ಮಾತನಾಡದೇ ಹೊರಹೋದವಳ ಬೆನ್ನು ದಿಟ್ಟಿಸುತ್ತ ತಟಸ್ಥಳಾಗಿ ಆಫೀಸಿನ ಸೋಫಾದ ಮೇಲೆಯೇ ಕುಸಿದುಬಿಟ್ಟೆ. ನನಗರಿವಿಲ್ಲದೇ ಎದೆಯ ಮುಂದೆ ಕೈಕಟ್ಟಿಕೊಂಡು ಕುಳಿತೆ. ಪ್ರಕಟವಾಗಿರುವ ಸಂದರ್ಶನಗಳು, ನ್ಯೂಸ್ ಪ್ರತಿಕ್ರಿಯೆಗಳನ್ನೆಲ್ಲ ಇನ್ನೊಮ್ಮೆ ತೆಗೆದು ನೋಡಿದೆ. ಎಲ್ಲಿಯೂ ಈ ಮ್ಯಾರಥಾನಿನಲ್ಲಿ ಟಾಪ್‌ಲೆಸ್ ಓಡುವುದಿಲ್ಲ ಅಂತ ನಾನು ಸ್ಪಷ್ಟವಾಗಿ ಹೇಳಿರಲಿಲ್ಲ. ಎಲ್ಲಿಯೂ ಆ ಮಾತೇ ಬಂದಿರಲಿಲ್ಲ. ಸಾವಿರದ ಸಂಖ್ಯೆಯಲ್ಲಿ ಹೆಂಗಸರು ತೆರೆದೆದೆಯಲ್ಲಿ ಓಡುವುದು, ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರೂ ನನ್ನನ್ನು ಅಭಿನಂದಿಸುವುದು, ನಮ್ಮ ಕಂಪನಿಯ ಹೆಸರು ಎಲ್ಲರ ಮನದಲ್ಲೂ ನೆಲೆಸುವುದು…
ಕಾವ್ಯಾ ಕಡಮೆ ಬರೆದ ಕತೆ “ತೊಟ್ಟು ಕ್ರಾಂತಿ” ನಿಮ್ಮ ಈ ಭಾನುವಾರದ ಓದಿಗೆ

 

“ಇಲ್ಲಿಂದ ನಾವು ದೊಡ್ಡ ಕ್ರಾಂತಿಯನ್ನೇ ಮಾಡಲಿದ್ದೇವೆ!” ಅಂತ ನನ್ನ ಅಸಿಸ್ಟಂಟ್ ಲೌರೀನ್ ಹೇಳಿದಾಗಲೇ ನನಗೆ ಅರ್ಥವಾಗಬೇಕಿತ್ತು, ಇದು ಮುಂದೆ ನನ್ನ ಬುಡಕ್ಕೇ ಬರುತ್ತದೆ ಎಂದು. ಮಹತ್ವವಾದ ಯಾವುದಕ್ಕೋ ಸಲ್ಲುತ್ತಿದ್ದೇವೆ ಎಂಬ ನಶೆ ಒಮ್ಮೆ ಏರಿತೆಂದರೆ ಆ ಶಿಖರದಿಂದ ಮತ್ತೆ ಇಳಿಯೋದು ಕಷ್ಟ. ವೈಯಕ್ತಿಕವಾದ ಎಲ್ಲವನ್ನೂ ಸಾರ್ವತ್ರಿಕಗೊಳಿಸಲು ಬೇಕಾದ ಕೀಲಿಕೈ ಇಂಥ ಒಂದು ಅಮಲಿನಲ್ಲಿರುತ್ತದೆ. ಸಿನಿಮಾ ತಾರೆಯರು ಪಲ್ಲಂಗದ ವಿಷಯವನ್ನೂ ಎಗ್ಗಿಲ್ಲದೇ ಮಾತನಾಡುತ್ತಾರಲ್ಲ, ಹಾಗೆಯೇ ಇದು. ತೊಟ್ಟು ಕ್ರಾಂತಿಯ ವಿಷಯಕ್ಕೆ ಬಂದಾಗ ನನಗೇರಿದ್ದ ಮತ್ತೂ ಅಂಥದೇ.

ಶುಕ್ರವಾರದ ಆ ಸಂಜೆಯ ಐಡಿಯಾ ಮೀಟಿಂಗಿನಲ್ಲಿ ಹೊಸ ಹುಡುಗ ಹುಡುಗಿಯರ ಹುರುಪು ಕಂಡು ನನಗೂ ಉಮೇದು ಬಂದಿತ್ತು. ತಿಂಗಳಿಗೊಮ್ಮೆ ಕಂಪನಿಯಲ್ಲಿ ಯಾವ ಪ್ರೊಟೋಕಾಲ್‌ಗಳೂ ಇಲ್ಲದೇ ‘ಹೊಸ ವಿಚಾರಗಳಿದ್ದವರಿಗೆಲ್ಲ ಸ್ವಾಗತ’ ಎಂಬ ಒಕ್ಕಣಿಕೆ ಹೊತ್ತು ನಡೆಯುವ ಈ ಐಡಿಯಾ ಮೀಟಿಂಗುಗಳಿಗೆ ನಾನೂ ಇದಿರು ನೋಡುತ್ತಿರುತ್ತೇನೆ. ಈಗಷ್ಟೇ ಇಂಟರ್ನ್‌ಗಳಾಗಿ ಸೇರಿದ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕಂಪನಿಯ ಸೃಜನಾತ್ಮಕ ನಿಲುವಿಗೆ ಯಾವ ರೀತಿಯಿಂದಲೂ ಸಂಬಂಧಪಡದ ಇನ್-ಹೌಸ್ ಲಾಯರ್‍ಗಳ ತನಕ ಎಲ್ಲರಿಗೂ ಈ ಸಭೆಗೆ ಆಹ್ವಾನವಿರುತ್ತದೆ.

ಈ ಮೀಟಿಂಗಿನಲ್ಲಿ ಮುಖ್ಯವಾಗಿ ಭಾಗವಹಿಸುವವರು ಎಳೆಯರು. ನನ್ನ ಮಗಳು ಸಹನಾಳ ಕೆಲ ಕ್ಲಾಸುಮೇಟುಗಳೂ ಈ ಗುಂಪಿನಲ್ಲಿದ್ದಾರೆ. ಸಹನಾ ಈಗ ನ್ಯೂಯಾರ್ಕಿನಲ್ಲಿಲ್ಲ. “ನಿನ್ನ ಕಾರ್ಪೊರೆಟ್ ಸಂಸ್ಕೃತಿ ಹಾಳು ಬೀಳಲಿ. ನಾನು ರೈಟರ್ ಆಗಬೇಕು” ಎಂದು ಲಾಸ್ ಆಂಜಲಿಸ್‌ನಲ್ಲಿ ರೈಟಿಂಗ್ ಕೋರ್ಸ್ ಒಂದಕ್ಕೆ ಸೇರಿಕೊಂಡಿದ್ದಾಳೆ. ಒಳಗೆಲ್ಲೋ ನನಗೆ ಇಂದಲ್ಲ ನಾಳೆ ಅವಳಿಗೆ ಜ್ಞಾನೋದಯವಾಗುತ್ತದೆ, ನ್ಯೂಯಾರ್ಕಿಗೆ ಮರಳಿ ಬಂದೇ ಬರುತ್ತಾಳೆ ಎಂಬ ನಂಬಿಕೆಯಿದೆ.

ಐಡಿಯಾ ಮೀಟಿಂಗಿನಲ್ಲಿ ಚೈನ್ ಆಫ್ ಕಮಾಂಡ್‌ನ ಕಿರಿಕಿರಿಯಿಲ್ಲದೇ ನೇರವಾಗಿ ಕಂಪನಿಯ ಸಿಇಓ ಜೊತೆಗೇ ತಮ್ಮ ಯೋಚನೆಗಳನ್ನು ಹಂಚಿಕೊಳ್ಳಬಹುದು ಎಂಬ ಉತ್ಸಾಹ ಈ ಕೋಣೆಯಲ್ಲಿ ಸೇರಿದ ತರುಣರ ಚಲನವಲನದಲ್ಲೇ ಸೇರಿ ಹೋಗಿದೆ. ಲೌರೀನ್‌ಳಿಗೆ ಕೂಡ ಅದೊಂದು ಮೀಟಿಂಗಿನಲ್ಲಿ ನನ್ನ ಅಸಿಸ್ಟಂಟ್ ಕೆಲಸದಿಂದ ರಜಾ. ನಾನು ಹೇಳಿದ್ದನ್ನು ಮಾತ್ರ ಬರೆದುಕೊಳ್ಳುತ್ತ ನನ್ನ ಮೂರನೆಯ ಕೈಯಂತೆ ಇರುವವಳು, ಅದೊಂದು ದಿನ ತನಗನಿಸಿದ್ದನ್ನು ಹೇಳಬಹುದು ಎಂಬ ಸ್ವಾತಂತ್ರ್ಯ ದೊರಕಿಸಿಕೊಂಡಿದ್ದಾಳೆ. ಕಂಪನಿಯ ಸಿಇಓಳ ಅಸಿಸ್ಟಂಟ್ ಎಂಬ ಭಾರವಿಲ್ಲದೇ ತನ್ನದೇ ವಯಸ್ಸಿನ ಹುಡುಗ ಹುಡುಗಿಯರೊಟ್ಟಿಗೆ ಬೆರೆತರೂ ಅಲ್ಲಿ ನೆರೆದವರೆಲ್ಲರಿಗಿಂತ ತಾನು ವಿಶೇಷವಾದವಳು ಎಂಬ ಪ್ರಭೆ ಲೌರೀನ್‌ಳ ವ್ಯಕ್ತಿತ್ವದಲ್ಲೇ ಬೆರೆತು ಹೋಗಿರುವುದನ್ನು ಗಮನಿಸಿ ಮುಗುಳ್ನಕ್ಕಿದ್ದೇನೆ. ಅದೊಮ್ಮೆ ಮಾತ್ರ ನನ್ನ ನೋಟ್‍ಪ್ಯಾಡ್- ಪೆನ್ನನ್ನು ನಾನೇ ಕೊಂಡೊಯ್ಯುತ್ತೇನೆ.

ಮಾತುಮಾತಿಗೆ ಮ್ಯಾಮ್ ಅನ್ನದೇ ಅಮೆರಿಕನ್ ಶಿಷ್ಟಾಚಾರದ ಅನುಸಾರವಾಗಿ ‘ಶಾಲಿನಿ’ ಎಂಬ ನನ್ನ ಮೊದಲ ಹೆಸರು ಹಿಡಿದೇ ಕರೆದರೂ ಈ ಎಳೆಯರ ಕಣ್ಗಳಲ್ಲಿ ಮನೆಮಾಡಿದ ಅಭಿಮಾನದ ಕುರಿತು ನನಗೆ ಅರಿವಿದೆ. ಅದನ್ನು ತುಸು ಬಿಡುಬೀಸಾಗಿಯೇ ನನ್ನ ಮಾತು- ನಿಲುವುಗಳಲ್ಲಿ ತೋರಿಸಿಕೊಳ್ಳುತ್ತೇನೆ ಎಂದು ಮಾರ್ಕ್ ನನ್ನ ಮೂಡು ಸರಿಯಿದೆಯೇ ಎಂದು ಖಚಿತಪಡಿಸಿಕೊಂಡು ಒಮ್ಮೊಮ್ಮೆ ಹಾಸ್ಯ ಮಾಡುತ್ತಾನೆ. ನನಗೇನೂ ಆ ಬಗ್ಗೆ ಅಂಥ ಸಂಕೋಚವಿಲ್ಲ. “ಇಂದಿನ ಯುವಕರೇ ಮುಂದಿನ ಮುತ್ಸದ್ದಿಗಳು. ದೇಹಕ್ಕೆ ವಯಸ್ಸು ಎಷ್ಟೇ ಆಗಿರಲಿ, ಮನಸ್ಸು ಲವಲವಿಕೆಯಿಂದಿರಬೇಕಾದರೆ ಎಳೆಯರ ಜೊತೆ ಬೆರೆಯಬೇಕು” ಎಂದು ಮ್ಯಾನೇಜ್‌ಮೆಂಟ್ ಪುಸ್ತಕಗಳಲ್ಲಿ ಓದಿದ ತಿಪ್ಪೆಯನ್ನೇ ಇಲ್ಲಿಯೂ ಸಾರುತ್ತೇನೆ. ಈಗ ಐವತ್ತರ ಹೊಸ್ತಿಲಲ್ಲಿರುವ ನನ್ನ ಆತ್ಮವಿಶ್ವಾಸ ಕಾಯ್ದುಕೊಳ್ಳಲು ಹೀಗೆ ಯಾರೂ ಕ್ಯಾರೇ ಅನ್ನದ ಯಕಶ್ಚಿತ್ ಇಂಟರ್ನ್‌ಗಳ ಜೊತೆಗೆ ಬೆರೆಯುವುದು ದಿನವೂ ಮುಂಜಾನೆ ಇಯರ್‌ಫೋನು ಹಾಕಿಕೊಂಡು ಸೆಂಟ್ರಲ್ ಪಾರ್ಕಿನಲ್ಲಿ ಓಡಿದಂತೆಯೇ, ಇಷ್ಟವಿಲ್ಲದಿದ್ದರೂ ಮಧ್ಯಾಹ್ನದ ಊಟಕ್ಕೆ ಕಿನ್ವಾ ತಿಂದಂತೆಯೇ, ಮಾರ್ಕ್‌ನಂಥ ತರುಣನನ್ನು ಬಾಯ್‌ಫ್ರೆಂಡಾಗಿ ಇರಿಸಿಕೊಂಡಂತೆಯೇ ಒಂದು ಅವಶ್ಯಕತೆಯಿರಬಹುದೇನೋ ಎಂಬ ಸಂಶಯ ಆಗಾಗ ನನ್ನೊಳಗೆ ಸುಳಿದು ಹೋಗಿದೆ.

ಹಾಗಂತ ನಾನೇನು ಅಮೆರಿಕದ ಕುರಿತು ಮುಜುಗರದ ಧನ್ಯತೆಯಿಂದ ನಡೆದುಕೊಳ್ಳುವುದಿಲ್ಲ. ಈ ದೇಶದಲ್ಲಿ ನೆಲೆಸಿ ಮೂವತ್ತು ವರ್ಷಗಳೇ ಕಳೆದರೂ ನನ್ನ ಭಾರತೀಯ ಇಂಗ್ಲೀಷ್ ಪಲುಕನ್ನು ಕೂಡ ಬೇಕೆಂದೇ ಉಳಿಸಿಕೊಂಡಿದ್ದೇನೆ. ಅದು ನ್ಯೂಯಾರ್ಕಿನ ಪ್ರಭಾವಿ ವಲಯಗಳಲ್ಲಿ ಬೆರೆಯುವಾಗ ಇಲ್ಲಿನ ಜನ ಭಾರತೀಯತೆಗೆ ಅನುಗ್ರಹಿಸಿರುವ ಎಕ್ಸಾಟಿಕ್ ಅಂಶವನ್ನು ಎತ್ತಿ ಹಿಡಿಯುತ್ತದೆ ಎಂಬುದು ನನಗೆ ಗೊತ್ತಿದೆ. ನ್ಯೂಯಾರ್ಕಿನಂಥ ನ್ಯೂಯಾರ್ಕಿನಲ್ಲೇ ಯಶಸ್ಸು ಕಂಡಿರುವ ನನ್ನ ಅಮೆರಿಕನ್ ಡ್ರೀಮ್ ಸ್ಟೋರಿಯನ್ನು ಮಾತಿನಲ್ಲಿ ಹೇಗೆ ಮಿಳಿತವಾಗಿಸಬೇಕು ಎಂಬ ಪಾಠವನ್ನು ಅನುಭವದಿಂದ ಕಲಿತಿದ್ದೇನೆ. ಈ ಯುವವರ್ಗದ ಜೊತೆಗೆ ಸಂವಹಿಸುವಾಗಲೂ ಆ ಅಂಶ ನನಗೆ ಮರೆತು ಹೋಗುವುದಿಲ್ಲ.

“ಭಾರತದಲ್ಲಿ ಶಿವಮೊಗ್ಗದ ಶರಾವತಿ ನಗರ ಎಂಬಲ್ಲಿ ನಾನು ಬೆಳೆಯುವಾಗ ನಮ್ಮ ಮನೆಯ ಮುಂದೆ ಓಪನ್ ಗಟಾರ ಹರಿಯುತ್ತಿತ್ತು ಗೊತ್ತೇ? ಮುಂಬಾಗಿಲು ರಸ್ತೆಗೇ ತಾಗಿತ್ತು. ಮಳೆ ಸುರಿದಾಗ ಗಟಾರದ ನೀರು ಹೊಸ್ತಿಲಿಗೇ ನುಗ್ಗುತ್ತಿತ್ತು” ಎಂದು ನಾನು ಮಾತನಾಡಲು ತೊಡಗಿದರೆ ರೆಯೋಸ್‌ನಿಂದ ತರಿಸಿದ ಪಿಜ್ಜಾ ತ್ರಿಕೋನಗಳು ತಣ್ಣಗಾಗುತ್ತ ಬಿದ್ದಿದ್ದರೂ ಅದರ ಪರಿವೆಯಿಲ್ಲದೇ ಈ ಹುಡುಗ ಹುಡುಗಿಯರು ಕಣ್ಣು ಬಾಯಿ ಬಿಟ್ಟುಕೊಂಡು ಕುಳಿತುಬಿಡುತ್ತಾರೆ. ಇವರನ್ನು ಗೆಲ್ಲಲು ತೆರೆದ ಗಟಾರಗಳು, ಟ್ರೇನಿನಲ್ಲಿ ಹಾಡುತ್ತಲೇ ಬೊಗಸೆಯೊಡ್ಡುವ ಭಿಕ್ಷುಕರು, ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರಂತೆ ನಿಂತೇಬಿಟ್ಟಿರುವ ದನಗಳು, ಲೋಡ್ ಶೆಡ್ಡಿಂಗ್ ಮುಂತಾದ ಪ್ರತಿಮೆಗಳನ್ನು ಆಗಾಗ ನಿಸ್ಸಂಕೋಚವಾಗಿ ನಾನು ಬಳಸುವುದುಂಟು. ಇದೆಲ್ಲ ಈ ಹುಡುಗರಿಗೆ ಪುಸ್ತಕದಲ್ಲೋ, ಸಿನಿಮಾದಲ್ಲೋ ಮಾತ್ರ ಕಂಡು ಗೊತ್ತಿರುವ ಆಗಂತುಕ ಲೋಕ. ಶಿವಮೊಗ್ಗೆಯ ಮಧ್ಯಮ ವರ್ಗದ ಮನೆಯಲ್ಲಿ ತಕ್ಕಮಟ್ಟಿನ ಸವಲತ್ತುಗಳ ಜೊತೆಗೇ ಬೆಳೆದ ನನಗೂ ಆ ಪ್ರತಿಮೆಗಳು ಅವರಷ್ಟೇ ಅಪರಿಚಿತವಾದವು ಎಂಬ ಗುಟ್ಟನ್ನು ಮಾತ್ರ ನಾನು ತಪ್ಪಿಯೂ ಬಿಟ್ಟು ಕೊಡುವುದಿಲ್ಲ.

“ನೋಡಿ, ಅಲ್ಲಿದ್ದವಳು ಇಲ್ಲಿ ನಿಮ್ಮ ಮುಂದೆ ಕುಳಿತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಎರಡೇ. ಒಂದು ಅಮೆರಿಕಾ. ಇನ್ನೊಂದು ನನ್ನೊಳಗಿದ್ದ ಛಲ” ಎಂದೆಲ್ಲ ಬುರುಡೆ ಬಿಟ್ಟು ಆಡಿದ ಮಾತಿಗೆ ತೂಕ ಬರಲೆಂದು ಮನಸ್ಸಿನಲ್ಲೇ ಅರವತ್ತೆಣಿಸುತ್ತ ಮೌನವಾಗಿ ಕುಳಿತೇಬಿಟ್ಟಿದ್ದೇನೆ. ಮ್ಯಾನೇಜ್‌ಮೆಂಟ್ ಪುಸ್ತಕದ ಈ ಟ್ರಿಕ್ ಕೆಲಸ ಮಾಡಿದಂತೆ ಕಾಣಿಸುತ್ತದೆ.

*****

ಅಂದಾಗಿದ್ದೂ ಅದೇ. ಏಪ್ರಿಲ್ ತಿಂಗಳ ಆ ಶುಕ್ರವಾರದ ಸಂಜೆ ಹಾಲ್ ಎ ಎಂದು ಬಾಗಿಲ ಮೇಲೆ ಚಿನ್ನದ ಬಣ್ಣದ ಅಕ್ಷರಗಳಲ್ಲಿ ಬರೆದುಕೊಂಡಿದ್ದ ಕಾನ್ಫರನ್ಸ್ ರೂಮು ಯುವ ದನಿಗಳಿಂದ ಚಿಲಿಪಿಲಿಗುಟ್ಟುತ್ತಿತ್ತು. ಇಲ್ಲಿ ನೆರೆದವರೆಲ್ಲ ಈ ಮೀಟಿಂಗು ಮುಗಿಯುವ ತನಕವಾದರೂ ಸಮಾನರು ಎಂದು ಸಾರುವಂತೆ ಮೇಜು- ಕುರ್ಚಿಗಳನ್ನು ‘ಹಾಲೋ- ಸ್ಕ್ವೇರ್’ ಮಾದರಿಯಲ್ಲಿ ಜೋಡಿಸಲಾಗಿತ್ತು.

ಎಲ್ಲಕ್ಕಿಂತ ಮೊದಲು ಲೌರೀನ್, ನಾವು ಮುಂದಿನ ಹಣಕಾಸು ವರ್ಷದಿಂದ ಎಸ್-ಕಾರ್ಪ್‌ನಿಂದ ಸಿ-ಕಾರ್ಪ್ ಹಂತಕ್ಕೆ ಅಪ್‌ಗ್ರೇಡ್ ಆಗಲಿದ್ದೇವೆ ಎಂದು ಏರುದನಿಯಲ್ಲಿ ಸಾರಿದಾಗ ನೆರೆದವರೆಲ್ಲ ಒಮ್ಮೆ ನಿಂತಂತೆ ಮಾಡಿ ಚಪ್ಪಾಳೆ ತಟ್ಟಿದರು. ಎಸ್-ಕಾರ್ಪ್, ಸಿ-ಕಾರ್ಪ್ ಅಂದರೆ ಏನೆಂದು ಕೇಳಿ ಅವರನ್ನು ತಬ್ಬಿಬ್ಬುಗೊಳಿಸಲು ಯಾಕೋ ಆ ಖುಷಿಯ ಸಂದರ್ಭದಲ್ಲಿ ನನಗೆ ಮನಸ್ಸು ಬರಲಿಲ್ಲ. ಕರತಾಡನ ನಿಂತ ಮೇಲೆ ನಾನೇ ಮಾತಿಗೆ ತೊಡಗಿದೆ.

“ನಿಮಗೆಲ್ಲ ಗೊತ್ತಿರುವ ಹಾಗೆ ಸ್ಥಾಪನೆಯಾದ ಹದಿನೈದು ವರ್ಷಗಳಿಂದ ನಾವು ಎಸ್-ಕಾರ್ಪ್ ಕಂಪನಿಯಾಗಿದ್ದೆವು. ನಮ್ಮ ಶೇರುದಾರರ ಸಂಖ್ಯೆ ನೂರು ದಾಟುವಂತಿರಲಿಲ್ಲ. ಜೊತೆಗೆ ಅವರೆಲ್ಲ ಅಮೆರಿಕದ ಪ್ರಜೆಗಳೇ ಆಗಬೇಕಿತ್ತು. ಆದರೆ ಕಳೆದ ವರ್ಷ ನಮ್ಮ ಕಂಪನಿ ಬಿಡುಗಡೆ ಮಾಡಿದ ವ್ಯಾಲಿಡ್-ಜೆ ಸಾಫ್ಟವೇರು ವಿಶ್ವದಾದ್ಯಂತ ಸಂಚಲನ ಉಂಟು ಮಾಡಿಬಿಟ್ಟಿದೆ. ಯಾವುದೋ ಯಬಡೇಶಿ ಸಾಫ್ಟವೇರ್ ಇಂಜಿನಿಯರು ಹೇಗೆಹೇಗೋ ಬರೆದ ತಪ್ಪುಕೋಡ್‌ಗಳನ್ನು ಈಗ ಇನ್ನ್ಯಾರೋ ಡೀಬಗ್ ಮಾಡುತ್ತ ಕೂರಬೇಕಿಲ್ಲ. ವ್ಯಾಲಿಡ್-ಜೆ ಅಳವಡಿಸಿಕೊಂಡುಬಿಟ್ಟರೆ ಕಣ್ತಪ್ಪಿನಿಂದಾದ ಸಣ್ಣಸಣ್ಣ ತಪ್ಪುಗಳನ್ನೂ ಹೈಲೈಟ್ ಮಾಡಿ ತೋರಿಸಿಬಿಡುತ್ತದೆ. ಇದೊಂದೇ ವರ್ಷದಲ್ಲಿ ಕಂಪನಿಯ ವರಮಾನ ಎರಡುನೂರು ಮಿಲಿಯನ್‌ನಿಂದ ಐದುನೂರು ಮಿಲಿಯನ್ ದಾಟಿಬಿಟ್ಟಿದೆ. ಅಫ್‌ಕೋರ್ಸ್ ವ್ಯಾಲಿಡ್-ಜೆ ನಂತರದ ವರ್ಷನ್ ಆದ ವ್ಯಾಲಿಡ್-ಎಂ ಅನ್ನು ಇನ್ನು ನಾಲ್ಕು ತಿಂಗಳಲ್ಲಿ ಬಿಡುಗಡೆ ಮಾಡಲಿದ್ದೇವೆ.” ನಾನು ಮಾತು ಮುಂದುವರೆಸದಂತೆ ಇನ್ನೊಮ್ಮೆ ಚಪ್ಪಾಳೆಗಳ ಸುರಿಮಳೆಯಾಯಿತು.

“ಕಂಪನಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಇದೇ ಸರಿಯಾದ ಸಮಯ ಅಂತ ಬೋರ್ಡ್ ಆಫ್ ಡಿರೆಕ್ಟರ್ಸ್ ಎಲ್ಲರ ಒಮ್ಮತದ ಅಭಿಪ್ರಾಯವಾಗಿದೆ. ಹೀಗಾಗಿ ಮುಂದಿನ ಹಣಕಾಸು ವರ್ಷದಿಂದ ನಾವು ಸಿ-ಕಾರ್ಪ್ ಸ್ಟೇಟಸ್ಸಿಗೆ ಭಡ್ತಿ ಹೊಂದಲಿದ್ದೇವೆ. ಅಂದರೆ ಜಗತ್ತಿನಾದ್ಯಂತ ನಮ್ಮ ಶೇರುಗಳನ್ನು ಮಾರಾಟ ಮಾಡಬಹುದು, ಇದರಿಂದ ಕಂಪನಿಯೂ ಬೆಳೆಯುತ್ತದೆ. ಹೀಗೆಯೇ ಮುಂದುವರೆದರೆ ಇನ್ನೆರಡು ವರ್ಷಗಳಲ್ಲಿ ಕಂಪನಿಯ ಶೇರುಗಳನ್ನು ಪಬ್ಲಿಕ್ ಐಪಿಓ ಮಾಡುವ ಯೋಚನೆಯೂ ಇದೆ” ಎಂದಾಗ ಎಲ್ಲರ ಮುಖದ ಮೇಲೆ ತಾವೂ ಈ ಸಾಧನೆಯಲ್ಲಿ ಪಾಲುದಾರರು ಎಂಬ ಕಳೆಯಿತ್ತು.

“ಇಂದಿನ ಐಡಿಯಾ ಸೆಷನ್ನಿನಲ್ಲಿ ಅದೇ ವಿಚಾರವಾಗಿ ನಿಮ್ಮೆಲ್ಲರ ಸಹಾಯ ಬೇಕು. ನಮ್ಮ ಐವ್ಯಾಲಿಡ್ ಕಾರ್ಪ್‌ನ ಹೆಸರು ಜನರ ಮನಸ್ಸಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಇನ್ನೆರಡು ವರ್ಷಗಳಲ್ಲಿ ನಮ್ಮ ಶೇರುಗಳು ಪಬ್ಲಿಕ್ ಆದಾಗ ಜನ ಮುಗಿಬಿದ್ದು ಅವುಗಳನ್ನು ಖರೀದಿಸಬೇಕು. ಹಾಗೆ ಎಲ್ಲರ ಮನಸ್ಸಿನಲ್ಲಿ ಉಳಿಯುವಂಥ, ಸಾರ್ವಜನಿಕವಾಗಿ ಎಲ್ಲರೂ ಪಾಲ್ಗೊಳ್ಳುವಂಥ ಇವೆಂಟನ್ನು ಆಯೋಜಿಸಬೇಕು ಎಂದು ನಿರ್ಧರಿಸಿದ್ದೇವೆ. ವಿವರಗಳನ್ನು ನಾನು ಕಾರಣಾಂತರಗಳಿಂದ ಕೊಡಲಾಗದಿದ್ದರೂ ಬಜೆಟ್ ಕೂಡ ಭರ್ಜರಿಯಾಗಿಯೇ ಸಾಂಕ್ಷನ್ ಆಗಿದೆ. ಯಶಸ್ವಿಯಾದರೆ ಇದನ್ನು ವಾರ್ಷಿಕವಾಗಿ ನಡೆಸುವ ಯೋಚನೆಯೂ ಇದೆ…”

“…ಈಗ ಹೇಳಿ. ನೀವೆಲ್ಲ ಯುವಕರು. ಕೂದಲು ನೆರೆತ ನಮ್ಮಲ್ಲಿ ಹುಟ್ಟದ ಹೊಸ ವಿಚಾರಗಳು ನಿಮಗೆ ಹೊಳೆಯುತ್ತವೆ. ನಮಗೆ ಗೊತ್ತಿರದ ನೂರಾರು ವಿಷಯಗಳು ನಿಮಗೆ ಗೊತ್ತಿರುತ್ತವೆ. ಮುಂದಿನ ಎರಡು ಘಂಟೆಗಳಲ್ಲಿ ಯಾವ ಇವೆಂಟನ್ನು ಆಯೋಜಿಸಬೇಕು ಎಂದು ಪಕ್ಕಾ ಮಾಡಿಕೊಂಡೇ ಈ ಕೋಣೆಯಿಂದ ಹೊರಹೋಗಲು ನಾನಂತೂ ತಯಾರಾಗಿ ಬಂದಿದ್ದೇನೆ” ಎಂದು ಕಾಫಿ ಹೀರುತ್ತ ವಿರಾಮವಾಗಿ ಕುಳಿತುಬಿಟ್ಟೆ.

ಅಬಬಾ, ಎಲ್ಲರ ಮುಂದೆ ಆಸ್‌ಹೋಲ್ ಹಾಗೆ ಕಾಣಬಾರದು ಎಂಬ ಕಾರಣಕ್ಕೆ ಎಳೆಯ ವಯಸ್ಸಿನವರನ್ನು ಹೊಗಳುತ್ತೇವೆ ನಿಜ, ಆದರೆ ಇವರ ಜೊತೆಗೆ ಸಂವಹಿಸಲು ಶುರುಮಾಡಿದಾಗಲೇ ಇದೆಂಥ ಬುರ್ನಾಸು ಪೀಳಿಗೆ ಎಂಬುದು ನನ್ನ ವಯಸ್ಸಿನವರಿಗೆ ತಿಳಿದು ಬಿಡುತ್ತದೆ. ಮಾತುಮಾತಿಗೆ “ಲೈಕ್… ಲೈಕ್…” ಎಂದೋ “ಯೂ ನೋ… ಯೂ ನೋ…” ಎಂದೋ ಅತೀ ಸುಲಭದ ಶಬ್ದಗಳಿಗೂ ತಡವರಿಸುತ್ತ, ಹುಟ್ಟಿದಾಗಿನಿಂದ ಕಲಿತಿದ್ದೂ ಮಾತನಾಡಿದ್ದೂ ಇಂಗ್ಲೀಷ್ ಭಾಷೆಯೊಂದೇ ಆಗಿದ್ದರೂ ಅದರಲ್ಲೂ ವ್ಯಾಕರಣಬದ್ಧವಾಗಿ ಒಂದೂ ವಾಕ್ಯ ಮಾತನಾಡಲೂ, ಬರೆಯಲೂ ಬಾರದ ಇವರ ಬಗ್ಗೆ ಬಾಯಿ ಬಿಟ್ಟಾಗಲೇ ಇದೊಂದು ಖಾಲಿ ಡಬ್ಬಿ ಎಂಬ ಸತ್ಯ ಗೊತ್ತಾಗಿ ಹೋಗುತ್ತದೆ. ಪ್ರತೀ ಐಡಿಯಾ ಮೀಟಿಂಗು ಶುರುವಾಗಿ ಅರ್ಧಘಂಟೆಗೆ ಏನೇನೋ ಮಾಡುವುದನ್ನು ಬಿಟ್ಟು ಇಲ್ಲಿ ಹೀಗೆ ಸಮಯ ಹಾಳು ಮಾಡುತ್ತಿದ್ದೇನಲ್ಲ ಎಂಬ ಯೋಚನೆ ನನ್ನಲ್ಲಿ ಸುಳಿಯಲೇ ಬೇಕು, ಹಾಗಿರುತ್ತದೆ ಇವರ ವರಸೆ.

ಅವತ್ತೂ ಅಷ್ಟೇ. ಸಾರ್ವಜನಿಕ ಇವೆಂಟಿಗಾಗಿ ಐಡಿಯಾ ಕೊಡಿರಿ ಎಂದರೆ ಎಂತೆಂಥ ಮಾತುಗಳು ಬರಬೇಕು! ನೂರಾರು ಡಾಲರು ಕೊಟ್ಟು ಮಂಡಿಯ ಬಳಿ, ತೊಡೆಯ ಬಳಿ ಹರಿದ ಜೀನ್ಸನ್ನು ಕೊಂಡ ಹಾಗೆಯೇ, ನನ್ನನ್ನು ಸ್ನೇಹಿತೆಯೆಂದು ತಿಳಿಯಿರಿ ಅಂದಿದ್ದಕ್ಕೆ ಹೆಗಲ ಮೇಲೆ ಕೈಹಾಕಲೂ ಹಿಂಜರಿಯದ ಹಾಗೆಯೇ ಉಡಾಫೆಯ, ಸೊಕ್ಕಿನ, ಸ್ಯೂಡೋ ಮಹತ್ವಾಕಾಂಕ್ಷೆಯ, ದೊಡ್ಡ ಹಡಗು ಕಟ್ಟುವ ಯೋಗ್ಯತೆಯೂ ಚಾತುರ್ಯವೂ ಹಂಬಲವೂ ಇಲ್ಲದೇ ಸಾಯುವ ತನಕ ಸಣ್ಣ ತೆಪ್ಪಗಳಾಗಿಯೇ ದಡದ ಹತ್ತಿರದಲ್ಲೇ ತೇಲಾಡಿಕೊಂಡು ಒಂದು ದಿನ ಹೇಳ ಹೆಸರಿಲ್ಲದೇ ಮರಚಿ ಬೀಳುವವರಂತೆ ಕಂಡರು.

“ಶಾಲಿನಿ, ನನ್ನ ಬಳಿ ಒಂದು ಅದ್ಭುತ ಐಡಿಯಾ ಇದೆ. ಅಮೆರಿಕದಲ್ಲಿ ಎಲ್ಲರ ಮನೆಗಳಲ್ಲೂ ಒಂದಾದರೂ ನಾಯಿಯಿರುತ್ತದೆ. ನಾಯಿಗಳಿಗೊಂದು ಫ್ಯಾಷನ್ ಶೋ ಮಾಡಿದರೆ ಹೇಗೆ? ಈಗ ಎಲ್ಲರೂ ಇಂಥದನ್ನು ಆಯೋಜಿಸುತ್ತಿದ್ದಾರೆ.”

“ಏನು ನಿನ್ನ ಹೆಸರು?”

“ರ್ಹೀಸ್.”

“ಓಕೆ, ರೀಸ್…”

“ಸಾರಿ, ಇಟ್ಸ್ ರ್ಹೀಸ್!”

ತುಟಿಯನ್ನು ತುಸು ಓರೆಯಾಗಿಸಿ ನಕ್ಕಂತೆ ಮಾಡಿ ಮುಂದುವರೆಸಿದೆ.

“ಆಲ್‌ರೈಟ್ ರ್ಹೀಸ್. ಗಣತಿ ಮಾಹಿತಿಯ ಪ್ರಕಾರ ಐವತ್ತೊಂದು ಪರ್ಸಂಟ್ ಅಮೆರಿಕನ್ ಮನೆಗಳಲ್ಲಿ ಮಾತ್ರ ಕನಿಷ್ಟ ಒಂದಾದರೂ ನಾಯಿಯಿದೆ. ಹೀಗಾಗಿ, ಎಲ್ಲರೂ ಎಂದು ಹೇಳುವ ಮೊದಲು ಸಂಖ್ಯೆಗಳನ್ನು ಮೊದಲು ಪರಿಶೀಲಿಸಬೇಕು. ಜೊತೆಗೆ ನಾವು ನಡೆಸಬೇಕೆಂದಿರುವುದು ನಮ್ಮ ಬ್ರಾಂಡ್ ಮೌಲ್ಯ ಹೆಚ್ಚಿಸಬಲ್ಲ ಇವೆಂಟು. ನಾಯಿಗಳು, ಬೆಕ್ಕುಗಳು, ಮಕ್ಕಳು ಇವೆಲ್ಲ ಪರ್ಸನಲ್ ಆದ, ಡಮೆಸ್ಟಿಕ್ ಸ್ಪೇಸಿಗೆ ಸೇರಿದಂಥವು. ಲೆಟ್ಸ್ ನಾಟ್ ಬ್ರಿಂಗ್ ದೆಮ್ ಹಿಯರ್. ಇಟ್ ಹ್ಯಾಸ್ ಟು ಬಿ ಮಚ್ ಮೋರ್ ಯೂನಿಕ್ ದೆನ್ ದ್ಯಾಟ್.”

ಅಷ್ಟರಲ್ಲಿ ಅರ್ಧ ಕೂದಲಿಗೆ ನೀಲಿ ಬಣ್ಣ ಡೈ ಮಾಡಿಕೊಂಡ ಟೆರಿ ಎಂಬ ಹುಡುಗಿ ಎದ್ದು ನಿಂತಳು.

ಹೀಗೆ ಯಾರೂ ಕ್ಯಾರೇ ಅನ್ನದ ಯಕಶ್ಚಿತ್ ಇಂಟರ್ನ್‌ಗಳ ಜೊತೆಗೆ ಬೆರೆಯುವುದು ದಿನವೂ ಮುಂಜಾನೆ ಇಯರ್‌ಫೋನು ಹಾಕಿಕೊಂಡು ಸೆಂಟ್ರಲ್ ಪಾರ್ಕಿನಲ್ಲಿ ಓಡಿದಂತೆಯೇ, ಇಷ್ಟವಿಲ್ಲದಿದ್ದರೂ ಮಧ್ಯಾಹ್ನದ ಊಟಕ್ಕೆ ಕಿನ್ವಾ ತಿಂದಂತೆಯೇ, ಮಾರ್ಕ್‌ನಂಥ ತರುಣನನ್ನು ಬಾಯ್‌ಫ್ರೆಂಡಾಗಿ ಇರಿಸಿಕೊಂಡಂತೆಯೇ ಒಂದು ಅವಶ್ಯಕತೆಯಿರಬಹುದೇನೋ ಎಂಬ ಸಂಶಯ ಆಗಾಗ ನನ್ನೊಳಗೆ ಸುಳಿದು ಹೋಗಿದೆ.

“ಸೋ ಶಾಲಿನಿ, ಹೀಗೆ ಮಾಡಿದ್ರೆ ಹೇಗೆ? ನ್ಯೂಯಾರ್ಕಿನಲ್ಲಿ ಎಷ್ಟೊಂದು ಜನ ಹೋಮ್‌ಲೆಸ್ ಇದ್ದಾರೆ. ಅವರಿಗಾಗಿ ನಮ್ಮ ಕಂಪನಿಯಿಂದ ಒಂದು ಸೂಪ್ ಕಿಚನ್ ತೆರೆದರೆ ಹೇಗೆ? ನಾವಿಲ್ಲಿ ಏಸಿ ಕೋಣೆಯಲ್ಲಿ ಕುಳಿತಿರುವಾಗ ಇದೇ ಬಿಲ್ಡಿಂಗಿನ ಹೊರಗೆ ಯಾರೋ ಹಸಿದುಕೊಂಡಿದ್ದಾರೆ ಎಂದರೆ ನನಗದು ಸಹಿಸಲೇ ಆಗುವುದಿಲ್ಲ. ಇಲ್ಲಿರುವ ಅನೇಕರಿಗೆ ಗೊತ್ತಿರುವ ಹಾಗೆ ನಾನೊಬ್ಬ ಇಗಾಲಿಟೇರಿಯನ್.”

ಮನಸ್ಸಿನಲ್ಲೇ ತಲೆ ತಲೆ ಚಚ್ಚಿಕೊಂಡೆ. ಕಾಣಿಸಿಕೊಳ್ಳಬಾರದು ಎಂದು ಎಷ್ಟೇ ಪ್ರಯತ್ನಪಟ್ಟರೂ ಅಸಹನೆಯ ಗೆರೆಗಳು ನನ್ನ ಮುಖದ ಮೇಲೆ ಮೂಡತೊಡಗಿದ್ದವು. ಹಟಕ್ಕೆ ಬಿದ್ದ ಪುಟ್ಟ ಮಗುವೊಂದನ್ನು ಸ್ಟಿಯರಿಂಗ್ ವ್ಹೀಲಿನ ಮುಂದೆ ನಿಲ್ಲಿಸಿ ಹಿಂದೆ ಕುಳಿತವರಂತೆ ಚಡಪಡಿಸಿದೆ.
“ಹೋಮ್‌ಲೆಸ್ ಜನರಿಗೆ ಸಹಾಯವಾಗಲೆಂದು ಸಿಎಸ್‌ಎರ್ ಅಡಿಯಲ್ಲಿ ನಾವು ಆಗಲೇ ಸಾಕಷ್ಟು ಸೂಪ್‌ಕಿಚನ್‌ಗಳಿಗೆ ಚಾರಿಟಿ ಕೊಟ್ಟಿದ್ದೇವೆ. ನಾನು ಏನು ಹೇಳ್ತಿದ್ದೇನೆ ಎಂಬುದು ನಿಮಗರ್ಥವಾಗುತ್ತಿಲ್ಲ ಅನ್ನಿಸುತ್ತದೆ. ನಾವು ಆಯೋಜಿಸಬೇಕು ಅಂತಿರುವುದು ಸಾರ್ವಜನಿಕರು ಭಾಗವಹಿಸಬಹುದಾದ ಕಾರ್ಪೊರೆಟ್ ಇವೆಂಟು. ಅತ್ತ ಟ್ರೇಡ್-ಶೋ ಅಷ್ಟು ಫಾರ್ಮಲ್ ಅಲ್ಲದ, ಇತ್ತ ಮ್ಯಾರಥಾನ್ ಅಷ್ಟು ಕ್ಯಾಶುವಲ್ ಅಲ್ಲದ, ಅವೆರಡರ ನಡುವಿನ ಎಲ್ಲರೂ ಭಾಗವಹಿಸಬಹುದಾದ ಚಟುವಟಿಕೆ.”

“ಓಹ್, ಮ್ಯಾರಥಾನ್ ನಡೆಸಬಹುದಲ್ಲ!”

“ವಾಹ್, ಎಂಥ ಓರಿಜಿನಲ್ ಐಡಿಯಾ! ನಾನು ಹೇಳಿದ್ದು ಆ ತರಹದ್ದು ಎಂದು. ನ್ಯೂಯಾರ್ಕಿನಲ್ಲಿ ಆಗಲೇ ಹತ್ತಾರು ಮ್ಯಾರಥಾನ್‌ಗಳು ವರ್ಷದುದ್ದಕ್ಕೂ ನಡೆಯುತ್ತವೆ. ನಾವು ಹೊಸದೇನನ್ನು ಮಾಡಿದಂತಾಯಿತು?”

ಮೀಟಿಂಗು ಶುರುವಾಗಿ ಆಗಲೇ ಒಂದೂವರೆ ಘಂಟೆಗಳು ಸರಿದು ಹೋಗಿದ್ದವು. ಶುಕ್ರವಾರ ಸಂಜೆ ತೆಪ್ಪಗೆ ಮನೆಯಲ್ಲಿ ಕುಳಿತು ಶಾಂತಿಯಿಂದ ಕಾಫಿ ಕುಡಿಯುವ ಬದಲು ವಾರಾಂತ್ಯದ ಪ್ರಾರಂಭವನ್ನು ಈ ಮುಟ್ಠಾಳರ ಜೊತೆ ಕಳೆಯುತ್ತಿದ್ದೇನಲ್ಲ ಎಂದು ಸಿಟ್ಟೇ ಬಂತು. ಕಣ್ಣಲ್ಲೇ ಲೌರೀನ್‌ಳಿಗೆ ಮೀಟಿಂಗನ್ನು ಮುಗಿಸುವ ಸೂಚನೆ ಕೊಟ್ಟೆ. ಅವಳು ಹಕ್ಕಿನಿಂದೆಂಬಂತೆ ನನ್ನ ಸನ್ನೆಯನ್ನು ದಿವ್ಯವಾಗಿ ನಿರ್ಲಕ್ಷಿಸಿದಳು. ಇನ್ನೇನು ನಾನೇ ಎದ್ದು ಮಂಗಳ ಹಾಡಬೇಕು ಅನ್ನುವಷ್ಟರಲ್ಲಿ ಸಿಕಿ ಎಂಬ ಸಣಕಲು ಹುಡುಗಿ ಎದ್ದುನಿಂತು ಮಾತನಾಡತೊಡಗಿದಳು.

“ಇಟ್ ಹ್ಯಾಸ್ ಟು ಬಿ ವಿಥ್ ವಿಮೆನ್.”

“ಹೌ ಡೂ ಯೂ ಮೀನ್?”

“ಈ ಇವೆಂಟು ನ್ಯೂಯಾರ್ಕಿನಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ನಮ್ಮ ಕಂಪನಿಯ ಇಮೇಜನ್ನು ಸ್ಥಾಪಿಸಬೇಕು. ನಮ್ಮ ಬ್ರಾಂಡ್ ಬಿಲ್ಡಿಂಗ್ ಉದ್ದೇಶವನ್ನು ಮೀರಿ ಅದಕ್ಕೊಂದು ಸಾಮಾಜಿಕ ಮಜಲು ಇರಬೇಕು. ಆಗಲೇ ಅದು ಜನರ ಕಾರ್ಯಕ್ರಮವಾಗುತ್ತದೆ.”

ಎದ್ದು ಹೋಗಿ ಕಾಫಿ ಮಷಿನ್ನಿನಿಂದ ಇನ್ನೊಂದು ಎಸ್‍ಪ್ರೆಸ್ಸೋ ಅರಿಸಿಕೊಂಡು ಬಂದು ಸಿಕಿಯ ಮಾತು ಕೇಳುತ್ತ ಕುಳಿತೆ.

“ನೀವು ಮ್ಯಾರಥಾನ್ ಅಂದ ತಕ್ಷಣ ನನಗೆ ಒಂದು ಘಟನೆ ನೆನಪಾಯಿತು. ಐಮ್ ಅ ರನ್ನರ್. ಪ್ರತೀ ವರ್ಷ ಸಿಟಿ ನಡೆಸುವ ಮ್ಯಾರಥಾನಿನಲ್ಲಿ ನಾನೂ ಭಾಗವಹಿಸುತ್ತೇನೆ. ಈ ಸಮಯದಲ್ಲಿ ನಾನು ಎದುರಿಸುವ ಅತಿದೊಡ್ಡ ಸಮಸ್ಯೆ ಏನು ಗೊತ್ತೇ? ಓಡುವಾಗ ತೆರಿಯಬಾರದು ಅಂತ ನಿಪ್ಪಲ್‌ಗಳಿಗೆ ಬ್ಯಾಂಡ್-ಏಯ್ಡ್ ಹಾಕಿಕೊಂಡು ಓಡುತ್ತೇನೆ. ನಾನಷ್ಟೇ ಅಲ್ಲ, ನನಗೆ ಗೊತ್ತಿರುವ ಎಷ್ಟೊಂದು ಜನ ಹೆಂಗಸರು ಇದನ್ನೇ ಮಾಡುತ್ತಾರೆ. ಆದರೂ ಬೆವರಿಗೆ ಆ ಬ್ಯಾಂಡ್-ಏಯ್ಡ್ ಕೂಡ ಕಿತ್ತು ಬಂದು ಎಷ್ಟೋ ಜನ ಮಹಿಳಾ ರನ್ನರ್‍ಗಳು ರಕ್ತಸಿಕ್ತ ನಿಪ್ಪಲ್ ಕುರುಹನ್ನು ಶರ್ಟಿನ ಮೇಲೆ ಹೊತ್ತೇ ಓಡಬೇಕಾಗುತ್ತದೆ. ಗಂಡಸರಾದರೆ ಆರಾಮಾಗಿ ತೆರೆದೆದೆಯಲ್ಲಿ ಓಡಬಹುದು.”

ಇನ್ನೊಂದಿಬ್ಬರು ಹುಡುಗ-ಹುಡುಗಿಯರು ಸಿಕಿಯ ಮಾತನ್ನು ಅನುಮೋದಿಸಿದರು.

“ಅದೇ ಕಾರಣಕ್ಕೆ ನಾವು ಟಾಪ್‌ಲೆಸ್ ಮ್ಯಾರಥಾನನ್ನು ಯಾಕೆ ಆಯೋಜಿಸಬಾರದು ಎಂಬ ಪ್ರಸ್ಥಾಪವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮ್ಯಾರಥಾನ್ ಎಂದರೆ ಪೂರ್ತಿ ಇಪ್ಪತ್ತಾರು ಮೈಲನ್ನೂ ಓಡಬೇಕೆಂದಿಲ್ಲ. ಸಾಂಕೇತಿಕವಾಗಿ ಆರೇ ಮೈಲುಗಳ ಕ್ವಾರ್ಟರ್ ಮ್ಯಾರಥಾನನ್ನು ಸಂಘಟಿಸಬಹುದು. ನಮ್ಮ ಧ್ಯೇಯಕ್ಕೆ ಹೊರತಾದ ಸಾಮಾಜಿಕ, ಸಾಂಸ್ಕೃತಿಕ ಮಗ್ಗುಲೂ ಈ ಕಾರ್ಯಕ್ಕಿರುತ್ತದೆ. ವೀ ಕ್ಯಾನ್ ಮೇಕ್ ಹಿಸ್ಟರಿ. ಹೆಂಗಸರು, ಗಂಡಸರು, ಆ ರೇಂಜಿನ ನಡುವಿನವರು, ಎರಡೂ ಗುಂಪಿಗೆ ಸೇರದವರು ಯಾರು ಬೇಕಿದ್ದರೂ ಭಾಗವಹಿಸಬಹುದು.”

“ಇದಕ್ಕೆ ಏನಾದರೂ ಲೀಗಲ್ ತೊಂದರೆಗಳು ಬರುವುದಿಲ್ಲವೇ?”

ಟೆರಿಯಿಂದ ಬಂದ ಈ ಪ್ರಶ್ನೆಗೆ ನಮ್ಮ ಇನ್-ಹೌಸ್ ಲಾಯರ್ ಕ್ಯಾಥಿ ಉತ್ತರಿಸಿದಳು.

“ಇಲ್ಲ. ಪೀನಲ್ ಲಾ 245.01 ಪ್ರಕಾರ 1992ನೇ ಇಸವಿಯಿಂದಲೇ ನ್ಯೂಯಾರ್ಕಿನ ಸಾರ್ವಜನಿಕ ಸ್ಥಳಗಳಲ್ಲಿ ಯಾರು ಬೇಕಿದ್ದರೂ ಟಾಪ್‌ಲೆಸ್ ಹೋಗಬಹುದು ಎಂಬ ಸ್ವಾತಂತ್ರ್ಯವಿದೆ.”

“ಆಗಸ್ಟ್‌ನಲ್ಲೊಮ್ಮೆ ಗೋ ಟಾಪ್‌ಲೆಸ್ ಡೇ ಎಂಬ ಪರೇಡ್ ನಡೆಯುತ್ತದೆ. ಆದರದು ಮೆರವಣಿಗೆ, ನಾವು ಪ್ಲಾನ್ ಮಾಡುತ್ತಿರುವ ಹಾಗೆ ಮ್ಯಾರಥಾನ್ ಓಟವಲ್ಲ. ಇನ್ನೂ ಒಂದು ಅಂಶ ಸೇರಿಸಬೇಕೆಂದರೆ ಮೂರು ತಿಂಗಳಲ್ಲಿ ಜುಲೈ ನಾಲ್ಕು ಬರಲಿದೆ. ಶಾಲಿನಿ ಒಪ್ಪಿದರೆ ಅಂದೇ ಈ ಇವೆಂಟನ್ನು ಏರ್ಪಡಿಸಬಹುದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನೆನಪಿನ ದಿನವೇ ನಮಗೂ ಈ ದರಿದ್ರ ಬ್ರಾಗಳಿಂದ ಸ್ವಾತಂತ್ರ್ಯ ಸಿಗಲಿ.”

“ಇದು ತುಂಬಾ ಸೂಕ್ಷ್ಮ ವಿಚಾರವಾಗಿರುವುದರಿಂದ ನಾನು ಬೋರ್ಡಿನ ಸಲಹೆಯನ್ನು ಕೇಳಲೇಬೇಕು. ಜೊತೆಗೆ ಕಾನೂನಿನ ತೊಡಕುಗಳು ಇಲ್ಲವಾದರೂ ಸಾಂಸ್ಕೃತಿಕ ತೊಡಕುಗಳು, ಪ್ರಾಕ್ಟಿಕಲ್ ಕಷ್ಟಗಳು ಬಂದೇ ಬರುತ್ತವೆ. ಉದಾಹರಣೆಗೆ ಮ್ಯಾರಥಾನ್‌ಗೆಂದು ಬಂದವರು ರೆಸ್ಟೂರೆಂಟಿಗೆ ಹೋಗಬಹುದೇ? ಆ ಹೊಟೇಲಿನವರು ತೆರೆದೆದೆಯ ಅವರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದರೇನು ಮಾಡುವುದು? ಇತ್ಯಾದಿ. ನೋಡೋಣ. ಐ ವಿಲ್ ಕೀಪ್ ಯೂ ಆಲ್ ಇನ್‌ಫಾರ್ಮ್ಡ್‌” ಎನ್ನುತ್ತ ಎದ್ದೆ.

ಮೀಟಿಂಗು ಅರ್ಧಘಂಟೆ ತಡವಾಗಿ ಮುಗಿದಿತ್ತು. ಸಿಕಿ ಎತ್ತಿದ ವಾದಕ್ಕೆ ಹಲವು ಯುವಕ ಯುವತಿಯರು ದನಿಗೂಡಿಸಿದ್ದರು. ಕಾರಿನಲ್ಲೇ ಡಿರೆಕ್ಟರ್ ಬೋರ್ಡಿನವರಿಗೆಲ್ಲ ಸಾಮೂಹಿಕ ಈಮೇಲ್ ಬರೆದು ಈ ಪ್ರಸ್ತಾಪವಿಟ್ಟೆ. ಸೋಮವಾರ ಲಂಚ್ ಮೀಟಿಂಗನ್ನೂ ಕರೆದೆ.

ಬೋರ್ಡಿನಿಂದ ಯದ್ವಾತದ್ವಾ ಅಡ್ಡ ಮಾತು ಕೇಳಬೇಕಾಗುತ್ತದೆ ಎಂಬ ತಯಾರಿಯಲ್ಲಿದ್ದವಳಿಗೆ ಒಳ್ಳೆಯ ಪ್ರತಿಕ್ರಿಯೆಯನ್ನು ಕಂಡು ಖುಷಿಯಾಯ್ತು.

“ನಿನ್ನ ಮತ್ತು ನಿನ್ನ ಇಂಟರ್ನ್‌ಗಳ ಟೀಮ್ ಬಗ್ಗೆ ಹೆಮ್ಮೆಯಾಗುತ್ತದೆ. ಮುಂದುವರೆಯಲಿ.”

“ವಾಹ್, ನ್ಯೂಯಾರ್ಕ್ ಸಿಟಿಯಲ್ಲಿ ನಿಪ್ಪಲ್ ರೆವಲ್ಯೂಷನ್ ಮಾಡಿದ ಮೊದಲ ಕಾರ್ಪೊರೆಟ್ ಕಂಪನಿ ನಮ್ಮದಾಗಲಿ!”

“ತೊಟ್ಟು ಕ್ರಾಂತಿಗೆ ಜಯವಾಗಲಿ” ಎಂಬೆಲ್ಲ ಈಮೇಲುಗಳು ಮನೆ ತಲುಪುವ ಮೊದಲೇ ಇನ್‍ಬಾಕ್ಸಿಗೆ ಬಂದು ಬಿದ್ದಿದ್ದವು. ಎಂಬತ್ತು ದಾಟಿದ ಸ್ಟೀವನ್‌ಸನ್ ಮಾತ್ರ “ಅಲ್ಲ, ಇನ್ಮೇಲೆ ಡೋನಟ್ ಬಾಕ್ಸು, ಬೈನಾಕ್ಯುಲರ್ ಹಿಡಿದುಕೊಂಡು ವಕ್ರಬುದ್ಧಿಯ ಗಂಡಸರು ಛಾವಣಿ ಹತ್ತಿ ಕೂರಬೇಕಿಲ್ಲ, ಬದಲಿಗೆ ಸಿಟಿ ಮಧ್ಯದ ರಸ್ತೆಯಲ್ಲೇ ನಿಂತು ಕೆಕ್ಕರಿಸಿ ನೋಡಬಹುದು ಎಂಬ ಕಾರಣಕ್ಕಷ್ಟೇ ನನ್ನ ಕಾಳಜಿ” ಎಂದು ಬರೆದಿದ್ದರು. ಜೊತೆಗೆ “ಎಲ್ಲರಿಗೂ ಒಪ್ಪಿಗೆಯಿದ್ದರೆ ನನ್ನದೇನೂ ಅಭ್ಯಂತರವಿಲ್ಲ” ಎಂದೂ ಸೇರಿಸಿದ್ದರು.

ಎಲ್ಲವೂ ಘಂಟೆಗಳ ಅಂತರದಲ್ಲಿ ನಿಶ್ಚಯವಾದಾಗ ವಿಚಿತ್ರ ಭಾರ ಅನುಭವಕ್ಕೆ ಬಂತು. ಇದಕ್ಕೊಂದು ಪ್ರತ್ಯೇಕ ಕಮಿಟಿಯನ್ನೇ ರಚಿಸಬೇಕು, ಸೋಮವಾರ ಸಮಯ ನಿಗದಿಪಡಿಸು ಎಂದು ಲೌರೀನ್‌ಳಿಗೆ ಸಂದೇಶ ಕಳಿಸಿ ಸೋಫಾದ ಮೇಲೆ ಕಣ್ಮುಚ್ಚಿ ಒರಗಿದೆ.

*****

“ಮಾನ ಮರ್ಯಾದೆ ಇಲ್ವಾ ನಿನಗೆ. ಥೂ, ನಾಚಿಕೆಯಾಗಬೇಕು ನಿನ್ನ ಜನ್ಮಕ್ಕೆ. ಮೊದಲು ನನ್ನ ಕಂಪನಿ ಕದ್ದೆ, ಹಣ ಲಪಟಾಯಿಸಿದೆ. ಈಗ ನನ್ನ ಹಿಂದೆ ಮುಂದೆಯೇ ಜಾಸೂಸಿಗಳನ್ನು ಬಿಟ್ಟು ನನ್ನ ಕಂಪನಿಯ ಬೋರ್ಡ್‌ರೂಮಿನಿಂದ ಐಡಿಯಾ ಕದಿಯುವವರೆಗೂ ಬಂದು ಮುಟ್ಟಿದೆಯಾ? ನಿನ್ನನ್ನ ಸುಮ್ನೇ ಬಿಡಲ್ಲ ನೋಡು. ನಿನ್ನನ್ನ ಜೈಲಿಗೆ ಕಳಿಸದೇ ಬಿಡಲ್ಲ ಹುಶಾರ್!”

ಎಷ್ಟೋ ವರ್ಷಗಳ ನಂತರ ಬಂದ ಚಿತ್ರಾಳ ಸಂದೇಶ ಕಂಡು ಕುತೂಹಲದಿಂದ ತೆರೆದರೆ ಈ ರೀತಿ ಅಪದ್ಧ ಬರೆದಿದ್ದಳು. ಅದೂ ಇಂಗ್ಲೀಷ್ ಲಿಪಿಯಲ್ಲಿ ಕನ್ನಡ ಭಾಷೆಯ ಪತ್ರ! ಶಬ್ದಕ್ಕೆ ಶಬ್ದ ಸೇರಿಸಿ ಓದಲೇ ನನಗೆ ಐದು ನಿಮಿಷ ಹಿಡಿಯಿತು. ಎಂದೂ ಉಪಯೋಗಿಸಿದ, ಆದರೂ ಫೋನಿನಲ್ಲಿ ದಾಖಲಾದ ಅವಳ ನಂಬರ್ ತೆಗೆದು ಕರೆ ಮಾಡಿದೆ. ಎರಡು ಬಾರಿ ವಾಯ್ಸ್ ಮೇಲಿಗೆ ಹೋಯ್ತೇ ವಿನಃ ಅವಳಂತೂ ಫೋನು ಎತ್ತಲಿಲ್ಲ.

ಈ ಚಿತ್ರಾ ನನ್ನ ಒಂದು ಕಾಲದ ಸ್ನೇಹಿತೆ. ಇಪ್ಪತ್ತೈದು ವರ್ಷಗಳ ಕೆಳಗೆ ಸಹನಾ ಒಂದು ವರ್ಷದ ಮಗುವಾಗಿದ್ದಾಗ ಹಠಾತ್ತನೆ ಎರುಗಿದ ಶೇಖರರ ಸಾವು ನನ್ನನ್ನು ಕಂಗೆಡಿಸಿಬಿಟ್ಟಿತ್ತು. ಕುಟುಂಬದ ಯಾವುದೋ ಆಸ್ತಿ ವ್ಯಾಜ್ಯ ಪರಿಹರಿಸಿಕೊಳ್ಳುವುದಿದೆ ಎಂದು ಮೈಸೂರಿಗೆ ಹೋದವರು ನೀಲಗಿರಿ ರಸ್ತೆಯಲ್ಲಿ ಕಾರು ಅಪಘಾತವಾಗಿ ಅಸುನೀಗಿದ್ದರು. ಸಹನಾಳಿಗೆ ನಾವಾಗ ಪಾಸ್‌ಪೋರ್ಟ್ ಕೂಡ ಮಾಡಿಸಿರಲಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ನನಗೆ ಭಾರತಕ್ಕೆ ಹೋಗಲೂ ಆಗಲಿಲ್ಲ. ವಾರದೊಳಗೆ ಬರುತ್ತೇನೆ ಎಂದು ಮಗುವಿಗೊಂದು ಮುತ್ತು ಕೊಟ್ಟು ಹೋದವರ ಚಿತ್ರ ನನ್ನೊಳಗೆ ಇಂದಿಗೂ ಅದೇ ಕಾಲ, ಶಬ್ದ, ದನಿ, ಗಂಧಗಳ ಜೊತೆಗೆ ಉಳಿದು ಬಿಟ್ಟಿದೆ.

ಆಗ ಚಿತ್ರಾ ಇಲ್ಲದಿದ್ದರೆ ನಾನು ಅಮೆರಿಕದಲ್ಲಿ ಉಳಿಯುತ್ತಲೇ ಇರಲಿಲ್ಲವೇನೋ. “ವಾಪಸ್ ಹೋಗಿ ಏನು ಮಾಡುತ್ತೀ? ಸಹನಾಳ ಭವಿಷ್ಯದ ಬಗ್ಗೆ ಯೋಚಿಸು. ಶೇಖರರ ಮನಸ್ಸಿನಲ್ಲೇನಿತ್ತು ಎಂಬುದನ್ನು ನಿನ್ನೊಳಗೇ ಕೇಳಿಕೋ. ಉಳಿಯುವ ಮನಸ್ಸೊಂದು ಮಾಡಿದರೆ ಸಹಾಯದ ದಾರಿಗಳು ತಂತಾನೇ ತೆರೆದುಕೊಳ್ಳುತ್ತವೆ” ಎಂದು ಧೈರ್ಯ ತುಂಬಿದವಳು ಅವಳೇ. ಒಂದೇ ಅಪಾರ್ಟ್‌ಮೆಂಟಿನವಳು, ಕನ್ನಡದವಳು ಎಂದಷ್ಟೇ ಪರಿಚಯವಿದ್ದ ಚಿತ್ರಾ ಆ ಫಟನೆಯ ನಂತರ ಆತ್ಮದ ಗೆಳತಿಯಾಗಿ ಬದಲಾಗಿದ್ದು ಹೀಗೆ.

ಅವಳ ಜೊತೆಗೇ ನನ್ನನ್ನೂ ಎಂಬಿಎಗೆ ಸೇರಿಸಿಕೊಂಡಳು. ಸಹನಾಳನ್ನು ನೋಡಿಕೊಳ್ಳಲು ಒಳ್ಳೆಯ ನ್ಯಾನಿ ಒಬ್ಬರನ್ನು ಹುಡುಕಿ ಕೊಟ್ಟಳು. ಅಲ್ಲಿನ ತನಕ ಶೇಖರ್ ಮಾತ್ರ ನೋಡಿಕೊಳ್ಳುತ್ತಿದ್ದ ಹಣಕಾಸಿನ ವಿಚಾರ, ಸಮಯಕ್ಕೆ ಸರಿಯಾಗಿ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು, ಎಂಥ ಶೇರುಗಳಲ್ಲಿ ಹಣ ಹೂಡಬೇಕು ಎಂಬುದು… ಮುಂತಾದ ನೂರಾರು ಸಂಗತಿಗಳ ಬಗ್ಗೆ ಚಿತ್ರಾಳಿಂದಲೇ ತಿಳಿದುಕೊಂಡೆ. ಊರಿಗೆ ಹೋಗಬೇಕಾದಾಗಲೂ ಬೆಂಗಳೂರಿನ ತನಕ ಒಟ್ಟಿಗೇ ಹೋಗಿ ಅಲ್ಲಿಂದ ಅವಳು ಹಾಸನದ ಬಸ್ಸನ್ನೂ, ನಾನು ಮತ್ತು ಸಹನಾ ಶಿವಮೊಗ್ಗೆಯ ಬಸ್ಸನ್ನೂ ಹಿಡಿಯುತ್ತಿದ್ದೆವು.

ಎಂಬಿಎ ಮುಗಿದ ತಕ್ಷಣ ಹೀಗೆ ಐವ್ಯಾಲಿಡ್ ಎಂಬ ಕಂಪನಿ ಶುರು ಮಾಡಿದ್ದು, ನನ್ನ ತಾಂತ್ರಿಕ ಪರಿಣತಿ ಮತ್ತು ಅವಳ ಡಿಸೈನ್ ಜ್ಞಾನದಿಂದ ಕಂಪನಿ ಹಂತಹಂತವಾಗಿ ಮೇಲೇರಿದ್ದು, ಸಾಫ್ಟ್‌ವೇರ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕನ್ನಡನಾಡಿನ ಇಬ್ಬರು ಮಹಿಳಾಮಣಿಗಳು ಎಂದು ತವರಲ್ಲೂ, ಮ್ಯಾನ್‌ಹ್ಯಾಟನ್ ವಲಯದಲ್ಲೂ ಸುದ್ದಿಯಾಗಿದ್ದು, ನಂತರ ಎಂಟೇ ವರ್ಷದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳು ಬಂದು ಕಂಪನಿಯನ್ನು ನನ್ನ ಸುಪರ್ದಿಯಲ್ಲೇ ಉಳಿಸಿಕೊಂಡು ಅವಳಿಗೆ ತಕ್ಕ ಪರಿಹಾರ ಕೊಟ್ಟು ಹೊರಹಾಕಿದ್ದು, ಅವಳೂ ಈಗ ಸೊನೆಯಾನ್ ಎಂಬ ಇನ್ನೊಂದು ಕಂಪನಿ ಆರಂಭಿಸಿರುವುದು, ಅದು ಇಷ್ಟು ವರ್ಷವಾದರೂ ನಮ್ಮ ಐವ್ಯಾಲಿಡ್‌ನ ಮಟ್ಟಕ್ಕೆ ಬೆಳೆಯದಿರುವುದು ಎಲ್ಲ ನನಗೆ ಹಳೆಯ ವಿಷಯ. ಹೊಸದು ಎಂದರೆ ಹೀಗೆ ದಿಢೀರನೆ ಬಂದ ಅವಳ ವಿಚಿತ್ರ ಸಂದೇಶವಷ್ಟೇ.

ಆಗಲೇ ನಮ್ಮ ಕಂಪನಿ ನಡೆಸುತ್ತಿರುವ ಜುಲೈ ನಾಲ್ಕರ ‘ಟಾಪ್‍ಲೆಸ್ ರನ್’ ಪತ್ರಿಕೆ- ಸುದ್ದಿವಾಹಿನಿಗಳಲ್ಲಿ ಸಾಕಷ್ಟು ಗದ್ದಲ ಮಾಡಿತ್ತು. ಮಹಿಳೆಯರ ಹಕ್ಕುಗಳ ಕಾರ್ಯಕರ್ತರು ದೇಶದೆಲ್ಲೆಡೆಯಿಂದ ಅಭಿನಂದಿಸಿದ್ದರು. “ಇಂಥ ಮಹಿಳಾ ಸಿಇಓಗಳ ಸಂಖ್ಯೆ ಹೆಚ್ಚಲಿ” ಎಂದು ಬೇರೆ ಯಾವುದೋ ಸುದ್ದಿ ಹೇಳುವಾಗಲೂ ನ್ಯೂಸ್ ಆಂಕರ್‌ಗಳು ನನ್ನ ಹೆಸರು ಹೇಳಿಯೇ ಶುರುಮಾಡುವುದು ನನಗೆ ಒಳಗೊಳಗೇ ಸಂತೋಷವನ್ನುಂಟು ಮಾಡಿತ್ತು. ಕ್ಯಾಲಿಫೋರ್ನಿಯಾದ ‘ಫೆಮಿನಿಸ್ಟ್ ಮೆನ್’ ಎಂಬ ಸಂಸ್ಥೆಯಂತೂ “ಈ ಮ್ಯಾರಥಾನಿನಲ್ಲಿ ಪಾಲ್ಗೊಳ್ಳಲು ನಾವೂ ಬರುತ್ತೇವೆ. ತೆರೆದೆದೆಯಲ್ಲಿ ಓಡಲು ಗಂಡಸರಿಗಿರುವಷ್ಟೇ ಹಕ್ಕು ಹೆಂಗಸರಿಗೂ ಇದೆ ಎಂಬುದನ್ನು ಪ್ರತಿಪಾದಿಸಲು ಪ್ಲಕಾರ್ಡುಗಳನ್ನು ಒದಗಿಸುತ್ತೇವೆ” ಎಂದು ಮೆಚ್ಚಿ ಬರೆದಿದ್ದರು.

ಮಧ್ಯಾಹ್ನದ ವೇಳೆಗೆ ಚಿತ್ರಾಳೇ ಕರೆ ಮಾಡಿದಳು. ಫೋನೆತ್ತಿದ್ದೇ ಬೈಯಲು ಶುರುಮಾಡಿದಳು. ದಿನಕ್ಕೆ ಹದಿನೆಂಟು ಘಂಟೆ ಇಂಗ್ಲೀಷನ್ನೇ ಕೇಳಿ ಕೇಳಿ ನನ್ನ ಕಿವಿಗೂ, ಮಿದುಳಿಗೂ ಕನ್ನಡವನ್ನು ಒಳಗೆಳೆದುಕೊಳ್ಳಲು ಕೆಲ ಸೆಕೆಂಡುಗಳೇ ಹಿಡಿದವು.

“ನೋಡು ಶಾಲಿನಿ, ನೀನು ನಡೆಸುತ್ತಿದ್ದೀಯಲ್ಲ ಟಾಪ್‌ಲೆಸ್ ರನ್, ಅದು ನಮ್ಮ ಕಂಪನಿಯ ಐಡಿಯಾ. ನಿಮ್ಮ ವ್ಯಾಲಿಡ್-ಜೆ ಸಾಫ್ಟವೇರಿನ ತಲೆಯಮೇಲೆ ಹೊಡೆಯುವಂಥ ಸಾಫ್ಟವೇರನ್ನು ನಮ್ಮ ಇಂಜಿನಿಯರುಗಳು ತಯಾರಿಸಿದ್ದಾರೆ. ಅದರ ಪ್ರಮೋಷನ್ನಿಗಾಗಿ ಹೀಗೆ ಇವೆಂಟು ಆಯೋಜಿಸೋಣ ಅಂತ ಮಾತಾಡಿಕೊಂಡಿದ್ದೆವು. ಸೀಕ್ರೆಟ್ ಆಗೇ ಇಟ್ಟಿದ್ದು ಹೇಗೆ ಲೀಕ್ ಆಯಿತು ಎಂದು ತನಿಖೆ ನಡೆಸುತ್ತಿದ್ದೆ. ಅದಕ್ಕೇ ಆಗ ಕರೆ ಎತ್ತಿರಲಿಲ್ಲ.”

ವ್ಯಾಲಿಡ್-ಜೆ ನಂತರದ ವರ್ಷನ್ ಆದ ವ್ಯಾಲಿಡ್-ಎಂ ಅನ್ನು ನಾವೂ ಎರಡು ತಿಂಗಳಲ್ಲಿ ಬಿಡುಗಡೆಗೊಳಿಸಲಿದ್ದೆವು. ಚಿತ್ರಾಳ ಕಂಪನಿ ಏನಾದರೂ ಅದನ್ನು ಮೊದಲು ಹೊರ ಹಾಕಿದರೆ ನಮಗೆ ಭಾರೀ ಹೊಡೆತ ಬೀಳುತ್ತಿತ್ತು. ಏನು ಹೇಳಬೇಕೆಂದು ತಿಳಿಯದೇ ಚಿತ್ರಾ ಮಾತು ಮುಗಿಸುವ ತನಕ ಕೇಳುತ್ತ ಕುಳಿತೆ.

“ನಮ್ಮ ಫೈನಾನ್ಶಿಯಲ್ ಎಕ್ಸಿಕ್ಯುಟಿವ್ ಅದ್ಯಾವಳೋ ಇಂಟರ್ನಿಯ ಜೊತೆ ಮಲಗುತ್ತಿದ್ದನಂತೆ. ಅಮಲಿನಲ್ಲಿ ಆಕೆಗೆ ಈ ಐಡಿಯಾ ಬಗ್ಗೆ ಹೇಳಿಬಿಟ್ಟಿದ್ದಾನೆ. ಅವಳು ತನ್ನ ರೂಮ್‌ಮೇಟ್ ಆದ ಸಿಕಿ ಎಂಬ ಹುಡುಗಿಗೆ ಹೇಳಿದ್ದಾಳೆ. ಅವಳು ನಿಮ್ಮ ಮೀಟಿಂಗಿನಲ್ಲಿ ಅದು ತನ್ನದೇ ಐಡಿಯಾ ಎಂಬಂತೆ ಹೇಳಿ ನಿನ್ನ ಬಳಿ ಶಹಬಾಷ್ ಎನ್ನಿಸಿಕೊಂಡಿದ್ದಾಳೆ.”

ಒಳಗೊಳಗೇ ಆಘಾತವಾಗುತ್ತಿದ್ದರೂ ತೋರಿಸಿಕೊಳ್ಳದಂತೆ ಶಾಂತವಾಗಿರಲು ಪ್ರಯತ್ನಿಸಿದೆ. ಇವಳ ಬಳಿ ಹೆಚ್ಚು ಜಗಳವಾಡದೇ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿದೆ.

“ನಾನು ಅವರಿಬ್ಬರನ್ನೂ ಫೈರ್ ಮಾಡಿದ್ದೇನೆ. ನೀನೂ ಆ ಇಂಟರ್ನ್ ಹುಡುಗಿಯನ್ನು ಫೈರ್ ಮಾಡು.”

“ಹಾಗೇ ಮಾಡ್ತೀನಿ ಚಿತ್ರಾ. ಆದರೆ ಅದಕ್ಕೆ ಹೊರತಾಗಿ ನನ್ನ ಬಳಿ ಇನ್ನೇನೂ ಮಾಡಲು ಸಾಧ್ಯವಿಲ್ಲ. ಎಲ್ಲ ಕಡೆಗೂ ಸುದ್ದಿಯಾದ ಮೇಲೆ ಹಿಂತೆಗೆಯಲು ಅವಮಾನ. ಈಗ ಎಲ್ಲವೂ ನನ್ನ ಕೈ ಮೀರಿ ಹೋಗಿಬಿಟ್ಟಿದೆ. ಐಡಿಯಾ ನಿಮ್ಮದಾಗಿದ್ದರೂ ಎಕ್ಸಿಕ್ಯೂಟ್ ಮಾಡುತ್ತಿರುವುದು ನಾವೇ ತಾನೇ. ಐಮ್ ಸಾರಿ. ನನ್ನಿಂದ ಇನ್ನೇನಾದರೂ ಆಗಬೇಕಿದ್ದರೆ ಹೇಳು.”

ಅರ್ಧ ನಿಮಿಷದ ಮೌನದ ನಂತರ ಚಿತ್ರಾ ಮುಂದುವರೆದಳು.

“ನೋಡು ಶಾಲಿನಿ. ವೀ ಹ್ಯಾವ್ ಅ ಹಿಸ್ಟರಿ. ಯಾವುಯಾವುದೋ ಕಾರಣಕ್ಕೆ ನಮ್ಮ ಮನಸ್ಸು ಒಡೆದುಹೋಗಿದ್ದರೂ ನಾವಿಬ್ಬರೂ ಏನು, ಎಲ್ಲಿಂದ ಬಂದಿದ್ದೇವೆ ಎನ್ನುವುದು ಇಬ್ಬರಿಗೂ ಚೆನ್ನಾಗಿ ಗೊತ್ತು. ಅದಕ್ಕೇ ನೀನು ಮಗನ ವಯಸ್ಸಿನ ಆ ಹುಡುಗನನ್ನು ಬಾಯ್‌ಫ್ರೆಂಡಾಗಿ ಇಟ್ಟುಕೊಂಡಿರುವುದೂ ನನಗೆ ತಪ್ಪೆಂದು ಅನ್ನಿಸುವುದಿಲ್ಲ. ಐ ಅಡ್‌ಮೈರ್ ಯೂ. ಆದರೆ ಏನೋ ಈಗ, ನಿನಗೇ ಗೊತ್ತಿರುವ ಹಾಗೆ ನನ್ನ ಕಂಪನಿ ಬಹಳ ಸ್ಟ್ರಗಲ್ ಆಗುತ್ತಿದೆ.”

ಮತ್ತರ್ಧ ನಿಮಿಷ ಮೌನ ಕವಿಯಿತು.

“ನಿನ್ನ ಬಳಿ ನನ್ನದು ಒಂದೇ ಬೇಡಿಕೆಯಿದೆ. ಈ ಟಾಪ್‌ಲೆಸ್ ರನ್ ಐಡಿಯಾವನ್ನು ನಿನಗೇ ಬಳಸಿಕೊಳ್ಳಲು ಬಿಡುತ್ತೇನೆ. ನಾನೂ ನನ್ನ ಕಂಪನಿಯ ಎಂಪ್ಲಾಯಿಗಳ ಜೊತೆಗೆ ಬಂದು ಅದರಲ್ಲಿ ಭಾಗವಹಿಸುತ್ತೇನೆ. ಆದರೆ ದಯವಿಟ್ಟು ವ್ಯಾಲಿಡ್-ಎಂ ಬಿಡುಗಡೆಯನ್ನು ಒಂದಾರು ತಿಂಗಳು ಮುಂದೆ ಹಾಕ್ತೀಯಾ? ನನ್ನ ಇಂಜಿನಿಯರುಗಳು ಕೊನೆಯ ಹಂತದ ಕೆಲಸ ಮಾಡುತ್ತಿದ್ದಾರೆ. ಅದನ್ನು ನಾವೇ ಮೊದಲು ಹೊರಹಾಕುತ್ತೇವೆ. ಮುಳುಗುತ್ತಿರುವ ನಮ್ಮ ಕಂಪನಿಗೆ ಇದರಿಂದ ಬಹಳ ಸಹಾಯವಾಗುತ್ತದೆ.”

ನಮ್ಮ ವ್ಯಾಲಿಡ್-ಎಂ ಇನ್ನು ಮೂರೇ ತಿಂಗಳಲ್ಲಿ ಮಾರ್ಕೆಟ್ಟಿಗೆ ಹೋಗಲು ತಯಾರಾಗುತ್ತದೆ ಎಂದು ನಮ್ಮ ಇಂಜಿನಿಯರುಗಳ ಟೀಮ್ ಭರವಸೆ ಕೊಟ್ಟಿತ್ತು. ನನ್ನ ತಪ್ಪೇ ಇಲ್ಲದಿದ್ದರೂ ನನ್ನೊಳಗೆ ಅಪರಾಧಿ ಪ್ರಜ್ಞೆ ಹುಟ್ಟುವಂತೆ ಮಾಡಿ ಅದರಿಂದ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಚಿತ್ರಾಳ ಮೇಲೆ ಅಸಹನೆಯೇ ಅಯಿತು. ಅಷ್ಟಕ್ಕೂ ನಮ್ಮ ಟೀಮಿನವರು ಇನ್ನೇನು ಹೊರಬರುವ ವ್ಯಾಲಿಡ್-ಎಂ ಬಗ್ಗೆ ಉತ್ಸುಕರಾಗಿದ್ದರು. ಸಾಫ್ಟವೇರ್ ಕೊಳ್ಳಲು ರಿಸೀವರ್ ಕಂಪನಿಗಳ ಜೊತೆ ಮಾತುಕತೆಯೂ ನಡೆಯುತ್ತಿತ್ತು. ಅಂಥದ್ದರಲ್ಲಿ ಈಕೆ ಯಾವುದೋ ಕಾಲದ ಸ್ನೇಹದ ನೆಪ ಹೇಳಿ ಆರು ತಿಂಗಳು ಮುಂದೆ ಹಾಕು ಎನ್ನುತ್ತಾಳೆ ಎಂದರೆ!

“ನೋಡು ಚಿತ್ರಾ. ನನಗೂ ನಿನ್ನ ಬಗ್ಗೆ ಅಷ್ಟೇ ಗೌರವವಿದೆ. ಆದರೆ ರಿಲೀಸಿಗೆ ತಯಾರಾದ ಸಾಫ್ಟವೇರನ್ನು ಆರು ತಿಂಗಳು ತಡೆ ಹಿಡಿ ಅಂದರೆ ಕಷ್ಟವಾಗುತ್ತದೆ. ಅದಕ್ಕೆ ಸೂಕ್ತ ಕಾರಣ ಕೊಡಲೇ ಬೇಕಾಗುತ್ತದೆ. ಮತ್ತು ನಮ್ಮ ಕಂಪನಿಯ ಫ್ಯೂಚರ್ ನಿಂತಿರುವುದೂ ಈ ರಿಲೀಸಿನ ಮೇಲೆಯೇ. ನಿನ್ನ ಕಂಪನಿ ಸೊನೆಯಾನ್ ಕಷ್ಟಪಡುತ್ತಿದೆ ಎಂಬುದು ನನಗೂ ಗೊತ್ತಿದೆ. ದುಪ್ಪಟ್ಟು ಹಣ ಕೊಟ್ಟು ಅದನ್ನು ಕೊಂಡುಕೊಳ್ಳಲು ನಾನು ತಯಾರು. ಆದರೆ ಇನ್ನ್ಯಾವ ಸಹಾಯವನ್ನೂ ದಯವಿಟ್ಟು ಅಪೇಕ್ಷಿಸಬೇಡ.”

ಅವಳ ಕಂಪನಿಯನ್ನು ಕೊಂಡುಕೊಳ್ಳುವ ಮಾತು ನನ್ನ ಬಾಯಿಂದ ಹೊರಟಾಗಲೇ ಅತ್ತ ಕಡೆಯಿಂದ ರಿಸೀವರ್ ಕುಕ್ಕಿದ್ದು ಕೇಳಿಸಿತು. ಆ ಮಾತನ್ನು ಆಡಿ ಅವಳಿಗೆ ಅವಮಾನ ಮಾಡಿದ್ದಕ್ಕೆ ಪಶ್ಚಾತಾಪವಾಯಿತು. ಆದರೆ ಎಲ್ಲವೂ ನನ್ನ ಕೈಮೀರಿ ಹೋಗಿತ್ತು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಏನು ತಾನೇ ಮಾಡಲು ಸಾಧ್ಯವಿತ್ತು?

*****

ಮ್ಯಾರಥಾನಿಗೆ ಒಂದು ವಾರವಿದ್ದಾಗ ಅತೀ ಅವಶ್ಯಕವಾದ ಒಂದು ಟೀಮಿನ ಹೊರತಾಗಿ ಉಳಿದೆಲ್ಲರೂ ಗುಂಪುಗಳಾಗಿ ಏರ್ಪಟ್ಟು ಇವೆಂಟಿನ ಕೆಲಸವನ್ನೇ ಹಗಲು ರಾತ್ರಿ ನಿರ್ವಹಿಸುತ್ತಿದ್ದರು. ನಾನೂ ಐದಾರು ಟೀವಿ ಚಾನಲ್ಲುಗಳಗೆ, ಪತ್ರಿಕೆಗಳಿಗೆ ನಮ್ಮ ಉದ್ದೇಶದ ಬಗ್ಗೆ ಭರ್ಜರಿಯಾಗಿಯೇ ಸಂದರ್ಶನ ಕೊಡಲು ಶುರು ಮಾಡಿದ್ದೆ. ಸ್ಪರ್ಧಿಗಳು ಆರು ಮೈಲುಗಳ ಕ್ವಾರ್ಟರ್ ಮ್ಯಾರಥಾನ್ ಓಡುವ ದಾರಿ ನ್ಯೂಯಾರ್ಕಿನ ನೂರಾಮೂವತ್ತೈದನೆಯ ಸ್ಟ್ರೀಟ್‌ನಿಂದ ಶುರುವಾಗಿ, ಜಗತ್ಪ್ರಸಿದ್ಧ ಫಿಫ್ತ್ ಆವಿನ್ಯೂ ಹಾಯ್ದು ಸೆಂಟ್ರಲ್ ಪಾರ್ಕಿನಲ್ಲಿ ಕೊನೆಗೊಳ್ಳುವುದು ಅಂತ ಗೊತ್ತಾಗಿತ್ತು. ಆ ದಾರಿಯುದ್ದಕ್ಕೂ ನಮ್ಮ ಕಂಪನಿಯ ಹೆಸರು ಮತ್ತು ಲಾಂಛನ ರಾರಾಜಿಸತೊಡಗಿದ್ದವು.

ತಾವೂ ಪ್ರಗತಿಪರ ಎಂದು ಕಾಣಿಸಿಕೊಳ್ಳಲು ಇಚ್ಛಿಸುವ ರಾಜಕಾರಣಿಗಳು, ಸಿನಿಮಾ- ಟೀವಿ ತಾರೆಯರು, ವಿದ್ಯಾರ್ಥಿಗಳು ಸಾಮಾಜಿಕ ತಾಣಗಳಲ್ಲಿ ಈ ಓಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದರು. ಒಲಂಪಿಕ್ಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ ಸ್ಯಾಲಿ ಡೇವಿಸ್ ಕೂಡ ತಾನೂ ಈ ರೇಸಿನಲ್ಲಿ ಭಾಗವಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಳು. ನೂರಾರು ಸೆಲೆಬ್ರಿಟಿಗಳು ಮುಗಿಬಿದ್ದು ಹೆಸರು ನೋಂದಾಯಿಸಿಕೊಂಡಿದ್ದು ಕಂಡು ನನಗೂ ಹರ್ಷವಾಗಿತ್ತು. ಹತ್ತಿರತ್ತಿರ ನಾಲ್ಕು ಸಾವಿರ ಜನ ನಮ್ಮ ಇವೆಂಟಿಗೆ ಸೈನ್-ಅಪ್ ಆಗಿದ್ದರು. ಎಲ್ಲೆಲ್ಲಿಂದಲೋ ಸ್ಪಾನ್ಸರ್‍ಶಿಪ್ಪಿಗಳು ಹರಿದುಬಂದು ಸಂಘಟನೆಯ ಹೊಣೆಯ ಹೊರತು ಇನ್ನ್ಯಾವುದರ ಬಗ್ಗೆ ಯೋಚಿಸುವ ಪ್ರಮೇಯವೇ ಬಾರದಂಥ ಸ್ಥಿತಿ ನಿರ್ಮಾಣವಾಗಿತ್ತು.

ನನ್ನ ಎದೆ ಹಾರಿ ಹೋಗುವ ಸಂದರ್ಭ ಬಂದಿದ್ದು ಮ್ಯಾರಥಾನ್ ನಡೆಯುವ ಎರಡೇ ದಿನಗಳ ಮೊದಲು. ಆಗಲೇ ಊರೆಲ್ಲ ಹಂಚಿ ಮುಗಿದಿದ್ದ ಆಮಂತ್ರಣ ಪತ್ರಿಕೆಯಲ್ಲಿ ಓಟವನ್ನು ಸಾಂಕೇತಿಕವಾಗಿ ಉದ್ಘಾಟಿಸಲು ನ್ಯೂಯಾರ್ಕಿನ ಮೇಯರ್‌ರ ಪತ್ನಿ ಆಲಿಸನ್ ಲೂಕಸ್, ಹಾಲಿವುಡ್ ನಟಿ ಡಯಾನಾ ರಡ್ ಹೆಸರಿನ ಜೊತೆಗೆ ಶಾಲಿನಿ ಅಬ್ಬಲಗೆರೆ ಎಂದು ನನ್ನ ಹೆಸರೂ ಇತ್ತು. ನನ್ನ ಗಮನ ಕದಲಿಸಿದ್ದು ಆ ಹೆಸರುಗಳಲ್ಲ, ಆದರೆ ನಮ್ಮ ಮೂವರ ಹೆಸರುಗಳ ಮೇಲೆ ‘ಟಾಪ್‌ಲೆಸ್ ಮ್ಯಾರಥಾನನ್ನು ಟಾಪ್‌ಲೆಸ್ ಆಗಿಯೇ ಉದ್ಘಾಟಿಸುವ ಮುತ್ಸದ್ಧಿಗಳು’ ಎಂದು ಬೋಲ್ಡ್ ಅಕ್ಷರಗಳಲ್ಲಿ ಬರೆದಿದ್ದು ಕಂಡು ಹೌಹಾರಿದೆ. ಲೌರೀನ್‌ಳಿಗೆ ಕೂಡಲೆ ಕರೆ ಕಳಿಸಿ ಸಿಕ್ಕಾಪಟ್ಟೆ ಒದರಾಡಿದೆ.

“ನಾನೂ ಟಾಪ್‌ಲೆಸ್ ಓಡುತ್ತೇನೆ ಎಂದು ನಿನಗ್ಯಾರು ಹೇಳಿದೋರು? ಈಗ ಊರೆಲ್ಲ ಹಂಚಿ ಮುಗಿದಿದೆಯಾ ಈ ಇನ್ವಿಟೇಷನ್‌ಗಳನ್ನ? ಹೇಗಾದರೂ ಅದನ್ನೆಲ್ಲ ಹಿಂತೆಗೆದುಕೊಳ್ಳಲು ವ್ಯವಸ್ಥೆ ಮಾಡು. ನಾನು ಟಾಪ್‌ಲೆಸ್ ಓಡುತ್ತಿಲ್ಲ. ನಿನಗೇನು ತಲೆ ಕೆಟ್ಟಿದೆಯಾ? ಕೆಲಸದ ಮೇಲೆ ಒಂದಿಷ್ಟು ನಿಗಾ ಬೇಡವಾ?”

“ನೀನು ಏನು ಹೇಳ್ತಿದ್ದೀ ಶಾಲಿನಿ? ಫೈನಲ್ ಪ್ರತಿಯನ್ನ ಪ್ರಕಟಿಸುವ ಮುನ್ನ ನೀನೇ ತಾನೇ ಒಮ್ಮೆ ನೋಡಿ ಅಸ್ತು ಅಂದಿದ್ದು?”

“ಏನು ಬೊಗಳ್ತಿದೀಯಾ ನೀನು? ಈ ಸಾಲು ನೋಡು. ಟಾಪ್‌ಲೆಸ್ ಆಗಿಯೇ ಉದ್ಘಾಟಿಸುವ ಅಂತಿದೆಯಲ್ಲ. ಇದನ್ನ ನೀವೇ ಯಾರೋ ಹಾಸ್ಯಕ್ಕಾಗಿ ನಂತರ ಸೇರಿಸಿರಬೇಕು. ನನ್ನ ಮರ್ಯಾದೆ ತೆಗೆಯಬೇಕಂತಲೇ ಮಾಡ್ತಿದೀಯಾ ಇದನ್ನ?”

ಲೌರೀನ್ ಗಡಿಬಿಡಿಯಿಂದ ಫೈಲ್‌ಗಳನ್ನೆಲ್ಲ ಹುಡುಕಿ ಆಮಂತ್ರಣ ಪತ್ರಿಕೆಯ ಫೈನಲ್ ಡ್ರಾಫ್ಟನ್ನು ನನ್ನ ಮುಂದೆ ಹಿಡಿದಳು. ನೋಡುತ್ತ ನನಗೇ ಪರಮಾಶ್ಚರ್ಯವಾಯಿತು. ಫೈನಲ್ ಪ್ರತಿಯನ್ನು ನಾನೇ ಒಮ್ಮೆ ನೋಡಿ ಮುಂದುವರೆಯಬಹುದು ಎಂದು ಸಹಿ ಹಾಕಿದ್ದೆ. ನಾನೀಗ ಆಕ್ಷೇಪವೆತ್ತುತ್ತಿದ್ದ ಆ ಸಾಲೂ ಅಲ್ಲೇ ಇತ್ತು.

“ಆದ್ರೆ… ನಾನು… ನಾನು ಹೇಗೆ… ಲೌರೀನ್ ಕ್ಯಾನ್ ಯೂ ಗಿವ್ ಮೀ ಸಮ್ ರೂಮ್?”

ಮಾತನಾಡದೇ ಹೊರಹೋದವಳ ಬೆನ್ನು ದಿಟ್ಟಿಸುತ್ತ ತಟಸ್ಥಳಾಗಿ ಆಫೀಸಿನ ಸೋಫಾದ ಮೇಲೆಯೇ ಕುಸಿದುಬಿಟ್ಟೆ. ನನಗರಿವಿಲ್ಲದೇ ಎದೆಯ ಮುಂದೆ ಕೈಕಟ್ಟಿಕೊಂಡು ಕುಳಿತೆ. ಪ್ರಕಟವಾಗಿರುವ ಸಂದರ್ಶನಗಳು, ನ್ಯೂಸ್ ಪ್ರತಿಕ್ರಿಯೆಗಳನ್ನೆಲ್ಲ ಇನ್ನೊಮ್ಮೆ ತೆಗೆದು ನೋಡಿದೆ. ಎಲ್ಲಿಯೂ ಈ ಮ್ಯಾರಥಾನಿನಲ್ಲಿ ಟಾಪ್‌ಲೆಸ್ ಓಡುವುದಿಲ್ಲ ಅಂತ ನಾನು ಸ್ಪಷ್ಟವಾಗಿ ಹೇಳಿರಲಿಲ್ಲ. ಎಲ್ಲಿಯೂ ಆ ಮಾತೇ ಬಂದಿರಲಿಲ್ಲ. ಸಾವಿರದ ಸಂಖ್ಯೆಯಲ್ಲಿ ಹೆಂಗಸರು ತೆರೆದೆದೆಯಲ್ಲಿ ಓಡುವುದು, ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರೂ ನನ್ನನ್ನು ಅಭಿನಂದಿಸುವುದು, ನಮ್ಮ ಕಂಪನಿಯ ಹೆಸರು ಎಲ್ಲರ ಮನದಲ್ಲೂ ನೆಲೆಸುವುದು… ಇವಿಷ್ಟೇ ನನ್ನ ಕನಸಿನ ಭಾಗವಾಗಿತ್ತು. ಆದರೆ ಆ ಹೆಂಗಸರ ಗುಂಪಿನಲ್ಲಿ ನನ್ನ ಚಿತ್ರವನ್ನು ನಾನೆಂದೂ ಕಲ್ಪನೆ ಮಾಡಿಕೊಂಡಿರಲಿಲ್ಲ. ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಏನನ್ನಾದರೂ ಮಾಡುವಷ್ಟು ಸಮಯಾವಕಾಶವೂ ಈಗ ಉಳಿದಿರಲಿಲ್ಲ.

ನಮ್ಮ ಬೋರ್ಡಿನಲ್ಲಿದ್ದ ಎಲಿಜಬೆತ್‌ರಿಗೆ ಕರೆ ಮಾಡಿದೆ. ಎಪ್ಪತ್ತು ದಾಟಿದ ಈಕೆ ಕಂಪನಿ ಶುರುವಾದಾಗಿನಿಂದಲೂ ನನಗೆ ಗುರುವಿನ ಸ್ಥಾನದಲ್ಲಿದ್ದರು. ಫೋನೆತ್ತಿದ್ದೇ ಉತ್ಸಾಹದಿಂದ ಮಾತನಾಡಲು ಶುರು ಮಾಡಿದರು.

“ಶಾಲಿನಿ, ಐಮ್ ಸೋ ಪ್ರೌಡ್ ಆಫ್ ಯೂ. ನಿನಗಿರುವ ಮುಂದಾಳತ್ವ, ಧೈರ್ಯ ಯಾರಿಗಿದೆ ಈ ಊರಿನಲ್ಲಿ? ಅಂತೂ ನೋಡನೋಡುತ್ತಲೇ ಮ್ಯಾರಥಾನ್ ದಿನ ಬಂದೇ ಬಿಟ್ಟಿತಲ್ಲ! ನಾನು ನನ್ನ ಪೂರ್ತಿ ಪರಿವಾರದ ಜೊತೆಗೆ ಬಂದು ಓಡಲಿದ್ದೇನೆ. ನನ್ನ ಗಂಡ, ಮಗಂದಿರು, ಸೊಸೆಯಂದಿರು, ಮಗಳು, ಅಳಿಯ, ಮೊಮ್ಮಕ್ಕಳು ಎಲ್ಲರೂ ಬರಲಿದ್ದಾರೆ. ಹೆಣ್ಣು ಗಂಡು ಎಂಬ ಬೇಧ ಭಾವವಿಲ್ಲದೇ ಎಲ್ಲರೂ ತೆರೆದೆದೆಯಲ್ಲಿ ಓಡುವುದು ಎಷ್ಟೊಂದು ಲಿಬರೇಟಿಂಗ್ ಅನುಭವ ಅಲ್ಲವೇ? ಅದನ್ನು ಸಾಧ್ಯವಾಗಿಸಿದ್ದಕ್ಕೆ ಥ್ಯಾಂಕ್ಸ್. ನನ್ನ ಜೀವಮಾನದಲ್ಲಿ ಈ ದಿನ ಬರಬಹುದು ಅಂತ ಅಂದುಕೊಂಡಿರಲೇ ಇಲ್ಲ ನೋಡು.”

“ಲಿಸ್, ನಾನು… ನಾನು…” ನನ್ನ ಅಳುದನಿಯನ್ನು ಕೇಳಿ ಎಲಿಜಬೆತ್‌ರಿಗೂ ಆಶ್ಚರ್ಯವಾಯಿತೇನೋ. ಏನಾಯ್ತು ಎಂದು ಕಾಳಜಿಯಿಂದ ಕೇಳಿದರು.

“ಲಿಸ್, ನನಗೆ ಹಾಗೆಲ್ಲ ಬರಿ ಎದೆಯಲ್ಲಿ ಓಡೋಕೇ ಸಾಧ್ಯವಿಲ್ಲ. ನಾನದಕ್ಕೆ ತಯಾರಿಲ್ಲ. ನನ್ನನ್ನು ಹೇಗಾದರೂ ಇದರಿಂದ ಪಾರು ಮಾಡೋಕೆ ಸಾಧ್ಯವೇ?”

“ಹೀಗಂದ್ರೆ ಹೇಗೆ ಶಾಲಿನಿ? ನಮ್ಮ ಕಂಪನಿಯ ಚಹರೆ ನೀನು. ನೀನೇ ಭಾಗವಹಿಸುವುದಿಲ್ಲ ಅಂದರೆ ಸಂಘಟಿಸಿದ ನಾವೇ ಮುಖಹೇಡಿಗಳಾದಂತೆ ಆಗುವುದಿಲ್ಲವೇ? ಅಷ್ಟಕ್ಕೂ ನಿನ್ನ ಹತ್ತಿರ ಸೂಕ್ತ ಕಾರಣವೇನಾದರೂ ಇದೆಯೇ?”

“ಇಲ್ಲ ಹಾಗೆ ಶರ್ಟಿಲ್ಲದೇ ರಸ್ತೆಯಲ್ಲಿ ಓಡಲು ನನಗೆ ಸಾಧ್ಯವೇ ಇಲ್ಲ. ಯಾಕೆ ಅಂತ ಕೇಳಿದರೆ ಏನೆಂದು ಹೇಳಲಿ? ನಾನು ಬೆಳೆದ ಪರಿಸರ ಕಾರಣ ಎಂದರೆ ಅದೂ ತಪ್ಪಾದೀತು. ಬೆಳೆದ ಪರಿಸರದಿಂದ ದೂರ ಬಂದು ಮೂವತ್ತು ವರ್ಷಗಳ ಮೇಲಾಯಿತು. ಯಾಕೆಂದೇ ಹೇಳಲಾಗದ ಕಾರಣಕ್ಕೆ ಸಾಧ್ಯವಿಲ್ಲ. ಲಿಸ್, ಪ್ಲೀಸ್ ಏನಾದರೂ ಮಾಡು.”

ನನ್ನ ಮಾತುಗಳಿಂದ ಎಲಿಜಬೆತ್‌ರಿಗೆ ಬೇರೆ ತರಹದ ಸಂಶಯ ಶುರುವಾಯಿತು.

“ಆರ್ ಯೂ ಬಾಡಿ ಕಾನ್ಶಿಯಸ್? ನಿನ್ನ ಸ್ತನಗಳು ದೊಡ್ಡವು ಅಥವಾ ಚಿಕ್ಕವು ಅಂತ ನಿನಗೆ ಕೀಳರಿಮೆ ಇದೆಯೇನು? ಹೀಗೆ ಕೇಳುತ್ತೇನೆಂದು ತಪ್ಪು ತಿಳಿಯಬೇಡ. ಆದರೆ ಎದೆಯ ಮೇಲೆ ಏನಾದರೂ ಕಲೆ ಇದೆಯೇನು? ಹುಟ್ಟು ಮಚ್ಚೆ ಅಥವಾ ಸರ್ಜರಿಯಿಂದ ಆದ ಗಾಯ? ಏನೇ ಇರಲಿ ಶಾಲಿನಿ. ಎಲ್ಲ ಸಂಕೋಚವನ್ನೂ ಬದಿಗೊತ್ತಿ ನೀನು ಈ ಮ್ಯಾರಥಾನಿನಲ್ಲಿ ಓಡಲೇಬೇಕು.”
ಒಂದು ಕ್ಷಣ ಬಿಟ್ಟು ಮುಂದುವರೆಸಿದರು.

“ನೋಡು, ಬ್ರೆಸ್ಟ್ ಕ್ಯಾನ್ಸರಿನಿಂದ ಡಬಲ್ ಮ್ಯಾಸಕ್ಟಮಿ ಮಾಡಿಕೊಂಡವರು, ಒಂಟಿ ಮೊಲೆಯವರು, ಹುಟ್ಟು ನ್ಯೂನ್ಯತೆಯುಳ್ಳವರು ಎಲ್ಲರೂ ಈ ಓಟದಲ್ಲಿ ಭಾಗವಹಿಸುತ್ತಿದ್ದಾರೆ. ಸ್ತನಗಳು ಸೆಕ್ಸ್ ಆರ್ಗನ್‌ಗಳಲ್ಲ. ಅವುಗಳನ್ನು ನಾವು ಮುಚ್ಚಿಡಬೇಕಿಲ್ಲ. ಅವುಗಳಿರುವುದು ಮಕ್ಕಳಾದರೆ ಹಾಲೂಡಿಸಲು. ಸೆಕ್ಸ್ ಅವುಗಳ ಪ್ರೈಮರಿ ಉದ್ದೇಶವಲ್ಲ. ತುಟಿಗಳಂತೆಯೇ ಅವು. ಯಾರಾದರೂ ನಮಗೆ ತುಟಿಗಳನ್ನು ಮುಚ್ಚಿಕೊಳ್ಳಿ, ನಮಗೆ ಉದ್ರೇಕವಾಗುತ್ತದೆ ಎನ್ನುತ್ತಾರಾ? ಅನ್ನಲ್ಲ ತಾನೇ? ಹಾಗೇ ಇದು. ಹೆಚ್ಚು ಹೆಚ್ಚು ಹೆಂಗಸರು ಮಡಿತನ ಬಿಟ್ಟು ಸಾರ್ವಜನಿಕವಾಗಿ ಎದೆ ತೆರೆದು ಓಡಾಡುವುದನ್ನು ಸಹಜವಾಗಿಸಿಕೊಂಡರೆ ಅದಕ್ಕಂಟಿದ ಗೌಪ್ಯ ಸಮಾಜದಿಂದ ಕ್ರಮೇಣ ತೊರೆದುಹೋಗುತ್ತದೆ. ಇವೆಲ್ಲವನ್ನೂ ನೀನೇ ಸಂದರ್ಶನಗಳಲ್ಲಿ ಹೇಳಿದ್ದು. ಈಗ ಕಾರಣವೇ ಇಲ್ಲದೇ ಹಿಂತೆಗೆದರೆ ಹೇಗೆ ಶಾಲಿನಿ?”

“ಹಾಗಲ್ಲ ಲಿಸ್, ಎದೆ ತೆರೆಯಬಹುದು ಎಂಬ ಸ್ವಾತಂತ್ರ್ಯವಿರುವ ಹಾಗೆ ಎದೆ ಮುಚ್ಚಬಹುದು ಎಂಬ ಸ್ವಾತಂತ್ರ್ಯವನ್ನೂ ನಾವು ಉಳಿಸಿಕೊಳ್ಳಬೇಕಲ್ಲವೇ?”

“ಹೌದು. ಆ ಸ್ವಾತಂತ್ರ್ಯ ಇರಬೇಕು. ಆದರೆ ನೀನೀಗ ಕೇವಲ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. ಯೂ ಆರ್ ದಿ ಫೇಸ್ ಆಫ್ ಅವರ್ ಕಂಪನಿ. ಹೆಗಲ ಮೇಲೆ ಇಷ್ಟೊಂದು ಜನರ ನಂಬಿಕೆಗಳ ಭಾರ ಹೊತ್ತು ನೀನೀಗ ಕೈಯೆತ್ತಬಾರದು. ಥಿಂಕ್ ಅಬೌಟ್ ಇಟ್ ಅಂಡ್ ಲೆಟ್ ಗೋ” ಎಂದು ಫೋನು ತುಂಡರಿಸಿದರು.

ನನ್ನ ಸಂಕಷ್ಟ ಇವರ್ಯಾರಿಗೂ ಯಾಕೆ ಅರ್ಥವಾಗುತ್ತಿಲ್ಲ ಅಂತ ಕನಲಿಹೋದೆ. ರಾತ್ರಿ ಮಾರ್ಕ್ ಬಳಿ ತೋಡಿಕೊಳ್ಳುತ್ತ ಏನೋ ಹೇಳಲು ಹೋಗಿ, ಇನ್ನೇನನ್ನೋ ಹೇಳಿದೆ. “ನಾನು ಮನಸ್ಸಿನಲ್ಲೂ ತೀರಿಹೋದ ಗಂಡನ ಬಗ್ಗೆಯೂ ಏಕವಚನದಲ್ಲಿ ಯೋಚಿಸುವುದಿಲ್ಲ ಗೊತ್ತೇ?” ಅಂದೆ. “ವಾಟ್ಸ್ ಏಕವಚನ?” ಅಂದ. “ಯಾರೂ ಇಲ್ಲದಾಗಲೂ ಮುಂದೆ ಬಗ್ಗುವಾಗ ಹಸ್ತ ತಂತಾನೇ ಡ್ರೆಸ್ಸಿನ ಎದೆಯ ಭಾಗವನ್ನು ಮುಚ್ಚುತ್ತದೆ” ಎಂದೆ. “ದ್ಯಾಟ್ಸ್ ಕ್ಯೂಟ್” ಎಂದ. “ನಿನಗೇ ಗೊತ್ತಲ್ಲ, ಎಲ್ಲಾ ಕಿಟಕಿ ಬಾಗಿಲು ಮುಚ್ಚಿದಾಗಲೂ ನನಗೆ ಬೆಳಕಿನಲ್ಲಿ ಬೆತ್ತಲಾಗಲು ಸಾಧ್ಯವಿಲ್ಲ” ಅಂದೆ. ಅವನಿಗೆ ನನ್ನ ಮಾತುಗಳ ಗಹನತೆಯೇ ಅರ್ಥವಾಗಲಿಲ್ಲ.

“ಇವಕ್ಕೇನಾಗಿದೆ, ದೇ ಆರ್ ಲವ್ಲೀ” ಎಂದು ಅಸಡ್ಡಾಳ ಮಾತನಾಡಿ ಮುದ್ದಿಸಲು ಬಂದ. “ನಾಟ್ ಟುಡೇ” ಎಂದು ಹೇಳಿ ಹೊರಗೆದ್ದು ಬಂದೆ. ಸಹನಾಳಿಗೆ ಕರೆ ಹಚ್ಚಿದರೆ ಅವಳೂ ಮಾತಿಗೆ ಸಿಗಲಿಲ್ಲ. “ಸಾರಿ ಮಾಮ್, ಒಂದು ವರ್ಕ್‌ಶಾಪ್‌ನಲ್ಲಿದ್ದೇನೆ. ಆಲ್ ದಿ ಬೆಸ್ಟ್ ಫಾರ್ ಯುವರ್ ಇವೆಂಟ್” ಎಂದು ಸಂದೇಶ ಕಳಿಸಿದಳು.

ಇದೇ ಪ್ರಥಮ ಬಾರಿಗೆ ಎಲ್ಲರೂ ಎಲ್ಲವೂ ಇದ್ದೂ ಈ ಜಗತ್ತಿನಲ್ಲಿ ನಾನೆಷ್ಟು ಒಂಟಿ ಎಂಬುದು ಅರಿವಿಗೆ ಬಂತು. ಬೆತ್ತಲೆ ಎದೆಯಲ್ಲಿ ನಿಲ್ಲುವುದಿಲ್ಲ ಎಂಬ ಸರಳ ಸ್ವಾತಂತ್ರ್ಯವನ್ನೂ ಉಳಿಸಿಕೊಳ್ಳದೇ ಇರುವುದು ಇದೆಂಥ ಬದುಕು ಅನ್ನಿಸಿತು. ಈ ಐಶ್ವರ್ಯ ಅಧಿಕಾರಕ್ಕೆಲ್ಲ ಏನು ಅರ್ಥ ಅನ್ನಿಸಿತು. ಇದೇ ವ್ಯಾಕುಲತೆಯಲ್ಲೇ ಇನ್ನೊಂದು ದಿನವೂ ಕಳೆದು ಹೋಯಿತು.

ಕಡೆಗೆ ಮ್ಯಾರಥಾನ್ ನಡೆಯುವ ಹಿಂದಿನ ದಿನ ರಾತ್ರಿ ನಾನೇ ಸೋತು ಚಿತ್ರಾಳಿಗೆ ಕರೆ ಮಾಡಿದೆ.

“ನಾನೂ ನಮ್ಮ ಟೀಮಿನ ಜೊತೆಗೆ ಬರುತ್ತಿದ್ದೇನೆ ತಾಯೀ. ನಿನ್ನ ಹಾಗೆ ಮುಂದಿನ ಸಾಲಿನಲ್ಲಿರುವ ಅದೃಷ್ಟ ನಮಗೆಲ್ಲಿ ಸಿಕ್ಕೀತು. ನಾವು ಥರ್ಡ್ ಅವಿನ್ಯೂ ಬಳಿ ಜಾಯಿನ್ ಆಗಿ ಫಿಫ್ತ್ ಅವಿನ್ಯೂ ತನಕ ಓಡುತ್ತೇವೆ” ಅಂದಳು.

“ಚಿತ್ರಾ…”

“ಯಾಕೆ ಶಾಲಿನಿ ಹುಶಾರಾಗಿದ್ದೀ ತಾನೇ?”

“ಚಿತ್ರಾ, ನನಗೆ ಈ ಓಟದಲ್ಲಿ ಭಾಗವಹಿಸಲು ಸಾಧ್ಯವೇ ಇಲ್ಲ. ನಾನು ಇಲ್ಲ ಎಂದು ಎಲ್ಲಿಯೂ ಹೇಳದೇ ಇದ್ದುದರಿಂದ ನೋಡು ಎಲ್ಲರೂ ನನ್ನ ಸಮ್ಮತಿಯನ್ನು ಅವರೇ ನಿರ್ಣಯಿಸಿಬಿಟ್ಟಿದ್ದಾರೆ. ನಿನಗೇ ಗೊತ್ತಲ್ಲ. ನಾನು ಹಾಗೆ ಬಿಡುಬೀಸಾಗಿ ತೆರೆದೆದೆಯಲ್ಲಿ ರಸ್ತೆಯಲ್ಲಿ ಓಡುವ ವ್ಯಕ್ತಿಯೇ? ನನ್ನ ಮಾತು ಯಾರಿಗೂ ಅರ್ಥವೇ ಆಗುತ್ತಿಲ್ಲ…”

“…ಚಿತ್ರಾ, ಪ್ಲೀಸ್ ಏನಾದರೂ ಮಾಡಲು ಸಾಧ್ಯವೇ?”

“ನಾನೇನು ಮಾಡೋಕೆ ಸಾಧ್ಯ?”

“ನಾಳೆ ನಾನು ನಿನ್ನ ಜೊತೆ ಓಡಿದ್ದೇನೆ, ನೀನು ನನ್ನನ್ನು ನೋಡಿದ್ದೀ ಅಂತ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕೋಕೆ ಸಾಧ್ಯವೇ? ನೀನು ನನ್ನ ಪ್ರಾಣ ಸ್ನೇಹಿತೆ, ನೀನು ಹೇಳಿದರೆ ಎಲ್ಲರೂ ನಂಬ್ತಾರೆ.”

“ಸರಿ ಶಾಲಿನಿ, ಅದೇನೂ ಅಷ್ಟು ದೊಡ್ಡ ಸಂಗತಿಯಲ್ಲ. ಬರೀ ಪೋಸ್ಟೇನು, ನನ್ನ ಜೊತೆಗೆ ನೀನೂ ಓಡುತ್ತಿದ್ದ ಹಾಗೆ ಚಿತ್ರವನ್ನು ಫೋಟೋಶಾಪ್ ಮಾಡಿಯೇ ಹಾಕುತ್ತೇನೆ ಬೇಕಾದರೆ. ಆದರೆ ಈ ಸಹಾಯ ಮ್ಯೂಚುವಲ್ ಆಗಬೇಕು ಅಷ್ಟೇ.”

“ಏನು ಚಿತ್ರಾ, ಪ್ರಾಣ ಸ್ನೇಹಿತೆಯರ ನಡುವೆಯೂ ಮ್ಯೂಚುವಲ್ ಸಹಾಯ ಅನ್ನುವ ಮಾತು ಬರಬೇಕಾ?”

“ಅಲ್ಲದೇ ಏನು, ನೀನು ಫ್ರೀಯಾಗಿ ನನಗೆ ಸಹಾಯ ಮಾಡುತ್ತಿದ್ದೆಯಾ?”

“ಏನು ಬೇಕು ನಿನಗೆ?”

“ನಿನಗೆ ಗೊತ್ತು ನನಗೇನು ಬೇಕು ಅಂತ.”

“ವ್ಯಾಲಿಡ್-ಎಂ ರಿಲೀಸನ್ನು ಮಾತ್ರ ಮುಂದೆ ಹಾಕೋಕೆ ಹೇಳಬೇಡ ಚಿತ್ರಾ. ಅದು ನಮ್ಮ ಕಂಪನಿಯ ಕನಸಿನ ಕೂಸು. ಈಗ ಗೊತ್ತಾಗಿರೋ ದಿನಾಂಕವನ್ನು ರದ್ದು ಮಾಡಿದರೆ ನಾನು ಬಹಳಷ್ಟು ಜನರಿಗೆ ಉತ್ತರಿಸಬೇಕಾಗುತ್ತದೆ.”

“ಸರಿ ಹಾಗಾದರೆ, ಫಿಫ್ತ್ ಅವಿನ್ಯೂನಲ್ಲಿ ಪೊಲಕೆ ಕಟ್ಟು ಬಿಚ್ಚಿ ಓಡಲು ತಯಾರಾಗು.”
ಈ ಬಾರಿ ಅವಳು ಮಾತನಾಡುತ್ತಿದ್ದರೂ ನಾನೇ ಕರೆ ತುಂಡರಿಸಿದೆ.

ಒಳಗಿನಿಂದ ರೋಷ ಉಕ್ಕಿಬಂದಂತಾಯಿತು. ಏನು, ಶರ್ಟಿಲ್ಲದೇ ಓಡಬೇಕು ಅಷ್ಟೇ ತಾನೇ ಅನ್ನಿಸಿತು. ಬರೀ ಶರ್ಟೇನು, ನಾನು ಪೂರ್ತಿ ಬೆತ್ತಲೆ ಓಡಿದರೂ ಇವರ್ಯಾರು ನನ್ನದೇನು ಹರಿದುಕೊಳ್ಳುವುದಿದೆ ಎಂದು ಕ್ರೋಧ ಮೂಡಿತು. ಬಾತ್‌ರೂಮಿಗೆ ಹೋಗಿ ಶರ್ಟ್ ತೆಗೆದೆ. ಬ್ರಾ ಕಳಚಿದೆ. ಬೆತ್ತಲೆ ನಿಂತಾಗ ಗೊತ್ತಾಗದೇ ನನ್ನ ಹೆಗಲು ತುಸು ಮುಂದೆ ಬಂದು ಎದೆ ದೈನ್ಯತೆಯಿಂದ ಹಿಂದೆ ಬಾಗುತ್ತಿತ್ತು. ಅಮೆರಿಕನ್ ಹೆಂಗಸರಂತೆ ಬೆನ್ನು ನೇರವಾಗಿಸಿ ಎದೆ ಎತ್ತರಿಸಿ ಒಮ್ಮೆ ನಿಂತೆ. ಅಲ್ಲೇ ಒಂದೆರಡು ಹೆಜ್ಜೆ ಓಡಿದೆ.

ಹಿಂದೊಂದು ಕಾಲದಲ್ಲಿ ಮಗುವಿಗೆ ಎರಡು ವರ್ಷ ಹಾಲೂಡಿಸಿ ಸಡಿಲವಾದ ಮಧ್ಯವಯಸ್ಕ ಹೆಂಗಸಿನ ಸೋತ ಮೊಲೆಗಳು ಹೇಗೆ ತೊನೆದಾಡಬೇಕೋ ಹಾಗೇ ತೊನೆದಾಡಿದವು. ಒಂಟಿಯಾಗಿರುವಾಗಲೂ ಎದೆಯ ಮೇಲೆ ಒಂದು ಕೈ ಮುಚ್ಚಿಯೇ ನಿಲ್ಲವುದೇ ಸಹಜವಾಗಿ ತೋರಿತು. ಮನಸ್ಸು ದಾಟಿದ್ದ ಗೆರೆಯನ್ನು ದೇಹಕ್ಕೆ ದಾಟಲೇ ಸಾಧ್ಯವಾಗಲಿಲ್ಲ.

ಮರುದಿನ ಮುಂಜಾನೆಯ ಉದ್ಘಾಟನೆಯ ಸಮಯಕ್ಕೆ ನಾನು ಹೋಗಲಿಲ್ಲ.

“ಒಂದಿಷ್ಟು ಹೊತ್ತಾದರೂ ಬಂದು ಓಡಿ ಹೋಗು. ಮೀಡಿಯಾದವರೆಲ್ಲ ನೀನೆಲ್ಲಿ ಅಂತ ನಮ್ಮನ್ನು ಕೇಳುತ್ತಿದ್ದಾರೆ. ಎಲ್ಲರ ಮುಂದೆ ನಾವು ಮುಖಹೇಡಿಗಳಾದಂತೆ ಆಗುತ್ತದೆ” ಎಂದು ಕಂಪನಿಯ ಬೋರ್ಡ್‌ನವರೆಲ್ಲ ಆಗ್ರಹ ಮಾಡಿದ್ದರು. ಲೌರೀನ್, ಎಲಿಜಬೆತ್ ಸೇರಿದಂತೆ ನೂರಾರು ಜನ ಕಳಿಸಿದ ಈಮೇಲ್‌ಗಳು, ಕರೆಗಳು ಫೋನಿಗೆ ಬಂದು ಬೀಳಹತ್ತಿದವು. ರೈಡರ್ ಅವಿನ್ಯೂನಲ್ಲಿದ್ದ ನನ್ನ ಪೆಂಟ್‍ಹೌಸ್ ಅಪಾರ್ಟ್‌ಮೆಂಟಿನ ಕಿಟಕಿಯಿಂದ ಕೆಳಗೆ ನೋಡಿದರೆ ಮ್ಯಾರಥಾನ್ ಕಾಣಿಸುತ್ತಿತ್ತು. ಸಾವಿರಾರು ಪ್ಲಕಾರ್ಡುಗಳು, ಟೀವಿ ಕ್ಯಾಮರಾಗಳು, ನೋಡಲೆಂದೇ ಬಂದವರ ಕೂಗು, ಸಿಳ್ಳೆ, ಚೀತ್ಕಾರಗಳು ಕೇಳಿಸದಿದ್ದರೂ ಕಿವಿತುಂಬುತ್ತಿದ್ದವು.

ಇನ್ನೇನು ಲಿಫ್ಟಿಳಿದು ರಸ್ತೆಗೆ ಹೊರಳಿದರೆ ನಾನೂ ಓಟದ ನಡುವೆಯೇ ನಿಂತಿರುತ್ತಿದ್ದೆ. ಆದರೆ ಆ ರೇಖೆ ದಾಟಲು ಮಾತ್ರ ಎಷ್ಟು ಪ್ರಯತ್ನಿಸಿದರೂ ಸಾಧ್ಯವೇ ಆಗಲಿಲ್ಲ. ನನ್ನ ಬಳಿ ಆ ಒಂದು ಆಯ್ಕೆಯೇ ಇಲ್ಲವೇನೋ ಎನ್ನುವ ಹಾಗೆ ಯಾರೋ ನನ್ನನ್ನು ತಡೆದು ನಿಲ್ಲಿಸಿದ ಹಾಗಿತ್ತು. ನನ್ನ ಉಪಸ್ಥಿತಿ ಕೇಳಿ ಬರುತ್ತಿದ್ದ ಸಂದೇಶಗಳು ಟಿನ್, ಟಿನ್ ಎಂದು ಸದ್ದು ಮಾಡುತ್ತಲೇ ಫೋನಿಗೆ ಬಂದು ಬೀಳುತ್ತಿದ್ದವು.

ಕೊನೆಗೆ ಕಂಪ್ಯೂಟರಿಗೆ ನಡೆದು “ವ್ಯಾಲಿಡ್-ಎಂ ಸಾಫ್ಟವೇರ್ ಬಿಡುಗಡೆಯನ್ನು ಅನಿವಾರ್ಯವಾಗಿ ಆರು ತಿಂಗಳು ಮುಂದೆ ಹಾಕಿದ್ದೇವೆ” ಎಂದು ಲೆಟರ್ ಡ್ರಾಫ್ಟ್ ಮಾಡಿ ನಮ್ಮ ರಿಸೀವರ್ ಕಂಪನಿಗಳಿಗೆ ಕಳಿಸಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ಸಿದ್ಧಳಾದೆ. ಆ ಪ್ರತಿಯನ್ನು ಚಿತ್ರಾಳಿಗೂ ಮೇಲ್ ಮಾಡಿದೆ. ತಕ್ಷಣ ಅವಳಿಂದ ಒಂದು ಚಿತ್ರ ನನ್ನ ಈಮೇಲಿಗೆ ಬಂತು.

ಆ ಚಿತ್ರದಲ್ಲಿ ಚಿತ್ರಾ ಥರ್ಡ್ ಅವಿನ್ಯೂನಲ್ಲಿ ತನ್ನ ಎಂಪ್ಲಾಯಿಗಳ ಜೊತೆ ತೆರೆದೆದೆಯಲ್ಲಿ ಓಡುತ್ತಿದ್ದಳು. ಅವಳ ಪಕ್ಕದಲ್ಲೇ ನಾನೂ ಓಡುತ್ತಿದ್ದೆ. ನನ್ನ ಮುಂದೆ ಕುಳ್ಳಗಿನ ಹೆಂಗಸೊಬ್ಬಳು ಓಡುತ್ತಿದ್ದು, ನನ್ನ ಎದೆಯನ್ನು ಆ ಹೆಂಗಸಿನ ತಲೆ ಸಂಪೂರ್ಣವಾಗಿ ಮುಚ್ಚಿತ್ತು. ಚಿತ್ರದಲ್ಲಿ ನನ್ನ ಬೆತ್ತಲೆ ಹೆಗಲುಗಳನ್ನಷ್ಟೇ ಕಂಡು ಸಮಾಧಾನವಾಯಿತು.

ಚಿತ್ರಾ ಫೇಸ್‍ಬುಕ್- ಟ್ವಿಟರ್ ಖಾತೆಗಳಲ್ಲೂ ಈ ಚಿತ್ರವನ್ನು ಹಂಚಿಕೊಂಡಿದ್ದಳು.

“ನನ್ನ ಪ್ರಾಣಸ್ನೇಹಿತೆ, ಐವ್ಯಾಲಿಡ್ ಕಂಪನಿಯ ಸಿಇಓ, ಟಾಪ್‌ಲೆಸ್ ಮ್ಯಾರಥಾನಿನ ಸಂಚಾಲಕಿಯಾದ ಶಾಲಿನಿ ಅಬ್ಬಲಗೆರೆ ಅವರೊಂದಿಗೆ ಓಡಿದ್ದೇ ನನಗೊಂದು ಹೆಮ್ಮೆ” ಎಂದು ಬರೆದಿದ್ದಳು. ಹತ್ತೇ ನಿಮಿಷದಲ್ಲಿ ನಮ್ಮ ವೆಬ್‍ಸೈಟು, ಹತ್ತಾರು ಬ್ಲಾಗ್, ಪತ್ರಿಕೆ, ಟೀವಿ ಚಾನಲ್ಲುಗಳು ಆ ಚಿತ್ರವನ್ನು ಭಿತ್ತರಿಸಿದವು.

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿ ಮನಸ್ಸು ಯಥಾಸ್ಥಿತಿಗೆ ಮರಳಿತ್ತು. ನಾನು ಪತ್ರ ಕಳಿಸಿದಾಗ ಅದಕ್ಕೇ ತಯಾರಾಗಿದ್ದವಳಂತೆ ಚುರುಕಿನ ಗತಿಯಲ್ಲಿ ಫೋಟೋ ಕಳಿಸಿದ ಚಿತ್ರಾಳ ಮೇಲೆ ಅನುಮಾನವಾಯಿತು. ಯಾವುದೋ ವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಒದ್ದಾಡಿದೆ. ಯೋಚಿಸುತ್ತ ಹೋದ ಹಾಗೆ ವ್ಯೂಹದ ಮೂಲ ಆ ಶುಕ್ರವಾರ ಸಂಜೆಯ ಐಡಿಯಾ ಮೀಟಿಂಗಿನಲ್ಲಿ ಮಾತನಾಡಿದ ಸಿಕಿ ಎಂಬ ಸಣಕಲು ಹುಡುಗಿಯ ತನಕ ನನ್ನನ್ನು ಕರೆದೊಯ್ದಿತು.

ಚಿತ್ರಾ ಫೋಟೋದ ಜೊತೆಗೆ ಸಂದೇಶವನ್ನೂ ಕಳಿಸಿದ್ದಳು.

“ಓಯ್ ರಾಜ್ಕುಮಾರಿ, ನೀನು ಬಹಳ ಬದಲಾಗಿ ಬಿಟ್ಟಿದೀಯಾ ಅಂದುಕೊಂಡಿದ್ದೆ. ನೋಡಿದರೆ ನೀನಿನ್ನೂ ಶಿವಮೊಗ್ಗದ ಶರಾವತಿ ನಗರದ ಅದೇ ಗರತಿ. ಲವ್ ಯೂ ಕಣೇಮ್ಮಾ.”

ಅದನ್ನು ಓದುತ್ತಲೇ ನನ್ನ ಇಡೀ ದೇಹ ಕಂಪಿಸಲು ಶುರುವಾಯ್ತು. ಕಂಪ್ಯೂಟರನ್ನು ದಿಟ್ಟಿಸುತ್ತಲೇ ಟೇಬಲ್ಲನ್ನು ಆಸರೆಗಾಗಿ ಹಿಡಿದೆ.
ನಿಯಂತ್ರಣ ಮೀರಿ ನನ್ನ ತುಟಿಗಳಿಂದ “ಬಿಚ್” ಎಂಬ ಪದ ಸಶಬ್ದವಾಗಿ ಹೊರಬಂತು.