ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. 
-ಎಸ್.‌ ದಿವಾಕರ್‌ ಬರೆದ ‘ವಿಧಾನಸಭೆಯಲ್ಲೊಂದು ಹಕ್ಕಿ’ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಯಹೂದಿಗಳ ಮಾರಣಹೋಮದ ತಾಣಗಳಾದ ಯಾತನಾ ಶಿಬಿರಗಳಲ್ಲಿ ಪ್ರಮುಖವಾದ ಆಷ್‌ವಿಜ್‌ನ ನಂತರ ಕಾವ್ಯವೆ? ಎಂದು ಪ್ರಸಿದ್ಧ ಚಿಂತಕನಾದ ಅಡೋರ್ನೊ ಕೇಳಿದ್ದ. ಆದರೆ ಅಂಥ ಯಾತನಾ ಶಿಬಿರದಿಂದ ಬದುಕುಳಿದು ಬಂದಿದ್ದ ಎಲಿ ವೀಸಲ್ ‘ನೈಟ್’ ಎನ್ನುವ ಕೃತಿಯ ಮೂಲಕ ಬದುಕುಳಿದವರ, ಭಾಷೆಗೂ ಬಾರದ ನೋವುಗಳ ಮೌನವನ್ನು ಮುರಿದ ಮೇಲೆ ಆಷ್‌ವಿಜ್‌ನ ನಂತರವೂ ಕಾವ್ಯವು ಸಾಧ್ಯವಾಯಿತು. ಇಂಥ ಕಾವ್ಯವು ಹೇಳಲು ಹೊರಟ ಅನುಭವವು ಜಗತ್ತಿನ ಅಂತ್ಯವನ್ನು ಘೋಷಿಸುವ ತೆರನದ್ದು. ಏಕೆಂದರೆ ನೋವು ಮನುಷ್ಯರ ಧಾರಣೆ ಹಾಗೂ ಕಲ್ಪನೆಗಳನ್ನು ಮೀರಿ, ಅದನ್ನು ಹೇಳುವ ಭಾಷೆ ತನ್ನ ಕಸುವಿನ ಗಡಿಯನ್ನು ಮೀರಿ ಒಂದು ಹೆಜ್ಜೆ ಆ ಕಡೆಗೆ ಇಟ್ಟಾಗಿನ ಸ್ಥಿತಿಯ ಬಗೆಗಿನ ಕಾವ್ಯವಿದು. ಆದರೆ ಚರಿತ್ರೆ ಕಲಿಸುವ ಪಾಠವೆಂದರೆ ಹಿಂಸೆಗೆ ಎಲ್ಲೆಯೆನ್ನುವುದಿಲ್ಲ. ಅದು ಸಾವನ್ನು ತಂದರೂ ತಾನು ಮಾತ್ರ ಅಮರ.

(ಎಸ್.‌ ದಿವಾಕರ್‌)

ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. ಅವರ ಈ ಸಂಕಲನದ ಒಂದು ಕವಿತೆಯು ಪ್ರಾಸದ ಬಗ್ಗೆ ಇದೆ. ಅದು ಪ್ರಾಸವೆಂದರೆ ಸಂಬಂಧ ಜೋಡಿಸುವುದು ಎಂದು ಹೇಳುತ್ತದೆ. ಅಲ್ಲದೆ ನವೋದಯ ಕಾವ್ಯದ ಶುದ್ಧ ರಚನೆಗಳನ್ನು ಮೆಚ್ಚಿಕೊಳ್ಳುತ್ತದೆ. ಇದು ಯಾಕೆ ಮುಖ್ಯವೆಂದರೆ ದಿವಾಕರರ ಕತೆಗಳಂತೆ, ಅನುವಾದಗಳಂತೆ ಅವರ ಕಾವ್ಯವೂ ನಮ್ಮ ಕಾಲವು ಕಂಡ ಹಿಂಸೆಯ ಬಗ್ಗೆ ಇದೆ. ಈ ಸಂಕಲನದ ಅನೇಕ ಮುಖ್ಯ ಪದ್ಯಗಳು ಈ ಹಿಂಸೆಯನ್ನು ವ್ಯಾಖ್ಯಾನಿಸುತ್ತವೆ. ಇವುಗಳ ಆಳದಲ್ಲಿರುವುದು ಮನುಷ್ಯ ಜಗತ್ತಿನ ಅಸೀಮವಾದ ಹಿಂಸೆ ಹಾಗೂ ವಿಘಟನೆಯ ಸಾಧ್ಯತೆಗಳನ್ನು ಆಳವಾದ ತಿಳುವಳಿಕೆ ಹಾಗೂ ನಿರುಮ್ಮಳವಾಗಿ ಕಂಡುಬರುವ ಭಾಷೆಯಲ್ಲಿ ಅದನ್ನು ಹೇಳುವ ಸಾಮರ್ಥ್ಯ. ಹೀಗಾಗಿಯೇ ಚೊಕ್ಕವಾಗಿ ಕಡೆದಿಟ್ಟಂಥ ಈ ಪದ್ಯಗಳ ಅನೇಕ ಸಾಲುಗಳು ನಮ್ಮ ಕಾಲದ ಬಗೆಗಿನ ಭರತವಾಕ್ಯಗಳಂತಿವೆ. ‘ನಮ್ಮ ಕಾಲದ’ ಎಂದೆನಲ್ಲವೆ? ಹಾಗೂ ಅಲ್ಲ, ಇನ್ನೊಂದು ಪದ್ಯವು ಹೇಳುವಂತೆ ಇವು ಇಪ್ಪತ್ತನೆಯ ಶತಮಾನ ಅಂದರೆ ಕ್ರಿಸ್ತಪೂರ್ವ ಹಾಗೂ ಕ್ರಿಸ್ತಶಕಗಳಲ್ಲಿ ಹಾಗೇ ಇರುವ ಯುಗಲಕ್ಷಣಗಳು.

“ಇಪ್ಪತ್ತನೆಯ ಶತಮಾನದಲ್ಲಿ ಕ್ರಿಸ್ತಪೂರ್ವ, ಕ್ರಿಸ್ತಶಕದಲ್ಲಿ
ಹಿಂಸೆಯೆನ್ನುವುದು ಮೊದಲು ಹೇಗಿತ್ತೋ ಹಾಗೆಯೇ ಇದೆ.
ಭೂಮಿ ಮಾತ್ರ ಮುರುಟಿಕೊಂಡಿದೆ, ಕೇಳಿಸುತ್ತಿದೆ ನಡೆಯುವುದೆಲ್ಲ
ಪಕ್ಕದ ರೂಮಿನಲ್ಲೆಂಬಂತೆ” (ಚಿತ್ರಹಿಂಸೆ)

ಈ ಹಿಂದೆಯೂ ಬದಲಾಗದೇ ಇರುವುದಕ್ಕೆ ಒಂದು ಕಾರಣವೆಂದರೆ ಮನುಷ್ಯ ದೇಹವೇ. ಏಕೆಂದರೆ ಅದು ಹಿಂಸೆಯ ವೇದಿಕೆ ಮತ್ತು ಅಂತಿಮ ಗಡಿ. ಏಕಕಾಲಕ್ಕೆ ಪದ್ಯವು ವಾಚ್ಯವಾಗಿ ಹೇಳದ ವ್ಯಂಗ್ಯವೆಂದರೆ ಈ ದೇಹವೆನ್ನುವ ಸೀಮಾರೇಖೆಯೊಂದು ಇಲ್ಲದಿದ್ದರೆ ಚಿತ್ರಹಿಂಸೆಯು ಪ್ರಯೋಗಶೀಲವಾಗಿ ಬದಲಾಗುತ್ತಿತ್ತೇನೋ!

“ಏನೂ ಬದಲಾಗಿಲ್ಲ,
ದೇಹವೆನ್ನುವುದು ನೋವಿನ ಜಲಾಶಯ” (ಅದೇ)

ಹೊಸ ಅಪರಾಧಗಳು ಹುಟ್ಟಿಕೊಂಡಿವೆ ಆದರೆ “ದೇಹದ ರೋದನ ಮಾತ್ರ ಲಾಗಾಯಿತಿನಿಂದ ಅದೇ ಸ್ಥಾಯಿಯಲ್ಲಿರುವ ಅದೇ ಮುಗ್ಧತೆಯ ರೋದನವಾಗಿದೆ”.

‘ದೇವಾಲಯ-ವಧಾವಲಯ’ ಪದ್ಯದಲ್ಲಿ ಅಂಗ್‌ಕೋರ್‌ವಾಟ್‌ನ ವಿಷ್ಣು ದೇವಾಲಯದ ಸಂಕೀರ್ಣವು ಏನೂ ಬದಲಾಗದ ಮನುಷ್ಯ ಸ್ಥಿತಿಯ ಇಪ್ಪತ್ತನೇ ಶತಮಾನದ ಹೊಸ ಅಧ್ಯಾಯವನ್ನೂ ಸೇರಿಸಿಕೊಂಡು ಒಂದು ವಿಸ್ತಾರವಾದ ರೂಪಕವಾಗಿ ನಿಲ್ಲುತ್ತದೆ. ಹನ್ನೆರಡನೇ ಶತಮಾನದಲ್ಲಿ ದೂರದ ಭಾರತದಿಂದ ತಂದ ಕಲ್ಲುಗಳಲ್ಲಿ ದೇವತೆಗಳನ್ನು ಸೃಷ್ಟಿಸಿದ ಅಗಾಧವಾದ ಸೃಜನಶೀಲತೆಗೆ ಅಚ್ಚರಿಪಡುವ ಪ್ರಜ್ಞೆಗೆ ಹೊಳೆಯುವುದು ಬುದ್ಧನಿರದ ಖಾಲಿ ಸ್ತೂಪವೊಂದರಲ್ಲಿ ಸರ್ವಾಧಿಕಾರಿ ಪೋಲ್‍ಪೋಟ್ “ಕಗ್ಗೊಲೆ ಮಾಡಿದವರ” ಹದಿಮೂರು ಲಕ್ಷ ಎಂಬತ್ತಾರು ಸಾವಿರದೇಳ್ನೂರು ಅರವತ್ನಾಲ್ಕು ತಲೆಬುರುಡೆಗಳಿವೆ. ಇದು ಆಶ್ಚರ್ಯವಲ್ಲವೆ? ಒಂದು ಕಡೆ ಚರಿತ್ರೆಯಲ್ಲಿ ಧರ್ಮಗಳು, ದೈವತಗಳು ಜಗತ್ತಿನ ಮೂಲೆಯಿಂದ ಮೂಲೆಗೆ ಚಲಿಸಿ ಮನುಷ್ಯರೊಳಗೆ ಇರಬಹುದಾದ ಶ್ರದ್ಧೆಯನ್ನೋ ಅಥವಾ ನಮ್ಮನ್ನು ಮೀರಿದ ಸತ್ಯವೊಂದರ ಹುಡುಕಾಟವನ್ನೋ ಬೆಂಬಲಿಸಿದವು. ಇಂಥ ಕ್ರಿಯಾಶಕ್ತಿಯಿದ್ದ ಮನುಷ್ಯನೇ ಕೇವಲ ನಾಲ್ಕು ವರ್ಷಗಳಲ್ಲಿ ಇಷ್ಟೊಂದು ಕೊಲೆಗಳನ್ನು ಮಾಡಿಸಿದನು ಎನ್ನುವುದು ನಿಜವೇ. ಈ ಹಿಂದೆ ನಾನು ಪ್ರಸ್ತಾಪಿಸಿದ ಭಾಷೆಯ ನಿರುಮ್ಮಳತೆಯಿಂದಾಗಿ ಎಲ್ಲೋ ಕವಿಯ ದರ್ಶನವು ವ್ಯಾಸ, ಹೋಮರ್‍ರು ಹಿಂಸೆಯನ್ನು ನಿರೂಪಿಸುವ ಕ್ಲಾಸಿಕಲ್ ಸಂವೇದನೆಗೆ ಹತ್ತಿರವಾಗಿದೆಯೆನ್ನಿಸುತ್ತೆ. ದಿವಾಕರರ ಈ ಹಿಂದಿನ ಕವನ ಸಂಕಲನದ ಮುಮ್ಮಾತಿನಲ್ಲಿ ಶಿವಪ್ರಕಾಶರು ಗುರುತಿಸಿರುವಂತೆ ಕನ್ನಡ ಕಾವ್ಯವು ಪ್ರವೇಶ ಮಾಡದ ಅನೇಕ ವಿಶ್ವ ಸಾಹಿತ್ಯ ಪರಂಪರೆಗಳ ಆಧುನಿಕ ಕಾವ್ಯದಲ್ಲಿ ಹಿಂಸೆ ಮತ್ತು ನೋವಿನ ಈ ಬಗೆಯ ಅನುಸಂಧಾನವಿದೆ. ನನಗೆ ಗೊತ್ತಿರುವಂತೆ ಕನ್ನಡದ ಯಾವ ಬರಹಗಾರರಿಗೂ ದಿವಾಕರರಿಗೆ ಇರುವ ಈ ಸಾಹಿತ್ಯ ಪರಂಪರೆಗಳ ಆತ್ಮೀಯವಾದ ಪರಿಚಯವಿಲ್ಲ. ಅವರು ಮಾಡುತ್ತ ಬಂದಿರುವ ವಿಶ್ವದ ಸಣ್ಣಕತೆಗಳ ಅನುವಾದಗಳು ಇದಕ್ಕೆ ಸಾಕ್ಷಿಯಾಗಿವೆ. W.H. Auden ಹೇಳಿದಂತೆ, “About suffering they were never wrong, the old masters”.

ಚೊಕ್ಕವಾಗಿ ಕಡೆದಿಟ್ಟಂಥ ಈ ಪದ್ಯಗಳ ಅನೇಕ ಸಾಲುಗಳು ನಮ್ಮ ಕಾಲದ ಬಗೆಗಿನ ಭರತವಾಕ್ಯಗಳಂತಿವೆ. ‘ನಮ್ಮ ಕಾಲದ’ ಎಂದೆನಲ್ಲವೆ? ಹಾಗೂ ಅಲ್ಲ, ಇನ್ನೊಂದು ಪದ್ಯವು ಹೇಳುವಂತೆ ಇವು ಇಪ್ಪತ್ತನೆಯ ಶತಮಾನ ಅಂದರೆ ಕ್ರಿಸ್ತಪೂರ್ವ ಹಾಗೂ ಕ್ರಿಸ್ತಶಕಗಳಲ್ಲಿ ಹಾಗೇ ಇರುವ ಯುಗಲಕ್ಷಣಗಳು.

ಈ ಸಂಪ್ರದಾಯಗಳ ಕಾವ್ಯವು ಸುಲಭ ಭ್ರಮೆಗಳಿಗೆ ಪಕ್ಕಾಗುವ ಕಾವ್ಯವಲ್ಲ. ಸತ್ತವರ ಬಗೆಗಿನ ಈ ಪದ್ಯದ ಸಾಲುಗಳನ್ನು ನೋಡಿ:
“ಸತ್ತವರ ಬಗ್ಗೆ ಇರುವ ಒಂದೇ ತಕರಾರೆಂದರೆ ಅವರನ್ನು ಕೊಲ್ಲಲಾಗುವುದಿಲ್ಲ”
(‘ಸತ್ತವರು ಸ್ವಾರ್ಥಿಗಳು’)

ಈ ಸಂಕಲನದ ಪದ್ಯಗಳು ಇಂಥ ರುಚಿಕರವಲ್ಲದ ಸತ್ಯಗಳನ್ನು ಹೇಳುವುದಕ್ಕಾಗಿ ಅನೇಕ ಧಾಟಿಗಳನ್ನು (tones) ಪ್ರಯೋಗಿಸುತ್ತವೆ. ಉದಾಹರಣೆಗೆ, ‘ಕರ್ಮಣಿ ಪ್ರಯೋಗ’ ವೆನ್ನುವ ಅದ್ಭುತ ಪದ್ಯವನ್ನು ನೋಡಿ. ಪದ್ಯ ಶುರುವಾಗುವುದು ತೀ.ನಂ. ಶ್ರೀಕಂಠಯ್ಯನವರು ಕರ್ಮಣಿ ಪ್ರಯೋಗದ ಲಕ್ಷಣದ ಬಗ್ಗೆ ಬರೆದ ವ್ಯಾಕರಣದ ವ್ಯಾಖ್ಯಾನದಿಂದ: “ಕರ್ತೃ ಯಾರೆಂಬುದು ಗೊತ್ತಿಲ್ಲದಿದ್ದಾಗ ಅಥವಾ ಕರ್ತೃವಿಗೆ ಗಮನಕೊಡುವ ಉದ್ದೇಶವಿಲ್ಲದಿದ್ದಾಗ ಕ್ರಿಯಾಪದವು ಕರ್ಮಣಿ ಪ್ರಯೋಗದಲ್ಲಿರುವುದುಂಟು”. ಈ ವ್ಯಾಕರಣ ನಿಯಮವು ನಮ್ಮ ಕಾಲದ ಹಿಂಸೆಯ ವ್ಯಾಕರಣದ ನಿಯಮವಾಗಿ ಇಡೀ ಪದ್ಯದ ಉದ್ದಕ್ಕೆ ಬೆಳೆದು ನಿಲ್ಲುತ್ತದೆ. ನನಗೆ ಹೊಳೆದದ್ದೆಂದರೆ ಹಿಂಸೆಯನ್ನು ವರದಿ ಮಾಡುವಾಗ ಹಿಂಸೆಯ ಕರ್ತೃವನ್ನು ಹೆಸರಿಸುವ ಜವಾಬ್ದಾರಿ/ಅಪಾಯಗಳು ಬೇಡವೆನ್ನುವ ಪತ್ರಿಕೆಗಳು ಮತ್ತು ಮಾಧ್ಯಮಗಳು ಅವಲಂಬಿಸುವುದು ಕರ್ಮಣೀ ಪ್ರಯೋಗವನ್ನೇ ಅಲ್ಲವೆ? ಈ ವಿದ್ಯಮಾನದ ಒಳಹೊಕ್ಕು ನೋಡಿದರೆ ಈ ಕರ್ಮಣೀ ಪ್ರಯೋಗದ ಹಿಂದೆ ಅಮಾನುಷ ಕ್ರಿಯೆಗಳು ನಡೆದರೂ ಕರ್ತೃವನ್ನು ಕಾಣಲಾಗದ, ಹೆಸರಿಸಲಾಗದ ಆಧುನಿಕ ಜಗತ್ತಿನ ಪ್ರಜೆಗಳ ಸ್ಥಿತಿಯಿದೆ. ಈ ಪದ್ಯದಲ್ಲಿ ಕನ್ನಡಕ್ಕೆ ಅಸ್ವಾಭಾವಿಕವೆನ್ನಿಸುವ ಕರ್ಮಣೀ ಪ್ರಯೋಗದ ಮೂಲಕ ಈ ಸ್ಥಿತಿಯು ಸ್ಫುಟಗೊಳ್ಳುತ್ತದೆ.

“ಈ ಹುಡುಗನೇನು ಸುಮ್ಮನೆ ಸತ್ತು ಹೋದನೆ? ಇಲ್ಲ,
ಕೊಳವೆಬಾವಿಗೆ ಬೀಳಲ್ಪಟ್ಟು ಸಾಯಲ್ಪಟ್ಟ;
ಹೊಟ್ಟೆಗಿಲ್ಲದೆ ಹೋಟೆಲಿನಿಂದ ಲೋಟ ಕದ್ದ ಈ ಮನುಷ್ಯ
ಜೈಲಿಗೆ ಹೋಗಿ ಏಳು ವರ್ಷವಷ್ಟೇ ಕೊಳೆಯಲ್ಪಟ್ಟ.
ಹಾಡುಹಗಲೇ ನಡುಬೀದಿಯಲ್ಲಿ ಹದಿಹರೆಯದ ಹುಡುಗಿಯ
ಮೇಲೆ ಅತ್ಯಾಚಾರವೆಸಗಲ್ಪಟ್ಟಿತು …… (‘ಕರ್ಮಣೀ ಪ್ರಯೋಗ’)

ಜಾರ್ಜ್ ಆರ್‍ವೆಲ್ ‘Politics and the English Language’ ನಲ್ಲಿ, ಜಾರ್ಜ್ ಸ್ಟೈನರ್ ‘Language and Silence’ ನಲ್ಲಿ ಮಾಡುವ ಗಾಢವಾದ ವಿಷಾದಪೂರ್ಣ ಚಿಂತನೆಗೆ ಈ ಪದ್ಯವು ಸರಿಸಮವಾಗಿದೆ.

ಈ ಪದ್ಯಗಳು ವಿವಿಧ ಧಾಟಿಗಳಲ್ಲಿ ಇಂಥ ಹೇಳುವಿಕೆಯ ಪ್ರಯೋಗಗಳನ್ನು ಮಾಡುತ್ತವೆ ಎಂದೆ. ಯಾಕೆಂದರೆ ಸಂಕಲನದ ಎಲ್ಲಾ ಪದ್ಯಗಳು ಕೇವಲ ಹಿಂಸೆಯ ಬಗ್ಗೆ ಇಲ್ಲ. ದಿವಾಕರರ ಕಾವ್ಯದಲ್ಲಿ ಒಂದು ಅದ್ಭುತವಾದ wit ಇದೆ. ಇದು ಹಾಸ್ಯ ಅಥವಾ ಚಿಲ್ಲರೆ ಆಟದ ಮಟ್ಟಕ್ಕೆ ಇಳಿಯುವ wit ಅಲ್ಲ. ಇದು ಗಂಭೀರ ವಿಚಾರಗಳನ್ನು ಹಗುರವಾಗಿ ಓದುವವರಿಗೆ ಮುದಕೊಡುತ್ತಲೇ ಮಂಡಿಸುವ ಧಾಟಿಯಾಗಿದೆ. ಉದಾಹರಣೆಗೆ “ಹೌದಪ್ಪನ ಊರು ಮತ್ತು ಇಲ್ಲಪ್ಪನ ಊರು” ಪದ್ಯದಲ್ಲಿ ಈ ಎರಡು ಊರುಗಳನ್ನು ಉದ್ದೇಶಪೂರ್ವಕವಾಗಿಯೇ ಎರಡು ಅತಿಶಯ ವಿರುದ್ಧಗಳನ್ನಾಗಿ ವರ್ಣಿಸಲಾಗಿದೆ.

(ಡಾ. ರಾಜೇಂದ್ರ ಚೆನ್ನಿ)

“ಇಲ್ಲಪ್ಪನ ಊರಿನಲ್ಲಿ ಎಲ್ಲವೂ ಸತ್ತಂತೆ ಇದ್ದರೆ ಹೌದಪ್ಪನ ಊರಿನಲ್ಲಿ ಬದುಕೆಂದರೆ ಹಕ್ಕಿಯ ಹಾಡಿನಂತೆ”. ಆದರೆ ಈ ಹಾಡಿನಂಥ ಸ್ವಚ್ಛಂದ ಬದುಕು “ತುಸು ಬೇಜಾರು ಬೋರು” ಆಗುತ್ತದೆಯಾದ್ದರಿಂದ ಈ ಎರಡೂ ಊರುಗಳ ಮಧ್ಯ ಎಡತಾಕುತ್ತಿರುವುದೇ ಒಳ್ಳೆಯದು ಎನ್ನುವ ತೀರ್ಮಾನಕ್ಕೆ ಪದ್ಯವು ಬರುತ್ತದೆ! ರಾಣಿ ವಿಕ್ಟೋರಿಯಾ ಹಾಗೂ ಗಾಂಧಿಯವರ ಪ್ರತಿಮೆಗಳ ಬಗ್ಗೆಯೂ ಇಂಥ ಇನ್ನೊಂದು ಪದ್ಯವಿದೆ. “ಬಹಳಷ್ಟು ಪ್ರತಿಮೆಗಳಿಗೆ ಬೂಟಾಟಿಕೆಯೆಂದರೇನು ಗೊತ್ತಿಲ್ಲ” ಎನ್ನುವ ಅಚ್ಚರಿಯ ತೀರ್ಮಾನವು ನಾನು ಹೇಳಿದ wit ನ ಉದಾಹರಣೆಯಾಗಿದೆ.

ಸಂಕಲನದ ಕೆಲವು ಅಪೂರ್ವ ಪದ್ಯಗಳು magic realism ಶೈಲಿಯ ಕಥನಗಳಲ್ಲಿ ಬರುವಂಥ ಸಂಗತಿಗಳನ್ನು ಬಳಸಿಕೊಳ್ಳುತ್ತವೆ. ಉದಾಹರಣೆಗೆ “ವಿಧಾನ ಸಭೆಯಲ್ಲೊಂದು ಹಕ್ಕಿ”. ವಿಚಿತ್ರ ರೂಪದ ಹಕ್ಕಿಯೊಂದು ವಿಧಾನಸೌಧದಲ್ಲಿ ಸಭೆ ನಡೆಯುವಾಗ ಪ್ರವೇಶ ಮಾಡಿ ಅಲ್ಲಿ ಕುಳಿತಿರುವ ಖದ್ದರುಗಳನ್ನು ಮತ್ತು ಮಾನ್ಯ ಸಭಾಪತಿಗಳನ್ನು ಗಲಿಬಿಲಿಗೊಳಿಸುತ್ತದೆ. ಅದು ಹಾರಿ ಹೊರಗೆ ಹೋದಾಗ ಹಿಂಬಾಲಿಸಿಕೊಂಡು ಹೋದರೆ ಹಕ್ಕಿಯೂ ಇಲ್ಲ, ಅದರ ನೆರಳೂ ಇಲ್ಲ! ಮಾರ್ಕೆಜ್‌ನ ಕಾದಂಬರಿಗಳಲ್ಲಿ ನಡೆಯುವ ಈ ಘಟನೆಯ ಅರ್ಥವೇನು ಎನ್ನುವುದು ಹೊಳೆಯುವುದಿಲ್ಲ. ಅವರವರ ಭಾವಕ್ಕೆ ತಕ್ಕ ಹಾಗೆ ವ್ಯಾಖ್ಯಾನಿಸಬಹುದು.

ಈ ಸಂಕಲನದ ಪದ್ಯಗಳಿಂದ ನಾನು ಅನೇಕ ಸಾಲುಗಳನ್ನು ಅಚ್ಚರಿ ಹಾಗೂ ಖುಷಿಯಿಂದ ಓದಿ ಮನನ ಮಾಡಿಕೊಂಡಿದ್ದೇನೆ. ಅದರಲ್ಲೂ ಅಚ್ಚುಕಟ್ಟಾದ ಪ್ರಾಸಬದ್ಧವಾದ ದ್ವಿಪದಿಗಳನ್ನು. ಇರಲಿ ಅವೆಲ್ಲವನ್ನೂ ನಾನು ಮುನ್ನುಡಿಯಲ್ಲಿ ಹೇಳುವುದಿಲ್ಲ.

‘The author is dead’ ಎನ್ನುವ ಸಿದ್ಧಾಂತಗಳ ಇಂದಿನ ಕಾಲದಲ್ಲಿ ಕಾವ್ಯದ ಬಗ್ಗೆ ಸಂಪ್ರದಾಯವಾದಿಯಾದ ನಾನು ಕವಿಯ ಪ್ರಜ್ಞೆ ವಿಶಿಷ್ಟವೆಂದೇ ನಂಬಿದ್ದೇನೆ. ಈ ಸಂಕಲನದ ಪದ್ಯಗಳ ಹಿಂದೆ ದುಡಿಯುತ್ತಿರುವುದು ಆಧುನಿಕ ಕಾಲದ ಅಪಸವ್ಯಗಳನ್ನು ಯಾವ ಭ್ರಮೆಗಳೂ ಇಲ್ಲದೆ ಎದುರಿಸಿ Joseph Conrod ಹೇಳಿದಂತೆ “into the destructive element, immerse” ಎನ್ನುವುದನ್ನು ಸಾಧಿಸಿ, ಭಾಷೆಯ ಶುಚಿತ್ವ, ಕಾವ್ಯದ ಸಹಜತೆಗಳ ಮೂಲಕವೇ ಮನುಷ್ಯನ ಅಸಹಜ ಸ್ಥಿತಿಗಳನ್ನು ಶೋಧಿಸುವ ಮಾನವಪರ ಪ್ರಜ್ಞೆಯಾಗಿದೆ. ಕವಿಯ ಈ ಪ್ರಜ್ಞೆಗೆ ನಾನು ಕೃತಜ್ಞನಾಗಿದ್ದೇನೆ. ಈ ಸಂಕಲನದ ಪದ್ಯಗಳು ನಮ್ಮ ನೈತಿಕ ಎಚ್ಚರವನ್ನು ವಿಸ್ತರಿಸುತ್ತವೆ.

(ಕೃತಿ: ವಿಧಾನಸಭೆಯಲ್ಲೊಂದು ಹಕ್ಕಿ (ಕವನ ಸಂಕಲನ), ಲೇಖಕರು: ಎಸ್.‌ ದಿವಾಕರ್ , ಪ್ರಕಾಶಕರು:  ಅಂಕಿತ ಪುಸ್ತಕ, ಬೆಲೆ: 70/-)