ತನ್ನ ಮುಂದೆ ನಿಂತಿರುವುದು, ಮಾತನಾಡುತ್ತಿರುವುದು ಬರೇ ಹತ್ತೊಂಬತ್ತು ವಯಸ್ಸಿನ ಸೊಸೆಯೇ ಎಂಬ ಸಂದೇಹ ತಂದುಕೊಂಡ ಶಾಸ್ತ್ರಿಗಳು ಸಾವಿತ್ರಿಯನ್ನೇ ನೋಡುತ್ತಿದ್ದರು. ಆಗಲೂ ತಾನು ಆಡಿಸಿದ್ದ ಮುದ್ದು ಹುಡುಗಿ ಶಾಂಭವಿಯದೇ ನೆನಪು. ಗಂಗಮ್ಮನ ಆಶ್ಚರ್ಯಕ್ಕಂತೂ ಪಾರವೆ ಇರಲಿಲ್ಲ. ಏನಾದರೂ ಒಂದು ಮಾತು ಆಡಿ ಓಡಿ ಹೋಗುತ್ತಿದ್ದ ತನ್ನ ಹಿರಿಯ ಸೊಸೆಯರನ್ನು ನೆನೆಸಿಕೊಂಡ ಗಂಗಮ್ಮ ಸಾವಿತ್ರಿ ತುಂಬ ಧೈರ್ಯದಿಂದ ಮಾವನನೊಡನೆ ತರ್ಕ ಮಾಡ್ತ ನಿಂತಿದ್ದುದನ್ನು ನೋಡಿದಾಗ ಅವರಿಗೂ ತುಸು ಭಯವೇ… ತನ್ನ ಗಂಡನ ನಡತೆಯೂ ವಿಚಿತ್ರವೆಂದೆ ತೋರತೊಡಗಿತ್ತು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ವ್ಯಾಸರಾಯ ಬಲ್ಲಾಳರು ಬರೆದ ಕಥೆ ‘ಹೆಜ್ಜೆ’ ಕಾದಂಬರಿಯ ಕೆಲವು ಪುಟಗಳು

 

ಗಾಂಧಿ ಹುಡುಗಿ, ಸಾವಿತ್ರಿಯ ಮರದ ಪೆಟಾರಿಯ ಮೇಲಿದ್ದುದು ಗಾಂಧೀಜಿಯ ಒಂದು ಭಾವಚಿತ್ರ. ಮೂಗಿನ ತುದಿಗೆ ಇಳಿಬಿದ್ದ ಕನ್ನಡಕದಿಂದ ಇದಿರಿಗಿದ್ದ ಚರಕಾವನ್ನೆ ತದೇಕಚಿತ್ತರಾಗಿ ನೋಡುತ್ತ ನೂಲು ತೆಗೆಯುತ್ತಿದ್ದ ಚಿತ್ರ. ಮದುವಣಗಿತ್ತಿಯಾಗಿ ಸಾವಿತ್ರಿ ಬಂದಾಗ ಅದು ಎಲ್ಲಿ ಅಡಗಿತ್ತೋ, ಪೆಟಾರಿಯ ಮೇಲೆ ಕಾಣಿಸಿಕೊಂಡದ್ದು ತುಂಬಾ ಸಮಯವಾದ ಮೇಲೆ – ವಿದ್ಯಾಧರನ ಸಲುಗೆ ಸ್ಪಷ್ಟವಾಗಿ ತನಗೆ ಅರಿವಾಗುತ್ತಿದೆ ಎಂಬ ಪ್ರಜ್ಞೆ ಆಕೆಯಲ್ಲಿ ಮೂಡಿದಾಗ. “ಸುವ್ವೀ…” ಎಂದಿದ್ದ ವಿದ್ಯಾಧರ, ತನ್ನ ಪ್ರೀತಿಯ ಹೆಸರಿನ ಹ್ರಸ್ವದಿಂದ ಕರೆದು. “ಅದನ್ನು ಒಳಗಿಡೇ, ಅಪ್ಪಯ್ಯ ನೋಡಿಯಾರು. ಎಂದಾದರೊಮ್ಮೆ ಅವರು ಗಸ್ತು ಹೊಡೆಯುವುದಿದೆ…. ಆಗ!” “ನೋಡಲಿ” ಎಂದಿದ್ದಳು ಸಾವಿತ್ರಿ. “ದಿನಾ ಬೆಳಿಗ್ಗೆ ಎದ್ದ ಕೂಡಲೇ ನೋಡಬೇಕಾದ ಮುಖ ಅದು. ಅಪರೂಪಕ್ಕೊಮ್ಮೆಯಾದರೂ ನೋಡಲಿ” ಎಂದು ನಗುತ್ತಲೇ ಹೇಳಿದ್ದಳು. “ಹಾಗಲ್ಲವೇ… ನಮ್ಮ ಅಪ್ಪಯ್ಯನಿಗೋ ಗಾಂಧಿ ಕಲಿಪುರುಷ. ಕರ್ಮಚಾಂಡಾಲ. ನಮ್ಮ ಧರ್ಮವನ್ನು ಹಾಳುಮಾಡಲು ಬಂದ ರಾಕ್ಷಸ. ನಿನ್ನಂತ ಗಾಂಧಿ ಹುಡುಗಿಯನ್ನು ನಾನು ಮದುವೆಯಾಗಲು ಬಿಟ್ಟದ್ದೇ ಒಂದು ದೊಡ್ಡ ಆಶ್ಚರ್ಯ… ಹೀಗಿರುವಾಗ ಇನ್ನು ಮನೆಯಲ್ಲಿ ಗಾಂಧಿಗೆ ಪ್ರತ್ಯೇಕ ಗೌರವದ ಸ್ಥಾನ ತನ್ನ ಸೊಸೆಯ ಪೆಟ್ಟಿಗೆಯ ಮೇಲೇ ಸಿಕ್ಕಿದೆಯೆಂದರೆ ಅವರು…”, “ಏನು ಮಾಡ್ತಾರೆ, ನನ್ನನ್ನ ತಿಂತಾರೆಯೇ…” ಎಂದು ಸಾವಿತ್ರಿ ನಕ್ಕಾಗ ಆ ಕುಳಿ ಕಾಣಿಸಿಕೊಂಡ ಹಾಲುಗೆನ್ನೆಗಳ ಮೇಲೆಯೆ ವಿದ್ಯಾಧರನ ಕಣ್ಣು. “ಸುವ್ವೀ, ಗಾಂಧಿ ಹುಡುಗೀ, ನಿನ್ನನ್ನ ಮಾತಿನಲ್ಲಿ ಸೋಲಿಸೋಕಾಗಲ್ಲ, ನಾನೆ ತಿಂತೀನಿ ನಿನ್ನನ್ನ” ಎಂದಿದ್ದ. ಗಾಂಧಿಯ ಫೋಟೊ ಸಾವಿತ್ರಿಯ ಕೋಣೆಯ ವೈಶಿಷ್ಟ್ಯವಾಗಿತ್ತು …

ಒಮ್ಮೆ ಸಾವಿತ್ರಿಯ ಹಿರಿಯ ಭಾವ – ಗಂಗಾಧರ – ಗಾಂಧಿ ಚಿತ್ರವನ್ನು ನೋಡಿಯೇ ಬಿಟ್ಟ. ಅದನ್ನು ನೋಡಿದವನೇ ದುಡುದುಡು ಎಂದು ಉಪ್ಪರಿಗೆಯ ಮೆಟ್ಟಿಲಿಳಿದು ಹೋಗಿ, ಮಧ್ಯಾಹ್ನದ ನಿದ್ದೆ ಕಳೆದು ಪಾಠ ಹೇಳುವ ಮೊದಲು ವೀಳ್ಯದೆಲೆ ಮೆಲ್ಲುತ್ತಿದ್ದ ತಂದೆಯನ್ನುದ್ದೇಶಿಸಿ “ಅಪ್ಪಯ್ಯಾ… ವಿದ್ಯಾ ಕಟ್ಟಿಕೊಂಡ ಹುಡುಗಿ ಏನು ಮಾಡ್ತಿದ್ದಾಳೆ ಗೊತ್ತೇ! ತನ್ನ ಕೋಣೆಯಲ್ಲಿ ಗಾಂಧಿ ಪೂಜೆ. ದೊಡ್ಡ ಫೋಟೊ ಬಂದಿದೆ. ಮುಂದೆ ಊದುಬತ್ತಿ (ಸುಳ್ಳು), ಇದಿರಿಗೆ ರಂಗೋಲಿ (ಸುಳ್ಳು), ಫೋಟೋದ ಮೇಲೆ ಮಲ್ಲಿಗೆಯಹಾರ…(ಸುಳ್ಳು)…. ಇನ್ನು ಆರತಿ ಮಾತ್ರ ಬಾಕಿ… ಹೋಮ ಕೂಡ ಆಗುತ್ತೋ ಏನೋ! ಆ ಮಂಕ ವಿದ್ಯಾ ಹೆಂಡತಿಯ ಚಂದ ನೋಡಿ ಎಲ್ಲದಕ್ಕೂ ತಯಾರಿರ್ತಾನೆ… ಈ ಮನೆಯಲ್ಲಿ, ಸುಗ್ಗಿಪದವು ಶ್ರೀಕಂಠಶಾಸ್ತ್ರಿಗಳ ಮನೆಯಲ್ಲಿ, ಗಾಂಧಿ ಪೂಜೆ… ಒಂಬತ್ತು ದಿನ ನವರಾತ್ರಿ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ನಡೆಯುವ ಮನೆಯಲ್ಲಿ ಗಾಂಧಿ ಪೂಜೆ… ಹೊಲೆಯರನ್ನೆಲ್ಲ ದೇವಸ್ಥಾನಕ್ಕೆ ಹೋಗೋ ಹಾಗೆ ಏನೇನೋ ಕುತಂತ್ರ ಮಾಡುವ ಗಾಂಧಿಗೆ ನಮ್ಮ ಮನೆಯಲ್ಲಿ….” ಆಗ ಎಲ್ಲಿಂದಲೋ ಓಡಿ ಬಂದ ಗಂಗಾಧರನ ಹೆಂಡತಿ ಶ್ರೀದೇವಿ “ಅಷ್ಟೆಯೇ ಮಾವಯ್ಯಾ… ಮೊನ್ನೆ ಬಾವಿಕಟ್ಟೆಯಲ್ಲಿ ಪಾತ್ರೆ ತೊಳೀತಾ ತೊಳೀತಾ ಇದ್ದ ರುಕ್ಕುಗೂ ಸಾವಿತ್ರಿ ಲೆಚ್ಚರ್ ಕೊಡ್ತಾ ಇದ್ಳು ಗಾಂಧಿ ಬಗ್ಗೆ… ಅವನು ದೇವತಾ ಮನುಷ್ಯ ಅನ್ನೋ ರೀತೀಲಿ…. ರುಕ್ಕು ತೊಳೆದ ದೇವರಮನೆಯ ಪಾತ್ರೆ ಇನ್ನೊಮ್ಮೆ ತೊಳೆದುಕೊಂಡು ಬಾ ಅಂತ ನಾನಂದ್ರೆ `ಯಾಕೆ? ದೇವರಿಗೆ ರುಕ್ಕು ತೊಳೆದ ಪಾತ್ರೆ ಆಗೋಲ್ವಾ?’ ಅಂತ ನನಗೇ ತಕರಾರು. ಶುದ್ಧ ಗಾಂಧೀ ಹುಡುಗೀನೇ ಅದು ಮಾವಯ್ಯಾ…”

******

ಇಷ್ಟರತನಕವೂ ಮಾತನಾಡದೆ ಕುಳಿತಿದ್ದ ಶಾಸ್ತ್ರಿಗಳು ಆಗ “ಸಾವಿತ್ರೀ” ಅಂತ ಕರೆದಾಗ ಆಕೆ ಪಡಸಾಲೆಯ ಬಾಗಿಲಲ್ಲೆ ಪ್ರತ್ಯಕ್ಷ. ಕೈಯಲ್ಲೊಂದು ಶರಬತ್ ತುಂಬಿದ ಲೋಟೆ. “ಕರೆದಿರಾ ಮಾವಯ್ಯಾ” ಎಂದು ನಗುತ್ತಲೇ ಕೇಳಿದ ಸಾವಿತ್ರಿ “ಗಣೇಶ ಏಕೋ ವಾಂತಿ ಮಾಡಿ ಸುಸ್ತಾಗಿ ಬಿದ್ದು ಬಿಟ್ಟಿದ್ದ. ಏನು ತಿಂದಿದ್ದನೋ… ಮಲಗಿಸಿ ಶರಬತ್ ತರ್ತೇನೇಂತ ಹೇಳಿ ಬಂದಿದ್ದೇನೆ. ಕೊಟ್ಟು ಬರ್ತೇನೆ. ಒಂದೇ ನಿಮಿಷ” ಎಂದವಳು ಹೇಳಿದಂತೆ ಶರಬತ್ ಲೋಟೆಯನ್ನು ಗಣೇಶನಿಗೆ ಒಪ್ಪಿಸಿ ಮಾವನ ಮುಂದೆ ಬಂದಾಗ, ಶಾಸ್ತ್ರಿಗಳ ಮಡದಿ ಹೇಳಿದ್ದಂತೆ ಆಕೆಯ ಮುಖದಲ್ಲಿ ನಗು – ಮಲ್ಲಿಗೆಯಂತೆ.

“ಸಾವಿತ್ರೀ, ಏನಮ್ಮಾ ನೀನು ಈ ಮನೆ ತುಂಬ ಸಂಪ್ರದಾಯಸ್ಥರ ಮನೇಂತ ತಿಳಿದಿದ್ದೂ ಆ ಕಲಿಪುರುಷ ಗಾಂಧೀನ್ನ ಪೂಜೆ ಮಾಡೋದಿಕ್ಕೆ ಶುರು ಮಾಡಿದ್ದೀಯಂತಲ್ಲಾ. ನಮ್ಮ ಮನೆಯಲ್ಲಿ ಗಾಂಧಿಗೆ ಸ್ಥಾನ ಇಲ್ಲ ಅನ್ನೋದು ನಿನಗೆ ತಿಳಿಯದಿದ್ದರೆ ಇನ್ನಾದರೂ ತಿಳ್ಕೊಳ್ಕೋದು ಒಳ್ಳೇದು… ನನಗೆ ಗೊತ್ತು, ನಿನ್ನ ಆ ಪಚ್ಚೆ ಚಿಕ್ಕಪ್ಪ ಗಾಂಧಿ ಜತೆ ಸೇರ್ಕೊಂಡು ದಾಂಡಿ ಗೀಂಡೀ ಎಂತ ಉಪ್ಪು ಮಾಡೋದಿಕ್ಕೆ ಹೋಗಿ ಚೆನ್ನಾಗಿ ಪೋಲೀಸಿನವರ ಕೈಯಲ್ಲಿ ಏಟು ತಿಂದು, ಕಡೆಗೆ ಕಣ್ಣಾನೂರಿನ ಜೈಲಿನಲ್ಲಿದ್ದು ಜಾತಿ ಕೆಡಿಸ್ಕೊಂಡು ಬಂದಿದ್ದಾಂತ… ಆ ಸಂಸ್ಕಾರಾನ್ನೆಲ್ಲ ನಮ್ಮಲ್ಲಿಗೆ ತರಬಾರದು ಸಾವಿತ್ರೀ….. ಏನೋ ಋಣಾನುಬಂಧ ಕೂಡಿತ್ತೂಂತ ವಿದ್ಯಾಧರನಿಗೆ ನಿನ್ನನ್ನು ತಂದುಕೊಂಡೆ. ಈ ಮನೆಯ ಜವಾಬ್ದಾರಿ ಉಳಿಸೋ ಹೊಣೆ ನಿನ್ನ ಮೇಲೇನೂ ಇದೇಂತ ತಿಳ್ಕೊಳ್ಳಬೇಕಮ್ಮಾ… ನೋಡು, ನಾನು ನಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ. ಈ ಊರಲ್ಲಿ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಏನು ಸಮಸ್ಯೆಯಿದ್ದರೂ ಪರಿಹಾರ ಹೇಳಬೇಕಾದವನು.

ಇಲ್ಲಿ ಬ್ರಾಹ್ಮಣ ಸಮಾಜವೆಲ್ಲ ನಾನು ಯಾವ ಹಾದಿಯಲ್ಲಿ ಹೋಗ್ತೇನೇಂತ ಕಣ್ಣಿಟ್ಟು ನೋಡ್ತ ಇರುವಾಗ ನೀನು ತುಂಬ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಮ್ಮಾ … ಧರ್ಮ, ಸಂಪ್ರದಾಯಾನೆಲ್ಲ ಮನ ಬಂದಂತೆ ತಿರುಚೋದಕ್ಕಾಗಲ್ಲ. ಎಲ್ಲಿಂದ ಬಂದನೋ ಈ ಗಾಂಧಿ ನಮ್ಮ ಸಂಸ್ಕಾರಗಳನ್ನೆಲ್ಲ ಹಾಳುಗೆಡವೋದಕ್ಕೆ …. ಸತ್ಯಾಗ್ರಹಾಂತೆ…. ಸತ್ಯ ಇವನಿಗೊಬ್ಬನಿಗೇ ತಿಳಿದಿರೋ ಹಾಗೆ. ಇದೆಲ್ಲ ದುರಾಗ್ರಹ… ಗುರುವಾಯೂರು ದೇವಸ್ಥಾನಕ್ಕೂ ಹೊಲೆಯರು ಹೋಗಬೇಕು, ಇಲ್ಲವಾದರೆ ಉಪವಾಸ ಅಂತ ಇದಕ್ಕೆ ಬೆದರಿಕೆ ಬೇರೆ… ತಿರುವಾಂಕೂರಿನ ಅನಂತಶಯನ ದೇವಸ್ಥಾನಕ್ಕೂ ಹಾಗೇ ಅಂತೆ. ನಮ್ಮ ಏಕಾದಶಿ ವ್ರತ ಇವನಿಗೆ ಹಟದ ಒಂದು ಅಸ್ತ್ರವಾಗಿದೆ. ಅದಕ್ಕೆ ಉಪವಾಸ. ಇದಕ್ಕೆ ಉಪವಾಸ. ಇಲೆಕ್ಶನ್ ಅಂತೆ, ಪಿಲೆಕ್ಶನ್ ಅಂತೆ. ಅದಕ್ಕೂ ಉಪವಾಸ, ಸರಕಾರದ ವಿರುದ್ಧ ಉಪವಾಸ…. ಆ ಪರಂಗಿ ಜನ ಇದಕ್ಕೆಲ್ಲ ಹೆದರ್ಕೋತಾರೆಯೆ? ಈ ಕಾಂಗ್ರೆಸ್ ಕಾಂಗ್ರೆಸ್ ಅಂತ ಧರ್ಮಲಂಡರೇ ಮೇಲೆ ಬರೋ ಹಾಗಾಗಿದೆ. ನಮ್ಮದು ಸಂಪ್ರದಾಯಸ್ಥರ ಮನೆ ಸಾವಿತ್ರೀ. ನಿನ್ನ ಗಾಂಧಿ ಪೂಜೆ ಹುಚ್ಚೆಲ್ಲ ಇಲ್ಲಿ ಬೇಡ.”

ಸಾವಿತ್ರಿ ಮಾವನ ಮುಂದೆ ನಿಂತೇ ಇದ್ದಳು. ಅವಳ ಮುಖದಲ್ಲಿ ಸ್ಥಾಯಿ ರೂಪ ಪಡೆದಂತೆ ಮೂಡಿದ್ದ ನಗು ಹಾಗೆಯೇ ಇತ್ತು. ಗಂಗಮ್ಮನಿಗೋ ಆಶ್ಚರ್ಯ. ತನ್ನ ಗಂಡ ಸಿಟ್ಟಾಗುತ್ತಿದ್ದುದು ತೀರಾ ಕಡಿಮೆ. ಆದರೆ ಧರ್ಮಕ್ಕೆ ಅಪಚಾರವಾಗಿದೆಯೆಂದ ಸಂರ್ಭಗಳಲ್ಲಿ ತುಸು ದನಿಯೇರಿಸಿ ಮಾತನಾಡುತ್ತಿದ್ದುದಿದೆ. ತನ್ನ ಗಂಡ ಈ ಸೊಸೆಯೊಡನೆ ಹೀಗೇಕೆ ಇಷ್ಟು ಸಮಾಧಾನದಿಂದ ತಿಳಿವಳಿಕೆ ಕೊಡುವಂತೆ ಮಾಡನಾಡುತ್ತಿದ್ದಾರೆ ಎಂದೇ ಅವರ ಆಶ್ಚರ್ಯ… ಸಾವಿತ್ರಿಯ ಮುಖದ ನಗು ತುಸು ಅರಳಿ, “ಮಾವಯ್ಯಾ, ಯಾರು ಹೇಳಿದ್ದು ನಿಮಗೆ, ನಾನು ಗಾಂಧಿ ಪೂಜೆ ಮಾಡ್ತ ಇದ್ದೇನೇಂತ. ದೊಡ್ಡ ಭಾವನೇ?” ಎಂದಳು.

ಶಾಸ್ತ್ರಿಗಳು ಆ ಮಾತಿಗೆ ಉತ್ತರಿಸಲಿಲ್ಲ.

“ಮಾವಯ್ಯಾ, ಯಾರು ಏನೇ ಹೇಳಲಿ, ನಾನು ಪೂಜೆಯನ್ನೇನೂ ಮಾಡ್ತಾ ಇಲ್ಲ. ನನ್ನ ಪೆಟ್ಟಿಗೆಯ ಮೇಲೆ ಗಾಂಧೀಜೀಯ ಚಿತ್ರ ಇರೋದು ನಿಜ. ಅದೂ ತಪ್ಪೇ ಮಾವಯ್ಯ.”

“ಅಲ್ಲ ಸಾವಿತ್ರೀ, ನಮ್ಮ ಮನೆಯಲ್ಲಿ….?”

“ಮಾವಯ್ಯಾ, ನೋಡಿ, ಪಡಸಾಲೆಯ ಹೊಸ್ತಿಲ ಹತ್ತಿರ ನಿಮ್ಮ ತಂದೆತಾಯಿಯರ ಫೋಟೋ ಇದೆ, ತುಂಬ ಹಳೆಯ ಕಾಲದ ಫೋಟೊ ಆದರೂ ಚೆನ್ನಾಗಿ ಬಂದಿದೆ. ಅದಕ್ಕೇನೂ ನೀವು ದಿನಾ ಪೂಜೆ ಮಾಡ್ತಾ ಇಲ್ಲ – ದೇವರ ಪೂಜೆ ಮಾಡೋ ಹಾಗೆ. ಶ್ರಾದ್ಧದ ದಿನ ನೆನಸ್ಕೋತೀರಿ. ಅವರ ಕುರಿತು ಇರುವ ಪ್ರೀತಿ, ಗೌರವ ತೋರಿಸೋದಕ್ಕೆ ನೆನಪಿಸೋದಕ್ಕೆ ಅವುಗಳಿಗೆ ಆ ಸ್ಥಾನ. ನನಗೆ ಗಾಂಧೀಜೀಯೆಂತಂದರೆ ತುಂಬ ಇಷ್ಟ ಮಾವಯ್ಯಾ, ಅವರು ಉಡುಪಿಗೆ ಬಂದಿದ್ರಲ್ಲಾ ಮಾವಯ್ಯಾ, ಕೆಲವು ವರ್ಷಗಳ ಹಿಂದೆ. ನೀವು ಹೇಳಿದ್ರಲ್ಲಾ ನನ್ನ ಪಚ್ಚೆ ಚಿಕ್ಕಪ್ಪಾಂತ – ಅವರ ಜತೆಯಲ್ಲೇ ಅವರನ್ನು ನೋಡೋದಿಕ್ಕೇಂತ ಹೋಗಿದ್ದೆ. ಚಿಕ್ಕಪ್ಪನ ಜತೆ ಹೋಗಿದ್ದು ನನ್ನ ಪುಣ್ಯ. ಅವರಿಗೆ ಒಂದು ಮಾಲೆ ಹಾಕೋ ಅವಕಾಶಾನೂ ನನಗೆ ಸಿಕ್ಕಿತ್ತು. ಏಕೋ ಅಂದಿನಿಂದ ಅವರನ್ನ ನೊಡ್ತಾನೇ ಇರಬೇಕು ಅಂತ ಅನ್ನಿಸೋದ್ರಿಂದ ಅವರ ಫೋಟೊ ನನ್ನ ಬಳಿ ಇರತ್ತೆ … ಆ ಫೋಟೊ ಕೂಡ ಚಿಕ್ಕಪ್ಪನೇ ತಂದುಕೊಟ್ಟಿದ್ದು…”

“ಎಂದರೆ ಸಾವಿತ್ರೀ, ನೀನು ಆ ಧರ್ಮಲಂಡ ಗಾಂಧಿಯ ವಿಚಾರಗಳನ್ನೆಲ್ಲ ಈ ಮನೆಗೂ ತರಬೇಕೂಂತಿದ್ದೀಯೇನು, ನಮ್ಮ ಸಂಪ್ರದಾಯಗಳನ್ನೆಲ್ಲ…”

“ಇಲ್ಲ ಮಾವಯ್ಯಾ. ನಾನು ಏನೂ ಮಾಡೋಲ್ಲ…. ನಾನು ಈ ಮನೆಗೆ ಬಂದವಳು, ಮನೆಯ ಸಂಪ್ರದಾಯಗಳನ್ನೆಲ್ಲ ಮರ್ಯಾದೆ ಕೊಟ್ಟು ಪಾಲಿಸಿಕೊಂಡು ಬರಬೇಕಾದವಳು. ನನ್ನ ಅಪ್ಪ ಹಾಗೆ ಹೇಳಿದ್ದಾರೆ. ನಿಮಗೆ ಬೇಸರ ಬರೋ ಹಾಗೆ ನಾನು ಏನೂ ಮಾಡೋಲ್ಲ ಮಾವಯ್ಯ… ಆದರೆ ನನ್ನ ವಿಚಾರಗಳನ್ನ ನಾನು ಇಟ್ಕೊಳ್ಳೋದಿಕ್ಕೆ ನಿಮ್ಮ ಆಕ್ಷೇಪ ಇದೆಯೇ ಮಾವಯ್ಯಾ…. ನನಗೆ ಗಾಂಧೀಜಿ ಹೇಳ್ತಾ ಇರೋ ಸತ್ಯ, ಅಹಿಂಸೆ, ಅನುಕಂಪ, ಪ್ರೀತಿ ಎಲ್ಲ ತುಂಬ ಒಳ್ಳೇದೂಂತ ಕಾಣತ್ತೆ. ನನಗೇಕೋ ಅವರ ಮೇಲೆ ತುಂಬ ಗೌರವ ಮಾವಯ್ಯಾ… ನನ್ನ ಕೋಣೆಯಲ್ಲಿರೋ ಗಾಂಧಿ ಫೋಟೊ ನಿಮಗೆ ಏನು ತೊಂದರೆ ಕೊಡೋಲ್ಲ…. ಯಾರಿಗೂ ತೊಂದರೆ ಕೊಡೋಲ್ಲ… ಧರ್ಮ ಸಂಪ್ರದಾಯ ಎಲ್ಲ ಏನೂಂತ ನನಗಿನ್ನೂ ತಿಳಿದಿಲ್ಲ ಮಾವಯ್ಯಾ, ಆದರೆ ಯಾಕೋ…”

ತನ್ನ ಮುಂದೆ ನಿಂತಿರುವುದು, ಮಾತನಾಡುತ್ತಿರುವುದು ಬರೇ ಹತ್ತೊಂಬತ್ತು ವಯಸ್ಸಿನ ಸೊಸೆಯೇ ಎಂಬ ಸಂದೇಹ ತಂದುಕೊಂಡ ಶಾಸ್ತ್ರಿಗಳು ಸಾವಿತ್ರಿಯನ್ನೇ ನೋಡುತ್ತಿದ್ದರು. ಆಗಲೂ ತಾನು ಆಡಿಸಿದ್ದ ಮುದ್ದು ಹುಡುಗಿ ಶಾಂಭವಿಯದೇ ನೆನಪು. ಗಂಗಮ್ಮನ ಆಶ್ಚರ್ಯಕ್ಕಂತೂ ಪಾರವೆ ಇರಲಿಲ್ಲ. ಏನಾದರೂ ಒಂದು ಮಾತು ಆಡಿ ಓಡಿ ಹೋಗುತ್ತಿದ್ದ ತನ್ನ ಹಿರಿಯ ಸೊಸೆಯರನ್ನು ನೆನೆಸಿಕೊಂಡ ಗಂಗಮ್ಮ ಸಾವಿತ್ರಿ ತುಂಬ ಧೈರ್ಯದಿಂದ ಮಾವನನೊಡನೆ ತರ್ಕ ಮಾಡ್ತ ನಿಂತಿದ್ದುದನ್ನು ನೋಡಿದಾಗ ಅವರಿಗೂ ತುಸು ಭಯವೇ… ತನ್ನ ಗಂಡನ ನಡತೆಯೂ ವಿಚಿತ್ರವೆಂದೆ ತೋರತೊಡಗಿತ್ತು. ಯಾವಾಗಲೂ ಇಂತಹ ಮಾತುಗಳಿಗೆಲ್ಲ ತುಸು ಅಸಮಧಾನದ ಪ್ರತಿಕ್ರಿಯೆಯನ್ನೆ ತೋರಿಸುತ್ತಿದ್ದ ಗಂಡ ಇಂದು ಸಾವಿತ್ರಿಯ ಮುಂದೆ ಇಷ್ಟು ಮೆತ್ತಗಾಗಿ ಮಾತನಾಡುತ್ತಿರುವುದರ ಅರ್ಥ ಏನು ಎಂದು ಯೋಚಿಸುತ್ತಿದ್ದರು.

ಗಂಗಮ್ಮ ಸಾವಿತ್ರಿಯನ್ನು ಕುರಿತು “ಹೋಗು ಸಾವಿತ್ರೀ… ವಿದ್ಯಾ ಬರುವ ಹೊತ್ತಾಯಿತು. ಒಲಗೆ ಚಹಾಕ್ಕೆ ನೀರಿಡು. ನೀನು ಇನ್ನು ಗಾಂಧಿ ಗೀಂಧೀಂತ ಹೊಲೆಯರನ್ನೆಲ್ಲ ಮನೆಯೊಳಗೆ ಕರೆಸಬೇಡ. ಅಂತ ವಿಚಾರವೆಲ್ಲ ಇಲ್ಲಿ ಬೇಡ”.

– 2 –

ಗಾಂಧಿ ಹುಡುಗಿ ಸಾವಿತ್ರಿ. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಆಕೆಯ ಚಿಕ್ಕಪ್ಪನಿಂದಲೇ ಸಾವಿತ್ರಿಗೆ ಆ ರೀತಿಯ ವಿಶೇಷಣ ಬಂದದ್ದೆಂದು ವಿದ್ಯಾಧರನಿಗೆ ಗೊತ್ತು. ತನ್ನ ಮಡದಿಯಾಗಿ ಬರುವತನಕವೂ ವಿದ್ಯಾಧರನಿಗೆ ಗಾಂಧಿಯ ಕುರಿತ ಆಸಕ್ತಿ ಅಷ್ಟಾಗಿ ಇರಲಿಲ್ಲ. ಆತ ಆಕೆಯನ್ನು ಮೊದಲು ಕಂಡು ಸಂಭಾಷಿಸಿದಾಗ ಬಂಕಿಂ ಅವರ `ಆನಂದಮಠ’ದ ಪ್ರಸ್ತಾಪ ಬಂದಿದ್ದರೂ ಆತ ಆ ಕೃತಿಯನ್ನು ಆಗ ಓದಿರಲಿಲ್ಲ; ಅದನ್ನು ಓದಿದ್ದು ಸಾವಿತ್ರಿಯ ಪೆಟಾರಿಯೊಳಗಿದ್ದ ಪುಸ್ತಕಗಳ ಗಂಟಿನಿಂದಲೆ ಪಡೆದು. ಆತ ಉಡುಪಿಯ ರಥಬೀದಿಯಲ್ಲಿ ಪ್ರಭಾತಫೇರಿಯ ಮೆರವಣಿಗೆಯನ್ನು ಒಮ್ಮೆ ಕಂಡಿದ್ದ. ಆಗಲೇ `ವಂದೇ ಮಾತರಂ’ ಎಂಬ ಎರಡು ಶಬ್ದಗಳಿಗೆ ಮೆರವಣಿಗೆಯಲ್ಲಿ ದೊರಕುತ್ತಿದ್ದ ಸಾರ್ವತ್ರಿಕ ಉತ್ಸಾಹದ ದನಿಗೂಡಿಸುವಿಕೆಯನ್ನು ಕಂಡದ್ದು… ಅವೆರಡು ಶಬ್ದಗಳ ಅರ್ಥ ತಿಳಿಯುವ ಸಂಸ್ಕೃತದ ಸಂಸ್ಕಾರ ಆತನಿಗಿತ್ತು. ಆದರೆ ಹಾಗೆ ಸಾಗುತ್ತಿದ್ದವರು `ವಿಜಯೇ ವಿಶ್ವ ತಿರಂಗಾ ಪ್ಯಾರಾ…. ಝೆಂಡಾ ಊಂಚಾ ರಹೇ ಹಮಾರಾ…’ ಎಂದಾಗ ಹಿಂದಿಯ ಜ್ಞಾನ ಅಷ್ಟಕ್ಕಷ್ಟೆ ಇದ್ದ ವಿದ್ಯಾನಿಗೆ ಅದರ ಅರ್ಥ ಹೊಳೆದಿರಲಿಲ್ಲ; ನಾದ ಮಾತ್ರ ತುಂಬಾ ಹಿತವಾಗಿತ್ತು. ಆ ಮೇಲೆ ಒಮ್ಮೆ ಸಾವಿತ್ರಿಯೊಡನೆ ಸಂಬಂಧಿಕರ ಒಂದು ಮದುವೆಗೆಂದು ಮಂಗಳೂರಿನ ತನಕ ಹೋದವನು ಸಂಜೆ, ಸಾವಿತ್ರಿಯ ಖುಷಿಗೆಂದೇ, ಚಿತ್ರಾ ಟಾಕೀಸ್ ನಲ್ಲಿ ಒಂದು ಸಿನೆಮಾ ನೊಡಲು ಹೋಗಿ ಅಲ್ಲಿ ಸಿನೆಮಾ ಆರಂಭವಾಗುವುದಕ್ಕೂ ಮೊದಲೇ ಅವರು ತೋರಿಸಿದ `ವಂದೇ ಮಾತರಂ’ ಹಾಡಿನ ಆರಂಭದ ಕೆಲವು ಚರಣಗಳ ದೃಶ್ಯವನ್ನು ನೋಡುತ್ತಿದ್ದಂತೆ ಪಕ್ಕದಲ್ಲೆ ಕುಳಿತಿದ್ದ ಸಾವಿತ್ರಿಯ ರೋಮಾಂಚನದ ಪುಳಕವನ್ನು ಗಮನಿಸಿದ ಆತ ಆಕೆಯ ಭುಜವನ್ನು ಮೃದುವಾಗಿ ತಟ್ಟಿ `ಏನಾಯಿತೇ?’ ಎಂದು ಕೇಳಿದ್ದ. ಆದರೆ ಆಕೆ ಯಾವ ಉತ್ತರವನ್ನೂ ಕೊಟ್ಟಿರಲಿಲ್ಲ. ತದೇಕಚಿತ್ತಳಾಗಿ `ಸುಜಲಾಂ ಸುಫಲಾಂ, ಮಲಯಜ ಶೀತಲಾಂ’ ಎಂದು ಗೀತೆ ಮುಂದುವರಿಯುತ್ತಿದ್ದಂತೆ ತೋರಿಸಲಾಗುತ್ತಿದ್ದ ಭಾರತದ ನಿಸರ್ಗದ ಸಿರಿಯನ್ನೆ ನೋಡುತ್ತಿದ್ದಳು… ಅಂದು ಅವರು ಉಡುಪಿಯ ದಾರಿ ಹಿಡಿದು ಎರಡು ಹೊಳೆಗಳನ್ನು ದಾಟಿ ಕೊಡದೂರು ಸೇರುವತನಕವೂ ಆಕೆ `ವಂದೇ ಮಾತರಂ’ ವಿಚಾರ ಒಂದು ಮಾತೂ ಆಡಿರಲಿಲ್ಲ … ಆದರೆ ಆ ಹಾಡು ಪ್ರತಿಧ್ವನಿಸತೊಡಗಿದ್ದು ವಿದ್ಯಾಧರನ ಎದೆಯಲ್ಲೆ.

ಆದರೆ ವಿದ್ಯಾಧರನಿಗೆ ತನಗೂ ತನ್ನ ಆವರಣಕ್ಕೂ ಒಂದು ಕಂದಕ ಉಂಟಾಗುತ್ತಿದೆಯೇ ಎಂಬ ಸಂದೇಹ ಬರತೊಡಗಿದ್ದು ಮನೆಯ ಸಂಪ್ರದಾಯಗಳ ಕಠಿಣ ಶಿಸ್ತಿನಲ್ಲಿ… ತನ್ನ ತಂದೆಯದು ಅನುಕಂಪ ತುಂಬಿದ, ಯಾರನ್ನೂ ಅರ್ಥಮಾಡಿಕೊಳ್ಳುವ ಹೃದಯವೆಂದು ಆತನಿಗೆ ತಿಳಿದಿತ್ತು… ಆದರೆ ಸಂಪ್ರದಾಯದ ಭದ್ರಕೋಟೆಯೊಳಗೇ ಇರಬೇಕು ಎನ್ನುವ ಅವರ ನಿಶ್ಚಯದ ಕಾಠಿಣ್ಯವೂ ಆತನಿಗೆ ತಿಳಿದಿತ್ತು… ಅವರ ಮಿದುವಾದ ಹೃದಯದಲ್ಲೂ ಗಾಂಧಿ ತಮ್ಮ ಸಂಪ್ರದಾಯಗಳನ್ನೆಲ್ಲ ಹಾಳುಗೆಡವಲು ಬಂದವನೆಂಬ ತಿರಸ್ಕಾರದ ಭಾವನೆಯೂ ಬೆರೆತಿತ್ತು. ಮನೆಯ ಸಂಸ್ಕಾರದ ವಿಧಿವಿಧಾನಗಳೆಲ್ಲ ತಾನು ಯೋಜಿಸಿಕೊಂಡಿದ್ದಂತೆಯೇ ನಡೆಯಬೇಕು. ತನ್ನ ಕರ್ತವ್ಯಕ್ಷೇತ್ರದಲ್ಲಿ ನೆಚ್ಚಿಕೊಂಡ ಸಂಪ್ರದಾಯಗಳಿಗೆ ಯಾವ ರೀತಿಯ ಅಪಚಾರವೂ ಆಗಬಾರದು ಎಂಬ ಅವರ ಮಡಿವಂತಿಕೆಯನ್ನು ತಿಳಿಯದವರಿಲ್ಲ. ಇದರಿಂದಾಗಿಯೇ ವಿದ್ಯಾಧರ ತನ್ನ ಮನೆ ಪೋಷಿಸಿಕೊಂಡು ಬಂದಿದ್ದ ಸಂಸ್ಕೃತದ ಆವರಣದಲ್ಲಿ, ತಾನು ಗಳಿಸಲೇಬೇಕಾಗಿದ್ದ ಸಂಸ್ಕೃತದ ಜ್ಞಾನದಿಂದಲೂ, ದಿನದ ಹೆಚ್ಚಿನ ಕಾಲದಲ್ಲಿ ಕೇಳುತ್ತಲೇ ಇದ್ದ ಮಂತ್ರಘೋಷದಿಂದ ಕೆಲವೊಮ್ಮೆ ಅಧೀರನಾಗುತ್ತಿದ್ದ…. ವೇದಪಠಣದ ಕಾಲದಲ್ಲೆಲ್ಲ ಯಾವುದೋ ಒಂದು ಅಜ್ಞಾತ ನಾಡಿನೆಡೆ ಹೋಗುತ್ತಿದ್ದಂತೆ ಒಮ್ಮೊಮ್ಮೆ ಭಾಸವಾಗುತ್ತಿದ್ದರೂ, ಸಾಮವೇದ ಪಠಣದ ಕಾಲಕ್ಕೆ ಆ ನಾದ ತನ್ನನ್ನು ಹಿಂದೆ ಹಿಂದೆ ಎಲ್ಲಿಗೋ ಕೊಂಡೊಯ್ಯುತ್ತಿದೆಯೆಂದು ಕೆಲವೊಮ್ಮೆ ತೋರಿದರೂ, ಈಗ ಅಂತ ಸಮಯದಲ್ಲಿ ಮನೆಯಿಂದ ಎಲ್ಲಾದರೂ ಹೊರಗೋಡುವ ಬಯಕೆ ಯಾಕೆ ಉಂಟಾಗುತ್ತಿದೆಯೆಂಬ ಯೋಚನೆ ಮಿಂಚುತ್ತಿದ್ದುದೂ ಇದೆ.

******

ತಂದೆ ತನ್ನನ್ನು ಕರೆದು ಸಾವಿತ್ರಿಗೆ ಬುದ್ಧಿ ಹೇಳೆಂದ ಮೇಲೆ ಒಂದೋ ಎರಡೋ ತಿಂಗಳು ಕಳೆದಿರಬೇಕು. ಆಕೆ ಫಾಟೆ ಮಾಮಾನ ಕಡೆಯಿಂದ ವಿದ್ಯಾಧರನಿಗಾಗಿಯೇ ಒಂದು ಒಳ್ಳೆಯ ಖಾದಿ ಟೊಪ್ಪಿ ತರಿಸಿದ್ದಳು… “ಯಾರಿಗೇ ಇದು?” ಎಂದು ಸಾವಿತ್ರಿಯ ತಾಯಿ ಅವರ ಮನೆಯಲ್ಲಿ ಕೇಳಿದಾಗ, “ಬೇರೆ ಯಾರಿಗೆ, ನಿನ್ನ ಅಳಿಯನಿಗೇ” ಎಂದು ಸಾವಿತ್ರಿ ನಗೆಯಾಡಿದ್ದಳು… “ಅಲ್ಲಿಯವರೆಗೆ ಬಂತೇ?” ಎಂದು ತಾಯಿ ತುಸು ಸಂತೋಷದಿಂದಲೇ ಕೇಳಿದ್ದರೂ ಸಾವಿತ್ರಿ ನಗುತ್ತಲೇ ಕಣ್ಣು ಮಿಟುಕಿಸಿದ್ದಳಷ್ಟೆ.

ಹೆಂಡತಿ ತರಿಸಿಕೊಟ್ಟಿದ್ದ ಟೊಪ್ಪಿಯನ್ನು ವಿದ್ಯಾ ಕೈಯಿಂದ ತಿರುಗಿಸಿ ತಿರುಗಿಸಿ ನೋಡಿ, ತನ್ನ ತಲೆಯ ಮೇಲೆ ಇರಿಸಿಕೊಂಡು ಹಿಂದೆ ಮುಂದೆ ಇಟ್ಟುಕೊಂಡು ಆಮೇಲೆ ಅದನ್ನು ಸಾವಿತ್ರಿಯ ಪೆಟಾರಿಯ ಮೇಲಿರಿಸಿದ. ಆತನ ಮುಖದಲ್ಲಿ ಯಾವ ಭಾವವನ್ನೂ ಗುರುತಿಸುವಂತಿರಲಿಲ್ಲ. ಸಾವಿತ್ರಿ “ಧೈರ್ಯ ಇದೇಂತ ಹೇಳಿದ್ದಿರಿ, ನೆನಪಿದೆಯಷ್ಟೆ?” ಎಂದಿದ್ದಳು. ಅದಕ್ಕೂ ವಿದ್ಯಾ ಯಾವ ಉತ್ತರವನ್ನು ಹೇಳಲಿಲ್ಲ.

ಮರುದಿನ ಶಾಲೆಯಿಂದ ಒಂದು ದಿನದ ರಜೆ ಪಡೆದು ನಸುಕು ಹರಿಯುವ ಹೊತ್ತಿಗೇ ಏನೋ ಕೆಲಸವಿದೆಯೆಂದು ವಿದ್ಯಾದರ ಮಂಗಳೂರಿಗೆ ಹೋಗಿದ್ದ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಮರಳಿ ಬಂದಾಗ ಆತನ ತಲೆಯಲ್ಲಿ ಗಾಂಧಿ ಟೊಪ್ಪಿಯಿತ್ತು. ಬಾಲ್ಯದಿಂದ ಮನೆಯ ಸಂಪ್ರದಾಯದ ಚಿಹ್ನೆಯೆಂದು ಆತ ಪೋಷಿಸಿಕೊಂಡು ಬಂದಿದ್ದ ಜುಟ್ಟು ಮಾತ್ರ ಮಾಯವಾಗಿತ್ತು… ಮನೆಗೆ ಬಂದ ಮಗನನ್ನು ಆಗಷ್ಟೆ ಪೂಜೆ ತೀರಿಸಿ ಹೊರಗೆ ಬಂದು ನೋಡಿದ ಶಾಸ್ತ್ರಿಗಳು ಒಂದು ಕ್ಷಣ ಸ್ತಬ್ಧರಂತೆ ನಿಂತಿದ್ದರು. ಆಮೇಲೆ “ಏನೋ ಇದು? ಇದೇ ನಿನ್ನ ಮಂಗಳೂರಿನ ಕೆಲಸವೇ?” ಎಂದು ಕೇಳಿದಾಗ ವಿದ್ಯಾ ತುಸು ಅಳುಕುತ್ತಲೇ “ಅಲ್ಲ ಅಪ್ಪಯ್ಯ… ಬೇರೆ ಕೆಲಸವೂ ಇತ್ತು… ಎಜುಕೇಶನ್ ಆಫೀಸಿನಲ್ಲಿ… ನನ್ನ ವೃತ್ತಿಗೆ ಇದು ಅನುಕೂಲವಾಗತ್ತೇಂತ ಅನಿಸಿದ್ದರಿಂದ ಹೀಗೆ ಮಾಡಬೇಕಾಯಿತು.”

“ಯಾವ ವೃತ್ತಿಯೋ?”

“ನಿಮಗೇ ಗೊತ್ತಿದೆಯಲ್ಲ. ಶಾಲೆಯಲ್ಲಿ ಅಧ್ಯಾಪನ ವೃತ್ತಿ.”

“ಹಾಗೆ ಆಗಲೇಬೇಕೆಂಬ ನಿರ್ಬಂಧವೇನಾದರೂ ಇದೆಯೇನೋ?”

“ನಿರ್ಬಂಧವಿಲ್ಲ. ಆದರೆ ಶಾಲೆಯ ವ್ಯವಹಾರದಲ್ಲಿ ಅದು ಬೇಕೆನಿಸುತ್ತೆ”.

“ಅಥವಾ ಸಾವಿತ್ರಿಯ ಒತ್ತಾಯವೋ?” ಶಾಸ್ತ್ರಿಗಳು ಕಷ್ಟದಿಂದಲೇ ಈ ಮಾತನ್ನು ಹೇಳಿದ್ದು.

“ಇಲ್ಲ ಅಪ್ಪಯ್ಯ, ಅವಳ ಒತ್ತಾಯವೇನೂ ಇಲ್ಲ….. ಅಲ್ಲದೆ ಒಂದು ಗಾಂಧಿ ಟೊಪ್ಪಿ ಇರಿಸಿಕೊಂಡಾಕ್ಷಣ ನಾನು ತುಂಬ ಬದಲಾಗಿದ್ದೇನೆ ಎಂದು ತಿಳಿಯಬೇಕಾಗಿಯೂ ಇಲ್ಲ…..”

“ಈಗ ಕೆಂಚನಿಗೂ ಗಾಂಧಿ ಟೊಪ್ಪಿ ಬಂದಿದೆಯಂತಲ್ಲ!”

“ನಿಮ್ಮ ಸ್ನೇಹಿತರಾದ ವೆಂಕಟೇಶ ಕಮ್ತಿಯವರಿಗೂ ಅದು ಇದೆ ಅಪ್ಪಯ್ಯ… ಹಾಗೆಂದು ನೀವೇನಾದರೂ ಅವರನ್ನು ಟೀಕಿಸಿದ್ದಿದಯೆ?”
ಈ ಮಾತಿಗೆ ಉತ್ತರ ಹೇಳುವುದು ಶಾಸ್ತ್ರಿಗಳಿಗೆ ಕಷ್ಟದ ಮಾತಾಗಿತ್ತು.

“ಇದರ ಪರಿಣಾಮ ಊರೆಲ್ಲ ಏನು ಮಾತಾಡಿಕೊಳ್ಳಬಹುದು ಎಂದು ನಿನಗೆ ಗೊತ್ತೇ?”

“ನಾನು ಸರಿಯಾಗಿ ಇದ್ದರೆ ಊರವರು ಏನು ಮಾತನಾಡಿದರೆ ನನಗೇನು?”

“ಅಲ್ಲ ವಿದ್ಯಾ… ನೀನು ಸಾವಿತ್ರಿಯನ್ನು ಮದುವೆಯಾದಂದೇ ನಾನು ಗುಸುಗುಸು ಮಾತೆಲ್ಲ ಕೇಳಬೇಕಾಗಿತ್ತು… ಈಗ ಒಂದೊಂದೇ ರೀತಿಯಲ್ಲಿ…. ನಮ್ಮ ಮನೆತನದ…”
ಶಾಸ್ತ್ರಿಗಳಿಗೆ ಮಾತು ಮುಂದುವರಿಸುವುದು ಸಾಧ್ಯವಾಗಲಿಲ್ಲ. ಆಗ ಅವರಿಗೆ ಇನ್ನೊಂದು ಆಘಾತ ಕಾದಿದ್ದಂತೆ ಗಂಗಾಧರ ತನ್ನ ಮಗ ಗಣೇಶನನ್ನು ದರದರ ಎಂದು ಎಳೆದುಕೊಂಡು ಬಂದು ಬೊಬ್ಬಿಡಲಾರಂಭಿಸಿದ.

“ಕಾಂಗ್ರೆಸ್ ಅಂತೆ ಕಾಂಗ್ರೆಸ್…. ನಮ್ಮ ಎಲ್ಲ ರೀತಿ ನೀತಿಗಳನ್ನು ಹಾಳುಗೆಡವಲು ಬಂದ ಮಾರಿ…. ಅಪ್ಪಯ್ಯಾ, ನಾನು ಗಣೇಶನನ್ನು ಇನ್ನು ಆ ಶಾಲೆಗೆ ಕಳುಹಿಸುವುದಿಲ್ಲ… ಖಂಡಿತ ಕಳುಹಿಸುವುದಿಲ್ಲ…. ಈಗ ಏನಾಗಿದೆ ಗೊತ್ತೇ…. ಆ ಕೆಂಚನೂ ಶಾಲೆಗೆ ಬರತೊಡಗಿದ್ದಾನೆ… ಹರಿಜನ ಮಕ್ಕಳಿಗೂ ಶಾಲೆಯಲ್ಲಿ ಪ್ರವೇಶ ಬೇಕೂಂತ ಆ ಹಾಳಾದ ಸುಧಾಕರ ಮಾಷ್ಟ್ರು ಕೆಂಚನನ್ನೂ ಶಾಲೆಗೆ ಕರೆದು ತಂದು ಕೂರಿಸಿದ್ದಾರೆ. ಅವನಿಗೆ ಗಾಂಧಿ ಟೊಪ್ಪಿ ಮೊದಲು ಕೊಟ್ಟವಳೇ ನಿಮ್ಮ ಮುದ್ದಿನ ಸೊಸೆ. ಈಗ ಅವನಿಗೆ ಶಾಲೆಯ ಸಂಸ್ಕಾರ ಬೇರೆ…. ನನ್ನ ಗಣೇಶನೂ ಅದೇ ಶಾಲೆಯಲ್ಲಿ ಅವನ ಜತೆಗೆ ಕುಳಿತುಕೊಂಡು ಕಲಿಯಬೇಕೇ? ಅಪ್ಪಯ್ಯಾ, ನಿಮ್ಮ ಗಾಂಧಿ ಸೊಸೆ ಬಂದ ಗಳಿಗೆ ತುಂಬ ಚೆನ್ನಾಗಿದೆ. ಇನ್ನೇನು ಉಳಿದಿದೆ… ನಾನು ಆ ಹೊಲೆಯರು ಬರುವ ಶಾಲೆಗೆ ನನ್ನ ಮಗನನ್ನು ಕಳುಹಿಸಲು ತಯಾರಿಲ್ಲ… ಈವತ್ತೇ ಶಾಲೆಗೆ ಕೊನೆ… ದಿನಾ ಶಾಲೆಯಿಂದ ಬಂದವನಿಗೆ ಸೆಗಣಿ ಮೆತ್ತಿಸಿ ಸ್ನಾನ ಮಾಡಿಸಿ ಜನಿವಾರ ಬದಲಾಯಿಸುವ ಕೆಲಸ ನನ್ನಿಂದಾಗದು. ಆ ಹಾಳು ಕಾಂಗ್ರೆಸ್ ಸರಕಾರ ಬಂದದ್ದಕ್ಕೆ ಸಾರ್ಥಕವಾಯಿತು.” ಆತ ಹಾಗೆ ಹೇಳುತ್ತಿದ್ದವನು ತನ್ನ ಲಕ್ಷ್ಯ ವಿದ್ಯಾಧರನ ಕಡೆಗೆ ಹರಿಸಿದ್ದು ಆಗಲೇ. ಜುಟ್ಟು ತೆಗೆಸಿ ಗಾಂಧಿ ಟೊಪ್ಪಿ ಧರಿಸಿದ ಅವನನ್ನು ನೋಡಿದವನೇ ಎರಡು ಕ್ಷಣ ಆಶ್ಚರ್ಯದಿಂದ ನಿಂತು, ಆಮೇಲೆ,

“ಹೊ ಹೊ ಹೋ ಹೊ ಹೊ ಹೋ” ಎಂದು ನಗುತ್ತಲೇ ಗಂಗಾಧರ ಅಲ್ಲಿಂದ ಒಳಕೋಣೆಗೆ ಓಡಿದಾಗ ಇದೇನೆಲ್ಲ ಗಲಾಟೆಯೆಂದು ಗಂಗಮ್ಮ ಬಾಗಿಲಿಗೆ ಬಂದು ನಿಂತಿದ್ದರು.

******

“ಇದೇನಿದು… ನೀವು ಕಮ್ಯೂನಿಸ್ಟ್ ಥರಾ ಮಾತನಾಡ್ತೀರ! ಎಲ್ಲಿಂದ ಕಲಿತಿರಿ ಆ ವಿಚಾರವನ್ನೆಲ್ಲ… ನೀವು ಎಫ್.ಎ. ಪರೀಕ್ಷೆಗೆ ಕಟ್ತೇನೇಂತ ಹೇಳ್ತಾ ಓದ್ತಾ ಇದ್ದದ್ದು ಇದೇನೇ…”
ವಿದ್ಯಾ ನಕ್ಕ…..

“ಇದೆಲ್ಲ ನನ್ನ ಓದಿನಿಂದ ಬಂದಿದ್ದಲ್ಲಮ್ಮಾ, ವಿಚಾರದಿಂದ. ಹಾಗೆಯೇ ನನಗಿಂತ ಹೆಚ್ಚು ತಿಳಕೊಂಡವರ ಹತ್ತಿರ ಮಾತನಾಡಿದ ಅನುಭವದಿಂದ..”

“ಯಾರಪ್ಪಾ ಆ ಮಹಾನುಭಾವ… ನನ್ನ ಗಂಡನಿಗೆ ಬುದ್ಧಿ ಹೇಳೋರು, ಅದೂ ಇತಿಹಾಸದಲ್ಲಿ! ನೀವು ಲೆಕ್ಕದಲ್ಲಿ ಮಾತ್ರ ತುಂಬ ಹುಶಾರು ಅಂತ ತಿಳಕೊಂಡಿದ್ದೆ.”

“ಯಾರೂಂತ ಹೇಳೋ ಸ್ವಾತಂತ್ರ್ಯ ಈಗ ನನಗಿಲ್ಲ. ಸಮಯ ಬಂದಾಗ ಹೇಳ್ತೇನೆ…”

“ಓ… ಅದರಲ್ಲೂ ಗುಟ್ಟೇ, ನನ್ನ ಕೂಡಾನೂ… ಇದಕ್ಕೇನೇ ನೀವು ವಾರಕ್ಕೊಮ್ಮೆ ಮಂಗಳೂರಿಗೆ ಓಡ್ತಾ ಇರೋದು, ಶಾಲೆ ಕೆಲಸಾಂತ ಸುಳ್ಳು ಹೇಳಿ…”

ನನಗೆ ಗಾಂಧೀಜೀಯೆಂತಂದರೆ ತುಂಬ ಇಷ್ಟ ಮಾವಯ್ಯಾ, ಅವರು ಉಡುಪಿಗೆ ಬಂದಿದ್ರಲ್ಲಾ ಮಾವಯ್ಯಾ, ಕೆಲವು ವರ್ಷಗಳ ಹಿಂದೆ. ನೀವು ಹೇಳಿದ್ರಲ್ಲಾ ನನ್ನ ಪಚ್ಚೆ ಚಿಕ್ಕಪ್ಪಾಂತ – ಅವರ ಜತೆಯಲ್ಲೇ ಅವರನ್ನು ನೋಡೋದಿಕ್ಕೇಂತ ಹೋಗಿದ್ದೆ. ಚಿಕ್ಕಪ್ಪನ ಜತೆ ಹೋಗಿದ್ದು ನನ್ನ ಪುಣ್ಯ. ಅವರಿಗೆ ಒಂದು ಮಾಲೆ ಹಾಕೋ ಅವಕಾಶಾನೂ ನನಗೆ ಸಿಕ್ಕಿತ್ತು.

ವಿದ್ಯಾ ನಗುತ್ತಲೆ….
“ಸುವ್ವೀ… ನಾನು ನನಗೆ ತಿಳಿಯದ ಕೆಲವೊಂದು ವಿಚಾರ ಒಬ್ಬರಿಂದ ಕಲೀತಾ ಇರೋದು ನಿಜ. ಸುಧಾಕರರಾಯರೇ ಅವರ ವಿಚಾರ ನನಗೆ ಮೊದಲು ತಿಳಿಸಿದ್ದು. ಅದು ಯಾರೂಂತ ಮಾತ್ರ ಕೇಳಬೇಡ, ಸಮಯ ಬಂದಾಗ ಹೇಳ್ತೇನೆ. ಈಗ ಯುದ್ಧದ ವಾತಾವರಣ. ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೂ ದಿಲ್ಲೀ ದರ್ಬಾರು ಬ್ರಿಟಿಷರ ಕೈಯಲ್ಲೇ ಇದೆ… ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇರ್ತಾರೆ – ಅದಕ್ಕೆ ಬೇಕಾದ ಜನಾನೂ ಇದ್ದಾರೆ ಅವರ ಬಳಿ, ಯಾರು ತಮ್ಮ ಸ್ವಾರ್ಥವನ್ನ ವಿರೋಧಿಸ್ತಾರೇಂತ…”

“ನನಗೆ ಅಷ್ಟೆಲ್ಲ ಪುರಾಣ ಬೇಡ. ಈಗ ಕಾಂಗ್ರೆಸ್ ಕೂಡ ಯೋಚನೆ ಮಾಡ್ತಾ ಇದೆಯಂತಲ್ಲ ಈ ಯುದ್ಧದಿಂದ ನಮಗೇನು ಪ್ರಯೋಜನ ಇದೇಂತ; ಸರಕಾರ ಏನೂ ಹೇಳಲ್ಲ. ಯುದ್ಧ ಮುಗಿದಮೇಲೆ ನೋಡೋಣಾಂತ. ಗಣಪತಿ ಮದುವೆ – ಹೀಗಿದ್ದು ಕಾಂಗ್ರೆಸ್ ಕೂಡ ರಾಜಿ ಕೊಟ್ಟು ಪುನಃ ಎಲ್ಲ ಜೇಲಿಗೆ ಹೊಗುವಂತಾದರೆ…”

ವಿದ್ಯಾ ಪತ್ನಿಯ ಮಾತನ್ನು ಕೇಳದವನಂತೆ ಆಕಾಶ ನೋಡುತ್ತಿದ್ದ…

ಆಗ ದೋಣಿಯಲ್ಲಿದ್ದ ಪ್ರಯಾಣಿಕರೊಬ್ಬರು ಇವರ ಸಂಭಾಷಣೆಯನ್ನೆ ಆಲಿಸುತ್ತಿದ್ದವರು-

“ಅಲ್ಲ ಮಹಾರಾಯರೆ, ಈ ಯುದ್ಧದಿಂದ ಚಿಮಿಣಿ ಎಣ್ಣೆಗೂ ಬರ ಬಂದಿದೆಯಲ್ಲ… ಇಲ್ಲಿ ದೀಪ ಉರಿಸೋದು ಹೇಗೇಂತ…”
ವಿದ್ಯಾ ಅವರನ್ನೆ ನೊಡಿ, “ನಮ್ಮ ದೇಶಕ್ಕೆ ಹೊರಗಿನಿಂದ ಬರೋದೆಲ್ಲ ಇನ್ನು ಕಷ್ಟದಿಂದ ಬರಬೇಕಾಗುತ್ತೆ. ಬೆಲೆ ದುಬಾರಿಯಾಗತ್ತೆ, ಸಿಗೋದು ಕಡಿಮೆಯಾಗತ್ತೆ.”

“ಆಮೇಲೆ ಹೊನ್ನೆ ಎಣ್ಣೆ ದೀಪಾನೇ ಬರಬೇಕಾಗುತ್ತೆ” ಎಂದಳು ಸಾವಿತ್ರಿ, ನಗುತ್ತಾ. ಅಷ್ಟರಲ್ಲಿ ಹೊಳೆಯ ಆಚೆಯ ದಡ ಬಂದಿತ್ತು… ಇಬ್ಬರೂ ಕೊಡದೂರಿನಾಚೆ ಹೋಗಲು ಕಾಯುತ್ತಿದ್ದ ಬಸ್ಸನ್ನೇರಲು ಮುಂದಾದರು.

******

ಮಗಳು ಅಳಿಯನನ್ನು ಕಂಡೊಡನೆ “ಇಬ್ಬರೂ ಬಂದಿರಾ. ಒಳ್ಳೆಯದೇ ಆಯಿತು. ಚೆನ್ನಾಗಿದ್ದೀಯಲ್ಲ ಸಾವಿತ್ರೀ… ವಿದ್ಯಾ… ನಿನ್ನೊಡನೆ ಮಾತನಾಡಬೇಕೆಂದೇ ಕಾಯುತ್ತಿದ್ದೆ…. ಮದರಾಸಿನ ಕಾಂಗ್ರೆಸ್ ಸರಕಾರ ರಾಜಿ ಕೊಟ್ಟಿದೆಯಂತಲ್ಲ. ಕಾಂಗ್ರೆಸ್ ಆಡಳಿತ ಮುಗಿಯಿತಂತಲ್ಲ ಅಕ್ಟೋಬರ್ 21ಕ್ಕೆ. ಈಗ ಮಂಗಳೂರಿಗೆ ಮತ್ತೆ ಗಾನ್ ಸಾಹೇಬರೇ ಕಲೆಕ್ಟರರಾಗಿ ಬಂದಿದ್ದಾರಂತಲ್ಲ….”

ವಿದ್ಯಾ ಸಾವಿತ್ರಿಯರಿಬ್ಬರಿಗೂ ಒಮ್ಮೆಗೇ ಅವರು ಕಾಂಗ್ರೆಸ್ಸಿನ ಬಗೆಗೆ ಏಕೆ ಮಾತನಾಡತೊಡಗಿದ್ದಾರೆಂದು ಅರ್ಥವಾಗಲಿಲ್ಲ.

ಸಾವಿತ್ರಿ “ಅಪ್ಪಾ… ಶಂಕರ ಚಿಕ್ಕಪ್ಪ ಬಂದಿದ್ದರೇ ಎಲ್ಲಾದರೂ?” ಎಂದು ತನ್ನ ಆಸಕ್ತಿಯ ಪ್ರಶ್ನೆಯನ್ನೇ ಕೇಳಿದಳು.

“ಇಲ್ಲಮ್ಮಾ. ಅವನ ಸುದ್ದಿಯೇ ಇಲ್ಲ, ನಿನ್ನ ಮದುವೆಯಾದ ಮೇಲೆ. ವರ್ಷಕ್ಕೆ ಒಮ್ಮೆಯಾದರೂ ಬರುತ್ತಿದ್ದವನು ಈಗ ಎಲ್ಲಿ ಗಾಂಧಿ ಸೇವೆಗೆ ಹೋಗಿದ್ದಾನೋ ದೇವರಿಗೆ ಗೊತ್ತು” ಎಂದರು.

“ಹಾಗಿದ್ದರೆ ನಿಮಗೆ ಈ ಕಾಂಗ್ರೆಸ್ನ ವಿಚಾರ ಈಗ ಒಮ್ಮೆಗೇ ಇಷ್ಟೇಕೆ ಆಸಕ್ತಿ…? ಮೊನ್ನೆ 22 ಕ್ಕೆ ಕಾಂಗ್ರೆಸ್ ರಾಜಿ ಕೊಡಲು ನಿರ್ಧರಿಸಿದ್ದು ಪೇಪರ್ನಲ್ಲಿ ಬಂದದ್ದು ನಿಜ…. ಇನ್ನು ಬ್ರಿಟಿಷ್ ಸರಕಾರದ್ದೆ ಕಾರುಭಾರು… ಯಾರು ಕಲೆಕ್ಟರರಾಗಿ ಬಂದರೇನು ನಮ್ಮ ದೇಶ ಉದ್ಧಾರವಾಗತ್ತೆಯೇ… ಅಷ್ಟಕ್ಕೆಯೇ ಕಾಂಗ್ರೆಸ್ ನ ಹೋರಾಟ ನಿಲ್ಲತ್ತೆಯೇ?”

“ಅದು ನನಗೂ ಗೊತ್ತು ಸುವ್ವೀ… ಹೋರಾಟ ನಿಲ್ಲೋಲ್ಲ. ಆದರೆ ಇನ್ನೂ ಎಷ್ಟು ಜನ ಜೈಲಿಗೆ ಹೋಗಬೇಕಾಗತ್ತೋ ನೋಡಬೇಕು…”

“ಬರೇ ಜೈಲಿಗೆ ಹೋಗೋದರಿಂದ ಹೋರಾಟ ಮುಗಿಯೋಲ್ಲ ಮಾವಾ. ಅಲ್ಲದೆ ಬ್ರಿಟಿಷರಿಗೆ ಬಿಸಿ ತಟ್ಟೋ ಹಾಗೆ ಹೋರಾಟ ನಡೆಯೋದಿಕ್ಕೆ ಇನ್ನೂ ದೇಶ ಸಿದ್ಧವಾಗಿಲ್ಲ. ಈ ಗಾಂಧಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಿಗತ್ತೇಂತ ನಾವು ತಿಳಕೊಂಡಿದ್ದರೆ…” ವಿದ್ಯಾ ಮಾತನಾಡಿದ.

ವಿದ್ಯಾ ಮಾತು ನಿಲ್ಲಿಸಿದ್ದು ಸಾವಿತ್ರಿಯ ಮುಖ ನೋಡಿದಾಗ ಅಲ್ಲಿ ಆತ ಒಂದು ವಿಚಿತ್ರ ರೀತಿಯ, ತಾನು ಹಿಂದೆಂದೂ ಕಾಣದ ಕಳವಳದ ಛಾಯೆಯನ್ನು ಗುರುತಿಸಿದಾಗ, ಆತನ ಮಾತು ಅರ್ಧಕ್ಕೆಯೇ ನಿಂತಿತು.

ಸಾವಿತ್ರಿ ಗಂಡನನ್ನೇ ನೋಡುತ್ತ –
“ಅಲ್ಲಾ…” ಎಂದಳು.

ಈಗ ಮಾತನಾಡಿದ್ದು ಸೋಮಯಾಜಿಗಳು.

“ವಿದ್ಯಾ… ನಾನೇ ನಿನ್ನನ್ನು ಕೇಳಬೇಕೂಂತ ಇದ್ದೆ… ಹೇಗೆ ಕೇಳೋದು ಅಂತ ಸ್ವಲ್ಪ ಸಂಕೋಚ ಕೂಡ ಇತ್ತು… ನಮ್ಮ ಸಾವಿತ್ರಿಗೆ ಗಾಂಧಿ ಸಂಸ್ಕಾರ ಅವಳ ಚಿಕ್ಕಪ್ಪನಿಂದಲೇ ಬಂದದ್ದು ಚಿಕ್ಕಂದಿನಿಂದ. ಆದರೆ ನಿನಗೆ ಈ ವಿಚಾರ, ಅದೂ ಸರಕಾರದ ವಿರುದ್ಧ ಮಾತನಾಡುವ ಹುಚ್ಚು, ಯಾವಾಗಿನಿಂದ ಬಂತೂಂತ ಕೇಳಬೇಕೂಂತ ಯೋಚಿಸಿಕೊಂಡಿದ್ದೆ…. ಅದಕ್ಕೂ ಕಾರಣ ಇದೆ….”

ಸಾವಿತ್ರಿ ಗಂಡನ ಹಾಗೂ ತಂದೆಯ ಮುಖಗಳನ್ನೆ ನೋಡುತ್ತಿದ್ದಳು.

“ಸಾವಿತ್ರೀ…” ಎಂದರು ಸೋಮಯಾಜಿಗಳು ಈಗ ಮಗಳನ್ನು ಉದ್ದೇಶಿಸಿ. “ಆ ರಿಟೈರ್ಡ್ ತಹಶೀಲ್ದಾರ ಇದ್ದಾರಲ್ಲ ಬಿಡದೂರಿನ ಗುಡ್ಡೆಯ ಮೇಲೆ…. ಬಂಗಲೆ ಕಟ್ಟಿಕೊಂಡಿರುವ ಅವರು ಒಂದು ವಾರದ ಹಿಂದೆ ಬಂದಿದ್ದರು ನಮ್ಮ ಅಂಗಡಿಗೆ – ಫೋಟೊ ತೆಗೆಸಿಕೊಳ್ಳುವ ಕೆಲಸವೇನೂ ಇರಲಿಲ್ಲ, ಬರೇ ಲೋಕಾಭಿರಾಮ ಮಾತನಾಡಲು. ಆದರೆ ಈ ಲೋಕಾಭಿರಾಮ ಉದ್ದೇಶಪೂರ್ವಕವಾಗಿಯೇ ಎಂದು ನನಗೆ ತಿಳಿದದ್ದು ಅವರು ವಿದ್ಯಾನ ಕುರಿತು ಮಾತನಾಡಿದಾಗ…”

ಈಗ ವಿದ್ಯಾನ ಕುತೂಹಲವೂ ಚಿಗುರಿತ್ತು.

“ಈಗ ಯುದ್ಧ ನಡೀತಿದೆಯಲ್ಲ… ಸರಕಾರ ನಮ್ಮನ್ನೂ ಯುದ್ಧಕ್ಕೆ ನೂಕಿದೆ. ಕಾಂಗ್ರೆಸ್ ಏನೇ ಹೇಳಲಿ… ಯುದ್ಧ ಬೇಡಾಂತ ಯಾರೂ ಮಾತನಾಡೋ ಹಾಗಿಲ್ಲ. ನಮ್ಮ ದೇಶದಲ್ಲಿದ್ದ ಜರ್ಮನರನ್ನೆಲ್ಲ ಹಿಡಿದಿಟ್ಟಿದ್ದಾರೆ. ಹಾಗೆಯೇ ಈಗ ಬಂದಿದೆಯಂತಲ್ಲ ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ ಅಂತ, ಯುದ್ಧವನ್ನ ಅಥವಾ ಸರಕಾರವನ್ನ ವಿರೋಧಿಸುವವರನ್ನೆಲ್ಲ ಜೈಲಿಗೆ ತುರುಕೋದಿಕ್ಕೆ ಅಭ್ಯಂತರವೇನೂ ಇಲ್ಲ ಅಂತ. ಹೀಗಾಗಿ ಯಾರ ಮೇಲೆ ಗುಮಾನಿ ಬಂದರೂ ಅವರನ್ನ ಜೈಲಿಗೆ ತಳ್ಳೋದಿಕ್ಕೆ ಸರಕಾರ ಯಾರನ್ನೂ ಕೇಳೋಲ್ಲ.”

“ಇದಕ್ಕೂ ನನಗೂ ಏನು ಸಂಬಂಧ ಮಾವಾ…”

“ಅದನ್ನೇ ಹೇಳ್ತೇನೆ…. ನಿನ್ನ ಹೆಸರೂ ಅವರ ಬಾಯಿಯಿಂದ ಬಂದಾಗ ನನಗೆ ಆಶ್ಚರ್ಯ. ನೀನು ಶಾಲೆಯ ಕೊರಗರ ಹುಡುಗನಿಗೆ ಪಾಠ ಹೇಳ್ತೀಂತ ಯಾರೂ ಆಕ್ಷೇಪಣೆ ಮಾಡೋಲ್ಲ. ಆದರೆ ನೀನು ಸರಕಾರಕ್ಕೆ ಬೇಡವಾದವರ ಜತೆ ತಿರುಗುತ್ತೀಂತ ಸೈಮನ್ ಪರೇರಾಗೆ ಗೊತ್ತೋ ಅಥವಾ ಅವರು ಬೇಕೂಂತಲೇ ಏನೇನೋ ಹೇಳ್ತಾರೋ ನನಗೆ ತಿಳಿದಿಲ್ಲ. ಆದರೆ ಅವರು ನನ್ನ ಹತ್ತಿರ ಹೇಳಿದ್ದು, ನಿಮ್ಮ ಅಳಿಯನಿಗೆ ಸ್ವಲ್ಪ ಎಚ್ಚರದಿಂದಿರುವ ಹಾಗೆ ಹೇಳಿ, ಸರಕಾರಕ್ಕೆ ಬೇಡವಾದವರ ಜತೆ ಅವರ ಸಂಪರ್ಕ ಇದೆ, ಇದರಿಂದ ಅವರಿಗೇ ಕೇಡಾಗುವ ಸಂಭವ ಇದೆ ಅಂತ…. ನೀನು ಆಗಾಗ ಮಂಗಳೂರಿಗೆ ಹೋಗ್ತಾ ಇರ್ತೀಯಂತೆ. ಯಾರು ಯಾರನ್ನೋ ನೋಡ್ತೀಯಂತೆ. ಇದೆಲ್ಲ ಅವರಿಗೆ ಗೊತ್ತಾದದ್ದು ಹೇಗೇಂತ ನನಗೆ ಆಶ್ಚರ್ಯ…”

ಸಾವಿತ್ರಿ ಕೂಡ ಗಂಡನನ್ನೇ ನೋಡುತ್ತಿದ್ದಳು. ಅವಳ ಮುಖದಲ್ಲೂ ಕಳವಳ ವ್ಯಕ್ತವಾಗುತ್ತಿತ್ತು.

“ಮಾವಾ…. ನಾನು ಕೆಲವೊಮ್ಮೆ ಮಂಗಳೂರಿಗೆ ಹೋಗಿ ಬರ್ತಾ ಇರೋದು ನಿಜ. ಆದರೆ ಹೆಚ್ಚಾಗಿ ಶಾಲೆಗೆ ಸಂಬಂಧಿಸಿದ ಕೆಲಸದ ಸಲುವಾಗಿಯೇ… ಜಿಲ್ಲಾ ಬೋರ್ಡು ಕಛೇರಿಯಲ್ಲಿ ಶಾಲೆಗೆ ಸಂಬಂಧಿಸಿದ ಕೆಲಸ ಇದ್ದಾಗ ಸುಧಾಕರ ರಾಯರು ನನ್ನನ್ನೇ ಕಳುಹಿಸುತ್ತಾರೆ. ಹಾಗೆ ಹೋದಾಗ ನಾನು ಯಾರನ್ನು ನೋಡ್ತೇನೆ, ಏನು ವಿಚಾರ ಮಾಡ್ತೇನೇಂತ ತಿಳಕೊಳ್ಳುವ ಅಧಿಕಪ್ರಸಂಗ ಸೈಮನ್ ಪರೇರಾಗೆ ಅಗತ್ಯವಿಲ್ಲ. ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ ಇದೆ, ನಮ್ಮ ಘನ ಸರಕಾರ ನಮಗೆ ಬೇಡವಾದ ಯುದ್ಧಕ್ಕೆ ನಮ್ಮನ್ನು ಸೇರಿಸಿಕೊಂಡಿದೆ ಅಂತ ನನಗೆ ಗೊತ್ತು. ಆದರೆ ನಾನೇನೂ ದೇಶದ್ರೋಹದ ಕೆಲಸ ಈ ತನಕ ಮಾಡಿಲ್ಲ…. ಒಂದು ವೇಳೆ… ಮಾಡಬೇಕೂಂತ ಅನಿಸಿದರೂ ಸೈಮನ್ ಪರೇರಾನ್ನ ಕೇಳಿ ಮಾಡೋಲ್ಲ…”

ವಿದ್ಯಾನ ಮಾತು ಕೇಳಿ ಸೋಮಯಾಜಿಗಳಿಗಿಂತಲೂ ಹೆಚ್ಚು ಆಶ್ಚರ್ಯವಾದದ್ದು ಸಾವಿತ್ರಿಗೆ…. ತನಗೆ ಅರ್ಥವಾಗದ ದಿಕ್ಕಿನಲ್ಲಿ ವಿದ್ಯಾ ಹೋಗುತ್ತಿದ್ದಾನೆಯೇ, ತಾನು `ಹಿಂದೂ’ ಪತ್ರಿಕೆ ಓದಿ ದೊರಕಿಸಿಕೊಂಡ ಜ್ಞಾನಕ್ಕಿಂತಲೂ ಹೆಚ್ಚಾದ ಜಿಜ್ಞಾಸೆಗೆ ಗಂಡ ತೊಡಗಿದ್ದಾನೆಯೇ ಎಂಬ ಸಂದೇಹ ಬಲವಾಗತೊಡಗಿತ್ತು.

ಇದು ಸಾಧ್ಯವಾದದ್ದಾದರೂ ಹೇಗೆ? ಆತನ ಓದಿನಿಂದಲೇ, ಈ ಸುಧಾಕರರಾಯರ ಸಂಪರ್ಕದಿಂದಲೇ… ಅಥವಾ ಬೇರೆ ಯಾರಾದರೂ ಅವನ ವಿಚಾರಗತಿಯನ್ನು ನಿರ್ಧರಿಸುವಷ್ಟು ಮುಂದುವರಿದಿದ್ದಾರೆಯೇ?

ಸೋಮಯಾಜಿಗಳು ಕೆಲವು ಕ್ಷಣ ಮೌನವಾಗಿದ್ದರೂ ಕೊನೆಗೆ –
“ವಿದ್ಯಾ…. ಪರೇರಾ ಅಂತಹ ಉಪದ್ರ ಕೊಡುವ ವ್ಯಕ್ತಿ ಅಂತ ನನಗೆ ಅನಿಸೋಲ್ಲ, ಆದರೆ ನೀನು ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು… ನೋಡು. ಸಾವಿತ್ರಿಯೂ ತಿಂಗಳು ತುಂಬುತ್ತಿರುವ ಬಸುರಿ. ಚಿಂತೆಗೆ ಕಾರಣವಾಗುವ ಸಂದರ್ಭ ಬರಬಾರದು, ನೋಡು…”

ಆದರೆ ಸಾವಿತ್ರಿಯ ಮನಸ್ಸೆಲ್ಲ ವಿದ್ಯಾನ ವಿಚಾರವೇ ಚಿಂತಿಸುತ್ತಿತ್ತು… ಆತನಲ್ಲಿ ಬಂದಿರುವ ಬದಲಾವಣೆಗೆ ಹೇಗೆ ಅರ್ಥ ಹಚ್ಚಬೇಕು… ಮನೆಗೆ ಮರಳುತ್ತಿದ್ದಾಗ ದಾರಿಯಲ್ಲಿ ಮೌನವಾಗಿಯೇ ನಡೆಯುತ್ತಿದ್ದ ಗಂಡನೊಡನೆ ಮಾತು ಬೆಳೆಸಿದ್ದು ಸಾವಿತ್ರಿಯೇ…

“ಇದೇನಿದು, ನೀವು ಮಂಗಳೂರಿಗೆ ಹೋಗಿ ಏನೋ ಕಿತಾಪತಿ ನಡೆಸ್ತೀರ. ನಿಮಗೆ ಓದುವ ಹುಚ್ಚು ತಲೆಗೆ ಅಂಟಿಕೊಂಡಿದೆ ಅಂತ ನನಗೆ ಗೊತ್ತು… ನನಗೆ ಸಂತೋಷವೇ, ಆದರೆ ನೀವು ಬೇಡವಾದವರ ಜತೆ ಸೇರಿಕೊಳ್ತೀರಿ ಅಂತ ಪರೇರಾ ಹೇಳೋದಿಕ್ಕೆ ಏನಾದರೂ ಕಾರಣ ಇರಬೇಕಲ್ಲ. ಬೆಂಕಿ ಇರದೆಯೇ ಹೊಗೆ ಏಳುತ್ತೆಯೇ. ನನ್ನ ಹತ್ರಾನೂ ಹೇಳದೆ ಇರೋ ಕೆಲಸ ನೀವು ಏನು ಮಾಡ್ತಿದ್ದೀರ?”

ತುಸು ಹೊತ್ತು ಮೌನವಾಗಿಯೇ ನಡೆಯುತ್ತಿದ್ದ ವಿದ್ಯಾ ಮನೆ ಸಮೀಪಿಸುತ್ತಿದ್ದಂತೆ, “ಸುವ್ವೀ… ನನಗೆ ಓದುವ ಹುಚ್ಚು ಹಿಡಿಸಿದ್ದು ನೀನೆ ಅಲ್ಲವೇನೆ?.. ಆದರೆ ತಿಳಿವಳಿಕೆ ಯಾವಾಗಲೂ ಹೆಚ್ಚಿನ ತಿಳಿವಳಿಕೆಯನ್ನೆ ಅಪೇಕ್ಷಿಸುತ್ತದೆಯೇ… ಓದು ಹೆಚ್ಚಾದಾಗ ಕಳವಳವೂ ಹೆಚ್ಚಾಗುತ್ತೆ – ಯಾಕೆ ಹೀಗೆಲ್ಲ ಇದೇಂತ… ಯಾಕೆ ನಮ್ಮ ತಿಳಿವಳಿಕೆ ವಿಚಾರಾನ ಬೆಳೆಸಿಕೊಳ್ಳೋದಿಲ್ಲ ಅಂತ… ನಮ್ಮ ಬ್ರಿಟಿಷ್ ಸರಕಾರಕ್ಕೆ ಭಾರತೀಯರೆಲ್ಲ ದೇಶ ದ್ರೋಹಿಗಳೇ – ಅವರು ಕೊಳ್ಳೆ ಹೊಡೆಯುತ್ತಿರುವ ಸಂಪತ್ತನ್ನು ನ್ಯಾಯವಾಗಿ ತಿನ್ನಬೇಕಾದವರು… ಪರೇರಾ ನನ್ನ ವಿಚಾರ ನಿನ್ನ ಅಪ್ಪನೊಡನೆ ಏನೋ ಹೇಳಿದ್ದಕ್ಕೂ ಅವನಿಗೆ ತಿಳಿದ ಕಾರಣ ಇರಬಹುದು… ನಾನು ಬರೇ ಹಳ್ಳಿ ಶಾಲೆಯ ಮಾಸ್ತರ್, ಹಾಗೆಯೇ ನಡೆದುಕೊಳ್ಳಬೇಕೂಂತ ಅವನಿಗೂ ಅವನಂಥವರಿಗೂ ಅಪೇಕ್ಷೆ ಇರೋದು ಸರಿಯೇ… ಆದರೆ ಸುವ್ವೀ, ನನಗೆ ಈಗ ಯಾವುದೂ ಸರಿ ಕಾಣ್ತ ಇಲ್ಲ…. ಯಾವುದೂ… ಒಮ್ಮೊಮ್ಮೆ ತಲೆಯಲ್ಲಿ ಏನೇನೋ ವಿಚಾರ ಹೊಳೆಯತ್ತೆ… ಏನೇನೋ… ಎಲ್ಲಾದರೂ ಓಡಿಹೋಗೋಣಾಂತಲೂ ಅನಿಸತ್ತೆ…. ನಾನು ಮಂಗಳೂರಲ್ಲಿ ಒಬ್ಬರ ಜತೆ ಸಂಪರ್ಕ ಇಟ್ಟುಕೊಂಡಿರೋದು ನಿಜ. ನಾನು ಹಿಂದೆಯೇ ಹೇಳಿದ್ದೆನಲ್ಲ… ಅವರ ಮೇಲೆ ಸರಕಾರದ ಕಣ್ಣಿರೋದೂ ನಿಜ. ಆದರೆ ಅವರು ಲಾಯರ್ ಕೂಡ. ನನಗೆ ಅವರ ವಿಚಾರ ತಿಳಿಸಿದ್ದು ನಮ್ಮ ಸುಧಾಕರ ರಾಯರೇ… ಅದು ಅವರು ಮಾಡಿದ ದೊಡ್ಡ ಉಪಕಾರಾಂತಲೂ ನಾನು ತಿಳಿದುಕೊಂಡಿದ್ದೇನೆ. ಆದರೆ ಅವರ ಮೇಲೆ ಸರಕಾರದ ಕಣ್ಣಿದೇಂತ ನಾನೇನೂ ದುಡುಕಿ ಕೆಲಸ ಮಾಡುವ ಯೋಚನೆ ಮಾಡ್ತಾ ಇಲ್ಲ ಸದ್ಯ… ಹಾಗೆ ನಾನು ಒಬ್ಬನಿಂದಲೇ ಏನಾದರೂ ಮಹತ್ತರ ಫಿತೂರಿ ಸಾಧ್ಯವಾಗತ್ತೇಂತಾನೂ ತಿಳಿದಿಲ್ಲ… ಪರೇರಾ ಏನೇ ಹೇಳಲಿ, ಸದ್ಯ ನಿನಗೆ ನಿಶ್ಚಿಂತೆ ಸುವ್ವೀ. ಈಗ ನಿನ್ನಂತೆ ನನಗೂ ಪಾಪಾನದ್ದೇ ಯೋಚನೆ…”

ಮನೆ ತಲುಪುವಾಗ ಸಾವಿತ್ರಿಯ ಮುಖದಲ್ಲಿ ನಗು ಅರಳಿತ್ತು.

******

(`ಹೆಜ್ಜೆ …’ (2000) ಕಾದಂಬರಿಯ ಕೆಲವು ಪುಟಗಳು)
ಟಿಪ್ಪಣಿ:
ವ್ಯಾಸರಾಯ ಬಲ್ಲಾಳ:
ಉಡುಪಿಯ ಪ್ರಸಿದ್ಧ ನಿಡಂಬೂರು ಬಲ್ಲಾಳ ಮನೆತನದಲ್ಲಿ ಜನಿಸಿದ ವ್ಯಾಸರಾಯ ಬಲ್ಲಾಳರು (1923 – 2010) ಉದ್ಯೋಗ ನಿಮಿತ್ತ ಮುಂಬಯಿಯಲ್ಲಿಯೂ, ನಿವೃತ್ತಿಯ ನಂತರ ಬೆಂಗಳೂರಿನಲ್ಲಿಯೂ ನೆಲೆಸಿದ್ದರು. ಅವರ ಮೊದಲ ಕತೆ 1944ರಲ್ಲಿ ಬರೆದ ‘ಶಾಂತಿಯಜ್ಞ’ ಎಂಬ ಕತೆ. ಅವರ ಕಥಾ ಸಂಕಲನಗಳು : ‘ಬದುಕಿನ ಆದರ್ಶ’ (1950), ‘ಕಾಡುಮಲ್ಲಿಗೆ’ (1957), ‘ಸಂಪಿಗೆ ಹೂ’ (1958), ‘ಮಂಜರಿ’ (1975) ಮತ್ತು ‘ತ್ರಿಕಾಲ’ (1992). 2002ರಲ್ಲಿ ಅವರ ಸಮಗ್ರ ಕತೆಗಳು ಪ್ರಕಟವಾಗಿವೆ.
ಇತರ ಕೃತಿಗಳು: ‘ಅನುರಕ್ತೆ’, ‘ಹೇಮಂತ ಗಾನ’, ‘ವಾತ್ಸಲ್ಯಪಥ’, ‘ಉತ್ತರಾಯಣ’, ‘ಬಂಡಾಯ’, ‘ಆಕಾಶಕ್ಕೊಂದು ಕಂದೀಲು’ ಮತ್ತು ‘ಹೆಜ್ಜೆ’ (ಕಾದಂಬರಿಗಳು). ಜೀವನ ಚರಿತ್ರೆ, ನಾಟಕ, ವಿಡಂಬನೆ, ಪ್ರವಾಸ ಸಾಹಿತ್ಯ ಪ್ರಕಾರದ ಕೃತಿಗಳನ್ನು ಕೂಡ ಅವರು ಪ್ರಕಟಿಸಿದ್ದಾರೆ. ‘ಅನುರಕ್ತೆ’, ‘ಹೇಮಂತಗಾನ’, ‘ವಾತ್ಸಲ್ಯಪಥ’, ‘ಉತ್ತರಾಯಣ’, ‘ಬಂಡಾಯ’ ಮತ್ತು ‘ಹೆಜ್ಜೆ’ ಅವರ ಪ್ರಸಿದ್ಧ ಕಾದಂಬರಿಗಳು. ಹೆಜ್ಜೆ ಕಾದಂಬರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥಾನಕದ ಜೊತೆಗೆ, ಮದ್ರಾಸು ಪ್ರಾಂತ್ಯದಲ್ಲಿ ಹಾಗೂ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಹೇಗೆ ನಡೆಯಿತು, ರಾಜಕೀಯವಾಗಿ ಆದ ಬದಲಾವಣೆಗಳು ಯಾವುವು ಎನ್ನುವುದರ ಒಂದು ಡಾಕ್ಯುಮೆಂಟರಿಯೂ ಈ ಕಾದಂಬರಿಯಲ್ಲಿ ಸಿಗುತ್ತದೆ.
ವಿಶ್ವ ಯುದ್ಧಗಳು, ಕಾಂಗ್ರೆಸ್ ಮಂತ್ರಿಮಂಡಳ ಇತ್ಯಾದಿ:
1914 ರಿಂದ 1919 ರವರೆಗೆ ನಡೆದ ಮೊದಲನೆಯ ಮಹಾಯುದ್ಧ ಮತ್ತು 1939 ರಿಂದ 1945 ರವರೆಗೆ ನಡೆದ ಎರಡನೆಯ ಮಹಾಯುದ್ಧದ ಕಾಲದಲ್ಲಿ ನಮ್ಮ ಜನಗಳು ಆಹಾರದ ಅಭಾವದಿಂದ ರೇಷನ್ ಪದ್ಧತಿಯ ಬವಣೆಯನ್ನು ಅನುಭವಿಸಿದರು. ಇತಿಹಾಸ ಪಾಠಗಳಲ್ಲಿ ಹೃದಯವನ್ನು ಸ್ಪರ್ಶಿಸಿದ ಈ ಕಾಲದ ಬವಣೆಗಳ ಚಿತ್ರಣ ಹಲವು ಕತೆಗಳಲ್ಲಿ ದೊರಕುತ್ತವೆ.
1935 ರಲ್ಲಿ ಬಂದ ರಿಫಾಮ್ರ್ಸ್ ಆ್ಯಕ್ಟ್ ಶಾಸನದಂತೆ ರಾಜಕೀಯ ಸುಧಾರಣೆಗಳು ಆದವು. ಶಾಸನ ಸಭೆಗಳಿಗೆ ಚುನಾವಣೆ ನಡೆಸಿ ಸ್ಥಳೀಯ ರಾಜಕೀಯ ಪಕ್ಷಗಳ ಮೂಲಕ ಆಡಳಿತ ನಡೆಸಲು ಬ್ರಿಟಿಷರು ಮುಂದಾದರು. ಆಗ ಶಾಸನ ಸಭೆಗಳಿಗೆ ನಡೆದ ಚುನಾವಣೆಗಳಲ್ಲಿ ಭಾಗವಹಿಸಿದ ಕಾಂಗ್ರೆಸ್ ಮದ್ರಾಸಿನಲ್ಲಿ ಅಧಿಕಾರ ಹಿಡಿಯಿತು. ಡಾಕ್ಟರ್ ಎ. ಬಿ. ಶೆಟ್ಟಿಯವರು ಮದ್ರಾಸ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ 1939 ರಲ್ಲಿ ಬ್ರಿಟಿಷ್ ಸರಕಾರ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದಾಗ ಭಾರತದ ಜನತಾ ಮಂತ್ರಿಮಂಡಳಗಳ ಅಭಿಪ್ರಾಯ ಕೇಳದೆ ಭಾರತವೂ ಜರ್ಮನಿಯ ವಿರುದ್ಧ ಯುದ್ಧ ಸಾರಿದೆ ಎಂದು ಘೋಷಿಸಿತು. ಇದನ್ನು ಖಂಡಿಸಿದ ಕಾಂಗ್ರೆಸ್ ಸಂಪುಟಗಳು ರಾಜೀನಾಮೆ ನೀಡಿದವು. ಮದ್ರಾಸ್ ಮಂತ್ರಿಮಂಡಳದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಜಾಜಿಯವರೂ ಬಂಧನಕ್ಕೊಳಗಾದರು.
1942 ರಲ್ಲಿ ‘ಭಾರತದಿಂದ ತೊಲಗಿ’ (ಕ್ವಿಟ್ ಇಂಡಿಯಾ) ಕಾರ್ಯಕ್ರಮದಂತೆ ‘ಮಾಡು ಇಲ್ಲವೆ ಮಡಿ’ ಹೋರಾಟ ಕಾಂಗ್ರೆಸಿಗರಿಂದ ಪ್ರಾರಂಭವಾಯಿತು. ಸರಕಾರ ವಿರೋಧ ಕಛೇರಿಗಳಿಗೆ ಬೆಂಕಿ ಹಚ್ಚುವುದು ಮುಂತಾದ ವಿವಿಧ ವಿಧ್ವಂಸಕ ಕೃತ್ಯಗಳ ಮೂಲಕವೂ ಹಬ್ಬತೊಡಗಿತು. ಬ್ರಿಟಿಷ್ ಸರಕಾರ ಅತ್ಯಂತ ಕ್ರೂರವಾಗಿ ಈ ಹೋರಾಟವನ್ನು ದಮನ ಮಾಡಿತು. (ಈ ಮಾಹಿತಿಗಳ ಹಿನ್ನೆಲೆಯಲ್ಲಿ ವ್ಯಾಸರಾಯ ಬಲ್ಲಾಳರ ‘ಹೆಜ್ಜೆ…’ ಕಾದಂಬರಿಯ ಭಾಗದ ಕೆಲವು ವಿವರಗಳು ಸ್ಪಷ್ಟವಾಗಿ ಗ್ರಾಹ್ಯವಾಗುತ್ತವೆ).
ಕಾಂಗ್ರೆಸನ್ನೂ, ಗಾಂಧೀಜಿಯವರನ್ನೂ ಸಂಪೂರ್ಣವಾಗಿ ಅಥವಾ ಭಾಗಶಃ ಒಪ್ಪದ ಕಮ್ಯೂನಿಸ್ಟರಂತಹ ವಿಚಾರವಾದಿಗಳು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಜಿಲ್ಲೆಯಲ್ಲಿದ್ದರು. ವ್ಯಾಸರಾಯ ಬಲ್ಲಾಳರ ‘ಹೆಜ್ಜೆ…’ ಕಾದಂಬರಿ ಆ ವಿಚಾರ ಧಾರೆಗಳನ್ನೂ ಗುರುತಿಸಿದೆ.
ಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶ ಸುಭಾಷ್ ಚಂದ್ರ ಭೋಸರ ಪ್ರಯತ್ನಗಳನ್ನೂ ಉತ್ಸಾಹದಿಂದ ಗಮನಿಸುತ್ತಿತ್ತು. ಕಮ್ಯೂನಿಸ್ಟರು ಗಾಂಧೀಜಿಯವರಿಗಿಂತ ಭಿನ್ನವಾಗಿ ಯೋಚಿಸುತ್ತ ಕಾರ್ಮಿಕರನ್ನೂ ರೈತರನ್ನೂ ಸಂಘಟಿಸುತ್ತಿದ್ದುದು, ಅವರನ್ನು ಕೂಡಾ ಬ್ರಿಟಿಷ್ ಸರಕಾರ ದಮನಿಸುತ್ತಿದ್ದುದು ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟದ ವಿವರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ವ್ಯಾಸರಾಯ ಬಲ್ಲಾಳರ ‘ಹೆಜ್ಜೆ…..’ ಕಾದಂಬರಿ ಆ ಕಾಲದ ಸ್ವಾತಂತ್ರ್ಯ ಹೋರಾಟದ ಘಟ್ಟಗಳು, ವಿಶ್ವಯುದ್ಧದ ನಡೆ, ದೇಶದಲ್ಲಿ ನಡೆಯುತ್ತಿದ್ದ ಚಳುವಳಿಗಳ ವಿವಿಧ ಆಯಾಮಗಳನ್ನು ದಾಖಲಿಸುತ್ತದೆ. ಆ ಕಾರಣದಿಂದ ಇದು ಕನ್ನಡದ ಒಂದು ವಿಶಿಷ್ಟ ಕಾದಂಬರಿಯಾಗಿದೆ. ಇದು ಒಂದು ರೀತಿಯಲ್ಲಿ ಚರಿತ್ರೆಯೇ ಆಗಿದೆ. ಈ ಕಾದಂಬರಿಯ ಕೆಲವು ಪುಟಗಳು ಮಾತ್ರ ಈ ಸಂಪುಟದಲ್ಲಿವೆ.