ಚೀಂಕ್ರನು ಯೋಚಿಸಿ ಯೋಚಿಸಿ ಕೊನೆಗೊಂದು ಸಂಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳುಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರಾಗುತ್ತ ಹೋದರು. ಹಿರಿಯವನಾದ ಸುಂದರನು ಬಿ.ಎ. ಬಿ.ಎಲ್. ಆಗಿ ಮದ್ರಾಸಿನಲ್ಲೆ ಪ್ರಖ್ಯಾತ ವಕೀಲನೆನಿಸಿಕೊಂಡ. ಚೀಂಕ್ರನ ಊರಿನ ಹಲವು ಮೇಲು ಜಾತಿಯವರೂ ಅವನಲ್ಲಿಗೆ ಹೋಗಿ ‘ಅಪ್ಪೀಲು ನಂಬ್ರ’ ಗಳನ್ನು ಕೊಟ್ಟು ಬರುತ್ತಿದ್ದರು. ಚೀಂಕ್ರನ ಕಿರಿಯ ಮಗ ರಾಮವು ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್. ಪಾಸಾಗಿ ಬಂದನು. ಮದ್ರಾಸಿನಲ್ಲಿ ತನ್ನ ಸಹಪಾಠಿಯಾಗಿದ್ದ ಕ್ರಿಶ್ಚನ್ ತರುಣಿಯೊಬ್ಬಳಲ್ಲಿ ಅವನಿಗೆ ಪ್ರೀತಿ ಬಿತ್ತು.
ಡಾ.ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೊರಡ್ಕಲ್ ಶ್ರೀನಿವಾಸರಾವ್ ಅವರು ಬರೆದ ಕತೆ “ದೇವಸ್ಥಾನ ಪ್ರವೇಶ” ನಿಮ್ಮ ಓದಿಗೆ 

 

ಪಡು ಬೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು, “ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!” ಎಂದು. ಉಳುತ್ತಿದ್ದ ಬೊಗ್ಗು ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ್ದ ಜಾರು ಮುಳುಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ ಅಂಚಿನಲ್ಲಿ ಹುಲ್ಲು ಕೆರೆಯುತ್ತಿದ್ದ ರಂಗು ಕೈಯಲ್ಲಿದ್ದ ಮುಷ್ಟಿ ಹುಲ್ಲನ್ನು ಹಿಡಿದುಕೊಂಡೇ ಹಾರಿದಳು. ಹೀಗೆ ಬೈಲಿನ ನಾಲ್ಕು ಕಡೆಗಳಿಂದಲೂ ಜನರು ಓಡುತ್ತಿದ್ದರು. ಧಾನ್ಯದ ಗದ್ದೆಗೆ ಇಳಿದು, ಬಿತ್ತಿದ ಗದ್ದೆಯನ್ನು ತುಳಿದು, ಕಬ್ಬಿನ ಏರಿಯನ್ನು ಜರಿದು, ನೇರಾಗಿ ಪಿಜಿನ ಪೂಜಾರಿಯ ಮನೆತೋಟದ ಕಡೆಗೆ ಧಾವಿಸುತ್ತಿದ್ದರು ಬೈಲಿನ ಜನರೆಲ್ಲ . ಮುದಿ ಉಮ್ಮಕ್ಕ ಶೆಡ್ತಿಯೂ ಊರುಗೋಲು ಊರಿಕೊಂಡು ತನ್ನ ಅಂಗಳದ ತುದಿಗೆ ಬಂದು ಓಡುವವರನ್ನು ಕರೆದು “ಯಾರಪ್ಪಾ ಬಿದ್ದುದು? ಪಿಜನನೆ? ಹೋಗಿಯಪ್ಪಾ ಬೇಗ, ಗಡಿಮದ್ದು ಹಾಕಿ” ಎಂದು ಕೂಡಿದಷ್ಟು ಕೂಗಿ ಹೇಳಿದಳು. “ಅಯ್ಯೋ, ಪಿಜನಾ, ಅಮಲು ತಕ್ಕೊಂಡು ಮರಕ್ಕೇರ ಬೇಡಾ ಎಂದು ಹೇಳಲಿಲ್ಲವೇ ನಾನು ಎಷ್ಟೋ ಸಲ? ಹಿಂದೊಮ್ಮೆ ಬಿದ್ದೂ ಬುದ್ಧಿ ಬಾರದೆ ಹೋಯಿತೆ ನಿನಗೆ?” ಎಂದು ನಿಟ್ಟುಸಿರು ಬಿಡುತ್ತಾ ಏನು ಸುದ್ದಿ ಬರುವುದೆಂದು ಅಲ್ಲೇ ಅಂಗಳದ ತುದಿಯಲ್ಲಿ ಕಾದು ಕುಳಿತಳು; ಕುಳಿತು ಕಾದಳು.

ಪಿಜಿನ ಪೂಜಾರಿಯನ್ನು ಎತ್ತಿಕೊಂಡು ಹೋಗಿ ಚಾವಡಿಯಲ್ಲಿ ಮಲಗಿಸಿದರು. ಅವನ ಪಕ್ಕೆಲುಬು ಮುರಿದಿತ್ತು. ತಲೆಗೆ ಪೆಟ್ಟಾಗಿತ್ತು. ನೆರೆದ ನೂರಾರು ಮಂದಿ ಸಾವಿರಾರು ಮದ್ದು ಹೇಳಿದರು. ಸಿಕ್ಕಿದ ಏನೇನೋ ಮದ್ದು ಹಾಕಿ ಕಟ್ಟಿದರು. ‘ಏನೋ ದೈವದ ಪೆಟ್ಟಲ್ಲದೆ ಹೀಗೆ ಬೀಳುವುದೆಂದರೇನು? ಕೋಳಿ ಸುಳಿದುಬಿಡಿ’ ಎಂದರು ಹಲವರು. ಪಿಜಿನನು ಕ್ಷೀಣಸ್ವರದಿಂದ ತನ್ನ ಮಗನನ್ನು ಕರೆದನು; ‘ಚೀಂಕ್ರಾ, ನನ್ನನ್ನು ನೋಡು; ಆಣೆ ಇಡು ಹೆಂಡ ಕುಡಿಯುವುದಿಲ್ಲ ಎಂದು, ಸ್ಥಳದ ಆಣೆಯಿಡು!’ ಎಂದನು. ಚೀಂಕ್ರನು ಪ್ರತಿಜ್ಞೆ ಮಾಡಿದ; ತಂದೆಯು ತೀರಿಕೊಂಡ.

ಚೀಂಕ್ರನು ತಂದೆಯ ನುಡಿಯಂತೆ ನಡೆದನು. ಮುರ್ತೆಯನ್ನು ಬಿಡಲಿಲ್ಲ; ಆದರೆ ಹೆಂಡ ಕುಡಿಯಲಿಲ್ಲ . ಚಿಕ್ಕ ಗುತ್ತಿಗೆಯನ್ನು ವಹಿಸಿಕೊಂಡು ಒಂದು ದಾರಿಗೆ ಬರುವಂತಿದ್ದ. ಆದರೆ ಮಾಡುವುದೇನು? ಪಿಜಿನನು ಸತ್ತು ನಾಲ್ಕು ವರ್ಷಗಳಾಗಿಲ್ಲ; ನಿರಪರಾಧಿ ಚೀಂಕ್ರನು ಅಬ್ಕಾರಿ ಮೊಕದ್ದಮೆಯೊಂದರ ತಿಕ್ಕಿನಲ್ಲಿ ಸಿಕ್ಕಿಬಿದ್ದು ಆರು ತಿಂಗಳು ಜೈಲನ್ನು ಸೇರಿದ. ಹಿಂತಿರುಗಿ ಬರುವಷ್ಟರಲ್ಲಿ ಅವನ ತಾಯಿಯು ತೀರಿಕೊಂಡಿದ್ದಳು. ಇದ್ದ ಮನೆಜಾಗ ಗುತ್ತಿಗೆಯ ಹಣಕ್ಕೆ ಏಲಂ ಆಗಿ ಹೋಗಿತ್ತು! ಇದನ್ನೆಲ್ಲಾ ಕಂಡು ಚೀಂಕ್ರನಿಗೆ ತಡೆಯಲಾರದ ದುಃಖವಾಯಿತು. ಸ್ವಲ್ಪ ಸಮಯ ಅಲ್ಲಿ ಇಲ್ಲಿ ತನ್ನವರೆಂಬವರಲ್ಲೆಲ್ಲಾ ಅಲೆದಲೆದು ಕೊನೆಗೆಲ್ಲೊ ಮಾಯವಾದ.

***********

ಅಂದಿನಿಂದ ಇಂದಿಗೆ ಇಪ್ಪತ್ತು ವರುಷಗಳು ಹಾರಿ ಹೋಗಿವೆ! ನೋಡಿರಿ, ಚೀಂಕ್ರನು ತಿರುಗಿ ಊರಿಗೆ ಬಂದಿದ್ದಾನೆ. ಈಗ ಚೀಂಕ್ರನ ರೀತಿಯೇ ಬೇರೆ. ತಾನು ಚೀಂಕ್ರನೆಂದು ಹೇಳಿಕೊಳ್ಳದಿರುತ್ತಿದ್ದರೆ ಅವನ್ಯಾರೋ ಮೇಲು ಜಾತಿಯ ದೊಡ್ಡ ಮನುಷ್ಯನೆಂದು ಆ ಹಳ್ಳಿಯವರೆಲ್ಲ ಅವನೊಡನೆ ಬೆರೆಯುತ್ತಿದ್ದರೋ ಏನೋ! ಹಾಗಿತ್ತು ಅವನ ನಡೆ ನುಡಿ ವೇಷ! ಈಗ ಅವನಿಗೆ ಹೆಂಡತಿ, ಎರಡು ಗಂಡು ಮಕ್ಕಳು ಇವೆ. ಹೇರಳ ಹಣವನ್ನು ಸಂಪಾದಿಸಿಕೊಂಡು ಬಂದಿದ್ದನು. ಊರು ಬಿಟ್ಟವನು ದೂರದ ಸಂಬಂಧಿಕನೊಬ್ಬನಿದ್ದ ರಂಗೂನಿಗೆ ಅವನೊಡನೆ ಹೋಗಿದ್ದನಂತೆ. ಅಲ್ಲೊಂದು ಕಾಮಗಾರಿಕೆಯಲ್ಲಿದ್ದು ದುಡ್ಡು ಗಂಟುಕಟ್ಟಿಕೊಂಡು ಬಂದಿದ್ದನಂತೆ.

ಊರಿಗೆ ಬಂದ ಚೀಂಕ್ರನು ಅದೇ ತನ್ನ ಹಿರಿಯರ ಮನೆಜಾಗವನ್ನು ಕೊಂಡುಕೊಂಡ. ದೊಡ್ಡ ಮಹಡಿಯ ಮನೆಯನ್ನು ಕಟ್ಟಿಸಿದ; ಆಸ್ತಿಪಾಸ್ತಿ ಮಾಡಿದ. ಈಗ ಚೀಂಕ್ರನು ಊರಲ್ಲೊಬ್ಬ ದೊಡ್ಡ ಮನುಷ್ಯ. ಅವನ ಹಣ, ಅವನ ಸಹಾಯ, ಮೇಲು ಜಾತಿಯವರಿಗೂ ಬೇಕು; ಅವಕ್ಕೆಲ್ಲಾ ಅವನು ಹತ್ತಿರದವ, ಆದರೆ ಹತ್ತು ಕೂಡಿದಲ್ಲಿ ಅವನು ದೂರದವ! ಅನೇಕರಲ್ಲಾಗುವ ಮದುವೆ ಮುಂಜಿಗಳಿಗೆ ಸಾಲಕೊಡಬೇಕು ಚೀಂಕ್ರ ಪೂಜಾರಿ. ಊರಲ್ಲಿ ವರಾಡ ವಂತಿಗೆಯಲ್ಲಿ ಚೀಂಕ್ರ ಪೂಜಾರಿಯ ಅಂಕೆ ದೊಡ್ಡದು. ಆದರೆ ಅಂತಹ ಕಾರ್ಯಕಲಾಪಗಳಲ್ಲಿ ಮಾತ್ರ ಚೀಂಕ್ರ ಪೂಜಾರಿಯು ದೂರದಲ್ಲಿ, ಚಪ್ಪರದೊಳಗೆ ತಲೆ ಹಾಕಲಿಕ್ಕೂ ಆಯೋಗ್ಯ! ಅಷ್ಟೇಕೆ? ಆ ಹಳ್ಳಿಯ ಎಲ್ಲರಿಗಿಂತ ಹೆಚ್ಚು ತೀರ್ವೆ ತೆರುವ ದೊಡ್ಡ ವರ್ಗಾದಾರ ಚೀಂಕ್ರ ಪೂಜಾರಿ; ಆದರೆ ಬ್ರಾಹ್ಮಣ ಪಠೇಲರಲ್ಲಿ ಸರಕಾರದ ಹಣ ತೆರಲಿಕ್ಕೆ ಹೋದಾಗ ಅವನು ನಿಂತು ಕಾಯಬೇಕು ಹೊರಗಿನ ಅಂಗಳದಲ್ಲಿ. ಆದರೆ ಚೀಂಕ್ರನು ಇದನ್ನೆಲ್ಲಾ ಸಹಿಸಿಕೊಂಡನು. ಊರ ಕಟ್ಟಲೆಯೆಂದು ತಲೆ ಬಗ್ಗಿಸಿದನು. ಸಂದು ಬಂದ ರೂಢಿಯೆಂದು ಸುಮ್ಮಗಿದ್ದನು.

ಪಿಜಿನನು ಸತ್ತು ನಾಲ್ಕು ವರ್ಷಗಳಾಗಿಲ್ಲ; ನಿರಪರಾಧಿ ಚೀಂಕ್ರನು ಅಬ್ಕಾರಿ ಮೊಕದ್ದಮೆಯೊಂದರ ತಿಕ್ಕಿನಲ್ಲಿ ಸಿಕ್ಕಿಬಿದ್ದು ಆರು ತಿಂಗಳು ಜೈಲನ್ನು ಸೇರಿದ. ಹಿಂತಿರುಗಿ ಬರುವಷ್ಟರಲ್ಲಿ ಅವನ ತಾಯಿಯು ತೀರಿಕೊಂಡಿದ್ದಳು. ಇದ್ದ ಮನೆಜಾಗ ಗುತ್ತಿಗೆಯ ಹಣಕ್ಕೆ ಏಲಂ ಆಗಿ ಹೋಗಿತ್ತು! ಇದನ್ನೆಲ್ಲಾ ಕಂಡು ಚೀಂಕ್ರನಿಗೆ ತಡೆಯಲಾರದ ದುಃಖವಾಯಿತು. ಸ್ವಲ್ಪ ಸಮಯ ಅಲ್ಲಿ ಇಲ್ಲಿ ತನ್ನವರೆಂಬವರಲ್ಲೆಲ್ಲಾ ಅಲೆದಲೆದು ಕೊನೆಗೆಲ್ಲೊ ಮಾಯವಾದ.

ಒಂದು ದಿನ ಚೀಂಕ್ರನ ಹೆಂಡತಿಯು ಊರ ಜಾತ್ರೆಯ ಸಂತೆಗೆ ಬಳೆಯಿಡಿಸಿಕೊಳ್ಳಲು ಹೋಗಿದ್ದಳು. ಗಾಳಿಗೆ ಅವಳ ಸೆರಗು ಹಾರಿತು. ಅಲ್ಲಿ ಬಳೆಯಿಡಿಸಿಕೊಳ್ಳುತ್ತಿದ್ದ ಮೇಲು ಜಾತಿಯವಳೊಬ್ಬಳ ಮೈಗೆ ತಾಗಿತು! ಕೂಡಲೆ ಗದ್ದಲವೆದ್ದಿತು. ಮೇಲು ಜಾತಿಯ ಹೆಂಗಸರೆಲ್ಲಾ ಒಟ್ಟಾದರು; ಅವಳನ್ನು ಬೈದು ಹಂಗಿಸಿದರು – ‘ದುಡ್ಡಿನ ಸೊಕ್ಕು, ಹೆಂಡದ ಸೊಕ್ಕು!’ ಎಂದರು. ಚೀಂಕ್ರನ ಹೆಂಡತಿ ಮಾನವಂತೆ. ರಂಗೂನಿಲ್ಲಿ ಗೌರವಸ್ಥರ ಸ್ತ್ರೀಯರೊಂದಿಗೆ ತಿರುಗಿದವಳು. ಈ ಅವಮಾನವನ್ನು ಸಹಿಸಲಾರದೆ ನೆಟ್ಟಗೆ ಮನೆಗೆ ಬಂದು ನಡೆದ ವಿಚಾರವನ್ನೆಲ್ಲ ತನ್ನ ಗಂಡನೊಡನೆ ಹೇಳಿ ಗೊಳ್ಳೆಂದು ಅತ್ತುಬಿಟ್ಟಳು. ನಮ್ಮಲ್ಲಿ ಇಷ್ಟು ಸಂಪತ್ತಿದ್ದರೂ, ನಾವಿಷ್ಟು ನಿರ್ಮಲವಾಗಿದ್ದರೂ, ನಾಯಿಗಿಂತ ಕೀಳಾದೆವಲ್ಲಾ!’ ಎಂದು ಕಣ್ಣೀರಿಟ್ಟಳು. ಈ ಮಾತು ಚೀಂಕ್ರನ ಎದೆಗೂ ನಾಟಿತು.

ಚೀಂಕ್ರನು ಯೋಚಿಸಿ ಯೋಚಿಸಿ ಕೊನೆಗೊಂದು ಸಂಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳುಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರಾಗುತ್ತ ಹೋದರು. ಹಿರಿಯವನಾದ ಸುಂದರನು ಬಿ.ಎ. ಬಿ.ಎಲ್. ಆಗಿ ಮದ್ರಾಸಿನಲ್ಲೆ ಪ್ರಖ್ಯಾತ ವಕೀಲನೆನಿಸಿಕೊಂಡ. ಚೀಂಕ್ರನ ಊರಿನ ಹಲವು ಮೇಲು ಜಾತಿಯವರೂ ಅವನಲ್ಲಿಗೆ ಹೋಗಿ ‘ಅಪ್ಪೀಲು ನಂಬ್ರ’ ಗಳನ್ನು ಕೊಟ್ಟು ಬರುತ್ತಿದ್ದರು.
ಚೀಂಕ್ರನ ಕಿರಿಯ ಮಗ ರಾಮವು ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್. ಪಾಸಾಗಿ ಬಂದನು. ಮದ್ರಾಸಿನಲ್ಲಿ ತನ್ನ ಸಹಪಾಠಿಯಾಗಿದ್ದ ಕ್ರಿಶ್ಚನ್ ತರುಣಿಯೊಬ್ಬಳಲ್ಲಿ ಅವನಿಗೆ ಪ್ರೀತಿ ಬಿತ್ತು. ಕೊನೆಗೆ ಅವಳನ್ನು ಮದುವೆಯಾಗಲೂ ಬೇಕಾಯಿತು. ಪರಿಣಾಮವಾಗಿ ಈಗ ಅವನ ಹೆಸರು ಆರ್. ಜೋರ್ಜ್ ರೋಬರ್ಟ್ಸ್ ಐ.ಸಿ.ಯಸ್. ಕೆಲವು ಸಮಯ ಮಧುರೆಯಲ್ಲಿ ಕಲೆಕ್ಟರನಾಗಿದ್ದು ತನ್ನೂರಾದ ಚಂದ್ರಪುರಿಗೆ ವರ್ಗವಾಗಿ ಬಂದನು.

ಚಂದ್ರಪುರಿಯಲ್ಲಿ ಮೊದಲ ಸಲ ಬಂದಾಗ ಆ ಕಲೆಕ್ಟರರನ್ನು ಇದಿರುಗೊಳ್ಳುವ ಸಂಭ್ರಮವೇನು? ಮಠದಿಂದ ಗಗ್ಗರ, ಡೋಲು, ಮಕರ ತೋರಣ, ಆನೆ, ಬ್ಯಾಂಡು ಮುಂತಾದ ಬಿರುದಾವಳಿಗಳು ಜೋಡುಕಟ್ಟೆಯಲ್ಲಿ ಎದುರುಗೊಳ್ಳಲು ಸಜ್ಜಾಗಿ ನಿಂತಿದ್ದುವು. ಆಚಾರವಂತರು ವಿಚಾರವಂತರು ಊರ ಪ್ರಮುಖರು ಸಾಹುಕಾರರು ಎಲ್ಲರೂ ಅಲ್ಲಿ ನರೆದಿದ್ದರು.

ಕಲೆಕ್ಟರರು ಬರುವಾಗ ಮೂರು ಗಂಟೆಯ ಸಮಯವಾಯಿತು. ಎಲ್ಲರೂ ಕುತ್ತಿಗೆ ಎತ್ತಿ ಎತ್ತಿ ದಾರಿನೋಡುತ್ತಿದ್ದರು. ಅಷ್ಟರಲ್ಲಿ ಬಂತೇ ಬಂತು ನಾಗಯ್ಯ ಶೆಟ್ರ ಜಟ್ಕಾ ಕಂಪೆನಿಯ ದೊಡ್ಡ ಜಟ್ಕ. ಎದುರಲ್ಲಿ ಕುಳಿತಿದ್ದರು ಕಲೆಕ್ಟರ್ ದೊರೆಗಳು! ದೊರೆಗಳು ಜಟ್ಕದಿಂದ ಇಳಿದರು. ಅಲ್ಲೇ ಸಮೀಪ ತನ್ನ ತಂದೆಯು ಇತ್ತೀಚೆಗೆ ಕೊಂಡುಕೊಂಡಿದ್ದ ಬಂಗಲೆಗೆ ಎಲ್ಲರನ್ನೂ ಕರೆದುಕೊಂಡು ಸಾಗಿದರು. ಆಚಾರವಂತರೂ ವಿಚಾರವಂತರೂ ತಾನು ಮುಂದು ತಾನು ಮುಂದು ಎಂದು ನಡೆದೇ ಬಿಟ್ಟರು ಚೀಂಕ್ರಪೂಜಾರಿಯ ಬಂಗ್ಲೆಗೆ!

ಬಂಗ್ಲೆಯ ಮುಂಭಾಗದಲ್ಲಿ ಅಂದವಾದ ದೊಡ್ಡ ಚಪ್ಪರ. ಅದರಲ್ಲಿ ದೊಡ್ಡ ಸಭೆಗೂಡಿತು. ಚೀಂಕ್ರ ಮತ್ತು ತಹಶೀಲ್ದಾರರ ನಡುವೆ ಕಲೆಕ್ಟರರು ಸುತ್ತು ತಿರುಗಿ ಸಭಿಕರ ಪರಿಚಯ ಮಾಡಿಕೊಂಡರು. ಅನಂತರ ಚೀಂಕ್ರನು (ಈಗ ಚೀಂಕ್ರಪ್ಪನವರು!) ತನ್ನ ಕೈಯಿಂದ ಸಭಿಕರಿಗೆಲ್ಲಾ ಪನ್ನೀರು ಚಿಮುಕಿಸಿ ತಾಂಬೂಲ ಫಲ ಪುಷ್ಪ ಕೊಟ್ಟು ಉಪಚರಿಸಿದನು.

ನಾಲ್ಕು ತಿಂಗಳು ಕಳೆದುವು. ಮಠದಲ್ಲಿ ದೊಡ್ಡ ರಥೋತ್ಸವ. ಚಂದ್ರಪುರಿಯಲ್ಲಿ ಅಂತಹ ರಥೋತ್ಸವವಾಗುವುದು ಏಳು ವರ್ಷಕ್ಕೊಮ್ಮೆ. ಭಾರಿ ಜನ ಕೂಡುವುದು. ಅದೊಂದು ದೊಡ್ಡ ಜಾತ್ರೆ. ನೆಮ್ಮದಿ ಭಂಗವಾಗದಂತೆ ನೋಡಿಕೊಳ್ಳುವುದಕ್ಕೆ ಕಲೆಕ್ಟರರು ಬರುವ ಪದ್ಧತಿ. ಎಂದ ಮೇಲೆ ಮಠದಿಂದ ಮುಂಚಿತವಾಗಿ ಆಮಂತ್ರಣ ಹೋಗಿತ್ತು. ಹಿಂದಿನಿಂದ ನಜರು ಕಾಣಿಕೆ ಒಲಿಪೆಯೂ ಸಾಗಿದ್ದವು. ಬೇಸಿಗೆಯ ರಜೆಗೆಂದು ಮದ್ರಾಸಿನಿಂದ ವಕೀಲ್ ಸುಂದರನ್ ರವರೂ ಅವರ ಪತ್ನಿಯೂ ಬಂದಿದ್ದರು. ಎಲ್ಲರೂ ಕಲೆಕ್ಟರರ (ಚೀಂಕ್ರ ಪೂಜಾರಿಯರ) ಬಂಗ್ಲೆಯಲ್ಲಿದ್ದರು.

ಚೀಂಕ್ರಪ್ಪನವರು ರಥೋತ್ಸವ ನೋಡಲಿಕ್ಕೆ ತನ್ನ ಮಗಂದಿರಿಬ್ಬರೊಡನೆ ಹೊರಟರು. ಹೆಂಗಸರು ಹೊರಟರು, ಮಕ್ಕಳು ಹೊರಟರು, ಎಲ್ಲರೂ ಹೊರಟರು! ಕಲೆಕ್ಟರರ ಮನೆಯ ಹೆಂಗಸರೆಂದಾದ ಮೇಲೆ ಅಲ್ಲಿ ಅವರಿಗೆ ಸನ್ಮಾನವೇನು! ರಥದ ಎದುರಿಗೆ ಎಲ್ಲರಿಗೆ ಮುಂದಾಗಿ ಅವರಿಗೆ ನಿಲ್ಲಲು ಮಠದಿಂದ ಜಾಗಮಾಡಿಕೊಡುವ ಸಂಭ್ರಮವೇನು! ಮಠದ ಆಚಾರವಂತರಿಬ್ಬರು “ಅಮ್ಮಾ ಅಮ್ಮ!” ಎಂದು ಅವರ ಬಳಿಯಲ್ಲೇ ನಿಂತು ಎಲ್ಲವನ್ನೂ ವಿವರಿಸಿ ಹೇಳುವ ರೀತಿಯೇನು! ರಥವು ಸುತ್ತು ಬಂದು ಗುತ್ತಿನಲ್ಲಿ ನಿಂತಿತು. ಬಲಿಮೂರ್ತಿ ಒಳಗೆ ಹೋಯಿತು. ಆಗ ‘ನಾವೂ ಒಳಗೆ ಹೋಗಿ ನೋಡೋಣವೇ?’ ಎಂದಳು ಕಲೆಕ್ಟರರ ಪತ್ನಿ. “ಅದಕ್ಕೇನು? ಮೊನ್ನೆ ನನಗೆ ಎಲ್ಲ ತೋರಿಸಿದ್ದರು. ನಾನು ಹೋಗಿ ನೋಡಿದ್ದೆ; ಅಲ್ಲೆಲ್ಲ ಬಹಳ ಚಂದ ಉಂಟು. ಬಾ,” ಎಂದು ಮುಂದಾದರು. ತಂದೆಯನ್ನೂ, ತಮ್ಮನನ್ನೂ ಬನ್ನಿಯೆಂದರು. ಅಕ್ಕಾ ಬನ್ನಿ, ಅತ್ತೇ ಬನ್ನಿ, ಎಲ್ಲಾ ಬನ್ನಿ! ಎಂದು ತನ್ನೊಡನಿದ್ದ ಹೆಂಗಸರು ಮಕ್ಕಳನ್ನೆಲ್ಲ ಕರೆದುಕೊಂಡು ಕಲೆಕ್ಟರರ ಪತ್ನಿಯು ಗಂಡಸರನ್ನು ಹಿಂಬಾಲಿಸಿದಳು. ಗಲಭೆಯಿಲ್ಲದೆ ಆಯಿತು ದೇವಸ್ಥಾನ ಪ್ರವೇಶ!

(`ನಂದಾದೀಪ’ ಸಂಕಲನದಿಂದ – 1938)