ಧೋಣಿ ಗೆದ್ದ ಕಪ್ಪನ್ನು ಚಿಕ್ಕವರಾದ ಜೊಗಿಂದರ್ ಮತ್ತು ಶ್ರೀಶಾಂತರಿಗೆ ಕೊಟ್ಟು ಕೊನೆಯಲ್ಲಿ ಹೋಗಿ ನಿಂತರು. ಅಂದಿನಿಂದ ಅದೇ ಅವರು ತಂದ ಹೊಸ ಪದ್ಧತಿ. ಅವರು ಕಪ್ಪನ್ನು, ಟ್ರೋಫಿಯನ್ನು ತಂಡದ ಹೊಚ್ಚ ಹೊಸಬರಿಗೆ ಕೊಟ್ಟು ಕೊನೆಯಲ್ಲಿ ಮಿಕ್ಕವರ ಜೊತೆ ನಿಲ್ಲುತ್ತಿದ್ದರು. ಗೆದ್ದಾಗಲೂ ಗದ್ದಲ ಮಾಡದೆ, ಸೋತಾಗಲೂ ಬಹಳ ಕುಗ್ಗದೆ, ಮುಂದೆ ಏನು ಮಾಡಬೇಕೂಂತ ಯೋಚಿಸುತ್ತಿದ್ದರು. ಒಬ್ಬ ಸ್ಥಿತಪ್ರಜ್ಞ ಹೇಗಿರುತ್ತಾನೆ, ಹೇಗೆ ವರ್ತಿಸುತ್ತಾನೆ ಎಂಬ ದರ್ಶನ ಪ್ರೇಕ್ಷಕರಿಗೆ ಮತ್ತು ಟಿವಿಯಲ್ಲಿ ನೋಡುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಅವರನ್ನು ನೋಡಿದಾಗ ಸಿಗುತ್ತಿತ್ತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ನಿಮ್ಮ ಓದಿಗೆ

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ನಾಯಕರಾದ ಕಪಿಲ್ ದೇವ್ ಮತ್ತು ಮಹೇಂದ್ರಸಿಂಗ್‌ ಧೋಣಿಯವರ ಕೊಡುಗೆ ಚಿರಸ್ಮರಣೀಯ. ಅವರಿಬ್ಬರೂ ತಮ್ಮ ಅದ್ವಿತೀಯ ನಾಯಕತ್ವದಿಂದ ತಂಡದ ಆಟವನ್ನು ಉನ್ನತ ಮಟ್ಟಕ್ಕೆ ಏರಿಸಿ, ಅತ್ಯಂತ ಹಾಗೂ ಶ್ರೇಷ್ಟವಾದ ವಿಶ್ವ ಕಪ್‌ಗಳನ್ನು ಗೆಲ್ಲಿಸಿ ಭಾರತದ ವಿಜಯ ಪತಾಕೆಯನ್ನು ಹಾರಿಸಿದರು. ಅವರ ಬಗ್ಗೆ ದೀರ್ಘವಾಗಿ ನೋಟವನ್ನು ಹರಿಸುವ ಮೊದಲು ಭಾರತದ ಟೀಮಿನ ನಾಯಕರಾಗಿ ಶ್ರಮಿಸಿದ ಕೆಲವು ನಾಯಕರ ಬಗ್ಗೆ ನೋಡೋಣ.

ಮಹಾರಾಜ್ ಕುಮಾರ್ ವಿಜಯನಗರಂ (ವಿಝ್ಝಿ), ಸಿ.ಕೆ. ನಾಯುಡು, ಲಾಲ್‌ ಅಮರ್ನಾಥ್, ನವಾಬ್ ಆಫ್ ಪಟೌಡಿ (ಸೀನಿಯರ್) ವಿಜಯ್ ಮರ್ಚೆಂಟ್, ವಿಜಯ್ ಹಝಾರೆ, ಮನ್ಸೂರ್ ಆಲಿಖಾನ್ ನವಾಬ್ ಆಫ್ ಪಟೌಡಿ (ಜೂನಿಯರ್).. ಇತ್ಯಾದಿಯಿಂದ ಹಿಡಿದು, ಅಜಿತ್ ವಾಡೇಕರ್, ಬಿಷನ್ ಸಿಂಗ್‌ ಬೇಡಿ, ಕಪಿಲ್ ದೇವ್, ಸುನಿಲ್ ಗವಾಸ್ಕರ್, ಅಝರುದ್ದೀನ್, ಸೌರವ್ ಗಂಗೂಲಿ, ಮಹೇಂದ್ರ ಸಿಂಘ್ ಧೋಣಿ ಮತ್ತು ಇತರರೂ ಭಾರತ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

*****

ಪಟೌಡಿ ಮನ್ಸೂರ್ ಅವರ ಕಾಲದಲ್ಲಿ ಮೊದಲ ಬಾರಿ ಭಾರತ ವಿಜಯವನ್ನು ನ್ಯೂಝಿಲೆಂಡ್ ವಿರುದ್ಧ ಗಳಿಸಿತು. ಪಟೌಡಿ ಭಾರತ ಟೀಮನ್ನು ಒಂದು ರಾಷ್ಟ್ರೀಯ ಒಕ್ಕೂಟ ಟೀಮಾಗಿ ರಚಿಸಿ ಅದು ಬೇರೆ ಬೇರೆ ಪಂಗಡಗಳಿಂದ ಸೇರಿಸಿದ ಟೀಮ್ ಅಲ್ಲ ಎಂದು ಸಾಬೀತು ಪಡಿಸಿದರು. ಇದು ದೇಶಕ್ಕೆ ಅವರ ಬಹಳ ಮುಖ್ಯವಾದ ಕೊಡುಗೆ. ಅವರ ವಿಶಾಲ ಮನಸ್ಸು ಹಾಗೂ ತನ್ನನಂಬಿಕೆಯಿಂದ ಅವರ ತಂಡ ಅಖಂಡ ಭಾರತವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಮಾಡಿ ತೋರಿಸಿದರು. ಅವರ ಕಾಲದಲ್ಲೇ ಕರ್ನಾಟಕದ ಸ್ಪಿನ್ನರ್ಸ್‌ ಪ್ರಸನ್ನ ಮತ್ತು ಚಂದ್ರಶೇಖರ್ ಭಾರತದ ಟೀಮಿಗೆ ಆಡುತ್ತಿದ್ದರು.

ಅಜಿತ್ ವಾಡೇಕರ್ ನಾಯಕರಾಗಿದ್ದಾಗ, ಭಾರತ ಇಂಗ್ಲೆಂಡಿನಲ್ಲಿ ತನ್ನ ಪ್ರಪ್ರಥಮ ಶ್ರೇಣಿಯನ್ನು ಗೆದ್ದಿತು. ವಿಶೇಷವಾಗಿ ಚಂದ್ರಶೇಖರ್ ಅವರ ಅದ್ಭುತ ಸ್ಪಿನ್ ಬೋಲಿಂಗ್‌ನಿಂದ ಭಾರತ ಇಂಗ್ಲೆಂಡನ್ನು ಸೋಲಿಸಿತು.

1976 ರಲ್ಲಿ ಬಿಷನ್ ಸಿಂಘ್ ಬೇಡಿ ನಾಯಕರಾಗಿದ್ದಾಗ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಪೋೃಟ್‌- ಆಫ್- ಸ್ಪೆನ್‌ನಲ್ಲಿ ಒಂದು ಅದ್ಭುತ ವಿಜಯವನ್ನು ಗಳಿಸಿತು. ಕೊನೆಯ ಇನಿಂಗ್ಸ್‌ನಲ್ಲಿ 406 ರನ್ 3 ವಿಕೆಟ್‌ಗೆ ಹೊಡೆದು ಹಿಂದೆಂದೂ ಮಾಡಿರದ ದಾಖಲೆಯನ್ನು ರಚಿಸಿತು.
ತಂಡದ ಶ್ರೇಷ್ಟ ಆಟಗಾರರಾದ ಸುನಿಲ್ ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥ್ ಶತಕಗಳನ್ನು ಬಾರಿಸಿದರೆ, ಮೊಹಿಂದರ್ ಅಮರ್‌ನಾಥ್ 83 ರನ್ ಹೊಡೆದರು. ಕ್ರಿಕೆಟ್‌ನಲ್ಲಿ ಇದೊಂದು ಭಾರತದ ಸುವರ್ಣ ಘಳಿಗೆ ಎಂದರೆ ತಪ್ಪಾಗಲಾರದು.

*****

1975ರಿಂದ ಒಂದು ದಿನದ ಕ್ರಿಕೆಟ್ ಮೊದಲನೆಯ 60 ಓವರ್‌ನ ಆಟ ಒಡಿಐ ಶುರುವಾಯಿತು. ನಾಲ್ಕು ವರ್ಷಕ್ಕೆ ಒಮ್ಮೆ ಆಡುವ ಪಂದ್ಯಗಳು ವಿಶ್ವಕಪ್‌ಗೆ ಎಂದು ಪ್ರಸಿದ್ಧಿಯಾಯಿತು. 1975 ಮತ್ತು 1979ರಲ್ಲಿ ಕಳಪೆ ಆಟ ಆಡಿದ ಭಾರತ 1983ರಲ್ಲೂ ಅಷ್ಟು ಚೆನ್ನಾಗಿ ಆಡಿರಲಿಲ್ಲ. ಆದರೆ ಆಮೇಲೆ ಪ್ರತಿ ಮ್ಯಾಚಿನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ, ವಿಶ್ವವೇ ಬೆರಗಾಗುವಂತೆ ಫೈನಲ್ಸ್ ಆಡಿ, ವೆಸ್ಟ್ ಇಂಡೀಸನ್ನು ಸೋಲಿಸಿತು. ಇಂತಹ ರೋಮಾಂಚಕ ಆಟ ಇಲ್ಲಿಯ ತನಕ ಯಾರೂ ಕೇಳಿರಲಿಲ್ಲ, ಆಡಿರಲಿಲ್ಲ. ಅದರಲ್ಲಿ ನಾಯಕ ಕಪಿಲ್ ದೇವ್ ಎರಡು ಮೂರು ಬಾರಿ ಅದ್ಭುತ ಆಟವನ್ನು ಆಡಿ ತಂಡವನ್ನು ತನ್ನ ಹೆಗಲಿನಲ್ಲೇ ಎತ್ತುಕೊಂಡು ಹೋಗಿ ಗೆಲ್ಲಿಸಿದರು ಅನ್ನುವ ಅನುಭವ ನೋಡುವವರಿಗೆ ಉಂಟಾಗಿತ್ತು.

2009ರಲ್ಲಿ 20 ಓವರ್‌ಗಳ ಟಿ20 ವಿಶ್ವ ಕಪ್ ಚೊಚ್ಚಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಶುರುವಾಯಿತು. ಭಾರತಕ್ಕೆ ಈ ಆಟ ಅತ್ಯಂತ ಹೊಸದು ಮತ್ತು ದೇಶದಲ್ಲಿ ಅಷ್ಟು ಪ್ರಚಲಿತವಾಗಿರಲಿಲ್ಲ. ಮಹೇಂದ್ರ ಸಿಂಘ್‌ರನ್ನು ನಾಯಕನನ್ನಾಗಿ ಮಾಡಿ ಹೊಚ್ಚ ಹೊಸ ಟೀಮನ್ನು ಕಳಿಸಲಾಯಿತು. ಪಾಕಿಸ್ಥಾನದ ವಿರುದ್ಧ ಎರಡು ಬಾರಿ ಗೆದ್ದು, ಅದರಲ್ಲೂ ಫೈನಲ್ಸ್‌ನಲ್ಲಿ ಅತ್ಯಂತ ರೋಚಕ ಪಂದ್ಯದಲ್ಲಿ ಕೂದಲೆಳೆ ವ್ಯತ್ಯಾಸದಲ್ಲಿ ಭಾರತ ಚೊಚ್ಚಲ ಕಪ್ ಅನ್ನು ಗೆದ್ದಿತು. ದೋಣಿ ಭಾರತದ ಅತ್ಯಂತ ಪ್ರಸಿದ್ಧ ನಾಯರಾನಾಗಿ ಮುಂದೆ ವಿಶ್ವ ಒಡಿಐ ಕಪ್, ಐಸಿಸಿ ಚಾಂಪಿಯನ್ಸ್ ಕಪ್‌ಗಳನ್ನು ಗೆಲ್ಲಿಸಿದರು.

ಟಿ 20 ಗೆದ್ದಮೇಲೆ ಭಾರತದ ಕ್ರಿಕೆಟ್‌ನ ನಕ್ಷೆ ಬದಲಾಯಿತು. ಮುಂದೆ ಬರುವ ಐಪಿಎಲ್ ಟ್ರೋಫಿಗೆ ಇದು ನಾಂದಿಯಾಯಿತು. ಐಪಿಎಲ್ ವಿಶ್ವದಲ್ಲೇ ಅತ್ಯುತ್ತಮವಾಗಿ ನಡೆಸುವ ಹಾಗೂ ಆರ್ಥಿಕವಾಗಿ ಅತ್ಯಂತ ಯಶಸ್ವಿ ಟೂರ್ನಮೆಂಟುಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗೇ ಮುಂದುವರಿದರೆ ಅಮೇರಿಕಾದ ಬೇಸ್‌ಬಾಲ್ ಟೂರ್ನಮೆಂಟನ್ನೂ ಮೀರಿಸಿ ಮೊದಲನೇಯ ಸ್ಥಾನಕ್ಕೆ ಗಳಿಸಲಿದೆ. ಇದಾದ ತರುವಾಯ ಬಂದ, ಐಪಿಎಲ್ ಟ್ರೋಫಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ನಾಯಕನಾದ ಧೋಣಿ ಮೂರು ಬಾರಿ ತನ್ನ ಟೀಮನ್ನು ಗೆಲ್ಲಿಸಿ, ಭಾರತದ ಅತ್ಯಂತ ವಿಜಯಶಾಲಿ ನಾಯಕನಾದರು.

ಕಪಿಲ್ ದೇವ್, ಮತ್ತು ದೋಣಿಯ ಕಾಲದಲ್ಲಿ ಅವರ ನಾಯಕತ್ವ ಹೇಗಿತ್ತು, ಅವರ ಸ್ವಂತ ಕೊಡುಗೆ ಏನು, ಅವರು ಎದುರಿಸಿದ ಕಷ್ಟಗಳು ಹೇಗಿತ್ತು, ಅವರು ಅದನ್ನು ಹೇಗೆ ನಿಭಾಯಿಸಿದರು ಮತ್ತು ಕ್ರಿಕೆಟ್ ಆಟದ ಹೊರತು ದೇಶಕ್ಕೆ ಬೇರೆ ಯಾವ ಸೇವೆ ಸಲ್ಲಿಸಿದರು ಎಂಬುದನ್ನು ನೋಡೋಣ. ಅವರಿಬ್ಬರ ಕೊಡುಗೆಗೆ ಬೆರಗಾಗಿದ್ದ ಪ್ರಪಂಚ ಅವರ ಮೇಲೆ ಮಾಡಿದ ಚಲನಚಿತ್ರವನ್ನು ನೋಡಿ ಅವರ ಆಟದ ಕೌಶಲ್ಯತೆ, ದಿಟ್ಟತನ ಮತ್ತು ನಾಯಕತ್ವದ ಮಹಿಮೆಯನ್ನು ನೋಡಲು ಪ್ರೇಕ್ಷಕರಿಗೆ ಮತ್ತೆ ಅವಕಾಶ ಸಿಕ್ಕಿತು.

*****

ಕಪಿಲ್ ದೇವ್ ಬರುವ ತನಕ ಇಂಡಿಯನ್ ಟೀಮಿನಲ್ಲಿ ಚೆನ್ನಾಗಿ ಬೋಲ್ ಮಾಡುವ ಒಬ್ಬ ಫಾಸ್ಟ್ ಬೋಲರ್ ಇರಲಿಲ್ಲ ಅನ್ನುವುದು ಸತ್ಯ. ಅದಕ್ಕೆ ಮುಂಚೆ ಹೈದರಾಬಾದಿನ ಅಬಿದ್ ಆಲಿ, ಕರ್ಸನ್ ಘಾವ್ರಿ, ಏಕ್‌ನಾಥ್ ಸೋಲ್ಕರ್, ಕೊನೆಗೆ ಸುನಿಲ್ ಗವಾಸ್ಕರ್ ಕೂಡ ಟೆಸ್ಟಿನಲ್ಲಿ ಫಾಸ್ಟ್ ಬೋಲರ್ ಆಗಿ ಬೋಲ್ ಮಾಡಿದ್ದಾರೆ. ಅಷ್ಟು ಶೋಚನೀಯವಾಗಿತ್ತು. ಫಾಸ್ಟ್ ಬೋಲಿಂಗ್‌ನ ಪರಿಸ್ಥಿತಿ! ಹೊಚ್ಚ ಹೊಸ ಬಾಲನ್ನು ನೆಲಕ್ಕೆ ಉಜ್ಜಿ ಅದರ ಹೊಳಪನ್ನು ತೆಗೆದು ಸ್ಪಿನ್ನರ್ಸ್‌ಗೆ ಕೊಡುತ್ತಿದ್ದರು! ಸ್ಪಿನ್ನರ್ ಆದ ಚಂದ್ರಶೇಖರ್ ಅವರ ಬೋಲಿಂಗ್ ನಮ್ಮ ಫಾಸ್ಟ್ ಬೋಲಿಂಗ್‌ಗಿಂತ ವೇಗವಾಗಿ ಬರುತ್ತೆ ಎಂದು ಸುಮಾರು ಬ್ಯಾಟ್ಸ್‌ಮನ್‌ರ ಅಭಿಪ್ರಾಯವಾಗಿತ್ತು!

ಕಪಿಲ್ ದೇವ್ 1978ರಿಂದ 1994ವರೆಗೆ ಭಾರತಕ್ಕೆ ಸೇವೆ ಸಲ್ಲಿಸಿದರು. ಹರಿಯಾಣದ ಕಪಿಲ್ ದೇವ್ ಹಳ್ಳಿಯ ಮುಗ್ಧ ಸ್ವಭಾವದವರು. ಹರ್ಯಾಣದಲ್ಲಿ ಹುಟ್ಟಿ ಬೆಳೆದು ದೇಹವನ್ನು ಬಲಿಷ್ಟವಾಗಿ ಬೆಳಸಿದ್ದರ ಫಲ ಅವರಿಗೆ ಮುಂದೆ ಫಾಸ್ಟ್ ಬೋಲಿಂಗ್ ಮಾಡುವ ಕಲೆ ಚೆನ್ನಾಗಿ ಕರಗತವಾಯಿತು.

ಅಕ್ಟೋಬರ್ 1978ರಲ್ಲಿ ಪಾಕಿಸ್ಥಾನದ ವಿರುದ್ಧ ಮೈದಾನಕ್ಕೆ ಇಳಿದ ಕಪಿಲ್ ದೇವ್, ಕೊನೆಯ ಟೆಸ್ಟ್ ಪಂದ್ಯವನ್ನು ಮಾರ್ಚಿ 1994 ರಲ್ಲಿ ಮತ್ತು ಕೊನೆಯ ಒಡಿಐ ಪಂದ್ಯ ಅಕ್ಟೋಬರ್ 1994 ವೆಸ್ಟ್ ಇಂಡೀಸ್ ವಿರುದ್ಧ ಆಡಿದರು. ಒಳ್ಳೆ ಆಲ್ -ರೌಂಡರ್ ಎಂದು ಹೆಸರುವಾಸಿಯಾದ ಕಪಿಲ್ 131 ಟೆಸ್ಟ್ ಆಡಿ, ಟೆಸ್ಟ್ ಮ್ಯಾಚುಗಳಲ್ಲಿ 5248 ರನ್ ಹೊಡೆದು, 29.64 ಸರಾಸರಿಯಲ್ಲಿ 434 ವಿಕೆಟ್‌ಗಳನ್ನು ತೆಗೆದರು. 23 ಮ್ಯಾಚ್‌ಗಳಲ್ಲಿ 5 ವಿಕೆಟ್ ತೆಗೆದು ಎರಡು ಬಾರಿ 10 ವಿಕೆಟ್ ಗಳಿಸಿದರು. ಅವರ ಅತ್ಯುತ್ತಮ ಬೋಲಿಂಗ್ 9/83 ಆಗಿತ್ತು.

ಒಡಿಐನಲ್ಲಿ ಅವರು 225 ಮ್ಯಾಚ್ ಆಡಿ, 3783ರನ್ ಹೊಡೆದು ಮತ್ತು 253 ವಿಕೆಟ್ ತೆಗೆದರು. ಅವರ 175 ಅಜೇಯರಾಗಿ ಹೊಡೆದಿದ್ದು ಅತ್ಯಂತ ಉಪಯೋಗಿ ಮತ್ತು ಅಸಾಧಾರಣ ಬ್ಯಾಟಿಂಗ್ ಪ್ರದರ್ಶನವೆಂದು ವಿಶ್ವ ಕ್ರಿಕೆಟ್‌ನ ಜನತೆ ಒಕ್ಕೊರಲಿನಿಂದ ಘೋಷಿಸಿತು.

1983ರಲ್ಲಿ ಓಡಿಐ ವಿಶ್ವಕಪ್‌ನ ಒಂದು ನಿರ್ಣಾಯಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಆಡುವಾಗ ಭಾರತ ಕಳಪೆ ಬ್ಯಾಟಿಂಗ್ ಮಾಡಿ 17 ರನ್‌ಗೆ 5 ವಿಕೆಟ್ ಕಳೆದುಕೊಂಡಿತು! ಜಿಂಬಾಬ್ವೆ ಅಷ್ಟೇನು ಬಲವಾದ ತಂಡವಲ್ಲ; ತಮ್ಮ ಬ್ಯಾಟಿಂಗ್ ಬರಲು ಬಹಳ ಸಮಯವಿದೆಯೆಂದು ಕಪಿಲ್ ಸ್ನಾನಕ್ಕೆ ಇಳಿದಿದ್ದರು. ಒಂದಾದ ಮೇಲೆ ಒಂದು ವಿಕೆಟ್ ಬೀಳುತ್ತಿರುವ ಸಂಗತಿಯನ್ನು ತಂಡದ ಆಟಗಾರನೇ ಒಬ್ಬ ಬಾತ್ರೂಮಿನ ಬಾಗಿಲ ಹತ್ತಿರ ಅವರಿಗೆ ಸಂಗತಿ ಕೊಡುತ್ತಿದ್ದ. ಇದು ಧೃತರಾಷ್ಟ್ರನಿಗೆ ಸಂಜಯ ಮಹಾಭಾರತದ ಯುದ್ಧದ ಕಾಮೆಂಟರಿ ಕೊಡುವ ಹಾಗಿತ್ತು! ಕೊನೆಗೆ ಕುಪಿತರಾಗಿ ಅವಸರದಿಂದ ರೆಡಿಯಾಗಿ ಕಪಿಲ್ ಆಡುವುದಕ್ಕೆ ಇಳಿದರು. ಅವರು ಅಂದು ಆಡಿದ ಆಟ ಕ್ರಿಕೆಟ್ ಮ್ಯಾಚಿನಲ್ಲಿ ನೋಡುವುದಕ್ಕೆ ಸಿಗುವುದು ಅತಿ ವಿರಳ. ಅವರು 175ರನ್ ಹೊಡೆದು ಅಜೇಯರಾಗಿ ಉಳಿದರು! ಕಿರ್ಮಾನಿ 24, ರೊಜರ್ ಬಿನ್ನಿ 22 ಮತ್ತು ಮದನ್ ಲಾಲ್ 17 ರನ್ ಹೊಡೆದರಷ್ಟೆ. ಕೇವಲ 138 ಬಾಲ್‌ನಲ್ಲಿ ಹೊಡೆದ 175ರಲ್ಲಿ 16 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳು ಸೇರಿ ಅವುಗಳಿಂದಲೇ 100 ರನ್‌ಗಳಾಯಿತು. ಭಾರತ 60 ಓವರ್ಗಳಲ್ಲಿ 266 8 ವಿಕೆಟ್ ನಷ್ಟಕ್ಕೆ ಹೊಡೆಯಿತು. ಜಿಂಬಾಬ್ವೆ 235 ರನ್‌ಗೆ ಎಲ್ಲರೂ ಔಟ್ ಆದರು.

ದುರದೃಷ್ಟವಷಾತ್ ಅಂದು ಬಿಬಿಸಿ ಟಿವಿ ಮಾಧ್ಯಮದವರ ಸ್ಟ್ರೈಕ್ ಇದ್ದಿದ್ದರಿಂದ, ಕಪಿಲ್ ದೇವ್‌ರ ಇನಿಂಗ್ಸ್ ರೆಕಾರ್ಡ್‌ ಆಗಲೇ ಇಲ್ಲ! ಇದು ಮತ್ತೆ ನೋಡಲು ಯಾವತ್ತೂ ಸಿಗದು.

*****

ಒಂದು ವಿಜಯ ಮತ್ತೊಂದು ವಿಜಯವನ್ನು ಸಾಮಾನ್ಯವಾಗಿ ತರುತ್ತೆ. ಇದೇ ಗುಂಗಿನಲ್ಲಿದ್ದ ಭಾರತ ಮಿಕ್ಕ ಮ್ಯಾಚುಗಳನ್ನೂ ಗೆದ್ದು ಫೈನಲ್ಸ್ ತಲುಪಿತು. ಭಾರತ ಫೈನಲ್ಸ್ ತಲುಪುತ್ತೇಂತ ಯಾರೂ ಕನಸಿನಲ್ಲೂ ಎಣಿಸಿರಲಿಲ್ಲ; ಅತ್ತ ವೆಸ್ಟ್ ಇಂಡೀಸ್ ಫೈನಲ್ಸ್‌ಗೆ ಬಂದು ನಿಂತಿತು. ವೆಸ್ಟ್ ಇಂಡೀಸ್ ಎರಡು ಬಾರಿ ಸತತವಾಗಿ ಗೆದ್ದು ಮೂರನೇ ಬಾರಿ ಗೆದ್ದು ಹ್ಯಾಟ್‌ಟ್ರಿಕ್ ಮಾಡಲು ರೆಡಿಯಾಗಿತ್ತು.

54 ಓವರ್‌ಗಳಲ್ಲಿ ಇಂಡಿಯ 183 ರನ್ ಗಳಿಸಿ ಆಲ್‌ಔಟ್ ಆಯಿತು. ಅಲ್ಲಿಯವರಿಗೆ ಇದು ಫೈನಲ್ಸ್‌ನಲ್ಲಿ ಹೊಡೆದ ಅತಿ ಕಡಿಮೆ ಸ್ಕೋರ್. ಶ್ರೀಕಾಂತ್‌ರ 38 ರನ್‌ಗಳು ಭಾರತ ತಂಡದ ಅತ್ಯಧಿಕ ಸ್ಕೋರಾಯಿತು. ಮೊಹಿಂದರ್ ಅಮರ್ನಾಥ್ ಮತ್ತು ಸಂದೀಪ್ ಪಾಟಿಲ್ 26 ಮತ್ತು 27 ರನ್ ಹೊಡೆದರು. ವೆಸ್ಟ್ ಇಂಡೀಸಿಗೆ ಫೈನಲ್ಸ್‌ನಲ್ಲಿ ಮುನ್ನೂರಕ್ಕೂ ಮೇಲೆ ಹೊಡೆದ ಅನುಭವವಿತ್ತು. ಅಂದು ಅವರಿಗೆ ಬೇಕಾಗಿದ್ದದ್ದು ಕೇವಲ 184.

ಆದರೆ ಇಂಡಿಯ ಶುರುಮಾಡಿದ ರೀತಿ ಅಲ್ಲಿ ನೆರದಿರುವ ಪ್ರೇಕ್ಷಕರಲ್ಲಿ ಧಿಗ್ಭ್ರಮೆ ಉಂಟಾಯಿತೆಂದರೆ ಆಶ್ಚರ್ಯವೇನಿಲ್ಲ! ಕೇವಲ 5 ರನ್ ಇದ್ದಾಗ ಗೊರ್ಡನ್ ಗ್ರೆನ್ರಿಡ್ಜ್, ಬಲವಂತ್ ಸಿಂಘ್ ಸಂಧು ಅವರ ಬೋಲಿಂಗಿಗೆ ಬೋಲ್ಡ್ ಆದರು! ಬಾಲು ವಿಕೆಟ್‌ಗೆ ತಾಕುವುದಿಲ್ಲ ಎನ್ನುವ ಭರವಸೆಯಿಂದ ಬಾಲನ್ನು ಆಡದೆ ಬಿಟ್ಟರು. ಆದರೆ ಅದು ಒಳಗೆ ಬಂದು ಅವರ ವಿಕೆಟನ್ನು ಬೀಳಿಸಿತು! ಈ ವಿಕೆಟ್ನಿಂದ ಭಾರತದ ಫೀಲ್ಡರುಗಳಿಗೆ ಸ್ಫೂರ್ತಿ ಮತ್ತು ನವಚೇತನದ ಲಹರಿ ಹರಿದು ಬಂತು.

ಆದರೆ ಗ್ರಿನಿಡ್ಜ್ ನಂತರ ಬಂಧ ವಿವ್ ರಿಚರ್ಡಸ್ ಬಂದ ತಕ್ಷಣವೇ ರಪರಪ ಹೊಡೆಯಲು ಶುರು ಮಾಡಿ ಬಾಲ್ ಎಲ್ಲಾ ಕಡೆ ಓಡಿಸಲು ಶುರು ಮಾಡಿದರು. ಹೀಗೇ ಆದರೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಮ್ಯಾಚ್ ಮುಗಿದು ಹೋಗುತ್ತೋ ಏನೋ ಎಂದು ಭಾರತದ ಅನುಯಾಯಿಗಳು ಅಂದುಕೊಂಡಾಗ, ರಿಚರ್ಡ್ಸ್‌ ಹೊಡೆದ ಚೆಂಡು ಮೇಲಕ್ಕೆ ಹಾರಿತು. ಅದು ಖಂಡಿತವಾಗಿ ಸಿಕ್ಸರ್ ಕಡೆಗೆ ಹೋಗುತ್ತೆ ಎಂದು ಎಲ್ಲರೂ ಭಾವಿಸಿದಾಗ, ಎಲ್ಲಿಯೋ ದೂರದಲ್ಲಿದ್ದ ಕಪಿಲ್ ಅದನ್ನು ಬೆನ್ನಟ್ಟಿ ಹೋಗಿ ಬಹಳ ದೂರ ಓಡಿ ಅದನ್ನು ಹಿಡಿದರು. ರಿಚರ್ಡ್ಸ್‌ ಔಟಾಗಿದ್ದು ಭಾರತ ಫೀಲ್ಡರ್ಸ್‌ಗೆ ಬಾಹುಬಲಿಯ ಭುಜಬಲ ಬಂದ ಹಾಗೆ ಆಯಿತು. ವಿಕೆಟ್‌ಗಳು ಬೀಳುತ್ತಲೇ ಇದ್ದುದ್ದರಿಂದ ವೆಸ್ಟ್ ಇಂಡೀಸಿಗೆ ಆತ್ಮ ವಿಶ್ವಾಸ ಕುಂದುತ್ತಲೇ ಹೋಯಿತು. ಕೊನೆಗೆ 140 ರನ್, ಭಾರತಕ್ಕಿಂತ 43 ರನ್ ಕಡಿಮೆಗೆ ಎಲ್ಲರೂ ಆಲ್ ಔಟ್ ಆದರು. ಫೈನಲ್ಸ್‌ನಲ್ಲಿ ಕೇವಲ 12 ರನ್ ನಷ್ಟಕ್ಕೆ ಮೂರು ವಿಕೆಟ್ ತೆಗೆದ ಹಾಗೂ ಟೂರ್ನಮೆಂಟಿನಲ್ಲಿ ಚೆನ್ನಾಗಿ ಆಡಿದ ಮೊಹಿಂದರ್ ಅಮರ್ನಾಥ್ ಅವರನ್ನು ಅತ್ಯಂತ ಶ್ರೇಷ್ಟ ಆಟಗಾರರನ್ನಾಗಿ ಘೋಷಿಸಿದರು. ಭಾರತ ವೆಸ್ಟ್ ಇಂಡೀಸನ್ನು ಸೋಲಿಸಿ ವಿಶ್ವ ಕಪ್ ಗೆದ್ದಿತು.

ಇಂದಿಗೂ ಯಾರಿಗೂ ನಂಬಲರ್ಹವಾದ ಪಂದ್ಯವನ್ನು ಭಾರತ ಅಂದು ಗೆದ್ದು ತೋರಿಸಿತು. ಕಪಿಲ್ ಓಡಿ ಹಿಡಿದಿದ್ದ ಕ್ಯಾಚ್ ಮ್ಯಾಚಿಗೆ ಒಮ್ಮೆಲೇ ತಿರುವು ಸಿಕ್ಕಿ ಕೊನೆಗೆ ಫಲಿತಾಂಶ ಬದಲಾಯಿತು.

ಈ ಗೆಲುವಿಗೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಸಿಕ್ಕಿತೆಂದರೆ, ಗೆದ್ದ ತಂಡ ಮುಂಬಾಯಿಗೆ ಹೋಗುವುದಕ್ಕೆ ಬದಲು ದೆಹಲಿಗೆ ಬರಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸ್ವಯಂ ಕಪಿಲ್ ದೇವ್‌ರ ತಂಡಕ್ಕೆ ಆಮಂತ್ರಣವಿತ್ತರು.

 ಜಿಂಬಾಬ್ವೆ ಅಷ್ಟೇನು ಬಲವಾದ ತಂಡವಲ್ಲ; ತಮ್ಮ ಬ್ಯಾಟಿಂಗ್ ಬರಲು ಬಹಳ ಸಮಯವಿದೆಯೆಂದು ಕಪಿಲ್ ಸ್ನಾನಕ್ಕೆ ಇಳಿದಿದ್ದರು. ಒಂದಾದ ಮೇಲೆ ಒಂದು ವಿಕೆಟ್ ಬೀಳುತ್ತಿರುವ ಸಂಗತಿಯನ್ನು ತಂಡದ ಆಟಗಾರನೇ ಒಬ್ಬ ಬಾತ್ರೂಮಿನ ಬಾಗಿಲ ಹತ್ತಿರ ಅವರಿಗೆ ಸಂಗತಿ ಕೊಡುತ್ತಿದ್ದ. ಇದು ಧೃತರಾಷ್ಟ್ರನಿಗೆ ಸಂಜಯ ಮಹಾಭಾರತದ ಯುದ್ಧದ ಕಾಮೆಂಟರಿ ಕೊಡುವ ಹಾಗಿತ್ತು! ಕೊನೆಗೆ ಕುಪಿತರಾಗಿ ಅವಸರದಿಂದ ರೆಡಿಯಾಗಿ ಕಪಿಲ್ ಆಡುವುದಕ್ಕೆ ಇಳಿದರು.

ಇನ್ನೊಮ್ಮೆ ಇಂಗ್ಲೆಂಡಿನ ವಿರುದ್ಧ ಒಂದು ಟೆಸ್ಟ್‌ನಲ್ಲಿ ಭಾರತದ ಸ್ಥಿತಿ ಅಧೋಗತಿಗೆ ಇಳಿದಿತ್ತು. ಜುಲೈ 1990 ರ ಮೊದಲ ಟೆಸ್ಟಿನಲ್ಲಿ ಆಡಿದಾಗ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 653 / 4 ರನ್ ಮಾಡಿತು. ಗ್ರಾಹಮ್ ಗೂಚ್ 333 ರನ್ ಮಾಡಿದರು. ಇನ್ನಿಬ್ಬರು ಶತಕ ಬಾರಿಸಿದರು. ಭಾರತ ತನ್ನ ಇನ್ನಿಂಗ್ಸಿನಲ್ಲಿ ಚೆನ್ನಾಗಿ ಆಡಿದರೂ ಫಾಲೊ-ಆನ್ ತಪ್ಪಿಸಿಕೊಳ್ಳಲು 454 ರನ್ ಹೊಡೆಯಬೇಕಾಗಿತ್ತು. 430 ಸ್ಕೋರ್ ಆದಾಗ 9 ವಿಕೆಟ್ ಕಳೆದುಕೊಂಡಿತ್ತು. 454 ಬಹಳ ದೂರವಿತ್ತು. ಆಗ 9ನೇ ವಿಕೆಟ್ ಬಿದ್ದಾಗ ನರೇಂದ್ರ ಹಿರ್ವಾನಿ ಕಪಿಲ್ ದೇವ್ ಅವರ ಜೊತೆ ಆಡುವುದಕ್ಕೆ ಫೀಲ್ಡಿಗೆ ಇಳಿದರು.

ಎಡಿ ಹೆಮಿಂಗ್ಸ್ ಬೋಲಿಂಗಿಗೆ ಬಂದಾಗ ಕಪಿಲ್ ಎರಡು ಬಾಲು ಅಲ್ಲೇ ಹತ್ತಿರ ಹೊಡೆದರು. ಆಮೇಲೆ ಏನು ತೋಚಿತೋ ಏನೋ, ಮುಂದಿನ ನಾಲ್ಕು ಬಾಲುಗಳಲ್ಲಿ ಕಪಿಲ್ ದೇವ್ 4 ಸಿಕ್ಸರ್‌ಗಳನ್ನು ಬಾರಿಸಿ ಫಾಲೊ-ಆನ್ ತಪ್ಪಿಸಿದರು! ಮುಂದಿನ ಓವರ್ ಹಿರ್ವಾನಿ ಶೂನ್ಯಕ್ಕೆ ಔಟಾದರು. ಫಾಲೊ-ಆನ್ ತಪ್ಪಿಸುವ ಸಲುವಾಗಿ ಕಪಿಲ್ ದೇವ್ ಅವರ ನಿರಂತರ 4 ಸಿಕ್ಸರ್‌ಗಳನ್ನು ಹೊಡೆದಿದ್ದು ಆ ದಶಕದ ಅತ್ಯಂತ ಮಹತ್ವದ ಬ್ಯಾಟಿಂಗ್ ಎಂದು ಬಿಬಿಸಿ ಮಾಡಿದ ಒಂದು ಸಮೀಕ್ಷೆಯಲ್ಲಿ ಪ್ರೇಕ್ಷಕರು ನಿರ್ಧಾರ ಮಾಡಿದರು!

400 ವಿಕೆಟ್‌ಗಳು ಮತ್ತು 5000 ರನ್ ಹೊಡೆದ ಇಂಡಿಯಾದ ಆಲ್-ರೌಂಡರ್ ಕಪಿಲ್ ದೇವ್ ಒಬ್ಬರೇ! 131 ಟೆಸ್ಟ್ ಆಡಿದ ಕಪಿಲ್ ದೇವ್ ಒಂದು ಸರ್ತಿಯೂ ರನ್ ಔಟ್ ಆಗಲಿಲ್ಲ! ಇದು ಅವರ ಆರೋಗ್ಯ, ಚಟುವಟಿಕೆ ಮತ್ತು ಎಷ್ಟು ವೇಗವಾಗಿ ಓಡುತ್ತಿದ್ದರು ಎಂದು ತೋರಿಸುತ್ತೆ.

ಕಪಿಲ್ ದೇವ್‌ರನ್ನು ‘ಇಂಡಿಯನ್ ಕ್ರಿಕೆಟರ್ ಆಫ್ ದ ಸೆಂಚುರಿ’ ಯೆಂದು ವಿಸ್ಡನ್ ಸಂಸ್ಥೆ ಅವರನ್ನು ಆಯ್ಕೆ ಮಾಡಿತು. ಸುನಿಲ್ ಗವಾಸ್ಕರ್ ಮತ್ತು ಟೆಂಡೂಲ್ಕರ್ ಮತ್ತು ಅನೇಕ ಭಾರತೀಯರನ್ನು ಒಳಗೊಂಡು ಬಂದ ಅತ್ಯಂತ ಪ್ರತಿಷ್ಟಿತ ಗೌರವ.

1994 ರಲ್ಲಿ 436 ವಿಕೆಟ್‌ಗಳನ್ನು ಗಳಿಸಿದಾಗ ಅವರು ರಿಚರ್ಡ್‌ ಹ್ಯಾಡ್ಲಿ ಅವರ ದಾಖಲೆಯನ್ನು ಮುರಿದು ಪ್ರಪಂಚದಲ್ಲಿ ಅತಿ ಹೆಚ್ಚು ವಿಕೆಟ್‌ಗಳಿಸಿದರು. 1999 ರಲ್ಲಿ ಚೆಸ್ಟ್ ಇಂಡೀಸ್‌ನ ಕೋರ್ಟನಿ ವಾಲ್ಷ್ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು.

ಜನವರಿ 1959ರಲ್ಲಿ ಕಪಿಲ್ ದೇವ್ ರಾಮಲಾಲ್ ನಿಖಾಂಜ್ ಚಂಡೀಗರ್‌ನಲ್ಲಿ ಹುಟ್ಟಿದರು. 1975ರಲ್ಲಿ ಅವರು ತಮ್ಮ ಮೊದಲನೇ ಫಸ್ಟ್ ಕ್ಲಾಸ್ ಪಂದ್ಯವನ್ನು ಹರ್ಯಾಣಗೆ ಪಂಜಾಬ್‌ನ ವಿರುದ್ಧ ಶುರು ಮಾಡಿದರು. ಮೊದಲ ಪಂದ್ಯದಲ್ಲೇ ಅವರು 6 ವಿಕೆಟ್‌ಗಳನ್ನು ತೆಗೆದರು. ಮೊದಲ ವರ್ಷದಲ್ಲೇ ಅವರು 30 ಮ್ಯಾಚುಗಳಲ್ಲಿ 121 ವಿಕೆಟ್ ಪಡೆದರು.

1990-91ರಲ್ಲಿ ಮುಂಬೈಯನ್ನು 3 ರನ್‌ಗಳಿಂದ ಸೋಲಿಸಿ ಅವರ ನಾಯಕತ್ವದಲ್ಲಿ ಪ್ರಥಮಬಾರಿ ಹರ್ಯಾಣ ರಣಜಿ ಟ್ರೋಫಿಯನ್ನು ಗೆಲ್ಲಿಸಿದರು.
1981ರಲ್ಲಿ ಆಸ್ಟ್ರೇಲಿಯಾಗೆ ಗೆಲ್ಲುವುದಕ್ಕೆ ಕೇವಲ 143 ರನ್‌ ಬೇಕಾಗಿತ್ತು. ಹಿಂದಿನ ದಿನ ಆಟ ಮುಗಿಯುವ ವೇಳೆಗೆ ಅವರು 18 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದರು. ಮಾರನೇ ದಿನ ಆಟ ಶುರುವಾದಾಗ ಕಪಿಲ್ ಅವರಿಗೆ ತೀವ್ರ ಜ್ವರವಿತ್ತು ಜೊತೆಗೆ ತೊಡೆಯಲ್ಲಿ ಗಾಯವಾಗಿ ನಡೆಯುವುದಕ್ಕೆ ಕಷ್ಟವಾಗಿತ್ತು. ಹಾಗಿದ್ದಾಗ, ಮೈದಾನಕ್ಕೆ ಇಳಿದು 5 ವಿಕೆಟ್‌ಗೆ ಕೇವಲ 28 ರನ್‌ಗೆ ತೆಗೆದು ಭಾರತವನ್ನು ಗೆಲ್ಲಿಸಿದರು. ಅವರ ಬೋಲಿಂಗ್ ವಿಷ್ಲೇಷಣೆ ಹೀಗಿತ್ತು: 16.4 – 4 -28 -5. ಅವರು ನಾಯಕನಾಗಿದ್ದಾಗ, 1986ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಟೆಸ್ಟ್ ಪದ್ಯದಲ್ಲಿ ವಿಶ್ವದಲ್ಲಿ ಎರಡನೇ ಬಾರಿ 5 ದಿವಸದ ಮ್ಯಾಚು ‘ಸಮ’ ( ಟೈ) ಯಾಗಿ ಮುಗಿಯಿತು.

2008ರಲ್ಲಿ ಕಪಿಲ್ ದೇವ್ ಭಾರತದ ಟೆರಿಟೋರಿಯಲ್ ಆರ್ಮಿ – ಪ್ರಾದೇಶಿಕ ಸೈನ್ಯದಲ್ಲಿ ಲೆಫ್ಟಿನೆಂಟ್‌ ಕರ್ನಲ್ ಆಗಿ ಸೇರಿಕೊಂಡರು. ಕಪಿಲ್ ದೇವ್ ರೋಮಿ ಭಾಟಿಯ ಎಂಬುವರನ್ನು ಮದುವೆಯಾಗಿ ಅವರಿಗೆ ಅಮಿಯ ದೇವ್ ಎನ್ನುವ ಪುತ್ರಿ ಇದ್ದಾಳೆ. ಭಾರತ ಸರ್ಕಾರ ಅವರಿಗೆ 1982ರಲ್ಲಿ ಪದ್ಮಶ್ರೀ ಮತ್ತು 1991ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. 2013ರಲ್ಲಿ ಸಿ.ಕೆ. ನಾಯುಡು ‘ಲೈಫ್ ಟೈಮ್’ ಪ್ರಶಸ್ತಿಯನ್ನು ಕೊಟ್ಟರು.

ಅವರ ಆಟದ ಕೊನೆಯ ದಿನಗಳಲ್ಲಿ ‘ಮ್ಯಾಚ್ ಫಿಕ್ಸಿಂಗ್’ ಪೀಡೆ ಅವರನ್ನು ಕಾಡಿತು. ತನಿಕೆ ಮಾಡಿದ ಮೇಲೆ ಅವರ ಮೇಲಿನ ಆರೋಪಗಳು ಸುಳ್ಳು ಎಂದು ವರದಿ ಬಂತು. ಆದರೆ ಕಪಿಲ್ ದೇವ್ ತಮ್ಮ ತೀವ್ರ ನಿರಾಶೆಯನ್ನು ವ್ಯಕ್ತಪಡಿಸುತ್ತಾ, ‘ಇಷ್ಟೆಲ್ಲಾ ದೇಶಕ್ಕೆ ಸೇವೆ ಸಲ್ಲಿಸಿದ ಮೇಲೇ ಯಾವನೋ ಒಬ್ಬನ ಆರೋಪಕ್ಕೆ ಇಷ್ಟು ಬೆಲೆಯೇ’ ಎಂದು ಹೇಳುತ್ತಾ ಕ್ರಿಕೆಟ್‌ನ ಎಲ್ಲಾ ಸಂಬಂಧಗಳಿಂದ ಹೊರಬಿದ್ದರು.

ಕಪಿಲ್ ದೇವ್ ಭಾರತಕ್ಕೆ ಸಲ್ಲಿಸಿದ ಸೇವೆ ಅತ್ಯಂತ ಮಹತ್ವಪೂರ್ಣ ಮತ್ತು ನಿರ್ಣಾಯಕ. ಅವರ ಬ್ಯಾಟಿಂಗ್, ಬೋಲಿಂಗ್‌ನ ಜೊತೆಗೆ ಅವರ ನಾಯಕತ್ವದಲ್ಲಿ ‘ನಾವು ಗೆದ್ದೇ ಗೆಲ್ಲುತ್ತೇವೆ’ ಎನ್ನುವ ಮನೋಭಾವವಿತ್ತು. ಎಂತಹ ಸ್ಥಿತಿಯಲ್ಲೂ ಸ್ಥೈರ್ಯವನ್ನು ಕಳೆದುಕೊಳ್ಳುತ್ತಿರಲಿಲ್ಲ.

ಮಾರ್ಚಿ 1985 ರಲ್ಲಿ ಪಾಕಿಸ್ಥಾನದ ವಿರುದ್ಧ ಆಡಿದ ಏಕ ದಿನದ ಪಂದ್ಯದಲ್ಲಿ ಭಾರತ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 125 ರನ್ ಗಳಿಸಿತ್ತು. ಆ ಮ್ಯಾಚಿನಲ್ಲಿ ಪಾಕಿಸ್ಥಾನದ ಎಲ್ಲಾ ಪ್ರಬಲ ಆಟಗಾರರಿದ್ದರು. ಅವರು ಗೆಲ್ಲುವುದು ಖಂಡಿತವೆಂದು ಭಾವಿಸಲಾಗಿ ಅದು ಔಪಚಾರ್ಯಕ್ಕೆ ಮಾಡಬೇಕಾದ ಒಂದು ಕಾರ್ಯವೆಂದು ಎಲ್ಲರ ಮನೋಭಾವವಾಗಿತ್ತು. ಆದರೆ ನಾಯಕ ಕಪಿಲ್‌ರ ಮನಸ್ಸಿನಲ್ಲೆ ನಡೆಯುತ್ತಿದ್ದ ಯೋಚನೆಯೇ ಬೇರೆ. ಏನಾದರೂ ಆಗಲಿ, ಒಂದು ಕೈ ನೋಡಿಬಿಡುವ ಅನ್ನುವ ಲೆಕ್ಕ! ಭಾರತ ಎಷ್ಟು ಚೆನ್ನಾಗಿ ಬೋಲಿಂಗ್ ಮತ್ತು ಫೀಲ್ಡಿಂಗ್ ಮಾಡಿತು ಎಂದರೆ ಪಾಕಿಸ್ಥಾನವನ್ನು ಕೇವಲ 87 ರನ್‌ಗೆ ಔಟ್ ಮಾಡಿದರು! ಕಪಿಲ್ 3 ವಿಕೆಟ್ 17 ರನ್‌ ತೆಗೆದರೆ, ಸುನಿಲ್ ಗವಾಸ್ಕರ್ 4 ಚ್ಯಾಚುಗಳನ್ನು ಸ್ಲಿಪ್ ಜಾಗದಲ್ಲಿ ಕಬಳಿಸಿದರು! ಇದೇ ಮನೋಭಾವ, ಛಲ, ಸ್ಥೈರ್ಯ ಮತ್ತು ಆತ್ಮವಿಶ್ವಾಸ, ತನ್ನ ನಂಬಿಕೆಯುಳ್ಳ ಕಪಿಲ್ ದೇವ್ ಭಾರತದ ಕ್ರಿಕೆಟನ್ನು ಎಲ್ಲಿಯವರೆಗೆ ತೆಗೆದುಕೊಂಡು ಹೋದರೆಂದರೆ, ಬೇರೆ ದೇಶಗಳು, ಜಗತ್ತು ಭಾರತವನ್ನು ನೋಡುವ ರೀತಿಯನ್ನೇ ಬದಲಾಯಿಸಿದರೆಂದರೆ ತಪ್ಪಾಗಲಾರದು. ಇದೇ ಅವರು ದೇಶಕ್ಕೆ ಕೊಟ್ಟ ದೊಡ್ಡ ಕೊಡುಗೆ.

*****

ಮಹೇಂದ್ರ ಸಿಂಘ್ ಧೋಣಿ 2004 ರಿಂದ 2019ವರೆಗೆ ಭಾರತವನ್ನು ಪ್ರತಿನಿಧಿಸಿದರು. ಜಾರ್ಖಂಡಲ್ಲಿ ಹುಟ್ಟಿದ ಅವರ ಹೆಸರನ್ನು ಮೊಟಿಕಿಸಿ ಎಮ್. ಎಸ್. ಧೋಣಿ ಆದರು.

15 ವರ್ಷದಲ್ಲಿ ಧೋಣಿ 90 ಟೆಸ್ಟ್‌ಗಳಲ್ಲಿ ಆಡಿ 38.09ರ ಸರಾಸರಿಯಲ್ಲಿ 4876 ರನ್ ಹೊಡೆದರು. ಅವರ ಬಿಳಿ (‘ವೈಟ್’ ಬಾಲ್) ಕ್ರಿಕೆಟ್ ಒಂದು ದಿನದ ಪಂದ್ಯದಲ್ಲಿ- ಒಡಿಐ-ನಲ್ಲಿ 350 ಮ್ಯಾಚ್ ಆಡಿ 50.53 ಸರಾಸರಿಯಲ್ಲಿ 10.773 ರನ್ ಹೊಡೆದರು. ಟಿ20 ಮ್ಯಾಚ್‌ಗಳಲ್ಲಿ 98 ಪಂದ್ಯಗಳಲ್ಲಿ 37 ಸರಾಸರಿಯಲ್ಲಿ 1617ರನ್ ಹೊಡೆದರು. ಇದೆರಡರಲ್ಲೂ ಅವರ ಪ್ರದರ್ಶನ ಅಪ್ರತಿಮವಾಗಿತ್ತು. ಅವರ ಅತ್ಯಧಿಕ ರನ್ ಟೆಸ್ಟ್‌ನಲ್ಲಿ 224 ಮತ್ತು ಓಡಿಐನಲ್ಲಿ ಅಜೇಯರಾಗಿ 183.

ನಾಯಕನಾಗಿ ಅವರ ದಾಖಲೆಗಳು ಎಷ್ಟಿವೆ ಅಂದರೆ ಅದನ್ನು ಯಾವ ನಾಯಕನಿಗೂ ಮುರಿಯುವುದಿರಲಿ, ಅದರ ಹತ್ತಿರ ಬರುವುದಕ್ಕೆ ಸಾಧ್ಯವಾಗಿಲ್ಲ! 2007ರಲ್ಲಿ ಟಿ 20 ವಿಶ್ವ ಕಪ್ (ಚೊಚ್ಚಲ ಕಪ್), 2011 ನ ಒಡಿಐ ವಿಶ್ವ ಕಪ್ ಮತ್ತು 2013 ಚಾಂಪಿಯನ್ಸ್ ಕಪ್. ಮೂರನ್ನೂ ಗೆದ್ದ ನಾಯಕ ಇಲ್ಲಿಯ ತನಕ ಧೋಣಿ ಒಬ್ಬರೇ! 2010, 2016 ರಲ್ಲಿ ಏಷ್ಯ ಕಪ್. ಧೋಣಿಯವರ ನಾಯಕತ್ವದಲ್ಲೇ 2010 ಮತ್ತು 2011 ರಲ್ಲಿ ಟೆಸ್ಟ್ ಕಪ್ ಗೆದ್ದಿದ್ದಕ್ಕೆ ಕೊಡಲಿ (ಮೇಸ್) ಅವರ ನಾಯಕತ್ವದಲ್ಲೇ ಸಿಕ್ಕಿತ್ತು.

ಇದೆಲ್ಲವೂ ಧೋಣಿಯ ನಾಯಕತ್ವದಲ್ಲಿ ಭಾರತಕ್ಕೆ ಬಂದಿದ್ದ ಗಳಿಕೆ. ಇದರ ಮಧ್ಯೆ ಧೋಣಿ ಮಹಾನ್ ವಿಕೆಟ್ ಕೀಪರ್ ಎಂದೂ ಖ್ಯಾತಿಯಾಗಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲಿ ಅವರು ಮಿಂಚಿನ ವೇಗದಲ್ಲಿ ‘ಸ್ಟಮ್ಪಿಂಗ್’ ಮಾಡುತ್ತಾರೆ. ಅವರು ವೆಸ್ಟ್ ಇಂಡೀಸ್‌ನ ಖೆಮೊ ಪಾಲನ್ನು 0.08 ಸೆಕೆಂಡುಗಳಲ್ಲಿ ಸ್ಟಂಪ್ ಮಾಡಿದಾಗ ಅದು ಒಂದು ವಿಶ್ವದ ದಾಖಲೆಯಾಯಿತು. ಈಗಲೂ ಅದನ್ನು ಯಾರೂ ಮುರಿದಿಲ್ಲ.

ವಿಕೆಟ್ ಕೀಪರ್ ಆಗಿ ಧೋಣಿ 321 ಕ್ಯಾಚುಗಳು, 123 ಸ್ಟಂಪಿಂಗ್ಸ್ ಮಾಡಿ ಭಾರತದಲ್ಲೇ ಅತ್ಯಂತ ಯಶಸ್ವಿ ವಿಕೆಟ್‌ಕೀಪರ್ ಆದರು. ತಂಡದ ನಾಯಕನಾಗಿ 60 ಟೆಸ್ಟ್ ಮ್ಯಾಚುಗಳಲ್ಲಿ ವಿಕೆಟ್- ಕೀಪಿಂಗ್ ಮಾಡಿರುವದು ಇದೂ ಒಂದು ದಾಖಲೆ.

ಐಪಿಎಲ್ ಶುರುವಾದಾಗಿನಿಂದ, ಧೋಣಿ ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್ ಕೆ) ಗೆ ನಾಯಕನಾಗಿ ಅದರ ಕಪ್ಪನ್ನು 3 ಬಾರಿ ಗೆದ್ದಿದ್ದಾರೆ. ಮಧ್ಯೆ ಎರಡು ವರ್ಷ ಸಿಎಸ್ ಕೆ ಟೀಮನ್ನು ನಿಷೇಧಿಸಲಾಗಿತ್ತು. ಎಂತಹ ಕಠಿಣ ಸ್ಥಿತಿಯಲ್ಲೂ ಸಮತೋಲನ ಕಳೆದುಕೊಳ್ಳದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅದನ್ನು ನಿಭಾಯಿಸುವ ಕಲೆ ಧೋಣಿಯವರಿಗೆ ಕರಗತವಾಗಿದೆ. ಒಡಿಐ ಮತ್ತು ಟಿ 20 ಪಂದ್ಯಗಳು ಆಟಗಾರನ ಕುಶಲತೆಯ ಜೊತೆಗೆ ಅವರ ಸ್ಥೈರ್ಯ, ಧೈರ್ಯ ಮತ್ತು ಪರಿಸ್ಥಿತಿಯ ಅರಿವು ಚೆನ್ನಾಗಿರಬೇಕು. ಟೆಸ್ಟ್ ಮ್ಯಾಚುಗಳಲ್ಲಿ ಲೆಕ್ಕ ತಪ್ಪಿದರೂ ಅದನ್ನು ಸರಿ ಮಾಡುವುದಕ್ಕೆ 5 ದಿವಸಗಳ ಕಾಲವಿದೆ. ಮಧ್ಯೆ ಬೇಕಾದಷ್ಟು ಬಿಡುವು ಇರುತ್ತೆ. ಒಡಿಐ, ಅದರಲ್ಲೂ ಟಿ 20 ಪಂದ್ಯ ಒಬ್ಬ ನಾಯಕನಿಗೆ ಒಂದು ಪರೀಕ್ಷೆಯೇ ಸರಿ. 20/20 ಓವರ್‌ಗಳಲ್ಲಿ ಆಟ ಬಹಳ ಬೇಗ ಮುಗಿದು ಹೋಗುತ್ತೆ. ಏನಿದ್ದರೂ ನಿಂತಲ್ಲೇ ಪರಿಸ್ಥಿತಿಯನ್ನು ಅರಿತು ಅದಕ್ಕೆ ಪರಿಹಾರ ಅಲ್ಲೇ ಹುಡುಕಿ ಅದನ್ನು ನಿಯಂತ್ರಣಕ್ಕೆ ತರಬೇಕು. ಧೋಣಿ ಇದರಲ್ಲಿ ಎಲ್ಲರಿಗಿಂತ ಮುಂದು. ಇದಕ್ಕೆ ಅವರ ಮನೋಭಾವ ಬಹಳ ಮಟ್ಟಿಗೆ ಕಾರಣ. ಅವರು ಒಬ್ಬ ಸ್ಥಿತಪ್ರಜ್ಞನ ಹಾಗೆ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಂಡಿರುತ್ತಾರೆ. ಇದಕ್ಕೇ ಅವರು ತಪ್ಪುಗಳು ಮಾಡುವುದು ಬಹಳ ಕಡಿಮೆ. ಅವರ ಮನಸ್ಸು ಅವರ ಧ್ಯೇಯದ ಕಡೆ, ಲಕ್ಷ್ಯದಕಡೆ ಯಾವಾಗಲೂ ಇರುವುದರಿಂದ ಅವರಿಗೆ ಮಾನಸಿಕ ಒತ್ತಡವಿರುವುದಿಲ್ಲ. ಆದ್ದರಿಂದ ಯಾವಾಗ ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ಗೊತ್ತು.

2007ರ ಟಿ20 ಚೊಚ್ಚಲ ಟೂರ್ನಮೆಂಟಿಗೆ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾಗೆ ಕಳಿಸಲಾಯಿತು. ಟೆಸ್ಟ್ ಮ್ಯಾಚಿಗೆ ಮತ್ತು ಒಡಿಐಗೆ ನಾಯಕನಾಗಿದ್ದ ರಾಹುಲ್ ದ್ರಾವಿಡ್, ಟಿ20 ಪಂದ್ಯಗಳು ಚಿಕ್ಕವರು ಆಡಿದರೆ ಸರಿ, ನಾವು ದೊಡ್ಡವರು ಆಡುವುದು ಸರಿಯಲ್ಲ ಎಂದು ಹೇಳಿ, ದ್ರಾವಿಡ್, ಟೆಂಡೂಲ್ಕರ್, ಲಕ್ಷ್ಮಣ್, ಈ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡರು. ಅದರ ಪ್ರಕಾರ ಭಾರತದ ಟೀಮಿಗೆ ಧೋಣಿಯವರನ್ನು ನಾಯಕನಾಗಿ ನೇಮಿಸಿ, ಅನುಭವ ಇರುವ /ಅನುಭವವಿಲ್ಲದ ಮಿಶ್ರ ಉತ್ಸಾಹಿಗಳ ತಂಡವನ್ನು ಕಳುಹಿಸಲಾಯಿತು.

ಭಾರತದ ಮೊದಲ ಮ್ಯಾಚು ನಮ್ಮ ನೆರೆ ದೇಶವಾದ ಪಾಕಿಸ್ಥಾನದ ವಿರುದ್ಧವಿತ್ತು. ಅದು ಇನ್ನೂ ಒತ್ತಡಕ್ಕೆ ನಾಂದಿ. ಇಪ್ಪತ್ತು ಓವರ್‌ಗಳು ಮುಗಿದಾಗ ಎರಡು ತಂಡಗಳ ಸ್ಕೋರು ಒಂದೇ ಆಗಿ ‘ಟೈ’ ಆಗಿ ಮುಗಿಯಿತು! ‘ಸೂಪರ್ ಓವರ್’ ನಲ್ಲಿ ಭಾರತ ಪಾಕಿಸ್ಥಾನವನ್ನು ಸೋಲಿಸಿತು.

ಕೊನೆಗೆ ಭಾರತ ಮತ್ತು ಪಾಕಿಸ್ಥಾನ ಮತ್ತೆ ಫೈನಲ್‌ನಲ್ಲಿ ಮುಖಾಮುಖಿಯಾಗಿ ಬಂದರು. ಚೊಚ್ಚಲ ಕಪ್ಪನ್ನು ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಯಾದರೆ, ಮತ್ತು ಎರಡು ದೇಶಗಳ ಮಧ್ಯೆ ರಾಜಕಾರಣದ ಹಿತಕರವಲ್ಲದ ಪರಿಸ್ಥಿತಿಯಲ್ಲಿ ಆಟ ಶುರುವಾಯಿತು. ಹಣಾಹಣಿಯಾಗಿ ಪಾಕಿಸ್ಥಾನದ ಸ್ಥಿತಿ ಮೇಲುಗೈ ಆಯಿತು.

ಮೊದಲು ಆಡಿದ ಭಾರತ 157 ರನ್‌ಗೆ 5 ವಿಕೆಟ್ ನಷ್ಟಕ್ಕೆ ಹೊಡೆಯಿತು. ಅದರಲ್ಲಿ ಅರ್ಧ ರನ್ 75 ಗೌತಮ್‌ ಗಂಭೀರ್ ಒಬ್ಬರೇ ಹೊಡೆದರೆ, ರೋಹಿತ್ ಶರ್ಮ 30 ರನ್ ಹೊಡೆದರು. ಪಾಕಿಸ್ಥಾನ ಚೆನ್ನಾಗಿ ಆಡಿದರೂ ಭಾರತದ ಬೋಲರ್‌ಗಳು ಆಗಿಂದಾಗ್ಗೆ ವಿಕೆಟ್‌ಗಳನ್ನು ತೆಗೆಯುತ್ತಾ ಇದ್ದರು. ಪಾಕಿಸ್ಥಾನದ ನಾಯಕ ಮಿಸ್ಬಾ- ಉಲ್- ಹಕ್ ರನ್‌ಗಳನ್ನು ರಭಸದಿಂದ ಹೊಡೆಯುತ್ತಾ ಅವರ ಟೀಮನ್ನು ವಿಜಯದ ಹೊಸ್ತಿಲಿಗೆ ತಂದರು. ಅವರ 9 ನೇ ವಿಕೆಟ್ ಬಿದ್ದಾಗ 141 ರನ್ ಆಗಿತ್ತು. ಇನ್ನೂ ಆಟ ಮುಗಿಯುವುದಕ್ಕೆ 7 ಬಾಲ್‌ಗಳು ಇದ್ದವು. ಕೊನೆಯ ಓವರ್ ಧೋಣಿ ಜೊಗಿಂದರ್ ಸಿಂಘ್ ಅವರಿಗೆ ಬೋಲ್ ಮಾಡಲು ಆಮಂತ್ರಿಸಿದರು. ನುರಿತ ಬೋಲರ್ ಹರ್ಭಜನ್ ಸಿಂಘ್ ಅವರು ಇನ್ನೂ ಒಂದು ಓವರ್ ಮಾಡಬಹುದಾಗಿತ್ತು. ಆದರೆ ಧೋಣಿ ಜೊಗಿಂದರ್‌ಗೆ ಬೋಲ್ ಮಾಡಲು ಕರೆದರು. ಇದು ದೋಣಿಯವರ ಆಟದ ವೈಶಿಷ್ಟ್ಯತೆ. ಯಾವುದು ಎಲ್ಲಾರೂ ಮಾಡುತ್ತಾರೋ ಅದು ಅವರು ಮಾಡುತ್ತಿರಲಿಲ್ಲ. ಅವರ ಇಂಗಿತ ತಿಳಿಯುವುದಕ್ಕೆ ಆಗುತ್ತಿರಲಿಲ್ಲ.

ಜೊಗಿಂದರ್ ಅವರ ಎರಡು ಬಾಲಿಗೆ 2 ಸಿಕ್ಸರ್ ಬಾರಿಸಿ ಅವರ ಸ್ಕೋರ್ 152 ರನ್ಗೆ ತಂದರು ಮಿಸ್ಬಾ. ಅವರಿಗೆ ಬೇಕಾಗಿದ್ದಿದ್ದು ಇನ್ನಿ ಕೇವಲ 6 ರನ್. ಇನ್ನೂ ನಾಲ್ಕು ಬಾಲ್ ಇತ್ತು. ಮಿಸ್ಬಾ ಹೊಡೆತಕ್ಕೆ ಕಂಗಾಲಾಗಿದ್ದ ಜೊಗಿಂದರ್ ಸಿಂಘ್ ಹತ್ತಿರ ದೋಣಿ ಓಡಿಹೋಗಿ ಅವರ ಬೆನ್ನು ತಟ್ಟಿ ಅವರನ್ನು ಹುರಿದುಂಬಿಸಿದರು. ಇಷ್ಟರ ತನಕ ಚೆನ್ನಾಗಿ ಆಡುತ್ತಿದ್ದ ಮಿಸ್ಬಾ ಮೂರನೇ ಬಾಲನ್ನು ವಿಕೆಟ್ ಕೀಪರ್ ಹಿಂದೆ ಸ್ಕೂಪ್ ಮಾಡಿದಾಗ ಅಲ್ಲಿ ಯಾವ ಫೀಲ್ಡರ್ರೂ ಇರಲಿಲ್ಲ. ಆದರೆ ಎಲ್ಲಿಂದಲೋ ಓಡಿಬಂದ ಶ್ರೀಶಾಂತ್ ಅದನ್ನು ಕಬಳಿಸಿದರು. ಭಾರತ ಒಂದು ಅಗ್ನಿಕುಂಡದಲ್ಲಿ ಹೆಣಗಾಡಿ, ಬೆಂದು ಚೊಚ್ಚಲ ಟೀ20 ಕಪ್ಪನ್ನು ಪಾಕಿಸ್ಥಾನದ ವಿರುದ್ಧ ಗೆದ್ದು ಬೀಗಿತು.

ಧೋಣಿ ಗೆದ್ದ ಕಪ್ಪನ್ನು ಚಿಕ್ಕವರಾದ ಜೊಗಿಂದರ್ ಮತ್ತು ಶ್ರೀಶಾಂತರಿಗೆ ಕೊಟ್ಟು ಕೊನೆಯಲ್ಲಿ ಹೋಗಿ ನಿಂತರು. ಅಂದಿನಿಂದ ಅದೇ ಅವರು ತಂದ ಹೊಸ ಪದ್ಧತಿ. ಅವರು ಕಪ್ಪನ್ನು, ಟ್ರೋಫಿಯನ್ನು ತಂಡದ ಹೊಚ್ಚ ಹೊಸಬರಿಗೆ ಕೊಟ್ಟು ಕೊನೆಯಲ್ಲಿ ಮಿಕ್ಕವರ ಜೊತೆ ನಿಲ್ಲುತ್ತಿದ್ದರು. ಗೆದ್ದಾಗಲೂ ಗದ್ದಲ ಮಾಡದೆ, ಸೋತಾಗಲೂ ಬಹಳ ಕುಗ್ಗದೆ, ಮುಂದೆ ಏನು ಮಾಡಬೇಕೂಂತ ಯೋಚಿಸುತ್ತಿದ್ದರು. ಒಬ್ಬ ಸ್ಥಿತಪ್ರಜ್ಞ ಹೇಗಿರುತ್ತಾನೆ, ಹೇಗೆ ವರ್ತಿಸುತ್ತಾನೆ ಎಂಬ ದರ್ಶನ ಪ್ರೇಕ್ಷಕರಿಗೆ ಮತ್ತು ಟಿವಿಯಲ್ಲಿ ನೋಡುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಅವರನ್ನು ನೋಡಿದಾಗ ಸಿಗುತ್ತಿತ್ತು.

ಏಪ್ರಿಲ್ 2011 ರಲ್ಲಿ ಭಾರತ ಮತ್ತು ಶ್ರೀಲಂಕ ವಿರುದ್ಧ ಒಡಿಐನ ಫೈನಲ್ಸ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಮೊದಲು ಆಡಿದ ಶ್ರೀಲಂಕ 4 ವಿಕೆಟ್ ನಷ್ಟಕ್ಕೆ 277 ರನ್ ಹೊಡೆಯಿತು. ಅದರಲ್ಲಿ ಮಹೇಳ ಜಯವರ್ಧನ ಶತಕವನ್ನು ಭಾರಿಸಿದರು. ಕೇವಲ 88 ಬಾಲ್‌ಗಳಲ್ಲಿ 103 ರನ್ ಹೊಡೆದು ಅಜೇಯರಾಗಿದ್ದರು. ಝಹೀರ್ ಖಾನ್ ಮತ್ತು ಯುವರಾಜ್ ಸಿಂಘ್ ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಭಾರತದ ಆಟ ಅಷ್ಟು ಚೆನ್ನಾಗಿ ಶುರುವಾಗಲಿಲ್ಲ. ವೀರೇಂದ್ರ ಸೆಹ್ವಾಗ್ ಸೊನ್ನೆಗೆ ಔಟಾದರೆ, ಸಚಿನ್ ಟೆಂಡೂಲ್ಕರ್ ಕೇವಲ 18 ರನ್‌ಗೆ ಔಟಾದರು. 277 ಬಹಳ ದೂರವಾಯಿತು. ಗೌತಮ್ ಗಂಭೀರ್ ಯಾವಾಗಲೂ ಫೈನಲ್ಸ್‌ನಲ್ಲಿ ಚೆನ್ನಾಗಿ ಆಡುತ್ತಾರೆ. ಅವರು ಒಂದು ಕಡೆ ವಿಕೆಟನ್ನು ಸಂಭಾಳಿಸುತ್ತಿದ್ದರು. ವಿರಾಟ್ ಕೊಹ್ಲಿ 35 ರನ್ ಹೊಡೆದು ಔಟಾದರು. ಲಂಕೆಯ ಟೀಮಿನಲ್ಲಿ ಸ್ಪಿನ್ ಬೋಲಿಂಗ್‌ನ ಚಾಣಾಕ್ಷ ಮುತ್ತೈಯ ಮುರುಳೀಧರನ್ ಬೋಲಿಂಗಿಗೆ ಬಂದರು. ಅವರು ಬೋಲಿಂಗ್ ಮಾಡಿದಾಗ ಎಡಗೈ ಆಟಗಾರರಿಗೆ ಆಡುವುದು ಬಹಳ ಕಷ್ಟ. ಇದನ್ನು ಅರಿತ ಧೋಣಿ ಕೊಹ್ಲಿ ಔಟಾದ ತಕ್ಷಣವೇ ಯುವರಾಜ್ ಸಿಂಘ್ ಅವರ ಬದಲಾಗಿ ತಾನು ಮೈದಾನಕ್ಕೆ ಇಳಿಯುತ್ತಿದ್ದೀನಿ ಎಂದು ಟೀಮಿನ ಕೋಚ್‌ಗೆ ಹೇಳಿ ಆಡಲು ಮೈದಾನಕ್ಕೆ ಇಳಿದರು. ಯುವರಾಜ್ ಸಿಂಘ್ ಬರುತ್ತಾರೆಂದು ಅಂದುಕೊಂಡಿದ್ದ ಜನರಿಗೆ, ಧೋಣಿ ಬಂದಿದ್ದು ಆಶ್ಚರ್ಯವಾಯಿತು.

ಧೋಣಿ, ಗಂಭೀರ್ ಜೊತೆಗೂಡಿ ಹುಷಾರಾಗಿ ಆಡಿ ಪಾಲುದಾರಿಕೆಯನ್ನು ಸ್ಥಾಪಿಸಲು ಶುರು ಮಾಡಿದರು. ಶತಕಕ್ಕೆ ಕೇವಲ 3 ರನ್‌ಗಳಿದ್ದಾಗ ಗಂಭೀರ್ 97 ಕ್ಕೆ ಔಟಾದರು. 2007 ಟಿ20 ಫೈನಲ್ಸ್‌ನಲ್ಲೂ ಗಂಭೀರ್ ಭಾರತದ 152ರಲ್ಲಿ 75 ರನ್ ಗಳಿಸಿದ್ದರು. ಬಹಳ ಆಟಗಾರರಿಗೆ, ಅದರಲ್ಲೂ ಫೈನಲ್ಸ್‌ನಲ್ಲಿ ಮಾನಸಿಕ ಒತ್ತಡದಿಂದ, ಏಕಾಗ್ರತೆ ಕಡಿಮೆಯಾಗಿ ಸ್ಕೋರ್ ಮಾಡುವುದಕ್ಕೇ ಆಗುವುದಿಲ್ಲ. ಆದರೆ ಗಂಭೀರ್ ಅವರಿಗೆ ಫೈನಲ್ಸ್ ಆಟ ಸ್ಪೂರ್ತಿದಾಯಕವಾಗಿ, ತಂಡದ ಪ್ರಬಲ ಆಟಗಾರನಾಗಿ ಮಿಂಚುತ್ತಾರೆ. ಈ ತರಹ ಆಡುವವರು ವಿರಳ.

ಗಂಭೀರ್ ನಂತರ ಬಂದ ಯುವರಾಜ್ ಸಿಂಘ್ ಜೊತೆ ಧೋಣಿ ಚೆನ್ನಾಗಿ ಆಡಿ, ಭಾರತಕ್ಕೆ ವಿಜಯವನ್ನು ತಂದುಕೊಟ್ಟರು. ಧೋಣಿ ಮುಂದೆ ಬಂದು ಒಂದು ಸಿಕ್ಸರ್ ಹೊಡೆಯುವ ಮೂಲಕ ಭಾರತಕ್ಕೆ ಒಡಿಐ ಟ್ರೋಫಿ 28 ವರ್ಷಗಳಾದ ಮೇಲೆ ಮತ್ತೆ ಬರುವ ಹಾಗೆ ಮಾಡಿದರು. ವಿಶ್ವ ಕಪ್ಪಿನ ಎಲ್ಲಾ ಮ್ಯಾಚ್‌ಗಳಲ್ಲಿ ಅವರ ಬ್ಯಾಟಿಂಗ್ ಮತ್ತು ಸ್ಪಿನ್ ಬೋಲಿಂಗಿಗೆ ‘ಅತಿ ಶ್ರೇಷ್ಟ ಆಟಗಾರನ’ ಕಿರೀಟವನ್ನು ಯುವರಾಜ್ ಸಿಂಘ್ ಅವರಿಗೆ ಕೊಡಲಾಯಿತು. 79 ಬಾಲುಗಳಲ್ಲಿ 91 ಹೊಡೆದ ಧೋಣಿಯವರನ್ನು ‘ಮ್ಯಾನ್ ಆಫ್ ದ ಮ್ಯಾಚ್’ ಎಂದು ಘೋಷಿಸಲಾಯಿತು.

ಧೋಣಿಯವರ ಇನ್ನೊಂದು ಬ್ಯಾಟಿಂಗ್‌ನ ವಿಶೇಷ ಅಂಶ ವೆಂದರೆ; ಅವರ ಹೆಲಿಕಾಪ್ಟರ್ ಶಾಟ್‌. ಬಾಲು ಕಾಲ ಹತ್ತಿರ ಬಿದ್ದು ಅದು ಕಾಲಿಗೆ ತಗುಲುತ್ತೆ ಅನ್ನುವಷ್ಟರಲ್ಲಿ ಧೋಣಿ ಅದನ್ನು ಲೆಗ್-ಸೈಡ್‌ನಲ್ಲಿ ಅವರ ಕಾಲಿನ ಹತ್ತಿರ ಬರುವ ಬಾಲನ್ನು ಒಮ್ಮೆಲೇ ಅದನ್ನು ಮಿಡ್-ಆನ್ ಅಥವ ಮಿಡ್-ವಿಕೆಟ್‌ನ ಮೇಲೆ ಸಿಕ್ಸರ್ ಹೊಡೆಯುತ್ತಿದ್ದರು. ಹೊಡೆದಾಗ ಬಾಲ್ ಹೆಲಿಕಾಪ್ಟರ್‌ನ ಹಾಗೆ ಛಿಮ್ಮಿ ಮೇಲಕ್ಕೆ ಹಾರುವುದು. ಈ ಶಾಟನ್ನು ಧೋಣಿ ಚೆನ್ನಾಗಿ ಕರಗತ ಮಾಡಿಕೊಂಡಿದ್ದರು.

ಧೋಣಿ ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಓಡುವುದರಲ್ಲಿ ನಿಸ್ಸೀಮರಾಗಿದ್ದರು. ಚಿಕ್ಕವರ ಸರಿಸಮಾನವಾಗಿ ಓಡಿ ಟಿ20 ಮತ್ತು ಒಡಿಐನಲ್ಲಿ ರನ್ ಗಳಿಸುತ್ತಿದ್ದರು. ವಿಕೆಟ್ ಕೀಪರ್ ಆಗಿ ಆದಕ್ಕೆ ಬೇಕಾದ ಚಾಕಚಕ್ಯತೆ, ಸ್ಟಂಪ್ ಮತ್ತು ರನ್ ಔಟ್ ಮಾಡುವುದಕ್ಕೆ ಬೇಕಾದ ಮಿಂಚಿನ ವೇಗ ಇದೆಲ್ಲವೂ ಧೋಣಿಯವರಲ್ಲಿತ್ತು.
ಅವರು ಯಾವತ್ತೂ ವೃಥಹ ಅಪೀಲ್ ಮಾಡುತ್ತಿರಲಿಲ್ಲ. ಅವರ ಈ ಗುಣ ಎಷ್ಟು ಪ್ರಸಿದ್ಧಿಯಾಯಿತೆಂದರೆ, ಧೋಣಿ ಅಪೀಲ್ ಮಾಡಿದರೆ ಅದು ಔಟ್ ಇರಬೇಕೆಂದು ಅಂಪೈರ್‌ಗಳು ಕೂಡ ಅವರಲ್ಲಿ ಅಷ್ಟು ವಿಶ್ವಾಸವನ್ನು ಇಟ್ಟಿದ್ದರು! ಅವರು ಆಡುವಾಗ, ಯಾರನ್ನೂ ಫೀಲ್ಡಿನಲ್ಲಿ ಬೈದಿದ್ದಿಲ್ಲ. ಎಲ್ಲದಕ್ಕೂ ಅವರು ಹೊಣೆ ಹೊರುತ್ತಿದ್ದರು, ಬೇರೆಯವರನ್ನು ದೂರುತ್ತಿರಲಿಲ್ಲ. ಅವರು ಆಡಿದ್ದ 15 ವರ್ಷಗಳಲ್ಲಿ ಜಗಳವಾಡಿದ್ದು ಬಹಳ ವಿರಳ.

ಧೋಣಿ ಎಲ್ಲಾ ನಾಯಕರಿಗಿಂತ ಜನರಿಗೆ ಅಚ್ಚುಮೆಚ್ಚಾಗಿದ್ದರು. ಎಂತಹ ಸ್ಥಿತಿಯಲ್ಲಿಯೂ ಅವರಿದ್ದರೆ ಭಾರತ ಗೆದ್ದೇ ಗೆಲ್ಲುತ್ತೆ ಎನ್ನುವ ಭರವಸೆ, ವಿಶ್ವಾಸ ಅಭಿಮಾನಿಗಳಿಗೆ ಇತ್ತು. ಕೆಲವೊಮ್ಮೆ ಹೊಡೆಯಬೇಕಾಗಿದ್ದ ರನ್‌ಗಳು ಬೆಟ್ಟದಷ್ಟಿವೆ, ಬಾಲು ಗಳು ತೀರಾ ಕಡಿಮೆ ಎನ್ನುವ ಪರಿಸ್ಥಿತಿಯಲ್ಲೂ ರಭಸದಿಂದ ರನ್‌ಗಳನ್ನು ಹೊಡೆದು ಭಾರತಕ್ಕೆ ಜಯವನ್ನು ತಂದಿದ್ದಾರೆ.

ಮಹೇಂದ್ರ ಸಿಂಘ್ ಧೋಣಿ ಜಾರ್ಖಂಡ್‌ನಲ್ಲಿ ಜುಲೈ 1981ರಲ್ಲಿ, ರಾಂಚಿಯಲ್ಲಿ ಹುಟ್ಟಿದರು. ಅವರು ಸ್ಕೂಲಿನಲ್ಲಿ ಇದ್ದಾಗಲೇ ಫುಟ್ಬಾಲ್, ಬ್ಯಾಡ್ಮಿಂಟನ್, ಮತ್ತು ಕ್ರಿಕೆಟ್ ಆಟಗಳನ್ನು ಆಡುತ್ತಾ ಫುಟ್ಬಾಲಿನಲ್ಲಿ ಗೋಲಿಯಾಗಿದ್ದರು. 2001-02ರಲ್ಲಿ ಅವರು ‘ ಟ್ರಾವೆಲಿಂಗ್‌ ಟಿಕೆಟ್ ಎಕ್ಜಾಮಿನರ್’ ಆಗಿ ಖರಗ್ಪುರದಲ್ಲಿ ಕೆಲಸ ಮಾಡುತ್ತಿದ್ದರು. ರೈಲ್ವೆ ಕೆಲಸದಲ್ಲಿದ್ದರೂ ಅವರು ಭಾರತದ ಕ್ರಿಕೆಟ್‌ನಲ್ಲಿ ಪ್ರವೇಶಿಸಲು ಹರಸಾಹಸ ಮಾಡುತ್ತಿದ್ದರು.

ಸಣ್ಣ ಪುಟ್ಟ ಮ್ಯಾಚುಗಳನ್ನು ಪೂರ್ವ ವಲಯಗಳಲ್ಲಿ ಆಡುತ್ತಾ ಹಂತ ಹಂತವಾಗಿ ಧೋಣಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಅವರಿಗೆ ಕೊನೆಗೆ ಭಾರತಕ್ಕೆ ಆಡುವ ಅವಕಾಶ ಸಿಕ್ಕಿತು. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಕೊಟ್ಟ ಒಳ್ಳೆ ಪ್ರದರ್ಶನಗಳು ವ್ಯರ್ಥವಾಗಲಿಲ್ಲ. ಒಂದೆರೆಡು ಪಂದ್ಯಗಳಲ್ಲಿ ಚೆನ್ನಾಗಿ ಆಡದಿದ್ದಾಗಲೂ ಆವರ ಆಡುವ ರೀತಿ, ದಿಟ್ಟತನ ಭಾರತದ ನಾಯಕ ಸೌರವ್ ಗಂಗೂಲಿಗೆ ಇಷ್ಟವಾಯಿತು. ಅವರಿಗೆ ಪಾಕಿಸ್ಥಾನದ ವಿರುದ್ಧ ಅವಕಾಶ ಸಿಕ್ಕಿದಾಗ 123 ಬಾಲ್‌ಗಳಲ್ಲಿ 148 ರನ್ ಮಾಡಿದರು. ಆಗ ಅದು ಒಂದು ದಾಖಲೆಯಾಯಿತು. ಅಲ್ಲಿಯವರಗೆ ಭಾರತದ ವಿಕೆಟ್ ಕೀಪರ್ ಹೊಡೆದ ಅತಿ ಹೆಚ್ಚುರನ್ ಅದು. 2005ರಲ್ಲಿ ಶ್ರೀಲಂಕ ವಿರುದ್ಧ ಒಡಿಐ ಪಂದ್ಯದಲ್ಲಿ 145 ಬಾಲ್‌ಗಳಲ್ಲಿ 183 ರನ್ ಹೊಡೆದು ಆಗಿನಿಂದ ಭಾರತವನ್ನು ಪ್ರತಿನಿಧಿಸುವುದಕ್ಕೆ ಶುರು ಮಾಡಿದರು.

ಮುಂದೆ ಭಾರತದ ತಂಡದ ನಾಯಕನಾಗಿ ಐಸಿಸಿ ಟೂರ್ನಮೆಂಟನ್ನು ಗೆದ್ದರು. ಆದದ ಮೇಲೆ ಅವರಿಗೆ ಪಂದ್ಯದ ಮೂರೂ ಸ್ವರೂಪದಲ್ಲೂ ನಾಯಕನಾಗುವುದಕ್ಕೆ ಅವಕಾಶ ಸಿಕ್ಕಿತು. ಧೋಣಿ ಸಾಕ್ಷಿ ಎನ್ನುವ ಹುಡುಗಿಯನ್ನು ಮದುವೆಯಾಗಿ ಅವರಿಗೆ ಝಿ಼ವ ಎನ್ನುವ ಹೆಣ್ಣು ಮಗಳಿದ್ದಾಳೆ.

ಧೋಣಿ ಭಾರತದ ಕ್ರಿಕೆಟ್ ಟೀಮಿನಿಂದ ರಿಟೈರ್ ಆದರೂ, ಅನೇಕ ವಿಷಯದಲ್ಲಿ ಅವರು ಬ್ಯುಸಿ. ಅವರು ಈಗಲೂ ಸಿಎಸ್ಕೆಗೆ ನಾಯಕರಾಗಿದ್ದಾರೆ. ಅವರು ಇಂಡಿಯನ್ ಟೆರಿಟೊರ್ಯಲ್ ಆರ್ಮಿಗೆ ಸೇರಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಫುಟ್ಬಾಲ್, ಮೋಟರ್ ಕಾರ್ ರೇಸಿಂಗ್, ಬ್ಯಾಡ್ಮಿನ್ಟನ್‌ನಲ್ಲಿ ಅಲ್ಲಿನ ಕ್ಲಬ್ಬುಗಳಲ್ಲಿ ಪಾಲುದಾರಿಕೆ ಮೂಲಕ ಮಾಲಿಕರಾಗಿದ್ದಾರೆ. ಕ್ರಿಕೆಟ್‌ಗೆ ದುಬೈನಲ್ಲಿ ಒಂದು ಅಕೆಡಮಿಯನ್ನೂ ತೆರೆದಿದ್ದಾರೆ. ಚಿಕ್ಕ ಹುಡುಗರಿಗೆ ಪ್ರೋತ್ಸಾಹ ಮತ್ತು ಒಳ್ಳೆ ತರಬೇತಿ ಕೊಡಬೇಕೆಂದು ಅವರ ಇಚ್ಛೆ. ಐಪಿಎಲ್‌ನಲ್ಲಿ ಆಡಿರುವ ಅನೇಕ ಆಟಗಾರರು, ಅವರು ಯಾವುದೇ ದೇಶದವರಾಗಲಿ, ಅವರಿಗೆ ಧೋಣಿಯ ಬಗ್ಗೆ ಅತ್ಯಂತ ಗೌರವ ಮತ್ತು ಅಭಿಮಾನ, ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಅವರಿಂದ ಕಲಿತದ್ದನ್ನು ಶ್ಲಾಘಿಸುತ್ತಾರೆ. ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಮತ್ತು ಹಲವು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದೆ.

ಧೋಣಿಯವರ ಭಾರತದ ಕ್ರಿಕೆಟ್ಟಗೆ ಕೊಟ್ಟ ಕೊಡುಗೆ ಅಪಾರ. ಅದನ್ನು ಅವರು ಗೆದ್ದ ಪಂದ್ಯಗಳು ಎಷ್ಟೇ ಇರಲಿ, ಗೆಲ್ಲಿಸಿದ, ಗೆದ್ದ ವಿಶ್ವ ಕಪ್ ಮತ್ತು ಟ್ರೋಫಿಗಳು ಏನೇ ಇರಲಿ, ಅವರ ಆಡುವ ಶೈಲಿ, ನೇರ, ದಿಟ್ಟತನ, ಅವರ ಸ್ಥಿತಪ್ರಜ್ಞತೆಯನ್ನು ಪ್ರೇಕ್ಷಕರು ಎಂದಿಗೂ ಮರೆಯಲ್ಲ. ವಿರೋಧಿ ಟೀಮಿನವರೂ ಧೋಣಿಯನ್ನು ಅತ್ಯಂತ ಸ್ನೇಹಭಾವದಿಂದ ಕಾಣುತ್ತಿದ್ದರು.

ಭಾರತದ ಪುಣ್ಯವೆನ್ನಬೇಕು, ಕಪಿಲ್ ದೇವ್ ಮತ್ತು ಧೋಣಿಯಂಥ ಆಟಗಾರರು ದೇಶಕ್ಕೆ ಅನೇಕ ರೀತಿ ಸೇವೆ ಸಲ್ಲಿಸಿದ್ದಾರೆ. ಅವರಿಬ್ಬರೂ ಮೂಲತಃ ಹಳ್ಳಿಯಿಂದ ಬಂದವರು. ಅವರಿಗೆ ಸಿಗುವ ಅವಕಾಶಗಳು ಕಡಿಮೆ. ಅಷ್ಟಾಗಿಯೂ ಅವರು ಕಷ್ಟ ಪಟ್ಟು ತಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಿಸಿಕೊಂಡು, ಭಾರತದ ಪತಾಕೆಯನ್ನು ವಿಶ್ವದಲ್ಲೆಲ್ಲಾ ಹಾರಿಸಿ ದೇಶಕ್ಕೆ ಕೀರ್ತಿಯನ್ನು ತಂದರು. ಇಷ್ಟೆಲ್ಲಾ ಸ್ವಯಂ ಕೀರ್ತಿಗಳಿಸಿದರೂ ಅವರಿಬ್ಬರ ವಿನಮ್ರತೆ ಚಿನ್ನಕ್ಕೆ ಮೆರಗು ಕೊಟ್ಟಹಾಗೆ. ಅವರಿಗೆ ಕ್ರಿಕೆಟಾಯದ ನಮೋ ನಮಃ…