ಇಂದಿಗೂ ನನ್ನನ್ನು ಇದೊಂದು ಪ್ರಶ್ನೆ ಕಾಡುತ್ತಲೇ ಇದೆ: ನಾವು ಓದಿಕೊಳ್ಳುವ ಸಾಹಿತ್ಯ, ಕೇಳಿಸಿಕೊಳ್ಳುವ ಕಿವಿ ಮಾತು, ಪ್ರತಿ ದಿನ ನೋಡುವ ಯಾರದ್ದೋ ಬದುಕಿನ ನಿದರ್ಶನಗಳು, ತತ್ವ, ಸಿದ್ಧಾಂತ, ಆದರ್ಶ, ಭಾಷಣಗಳು… ವೈಯಕ್ತಿಕ ಬದುಕಿನ ತಿರುವುಗಳಿಗೆ ಇವು ಹೇಗೆ ಅನ್ವಯವಾಗುತ್ತವೆ? ಯಾರದೋ ವಿಷಯದಲ್ಲಿ ಎಷ್ಟೆಲ್ಲ ಪ್ರಬುದ್ಧವಾಗಿ ದಾರಿ ಹೇಳುವ ನಾವು ನಮ್ಮ ಪ್ರಯಾಣದಲ್ಲಿ ಮಾತ್ರ ಏಕೆ ಓಲಾಡುತ್ತ ನಡೆಯುತ್ತೇವೆ? ಥಿಯರಿ ಹಾಗೂ ಪ್ರಾಕ್ಟಿಕಲ್ಗಳ ನಡುವಿನ ವ್ಯತ್ಯಾಸ ಇಷ್ಟು ಅಗಾಧವೇಕೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಜಗತ್ತಿನ ನೂರಾರು ಘಟನೆಗಳು, ಸಂಗತಿಗಳು ಪ್ರತಿ ಕ್ಷಣವೂ ನಮ್ಮನ್ನು ತಾಕುತ್ತಲೇ ಇರುವ ಈ ಹೊತ್ತಿನಲ್ಲಿ ಒಳ್ಳೆಯದನ್ನು ಕಲಿಯಲಿಕ್ಕೆ ಎಷ್ಟೆಲ್ಲ ದಾರಿಗಳಿವೆಯಲ್ಲ ಎಂದು ಅಚ್ಚರಿಯಾಗುತ್ತದೆ. ತಪ್ಪು ಮಾಡಿ ಸಿಕ್ಕಿಕೊಳ್ಳುವವರ ದೃಷ್ಟಾಂತಗಳು, ಏನೇನೋ ನಿರ್ಧಾರಗಳನ್ನು ತೆಗೆದುಕೊಂಡು ಬದುಕನ್ನು ಬವಣೆ ಮಾಡಿಕೊಂಡವರ ಲೈವ್ ಸುದ್ದಿಗಳು, ಅಂಥಾ ನೂರೆಂಟು ಕಥೆಗಳಿಂದ ಜೀವನ ಸಂದೇಶವನ್ನು ಆಚೆ ತೆಗೆದು ಬೋಧಿಸುವ ಭಾಷಣ-ಪ್ರವಚನಗಳು, ಬರೆದಿಟ್ಟ ಪುಸ್ತಕಗಳು…
ಇಷ್ಟೆಲ್ಲ ಇದ್ದರೂ ದೊಡ್ಡ ಸಂಖ್ಯೆಯ ಮನುಷ್ಯ ಗುಂಪೊಂದು ಏಕಿನ್ನೂ ಬದುಕಿನಲ್ಲಿ ದಾರಿ ತಪ್ಪುತ್ತಲೇ ಇದೆ?
ಬರಹಗಾರ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದೆ. ಬದುಕಿನ ಸವಾಲಿನ ತಿರುವುಗಳ ಬಗ್ಗೆ ಮಾತನಾಡುತ್ತ ಅವರು “ನಾವು ಸೃಷ್ಟಿಸುವ ಪಾತ್ರಗಳಿಗೆ ಎಷ್ಟೆಲ್ಲ ಪ್ರಬುದ್ಧತೆಯನ್ನು ತುಂಬಿಸುವ ನಾವು ಖುದ್ದು ನಮ್ಮ ಬದುಕಿನಲ್ಲಿ ಯಾಕೆ ಹೀಗೆ ಎಳಸುಗಳಂತೆ ವರ್ತಿಸುತ್ತೇವೆ?” ಎಂದುಬಿಟ್ಟರು. ಉತ್ತರ ನನಗೂ ಹೊಳೆಯಲಿಲ್ಲ. ಆದರೆ ಒಬ್ಬ ವ್ಯಕ್ತಿ ನೆನಪಾದ.
ಅವನ ಹೆಸರು ಅಭಿನವ್. ಏಳೆಂಟು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಯಲ್ಲಿ, ಪಕ್ಕದ ತಂಡದಲ್ಲಿ ಕೆಲಸ ಮಾಡುತ್ತಿದ್ದವನು. ಲೀಡ್ ಆಗಿ ಆರೇಳು ಜನರ ತಂಡವನ್ನು ಮುನ್ನಡೆಸುತ್ತಿದ್ದವನು ಉತ್ತರ ಭಾರತದ ಹಳ್ಳಿಯೊಂದರಿಂದ ಬಂದಿದ್ದ. ಅವನಿಗೆ ಚಿತ್ರ ಬಿಡಿಸುವ ಹವ್ಯಾಸವಿತ್ತು. ಮಧುರವಾಗಿ ವೀಣೆ ನುಡಿಸುತ್ತಿದ್ದ. ಹಾಡುತ್ತಿದ್ದ. ಆಧ್ಯಾತ್ಮಿಕತೆಯಲ್ಲೂ ಒಲವಿತ್ತು. ಉತ್ತರ ಭಾರತದ ಪರ್ವತದ ಮೂಲೆಯ ತಾಣಗಳಿಗೆ ಹೋಗಿ, ಯಾವುದೋ ನದಿಯ ತಟದಲ್ಲಿ ಧ್ಯಾನಕ್ಕೆ ಕೂರುತ್ತಿದ್ದ. ಆಧ್ಯಾತ್ಮಿಕತೆಯ ಬಗ್ಗೆ, ಬದುಕಿನ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡುತ್ತಿದ್ದ. ಇಷ್ಟೆಲ್ಲ ಜೀವಂತ ಸಂಗತಿಗಳನ್ನು ಮನಸ್ಸಿನ ತುಂಬಾ ಹರಡಿಕೊಂಡಿರುವವನು ಈ ಯಾಂತ್ರಿಕ ಉದ್ಯೋಗದಲ್ಲಿ ಏಕಿದ್ದಾನೆನ್ನುವುದೇ ನನಗೆ ಅರ್ಥವಾಗಿರಲಿಲ್ಲ.
ನಮ್ಮ ಇಡೀ ಕಂಪನಿ ಕೆಲಸ ಮಾಡುತ್ತಿದ್ದುದು ವಿದೇಶದ ಕ್ಲೈಂಟೊಬ್ಬರಿಗೆ. ಕಡಿಮೆ ಖರ್ಚಿನಲ್ಲಿ ಅವರ ಲಾಭ, ನಷ್ಟ, ಖರ್ಚುಗಳನ್ನು ಅತ್ಯಂತ ವರ್ಣಮಯವಾಗಿ, ವಿವರವಾಗಿ, ವ್ಯವಸ್ಥಿತವಾಗಿ ತೋರಿಸುವ ಪೈಪೋಟಿಗೆ ನಮ್ಮ ಕಂಪನಿ ಬಿದ್ದಿತ್ತು. ಕ್ಲೈಂಟಿಗೋಸ್ಕರ ನಮ್ಮ ದಿನವನ್ನು ಬೆಳಗ್ಗೆ ಹನ್ನೊಂದರಿಂದ ರಾತ್ರಿ ಒಂಬತ್ತಕ್ಕೆ ಬದಲಾಯಿಸಲಾಗಿತ್ತು. ನಮ್ಮ ಶನಿವಾರ, ಭಾನುವಾರಗಳನ್ನೂ ಕ್ಲೈಂಟಿನ ಸೇವೆಗಾಗಿ, ನಮ್ಮ ಒಪ್ಪಿಗೆಯಿಲ್ಲದೇ ಎತ್ತಿ ಕೊಡಲಾಗುತ್ತಿತ್ತು. ಖರ್ಚನ್ನು ದಾಖಲಿಸುವ ಒಂದು ಸರಳವಾದ ಕೆಲಸವನ್ನು ಆಕರ್ಷಕ ಮಾಡುವ ನಿಟ್ಟಿನಲ್ಲಿ ಅದಕ್ಕೆ ಏನೇನೋ ಕ್ಲಿಷ್ಟತೆಗಳನ್ನು ಆಪಾದಿಸಿ ತಳ ಮಟ್ಟದಲ್ಲಿ ಕೆಲಸ ಮಾಡುವ ನಮ್ಮ ಬದುಕನ್ನು ನರಕ ಮಾಡಲಾಗಿತ್ತು. ಅರ್ಥಹೀನವಾದ ಎಂತೆಂಥದೋ ಪ್ರೋಸೆಸ್ ರೂಲ್ಸುಗಳನ್ನು ಸೃಷ್ಟಿಸಲಾಗಿತ್ತು. ಈ ಎಲ್ಲ ಅನಾವಶ್ಯಕ ನಿಯಮಗಳಡಿ ತನ್ನ ತಂಡ ತಪ್ಪಾಗದೇ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಭಿನವನದಾಗಿತ್ತು.
ನಾನು ಕೆಲಸ ಮಾಡುತ್ತಿದ್ದ ತಂಡ, ಅಭಿನವ್ನ ತಂಡ ಹೀಗೇ ಮೂರ್ನಾಲ್ಕು ತಂಡಗಳ ಮೇಲೆ ಒಟ್ಟಾಗಿ ಮ್ಯಾನೇಜಿಂಗ್ ವ್ಯವಸ್ಥೆಯಿತ್ತು. ಚಿಕ್ಕ ವಯಸ್ಸಿಗೇ ದೊಡ್ಡ ಹುದ್ದೆಗೇರಿದ್ದರಿಂದಲೋ, ಅಲ್ಲಿಯ ತನಕ ನಡೆದು ಬಂದ ದಾರಿಯ ಅನುಭವದಿಂದಲೋ ಅಥವಾ ಬದುಕಿನ ಇನ್ಯಾವ ಅಂಶದಿಂದಲೋ ಏನೋ, ಆ ವ್ಯವಸ್ಥೆ ಅತ್ಯಂತ ಕಟುವಾಗಿ ರೂಪುಗೊಂಡಿತ್ತು. ಕೈಕೆಳಗಿನವರ ಜೊತೆ ಒರಟಾಗಿ ಮಾತನಾಡಲಾಗುತ್ತಿತ್ತು. ಎಂಥಾ ತಿಳಿಯಾದ ವಾತಾವರಣದಲ್ಲೂ ಅದು ಹೇಗೋ ಒತ್ತಡ ಸೃಷ್ಟಿಸಿ ತಳ ಮಟ್ಟದ ಕಾರ್ಮಿಕರಿಗೆ ಉಸಿರುಗಟ್ಟಿಸುವವರು ಅಲ್ಲಿದ್ದರು. ಲಾಗಿನ್ನಾದೊಡನೆಯೇ ಮುಖಕ್ಕೆರಗುತ್ತಿದ್ದ ಘಾಟಿನ ಇಮೇಯ್ಲುಗಳಿದ್ದವು.
ಇಷ್ಟೇ ಆಗಿದ್ದರೆ ಇವೆಲ್ಲ ಅಲ್ಲಿಯ ಕೆಲಸದ ವೈಖರಿ, ಅವರೆಲ್ಲ ಕಠಿಣ ಗುರುಗಳು ಎಂದುಕೊಳ್ಳಬಹುದಿತ್ತೇನೋ? ಆದರೆ ಇವೆಲ್ಲದರೆಡೆ ದೊಡ್ಡ ಅಸಮಾಧಾನವನ್ನು ಹುಟ್ಟು ಹಾಕಿದ್ದು ಅಫೀಷಿಯಲ್ ವಿಷಯಗಳಾಚೆಗಿನ ನಡವಳಿಕೆಗಳು. ಮಾತಿನಲ್ಲಿ ಕುಹುಕ, ಹಳೆಯ ಸಂದರ್ಭಗಳಿಂದ ಅನಗತ್ಯವಾಗಿ ಉಳಿಸಿಕೊಂಡು ಬಂದ ಜಿದ್ದು, ಟೀಕೆ, ಬೇರೆಯ ತಂಡದವರು ತಮ್ಮ ಸಾಧನೆಗೆ ಬಹುಮಾನ ಪಡೆಯುವಾಗ ಇವರ ತುಟಿಯಂಚಿನಲ್ಲಿ ಹಾದು ಹೋಗುತ್ತಿದ್ದ ಮತ್ಸರ ತುಂಬಿದ ಪರಿಹಾಸ್ಯ… ಅರೆರೇ, ಒಂದು ವ್ಯವಸ್ಥೆ ಇಷ್ಟೆಲ್ಲ ಕಟುವಾಗಿರುವುದಕ್ಕೆ ಹೇಗೆ ಸಾಧ್ಯ ಎನಿಸುವಷ್ಟು ಅದು ಬಿರುಸಾಗಿತ್ತು.
ಇತ್ತ ಅಭಿನವ ಮಾತ್ರ ಅವರೆಲ್ಲರಿಗಿಂತ ಪೂರ್ಣ ತದ್ವಿರುದ್ಧವಾದ ಗುಣಗಳ ಜೊತೆ ಜನ್ಮತಾಳಿದವನಾಗಿದ್ದ. ಸಂದರ್ಭಗಳನ್ನು ಭಿನ್ನವಾದ ನೆಲೆಗಳಲ್ಲಿ ನೋಡುವ ಅವನ ಗುಣವೇ ಅವನನ್ನು ಕಾರ್ಪೋರೇಟ್ ಕಣದಲ್ಲಿ ಮೇಲಿನವರಿಗೆ ವಿರುದ್ಧವಾಗಿ ನಿಲ್ಲಿಸಿಬಿಟ್ಟಿತ್ತು. ಅವರ ನಡುವೆ ಚಿಕ್ಕ ವಿಷಯಗಳೂ ಹೊತ್ತಿ ಉರಿಯುತ್ತಿದ್ದವು. ಅವರು ಚರ್ಚೆಗೆ ಕುಳಿತರೆಂದರೆ ಎಂಥಾ ಎಸಿಯ ಮೀಟಿಂಗ್ ಕೋಣೆಯ ಶೀತಲವೂ ಗರಂ ಆಗುತ್ತಿತ್ತು.
ಈ ಎಲ್ಲ ಘಟನಾವಳಿಗಳ ಪರಿಣಾಮ ಅಭಿನವನ ಮುಖದಲ್ಲಿ ಪ್ರತಿಫಲಿಸುತ್ತಿತ್ತು. ಮೇಲೆ ಪ್ರಶಾಂತವಾಗಿ ಕಾಣುತ್ತಿದ್ದವನ ಎದೆಯಾಳದ ಕುದಿ ಅವನ ಕಣ್ಣಲ್ಲಿ ಹೊಗೆಯಾಗಿ ಕದಲುತ್ತಿತ್ತು. ಅವನಾದರೂ ಸಂಜೆ ಒಂಬತ್ತಕ್ಕೆ ಲಾಗೌಟಾದ ಬಳಿಕ ಹತ್ತು ಗಂಟೆಗಳ ಒಂದಿಡೀ ದಿನದ ಆಗು-ಹೋಗುಗಳಿಗೆ ಸಂಬಂಧವೇ ಇಲ್ಲದ ಕಲೆಯ ಇರುಳೊಂದನ್ನು ಮೈಮೇಲೆಳೆದುಕೊಳ್ಳುತ್ತಿದ್ದ. ಹಾಡು ಹಾಡುವ, ವೀಣೆ ಮೀಟುವ, ಯಾವುದೋ ಗುಡ್ಡದ ತುದಿಯಲ್ಲಿ ಧ್ಯಾನಸ್ಥನಾದ ಅವನ ಪಟಗಳು ಫೇಸ್ಬುಕ್ಕಿನಲ್ಲಿ, ಸ್ಟೇಟಸ್ಸಿನಲ್ಲಿ ತೇಲಿ ಬರುತ್ತಿದ್ದವು. ಅಲ್ಲಿ ಅಷ್ಟೆಲ್ಲ ಗಾಢವಾಗಿ ಅಪ್ಪಿಕೊಳ್ಳುವ ಶಾಂತ ಹವ್ಯಾಸಕ್ಕೆ ಸಂಪೂರ್ಣ ತದ್ವಿರುದ್ಧವಾದ ಮುಖ್ಯ ಭೂಮಿಕೆಯನ್ನೇಕೆ ಅವನು ಇನ್ನೂ ತೊರೆಯದೇ ಇದ್ದಾನೆ? ಅವನ ಆ ಚಿಂತನೆ, ಸೃಜನಶೀಲತೆ, ಕಲಾತ್ಮಕತೆಗಳೆಲ್ಲ ಸ್ವಲ್ಪವೂ ಬಳಕೆಯಾಗದ ಇಲ್ಲೇಕೆ ಅವನಿನ್ನೂ ಉಳಿದಿದ್ದಾನೆ?
ತೀರಾ ಆ ಕಂಪನಿಯನ್ನು ಬಿಡುವಾಗಲೂ ನನಗದು ಅರ್ಥವಾಗಲೇ ಇಲ್ಲ.
ಇಂದಿಗೂ ನನ್ನನ್ನು ಇದೊಂದು ಪ್ರಶ್ನೆ ಕಾಡುತ್ತಲೇ ಇದೆ: ನಾವು ಓದಿಕೊಳ್ಳುವ ಸಾಹಿತ್ಯ, ಕೇಳಿಸಿಕೊಳ್ಳುವ ಕಿವಿ ಮಾತು, ಪ್ರತಿ ದಿನ ನೋಡುವ ಯಾರದ್ದೋ ಬದುಕಿನ ನಿದರ್ಶನಗಳು, ತತ್ವ, ಸಿದ್ಧಾಂತ, ಆದರ್ಶ, ಭಾಷಣಗಳು… ವೈಯಕ್ತಿಕ ಬದುಕಿನ ತಿರುವುಗಳಿಗೆ ಇವು ಹೇಗೆ ಅನ್ವಯವಾಗುತ್ತವೆ? ಯಾರದೋ ವಿಷಯದಲ್ಲಿ ಎಷ್ಟೆಲ್ಲ ಪ್ರಬುದ್ಧವಾಗಿ ದಾರಿ ಹೇಳುವ ನಾವು ನಮ್ಮ ಪ್ರಯಾಣದಲ್ಲಿ ಮಾತ್ರ ಏಕೆ ಓಲಾಡುತ್ತ ನಡೆಯುತ್ತೇವೆ? ಥಿಯರಿ ಹಾಗೂ ಪ್ರಾಕ್ಟಿಕಲ್ಗಳ ನಡುವಿನ ವ್ಯತ್ಯಾಸ ಇಷ್ಟು ಅಗಾಧವೇಕೆ?
ಸಂಸಾರದ ವಿಷಮ ಕ್ಷಣವೊಂದರಲ್ಲಿ ನಿಂತಿದ್ದ ಹಿರಿಯರೊಬ್ಬರು ಕಡು ಕದನವೊಂದರ ಬಳಿಕ ಕುಸಿದು ಕುಳಿತು “ಮನಸ್ಸಿನಲ್ಲಿರೋ ತಾಳ್ಮೆಯನ್ನ ಮಾತಿಗೆ ಹೇಗೆ ತರಿಸೋದು?” ಎಂದು ವಿಹ್ವಲರಾಗಿ ಕೇಳಿದ್ದರು. ಈ ಹಿಂದೆ ಕಥೆಯಲ್ಲೋ, ಸಿನಿಮಾದಲ್ಲೋ, ಇನ್ಯಾರ ಬಾಳಿನಲ್ಲೋ ನಾವು ನೋಡಿದ್ದ ಘಟನೆಯೊಂದು ಹತ್ತು ಬಾರಿ ಓದಿಕೊಂಡ ಪ್ರಶ್ನೆ ಪತ್ರಿಕೆಯಂತೆ ನಮ್ಮೆದುರು ಬಂದಾಗ ಅಲ್ಲೆಲ್ಲ ಉರು ಹೊಡೆದಿದ್ದ ಉತ್ತರವನ್ನು ಬಿಟ್ಟು ಮತ್ತೇನನ್ನೋ ಏಕೆ ಬರೆಯುತ್ತೇವೆ? ನಮ್ಮ ಮನಸ್ಸಿನಲ್ಲೇ ಇಲ್ಲದ ಮಾತೊಂದನ್ನು ಕೇವಲ ವಾದದಲ್ಲಿ ಗೆಲ್ಲಬೇಕೆಂಬ ಯಕಶ್ಚಿತ್ ಉದ್ದೇಶದಿಂದ ಏಕೆ ಬಿರುಸಾಗಿ ಆಡಿಬಿಡುತ್ತೇವೆ?

ಆದರ್ಶಗಳ ದಾರಿ ತಪ್ಪಿಸುವ ಮೊದಲ ಸಂಗತಿಯೇ ಅಹಂ. ಇನ್ಯಾರದೋ ವಿಷಯದ ಬಗ್ಗೆ ಯೋಚಿಸುವಾಗ ನಮಗಲ್ಲಿ ನಮ್ಮ ಅಹಮ್ಮನ್ನೋ, ಗೌರವವನ್ನೋ, ಬೆಲೆಯನ್ನೋ ಉಳಿಸಿಕೊಳ್ಳುವ ಯಾವುದೇ ದರ್ದಿರುವುದಿಲ್ಲ. ಹಾಗಾಗಿ ಅಲ್ಲಿ ನಾವು ಅತ್ಯಂತ ಸ್ಥಿತ ಪ್ರಜ್ಞರಾಗಿ ನುಡಿಯುತ್ತೇವೆ. ನಡೆಯುತ್ತೇವೆ. ಆದರೆ ನಮ್ಮದೇ ವಿಷಯಕ್ಕೆ ಬಂದಾಗ ಏಕಕಾಲಕ್ಕೆ ಗೌರವ ಉಳಿಸಿಕೊಳ್ಳುವ, ವಾದವನ್ನು ಗೆಲ್ಲುವ, ಅಹಮಿಕೆಯನ್ನು ತೃಪ್ತಿ ಪಡಿಸುವ, ಇನ್ಯಾರದೋ ಎದುರಲ್ಲಿ ಮುಖಭಂಗವಾಗುವುದನ್ನು ತಡೆಯುವ, ಕೊನೆಗೆ ಖುದ್ದು ನಮ್ಮ ಕಣ್ಣಲ್ಲೇ ಕುಸಿಯದಂತೆ ತಡೆಯುವ ಅನಿವಾರ್ಯತೆಗೆ ಬೀಳುತ್ತೇವೆ. ಬುದ್ಧಿಯು ಕಾಲಿನ ಶೂ ಲೇಸನ್ನು ಕಟ್ಟಿಕೊಳ್ಳುವ ಮುನ್ನ ಕೋಪ ನೂರು ಮೀಟರ್ ಓಡಿಯಾಗಿರುತ್ತದೆ!
ಇನ್ನೊಂದು ಸಂಗತಿಯೆಂದರೆ ನಾವು ಓದಿದ, ನೋಡಿದ, ಕೇಳಿದ ಘಟನಾವಳಿಗಳ ವಿಷಯದಲ್ಲಿ ಎಷ್ಟೋ ಸಲ ನಾವು ಪರಿಸ್ಥಿತಿಯ ಆಳಕ್ಕೇ ಇಳಿದಿರುವುದಿಲ್ಲ. ಹೊಟ್ಟೆಗೆ ಇಳಿಯದ ತುತ್ತು ಹಾಗೂ ಚಿಂತನೆಗೆ ಹಚ್ಚದ ಸಂದೇಶ ಇವೆರಡೂ ರಕ್ತದಲ್ಲಿ ಬೆರೆಯುವುದು ಅಸಾಧ್ಯ! ಮೇಲೆ ಮೇಲೇ ಗಮನಿಸಿ ಕಲಿತೆ ಎಂದು ಮುನ್ನಡೆಯುವ ಸಂದೇಶಗಳು ಓದಿ ಮರೆತ ಮೀಮ್ ಮೆಸೇಜಿನಂತೆ ಅಳಿಸಿಹೋಗಿರುತ್ತವೆ. ವಂಶ ವೃಕ್ಷದಲ್ಲಿ ಶ್ರೀನಿವಾಸರ ಪಾತ್ರ ತನ್ನ ಬದುಕಿನ ಎಲ್ಲ ತಿರುವುಗಳನ್ನೂ ತಾನು ಓದಿಕೊಂಡ ತರ್ಕ, ಶಾಸ್ತ್ರ, ಜ್ಞಾನಗಳ ಆಧಾರದಲ್ಲಿ ವಿಶ್ಲೇಷಿಸುತ್ತ, ಎದುರಿಸುತ್ತ ಹೋಗುತ್ತದೆ. ಹಾಗಾಗಿಯೇ ಅದೇ ತಿರುವಿನಿಂದ ಹೊರಟ ಅವರ ಸೊಸೆ ದುರಂತ ಅಂತ್ಯ ಕಂಡ ಹೊತ್ತಿಗೇ ಅವರು ಸ್ಥಿತ ಪ್ರಜ್ಞರಾಗಿ, ತಾವು ಬಯಸಿದಂಥದೇ ಅಂತ್ಯದೆಡೆ ಸಾಗುತ್ತಾರೆ. ನಮ್ಮ ಸುತ್ತಲಿರುವ ಉತ್ತಮ ಸಂಗತಿಗಳು, ದುರಂತ ಕಥೆಗಳು ಬರೀ ಓದಿ ಖುಷಿ ಪಡಲಿಕ್ಕೋ, ಛೇ ಎಂದು ವಿಷಾದ ವ್ಯಕ್ತ ಪಡಿಸಲಿಕ್ಕೋ ಅಲ್ಲ. ಕಾಣದ ನಾಳೆಯ ತಿರುವುಗಳಲ್ಲೆಂದೋ ಎದುರಾಗಬಹುದಾದ ಸವಾಲುಗಳಿಗೆ ನಮ್ಮನ್ನು ನಾವು ಸಿದ್ಧ ಮಾಡಿಕೊಳ್ಳುವುದಕ್ಕೆ.
ಸಾಹಿತ್ಯ, ಕಲೆ, ಆದರ್ಶ, ಸಿದ್ಧಾಂತಗಳನ್ನು ಅಷ್ಟರ ಮಟ್ಟಿಗೆ ಸ್ವಂತ ಬದುಕಿಗೆ ಅನ್ವಯಿಸಿಕೊಳ್ಳುವುದು ಸಾಧ್ಯವೇ?
ಅಭಿನವ ಏಕೆ ಆ ಒತ್ತಡದ ವಾತಾವರಣದಲ್ಲೇ ಉಳಿದ?
ಈಗ ಅನಿಸುತ್ತಿದೆ: ಅಂಥಾ ತದ್ವಿರುದ್ಧದ ಪರಿಸ್ಥಿತಿಯಲ್ಲೂ ಅಷ್ಟು ತಣ್ಣಗೆ, ತನ್ನ ಸ್ವಂತ ಸ್ವಭಾವದಲ್ಲೇ ಉಳಿಯುವಂತೆ ಅವನನ್ನು ಕಾಪಾಡಿದ್ದೇ ಅವನ ಆ ಸೃಜನಶೀಲ ಹವ್ಯಾಸಗಳು! ಆ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲವರು ಅದರ ಭಾಗವಾಗಿ, ತಾವೂ ಕಟುವೇ ಆಗಿ ಹೋರಾಡಿದರು. ತಿವಿದರು. ಕೂಗಿದರು. ಜಗಳ ಕಾದರು. ಅದನ್ನೆಲ್ಲ ಮಾಡಲಾಗದವರು ಅಲ್ಲಿಂದ ಎದ್ದು ನಡೆದರು. ಆದರೆ ಎಲ್ಲ ಟೀಕೆ, ದ್ವೇಷ, ಕುಹುಕ, ಸವಾಲುಗಳನ್ನು ಕೇವಲ ಎದುರಿನವರ ಸ್ವಭಾವವೆಂದು ಸ್ವೀಕರಿಸಿ, ಯಾವ ವೈಯಕ್ತಿಕ ದ್ವೇಷವನ್ನೂ ಬಿತ್ತಿಕೊಳ್ಳದೇ, ಮನೆಯಿಂದ ಹೊರಡುವ ಮುನ್ನ ತೊಟ್ಟು, ಮರಳಿದ ತಕ್ಷಣ ಕಳಚಿದ ಸೂಟು-ಬೂಟುಗಳಂತೆ ಆಫೀಸಿನ ಜಂಜಡಗಳನ್ನೂ ಬಿಚ್ಚಿಟ್ಟು ತನ್ನದಷ್ಟೇ ಆದ ಖಾಸಗೀ ಬದುಕಿನಲ್ಲಿ ಬೆರೆಯುವಂತೆ ಮಾಡಿದ್ದೇ ಅವನ ಚಿತ್ರ, ಹಾಡು, ವೀಣೆ, ಧ್ಯಾನಗಳು! ಖಾಲಿ ಹಾಳೆಗಳ ಮೇಲೆ ಮೂಡಿಸಿದ ಗೆರೆಗಳು, ಭಾವ ಅರಿತು, ರಾಗವನ್ನನುಸರಿಸಿ ಹಾಡಿದ ಹಾಡುಗಳು, ಮೀಟಿದ ತಂತಿ ಹಾಗೂ ಪರಮ ನಿಶ್ಯಬ್ಧದಲ್ಲಿ ಮಾಡಿದ ಧ್ಯಾನ… ಇವೆಲ್ಲವೂ ಒಟ್ಟಾಗಿ ಅಂಥಾ ನೂರಾರು ವಿಷಮಗಳನ್ನು ಎದುರಿಸುವ ಸಹನೆಯನ್ನು ಅವನಲ್ಲಿ ಬಿತ್ತಿದ್ದವು.
ಇಷ್ಟವಿಲ್ಲದ ವಾತಾವರಣವನ್ನು ತೊರೆಯುವುದೊಂದೇ ನೆಮ್ಮದಿಗೆ ಶಾಶ್ವತ ದಾರಿಯಲ್ಲ ಎನ್ನುವುದನ್ನು ಅಭಿನವ ಬಹುಷಃ ಅರ್ಥ ಮಾಡಿಕೊಂಡಿದ್ದ. ಹೀಗೆ ಎದ್ದು ನಡೆಯುತ್ತ ಬಂದರೆ ತಾನು ಎಲ್ಲಿಗೂ ಸಲ್ಲದ ಹಕ್ಕಿಯಾಗುತ್ತೇನೆ ಎನ್ನುವುದು ಅವನಿಗೆ ಗೊತ್ತಾಗಿತ್ತು. ಎಲ್ಲಿ ಹೋದರೂ ನಮಗೆ ಮನುಷ್ಯರೇ ಸಿಗುತ್ತಾರೆ. ಮುಂಗೋಪ, ಸ್ವಾರ್ಥ, ದುಡುಕು, ಟೀಕೆ, ಮೇಲಾಟಗಳಲ್ಲಿ ಮುಳುಗೆದ್ದು ಬಂದ ವ್ಯಕ್ತಿತ್ವಗಳೇ ಎದುರಾಗುತ್ತವೆ. ಕಲೆ, ಸಾಹಿತ್ಯಗಳು ಬರಿದೆ ಓದಿ ಪದವಿ ಪಡೆಯುವುದಕ್ಕೋ, ಮೆಟ್ಟಿಲು ಹತ್ತಿ ಮೆಡಲು ಗಿಟ್ಟಿಸುವುದಕ್ಕೋ ಆದಂಥವಲ್ಲ. ಅವುಗಳ ಮೂಲಕ ತಾನು ತನ್ನೊಳಗಡೆ ಸೃಷ್ಟಿಸಿಕೊಳ್ಳುವ ತಾಳ್ಮೆಯು ಇದನ್ನೆಲ್ಲ ಎದುರಿಸಲಿಕ್ಕೆ ನೆರವಾಗಲೆಂದೇ ಸೃಷ್ಟಿಯಾದಂಥದ್ದು ಎನ್ನುವುದು ಬಹುಷಃ ಅವನಿಗೆ ಅರಿವಾಗಿತ್ತು.

ಕಲೆ, ಕುಟುಂಬ, ಮೌನ, ಸಾಹಿತ್ಯ… ಇವಷ್ಟೇ ನಮ್ಮ ಜನ್ಮದುದ್ದಕ್ಕೂ ಅಂಟಿಕೊಳ್ಳುವ, ಅಂಟಿಸಿಕೊಳ್ಳಬೇಕಾದ ಸಂಗತಿಗಳು. ಕಚೇರಿಯ ಮೀಟಿಂಗ್ ಕೋಣೆಯಲ್ಲಿ ನಮ್ಮನ್ನು ಹಳಿಯಲಿಕ್ಕೆ ಶತಾಯ ಗತಾಯ ಹೋರಾಡುವ ಎದುರಾಳಿಯು ಹೆಚ್ಚಿನ ಸಲ ನನ್ನ ಜಾಗದಲ್ಲಿ ಯಾರಿದ್ದರೂ ಅವರೊಟ್ಟಿಗೆ ಅದನ್ನೇ ನಡೆಸುತ್ತಾನೆ. ಏಕೆಂದರೆ ಸಮಸ್ಯೆಯಿರುವುದು ನನ್ನಲ್ಲಲ್ಲ. ಅವನಲ್ಲಿ! ಚಿಂತನಗೆಳ ಸಾಂಗತ್ಯವಿಲ್ಲದ, ಇದ್ದರೂ ಅವನ್ನು ತೀರಾ ತನ್ನ ವ್ಯಕ್ತಿತ್ವದೊಳಕ್ಕೆ ಬಿಟ್ಟುಕೊಳ್ಳದ ವ್ಯಕ್ತಿತ್ವಗಳು ಎಂಥಾ ಶಾಂತವಾದ ವಾತವರಣದಲ್ಲೂ ಪ್ರಕ್ಷುಬ್ಧವಾಗಿಯೇ ನಡೆದುಕೊಳ್ಳುತ್ತವೆ.
ಕುದಿಯದ ಕಡಲು ಭೂಮಿಯಲ್ಲೇ ಇಲ್ಲ. ನಾವು ಮುಳುಗದ ಹಡಗಾಬೇಕು ಅಷ್ಟೇ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
