1923ರಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಹೆಗಡೆಯವರ ಹುಟ್ಟೂರು ಕುಮಟಾ ತಾಲ್ಲೂಕಿನ ಹೊಲನಗದ್ದೆ.  ಸಾಂಗ್ಲಿಯ ವಿಲಿಂಗ್ಡನ್‌ ಕಾಲೇಜಿನಲ್ಲಿ ಬಿ.ಎ., ಪದವಿ ಪಡೆದವರು. ಮುಂಬಯಿ ಹಾಗೂ ಪೂನಾ ವಿಶ್ವವಿದ್ಯಾಲಯಗಳಿಂದ ಸಂಸ್ಕೃತ ಹಾಗೂ ಕನ್ನಡಗಳಲ್ಲಿ ಎಂ.ಎ., ಪದವೀಧರರಾದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ. ಪದವಿ (1968). ಹತ್ತು ಜನಪದ ಸಾಹಿತ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಿಮ್ಮಕ್ಕನ ಪದಗಳು, ಗೊಂಡರ ಪದಗಳು, ಗಮಟೆಯ ಪದಗಳು ಇತ್ಯಾದಿ ಒಟ್ಟು ಮೂವತ್ತು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಎಲ್ಆರ್. ಹೆಗಡೆ ಎಂದೇ ಗುರುತಿಸಿಕೊಂಡ  ಅವರು ಬರೆದ ಒಂದು ಕಾವ್ಯ ಕುಸುಮ ಇಲ್ಲಿದೆ:

ರಂಪಣಿ ದೋಣಿ

ಬಡ್ತನ್ದಲ್ಲೇ ಹುಟ್ಬೆಳ್ದೋರು
ಬಡ್ತನ್ದಲ್ಲೇ ಸಾಯ್ವೋರಾದ್ರೂ
ಬಡ್ತನದ ಸಂಗ್ತೀ ಹೊಡ್ದಾಡ್ಕಂಡು
ದುಡ್ಯೋರ್ನಾವು
ನಮ್ದು ರಂಪ್ಣಿ ದೋಣೀ ||

ಕಡ್ಲಾಗೆಷ್ಟು ಮೀನಿದ್ರೇನು?
ದುಡೀದೆ ಬಂದ್‌ ಬಂದ್‌ ಬೀಳ್ತದ್ಯೇನು?
ಹಿಡಿಬೇಕೆಂತ ಎಷ್ಟಾದ್ರೂನೂ
ಹೊರ್ಟೇವ್ನಾವು |
ನಮ್ದು ರಂಪ್ಣಿ ದೋಣೀ ||

ಅಡ್ವೀಮರಗೊಳ ನೆರಳಿದ್ದಂತೆ
ದೊಡದೊಡ ಬಲಿಗಳ ನೆಯ್ದಿಟ್ಕೊಂತ
ಮಾರೀಬಲೆಗಳ ಮಾಡ್ಕೊಂಡವ್ರೆ
ಸಣ್ಬಿನ್ನುಗ್ಲಿಂದ |
ನಮ್ದು ರಂಪ್ಣಿ ದೋಣೀ ||

ಮೀನ್ಗೊಳ್‌ ನೀರಲ್‌ ಕಪ್ಕಪ್ಪಾಗಿ
ಗುಂಪಾಗ್‌ ಕಂಡಾಗ್‌ ಹೋಗ್ತೇವ್ಬೇಗ
ದೋಣೀ ಬಿಟ್ಕಂಡು
ನಮ್ದು ರಂಪ್ಣಿ ದೋಣೀ ||

ವಬ್ರಿಗ್‌ ಕಮ್ಮಿ ವಬ್ರಿಗ್‌ ಹೆಚ್ಚು
ಪರ್ಪಂಚಿಲ್ದೇ ಸಮ್ನಾಗ್‌ ಹಚ್ಚು
ತತ್ವಾ ಅಟ್ಕಂಡ್‌ ಬಲೆ ಚಾಚು
ಕೆಲ್ಸ ಮಾಡ್ವವ್ರು ||
ನಮ್ದು ರಂಪ್ಣಿ ದೋಣೀ ||

ರಾತ್ರಿ ಹಗ್ಲುಯೆಂಬೂದಿಲ್ಲ
ಥಂಡಿ ಬಿಸ್ಲು ತಾಗೂದಿಲ್ಲ
ದೋಣಿಮನೆ ಒಂದೆಯೆಲ್ಲಾ
ಸಮುದ್ರದ್‌ ಸಂಸಾರ |
ನಮ್ದು ರಂಪ್ಣಿ ದೋಣೀ ||
ಕೋಳಿ ಬಲಿಕೊಟ್ರೆ ಜಾಸ್ತಿ
ಜಟ್ಗಾಬಿಟ್ಗಾ ದೆವ್ವಮಾಸ್ತಿ
ಮಾಡ್ತವೆ ನಮ್ಗೆ ಬಲೆಸೂಸ್ತಿ
ಸಂದ್ರ ನೀರ್ನಲ್ಲಿ |
ನಮ್ದು ರಂಪ್ಣಿ ದೋಣೀ ||

ಪಾಪ ಪುಣ್ಯ ಅಂಬೂದ್ಯೆಲ್ಲ
ಬ್ರಾಂಬ್ರೀಗಿರ್ಲಿ ನಮ್ಗ್ಯೇನಿಲ್ಲ
ಕೊಂದ ಬಂದ ಪಾಪ ತಿಂಬೂದಿಲ್ಲ
ಸುಮ್ಮಂಗ್‌ ಮನ್ಗವೋರು |
ನಮ್ದು ರಂಪ್ಣಿ ದೋಣೀ ||

ಹೆಂಡ ಕುಡ್ಯೋದ್‌ ಬಿಡಬೇಕಂತ
ಬ್ರಾಂಬ್ರೀಗುಪದೇಸ ಮಾಡ್ಬೇಕಿಂಥ
ಥಂಡೀನೀರ್ನಲ್‌ ಕೆಲ್ಸ ಗೈತ
ಹೆಂಡ ಕುಡಿಬೇಕು |
ನಮ್ದು ರಂಪ್ಣಿ ದೋಣೀ ||