ಈ ಯೂರಿಯಾ ಹಾಕುವ ದಿನಗಳಲ್ಲಿ ಗದ್ದೆಗಳನ್ನು ಬಹಳ ಜಾಗುರೂಕತೆಯಿಂದ ಕಾವಲು ಕಾಯಬೇಕಾಗುತ್ತದೆ. ಆ ದಿನ ಮಳೆ ಬಂದರೆ ಎಲ್ಲವೂ ಹರಿದು ಹೋಗುವ ಭಯ ಒಂದು ಕಡೆಯಾದರೆ ಇನ್ನೊಂದು ಭಯವೂ ಇದೆ. ಸಂಜೆಯ ವೇಳೆಗೆ ಯೂರಿಯಾ ಹಾಕಿ ಹಾಗೆಯೇ ಹೋದರೆ ಮರುದಿನ ಬೆಳಗ್ಗೆ ಅದು ಬೇರೆ ಗದ್ದೆಯ ಪಾಲಾಗುವುದು ಹೆಚ್ಚು. ಕೆಳಗಿನ ಗದ್ದೆಗಳಿಗೆ ನೀರಿಲ್ಲ ಅಂತ ನೆಪ ಮಾಡಿ ನಮ್ಮ ಗದ್ದೆಯಿಂದ ಅವರ ಗದ್ದೆಗಳಿಗೆ ನೀರು ಹಾಯಿಸುವ ನೆಪದಲ್ಲಿ ಗದ್ದೆಯ ಬದು ಸ್ವಲ್ಪ ಸರಿಸಿದರೆ ಯೂರಿಯವೆಲ್ಲಾ ಆ ಗದ್ದೆಯ ಪಾಲು. ಮಳೆಗಾಲವನ್ನು ಅನುಭವಿಸುವ ಖುಷಿಯಲ್ಲಿ ಉಳುಮೆಯ ಸುಖದುಃಖಗಳ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಲೇಖನ ಇಲ್ಲಿದೆ.
ಎಷ್ಟು ಹೊತ್ತು ಹಾಗೆಯೇ ಕುಳಿತಿದ್ನೋ ಮನೆಯ ಮೆಟ್ಟಿಲ ಮೇಲೆ. ಎಡೆಬಿಡದೇ ಮಳೆ ಸುರಿಯುತ್ತಲೇ ಇದೆ ನಿಲ್ಲುವ ಯಾವುದೇ ಸೂಚನೆ ಇಲ್ಲದೇ. ಮೇಲಿನ ಗದ್ದೆಯಿಂದ ಹರಿದು ಬರುತ್ತಿರುವ ಕೆಂಪು ನೀರು ಅಂಗಳದ ಮಣ್ಣಿನ ತುಳಸಿಕಟ್ಟೆಯ ಎರಡೂ ಕಡೆಗಳಿಂದ ಹರಿದುಹೋದರೂ ಪಾದ ಮುಳುಗುವಷ್ಟು ನೀರು ಅಂಗಳದಲ್ಲಿ. ಮೊನ್ನೆ ಮಾವನ ಮಗ ಬಂದಿದ್ದಾಗ ಆಡಲು ಮಾಡಿಟ್ಟ ತೆಂಗಿನ ಮಡಲಿನ ಕ್ರಿಕೆಟ್ ಬ್ಯಾಟ್ ತೇಲಿ ಹೋಗುತ್ತಿದೆ. ಹೆಂಚಿನಿಂದ ಧಾರೆಧಾರೆಯಾಗಿ ಸರಿಯುವ ನೀರು ಮಾಡಿಗೂ ಅಂಗಳಕ್ಕೂ ಬಿಗಿದು ಕಟ್ಟುತ್ತಿದೆ ಸಾಲು ಸಾಲು ಕಂಬಿಗಳನ್ನು. ಅವುಗಳ ಒಳಗೆ ನಾನು ಬಂಧಿ!
ಗಾಳಿ ಜೋರಾಗಿ ಬೀಸಿದಾಗೊಮ್ಮೆ ದೂರಕ್ಕೆ ಚಿಮ್ಮಿ ಕಂಬಿ ತುಂಡಾಗಿ ಬಂಧ ಮುಕ್ತ. ಮೆಟ್ಟಿಲ ಮೇಲೆ ನಿಂತು ಹೊರಗೆ ಕೈಚಾಚಿ ಆ ನೀರಿನ ಕಂಬಿಗಳನ್ನು ಕತ್ತರಿಸುವುದೆಂದರೆ ನನಗೆ ಬಹಳ ಇಷ್ಟದ ಕೆಲಸ. ಅಂಗೈ ಮೇಲೆ ನೀರು ಬೀಳುತ್ತಿರಬೇಕು ಯಾರೋ ಮೇಲಿಂದ ನೀರು ಹೊಯ್ದಂತೆ. ಅಷ್ಟು ಮಳೆಯಲ್ಲಿಯೂ ಎದುರಿನ ಸೀತಾಫಲದ ಮರದ ಟೊಂಗೆಗಳಲ್ಲಿ ಗೀಜಗದ ಹಕ್ಕಿಗಳು ಕಿಚಪಚ ಶಬ್ದ ಮಾಡುತ್ತಾ ಮಳೆಯಲ್ಲಿ ಮೀಯುತ್ತಿವೆ.
ನನ್ನದೇ ಲೋಕದಲ್ಲಿ ಹೊಕ್ಕಿ ಕಳೆದು ಹೋಗಿದ್ದರೂ ದೂರದ ಗದ್ದೆಯ ಬದುವಿನಿಂದ ಅಮ್ಮ ನೆನೆಯುತ್ತಾ ಬರುತ್ತಿರುವುದು ಗೊತ್ತಾಗಿ ಅದುವರೆಗೂ ಅರಿವಿಗೆ ಬಾರದಿದ್ದ ಚಳಿ ನನ್ನೊಳಗೆ ತುಂಬಿಕೊಳ್ಳತೊಡಗಿತು. ಮತ್ತು ಅದರ ಹಿಂದೆಯೇ ಅಮ್ಮ ಹೇಳಿದ್ದ ಕೆಲಸದ ನೆನಪು ಕೂಡಾ. ಅಷ್ಟರಲ್ಲಾಗಲೇ ಅಮ್ಮ ಮನೆ ತಲುಪಿ ನನ್ನ ಕಿವಿ ಪೀಂಟಿಸಿ “ಎಷ್ಟು ಹೊತ್ತು ನಿನಗೆ? ಕೊಡೆ ತರ್ಲಿಕ್ಕೆ ಹೇಳಿದ್ದಲ್ವಾ… ಇಲ್ಲಿ ಬಂದು ನೀರಲ್ಲಿ ಆಟ ಆಡ್ತಾ ಕೂತ್ಕೊಂಡ. ಏನ್ ಮಳೆ ನೋಡೇ ಇಲ್ವಾ ಇದುವರೆಗೂ? ಇಷ್ಟು ದೊಡ್ಡವನಾದ್ರೂ ಬುದ್ದಿ ಬೆಳಿಲಿಲ್ಲ. ಅಲ್ಲಿ ನಿನ್ನ ಅಪ್ಪ ಮಳೆಗೆ ಎಲ್ಲಾ ಚಂಡಿ ಆದ್ರು… ಎಲ್ಲಾ ನನ್ನ ಕರ್ಮ…” ಮಳೆಯ ವೇಗದೊಡನೇ ಅಮ್ಮನ ಬೈಗುಳನೂ ಹೆಚ್ಚಾಗುತ್ತಿತ್ತು. ಎರಡೂ ನಿಲ್ಲುವ ಲಕ್ಷಣ ಕಾಣದೇ ಕೊಡೆಯ ಒಳಗೆ ಸೇರಿ ಬೈಲ್ ನ ಹಾದಿ ಹಿಡಿದಿದ್ದೆ. ಅಲ್ಲಿ ನೋಡಿದ್ರೆ ಪಾಪ ಅಪ್ಪ ಮಳೆಯ ನಡುವೆಯೂ ಕೋಣಗಳ ಹಿಂದೆ ಇನ್ನೂ ಹೈ…ಹೈ…ಬಲತ್… ಹಂಬಾs ಅಂತ ತಿರುಗುತ್ತಲೇ ಗದ್ದೆ ಉಳುತಿದ್ದಾನೆ. ಮೈಮೇಲೆ ರಪರಪ ಆಂತ ಬೀಳುತ್ತಿರುವ ಮಳೆ ಹನಿಯ ಯಾವುದೇ ಪರಿವೆಯೂ ಇಲ್ಲದೆ. ತಲೆಗೆ ಕಟ್ಟಿದ ಮುಂಡಾಸು ಚಂಡಿ ಮುದ್ದೆಯಾಗಿ ಅಪ್ಪ ಕೂಡಾ ಮಳೆಯ ಒಂದು ಭಾಗವೇ ಎಂಬಂತೆ ಕಾಣುತ್ತಿದ್ದಾರೆ. ಆದರೂ ಓಡಿ ಹೋಗಿ ಅಪ್ಪನ ಕೆಲಸ ನಿಲ್ಲಿಸಿ ಕೊಡೆ ಕೊಡುವ ಮನಸ್ಸಾಗಲೇ ಇಲ್ಲ. ಆ ಮಗ್ನತೆ, ಯಾವತ್ತೋ ತಿಂದದ್ದನ್ನೇ ಮೆಲುಕು ಹಾಕಿತ್ತಾ ಸಾಗುವ ಜೋಡಿ ಕೋಣಗಳು, ಅವರೆಡನ್ನೂ ಒಂದಾಗಿಸಿದ್ದ ಬಣ್ಣದ ನೊಗ, ನೇಗಿಲು, ಅಪ್ಪ ಮತ್ತು ಬುಡಮೇಲಾಗುತ್ತಿದ್ದ ಗದ್ದೆಯ ಮಣ್ಣು ಎಲ್ಲಾ ಸೇರಿ ಒಂದು ಕಲಾತ್ಮಕ ಚಿತ್ರವೇ ಕಣ್ಣ ಮುಂದೆ ನಡೆದುಹೋಗುತ್ತಿದೆ. ಹೇಗೆ ತಾನೇ ಅದನ್ನು ಅಳಿಸಿ ಹಾಕಲಿ? ಹೀಗಂದುಕೊಳ್ಳುತ್ತಲೇ ಗದ್ದೆಗೆ ತಾಗಿಕೊಂಡಿರುವ ತೋಡಿಗೆ ಚಾಚಿಕೊಂಡಿದ್ದ ತೆಂಗಿನಮರದ ಬುಡದ ಕೆಳಗೆ ಬಿಚ್ಚಿದ ಕೊಡೆಯ ಒಳಗೆ ಬೆಚ್ಚಗೆ ಕುಳಿತು ನೋಡತೊಡಗಿದೆ.
ಮುಂಗಾರು ಆರಂಭವಾಗಿ ವಾರವಾಗಿದೆಯಷ್ಟೇ. ಊರಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ನಮ್ಮ ಈ ಪಕ್ಕದ ಗದ್ದೆಗಳಲ್ಲಿ ಆಗಲೇ ಎರಡೆರಡು ಸಾರಿ ಉತ್ತಾಗಿದೆ. ಕೆಲವು ಗದ್ದೆಗಳಲ್ಲಿ ಈಗಾಗಲೇ ಬಿತ್ತೂ ಆಗಿದೆ. ಇನ್ನು ಏನಿದ್ದರೂ ಎಷ್ಟು ಬೇಕೋ ಅಷ್ಟು ನೀರು ನಿಲ್ಲಿಸಿ ಕಳೆಗಿಡಗಳನ್ನು ತೆಗೆಯುವುದಷ್ಟೇ ಕೆಲಸ. ಮಧ್ಯದಲ್ಲಿ ಒಮ್ಮೆ ಒಂದು ಬುಟ್ಟಿ ಯೂರಿಯಾ ಚೆಲ್ಲಿದರೆ ಆಯಿತು. ಮತ್ತೆ ಹಸನಾದ ನೇಜಿ ತಯಾರು. ಅಷ್ಟು ಫಲವತ್ತಾದ ಗದ್ದೆಗಳು ಅವು. ನೀರು ತುಂಬಿಕೊಂಡ ಗದ್ದೆಗಳಲ್ಲಿ ಸಣ್ಣಗೆ ಮೊಳಕೆಯೊಡೆಯುತ್ತಿರುವ ಭತ್ತ. ದೊಡ್ಡ ದೊಡ್ಡ ಸಪೂರ ಕಾಲುಗಳನ್ನು ಊರಿ ಧ್ಯಾನಸ್ಥವಾಗಿರುವ ಬಿಳಿಯ ಕೊಕ್ಕರೆಗಳು. ಸಣ್ಣಗೆ ಹನಿಯುವ ಮಳೆ, ಆಗಸದ ತುಂಬೆಲ್ಲಾ ಕರಿಯ ಮೋಡ… ಈ ವಾತಾವರಣವನ್ನು ನೋಡಲೆಂದೇ ಗದ್ದೆಯ ಬದಿಗೆ ಬರುವ ಹುಚ್ಚು ನನಗೆ.
ಈ ಯೂರಿಯಾ ಹಾಕುವ ದಿನಗಳಲ್ಲಿ ಗದ್ದೆಗಳನ್ನು ಬಹಳ ಜಾಗುರೂಕತೆಯಿಂದ ಕಾವಲು ಕಾಯಬೇಕಾಗುತ್ತದೆ. ಆ ದಿನ ಮಳೆ ಬಂದರೆ ಎಲ್ಲವೂ ಹರಿದು ಹೋಗುವ ಭಯ ಒಂದು ಕಡೆಯಾದರೆ ಇನ್ನೊಂದು ಭಯವೂ ಇದೆ. ಸಂಜೆಯ ವೇಳೆಗೆ ಯೂರಿಯಾ ಹಾಕಿ ಹಾಗೆಯೇ ಹೋದರೆ ಮರುದಿನ ಬೆಳಗ್ಗೆ ಅದು ಬೇರೆ ಗದ್ದೆಯ ಪಾಲಾಗುವುದು ಹೆಚ್ಚು. ಕೆಳಗಿನ ಗದ್ದೆಗಳಿಗೆ ನೀರಿಲ್ಲ ಅಂತ ನೆಪ ಮಾಡಿ ನಮ್ಮ ಗದ್ದೆಯಿಂದ ಅವರ ಗದ್ದೆಗಳಿಗೆ ನೀರು ಹಾಯಿಸುವ ನೆಪದಲ್ಲಿ ಗದ್ದೆಯ ಬದು ಸ್ವಲ್ಪ ಸರಿಸಿದರೆ ಯೂರಿಯವೆಲ್ಲಾ ಆ ಗದ್ದೆಯ ಪಾಲು.
ಆದರೆ ನಮ್ಮದು ಮಾತ್ರ ಇದು ಮೊದಲ ದಿನದ ಉಳುಮೆ. ಅದಕ್ಕೂ ಕಾರಣ ಉಂಟು. ಹೋದ ವರ್ಷದವರೆಗೆ ನಮ್ಮ ಹಟ್ಟಿಯನ್ನು ತುಂಬಿದ್ದ ಕೋಣದ ಜೋಡಿಯನ್ನು ಈ ಜನವರಿಯಲ್ಲಿ ಮಾರಿ ಆಗಿತ್ತು. ಆ ಜೋಡಿಗಳಲ್ಲಿ ಒಂದರ ಕೋಡುಗಳು ಹೊರಕ್ಕೆ ಚಾಚಿಕೊಂಡು ದೂರದಿಂದ ಬುಲೆಟ್ ಗೆ ಹಾಕಿದ ಅಗಲವಾದ ರಾಡ್ ತರಹ ಕಾಣುತ್ತಿತ್ತು. ಆದರೆ ಅದೇನೂ ಕೋಣಗಳ ಕಾರ್ಯಕ್ಷಮತೆಯ ಅಳತೆಗೋಲಿನಲ್ಲಿ ಬರುತ್ತಿಲ್ಲದಿದ್ದರೂ ಜೋಡಿಯಾಗಿ ಹೋಗುವಾಗ ‘ಚಂದ’ ಕಾಣುತ್ತಿರಲಿಲ್ಲ. ಅದೂ ಅಪ್ಪನ ಮನಸ್ಸಿಗೆ ಸರಿಹೊಂದದೇ, ಸಕಾಲದಲ್ಲಿ ವ್ಯವಹಾರವೂ ಕುದುರಿದ್ದರಿಂದ ಅವನ್ನು ಕೊಟ್ಟುಬಿಟ್ಟಿದ್ದರು. ಈ ಕೋಣಗಳನ್ನು ಕೊಡುವುದು ಮತ್ತು ಮನೆ ಮನೆಯ ಹಟ್ಟಿ ಹುಡುಕಿ ಹೊಸ ಜೋಡಿಗಳನ್ನು ತರುವುದೆಂದರೆ ಅಪ್ಪನಿಗೆ ಒಂಥರಾ ಹುಚ್ಚು. ಮತ್ತು ಅವು ಸರಿಕಾಣದಿದ್ದರೆ ಮತ್ತೆ ಹುಡುಕಾಟ. ಒಂದು ವರ್ಷ ಮೂರು ಮೂರು ಜೋಡಿಗಳು ನಮ್ಮ ಹಟ್ಟಿಯನ್ನು ಕಂಡಿದ್ದು ಇನ್ನೂ ನೆನಪಿದೆ. ಆದರೆ ಈ ಬಾರಿ ಕೊಟ್ಟ ನಂತರ ಎರಡು ತಿಂಗಳು ಸುಮ್ಮನಿದ್ದ ಅಪ್ಪ ಏಪ್ರಿಲ್ ಕೊನೆ ಬರುತ್ತಿದ್ದ ಹಾಗೇ ಕೋಣಗಳ ಖರೀದಿಗೆ ಓಡಾಡಲಾರಂಭಿಸಿದ್ದರು.
ಗಾಳಿ ಜೋರಾಗಿ ಬೀಸಿದಾಗೊಮ್ಮೆ ದೂರಕ್ಕೆ ಚಿಮ್ಮಿ ಕಂಬಿ ತುಂಡಾಗಿ ಬಂಧ ಮುಕ್ತ. ಮೆಟ್ಟಿಲ ಮೇಲೆ ನಿಂತು ಹೊರಗೆ ಕೈಚಾಚಿ ಆ ನೀರಿನ ಕಂಬಿಗಳನ್ನು ಕತ್ತರಿಸುವುದೆಂದರೆ ನನಗೆ ಬಹಳ ಇಷ್ಟದ ಕೆಲಸ. ಅಂಗೈ ಮೇಲೆ ನೀರು ಬೀಳುತ್ತಿರಬೇಕು ಯಾರೋ ಮೇಲಿಂದ ನೀರು ಹೊಯ್ದಂತೆ.
ಆದ್ರೆ ಅಷ್ಟೊತ್ತಿಗೆ ಕೊಡಲು ಯಾರೂ ತಯಾರಿರುವುದಿಲ್ಲ. ಮುಂಗಾರು ಆರಂಭವಾದರೆ ಅವರಿಗೂ ಉಳುಮೆಗೆ ಬೇಕಲ್ಲ. ಅದೂ ಅಲ್ಲದೇ ಬೇಸಿಗೆಯಲ್ಲಿ ಕೋಣಗಳಿಗೆ ಬೇಯಿಸಿದ ಹುರುಳಿ, ಎಣ್ಣೆ ಕೊಟ್ಟು ಚೆನ್ನಾಗಿ ಸಾಕುತ್ತಿದ್ದರು. ಅಷ್ಟೆಲ್ಲಾ ಮಾಡಿ ಸಾಕಿದ ನಂತರ ಯಾರೂ ಕೊಡುವ ಬಗ್ಗೆ ಯೋಚನೆ ಕೂಡಾ ಮಾಡುವುದಿಲ್ಲ. ಹಾಗಾಗಿ ನಮಗೂ ಯಾವುದೇ ನುರಿತ ಕೋಣದ ಜೋಡಿ ಸಿಗದೇ ಹೊಸ ಕೋಣದ ಜೋಡಿಯನ್ನೇ ತರಬೇಕಾಯಿತು ಘಟ್ಟಕ್ಕೆ ಹೋಗಿ. ನೋಡಲೇನೋ ತುಂಬಾನೇ ಚಂದ ಇದ್ದವು. ಪ್ರಾಯದಲ್ಲೂ ತರುಣ ಜೋಡಿ. ಎರಡೂ ಅಷ್ಟೇನೂ ಕಪ್ಪಲ್ಲದ ಬೂದು ಬಿಳಿಯ ಬಣ್ಣ, ನುಣುಪಾಗಿ ಉದ್ದವಿದ್ದ ರೋಮಗಳು, ಕೋಡುಗಳು ಕೂಡಾ ಒಂದೇ ತೆರನಾಗಿ ನೋಡಲು ಬಹಳ ಚಂದ ಇದ್ದವು. ಆದರೆ ಬರಿಯ ಚಂದವನ್ನಿಟ್ಟು ಏನು ಮಾಡುವುದು? ಅವು ನಮ್ಮಹಟ್ಟಿಯನ್ನು ಸೇರಿಕೊಂಡಾಗಲೇ ಮುಂಗಾರು ಆರಂಭವಾಗಿತ್ತು. ಉಳುಮೆಗೆ ಅವನ್ನು ತಯಾರು ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ವಾಸು ನಾಯ್ಕನನ್ನು ಕರೆದು ಬಹಳ ಕಷ್ಟಪಟ್ಟು ಅವುಗಳಿಗೆ ಮೂಗುದಾರವನ್ನು ಈಗಾಗಲೇ ಹಾಕಿದ್ದರೂ ಹಟ್ಟಿಯಿಂದ ಸೀದದಲ್ಲಿ ಗದ್ದೆಯವರೆಗೆ ತರಲು ಬಹಳ ಕಷ್ಟಪಡಬೇಕಾಗಿತ್ತು. ಗದ್ದೆಯ ನಡುವಿನ ಬದುವಿನಿಂದ ನಡೆಯಲು ಅಭ್ಯಾಸವಿಲ್ಲದ ಅವು ಬೇರೆಯವರ ಗದ್ದೆಯಲ್ಲಿ ಬೆಳೆದ ಹಸಿರು ಹುಲ್ಲನ್ನು ಕಂಡು ಓಡುತ್ತಿತ್ತು. ಆ ಗದ್ದೆಗಳಲ್ಲಿ ಯಾವುದೇ ಫಸಲು ಇಲ್ಲದ್ದರಿಂದ ಯಾವುದೇ ಸಂಕಷ್ಟಕ್ಕೆ ಒಳಗಾಗಲಿಲ್ಲ.
ನಮ್ಮ ಹಟ್ಟಿ ಸೇರಿದ ನಂತರ ಮೊದಲ ಬಾರಿ ಗದ್ದೆ ಉಳುವ ಟ್ರೈನಿಂಗ್ ಗಾಗಿ ಗದ್ದೆಗೆ ಕರೆದುಕೊಂಡ ಹೋದದ್ದು ಇಳಿ ಸಂಜೆಯ ಹೊತ್ತಿನಲ್ಲಿ. ಎರಡು ಬಿಳಿಯ ಕೊಕ್ಕರೆಗಳು ಎಲ್ಲಿಂದಲೋ ಪುರ್ರನೇ ಹಾರಿಬಂದು ಜನ್ಮಾಂತರದ ಬಂಧವೋ ಎನ್ನುವಂತೆ ಬೊಳ್ಳನ ತಲೆಯ ಮೇಲೆ ಕೂತು ಹೇನು ಹೆಕ್ಕುವ ಕೆಲಸದಲ್ಲಿ ನಿರತವಾದವು. ಆ ನೋಟ ದೂರದಿಂದ ನೋಡುವವರಿಗೆ ಬೊಳ್ಳನ ತಲೆಯ ಮೇಲೆ ಯಾರೋ ಬಿಳಿಯ ಮುಂಡಾಸು ಕಟ್ಟಿದಂತೆ ಕಾಣುತ್ತಿತ್ತು. ಹೆಚ್ಚು ಹೊತ್ತು ಅವುಗಳನ್ನು ಹಾಗೆಯೇ ಬಿಟ್ಟರೆ ಕಿವಿಗೆ ಗಾಳಿ ತುಂಬಿಕೊಂಡ ಎಳೆ ಕರು ಓಡುವ ಹಾಗೆ ಓಡುವ ಅಪಾಯವಿತ್ತು. ಅಷ್ಟೆಲ್ಲಾ ಗೊತ್ತಿದ್ದರೂ ಹುಟ್ಟಾ ಕೆಲಸಗಳ್ಳನಾದ ನಾನು ಇದನ್ನೆಲ್ಲಾ ಅಪ್ಪನಿಗೆ ಹೇಳುವ ಚಾನ್ಸೇ ಇರಲಿಲ್ಲ ಬಿಡಿ. ಗೋವಿಂದನೊಡನೆ ಮಾತಾಡುತ್ತಾ ಅವರಿಂದ ಪಡೆದ ಬೀಡಿಯನ್ನು ಸೇದುತ್ತಾ ನಿಂತಿದ್ದ ಅಪ್ಪನಿಗೆ ಅದ್ಯಾವುದೋ ದಿವ್ಯ ಗಳಿಗೆಯಲ್ಲಿ ಈ ಸ್ಪೆಷಲ್ ಟ್ರೈನಿಂಗ್ ನ ನೆನಪು ಬಂದದ್ದೇ ತಡ ಕೋಣಗಳೆರಡು ನೊಗಕ್ಕೆ ಭಾರೀ ಕಷ್ಟದಲ್ಲಿ ಜೋತುಬಿದ್ದು ನಡುವೆ ಕಟ್ಟಿದ ನೇಗಿಲಿಗೆ ಕೈಯೊಡ್ಡಿ ಅಪ್ಪ ತಯಾರಾದರು. ನುರಿತ ಕೋಣಗಳು ಹೈ…ಹೈ… ಅಂತ ಸಿಗ್ನಲ್ ಕೊಟ್ಟ ತಕ್ಷಣ ಅಥವಾ ಕೋಲಿನಿಂದ ಬೆನ್ನಿಗೆ ಒಂದು ಪೆಟ್ಟು ಕೊಟ್ಟ ತಕ್ಷಣ ಸರಳರೇಖೆಯಲ್ಲಿ ಒಂದೇ ತೆರನಾಗಿ ಹೊರಡುತ್ತವೆ. ಆದರೆ ಏನೂ ಗೊತ್ತಿಲ್ಲದ ಈ ಹೊಸ ಜೋಡಿ ಎಷ್ಟು ಹೊಡೆದರೂ ಮುಂದೆ ಹೋಗಲಾರದು. ಹೆಚ್ಚಂದರೆ ದಿಕ್ಕೆಟ್ಟು ಓಡಬಹುದು. ಅದಕ್ಕಾಗಿಯೇ ಎರಡೂ ಕೋಣಗಳ ಮೂಗುದಾರಗಳಿಗೆ ಉದ್ದದ ಸಪೂರ ಹಗ್ಗವನ್ನು ಕಟ್ಟಿ, ಅದನ್ನು ಹಿಡಿದುಕೊಂಡು ಮುಂದೆ ಸಾಗುವ ದಾರಿಕರಿರಬೇಕು. ಅದಕ್ಕಾಗಿ ನಾನು ತಯಾರಾಗಿಯೇ ಇದ್ದೆ. ಆದರೆ ಯಾಕೋ ಅಂದು ಅನ್ಯಮನಸ್ಕನಾಗಿಯೇ ಇದ್ದೆ. ಅದಕ್ಕೂ ಬಲವಾದ ಕಾರಣವಿತ್ತು.
ಮೊದಲೇ ಹೊರಡುವಾಗ ಅಪ್ಪನ ಕೈಯಲ್ಲಿ ಪೆಟ್ಟು ತಿಂದಿದ್ದೆ. ವಿಷಯ ಸಿಂಪಲ್, ಕೋಣಕ್ಕೆ ಹೊಡೆದು ದಾರಿಗೆ ತರುವ ಕೋಲಿನ ವಿಷಯದಲ್ಲಿ ಅಪ್ಪನೊಂದಿಗೆ ನಡೆದ ಸಣ್ಣ ಜಟಾಪಟಿಯೇ ಇದಕ್ಕೆಲ್ಲಾ ಕಾರಣ. ಕೋಲು ತಯಾರು ಮಾಡಿ ಇಡಲು ಬೆಳಿಗ್ಗೆಯೇ ಹೇಳಿದ್ದರೂ ನಾನು ಮಾಡಿರಲಿಲ್ಲ. ಮಧ್ಯಾಹ್ನ ಊಟದ ಹೊತ್ತಿಗೆ ಅಮ್ಮ ನೆನಪು ಮಾಡಿದ್ದರಿಂದ ಎರಡುವರೆ ಅಡಿ ಉದ್ದದ ಒಂದು ಕರ್ಮರದ ಕೋಲನ್ನು ಮುರಿದು ತಂದಿದ್ದೆ. ಮತ್ತೆ ಗದ್ದೆಗೆ ಹೊರಡುವಾಗ ಅದೇ ಕೋಲನ್ನು ಅಪ್ಪನಿಗೆ ಕೊಟ್ಟಿದ್ದೆ. ಆದರೆ ಅದರ ಮೊದಲ ಪ್ರಯೋಗ ನನ್ನ ಮೇಲೆಯೇ ಆಗಿ ಸಹಸ್ರ ನಾಮಾರ್ಚನೆಯಾದಾಗಲೇ ಮಾಡಿದ “ತಪ್ಪಿನ” ಅರಿವಾಗಿತ್ತು. ಈ ಉಳುಮೆಗೆ ಉಪಯೋಗಿಸಲ್ಪಡುವ ವಸ್ತುಗಳಲ್ಲೆಲ್ಲಾ ಅಪ್ಪನಿಗೆ ವಿಪರೀತ ಅನ್ನಿಸುವಷ್ಟು ವ್ಯಾಮೋಹ. ಅದು ಅವರು ಅಂದುಕೊಂಡ ರೀತಿಯಲ್ಲಿಯೇ ಇರಬೇಕು. ಊಟದ ವಿಷಯದಲ್ಲಿ ಬೇಕಾದರೂ ಸುಮ್ಮನಿದ್ದಾರು, ಆದರೆ ಈ ವಿಷಯದಲ್ಲಿ ಮಾತ್ರ ಒಂದು ಆಚೀಚೆ ಆದರೆ ಅವರು ಸಹಿಸುವುದಿಲ್ಲ. ನೊಗದ ಹಗ್ಗಗಳು ಒಂದೇ ಸಮನಾಗಿದ್ದು ಕೋಣದ ಕುತ್ತಿಗೆಗೆ ಸುತ್ತುಬರುವ ಹಗ್ಗ ಎಲ್ಲಿಯೂ ನಾರು ಎದ್ದು ಬಂದು ಚುಚ್ಚುವಂತಿರಬಾರದು. ನೇಗಿಲಿನ ಚೂಪಾದ ತುದಿಯ ಪ್ಲೇಟ್ ನ ನಟ್ ಬೋಲ್ಟ್ ಗಳೆಲ್ಲಾ ಟೈಟ್ ಆಗಿರ್ಬೇಕು. ಕೋಣಗಳು ಬೇರೆ ಗದ್ದೆಗಳ ಬೆಳೆಗಳನ್ನು ತಿನ್ನದಂತೆ ಅವುಗಳ ಮೂತಿಗೆ ಅಡ್ಡವಾಗಿ ಕಟ್ಟುವ ಬುಟ್ಟಿ ಎಲ್ಲೂ ಹರಿದಿರದೇ ಸರಿಯಾಗಿ ನಿಲ್ಲುವಂತಿರಬೇಕು. ಮತ್ತು ವಿಶೇಷವಾಗಿ ಕೋಣಗಳಿಗೆ ಡೈರೆಕ್ಷನ್ ಕೊಡುವ “ಎರಡುವರೆ” ಅಡಿ ಉದ್ದದ ಕೋಲು! ಇದಂತೂ ಅವರ ಟೆಸ್ಟ್ ಗಳಲ್ಲಿ ಪಾಸಾಗಲೇ ಬೇಕು. ಅದು ಎರಡುವರೆ ಅಡಿ ಉದ್ದವೇ ಏಕಿರಬೇಕು ಅಂತ ನಾನ್ಯಾವತ್ತೂ ಅಪ್ಪನಲ್ಲಿ ಪ್ರಶ್ನೆ ಮಾಡಿಲ್ಲ. ಆದ್ದರಿಂದಾಗಿ ನಿಮ್ಮಷ್ಟೇ ಕುತೂಹಲ ನನಗೂ ಇದೆ.
ಕರ್ಮರ ಮರದ್ದು ಆದರೆ ಅದು ಬೆಸ್ಟ್. ಅದನ್ನು ತಂದು ಅಂಗಳದಲ್ಲಿ ಒಂದು ಅಡ್ಡ ಪಂಚೆ ಕಟ್ಟಿ ಕುಳಿತುಕೊಂಡು ಕತ್ತಿಯಿಂದ ಆ ಕೋಲಿನ ಎರಡೂ ತುದಿಯನ್ನು ನುಣ್ಣಗೆ ಬೋಳಿಸಿ, ಇಡೀ ಕೋಲಿನ ಸಿಪ್ಪೆ ತೆಗೆದು ಎರಡೆರಡು ಸಾರಿ ಕತ್ತಿಯ ಕಿಸುಲಿ ಹಾಕಿ ನೈಸ್ ಮಾಡದಿದ್ರೆ ಅವರಿಗೆ ಆ ರಾತ್ರಿ ನಿದ್ದೆ ಹತ್ತಲಾರದು. ಕೆಲವು ಸಾರಿ ಇನ್ನೂ ಮೂಡ್ ಇದ್ದರೆ ಹಿಡಿ ಹತ್ತಿರ ಮಾತ್ರ ಅದರ ಸಿಪ್ಪೆಯನ್ನು ಉಳಿಸಿಕೊಂಡು ಅದಕ್ಕೊಂದು ಡಿಫರೆಂಟ್ ಟಚ್ ಕೊಡುವುದೂ ಉಂಟು. ಅಂತಹ ಐದಾರು ಕೋಲುಗಳು ಹಟ್ಟಿಯ ಎದುರಲ್ಲಿ ನೇತಾಡುತ್ತಿದ್ದರೇ ಅವರಿಗೆ ಸಮಾಧಾನ…. ಈಗಿನ ಬೆಡ್ ರೂಮ್ ನಲ್ಲಿ ತರತರಹದ ಬೆಲ್ಟ್ ಗಳು ನೇತಾಡುವಂತೆ. ಅಂತಹ ಕೋಲನ್ನು ಬಯಸುತ್ತಿದ್ದವರ ಎದುರಿಗೆ ಮರದಿಂದ ಕಡಿದ ಕಟ್ಟಿಗೆಯನ್ನು ಕೊಟ್ಟರೆ ಬಿಸಿ ಏರದೇ ಇದ್ದೀತೇ? ಆದರೆ ಯಾವುದೋ ಆಲೋಚನೆಯಲ್ಲಿದ್ದ ನಾನು ಹಾಗೆ ಮಾಡಿ ಸರೀ ಪೆಟ್ಟು ತಿಂದಿದ್ದೆ. ನಂತರವೇ ಆ ಕೋಲು ಅಪ್ಪನ ಮಾದರಿಗೆ ಬದಲಾದದ್ದು. ಹಾಗಾಗಿ ಅಪ್ಪನ ಮೇಲೆ ಸ್ವಲ್ಪ ಸಿಟ್ಟಿತ್ತು. ಅದನ್ನು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದೆ.
ಅಂತೂ ಇಂತು ಅದೂ ಬಂದು ಬಿಟ್ಟಿತು ಈ ಕೋಣಗಳ ಟ್ರೈನಿಂಗ್ ಮೂಲಕ. ಎರಡೂ ಕೋಣಗಳ ಮೂಗುದಾರಕ್ಕೆ ಕಟ್ಟಿದ್ದ ಹಗ್ಗಗಳನ್ನು ಹಿಡಿದುಕೊಂಡು ಮುಂದೆ ಹೋದೆ. ಸ್ವಲ್ಪ ಎಳೆದ ನಂತರ, ಅಪ್ಪನಿಂದ ಅವುಗಳ ಬೆನ್ನಿಗೆ ಎರಡು ಪೆಟ್ಟು ಬಿದ್ದ ನಂತರ ಅಡ್ಡಾದಿಡ್ಡಿಯಾಗಿ ಹೋಗಲು ಆರಂಭಿಸಿದವು.
ಹಾಗೆಯೇ ಎರಡು ಸುತ್ತು ನೇಗಿಲನ್ನು ಗದ್ದೆಗೆ ಒತ್ತದೇ ಕೋಣಗಳಿಗೆ ಯಾವುದೇ ಭಾರವನ್ನು ಕೊಡದೇ ಸಲೀಸಾಗಿ ಮುಂದುವರೆಯಿತು. ಆಗ ಜಾಗೃತವಾಯ್ತು ಅಪ್ಪನ ಮೇಲಿನ ಸಿಟ್ಟು! ಮುಂದಿನ ಸುತ್ತಿನಲ್ಲಿ ನೇಗಿಲನ್ನು ಸ್ವಲ್ಪ ಸ್ವಲ್ಪವೇ ಒತ್ತಿ ಕೋಣಗಳಿಗೆ ಭಾರಕೊಡಲು ಆರಂಭಿಸಿದಾಗ ನಾನು ಎಡಗಡೆಯ ಕೋಣದ ಮೂಗುದಾರವನ್ನು ಒಮ್ಮೆಲೇ ಅಗತ್ಯಕಿಂತ ಹೆಚ್ಚಾಗಿ ಜೋರಾಗಿ ಎಳೆದೆ. ಅಷ್ಟೇ ಸಾಕಾಯ್ತು. ಯಾವತ್ತಿಗೂ ಅನುಭವವಿರದ ಗದ್ದೆ ಉಳುವಾಗಿನ ಹೆಗಲ ಭಾರ ಮತ್ತು ಈ ಮೂಗುದಾರ ಎಳೆದ ನೋವು ಒಂದಾಗಿ ಅದು ಕಂಗಾಲಾಗಿ ಛಂಗನೇ ಹಾರಿ ಓಡಲು ಆರಂಭಿಸಿತು. ಈ ಆಕಸ್ಮಿಕ ಘಟನೆಯಿಂದ ಅಪ್ಪ ಕೂಡಾ ಒಮ್ಮೆಗೇ ಕಕ್ಕಾಬಿಕ್ಕಿಯಾದರೂ ಅವರ ಅನುಭವ ಕೋಣಗಳನ್ನು ಹಿಡಿದು ನಿಲ್ಲಿಸಿತು. ಆದರೆ ಅಷ್ಟರಲ್ಲಾಗಲೇ ಅನಾಹುತ ಆಗಿ ಹೋಗಿತ್ತು. ಕೋಣ ಹಾರಿದ ರಭಸಕ್ಕೆ ನೇಗಿಲ ಚೂಪಾದ ತುದಿ ಅದರ ಹಿಂಗಾಲಿಗೆ ತಾಗಿ ದೊಡ್ಡ ಗಾಯವೇ ಆಗಿಹೋಯ್ತು. ಆ ದಿನ ಅಪ್ಪ ಬಹಳ ಬೇಸರ ಮಾಡಿಕೊಂಡ್ರು. ಇದಕ್ಕೆ ಕಾರಣ ಕೂಡಾ ಏನಂತ ಗೊತ್ತಾದರೂ ಅಪ್ಪ ಆ ದಿನ ಏನೂ ಮಾತಾಡಲಿಲ್ಲ. ಸದ್ಯ ಬದುಕಿದೆಯಾ ಬಡ ಜೀವ ಅಂತ ನಿರಾಳನಾದೆ. ಆದರೆ ಅದು ಕ್ಷಣಿಕ ಅಂತ ಗೊತ್ತಾದದ್ದು ಮಾರನೇ ದಿನ ನಾನೇ ತಂದು ಕೊಟ್ಟಿದ್ದ ಕರ್ಮರದ ಕೋಲು ಮುರಿದು ಹೋಗುವಷ್ಟು ಅಪ್ಪ ಹೊಡೆದಾಗ. ಮತ್ತೆ ಆ ಗಾಯ ವಾಸಿಯಾಗಲು ವಾರಗಟ್ಟಲೇ ತೆಗೆದುಕೊಂಡಾಗ ಮಾತ್ರ ನನಗೂ ಬೇಸರ ಆಯ್ತು. ನಂತರದ ಟ್ರೈನಿಂಗ್ ಮಾತ್ರ ಯಾವುದೇ ತೊಂದರೆಗಳಿಲ್ಲದೇ ನಡೆದು ಸ್ವಲ್ಪ ತಡವಾದರೂ ಈಗ ಗದ್ದೆ ಉಳುಮೆಗೆ ತಯಾರಾದಂತಾಯಿತು.
ಕೊನೆಗೂ ಅಪ್ಪ ಗದ್ದೆಯನ್ನು ಎರಡು ರೌಂಡ್ ಉತ್ತು ಕೋಣಗಳನ್ನು ಬಂಧಮುಕ್ತ ಮಾಡಿ ನನ್ನ ಕರೆದಾಗಲೇ ವಾಸ್ತವಕ್ಕೆ ಬಂದು, ಮಳೆ ನಿಂತ ಅರಿವಾಗಿ ಕೊಡೆ ಮಡಚಿ ಕೋಣಗಳನ್ನು ನನ್ನ ಸುಪರ್ಧಿಗೆ ತೆಗೆದುಕೊಂಡೆ. ಉತ್ತು ಆದ ನಂತರ ಅವುಗಳನ್ನು ತೊಳೆಯುವುದು ನನ್ನ ಕೆಲಸ ಮತ್ತು ಅದು ನನ್ನ ಅತ್ಯಂತ ಖುಷಿಯ ಕೆಲಸವೂ ಕೂಡಾ. ಆದರೂ ಅವುಗಳನ್ನು ಸ್ವಲ್ಪ ಹೊತ್ತು ಫ್ರೀಯಾಗಿ ಬಿಟ್ಟು ಅವುಗಳ ಚೇಷ್ಟೆಗಳನ್ನು ನೋಡುವುದುಂಟು. ತನ್ನ ಕೋಡುಗಳಿಂದ ದಂಡೆಯ ಮಣ್ಣನ್ನು ತೆಗೆದು ಹಸಿ ಹಸಿ ಕೆಂಪು ಮಣ್ಣನ್ನು ಕೋಡುಗಳಿಗೆ ಮತ್ತಿಕೊಳ್ಳುವ ಮತ್ತು ಆ ಮೂಲಕ ದಂಡೆಯೂ ಕೂಡಾ ಹಳೆಯ ಪೊರೆಗಳನ್ನು ಕಳಚಿ ಹೊಸ ಮಣ್ಣಿನಿಂದ ಕಂಗೊಳಿಸುವ ಚಂದವನ್ನು ಕಾಣುವುದೇ ಒಂದು ಸೊಬಗು. ಮತ್ತೆ ಅವುಗಳಿಗೆ ತೋಡಿನ ದಾರಿ ಹೇಳಿಕೊಡಬೇಕಾಗಿಲ್ಲ. ಚೆನ್ನಾಗಿ ತೊಳೆದು ನನ್ನ ಇಷ್ಟದ ಬೊಳ್ಳನ ಬೆನ್ನಿನ ಮೇಲೆ ಕುಳಿತು ರಾಜಕುಮಾರ್ ಸ್ಟೈಲ್ ನಲ್ಲಿ… “ಯಾರೇ ಕೂಗಾಡಲಿ ಊರೇ ಹೋರಾಡಲಿ ಕೋಣ ನಿನಗೆ ಸಾಟಿಯಿಲ್ಲ… ನಿನ್ನ ನೆಮ್ಮದಿಗೆ ಭಂಗವಿಲ್ಲ… ಅರೆ ಹುಂಯ್ಕ್… ಅರೆ ಹುಂಯ್ಕ್… ಬುರ್ರಾ…” ಅಂತ ಹಾಡುತ್ತಾ ಬರುವಾಗ ಅಪ್ಪ ಬೀಡಿಯ ಹೊಗೆಯೊಂದಿಗೆ ತಾದಾತ್ಮ್ಯ ಸಾಧಿಸಿರುತ್ತಾರೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು