“ನೀನೊಂದು ಸಣ್ಣ ಮಗು! ನಿನಗೇನೂ ಗೊತ್ತಿಲ್ಲ. ನಾನು ಕಲಿಸುತ್ತೇನೆ! ನಾನು ಕಲಿಸಿದ್ದನ್ನು ಕಲಿಯದೆ ಚಂಡಿ ಹಿಡಿಯಬೇಡ!” ಎನ್ನುತ್ತಾ ಕೆಲೆನ್ ಕಿಲಕಿಲನೇ ನಕ್ಕಳು. ಅವಳ ಬಿಳಿಯ ಬಾಹುಗಳು ಬಾಬುರಾಯನ ಕಂಠವನ್ನು ಬಿಗಿದವು. ತಾನು ಪಾಪವನ್ನು ಮಾಡುತ್ತಿದ್ದೇನೆ, ತನ್ನನ್ನು ಮಗನಂತೆ ನೋಡುತ್ತಿರುವ ಧೊರೆಗೆ ದ್ರೋಹವನ್ನು ಬಗೆಯುತ್ತಿದ್ದೇನೆ – ಎಂಬ ನೋವು ಬಾಬುರಾಯನ ಹೃದಯದಲ್ಲಿತ್ತು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವಓಬೀರಾಯನ ಕಾಲದ ಕತೆಗಳುಸರಣಿಯಲ್ಲಿ ಎಂ.ವಿ ಹೆಗಡೆಯವರು ಬರೆದ ಕಥೆ ದೊರ್ಸಾನಿ.

 

ಕಾರ್ನಳ್ಳಿ ದೊರೆ ಬೆನೆಟರು ಯುರೋಪಿನಿಂದ ಬಂದು ಕಡಿಮೆಯೆಂದರೆ ಹದಿನೆಂಟು ವರುಷಗಳಾದರೂ ಆಗಿರಬೇಕು. ಅವರಿಗೀಗ ಕಾರ್ನಳ್ಳಿಯಲ್ಲೊಂದು, ಮಾವರೆಯಲ್ಲೊಂದು – ಹೀಗೆ ಎರಡು ದೊಡ್ಡ ಕಾಫಿ ತೋಟಗಳಿವೆ. ಎರಡರಲ್ಲಿ ಒಟ್ಟಿಗೆ ಸುಮಾರು 800 ಕೂಲಿಯಾಳುಗಳು ಕೆಲಸಮಾಡುತ್ತಾರೆ. ಆಳು ಕಟ್ಟುವ ಒಬ್ಬೊಬ್ಬನಿಗೆ ಒಂದು ಸಾವಿರದಿಂದ ಆರು ಸಾವಿರದವರೆಗೂ ಕೊಟ್ಟು, ಅವರ ಸುಮಾರು 70 ಸಾವಿರ ರೂಪಾಯಿಗಳು ಅಡ್ವಾನ್ಸಾಗಿ ದಕ್ಷಿಣ ಕನ್ನಡಕ್ಕಿಳಿದವು – ಪ್ರತಿಯಾಗಿ ದಕ್ಷಿಣ ಕನ್ನಡದಿಂದ ಆ 800 ಆಳುಗಳು ಗಟ್ಟಹತ್ತಿದರು.

ಬೆನೆಟ್ ದೊರೆ ಯುರೋಪಿನಿಂದ ಇಲ್ಲಿ ಬಂದು ನಿಂತ ನಂತರ, ಇಂದಿಗೆ ಮೂರು ವರುಷಗಳಿಗೆ ಹಿಂದೆ ಒಮ್ಮೆ ಮಾತ್ರ ಮಾತೃಭೂಮಿಗೆ ಹೋಗಿ ಬಂದಿದ್ದರು. ಹಿಂದಿರುಗುವಾಗ ಮದುವೆ ಮಾಡಿಕೊಂಡು ದೊರೆಸಾನಿಯೊಟ್ಟಿಗೆ ಬಂದಿದ್ದರು. ಬಾಬುರಾಯ ಈಗ ಕಾರ್ನಳ್ಳಿ ತೋಟದ ಮುನ್ಶಿ. ಮಿ| ಬೆನೆಟರಿಗೆ ಬಾಬುರಾಯನ ತಂದೆಯಷ್ಟು ಅಚ್ಚುಮೆಚ್ಚಿನ ಬಂಟ ಇನ್ನೊಬ್ಬನಿರಲಿಲ್ಲ. ಕಾರ್ನಳ್ಳಿ ತೋಟದ ಎಲ್ಲಾ ಮೇಲ್ವಿಚಾರಣೆಯನ್ನು ತನ್ನ ಅತ್ಯಂತ ನಂಬಿಗಸ್ಥನಾದ ವಾಸುರಾಯ (ಬಾಬುರಾಯನ ತಂದೆ)ನ ವಶಕ್ಕೆ ಕೊಟ್ಟಿದ್ದರು ದೊರೆ. ಅವ ಕಳೆದ ವರುಷ ತೀರಿಹೋದಾಗ ಬೆನೆಟರು ಆ ದಿನವಿಡೀ ಹೇಟು ಇಡದೆ ಕಣ್ಣೀರು ಸುರಿಸಿದ್ದರು. ಕಾರ್ನಳ್ಳಿ ತೋಟದಲ್ಲಿ ವಾಸುರಾಯನ 300 ಆಳುಗಳಿದ್ದವು. ತಂದೆ ತೀರಿದ ನಂತರ ಬಾಬುರಾಯನು ಕಾರ್ನಳ್ಳಿಗೆ ಬಂದು ನಿಂತ. ವಾಸುರಾಯನ ಸ್ಥಾನದಲ್ಲಿ ಮನ್ಶಿಯಾಗಿ ಕಾರ್ನಳ್ಳಿ ತೋಟದ ಕೆಲಸದ ಮೇಲ್ವಿಚಾರಣೆಯನ್ನು ವಹಿಸಿಕೊಂಡ.

ಬಿಳಿ ಜನರ ಖಾಸಗೀ ಮೈತ್ರಿಯು ಬಹಳ ನಿರ್ಮಲವಾದುದು. ಬಾಬುರಾಯನಿಗೆ ತೋಟದ ಅನುಭವ ಕಡಿಮೆ. ಈವರೆಗೂ ಮನೆಯಲ್ಲಿ ಉಂಡು ತಿಂದು ಸುಖದಲ್ಲಿದ್ದವ. ತಂದೆಯೊಡನೆ ಒಂದೆರಡು ಸಲ ಗಟ್ಟ ನೋಡಲು ಕಾರ್ನಳ್ಳಿಗೇನೋ ಬಂದಿದ್ದ. ಅವನ ಆಗಿನ ಇತರ ಸಮಯದಂತೆ ಅದೂ ವಿನೋದದಲ್ಲಿಯೋ ವಿಹಾರದಲ್ಲಿಯೋ ಕಳೆದುಹೋಗಿತ್ತು. ಆಗ ಬೆನೆಟರು ಹುಡುಗನ ಬೆನ್ನು ತಟ್ಟಿ ಒಂದು ಸಣ್ಣ ಪಿಸ್ತೂಲನ್ನು ಇನಾಮು ಕೊಟ್ಟಿದ್ದರು. ತರುಣ ಬಾಬುವಿಗೆ ಅಷ್ಟರಿಂದಲೇ ಬಹಳ ಗೌರವ, ದೊರೆಯ ಮೇಲೆ.  ಈಗಲಂತೂ ಬೆನಟರ ಕೈಕೆಳಗೆ ಮುನ್ಶಿಯಾಗಿ ನಿಂತಿದ್ದಾನೆ. ಬೆನೆಟರು ಅವನನ್ನು ಪುತ್ರವಾತ್ಸಲ್ಯದಿಂದ ನೋಡುತ್ತಿದ್ದಾರೆ. ದೊರೆಯ ಬಂಗಲೆಯ ಸಮೀಪದ ಚಿಕ್ಕದೊಂದು ಬಂಗಲೆಯನ್ನು ಧರ್ಮಾರ್ಥವಾಗಿ ಬಾಬುವಿನ ವಾಸಕ್ಕೆಂದು ಬಿಟ್ಟಿದ್ದಾರೆ.

ಮರುದಿನ ಬೆನೆಟ್ ದೊರೆಗೆ ಅಲ್ಲಿದ್ದ ತನ್ನ ತೋಟದ ತನಖಿ ಮಾಡಿ ಬರಲು ಮಾವರೆಗೆ ಹೋಗಬೇಕಾಗಿತ್ತು. ತೋಟದ ಕೆಲಸ, ಲೆಕ್ಕಪತ್ರ, ಬಂಗಲೆ ದುರಸ್ತಿ – ಇವೆಲ್ಲವನ್ನು ಪರೀಕ್ಷಿಸಲು ಹದಿನೈದು ದಿನಗಳಾದರೂ ಬೇಕಾಗಬಹುದು. ಆ ರಾತ್ರಿ ಬಾಬುರಾಯನನ್ನು ತನ್ನಲ್ಲಿಗೆ ಡಿನ್ನರಿಗೆ ಆಮಂತ್ರಿಸಿದರು ದೊರೆ. ಬಾಬುರಾಯ ತುಸು ನಾಚಿಕೆಯ ಪ್ರಕೃತಿಯವ. ಬೆನೆಟರಿಗೆ ಹಿಂದೂ ಜನರ ಸ್ವಭಾವ, ರೀತಿ ನೀತಿಗಳ ಅರಿವಿತ್ತು. ಅಷ್ಟೇ ಏಕೆ? ಹದಿನೆಂಟು ವರುಷಗಳ ಸಮ್ಮಿಲನದ ಪರಿಣಾಮವಾಗಿ ಅವರಲ್ಲಿ ಹಿಂದೂ ಮರ್ಜಿಯೇ ಬಹಳ ಮಟ್ಟಿಗಿತ್ತು. ಆದ್ದರಿಂದ ಸಾಮಾನ್ಯ ಮಟ್ಟದ ಸಂಕೋಚ ಮನೋವೃತ್ತಿಯನ್ನು ಅವರು ಕ್ಷಮಿಸಬಲ್ಲರು. ನಮ್ಮ ಬಾಬುರಾಯನಲ್ಲಿ ಸಂಕೋಚ ಮಾತ್ರವಲ್ಲ, ಮುಖಹೇಡಿತನವೂ ಇತ್ತು. ಇದು ದೊರೆಗಳವರಿಗೂ ದೊರೆಸಾನಿಗಳವರಿಗೂ ಗೊತ್ತು. ದೊರೆ ಮತ್ತು ಧೊರೆಸಾನಿ ಈ ಸಂಗತಿಯನ್ನು ತಮ್ಮೊಳಗೆ ಮಾತಾಡಿಕೊಂಡು ಬಾಬುರಾಯನಲ್ಲಿ ಸಲಿಗೆಯನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದಲೇ ಆ ದಿನ ಡಿನ್ನರಿಗೆ ಆಮಂತ್ರಿಸಿದ್ದರು.

ಮೂವರೂ ಡಿನ್ನರಿಗೆ ಕುಳಿತರು. ಅಡಿಗೆ ಹೆಂಗಸು ಮಿಶ್ಶನಿನವಳು. ದೊರೆಗಳಂತೂ ಸ್ವರಭೇದಗಳನ್ನು ಬಿಟ್ಟರೆ ಕನ್ನಡ ತುಳು ಭಾಷೆಗಳನ್ನ ಸ್ವಚ್ಛವಾಗಿ ಮಾತಾಡಬಲ್ಲರು. ದೊರೆಸಾನಿಯೂ ಮೂರು ವರ್ಷಗಳಿಂದ ದೊರೆಯೊಡನೆಯೂ ಅಡಿಗೆಯವಳೊಡನೆಯೂ ತುಳು ಕನ್ನಡ ಮಾತಾಡುವ ನಿರ್ಧಾರ ಮಾಡಿ ಇಷ್ಟರಲ್ಲೇ ಕಲಿತಿದ್ದಳು. ಸರಿ, ಊಟದ ವೇಳೆ ಬಿಳಿ ದಂಪತಿಗಳ ತಮಾಷೆಗೆ ಪ್ರಾರಂಭವಾಯಿತು. ಬಾಬುರಾವ್ ಎಲ್ಲಕ್ಕೂ ನಮ್ರತೆಯನ್ನು ತೋರಿಸುತ್ತಾ ಬಂದ. ತಟ್ಟೆಯನ್ನು ಪೂರ್ತಿ ಖಾಲಿ ಮಾಡುವುದಕ್ಕೂ ಬಾಬುವಿಗೆ ಸಂಕೋಚ. ಮಿಸಿಸ್ ಬೆನೆಟ್ “ತೆ-ಗೆ-ದು-ಕೋ, ತಿನ್ನು – ಅಷ್ಟೇ ತಿನ್ನು ಯಾಕೆ?” ಎಂದು ರಾಗ ಎಳೆದಳು. “ನನ್ನ ಹುಡುಗಾ! ತಿನ್ನು-ತಿನ್ನು-ನಾಚಿಕೆ ಮಾಡಬೇಡ” ಎಂದರು ದೊರೆ. ಬಾಬು ನಾಚಿಕೆಗೊಂಡ. ಅವ ಚಮಚಾ ಹಿಡಿಯುವಾಗ, ಕೂರಸಿಗೆ ಕೈ ಹಾಕುವವನಂತೆ ಬಹಳ ಜಾಗ್ರತೆ ತೆಗೆದುಕೊಳ್ಳುತಿದ್ದ. “ಕೆಲೆನ್ ಹೇಳುತ್ತಾಳೆ – ನೀನು ಯಾವಾಗಲೂ ನಾಚಿಕೆ ತೋರಿಸುತ್ತೀ ಅಂತೆ. ಮಾತಾಡುವದೇ ಇಲ್ಲವಂತೆ. ಯಾಕೆ ಹಾಗೆ ಮಾಡಬೇಕು?” ಬೆನೆಟ್ ದೊರೆ ಕೇಳಿದರು. ಆ ಮಾತು ಕೇಳುವಾಗಲೂ ಬಾಬುರಾಯನಿಗೆ ನಾಚುಗೆ!

“ನೋಡು, ನನಗೆ ನಾಳೆ ಮಾವರೆಗೆ ಹೋಗಬೇಕು. ಅಲ್ಲಿ ಇನ್ಸ್ ಪೆಕ್ಷನ್ ಮುಗಿಯುವಾಗ ಹದಿನೈದು ದಿನ ಹಿಡಿಯಬಹುದು. ನೀನು ನನ್ನ ಬಂಗಲೆಯನ್ನು ನೋಡಿಕೊಂಡಿರಬೇಕು. ಕೆಲೆನಳು ಅಲ್ಲಿಗೆ ಬರುವುದಿಲ್ಲ. ಅವಳಿಗೆ ಹುಲಿಯೆಂದರೆ ತುಂಬಾ ಹೆದರಿಕೆ. ಅವಳನ್ನೂ ನೋಡಿಕೊ! ನೀನು ಧಾಂಡಿಗನಿದ್ದೀಯಾ! ಹುಡುಗಾ, ಹುಶಾರಿರಬೇಕು.”
ದೊರೆಯ ಮಾತಿನಲ್ಲಿ ಸಲುಗೆ – ವಿನೋದವಿತ್ತು. ಬಾಬು ನಮ್ರತೆಯಿಂದ “ಆಯ್ತು ಸಾರ್!” ಎಂದ.
ಊಟ ತೀರಿತು. ರಾತ್ರಿ ಬಹಳ ಹೊತ್ತಿನವರೆಗೆ ದಂಪತಿಗಳು ಮಗುವನ್ನು ಮಾತಾಡಿಸುವಂತೆ ಬಾಬುರಾಯನನ್ನು ಮಾತಾಡಿಸಿದರು. ಉತ್ತರ ಕೊಡಲೇಬೇಕಾಗಿ ಬಂದಾಗ ‘ಹೌದು ಸಾರ್’ ‘ಅಲ್ಲ ಸಾರ್’ ‘ಆಯ್ತು ಸಾರ್’ ಎನ್ನುತ್ತಾನೆ ಬಾಬು; ಮಿಕ್ಕವುಗಳಿಗೆಲ್ಲಾ ತಲೆಯಡಿಗಿಟ್ಟು, ಎಡ ಬಲ ನೋಡಿ ಮುಗುಳು ನಗುತ್ತಾನೆ ಮಾತ್ರ. ದೊರೆಸಾನಿಯ ಯಾವ ತಮಾಷೆಗೂ ಅವನ ಉತ್ತರವಿಲ್ಲ – ವಿಧೇಯತೆಯ ಪ್ರದರ್ಶನ ಮಾತ್ರ.
ಬಾಬುವಿಗೂ ದೊರೆಸಾನಿಗೂ ಹೇಳುವದನ್ನೆಲ್ಲಾ ಹೇಳಿ ಮರುದಿನ ಮುಂಜಾನೆ ಬೆನೆಟ್ ದೊರೆಗಳು ಮಾವರೆಗೆ ಹೊರಟುಹೋದರು.

“ಇಲ್ಲಿ ಹೆಣ್ಣು ಹುಲಿಯೇನೂ ಇಲ್ಲವೆಂದೂ, ಹೆದರುವದು ಬೇಡವೆಂದೂ ಅವನಿಗೆ ಹೇಳು. ಅವನಿಗೆ ಊಟಕ್ಕೆ ಬರಲಿಕ್ಕೆ ಹೇಳು”- ಮರುದಿನ ಸಂಜೆ ಧೊರ್ಸಾನಿ ಅಡಿಗೆಯವಳೊಡನೆ ರಾಗ ಎಳೆಯುವದು ತನ್ನ ಬಿಡಾರದಲ್ಲಿದ್ದ ಬಾಬುವಿಗೆ ಕೇಳಿಸಿತು. ಆ ಮಾತಿನ ಅರ್ಥವಾದುದರಿಂದ ಅಡಿಗೆಯವಳು ಒಡತಿಯ ಮೊಗ ನೋಡಿ ನಕ್ಕಳು.

ಉತ್ತರ ಕೊಡಲೇಬೇಕಾಗಿ ಬಂದಾಗ ‘ಹೌದು ಸಾರ್’ ‘ಅಲ್ಲ ಸಾರ್’ ‘ಆಯ್ತು ಸಾರ್’ ಎನ್ನುತ್ತಾನೆ ಬಾಬು; ಮಿಕ್ಕವುಗಳಿಗೆಲ್ಲಾ ತಲೆಯಡಿಗಿಟ್ಟು, ಎಡ ಬಲ ನೋಡಿ ಮುಗುಳು ನಗುತ್ತಾನೆ ಮಾತ್ರ. ದೊರೆಸಾನಿಯ ಯಾವ ತಮಾಷೆಗೂ ಅವನ ಉತ್ತರವಿಲ್ಲ – ವಿಧೇಯತೆಯ ಪ್ರದರ್ಶನ ಮಾತ್ರ.

ಬಾಬು ದೊರೆಯ ಬಂಗಲೆಗೆ ಬಂದ. ಅಡಿಗೆಯವಳು ತೋರಿಸಿದ ಟೇಬಲಿನ ಮುಂದೆ ಕುಳಿತ; ಮೇಜಿನ ಮೇಲೆ ತಟ್ಟೆಗಳೂ ಬಂದು ಕುಳಿತವು; ಧೊರ್ಸಾನಿಯೂ ಬಂದು ಹತ್ತಿರದಲ್ಲಿ ನಿಂತಳು. ಕೊನೆಯ ಸಂಗತಿಯು ಬಾಬರಾಯನ ನಾಚುಗೆಯನ್ನು ಹೆಚ್ಚಿಸಿತು. ಬಾಬುರಾಯ ಕಷ್ಟದಿಂದ ತಿನ್ನುತ್ತಿದ್ದ. ತಿಂದಷ್ಟೂ ಕೆಲೆನಳ “ತಿನ್ನೂ” ಕೋರೆ ರಾಗ! “ಕ್ರಾಪ್ ಬಾಚಿಲ್ಲವೇಕೆ?” ಮಧ್ಯ ಮಧ್ಯದಲ್ಲಿ ಇಂತಹ ಅಡ್ಡ ಸವಾಲು. ಬಾಬು ಆಗಾಗ ಧೊರ್ಸಾನಿಯ ಮುಖ ನೋಡಲೇಬೇಕಾಗುತ್ತಿತ್ತು. ಆ ಬೆಕ್ಕು ಕಣ್ಣುಗಳಲ್ಲಿ ಒಂದು ಪ್ರಕಾಶವೇನೋ ಇತ್ತು. ಅದರರ್ಥವೇನೆಂದು ಈ ಕರಿಯವನಿಗೇನು ಗೊತ್ತಾದೀತು? ಮುಖದಲ್ಲೊಂದು ಭಾವವಿತ್ತು; ಬಾಬುನಂತಹ ಕರಿ ಯುವಕರು ಹುಡುಗಿಯರನ್ನು ಕಂಡಾಗ ತೋರುವ ಭಾವವನ್ನೇ ತೋರಿಸುತ್ತಿದ್ದಳು ಅವನಿದಿರು ಬಿಳಿ ಹುಡುಗಿ. “ಟಾಯಿಮೆಷ್ಟಾಯಿತು?” ಎನ್ನುತ್ತಾ ಬಾಬುವಿನ ಎಡಕೈಯನ್ನೆತ್ತಿ ನೋಡಿದಳು ಕೆಲೆನ್. ಬಾಬುನ ಕೈ ಅವಳೆತ್ತಿದವರೆಗೂ ಏರಿತು – ಅವಳು ಕೆಳಗಿಟ್ಟಲ್ಲಿ ಕೊರಡಿನಂತೆ ಬಿತ್ತು ! ಊಟವಾದ ಮೇಲೆ ತನ್ನ ಬಿಡಾರಕ್ಕೆ ಹೋಗಿ ಬಾಬು ತಪಸ್ವಿಯಂತೆ ಕುಳಿತುಕೊಂಡ.

*****

ಕೊಠಡಿಯ ಬಾಗಿಲು ದೂಡಿದಂತಾಯಿತು. ಕೆಲೆನ ಒಳಗೆ ಬಂದಳು. ಬಾಬುವಿಗೆ ಇದೊಂದು ಆಕಸ್ಮಿಕ ಘಟನೆ. ಧೊರ್ಸಾನಿ ಹಿಂದೆಯೂ ಇವನ ಬಿಡಾರಕ್ಕೆ ಬಂದುದುಂಟು. ಎಲ್ಲವನ್ನೂ ನೋಡಿಕೊಂಡು ಹೋದುದುಂಟು. ಆದರೆ ರಾತ್ರಿ ಹೊತ್ತು ಬಾಗಿಲು ದೂಡಿಕೊಂಡು ಒಳಬಂದಳಲ್ಲಾ – ಅದು ವಿಶೇಷ. ಅವನು ಅವಳನ್ನು ಬರಮಾಡಿಕೊಳ್ಳುವದಕ್ಕೂ ಮರೆತು ಬೆಪ್ಪನಂತೆ ಇದ್ದ. ಹೀಗೆ ಅವ ದಂಗುಬಡೆದು ಹೋದುದರಲ್ಲಿ ಧೊರ್ಸಾನಿ ಯಾವ ವಿಶೇಷವನ್ನೂ ಕಾಣಲಿಲ್ಲ. ತಿಂಡಿಯ ಚಮಚಾ ಹಿಡಿಯುವಾಗ ಅಳುಕಿದ ಹುಡುಗನ ಅಂಜಿಕೆಗೂ ಒಂದು ಬೆಲೆಯಿದ್ದೀತೆ? ಅವಳು ನಗುತ್ತಾ “ಮಲಗಲಿಲ್ಲಾ ನೀನು?” ಎಂದವಳೇ ಬಾಬುನ ಹತ್ತಿರ ಬಂದು ಕುಳಿತಳು. ಬಾಬುರಾಯನಲ್ಲೀಗ ನಿತ್ಯದ ಸಂಕೋಚ ಮತ್ತು ಒಂದು ಹೊಸ ಅನುಮಾನ ಹುಟ್ಟಿತು. “ಯಾಕೆ ಮಾತಾಡುವದಿಲ್ಲ?” ಎಂದು ಇನ್ನಷ್ಟು ಒತ್ತಿ ಕುಳಿತು ಮಗುವಿನೊಡನಾಡುವವಳಂತೆ ಅವನ ಗಲ್ಲವನ್ನು ತಿರುಗಿಸಿ ಹಿಡಿದು ಕೇಳಿದಳು.

ತರುಣ ಬಾಬುವಿನಲ್ಲಿದ್ದ ಸಂಕೋಚತ್ವವು ಘನತೆಯದು. ಅವನ ಅಳುಕೆಂಬುದು ಹೆಚ್ಚಾಗಿ ಪಾಪದ ಹಾದಿಯ ತೀರಾ ಮುಂಭಾಗದಲ್ಲಿ ಎದ್ದು ನಿಲ್ಲುತ್ತಿತ್ತು. ಅದು ಅಷ್ಟು ಮುಂಭಾಗದಲ್ಲಿ ತೋರುವುದು ತಪ್ಪಾಗಿರಬಹುದು; ಅದನ್ನು ಹಿಂಭಾಗಕ್ಕೆ ದೂಡುವುದು ಅಗತ್ಯವೆನಿಸಿರಬಹುದು. ಆದರೆ ಅದು ತಡೆಗಟ್ಟಿ ನಿಲ್ಲುವ ಹಾದಿ ಪಾಪದ್ದೆಂಬುದೂ ಅದನ್ನು ಪೂರ್ಣ ಕಿತ್ತೊಗೆದು ಮುಂದುವರಿಸುವದೆಂದರೆ ನರಕದ ಕಡೆಗೆಂಬುದೂ ಸತ್ಯ. ಬಾಬುರಾವ್ ಗಂಭೀರವಾಗಿ ಹೇಳಿದ –
“ನೀವೀಗ ಬಂಗಲೆಗೆ ಹೋಗಿ. ದೊರೆಗಳಿಲ್ಲದ ವೇಳೆ ಇಷ್ಟು ಸಲಿಗೆಯಿಂದ ವರ್ತಿಸುವುದು ಉಚಿತವಲ್ಲ.”
“ಹೋ! ಅದರಲ್ಲೇನೂ ಇಲ್ಲ. ಅವರಿನ್ನು ಹದಿನೈದು ದಿವಸ ಬರುವುದಿಲ್ಲ. ಏಕೆ ಹೆದರಬೇಕು? ಹುಚ್ಚು ಹುಡುಗಾ!” ಧೊರ್ಸಾನಿ ಅವನ ಕ್ರಾಪನ್ನು ಸವರುತ್ತಾ ಮುಖನೋಡಿ ಮುತ್ತಿಟ್ಟಳು.
ಬಾಬುರಾವ್ ಮೌನ.

ಎದೆಯರ್ಧದ ಕೆಳಗೆ, ಅರ್ಧ ತೊಡೆಯ ಮೇಲೆ ಮಾತ್ರವಿದ್ದ ಪೋಷಾಕಿನಲ್ಲಿದ್ದಳು ಧೊರೆಸಾನಿ.
“ನೀನೊಂದು ಸಣ್ಣ ಮಗು! ನಿನಗೇನೂ ಗೊತ್ತಿಲ್ಲ. ನಾನು ಕಲಿಸುತ್ತೇನೆ! ನಾನು ಕಲಿಸಿದ್ದನ್ನು ಕಲಿಯದೆ ಚಂಡಿ ಹಿಡಿಯಬೇಡ!” ಎನ್ನುತ್ತಾ ಕೆಲೆನ್ ಕಿಲಕಿಲನೇ ನಕ್ಕಳು. ಅವಳ ಬಿಳಿಯ ಬಾಹುಗಳು ಬಾಬುರಾಯನ ಕಂಠವನ್ನು ಬಿಗಿದವು. ತಾನು ಪಾಪವನ್ನು ಮಾಡುತ್ತಿದ್ದೇನೆ, ತನ್ನನ್ನು ಮಗನಂತೆ ನೋಡುತ್ತಿರುವ ಧೊರೆಗೆ ದ್ರೋಹವನ್ನು ಬಗೆಯುತ್ತಿದ್ದೇನೆ – ಎಂಬ ನೋವು ಬಾಬುರಾಯನ ಹೃದಯದಲ್ಲಿತ್ತು. ಆದರೆ ಇದ್ದ ನರಕಕ್ಕೆಳೆಯುವದಷ್ಟೇ ಅಲ್ಲ – ನರಕದ ನರಕವನ್ನೇ ಬೇಕಾದರೆ ನಿರ್ಮಿಸಲಿ ಈ ಪಾಪ – ಆ ಪಾಪದಲ್ಲಿಷ್ಟು ಸುಖವಿರುವುದಾದರೆ ಅದಕ್ಕಾಗಿ ನರಕಗಳನ್ನೆಲ್ಲಾ ಅನುಭವಿಸಬಹುದು – ಅನ್ನಿಸಿತು ಆ ಸಮಯದಲ್ಲಿ ರಾಯರಿಗೆ ! ನಾಚುಗೆಯು ಪಾಪಭೀರುತ್ವವು ಅನ್ಯರ ಮೇಲೆ ನುಗ್ಗದಂತೆ ತಡೆಯಬಹುದು- ಅನ್ಯರು ನುಗ್ಗಿ ಬಂದಾಗಲೂ ತಡೆಯುವಷ್ಟು ಶಕ್ತಿ ಅದಕ್ಕೆಲ್ಲಿಂದ? ಬಾಬು ಜಡಭರತನಲ್ಲ; ಆ ವರೆಗೂ ನಳಿತೋಳ ಸ್ಪರ್ಶವಾಗದೆ ಜಡವೇರಿದ್ದ ತರುಣ!

*****

“ಗುಡ್ ನೈಟ್ ಬಾಬು! ಎನೇನೋ ಯೋಚಿಸುತ್ತಾ ಬೇಸರ ಪಟ್ಟುಕೊಳ್ಳಬೇಡ. ಬೆಳಗ್ಗಿನ ಟೀಗೆ ಬಂಗಲೆಗೆ ಬಾ!” ಬಾಗಿಲು ತೆರೆದು ಹೊರಗೆ ಬರುವಾಗ ಧೊರ್ಸಾನಿ ಹೇಳಿದಳು.
ಅದಕ್ಕೂ ಬಾಬುರಾವ್ ಮೌನ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

*****

ಉಳಿದ ಹದಿನಾಲ್ಕು ದಿನಗಳೂ ಕಳೆದವು. ಎಷ್ಟು ಬೇಗನೆ! ಕೆಲೆನಳಿಗೂ ಬಾಬುವಿಗೂ, ದಿನಕ್ಕೆ ಹನ್ನೆರಡೇ ಘಂಟೆಯೆಂದು ತೋರಿರಬೇಕು. ಇಲ್ಲಿ ಕಡಿಮೆಯಾದ ಘಂಟೆಗಳು ಅಲ್ಲಿ ಮಾವರೆಯಲ್ಲಿದ್ದ ಬೆನೆಟ್ ಧೊರೆಗಳ ದಿನಗಳನ್ನು ಕೂಡಿರಬೇಕು. ಧೊರ್ಸಾನಿಯನ್ನು ಹುಲಿ ತಿನ್ನದಂತೆ ನೋಡಲು ಬಾಬುರಾಯನನ್ನು ನೇಮಿಸಿ ಬಂದಿದ್ದನಾದರೂ, ಹುಲಿಗೆ ಧೊರ್ಸಾನಿ ಬೇಕಿದ್ದುದಕ್ಕೂ ಹೆಚ್ಚಾಗಿ ಧೊರೆಗೆ ಧೊರ್ಸಾನಿ ಬೇಕಲ್ಲ! ಅವಳನ್ನೆಷ್ಟು ದಿನ ಅವ ಬಿಟ್ಟಿರಬಲ್ಲನು? ಆದ್ದರಿಂದ ಅಲ್ಲಿಯ ಕೆಲಸವನ್ನು ಅವಸರವಸರದಿಂದ ಮುಗಿಸಿಕೊಂಡು ದೊರೆ ಕಾರ್ನಳ್ಳಿಗೆ ಬಂದ.

ಇಲ್ಲಿ ಎಲ್ಲರೂ ಕ್ಷೇಮ. ಮತ್ತೂ ಸಂತೋಷದ ವಿಷಯವೆಂದರೆ ಬಾಬುರಾಯನ ಸಂಕೋಚವೀಗ ಮಾಯವಾಗಿದೆ, ಕೆಲೆನಳಿಗೂ ತನಗೂ ಯೋಗ್ಯ ಸಂಗಾತಿಗಳಿಲ್ಲವಲ್ಲಾ – ಎಂಬ ಬೇಸರ ಕೂಡಾ ಮುಂದಕ್ಕಿಲ್ಲ.

*****

ಆ ಮೇಲಿನ ದಿನಗಳು ಯಾರಿಗೂ ಬೇಸರವನ್ನೀಯದೆ ಗತಿಸಹತ್ತಿದವು. ಬೆನೆಟ್ ಧೊರೆ ರಾತ್ರಿ ಏಳು ಘಂಟೆಯ ನಂತರ ಬ್ರಾಂಡಿಯ ಮಜಾದಲ್ಲಿರುತ್ತಿದ್ದ; ಮತಿಮರೆಯುತ್ತಿದ್ದ. ಬಾಬುರಾಯನ ರಾತ್ರಿ ಫಲಾಹಾರವೀಗ ಧೊರೆಯ ಬಂಗಲೆಯಲ್ಲಿಯೇ. ಮೆದುಳು ನೆನೆದು ತೂಕಡಿಸುವಾಗ ‘ಹೇ ಹುಡಿ…ಗಾ, ಏ-ನೋ-ಮಾ-ಮಾ-ಮಾ-ತಾಡೋ’ ಎನ್ನುವನು ದೊರೆ. ‘ಅವನ ನಾಚುಗೆಯಿನ್ನೂ ಹೋಗಿಲ್ಲ’ ಎಂದು ಅದಕ್ಕೆ ಸ್ವರ ಕೂಡಿಸಿ ಪ್ರೀತಿಯ ಬಾಬುವನ್ನು ನೋಡಿ ಕಣ್ಣಣಕಿಸುವಳು ಕೆಲೆನ್. ತಾನು ಅಮಲಿನಲ್ಲಿ ತೂಕಡಿಸಬೇಕು. ಆ ಸಮಯದಲ್ಲಿ ಸ್ಮೃತಿಯೆಂಬುದಿರುವವರೆಗೂ ಕೆಲೆನಳ ಮತ್ತು ಹುಡುಗನ ನಗೆಯು ಕೇಳುತ್ತಲೇ ಇರಬೇಕು. ಬೆನೆಟ್ ದೊರೆಯ ರಾತ್ರಿ ಕಾಲದ ವಿನೋದವಿದು! ಒಂದೆರಡು ಘಂಟೆ ಹೀಗೆ ಒದ್ದಾಡಿ ಸೋಫಾದಲ್ಲಿ ಬಿದ್ದುಬಿಟ್ಟನೆಂದರೆ, ದೊರೆಗೆ ಪ್ರಜ್ಞೆ – ಸ್ವಚ್ಛಮತಿ ಬರುವದು ಮರುದಿನ ಮುಂಜಾನೆಯೇ ಸರಿ.

ಕೆಲೆನ್ – ಬಾಬುಗಳೊಳಗಿನ ಮಾತು – ನಗೆ – ಕೆಲಸಗಳ ರೀತಿ ದೊರೆಗೆ ಸ್ಮೃತಿಯಿರುವಾಗ ಒಂದು ವಿಧ; ಸ್ಮೃತಿ ತಪ್ಪಿದಾಗ ಮತ್ತೊಂದು ರೀತಿ. ದೊರೆಯೆಚ್ಚರಿರುವಾಗಿನ ಇವರ ವಿನೋದವೆಲ್ಲಾ ಒಡೆಯನ ಆನಂದಕ್ಕಾಗಿ. ಆ ಮೇಲಿನದು ಸ್ವಂತ ತೃಪ್ತಿಗಾಗಿ! ಆದರೆ ಬಾಬುರಾಯನಲ್ಲಿ ಸಂಕೋಚ, ಪಾಪದ ಭಯ, ಯಜಮಾನನ ಹೆದರಿಕೆ – ಇವೆಲ್ಲವುಗಳಿಂದಾಗಿ ಅತಿರೇಕ ಜಾಗ್ರತೆ ಈಗಲೂ ಇತ್ತು. ಅದು ಅಗತ್ಯವಿಲ್ಲವೆಂದು ಕೆಲೆನಳ ಸಾಧನೆ.

ತಾನು ಪಾಪವನ್ನು ಮಾಡುತ್ತಿದ್ದೇನೆ, ತನ್ನನ್ನು ಮಗನಂತೆ ನೋಡುತ್ತಿರುವ ಧೊರೆಗೆ ದ್ರೋಹವನ್ನು ಬಗೆಯುತ್ತಿದ್ದೇನೆ – ಎಂಬ ನೋವು ಬಾಬುರಾಯನ ಹೃದಯದಲ್ಲಿತ್ತು. ಆದರೆ ಇದ್ದ ನರಕಕ್ಕೆಳೆಯುವದಷ್ಟೇ ಅಲ್ಲ – ನರಕದ ನರಕವನ್ನೇ ಬೇಕಾದರೆ ನಿರ್ಮಿಸಲಿ ಈ ಪಾಪ – ಆ ಪಾಪದಲ್ಲಿಷ್ಟು ಸುಖವಿರುವುದಾದರೆ ಅದಕ್ಕಾಗಿ ನರಕಗಳನ್ನೆಲ್ಲಾ ಅನುಭವಿಸಬಹುದು – ಅನ್ನಿಸಿತು ಆ ಸಮಯದಲ್ಲಿ ರಾಯರಿಗೆ!

ಒಂದು ರಾತ್ರಿ ದೊರೆ ಮಿತಿಮೀರಿದ ಅಮಲಿನಿಂದ ತೂಕಡಿಸುತ್ತಿದ್ದ. ಬಾಬುರಾವ್ ಆ ರಾತ್ರಿ ತೋಟದಲ್ಲಿರುವ ಅಗತ್ಯ ಬಿದ್ದಿತ್ತು. ದೊರೆ ಅಮಲಿನಲ್ಲಿ ಕೆಲೆನಳನ್ನೊಮ್ಮೆ ಬಾಬುವನ್ನೊಮ್ಮೆ ಕರೆಯುತ್ತಿದ್ದ. ಧೊರೆಸಾನಿ ಬಂದು ರೋಗಿಯನ್ನು ಉಪಚರಿಸುವಂತೆ ಗಂಡನ ಆರೈಕೆಗೆ ತೊಡಗಿದಳು. ಅಪ್ಪಿಕೊಂಡು ಹೋಗಿ ಸೋಫದಲ್ಲಿ ಕೂತುಕೊಳ್ಳಿಸಿ ಕರವಸ್ತ್ರದಿಂದ ಗಂಡನ ಮುಖವನ್ನೊರಸುತ್ತಿದ್ದಳು ಕೆಲೆನ್. ಎಲ್ಲಾ ರಾತ್ರಿಗಳನ್ನೂ ಅಮಲಿನಲ್ಲೆ ಕಳೆದಿದ್ದ ಬೆನೆಟ್ ಧೊರೆಗೆ ಅವಳ ಸ್ಪರ್ಶಸುಖವು ಆ ಅರೆಮರವೆಯಲ್ಲಿ ಕೂಡಾ ಸ್ವರ್ಗತುಲ್ಯವಾಗಿ ತೋರಿತು. ‘ಕೆ-ಕೆ-ಕೆ-ಲೇನ್! ನ-ನ್ನ-ಪ್ರಿಯ-ಕೆಲೇನ್!’ ಎಂದವಳ ಕಂಠಬಾಚಿಕೊಂಡ. ಅವಳು ಅವನ ಮುಖಕ್ಕೊಂದು ಮುತ್ತು ಕೊಟ್ಟು ತುಸು ದೂರ ಸರಿದು ನಿಂತಳು. ‘ಬಾ-ಬಾ’ ಎಂದು ಬೆನೆಟ್ ಇದಿರಿಗೆ ಮುಗ್ಗರಿಸಿದ. ಹಿಡಿಯಲು ಬಂದ ಕೆಲೆನಳ ತಲೆ ಗಡಕ್ಕನೆ ಧೊರೆಯ ತಲೆಗೆ ತಾಗಿತು. “ಹಾಯ್ ! ನನ್ನ-ಪಿರೀ-ಪ್ರೀ-ತಿಯ ಕೇಲೆನಾ, ಹಾಯ್!” ಬೆನೆಟ್ ನೋವಿನಿಂದ ಮುಂದಲೆ ಸವರಿಕೊಂಡ.

ಕೆಲೆನ ಗಂಡನ ತಲೆಯನ್ನು ತಿಕ್ಕಿದಳು. ಮುಂದಲೆಗೊಂದು ಮುತ್ತು ಕೊಟ್ಟು ಅವನ ಮುಖವೆತ್ತಿ ಹಿಡಿದು ಪ್ರೇಮದಿಂದ ಹೇಳಿದಳು. “ಎಲ್ಲಿಯಾದರೂ ತಲೆಯೊಡೆದು ಸತ್ತು ಹೋಗುತ್ತಿದ್ದರೆ ನನಗೆಂತಹ ಗತಿಯೊದಗುತ್ತಿತ್ತು! ನಾನೇ ಕೊಂದು ಹಾಕಿದೆನೆಂದಾಗುತ್ತಿತ್ತಲ್ಲಾ!”
“…ಇಲ್ಲಾ – ನಾನು…. ಬರೆದು ಹಾಕುತ್ತೇನೆ. ನಾನೇ -ತಲೆ ಬಡೆದುಕೊಂಡು – ಪ್ರಾಣ ತೆಗೆದುಕೊಂಡೆನೆಂದು – ತಾ – ಕಾಗದ – ತಾ – ತಾ. ಈಗಲೇ – ಬರೆಯುತ್ತೇನೆ!” ಬೆನೆಟ್ ತೊದಲಿದ. ಕೆಲೆನ್ ಕಾಗದ ಪೆನ್ ತಂದು ಕೊಟ್ಟಳು. ದೊರೆ ತೂಕಡಿಸುತ್ತಾ ಗೀಚಿದ. ಬರೆಯುವದಕ್ಕೆ ಬೇಕಾಗುವ ಸಹಕಾರ ಸಲಹೆಗಳು ಕೆಲೆನಳಿಂದ ದೊರೆತವು. ಬೆನೆಟ್ ದೊರೆಯ ದಸ್ಕತು ಬಿತ್ತು.

ಮರುದಿನ ರಾತ್ರಿ ಅಮಲು ಮತ್ತು ನಿದ್ದೆಯೊಟ್ಟಾಗಿ ದೊರೆ ಸೋಫಾದಲ್ಲಿ ಬಿದ್ದಿದ್ದ. ಎಲ್ಲಾ ಕೆಲಸವನ್ನೂ ಅವಸರವಸರದಿಂದ ತೀರಿಸಿ ಬಾಬು ರಾವ್ ದೊರೆಯ ಬಂಗಲೆಗೆ ಹೊರಟ. ಬೆಟರಿಯ ಬೆಳಕನ್ನೇ ಕಾಯುತ್ತಿದ್ದ ಕೆಲೆನ್ ಓಡಿಬಂದು ತೋಟದಲ್ಲೇ ಅವನನ್ನಿದಿರುಗೊಂಡಳು. ಅವಳಲ್ಲಿ ಆ ದಿನವಿದ್ದ ಉತ್ಸಾಹವನ್ನು ಅರಿತುಕೊಂಡ ಬಾಬು.

“ನನ್ನ ಪ್ರಿಯ ಬಾಬು! ನಿನ್ನ ಸಂಕಟವನ್ನು ದೂರಮಾಡುವ ಉಪಾಯ ಕಂಡುಹಿಡಿದ್ದೇನೆ” ಹುಡುಗನನ್ನಾಲಿಂಗಿಸಿ ಹೇಳಿದಳು ಕೆಲೆನ. ಬಾಬು ಅವಳನ್ನೇ ನೋಡುತ್ತಾ ನಿಂತ.
“ನೋಡು!” ಒಂದು ಕಾಗದವನ್ನು ಬಾಬುರಾಯನ ಕೈಗೆ ಕೊಟ್ಟು ಹೇಳಿದಳು ಕೆಲೆನ –
“ಆ ಪ್ರಾಣಿ ಅಲ್ಲಿ ಅಮಲೇರಿ ಬಿದ್ದುಕೊಂಡಿದೆ. ನೀನು ಧೈರ್ಯ ತೆಗೆದುಕೋ. ಆ ಕಾಗದದಲ್ಲಿ ಈ ದಿನದ ತಾರೀಕು ಹಾಕಿದೆ. ಇದೇ ತಕ್ಕ ಸಮಯ! ನಮ್ಮ ಹಾದಿಯಲ್ಲಿರುವ ಕಂಟಕವೊಂದನ್ನು ಈಗಲೇ ನಿವಾರಿಸಿಕೊಳ್ಳೋಣ- ಏನೂ ಭಯವಿಲ್ಲ. ನೋಡು – ಆ ಕಾಗದ ಓದಿಕೊ! ತ್ವರೆಮಾಡು.”

ಬಾಬು ಅವಸರವಸರದಿಂದ ಕಾಗದ ಓದಿಕೊಂಡ. ಅಕ್ಷರಗಳು, ಬರಹದ ಸಾಲುಗಳು ಅಸ್ತವ್ಯಸ್ತವಾಗಿದ್ದವು – ಅಮಲೇರಿದವನು ಅಥವಾ ಸಾಯಲು ಹೊರಟವನು ಬರೆದ ಹಾಗೆ!
“ನಾನು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಮಾಡಿಕೊಂಡಿದ್ದೇನೆ. ನನ್ನ ಪ್ರೀತಿಯ ಕೆಲೆನಳಿಗಾಗಿ ಮಾತ್ರ ಮರುಗುತ್ತೇನೆ. ನನ್ನ ಎಲ್ಲಾ ಐಶ್ವರ್ಯವು ಕೆಲೆನಳಿಗೆ ಸೇರತಕ್ಕದ್ದು. ನನ್ನ ಮರಣಕ್ಕೆ ನಾನೇ ಜವಾಬ್ದಾರನಿದ್ದೇನೆ.
ಇ. ವಿ. ಬೆನೆಟ್
20-11-38’’

ಓದುತ್ತಿದ್ದಾಗ ಬಾಬುವಿನ ದೇಹವೆಲ್ಲಾ ಕಂಪಿಸಿತು; ಮೈ ಬೆವರಿತು.

‘ರಕ್ಕಸೀ!’ ನಡುಗುವ ಧ್ವನಿಯಲ್ಲಿ ಉದ್ಗರಿಸಿದ ಬಾಬು. ಕಾಗದವನ್ನು ಹರಿದು ಚೂರು ಚೂರು ಮಾಡಿ ಕೆಲೆನಳ ಮುಖಕ್ಕೆಸೆದ. ಆ ಮೇಲೆ ಅಲ್ಲಿ ನಿಲ್ಲಲಿಲ್ಲ. ಮಿಸ್ಟರ್ ಮತ್ತು ಮಿಸಿಸ್ ಬೆನೆಟರು ತೋಟದಲ್ಲಿ ಸೋಫವನ್ನಿಡಿಸಿ ಕುಳಿತಿದ್ದರು. ಮಾತಿನ ಮಧ್ಯೆ ಬೆನೆಟ್ ಹೇಳಿದ – “ಆ ಹುಡುಗ ಹೋಗಿ ಒಂದು ವಾರವಾಯಿತು. ಹೇಳದೆ ಕೇಳದೆ ಹೋಗಿ ಬಿಟ್ಟ. ಏನು ಬೇಸರ ಬಂತೊ! ಅವನ ಸ್ವಭಾವವೇ ಹಾಗೆ – ಎಲ್ಲದರಲ್ಲಿಯೂ ಸಂಕೋಚ, ದಾಕ್ಷಿಣ್ಯ. ಹುಚ್ಚು ಹುಡುಗ!”
ಲೇಡಿ ಬೆನೆಟಳ ಉತ್ತರವಿಲ್ಲ!

 

ಟಿಪ್ಪಣಿ

ಎಂ. ವಿ. ಹೆಗ್ಡೆ:
ಉಡುಪಿಯ ‘ಅಂತರಂಗ’ ಮತ್ತು ಮಂಗಳೂರಿನ ‘ನವಭಾರತ’ ಪತ್ರಿಕೆಗಳ ಸಂಪಾದಕರಾಗಿದ್ದ ಎಂ. ವಿ. ಹೆಗ್ಡೆ (ಉಡುಪಿ ಜಿಲ್ಲೆಯ ಮಟ್ಟಾರು ಗ್ರಾಮದ ವಿಠ್ಠಲ ಹೆಗ್ಡೆಯವರು) ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕರಾಗಿದ್ದರು. ಇವರು ತಮ್ಮ ಹರಿತವಾದ ವ್ಯಂಗ್ಯ ಹಾಗೂ ವಿಡಂಬನೆಗಳ ಮೂಲಕ ಧಾರ್ಮಿಕ ಡಂಭಾಚಾರ, ಸಮಾಜದೋಷಗಳು ಹಾಗೂ ರಾಜಕೀಯ ಅಲಾಲಟೋಪಿತನಗಳನ್ನು ಖಂಡಿಸುತ್ತಿದ್ದರು. ಇವರು ಸುಮಾರು ಮೂವತ್ತು ಕತೆಗಳನ್ನು ಬರೆದಿರುವರೆಂದು ಅಂದಾಜಿಸಲಾಗಿದೆ. ಇಪ್ಪತ್ತಕ್ಕಿಂತ ಹೆಚ್ಚು ಕತೆಗಳು ಹಳೆಯ ಪತ್ರಿಕೆಗಳಲ್ಲಿ ದೊರಕಿವೆ. ಎಂ. ವಿ. ಹೆಗ್ಡೆಯವರ ಹತ್ತು ಇತರ ಕೃತಿಗಳು ಪ್ರಕಟವಾಗಿವೆ. ಆದರೆ ಕತೆಗಳ ಸಂಕಲನವೊಂದು ಪ್ರಕಟವಾಗಬೇಕಾದುದು ಅಗತ್ಯವಾಗಿದೆ.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ಶ್ರೀಮಂತರು ಯಾವುಯಾವುದೋ ಕಾರಣದಿಂದ ಭಾರತಕ್ಕೆ ಬಂದು ಇಲ್ಲಿ ವಿಸ್ತಾರವಾದ ಗುಡ್ಡಗಾಡು ಪ್ರದೇಶಗಳನ್ನು ಖರೀದಿಸಿ, ಅಥವಾ ಬ್ರಿಟಿಷ್ ಸರಕಾರದಿಂದ ಕಡಿಮೆ ತೆರಿಗೆಗೆ ದರ್ಖಾಸ್ ರೂಪದಲ್ಲಿ ಪಡೆದು, ಕಾಫಿ, ರಬ್ಬರ್, ಟೀ ಮುಂತಾದ ಎಸ್ಟೇಟ್ ಗಳನ್ನು ಮಾಡಿಕೊಂಡು ಐಷಾರಾಮೀ ಬದುಕನ್ನು ನಡೆಸುತ್ತಿದ್ದರು. ಅಂತಹ ಒಂದು ಕುಟುಂಬದ ಕತೆ ಎಂ. ವಿ. ಹೆಗ್ಡೆಯವರ ‘ಧೊರ್ಸಾನಿ’ ಕತೆ.
‘ಧೊರ್ಸಾನಿ’ ಎಂಬ ಕತೆಯಲ್ಲಿ ಮಟ್ಟಾರು ವಿಠ್ಠಲ ಹೆಗ್ಡೆಯವರು ಸ್ಥಳೀಯ ಯುವಕನನ್ನು ಕಾಮಿಸಿದ ಬಿಳಿಯ ಮಹಿಳೆಯೊಬ್ಬಳು ಗಂಡನನ್ನು ಕೊಲ್ಲಲು ಮುಂದಾದುದನ್ನು ಚಿತ್ರಿಸಿದ್ದಾರೆ. ಇದು ದೊರೆಗಳ ವೈಯಕ್ತಿಕ ದೌರ್ಬಲ್ಯಗಳನ್ನು ಹೇಳುವ ಕತೆ. ಇದೇ ರೀತಿ ಒಳ್ಳೆಯ ‘ದೊರೆಗಳೂ’ ಇರಬಹುದು. ಹೇಗಿದ್ದರೂ ಈ ಅಂಶ ‘ಓಬೀರಾಯನ ಕಾಲದ ಕತೆ’ ಎಂದು ಪರಿಗಣಿಸಲು ಮುಖ್ಯವಾಗದೆ, ಬಿಳಿಯ ಜನ ಈ ದೇಶದಲ್ಲಿ ಜಮೀನುದಾರರಾಗಿಯೂ ಇದ್ದದ್ದನ್ನು ದಾಖಲಿಸುವ ಸಲುವಾಗಿ ಸೇರಿಸಿಕೊಳ್ಳಲಾಗಿದೆ.