ರಂಗಪ್ಪನ ಖರ್ಚು ಬಹಳ ಕಡಿಮೆ. ಬೀಡಿ, ಸಿಗರೇಟು, ಎಲೆ-ಅಡಿಕೆ, ಕಾಫಿ ಮೊದಲಾದ ಎಲ್ಲಾ ಅಭ್ಯಾಸಗಳು ಅವನಿಗಿದ್ದರೂ ಅವನಾಗಿ ಯಾವುದನ್ನೂ ಹಣಕೊಟ್ಟು ಕೊಂಡುಕೊಳ್ಳುವವನಲ್ಲ. ಹಾಗೆ ಯಾರಾದರೂ ಸಿಗರೇಟೋ, ಬೀಡಿಯೋ ಕೊಟ್ಟರೆ, ‘ಸ್ವಾಮೀ ಈ ದುರಭ್ಯಾಸದಿಂದಾಗಿ ನನ್ನ ಮನೆ ಹಾಳಾಗಿ ಹೋಯಿತು. ಗ್ರಾಮಸಂಚಾರಿಗಳಾದ ನಮಗೆ ಎಲ್ಲರೂ ಮಿತ್ರರೇ. ಅವರು ಕೇಳುವಾಗ ಕೊಡದೆ ಇರುವುದು ಹೇಗೆ? ಅವನಿಗೊಂದು ಇವನಿಗೊಂದು ಅಂತ ಹೇಳುವಾಗ ನನಗೆ ದಿನವೊಂದಕ್ಕೆ ಮೂರು ನಾಲ್ಕಾಣೆ ಆಗುತ್ತದೆ, ಸ್ವಾಮೀ’ ಎಂದು ಮೋರೆ ಜೋಲುಹಾಕಿ ಹೇಳುವನು.
ಡಾ.ಜನಾರ್ದನ ಭಟ್ ಸಾದರಪಡಿಸುತ್ತಿರುವ ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಯಂ. ಆರ್. ಶಾಸ್ತ್ರಿ ಬರೆದ ಕತೆ “ರಂಗಪ್ಪನ ಪಠೇಲಿಕೆ”

 

ರಂಗಪ್ಪನು ನಮ್ಮ ಗ್ರಾಮದ ಉಗ್ರಾಣಿ. ಅವನ ಪರಿಚಯ ಇಲ್ಲದವರು ನಮ್ಮಲ್ಲಿ ಯಾರೂ ಇಲ್ಲ. ಯಾಕೆಂದರೆ – ತೀರ್ವೆ ಹಣ ವಸೂಲು ಮಾಡಲಿಕ್ಕೆ – ದಾಕು ಹಾಕುವ ಮುಂಚಿತವಾಗಿ ನೋಟೀಸು ಜಾರಿಮಾಡಲಿಕ್ಕೆ, ಜನನ-ಮರಣಗಳನ್ನು ದಾಖಲು ಮಾಡಲಿಕ್ಕೆ – ಹೀಗೆ ವರ್ಷಕ್ಕೆ ನಾಲ್ಕಾರು ಸಲ ಪ್ರತಿಯೊಬ್ಬನ ಮನೆಗೂ ಅವನು ಹೋಗುವನು. ಡೊಂಬಿ, ಖೂನಿ, ಕಳವುಗಳಾದಲ್ಲಿ ಪಟೇಲರ ಒಟ್ಟಿಗೆ ಬಂದು ಜರ್ಬಿನಿಂದ ಜನರ ಗುಂಪನ್ನು ಚದರಿಸಲಿಕ್ಕೆ ಅವನು. ಅಲ್ಲಿಂದ ಪೋಲೀಸು ಸ್ಟೇಶನಿಗೆ – ಪೋಲೀಸು ಸ್ಟೇಶನ್ನಿಂದ ಪಟೇಲರಲ್ಲಿಗೆ – ಪಟೇಲರಲ್ಲಿಂದ ಶ್ಯಾನುಭಾಗರಲ್ಲಿಗೆ ಓಡಾಡಲಿಕ್ಕೆ ಅವನು. ಹೀಗಾಗಿ ನಮ್ಮ ಗ್ರಾಮದಲ್ಲಿನ ಉಗ್ರಾಣಿ ರಂಗಪ್ಪ ಬಹಳ ಪ್ರಸಿದ್ಧ ವ್ಯಕ್ತಿ.

ನಮ್ಮ ಮೂಡುಬೈಲು ದೊಡ್ಡ ಗ್ರಾಮ, ಸಾಧಾರಣ ಎಂಟು ನೂರು ಮನೆಗಳಿವೆ, ಮೂರು ಸಾವಿರಕ್ಕೆ ಮಿಕ್ಕಿ ಜನಸಂಖ್ಯೆಯಿದೆ. ಗ್ರಾಮಸ್ಥರಲ್ಲಿ ಹೆಚ್ಚಿನವರು ನಿರಕ್ಷರಕುಕ್ಷಿಗಳು. ಬೇಸಾಯ, ಕೂಲಿ ಕೆಲಸ ಇವೇ ಅವರ ಜೀವನೋಪಾಯ.

ರಂಗಪ್ಪ ಒಳ್ಳೆಯ ಮನುಷ್ಯ, ಯಾರ ತಳ್ಳಿಗೂ ಹೋಗುವವನಲ್ಲ. ಅವನು ತನ್ನ ಸಂಸಾರವನ್ನು ಸಾಕಲಿಕ್ಕಾಗಿಯೇ ಗ್ರಾಮದಲ್ಲೆಲ್ಲಾ ಅಲೆಯುವ ಈ ಉಗ್ರಾಣಿ ಕೆಲಸಕ್ಕೆ ಕೈಕೊಟ್ಟಿರುವನೆಂದು ಹೇಳಿದರೆ ತಪ್ಪಾಗದು. ಯಾಕೆಂದರೆ ನಡೆನಡೆದು ಬೇಸತ್ತು, ಮನೆಬಾಗಿಲಿಗೆ ಬಂದು ತನ್ನ ಕಷ್ಟವನ್ನು ಹೇಳಿಕೊಳ್ಳುವಾಗ “ನನ್ನ ಮಂದಿ ತಂದೆ-ತಾಯಿಗಳಿಗಲ್ಲದಿದ್ದರೆ ಈ ಸುಟ್ಟ ಕೆಲಸಕ್ಕೆ ಯಾವಾಗಲೋ ರಾಜಿ ಕೊಡುತಿದ್ದೆ” ಎಂದು ಹೇಳುತಿದ್ದುದನ್ನು ನಾವು ಎಷ್ಟೋ ಸಲ ಕೇಳಿದ್ದೇವೆ. ಈ ಮಾತು ಸುಳ್ಳಲ್ಲ. ಪಾಪ! ಬೆಳಗ್ಗೆ ಆರು ಗಂಟೆಗೆ ಕಾಲಿಗೆ ಜೋಡು ಸೇರಿಸಿ ಹೊರಟರೆ, ಸಂಜೆಯವರೆಗೆ ತಿರುತಿರುಗಿ ಸಾಕೆನಿಸುತ್ತವೆ. ಅದರಲ್ಲೂ ನಮ್ಮ ಎಂಕು ಭಟ್ಟರಂತಹ ಪಟ್ಟೆದಾರರಿದ್ದರೆ ಕೇಳುವುದೇ ಬೇಡನ್ನಿ. ಮೂರುವರೆ ರೂಪಾಯಿ ತೀರ್ವೆಗೆ ಮಾರ್ಚಿ 1ನೇ ತಾರೀಕಿನಲ್ಲಿ ಅವರ ಮನೆ ಬಾಗಿಲಿಗೆ ಹೋಗಲಾರಂಭಿಸಿದರೆ ಮೇ ಆಖೈರಿಗಾದರೂ ಅವರ ತೆಂಗಿನ ಮರದ ಸೀಯಾಳವನ್ನು ತೆಗೆಯಲಿಕ್ಕೆ ಮರಹತ್ತುವವನನ್ನು ಕರೆತರಿಸಿ, ಮರ ಏರಿಸಿದ್ದಲ್ಲದೆ ಅವರು ಕೊಡುವಹಾಗಿಲ್ಲ. ಕೆಲವರಲ್ಲಿ ದಾಕಿನ ನೋಟೀಸು ಕೊಂಡುಹೋದರೆ `ಮಗು ಇಲ್ಲಿಲ್ಲ. ಅಜ್ಜಿಯ ಮನೆಗೆ ಹೋಗಿದೆ’ ಎಂದು ಅಲ್ಲಿಗೆ ಕಳುಹಿಸುವುದು. ಅಲ್ಲಿಂದ ಇನ್ನೊಂದು ಕಡೆಗೆ ಕಳುಹಿಸುವುದು. ಇದಕ್ಕಾಗಿ ಗುಡ್ಡೆಯ ಕಲ್ಲು ತುಳಿದು ಕಾಲಿದ ಚರ್ಮ ಸವೆದುಹೋದರೂ ರಂಗಪ್ಪನಿಗೆ ತಿಂಗಳಿಗೆ ಸಿಗುವುದು ಒಂಬತ್ತುವರೆ ರೂಪಾಯಿ ಮಾತ್ರ. ಅವನಿಗೆ ತಂದೆತಾಯಿಗಳು, ತಮ್ಮಂದಿರು, ಹೆಂಡತಿ ಎಲ್ಲಾ ಇದ್ದಾರೆ. ಇಷ್ಟು ದೊಡ್ಡ ಕುಟುಂಬ
ನಡೆಸಲಿಕ್ಕೆ ಈ ಒಂಬತ್ತುವರೆ ಎಲ್ಲಿ ಸಾಕಾದೀತು? ಒಂದು ಸ್ವಂತ ಮನೆ, ತೋಟ, ಸ್ವಲ್ಪ ಗದ್ದೆ ಇಷ್ಟು ಇದ್ದುದರಿಂದ ಅವನು ಈ ಹೊತ್ತು ಗ್ರಾಮದಲ್ಲಿ ತಿರುಗಾಡುತ್ತಾನೆ. ಅಲ್ಲದೆ ಹೋದರೆ ಅವನು ಊರುಬಿಟ್ಟು ಓಡಿಹೋಗಬೇಕಾದ ಕಾಲ ಯಾವಾಗಲೋ ಬರುತ್ತಿತ್ತು.

ರಂಗಪ್ಪನ ಖರ್ಚು ಬಹಳ ಕಡಿಮೆ. ಬೀಡಿ, ಸಿಗರೇಟು, ಎಲೆ-ಅಡಿಕೆ, ಕಾಫಿ ಮೊದಲಾದ ಎಲ್ಲಾ ಅಭ್ಯಾಸಗಳು ಅವನಿಗಿದ್ದರೂ ಅವನಾಗಿ ಯಾವುದನ್ನೂ ಹಣಕೊಟ್ಟು ಕೊಂಡುಕೊಳ್ಳುವವನಲ್ಲ. ಯಾರಾದರೂ ಕೊಟ್ಟರೆ ಮಾತ್ರ ಸೇವಿಸುತ್ತಿದ್ದನು. ಅದು ಒಳ್ಳೆಯ ಗುಣವೆಂದೆನ್ನಿ. ಹಾಗೆ ಯಾರಾದರೂ ಸಿಗರೇಟೋ, ಬೀಡಿಯೋ ಕೊಟ್ಟರೆ, ‘ಸ್ವಾಮೀ ಈ ದುರಭ್ಯಾಸದಿಂದಾಗಿ ನನ್ನ ಮನೆ ಹಾಳಾಗಿ ಹೋಯಿತು. ಗ್ರಾಮಸಂಚಾರಿಗಳಾದ ನಮಗೆ ಎಲ್ಲರೂ ಮಿತ್ರರೇ. ಅವರು ಕೇಳುವಾಗ ಕೊಡದೆ ಇರುವುದು ಹೇಗೆ? ಅವನಿಗೊಂದು ಇವನಿಗೊಂದು ಅಂತ ಹೇಳುವಾಗ ನನಗೆ ದಿನವೊಂದಕ್ಕೆ ಮೂರು ನಾಲ್ಕಾಣೆ ಆಗುತ್ತದೆ, ಸ್ವಾಮೀ’ ಎಂದು ಮೋರೆ ಜೋಲುಹಾಕಿ ಹೇಳುವನು. ಇದು ನಿಜವೋ ಸುಳ್ಳೋ ಎಂದು ನಮಗೆಲ್ಲ ಗೊತ್ತಿದೆ. ನಾವು ತಿಳಿದಿರುವೆವೆಂದು ಅವನಿಗೂ ಗೊತ್ತು. ಆದರೆ ಹೀಗೆ ಬಡಾಯಿ ಕೊಚ್ಚುವುದು ಅವನಿಗೆ ಅಭ್ಯಾಸವೇ ಆಗಿಹೋಗಿದೆ. ಇದೊಂದು ಮಾತ್ರ ಅವನಲ್ಲಿದ್ದ ಕೆಟ್ಟ ಗುಣ. ಅವನು ಮಾತಾಡಲಿಕ್ಕೆ ತೊಡಗಿದನೆಂದರೆ, ಅವನು ಮೈಸೂರು ಮಹಾರಾಜರ ಅರಮನೆಯಲ್ಲಿ ಬೆಳೆದವನೋ ಅಥವಾ ಮಿಲಾಯತಿಯಿಂದ ಚಕ್ರವರ್ತಿಗಳ ಪ್ರತಿನಿಧಿಯಾಗಿ ಬಂದವನೋ ಎಂದು ಕಾಣಿಸುತ್ತದೆ. ಅದರಿಂದ ನಮಗೇನು ಬಾಧಕವಿಲ್ಲದಿದ್ದರೂ ಅವನು ಮಾತ್ರ ಅನೇಕ ವೇಳೆ ಕಷ್ಟದಲ್ಲಿ ಬಿದ್ದುದುಂಟು.

ನಮ್ಮ ಗ್ರಾಮದಲ್ಲೆ ಎಂಟುನೂರು ಮನೆಗಳಿವೆ ಎಂದು ಹೇಳಿದ ಮೇಲೆ ಅದು ಬಹಳ ದೊಡ್ಡ ಗ್ರಾಮ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಆದ್ದರಿಂದ ಇಲ್ಲಿ ಎರಡು ಉಗ್ರಾಣಿಗಳು. ಒಂದು ನಮ್ಮ ರಂಗಪ್ಪ. ಇವನಿಗೆ ಓದುಬರಹ ಚೆನ್ನಾಗಿ ಗೊತ್ತುಂಟು. ಹೆಚ್ಚೆಂದರೆ 24 ವರ್ಷ ಪ್ರಾಯ. ಮೈ ಬಣ್ಣ ಬೆಳ್ಳಗೆ. ನೋಡಲಿಕ್ಕೆ ಬಹಳ ಸುಂದರ ಪುರುಷ. ಇನ್ನೊಬ್ಬನಿಗೆ ವಿದ್ಯೆಯಿಲ್ಲ. ಏನಾದರೂ ಪಟೇಲರೊ, ಶ್ಯಾನುಭಾಗರೋ ಹೇಳಿದ ಕೆಲಸ ಮಾಡುತ್ತಿದ್ದ ಅಷ್ಟೆ. ಪಟೇಲರಿಲ್ಲದೆ ಈ ಇಬ್ಬರೂ ಉಗ್ರಾಣಿಗಳು ಎಲ್ಲಿಗಾದರೂ ಹೋಗುವುದಿದ್ದರೆ ರಂಗಪ್ಪನು ಉಗ್ರಾಣಿ ಹೋಗಿ ಪಟೇಲನೇ ಆಗುತ್ತಿದ್ದನು. ಅವನ ಉಡುಗೆ ತೊಡುಗೆಗಳನ್ನು ನೋಡಿದರೆ ಪಟೇಲನಲ್ಲವೆಂದು ಯಾರೂ ಹೇಳಲಿಕ್ಕಿಲ್ಲ. ಪುಸ್ತಕದ ಕಟ್ಟುಗಳನ್ನು ಇನ್ನೊಬ್ಬ ಉಗ್ರಾಣಿಯಿಂದ ಹೊರಿಸಿ, ಅವನು, ತಾನು ಕೈ ಬೀಸಿ ಹೋಗುವನು. ಮನೆಗೆ ಹೋದೊಡನೆ ಗಟ್ಟಿಸ್ವರದಿಂದ ತನ್ನೊಟ್ಟಿಗೆ ಬರುವವನನ್ನು ಕುರಿತು, `ಉಗ್ರಾಣಿ, ಪುಸ್ತಕ ಎಲ್ಲಿ? ಇತ್ತ ಕೊಡು’ ಎಂದು ಕೇಳುವನು. ಇದನ್ನು ಕೇಳಿದ ನಮ್ಮ ಹಳ್ಳಿಯವರಲ್ಲಿ ಕೆಲವರು ಇವನೇ ಪಟೇಲರೆಂದು ತಿಳಿದುಕೊಂಡು ಇವನಿಗೆ ಎಲೆ ಅಡಿಕೆ ಕೊಟ್ಟು ಉಪಚಾರ ಮಾಡುವರು. ಕೆಲವರು `ಎರಡು ದಿನ ಸಮಯ ಕೊಡಬೇಕು ಸ್ವಾಮಿ!’ ಎಂದು ನಮ್ರತಾಭಾವದಿಂದ ಬೇಡುವರು. ಇನ್ನು ಕೆಲವರು ಇವನನ್ನು ಲಕ್ಷ್ಯಕ್ಕೆ ತಾರದೆ ಹೋದರೆ ಅವನು ‘ಈಗಲೇ ನಿಮ್ಮ ಮನೆ ಜಪ್ತಿಮಾಡಿಸುತ್ತೇನೆ’ ಎಂದು ಗದರಿಸುವುದೂ ಉಂಟು. ಕೆಲವರು `ಇದೇನಯ್ಯ? ಕಳೆದ ವರ್ಷಕ್ಕಿಂತ ರೂಪಾಯಿಯಲ್ಲಿ ಅರ್ಧಾಣೆ ಪ್ರಕಾರ ಜಾಸ್ತಿ ಆಗಿದೆ ತೀರ್ವೆ. ಹೆಚ್ಚಿನ ಅಂಶ ಕೊಡುವುದಿಲ್ಲ’ ಎಂದು ವಾದಿಸಿದರೆ `ಹಾಗೆಲ್ಲ ಮಾತಾಡಿದರೆ ಬರುವ ವರ್ಷ ಒಂದಾಣೆ ಪ್ರಕಾರ ಏರಿಸುತ್ತೇನೆ ನೋಡಿ. ರಶೀದಿಯಲ್ಲಿ ಬರೆದಷ್ಟು ಹಣ ಕೊಟ್ಟುಬಿಡಿ. ಇದರಲ್ಲಿ ಚರ್ಚೆ ಮಾಡಲಿಕ್ಕೆ ಸರ್ಕಾರ ಅಂದ್ರೆ ಸಂತೆ ಅಂತ ಭಾವಿಸಿದ್ರಾ’ ಎಂದು ಹೆದರಿಸುವುದೂ ಉಂಟು.

ಅವನು ಎಲ್ಲವರಲ್ಲಿಯೂ ಹೀಗೆ ಮಾತಾಡುವುದಿಲ್ಲ. ಪರಿಚಯವಿಲ್ಲದ ಕೆಲವರಲ್ಲಿ ಮಾತ್ರ ತಮಾಷೆಗಾಗಿ ಹೀಗೆ ಮಾತನಾಡುತ್ತಿದ್ದನು. ಆದರೆ ಅವನು ಮಾಡಿದ ಕೆಲಸಗಳೆಲ್ಲ ಬಯಲಿಗೆ ಬಂದು ಅವು ಈಗ ಹೆಚ್ಚಿನ ಗ್ರಾಮಸ್ಥರ ಬಾಯಿಯಲ್ಲಿದೆ.

1931 ನೆಯ ಖಾನೇಶುಮಾರಿಯಲ್ಲಿ ಗ್ರಾಮದ ಕೆಲವು ಮನೆಗಳಿಗೆ ಹೋಗಿ ಜನರ ಲೆಕ್ಕತೆಗೆಯುವ ಕೆಲಸ ನಮ್ಮ ರಂಗಪ್ಪನ ಪಾಲಿಗೆ ಬಿದ್ದಿತ್ತು. ನಮ್ಮ ಗ್ರಾಮದಲ್ಲಿ ತಿಮ್ಮಪ್ಪನೆಂಬ ಒಬ್ಬ ಒಕ್ಕಲಿಗನಿದ್ದಾನೆ. ಅವನು ಇತರರಂತೆ ಕಾಯಿದೆ ಕಾನೂನುಗಳನ್ನು ತಿಳಿದವನಲ್ಲ. ಉಗ್ರಾಣಿ ರಂಗಪ್ಪನು ಅವನಲ್ಲಿಗೆ ಹೋಗಿ `ಅಯ್ಯಾ, ನಿಮ್ಮಲ್ಲಿ ಎಷ್ಟು ಜನರಿದ್ದಾರೆ?’ ಎಂದು ಕೇಳಿದನು.

“ಒಂಭತ್ತು, ಸ್ವಾಮೀ!”
“ನಿಮ್ಮ ಹೆಸರೇನು?”
“ತಿಮ್ಮಪ್ಪ”
“ನಿಮ್ಮ ಹೆಂಡತಿಯ ಹೆಸರೇನು?”
“ನಾಗು”
“ಎಲ್ಲಿಂದ ಮದುವೆಯಾದದ್ದು?”
“ಹೇರೂರಿನಿಂದ.”
“ನಿಮಗೆ ಎಷ್ಟು ಜನ ಮಕ್ಕಳು?”
“ಆರು”
“ಹೆಣ್ಣೆಷ್ಟು? ಗಂಡೆಷ್ಟು?”
“ಮೂರು ಹೆಣ್ಣು, ಮೂರು ಗಂಡು”
“ಹೆಣ್ಣುಮಕ್ಕಳಿಗೆ ಮದುವೆಯಾಗಿದೊ?”
“ಇಬ್ಬರಿಗೆ ಆಗಿದೆ.”
“ಮತ್ತೊಬ್ಬಳಿಗೆ?”
“ಆಗಲಿಲ್ಲ. ಅವಳಿಗೆ ಹದಿಮೂರು ವರ್ಷ ಆಗಿದೆಯಷ್ಟೆ.”
“ಯಾಕೆ ಮದುವೆ ಮಾಡುವುದಿಲ್ಲ?”

ಈ ಪ್ರಶ್ನೆ ಯಜಮಾನನಿಗೆ ಬಹಳ ವಿಚಿತ್ರವೆನಿಸಿತು. ಅವನು `ಸ್ವಾಮೀ! ಅದನ್ನೂ ಬರೆದುಕೊಳ್ಳಲಿಕ್ಕಿದೆಯೊ?’ ಎಂದು ಕೇಳಿದನು.

`ಎಲ್ಲಾ ಇದೆ. ಸರ್ಕಾರದ ಕಾಯಿದೆ ಕಾನೂನುಗಳಿಗೆ ಮಿತಿಯಿಲ್ಲ. ಅದಿರಲಿ, ಈಗ ನೀವು ಹೇಳಿದವರೆಲ್ಲ ಈ ಮನೆಯಲ್ಲೆ ಇದ್ದಾರೋ?’

`ಹೌದು, ಉಗ್ರಾಣಿ ದೇವ್ರೆ.’

`ಎಲ್ಲಿ? ಹೊರಗೆ ಬರಲಿ, ಅವರನ್ನು ನೋಡದೆ ಬರೆದುಕೊಂಡರೆ ಮತ್ತೆ ನಮ್ಮ ಮೇಲೆ ಬಂದೀತು’

ಪುಸ್ತಕದ ಕಟ್ಟುಗಳನ್ನು ಇನ್ನೊಬ್ಬ ಉಗ್ರಾಣಿಯಿಂದ ಹೊರಿಸಿ, ಅವನು, ತಾನು ಕೈ ಬೀಸಿ ಹೋಗುವನು. ಮನೆಗೆ ಹೋದೊಡನೆ ಗಟ್ಟಿಸ್ವರದಿಂದ ತನ್ನೊಟ್ಟಿಗೆ ಬರುವವನನ್ನು ಕುರಿತು, `ಉಗ್ರಾಣಿ, ಪುಸ್ತಕ ಎಲ್ಲಿ? ಇತ್ತ ಕೊಡು’ ಎಂದು ಕೇಳುವನು. ಇದನ್ನು ಕೇಳಿದ ನಮ್ಮ ಹಳ್ಳಿಯವರಲ್ಲಿ ಕೆಲವರು ಇವನೇ ಪಟೇಲರೆಂದು ತಿಳಿದುಕೊಂಡು ಇವನಿಗೆ ಎಲೆ ಅಡಿಕೆ ಕೊಟ್ಟು ಉಪಚಾರ ಮಾಡುವರು. ಕೆಲವರು `ಎರಡು ದಿನ ಸಮಯ ಕೊಡಬೇಕು ಸ್ವಾಮಿ!’ ಎಂದು ನಮ್ರತಾಭಾವದಿಂದ ಬೇಡುವರು.

ಹೀಗೆ ಎಲ್ಲರನ್ನೂ ನೋಡಿಯಾದ ಮೇಲೆ ಇನ್ನೊಂದು ಮನೆಗೆ ಹೋದನು. ಆ ಮನೆಯ ಯಜಮಾನ ಜಾರು. ಯಾವ ಕಾನೂನುಗಳಿಗೂ ಅವನು ಲಕ್ಷ್ಯಮಾಡುವವನಲ್ಲ. ರಂಗಪ್ಪ ಅವನ ಮನೆಗೆ ಹೋದವನೇ ಅಂಗಳದಲ್ಲಿ ನಿಂತು `ಜಾರೂ’ ಎಂದು ಕೂಗಿದನು.

ಒಳಗಿನಿಂದ ಜಾರು, `ಯಾರು ಉಗ್ರಾಣಿಯೋ? ಏನು ಬಂದದ್ದು?’
`ಖಾನೆಶುಮಾರಿ ಲೆಕ್ಕಕ್ಕೆ. ನಿಮ್ಮಲ್ಲಿ ಎಷ್ಟು ಜನರಿದ್ದಾರೆ?’ ಎಂದು ಪುಸ್ತಕಬಿಡಿಸಿ ಬರೆದುಕೊಳ್ಳಲು ಸಿದ್ಧತೆ ನಡೆಸಿದನು.
ರಂಗಪ್ಪನು ಪುಸ್ತಕ ಬಿಡಿಸುವುದನ್ನು ನೋಡಿ, ಜಾರುವಿನ ಮುಖ ಕೆಂಪೇರುತ್ತ ಬಂತು. “ಅದೆಲ್ಲ ನಿಮಗೇಕೆ?”
“ಸರಕಾರದ ಹುಕುಂ ಆಗಿದೆ.”

“ಸರಕಾರದ ಹುಕುಂ. ನಿಮ್ಮನ್ನು ಊರಲ್ಲಿಟ್ಟರೆ ಕ್ಷೇಮವಿಲ್ಲ. ಮೊದಲೇ ತೀರ್ವೆ ಜಾಸ್ತಿ ಮಾಡಿದ್ದಾರೆ. ಈಗ ಜನ ಲೆಕ್ಕಮಾಡಿ ಪುನಃ ತೀರ್ವೆ ಏರಿಸಲಿಕ್ಕೆ ಬಂದದ್ದೊ? ನಡೀ ಇಲ್ಲಿಂದ! ನಮ್ಮಲ್ಲಿ ಯಾರೂ ಇಲ್ಲವೆಂದು ಬರಿ. ಸರಕಾರವನ್ನು ದೂರಿ ಪ್ರಯೋಜನ ಇಲ್ಲ. ಇಲ್ಲಿಂದ ಬರೆದು ಕಳುಹಿಸಿ ಒಂದಕ್ಕೆ ಎರಡು ಮಾಡುವುದು ನೀವೇ. ಹಳ್ಳಿಯವನಾದರೂ ನನ್ನಲ್ಲಿ ನಿಮ್ಮ ಠಕ್ಕು ನಡೆಯಲಿಕ್ಕಿಲ್ಲ. ಬಂದ ಹಾದಿ ಹಿಡಿದು ಹೋಗು. ಉಗ್ರಾಣಿ – ಊರಿಗೆ ಮಾರಿ!”

ಎಡೆಬಿಡದೆ ಸಿಟ್ಟಿನಿಂದ ಮಾತಾಡುವ ಅವನನ್ನು ಸಮಾಧಾನಪಡಿಸಿ ಲೆಕ್ಕ ತೆಗೆದುಕೊಂಡು ಹೋಗಬೇಕಾದರೆ ರಂಗಪ್ಪನಿಗೆ ಮೂಗುಬ್ಬಸವಾಯಿತು.

ನಮ್ಮ ಗ್ರಾಮದಲ್ಲಿ ಜಾನಕಿ ಎಂಬ ಹೆಂಗಸೊಬ್ಬಳು ಇದ್ದಾಳೆ. ಅವಳ ಗಂಡ ತೀರಿಹೋಗಿ ಎಷ್ಟೋ ಕಾಲ ಆಗಿಹೋಯಿತು. ಅವಳು ಪುನಃ ಮದುವೆಯಾಗಲೇ ಇಲ್ಲ. ಅವಳು ಒಂದು ಮಗು ಹಡೆದಿರುವ ವರ್ತಮಾನ ನಮ್ಮ ರಂಗಪ್ಪನ ಕಿವಿಗೆ ಬತ್ತು. ಕೂಡಲೇ ಜನನವನ್ನು ರಿಜಿಸ್ತ್ರಿಯಲ್ಲಿ ದಾಖಲು ಮಾಡುವುದಕ್ಕಾಗಿ ಅವನು ಅಲ್ಲಿಗೆ ಹೋದನು.

ಜಾನಕಿ ಚಾವಡಿಯ ಒಂದು ಅರೆಯಲ್ಲಿ ಮಲಗಿಕೊಂಡಿದ್ದಳು. ರಂಗಪ್ಪನು ಅವಳೊಡನೆ ಮಾತಾಡತೊಡಗಿದನು.

“ಹೆತ್ತು ಎಷ್ಟು ದಿವಸವಾಯಿತು?”
“ಇಂದಿಗೆ ಹನ್ನೆರಡು ದಿನವಾಯಿತು”
“ಮಗು ಗಂಡೊ? ಹೆಣ್ಣೋ? ”
“ಹೆಣ್ಣು”
“ಹೆಸರು ಇಟ್ಟದೋ?”
“ಹೌದು, ಸುನೀತ ಅಂತ”
“ತಾಯಿಯ ಹೆಸರು”
“ಜಾನಕಿ”
“ತಂದೆಯ ಹೆಸರು?”
ಉತ್ತರ ಬರಲಿಲ್ಲ. ಇನ್ನೊಮ್ಮೆ ಕೇಳಿದನು. ನಿರುತ್ತರ.
“ತಂದೆಯ ಹೆಸರು ಏನೂಂತ ಬರೆಯೋದು?”
“ಅದು ಬರೆಯೋದು ಬೇಡ ದೇವ್ರೂ”
“ಅದು ಹೇಗಾಗುತ್ತದೆ? ತಂದೆಯಿಲ್ಲದೆ ಮಗು ಎಲ್ಲಿಂದ ಬಂತು ಅಂತ ಕೇಳಿದ್ರೆ ನಾನೇನು ಹೇಳಲಿ ಜಾನಕಿ. ನಾನು ಹಾಗೆಯೇ ರಿಪೋರ್ಟು ಮಾಡುತ್ತೇನೆ”
“ಯಾರದೇ ಆಗಲಿ, ಒಂದು ಹೆಸರು ಹಾಕಿಬಿಡಿರಿ”, ಹೀಗೆ ಹೇಳಿದವಳೆ ಒಂದು ಸಣ್ಣ ಹುಡುಗಿಯ ಹತ್ತಿರ ಎರಡು ರೂಪಾಯಿಗಳನ್ನು ರಂಗಪ್ಪನಿಗೆ ಕೊಟ್ಟು ಕಳುಹಿಸಿದಳು. ರಂಗಪ್ಪನು ಅದನ್ನು ಜೇಬಿನೊಳಗೆ ಸುರುವಿ,
“ಇನ್ನು ನಿಮ್ಮಲ್ಲಿ ಗರ್ಭಿಣಿಯರು ಇದ್ದಾರೋ?”
“ಹೌದು, ನನ್ನ ತಂಗಿ.”
“ಗರ್ಭಕ್ಕೆ ಎಷ್ಟು ತಿಂಗಳಾಯಿತು?”
“ಆರು”
“ಹಾಗಾದರೆ ಮೂರು ತಿಂಗಳ ಮೇಲೆ ಬರುತ್ತೇನೆ”
“ಹೂಂ”

ಹೀಗೆ ಜಾನಕಿಯನ್ನು ಹೆದರಿಸಿ, ರಂಗಪ್ಪನು ಎರಡು ರೂಪಾಯಿ ಲಂಚ ತೆಗೆದುಕೊಂಡ ಸಂಗತಿ ನಮ್ಮ ಊರವರಿಗೆಲ್ಲ ಗೊತ್ತಿದೆ.

ರಂಗಪ್ಪನು ವಕೀಲ್ ಕೃಷ್ಣರಾಯರಲ್ಲಿ ಒಮ್ಮೆ ಸಿಕ್ಕಿಬಿದ್ದ ಕಥೆ ಕೇಳಲಿಕ್ಕೆ ತಕ್ಕುದಾಗಿದೆ.

ಕೃಷ್ಣರಾಯರು ಹೊಸತಾಗಿ ಬಂದ ವಕೀಲರು. ಅವರಿಂದ ತೀರ್ವೆ ಹಣ ವಸೂಲಿಗಾಗಿ ಪಟೇಲರು ಇನ್ನೊಬ್ಬ ಉಗ್ರಾಣಿಯ ಜತೆಗೆ ರಂಗಪ್ಪನನ್ನು ಕಳುಹಿಸಿದರು. ವಕೀಲರು ಇವನ ಹಿಂದೆ ಇನ್ನೊಬ್ಬ ಉಗ್ರಾಣಿ ಇದ್ದುದರಿಂದ ಇವನನ್ನು ಪಟೇಲರೆಂದೇ ತಿಳಿದು – “ಪಟೇಲರೆ – ತೀರ್ವೆ ಹಣ ಎಷ್ಟಾಗುತ್ತದೆ?” ಎಂದು ಕೇಳಿದರು.

ರಂಗಪ್ಪ : “ಹತ್ತು ರೂಪಾಯಿ ನಾಲ್ಕಾಣೆ, ವಕೀಲರೇ”
“ನಿಮ್ಮ ಗ್ರಾಮಕ್ಕೆ ಒಟ್ಟು ಎಷ್ಟು ತೀರ್ವೆ ಇದೆ?”
“ಸಾಧಾರಣ ನಾಲ್ಕು ಸಾವಿರ ಸ್ವಾಮಿ!”
“ವಸೂಲಿ ಕೆಲಸ ಕಷ್ಟ ಆಗುತ್ತದೋ?”
“ಏನು ಮಾಡುವುದು ಸ್ವಾಮಿ! ಕಷ್ಟ ಅಂತ ಬಿಡಲಿಕ್ಕೆ ಆಗುತ್ತದೋ?”

ವಕೀಲರು ತೀರ್ವೆ ಹಣ ಕೊಟ್ಟರು; ಸೇದಲಿಕ್ಕೆ ಸಿಗರೇಟು ಕೊಟ್ಟರು. ರಂಗಪ್ಪನು ಮಾತಾಡದೆ ಹೊರಟು ಹೋದನು.

•••

ವಕೀಲ್ ಕೃಷ್ಣರಾಯರಿಗೆ ಮಾರನೆ ವರ್ಷಕ್ಕೆನೇ ಮಣೆಗಾರರ ಕೆಲಸವಾಯಿತು. ಮೂಡುಬೈಲು ಗ್ರಾಮದಲ್ಲಿ ಒಂದು ಸ್ಥಳ ತನಿಖೆಗೆ ತಾನು ಬರುವುದಾಗಿಯೂ, ಅಲ್ಲಿಗೆ ಉಗ್ರಾಣಿಯನ್ನು ಅಳತೆಕೋಲು ಕೊಟ್ಟು ಕಳುಹಿಸಬೇಕಾಗಿಯೂ ಗ್ರಾಮದ ಪಟೇಲರಿಗೆ ಒಂದು ಹುಕುಂ ಕಳುಹಿಸಿದರು. ರಂಗಪ್ಪನು ಪಟೇಲರ ಹೇಳಿಕೆಯಂತೆ ಮಣೆಗಾರರ ಬರೋಣವನ್ನು ಹಾರೈಸುತ್ತ ಬೆಳಿಗ್ಗೆ ಆ ಸ್ಥಳದಲ್ಲಿ ಅಳತೆಕೋಲು ಪುಸ್ತಕ ಹಿಡಿದು ನಿಂತಿದ್ದನು. ಅಷ್ಟರಲ್ಲಿ ಮಣೆಗಾರರ ಸವಾರಿಯಾಯಿತು. ಅವರು ರಂಗಪ್ಪನನ್ನು ನೋಡಿ, “ಏನು ಪಟೇಲರೆ, ಉಗ್ರಾಣಿಯಲ್ಲಿ? ಎಂದು ಕೇಳಿದರು.

“ನಾನೇ ಸ್ವಾಮಿ, ಉಗ್ರಾಣ.”

ಇದನ್ನು ಕೇಳಿ ಮಣೆಗಾರರಿಗೆ ನಿಜಾಂಶವು ಗೊತ್ತಾಯಿತು. ಅವರು ನಗುತ್ತ “ನಿಮಗೆ ಪಟೇಲಿಕೆ ಹೋಗಿ ಉಗ್ರಾಣಿ ಕೆಲಸ ಆದದ್ದು ಯಾವಾಗ?” ಎಂದು ಕೇಳಿದರು.

ರಂಗಪ್ಪನ ಮುಖ ಕಪ್ಪಾಯಿತು.

(ರಾಷ್ಟ್ರಬಂಧು : 27. 01. 1936)