ಭಾರತದಲ್ಲಿ ಮುಂಚೆ ಟೆಸ್ಟ್ ಮ್ಯಾಚುಗಳು ಆಡುವುದಕ್ಕೆ ಇದ್ದ ಮೈದಾನಗಳು ಕೇವಲ 5. ದೆಹಲಿ, ಮುಂಬೈ, ಕಲ್ಕತ್ತಾ, ಕಾನ್ಪುರ ಮತ್ತು ಮದ್ರಾಸ್ ನಗರಗಳಲ್ಲಿ. ದೆಹಲಿಯ ಫಿರೋಜ್ ಕೋಟ್ಲ, ಮುಂಬೈಯ ಬ್ರೇಬರ್ನ್‌ ಸ್ಟೇಡಿಯಂ, ಕಲ್ಕೊತಾದ ಈಡನ್ ಗಾರ್ಡನ್ಸ್, ಕಾನ್ಪುರದ ಗ್ರೀನ್ ಪಾರ್ಕ್‌, ಮತ್ತು ಚೆನ್ನೈನ ಚೆಪಾಕ್ ಸ್ಟೇಡಿಯಂ. ಆಮೇಲೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂ ಇತ್ಯಾದಿ ಬಂದವು. ಯಾವುದರಲ್ಲಿಯೂ, ಲೈಟಿನ ವ್ಯವಸ್ಥೆ ಇರಲಿಲ್ಲ. ಈ ಕಳೆದ 15 ವರ್ಷದಲ್ಲಿ ಭಾರತದಲ್ಲಿ 50 ಸ್ಟೇಡಿಯಂ ಬಂದಿದೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

ಕ್ರಿಕೆಟ್ ಈಗ ಎಷ್ಟು ಜನಪ್ರಿಯವಾಗಿದೆಯೆಂದರೆ ಬೇರೆ ಆಟವನ್ನು ಆಡುವವರು ಕಡಿಮೆ ಆಗಿದ್ದಾರೆ, ನೋಡುವವರು ಇನ್ನೂ ಕಡಿಮೆ. ಇದು ಒಳ್ಳೆಯ ಸ್ಥಿತಿಯಲ್ಲ. ಒಂದು ಕಾಲದಲ್ಲಿ ಹಾಕಿ ಆಟ ಬಹಳ ಜನಪ್ರಿಯವಾಗಿತ್ತು. ಆಗ ನಾವು ಸತತವಾಗಿ ಒಲಂಪಿಕ್ಸ್‌ಲ್ಲಿ ಚಿನ್ನದ ಪದಕವನ್ನು ಗೆಲ್ಲುತ್ತಿದ್ದೆವು. ಕೊಲ್ಕೊತದಲ್ಲಿ ಫುಟ್‌ಬಾಲ್‌ಗೆ ಈಗಲೂ ಜನರು ಬಹಳ ಉತ್ಸಾಹ ತೋರಿಸುತ್ತಾರೆ. ಯಾವಾಗ ನಮ್ಮ ಆಟಗಾರರು ಯಾವುದಾದರೂ ಅಟದಲ್ಲಿ ವಿಶ್ವದ ದರ್ಜೆಯಲ್ಲಿ ಮೇಲಕ್ಕೆ ಬಂದಿರುತ್ತಾರೋ, ಆವಾಗ ಅಭಿಮಾನಿಗಳು ಆ ಆಟದಲ್ಲಿ ಹೆಚ್ಚು ಉತ್ಸುಕರಾಗುತ್ತಾರೆ. ಇದು ಆಟದಲ್ಲಿ ತಾನಾಗಿಯೇ ಆಗುವ ಪ್ರಕೃತಿಯ ನಿಯಮ.

ಭಾರತ 1983ರಲ್ಲಿ ಕಪಿಲ್ ದೇವ್‌ರ ನೇತೃತ್ವದಲ್ಲಿ ಓಡಿಐ ವಿಶ್ವ ಕಪ್ ಇಂಗ್ಲೆಂಡಿನಲ್ಲಿ ಗೆದ್ದಾಗಿನಿಂದ ಕ್ರಿಕೆಟ್‌ಗೆ ಜನ ಮನಸೋತು ಸಾವಿರಾರು ಅಭಿಮಾನಿಗಳು ಸ್ಟೇಡಿಯಂಗೆ ಬರುತ್ತಿದ್ದಾರೆ. 2007 ರಲ್ಲಿ ಟಿ20 ಚೊಚ್ಚಲ ಟ್ರೋಫಿಯನ್ನು ನಾಯಕ ಎಮ್.ಎಸ್. ಧೋನಿಯ ತಂಡ ಭಾರತ ಪಾಕಿಸ್ಥಾನದ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗೆದ್ದು ಅದರ ಹಿಂದೆಯೇ ಐಪಿಎಲ್ ಶುರುವಾಯಿತು. ಆವಾಗಿನಿಂದ ಭಾರತದಲ್ಲಿ ಯಾವ ಟಿ20 ಮ್ಯಾಚೇ ಆಗಲಿ ಅಲ್ಲಿ ಜನಸಾಗರ ಹರಿದುಬರುವುದು ಖಂಡಿತ. ಪ್ರಪಂಚದ ಸರ್ವೋತ್ತಮ ಪ್ಲೇಯರ್‌ಗಳು, ಅವರು ಯಾವ ದೇಶದವರೇ ಆಗಿರಲಿ, ಅವರನ್ನು ಒಟ್ಟುಗೂಡಿಸಿ, ಟೀಮ್‌ಗಳಾಗಿ ಮಾಡಿ ಆಡಿದರೆ ಅದನ್ನು ನೋಡಲು ಜನ ಬಂದೇ ಬರುತ್ತಾರೆ ಎನ್ನುವುದು ಒಂದು ಕ್ರಿಕೆಟನ್ನು ವ್ಯಾಪಾರ ದೃಷ್ಟಿಯಿಂದ ಮಾದರಿ ಮಾಡಿ ಅದನ್ನು ಫ್ರಾಂಚೈಸ್ ಮಾಡೆಲ್ ಎಂದು ಕರೆದರು.

ಪ್ರತಿವರ್ಷ ಆಡುವ ಐಪಿಎಲ್‌ಗೆ 8 ಅಥವ 10 ಟೀಮುಗಳನ್ನು ಮಾಡಿ, ಆಟಗಾರರನ್ನು ಮಾರ್ಕೆಟ್ಟಿನ ಬೆಲೆಗೆ ಅವರನ್ನು ಹರಾಜಿಗೆ ಹಾಕಿ ಅವರನ್ನು ಯಾವ ಮಾಲಿಕರು ಎಷ್ಟು ಬೆಲೆಗೆ ಕೊಂಡುಕೊಳ್ಳುತ್ತಾರೆ ಎಂಬುದು ಎಲ್ಲಾ ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಟಿವಿಯಲ್ಲಿ ಪ್ರತ್ಯಕ್ಷವಾಗಿ ಈ ಹರಾಜನ್ನು ನೋಡುತ್ತಾರೆ. ಹಲವು ಲಕ್ಷದಿಂದ ಶುರುವಾಗಿ ಕೋಟ್ಯಾಂತರ ಬೆಲೆಗೆ ಕೊಂಡುಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ. ಹೇಳದೇ ಕೇಳದೇ ಇರುವ ಹೆಸರುಗಳು ನಮ್ಮ ಹಳ್ಳಿಗಳಿಂದ ಬಂದ ಹುಡುಗರು 8 ಅಥವ 10 ಕೋಟಿಗೆ ಮಾರಾಟವಾದ ಅಚ್ಚರಿಯಾಗುವಂಥ ಸನ್ನಿವೇಶಗಳು ಇತ್ತೀಚೆಗೆ ನಾವು ಓದಿದ್ದೇವೆ, ನೋಡಿದ್ದೇವೆ.

ಐಪಿಎಲ್‌ಗೆ ಬೇಡಿಕೆ ಇರುವುದು ಆಟವನ್ನು ಪ್ರೇಕ್ಷಕರಿಗೆ ಅನುಕೂಲವಾಗಲೆಂದು ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ. ಐಪಿಎಲ್ ಬೇಸಿಗೆ ರಜದಲ್ಲಿ ಇಟ್ಟಿದ್ದಾರೆ. ಪ್ರತಿ ಮನೆಯಲ್ಲೂ ಹುಡುಗರು/ಹುಡುಗಿಯರಿಗೆ ಬೇಸಿಗೆಯಲ್ಲಿ ರಜ. ಅವರು ಮ್ಯಾಚಿಗೆ ಬಂದೇ ಬರುತ್ತಾರೆ. ಮಕ್ಕಳು ರೊಚ್ಚು ಹಿಡಿದರೆ ತಂದೆ ತಾಯಿಯರು ಆ ಮ್ಯಾಚುಗಳಿಗೆ ಕರೆದುಕೊಂಡು ಹೋಗಲೇ ಬೇಕು. ಮ್ಯಾಚುಗಳನ್ನು ಸೊಗಸಾದ ಟವರ್‌ಗಳನ್ನು ಕಟ್ಟಿ ಎಲ್ ಇ ಡಿ ಬಲ್ಬುಗಳನ್ನು ರಾತ್ರಿ ಹಗಲನ್ನಾಗಿ ಮಾಡಿ ಅಲ್ಲಿ ಆಡುತ್ತಾರೆ. ಆಫೀಸಿಗೆ ಹೋಗುವವರು ಬಂದಮೇಲೆ ಅವರೂ ಮ್ಯಾಚಿಗೆ ಬರಲಿ ಎಂದು ರಾತ್ರಿ 7.30 /8 ಘಂಟೆಗೆ ಶುರುಮಾಡುತ್ತಾರೆ. ಮ್ಯಾಚುಗಳನ್ನು ವಿಶ್ವವ್ಯಾಪಿಯಾಗಿ ಮಾಡಿ ನೀವು ಯಾವುದೇ ದೇಶದಲ್ಲಿ ಇರಿ, ಅಲ್ಲಿ ಟಿವಿಯಲ್ಲಿ ಬರುತ್ತೆ! ಈಗಂತೂ ನಿಮ್ಮ ಸ್ಮಾರ್ಟ್‌ ಫೋನಿನಲ್ಲಿ ನೀವು ಮ್ಯಾಚನ್ನು ಎಲ್ಲಿದ್ದರೂ ಪ್ರತ್ಯಕ್ಷವಾಗಿ ನೋಡಬಹುದು. ಆಟಗಾರರ ಉಡುಪಿನ ಮೇಲಿಂದ ಕೆಳಗಿನವರೆಗೆ ವಸ್ತುಗಳ ಜಾಹೀರಾತುಗಳ ಸುರಿಮಳೆ! ಇದೆಲ್ಲದಕ್ಕೂ ಮಾರ್ಕೆಟ್ ಇದ್ದು ಕಾಂಚನದ ಹೊಳೆಯೇ ಹರಿದುಬರುತ್ತಿದೆ, ಭಾರತದ ಕ್ರಿಕೆಟ್ ಆಡಳಿತ ಮಂಡಳಿ, ಬಿಸಿಸಿಐಗೆ.

ಬಿಸಿಸಿಐ 2008ರಲ್ಲಿ ಶುರುಮಾಡಿದಾಗ ಪ್ರಾಯೋಜಕರು 5 ವರ್ಷಕ್ಕೆ ಅವರಿಗೆ ಕೊಟ್ಟ ಹಣ 750 ಕೋಟಿ ರುಪಾಯಿಗಳು. ಇತ್ತೀಚೆಗೆ ಪ್ರಾಯೋಜಕರನ್ನು ಕರೆದು ಹರಾಜು ಹಾಕಿದಾಗ ಮುಂದಿನ 5 ವರ್ಷಕ್ಕೆ ಬಿಸಿಸಿಐಗೆ ಸಿಕ್ಕ ಹಣ 50,000 ಕೋಟಿ! ಇದೆಲ್ಲಾ ಡಾಲರ್ಸ್‌ನಲ್ಲಿ! ಇನ್ನೊಂದು 5 ವರ್ಷಕ್ಕೆ ಐಪಿಎಲ್‌ಗೆ ಪ್ರಪಂಚದಲ್ಲಿ ಎಲ್ಲಾ ಆಟಕ್ಕಿಂತ ಐಪಿಎಲ್‌ಗೆ ಅತ್ಯಂತ ಹೆಚ್ಚಿನ ದರ ಸಿಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ಕ್ರಿಕೆಟ್‌ನಲ್ಲಿ, ಅದರಲ್ಲೂ ಭಾರತದಲ್ಲಿ ಬಹಳ ಸುಧಾರಣೆಗಳಾಗಿವೆ. ಭಾರತದಲ್ಲಿ ಮುಂಚೆ ಟೆಸ್ಟ್ ಮ್ಯಾಚುಗಳು ಆಡುವುದಕ್ಕೆ ಇದ್ದ ಮೈದಾನಗಳು ಕೇವಲ 5. ದೆಹಲಿ, ಮುಂಬೈ, ಕಲ್ಕತ್ತಾ, ಕಾನ್ಪುರ ಮತ್ತು ಮದ್ರಾಸ್ ನಗರಗಳಲ್ಲಿ. ದೆಹಲಿಯ ಫಿರೋಜ್ ಕೋಟ್ಲ, ಮುಂಬೈಯ ಬ್ರೇಬರ್ನ್‌ ಸ್ಟೇಡಿಯಂ, ಕಲ್ಕೊತಾದ ಈಡನ್ ಗಾರ್ಡನ್ಸ್, ಕಾನ್ಪುರದ ಗ್ರೀನ್ ಪಾರ್ಕ್‌, ಮತ್ತು ಚೆನ್ನೈನ ಚೆಪಾಕ್ ಸ್ಟೇಡಿಯಂ. ಆಮೇಲೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂ ಇತ್ಯಾದಿ ಬಂದವು. ಯಾವುದರಲ್ಲಿಯೂ, ಲೈಟಿನ ವ್ಯವಸ್ಥೆ ಇರಲಿಲ್ಲ. ಈ ಕಳೆದ 15 ವರ್ಷದಲ್ಲಿ ಭಾರತದಲ್ಲಿ 50 ಸ್ಟೇಡಿಯಂ ಬಂದಿದೆ! ಇದು ಎಲ್ಲದರಲ್ಲೂ ಕಡಿಮೆ ಅಂದರೆ 50 ಸಾವಿರ ಜನರು ಕೂತು ನೋಡುವ ವ್ಯವಸ್ಥೆ ಇದೆ. ಎಲ್ಲದರಲ್ಲೂ ದೊಡ್ಡ ಉಕ್ಕಿನ ಟವರ್‌ಗಳಲ್ಲಿ ಎಲ್ ಇ ಡಿ ಬಲ್ಬುಗಳು ಹಾಕಿದ್ದಾರೆ. ಈಗ ಅಹಮದಾಬಾದಿನಲ್ಲಿ ಬಂದಿರುವ ಮೋದಿ ಸ್ಟೇಡಿಯಂನಲ್ಲಿ 1,30,000 ಸಾವಿರ ಜನ ಮ್ಯಾಚ್ ನೋಡಬಹುದು, ಈಗ ಅದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸ್ಟೇಡಿಯಂ ಆಗಿದೆ. ಅದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಸ್ಟೇಡಿಯಂನ್ನು ಹಿಂದಿಕ್ಕಿದೆ. ಇತ್ತೀಚೆಗೆ ನಡೆದ ಭಾರತ ಮತ್ತು ಆಸ್ಟ್ರೇಲಿಯ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಮೈದಾನ ಕಿಕ್ಕಿರಿದು ತುಂಬಿತ್ತು. ಛತ್ತೀಸ್‌ನಗರದಲ್ಲಿರುವ ರಾಯ್ಪುರದಲ್ಲಿರುವ ಸ್ಟೇಡಿಯಂ ಪ್ರಪಂಚದಲ್ಲಿ ಸೀಟುಗಳ ಲೆಕ್ಕದಲ್ಲಿ ಮೂರನೇ ಸ್ಥಾನ ಪಡೆದಿದೆ.

ಪುಣೆ, ಕೊಚ್ಚಿ, ಜೈಪುರ್, ತಿರುವನಂತಪುರಂ, ರಾಜ್ಕೋಟ್, ರಾಂಚಿ, ಧರಮ್‌ಶಾಲ, ಗುವಾಹಟಿ, ಮೊಹಾಲಿ, ಇಂದೋರ್, ವಿಶಾಕಪಟ್ಟಣ ಇತ್ಯಾದಿ ನಗರಗಳಲ್ಲಿ ಸುಸಜ್ಜಿತ, ಐಸಿಸಿ ಮ್ಯಾಚುಗಳನ್ನಾಡಿಸಲು, ಎಲ್ ಇ ಡಿ ಲೈಟ್ ಸಮೇತ ತಯಾರಾಗಿದೆ!

ಪ್ರಪಂಚದಲ್ಲಿರುವ ಮೈದಾನಗಳಲ್ಲಿ ಪ್ರಮುಖವಾದದ್ದು ಲಂಡನ್ನಲ್ಲಿರುವ ಲಾರ್ಡ್ಸ್‌ ಮತ್ತು ಓವಲ್. ಇಲ್ಲೇ ಕ್ರಿಕೆಟ್ ಆಟವೇ ಶುರುವಾಯಿತೆಂದು ಹೇಳಬಹುದು. ಮೆಡಿಕಲ್ ಡಾಕ್ಟರ್ ಆದ ಡಾ. ಗ್ರೇಸ್ ಅವರು ಕ್ರಿಕೆಟ್ ಆಟವನ್ನು ಕಂಡು ಹಿಡಿದರು. ಈಗಲೂ ಹುಡುಗರು ಟೆನ್ನಿಸ್ ಬಾಲಲ್ಲಿ ಮ್ಯಾಚ್ ಆಡುವಾಗ ಮೊದಲ ಬಾಲನ್ನು ಗ್ರೇಸ್ ಬಾಲೆಂದು ಆಡುತ್ತಾರೆ. ಆ ಬಾಲಿನಲ್ಲಿ ರನ್ ಹೊಡೆದರೆ ಅದು ಲೆಕ್ಕಕ್ಕಿಲ್ಲ, ಔಟ್ ಇಲ್ಲ. ಮೊದಲೆಯ ಬಾಲನ್ನು ಆ ಮಹಾತ್ಮನನ್ನು ನೆನೆದು ಆಡುತ್ತಾರೆ. ಎರಡನೇ ಬಾಲಿನಿಂದ ಆಟ ಶುರು. ಇಂಗ್ಲೆಂಡಿನ ಲೀಡ್ಸ್ ಮೈದಾನ, ಲ್ಯಾಂಕೆಷೆಯರ್ ಮತ್ತು ನಾಟಿಂಗ್‌ಹ್ಯಾಮ್‌ನ ಮೈದಾನಗಳನ್ನು ಟೆಸ್ಟಿಗೆ ಬಳಸುತ್ತಾರೆ. ಲಾರ್ಡ್ಸ್‌ ಮೈದಾನದಲ್ಲೇ 1983ರಲ್ಲಿ ಭಾರತ ಒಡಿಐ ಟ್ರೋಫಿ ಗೆದ್ದಿದ್ದು. ಆಸ್ಟ್ರೇಲಿಯಾದ ಸಿಡ್ನಿ, ಅಡಿಲೈಡ್, ಪರ್ತ್ ಮತ್ತು ಬ್ರಿಸ್ಬೇನ್‌ನ ‘ಗಬ್ಬಾ’ ಮೈದಾನಗಳು. ಭಾರತ 2 ವರ್ಷಗಳ ಹಿಂದೆ ‘ಗಬ್ಬಾ’ ಮೈದಾನದಲ್ಲಿ ಆಸ್ಟ್ರೇಲಿಯ ವಿರುದ್ಧ ಗೆದ್ದು ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶ್ರೇಣಿಯನ್ನು ಗೆದ್ದಿತು. ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾ ಬಹಳ ವರ್ಷದಿಂದ ಸೋತೇ ಇರಲಿಲ್ಲ. ಆ ಭಾಗ್ಯವನ್ನು ಇಂಡಿಯ ಅವರಿಗೆ ಕೊಟ್ಟಿತು! ಅದರಲ್ಲಿ ಯುವ ಆಟಗಾರ ರಿಷಬ್ ಪಂತ್‌ನ ಬಿರುಸಿನ ಆಟ ಎಲ್ಲರಿಗೂ ಜ್ಞಾಪಕವಿರಬಹುದು.

ವೆಸ್ಟ್ ಇಂಡೀಸ್ ಒಂದು ದ್ವೀಪಗಳಿರುವ ಸಂಯುಕ್ತ ದೇಶ. ಅಲ್ಲಿ ಸಬೈನ ಪಾರ್ಕ್‌, ಕಿಂಗ್ಸ್ಟನ್, ಸಂತ ಜಾನ್ಸ್ ಆಂಟಿಗ್ವ , ಅಮೋಸ್ ವೇಲ್ ಸ್ಟೇಡಿಯಂ, ಕಿಂಗ್ಸ್‌ಟೌನ್, ಮತ್ತು ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಸಂತ ಜಾರ್ಜ್‌, ಜಮೈಕ, ಬಾರ್ಬಡಾಸ್, ಗಯಾನ, ಟ್ರಿನಿಡಡ್ ಮತ್ತು ಟೊಬಾಗೊ ನಲ್ಲಿ ಮ್ಯಾಚುಗಳು ನಡೆಯುತ್ತೆ.

ಏಪ್ರಿಲ್ 12, 1976ರಲ್ಲಿ ಕ್ವೀನ್ಸ್ ಪಾರ್ಕ್‌, ಪೋರ್ಟ ಆಫ್ ಸ್ಪೈನ್ ಟ್ರಿನಿಡಾಡ್, ಓವಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುತ್ತಾ ಇಂಡಿಯ ಇತಿಹಾಸ ರಚಿಸಿತು. ಆ ಮ್ಯಾಚಿನಲ್ಲೇ ಇಂಡಿಯ ‘ನಾವು ಕುಸಿದು ಬಿದ್ದರೂ ಸರಿ, ಕೊನೆಗೆ ಏನಾದರೂ ಮಾಡಿ ಎದ್ದೇ ಏಳುತ್ತೇವೆ’ ಎಂದು ಸಾಬೀತು ಮಾಡಿದರು. ಮೊದಲು ಆಡಿದ ವೆಸ್ಟ್ ಇಂಡೀಸ್ ರಿಚರ್ಡ್‌ನ 177 ರನ್ ಸಹಾಯದಿಂದ 359 ಹೊಡೆದರು. ಚಂದ್ರಶೇಖರ್ 6 ವಿಕೆಟ್ ತೆಗೆದರು. ಭಾರತ 228 ರನ್‌ಗೆ ಆಲ್ ಔಟ್ ಆಯಿತು. ಆಲ್ವಿನ್ ಕಾಲಿಚರಣ್ ಶತಕ ಹೊಡೆದು 271ಕ್ಕೆ ಡಿಕ್ಲೇರ್ ಮಾಡಿಕೊಂಡ ಡೆಸ್ಟ್ ಇಂಡೀಸ್ ಭಾರತಕ್ಕೆ ಗೆಲ್ಲಲು 402 ರನ್ ಲಕ್ಷ್ಯವಿಟ್ಟಿತ್ತು. ಆ ಮ್ಯಾಚಿನಲ್ಲಿ ಭಾರತ ಎಂದೂ ಕಾಣದ, ಎಂದೂ ಕೇಳದ ರನ್ನುಗಳ ಸುರಿಮಳೆ ಸುರಿಸಿದರು ಎಂದು ಹೇಳಬಹುದು! ಗವಾಸ್ಕರ್ ಮತ್ತು ವಿಶ್ವನಾಥ್ ಶತಖಗಳನ್ನು ಬಾರಿಸಿದರೆ, ಅಮರ್‌ನಾಥ್‌ 85 ರನ್ ಹೊಡೆದರು! ಬ್ರಿಜೇಷ್ ಪಟೇಲ್ 49 ರನ್ ಹೊಡೆದು ಮ್ಯಾಚ್ ಗೆಲ್ಲಿಸಿದರು. ಇದು ಪ್ರಪಂಚದಲ್ಲಿ ಕೇವಲ ಎರಡನೇಬಾರಿ ನಾಲಕ್ಕನೇ ಇನಿಂಗ್ಸ್‌ನಲ್ಲಿ 400ರನ್ ಹೊಡೆದಿರುವುದು. ಭಾರತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದು ತೋರಿಸಿತು ಅಂದು ಸಬೈನ ಪಾರ್ಕ್‌ನಲ್ಲಿ.

ನ್ಯೂ ವಾಂಡರರ್ಸ್‌ ಸ್ಟೇಡಿಯಂ, ಜೊಹಾನಸ್ ಬರ್ಗ, ದಕ್ಷಿಣ ಆಫ್ರಿಕದಲ್ಲಿ ಭಾರತ ಪಾಕಿಸ್ತಾನವನ್ನು ಚೊಚ್ಚಲ ಟಿ20 ವಿಶ್ವಕಪ್ ಒಂದು ರೊಮಾಂಚಕ ಪಂದ್ಯದಲ್ಲಿ ಸೋಲಿಸಿತು. ಒಂದು ಸಿಕ್ಸರ್ ಹೊಡೆದಿದ್ದರೆ ಪಾಕಿಸ್ಥಾನ ಆ ಮ್ಯಾಚನ್ನು ಗೆದ್ದು ಕಪ್ಪನ್ನು ತನ್ನದಾಗಿರಿಸಿಕೊಂಡಿರುವುದು. ಆದರೆ, ಅದಾಗದೆ ಸಿಕ್ಸರ್ ಕಡೆಗೆ ಹೋಗದ ಚೆಂಡನ್ನು ಶ್ರೀಶಾಂತ್ ಕ್ಯಾಚ್ ಹಿಡಿದು ಭಾರತಕ್ಕೆ ಒಂದು ಅದ್ಭುತ ಅಪೂರ್ವ ವಿಜಯವನ್ನು ಗಳಿಸಿಕೊಟ್ಟರು. ಇದು ಟೀಮಿನ ನಾಯಕ ಮಹೇಂದ್ರ ಸಿಂಗ್‌ ಧೋಣಿಯವರ ಮೊದಲನೇ ಐಸಿಸಿ ಕಪ್‌ನ ವಿಜಯ.

(ಮೋದಿ ಸ್ಟೇಡಿಯಂ)

ಕಿಂಗ್ಸ್‌ ಮೇಡ್ ಡರ್ಬನ್, ನ್ಯೂಲಾಂಡ್ಸ್ ಕೇಪ್‌ಟೌನ್, ಸೆಂಚುರಿಯನ್ ಪಾರ್ಕ್‌ ಸೆಂಚುರಿಯನ್, ಸಂತ ಪಾರ್ಕ್‌ ಮೈದಾನ ಪೋರ್ಟ್‌, ಎಲೆಝಬೆತ್ ಮುಂತಾದ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ಮ್ಯಾಚ್ ನಡೆಯುತ್ತೆ.

2007 ರಲ್ಲಿ ಟಿ20 ಚೊಚ್ಚಲ ಟ್ರೋಫಿಯನ್ನು ನಾಯಕ ಎಮ್.ಎಸ್. ಧೋನಿಯ ತಂಡ ಭಾರತ ಪಾಕಿಸ್ಥಾನದ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗೆದ್ದು ಅದರ ಹಿಂದೆಯೇ ಐಪಿಎಲ್ ಶುರುವಾಯಿತು. ಆವಾಗಿನಿಂದ ಭಾರತದಲ್ಲಿ ಯಾವ ಟಿ20 ಮ್ಯಾಚೇ ಆಗಲಿ ಅಲ್ಲಿ ಜನಸಾಗರ ಹರಿದುಬರುವುದು ಖಂಡಿತ. ಪ್ರಪಂಚದ ಸರ್ವೋತ್ತಮ ಪ್ಲೇಯರ್‌ಗಳು, ಅವರು ಯಾವ ದೇಶದವರೇ ಆಗಿರಲಿ, ಅವರನ್ನು ಒಟ್ಟುಗೂಡಿಸಿ, ಟೀಮ್‌ಗಳಾಗಿ ಮಾಡಿ ಆಡಿದರೆ ಅದನ್ನು ನೋಡಲು ಜನ ಬಂದೇ ಬರುತ್ತಾರೆ ಎನ್ನುವುದು ಒಂದು ಕ್ರಿಕೆಟನ್ನು ವ್ಯಾಪಾರ ದೃಷ್ಟಿಯಿಂದ ಮಾದರಿ ಮಾಡಿ ಅದನ್ನು ಫ್ರಾಂಚೈಸ್ ಮಾಡೆಲ್ ಎಂದು ಕರೆದರು.

ಕ್ರಿಕೆಟ್‌ ಮ್ಯಾಚುಗಳು ಮೇಲೆ ಕಂಡ ಮೈದಾನದಲ್ಲಿ ಆಡುವ ಮುಂಚೆ ಅನೇಕ ರಾಜ್ಯಗಳಲ್ಲಿ ಅಲ್ಲಿರುವ ಲೋಕಲ್ ಮೈದಾನದಲ್ಲಿ ಕಲಿತು, ಆಡಿ, ನುರಿತ ಮೇಲೇನೆ ದೇಶಕ್ಕೆ ಆಡುವ ಅವಕಾಶ ಸಿಗುತ್ತೆ. ಬೆಂಗಳೂರಿನಲ್ಲಿ ಮುಂಚೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ರಣಜಿ ಟ್ರೋಫಿ ಪಂದ್ಯಗಳು ನಡೆಯುತ್ತಿದ್ದವು. ಹಾಗೆಯೇ ಮುಂಚೆ ರೋಹಿಂಘ್ಟನ್ ಬ್ಯಾರಿಯ ಟ್ರೋಫಿ, ಪಿ. ರಾಮಚಂದ್ರ ರಾವ್ ಟ್ರೋಫಿ, ಯು-19, ಯು-14 ತರಹ ಅನೇಕ ಮ್ಯಾಚುಗಳನ್ನಾಡಿಸಿ ಅದರಲ್ಲಿ ಚೆನ್ನಾಗಿ ಆಡಿದವರಿಗೆ ರಾಜ್ಯಗಳ ಟೀಮಿನಲ್ಲಿ ಸೇರಿಸಿಕೊಳ್ಳುತ್ತಾರೆ.

ಹಾಗೆಯೇ ಪ್ರಾಕ್ಟಿಸ್ ಮಾಡುವ ಮೈದಾನಗಳು ಮತ್ತು ಪುಟ್ಟ ಹುಡುಗರು ಆಡುವ ಟೆನ್ನಿಸ್ ಬಾಲ್ ಕ್ರಿಕೆಟ್ ಮ್ಯಾಚುಗಳು ಎರಡೂ ಈ ಮೈದಾನಗಳಲ್ಲೇ ಶುರುವಾಗುವುದು. ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ‘ಬ್ಯಾಂಗಲೂರ್ ಕ್ರಿಕೆಟರ್ಸ್’, ‘ಸಿಟಿ ಕ್ರಿಕೆಟರ್ಸ್’ ಅವುಗಳು ಪ್ರಸಿದ್ಧಿಯಾಗಿದ್ದವು. ಅಲ್ಲಿ ರಣಜಿ ಆಡುತ್ತಿದ್ದ ಆದಿಶೇಷ್, ಕಸ್ತೂರಿ ರಂಗನ್, ಬಾಲಾಜಿ ಶ್ರೀನಿವಾಸನ್, ಸುಬ್ಬು, ದೀಪಕ್ ದಾಸ್‌ಗುಪ್ತ, ವರದರಾಜ್, ಶ್ಯಾಮ್; ಸಿಟಿ ಕ್ರಿಕೆಟ್‌ನ ರಾಮ್‌ಪ್ರಸಾದ್, ಕೆ.ಎಸ್.ವಿಶ್ವನಾಥ್, ಪ್ರಸನ್ನ, ಚಂದ್ರಶೇಖರ್ ಅವರುಗಳು ನ್ಯಾಷನಲ್ ಹೈಸ್ಕೂಲ್ ಗ್ರೌಂಡ್ಸ್‌ನಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರು. ಅಲ್ಲೆ ಮರ್ಚನ್ಟ್ಸ್‌, ಎನ್ಯುಸಿಸಿ ಮುಂತಾದ ಅನೇಕ ಟೀಮುಗಳು ಆಡುತ್ತಿದ್ದರು.

ಕ್ರಿಕೆಟ್‌ನಲ್ಲಿ ಅಭಿರುಚಿ ಹುಟ್ಟುವುದಕ್ಕೆ ಮೊದಲ ಹೆಜ್ಜೆ ಟೆನ್ನಿಸ್ ಬಾಲ್ ಕ್ರಿಕೆಟ್. ಇದರ ಆಟವನ್ನು ಎಲ್ಲಾ ಟೆಸ್ಟ್ ಪ್ಲೇಯರ್‌ಗಳು ಕೂಡ ಒಂದಲ್ಲ ಒಂದು ದಿನ ಆಡಿಯೇ ಇರುತ್ತಾರೆ. ಪ್ರಪಂಚದಲ್ಲಿ ದೊಡ್ಡ ದೊಡ್ಡ ಸ್ಟೇಡಿಯಂ ಇರುವ ಹಾಗೆ, ಬೆಂಗಳೂರಿನಲ್ಲಿ, ನ್ಯಾಷನಲ್ ಹೈಸ್ಕೂಲ್ ಗ್ರೌಂಡ್ಸ್, ಕೊಹಿನೂರ್ ಗ್ರೌಂಡ್ಸ್, ಆರ್ಮುಗಂ ಸರ್ಕಲ್, ಮಾಧವನ್ ಪಾರ್ಕ್‌, ಮಲ್ಲೇಶ್ವರಂ ಮೈದಾನ, ಸಂತ ಜೋಸೆಫ್ಸ್ ಗ್ರೌಂಡ್ಸ್ ಇತ್ಯಾದಿ.. ಇವೆಲ್ಲವೂ ಟೆನ್ನಿಸ್ ಬಾಲ್ ಮ್ಯಾಚುಗಳಿಗೆ ಯಾವ ಟೆಸ್ಟ್ ಗ್ರೌಂಡಿಗಿಂತಲೂ ಕಡಿಮೆ ಇಲ್ಲ. ಟೆಸ್ಟ್ ಆಡುವ ಮೊದಲು ಈ ಜಾಗಗಳಲ್ಲಿ ಆಡಿದ ಆಟಗಾರರಾದ ಗುಂಡಪ್ಪ ವಿಶ್ವನಾಥ್, ದ್ರಾವಿಡ್, ಕುಂಬ್ಳೆ, ಪ್ರಸನ್ನ, ಚಂದ್ರಶೇಖರ್ ಅವರುಗಳ ಪ್ರಕಾರ ಬಾಲಿನ ಬೌನ್ಸ್‌ ಚೆನ್ನಾಗಿ ಪಳಗುವುದಕ್ಕೆ ಟೆನ್ನಿಸ್ ಬಾಲಿನಲ್ಲಿ ಆಡಿದರೆ ಬಹಳ ಪರಿಣಾಮಕಾರಿ ಎಂದು ಹೇಳುತ್ತಾರೆ. ಟೆನ್ನಿಸ್ ಬಾಲು ಟೀಮುಗಳಲ್ಲಿ ಗೋಪಿ, ಶ್ರೀರಾಮ್, ರಾಮನಾಥ, ಮೋಹನ್, ರಾಘವೇಂದ್ರ ಮುಂತಾದವರು ಅಡಿ ಮುಂದೆ ಎಷ್ಟೋ ಬೇಸಿಗೆ ರಜದಲ್ಲಿ ನಡೆಯುವ ಟೂರ್ನಮೆಂಟಿನಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಟೆಸ್ಟ್, ರಣಜಿ ಮತ್ತು ಹವ್ಯಾಸಕ್ಕಾಗಿ ಆಡುವ ಪ್ಲೇಯರ್‌ಗಳು ಎಲ್ಲಾ ಒಂದೇ ಶ್ರೇಣಿಯವರು. ಅದರಿಂದಲೇ ಮ್ಯಾಚುಗಳಲ್ಲಿ ಅಷ್ಟು ಉತ್ಸಾಹ ಮತ್ತು ಸ್ಪರ್ಧೆ ಇರುತ್ತಿತ್ತು.

ಇದೇ ರೀತಿ ಮುಂಬೈನಲ್ಲಿ ಅಲ್ಲಿನ ಪ್ರಸಿದ್ಧಿಯಾದ ಶಿವಾಜಿ ಪಾರ್ಕಿನಲ್ಲಿ ಕ್ರಿಕೆಟ್ ಆಟ ಶುರುಮಾಡಿದವರಲ್ಲಿ ಸಚಿನ್ ಟಂಡೂಲ್ಕರ್, ಸುನಿಲ್ ಗವಾಸ್ಕರ್, ವೆಂಗ್ಸಾರ್ಕ್‌ರ್, ಸೋಲ್ಕರ್ ಇತ್ಯಾದಿ ಅವರ ರಾಜ್ಯಕ್ಕೆ ರಣಜಿ ಟ್ರೋಫಿ ಮತ್ತು ದೇಶಕ್ಕೆ ಟೆಸ್ಟ್ ಆಡಿದರು.

*****

(ಪಿಯರ್ಸನ್ ಸುರೀತ)

ಕ್ರಿಕೆಟ್ ಆಟ ಮೈದಾನದಲ್ಲಿ ಕೂತು ಪ್ರತ್ಯಕ್ಷವಾಗಿ ನೋಡುವವರಿಗೆ ಮ್ಯಾಚು ಚೆನ್ನಾಗಿರುತ್ತೆ. ಆದರೆ ಈ ಆಟವನ್ನು ಲಕ್ಷಾಂತರ ಅಭಿಮಾನಿಗಳು ಬೇರೆ ಬೇರೆ ನಗರಗಳಲ್ಲಿ, ದೇಶಗಳಲ್ಲಿ ಅನುಸರಿಸುವುದರಿಂದ ಮುಂಚೆ ರೇಡಿಯೊ ಕಾಮೆಂಟರಿ, ತರುವಾಯ ಟಿವಿ ಕಾಮೆಂಟರಿ ಶುರುವಾಯಿತು. ಕಾಮೆಂಟೇಟರ್ -ನಿರೂಪಕ – ಅಥವ ವೀಕ್ಷಕ ವಿವರಣೆ ಕೊಡುವವರು, ಎಲ್ಲಾ ಆಟದ ಮುಖ್ಯ ಭಾಗವಾಗಿದ್ದಾರೆ.

ರೇಡಿಯೊ ಕಾಮೆಂಟರಿ ಬಹಳ ಜನಪ್ರಿಯವಾಗಿತ್ತು. ಅದರಲ್ಲೂ ಟಿವಿ ಇಲ್ಲದಿದ್ದಾಗ ಮೈದಾನದಲ್ಲಿ ಏನು ನಡೆಯುತ್ತಿದೆ ಮತ್ತು ಅದರ ವಿಶೇಷವನ್ನು ಉಲ್ಲೇಖಿಸಿ ಮಾತನಾಡಿ, ಕೇಳುಗರಲ್ಲಿ ಅಲ್ಲಿನ ಉತ್ಸಾಹ, ಆಗುಹೋಗುಗಳನ್ನು ವಿವರಿಸಿ ಅದನ್ನು ಪ್ರೇಕ್ಷಕರಲ್ಲಿರುವ ಅದೇ ಉತ್ಸಾಹ ಸಾವಿರಾರು ಮೈಲು ದೂರದಲ್ಲಿ ಕೂತು ಕೇಳುತ್ತಿರುವ ಕೇಳುಗರಲ್ಲಿಯೂ ಮೂಡಿಸುವುದು ಬಹಳ ಮುಖ್ಯ.

ಆಸ್ಟ್ರೇಲಿಯಾದ ಅಲನ್ ಮೆಗಿಲ್ವರಿ, ಮೈಕೆಲ್ ಚಾರ್ಲ್ಟನ್, ಲಿಂಡ್ಸೆ ಹಾಸೆಟ್, ರಿಚಿ ಬೆನೊ, ಬಿಲ್ ಲಾರಿ, ಟೋನಿ ಗ್ರೆಗ್ ಮುಂತಾದವರು ರೇಡಿಯೋ ಕಾಮೆಂಟರಿ ಹೇಳುವುದರಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಇಂಗ್ಲೆಂಡಿನ ಜಾನ್ ಆರ್ಲಾಟ್, ಜಾಕ್ ಬಾನಿಸ್ಟರ್, ಹೆನ್ರಿ ಬ್ಲೊಫೆಲ್ಡ್, ಬ್ರೈಅನ್ ಜಾನ್ಸಟನ್, ಕ್ರಿಸ್ಟೊಫರ್ ಮಾರ್ಟಿನ್ ಜೆನ್ಕಿನ್ಸ್, ಟ್ರೆವೆರ್ ಬೆಯ್ಲಿ, ರಾಬಿನ್ ಜಾಕ್ಮನ್ ಕಾಮೆಂಟರಿಯಲ್ಲಿ ನಿಸ್ಸೀಮರಾಗಿದ್ದರು. ಮುಂಚೆ ರೇಡಿಯೊಲಿ ಕಾಮೆಂಟರಿ ಮಾಡಿ ಟಿವಿಗೂ ಅವರೇ ಬಂದರು.

ಮುಂಚೆಯೆಲ್ಲಾ ಪತ್ರಕರ್ತರು, ಆಲ್ ಇಂಡಿಯ ರೇಡಿಯೋದಲ್ಲಿ ಕೆಲಸಮಾಡುವವರು ಕಾಮೆಂಟರಿ ಮಾಡುತ್ತಿದ್ದರು. ಆಮೇಲೆ ಆಸ್ಟ್ರೇಲಿಯಾದಲ್ಲಿ ಮಾಜಿ ಕ್ರಿಕೆಟ್ ಆಟಗಾರರು ಕಾಮೆಂಟರಿ ಮಾಡಲು ಶುರು ಮಾಡಿದರು. ಈಗ ಅದೇ ಪದ್ಧತಿ ಜಾರಿಯಲ್ಲಿದೆ. ಮುಂಚಿನಿಂದ ಕಾಮೆಂಟರಿ ಮಾಡುತ್ತಿದ್ದ ಹರ್ಷ ಭೋಗ್ಲೆ ಅವರನ್ನು ಬಿಟ್ಟು ಈಗ ಬರುವವರೆಲ್ಲಾ ಮಾಜಿ ಕ್ರಿಕೆಟ್ ಆಟಗಾರರು.

ಭಾರತದಲ್ಲಿ ಮುಂಚೆ ಬಾಬಿ ಟಲ್ಯಾರ್ ಖಾನ್ ಒಬ್ಬರೇ ಐದೂ ದಿನದ ಕಾಮೆಂಟರಿಯನ್ನು ಒಬ್ಬರೇ ಹೇಳುತ್ತಿದ್ದರು! ಆಮೇಲೆ, ವಿಝ್ಝಿ (ಮಹಾರಾಜ್ಕುಮಾರ್ ಆಫ್ ವಿಜಯನಗರಂ) ವಿಜಯ್ ಮರ್ಚೆಂಟ್, ಪಿಯರ್ಸನ್ ಸುರೀತ, ಅನಂತ್ ಸೆಟಲ್ವಡ್, ದೇವರಾಜ್ ಪೂರಿ, ಅವರ ಮಗ ಡಾ. ನರೋತ್ತಮ ಪೂರಿ, ರಾಜ್ ಸಿಂಘ್ ಡುಂಗರ್ಪೂರ್, ಸುರೇಶ್ ಸರಯ್ಯ, ಡಿಕಿ ರತ್ನಾಗರ್, ಬೆರ್ರಿ ಸರ್ಭಾದಿಕಾರಿ, ಚಕ್ರಪಾಣಿ ಬಾಲು ಆಲಗನನ್, ಆನಂದ ರಾವ್ ಒಳ್ಳೆ ಕಾಮೆಂಟೇಟರ್‌ಗಳಾಗಿದ್ದರು.

ಹಿಂದಿಯಲ್ಲಿ ಜಸ್ದೇವ್ ಸಿಂಘ್, ಸುಶೀಲ್ ದೋಶಿ, ರವಿ ಚತುರ್ವೇದಿ ಮತ್ತು ಕನ್ನಡದಲ್ಲಿ ಸೂರಿ ಕಾಮೆಂಟರಿ ಮಾಡುತ್ತಿದ್ದರು. ಈಗ ಎಲ್ಲಾ ಭಾಷೆಯಲ್ಲೂ ಕಾಮೆಂಟರಿ ಹೇಳುತ್ತಾರೆ. ವಿಜಯ್ ಭಾರಧ್ವಾಜ್, ಸುಜಿತ್ ಸೋಮಸುಂದರ್, ದೊಡ್ಡ ಗಣೇಶ್ ಮತ್ತು ಶ್ರೀನಿವಾಸ ಮೂರ್ತಿ ಕನ್ನಡದಲ್ಲಿ ಕಾಮೆಂಟ್ರಿ ಹೇಳುತ್ತಾರೆ.

(ಅಲನ್ ಮೆಗಿಲ್ವರಿ)

ಈಗ ಇಲ್ಲಿಯೂ ಮಾಜಿ ಕ್ರಿಕಟರ್ಸ್‌ಗಳೇ ಕಾಮೆಂಟರಿ ಮಾಡುತ್ತಾರೆ. ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ, ಗಂಗೂಲಿ, ಲಕ್ಷ್ಮಣ್, ಸಂಜಯ್ ಮಂಜ್ರೇಕರ್ ಅವರುಗಳು ಕಾಮೆಂಟರಿ ಮಾಡಲು ಕೂರುತ್ತಾರೆ.

ಭಾರತ ವೆಸ್ಟ್ ಇಂಡೀಸ್ ಮೇಲೆ 406 ರನ್ ಹೊಡೆದು ಪೋರ್ಟ್ ಆಫ್ ಸ್ಪೈನ್‌ನಲ್ಲಿ 1976ರಲ್ಲಿ ಗೆದ್ದಾಗ ಆ ಖುಶಿಯಲ್ಲಿ ಕಾಮೆಂಟೇಟರ್‌ಗಳಿಗೆ ಏನು ಮಾತನಾಡುತ್ತಿದ್ದಾರೆ ಅನ್ನುವ ಅರಿವು ಇರಲಿಲ್ಲ. ಸುರೇಶ್‌ ಸರಯ್ಯ ಇಂಗ್ಲಿಷ್‌ನಲ್ಲಿ ಮತ್ತು ರವಿ ಚತುರ್ವೇದಿ ಹಿಂದಿಯಲ್ಲಿ ಕಾಮೆಂಟರಿ ಹೇಳುತ್ತಿದ್ದರು. ಅದೊಂದು ಅಮೋಘ, ಅಪೂರ್ವ ಘಟನೆ. ಭಾರತ ಗೆಲ್ಲುತ್ತೇಂತ ಯಾರೂ ಕನಸಿನಲ್ಲೂ ಕಂಡಿರಲಿಲ್ಲ. ಗೆದ್ದಾಗ ಯಾರು ಅದನ್ನು ಭಾರತವಾಸಿಗಳಿಗೆ ಹೇಳಬೇಕೆಂಬುದರ ಬಗ್ಗೆ ಸ್ವಲ್ಪ ಘರ್ಷಣೆಯಾಯಿತು. ಮೈಕ್‌ಗೆ ಸ್ವಲ್ಪ ಹೊಡೆದಾಟವಾಯಿತು. ಒಬ್ಬ ಕಾಮೆಂಟೇಟರ್ ಭಾವುಕರಾಗಿ ಗದ್ಗದ ಗಂಟಲಿನಲ್ಲಿ ಬಿಕ್ಕಿಬಿಕ್ಕಿ ಳುಳುತ್ತಾ ಭಾರತ ಗೆದ್ದಿದ್ದ ಬಗ್ಗೆ ಹೀಗೆ ವಿವರಿಸಿದರು. ‘ಭಾರತ ದೇಶ ಮಹಾನ್ ದೇಶ; ನಮ್ಮಲ್ಲಿ ಆಶೋಕ, ಅಕ್ಬರ್‌ನಂಥ ಮಹಾನ್ ವ್ಯಕ್ತಿಗಳಿದ್ದರು. ನಮ್ಮ ತುರ್ತು ಪರಿಸ್ಥಿತಿಯಿಂದ, ಶಿಸ್ತಿನಿಂದ ಈ ಗೆಲುವು ಬಂದಿದೆ. ಭಾರತ ಮಾತೆಗೆ ಜಯವಾಗಲಿ!’ ಎಂದು ಕೂಗಿದರು!

ವಿ. ಸೂ: ಕ್ರಿಕೆಟಾಯ ನಮಹ ಕರ್ನಾಟಕದ ಕೋಚ್ ದಿಗ್ಗಜರೆಂದು ಪ್ರಸಿದ್ಧಿಯಾದ ಪಿ.ಎಸ್. ವಿಶ್ವನಾಥ್ 3 ಮಾರ್ಚ್‌ 2023ರಂದು ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇವೆ. ಅವರಿಗೆ 96 ವರ್ಷಗಳಾಗಿತ್ತು. ಅವರು ರಣಜಿ ಆಟಗಾರರಾಗಿ, ಮ್ಯಾನೇಜರ್ ಮತ್ತು ಆಡಳಿತಗಾರರಾಗಿ, ಇಂಗ್ಲೆಂಡಿನ ಹೆಸರಾಂತ ಆಲ್ಫ್ ಗೋವರ್ ಕೋಚಿಂಗ್ ಸ್ಕೂಲಿನಲ್ಲಿ ತರಪೇತಿ ಪಡೆದು ನಮ್ಮ ರಾಜ್ಯದ ಅನೇಕ ಕ್ರಿಕೆಟರ್ಸ್‌ಗಳಿಗೆ ತರಪೇತಿ ನೀಡಿದ್ದಾರೆ. ಗುಂಡಪ್ಪ ವಿಶ್ವನಾಥ್, ಬ್ರಿಜೇಷ್ ಪಟೇಲ್. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮುಂತಾದ ಅನೇಕ ಕ್ರಿಕೆಟರ್ಸ್‌ಗಳಿಗೆ ವಿಶ್ವನಾಥ್ ಕೋಚ್ ಮಾಡಿದರು.

ಕ್ರಿಕೆಟಾಯ ನಮಃ ಅವರ ಆತ್ಮಕ್ಕೆ ಶಾಂತಿ ಕೋರುತ್ತೆ.