ಅದಾವುದೊ ಸ್ಥಾನಕ್ಕೆ ಆಯ್ಕೆಯಾದ ಗಣ್ಯವ್ಯಕ್ತಿಯೊಬ್ಬರಿಗೆ ಸನ್ಮಾನಿಸುವ ಮತ್ತು ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುವ ಕಾರ್ಯಕ್ರಮವೊಂದು ನಡೆಯಿತು. ಸ್ವಲ್ಪ ಸಮಯದ ನಂತರ ಬಂದ ಆ ಗಣ್ಯವ್ಯಕ್ತಿ ಶರಣಯ್ಯ ವಸ್ತ್ರದ ಎಂಬುದು ತಿಳಿಯಿತು. ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ದೊಡ್ಡವ್ಯಕ್ತಿ ಅವರಾಗಿದ್ದರು.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹನ್ನೊಂದನೆಯ ಕಂತು

ಮದ್ದಿನ ಖಣಿ ಓಣಿಯಲ್ಲಿದ್ದಾಗ ನನ್ನ ತಂದೆ ಒಂದು ನಾಯಿ ಸಾಕಿದ್ದರು. ಅದು ಯಾರನ್ನಾದರೂ ನೋಡಿದರೆ ಬಹಳ ಬೊಗಳುತ್ತಿತ್ತು. ನಮ್ಮ ಮನೆಯ ಹತ್ತಿರವೇ ಇದ್ದ ಒಬ್ಬ ವ್ಯಕ್ತಿ ದುಡುಕು ಸ್ವಭಾವದವನಾಗಿದ್ದ. ನಾಯಿಯ ಕಾರಣ ಆತ ನನ್ನ ತಂದೆಗೆ ಜೋರು ಮಾಡಿದ. ಆಗ ನನ್ನ ತಂದೆ, ‘ನಿಮಗೆ ಮತ್ತೆ ತೊಂದರೆ ಆಗುವುದಿಲ್ಲ’ ಎಂದು ಹೇಳಿ ನಾಯಿಯನ್ನು ಮನೆಯೊಳಗೆ ಕಟ್ಟಿ ಹಾಕಿದರು. ನನ್ನ ತಂದೆಯ ಸಮಾಧಾನ ಚಿತ್ತದಿಂದಾಗಿ ಆತ ನಿರುತ್ತರನಾದ. ನಂತರ ಮರುದಿನವೇ ಆ ನಾಯಿಮರಿಯನ್ನು ಪರಿಚಯದವರಿಗೆ ಕೊಟ್ಟ ನೆನಪು.

ನಮ್ಮಿಂದ ಯಾರಿಗೂ ತೊಂದರೆಯಾಗಬಾರದು. ಅವರು ನಮಗೆ ಏನಾದರೂ ಹೇಳಿದರೆ, ಏಕೆ ಹೇಳಿದರು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅವರ ತಪ್ಪನ್ನು ಎಣಿಸುವುದಕ್ಕಿಂತಲೂ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದರ ಕಡೆಗೇ ಲಕ್ಷ್ಯವಿರಬೇಕು ಎಂಬುದು ನನ್ನ ತಂದೆಯ ಚಿಂತನಾಕ್ರಮವಾಗಿತ್ತು.

ವರ್ಷ 1957 ಇರಬಹುದು. ವಿಜಾಪುರದ ಮದ್ದಿನ ಖಣಿ ಓಣಿಯಲ್ಲಿನ ನಮ್ಮ ಬಾಡಿಗೆ ಮನೆಯ ಮುಂದೆ; ಓಣಿಯ ಹುಡುಗರ ಜೊತೆ ಗೋಟಿ (ಗೋಲಿ) ಆಡುತ್ತಿದ್ದೆ. ಒಬ್ಬ ವ್ಯಕ್ತಿ ನಮ್ಮ ಆಟವನ್ನು ನೋಡುತ್ತ ಮಾತುಗಳನ್ನು ಆಲಿಸುತ್ತಿದ್ದರು. ಮರುದಿನ ಅವರು ನಮ್ಮ ಮನೆಗೆ ಬಂದು ನನ್ನ ತಂದೆಯ ಕೂಡ ಮಾತನಾಡಿದರು. ‘ಹುಡುಗ ಶಾನ್ಯಾ ಅದಾನ; ಅವಂಗ ಸಾಲಿಗಿ ಹಾಕು’ ಎಂದು ನನ್ನನ್ನು ತೋರಿಸುತ್ತ ನನ್ನ ತಂದೆಗೆ ಹೇಳಿದರು.

ಆ ತೆಳ್ಳಗಿನ ಮತ್ತು ಕೆಂಪಗಿನ ವ್ಯಕ್ತಿ ನಮ್ಮ ಮನೆಯ ಬಳಿಯೆ ಇದ್ದರು. ಅವರು ಸದಾ ಖಾಕಿ ಪ್ಯಾಂಟು, ಇನ್‌ಷರ್ಟ್ ಮಾಡಿದ ಬಿಳಿ ಹಾಫ್ ಷರ್ಟು ಮತ್ತು ದಪ್ಪನೆಯ ಖಾಕಿ ಬಣ್ಣದ ಹ್ಯಾಟು ಧರಿಸುತ್ತಿದ್ದರು. ಬಹಳ ಶಿಸ್ತಿನ ವ್ಯಕ್ತಿ. ಅವರ ಅಡ್ಡಹೆಸರು ಅಟವಳಕರ್ ಎಂದು ಇದ್ದಿರಬಹುದು. ಅವರು ಬ್ರಿಟಿಷ್ ಸರ್ಕಾರವಿದ್ದಾಗ ವಿಜಾಪುರ ಮುನಸಿಪಾಲಿಟಿಯಲ್ಲಿ ಸಣ್ಣ ಅಧಿಕಾರಿಯಾಗಿದ್ದರಂತೆ. ಬ್ರಿಟಿಷರು ಹೋದರೂ ತಾವೊಬ್ಬ ಬ್ರಿಟಿಷ್ ಕಾಲದ ಅಧಿಕಾರಿ ಎಂಬ ಭಾವನೆ ಅವರಲ್ಲಿತ್ತು. ಆದರೆ ಅವರು ನಿಗರ್ವಿ ಮತ್ತು ಮಿತಭಾಷಿಯಾಗಿದ್ದರು.

ಅವರು ಹೇಳಿದ್ದು ನನ್ನ ತಂದೆಗೆ ಹಿಡಿಸಿತು. ಮರುದಿನವೇ 5 ನೇ ನಂಬರ್ ಶಾಲೆಗೆ ಕರೆದೊಯ್ದರು. ಮಾಸ್ತರರೊಬ್ಬರು ಹೆಸರು ಮುಂತಾದ ಮಾಹಿತಿ ಕೇಳಿದರು. ಜನ್ಮ ದಿನದ ಬಗ್ಗೆ ಕೇಳಿದಾಗ ಅದಾವುದೋ ಸಂದರ್ಭದಲ್ಲಿ ಬಂದ ರಂಜಾನ್ ತಿಂಗಳ ಒಂದು ಶನಿವಾರದಂದು ನನ್ನ ಜನನವಾದುದರ ಬಗ್ಗೆ ಆ ಮಾಸ್ತರರಿಗೆ ಮಾಹಿತಿ ದೊರೆಯಿತು. ಅದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಆ ಮಾಸ್ತರರು, ಅದೇನೋ ಲೆಕ್ಕ ಹಾಕಿ 1951ನೇ ಜೂನ್ 20 ಎಂದು ಬರೆದರು! ಮರುದಿನದಿಂದಲೇ ಶಾಲೆಗೆ ಹೋಗತೊಡಗಿದೆ.

ಶಾಲೆ ಪ್ರಾರಂಭವಾಗುವ ಮೊದಲು ಆ ಕಟ್ಟಡ ಹಳೆಯ ಅಡತಿ ಅಂಗಡಿಯಾಗಿತ್ತು. ಕಟ್ಟಡದ ಹಿಂದಿನ ದೊಡ್ಡ ವಖಾರ (ಉಗ್ರಾಣ)ದಲ್ಲಿ ಬಹುಶಃ ಮೂಲೆಗೊಂದರಂತೆ ಕ್ಲಾಸುಗಳು ನಡೆಯುತ್ತಿದ್ದ ನೆನಪು. ಮುಂದಿನ ಭಾಗದಲ್ಲಿ ಕೂಡ ಅನೇಕ ಕೋಣೆಗಳಿದ್ದವು. ವಖಾರದ ಹಿಂದಿನ ಬಾಗಿಲು ದಾಟಿದರೆ ಎಸ್.ಎಸ್. ಹೈಸ್ಕೂಲಿನ ಮುಖ್ಯ ಗೇಟ್ ಕಾಣುತ್ತಿತ್ತು. (ನಾನು ಈ ಶಾಲೆಗೆ ಸೇರಿದ ನಂತರ ಕೆಲ ವರ್ಷಗಳಲ್ಲೇ ಇದು ಸಮೀಪದಲ್ಲೇ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆಗ ಶಿಕ್ಷಣ ಸಚಿವರಾಗಿದ್ದ ಅಣ್ಣಾರಾವ ಗಣಮುಖಿ ಅವರು ಆ ಶಾಲೆಯ ಉದ್ಘಾಟನೆ ಮಾಡಿದರು. ನಾನು ಒಂದನೇ ಇಯತ್ತೆಗೆ ಸೇರಿದ ಆ ಹಳೆಯ ಕಟ್ಟಡದಲ್ಲಿ ಈಗ ಹೆಣ್ಣುಮಕ್ಕಳ 5ನೇ ನಂಬರ ಶಾಲೆ ಇದೆ. ಆದರೆ ಕಟ್ಟಡದ ರೂಪ ಸಂಪೂರ್ಣ ಬದಲಾಗಿದೆ.)

ನಾನು ಈ ಶಾಲೆಗೆ ಸೇರಿದ ಹೊಸದರಲ್ಲಿ ಸಾಯಂಕಾಲ ಗಂಟೆ ಭಾರಿಸುವುದನ್ನೇ ಕಾಯುತ್ತಿದ್ದೆ. ಬಂದ ಹೊಸದರಲ್ಲಿ ಒಂದು ದಿನ ಮಧ್ಯಾಹ್ನದ ಬಿಡುವಿನ ನಂತರ ಹೆಡ್ ಮಾಸ್ತರರು ಬಂದು ಎಲ್ಲ ಮಕ್ಕಳನ್ನು ಶಿಸ್ತಿನಿಂದ ವಖಾರದಲ್ಲಿ ಕೂಡಿಸಲು ಮಾಸ್ತರರಿಗೆ ಹೇಳಿದರು. ಆ ವಖಾರ ಹಳೆಯದಾದರೂ ಸ್ವಚ್ಛ ಹಾಗೂ ಸಾದಾ ಸಭಾಭವನದ ಹಾಗೆ ಇತ್ತು. ಎಲ್ಲ ಕ್ಲಾಸಿನ ಮಕ್ಕಳು ಅಲ್ಲಿ ಸೇರಿದೆವು.

ಅದಾವುದೊ ಸ್ಥಾನಕ್ಕೆ ಆಯ್ಕೆಯಾದ ಗಣ್ಯವ್ಯಕ್ತಿಯೊಬ್ಬರಿಗೆ ಸನ್ಮಾನಿಸುವ ಮತ್ತು ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುವ ಕಾರ್ಯಕ್ರಮ ಅದಾಗಿತ್ತು. ಸ್ವಲ್ಪ ಸಮಯದ ನಂತರ ಬಂದ ಆ ಗಣ್ಯವ್ಯಕ್ತಿ ಶರಣಯ್ಯ ವಸ್ತ್ರದ ಎಂಬುದು ತಿಳಿಯಿತು. ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ದೊಡ್ಡವ್ಯಕ್ತಿ ಅವರಾಗಿದ್ದರು. ನಾನು ಒಂದನೆಯ ಇಯತ್ತೆಯ ವಿದ್ಯಾರ್ಥಿಯಾಗಿದ್ದಾಗಲೇ ಮನುಷ್ಯರು ಹೇಗೆ ಇರಬೇಕು ಎಂಬುದರ ಪಾಠವನ್ನು ಇಂಥ ಸಂದರ್ಭಗಳಿಂದ ಕಲಿತೆ. ಇಂದಿಗೂ ಅಂಥ ಅನುಭವಗಳೇ ನನ್ನ ಬದುಕನ್ನು ರೂಪಿಸುತ್ತಿವೆ.

(5 ನೇ ನಂಬರ್ ಶಾಲೆ)

ನಮ್ಮಿಂದ ಯಾರಿಗೂ ತೊಂದರೆಯಾಗಬಾರದು. ಅವರು ನಮಗೆ ಏನಾದರೂ ಹೇಳಿದರೆ, ಏಕೆ ಹೇಳಿದರು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅವರ ತಪ್ಪನ್ನು ಎಣಿಸುವುದಕ್ಕಿಂತಲೂ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದರ ಕಡೆಗೇ ಲಕ್ಷ್ಯವಿರಬೇಕು ಎಂಬುದು ನನ್ನ ತಂದೆಯ ಚಿಂತನಾಕ್ರಮವಾಗಿತ್ತು.

ಅದೊಂದು ಸರಳ ಹಾಗೂ ಅವಿಸ್ಮರಣೀಯ ಸಮಾರಂಭವಾಗಿತ್ತು. ಸಾತ್ವಿಕ ಹಾಗೂ ಪ್ರಶಾಂತ ವ್ಯಕ್ತಿತ್ವದ ಶರಣಯ್ಯ ವಸ್ತ್ರದ ಅವರಿಗೆ ಸಭೆಯಲ್ಲಿ ದಾರದ ಲಾಡಿಯನ್ನು ಹೂವಿನ ಹಾರದ ಹಾಗೆ ಹಾಕಲಾಯಿತು. ಹೂವಿನ ಹಾರ ಹಾಕುವುದನ್ನು ನೋಡಿದ್ದ ನನಗೆ ಅದು ಬಹಳ ಹೊಸದೆನಿಸಿತು. ಆ ಖಾದಿಹಾರ ನನ್ನಲ್ಲಿ ಒಂದುರೀತಿಯ ಹೊಸತನವನ್ನು ಮೂಡಿಸಿತು. ಸರಳತೆಯ ಸೌಂದರ್ಯಾನುಭೂತಿ ನನಗೆ ಅರಿಯದಂತೆಯೆ ಆಯಿತು. ಆ ದೃಶ್ಯ ನನ್ನ ಮನಸ್ಸಿನಿಂದ ಎಂದೂ ಮಾಸಲೇ ಇಲ್ಲ. ಅಂದು ಗಂಟೆ ಬಾರಿಸುವ ಮೊದಲೆ ನಮಗೆ ಮನೆಗೆ ಹೋಗುವ ಅವಕಾಶ ಸಿಕ್ಕಿದ್ದು ಕೂಡ ಆ ಸಭೆಯ ಬಗ್ಗೆ ಹೆಚ್ಚಿನ ಗೌರವ ಮೂಡಿರಲು ಸಾಕು.

ತದ ನಂತರ ಶರಣಯ್ಯ ವಸ್ತ್ರದ ಅವರು ನಗರದಲ್ಲಿ ಮೆಲ್ಲಗೆ ಸೈಕಲ್ ಸವಾರಿ ಮಾಡುವುದನ್ನು ನೋಡಿದಾಗಲೆಲ್ಲ ನನಗೆ ಆ ಶಾಲಾ ಸಭೆಯ ನೆನೆಪು ಮರುಕಳಿಸುತ್ತಿತ್ತು. ಅವರು ಶಾಸಕರಾಗಿದ್ದರೂ ಸೈಕಲ್ಲೇ ಅವರ ವಾಹನವಾಗಿತ್ತು.

ಈ ಶಾಲೆ ಬಜಾರಕ್ಕೆ ಬಹಳ ಸಮೀಪವಾಗಿತ್ತು. ಶಾಲೆಯ ಮುಂದೆ ಬಾರಿಹಣ್ಣು, ಇಲಾಚಿ ಹುಣಸಿಕಾಯಿ, ಲಾಲವಾಲಾ, ಹುರಿದ ಹುಂಚಿಕಪ್, ಚಕ್ಲಿ (ಚಕ್ಕಲಿ), ಪೆಪರ್ಮೆಂಟ್, ಬಿಸ್ಕಿಟ್ ಮುಂತಾದವುಗಳನ್ನು ಜನ ಬೀದಿ ಬದಿಯಲ್ಲಿ ಕುಳಿತು ಮಾರುತ್ತಿದ್ದರು. ಇವೆಲ್ಲ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಆಕರ್ಷಕವಾಗಿದ್ದವು. ಚಹಾ ಕೂಡ ಬೀದಿಬದಿಯಲ್ಲೇ ಸಿಗುತ್ತಿತ್ತು. ಹೆಚ್ಚಾಗಿ ಕೂಲಿಕಾರರು ಈ ಚಹಾ ಮತ್ತು ಚಕ್ಲಿಯ ಗಿರಾಕಿಗಳಾಗಿದ್ದರು. ಹೀಗೆ ಶಾಲೆಯ ಮೂಲಕ ಶಿಕ್ಷಣದ ಜೊತೆಗೆ ಹೊರ ಜಗತ್ತಿನ ಪರಿಚಯವೂ ಆಗತೊಡಗಿತು.

(ಬೋರೆ ಹಣ್ಣು)

ಒಬ್ಬ ಬಾಲಕಿ ಸಲ್ವಾರ ಕಮೀಜ್ ಯುನಿಫಾರ್ಮ್ ಹಾಕಿಕೊಂಡು ಇನಾಮದಾರ ತೋಟದಿಂದ ಮದ್ದಿನ ಖಣಿ ದಾಟಿ ನಮ್ಮ ಮನೆಯ ಮುಂದೆ ಹಾಯ್ದು ಶಾಲೆಗೆ ಹೋಗುತ್ತಿದ್ದಳು. ಬಹುಶಃ ಅವಳು ಉರ್ದು ಶಾಲೆಯ ವಿದ್ಯಾರ್ಥಿನಿಯಾಗಿರಬಹುದು. ಸಲ್ವಾರ್ ಬಿಳಿಯದಿದ್ದು ಕಮೀಜ್ ತಿಳಿನೀಲಿ ಬಣ್ಣದ್ದಿತ್ತು. ಅವಳು ನಾನು ನೋಡಿದ ‘ಶಾಲೆಗೆ ಹೋಗುವ ಮೊದಲ ವಿದ್ಯಾರ್ಥಿನಿ’ ಆಗಿದ್ದಳು. ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದೆಂದರೆ ದೊಡ್ಡ ಸಾಹಸವೇ ಆಗಿತ್ತು. ಆ ಬಾಲಕಿ ತನ್ನ ಮುಂದಿನ ದಾರಿಯೊಂದನ್ನು ಬಿಟ್ಟರೆ ಮತ್ತೇನನ್ನೂ ನೋಡುತ್ತಿರಲಿಲ್ಲ. ಒಂದೊಂದು ಸಲ ಅವಳ ಜೊತೆ ಅಜ್ಜ ಇರುತ್ತಿದ್ದರು. ಅವರ ಪೋಷಾಕು ಸೂಫಿಗಳ ಹಾಗೆ ಇತ್ತು. ಇಜಾರ (ಪೈಜಾಮಾ) ಮೇಲೆ ನೆಹರೂ ಶರ್ಟ್ ಮತ್ತು ಶರ್ಟ್ ಮೇಲೆ ಜಾಕೆಟ್ ಹಾಕಿಕೊಳ್ಳುತ್ತಿದ್ದ ಅವರು ಬಿಳಿ ರುಮಾಲು ಸುತ್ತುತ್ತಿದ್ದರು. ಅವರ ಕೈಯಲ್ಲಿ ಛತ್ರಿ ಇದ್ದರೂ ಬಿಚ್ಚುತ್ತಿರಲಿಲ್ಲ.

ಛತ್ರಿ, ಮಳೆಗಾಲ ಮತ್ತು ಬೇಸಿಗೆ ಕಾಲದ ಸಂಗಾತಿಯಾಗಿದೆ. ಆದರೆ ಬಹಳಷ್ಟು ಬಡ ಜನರು ಛತ್ರಿಯ ಮೊರೆ ಹೋಗುವುದಿಲ್ಲ. ಮಳೆ, ಚಳಿ ಮತ್ತು ಬೇಸಗೆ ಕಾಲಗಳಲ್ಲಿ ಅವರು ಬಟ್ಟೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಿಲ್ಲ. ಖಗ್ಗ ಧೋತರ, ಕುಂಬಳ ಛಾಟಿ, ಅಂಗಿ ಮತ್ತು ಗಾಂಧಿ ಟೊಪ್ಪಿಗಿ ಹಾಕಿಕೊಳ್ಳುತ್ತಿದ್ದರು. ಅವರು ಛತ್ರಿ ಇಲ್ಲದೆ ಮಳೆಗಾಲ ಮತ್ತು ಬೇಸಗೆ ಕಾಲಗಳನ್ನು ಹಾಗೂ ಸ್ವೆಟರ್ ಇಲ್ಲದೆ ಚಳಿಗಾಲವನ್ನು ಕಳೆಯುತ್ತಿದ್ದರು. ಅವರ ಶರೀರ ಋತುಮಾನಗಳಿಗೆ ಹೊಂದಿಕೊಂಡಿತ್ತು.

ಜನರು ಹೆಚ್ಚಾಗಿ ನಿರೋಗಿಗಳಾಗಿದ್ದರು. ಅಕ್ಕಿ, ಮೂಸಂಬಿ ಮತ್ತು ಬ್ರೆಡ್ ಮುಂತಾದವು ಜನಮಾನಸದಲ್ಲಿ ರೋಗಿಗಳ ಆಹಾರದ ಪಟ್ಟಿಯಲ್ಲಿದ್ದವು. ಓಣಿಯ ಕಿರಾಣಿ ಅಂಗಡಿಯಲ್ಲಿ ಯಾರಾದರೂ ಪಾವ್ ಕಿಲೊ ಅಕ್ಕಿ ಕೇಳಿದರೆ, ‘ಮನೆಯಲ್ಲಿ ಯಾರಿಗೆ ಹುಷಾರಿಲ್ಲʼ ಎಂದು ಅಂಗಡಿಯವ ಕೇಳುತ್ತಿದ್ದ. ಅದೇ ರೀತಿಯ ಪ್ರಶ್ನೆಗಳು ಬ್ರೆಡ್ ಇಲ್ಲವೆ ಮೂಸಂಬಿ ತೆಗೆದುಕೊಂಡು ಮನೆಗೆ ಹೋಗುವವರಿಗೆ ದಾರಿಯಲ್ಲಿ ಎದುರಾಗುವ ಪರಿಚಯಸ್ಥರು ಕೇಳುತ್ತಿದ್ದರು.

ಕಾಯಿಪಲ್ಲೆ (ತರಕಾರಿ) ಜೊತೆ ಜೋಳ, ಗೋಧಿ, ಸೆಜ್ಜೆ, ತೊಗರಿ, ಹೆಸರು, ಮೂಕಣಿ (ಹೆಸರಿನಂಥ ಇಟ್ಟಿಗೆ ಬಣ್ಣದ ಕಾಳು) ನಮ್ಮ ದೈನಂದಿನ ಆಹಾರದ ಭಾಗವಾಗಿದ್ದವು. ಜೋಳ ಮತ್ತು ತೊಗರಿ ಬೇಳೆಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು.

ನಾನು ಬಾಲಕನಾಗಿದ್ದಾಗ ಕಂಡ ಇನ್ನೊಂದು ವಿಚಾರ ಹೇಳಬೇಕೆನಿಸುತ್ತದೆ. ಬೇರೆಯವರ ಕಣ್ಣಲ್ಲಿ ವಿಶೇಷವಾಗಿ ಕಾಣದ ರೀತಿಯಲ್ಲಿ ಬದುಕಬೇಕೆಂಬುದು ಆಗಿನ ಕಾಲದ ಜನರ ಆಶಯವಾಗಿತ್ತು. ಜನರ ಮಧ್ಯೆ ಬೇರೆಯಾಗಿ ಕಾಣುವುದು ಅಹಂಕಾರದ ಸಂಕೇತ ಎಂದು ಜನಸಾಮಾನ್ಯರು ಭಾವಿಸಿದ್ದರು.

ಮಸರಾಯಿ ಧೋತರ, ಬಿಳಿಶರ್ಟ್ ಮತ್ತು ಗಾಂಧಿ ಟೋಪಿ ಹಾಕಿಕೊಂಡವರು ಸಾಮಾನ್ಯವಾಗಿ ಸ್ಥಳಿಯ ರಾಜಕೀಯ ಪುಢಾರಿಗಳಾಗಿರುತ್ತಿದ್ದರು. ಶ್ರೀಮಂತರು, ಗೌಡರು, ಜಮೀನುದಾರರು ಮುಂತಾದವರು ಧೋತರ, ಶರ್ಟ್ ಮತ್ತು ಕೋಟು ಹಾಕಿಕೊಂಡಿರುತ್ತಿದ್ದರು.

ಜಾತಿ ಮತ ವರ್ಗಭೇದವಿಲ್ಲದೆ ಜನರು ಮೂಢನಂಬಿಕೆಗಳನ್ನು ಸತ್ಯವೆಂದೇ ಭಾವಿಸುತ್ತಿದ್ದರು. ಪ್ರಶ್ನಿಸುವ ವಾತಾವರಣ ಕಾಣುತ್ತಿದ್ದಿಲ್ಲ. ಕೆಲವರು ನಂಬದವರು ಇದ್ದಿರಬಹುದು ಆದರೆ ಅವರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಜನ ಇರಲಿಲ್ಲ. ಅನೇಕ ಸಂಪ್ರದಾಯಗಳು ಮೂಢನಂಬಿಕೆಗಳ ಭಾಗವೇ ಆಗಿದ್ದವು. ಮನೆತನಗಳಿಗೆ ಸಂಬಂಧಿಸಿದ ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಭಜಂತ್ರಿಗಳ ಸಂಗೀತದ ಸದ್ದು ಇರಲೇಬೇಕು. ರಸ್ತೆಯಲ್ಲಿ ವಿವಿಧ ಸಂಪ್ರದಾಯಗಳಿಗೆ ಸಂಬಂಧಿಸಿದ ಮೆರವಣಿಗೆ ನಡೆಯುವಾಗ ಎಲ್ಲಕ್ಕೂ ಮುಂದೆ ಮಂಗಳವಾದ್ಯದವರು ಇರುತ್ತಾರೆ.

(ಸಾಂಪ್ರದಾಯಿಕ ಮೆರವಣಿಗೆ)

ಒಂದು ಸಲ ಯಾವನೋ ಪ್ರಸಿದ್ಧ ಜ್ಯೋತಿಷಿ ಯಾವುದೋ ಒಂದು ದಿನಾಂಕ ಹೇಳಿ: ‘ಅಂದು ಜಗತ್ ಪ್ರಳಯವಾಗುವುದು’ ಎಂದು ಸಾರಿದ. ಬಹಳಷ್ಟು ಜನರು ಗಲಿಬಿಲಿಗೊಂಡಿದ್ದರೂ ತಮ್ಮ ದೈನಂದಿನ ಬದುಕಿನಲ್ಲೇ ತಲ್ಲೀನರಾಗಿದ್ದರು. ಆದರೆ ಹೋಟೆಲ್ ಮಾಲೀಕ ಭಗವಂತಪ್ಪ ಆ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ. ಅವನ ಹೋಟೆಲ್ ಛಾವಣಿಯು ಫತ್ರೆ (ತಗಡು)ಗಳಿಂದ ನಿರ್ಮಾಣವಾಗಿತ್ತು. ಇತರ ಸುವ್ಯವಸ್ಥಿತ ಹೊಟೇಲ್‌ಗಳಿಗಿಂತ ಅಲ್ಲಿನ ತಿಂಡಿ ತಿನಿಸುಗಳ ಬೆಲೆ ಕಡಿಮೆ ಇದ್ದರೂ ರುಚಿಯಲ್ಲೇನೂ ಕಡಿಮೆ ಇರಲಿಲ್ಲ. ಹೀಗಾಗಿ ಹೋಟೆಲ್ ಗಿರಾಕಿಗಳಿಂದ ತುಂಬಿರುತ್ತಿತ್ತು.

ಜಗತ್ತು ಪ್ರಳಯವಾಗುವುದೆಂದು ಆತ ಹೊಟೇಲಲ್ಲಿ ಯಾರಿಗಾದರೂ ಹೇಳುತ್ತಿದ್ದರೆ ಅದು ಹೋಟೆಲಲ್ಲಿ ಕುಳಿತವರಿಗೆಲ್ಲ ಕೇಳಿಸುತ್ತಿತ್ತು. ಹೀಗಾಗಿ ಅವನ ಹೆಸರು ಪ್ರಳಯದ ಜೊತೆ ತಳಕು ಹಾಕಿಕೊಂಡಿತು. ಪ್ರಳಯದ ದಿನ ಬರಲು ಇಷ್ಟು ದಿನಗಳು ಉಳಿದವು ಎಂದು ಲೆಕ್ಕ ಹಾಕಿ ಹೇಳುವಾಗ ಅವನ ಆತಂಕ ಎಲ್ಲರಿಗೂ ಅರ್ಥವಾಗುತ್ತಿತ್ತು.

ಒಂದು ದಿನ ಮಧ್ಯಾಹ್ನದ ಸಮಯ. ನಾವು ಹುಡುಗರು ದೊಡ್ಡ ಮರದ ಕೆಳಗೆ ಬುಗುರಿ ಆಡುತ್ತಿದ್ದೆವು. ಹೆಣ್ಣುಮಕ್ಕಳು ಮರದ ನೆರಳಲ್ಲಿ ಕುಳಿತು ಅದು ಇದು ಮಾತನಾಡುತ್ತಿದ್ದರು. ಅವರ ಜೊತೆ ಯಮನವ್ವ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳಿದ್ದರು. ಅವರು ಮಾತನಾಡುತ್ತಿದ್ದುದರಲ್ಲಿ ಒಂದು ವಿಷಯ ಪ್ರಧಾನವಾಗಿತ್ತು. ಭಜಂತ್ರಿಗಲ್ಲಿಯ ಕಪ್ಪು ಸುಂದರಿಯೊಬ್ಬಳು ಕಾಮಾಟಿಪುರಕ್ಕೆ ಹೋದವಳು ಒಂದು ವರ್ಷದ ನಂತರ ವಾಪಸ್ ಬಂದಿದ್ದರ ಕುರಿತು ಅವರು ಮಾತನಾಡುತ್ತಿದ್ದರು. ಆಕೆ ಯಾವ ಜಾತಿಯವಳೋ ಗೊತ್ತಿಲ್ಲ. ಕಷ್ಟಕುಲದವಳೇ ಆಗಿದ್ದಂತೂ ಗ್ಯಾರಂಟಿ. ಅವಳ ಮನೆ ಮಧ್ಯಮ ವರ್ಗದವರಂತೆ ಇತ್ತು. ಅವಳೇಕೆ ಕಾಮಾಟಿಪುರ ಸೇರಿದಳು. ಯಾರು ಅವಳಿಗೆ ಆ ದಾರಿ ತೋರಿಸಿದರು ಎಂಬುದನ್ನು ತಿಳಿದುಕೊಳ್ಳುವಷ್ಟು ವಯಸ್ಸು ನನ್ನದಾಗಿರಲಿಲ್ಲ. ಅವರಿವರು ಹೆಣ್ಣುಮಕ್ಕಳು ಮಾತನಾಡುವುದು ಕಿವಿಗೆ ಬೀಳುತ್ತಿದ್ದುದರಿಂದ ಅದು ಮರ್ಯಾದಸ್ಥರ ಜಾಗವಲ್ಲ ಎಂಬುದು ಮಾತ್ರ ಗೊತ್ತಾಗುತ್ತಿತ್ತು. (ಅವಳನ್ನು ನೋಡುವ ಪ್ರಸಂಗ ಇನ್ನೂ ಒದಗಿರಲಿಲ್ಲ. ಮುಂದೆ ಕೆಲ ದಿನಗಳ ನಂತರ ನೋಡಿದಾಗ ಆಶ್ಚರ್ಯವೆನಿಸಿತ್ತು. ಆಕೆ ಅತಿ ಕಪ್ಪಗಿದ್ದು ಅತ್ಯಾಕರ್ಷಕವಾಗಿದ್ದಳು. ಕಪ್ಪು ಸೌಂದರ್ಯ ಸ್ಪರ್ಧೆ ಏರ್ಪಡಿಸಿದ್ದರೆ ಆಕೆ ವಿಶ್ವಸುಂದರಿ ಅನಿಸಿಕೊಳ್ಳುತ್ತಿದ್ದಳೇನೊ.)

(ಜೋಗತಿಯರು)

ನಾವು ಬುಗುರಿ ಆಡುತ್ತಿದ್ದ ಆ ದಿನ ಗಿಡ್ಡನೆಯ ಮತ್ತು ತೆಳ್ಳನೆಯ ವ್ಯಕ್ತಿ ಭಗವಂತಪ್ಪ ಸೈಕಲ್ ಮೇಲೆ ನಮ್ಮ ಓಣಿಗೆ ಬಂದ. ಸ್ವಲ್ಪ ದೂರದಲ್ಲಿದ್ದ ಯಮನವ್ವಳ ಮನೆಯ ಮುಂದೆ ಸೈಕಲ್ ನಿಲ್ಲಿಸಿದ. ಯಮನವ್ವನ ಹಿರಿಯ ಮಗಳು ಎದ್ದು ಹೋದಳು. ಇಬ್ಬರೂ ಮನೆಯೊಳಗೆ ಹೋದ ಮೇಲೆ ಬಾಗಿಲು ಹಾಕಿಕೊಂಡರು. ಇಲ್ಲಿ ಮರದ ಕೆಳಗಿನ ಹೆಂಗಸರು ಸ್ವಲ್ಪ ಹೊತ್ತು ಏನೊಂದು ಮಾತನಾಡದೆ ಮೌನ ತಾಳಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಯಮನವ್ವನ ಮುಖ ಸಪ್ಪೆಯಾಯಿತು. ತದನಂತರ ಏನೂ ನಡೆದಿಲ್ಲ ಎನ್ನುವಂತೆ ಮತ್ತೆ ಎಲ್ಲರೂ ಅದು ಇದು ಮಾತನಾಡತೊಡಗಿದರು. ಸ್ಪಲ್ಪ ಸಮಯದ ನಂತರ ಭಗವಂತಪ್ಪ ಸೈಕಲ್ ಹತ್ತಿ ಹೋದ. ಆದರೆ ಯಮನವ್ವನ ಹಿರಿಯ ಮಗಳು ಮನೆಯಿಂದ ವಾಪಸ್ ಬರಲಿಲ್ಲ. ಎಲ್ಲ ಹೆಂಗಸರು ಎದ್ದ ಮೇಲೆ ಯಮನವ್ವ ತನ್ನ ಕಿರಿಯ ಮಗಳ ಜೊತೆ ಮನೆಗೆ ಹೋದಳು.

‘ಜಗತ್ ಪ್ರಳಯ’ದ ಮುನ್ನಾ ದಿನ ಬಂದಿತು. ಭಗವಂತಪ್ಪ ಇನ್ನೂ ಹೆಚ್ಚು ಉದ್ವಿಗ್ನಕ್ಕೆ ಒಳಗಾಗಿದ್ದ. ‘ಇಂದು ನನ್ನ ಹೋಟೆಲಲ್ಲಿ ಯಾರು ಬೇಕಾದರೂ ಇಷ್ಟಪಟ್ಟಿದ್ದು ತಿನ್ನಬಹುದು, ಕುಡಿಯಬಹುದು’ ಎಂದು ಸಾರಿದ. ಜನ ಕಿಕ್ಕಿರಿದು ತುಂಬಿದರು. ಹೊಟೇಲಿನಲ್ಲಿ ಇದ್ದ ಎಲ್ಲ ತಿಂಡಿ ತಿನಿಸುಗಳು ಖಾಲಿಯಾದವು. ಹೇಗೂ ನಾಳೆ ಪ್ರಳಯವಾಗುವುದು. ಇವನ್ನೆಲ್ಲ ಇಟ್ಟುಕೊಂಡು ಏನು ಮಾಡೋದು ಎಂದು ಭಾವಿಸಿದ್ದ ಭಗವಂತಪ್ಪನಿಗೆ ಇದೆಲ್ಲ ಹಾನಿ ಅನಿಸಲಿಲ್ಲ. ಆದರೆ ಮರುದಿನ ಯಾವುದೇ ಪ್ರಳಯವಾಗಲಿಲ್ಲ. ಜಗತ್ತು ಇದ್ದ ಹಾಗೇ ಇತ್ತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)