Advertisement
ಎಲೆಹಕ್ಕಿ:  ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಎಲೆಹಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಎಲೆಹಕ್ಕಿಗಳಿಗೆ ಕೀಟಗಳು, ಜೇಡಗಳು, ಹಣ್ಣು, ಮಕರಂದ ಮುಂತಾದುವುಗಳೇ ಆಹಾರ. ಕುಳಿತಲ್ಲಿಂದಲೇ ಗುರಿಯಿಟ್ಟು ಎಗರಿ ಹಾರುತ್ತಿರುವ ಹುಳಗಳನ್ನು ಹಿಡಿದು ತಿಂದು, ಕೀಟ ನಿಯಂತ್ರಣ ಕಾರ್ಯವನ್ನು ಸಮರ್ಥವಾಗಿ ಮಾಡುತ್ತವೆ. ಹೂವುಗಳಿಂದ ಮಕರಂದ ಹೀರಲು ಎಲೆಹಕ್ಕಿಗಳು ಮಾಡುವ ಸರ್ಕಸ್ ನೋಡಲು ಬಹಳ ಚಂದ! ಹಣ್ಣು-ಮಕರಂದವಿರುವ ಮರದಲ್ಲಿ ನಾಲ್ಕಾರು ಎಲೆಹಕ್ಕಿಗಳು ಸೇರಿದರೆ ಇತರ ಪ್ರಭೇದದ ಹಕ್ಕಿಗಳಿಗೆ ಪ್ರವೇಶವೇ ಇಲ್ಲ!
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಎಲೆಹಕ್ಕಿಯ ಕುರಿತ ಬರಹ ಇಲ್ಲಿದೆ

ಈವತ್ತು ನಾವು ತಿಳಿದುಕೊಳ್ಳ ಹೊರಟಿರುವುದು ಎಲೆಹಕ್ಕಿ ಎಂಬ ಕರ್ನಾಟಕದ ಒಂದು ಸುಂದರ ಪಕ್ಷಿಯ ಬಗ್ಗೆ. ಎಲೆಹಕ್ಕಿ, ಕ್ಲೋರೋಪ್ಸೀಡೆ ಕುಟುಂಬಕ್ಕೆ ಸೇರಿದ ಉಜ್ವಲ ಹಸಿರು ಬಣ್ಣದ, ಮರದ ಮೇಲೆ ವಾಸಿಸುವ, ಮಧ್ಯಮ ಗಾತ್ರದ ಹಕ್ಕಿಗಳು. ಎಲೆಹಕ್ಕಿಯ ವೈಜ್ಞಾನಿಕ ಹೆಸರು ಕ್ಲೋರಾಪ್ಸಿಸ್ ಆರಿಫ್ರಾನ್ಸ್. ಇಂಗ್ಲೀಷಿನಲ್ಲಿ Golden Fronted Chloropsis, ಗೋಲ್ಡನ್ ಫ್ರಂಟೆಡ್ ಕ್ಲೋರಾಪ್ಸಿಸ್ ಎನ್ನುತ್ತಾರೆ.

ಇದರ ಆವಾಸಸ್ಥಾನವು ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ಭಾಗಗಳು. ಸದಾಹಸಿರು, ಉದುರೆಲೆ, ಕುರುಚಲು ಕಾಡು, ಮತ್ತು ಪೊದೆಗಳು, ಅಲ್ಲದೆ ಮಾವಿನ ತೋಪು, ಕಾಫಿ-ಏಲಕ್ಕಿ ಎಸ್ಟೇಟುಗಳಲ್ಲಿ ವಾಸ. ಮರದ ಒತ್ತಾದ ಎಲೆಗಳ ನಡುವೆ ಮರೆಮಾಚಿ ಕುಳಿತ ಇವುಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟ.

ಎಲೆಹಕ್ಕಿ ಸುಮಾರು 19 ಸೆಂಮೀ ಪಿಕಳಾರಹಕ್ಕಿಯ ಗಾತ್ರದ, ಅಚ್ಚ ಎಲೆಹಸಿರು ದೇಹದ ಹಕ್ಕಿ; ಮುಖದಲ್ಲಿ ಕಡುಕಪ್ಪು ಮತ್ತು ನೇರಳೆ ಕೆನ್ನೆ ಮತ್ತು ಗಲ್ಲ; ಅದರ ಕೆಳಗೊಂದು ಹಳದಿ ಬಣ್ಣದ ಸರ; ಹಕ್ಕಿಯ ಭುಜದ ಮೇಲೆ ನೀಲಿ ಮಚ್ಚೆ; ಹೊಳೆಯುವ ಹೊಂಬಣ್ಣದ ಹಣೆ ಮತ್ತು ನೀಲಿ ಮೀಸೆಯ ರೇಖೆಗಳನ್ನು ಹೊಂದಿದೆ. ಸಣ್ಣ ಹಾಗೂ ಸಪೂರವಾದ, ಬಾಗಿದ ಕೊಕ್ಕು; ಸದೃಢ ದುಂಡು ರೆಕ್ಕೆಗಳು; ಸಣ್ಣ ಕಾಲುಗಳು; ಸಪಾಟಾದ ಬಾಲ. ಗಂಡು-ಹೆಣ್ಣು ನೋಡಲು ವಿಭಿನ್ನವಾಗಿರುತ್ತವೆ. ಹೆಣ್ಣಿಗೆ ಒಟ್ಟಾರೆ ಪೇಲವ ಹಸಿರು ದೇಹ; ಗಂಟಲು ಮತ್ತು ಎದೆಯಲ್ಲಿ ಕಪ್ಪು-ನೇರಳೆ ಬಣ್ಣವಾಗಲೀ, ಹಳದಿ ಸರವಾಗಲೀ ಸ್ಪಷ್ಟವಾಗಿ ಇರುವುದಿಲ್ಲ.

ಎಲೆಹಕ್ಕಿಗಳಿಗೆ ಕೀಟಗಳು, ಜೇಡಗಳು, ಹಣ್ಣು, ಮಕರಂದ ಮುಂತಾದುವುಗಳೇ ಆಹಾರ. ಕುಳಿತಲ್ಲಿಂದಲೇ ಗುರಿಯಿಟ್ಟು ಎಗರಿ ಹಾರುತ್ತಿರುವ ಹುಳಗಳನ್ನು ಹಿಡಿದು ತಿಂದು, ಕೀಟ ನಿಯಂತ್ರಣ ಕಾರ್ಯವನ್ನು ಸಮರ್ಥವಾಗಿ ಮಾಡುತ್ತವೆ. ಹೂವುಗಳಿಂದ ಮಕರಂದ ಹೀರಲು ಎಲೆಹಕ್ಕಿಗಳು ಮಾಡುವ ಸರ್ಕಸ್ ನೋಡಲು ಬಹಳ ಚಂದ! ಹಣ್ಣು-ಮಕರಂದವಿರುವ ಮರದಲ್ಲಿ ನಾಲ್ಕಾರು ಎಲೆಹಕ್ಕಿಗಳು ಸೇರಿದರೆ ಇತರ ಪ್ರಭೇದದ ಹಕ್ಕಿಗಳಿಗೆ ಪ್ರವೇಶವೇ ಇಲ್ಲ!

ಕುಟುಂಬದ ಎಲ್ಲ ಹಕ್ಕಿಗಳೂ ಉತ್ತಮ ಹಾಡುಗಾರರು; ಇದರ ಹಾಡು ಹಲವಾರು ಏರು-ಬೀಳುಗಳಿರುವ ಚಿಲಿಪಿಲಿ ಸ್ವರಗಳನ್ನೂ, ಸಿಳ್ಳೆಗಳನ್ನೂ ಒಳಗೊಂಡಿದೆ. ಅಲ್ಲದೆ ಅನೇಕ ಪಕ್ಷಿಗಳ ಸ್ವರಗಳ ವಿವಿಧ ಕೂಗುಗಳನ್ನು ಅನುಕರಿಸುತ್ತವೆ. ಹಾಗಾಗಿ ನಿಸ್ಸೀಮ ಅಣಕುಗಾರರೂ ಕೂಡ. ನುರಿತ ಪಕ್ಷಿವೀಕ್ಷಕರೂ ಈ ಕೂಗುಗಳನ್ನು ಕೇಳಿ ಗಲಿಬಿಲಿಗೊಳಗಾಗುತ್ತಾರೆ!

ಫೆಬ್ರವರಿಯಿಂದ ಆಗಸ್ಟ್ ತಿಂಗಳವರೆಗೆ ಪ್ರಜನನ ಸಮಯ. ಮರದ ಮೇಲೆ, ಗಂಡು-ಹೆಣ್ಣು ಎರಡೂ ಸೇರಿ, ಎಲೆಗಂಟಿಗಳ ನಡುವೆ ಕೊಂಬೆಯ ಕವಲುಗಳಲ್ಲಿ, ಒಣಎಲೆ, ಹುಲ್ಲು, ನಾರು-ಬೇರು, ಜೇಡರ ಬಲೆಗಳಿಂದ ತಯಾರಾದ ಬಟ್ಟಲಿನ ಆಕಾರದ ಗೂಡು ಕಟ್ಟುತ್ತವೆ. ಅದರಲ್ಲಿ ಹೆಣ್ಣು ಹಕ್ಕಿ 2-3 ಮೊಟ್ಟೆಗಳನ್ನು ಇಡುತ್ತದೆ. 14 ದಿನಗಳ ನಂತರ ಮೊಟ್ಟೆಗಳು ಒಡೆದು ಮರಿಹಕ್ಕಿಗಳು ಹೊರಬರುತ್ತವೆ. ಸರದಿಯ ಮೇಲೆ ಎರಡೂ ಹಕ್ಕಿಗಳು ಗೂಡನ್ನು ಕಾಯುವ ಹಾಗೂ ಆಹಾರವನ್ನು ಅರಸುವ ಕಾರ್ಯವನ್ನು ಮಾಡುತ್ತವೆ.

ಮಿತ್ರರೆ, ನಮ್ಮ ಸಹಜೀವಿಗಳಾದ ಪ್ರಾಣಿಪಕ್ಷಿಗಳೊಂದಿಗೆ ನಾವು ಸಹಬಾಳ್ವೆ ನಡೆಸುತಿದ್ದೇವೆಯೇ? ನಮ್ಮ ವೈಭವೀ ಜೀವನಕ್ಕೆ ಅವಶ್ಯವಿರುವ ಎಲ್ಲ ವಸ್ತುಗಳನ್ನೂ ಪರಿಸರದಿಂದ ಪಡೆದು, ಸ್ವೇಚ್ಛೆಯಿಂದ ಬಳಸುವ ನಾವು ಪ್ರಕೃತಿಗೆ ಹಿಂದುರಿಗಿಸಿ ಏನು ಕೊಡುತ್ತಿದ್ದೇವೆ? ಮಾನವರಾದ ನಾವು ವರ್ತಮಾನ ಪರಿಸ್ಥಿತಿಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ.

(ಕಲಾಕೃತಿ: ಲೇಖಕರದ್ದು)

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

2 Comments

  1. Dr Allam Prabhu

    ಎಲೆ ಹಕ್ಕಿಯ ವಿವರಣೆ ಸ್ವಾರಸ್ಯಕರವಾಗಿದೆ ಸರ್.

    Oh Man, ask not what nature has given you. Ask what you have given back to nature.

    Reply
  2. Poomaalenews coorg

    ಡಾll ನರಸಿಂಹನ್ ಅವರ ವಿವಿಧ ಪ್ರಬೇಧಗಳ ಹಕ್ಕಿಗಳ ಮೇಲಿನ ಬರಹಗಳು ಸಂಪೂರ್ಣ ಮಾಹಿತಿಯುಳ್ಳದ್ದಾಗಿದೆ. ಹಾಗೂ ಇವರು ಪಕ್ಷಿಗಳ ಮೇಲಿನ ವಿವರ ನೀಡಿದರೆಂದರೆ ಅವನ್ನೆಲ್ಲ ಓದಿ ತಿಳಿದುಕೊಂಡರೆ ಪಕ್ಷಿಗಳ ಪ್ರಪಂಚದಲ್ಲಿ ಮಾನವಕುಲ ಬದುಕುವುದೊಂದು ಭಾಗ್ಯವೆಂದು ತೋರುತ್ತದೆ. ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಕಾಡು, ಮಗಗಿಡಗಳ ವಿನಾಶದಿಂದಾಗಿ ಹಲವು ಪಕ್ಷಿಗಳ ಕಲರವದಿಂದ ನಾವು ವಂಚಿತರಾಗುತ್ತಿರುವುದು ದುರಂತ.

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ