Advertisement
ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…

ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…

ಪೂರ್ಣಚಂದ್ರರ ಆತ್ಮೀಯರಲ್ಲೊಬ್ಬರಾದ ಕೆ.ಟಿ. ಅವರ ಖಾಸಾ ಗೆಳೆಯ ಕೂಡ.  ವಿಪರ್ಯಾಸ ಎಂದರೆ ಇದೇ ನೋಡಿ, ಕುವೆಂಪು ತೀರಿಕೊಂಡಾಗ ಇದೇ ತೇಜಸ್ವಿ ಜತೆಗೂಡಿ ಕವಿಶೈಲದ ಕುವೆಂಪು ಸ್ಮಾರಕ ಕಲ್ಪನೆಯನ್ನು ಸಾಕಾರಗೊಳಿಸಿದ್ದವರು ಕೆ.ಟಿ.  ಮುಂದೆ ತೇಜಸ್ವಿಯ ಸ್ಮಾರಕವನ್ನೂ ಸ್ವತಃ ಕೆ.ಟಿ. ನಿರ್ಮಾಣ ಮಾಡುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ದುರಾದೃಷ್ಠವಶಾತ್ ತೇಜಸ್ವಿ ಸಾವು ಅವರ ಸ್ಮಾರಕ ಕಲ್ಪನೆಯನ್ನೂ ಕೆ.ಟಿ.ಯೇ ಮಾಡುವಂತಾಗಿದ್ದು ವಿಪರ್ಯಾಸ.
ಕೆ.
ಟಿ. ಶಿವಪ್ರಸಾದ್  ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

“ಏ, ನಾಗರಾಜ ಕುಪ್ಪಳ್ಳಿಗೆ ಹೋಗುತ್ತಿದ್ದೇನೆ ಬರ್ತಿಯೇನೊ..”?

ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಕರೆ ಮಾಡಿದ್ದರು.

ಕುಪ್ಪಳ್ಳಿ ಎಂದಕ್ಷಾಣ ಕುವೆಂಪು, ತೇಜಸ್ವಿ ನೆನಪಾಗಿ ‘ನೀವು ಕರೆಯುವುದು ಹೆಚ್ಚಾ ನಾವು ಬರುವುದು ಹೆಚ್ಚಾ’ ಎಂದುಕೊಂಡು ಥಟ್ಟನೆ ಒಕೆ ಸಾರ್ ಎಂದೆ.  ಪ್ರೀತಿಯ ಕುವೆಂಪು, ತೇಜಸ್ವಿ ಹುಟ್ಟಿದ ಕುಪ್ಪಳ್ಳಿಗೆ ಹೋಗಬೇಕು ಎಂಬುದು ನನ್ನ ಬಹಳ ದಿನಗಳ ಕನಸಾಗಿತ್ತು. ಇದೀಗ ಈ ಒಂದು ಐತಿಹಾಸಿಕ ಸ್ಥಳಕ್ಕೆ ‘ಬಾರೋ ಹೋಗೋಣʼ ಎಂದು ಸ್ವತಃ ಕೆ.ಟಿ. ಕರೆದಿದ್ದರಿಂದ ಹೋಗದೆ ವಿಧಿ ಇರಲಿಲ್ಲ. ಇವೆಲ್ಲಕ್ಕೂ ಮೀರಿ ನನಗೆ ಕುತೂಹಲ ಇದ್ದಿದ್ದು ಕೆಟಿ ಬಗ್ಗೆ.

ಪೂರ್ಣಚಂದ್ರರ ಆತ್ಮೀಯರಲ್ಲೊಬ್ಬರಾದ ಕೆ.ಟಿ. ಅವರ ಖಾಸಾ ಗೆಳೆಯ ಕೂಡ.  ವಿಪರ್ಯಾಸ ಎಂದರೆ ಇದೇ ನೋಡಿ, ಕುವೆಂಪು ತೀರಿಕೊಂಡಾಗ ಇದೇ ತೇಜಸ್ವಿ ಜತೆಗೂಡಿ ಕವಿಶೈಲದ ಕುವೆಂಪು ಸ್ಮಾರಕ ಕಲ್ಪನೆಯನ್ನು ಸಾಕಾರಗೊಳಿಸಿದ್ದವರು ಕೆ.ಟಿ.  ಮುಂದೆ ತೇಜಸ್ವಿಯ ಸ್ಮಾರಕವನ್ನೂ ಸ್ವತಃ ಕೆ.ಟಿ. ನಿರ್ಮಾಣ ಮಾಡುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ದುರಾದೃಷ್ಠವಶಾತ್ ತೇಜಸ್ವಿ ಸಾವು ಅವರ ಸ್ಮಾರಕ ಕಲ್ಪನೆಯನ್ನೂ ಕೆ.ಟಿ.ಯೇ ಮಾಡುವಂತಾಗಿದ್ದು ವಿಪರ್ಯಾಸ.

ತೇಜಸ್ವಿಯ ಜೀವದ ಗೆಳೆಯರಂತಿದ್ದ ಕೆ.ಟಿ. ಸ್ಮಾರಕದ ಮುಂದೆ ಹೇಗೆ ವರ್ತಿಸುತ್ತಾರೆ..? ಪ್ರತಿಕ್ರಿಯಿಸುತ್ತಾರೆ  ಎಂಬ ಕುತೂಹಲ ಇತ್ತು. ಮತ್ತೊಬ್ಬ ಗೆಳೆಯ ದಂಡೋರ ವಿಜಯ್ ಕುಮಾರ್ ಅವರನ್ನು ಜತೆಗೆ ಹಾಕಿಕೊಂಡು ಶನಿವಾರ ಬೆಳಗ್ಗೆ ಕುಪ್ಪಳ್ಳಿ ಕಡೆಗೆ ಹೊರಟೆವು.

ಬೇಲೂರು ಮಾರ್ಗಕ್ಕೆ ಬರುವ ಹೊತ್ತಿಗೆ ಕೆಟಿ ತಮ್ಮ ಮತ್ತು ತೇಜಸ್ವಿ ನಡುವಿನ ಸ್ನೇಹ ಮತ್ತು ಕಳೆದ ಒಡನಾಟದ ನೆನಪಿಗೆ ಜಾರಲು ಪ್ರಾರಂಭಿಸಿದರು.

ಬೇಲೂರು ರಸ್ತೆಯಲ್ಲಿ ಫಾರಂ ಮಾಡಿಕೊಂಡಿದ್ದ ಕೆಟಿ ‘ನೋಡೋ ಇಲ್ಲೆ ನನ್ನ ಫಾರ್ಮ್ ಇದ್ದಿದ್ದು..,’ ತೇಜಸ್ವಿ ಬೆಂಗಳೂರಿಗೆ ಹೋಗುವಾಗ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಬರುತ್ತಿದ್ದ. ನಾನಾಗ ಚೈನ್ ಸ್ಮೋಕರ್. ಅವನ ಮಕ್ಕಳಿಬ್ಬರೂ ಸಿಗರೆಟ್ ಪ್ಯಾಕ್ಗಳನ್ನು ಹೊತ್ತೊಯ್ಯುತ್ತಿದ್ದರು. ಬೆಂಗಳೂರಿಗೆ ಇಬ್ಬರೂ ಹೋಗುತ್ತಿದ್ದೆವು. ತೇಜಸ್ವಿ ಯಾವಾಗ ಈ ಕಡೆ ಬಂದರೂ ನನ್ನ ಸಂಧಿಸದೆ ಹೋಗುತ್ತಿರಲಿಲ್ಲ. ಜತೆಗೆ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ.

ಏ ಈಡಿಯಟ್ ಯಾಕೋ… ಕಾರ್ ನಿಲ್ಸು. ನನ್ ಮಗನೆ ರೆಸ್ಪೆಕ್ಟ್ ಕೊಡೋ.

ಈ ನಡುವೆ ಚಲಿಸುತ್ತಿದ್ದ ಕಾರಿಗೆ ಅಡ್ಡಲಾಗಿ ಮಹಿಳೆಯೊಬ್ಬಳು ಬಂದು ನಿಂತಿದ್ದೇ ಡ್ರೈವರ್ ರಮೇಶ್ ತಪ್ಪಿಸಿ ಮುಂದೆ ಹೋಗಲು ಟರ್ನ್ ಮಾಡಿದ.

ತಕ್ಷಣ ಕೆಟಿಗೆ ಸಿಟ್ಟು ಬಂತು. “ಏ ಈಡಿಯಟ್ ಯಾಕೋ ಕಾರ್ ನಿಲ್ಸು. ನನ್ ಮಗನೆ ರೆಸ್ಪೆಕ್ಟ್ ಕೊಡೋ. ಅವ್ರು ಹೋಗ್ಲಿ ಬಿಡು. ನಿನ್ದೊಬನ್ದೆನೋ ರೋಡು. ಅವರ್ದುನೂ ಗೊತ್ತೇನೋ ನನ್ ಮಗನೆ”

ಡ್ರೈವರ್ ಒಂದು ಕ್ಷಣ ಷಾಕ್ ಆದ. ಸಾರ್ ಆ ಯಮ್ಮನೇ ಕಾರಿಗೆ ಅಡ್ಡ ಬಂದಿದ್ದು ಎಂದು ಸಮಜಾಯಿಷಿ ನೀಡಲು ಬಂದ. “ಲೋ ರೋಡು ನಮ್ಮೊಬ್ರುದೆ ಅಲ್ಲಾ ಕಣೋ ಎಲ್ಲಾರ್ದೂನು. ನೀನು ಫಾರಿನ್ ಲಿ ಬಂದು ನೋಡು. ಈ ತರ ಅಡ್ಡ ಬಂದ್ರೆ ಕಾರ್ ನಿಲ್ಸಿ ಪ್ಲೀಸ್ ಹೋಗಿ ಎನ್ನುತ್ತಾರೆ. ರೆಸ್ಪೆಕ್ಟ್ ಕೊಡೋದು ಮೊದ್ಲು ಕಲ್ತ್ಕೊಳ್ರೋ”.

ಡ್ರೈವರ್ ರಮೇಶ್ ಆಯ್ತು ಸಾರ್ ಎಂದು ಸುಮ್ಮನಾದ.

ಈ ಮಧ್ಯೆ ನಿಮ್ಗೆ ಒಳ್ಳೆ ಕಾಫಿ ಕುಡಿಸ್ತಿನಿ ಎಂದು ಆಸೆ ಹುಟ್ಟಿಸಿದ ಕೆ.ಟಿ. ಚಿಕ್ಕಮಗಳೂರಿನ ಕಾಫಿ ಕೆಫೆಗೆ ಕರೆದೊಯ್ದರು. ೫೦ ರೂ ಪಾಯಿ ಕಾಫಿ ಕುಡಿಸಿ ಹೇಗಿದೆಯೋ ಎಂದು ನನ್ನತ್ತ ಕಣ್ಣು ಹಾಯಿಸಿದರು. ‘ಬಡ್ಡಿಮಕ್ಳಾ ಟೇಸ್ಟ್ ಕರ್ಲೋ’ ಎಂದು ಒಳಗೇ ಅಂದುಕೊಂಡು ನಕ್ಕಿದ್ದು ಅವರ ಕಣ್ಣಿನಲ್ಲಿ ಕಾಣಿಸುತ್ತಿತ್ತು. ‘ಇದೇ ಕಣ್ರೋ `ಕಾಪಚೀನೋ’ (ಇದು ಕಾಫೆ ಡೆ ಯಲ್ಲಿ ಸಿಗುವ ಒಂದು ಮಾದರಿಯ ಕಾಫಿ)  ಎಂದರು. ಎಲ್ಲೋ ಹೆಸರು ಕೇಳಿದ್ದೆವಲ್ಲಾ, ಈವತ್ತು ಕುಡಿದೆವು ಎಂದು ಸಂತುಷ್ಟರಾಗಿ ಅಲ್ಲಿಂದ ಹೊರಟೆವು.

ತೇಜಸ್ವಿ ಸಂಪರ್ಕದಿಂದಾಗಿಯೇ ಈ ಭಾಗದ ರಸ್ತೆಗಳೆಲ್ಲಾ ಕೆ.ಟಿ. ಗೆ ಸಾಕಷ್ಟು ಪರಿಚಿತ. ಹೀಗಾಗಿಯೇ ಡ್ರೈವರ್ಗೆ ಮುಂದೆ ಸೇತುವೆ ಇದೆ, ಕರ್ವ್ ಇದೆ ಜೋಪಾನ ಎಂದು ಮೊದಲೇ ಹೇಳುತ್ತಿದ್ದರು. ಈ ನಡುವೆ ತಮಾಷೆಯ ಮಾತುಗಳು ನಡೆಯುತ್ತಿದ್ದವು.

ಮುಂದೆ ಹೋಗಿ “ಲೋ ನಾಗ್ರಾಜ ಆ ಮುಸ್ಲಿಂ ಹುಡುಗಿ ನೋಡಿದ್ಯೆನೋ, ಎಷ್ಟ್ ಚೆನ್ನಾಗಿದ್ದಾಳೆ ನೋಡೋ” ಎಂದರು ತಿರುಗಿ ನೋಡುವ ಹೊತ್ತಿಗೆ ದೂರ ಇದ್ದಿದ್ದರಿಂದ ‘ಸಾರ್ ಅವ್ರು ಚೆನ್ನಾಗಿರಲ್ಲಾ ಬುರ್ಕಾ ಹಾಕಂಡಾಗ ಚೆನ್ನಾಗಿರುವಂತೆ ಕಾಣುತ್ತಾರೆ’ ಎಂದೆ.

“ಲೋ ನನ್ ಮೊದಲನೆ ಹೆಂಡ್ತಿ ಮುಸ್ಲಿಂ ಕಣೋ. ಸೌಂದರ್ಯ ನೋಡಿ ಅನುಭವಿಸದುನ್ನ ಕಲಿರ‍್ರೋ. ಎಲ್ಲಿದ್ದರ‍್ರೋ ನೀವೆಲ್ಲಾ..? ನಾನು ೧೦ ನೇ ಕ್ಲಾಸಿಗೆ ಇಂಗ್ಲೀಷ್ ಕಲಿಲೇಬೇಕು ಅಂಥಾ ಹುಚ್ಚು  ಹಿಡಿಸ್ಕಂಡ್ ಕಲಿತೆ.  ಕಾರಣ ಏನು ಗೊತ್ತಾ..? ನಾವು ಆಗ್ಲೇ ಬೆಂಗಳೂರು ಎಂ.ಜಿ. ರೋಡ್. ಬ್ರಿಗೇಡ್ ಸುತ್ತುತ್ತಿದ್ದೆವು. ಅಲ್ಲಿ ಚೆಂದ ಚೆಂದದ ಹೆಣ್ ಮಕ್ಳು ಬರ್ತಿದ್ರು ಎಲ್ರೂ ಇಂಗ್ಲೀಷ್ ಮಾತಾಡ್ತಿದ್ರು. ಅದು ನಮ್ಗೆ ಇರಿಸು-ಮುರುಸು ಮಾಡ್ತಿತ್ತು. ಇವ್ರನ್ನ ಮಾತಾಡಿಸ್ಬೇಕು ಅಂತಾಲೆ ಜಿದ್ದಿಗೆ ಬಿದ್ದು ಪುಸ್ತಕ ಓದಿ ಓದಿ ಕಲ್ತೆ ಕಣೋ” ಎಂದು ಒಮ್ಮೆ ನಕ್ಕರು.

ದಾರಿ ಸಾಗಿತ್ತು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ