೆಯ ಹೊಣೆ ಹೊತ್ತವರ ಆವರಣದಲ್ಲೇ ಘಟಿಸಿರುವ ಈ ಸಾವುಗಳು ಹುಲಿಯ ಸಾವುಗಳ ಸಾಧ್ಯತೆ ಹಾಗು ಕಾರಣಗಳ ಪಟ್ಟಿಯನ್ನು ಇನ್ನೂ ಬೆಳೆಸಿದೆ. ಪ್ರಾಣಿ ಸಂಗ್ರಹಾಲಯದ ಹುಲಿ ಸಿಬ್ಬಂದಿಗಳನ್ನು ಅತ್ಯಂತ ಆಘಾತ ದುಃಖದಲ್ಲಿ ಮುಳುಗಿಸಿದ ಈ ಅಪಘಾತಗಳು ಮೆಲಾತಿಯ, ಶೌರಿಯ ಮಕ್ಕಳಿಗೂ, ಹುಲಿಯ ಸಂತತಿಗೂ ಕರಾಳ ಘಟನೆಯೇ.

(ಫೋಟೋಕೃಪೆ : ಸ್ಟೀವ್ ವಿಲ್ಸನ್, ಬ್ರಿಸ್ಟಲ್ )

ಕಿರಿದಾಗುತ್ತಿರುವ ಕಾಡು, ಮನುಷ್ಯರ ಬೇಟೆಗಳಿಂದ ಅಭದ್ರವಾಗಿರುವ ಹುಲಿಯ ಸ್ವತಂತ್ರ ಬದುಕು ಸಂಗ್ರಹಾಲಯದಂತಹ ವ್ಯವಸ್ಥೆಯಲ್ಲಿ ಹೆಚ್ಚು ಸುರಕ್ಷಿತವೇ ಆದರೂ ಲಂಡನ್ ಹಾಗು ವಾರ್ಮಿನಿಸ್ಟರ್ ಅಲ್ಲಿ ನಡೆದ ಅಪಘಾತಗಳು “ಹುಲಿಯನ್ನು ಉಳಿಸಿ ” ಎನ್ನುವ ಚಿಂತನೆ ಚರ್ಚೆಯನ್ನು ತೀವ್ರವಾಗಿಸುವುದರ ಜೊತೆಗೆ ನಮ್ಮೆಲ್ಲರನ್ನೂ ವಿಮರ್ಶೆಗೆ ಪ್ರೇರೇಪಿಸುತ್ತಿದೆ.

ಗೋವಿನ ಹಾಡಿನಲ್ಲಿ “ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು ” ಎಂದು ಚಿತ್ರಣಗೊಂಡ, “ಸಿಡಿದು ರೋಷದಿ ಮೊರೆಯುವ” , “ಘುಡುಘುಡಿಸಿ ಭೋರಿಡುತ ಛಂಗನೆ ಎರಗುವ ” ಎಂದು ವರ್ಣನೆಗೆ ತಕ್ಕಂತೆ ಕಾಡಿನ ಮೃಗಗಳನ್ನು ಚದುರಿಸುತ್ತಿದ್ದ ಮತ್ತೆ ಹಾಡನ್ನು ಓದಿದ ಎಳೆಯ ಮಕ್ಕಳಲ್ಲಿ ಭಯ ವಿಹ್ವಲತೆ ಹುಟ್ಟಿಸುತ್ತಿದ್ದ ಹುಲಿಯ ಪೌರುಷ ವ್ಯಗ್ರತೆ ಈಗ ಬರಿಯ ಹಾಳೆಯಲ್ಲೋ, ಚಿತ್ರದಲ್ಲೋ ಉಳಿದುಹೋಗಬಹುದಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸದ್ಯದ ಹುಲಿಯ ಬದುಕು ಭದ್ರಕಾವಲಿನ ಅಭಯಾರಣ್ಯದ, ಸಂಗ್ರಹಾಲಯದ ಪಂಜರದ ಅಥವಾ ಸಿಬ್ಬಂದಿಗಳ ಆರೈಕೆ ವೈದ್ಯರ ಮುತುವರ್ಜಿಯ ಭರವಸೆಯ ಮೇಲೆ ನಿಂತಿದೆ. ಸ್ವಾವಲಂಬಿಯಾಗಿ ಕಾಡಿನಲ್ಲಿ ಅಲೆದಾಡಿಕೊಂಡು ಇರಬೇಕಾದ, ಬೇಕೆಂದಾಗ ತಿನ್ನಬೇಕಾದ, ಎಲ್ಲಿ ಬೇಕೋ ಅಲ್ಲಿ ಮಲಗಬೇಕಾದ, ತನ್ನ ಇಚ್ಚೆಗೆ ತಕ್ಕಂತೆ ಕಾಳಗದಲ್ಲೋ ಸಂಯೋಗಲ್ಲೊ ತೊಡಗಬೇಕಾದ ಶಕ್ತಿಶೌರ್ಯಗಳ ಹುಲಿ ಹೀಗೆ ಸಾವು ಹಾಗು ಬದುಕು ಎರಡರ ಮಟ್ಟಿಗೂ ಪರಾವಲಂಬಿಯಾಗಿದೆ. ಮತ್ತೆ ತನ್ನ ವಂಶದೊಳಗಿನ ಪ್ರತಿ ಸಾವಿನಲ್ಲೂ ಮಾನವ ಸಂತತಿಯ ಬಗ್ಗೆ ಒಂದು ಅಣಕ ಬರೆಯುತ್ತಿದೆ.