ಆರು ತಿಂಗಳಿಂದ ಹ್ಯಾಂಡ್‍ಸೆಟ್ ಬದಲಿಸಬೇಕೆಂದುಕೊಂಡಿದ್ದೆ. ನನ್ನ ನಾಕಿಯಾ 6460/A ಎರಡೂವರೆ ವರುಷದ್ದು, ಇನ್ನೂ ಅದರ ಕಂತು ಸಹ ತೀರಿಲ್ಲ- ತೀರಾ ಮುದಿಯಾಗಿದೆ. ಯಾರೇ ಕರೆಯಲಿ ಅದು ರಿಂಗಣಿಸಿಕೊಂಡು ಒರಲುವುದಿಲ್ಲ. ಬರೇ ಅದುರಿಕೊಂಡು ಕೆಟ್ಟದಾಗಿ ಒದರುತ್ತದೆ. ಅದರ ಸ್ಕ್ರೀನು ಒಮ್ಮೊಮ್ಮೆ ಏನು ಮಾಡಿದರೂ ತೆರೆಯದೆ ಸತಾಯಿಸುತ್ತದೆ. ಕೆಲವೊಮ್ಮೆ ಬೈದು, ಶಾಪ ಹಾಕುತ್ತ ಅದರ ಅಂಡು ಮಟ್ಟಿದರೆ, ಗಡಬಡ ದಡಬಡಿಸಿದಂತೆ ಕಣ್ತೆರೆಯುತ್ತದೆ. ಹೀಗೆ ಕಣ್ಣು ಬಿಟ್ಟರೂ ಬೇಕೋ ಬೇಡವೋ ಅಂತೊಂದು ಉದಾಸ. ಹಾಗೂ ಹೀಗೂ ಪುಸಲಾಯಿಸಿದರೆ ಒಂದೇ ಸಮ ಕಣ್ಣು ಮಿಟುಕುತ್ತದೆ. ಒಮ್ಮೊಮ್ಮೆ ತಂತಾನೇ ಝಗಮಗಿಸಿ ಒಳಗೇ ಕಾದಿಟ್ಟುಕೊಂಡ ಜೀವದ ಗುಟುಕನ್ನು ಒಮ್ಮೆಲೇ ಮೆರೆಯುತ್ತದೆ.

ಒಂದೂವರೆ ತಿಂಗಳಿಂದೀಚೆಗೆ ಇಂತಹ ನಾಕಿಯಾವನ್ನು ಬರೇ ಫೋನನ್ನಾಗಿಯೇ ಉಪಯೋಗಿಸುತ್ತಿದ್ದೇನೆ. ಎಫ್ ಎಂ ಕೇಳದೆ. ಫೋಟೋ ತೆಗೆಯದೆ, ಧ್ವನಿ ಮುದ್ರಿಸದೆ, ಟಿಪ್ಪಣಿ ಬರೆಯದೆ, ಅಲಾರ್ಮ್ ಸೆಟ್ ಮಾಡದೆ… ಇವೆಲ್ಲ ಅಷ್ಟಿಷ್ಟು ಇದ್ದರೂ ಯಾವತ್ತೂ ಅದನ್ನು ‘ಫೋನಾಗಿ’ಯಷ್ಟೇ ಹೆಚ್ಚು ಉಪಯೋಗಿಸಿರುವುದು- ಆ ಮಾತು ಬೇರೆ! ಹೀಗಂತ ಮೊನ್ನೆಯಷ್ಟೇ ಗುಂಪಿನಲ್ಲಿ ಹೇಳಿದಾಗ, ‘ಎಲ್ರೂ ಅದುನ್ನ ಫೋನಾಗೇ ಉಪಯೋಗಿಸೋದಪ್ಪಾ! Tell me- if it can also be used like a dildo!!’ -ಅಂತ ವೆಂಕಟ್ ತನ್ನ ಎಂದಿನದೇ ಗಟ್ಟಿ ದನಿಯಲ್ಲಿ ಹೇಳಿ ರೇಗಿಸಿದ್ದ. ಜತೆಗಿದ್ದ ಇನ್ನು ಮೂವರಲ್ಲದೆ, ಮಗ್ಗುಲು ಮೇಜಿನವರೂ ಆ ಮಾತಿಗೆ ನಕ್ಕಿದ್ದರು. ಅವನದೇನಿದ್ದರೂ ಮೈಕಿಗೆ ಮುತ್ತು ಕೊಡುವ ಹಾಗೆ ಮಾತು. ನಾವು ಸೇರಿದ್ದ ‘ಆರೆಂಜ್ ಪೀಲ್’ನ ಲಾಂಜಿನಲ್ಲಿ ಆಗಷ್ಟೇ ಸಂಜೆಯ ಕಿತ್ತಳೆ ಮತ್ತು ಬಿಯರಿನ ಮಬ್ಬು ಜೋಡಿಗೊಂಡು ಕವಿಯುತ್ತಿದ್ದವು.

ನಾವು ಫೋನಿನ ವಿಷಯ ದಾಟಿ ಮುಂದುವರೆದರೂ ಅದಿತಿ ಅದರ ಗೋಜಿನಲ್ಲೇ ಇದ್ದವಳು- ‘ಎಲ್ಲಾ ಸರಿ ವೆಂಕೀ…ಈ ಡಿಲ್ಡೋ ಅಂದರೇನು?’ ಅಂತ ಪೆಚ್ಚುಪೆಚ್ಚಾಗಿ ಗಂಡನನ್ನು ಕೇಳಿದಳು. ವೆಂಕಟ್ ಅದಕ್ಕಿನ್ನೇನೋ ಹೇಳಿ ನಗು ಮುಂದುವರೆಸಿದ. ಅದಿತಿ ಮುನಿಸಿಕೊಂಡು, ‘ಹೌದು. ನಾವು ಎಷ್ಟಾದರೂ- ಸ್ಮಾಲ್ ಪೀಪಲ್ಸ್ ಫ್ರಮ್ ಸ್ಮಾಲ್ ಟೌನ್. ಇದೆಲ್ಲ ಅರ್ಥವಾಗಲ್ಲ…’ ಅಂತ ಮುದುಡಿಕೊಂಡಾಗ ವೆಂಕಟ್- ‘ಜಸ್ಟ್ ಗೂಗಲ್ ಇಟ್ ಅಂಡ್ ಸೀ’ ಅಂತ ತನ್ನ ಐ-ಫೋನನ್ನು ಅವಳ ಕೈಗಿತ್ತ. ಹಾಗೆ ಗೂಗಲಿಸುತ್ತಲೇ ಅಲ್ಲಿ ತೆರೆದುಕೊಂಡ ಉತ್ತರಗಳೋ ದೇವರಿಗೇ ಪ್ರೀತಿ! ಅವಳು ಕೋಪಕ್ಕೋ, ನಾಚಿಕೆಗೋ- ಒಟ್ಟಾರೆ ಕೆಂಪಾಗಿದ್ದು ಆ ಆರೆಂಜುಪೀಲಿನ ಕಿತ್ತಳೆ ಬೆಳಕಿನಲ್ಲಂತೂ ತೋರಿಕೊಳ್ಳಲಿಲ್ಲ. ನಾವು ಮತ್ತೊಮ್ಮೆ ನಕ್ಕೆವು. ಆಗಲೇ ನನ್ನ ಈ ಫೋನು ರಿಂಗಾಗಿದ್ದು. ಅಲ್ಲಲ್ಲ… ರಿಂಗಾಯಿತು ಅಂದರೆ ಅದರೊಳಗಿನ ಪರಮಾತ್ಮದ ಮಹಾತ್ಮೆಗೇ ಅಪಚಾರ! ಏಕೆಂದರೆ ಅದರ ಕೊರಳು ಇಂಚರವನ್ನು ಕಳೆದುಕೊಂಡು ತಿಂಗಳುಗಳೇ ಕಳೆದಿವೆ. ಏನಿದ್ದರೂ ಜರ್ರ್… ಜರ್ರ್… ಅಂತ ಬಜರೊತ್ತಿದ ಹಾಗೆ ಅದುರಿ, ಅದುರಿ- ಇದ್ದಲ್ಲೇ, ಇಟ್ಟಲ್ಲೇ ಹರಿದಾಡುತ್ತದೆ. ಈಗ ಆರೆಂಜ್‍ಪೀಲಿನ ಮೇಜಿನ ಗಾಜು ಹಲಗೆಯ ಮೇಲೆ ಅದು ತಾನಷ್ಟೇ ಅಲ್ಲದೆ ಮೇಜಿನ ಇತರೆಗಳನ್ನೂ ಕುಲುಕಿ, ಕಂಪಿಸಿ- ಏನೇನೋ ನಾದಗಳನ್ನು ಏಕ ಕಲೆಸಿ ಹೊಮ್ಮುತ್ತಿರುವಾಗಲೇ ವೆಂಕಟ್- ‘ಸರಿ! ಇದುನ್ನ್ ನೋಡುದ್ರೆ ಡಿಲ್ಡೋ ಥರಾನೂ ಯೂಸ್ ಮಾಡಬೋದು ಅನಿಸುತ್ತೆ!!’ ಅಂತ ಕಿಚಾಯಿಸಿದ. ನನ್ನ ಈ ಮುದ್ದಿನ ನಾಕಿಯಾವನ್ನು ಲೈಂಗಿಕಸುಖಕ್ಕೆ, ಆಂಗಿಕ ಆಹ್ಲಾದಕ್ಕೆ ಆಗಿಬರುವ ಆಟಿಕೆಯೊಂದಕ್ಕೆ ಹೋಲಿಸಿದನೆಂದು ಇನ್ನಿಲ್ಲದ ಕೋಪ ಬಂತು. ಅವನ ಮೇಲಲ್ಲ. ಈ ನಾಕಿಯಾದ ಮೇಲೆ. ಆ ಕ್ಷಣದಲ್ಲಿ ಅದರ ಮತ್ತು ನನ್ನ ಅವಸ್ಥೆಯ ಮೇಲೆ!!

ಕೂಡಲೇ ಸಮಜಾಯಿಷಿಯ ಹಾಗೆ ಹೇಳಿದೆ. ‘ಛೆ ಛೇ!! ನಾನು ಐಫೋನ್ ರಿಲೀಸ್ ಆಗಲಿ ಅಂತ ಕಾಯುತಿದ್ದೆ. ನಾಳೆ, ನಾಡಿದ್ದರಲ್ಲೇ ಕೊಂಡುಕೋಬೇಕು…’ ವೆಂಕಟ್ ಅವತ್ತು ನನ್ನ ಮೇಲೆ ಹರಿಹಾಯುವ ಮೂಡಿನಲ್ಲೇ ಇದ್ದ. ನನ್ನ ಮೊಬೈಲು ಹಿಡಿದುಕೊಂಡು ಇನ್ನೂ ಅಗ್ಗದ ಜೋಕು ಮಾಡಿ ನಕ್ಕ. ನಗಿಸಿದ. ಅದು ಹುಟ್ಟಿಸುವ ‘ವೈಬ್’‍ಗಳು ಎಷ್ಟು ಉದ್ದೀಪಕಾರೀ ಅಂತೆಲ್ಲ ಹೇಳಿ ಕಣ್ಣು ಹೊಡೆದು ರೇಗಿಸಿದ. ಕುಲಗೆಟ್ಟು ತಿಂಗಳುಗಳಾದರೂ ಏಕಪತ್ನಿವ್ರತಸ್ಥನ ಹಾಗೆ ಅದನ್ನು ಕಾಯ್ದಿರಿಸಿಕೊಂಡಿದ್ದೀನಂತ ಹೀಯಾಳಿಸಿದ. ಇವತ್ತಿನ ಗಂಡಸರು ಹುಡುಗಿಯರನ್ನೇ ಎಷ್ಟು ಸಲೀಸಾಗಿ ಬದಲಿಸುತ್ತಾರೆ, ಇವನಿಗೆ ಒಂದು ಇನ್‍ಸ್ಟ್ರುಮೆಂಟ್ ಬದಲಿಸೋದು ಕಷ್ಟ -ಅಂತ ನಿವಾಳಿಸಿದ. ಆ ಬಳಿಕದಿಂದ ನನಗೆ ಇದನ್ನು ವಹಿಸಿಕೊಂಡು ಏನೂ ಹೇಳಲು ಕಷ್ಟವಾಯಿತು. ಆಗಲೇ ಮೊಬೈಲನ್ನು ಕುರಿತು ನನ್ನ ಧೋರಣೆಗಳನ್ನು ಪುನರ್ವಿಮರ್ಶಿಸಿದೆ. ಹೊಸತೊಂದನ್ನು, ಅದೂ ಐಫೋನನ್ನೇ ಕೊಳ್ಳುವ ತೀರ್ಮಾನಕ್ಕೆ ಬಂದೆ.

ಯಾರೇನೇ ಅನ್ನಲಿ, ನಾನಂತೂ ಯಾವತ್ತಿಗೂ ‘ಗ್ಯಾಡ್ಜೆಟ್ ಫ್ರೀಕ್’ ಅಲ್ಲ. ಕಾರಿನ ಬೇಸಿಕ್ ಮಾಡೆಲಿಗೆ ನೂರಿಪ್ಪತ್ತೆಂಟು ಎಕ್ಸ್ ಟ್ರಾಗಳಿರುವ ಹಾಗೆ ಫಿಟ್ಟಿಂಗುಗಳನ್ನು ಮೈಗೆಲ್ಲ ತಗುಲಿಸಿಕೊಂಡು ಥೇಟು ರೋಬೋಗಳ ಹಾಗೆ ತೊನೆದಾಡುವ ಇವತ್ತಿನ ಪಡ್ಡೆಗಳು- ಎಲ್ಲಿನದೋ ಹಾರುವತಟ್ಟೆಯಿಂದ ಈಗಷ್ಟೇ ಉದುರಿದವರ ಹಾಗೆ ಈ ಊರಿನಲ್ಲಿ ಕಾಣುವುದುಂಟು! ಎಂಥದೋ ಅಭೌಮಿಕ ಗರ್ಭದಿಂದ ‘ಜಸ್ಟ್-ಲ್ಯಾಂಡೆಡ್’ ತಳಿಗಳು!! ಕಿಸೆಯಲ್ಲೊಂದು ತುರುಕಿಕೊಂಡು ಅಲ್ಲಿಂದ ಕಿವಿಯವೆರೆಗೆ ಎಂತೆಂತೋ ತಾರುತಂತಿ ಹಾಯ್ದುಕೊಂಡ ತಂತುಜಂತುಗಳು!! ಈ ಪಡ್ಡೆಗಳ ಆಕಾರವಷ್ಟೇ ನೆಲದಲ್ಲಿರುವುದು ಮತ್ತು ಸುತ್ತಲಿನ ಇಹದಲ್ಲಿರುವುದು. ಒಳಗಿನ ವಸ್ತು-ವಾಸ್ತವವೆಲ್ಲ ಇನ್ನೆಲ್ಲೋ… ಅಕೋ- ಆ ಆಕಾಶದ ಶೂನ್ಯದಲ್ಲಿ. ಇನಿತೂ ಇಹವಲ್ಲದ- ಆದರೆ ಅದನ್ನೂ ಒಳಗೊಂಡು ಸರ್ವವ್ಯಾಪಿಯಗಿರುವ ಸರ್ವಂತರ್ಯಾಮೀ ಈಥರಿನಲ್ಲಿ! ಮಾತು ಮಾತಿಗೂ ಇ-ಸೀರೀಸೆಂದೋ, ಎನ್-ಸರಣಿಯೆಂದೋ ಹತ್ತು ಹಲವು ಅಂಕಿಅಂಶಗಳ ‘ಸೆಲ್ಯುಲರ್’ ಶೃಂಖಲೆಯನ್ನು ಕುರಿತು ಆಡಿ, ಕೊಂಡಾಡಿಕೊಂಡು ಬೀಗುತ್ತವೆ- ಮುಂಡೇವು!!

ಈ ನೋಕಿಯಾಗಳು, ಮೊಟೊರೋಲಾಗಳು, ಸ್ಯಾಮ್‍ಸಂಗ್ ಸೋನೀ ಎರಿಕ್‍ಸನ್‍ಗಳು ಮಾಡೆಲಿನಿಂದ ಮಾಡೆಲಿಗೆ ಮುಂದುವರೆದಾಗಲೆಲ್ಲ ಎಷ್ಟೆಷ್ಟೋ ವರ್ಷಗಳ ಅವಿರತ ದುಡಿಮೆಯನ್ನು ಫಲಿಸಿಕೊಂಡಿರುತ್ತವಂತೆ. ಒಂದು ಆವಿಷ್ಕಾರದ ಬಳಿಕ ಅದರ ಪರಿಷ್ಕಾರವೆಂದರೆ ಅದರಲ್ಲಿ ಇನ್ನೂ ಎಷ್ಟೋ ಆವಿಷ್ಕಾರಗಳೂ ಅಷ್ಟೇ ಪರಿಷ್ಕಾರಗಳೂ ಅಡಕಗೊಂಡಿರುತ್ತವಂತೆ. ಬರೇ ‘ಸಂಚಾರೀ ಕೈಫೋನ್’ ಎಂದು ಹುಟ್ಟು ಕಂಡುಕೊಂಡ ಸೆಲ್‍ಫೋನು ಇವತ್ತು ನಮ್ಮ ಅಂಗೈಯೊಳಗಿನ ಅಸ್ತಿತ್ವದಲ್ಲಿ ಏನೇನನ್ನೆಲ್ಲ ಸಾಧಿಸಿದೆ, ಏನೇನೆಲ್ಲ ಆಗಿಬಿಟ್ಟಿದೆ! ಅಬ್ಬಾ!! ಯೋಚಿಸಿದರೆ ಜುಂ‍ಮ್ಮೆನ್ನುತ್ತದೆ. ಅದರಲ್ಲಿ ಫೋನಿದೆ. ಪೇಜರ್ ಇದೆ. ರೇಡಿಯೋ ಇದೆ. ಎಂಪೀಥ್ರೀ ಇದೆ. ನೋಟ್‍ಪ್ಯಾಡ್ ಇದೆ. ಎಮ್ಮೆಸ್ ಆಫೀಸ್ ಇದೆ. ಕೆಮೆರಾ, ಗಡಿಯಾರ, ಡಯರಿ, ಟೀವೀ, ಆಟದ ಖಿಲೋನೆಗಳು… ಒಂದೇ ಎರಡೆ? ಜಗತ್ತು ನಿಜಕ್ಕೂ ಒಂದು ಮುಷ್ಠಿಯೊಳಕ್ಕೆ ಬಂದುಬಿಟ್ಟಿದೆ. ಏಕೆಂದರೆ- ನಿಮ್ಮ ಸೆಲ್‍ಫೋನಿನಲ್ಲಿ ನಿಮ್ಮ ಲೋಲಸಹಿತ ಸಕಲಲೀಲೆಯೂ ಇದೆ!! ಹುಡುಗಿಯರ ವ್ಯಾನಿಟಿಯಲ್ಲಿ ಇಣಿಕಬಾರದು ಎನ್ನುವ ಹೊಸಕಾಲದ ನಿಷೇಧವೊಂದಿದೆಯಲ್ಲ- ಅದನ್ನು ಈಗ ಯಾರೊಬ್ಬರ ಮೊಬೈಲಿನಲ್ಲಿಣಿಕುವುದರ ಮೇಲೂ ವಿಸ್ತರಿಸಬಹುದಾಗಿದೆ. ಸೆಲ್‍ಫೋನ್ ಎಂಬುದು ಈ ಕಾಲದ ವ್ಯಕ್ತಿಗೆ- ತನ್ನ ಅತೀವ ವೈಯಕ್ತಿಕಗಳ ಸ್ವಕೀಯ ಅನುಸಂಧಾನವೇ ಸರಿ!

ಇಷ್ಟಿದ್ದೂ ನನಗೆ ಮೊಬೈಲನ್ನು ದೂರಸಂಪರ್ಕದ ಕಾರಣದ ಹೊರತಾಗಿ ಇನ್ನೇನನ್ನೋ ಆಗಿ ಬಳಸುವ ಖಾಯೀಷು ಇಲ್ಲ. ಇದ್ದರೂ ಈ ಊರಿನಲ್ಲಿ ಹರಿಹಾಯುವ ಜಂಜಟಗಳ ನಡುವೆ ಇವಕ್ಕೆಲ್ಲ ಪುರುಸೊತ್ತೆಲ್ಲಿ? ಇಲ್ಲಾ- ವ್ಯವಧಾನವೆಲ್ಲಿ ಅಂದರೆ ಈ ಹೇಳಿಕೆ ಇನ್ನಷ್ಟು ಸಾಂಧ್ರಗೊಂಡೀತೇನೋ. ಹಾಗೆನ್ನುವುದೇ ಅದಕ್ಕೆ ಘನತೆ. ಇರಲಿ. ನಾನಂತೂ ಹೊಸ ಫೋನು ಕೊಳ್ಳುವ ಇರಾದೆಯಲ್ಲಿದ್ದೆ. ಅದೂ ಐಫೋನನ್ನೇ! ಮಾಲ್‍ನಲ್ಲಿ, ಮಲ್ಟಿಫ್ಲೆಕ್ಸಿನ ಲಾಬಿಗಳಲ್ಲಿ, ಏರ್‍‍ಪೋರ್ಟ್ ಲಾಂಜಿನಲ್ಲಿ, ಐಬಾರ್‍‍ನಲ್ಲಿ -ಹೀಗೆ ಎಲ್ಲೆಂದರಲ್ಲಿ ಬಿಮ್ಮನೆ ಅದರ ಎಲ್ಸೀಡೀ ತೆರೆಯನ್ನು ಬೆರಳ ಮುಂದುದಿಯಲ್ಲಿ ಮೀಟಿ ನಮ್ಮ ಜಗತ್ತನ್ನೇ ಕುಸುಮಿಸಿ, ಪುಲಕಿಸಿಕೊಳ್ಳಬಹುದೆಂದರೆ? ಯಾರಿಗುಂಟು ಯಾರಿಗಿಲ್ಲ? ಅದಕ್ಕೆ ಅಮುಕುಗಳಿಲ್ಲ. ಬಲಯುತ ಒತ್ತುಗಳು ಬೇಡ. ಕೀಲಿ ಕೈಕೊಟ್ಟಿತೆಂದು ಲೊಚಗುಟ್ಟುವಂತಿಲ್ಲ. ಅದುಮಿ, ಕುಟ್ಟುವ ಪ್ರಯಾಸಗಳಿಲ್ಲ. ಕೆಟ್ಟಿತೆಂದು ಸುತ್ತಿಗೆ ಟಚ್ಚಿಸಬೇಕಿಲ್ಲ. ಅದನ್ನು ಮುಟ್ಟಿ ನೋಡಿದ್ದರೆ ಮಾತ್ರವೇ ಅದೆಷ್ಟು ಸುಲಲಿತ ಮತ್ತು ಸುಸೂತ್ರವೆಂದು ಗೊತ್ತಾದೀತು! ಅದೊಂದು ಅಪೂರ್ವ ಫೆದರ್‍‍ಟಚ್ ಆಹ್ಲಾದ. ನವಿರಾದ ಗರಿಸ್ಪರ್ಶ!! ಅದನ್ನು ಮುಟ್ಟಿದರೆ ಇಲ್ಲಾ ಮುಟ್ಟಿದಂತೆ ಸವರಿದರೆ ಸಾಕು, ಅದರ ತೆರೆಯಲ್ಲಿನ ಬಿಂಬ ತೂಗುತ್ತದೆ. ಮುಂದೂಗುತ್ತದೆ, ಹಿಂದೂಗುತ್ತದೆ. ತಲೆದೂಗಿಸುತ್ತದೆ. ಅದಿಬದಿಗೆ ಜೀಕಿ ಜೋಕಾಲಿಯಾಡುತ್ತದೆ. ಖಾಲಿ ತೆರೆಯನ್ನು ಮುಟ್ಟಿದ್ದೇ ಒಂದು ಬಿಂಬ ತೆರೆದುಕೊಂಡು, ಅದನ್ನು ಮುಟ್ಟುತ್ತಲೇ ಮತ್ತೊಂದು ತೆರೆದು, ಅದೂ ಮತ್ತೂ ಒಂದಕ್ಕೆ ಎಡೆಯಾಗಿ… ಅರೆ! ಮುಂದೆ ಮುಂದೆ ಸಾಗಿ ತೂಗಿ ಆಪ್ಯಾಯಮಾನವಾಗುತ್ತದೆ. ಕತೆಗಳೊಳಗಿನ ಕತೆಗಳ ಹಾಗೆ. ಸಂದೂಕದೊಳಗಿನ ಸಂದೂಕದ ಹಾಗೆ! ಹಿಂದೊಮ್ಮೆ ಸಂಜಯನೆಂಬ ಮಹಾಶಯ ತನ್ನ ಅಂಗೈನಲ್ಲೇ ಧೃತರಾಷ್ಟ್ರನಿಗೆ ಭಾರತವನ್ನು ಕಟ್ಟಿದ ನೆನಪಾಗುತ್ತದೆ. ಬರೇ ಭಾರತವಷ್ಟೇ ಎಲ್ಲಿ? ಇಡೀ ಜಗತ್ತು, ಅದರಾಚೆಯ ವಿಶ್ವ… ಗುರು, ಬುಧ, ಮಂಗಳ, ನೆಪ್ಚ್ಯೂನ್…  ಅಲ್ಲಿಂದಾಚೆಗೆ, ನೇರ ಇನ್ನೊಂದು ಸೌರಸಂಸಾರಕ್ಕೆ… ಅದನ್ನು ದಾಟಿಕೊಂಡು ಆಕಾಶಗಂಗೆಗೆ… ಅಲ್ಲಿಂದಾಚೆಗೆ ಇನ್ನೆಲ್ಲೋ… ಹೀಗೆ!! ಹೌದು ಬ್ರಹ್ಮವೆನ್ನುವ ಈ ಅಪರಿಮಿತ ತತ್ವ ಅಂಗೈಯಗಲದಲ್ಲೇ ಎಷ್ಟು ವಿಶಾಲವೆನಿಸುತ್ತದೆ!

ಸರಿ. ಇಷ್ಟು ಬಾಯೆಲ್ಲ ನೀರೂರಿತೆಂದು- ಈ ಬೆಳಿಗ್ಗೆ ಯೂನಿವರ್ಸೆಲ್, ಈ-ಝೋನ್, ನ್ಯಾಷನಲ್ ಮಾರ್ಕೆಟ್… ಹೀಗೆ ಎಲ್ಲೆಲ್ಲೂ ಗಸ್ತು ತಿರುಗಿದ್ದಾಯಿತು. ಮೂವತ್ತೈದು ಸಾವಿರ ಮೊಬಲಗು- ಸ್ವಾಮೀ, ಯಾರು ಚೆನ್ನಾಗಿ ಆಫರಿಸಬಹುದೆಂದು ಇಷ್ಟೆಲ್ಲ ಎಣಿಕೆ. ಸಂತೆಯಲ್ಲಿ ನಿಂಬೆಹಣ್ಣು ಕೊಳ್ಳಲಿಕ್ಕೇ ನಾಲ್ಕಾರು ಕಡೆ ವಿಚಾರಿಸಿಕೊಂಡೇ ಕೊಳ್ಳುತ್ತೇವೆ!! ವೆಂಕಟ್ ಜತೆಗಿದ್ದ. ಅವನು ನನ್ನಂತೆಯೇ ಆರ್ಕಿಟೆಕ್ಟಾದರೂ ಬಲು ಠೀಕುಠಾಕು ‘ಟೆಕೀ’ ಪುಟ್ಸಾಮಿ! ದಾರಿಯುದ್ದಕ್ಕೂ ಐಫೋನಿನ ಯಶೋಗಾಥೆಯನ್ನು ಹಾಡಿ, ಪಾಡಿ- ಕೊಂಡಾಡಿದ. ಐಫೋನ್ ‘ಆಪಲ್’ ಪೂರೈಸಿದ ಐದನೇ ತಲೆಮಾರಿನ ಸಂತತಿಯಂತೆ. ಬರೇ ಹಾಡು ಕೂಡಲಿಕ್ಕೆ ಮತ್ತು ಕೇಳಲಿಕ್ಕೆ ಅಂತ ಸುರುವಾದ ಐಪಾಡ್ ಎಂಬುದು ಈ ಇವತ್ತಿನವುಗಳೆಲ್ಲದರ ಪ್ರಪಿತಾಮಹನಂತೆ. ಎಂಭತ್ತರ ದಶಕದ ಈ ಐಪಾಡ್ ತನ್ನೊಟ್ಟಿಗೆ ಫೋಟೋಗಳ, ವಿಡಿಯೋಗಳ ಫೀಚರುಗಳನ್ನು ಬೆಸೆದುಕೊಂಡು ಮುಂದಕ್ಕೆ ಮೆಸೇಜಿಂಗ್, ವೈಫಯ್ ಅಂತ ಹೈಫೈಗೊಂಡು ಇವತ್ತು ‘ಫೋನುತನ’ವನ್ನೂ ಬಗುಲಿಗೆ ಕಟ್ಟಿಕೊಂಡು ‘ಐಫೋನ್’ ಅಂತ ಬಂದೊದಗಿದೆಯಂತೆ! ಎಷ್ಟು ರೋಚಕವಾಗಿ ಹೇಳಿದ ಗೊತ್ತೆ? ಏಕ್‍ದಮ್ ಫಂಡೂ ಅನ್ನಿಸಿತ್ತು ಅವನ ವಿವರಣೆ!!

ಈ ಎಲ್ಲೆಡೆಯ ಕೌಂಟರುಗಳಲ್ಲಿ ನಿಂತು ಫೋನಿನ ಮಾಕ್‍ಅಪ್‍ಗಳನ್ನು ಕೈಗೆ ತೆಗೆದುಕೊಂಡು ನಿರುಕಿದ್ದಾಯಿತು. ದಾಮು ಕೇಳಿದ್ದಾಯಿತು. ಉಳಿದೆಲ್ಲ ಆಜುಬಾಜುಗಳನ್ನು ವಿಚಾರಿಸಿ ಮನವರಿಸಿಕೊಂಡಿದ್ದಾಯಿತು. ಎಂತಹ ‘ನ್ಯೂಜೆನ್’ ಸೋಜಿಗವಾದರೂ ಈ ಐಫೋನಿಗೆ ಇತಿಮಿತಿಗಳಿಲ್ಲ ಅಂತೇನಿಲ್ಲವಲ್ಲ? ಷೋರೂಮಿನ ಗಾಜಿನ ಮುಂಗಟ್ಟುಗಳಲ್ಲಿಯೇ ಆಕ್ಷೇಪಗಳು ಬೇಡವಿದ್ದರೂ ಗೊಣಗಿಕೊಂಡವು. ಸವಾಲುಗಳಾದವು. ಜವಾಬುಗಳು ಬಂದವು. ವಿಚಾರಣೆಗಳು ತಗಾದೆಯಂತಿದ್ದವು. ಬ್ಯಾಟರಿಗೆ ಬ್ಯಾಕಪ್ ಕಡಿಮೆಯಂತೆ ಹೌದೆ? ಮಾತಿಗೆ ತೊಡಗಿರುವಾಗಲೇ ಒಮ್ಮೊಮ್ಮೆ ತಂತಾನೇ ಕಡಿದುಕೊಳ್ಳುತ್ತದಂತೆ. ಆಗಲೂ ನೀವು ಮಾತಿನ ಓಘದಲ್ಲಿ ಹೆಲೋ ಹೆಲೋ ಅಂತ ಮುಂದುವರೆದೇ ಇರುತ್ತೀರಂತೆ. ವೃಥಾ ಏರ್‍‍ಟೈಮ್ ದುಂದಾಗುತ್ತದಂತೆ… ಆಪಲ್ ತಂತ್ರಜ್ಞಾನ ಇನ್ನೂ ಇಲ್ಲಿನ ಸಿಗ್ನಲು ಸ್ಥಿತಿಗತಿಗಳಿಗೆ ಹೊಂದಿಕೊಂಡಿರದಿರುವುದು ಇದಕ್ಕೆ ಕಾರಣವಂತೆ. ಬಂದ ಮೆಸೇಜುಗಳನ್ನು ಹಾಗೇ ಇನ್ನೊಬ್ಬರಿಗೆ ಹಾಗೇ ಸಾಗುಹಾಕುವ ಫಾರ್ವರ್ಡಿಂಗ್ ಸಾಧ್ಯವಿಲ್ಲವಂತೆ. ಬ್ಲೂಟೂಥು ಬರೇ ಹಾಡು ಕೇಳಲಿಕ್ಕಷ್ಟೇ ಸೀಮಿತವಂತೆ. ಎಲ್ಲಕ್ಕಿಂತ ಟಚ್‍ಸ್ಕ್ರೀನ್ ಬಗ್ಗೆ ಬಲು ಜಾಗ್ರತೆಯಿರಬೇಕಂತೆ. ಅಪ್ಪಿತಪ್ಪಿ ಬಿದ್ದು ಅದಕ್ಕೇನಾದರೂ ಒಂದು ಗೀಚಾದರೆ ಮತ್ತೆ ಹತ್ತಾರು ಸಾವಿರ ಪಡ್ಚ ಖಾತ್ರಿಯಂತೆ! ಇತ್ಯಾದಿ… ಇತ್ಯಾದಿ… ಈ ಅರೆಕೊರೆಗಳು ಅರಗುವಂತಿದ್ದರೂ ನನಗೆ ಬೆಲೆಯ ಲೆಕ್ಕಾಚಾರವೇಕೋ ಒಪ್ಪವಾಗಲಿಲ್ಲ. ಅಮೆರಿಕೆಯಲ್ಲಿ ಇದರ ಮುಖಬೆಲೆ ಬರೇ ಹತ್ತು ಸಾವಿರವಂತೆ. ಎಷ್ಟಾದರೂ ಆಮದು ತಂದ ತಂತ್ರಜ್ಞಾನ, ಹಾಗಾಗಿ ಕಾಸ್ಟ್ ಲೀ ಅಂದುಕೊಳ್ಳಬಹುದಾದರೂ ಅದಕ್ಕೆ ಮೂರು ಪಟ್ಟು ಖರೀದಿಸುವ ತುರ್ತೇನಿಲ್ಲ ಅಂದುಕೊಂಡೆ. ಈ ವೆಂಕಟ್‍ನ ತರ್ಕವೇ ಬೇರೆಯಿತ್ತು. ‘ಅಷ್ಟು ಚೀಪಾಗಿಬಿಟ್ಟರೆ ಕಾರ್ಪೆಂಟರ್ಸ್, ಪೇಂಟರ್ಸ್ ಎಲ್ಲ ಐಫೋನ್ ಹಿಡ್ಕೊಂಡು ಮೆರೀತಾರೆ, ಗುರೂ… ಆರ್ಕಿಟೆಕ್ಟ್ ಅಂತ ನಮಗೊಂದಿಷ್ಟು ಮರ್ಯಾದೆ ಬೇಡ?’ -ಅವನು ಹೇಳಿದ್ದು ನಿಜವೇ ಇತ್ತು. ನಾವು ವೃತ್ತಿಯ ಸಲುವಿನಿಂದಾಗಿ ಎಷ್ಟೆಲ್ಲ ಸೋಗಿನ ಬದುಕು ನೂಕುತ್ತಿದ್ದೇವೆ. ವರ್ಷಕ್ಕೊಮ್ಮೆ ಕಾರು ಬದಲಿಸುತ್ತೇವೆ. ಬದಲಿಸುವಾಗ ಲೇಟೆಸ್ಟ್ ಟೆಕ್ನಾಲಜಿಯೆಂದು ದುಬಾರಿಯದನ್ನೇ ಕೊಂಡು ತೋರಿಕೆಗಾಗಿ ಬಡ್ತಿ ಮೆರೆಯುತ್ತೇವೆ. ನಮ್ಮ ತೊಡಿಕೆಗಳಲ್ಲೂ ಬ್ರಾಂಡೆಡ್ ಮೊಹರುಗಳದ್ದೇ ಖರೀದಿಯಾಗುತ್ತದೆ. ಮೇಲಂಗಿ, ನಿಲುವಂಗಿಗಳ ಮೇಲೆ ಡಿಸೈನರಿನ ಹೆಸರು ತೂಗಬೇಕಾಗುತ್ತದೆ. ವಾಚು, ಕನ್ನಡಕದ ಫ್ರೇಮು, ಪೆನ್ನು, ಪೆನ್ಸಿಲ್ಲುಗಳ ಮೇಲೂ ಅದೇ ಡಿಸೈನರ್ ಛಾಪಿರಬೇಕಾಗುತ್ತದೆ. ನಮ್ಮ ನಮ್ಮ ಹೆಸರುಗಳಷ್ಟೇ ಸಾಲದೆಂದು ಹೀಗೆ ಅವರಿವರ ಹೆಸರುಗಳನ್ನು ತೊಟ್ಟು ಮೊಳಗುತ್ತೇವೆ…

ಹೀಗೊಂದಿಷ್ಟು ಗೊಂದಲದಿಂದ ಕೊನೆಗೆ ನನ್ನ ನಿರ್ಣಯವನ್ನು ಅರುಹಿಕೊಂಡೆ. ‘ನೋ ವೆಂಕಟ್, ಯಾಕೋ ಐಫೋನ್ ಬೇಡ ಅನಿಸುತ್ತೆ. ನಾನು ಮತ್ತೆ ನಾಕಿಯಾಗೇ ಹೋಗುತೀನಿ…’ ವೆಂಕಟ್ ಇರಿಸುಮುರಿಸಿನಿಂದ ಮುಖ ಹಿಂಡಿದ. ನನಗೆ ಸಮಜಾಯಿಷಿಸಿಕೊಳ್ಳಲಾಗಲಿಲ್ಲ. ‘ನಾನು ಯಾವತ್ತೂ ನಾಕಿಯಾನೇ ಉಪಯೋಗಿಸಿರೋದು. ಅಯಾಮ್ ಸೋ ಯೂಸ್ಡ್ ಟು ಇಟ್ ಅಂಡ್ ಪ್ರೆಫರ್ ಇಟ್ ಟೂ…’ -ಅಂತಂದೆ. ಅವನಿಗೆ ಹಿಡಿಸಲಿಲ್ಲ. ನನಗೆ ಐಫೋನ್ ತಗುಲುಹಾಕಲು ಬದ್ಧನಿರುವವನಂತೆ, ನನ್ನಿಂದ ಖರೀದಿಸಿಯೇ ತೀರುವ ಪಟ್ಟಿನಲ್ಲಿ ಹೇಳಿದ. ‘ಗುರೂ… ಇದೇನು ಸಿಗರೇಟಲ್ಲ- ನೀನು ಅದೇ ಬ್ರಾಂಡ್ ಅಂತ ಜಿದ್ದು ಮಾಡಲಿಕ್ಕೆ!!’ ಅತಿಯೆನಿಸಿತು. ನಾನು ಒಪ್ಪಲಿಲ್ಲ. ಕಟ್ಟುನಿಟ್ಟಾಗಿ ಅಲ್ಲಗಳೆದೆ. ನಾಕಿಯಾ ಆದರೆ ಇನ್ನೊಂದು ಡಿಲ್ಡೋ ಆಗಬಹುದು ಅಂತಾನಾ?! -ಅಂತ ಸಲ್ಲದ್ದು ಒಗ್ಗರಿಸಿ, ಕಣ್ಣು ಮಿಟುಕಿಸಿ ನಕ್ಕ. ‘ಇರಲಿ, ಯಾವುದಕ್ಕೂ ಈ ಕಮ್ಯುನಿಕೇಟರ್ ತಗೋ. ಯೂ ವಿಲ್ ಬಿ ಇನ್ ಸಿಂಕ್ ವಿತ್ ಟುಡೇಸ್ ಟ್ರಂಡ್ ಅಟ್‍ಲೀಸ್ಟ್…. ಇನ್ನೊಂದು ಸ್ವಲ್ಪ ದಿನ ಹೋದ ಮೇಲೆ ಬೇಕಾದರೆ ಎನ್ ನೈನ್ಟೀಸಿಕ್ಸ್ ತಗೋಬಹುದು…’ ಎಂದು ನನ್ನನ್ನು ಮೂವತ್ತೈದು ಸಾವಿರ ಮೊತ್ತದ ‘ನಾಕಿಯಾ ಈ ನೈನ್ಟಿ’ಗೆ ಹಾಗೂ ಹೀಗೂ ಒಪ್ಪಿಸಿಯೇ ತೀರಿದ.