ಹೆಣ್ಣನ್ನು ವ್ಯಾಖ್ಯಾನಿಸುವ ಸೌಂದರ್ಯ, ಸೌಶೀಲ್ಯ, ಪಾತಿವ್ರತ್ಯ ಈ ಎಲ್ಲ ಪದಗಳಿಗೆ ಇಲ್ಲಿಯ ಪಾತ್ರಗಳು ತಮ್ಮ ಅನುಭವಲೋಕದ ಮೂಲಕವೇ ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ತನ್ನ ಮೂಗನ್ನು ಕಳಕೊಂಡು ಕುರೂಪಿಯಾದ ಶೂರ್ಪನಖಿ ಸುಂದರವಾದ ಬನವನ್ನು ಸೃಷ್ಟಿಸುತ್ತಾಳೆ. ಗಂಡನ ಅಗಲುವಿಕೆಯ ನಂತರವೂ ಮಂಡೋದರಿ ತನ್ನ ಅಲಂಕಾರವನ್ನು ತೆಗೆಯುವುದನ್ನು ವಿರೋಧಿಸುತ್ತಾಳೆ. ತನ್ನನ್ನು ವಿಚಾರಿಸುವ ಹಕ್ಕನ್ನು ತಾನು ಯಾರಿಗೂ ಕೊಡಲಾರೆ ಎಂದು ಪಟ್ಟುಹಿಡಿವ ಅಹಲ್ಯೆ ಜ್ಞಾನದ ದಾರಿಯಲ್ಲಿ ಸಾಗುತ್ತಾಳೆ. ಊರ್ಮಿಳೆ ತನ್ನ ಅಕ್ಕ ಸೀತೆಗೆ ವಿಮುಕ್ತೆಯಾಗುವ ದಾರಿ ತೋರಿಸುತ್ತಾಳೆ. ರಾಜನಾಗಿ ಆಜ್ಞೆನೀಡಬೇಕಾದ ರಾಮ ಮಾತ್ರ ಕೊನೆಯವರೆಗೂ ಅಧಿಕಾರದ ಕಬಂಧ ಬಾಹುಗಳಲ್ಲಿ ಬಂಧಿತನಾಗಿಯೇ ಉಳಿಯುತ್ತಾನೆ.
ಸುಧಾ ಆಡುಕಳ ಬರೆದ ಲೇಖನ

 

ಇಂದಿನ ಯುವಜನತೆ ಭಾಷೆಯನ್ನು ಕಳಕೊಳ್ಳುತ್ತಿದ್ದಾರೆ. ಯಂತ್ರನಾಗರಿಕತೆಯ ಬೆನ್ನು ಹತ್ತುತ್ತಾ ನೈಜ ಬದುಕಿನ ಹದವನ್ನು ಮೀರುತ್ತಿದ್ದಾರೆ. ಬದುಕಿನ ಚಿಕ್ಕಪುಟ್ಟ ನವಿರು ಭಾವಗಳನ್ನು ಅನುಭವಿಸುವ ಸೂಕ್ಷ್ಮತೆಯನ್ನು ಬೆಳಸಿಕೊಳ್ಳುತ್ತಿಲ್ಲ ಎಂಬೆಲ್ಲ ದೂರುಗಳನ್ನು ಅಲ್ಲಗಳೆಯುವಂತೆ. ಆದರೆ ಕೆಲವರು ತಮ್ಮನ್ನು ತಾವು ಸೃಜನಶೀಲ ಕ್ಷೇತ್ರದಲ್ಲಿ ನಿರೂಪಿಸಿಕೊಳ್ಳುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯಂತೂ ಇಂತಹ ಯುವಜನರ ಒಂದು ಸಮೂಹವೇ ಇದೆ. ಈಗಿನ್ನೂ ವಿದ್ಯಾರ್ಥಿಯಾಗಿದ್ದು ಅನುವಾದ ಕ್ಷೇತ್ರದಲ್ಲಿ ಗಟ್ಟಿನೆಲೆಯನ್ನು ಕಂಡುಕೊಳ್ಳುತ್ತಿರುವ ಅಜಯ್ ವರ್ಮಾ ಅಲ್ಲೂರಿ, ಕೇವಲ ನಾಲ್ಕು ವರ್ಷಗಳ ಹಿಂದೆ ತೇಜಸ್ವಿ ಓದು ಕಾರ್ಯಕ್ರಮವನ್ನು ನಡೆಸುತ್ತೇವೆಂದು ಕರ್ನಾಟಕದಾದ್ಯಂತ ತಿರುಗುತ್ತಿದ್ದು, ಇಂದು ‘ಹಾಣಾದಿ’ಯಂತಹ ಅದ್ಭುತ ಕಾದಂಬರಿಯೊಂದನ್ನು ಬರೆದಿರುವ ಕಪಿಲ ಹನುಮಬಾದೆ, ಬಿಸಿಲಿನಲ್ಲಿ ಕಾರ್ಮಿಕರೊಂದಿಗೆ ದುಡಿಯುತ್ತಲೇ ಬೆಂಕಿಯಂತಹ ಕವನಗಳನ್ನು ಬರೆಯುವ ಸಚಿನ್ ಅಂಕೋಲಾ, ಈಗಾಗಲೇ ನಾಲ್ಕು ಒಳ್ಳೆಯ ಕಾದಂಬರಿಗಳನ್ನು ಬರೆದು, ತಮ್ಮದೇ ಸ್ವಂತ ಪ್ರಕಾಶನದ ಮೂಲಕ ಅದನ್ನು ಪ್ರಕಟಿಸಿರುವುದಲ್ಲದೇ ಇತ್ತೀಚೆಗೆ ಬೇರೆಯವರ ಪುಸ್ತಕಗಳನ್ನೂ ಪ್ರಕಟಿಸುತ್ತಿರುವ ಅನುಷ್ ಶೆಟ್ಟಿ… ನನ್ನ ಸ್ನೇಹವಲಯಲ್ಲಿರುವ ಇವರೆಲ್ಲರೂ ಯುವಕರ ಬಗೆಗಿನ ನಮ್ಮ ಆರೋಪಗಳನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸುತ್ತಾರೆ.

ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ವೋಲ್ಗಾ ಅವರ ಕಥಾಸಂಕಲನ ‘ವಿಮುಕ್ತೆ’ಯನ್ನು ಅಜಯ್ ಇತ್ತೀಚೆಗಷ್ಟೇ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನು ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣದಲ್ಲಿ ಪೌರಾಣಿಕ ಪಾತ್ರಗಳ ಬಗ್ಗೆ ಬರೆಯುತ್ತಿರುವಾಗ ಅದಕ್ಕೆ ಸಂಬಂಧಿಸಿದ ತನ್ನ ಅನುವಾದಿತ ಕಥೆಗಳನ್ನು ನನ್ನ ಓದಿಗಾಗಿ ಅಜಯ್ ಕಳುಹಿಸುತ್ತಿದುದರಿಂದ ಹೆಚ್ಚಿನವುಗಳನ್ನು ಈಗಾಗಲೇ ಓದಿದ್ದೆ. ಆದರೆ ಎಲ್ಲವನ್ನೂ ಒಟ್ಟಾಗಿ ಪುಸ್ತಕದಲ್ಲಿ ಓದುವ ಖುಶಿಯೇ ಬೇರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿರುವ ಇಲ್ಲಿನ ಕಥೆಗಳನ್ನು ಓದುತ್ತಾ ಹೋದಂತೆಲ್ಲ ಬಿಡುಗಡೆಯ ಕನಸು ಹೊತ್ತ ಹೆಣ್ಣಿನ ಕಥನಗಳು ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಇಲ್ಲಿನ ಎಲ್ಲ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ಪಾತ್ರವೆಂದರೆ ಸೀತೆ. ರಾಮಾಯಣದ ಬೇರೆ ಬೇರೆ ಕಾಲಘಟ್ಟದ ಪ್ರಮುಖ ಸ್ತ್ರೀ ಪಾತ್ರಗಳೆಲ್ಲವೂ ಸೀತೆಯೊಂದಿಗೆ ಮುಖಾಮುಖಿಯಾಗುತ್ತಲೇ ಅವಳನ್ನು ವಿಮುಕ್ತೆಯಾಗಿಸುವ ಕಸುವನ್ನು ನೀಡುತ್ತ ಹೋಗುತ್ತಾರೆ. ಶೂರ್ಪನಖಿ, ರೇಣುಕೆ, ಅಹಲ್ಯಾ, ಮಂಡೋದರಿ, ಊರ್ಮಿಳಾ ಇವರೆಲ್ಲರ ಜೊತೆಗೆ ರಾಮನೂ ಇಲ್ಲಿ ಬಿಡುಗಡೆಗೆ ಹಂಬಲಿಸುವ ಜೀವವೆ. ಹೆಣ್ಣೊಬ್ಬಳು ಹೆಣ್ಣಿನ ಚರಿತೆಯನ್ನು ಕಥಿಸಿದಾಗ ಅವೆಷ್ಟು ನೈಜವಾಗಿರುತ್ತವೆ ಎಂಬುದಕ್ಕೆ ಇಲ್ಲಿಯ ಕಥೆಗಳನ್ನು ಓದಲೇಬೇಕು. ಹೆಣ್ಣುಗಳಿಬ್ಬರ ನಡುವೆ ಪೈಪೋಟಿ, ಅಸೂಯೆ, ವೈರತ್ವ ಮೊದಲಾದ ತಾಮಸ ಗುಣಗಳು ಮಾತ್ರವೇ ಇರಲು ಸಾಧ್ಯ ಎಂಬ ಪರಿಪಾಠವನ್ನು ಮುರಿದು ಒಂದು ಹೆಣ್ಣಿಗೆ ಇನ್ನೊಬ್ಬಳು ಆಸರೆಯಾಗಿ ಹೆಗಲು ಕೊಡುವ, ಸಂತೈಸುವ ಪಾತ್ರಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಇದು ವಾಸ್ತವ ಕೂಡಾ ಹೌದು. ತನ್ನ ಗಂಡನ ಕೂಡಿಕೆಯವಳೇ ಆಗಿರಲಿ, ತನ್ನನ್ನು ಹುರಿದು ಮುಕ್ಕಿದ ನಾದಿನಿಯೇ ಆಗಿರಲಿ, ಕಷ್ಟವೆಂದು ಬಂದಾಗ ಎಲ್ಲ ಮರೆತು ಮಡಿಲಿನಲ್ಲಿಟ್ಟು ಸಂತೈಸಿದ ಅದೆಷ್ಟೋ ಹೆಣ್ಣು ಜೀವಗಳನ್ನು ನೋಡಿದ ನನಗೆ ಇಲ್ಲಿಯ ಕಥೆಗಳನ್ನು ಓದುತ್ತಿರುವಂತೆಯೇ ಅವರೆಲ್ಲರನ್ನೂ ಮತ್ತೆ ಮುಟ್ಟಿಬಂದ ಅನುಭವವಾಯಿತು. ಹಾಗಾಗಿಯೇ ಇಲ್ಲಿ ಸೀತೆಯನ್ನು ಮಂಡೋದರಿ ಸಂತೈಸುತ್ತಾಳೆ, ಶೂರ್ಪನಖಿ ಸೀತೆಗೆ ಆತ್ಮಸಖಿಯಾಗುತ್ತಾಳೆ.

ಹೆಣ್ಣನ್ನು ವ್ಯಾಖ್ಯಾನಿಸುವ ಸೌಂದರ್ಯ, ಸೌಶೀಲ್ಯ, ಪಾತಿವ್ರತ್ಯ ಈ ಎಲ್ಲ ಪದಗಳಿಗೆ ಇಲ್ಲಿಯ ಪಾತ್ರಗಳು ತಮ್ಮ ಅನುಭವಲೋಕದ ಮೂಲಕವೇ ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ತನ್ನ ಮೂಗನ್ನು ಕಳಕೊಂಡು ಕುರೂಪಿಯಾದ ಶೂರ್ಪನಖಿ ಸುಂದರವಾದ ಬನವನ್ನು ಸೃಷ್ಟಿಸುತ್ತಾಳೆ. ಗಂಡನ ಅಗಲುವಿಕೆಯ ನಂತರವೂ ಮಂಡೋದರಿ ತನ್ನ ಅಲಂಕಾರವನ್ನು ತೆಗೆಯುವುದನ್ನು ವಿರೋಧಿಸುತ್ತಾಳೆ. ತನ್ನನ್ನು ವಿಚಾರಿಸುವ ಹಕ್ಕನ್ನು ತಾನು ಯಾರಿಗೂ ಕೊಡಲಾರೆ ಎಂದು ಪಟ್ಟುಹಿಡಿವ ಅಹಲ್ಯೆ ಜ್ಞಾನದ ದಾರಿಯಲ್ಲಿ ಸಾಗುತ್ತಾಳೆ. ಊರ್ಮಿಳೆ ತನ್ನ ಅಕ್ಕ ಸೀತೆಗೆ ವಿಮುಕ್ತೆಯಾಗುವ ದಾರಿ ತೋರಿಸುತ್ತಾಳೆ. ರಾಜನಾಗಿ ಆಜ್ಞೆನೀಡಬೇಕಾದ ರಾಮ ಮಾತ್ರ ಕೊನೆಯವರೆಗೂ ಅಧಿಕಾರದ ಕಬಂಧ ಬಾಹುಗಳಲ್ಲಿ ಬಂಧಿತನಾಗಿಯೇ ಉಳಿಯುತ್ತಾನೆ.

ಇಲ್ಲಿನ ಕಥೆಗಳನ್ನು ಓದುವಾಗ ಕನ್ನಡದ ನುಡಿಗಟ್ಟಿನಲ್ಲಿಯೇ ಒಡಮೂಡಿದ ರಚನೆಗಳೇನೊ ಅನಿಸಲು ಕಾರಣ ಅಜಯ್ ಅವರ ಸಶಕ್ತವಾದ ಅನುವಾದ. ಇಲ್ಲಿಯ ಎಲ್ಲಾ ಕಥೆಗಳನ್ನು ಓದಿನ ಓಘಕ್ಕೆ ತಡೆಯಾಗದ ಸರಳ, ಸುಂದರ ಶೈಲಿಯಲ್ಲಿ ಅವರು ಕಟ್ಟಿಕೊಟ್ಟಿದ್ದಾರೆ. ಕೃತಿಕಾರನ ಮಾತಿನಲ್ಲಿ ಅವರೇ ಹೇಳಿಕೊಂಡಂತೆ ಅನುವಾದಕ್ಕೆ ಕೇವಲ ಭಾಷೆಯ ಅರಿವು ಮಾತ್ರ ಸಾಲದು, ಭಾವವನ್ನು ಅರಿತು ಇನ್ನೊಂದು ಭಾಷೆಯಲ್ಲಿ ಹಿಡಿದಿಡಬಲ್ಲ ಕಸುವೂ ಕೂಡಾ ಬೇಕು. ಅದನ್ನು ಈಗಿನ್ನೂ ವಿದ್ಯಾರ್ಥಿಯಾಗಿರುವ ಅಜಯ್ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಸಮಾಜದ ಕಡುವಿರೋಧದ ನಡುವೆಯೂ ಪುರಾಣದ ಪಾತ್ರಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡಿ, ಪುನರ್ ಲೇಖಿಸಿದವರು ವೋಲ್ಗಾ. ಇಲ್ಲಿಯ ಸ್ತ್ರೀಪಾತ್ರಗಳ ಮಾತುಗಳನ್ನು ಗಮನಿಸಿದರೆ ಅವರ ಪಾತ್ರಪೋಷಣೆಯ ನಾವೀನ್ಯತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು.

“ಸಾಫಲ್ಯಕ್ಕೆ ಅರ್ಥವು ಗಂಡಸಿನ ಸಾಂಗತ್ಯದಲ್ಲಿ ಇಲ್ಲವೆಂದು ಗ್ರಹಿಸಿದೆ ಸೀತಾ. ಅದು ಅರಿವಾದ ಮೇಲೆಯೇ ನನಗೆ ಈತನೊಂದಿಗೆ ನಂಟು ಬೆಳೆದಿದೆ”
-ಶೂರ್ಪನಖಿ

ರಾಮಾಯಣದ ಬೇರೆ ಬೇರೆ ಕಾಲಘಟ್ಟದ ಪ್ರಮುಖ ಸ್ತ್ರೀ ಪಾತ್ರಗಳೆಲ್ಲವೂ ಸೀತೆಯೊಂದಿಗೆ ಮುಖಾಮುಖಿಯಾಗುತ್ತಲೇ ಅವಳನ್ನು ವಿಮುಕ್ತೆಯಾಗಿಸುವ ಕಸುವನ್ನು ನೀಡುತ್ತ ಹೋಗುತ್ತಾರೆ. ಶೂರ್ಪನಖಿ, ರೇಣುಕೆ, ಅಹಲ್ಯಾ, ಮಂಡೋದರಿ, ಊರ್ಮಿಳಾ ಇವರೆಲ್ಲರ ಜೊತೆಗೆ ರಾಮನೂ ಇಲ್ಲಿ ಬಿಡುಗಡೆಗೆ ಹಂಬಲಿಸುವ ಜೀವವೆ. ಹೆಣ್ಣೊಬ್ಬಳು ಹೆಣ್ಣಿನ ಚರಿತೆಯನ್ನು ಕಥಿಸಿದಾಗ ಅವೆಷ್ಟು ನೈಜವಾಗಿರುತ್ತವೆ ಎಂಬುದಕ್ಕೆ ಇಲ್ಲಿಯ ಕಥೆಗಳನ್ನು ಓದಲೇಬೇಕು.

“ಸತ್ಯ ಎಂದೂ ಒಂದೇ ರೀತಿ ಇರುವುದಿಲ್ಲವೆಂದು, ನಿರಂತರ ಬದಲಾಗುತ್ತಾ ಇರುತ್ತದೆಯೆಂದು ತಿಳಿದುಕೊಳ್ಳುವುದೇ ನಾನು ಸಂಪಾದಿಸಿದ ಜ್ಞಾನ.
-ಅಹಲ್ಯಾ

“ಒಂದು ಮಡಕೆಯನ್ನು ಸುಂದರವಾಗಿ ರೂಪಿಸಲು ಸಾಧನೆ, ಏಕಾಗ್ರತೆ, ಮರಳು ಮತ್ತು ಅದರಲ್ಲಿರುವ ನೀರಿನ ಅಂಶ ಇನ್ನೂ ಏನೇನೋ ಕಾರಣಗಳಿರುತ್ತವೆ. ಅದೆಲ್ಲವನ್ನೂ ಗ್ರಹಿಸಲಾಗದ ಮಹಾಜ್ಞಾನಿ ಜಮದಗ್ನಿ ಮಹರ್ಷಿ, ತಪಸ್ಸಿನಿಂದ ಅದೆಷ್ಟು ಜ್ಞಾನ ಸಂಪಾದಿಸಿದರೂ ಹೆಂಡತಿಯ ಪಾತಿವೃತ್ಯದ ಮೇಲೆ ಹಠ ಬಿಡದ ಮುಮುಕ್ಷನು.”
-ರೇಣುಕೆ

(ಅಜಯ್ ವರ್ಮಾ ಅಲ್ಲೂರಿ)

ರಾಮ ಸೀತೆಯನ್ನು ತ್ಯಜಿಸಬಲ್ಲ, ಏಕೆಂದರೆ ಸೀತೆ ತನ್ನವಳು.
ಆದರೆ ರಾಜ್ಯವನ್ನು ತ್ಯಜಿಸಲಾರ, ಅದು ರಘುವಂಶದ್ದು.
-ಬಂಧಿತ

“ಮದುವೆಯ ಮುಂಚೆ ನೀನು ಅಲಂಕರಣೆಯನ್ನು ಮಾಡಿಕೊಳ್ಳಲಿಲ್ಲವೆ? ನಾವು ನಮ್ಮ ಆನಂದಕ್ಕಾಗಿ, ವಿಲಾಸಕ್ಕಾಗಿ, ನಮ್ಮ ದೇಹವನ್ನು ಗೌರವಿಸುವುದಕ್ಕಾಗಿ ಅಲಂಕರಿಸಿಕೊಳ್ಳುತ್ತೇವೆ. ಅದನ್ನು ನೋಡಿ ಗಂಡಂದಿರು ಸಂತೋಷಗೊಳ್ಳಬಹುದು, ಕೆಲವರು ಬೇಸರವೂ ಪಡಬಹುದು. ಆದರೆ ನಾವೂ, ನಮ್ಮ ದೇಹಗಳೂ ನಮ್ಮದಲ್ಲವೆ ಸೀತಾ? ನಾವು ಅವುಗಳನ್ನು ಗೌರವಿಸಬೇಕಲ್ಲವೆ?”
-ಮಂಡೋದರಿ

ರಾವಣ ಆರ್ಯರ ಅನುಕರಣೆ ಮಾಡಿ ಕಾಡನ್ನು ನಾಶಗೊಳಿಸಿ ಲಂಕಾನಗರವನ್ನು ಕಟ್ಟಿದರೆ, ಮಂಡೋದರಿ ತನ್ನ ಶೋಕದ ಶಮನಕ್ಕಾಗಿ ಅಶೋಕವನವನ್ನು ನಿರ್ಮಿಸಿಕೊಳ್ಳುತ್ತಾಳೆ. ದ್ರಾವಿಡ ಸಂಸ್ಕೃತಿಯ ಚೆಲುವನ್ನು ವೋಲ್ಗಾ ತೆರೆದಿಡುವ ಬಗೆ ಹೀಗೆ. ಅಶೋಕವನದಲ್ಲಿ ಸೀತೆಯ ಶೋಕ ಹರಡಿಕೊಳ್ಳುತ್ತಲೇ ಲಂಕೆಯೂ ಉರಿದುಹೋಗುತ್ತದೆ. ಕಡುಚೆಲುವ ಮಡದಿಯನ್ನು ಮನೆಯಲ್ಲಿಟ್ಟುಕೊಂಡು ಅತಿಸಾಮಾನ್ಯರೂಪಿನ ಸೀತೆಯನ್ನು ಅಪಹರಿಸಿ ತಂದ ಒಡೆಯನ ಕೆಡುಕುತನಕ್ಕೆ ಮಂಡೋದರಿಯ ಸಖಿ ನಯನೆ ದುಃಖಿಸುವಾಗ ಅವಳ ಕಣ್ಣೀರಿನ ಹನಿಗಳು ಹೂವುಗಳ ಮೇಲೆ ಬೀಳುತ್ತವೆ. ಆಗ ಬರುವ ಮಾತುಗಳನ್ನು ನೋಡಿ.

“ಇಬ್ಬನಿ ಇಷ್ಟು ಬಿಸಿಯಾಗಿದೆ. ಏಕೆ-ಏನೀ ವೈಪರೀತ್ಯ?” ಎಂದು ಹೂಗಳು ಗಾಬರಿಗೊಂಡಿವೆ.

ಇಂಥದೊಂದು ಅಮೂಲ್ಯ ಕಥಾಗುಚ್ಛವನ್ನು ಕನ್ನಡಕ್ಕೆ ತಂದುದಲ್ಲದೇ ಲೇಖಕಿಯ ವಿಸ್ತಾರವಾದ ಸಂದರ್ಶನವನ್ನೂ ಇದರೊಂದಿಗೆ ಸೇರ್ಪಡೆಗೊಳಿಸಿರುವ ಅಜಯ್ನಂತಹ ಹುಡುಗರು ನಮ್ಮ ಮುಂದಿರುವಾಗ ಯುವಜನಾಂಗವನ್ನು ದೂರಲು ಮನಸ್ಸಾದರೂ ಹೇಗೆ ಬಂದೀತು? ತಮ್ಮ ಅಭಿಪ್ರಾಯವನ್ನು ಬರೆಯಿರಿ ಎಂದು ವಿನಯದಿಂದ ಕೇಳಿದ ಅಜಯ್ ಗೆ ಮತ್ತಿಷ್ಟು ಬರೆಯಿರಿ ಎಂದಷ್ಟೇ ಹೇಳಬಲ್ಲೆ.