‘ಮದುವೆಯಾದ ನಂತರ ಗಂಡು ಅಡುಗೆ ಮಾಡುವುದು ಅವಮಾನ, ಅದೇನಿದ್ದರೂ ಹೆಂಡತಿಯ ಕೆಲಸ’ ಎಂಬ ಅರೆಬೆಂದ ಅಲಿಖಿತ ಕಟ್ಟುಪಾಡೊಂದು ಉಂಟಲ್ಲ, ಅದು ಮೌಢ್ಯ. ಮದುವೆಯಾದ ನಂತರವೂ ಅಡುಗೆ ಕೆಲಸಗಳನ್ನು ಮಾಡುವುದು ಖಂಡಿತ ಅವಮಾನದ ಸಂಗತಿಯಲ್ಲ. ಬದಲಿಗೆ, ಪ್ರೀತಿ ಹೆಚ್ಚಿಸುವ ಸಂಗತಿ. ಕುಟುಂಬವೊಂದು ಹೀಗಿದ್ದಾಗ, ಅದು ಮಕ್ಕಳ ಯೋಚನಾ ಲಹರಿಯ ಮೇಲೂ ಪರಿಣಾಮ ಬೀರುತ್ತದೆ.  ಅಪ್ಪನ ಈ ಗುಣಗಳನ್ನು ಕಣ್ತುಂಬಿಕೊಳ್ಳುವ, ಅದರಿಂದ ಅಮ್ಮನಿಗೆ ಖುಷಿ ಮತ್ತು ನೆಮ್ಮದಿ ಸಿಗುವ ಸಂಗತಿಗಳನ್ನು  ಅವರು ಖಂಡಿತ ಗ್ರಹಿಸುತ್ತಾರೆ.
ಸೊಗದೆ ಅಂಕಣದಲ್ಲಿ ಸಹ್ಯಾದ್ರಿ ನಾಗರಾಜ್ ಬರಹ

 

ಬಹಳ ಕಾಲದ ನಂತರ, ಕತ್ತಲಿಳಿದ ಸಂಜೆಯಲ್ಲಿ, ಭದ್ರಾ ನದಿಯ ತಬ್ಬಿಕೊಂಡ ಭದ್ರಾವತಿ ಪಟ್ಟಣಕ್ಕೆ ಕಾಲಿಟ್ಟಿದ್ದೆ. ಗೆಳೆಯ ಫಯಾಜ್ ಮನೆಯಲ್ಲಿ ಠಿಕಾಣಿಯ ಪ್ಲಾನು. ಹೊಳೆ ಬಸ್ ಸ್ಟ್ಯಾಂಡಿಗೆ ಸ್ಕೂಟಿಯಲ್ಲಿ ಬಂದವ, ನನ್ನನ್ನು ಕೂರಿಸಿಕೊಂಡು ಚನ್ನಗಿರಿ ರಸ್ತೆಯಲ್ಲಿ ಹೊಂಟ. ಲೋಕಾಭಿರಾಮ ಮಾತಾಡಿಕೊಂಡು ಹೋಗುತ್ತಿರುವಾಗಲೇ ಗಾಡಿ ಹೊಳೆಹೊನ್ನೂರು ರಸ್ತೆಗೆ ಹೊರಳಿತು. ಇಲ್ಲೇ ಎಲ್ಲೋ ಮನೆ ಇರಬಹುದು ಅಂದುಕೊಂಡರೆ, ಅವನ ಮನೆ ಇರೋದು ಆರು ಕಿಲೋಮೀಟರ್ ದೂರದ ಕಾಗೆಕೋಡಮಗ್ಗೆಯಲ್ಲಿ. ನನಗೋ, ಭತ್ತದ ಗದ್ದೆಗಳಿರುವ ಹಳ್ಳಿಗಳ ಹುಚ್ಚು. ಇಲ್ಲಿ ನೋಡಿದರೆ, ಕೂಗಳತೆಯಲ್ಲಿ ನದಿ ಬೇರೆ!

ಈ ಫಯಾಜ್ ಬಹಳ ಇಂಟ್ರೆಸ್ಟಿಂಗ್ ಮನುಷ್ಯ. ಡಿಗ್ರಿಯ ಮೂರು ವರ್ಷದಲ್ಲಿ ಆತ ಕೋಪ ಮಾಡಿಕೊಂಡಿದ್ದನ್ನೇ ನಾ ಕಂಡಿರಲಿಲ್ಲ. ಒರಟಾದ ಮಾತು, ಮುನಿಸು, ಚೂಪು ನೋಟ… ಊಹುಂ, ಕೇಳಲೇಬೇಡಿ. ಅವನಷ್ಟಕ್ಕೆ ಇದ್ದು, ಕ್ಲಾಸು ಮುಗಿಸಿ, ಯಾರಿಗೂ ಸುಳಿವು ಸಿಗದಂತೆ ನಾಪತ್ತೆ. ಮರುದಿನ ಮತ್ತೆ ಕ್ಲಾಸಿನಲ್ಲಿ ದಿಢೀರ್ ಪ್ರತ್ಯಕ್ಷ. ಬಡತನ ಹೈರಾಣ ಮಾಡಿದ್ದರೂ, ಬದುಕನ್ನು ಸಿಕ್ಕಾಪಟ್ಟೆ ಪ್ರೀತಿಸುವ ಹುಡುಗ. ಹಾಗಾಗಿಯೇ, ನಮ್ಮ ಕ್ರಾಂತಿಕಾರಿಗಳ ಗ್ಯಾಂಗಿನಲ್ಲಿ ಅವನೂ ಒಬ್ಬನಾಗಿದ್ದ. ನಾವಿಬ್ಬರೂ ಭದ್ರಾವತಿಯ ಅವನ ಅಣ್ಣನ ಮನೆಯಲ್ಲಿ ಉಳಿದು, ಭದ್ರಾ ನದಿಯ ನಾದದ ಹಿನ್ನೆಲೆಯಲ್ಲಿ ರಾಶಿ-ರಾಶಿ ಮಾತಾಡಿದ ಹಲವು ಅಪರಾತ್ರಿಗಳು ನೆನಪಿನ ತೆಕ್ಕೆಯಲ್ಲಿವೆ. ಇಂಥ ಫಯಾಜ್, ಡಿಗ್ರಿ ಮುಗಿಸಿ ಬಿಎಡ್ ಮಾಡಲಿಕ್ಕೆ ಹೋದಾಗ ಪ್ರೀತಿಯಾಯ್ತು. ಕರೆಯದೆ ಮದುವೆಯೂ ಆದ. ಈಗ ಇಬ್ಬರು ಮಕ್ಕಳಿದ್ದಾರೆ. ಮಗನಂತೂ ಸಿಕ್ಕಾಪಟ್ಟೆ ತುಂಟ. ಮಗಳು ಅಪ್ಪನ ಪಡಿಯಚ್ಚು.

ಮನೆ ತಲುಪುವಷ್ಟರಲ್ಲಿ ಅತ್ತಿಗೆ ಸಲ್ಮಾ ಚಪಾತಿ ಉಜ್ಜುತ್ತಿದ್ದರು. ನಂತರ ಅಡುಗೆ ಕೋಣೆಯ ಉಸ್ತುವಾರಿ ವಹಿಸಿಕೊಂಡಿದ್ದು ಗೆಳೆಯ ಫಯಾಜ್. ನಾನು ಈರುಳ್ಳಿ ಹೆಚ್ಚಿ ಕೊಟ್ಟೆ. ನೋಡನೋಡುತ್ತಿದ್ದಂತೆ ಜಬರ್ದಸ್ತ್ ರುಚಿಯ ಎಗ್ ಬುರ್ಜಿ ಮಾಡಿದ. ಹಿಂದೆಯೇ ಆಮ್ಲೆಟ್ ಕೂಡ ಆಗೋಯ್ತು. ಎಗ್ ಬುರ್ಜಿ, ದಾಲ್ ಜೊತೆ ಚಪಾತಿ, ಆಮ್ಲೆಟ್ ಮತ್ತು ದಾಲ್ ಜೊತೆ ಅನ್ನ ಅಖಾಡಕ್ಕೆ ಇಳಿದವು. ಮಕ್ಕಳು ಅದಾಗಲೇ ಮಲಗಿದ್ದರು. ಎಲ್ಲವನ್ನೂ ನಡುವೆ ಜೋಡಿಸಿಕೊಂಡು, ಮೂವರೂ ಆರಾಮ ಕುಂತು, ಎಷ್ಟೋ ಶತಮಾನಗಳಿಂದ ಹೀಗೆಯೇ ಊಟ ಮಾಡುತ್ತಿದ್ದೇವೆ ಎಂಬಷ್ಟು ತನ್ಮಯತೆ, ಜೋರು ನಗು, ಮಾತೋ ಮಾತು. ಊಟ ಮುಗಿಸಿ ಕೈ ತೊಳೆಯುವಾಗ, “ನಾಳೆ ನಾವಿಬ್ರೇ ಅಡುಗೆ ಮಾಡುವ. ಅತ್ತಿಗೆ ರೆಸ್ಟ್ ಮಾಡ್ಲಿ…” ಅಂತ ನಾ ಹೇಳಿದಾಗ ಅವರಿಬ್ಬರ ಮೊಗದಲ್ಲೂ ಕಿರುನಗು. ಆ ನಗುವಿನ ರಹಸ್ಯ ಗೊತ್ತಾಗಿದ್ದು ಮರುದಿನ ಬೆಳಗಾದಾಗ.

ಬೆಳಗ್ಗೆ ನಾನು ಶಿರಸಿ ಹೊರಡಲಿಕ್ಕಿತ್ತು. ಆತ ಶಿವಮೊಗ್ಗಕ್ಕೆ ಡ್ಯೂಟಿಗೆ. ನಾನು ಸ್ನಾನ ಮಾಡಿ ರೆಡಿ ಆಗುವಷ್ಟರಲ್ಲಿ ನೆನಪಿರುವಂಥ ರುಚಿಯ ಉಪ್ಪಿಟ್ಟು ಮಾಡಿಟ್ಟಿದ್ದ. ಶಿರಸಿಯಿಂದ ಅದೇ ದಿನ ಮತ್ತೆ ಕಾಗೆಕೋಡಮಗ್ಗೆ ಬಂದೆ. ಮರುದಿನ ಬೆಳಗ್ಗೆ ಅದ್ಭುತ ಹದ ಕಟ್ಟಿದ ಪುಲಾವೊಂದು ನನಗಾಗಿ ಕಾದಿತ್ತು. ಅದರ ಜೊತೆಗೆ ಈರುಳ್ಳಿ ಪಕೋಡ. ಅವತ್ತಿನ ಅಡುಗೆಯೂ ಗೆಳೆಯನದೇ. ಮತ್ತದೇ… ಎಲ್ಲವನ್ನೂ ನಡುವೆ ಜೋಡಿಸಿಕೊಂಡು, ಮೂವರೂ ಆರಾಮ ಕುಂತು, ಎಷ್ಟೋ ಶತಮಾನಗಳಿಂದ ಹೀಗೆಯೇ ಊಟ ಮಾಡುತ್ತಿದ್ದೇವೆ ಎಂಬಷ್ಟು ತನ್ಮಯತೆ, ಜೋರು ನಗು, ಮಾತೋ ಮಾತು. ಪುಲಾವು ಎಷ್ಟು ಚಂದಿದೆ, ಹೇಗೆ ಚಂದಿದೆ ಅಂತ ಹೇಳಿದೆ. ಅತ್ತಿಗೆ ಸಂಭ್ರಮದಿಂದ ಹೇಳಿದರು: “ನಮ್ಮನೆಯಲ್ಲಿ ಇವ್ರೇ ಜಾಸ್ತಿ ಅಡುಗೆ ಮಾಡೋದು. ನಂಗೆ ಮಕ್ಕಳನ್ನು ಸುಧಾರ್ಸೋದು, ಡ್ಯೂಟಿಯಲ್ಲೇ ಟೈಮಾಗಿಹೋಗ್ತಿರುತ್ತೆ.” ನನ್ನ ಕಣ್ಣಾಲಿ ತುಂಬಿದವು. ಗೆಳೆಯ ಮಾಡಿದ ಪುಲಾವು ಇನ್ನಷ್ಟು ರುಚಿಯಾಗಿದೆ ಅನ್ನಿಸಿತು.

ಇಲ್ಲೇ ಎಲ್ಲೋ ಮನೆ ಇರಬಹುದು ಅಂದುಕೊಂಡರೆ, ಅವನ ಮನೆ ಇರೋದು ಆರು ಕಿಲೋಮೀಟರ್ ದೂರದ ಕಾಗೆಕೋಡಮಗ್ಗೆಯಲ್ಲಿ. ನನಗೋ, ಭತ್ತದ ಗದ್ದೆಗಳಿರುವ ಹಳ್ಳಿಗಳ ಹುಚ್ಚು. ಇಲ್ಲಿ ನೋಡಿದರೆ, ಕೂಗಳತೆಯಲ್ಲಿ ನದಿ ಬೇರೆ!

ಎಲ್ಲಕ್ಕಿಂತ ಹೆಚ್ಚು ಖುಷಿ ಆಗಿದ್ದು, ಅಪ್ಪನ ಈ ಗುಣಗಳನ್ನು ಕಣ್ತುಂಬಿಕೊಳ್ಳುವ, ಅದರಿಂದ ಅಮ್ಮನಿಗೆ ಖುಷಿ ಮತ್ತು ನೆಮ್ಮದಿ ಸಿಗುವ ಸಂಗತಿಗಳನ್ನು ಗ್ರಹಿಸುವ ಫಯಾಜ್‌ನ ಮಗ, ಮುಂದೊಂದು ದಿನ ತನ್ನಪ್ಪನಂತೆಯೇ ನಿಜವಾದ ಮನುಷ್ಯನಾಗಬಹುದಾದ ಸಾಧ್ಯತೆ. “ಮದುವೆಯಾದ ನಂತರ ಗಂಡು ಅಡುಗೆ ಮಾಡುವುದು ಅವಮಾನ, ಅದೇನಿದ್ದರೂ ಹೆಂಡತಿಯ ಕೆಲಸ’ ಎಂಬ ಅರೆಬೆಂದ ಅಲಿಖಿತ ಕಟ್ಟುಪಾಡೊಂದು ಉಂಟಲ್ಲ, ಅದು ಮೌಢ್ಯ. ಮದುವೆಯಾದ ನಂತರವೂ ಅಡುಗೆ ಕೆಲಸಗಳನ್ನು ಮಾಡುವುದು ಖಂಡಿತ ಅವಮಾನದ ಸಂಗತಿಯಲ್ಲ. ಬದಲಿಗೆ, ಪ್ರೀತಿ ಹೆಚ್ಚಿಸುವ ಸಂಗತಿ,” ಎಂಬ ಆಲೋಚನೆ ಮಕ್ಕಳ ಮನದೊಳಗೆ ಬೇರೂರುತ್ತದೆ. ಇದು ನನ್ನ ಗೆಳೆಯ ಆತನ ಮಗನಿಗೆ ಕೊಡಬಹುದಾದ ಬಹುದೊಡ್ಡ ಕಾಣಿಕೆ, ನಿಜವಾದ ಆಸ್ತಿ. ಅಪ್ಪನಾಗಿ ಅವನ ಸಾರ್ಥಕತೆ.

ನನ್ನ ಬದುಕಿನ ಬಹಳ ದೊಡ್ಡ ಕುತೂಹಲಗಳಲ್ಲಿ, ಕ್ಲಾಸ್‌ಮೇಟ್ಸುಗಳು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬಹುದು ಎಂಬುದೂ ಒಂದು. ಏಕೆಂದರೆ, ನಮ್ಮ ಕ್ಲಾಸ್‌ಮೇಟ್ಸುಗಳನ್ನೆಲ್ಲ ನಾವು ಬಹಳ ಹತ್ತಿರದಿಂದ ಗಮನಿಸಿರುತ್ತೇವೆ. ಒಡನಾಡಿರುತ್ತೇವೆ. ಅವರ ವ್ಯಕ್ತಿತ್ವ, ಆಲೋಚನೆಯ ಧಾಟಿ ಇತ್ಯಾದಿಗಳನ್ನು ಕಂಡಿರುತ್ತೇವೆ. ಹಾಗಾಗಿ, ಅವರೆಲ್ಲ ಅವರ ಮಕ್ಕಳನ್ನು ಅವರಂತೆಯೇ ಬೆಳೆಸುತ್ತಾರಾ ಅಥವಾ ತಮ್ಮ ಮಕ್ಕಳು ಬೇರೆಯೇ ವ್ಯಕ್ತಿಗಳಾಗಿ ಬೆಳೆಯಲಿ ಎಂದು ಆಶಿಸುತ್ತಾರಾ; ಆ ಬೇರೆಯೇ ವ್ಯಕ್ತಿಗಳಾಗಲಿ ಎನ್ನುವಲ್ಲಿ ಅವರು ಬಯಸುವ ಬದಲಾವಣೆಗಳು ಎಂಥವು; ಆ ಬದಲಾವಣೆಗಳು ಮಕ್ಕಳಿಗೆ ಈ ಹೊತ್ತಿನ ಎಲ್ಲ ನಂಜುಗಳನ್ನೂ ಎದುರಿಸುವಂಥ ಮಾನವೀಯ ಗುಣ ತಂದುಕೊಡಬಲ್ಲವೇ ಎಂಬ ಕೌತುಕ ನನ್ನನ್ನು ಸದಾ ಕಾಡುತ್ತಿರುತ್ತದೆ. ವಿಶೇಷವಾಗಿ, ಮನಸ್ಸಿನ ಜೊತೆಗೆ ಸಮಾಜದ ಆರೋಗ್ಯಕ್ಕೆ ಮಸಿ ಬಳಿಯುವ ಕೋಮುವಾದ, ಧರ್ಮ, ಜಾತಿ, ಮೂಢನಂಬಿಕೆ, ಪಕ್ಷ ರಾಜಕೀಯ, ಭ್ರಷ್ಟಾಚಾರ ಮತ್ತಿತರ ಸಂಗತಿಗಳಲ್ಲಿ ಆ ಮಕ್ಕಳು ಯಾವ ನಿಲುವು ತಾಳಬಹುದು? ಗುಂಪಿನಲ್ಲಿ ಗೋವಿಂದ ಎಂದುಕೊಂಡು ಎಲ್ಲದಕ್ಕೂ ಜೈ ಎನ್ನಬಹುದೇ? ನಮಗ್ಯಾಕೆ ಉಸಾಬರಿ ಅಂತ ಬಾವಿಯೊಳಗಿನ ಕಪ್ಪೆಗಳಾಗಬಹುದೇ ಅಥವಾ ತಮಗೆ ಸಾಧ್ಯವಾದಷ್ಟು, ತಮ್ಮ ಕೈಗೆ ನಿಲುಕುವಷ್ಟು ಈ ಸಂಗತಿಗಳ ಸುಧಾರಣೆಗೆ ಯತ್ನಿಸಬಹುದೇ?

ನನ್ನ ಕೆಲವರು ಕ್ಲಾಸ್‍ಮೇಟ್ಸುಗಳಿಗೆ ಈಗಾಗಲೇ ಎರಡೆರಡು ಮಕ್ಕಳಿವೆ. ಕೆಲವರಿಗೆ ಒಂದೊಂದು ಮಗು. ಮತ್ತೆ ಕೆಲವರು ಎರಡನೆಯ ಮಗುವಿನ ಪ್ಲಾನಿಂಗಿನಲ್ಲಿರಬಹುದು. ಹಾಗಾಗಿ ಒಂದ್ಹತ್ತು ವರುಷದ ನಂತರ, ಆ ಮಕ್ಕಳ ಜೊತೆ ಮಾತನಾಡಬೇಕೆಂಬ ಆಸೆ ಉಂಟು. ಅವರು ತಮ್ಮ ಸಮಾಜದ ಸಂಕಟಗಳಿಗೆ ಮಾನವೀಯ ಮದ್ದಾಗಿದ್ದಾರೋ ಅಥವಾ ಸ್ವತಃ ನಂಜೇ ಆಗಿದ್ದಾರೋ ಎಂದು ಅರಿಯುವ ತುದಿಮೊದಲಿರದ ಕುತೂಹಲದ ಮೂಟೆ ಉಂಟು. ಹಾಗೆ ಆ ಮಕ್ಕಳನ್ನೆಲ್ಲ ಮಾತನಾಡಿಸಿದ ನಂತರವಷ್ಟೇ ನನ್ನ ಕ್ಲಾಸ್‍ಮೇಟ್ಸುಗಳು ನಿಜಕ್ಕೂ ಏನು ಅನ್ನುವುದರ ನಿಕ್ಕಿ ಆದೀತು.

ಅದನ್ನೆಲ್ಲ ವಿವರವಾಗಿ ಬರೆಯಲು ಇನ್ನೂ ಸಾಕಷ್ಟು ಸಮಯವಂತೂ ಬಾಕಿ ಇದೆ. ಆದರೆ ಈಗ, ಗೆಳೆಯ ಫಯಾಜ್‍ನ ಕೈರುಚಿ ಸವಿದ ಮೇಲೆ ಹೊಸದೊಂದು ಸಮಸ್ಯೆ ತಲೆದೋರಿದೆ.

ಭದ್ರಾವತಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರಿನ ತಳ್ಳುಗಾಡಿಗಳಲ್ಲಿ ಪ್ರಪಂಚದ ಅತ್ಯಂತ ಸರಳ ವಿಧಾನದ, ಆದರೆ ಅತ್ಯಂತ ಶ್ರೀಮಂತ ರುಚಿಯ ಎಗ್ರೈಸ್ ಸಿಗುವುದುಂಟು. ಇದ್ದೂ ಇಲ್ಲದಂತಿರುವಷ್ಟು ಕಡಿಮೆ ಎಣ್ಣೆಯ ಬಳಕೆ, ರುಚಿಗೆ ತಕ್ಕಷ್ಟು ಮೊಟ್ಟೆಯ ಬಳಕೆ (ಹೆಚ್ಚು ಮೊಟ್ಟೆ ಹಾಕಿದರೂ, ಕಡಿಮೆ ಮೊಟ್ಟೆ ಹಾಕಿದರೂ ಎಗ್‌ರೈಸ್ ಅನ್ನು ಹೆಚ್ಚು ತಿನ್ನಲಾಗದು), ಕೊತ್ತಂಬರಿ ಫ್ಲೇವರ್, ಈರುಳ್ಳಿ ಮತ್ತು ನಿಂಬೆ ಹೋಳಿನ ಸಾಥ್, ಅಚ್ಚುಕಟ್ಟಾದ ತಳ್ಳುಗಾಡಿ… ಹೀಗೆ ಇಲ್ಲಿನ ಎಗ್ ರೈಸಿನದು ಹಲವು ವಿಶೇಷಗಳ ಗುಚ್ಛ.

ಬೆಂಗಳೂರಿನಿಂದ ಬೆಳಗ್ಗೆ ಹೊಂಟು, ಸಂಜೆಗೆ ಭದ್ರಾವತಿ ತಲುಪಿ, ಸಮ್ಮ ಎಗ್‍ರೈಸ್ ಬಾರಿಸಿ, ವಾಪಸು ಬಸ್ಸು ಹತ್ತುವ ಪ್ಲಾನಿತ್ತು ಬಹಳ ದಿನಗಳಿಂದ. ಈಗ ಭದ್ರಾವತಿಗೆ ಕಾಲಿಟ್ಟರೆ ಫಯಾಜ್‍ನ ಅಡುಗೆ ಕೂಡ ಕೈ ಬೀಸಿ ಕರೆಯುವುದು ಪುಲಾವಿನಾಣೆಗೂ ನಿಜ. ಫಯಾಜ್‍ನಲ್ಲಿಯೂ ತಿಂದು, ಎಗ್‍ರೈಸ್ ತಿನ್ನಲೂ ಕುಂತರೆ, ವಿಷಯ ಗೊತ್ತಾಗಿ ಎಗ್‍ರೈಸ್ ಮುನಿಸಿಕೊಂಡರೆ? ಭದ್ರಾವತಿಗೆ ಬಂದೂ ತನ್ನ ಮನೆಗೆ ಬಂದಿಲ್ಲವೆಂದು ಫಯಾಜ್‍ನ ಆಮ್ಲೆಟ್ ಕಾವಲಿ ಕೋಪ ಮಾಡಿಕೊಂಡರೆ? ಇದಕ್ಕೆ ಪರಿಹಾರ ಹೇಳಿ ಮಾರ್ರೆ…