ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ.
ಮಂಜುನಾಥ್‌ ಕುಣಿಗಲ್‌ ಬರೆದ “ಕುಣಿಗಲ್‌ ಟು ಕಂದಹಾರ್” ಕೃತಿಯಿಂದ ಆಯ್ದ ಲೇಖನ ನಿಮ್ಮ ಓದಿಗೆ

ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಪಾಳಿಯಂತೆ ಮಿಲಿಟರಿ ಪಡೆಯ ಕ್ಯಾರವಾನು ಹತ್ತಿರದ ಕಂದಹಾರ್ ಪಟ್ಟಣದ ಕಡೆಗೋ, ಸುತ್ತ-ಮುತ್ತಲ ಹಳ್ಳಿಗಳ ಕಡೆಗೋ ಅಥವಾ ತಮಗೆ ಆದೇಶ ಬಂದ ಕಡೆಗೋ ಹೊರಡುತ್ತಿತ್ತು. ಮುಂದೆ ಹತ್ತು ಮಾರುದ್ದದ ತ್ರಿಕೋಣಾಕಾರದ ಮೂತಿಯಿದ್ದ, ಆ ಮೂತಿಯ ತುದಿಗೊಂದು ಚಕ್ರ ಅಳವಡಿಸಿದ್ದ ಬಾಂಬ್ ಡಿಟೆಕ್ಟರ್ ವಾಹನ. ವಿಶೇಷ ಎಂದರೆ ಅದೇ ರೀತಿಯಿದ್ದ ಮತ್ತೊಂದು ವಾಹನಕ್ಕೆ ಬೆಂಕಿಯನ್ನು ನೂರು ಮಾರು ದೂರಕ್ಕೆ ಉಗುಳುವ ಸಾಮರ್ಥ್ಯವಿದ್ದದ್ದು. ಅದರ ಹಿಂದೆ ನೋಡಲು ಯುದ್ಧಟ್ಯಾಂಕಿನಂತಿದ್ದ ಆಧುನಿಕ ಶಸ್ತ್ರಸಜ್ಜಿತವಾದ ಹತ್ತಾರು ಆರ್ಮಡ್ ಮಿಲಿಟರಿ ವಾಹನಗಳು.

(ಮಂಜುನಾಥ್‌ ಕುಣಿಗಲ್‌)

ಶಸ್ತ್ರ-ಸಲಕರಣೆಗಳನ್ನು ತಮ್ಮ ವಾಹನಗಳಿಗೆ ಅಳವಡಿಸುತ್ತಿದ್ದ ರೀತಿ, ತಾವೇ ಯಂತ್ರಗಳಂತೆ ಅವರು ತಯಾರಾಗುತ್ತಿದ್ದ ಶಿಸ್ತು ನನ್ನನ್ನು ಬೆರಗುಗೊಳಿಸುತ್ತಿತ್ತು. ತುಂಬಾ ಹೊತ್ತು ನಿಂತು ನೋಡಿದರೆ ಅಲ್ಲಿಂದ ಜಾಗ ಖಾಲಿ ಮಾಡಿರೆಂದು ಮೆಲ್ಲನೆ ಗದರುತ್ತಿದ್ದರು. ಅವರ ಪಾಳಿಯು ಮುಗಿದು ಸಮಯಕ್ಕೆ ಸರಿಯಾಗಿ ಅದೇ ಶಿಸ್ತಿನ ಸಾಲು ಧೂಳನ್ನೆಬ್ಬಿಸಿ ಹಿಂತಿರುಗುತ್ತಿದ್ದದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಇದು ಅವರ ದೈನಂದಿನ ಕೂಂಬಿಂಗ್ ಮತ್ತು ಪ್ಯಾಟ್ರೋಲ್ ವ್ಯವಸ್ಥೆ!

ಅದೆಲ್ಲಿ ಹೋಗಿ ಯುದ್ಧ ಮಾಡಿ ಬರುತ್ತಾರೋ? ಇಷ್ಟೇ ಜನ ಸಾಕೇ? ದಿನಾಲೂ ಯುದ್ಧ ಇರುತ್ತದೆಯೇ? ಅಥವಾ ಸುಮ್ಮನೆ ಊರು ಸುತ್ತಾಡಿ ಬರುತ್ತಾರೋ ಏನೋ? ಹೀಗೆ ಎಲ್ಲರಂತೆ ನನಗೂ ಪ್ರಶ್ನೆಗಳು. ಹೊರಗೆ ಅದೆಲ್ಲಿ ,ಅದೇನು ಘರ್ಷಣೆಗಳು ನಡೆಯುತ್ತಿದ್ದವೋ ಕಾಣೆ? ಆಗ್ಗಾಗ್ಗೆ ಮಿಲಿಟರಿ ಆಫೀಸುಗಳ ಮೇಲೆ ಎತ್ತರಕ್ಕೆ ಹಾರುತ್ತಿದ್ದ ಧ್ವಜಗಳು ಅರ್ಧಕ್ಕೆ ಜಾರುತ್ತಿದ್ದವು, ಊಟದ ಹಾಲಿನಲ್ಲಿ ಮಿಲಿಟರಿ ಜನರ ದೇಹ ಭಾಷೆ ಬೇರೆ ಕಥೆ ಏನನ್ನೋ ಹೇಳುತ್ತಿದ್ದವು. ಆ ಸಮಯದಲ್ಲಿ ಗಾಳಿಗೂ ಕೇಳದ ಪಿಸುಮಾತಿನಲ್ಲೋ ಅಥವಾ ಸಂಜ್ಞೆಗಳಲ್ಲೋ ಪರಸ್ಪರ ಸಂವಹನ. ಅಪ್ಪಿತಪ್ಪಿಯೂ ಯಾರೂ ಸಹ ಘಟಿಸಿದ ವಿಷಯವನ್ನು ಬಾಯಿ ಬಿಡುತ್ತಿರಲಿಲ್ಲ. ನನಗೆ ಪರಿಚಿತ ಮಿಲಿಟರಿ ಇಂಜಿನಿಯರುಗಳೂ ಸಹ ಏನೂ ಕೇಳಬೇಡಿರೆಂದು ಖಡಕ್ಕಾಗಿ ಹೇಳಿಬಿಡುತ್ತಿದ್ದರು. ಸಾವು-ನೋವುಗಳು ಅಲ್ಲಿ ವಿಶೇಷವೇನಲ್ಲ. ಆದರೆ ಅವರು ಅದನ್ನು ಗೌಪ್ಯವಾಗಿ ಕಾಪಾಡಿಕೊಳ್ಳುತ್ತಿದ್ದ ರೀತಿ, ಗಾಯಾಳುವಾದ ಇಲ್ಲಾ ಗತಿಸಿದ ತನ್ನ ಸಹ ಯೋಧನಿಗೆ ಅವರದೇ ರೀತಿಯಲ್ಲಿ ಸಲ್ಲಿಸುತ್ತಿದ್ದ ಗೌರವ ನನಗೆ ಅತೀವ ಹೆಮ್ಮೆ ಅನಿಸುತ್ತಿತ್ತು.

ಪ್ರಮುಖ ಮಿಲಿಟರಿ ಬೇಸ್ ಗಳಿಂದ ಸೈನಿಕರು ಏರ್-ಸ್ಟ್ರಿಪ್ ಇಲ್ಲದ ಯಾವುದೇ ಉಪ-ಕ್ಯಾಂಪುಗಳಿಗೆ ಸಾಮಾನ್ಯವಾಗಿ ಚಾಪರುಗಳಲ್ಲಿ ಹೋಗುತ್ತಿದ್ದುದನ್ನು ಗಮನಿಸಿದ್ದೇನೆ. ಇಂತಹ ಮಿಲಿಟರಿ ಚಾಪರುಗಳಲ್ಲಿ ಕ್ಯಾಂಪಿನಲ್ಲಿದ್ದ ನನ್ನಂತಹ ಸಿವಿಲಿಯನ್ಸ್ ಗಳನ್ನೂ ಅಗತ್ಯಕ್ಕೆ ತಕ್ಕಂತೆ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದುದೂ ಹೌದು. ಒಂದು ವೇಳೆ ಸರಕು-ಸರಂಜಾಮು ಹೆಚ್ಚಿದ್ದರೆ ಅಥವಾ ಬೇರಾವುದೇ ಕಾರಣಗಳಿದ್ದಲ್ಲಿ ಮಾತ್ರ ಮಿಲಿಟರಿ ಕಾರವಾನ್ ರಸ್ತೆಯಲ್ಲಿ ಹೋಗುತ್ತಿತ್ತು. ಇದೊಂದು ತುಂಬಾ ಅಪಾಯಕಾರಿ ಪ್ರಯಾಣವೇ! ಅಂತಹ ಒಂದು ಅಪಾಯಕಾರಿ ಸನ್ನಿವೇಶಕ್ಕೆ ನಾನು ಸಾಕ್ಷಿಯಾಗುತ್ತೇನೆಂದು ಗೊತ್ತಿದ್ದರೆ ಅದೆಷ್ಟೇ ಡಾಲರುಗಳ ಸಂಬಳ ಕೊಟ್ಟಿದ್ದರೂ ನಾನಿಲ್ಲಿಗೆ ಬರುವ ಯೋಚನೆಯನ್ನೂ ಮಾಡುತ್ತಿರಲಿಲ್ಲವೇನೋ? ಮಿಲಿಟರಿ ಚಾಪರುಗಳಷ್ಟೇ ಅಲ್ಲದೆ ಕೆಲವು ಖಾಸಗಿ ‘ಚಾರ್ಟರ್ ಚಾಪರುಗಳು’ ಕೂಡ ಉಪ-ಕ್ಯಾಂಪುಗಳಿಗೆ ಜನರನ್ನು ತೆಗೆದುಕೊಂಡು ಹೋಗುತ್ತಿದ್ದವು. ಇದರ ಪ್ರಯಾಣ ವೆಚ್ಚ ಕೂಡ ಸಾಮಾನ್ಯಕ್ಕಿಂತ ಹತ್ತಾರು ಪಟ್ಟು ಹೆಚ್ಚು. ತುಂಬಾ ಅಗತ್ಯವಿದ್ದಲ್ಲಿ ಕಂಪನಿಗಳ ಕೆಲಸಗಾರರಿಗಾಗಿ ಮಾಡಿದ್ದ ಪರ್ಯಾಯ ವ್ಯವಸ್ಥೆಯದು. ಒಮ್ಮೆಗೆ ೧೦ ರಿಂದ ೩೦ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಹೋಗುವ ದೊಡ್ಡ ಚಾಪರುಗಳವು. ಕಂದಹಾರ್ ಕ್ಯಾಂಪಿನಲ್ಲಿ ಒಮ್ಮೆ ಜನ ತುಂಬಿದ್ದ ಇಂತಹ ಒಂದು ಚಾಪರ್ ನೆಲಕ್ಕೆ ಬಿದ್ದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾದದ್ದು ನನ್ನನ್ನು ಎಷ್ಟೋ ವರ್ಷಗಳವರೆಗೆ ತೀವ್ರವಾಗಿ ಕಾಡಿಬಿಟ್ಟಿತ್ತು.

ಅಂದು ಬಹುಶಃ ಬೆಳಗ್ಗೆ ೧೧ರ ಸಮಯ. ದಿನನಿತ್ಯದ ಕೆಲಸದ ಭಾಗವಾಗಿ, ಕಂದಹಾರ್ ಕ್ಯಾಂಪಿನ ಏರ್-ಸ್ಟ್ರಿಪ್ ಬಳಿಯ ನಿರ್ಮಾಣ ಹಂತ ಮುಕ್ತಾಯದಲ್ಲಿದ್ದ ಎರಡಂತಸ್ತಿನ ಕಟ್ಟಡದ ಮೇಲೆ ನ್ಯಾಟೋ ಮಿಲಿಟರಿ ಇಂಜಿನಿಯರ್ ಜೊತೆ ನಾನು ನಿಂತು ತಾಂತ್ರಿಕ ವಿಷಯಗಳ ಬಗ್ಗೆ ವಿವರಣೆ ನೀಡುತ್ತಿದ್ದೆ. ನಮ್ಮೊಡನೆ ಕೆಲವು ಅಲ್ಬೇನಿಯನ್ ಕಾರ್ಮಿಕರಿದ್ದರು. ನಾವಿದ್ದ ಕಟ್ಟಡದ ಒಂದು ಸಮಾನಾಂತರ ಪಾರ್ಶ್ವಕ್ಕೆ ಏರ್-ಸ್ಟ್ರಿಪ್ ಕಾಣಿಸುತ್ತಿತ್ತು. ಏರ್-ಸ್ಟ್ರಿಪ್ಪಿನಲ್ಲಿ ಅಂತಿಂದಿತ್ತ ಇಳಿಯುವ ಮತ್ತು ಮೇಲೇರುವ ಯುದ್ಧ ವಿಮಾನಗಳು, ಎಂದಿನಂತೆ ಕ್ಪಣಕ್ಕೊಮ್ಮೆ ಆ ವಿಮಾನಗಳ ಹಾರಾಟದ ಅದೇ ಕಿವಿಗಡಚಿಕ್ಕುವ ಸದ್ದಿನ ಏಕತಾನತೆ! ಈ ಮಧ್ಯೆ ಏರ್-ಸ್ಟ್ರಿಪ್ಪಿನ ಪಕ್ಕದ ಚಾಪರುಗಳ ನಿಲ್ದಾಣದ ಜಾಗದಲ್ಲಿ ದೈತ್ಯ ಚಾರ್ಟರ್ ಚಾಪರೊಂದು ನಾಲ್ಕು ರೆಕ್ಕೆಗಳನ್ನು ಸುತ್ತಲೂ ರಭಸದಿಂದ ಆಡಿಸುತ್ತಾ ನಿಧಾನವಾಗಿ ಆನೆಯಂತೆ ಮೆಲ್ಲನೆ ಏಳುತ್ತಿದ್ದುದು ತುಂಬಾ ಹತ್ತಿರದಲ್ಲಿ ಕಾಣಿಸುತ್ತಿತ್ತು. ಇವೆಲ್ಲ ಅಲ್ಲಿ ಉಸಿರಾಟದಷ್ಟೇ ಸಾಮಾನ್ಯ ಸಂಗತಿಗಳಾದರೂ ನಾನಿದ್ದ ಎತ್ತರದಲ್ಲಿ ಏರ್-ಸ್ಟ್ರಿಪ್ಪಿನಲ್ಲಿ ಕಾಣುತ್ತಿದ್ದ ಆ ಸ್ಪಷ್ಟ ದೃಶ್ಯಗಳು ಅಪರೂಪವೇನೋ ಎಂದು ನನಗೆ ಅನಿಸುತಿತ್ತು. ಮೆಲ್ಲನೆ ಮೇಲಿರಿದ್ದ ಆ ಚಾಪರ್ ಕೆಲವು ನೂರಡಿಗಳ ಮೇಲೇರಿರಬಹುದಷ್ಟೇ. ಏನಾಯಿತೆಂದು ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ರೆಕ್ಕೆಯ ವೇಗ ಕಡಿಮೆಯಾದಂತೆ ಕಾಣಿಸಿತು. ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಒಂದಿಬ್ಬರು ಕೆಳಗೆ ಧುಮುಕಿದ್ದು ಮತ್ತು ಬೀಳುವಾಗ ಪ್ಯಾರಾಚೂಟ್ ತೆರೆದಿದ್ದು ಕಾಣಿಸಿತು. ನನ್ನ ಜೊತೆ ಇದ್ದ ಮಿಲಿಟರಿ ಇಂಜಿನಿಯರ್ ಕೂಡ ‘ಹೋ…’ ಎಂದು ಉದ್ಗಾರ ತೆಗೆದು ಅವಕ್ಕಾಗಿ ನಿಂತುಬಿಟ್ಟ! ‘ಎಂಥದೋ ಅವಘಡ ಘಟಿಸಲಿಕ್ಕಿದೆ!’ ತಣ್ಣಗೆ ಅವ ಹೇಳಿದ್ದಷ್ಟೇ. ಜೊತೆಗಿದ್ದ ಕೆಲಸಗಾರರೂ ಅಪರೂಪದ ದೃಶ್ಯವೇನೋ ಎಂಬಂತೆ ಕಣ್ಣಗಲಿಸಿ ಅತ್ತಲೇ ನೋಡುತ್ತಾ ‘ಹಾಯ್ದೆ.. ಹಾಯ್ದೇ…’ ಎಂದು ಅವರ ಭಾಷೆಯಲ್ಲಿ ಜೋರಾಗಿ ಕಿರುಚುತ್ತಾ ನಿಂತರು. ಹಿಂದೆಯೇ ಮತ್ತೊಂದಷ್ಟು ಜನ ತಮ್ಮ ಹಿಂದೆ ಬ್ಯಾಗುಗಗಳಂತಹ ವಸ್ತುಗಳನ್ನು ನೇತುಹಾಕಿಕೊಂಡು ಧುಮುಕುವ ದೃಶ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು. ಇವರ ಪ್ಯಾರಾಚೂಟ್ ತೆರೆದುಕೊಳ್ಳಲಿಲ್ಲವೋ ಅಥವಾ ಇರಲೇ ಇಲ್ಲವೋ ಗೊತ್ತಾಗಲಿಲ್ಲ. ನಾವಿದ್ದ ದೂರಕ್ಕೆ ಅವರು ನೆಲಕ್ಕೆ ತೊಪ್ಪೆಯಂತೆ ಬಿದ್ದಂತೆ ಕಾಣಿಸಿತಷ್ಟೆ ಹೊರತು ಯಾವ ಶಬ್ದವೂ ಕೇಳುತ್ತಿರಲಿಲ್ಲ.

ನೋಡನೋಡುತ್ತಿದ್ದ ಹಾಗೆ ಚಾಪರ್ ನಿಧಾನಕ್ಕೆ ಕುಸಿಯುತ್ತಿತ್ತು. ನಮಗೆ ಅಪಾಯದ ಅರಿವಾಗಿಹೋಯ್ತು! ಅದಿನ್ನೂ ಕೆಳಗೆ ಬರುತ್ತಿದ್ದಂತೆ ಮತ್ತೊಂದಷ್ಟು ಜನ ಧುಮುಕಿ ಕೆಳಗೆ ಧೊಪ್ಪನೆ ಬಿದ್ದರು. ಆಗ ಪ್ಯಾರಾಚೂಟ್ ತೆರೆದುಕೊಳ್ಳುವ ಎತ್ತರ ಮತ್ತು ಸಾಧ್ಯತೆ ಅಲ್ಲಿರಲಿಲ್ಲ. ಜನ ಬೀಳುತ್ತಲೇ ಇದ್ದರು. ರೆಕ್ಕೆಗಳ ವೇಗ ತುಂಬಾ ನಿಧಾನವಾಗಿಬಿಟ್ಟಿತ್ತು. ನಿಯಂತ್ರಣ ಕಳೆದುಕೊಂಡು ಗಾಳಿಯಲ್ಲಿ ಡೋಲಾಯಮಾನವಾಗಿ ಹೊಯ್ದಾಡುತ್ತಲೇ ನೆಲಕ್ಕೆ ರೊಪ್ಪನೆ ಬಿದ್ದ ತಕ್ಷಣವೇ ಬಾಂಬು ಹಾಕಿದ ಹಾಗೆ ‘ಬ್ಲ್ಯಾಮ್’ ಎನ್ನುವ ಶಬ್ದದೊಂದಿಗೆ ಬೆಂಕಿಯ ವಿಸ್ಫೋಟವಾಯ್ತು. ಇವೆಲ್ಲಾ ಕೆಲವೇ ನಿಮಿಷಗಳಲ್ಲಿ ಆಗಿಹೋಗಿತ್ತು. ನಾವು ಅಲ್ಲಿಗೆ ಓಡಿಹೋಗಿ ನೋಡುವಂತಹ ಸಾಮಾನ್ಯ ಪ್ರದೇಶವಲ್ಲ ಅದು. ಸ್ವಲ್ಪ ಕಾಲ ಅಲ್ಲಿಯೇ ನಿಂತು ನೋಡುತ್ತಿದ್ದೆವು. ಆಗ ಒಮ್ಮೆಗೇ ‘ಎಮರ್ಜೆನ್ಸಿ’ ಎನ್ನುವ ಸೈರನ್ ಕೂಗಲು ಶುರುವಾಯ್ತು. ಅಂತಹ ‘ತುರ್ತು ಘೋಷಣೆ ಸಂದರ್ಭ’ಗಳಲ್ಲಿ ಯಾರೂ ಕೂಡ ಹೊರಗೆ ಬರಬಾರದು ಎನ್ನುವುದು ಅಲ್ಲಿನ ಶಿಷ್ಟಾಚಾರಗಳಲ್ಲೊಂದು. ಕೆಲವು ಅಗ್ನಿಶಾಮಕ ಟ್ರಕ್ಕುಗಳು ಅತ್ತ ಹೋಗುತ್ತಿದ್ದುದು ಕಾಣಿಸುತ್ತಿತ್ತು. ಅಲ್ಲಿ ಇನ್ನೇನು ನಡೆಯುತ್ತದೆಯೋ ನೋಡಲಿಕ್ಕೆ ನನಗೆ ಇಷ್ಟವಿರಲಿಲ್ಲ. ಎದೆ ಗಟ್ಟಿಯಾಗಿ ಕಟ್ಟಿಕೊಂಡ ನೋವಾಗಿ ದುಃಖ ಉಮ್ಮಳಿಸಿ ಬಂದಂತಾಯ್ತು. ಅವರೆಲ್ಲರ ಮುಂದೆ ಅಳಲು ನಾಚಿಕೆಯಾಗಿ ಬಿಗಿಹಿಡಿದುಕೊಂಡೆ. ನಾವೆಲ್ಲರೂ ಕೆಳಗೆ ಇಳಿದು ಆ ಕಟ್ಟಡದ ನೆಲ ಅಂತಸ್ತಿನ ಒಳ ಹೊಕ್ಕೆವು. ಏನಾಗುತ್ತಿದೆಯೆಂಬ ಸ್ಪಷ್ಟ ಅರಿವಿಲ್ಲದ ಕ್ಯಾಂಪಿನ ಇತರೆ ಜನರಲ್ಲಿ ಕೆಲವರು ಬಂಕರಿನತ್ತಲೋ ಇನ್ನು ಕೆಲವರು ಹತ್ತಿರವಿದ್ದ ಕಟ್ಟಡದ ಒಳಗೋ ಓಡುತ್ತಿದ್ದರು.

ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ. ಅಂದು ಆ ಚಾಪರಿನಲ್ಲಿ ನಮ್ಮ ಕಂಪನಿಯ ನಾಲ್ಕು ಹುಡುಗರೂ ಕೂಡ ಇದ್ದರು ಎಂದು ಆ ನಂತರವೇ ಗೊತ್ತಾಗಿದ್ದು! ಅಂಟೋನಿಯೋ ಗಾಡಿಯನ್ನು ಚಲಾಯಿಸಿ ಮಿಲಿಟರಿ ಆಸ್ಪತ್ರೆ ಕಡೆ ಹೊರಟ. ನಾನೂ ಬರಲೇ ಅಂದದ್ದಕ್ಕೆ ಬೇಡ ಎಂದ. ಸಂಜೆ ಆಂಟೋನಿಯೋ ಮತ್ತು ಕಿರ್ಕಿ ಒಟ್ಟಿಗೇ ಬಂದಾಗ ನಮಗೆ ಸಿಕ್ಕ ವಿವರವಿಷ್ಟು… ‘ಆ ಚಾಪರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಲಾಗಿತ್ತು. ಸರಿಯಾದ ತಾಂತ್ರಿಕ ನಿರ್ವಹಣೆಯಿಲ್ಲದ ಹಳೆಯ ಚಾಪರಂತೆ ಅದು. ಪ್ಯಾರಚೂಟುಗಳು ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳಲಿಲ್ಲ. ಕೆಳಗೆ ಧುಮುಕಿದವರಲ್ಲಿ ಕೆಲವರು ಮಾತ್ರ ಕೈಕಾಲು ಸೊಂಟ ಮುರಿದುಕೊಂಡು ಜೀವಂತವಾಗಿದ್ದಾರಷ್ಟೇ. ಮಿಕ್ಕವರೆಲ್ಲಾ ದೇವರ ಪಾದಕ್ಕೆ! ಬಹುತೇಕ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ. ಉಳಿದ ನಾಲ್ಕೈದು ಜನ ಅದ್ಯಾವ ಪವಾಡ ನಡೆದು ಬದುಕಿದರೋ ಗೊತ್ತಿಲ್ಲ. ಪ್ಯಾರಾಚೂಟ್ ಜೊತೆ ಹಾರಿದ ಪೈಲಟ್ ಬದುಕಿಕೊಂಡ. ನಮ್ಮ ಕಂಪನಿಯ ಕೆಲಸಗಾರರು ಗುರುತು ಸಿಗದ ಹಾಗೆ ಸೀದುಹೋಗಿದ್ದಾರೆ. ಶವಗಳನ್ನು ಅವರ ಮನೆಗಳಿಗೆ ತಲುಪಿಸುತ್ತಾರಂತೆ’. ಅಂದು ಸುಟ್ಟು ಕರಕಲಾದ ನಮ್ಮ ಕಂಪನಿಯ ಆ ನಾಲ್ಕು ಜನರೂ ಸೇರಿ ಇತರೆ ಎಲ್ಲರ ಬಗೆಗಿನ ಯಾವ ವಿಷಯವನ್ನೂ ಹೊರಗೆ ಬಿಟ್ಟುಕೊಡದೆ ರಹಸ್ಯವಾಗಿ ಇಟ್ಟುಬಿಟ್ಟರು. ಸತ್ತವರು ಯಾರು? ಯಾವ ದೇಶದವರು? ಯಾವ ವಿವರಗಳೂ ಸಿಗಲಿಲ್ಲ. ‘ಅವರೆಲ್ಲರೂ ಆಫ್ಘಾನಿ ಕೆಲಸಗಾರರಂತೆ’ ಎಂದು ಅಲ್ಲಿ ಕೆಲವರು ಮಾತಾಡಿಕೊಂಡರು. ಹೌದು, ಇಲ್ಲಿ ಎಲ್ಲರಿಗೂ ಎಲ್ಲಾ ಮಾಹಿತಿಗಳು ಸುಲಭಕ್ಕೆ ಎಟಕುವಂತದ್ದಲ್ಲ ಎಂಬುದು ನನಗೆ ಅನೇಕ ಸಂದರ್ಭಗಳಿಂದ ವೇದ್ಯವಾಗಿತ್ತು!

ನನ್ನಂತಹ ಕೆಲಸಗಾರ ಜನಗಳಿಗೆ ಮಿಲಿಟರಿ ಕ್ಯಾರವಾನಿನೊಡನೆ ಹೋಗುವ ಕೆಲ ವಿಶೇಷ ಸಂದರ್ಭಗಳು ಉಂಟು. ಆ ವಿಶೇಷ ದಿನವೂ ಬೇಗನೇ ಬಂದಿತು. ಕಂದಹಾರ್, ಕಾಬುಲ್(HKIA), ಬಗ್ರಾಮ್, ಮಝರ್-ಇ-ಶರಿಫ್, ಕ್ಯಾಂಪ್ ಬ್ಯಾಷನ್ ಮತ್ತು ಹೇರತ್ ನಂತಹ ಏರ್-ಬೇಸುಗಳು ಆಫ್ಘಾನಿಸ್ತಾನದ ಪ್ರಮುಖ ಯುದ್ಧ ನಗರಿಗಳು. ಈ ಯುದ್ಧಕೇಂದ್ರ ನಗರಗಳ ಸುತ್ತ ಮಿಲಿಟರಿಯವರ ಜಾಲ ಇನ್ನೂ ಆಳ ಮತ್ತು ಅಗಲವಾಗಿ ಹಳ್ಳಿ-ಪಟ್ಟಣ, ಬೆಟ್ಟ-ಗುಡ್ಡ, ಮರುಭೂಮಿ-ಗೊಂಡಾರಣ್ಯ ಹೀಗೆ ಎಲ್ಲಾ ಕಡೆಗೂ ವ್ಯವಸ್ಥಿತವಾಗಿ ಹರಡಿಕೊಂಡಿತ್ತು. ಪ್ರತಿ ಪ್ರಮುಖ ಯುದ್ಧಕೇಂದ್ರ ಮಿಲಿಟರಿ ಕ್ಯಾಂಪುಗಳಿಗೆ ಹೊಂದಿಕೊಂಡಂತೆ ಹಲವಾರು ಉಪಕ್ಯಾಂಪುಗಳು. ಅತಿ ಅಪಾಯಕಾರಿ ಎಂದೂ, ಯೋಧರೂ ಸಹ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ ಎಂದೂ ಕುಖ್ಯಾತಿ ಗಳಿಸಿದ್ದ ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ‘ಸ್ಪಿನ್ ಬೋಲ್ದಾಕ್’ ಪ್ರಾಂತ್ಯದ ‘ಕ್ಯಾಂಪ್ ಡ್ವಯರ್’ ನೆಡೆಗೆ ನಾವು ಹೋಗಬೇಕಿತ್ತು. ಜಲಾಲಾಬಾದ್, ನಂಗಹಾರ್ ಮತ್ತು ಸ್ಪಿನ್ ಬೋಲ್ಡಾಕ್ ಪ್ರಾಂತ್ಯಗಳು ಆಫ್ಘಾನಿಸ್ತಾನದಲ್ಲೇ ಅತಿ ಹೆಚ್ಚು ಸಾವು ನೋವು ಘಟಿಸುವ ಪ್ರದೇಶಗಳು. ಕಂದಹಾರ್ ಕ್ಯಾಂಪಿಗೆ ಕೆಲವೇ ಮೈಲುಗಳ ಸಮೀಪದಲ್ಲಿದ್ದ ‘ಹೌಸ್-ಇ-ಮದದ್’ ಎನ್ನುವ ಉಪ ಕ್ಯಾಂಪಿಗೆ ಹೋಗಿ ಕೆಲವರನ್ನು ಅಲ್ಲಿ ಇಳಿಸಿ ಅಲ್ಲಿಂದ ‘ಕ್ಯಾಂಪ್ ಡ್ವಯರ್’ ಕಡೆಗೆ ನಮ್ಮ ಪ್ರಯಾಣದ ರೂಪುರೇಷೆಗಳು ಸಿದ್ಧವಾದವು. ದಕ್ಷಿಣಕ್ಕಿದ್ದ ಕ್ಯಾಂಪ್ ಡ್ವಯರ್ ಗೆ ಹೋಗಲು ಇವರು ಉತ್ತರಕ್ಕಿದ್ದ ಕಂದಹಾರ್ ಕಡೆ ಹೋಗಿ ಅದೇಕೆ ಸುತ್ತು ಬಳಸಿ ಬರುತ್ತಾರೋ? ಎಂದು ‘ಅಮೀರ್ ಅರಿಫಿ’ ಗೊಣಗುತ್ತಿದ್ದ. ನನಗೆ ಇದ್ಯಾವುದರ ಭೌಗೋಳಿಕ ಜ್ಞಾನವಿರಲಿಲ್ಲ. ಅಮೀರ್ ಅರಿಫಿ ಎನ್ನುವ ಅಲ್ಬೇನಿಯನ್ ಕ್ಯಾಂಪ್ ಮ್ಯಾನೇಜರ್ ನಮ್ಮ ನೇತೃತ್ವ ವಹಿಸಿದ್ದ ಆಗ. ಆತ ಮತ್ತು ನಾನೂ ಸೇರಿದಂತೆ ಒಟ್ಟು ಎಂಟು ಜನರು ಮಿಲಿಟರಿ ಕ್ಯಾರವಾನಿನಲ್ಲಿ ಹೊರಟೆವು. ನನ್ನನ್ನು ಅಲ್ಲಿಗೆ ಹೊರಡಿಸಲು ಅಂಟೊನಿಯೋ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ನನ್ನನ್ನು ಹೆಣವಾಗಿಸಿಯೇ ಊರಿಗೆ ಕಳಿಸಬೇಕೆಂದು ತೀರ್ಮಾನಿಸಿದ್ದೀಯಾ ಎಂದು ನಾನು ವಾಗ್ವಾದಕ್ಕಿಳಿದಿದ್ದೆ. ನಾನು ಹೋಗಲೇಬೇಕೆಂದೂ, ಅದರ ಅನುಭವ ನನಗೆ ಆಗಬೇಕೆಂದೂ ನಮ್ಮ ದುಬೈ ಕಚೇರಿಯ ಮುಖ್ಯಸ್ಥ ತೀರ್ಮಾನಿಸಿಯಾಗಿತ್ತು. ಅಂದು ನಾನು ಹೊರಡದಿದ್ದಿದ್ದರೆ ಜೀವನದ ಅತಿ ವಿಶೇಷ ಅನುಭವದಿಂದ ವಂಚಿತನಾಗುತ್ತಿದ್ದೇನೇನೋ.

ಮಿಲಿಟರಿಯವರು ಸುಮಾರು ೪೪ ಜನರಿದ್ದರು. ನಾವು ಹೊರಟಿರುವ ಉದ್ದೇಶವಿಷ್ಟೆ, ಕ್ಯಾಂಪ್ ಡ್ವಾಯರಿನ ಸಮೀಪ ಇನ್ನೊಂದು ಉಪ-ಕ್ಯಾಂಪಿನ ನಿರ್ಮಾಣ. ಹತ್ತಾರು ಯುದ್ಧಟ್ಯಾಂಕ್ ನಂತಹ ವಾಹನಗಳು ಮತ್ತು ಮಿಲಿಟರಿ ಟ್ರಕ್ಗಳು ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಹೊರಡಲು ಸಿದ್ಧವಾದವು. ನಮ್ಮನ್ನೆಲ್ಲ ಯುದ್ಧಟ್ಯಾಂಕಿನಂತಿದ್ದ ಗಾಡಿಗಳಲ್ಲಿ ತುರುಕಿದರು. ಒಳಗೆ ಅದೆಂತಹುದೋ ವಿಚಿತ್ರ ಘಾಟು. ಮೊದಮೊದಲು ಉಸಿರಾಡಲು ಕಷ್ಟವಾಯ್ತು. ಹೊರಗೆ ಇಣುಕಲು ಕಾಲು-ಚದುರ ಅಡಿಯಷ್ಟು ಕಿರಿದಾದ ಎರಡು ಪುಟ್ಟ ಗುಂಡು ನಿರೋಧಕ ಕಿಟಕಿಗಳು. ಒಳಗೆ ಸಾವಿರ ಜನರನ್ನು ಕೆಡವಬಹುದಾದಷ್ಟು ಅಧುನಿಕ ಶಸ್ತ್ರಗಳು. ನೀಳವಾದ ದೂರಗ್ರಾಹಿ ಯಂತ್ರಗಳು, ಒಂದಷ್ಟು ಆಹಾರ ಪೊಟ್ಟಣಗಳು, ನೀರಿನ ಬಾಟಲ್ಗಳು. ಬಂಕರುಗಳಲ್ಲಿ ಕುಳಿತಾಗಲೂ ಇಷ್ಟು ಕುಬ್ಜರಾದೆವೆಂದು ಅನಿಸಿರಲಿಲ್ಲ, ಕಿಷ್ಕಿಂದೆಯಂತಹ ಜಾಗ. ಅಮೀರ್ ಅರಿಫಿ, ನಾನು ಮತ್ತು ಇನ್ನಿಬ್ಬರು ಮಿಲಿಟರಿಯವರೊಡನೆ ಒಂದು ವಾಹನದಲ್ಲಿ ಕುಳಿತೆವು. ಮಿಕ್ಕವರು ಅದೆಲ್ಲಿ ಹೇಗೆ ಜಾಗ ಮಾಡಿಕೊಂಡರೋ ಏನೋ ಗಮನಕ್ಕೆ ಬಾರಲಿಲ್ಲ. ವಿಚಾರಿಸೋಣವೆಂದರೆ ಆ ಮಿಲಿಟರಿಯವರೋ ಬಾಯಿ ಬಿಟ್ಟು ನಾಲ್ಕು ಮಾತನಾಡಲು ತಯಾರಿಲ್ಲ, ವಿಚಿತ್ರ ಶಿಸ್ತು ಮಾರಾಯ ಇವರದ್ದು ಎಂದು ಗೊಣಗಿ ಕೂತದ್ದಷ್ಟೇ.

ಇವೆಲ್ಲ ಅಲ್ಲಿ ಉಸಿರಾಟದಷ್ಟೇ ಸಾಮಾನ್ಯ ಸಂಗತಿಗಳಾದರೂ ನಾನಿದ್ದ ಎತ್ತರದಲ್ಲಿ ಏರ್-ಸ್ಟ್ರಿಪ್ಪಿನಲ್ಲಿ ಕಾಣುತ್ತಿದ್ದ ಆ ಸ್ಪಷ್ಟ ದೃಶ್ಯಗಳು ಅಪರೂಪವೇನೋ ಎಂದು ನನಗೆ ಅನಿಸುತಿತ್ತು. ಮೆಲ್ಲನೆ ಮೇಲಿರಿದ್ದ ಆ ಚಾಪರ್ ಕೆಲವು ನೂರಡಿಗಳ ಮೇಲೇರಿರಬಹುದಷ್ಟೇ. ಏನಾಯಿತೆಂದು ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ರೆಕ್ಕೆಯ ವೇಗ ಕಡಿಮೆಯಾದಂತೆ ಕಾಣಿಸಿತು. ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಒಂದಿಬ್ಬರು ಕೆಳಗೆ ಧುಮುಕಿದ್ದು ಮತ್ತು ಬೀಳುವಾಗ ಪ್ಯಾರಾಚೂಟ್ ತೆರೆದಿದ್ದು ಕಾಣಿಸಿತು.

ನಮ್ಮ ವಾಹನಗಳ ಸಾಲು ಕ್ಯಾಂಪಿನ ಚಕ್ರವ್ಯೂಹದಂತಿದ್ದ ಬಾಗಿಲುಗಳನ್ನು ನಿಧಾನವಾಗಿ ಭೇಧಿಸಿ ಹೊರಬಂದಿತು. ಹೊರ ಹೊರಟ ಮಿಲಿಟರಿ ವಾಹನಕ್ಕೂ ಅದೆಂತಹ ತಪಾಸಣೆ? ಅರ್ಧ ತಾಸಿಗೂ ಹೆಚ್ಚಾಯ್ತು ಅನಿಸಿತ್ತು. ನಾನಂತೂ ಆ ಸಣ್ಣ ಕಿಟಕಿಯಲ್ಲಿ ಪಿಳಿಪಿಳಿ ಕಣ್ಣು ಬಿಟ್ಟು ಹೊರನೋಟವನ್ನು ಆಸ್ವಾದಿಸುತ್ತಿದ್ದೆ. ಇದೇ ಮೊದಲ ಬಾರಿಗೆ ಕಂದಹಾರ್ ಕ್ಯಾಂಪಿನ ಸುರಕ್ಷಿತ ವಲಯದಿಂದ ಬಹುದೂರ ಆಚೆಗೆ ಕಂದಹಾರ್ ಪಟ್ಟಣದ ಕಡೆ ಹೊರಟಿದ್ದೆ. ನಾವಿದ್ದ ವಾಹನದ ಚಾವಣಿಯ ಸಣ್ಣ ಭಾಗವನ್ನು ಸರಿಸಿದ ಒಬ್ಬ ಮಿಲಿಟರಿಯವ ಸರಪಟಾಕಿಯಂತಿದ್ದ ಗುಂಡುಗಳ ಸರವನ್ನು ಮಶೀನ್ ಗನ್ನಿಗೆ ಪೇರಿಸಿ ಗಕ್ಕನೆ ಅರ್ಧ ಮೇಲೇರಿ ತಲೆಹೊರಹಾಕಿ ನಿಂತುಬಿಟ್ಟ! ರಸ್ತೆ ಉತ್ತಮವಾಗಿಯೇ ಇತ್ತು. ನಮ್ಮ ಮುಂದೆ ನಮ್ಮದೇ ರೀತಿಯ ವಾಹನಗಳು ಸಾಲಾಗಿ ನಿಧಾನವಾಗಿ ಚಲಿಸುತ್ತಿದ್ದವು. ಇಕ್ಕೆಲಗಳಲ್ಲಿ ದಿಗಂತದವರೆಗೂ ಬರಡು ನೆಲದಂತೆ ಕಂಡರೂ ಕಲ್ಲಂಗಡಿ ಬಳ್ಳಿಯ ಹಸಿರು ಹಾಸು ಅಲ್ಲಲ್ಲಿ. ದೂರದಲ್ಲೆಲ್ಲೋ ಕುರಿಗಳು, ಒಂಟೆಗಳು ಮೇಯುತ್ತಿದ್ದವು. ರಸ್ತೆಯಲ್ಲಿ ಟ್ರಕ್ಕುಗಳು, ಮೋಟಾರು ಬೈಕುಗಳು, ಜನರನ್ನು ತುಂಬಿಕೊಂಡ ಪಿಕ್-ಅಪ್ ನಂತಹ ವಾಹನಗಳು ಮಿಲಿಟರಿ ಕ್ಯಾರವಾನ್ ಬರುವುದನ್ನು ಗಮನಿಸಿ ಆಂಬುಲೆನ್ಸ್ ಗಾಡಿಗೆ ಜಾಗ ಬಿಡುವವರಂತೆ ಪಕ್ಕಕ್ಕೆ ಸರಿದುಬಿಡುತ್ತಿದ್ದರು. ಇವರೆಲ್ಲಾ ಇಂತಹದ್ದುಕ್ಕೆ ಸಾಕಷ್ಟು ಪಳಗಿದ್ದಾರೆ ಅನಿಸುತ್ತಿತ್ತು. ಅದು ಭಯಪೂರ್ವಕ ಶಿಸ್ತಿನ ಅಭಿವ್ಯಕ್ತಿಯೇನೋ ಎಂಬಂತಿತ್ತು. ಕೆಲ ಹೊತ್ತಿನ ನಂತರ ಇದಕ್ಕೆಲ್ಲ ಕಾರಣ ನನಗೆ ಸ್ಪಷ್ಟವಾಯ್ತು ಕೂಡ.

ಬೆಳಗ್ಗೆ ಹತ್ತು-ಹನ್ನೊಂದರ ಸಮಯವಿದ್ದಿರಬಹುದು. ಕಂದಹಾರ್ ಪಟ್ಟಣದ ತುಂಬಾ ಕಿಕ್ಕಿರಿದ ಜನ. ರಸ್ತೆಯ ಎರಡೂ ಬದಿಯಲ್ಲಿ ಸಂತೆ ನಡೆಯುತ್ತಿದೆಯೇನೋ ಎಂಬ ನೋಟ. ನೋಟ-ವಿನ್ಯಾಸದಲ್ಲಿ ಕಾಬುಲ್ ನಗರಕ್ಕಿಂತ ಕೊಂಚ ವಿಭಿನ್ನ ಷಹರವಾದರೂ ಬೇರೆಯ ವ್ಯತ್ಯಾಸವೇನೂ ಇರಲಿಲ್ಲ. ಜನರೂ ಕೂಡ ಅಲ್ಲಿಯ ಹಾಗೆಯೇ. ಕಾಬುಲ್ನಲ್ಲಿ ನೋಡಿದಂತಹುದೇ ರೊಟ್ಟಿ, ತರಕಾರಿ, ಹಣ್ಣು, ಮಾಂಸದಂಗಡಿಗಳ ಸಾಲು. ಬಿಸಿಲು ಮತ್ತು ಧೂಳಿನ ಪರಕಾಷ್ಟೆ. ಕ್ಯಾರವನಿನತ್ತ ಬೆರಗುಗಣ್ಣಿಂದ ನೋಡುತ್ತಿದ್ದ ಮುಗ್ಧ ಜನಗಳು. ಪ್ರತಿನಿತ್ಯದ ಗೋಳಿದು ಎಂದೋ, ನಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತಿದ್ದ ಜನಗಳೂ ಕಮ್ಮಿಯಿರಲಿಲ್ಲ ಅಲ್ಲಿ. ರಸ್ತೆಯ ಮೇಲಿದ್ದ ಎಲ್ಲರೂ ಗಾಬರಿಗೊಂಡವರಂತೆ ಪಕ್ಕಕ್ಕೆ ಸರಿದುಬಿಡುತ್ತಿದ್ದರು. ಕಂದಹಾರ್ ನಗರದ ಹೊರವಲಯಕ್ಕೆ ಬಂದಿದ್ದೆವು. ರಸ್ತೆಯ ಮುಂದೆ ಅದೇನೋ ಢಾಂ ಎನ್ನುವ ಶಬ್ದ ದಿಢೀರನೆ ಬಂದು ಬೆಂಕಿಯ ಉರಿ ಒಮ್ಮೆಗೆ ಒಂದಷ್ಟು ಜಾಗದಲ್ಲಿ ಆವರಿಸಿಕೊಂಡಿತು. ಇದ್ದಕ್ಕಿದ್ದ ಹಾಗೆ ಗುಂಡಿನ ಮೊರೆತ ಶುರುವಾಯ್ತು. ವಾಕೀ-ಟಾಕಿಯಂತಿದ್ದ ರೇಡಿಯೋ ಸಾಧನದಲ್ಲಿ ಅದೇನೇನೋ ಶಬ್ದವಾಗಿ ಗೊಂದಲದ ಗೂಡಾಗಿತ್ತು . ನಮ್ಮ ವಾಹನದಲ್ಲಿದ್ದ ಸೈನಿಕನೂ ಅದೆಲ್ಲಿಗೋ ಗುರಿಯಿಟ್ಟು ಗುಂಡಿನ ಸುರಿಮಳೆಗೈಯುತ್ತಿದ್ದ. ಒಮ್ಮೆಲೇ ಗುಂಡಿನ ಜೋರು ಮೊರೆತ. ನನಗಂತೂ ಕಿವಿ ಕಿತ್ತು ಹೊಯ್ತೆನೋ ಅನ್ನುವಷ್ಟು ಭೀಕರ ಶಬ್ಧ. ಇಷ್ಟು ಹತ್ತಿರದಿಂದ ಗುಂಡಿನ ಮೊರೆತ ಎಂದೂ ಕೇಳಿರಲಿಲ್ಲ. ಏನೋ ಅಚಾತುರ್ಯವಾಗ್ತಿದೆ ಎಂದು ಎದೆ ಬಡಿತ ಎರಡಷ್ಟಾಗಿತ್ತು. ನನ್ನ ಪುಕ್ಕಲುತನವನ್ನ ಮೊಂಡುಧೈರ್ಯಕ್ಕೆ ತಿರುಗಿಸುವ ವಿಫಲ ಯತ್ನ ಮಾಡುತ್ತಿದ್ದೆ. ಅಪಾಯ ಅದೇನು ಎಂದು ಗೊತ್ತಾದಾಗ ಮೊಂಡು ಧೈರ್ಯದ ವಿವೇಚನೆ. ಆದರೆ ಹೊರಗೆ ಆದೇನಾಗುತ್ತಿದೆಯೋ ಒಂದೂ ಸುಳಿವಿಲ್ಲ. ಒಬ್ಬ ಬಂಡಿಯನ್ನು ಓಡಿಸುತ್ತಿದ್ದ ಮತ್ತೊಬ್ಬ ಮದ್ದುಗುಂಡಿನ ಯಂತ್ರವನ್ನು! ನಾನು ಮತ್ತು ಅಮೀರ್ ಅರಿಫಿ ನಮ್ಮ ಸೋತ ಮುಖಗಳನ್ನು ನೋಡಿಕೊಂಡು ಬೆಪ್ಪರಂತೆ ಕೂತಿದ್ದೆವು. ಹೆದರಿಕೆಯಿಂದ ನಾನು ಬೆವರಿನ ತೊಪ್ಪೆಯಾಗಿದ್ದೆ.

ಇದೆಲ್ಲಾ ಮುಗಿದು ತಣ್ಣಗಾಗಲು ಸುಮಾರು ಇಪ್ಪತ್ತು ನಿಮಿಷಗಳು ಬೇಕಾದವು. ಎಲ್ಲರಿಗಿಂತ ಮುಂದಿದ್ದ ವಾಹನ ದೂರ ದೂರಕ್ಕೆ ಬೆಂಕಿಯನ್ನುಗುಳುತ್ತಾ ಹೊರಟಿತ್ತು. ಎಲ್ಲವೂ ನಿಶಬ್ಧವಾಗಿರಲಿಲ್ಲ! ಸಣ್ಣ ಸಣ್ಣ ಊರು ಸಮೀಪಿಸಿದಾಗಲೆಲ್ಲಾ ಆಗಾಗ ಸಣ್ಣ ಸುತ್ತಿನ ಗುಂಡಿನ ಮೊರೆತ ಚಾಲ್ತಿಯಲ್ಲಿತ್ತು. ವಾಹನ ಚಲಾಯಿಸುತ್ತಿದ್ದ ಸೈನಿಕನನ್ನು ಅಮೀರ್ ಇಷ್ಟವಿಲ್ಲದಿದ್ದರೂ ಮಾತಿಗೆಳೆದ. “ಏನು ನಡೆದದ್ದು? ನಮಗೆ ತುಂಬಾ ಗಾಬರಿಯಾಗಿದೆ”, ಎಂದ. “ಇದೆಲ್ಲಾ ಮಾಮೂಲಿ, ನೀವು ಇದೆ ಮೊದಲ ಬಾರಿಗೆ ಕ್ಯಾರವಾನಿನಲ್ಲಿ ಹೊರಟಿರುವುದೋ” ಎಂದು ಕೇಳಿದ ಸೈನಿಕ. ಅಮೀರ್ ಹೌದೆಂದು ಹೂಂಗುಟ್ಟಿದ. “ಅದ್ದದ್ದು ಏನು”? ಮತ್ತೆ ಅಮೀರ್ ಕುತೂಹಲ ಪ್ರಶ್ನೆ. ಗಂಭೀರವಾಗಿಯೇ ಮಾತು ಶುರುಮಾಡಿದ ಆ ಸೈನಿಕ “ಯಾವುದೋ ಎಳಸು ಹುಡುಗ ನಮ್ಮ ಕಡೆ ಪೆಟ್ರೋಲ್ ಬಾಂಬ್ ಎಸೆದ. ಹಾಗಾಗಿ ಇಷ್ಟೆಲ್ಲಾ! ಅವ ಸರಿಯಾಗಿ ಗುರಿ ಬೀಸಲಿಲ್ಲ. ಗುರಿ ತಲುಪಿದ್ದರೂ ನಮಗೆ ಏನೂ ಆಗುತ್ತಿರಲಿಲ್ಲ. ಭಯ ಪಡುವಂತಹುದ್ದು ಏನೂ ಇಲ್ಲ, ಇದೆಲ್ಲ ನಮಗೆ ದಿನನಿತ್ಯದ ಅನುಭವ”. ಇಷ್ಟೇ ಹೇಳಿದ್ದು.
ತಾಲಿಬಾನಿಗಳು ಈ ಹುಡುಗರನ್ನು ಮುಂದೆ ಬಿಟ್ಟು ಮಿಲಿಟರಿ ಪಡೆಯನ್ನು ಗೊಂದಲಗೊಳಿಸಿ ಆಕ್ರಮಣ ಮಾಡುವುದು ಅವರ ಗೆರಿಲ್ಲಾ ಯುದ್ಧ ನೀತಿಗಳಲ್ಲಿ ಒಂದು. ಪೆಟ್ರೋಲ್ ಬಾಂಬುಗಳನ್ನೋ, ಗ್ರೇನೆಡ್ ಗಳನ್ನೋ ಇಲ್ಲ ಅಂದರೆ ಕಲ್ಲುಗಳನ್ನೋ ತೂರಿ ಇವರ ಸೇನಾ ವಾಹನ ಸಾಲನ್ನು ಧೃತಿಗೆಡಿಸಲು ಪ್ರಯತ್ನಿಸುವುದು ಸಾಮಾನ್ಯವಂತೆ. ಅಂದು ಪೆಟ್ರೋಲ್ ಬಾಂಬ್ ಎಸೆದು ಓಡಿ ಹೋದ ಸಣ್ಣ ಹುಡುಗರ ಹಿಂದೆ ಮರೆಯಲ್ಲಿ ಅವಿತುಕುಳಿತ ದೊಡ್ಡ ಉಗ್ರಗಾಮಿ ಪಡೆಯೇ ಇತ್ತಂತೆ. ಭಾರಿ ಗುಂಡಿನ ಚಕಮಕಿಯಲ್ಲಿ ಆ ಕಡೆ ಹಲವು ಹೆಣಗಳು ಉರುಳಿ, ಇನ್ನುಳಿದವರು ಓಡಿಹೋದ ಮೇಲೆ ಇವರು ಮುಂದೆ ಹೋದರಂತೆ. ಮಿಲಿಟರಿಯವರ ಕಡೆ ಎನೊಂದೂ ಸಾವು-ನೋವು ಆಗಲಿಲ್ಲ ಎಂದು ಗೊತ್ತಾಯ್ತು. ಇವೆಲ್ಲ ಸಂಘರ್ಷಗಳ ವಿವರಣೆಯನ್ನು ಮಿಲಿಟರಿಯವರು ಕೊಡುವುದಿಲ್ಲ. ನಮ್ಮ ಹಾಗೆ ಬೇರೆ ವಾಹನಗಳಲ್ಲಿ ಕುಳಿತಿದ್ದ ನಮ್ಮ ಹುಡುಗರು ತಾವು ಕಿಟಕಿಯಲ್ಲಿ ಇಣುಕಿ ನೋಡಿದ ವಿವರಗಳನ್ನು ಹೇಳುತ್ತಿದ್ದರು. ನಾವು ಇದ್ದ ಜಾಗದಿಂದ ಇಷ್ಟೆಲ್ಲ ನಡೆದಿರುವುದು ಕಾಣಲಿಲ್ಲ. ನನಗಂತೂ ಇದನ್ನೆಲ್ಲ ಕೇಳಿ ಎದೆ ಧಸಕ್ಕನೆ ಬಿದ್ದ ಹಾಗಾಯ್ತು! ಆ ಕ್ಷಣದಲ್ಲಿ ಎಲ್ಲ ದೇವರೂ ಒಮ್ಮೆ ಕಣ್ಮುಂದೆ ಬಂದು ಹೋಗಿದ್ದರು! ನೆನೆಸಿಕೊಂಡರೆ ಇಂದಿಗೂ ಎದೆ ಬಡಿದುಕೊಳ್ಳುವಂತಹ ಅನುಭವ ಅದು. ನಾವು ಹೋದ ನಂತರ ಆ ಜಾಗಕ್ಕೆ ಮತ್ತೊಂದು ಕೂಂಬಿಂಗ್ ತಂಡ ಬಂದಿತ್ತು ಎಂದು ತಡವಾಗಿ ಗೊತ್ತಾದದ್ದು.

‘ಹೌಸ್-ಇ-ಮದದ್’ ದಾಟಿ ಕ್ಯಾಂಪ್ ಡ್ವಾಯರನ್ನು ತಲುಪ ಹೊತ್ತಿಗೆ ಸಂಜೆ ೪ ಅನಿಸುತ್ತೆ. ಆ ರಾತ್ರಿ ಅಲ್ಲಿ ತಂಗಿದ ನಂತರ ಬೆಳಗ್ಗೆ ಎದ್ದು ಅಲ್ಲಿಂದ ಹತ್ತು ಮೈಲುಗಳು ದಾಟಿ ಒಂದು ನಿರ್ಜನ ಪ್ರದೇಶದಲ್ಲಿ ಹೊಸ ಉಪಕ್ಯಾಂಪ್ ನಿರ್ಮಿಸುವ ಕೆಲಸ ನಮ್ಮದು. ಕೇವಲ ೪ ದಿನಗಳಲ್ಲಿ ಮುಗಿಸುವ ತೀವ್ರತರವಾದ ಜವಾಬ್ದಾರಿ. ಆ ರಾತ್ರಿ ನಮ್ಮೆಲ್ಲ ೮ ಜನಕ್ಕೂ ಮಿಲಿಟರಿ ಟೆಂಟಿನಲ್ಲಿ ವಾಸ. ಸುರೇಶ್ ಎನ್ನುವ ಅತ್ಯಂತ ನುರಿತ ಎಲೆಕ್ಟ್ರಿಷಿಯನ್ ರಾಜಸ್ಥಾನದವ. ಈಗಾಗಲೇ ೬-೭ ವರ್ಷಗಳ ಸುದೀರ್ಘ ಅನುಭವ ಇರಾಕ್ ಮತ್ತು ಇಲ್ಲಿನ ರಣಭೂಮಿಗಳಲ್ಲಿ. ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪುಗಳಿಗೆ ಹಲವಾರು ಬಾರಿ ಈ ರೀತಿ ಓಡಾಡಿದ ಅನುಭವವಿದೆ. ಕೆಲವು ಬಾರಿ ಮಿಲಿಟರಿ ಚಾಪರ್ ನಲ್ಲಿ ಓಡಾಡಿದ್ದನ್ನು ಹೇಳಿದ್ದಾನೆ. ಆ ದಿನ ನಡೆದ ಪುಟ್ಟ ಯುದ್ಧದ ಘಟನೆಯನ್ನು ಎಲ್ಲರ ಬಾಯಲ್ಲಿ ಅವರವರಿಗೆ ಇಣುಕಿದಷ್ಟನ್ನೂ ಕೇಳಿ ಹೀಗೆಯೇ ಆಗಿದೆ ಎಂದು ಕರಾರುವಾಕ್ಕಾಗಿ ವಿವರಿಸಿದ್ದೂ ಈತನೇ. ಹೀಗೆ ಹೆಲಿಕಾಪ್ಟರುಗಳಲ್ಲಿ ಓಡಾಡುವಾಗ ಬಾಗಿಲಿಗೆ ಆತುಕೊಂಡು ದೂರ್ಬಿನ್ನಿನಲ್ಲಿ ಕೆಳಗೆ ನೋಡುತ್ತ ನಿಲ್ಲುವ ಮಿಲಿಟರಿಯವರು ಕಾರಣವಿಲ್ಲದೆ ಕೆಳಗೆ ಕಾಣುವ ಊರಿನೆಡೆಗೋ ಅಥವಾ ಜನ ಹೆಚ್ಚು ಸೇರಿದ್ದ ಜಾಗದೆಡೆಗೋ ಗುರಿಯಿಟ್ಟು ಗುಂಡಿನ ಮೊರೆತವನ್ನು ಮಾಡುತ್ತಾರೆ, ಕೆಟ್ಟ ಮಾತುಗಳಲ್ಲಿ ಬೈಯುತ್ತಾರೆ ಎಂದು ಹೇಳಿದ್ದು ನನಗೆ ವಿಪರೀತ ನೋವನ್ನೂ ಗೊಂದಲವನ್ನೂ ಉಂಟುಮಾಡಿತ್ತು. ಅದೆಂತಹ ಚೇಷ್ಟೆ ಇದು ಎನಿಸಿತ್ತು. ಒಂದು ವೇಳೆ ಗುಂಡು ತಗುಲಿ ಅಮಾಯಕರು ಸತ್ತರೆ? ನೂರಾರು ದಿನಗಳು ಮನೆಯ ಸೌಖ್ಯದಿಂದ ಹೊರ ಇದ್ದು ಇಷ್ಟೊಂದು ಅಪಾಯವನ್ನು ಎದುರಿಸುತ್ತಿರುವ ಇವರ ಮನಸ್ಥಿತಿ ಹೀಗಾಗಿದೆಯೇ? ಅಥವಾ ಅದು ಅವರ ಯುದ್ಧ ನೀತಿಯ ಭಾಗವೇ? ಯುದ್ಧ ಭೂಮಿಯ ಕರಾಳ ಸತ್ಯಗಳು ಇನ್ನೂ ನೂರಾರಿವೆಯೇನೋ? ನನಗೆ ಕೊನೆಯಿಲ್ಲದ ಪ್ರಶ್ನೆಗಳು ಮನದಲ್ಲಿ.

ರಾತ್ರಿ ಸರಿಯಾಗಿ ನಿದ್ದೆ ಹತ್ತಲಿಲ್ಲ. ಏನೇನೋ ತಾತ್ವಿಕ ಯೋಚನೆಗಳು ಮನಸ್ಸಿನಲ್ಲಿ ಹಾಯ್ದು ಹೋಗುತ್ತಿತ್ತು. ಮಧ್ಯರಾತ್ರಿ ‘ರಾಕೆಟ್ ಅಟ್ಯಾಕ್’ ಎಂದು ಸ್ಪೀಕರ್ ಕಿರುಚಿ ಇನ್ನಷ್ಟು ಗಾಬರಿ ಮಾಡಿಟ್ಟಿತ್ತು. ಬಂಕರ್ ನೆಡೆಗೆ ಓಡುವುದೇ ಆಯ್ತು ರಾತ್ರಿಪೂರ. ಬೆಳಗ್ಗೆ ಆದರೆ ಸಾಕು ಎಂದುಕೊಂಡೆ. ಬೆಳಗ್ಗೆ ಬೇಗ ತಿಂಡಿ ತಿಂದು ಹೊರಟು ನಿಂತೆವು. ಈಗ ನಮ್ಮ ಸಂಖ್ಯೆ ಸ್ವಲ್ಪ ಕರಗಿತ್ತು. ಕೆಲವರು’ ಹೌಸ್-ಇ-ಮದದ್ ‘ಕ್ಯಾಂಪಿನಲ್ಲಿ ಉಳಿದರೆ ಮತ್ತೊಂದಷ್ಟು ಜನ ಕ್ಯಾಂಪ್ ಡ್ವಾಯರಿನಲ್ಲಿ ಉಳಿದುಕೊಂಡರು. ಈಗ ನಾವು ೮ ಜನ ಮತ್ತು ಮಿಲಿಟರಿಯ ೨೮ ಜನರು. ನಮ್ಮ ಕ್ಯಾರವಾನ್ ಹೊರಟಿತು. ಸ್ಪಿನ್ ಬೋಲ್ದಾಕ್ ಪ್ರಾಂತ್ಯ ಅತ್ಯಂತ ಅಪಾಯಕಾರಿ ಎಂದು ಗೊತ್ತಿದ್ದರಿಂದಲೇ ಅತೀವ ಭಯ ಮನದಲ್ಲಿ. ಯಾವಾಗ ಹೇಗೆ ಧಾಳಿಯಾಗಬಹುದೋ ಎಂಬ ಭಯ ತೀವ್ರ ಕಾಡತೊಡಗಿತು. ನಾವು ಹೊರಟಿರುವುದು ಯಾವುದೇ ಮಿಲಿಟರಿ ಸುರಕ್ಷಾ ವ್ಯವಸ್ಥೆಯಿರದ ತೆರೆದ ಬಯಲು ಪ್ರದೇಶ. ಅದೂ ಕೂಡ ಸುತ್ತ ಬೆಟ್ಟ ಗುಡ್ಡಗಳಿಂದ ಆವೃತ ಜಾಗ. ಯಾವ ಬೆಟ್ಟದ ಕಡೆಯಿಂದ ರಾಕೆಟ್ ನುಗ್ಗಿ ಬರುವುದೋ, ಯಾವ ಭಾಗದಿಂದ ನೂರಾರು ಉಗ್ರರು ನುಗ್ಗಿ ಬಂದಾರೋ ಎಂಬ ಭಯ.

ಕೇವಲ ೩೦-೪೦ನಿಮಿಷಗಳ ಪ್ರಯಾಣ ಅಷ್ಟೇ. ರಸ್ತೆ ಕಡಿದಾಗಿತ್ತು ಮತ್ತು ಕೆಟ್ಟದಾಗಿತ್ತು. ಬರೀ ಧೂಳು. ಮೊದಲು ಶಸ್ತ್ರ-ಸಜ್ಜಿತ ಮಿಲಿಟರಿಯವರು ಕೆಳಗೆ ಇಳಿದು ಸುತ್ತಮುತ್ತ ಓಡಾಡುತ್ತಿದ್ದುದು ಒಳಗಿಂದಲೇ ನೋಡುತ್ತಿದ್ದೆವು. ಸುಮಾರು ಹೊತ್ತಿನ ನಂತರ ನಮ್ಮನ್ನು ಕೆಳಗಿಳಿಯಲು ಸೂಚಿಸಿದರು. ಮೊದಲು ಹತ್ತು ನಿಮಿಷಗಳು ನಮಗೆ ಸೂಚನೆಗಳನ್ನು ಹೇಳಿಕೊಡಲು ಆಯ್ತು. ನಾವು ಅಲ್ಲಿ ಯಾವ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ವಿಶದವಾದ ವಿವರಣೆಗಳು ಮತ್ತು ನಮಗೆ ಯಾವುದೇ ಅಪಾಯವಾಗದಂತೆ ನಮ್ಮನ್ನು ನೋಡಿಕೊಳ್ಳುವಿರೆಂಬ ಅಭಯ. ಇಲ್ಲಿ ಕೆಲಸ ಮುಗಿಸಿ ಆದಷ್ಟು ಬೇಗ ಹೊರಡಬೇಕು, ನಿಗದಿಗಿಂತ ಇನ್ನೂ ಬೇಗ ಮುಗಿದರೆ ಒಳ್ಳೆಯದೇ ಎಂದೆಲ್ಲಾ ನಮ್ಮನ್ನು ನಾವು ಹುರಿದುಂಬಿಸಿಕೊಂಡೆವು. ಅವರೆಲ್ಲ ನಮ್ಮ ಸುತ್ತ ಪಹರೆಗೆ ನಿಂತರು. ಕೆಲಸ ಶುರುವಾಯ್ತು. ನಾನು, ಅಮೀರ್ ಮತ್ತು ಆ ಮಿಲಿಟರಿ ಪಡೆಯ ಮುಖ್ಯಸ್ಥ ‘ಸಾರ್ಜಂಟ್ ಜೆಫ್’ ಯೋಜಿಸಿದಂತೆ ಮೊದಲ ದಿನ ಅಗತ್ಯವಿರುವ ಟೆಂಟುಗಳನ್ನು ಜೋಡಿಸಿ ನಿಲ್ಲಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು. ಎರಡನೇ ದಿನ ಅಡುಗೆ ಮಾಡುವ ಮಾಡ್ಯುಲರ್ ಕ್ಯಾಬಿನ್, ಲಾಂಡ್ರಿ ಕ್ಯಾಬಿನ್ ಮತ್ತು ಇತರೆ ಅಗತ್ಯ ವ್ಯವಸ್ಥೆ. ಮೂರನೇ ದಿನ ಕ್ಯಾಂಪಿನ ಸುತ್ತ ತಂತಿ ಸುರುಳಿ ಬೇಲಿಯನ್ನು ಹಾಕುವುದು. ಅಷ್ಟರಲ್ಲಿಯೇ ಪಕ್ಕದ ಕ್ಯಾಂಪ್ ಡ್ವಾಯರಿನಿಂದ ಕಾಂಕ್ರೀಟ್ ಟಿ-ವಾಲ್ ಗಳು ಬಂದಿರುತ್ತೆ. ಅವನ್ನು ಅಂದೇ ಸುತ್ತ ಜೋಡಿಸುವುದು ಎಂದು. ಅಂದುಕೊಂಡ ಹಾಗೆ ಮೊದಲ ದಿನದ ಕೆಲಸ ಮುಗಿಯಿತು, ಟೆಂಟ್ ವ್ಯವಸ್ಥೆಯಾಯ್ತು. ಒಂದು ಪುಟ್ಟ ಮಾಡ್ಯುಲರ್ ಜೆನರೇಟರ್ ಮತ್ತು ನೀರಿನ ಟ್ಯಾಂಕುಗಳನ್ನು ಕ್ಯಾರವಾನಿನಲ್ಲಿ ಈಗಾಗಲೇ ತಂದಿದ್ದೆವು. ಹಲವಾರು ತಿಂಗಳಿಗೆ ಸಾಕಾಗುವಷ್ಟು ಟ್ರಕ್ಕುಗಟ್ಟಲೆ ಕುಡಿಯುವ ನೀರಿನ ಬಾಟಲುಗಳು. ಬಳಸುವ ನೀರನ್ನು ಹತ್ತಿರದ ಕ್ಯಾಂಪ್ ಡ್ವಾಯರಿನಿಂದ ಟ್ಯಾಂಕರಿನಲ್ಲಿ ಪ್ರತಿನಿತ್ಯ ತಂದು ಟ್ಯಾಂಕುಗಳಿಗೆ ತುಂಬಿ ಹೋಗುತ್ತಿದ್ದರು. ಸ್ನಾನಕ್ಕೆ ಮತ್ತು ಮುಖ ತೊಳೆಯಲು ಬಳಸಿದ ನೀರು ಅಲ್ಲಿಯೇ ತೆಗೆದ ಇಂಗುಗುಂಡಿಗೆ ಹೋಗುತ್ತಿತ್ತು. ಕಕ್ಕಸ್ಸು ಕ್ಯಾಬಿನ್ನುಗಳಿಂದ ಶೇಖರವಾದ ಗಲೀಜನ್ನು ತೆಗೆಯಲು ದಿನಾಲೂ ಸಿವೇಜ್ ಟ್ರಕ್ಕುಗಳು ಬರುತ್ತಿದ್ದವು. ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪಿಗೆ ಬರುವ ಆಹಾರ, ನೀರು ಮತ್ತು ಸಿವೇಜ್ ಟ್ರಕ್ಕುಗಳನ್ನು ರಸ್ತೆ ಮಧ್ಯದಲ್ಲಿ ಉಗ್ರರು ಉಡಾಯಿಸಿಬಿಡುತ್ತಿದ್ದರು ಇಲ್ಲವೇ ಟ್ರಕ್ ಸಮೇತ ಅಪಹರಿಸಿಬಿಡುತ್ತಿದ್ದರು. ಹಾಗಾಗಿ ಮಿಲಿಟರಿ ಎಸ್ಕಾರ್ಟ್ ಜೊತೆಯಲ್ಲೇ ಸರಬರಾಜಿನ ಸಾಗಣೆ ಮಾಡುತ್ತಿದ್ದರು.

ಅಂದು ರಾತ್ರಿ ತೀವ್ರ ಚಳಿಯಿತ್ತು. ಯುದ್ಧಟ್ಯಾಂಕ್ ವಾಹನಗಳನ್ನು ಟೆಂಟುಗಳ ಸುತ್ತ ವೃತ್ತಾಕಾರವಾಗಿ ನಿಲ್ಲಿಸಿ ಸುರಕ್ಷಾ ಕವಚವನ್ನು ನಿರ್ಮಿಸಿದ ರೀತಿ ನನಗೆ ತುಂಬಾ ಇಷ್ಟವಾಯ್ತು. ತಂದಿದ್ದ ಆಹಾರ ಪೊಟ್ಟಣಗಳನ್ನು ಬಿಚ್ಚಿ ತಿಂದೆವು. ಕೆಲವು ಪ್ರೊಟೀನ್ ಬಾರ್ಗಳನ್ನು ತಿಂದು ಅದೆಂತಹುದೋ ಸೂಪಿನ ಪೌಡರನ್ನು ನೀರಿಗೆ ಬೆರೆಸಿ ಕುಡಿದೆವು. ಮೊದಲ ಬಾರಿಗೆ ಆ ತರಹದ ಊಟ, ವಿಚಿತ್ರ ಅನಿಸಿತ್ತು. ಕೆಲವರು ಟೆಂಟಿನೊಳಗೆ, ಕೆಲವರು ವಾಹನದೊಳಗೆ ಮಲಗಿದರು. ಪಾಳಿಯಂತೆ ಕೆಲವರು ರಾತ್ರಿಯೆಲ್ಲ ಪಹರೆ ಕಾಯ್ದರು. ನಿಜವಾಗಿಯೂ ನಾವು ಅತಿ ಅಪಾಯದ ಜಾಗದಲ್ಲಿದ್ದೆವು. ನಮ್ಮ ದುರಾದೃಷ್ಟಕ್ಕೆ ಉಗ್ರರಿಗೆ ಈ ವಿಷಯ ತಿಳಿದಿದ್ದರೆ ನಮ್ಮ ಮೇಲೆ ಧಾಳಿ ಖಂಡಿತ ಎಂದು ಮಾತಾಡಿಕೊಂಡೆವು. ಸರ್ವಸಜ್ಜಿತ ಮಿಲಿಟರಿ ಕ್ಯಾಂಪಿನೊಳಗೆ ಕೆಲಸ ಮಾಡುವುದು ಹೆಚ್ಚುಗಾರಿಕೆಯೇನಲ್ಲ. ಇಂತಹ ಹೊಸ ಕ್ಯಾಂಪ್ ನಿರ್ಮಾಣ ಅತಿ ಅಪಾಯಕಾರಿ ಹಾಗೂ ಚಾಲೆಂಜ್ ನಿಂದ ಕೂಡಿದ್ದು. ಹೆಚ್ಚು ಧಾಳಿಗಳು ಇಂತಹ ಸಂದರ್ಭದಲ್ಲೇ ಆಗುವುದು ಎಂದು ನಂತರ ನನಗೆ ಹಲವರು ಹೇಳಿದರು. ಕೆಲವರು ತುಂಬಾ ಹೆದರಿದ್ದರು. ಆ ರಾತ್ರಿ ಕೂಡ ನಿದ್ದೆ ಹತ್ತಲಿಲ್ಲ.

ಬೆಳಗ್ಗೆಯಾಗಿತ್ತು. ಇನ್ನೂ ಬದುಕಿದ್ದೀವಿ ಎಂದು ವಿಚಿತ್ರ ಖುಷಿಯಿಂದ ನಾವೆಲ್ಲ ಪರಸ್ಪರ ನಕ್ಕು ಶುಭಾಶಯ ವಿನಿಮಯ ಮಾಡಿಕೊಂಡೆವು. ಇನ್ನೆರೆಡು ದಿನ ಅಷ್ಟೇ, ವಾಪಸ್ ಹೊರಡೋಣ ಎಂದೆಲ್ಲಾ ಮಾತಾಡಿದೆವು. ಪಕ್ಕದ ಕ್ಯಾಂಪ್ ಡ್ವಾಯರಿನಿಂದ ಆಹಾರ ಸಾಮಗ್ರಿಯಿದ್ದ ಒಂದು ಸಣ್ಣ ಕಂಟೈನರ್ ಬಂದಿತ್ತು. ನಮ್ಮಲ್ಲಿದ್ದ ಒಬ್ಬ ಅಡುಗೆಯವ ಅಂದು ಅಡುಗೆ ಮಾಡಿದ. ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ಹರಟುತ್ತಾ ಬಿಸಿ ಊಟವನ್ನು ಸವಿದೆವು. ಇನ್ನೊಂದು ರಾತ್ರಿ ಕೂಡ ಹೀಗೆಯೇ ಕಳೆಯಿತು. ಅಂದು ಗಡದ್ದಾಗಿ ನಿದ್ದೆ ಹೋದೆವು. ಕೊನೆಯ ದಿನವೂ ಎಲ್ಲ ಅಂದುಕೊಂಡಂತೆ ಆಯ್ತು. ಬಹು ಶಿಸ್ತಿನ ಪೂರ್ವ ಸಿದ್ಧತೆಯ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಆದ್ದರಿಂದ ಎನೊಂದೂ ಸಮಸ್ಯೆ ಆಗಲಿಲ್ಲ. ಮೂರನೇ ರಾತ್ರಿಯೂ ಹೀಗೇ ಕಳೆಯಿತು. ನಾಲ್ಕನೆಯ ದಿನ ಮಧ್ಯಾಹ್ನ ನಮ್ಮನ್ನು ಕ್ಯಾಂಪ್ ಡ್ವಾಯರಿಗೆ ತಂದು ಇಳಿಸಿದರು. ಅಡುಗೆಯವ ಸೇರಿ ಒಂದಿಬ್ಬರು ಅಲ್ಲೇ ಉಳಿದರು. ಕ್ಯಾಂಪ್ ಡ್ವಾಯರ್ ಏರ್-ಸ್ಟ್ರಿಪ್ ಹೊಂದಿರುವ ಸುಸಜ್ಜಿತ ಮಿಲಿಟರಿ ಕ್ಯಾಂಪ್. ಯೂ‌ಎಸ್ ಮರೀನ್ಸ್ ಪಡೆ ಆ ಕ್ಯಾಂಪನ್ನು ನಿರ್ವಹಿಸುತ್ತಿತ್ತು. ಅಮೆರಿಕೆಯ ಸೇನೆಯಲ್ಲೇ ಅತಿ ಸಮರ್ಥ ಪಡೆಯೆಂಬ ಹೆಗ್ಗಳಿಕೆ ಅವರದ್ದು. ಈ ಶಿಸ್ತಿನ ಸಿಪಾಯಿಗಳೇ ಪ್ರಧಾನವಾಗಿ ಇದ್ದ ಇನ್ನೊಂದು ಕ್ಯಾಂಪ್ ‘ಲೆದೆರ್ನೆಕ್’ ಬಗ್ಗೆ ಮುಂದೆ ಸಾಕಷ್ಟು ಅತಿ ವಿಶೇಷವಾದ ವಿಷಯಗಳನ್ನು ತಿಳಿಸುವುದಿದೆ. ಅಲ್ಲಿಂದ ನಾವು ಕಂದಹಾರ್ ಕ್ಯಾಂಪ್ ಕಡೆಗೆ ಮಿಲಿಟರಿ ವಿಮಾನದಲ್ಲಿ ವಾಪಸಾದೆವು. ಕಂದಹಾರಿನಿಂದ ಯಾಕೆ ನಮಗೆ ವಿಮಾನದಲ್ಲೇ ಕಳುಹಿಸಲಿಲ್ಲವೋ ಎಂದು ಗೊಣಗಿದ್ದೂ ಕೂಡ ನಿಜ. ಇನ್ನೊಂದೆಡೆ ನಾವೇ ಯುದ್ಧ ಜಯಿಸಿದ ಹಾಗೆ ಬೀಗಿ ಪ್ರಾಣ ಉಳಿಸಿಕೊಂಡು ಬಂದೆವಲ್ಲ ಎನ್ನುವ ಸಂತೋಷ.

(ಕೃತಿ: ಕುಣಿಗಲ್‌ ಟು ಕಂದಹಾರ್‌ (ಅನುಭವ ಕಥನ), ಲೇಖಕರು: ಮಂಜುನಾಥ್‌ ಕುಣಿಗಲ್‌, ಪ್ರಕಾಶಕರು: ವೀರಲೋಕ ಬುಕ್ಸ್‌, ಬೆಲೆ: 260/-)