‘ಆತ’ನೊಂದಿಗೆ ಮದುವೆ ಮಂಟಪಕ್ಕೆ ಬರುವ ಅವಳು ಕೆಲವೇ ಕ್ಷಣಗಳಲ್ಲಿ ದಾಂಡೇಕರ್ ನೊಂದಿಗೆ ಮದುವೆ ಮನೆಯಿಂದ ಓಡಿ ಹೋಗುತ್ತಾಳೆ. ಅವರಿಬ್ಬರು  ಮುಂಬೈ ಪೋಲೀಸ್ ಆಫೀಸ್ ತಲುಪಿ ಅಲ್ಲಿನ ಲೈಬ್ರರಿಯಲ್ಲಿ ಕೆಲವು ಗಂಟೆ ಕಳೆಯುತ್ತಾರೆ. ಆ ಕೆಲವು ಗಂಟೆಗಳ ಸಾಂಗತ್ಯದಲ್ಲಿ ಇಬ್ಬರ ಮಧ್ಯೆ ಪ್ರವಹಿಸುವ ಭಾವಗಳು ಸಾಗರವಾಗಿ ಹೊಮ್ಮುವ ರೀತಿ ಒಂದು ಚೈತನ್ಯ ಭಾವವಾಗಿ ಬಹುಕಾಲ ತಾಕುವಂತದ್ದು.
ಪ್ರೀತಿ ಮತ್ತು ಸಾವನ್ನು ದಟ್ಟ ಭಾವನೆಗಳ ಬಂಧದಲ್ಲಿ ಕಟ್ಟಿಕೊಡುವ ಹಾಡಿನ ಬಗ್ಗೆ ಮಂಜುಳ ಡಿ ಬರೆದ ಪುಟ್ಟ ಬರಹ ಇಲ್ಲಿದೆ. 

 

ಅಬ್ ತೋ ಯೇ ಆಲಮ್ ಹೈ
ತು ಜಾನ್ ಮಾಂಗೇ ತೋ
ಮೇ ಶೋಕ್ ಸೇ ದೇದು
ಸೌಗಾಥ್ ಮೈ…

ಪ್ರೇಮ- ಪ್ರೀತಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ತೇಲುವುದು ಮರ ಸುತ್ತುವ ಹಾಡುಗಳು. ಕೆಲವು ಗಂಟೆಗಳ ಅಗಲಿಕೆ ಭರಿಸದ ವಿರಹ ವೇದನೆಯೊಂದಿಗಿನ ಚಂದ್ರ ತಾರೆ ಭಾನು… ಇತ್ಯಾದಿ. ಆದರೆ ಅಲ್ಲಿ ಪ್ರೇಮ ಪತ್ರಗಳಿಲ್ಲ, ಹಲವು ವರ್ಷ- ತಿಂಗಳೂ ಹೋಗಲಿ ದಿನಗಳ ಪರಿಚಯವೂ ಅಲ್ಲ! ಮರ ಸುತ್ತುವ ಹಾಡುಗಳಿಲ್ಲ, ಭೇಗುದಿ, ನಿರಾಸೆ, ತಲ್ಲಣ ತವಕ ತಪನ ಇವುಗಳ ಸುಧೀರ್ಘ ಧಾರೆಯಿಲ್ಲ. ಕೆಲವೇ  ಕೆಲವು ಗಂಟೆಗಳ ಸಾಂಗತ್ಯ ಒಂದಿಡೀ ಬದುಕಾಗಿದ್ದು.

ಇಂಥವೆಲ್ಲ ಪುಸ್ತಕದ ಸಾಲುಗಳಲ್ಲಿ ಮಾತ್ರ ಎನ್ನಿಸುವುದು ದಿಟವಾದರೂ…ಇದು ನೈಜ ಕಥೆ, ಜೀವಂತ ಉದಾಹರಣೆ.

ಕೇವಲ ಆ ಮೂರ್ನಾಲ್ಕು ತಾಸುಗಳಲ್ಲಿ ಇಬ್ಬರೂ ಮಾತಾಗಿ ಮೋಹವಾಗಿ ಒಬ್ಬರಲ್ಲೊಬ್ಬರು ಕಳೆದು ಹೋದ ಪರಿ. ಮೌನವಾಗಿಯೇ ಹರಿಯುವ ಈ ಕತೆಯ ಹಾದಿ ಉನ್ಮಾದದ ಲಹರಿ, ಅತೀ ಸೂಕ್ಷ್ಮ ಕಂಪನಗಳಲ್ಲೂ ಹೊಳೆವ ರೌದ್ರ, ಕತ್ತಲ ರಾತ್ರಿಯ ಆ ಮೂರ್ನಾಲ್ಕು ತಾಸುಗಳಲ್ಲಿನ ಮುಂಜಾವು, ಗಾಢ ವೇದನೆಯಡಿ ಮೂಡುವ ಅಚ್ಚ ಬಿಳುಪಿನ ಮಂದಹಾಸ. ದೇಹ ಮನಸ್ಸು ಆತ್ಮ ಮುಪ್ಪುರಿಗೊಂಡು ಸ್ಪಂದಿಸಿದ ಕ್ಷಣ. ಆತ್ಮನನ್ನು ತಟ್ಟಿದ ರಾಗಕ್ಕೆ ಮನಸ್ಸನ್ನು ಇಡಿ ಇಡಿಯಾಗಿ ಸಮರ್ಪಿಸಿದ ಗಳಿಗೆ.

ಎಲ್ಲವೂ ಸಾಗುವ ಗೀತ ಚಿತ್ರದಂತೆ. ಕೆಲವು ತಾಸುಗಳ ಘಟನೆ ಒಂದಿಡೀ ಬದುಕಾಗಿ ನಿಲ್ಲುವಷ್ಟೂ ಗಾಢತೆ…! ಯಾರದ್ದು ಈ ಪ್ರೇಮ ಕಥೆ ಎಂಬ ತವಕ, ಅದರ ಆಳ ಅರಿಯುವವರೆಗೂ ಕಾತರದ ಕಣ್ಣರಳಿಸಿ ಕೂರಲೂ ಬಿಡದ ಕಥೆ ಯಾರದ್ದು ಎಂಬ ಕುತೂಹಲವೇ ?

ವಿಜಯ್ ದಾಂಡೇಕರ್!

ಮುಂಬೈನ ಭೀತಿ ಹುಟ್ಟಿಸಿದ ಎನ್ ಕೌಂಟರ್ ಸ್ಪೆಷಲಿಸ್ಟ್! ಈ ಘಟನೆ ಜರುಗಿದ್ದು 1991 ರ ನವೆಂಬರ್-16 ರ ರಾತ್ರಿ. ವಿಜಯ್ ದಾಂಡೇಕರ್ ಅಂಡರ್ ಕವರ್ ಪೋಲೀಸ್. ಗ್ಯಾಂಗ್ ಸ್ಟರ್ ಗಳೊಂದಿಗಿನ ಸೆಣಸಾಟದಲ್ಲಿ ಗಾಯಗೊಂಡು ಓಡುವ ಸ್ಥಿತಿಯಲ್ಲಿ ಹೋಟೆಲಿನ ರೂಂ ಒಂದನ್ನು ತಲುಪುತ್ತಾನೆ. ಆ ರೂಮಿನಲ್ಲಿ ವಧುವೊಬ್ಬಳು ಕಣ್ಣು ಕೆಂಡದುಂಡೆಗಳಾಗುವಷ್ಟು ರೋದಿಸುತ್ತಿರುತ್ತಾಳೆ. ಅಚಾನಕ್ ಆಗಿ ಮುಂದೆ ಬಂದು ನಿಲ್ಲುವ ಪೊಲೀಸ್ ಅನ್ನು ನೋಡಿ ಗಾಬರಿಗೊಂಡು ಕುಸಿಯುತ್ತಾಳೆ. ಆಕೆಯ ವೇದನೆ ಅರಿತವನಂತೆ, ಕಣ್ಣೊರೆಸಿಕೊಳ್ಳುವಂತೆ ಹೇಳಿ, ಆತ  ದುಪ್ಪಟ್ಟಾ ಆಕೆಯತ್ತ ಚಾಚುತ್ತಾನೆ. ಅಷ್ಟರಲ್ಲಿ,  ಈಕೆಯ ಇರುವಿಕೆ ಖಚಿತ ಪಡಿಸಿಕೊಳ್ಳಲೆಂಬಂತೆ ಹೊರಗಿನಿಂದ ಬಾಗಿಲ ಬಡಿತದ ಸದ್ದು ಕೇಳುತ್ತದೆ. ದಾಂಡೇಕರ್ ಅವಳಿಗೆ ಗನ್ ತೋರಿಸಿ ತನ್ನ ಇರುವಿಕೆ ಬಗ್ಗೆ ಮಾಹಿತಿ ನೀಡದಂತೆ ಸೂಚಿಸುತ್ತಾನೆ. ಆಕೆ ಅಕ್ಷರಶಃ ಅವನ ಮಾತು ಪಾಲಿಸುತ್ತಾಳೆ. ಆತನ ಗಾಯಗಳಿಂದ ರಕ್ತ ಸೋರುತ್ತಿತ್ತು. ಗಾಯಗಳ ವೇದನೆಯಿಂದ ಮುಖ ಕಿವುಚುತ್ತಾನೆ. ಆಕೆ ಮುಲಾಮು ಹಚ್ಚಿ ಅವನನ್ನು ಸಂತೈಸುತ್ತಾಳೆ.

ಎನ್ ಕೌಂಟರ್ ಸ್ಪೆಷಲಿಸ್ಟ್ ಎಂಬ ಅನ್ವರ್ಥ ನಾಮ ಹೊಂದಿರುವ ವಿಜಯ್ ದಾಂಡೇಕರ್  ಓರ್ವ ಪೊಲೀಸ್ ಇನ್ ಸ್ಪೆಕ್ಟರ್.  ಆತನ  ಬದುಕಿನ ಕೆಲವು ಕ್ಷಣಗಳನ್ನು ಆಧರಿಸಿದ ಹಾಡು ‘ಲುಟ್ ಗಯೇ’. ಸಂಜಯ್ ಗುಪ್ತಾ ನಿರ್ದೇಶನದ ‘ಮುಂಬಯಿ ಸಾಗಾ’ ಎಂಬ ಚಿತ್ರದ ಹಾಡಿದು. ಸಿನಿಮಾ ಬಿಡುಗಡೆಗೂ ಮುನ್ನ ಈ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಅಪಾರ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.   ನಾಲ್ಕೂವರೆ ನಿಮಿಷಗಳ ಈ ಹಾಡುಕಟ್ಟಿಕೊಡುವ ಅನುಭೂತಿಯು ದೀರ್ಘಕಾಲದವರೆಗೆ ಮನಸ್ಸನ್ನು ಕಾಡುತ್ತದೆ.

ಮೌನವಾಗಿಯೇ ಹರಿಯುವ ಈ ಕತೆಯ ಹಾದಿ ಉನ್ಮಾದದ ಲಹರಿ, ಅತೀ ಸೂಕ್ಷ್ಮ ಕಂಪನಗಳಲ್ಲೂ ಹೊಳೆವ ರೌದ್ರ, ಕತ್ತಲ ರಾತ್ರಿಯ ಆ ಮೂರ್ನಾಲ್ಕು ತಾಸುಗಳ  ನಂತರ ಗೋಚರಿಸುವ ಮುಂಜಾವದ ಬೆಳಕು,  ಗಾಢ ವೇದನೆಯಡಿ ಮೂಡುವ ಅಚ್ಚ ಬಿಳುಪಿನ ಮಂದಹಾಸ…

‘ಆತ’ನೊಂದಿಗೆ ಮದುವೆ ಮಂಟಪಕ್ಕೆ ಬರುವ ಅವಳು ಕೆಲವೇ ಕ್ಷಣಗಳಲ್ಲಿ ದಾಂಡೇಕರ್ ನೊಂದಿಗೆ ಮದುವೆ ಮನೆಯಿಂದ  ಓಡಿ ಹೋಗುತ್ತಾಳೆ. ಅವರಿಬ್ಬರೂ  ಮುಂಬೈ ಪೋಲೀಸ್ ಆಫೀಸ್ ತಲುಪಿ ಅಲ್ಲಿನ ಲೈಬ್ರರಿಯಲ್ಲಿ ಕೆಲವು ಗಂಟೆ ಕಳೆಯುತ್ತಾರೆ. ಆ ಕೆಲವು ಗಂಟೆಗಳ ಸಾಂಗತ್ಯದಲ್ಲಿ ಇಬ್ಬರ ಮಧ್ಯೆ ಪ್ರವಹಿಸುವ ಭಾವಗಳು ಅಂತರಂಗದಲ್ಲಿ ಶಾಶ್ವತವಾದ ಭಾವ ಸಾಗರವಾಗಿ  ನಿಲ್ಲುತ್ತದೆ. ಅದು ಒಂದು ಚೈತನ್ಯ ಭಾವವಾಗಿ ಬಹುಕಾಲ ತಾಕುವಂಥದ್ದು. ಆಕಾಶದಂತಹ ಆತನ ಪ್ರೀತಿ ಆಕೆಯ ಮನದೊಳಗೆ ಸ್ವಾತಿ ಹನಿಯಾಗಿ ಲೀನವಾಗುವ ರೀತಿ ವಿಶಿಷ್ಟವಾದ್ದು.

ಅಷ್ಟರಲ್ಲೇ ಮೂವರು ಗ್ಯಾಂಗ್ ಸ್ಟರ್ ಗಳು ದಾಳಿ ಮಾಡಿ ಹಾರಿಸಿದ ಗುಂಡು ಆ ವಧುವಿಗೆ ತಾಗಿ  ದಾಂಡೇಕರ್ ತೋಳುಗಳಲ್ಲೇ ಆಕೆ ಅಸುನೀಗುತ್ತಾಳೆ.

ಕಾಲವೂ ಆ ಗಳಿಗೆ ಅರೆಕ್ಷಣ ಸ್ತಬ್ದಗೊಂಡಿರಬೇಕು! ದೈತ್ಯ ರೂಪದಲ್ಲಿ ಅಪ್ಪಳಿಸುವ ಶೋಕ- ಆಕ್ರಂದನ, ಬೇರು ಕಿತ್ತ ಗಿಡದ ನೋವು ಎಷ್ಟು ತೀವ್ರವಾಗಿ ಕಾಡುವುದೆಂದರೆ  ಆತನ ಕಣ್ಣಲ್ಲಿ ನೀರೇ ಇಲ್ಲ.  ಆಗಷ್ಟೇ ಕಲೆತ ಗಳಿಗೆ, ಮೂಡಿದ ವಸಂತ ಕೆಲವೇ ಗಳಿಗೆಗಳಲ್ಲಿ ಶಿಶಿರಕ್ಕೆ ಮರಳಿದಂತೆ. ಈ ಚಿತ್ರಣ ನೋಡುತ್ತಿದ್ದಂತೆ ಅರಿವಿಲ್ಲದೇ ನೋಡುಗರ ಕಣ್ಣು ತುಂಬಿ ಬರುತ್ತವೆ. ತನ್ನ ತೋಳಲ್ಲೇ ಕೊನೆಯಾಗುತ್ತಿದ್ದ ಆಕೆಯನ್ನು ನೋಡುತ್ತಿದ್ದಾಗ ಆತ ಅನುಭವಿಸುವ ಬೇರು ಕಿತ್ತ ಗಿಡದ ನೋವು, ಚರ್ಮ ಸುಲಿದ ಆರ್ತತೆ, ವೇದನೆಯ ಪ್ರವಾಹ ಮಡುಗಟ್ಟಿದ ಕಣ್ಣುಗಳು. ದಾಂಡೇಕರ್  ಮೂವರು ಗ್ಯಾಂಗ್ ಸ್ಟರ್ ಗಳನ್ನು  ಅಲ್ಲಿಯೇ ಎನ್ ಕೌಂಟರ್ ಮಾಡುತ್ತಾರೆ. ಇದಾದ ಮೇಲೆ ದಾಂಡೇಕರ್ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಇನ್ನೂ  ದೊಡ್ಡ ಹೆಸರು ಮಾಡುತ್ತಾರೆ.

ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಆತ ತನ್ನ ಇಡೀ ಬದುಕನ್ನು ಅವಳಿಗಾಗಿ ಸಮರ್ಪಿಸುತ್ತಾನೆ ಎಂಬುದನ್ನು. ಮದುವೆಯೇ ಆಗದೇ ಇರುವಷ್ಟು, ಇನ್ಯಾರ ಬಗ್ಗೆಯೂ ಯೋಚಿಸಲಾರದಷ್ಟು ಗಾಢವಾಗಿ , ಆಕೆಯ ಕುರಿತು ಆತನಲ್ಲಿ ಭಾವನೆಗಳು ಬಲಿತಿರುತ್ತವೆ. ಇಂಥದ್ದೊಂದು ಅಗಾಧ ಭಾವದ ರೀತಿಗೆ,  ದಾಂಡೇಕರ್ ಅವರ ತ್ಯಾಗದ ಬದುಕನ್ನು ಗಮನಿಸಿ ಇಷ್ಟು ಬರೆಯದೇ ಇರಲಾಗಲಿಲ್ಲ. ಅವರ ಸಮರ್ಪಣಾ ರೀತಿ ಮನಸ್ಸಿಗೆ ಬಹುವಾಗಿ ತಾಕಿತು.

ನಿಜವಾದ ಪ್ರೀತಿ-ಸಮರ್ಪಣೆ ಎಂದರೆ, ಪ್ರಯತ್ನಿಸಿದರೂ ಅವರನ್ನು ಬಿಟ್ಟು ಬೇರೆಯರ ಬಗ್ಗೆ ಯೋಚಿಸಲೂ ಸಾಧ್ಯವಾಗದೇ ಇರುವುದೇ ಇರಬಹುದೇನೋ. ಶೇಕ್ಸಪಿಯರ್ ತನ್ನ ಸಾಲುಗಳಲ್ಲಿ ಇದನ್ನೇ ಪ್ರೀತಿಯ ವ್ಯಾಖ್ಯಾನವಾಗಿ ಹೇಳಿದ್ದನಾ.. “ love is not love, which alters when alteration finds”

ಇಮ್ರಾನ್ ಹಶ್ಮಿಯ ನಟನೆ, ಯುಕ್ತಿಯ ಮನತಾಕುವ ತಣ್ಣನೆಯ ಅಭಿವ್ಯಕ್ತಿ, ಜುಬೀನ್ ನಿತಾಲ್ ನ ಅದ್ಭುತ ಕಂಠಸಿರಿ ಒದರೊಳಗೊಂದು ಬೆಸೆದಂತೆ ಚಿತ್ರಿತವಾಗಿದೆ “ಲುಟ್ ಗಯೇ” ಹಾಡು.  ನಾಲ್ಕೂವರೆ ನಿಮಿಷಗಳ ಗೀತೆಯು,  ನಮಗೆ ಬೇರೊಂದು ಲೋಕದಲ್ಲಿದ್ದ ಅನುಭವ ಕೊಡುತ್ತದೆ. ಗೀತ ಚಿತ್ರಣ ಮುಗಿಯುವ ಹೊತ್ತಿಗೆ ಅನನ್ಯ ಭಾವ ಮೂಡಿ ಮನ ತೇವವಾಗುತ್ತದೆ.

ಮನುಷ್ಯ ಸಂಬಂಧಗಳನ್ನು ಶಬ್ದಗಳಲ್ಲಿ ವ್ಯಾಖ್ಯಾನಿಸುವುದು ಬಹು ಕಷ್ಟ. ಈಗಷ್ಟೇ ಇಹಕ್ಕೂ-ಪರಕ್ಕೂ ಸಂಗಾತಿ ಎಂದು ಕರೆದುಕೊಂಡವರು, ಅರೆಗಳಿಗೆ ಬಿಟ್ಟಿರಲಾರದಷ್ಟು ಅಮರ ಪ್ರೇಮದ ಘೋಷಣೆ ಮಾಡಿದವರು  ಕೆಲವೇ ಸಮಯದಲ್ಲಿ ಅವೆಲ್ಲಾ  ಇನ್ಯಾರದ್ದೋ  ಮಾತುಗಳು ಎಂಬಂತೆ ವರ್ತಿಸುವುದನ್ನು ಕಾಣುತ್ತೇವೆ. ಅವೇ ಸಾಲುಗಳು ಮತ್ತಿನ್ಯಾರಿಗೋ  ಅನ್ವಯಿಸುತ್ತಿರುತ್ತವೆ. ಮನುಷ್ಯ ಬಂಧಗಳೂ ವ್ಯವಹಾರದ ವ್ಯಾಪ್ತಿಯೊಳಗೆ ಸೇರಿರುವ ಕಾಲಘಟ್ಟದಲ್ಲಿ ಅಲ್ಲೊಂದು ಇಲ್ಲೊಂದರಂತೆ ಮಿನುಗುವ ಇಂಥ ಜೀವಂತ ಕತೆಗಳು ಬಹುಕಾಲ ಮನಸ್ಸನ್ನು ಹಿಡಿದಿಡುತ್ತವೆ.

ಕಾಲ-ಜಾತಿ-ಹಣ-ಜಾತಕ-ವಯಸ್ಸು ಎಲ್ಲಾ ಮೀರಿ ಬೆಸೆದ ಪ್ರೇಮದ ಅನುಭೂತಿಗೆ ಕಾಲನ ಒಪ್ಪಿಗೆ ಇರಲಿಲ್ಲ. ಆದರೆ ಇದೆಲ್ಲವನ್ನೂ ಮೀರಿ ತನ್ನ ಪ್ರೇಮವನ್ನು ಸಾಕಾರಗೊಳಿಸಿ  ಜೀವಂತವಾಗಿರಿಸಿ ಪ್ರತೀ ಉಸಿರಿನಲ್ಲಿ ಅದನ್ನೇ ಬದುಕಿದ ವಿಜಯ್ ದಾಂಡೇಕರ್ ನಿಜಕ್ಕೂ ವಿಭಿನ್ನ ವ್ಯಕ್ತಿ.  ಇದುವರೆಗೂ ಕಂಡುಂಡ ಎಲ್ಲಾ ಪ್ರೇಮ ಕತೆಗಳನ್ನೂ ಮೀರಿದ ಅನುಭೂತಿ ಕೊಡುವ ಸಿನಿಮಾ ಬಹುಕಾಲದವರೆಗೂ ಕಾಡುವಂಥದ್ದು.

ಹಾ ಮೇರೆ ಜೈಸಾ ಇಷ್ಕ್ ಮೇ ಪಾಗಲ್
ಫಿರ್  ಮಿಲೇ ಯಾ ನಾ ಮಿಲೇ ಕಲ್
ಸೋಚನಾ ಕ್ಯಾ ಹಾಥ್ ಯೇ ದೇದೇ
ಮೇರೇ ಹಾಥ್ ಮೇ…