ಕೆಲ ನಿಮಿಷಗಳ ನಂತರ ಬಂದ ಯಾರೋ ಆಗಂತುಕರ ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ಎಲ್ಲಿಗೋ ಹೊರಟುಬಿಟ್ಟಿದ್ದರು. ಅಲ್ಲಿಂದ ಮುಂದೆ ಎಂದೆಂದಿಗೂ ಅವನು ಯಾರಿಗೂ ಕಾಣಿಸಲಿಲ್ಲ. ಕೇಳಿದ ಎಲ್ಲರ ಎದೆ ಢವಢವಿಸಿತ್ತು, ರಕ್ತ ತಣ್ಣಗಾಗಿತ್ತು. ಅವನ ಅಪ್ಪ-ಅಮ್ಮಂದಿರು, ಸರ್ಕಾರ, ಪೊಲೀಸರು ಅವನನ್ನು ಹುಡುಕುತ್ತಾ ಇಡೀ ಒಂದು ದಶಕವನ್ನೇ ಕಳೆದರು. ರಾಣಿರಾಜ್ಯದ ಅತ್ಯಂತ ದುಬಾರಿ ಕಾಣೆಯಾದವರ ಕೇಸ್ ಎಂದು ಇದು ಪ್ರಸಿದ್ಧಿಯಾಯ್ತು. ಡೇನಿಯಲ್ ಬಗ್ಗೆ ಸುಳಿವು ಕೊಟ್ಟವರಿಗೆ, ಹುಡುಕಿಕೊಟ್ಟವರಿಗೆ ಅನೇಕ ಬಹುಮಾನಗಳನ್ನು ಘೋಷಿಸಿದ್ದರು. ಇಡೀ ದೇಶವೇ ಅವನಿಗಾಗಿ ಕಂಬನಿ ಸುರಿಸಿತ್ತು, ಬೇಕಾದಷ್ಟು ದೇಣಿಗೆ ಕೊಟ್ಟು ಅವನ ಹುಡುಕಾಟದ ಖರ್ಚುಗಳನ್ನು ಭರಿಸಿತ್ತು.
ಡಾ.ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ
ಆ ನಾಲ್ವರೂ ಒಂದು ನಿಶ್ಚಿತ ಉದ್ದೇಶವನ್ನಿಟ್ಟುಕೊಂಡೇ ಕಾಣೆಯಾಗಿದ್ದರು. ಅವರ ಯೋಜನೆ ಪೂರ್ವನಿರ್ಧರಿತವಾಗಿದ್ದರಿಂದ ಬಿಲ್ಲಿನಿಂದ ಹೊರಟ ಬಾಣದಂತೆ ಅವರು ಮನೆಯಿಂದ ಕಾಲ್ತೆಗೆದಿದ್ದರು. ಇಚ್ಚಾಪೂರ್ವಕವಾದರೂ, ಕಾನೂನಿನ ಪ್ರಕಾರ ಅವರು ಕಾಣೆಯಾಗಿದ್ದರು. ‘ಕಾಣೆಯಾಗಿದ್ದಾರೆ’ ಎಂಬ ಸರಕಾರೀ ಪಟ್ಟಿಯಲ್ಲಿ ಅವರಿಗೆ ಶಾಶ್ವತ ಸ್ಥಾನಮಾನ ಲಭಿಸಿತ್ತು. “ಅಯ್ಯೋ, ಅದರಲ್ಲೇನಿದೆ ವಿಶೇಷ?! ಎಷ್ಟೋ ಜನರು ತಿಂಗಳಾನುಗಟ್ಟಲೆ ಕಾಣೆಯಾಗಿದ್ದು ಉಂಟು. ಕೆಲವರಂತೂ ಕಾಣೆಯಾಗಿ ವರ್ಷಗಳೇ ಕಳೆದಿದ್ದರೂ ಇನ್ನೂ ಆ ಸರಕಾರದ Missing Persons ಪಟ್ಟಿಯಲ್ಲಿ ಜೀವಂತವಾಗಿದ್ದುಕೊಂಡು ಖಾಯಂ ‘ಕಾಣಿಸಿ’ಕೊಳ್ಳುತ್ತಿದ್ದಾರೆ” ಎಂದು ಮೂಗು ಮುರಿದು ಆಡಿಕೊಂಡವರಿಗೂ ಆ ನಾಲ್ವರು ಕಾಣೆಯಾದ ಪ್ರಕರಣ ಭಾರಿ ಕುತೂಹಲವನ್ನುಂಟು ಮಾಡಿತ್ತು. ಯಾಕೆಂದರೆ ಅವರು ಕಾಣೆಯಾದಕ್ಕಿಂತಲೂ ಹೆಚ್ಚಾಗಿ ಅದೆಷ್ಟು ತ್ವರಿತವಾಗಿ ಪುನಃ ಕಾಣಿಸಿಕೊಂಡುಬಿಟ್ಟರು ಎನ್ನುವುದು ದೊಡ್ಡ ಸುದ್ದಿಯಾಗಿತ್ತು.
ಹೋದ ಜುಲೈ ತಿಂಗಳಿನಲ್ಲಷ್ಟೇ ಉದ್ದೇಶಪೂರ್ವಕವಾಗಿ ಮನೆಬಿಟ್ಟು ಹೊರಟು ಕಾಣೆಯಾದವರ ಪಟ್ಟಿಯಲ್ಲಿ ತಮ್ಮ ಹೆಸರನ್ನು – ಕ್ಷಣಿಕವಾಗಿಯಾದರೂ – ತಮಗೇ ಗೊತ್ತಿಲ್ಲದಂತೆ ಸೇರಿಸಿಕೊಂಡವರು ವಿರೋದಾಭಾಸಗಳಿಗೆ ಉದಾಹರಣೆಯಾಗಿದ್ದರು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು.
ಅವರು ನಾಲ್ವರೂ ಹತ್ತರಿಂದ ಹದಿನಾಲ್ಕು ವರ್ಷ ವಯಸ್ಸಿನ ಮಕ್ಕಳು!! ಹತ್ತು ವರ್ಷದವಳು ಹುಡುಗಿ. ಮಿಕ್ಕವರು ಹದಿಮೂರು ವರ್ಷದ ಒಬ್ಬ, ಮತ್ತು ಹದಿನಾಲ್ಕು ವರ್ಷದ ಇಬ್ಬರು ಹುಡುಗರು. ಯಾರೂ ಅವರನ್ನು ಅಪಹರಿಸಿರಲಿಲ್ಲ ಎನ್ನುವುದು ಅತ್ಯಂತ ಸಮಾಧಾನಕರವಾದ ವಿಷಯವಾಗಿತ್ತು. ಅವರೇ ಬೇಕಾಗಿ ಮನೆಬಿಟ್ಟು ಓಡಿಹೋದದ್ದು ಕೋಪ ಬರಿಸಿತ್ತು. ಓಡಿಹೋಗಲು ಇದ್ದ ಉದ್ದೇಶ go fishing – ಮೀನು ಹಿಡಿಯಲು ಹೊರಟಿದ್ದು!! ದೊಡ್ಡವರೆಲ್ಲರೂ whaaatttt ಎಂದು ಉದ್ಗರಿಸಿದರೆ ಕಿರಿಯರು yeee! ಎಂದು ಕೇಕೆ ಹಾಕಿದ್ದರು. ಆ ಉದ್ಗಾರ, ಅಚ್ಚರಿಗಳ ಹಿಂದೆ ಇದ್ದ ಕುತೂಹಲಕ್ಕೆ ಮೇರೆಯಿರಲಿಲ್ಲ, ಎನ್ನಬೇಕು. ಅವರಲ್ಲಿ ಒಬ್ಬ ತನ್ನ ಪಾಲಕರಿಗೆ ಮನೆಯಲ್ಲೇ ಪತ್ರವೊಂದನ್ನ ಬರೆದಿಟ್ಟು, ಅವನು ಮತ್ತು ಅವನ ಸ್ನೇಹಿತರು ಮನೆಬಿಟ್ಟು ಹೋಗುತ್ತಿರುವುದನ್ನು ಹೇಳಿದ್ದ. ಆದರೆ ಮೀನು ಹಿಡಿಯುವ ಯೋಜನೆ ಹಾಕಿಕೊಂಡದ್ದನ್ನು ಗೋಪ್ಯವಾಗಿರಿಸಿದ್ದ. ತಿಳಿದರೆ ಕಿಂದರಿಜೋಗಿ ಕತೆಯಂತೆ, fishing ಗೀಳಿರುವ ಈ ದೇಶದ ಜನರ ದೊಡ್ಡದೊಂದು ಗುಂಪೇ ಅವರ ಹಿಂದೆ ಹೊರಡುತ್ತಿತ್ತು, ಅಥವಾ ಅವನ ಪಾಲಕರೇ ನಾವೂ ಕೂಡ ನಿನ್ನ ಜೊತೆ ಓಡಿಹೋಗುತ್ತೀವಿ ಎನ್ನುತ್ತಿದ್ದರೇನೋ!
ಸರಿಯಪ್ಪಾ, ಆ ಮಕ್ಕಳೇನೋ ಮೀನು ಹಿಡಿಯಲು ಹೊರಟರು. ಎಷ್ಟು ಮಹಾ ದೂರ ಹೋಗಿರುತ್ತಾರೆ, ಅಲ್ಲೇ ಎಲ್ಲೋ ಮನೆ ಹತ್ತಿರ ಇರುವ ಕೆರೆ, ಕಾಲುವೆ, ನದಿ, ತೊರೆ, ಅಬ್ಬಬ್ಬಾ ಎಂದರೆ ಸಮುದ್ರತೀರಕ್ಕೆ ಹೋಗಿರುತ್ತಾರೆ. ಮೀನು ಹಿಡಿದೋ ಅಥವಾ ಹಿಡಿಯದೆಯೋ ಸಾಕಾಗಿ ಮುಸ್ಸಂಜೆಯಾಗಿ ಹೊಟ್ಟೆ ಹಸಿವಾಗಿ, ಮೀನಿನ ಜೊತೆ ಮಾಂಸವೂ ಬೇಕಾಗಿ ಮರಳಿ ಮನೆ ಸೇರಿರುತ್ತಾರೆ ಎಂದು ನೀವೆಂದುಕೊಂಡರೆ ಉಹುಂ, ನಿಮ್ಮ ಊಹೆ ತಪ್ಪು.
ನಮ್ಮ ನಿಮ್ಮಂತೆಯೇ ಸೋತವರು ದೇಶದ ಪೊಲೀಸರು ಕೂಡ. ಆ ನಾಲ್ವರು ಮಕ್ಕಳು ಕೇವಲ ಎರಡು ದಿನಗಳಲ್ಲಿ ಪೊಲೀಸರಿಗೆ ಹೊಟ್ಟೆತುಂಬಾ ಚಳ್ಳೆ ಹಣ್ಣು (ಮೀನಾಗಿದ್ದರೆ ಚೆನ್ನಿತ್ತೇನೋ, fish n chips ಜೊತೆ ನೆಂಚಿಕೊಳ್ಳಲು) ತಿನ್ನಿಸಿದ್ದು ಕಿರಿಯರ ಕೇಕೆಗೆ ಕಾರಣವಾಗಿತ್ತು. ಪೊಲೀಸರು ಆ ಮಕ್ಕಳು ಓಡಿಹೋಗಿದ್ದಾರೆ ಎಂದಷ್ಟೇ ಮಾಧ್ಯಮದವರಿಗೆ ತಿಳಿಸಿದ್ದರು. ಮಕ್ಕಳಾದ್ದರಿಂದ ಅವರ ಕ್ಷೇಮ, ಸುರಕ್ಷತೆ ಮತ್ತು ಕೇಸಿನ ಗೋಪ್ಯತೆಯನ್ನು ಕಾಪಾಡುವುದು ಪೋಲೀಸರ ಅಂದರೆ ಸರ್ಕಾರದ ಪ್ರಥಮ ಕರ್ತವ್ಯವಾಗಿತ್ತು. ಯಾವುದೇ ಕಾರಣಕ್ಕೂ ಮಕ್ಕಳು ಕಂಗಾಲಾಗಿ ದುರ್ಬಲ ಸನ್ನಿವೇಶಕ್ಕೆ ಸಿಕ್ಕಿಕೊಂಡು ತಪ್ಪುಗಳಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮತ್ತು ಸಮಾಜದ ಹೊಣೆಯಾಗಿತ್ತು. ಹಾಗಾಗಿ ಕೇಸಿನ ವಿವರಗಳನ್ನು ಎಲ್ಲೂ, ಯಾರೂ ಹೆಸರಿಸಲಿಲ್ಲ ಎನ್ನುವುದು ನಮ್ಮಲ್ಲಿ ಮೆಚ್ಚುಗೆ ತರಿಸಿತ್ತು.
ಆ ನಾಲ್ಕು ಮಕ್ಕಳು ಮೀನು ಗಾಳಗಳ ಜೊತೆ ಒಂದಷ್ಟು ಹಣವನ್ನೂ ಹೊಂದಿಸಿಕೊಂಡು ಅವರಲ್ಲೇ ಒಬ್ಬನ ತಂದೆಯ ನಾಲ್ಕು ಚಕ್ರದ ವಾಹನವನ್ನೇರಿ ಸವಾರಿ ಹೊರಟಿದ್ದರು. ಅದ್ಯಾಕೋ ಏನೋ ಮನೆ ಅಕ್ಕಪಕ್ಕ, ಆಚೆಈಚೆ ಅಷ್ಟ್ಯಾಕೆ ಊರಿನ ಅಕ್ಕಪಕ್ಕ ಮೀನು ಹಿಡಿಯುವುದು ರುಚಿಸದೆ ದೇಶಾಂತರ ಹೊರಟರು. ಹೇಳಿಕೇಳಿ, ಆಸ್ಟ್ರೇಲಿಯಾ ದೇಶ ಮತ್ತು ಖಂಡ ಎರಡೂ ಕೂಡ – ಬೃಹತ್ ಗಾತ್ರಗಳ ರಾಜ್ಯಗಳು ಇಲ್ಲಿವೆ. ನಮ್ಮ ರಾಣಿರಾಜ್ಯದಿಂದ ನೆರೆರಾಜ್ಯವಾದ ನ್ಯೂ ಸೌಥ್ ವೇಲ್ಸ್ ಕಡೆಗೆ ಹೊರಟರೆ ಸಾವಿರಾರು ಕಿಲೋಮೀಟರ್ ದೂರವಿದೆ. ಈ ಮಕ್ಕಳು ಮನೆ ಬಿಟ್ಟು 4WD ವಾಹನದಲ್ಲಿ ಸುಮಾರು ನೂರೈವತ್ತು ಕಿಲೋಮೀಟರು ದೂರ ಕ್ರಮಿಸಿದ ಮೇಲೆ ಪೆಟ್ರೋಲ್ ಮುಗಿದು ಅಲ್ಲೇ ಒಂದು ಪಟ್ಟಣದ ಪೆಟ್ರೋಲ್ ಸ್ಟೇಷನ್ನಿನಲ್ಲಿ ಪೆಟ್ರೋಲ್ ಕ್ಯಾನ್ ಕದ್ದು ಮುಂದಕ್ಕೆ ಪಯಣಿಸಿದರಂತೆ. ನಮ್ಮನಿಮ್ಮಂತೆ ಕಾರಿನಿಂದ ಕೆಳಗಿಳಿದು ಪೆಟ್ರೋಲ್ ತುಂಬಿಸಿಕೊಂಡು ಒಳಗಡೆ ಕುಳಿತಿರುವ ಸಿಬ್ಬಂದಿಗೆ ಹಣ ಕೊಡಲು ಹೋದರೆ ಆಹಾ, ಎಲಾಎಲಾ ಇವರು ಮಕ್ಕಳಲ್ಲವೇ ಎಂಬ ಪ್ರಶ್ನೆಯೇಳುತ್ತದೆ. ಆದರೇನು, ಅವರು ಅಲ್ಲಿಇಲ್ಲಿ ಬಚ್ಚಿಟ್ಟುಕೊಂಡು ಕ್ಯಾನ್ ಕದ್ದು ಹೊರಟರೂ ಅದು ಸಿಸಿ ಟೀವಿಯಲ್ಲಿ ದಾಖಲಾಗಿತ್ತು. ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಕದ್ದವರು ಮಕ್ಕಳಂತೆ ಕಾಣುತ್ತಿದ್ದಾರೆ ಎಂದಾಗ ಪೊಲೀಸರು ತತ್ ಕ್ಷಣ ಅವರನ್ನು ಹಿಡಿಯುವ ಕೆಲಸಕ್ಕಿಳಿದರು.
ಆ ಉದ್ಗಾರ, ಅಚ್ಚರಿಗಳ ಹಿಂದೆ ಇದ್ದ ಕುತೂಹಲಕ್ಕೆ ಮೇರೆಯಿರಲಿಲ್ಲ, ಎನ್ನಬೇಕು. ಅವರಲ್ಲಿ ಒಬ್ಬ ತನ್ನ ಪಾಲಕರಿಗೆ ಮನೆಯಲ್ಲೇ ಪತ್ರವೊಂದನ್ನ ಬರೆದಿಟ್ಟು, ಅವನು ಮತ್ತು ಅವನ ಸ್ನೇಹಿತರು ಮನೆಬಿಟ್ಟು ಹೋಗುತ್ತಿರುವುದನ್ನು ಹೇಳಿದ್ದ. ಆದರೆ ಮೀನು ಹಿಡಿಯುವ ಯೋಜನೆ ಹಾಕಿಕೊಂಡದ್ದನ್ನು ಗೋಪ್ಯವಾಗಿರಿಸಿದ್ದ. ತಿಳಿದರೆ ಕಿಂದರಿಜೋಗಿ ಕತೆಯಂತೆ, fishing ಗೀಳಿರುವ ಈ ದೇಶದ ಜನರ ದೊಡ್ಡದೊಂದು ಗುಂಪೇ ಅವರ ಹಿಂದೆ ಹೊರಡುತ್ತಿತ್ತು.
ಮಕ್ಕಳಿದ್ದ ಕಾರನ್ನು ಅವರು ಹಿಂಬಾಲಿಸಿ ಹೊರಡುವಷ್ಟರಲ್ಲಿ ಮಕ್ಕಳು ರಾಣಿರಾಜ್ಯವನ್ನು ಬಿಟ್ಟು ನ್ಯೂ ಸೌಥ್ ವೇಲ್ಸ್ ರಾಜ್ಯವನ್ನು ಪ್ರವೇಶಿಸಿದ್ದರು. ಪೊಲೀಸರಿಗೆ ಈ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಯಾತಕ್ಕೆ ಎಂಬುದು ತಿಳಿಯಲಿಲ್ಲ. ಅವರ ಗೋಳನ್ನು ಹೆಚ್ಚಿಸಲೇನೋ ಎಂಬಂತೆ ರಾಣಿರಾಜ್ಯದಲ್ಲಿ ನಾಲ್ಕು ಮಕ್ಕಳು ಕಾಣೆಯಾಗಿರುವ ಕುರಿತು ಪೊಲೀಸ್ ಕಂಪ್ಲೇಂಟ್ ಬಂದಿರಲಿಲ್ಲ. ಕಡೆಗೆ ಪೊಲೀಸರು ಸುದ್ದಿಮಾಧ್ಯಮಗಳಿಗೆ ವಿಷಯದ ಸೂಕ್ಷ್ಮತೆಯನ್ನು ತಿಳಿಸಿ, ಮಕ್ಕಳ ಪಾಲಕರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಿದರು. ರಿಜಿಸ್ಟ್ರೇಷನ್ ನಂಬರ್ ತೋರಿಸದೆ ಮಕ್ಕಳಿದ್ದ ಕಾರಿನ ಫೋಟೋವನ್ನು ಬಿಡುಗಡೆ ಮಾಡಿದರು. ಕಾರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟರು. ಅಂದರೆ ಮಕ್ಕಳನ್ನು, ಅವರ ಕ್ಷೇಮಕ್ಕೆ ಧಕ್ಕೆ ಬರದಂತೆ, ಕಾಪಾಡುವ ಕ್ರಮವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು.
ಮಕ್ಕಳು ಒಂದು ದೊಡ್ಡ ಪಟ್ಟಣವನ್ನುತಲುಪಿ ಒಂದೆಡೆ ಕಾರು ನಿಲ್ಲಿಸಿ ಸುಮಾರು ಸಮಯ ಕಾರಿನೊಳಗೆ ಕೂತು ಕಾಲ ಕಳೆಯುತ್ತಿದ್ದಾಗ ಅಲ್ಲಿಗೆ ಪೊಲೀಸ್ ಪ್ರವೇಶವಾಯಿತು. ಹೆದರಿದ ಮಕ್ಕಳು ಬಾಗಿಲು, ಕಿಟಕಿಗಳನ್ನು ಬಂದ್ ಮಾಡಿದ್ದರು. ಅವರ ಉಸಿರಾಟಕ್ಕೆ ತೊಂದರೆಯಾಗುವುದನ್ನ ತಪ್ಪಿಸಲು ಪೊಲೀಸ್ ಕಿಟಕಿಯನ್ನು ಒಡೆದು ಕಾರನ್ನು ಮತ್ತು ಮಕ್ಕಳನ್ನು ವಶಪಡಿಸಿಕೊಂಡರು. ಅದೇ ಊರಿಗೆ ಯಾಕೆ ಬಂದರು? ಎಂದರೆ ಅವರಲ್ಲಿನ ದೊಡ್ಡ ಹುಡುಗ ತನ್ನ ಬಾಲ್ಯವನ್ನು ಆ ಊರಿನಲ್ಲೇ ಕಳೆದಿದ್ದ. fishing ಮಾಡಲು ಹೊರಟೆವು, ಮನೆಗೆ ಹಿಂದಿರುಗುವ ಯೋಜನೆ ಇರಲಿಲ್ಲ, ದೊಡ್ಡವರಿಗೆ ಈ ವಿಷಯ ತಿಳಿದಿಲ್ಲ, ಎಂದೆಲ್ಲಾ ತಿಳಿಯಿತು. ಪೊಲೀಸರಿಗೆ ಅಚ್ಚರಿಯಾದ ವಿಷಯವೆಂದರೆ ಸುಮಾರು ಸಾವಿರಕ್ಕೂ ಹೆಚ್ಚಾದ ಆ ಪಯಣದ ಉದ್ದಕ್ಕೂ ಯಾರು ಡ್ರೈವ್ ಮಾಡಿದರು, ಹೇಗೆ?? ಎಂಬ ಪ್ರಶ್ನೆ ಕಾಡುತ್ತಿತ್ತು. ಕಡೆಗೆ ಇಬ್ಬರು ದೊಡ್ಡ ಹುಡುಗರು ಡ್ರೈವ್ ಮಾಡಿರಬೇಕು ಎಂದು ಊಹೆ ಮಾಡಿದರು. ಪಾಲಕರಿಗೆ ಮತ್ತು ಸರ್ಕಾರದ ಮಕ್ಕಳ ಸೇವೆ ವಿಭಾಗಕ್ಕೆ ಮಕ್ಕಳನ್ನು ಒಪ್ಪಿಸಿ ಸಮಾಧಾನದ ಉಸಿರುಬಿಟ್ಟರು. ಕಾಣೆಯಾಗಿ ತಲೆಬಿಸಿ ತಂದು ಅಷ್ಟು ಕಡಿಮೆ ಅವಧಿಯಲ್ಲಿ ಕಂಡುಸಿಕ್ಕಿದ್ದು, ತಲೆನೋವು ತೊಲಗಿ ಅವರಿಗೆ ಬಹಳ ಖುಷಿ ತಂದಿರಬೇಕು.
ಈ ಕೇಸಿನಷ್ಟು ಸುಲಭವಾದದ್ದಲ್ಲ ಆ ಇನ್ನೊಂದು ಕೇಸು. ಅದು ಇಡೀ ದೇಶದಲ್ಲಿ (ಕು)ಪ್ರಸಿದ್ಧಿಯಾದ, ಪೊಲೀಸರಿಗೆ ಮತ್ತು ಸಮಾಜಕ್ಕೆ ತೀವ್ರ ನೋವು, ದುಃಖವನ್ನು ತಂದುಕೊಟ್ಟ ಕೇಸು – ಅದು ಡೇನಿಯಲ್ ಮೋರ್ಕಂಬ್ ಎಂಬ ಹುಡುಗ ಕಾಣೆಯಾದದ್ದು. ಹದಿಮೂರು ವರ್ಷದ ಶಾಲಾ ಹುಡುಗ ಡೇನಿಯಲ್ sunshine Coast ಪ್ರದೇಶದ ಒಂದು ಪಟ್ಟಣ ವಾಸಿಯಾಗಿದ್ದ. ೨೦೦೩ ಇಸವಿಯಲ್ಲಿ ಆ ಶಾಲಾವರ್ಷದ ಕಡೆ ತಿಂಗಳಾದ ಡಿಸೆಂಬರ್ ನ ಒಂದು ದಿನ ಡೇನಿಯಲ್ ಬಸ್ಸಿಗಾಗಿ ಕಾಯುತ್ತಿದ್ದ. ಪಟ್ಟಣದ ಒಂದು ಮಾರುಕಟ್ಟೆಗೆ ಹೋಗುವುದಿತ್ತು. ಬಸ್ಸೇನೋ ಬಂತು ಆದರೆ ಅವನು ನಿಂತಿದ್ದ ಜಾಗ ಸರಿಯಾದ ಬಸ್ ನಿಲ್ದಾಣವಲ್ಲ, ಬಸ್ ಅದಾಗಲೇ ತಡವಾಗಿತ್ತು, ಎಂಬ ಕಾರಣದಿಂದ ಅದು ಅವನಿಗಾಗಿ ನಿಲ್ಲಲಿಲ್ಲ. ಪಾಪ, ಬಸ್ ಚಾಲಕ ರೇಡಿಯೋ ಮೆಸೇಜ್ ಕಳಿಸಿ ಹುಡುಗ ಒಬ್ಬಂಟಿಯಾಗಿ ಬಸ್ಸಿಗಾಗಿ ಕಾಯುತ್ತಿದ್ದು, ಮತ್ತೊಂದು ಬಸ್ ಅವನನ್ನು ಪಿಕ್ ಅಪ್ ಮಾಡಬೇಕು ಎಂದು ಹೇಳಿದ್ದ.
ಕೆಲ ನಿಮಿಷಗಳ ನಂತರ ಬಂದ ಯಾರೋ ಆಗಂತುಕರ ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ಎಲ್ಲಿಗೋ ಹೊರಟುಬಿಟ್ಟಿದ್ದರು. ಅಲ್ಲಿಂದ ಮುಂದೆ ಎಂದೆಂದಿಗೂ ಅವನು ಯಾರಿಗೂ ಕಾಣಿಸಲಿಲ್ಲ. ಕೇಳಿದ ಎಲ್ಲರ ಎದೆ ಢವಢವಿಸಿತ್ತು, ರಕ್ತ ತಣ್ಣಗಾಗಿತ್ತು. ಅವನ ಅಪ್ಪ-ಅಮ್ಮಂದಿರು, ಸರ್ಕಾರ, ಪೊಲೀಸರು ಅವನನ್ನು ಹುಡುಕುತ್ತಾ ಇಡೀ ಒಂದು ದಶಕವನ್ನೇ ಕಳೆದರು. ರಾಣಿರಾಜ್ಯದ ಅತ್ಯಂತ ದುಬಾರಿ ಕಾಣೆಯಾದವರ ಕೇಸ್ ಎಂದು ಇದು ಪ್ರಸಿದ್ಧಿಯಾಯ್ತು. ಡೇನಿಯಲ್ ಬಗ್ಗೆ ಸುಳಿವು ಕೊಟ್ಟವರಿಗೆ, ಹುಡುಕಿಕೊಟ್ಟವರಿಗೆ ಅನೇಕ ಬಹುಮಾನಗಳನ್ನು ಘೋಷಿಸಿದ್ದರು. ಇಡೀ ದೇಶವೇ ಅವನಿಗಾಗಿ ಕಂಬನಿ ಸುರಿಸಿತ್ತು, ಬೇಕಾದಷ್ಟು ದೇಣಿಗೆ ಕೊಟ್ಟು ಅವನ ಹುಡುಕಾಟದ ಖರ್ಚುಗಳನ್ನು ಭರಿಸಿತ್ತು. ಇಸವಿ ೨೦೧೧ ಆಗಸ್ಟ್ ತಿಂಗಳಿನಲ್ಲಿ ಅವನನ್ನು ಅಪಹರಿಸಿ ಸಾಯಿಸಿದ ವ್ಯಕ್ತಿಯನ್ನು ಪೊಲೀಸರು ಸಾಕ್ಷಿಸಮೇತ ಬಂಧಿಸಿದರು. ಆದರೆ ಅವನ ಬಂಧನಕ್ಕೂ ಮುನ್ನ ಕೇಸ್ ಮುಂದುವರೆಯಲು ಡೇನಿಯಲ್ ತಂದೆ-ತಾಯಿ ಸಾಕಷ್ಟು ಬೆವರು ಹರಿಸಿ ನ್ಯಾಯಾಲಯದ ಬಾಗಿಲನ್ನು ಕೊನೆಯಿಲ್ಲದಷ್ಟು ತಟ್ಟಿದ್ದರು. ಅವರ ಬೆಂಬಿಡದ ಪರಿಶ್ರಮದಿಂದ ಮಾತ್ರ ಹುಡುಗನ ಅಪಹರಣ ಮತ್ತು ಕೊಲೆಯ ವಿವರಗಳು ಸಂಪೂರ್ಣವಾಗಿ ಬೆಳಕಿಗೆ ಬಂತು.
ಹುಡುಕಾಟದ ದಶಕದಲ್ಲಿ, ಆ ನಂತರ ಮತ್ತು ಈಗಲೂ ಡೇನಿಯಲ್ ತಂದೆತಾಯಿ ಹಲವಾರು ಗುರುತರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಸ್ಥಾಪಿಸಿದ ಡೇನಿಯಲ್ ಮೋರ್ಕಂಬ್ ಫೌಂಡೇಶನ್ ಮೂಲಕ ರಾಣಿರಾಜ್ಯದ ಪ್ರತಿಯೊಂದು ಶಾಲೆಗೂ ಸ್ವತಃ ತಾವೇ ಹೋಗಿ ಮಕ್ಕಳಿಗೆ ಅವರ ಖಾಸಗಿ ಸುರಕ್ಷತೆ ಮತ್ತು ಅಪಾಯಗಳನ್ನು ಗುರುತಿಸುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ದೇಶದ ಹಲವು ಭಾಗಗಳನ್ನು ಸುತ್ತುತ್ತಾ ಶಾಲೆಗಳಿಗೆ ಹೋಗಿ ಮಕ್ಕಳು ತಮಗೇ ಗೊತ್ತಿಲ್ಲದೆ ಹೇಗೆ ದುರ್ಬಲ ಸನ್ನಿವೇಶಗಳಿಗೆ ಸಿಲುಕುತ್ತಾರೆ ಎನ್ನುವ ಬಗ್ಗೆ ಮಾತನಾಡಿ ತಮ್ಮ ಮಗನ ಉದಾಹರಣೆಯನ್ನು ಹೇಳುತ್ತಾ ಅವನು ಆ ಸನ್ನಿವೇಶದಲ್ಲಿ ಏನು ಮಾಡಬೇಕಿತ್ತು ಎನ್ನುವುದನ್ನು ಮಕ್ಕಳೊಡನೆ ಚರ್ಚಿಸುತ್ತಾರೆ. ಪ್ರತಿವರ್ಷವೂ ಡೇನಿಯಲ್ ಕಾಣೆಯಾದ ದಿನವನ್ನು ಮಕ್ಕಳ ಸುರಕ್ಷತಾ ದಿನವನ್ನಾಗಿ ಆಚರಿಸುತ್ತಾರೆ. ಕಾಣೆಯಾದ ಮಕ್ಕಳ ಪಾಲಕರ ಜೊತೆ ನಿಂತು ಅವರಿಗೆ ಧೈರ್ಯ ತುಂಬುತ್ತಾ ಸಹಕರಿಸುತ್ತಾರೆ.
ಜನರು ನಾನಾ ಕಾರಣಗಳಿಗಾಗಿ ಕಾಣೆಯಾಗುತ್ತಾರೆ. ಮರೆವು, ಮಾನಸಿಕ ಅಸ್ವಸ್ಥತೆ, ವಯಸ್ಸಿನ ಪರಿಣಾಮಗಳು, ಖಿನ್ನತೆ, ಮತ್ತು ಅಪಹರಣಗಳು ಒಂದೆಡೆ ಕಾರಣಗಳಾದರೆ ಇನ್ನೊಂದೆಡೆ ಇರುವುದು ಬೇಕಾಗಿಯೇ ಕಾಣೆಯಾಗುವುದು. ಯಾರಿಗೂ ಕಾಣಿಸದಂತೆ ಎಲ್ಲೋ ಒಂದುಕಡೆ ಹೋಗಿ ಕೆಲದಿನ ಇದ್ದು ಬರುವ ಒಳಮನಸ್ಸಿನ ಕಳ್ಳ ಆಸೆ ನಮಗೆಲ್ಲರಿಗೂ ಇದ್ದದ್ದೇ! ಆದರೆ ನಮ್ಮ ಕಳ್ಳ ಸುಖಾಸುಮ್ಮನೆ ಆಸೆಗೂ ನಿಜವಾಗಿಯೂ ಕಾಣೆಯಾಗುವವರ ಬದುಕಿಗೂ ಮಧ್ಯೆ ಇರುವ ಗೆರೆ ಲಕ್ಷ್ಮಣರೇಖೆ.
ಅಂದಹಾಗೆ ಆಸ್ಟ್ರೇಲಿಯಾದಲ್ಲಿ ಪ್ರತಿ ಆಗಸ್ಟ್ ನಾಲ್ಕರಿಂದ ಹತ್ತನೇ ತಾರೀಖಿನವರಗೆ ‘ರಾಷ್ಟ್ರೀಯ ಕಾಣೆಯಾದವರ ವಾರ’ ಎಂದು ಆಚರಿಸುತ್ತಾರೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.