ಹಿಂದಿನ ಕ್ರಿಸ್ಮಸ್ ನಲ್ಲಿ ಭಾಗವಹಿಸಿದ್ದ ಅರವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಈ ಸಲ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಯು.ಕೆ. ಕೋವಿಡ್ ಡೈರಿಯೊಳಗಿನ ಸರ್ವವಿಧಿತ ಕಠೋರ ಲೋಕಸತ್ಯ. ಈ ಇವರೆಲ್ಲರೂ ಕೊರೊನ ಕಾರಣಕ್ಕೆ ಇಲ್ಲವಾದವರು, ಇನ್ನೂ ಇಲ್ಲೇ ವ್ಯಾಪಕವಾಗಿ ಹಾಯಾಗಿ ಹಬ್ಬಿ ಹರಿದಾಡಿ ಹಾರಾಡಿಕೊಂಡಿರುವ ಅಸಾಧಾರಣ ವಿನಾಶ ಶಕ್ತಿಯ ಕ್ರಿಮಿ ಜಂತುವಿನ ಹಾವಳಿಯೊಂದಿಲ್ಲದಿದ್ದಿದ್ದರೆ ಬಹುಷಃ ಇನ್ನೂ ಕೆಲವು ಹಲವು ಕ್ರಿಸ್ಮಸ್ ಗಳನ್ನು ಉಲ್ಲಾಸದಲ್ಲಿ ಎದುರುಗೊಳ್ಳುತ್ತಿದ್ದವರು.
ಯೋಗೀಂದ್ರ ಮರವಂತೆ ಬರೆಯುವ ʼಇಂಗ್ಲೆಂಡ್‌ ಲೆಟರ್‌ʼ ಅಂಕಣದ ಕೊನೆಯ ಬರಹ

 

ಬಹುನಿರೀಕ್ಷಿತ ಬಹುಕಾತರಿಕೆಯ ಈ ಊರಿನ ಕ್ರಿಸ್ಮಸ್, ಎಂದಿನ ಬೆಳಕು ಪ್ರಭಾವಳಿ ಉಡುಗೊರೆ ಮಿಲನ ಮತ್ತೆ ಟರ್ಕಿ ರೋಸ್ಟ್ ಗಳ ಘಮಲಿನಲ್ಲಿ “ಜಿಂಗಲ್ ಬೆಲ್” ಹಾಡಿಕೊಂಡು ತೇಲಿಕೊಂಡು ಬಾಗಿಲು ದೂಡಿಕೊಂಡು ಇಂದು ಈಗಷ್ಟೇ ಒಳಬಂದಿದೆ. ವರ್ಷವರ್ಷವೂ ಇದೇ ಮಾಸ, ಇದೇ ವಾರ ಮತ್ತು ಇದೇ ದಿನಕ್ಕೆ ಬಂದುಹೋಗುವ ಹಬ್ಬಕ್ಕೆ ಹೀಗೆ ಬರುವುದು ಇರುವುದು ಹೋಗುವುದು ಹಳೆಯ ರಿವಾಜು. ಹಾಗಂತ ಮನೆಮನೆಗಳ ಕದ ತೆರೆದು ಒಳಬಂದಿರುವ ಕ್ರಿಸ್ಮಸ್ ಗೆ ಇವು ಎಂದಿನ ಹಬ್ಬದ ಮನೆಗಳಲ್ಲ ಎಂದು ಅರಿವಾಗುವುದು ಅಷ್ಟೇನೂ ಹಳೆಯದಲ್ಲದ, ಈ ಸಲಕ್ಕೇ ಮೀಸಲಾದ ನವನವೀನ ಅನುಭವ.

ತಾನು ಪ್ರವೇಶಿಸುವ ಮನೆಗಳಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುವ ಮಕ್ಕಳು, ಕವಲಾಗುವ ಕುಟುಂಬಗಳು, ಹೊಸ ಜನನಗಳು, ನವಮಿಲನಗಳು, ನಿರೀಕ್ಷಿತ ಅನಿರೀಕ್ಷಿತ ನಿರ್ಗಮನಗಳು ಆಯಾ ವರ್ಷಕ್ಕೆ ತುಸು ಹೊಸತಾಗಿ ಕಂಡರೂ ಇವೆಲ್ಲವೂ ನಿರೀಕ್ಷಿತವಾದ ಅನಿರೀಕ್ಷಿತ ವಿಷಯಗಳಾದ್ದರಿಂದ ಕ್ರಿಸ್ಮಸ್ ಅಂತಹ ಬದಲಾವಣೆಗಳ ಬಗೆಗೆ ವಿಶೇಷ ಗಮನಿಸುವಿಕೆಯನ್ನು ನೀಡಲಿಕ್ಕಿಲ್ಲ, ಆಶ್ಚರ್ಯ ಪಡಲಿಕ್ಕಿಲ್ಲ.

ಈ ವರ್ಷದ ಅತ್ಯಂತ ಚರ್ಚಿತ ಜನಪ್ರಿಯ ಉಪಯೋಗಿ ದುರುಪಯೋಗಿ ಶಬ್ದವಾದ “ಲಾಕ್ ಡೌನ್” ನ ಅಥವಾ ಸಾಮಾಜಿಕ ನಿರ್ಬಂಧದ ನೆರಳು ದೈನಿಕದ ಎಲ್ಲ ಮಗ್ಗುಲುಗಳನ್ನು ಆವರಿಸಿದ ಹಾಗೆಯೇ ಇದೀಗ ತನ್ನ ಮೇಲೆಯೂ ದಟ್ಟವಾಗಿ ಹರಡಿರುವುದು ಹೀಗೆ ಇಲ್ಲಿಗೆ ಬಂದು ನಿಲ್ಲುವವರೆಗೂ ಕ್ರಿಸ್ಮಸ್ ನ ತಿಳಿವಿಗೆ ದಕ್ಕಿರುವ ಸಾಧ್ಯತೆ ಇರಲಿಲ್ಲ. ಇಂಗ್ಲೆಂಡ್ ವೇಲ್ಸ್ ಸ್ಕಾಟ್ ಲ್ಯಾಂಡ್ ಐರ್ಲೆಂಡ್ ಪ್ರಾಂತ್ಯಗಳು ಜೊತೆಯಾದಾಗ ಯುನೈಟೆಡ್ ಕಿಂಗ್ಡಮ್ ಎಂದು ಕರೆಯಲ್ಪಡುವ ಈ ದೇಶದ ಎಲ್ಲ ಮೂಲೆಗಳಲ್ಲೂ ಸಡಗರ ಕಾತರಿಕೆ ಸಂಭ್ರಮಗಳನ್ನು ಆವಾಹಿಸಿಕೊಳ್ಳುವ ದಿನವಾದ ಇಂದು ಇದು ಹೀಗೆ ಅಥವಾ ಹೇಗೆ ಎನ್ನುವ ವಾಸ್ತವ ಈಗಷ್ಟೇ ಕ್ರಿಸ್ಮಸ್ ನ ಪ್ರಜ್ಞೆಯಲ್ಲಿ ಇಳಿಯುತ್ತಿದೆ.

ಕುಟುಂಬ ಮಿಲನಗಳು, ಗೆಳೆಯರ ಕೂಟಗಳು, ಅಜ್ಜಿ ಅಮ್ಮಂದಿರ ಪಳಗಿದ ಕೈಯಲ್ಲಿ ಬೇಯಿಸಿಕೊಂಡು ಕಾಯಿಸಿಕೊಂಡು ಹದವಾದ ಟರ್ಕಿ, ಟೇಬಲ್ ಮೇಲೆ ಶಿಸ್ತುಬದ್ಧವಾಗಿ ಜೋಡಿಸಿದ ತಿನಿಸುಗಳು, ನಶೆ ತುಂಬಿಸಿಕೊಂಡಿದ್ದರೂ ನೆಟ್ಟಗೆ ನಿಂತು ಮಿರಮಿರ ಎನ್ನುವ ವೈನ್ ಗ್ಲಾಸ್ ಗಳು, ಊಟದ ನಡುವೆ ನಗೆ ಮಸ್ತಿ, ಅಪರೂಪಕ್ಕೆ ಜೊತೆಯಾದ ಅಜ್ಜ-ಅಜ್ಜಿ ಮೊಮ್ಮಕ್ಕಳ ಮುದ್ದು, ಆಮೇಲೆ ಎಲ್ಲರೂ ಕೂಡಿ ಆಡುವ ಆಟಗಳು, ಹಾಡುವ ಪದಗಳು ಇವೆಲ್ಲವೂ ಬೆರೆತು ಚಳಿ ಕತ್ತಲೆಗಳ ಕಾಲದಲ್ಲಿ ಉತ್ಸಾಹ ಉಲ್ಲಾಸ ಉಸಿರಾಟಗಳನ್ನು ತುಂಬಬೇಕಾಗಿದ್ದ ಕ್ರಿಸ್ಮಸ್ ಇದೀಗ ಕಳವಳ ಕಸಿವಿಸಿಗಳಲ್ಲಿ ಇವತ್ತಿನ ದಿನವನ್ನು ಕಳೆಯುತ್ತಿದೆ.

ಹಬ್ಬದ ಮೊದಲಿನ ನಾಲ್ಕೈದು ವಾರಗಳಿಂದ ಶುರುವಾಗಿ ಹಿಂದಿನ ನಾಲ್ಕೈದು ದಿನಗಳ ತನಕವೂ ಈ ಸಲದ ಹಬ್ಬದ ಆಸುಪಾಸಲ್ಲಿ ಏನು ಮಾಡಬಹುದು ಮಾಡಬಾರದು ಯಾವುದು ಸಾಧ್ಯ ಅಸಾಧ್ಯ ಎನ್ನುವ ನಿಯಮಗಳು ನಿರ್ದೇಶನಗಳು ಬದಲಾಗುತ್ತಲೇ ಇದ್ದದ್ದು ಅಂತೂ ಕ್ರಿಸ್ಮಸ್ ಗೆ ಈಗ ಗೊತ್ತಾಗಿರಬಹುದು. ಮತ್ತೆ ಅದಕ್ಕಿಂತ ಹಲವು ತಿಂಗಳುಗಳ ಮೊದಲು ಯಃಕಶ್ಚಿತ ಕ್ರಿಮಿಯೊಂದರ ಆಗಮನಕ್ಕೆ ಇಲ್ಲಿನ ಆರೋಗ್ಯ, ಆರ್ಥಿಕತೆ ಜೀವ ಜೀವನ ಎಲ್ಲವೂ ಹದ ತಪ್ಪಿ ಹೊಯ್ದಾಡಿದ್ದು ಅಂದಿನಿಂದ ಇಂದಿನವರೆಗೆ ನಡೆಯುತ್ತಿರುವ ಎಲ್ಲವನ್ನೂ ಆ ಜಂತುವೇ ನಿರ್ಣಯಿಸಿ ನಿರ್ಧರಿಸುತ್ತಿರುವುದೂ ತಿಳಿವಿಗೆ ಬಂದಿರಬೇಕು.

ಇಲ್ಲಿಯ ತನಕದ ಮಂಕು ಕವಿದ ದಿನಗಳಿಂದ ಒಂದು ಸಣ್ಣ ನಿರ್ವಾಹ ದೊರಕಿಸುವ ಉದ್ದೇಶದಿಂದ ಇಲ್ಲಿನ ಅತಿದೊಡ್ಡ ಹಬ್ಬವಾದ ಕ್ರಿಸ್ಮಸ್ ನ ಆಸುಪಾಸಿನ ಐದು ದಿನಗಳಲ್ಲಿ, ಬಂಧನಗಳಿಂದ ಬಿಡಿಸಿಕೊಂಡು ಸಡಿಲಾಗಿ ಹಗುರಾಗಿ ಇರಬಹುದು ಎಂದು ತಿಂಗಳ ಹಿಂದೆ ಸರಕಾರ ಘೋಷಿಸಿತ್ತಾದರೂ, ಹಬ್ಬ ನಿಜವಾಗಲೂ ಹತ್ತಿರ ಬರುತ್ತಿರುವ ಹೊತ್ತಲ್ಲಿ ಮತ್ತೆ ಸೋಂಕಿನ ಸಂಖ್ಯೆ ಮತ್ತೆ ಏರುತ್ತಿರುವುದರಿಂದ, ಲಂಡನ್ನಿನ ಆಸುಪಾಸಿನಲ್ಲಿ ಮಾಮೂಲಿ ಕೊರೊನಗಿಂತ ತ್ವರಿತವಾಗಿ ಹರಡುವ ವೈರಾಣುವಿನ ಹೊಸತಳಿ ಕಂಡುಬಂದುದರಿಂದ “ಕ್ರಿಸ್ಮಸ್ ಮಿಲನ” ಕೇವಲ ಇವತ್ತಿನ ಒಂದು ದಿನಕ್ಕೆ ಸೀಮಿತ ಆಗಿದೆ.

ಮತ್ತೆ ಹೊಸ ಪ್ರಭೇದದ ವೈರಾಣು ಅತಿ ಹೆಚ್ಚು ಹಬ್ಬುವಿಕೆ ಕಂಡ ಊರುಗಳಲ್ಲಿ ಇವತ್ತಿನ ದಿನವೂ ಒಂದು ಮನೆಯವರು ಇನ್ನೊಂದು ಮನೆಯವರನ್ನು ಭೇಟಿ ಮಾಡುವುದನ್ನು ನಿಷೇಧಿಸಲಾಗಿದೆ. ಯಾರ ಭೇಟಿಯೂ ಸಾಧ್ಯವಾಗದ ಒಬ್ಬರೇ ವಾಸಿಸುವ ಮನೆಗಳಲ್ಲಿ ಈಗ ಒಂಟಿ ಆಚರಣೆ ನಡೆಯುತ್ತಿದೆ. ತಮ್ಮಷ್ಟಕ್ಕೆ, ಯಾವ ಅತಿಥಿಗಳೂ ಇಲ್ಲದೇ ಕ್ರಿಸ್ಮಸ್ ಆಚರಿಸುವ ಅನಿವಾರ್ಯತೆ ಇರುವವರಿಗೆ ಹಬ್ಬ ಮುದ ನೀಡಬೇಕಾದರೆ ಅವರು ಪರಿಗಣಿಸಬೇಕಾದ ಏಳು ವಿಚಾರಗಳು, ಒಂಬತ್ತು ಕಿವಿ ಮಾತುಗಳು ಇತ್ಯಾದಿ ಯಾವುವು ಎಂದು ಇನ್ನು ಇಲ್ಲಿನ ಪತ್ರಿಕೆಗಳು ನಿನ್ನೆ ಮೊನ್ನೆಯೇ ಪಟ್ಟಿ ಮಾಡಿ ಪ್ರಕಟಿಸಿ ಆಗಿವೆ.

ನಮ್ಮ ತಲೆಮಾರಿಗೆ ಕೋವಿಡ್ ಅನುಭವ ಎಷ್ಟು ಅಪೂರ್ವದ್ದೋ, ಕ್ರಿಸ್ಮಸ್ ಪಾಲಿಗೂ ಇಂದಿನ ಆಚರಣೆ ಅಷ್ಟೇ ಚಾರಿತ್ರಿಕ ಇರಬಹುದು. ಕ್ರಿಸ್ಮಸ್ ಆಗಮಿಸುವ ಎರಡು ವಾರ ಮೊದಲು ಕೋವಿಡ್ ಬರದಂತೆ ಕಾಯುವ ಲಸಿಕೆ ನೀಡುವುದು ಇಲ್ಲಿ ಶುರು ಆಗಿದ್ದರೂ ಅದು ಇಡೀ ದೇಶದ ಜನರಿಗೆ ದೊರೆಯಲು ಇನ್ನೂ ಕನಿಷ್ಠ ಆರರಿಂದ ಒಂಭತ್ತು ತಿಂಗಳುಗಳಾದರೂ ಬೇಕು. ಕಳೆದ ಒಂಭತ್ತು ತಿಂಗಳುಗಳ ನಿರಾಶಾದಾಯಕ ವಾತಾವರಣಕ್ಕೆ ಆಶಾವಾದದ ಸ್ಪರ್ಶ ಆಗಿದ್ದರೂ ವ್ಯಾಕ್ಸಿನ್ ಎಲ್ಲರಿಗೂ ತಲುಪುವ ತನಕ ತಾಳ್ಮೆ ಕಳೆದುಕೊಳ್ಳದೆ ಜಾಗರೂಕತೆಯಲ್ಲೇ ದಿನ ಕಳೆಯಬೇಕು ಎನ್ನುತ್ತ ಇವತ್ತಿನ ಕ್ರಿಸ್ಮಸ್ ಬಿಗಿ ಬಂಧನ ಜಾಗರೂಕತೆಗಳ ನಡುವೆ ಆಚರಿಸಲ್ಪಡಬೇಕು ಎಂದು ಸರಕಾರ ಮತ್ತೆ ಮತ್ತೆ ಎಚ್ಚರಿಸಿದೆ.

ಕ್ರಿಸ್ಮಸ್ ಆಸುಪಾಸಿನ ದಿನಗಳ ಕಾನೂನು ಎಚ್ಚರಿಕೆಗಳು ಬಿಗಿಯಾಗಬೇಕೋ ಸಡಿಲಾಗಬೇಕೋ ಎನ್ನುವುದರ ಬಗೆಗೆ ಮತ್ತೆ ಅವುಗಳ ಪರಿಣಾಮಗಳ ಬಗೆಗೆ ವಿಜ್ಞಾನಿಗಳಿಗೆ ರಾಜಕಾರಣಿಗಳಿಗೆ ವ್ಯವಹಾರಸ್ಥರಿಗೆ ಜನಸಾಮಾನ್ಯರಿಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಮತ್ತೆ ಸರಕಾರದ ಸಡಿಲಿಕೆ ಬಿಗಿಗಳ ನಿಲುವಿನ ವಿರುದ್ಧವಾಗಿ, ಕೊನೆಯ ಕ್ಷಣದಲ್ಲಿ ನಿರ್ಬಂಧವನ್ನು ತೀವ್ರಗೊಳಿಸಿದ ಬಗೆಗೆ ತೀವ್ರ ಅಸಮಾಧಾನ ಟೀಕೆಗಳೂ ಇವೆ. ಈಗಷ್ಟೇ ಯು.ಕೆ ಯಲ್ಲಿ ಬೆಳಕಿಗೆ ಬರುತ್ತಿರುವ ಹೊಸತಳಿಯ ವೈರಾಣು ಜಗತ್ತಿನ ಇತರ ಭಾಗಗಳಿಗೆ ಹರಡುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಎಲ್ಲ ಬಗೆಯ ಸಾಗಾಟ ಪ್ರಯಾಣಗಳಿಗೂ ನಲವತ್ತಕ್ಕಿಂತ ಹೆಚ್ಚು ದೇಶಗಳು ನಿರ್ಬಂಧ ಹಾಕಿವೆ. ಮತ್ತೆ ಆ ಕಾರಣಕ್ಕಾಗಿ ಕ್ರಿಸ್ಮಸ್ ದಿನ ಇಲ್ಲಿ ಯಾವ ಯಾವ ಸಾಮಾನುಗಳು ಸರಕುಗಳು ಲಭ್ಯ ಆಗಲಿಕ್ಕಿಲ್ಲ, ಅಂತಹ ನಿರ್ಣಾಯಕ ವಸ್ತುಗಳ ಅನುಪಲಬ್ಧತೆಯಲ್ಲಿ ಹಬ್ಬವನ್ನು ಸಾಕಾರಗೊಳಿಸಿಕೊಳ್ಳುವುದು ಹೇಗೆ ಎಂತಲೂ ಸುದ್ದಿ ಮಾಧ್ಯಮಗಳು ಮಾಹಿತಿ ಮಾರ್ಗದರ್ಶನ ನೀಡುತ್ತಿವೆ.

ಮನೆಮನೆಗಳ ಕದ ತೆರೆದು ಒಳಬಂದಿರುವ ಕ್ರಿಸ್ಮಸ್ ಗೆ ಇವು ಎಂದಿನ ಹಬ್ಬದ ಮನೆಗಳಲ್ಲ ಎಂದು ಅರಿವಾಗುವುದು ಅಷ್ಟೇನೂ ಹಳೆಯದಲ್ಲದ, ಈ ಸಲಕ್ಕೇ ಮೀಸಲಾದ ನವನವೀನ ಅನುಭವ.

ಈಗಾಗಲೇ ಹೆಚ್ಚಾಗಿರುವ ಸೋಂಕು ವಿಪರೀತವಾಗಿ ಹಬ್ಬಲು ಹಬ್ಬದ ಸಮಯದ ಮಿಲನಗಳು ಕಾರಣ ಆಗಬಹುದು, ಮತ್ತೆ ಆಗ ಆಸ್ಪತ್ರೆಗಳು ಹೆಚ್ಚು ಹೆಚ್ಚು ಸೋಂಕಿತರನ್ನು ಸೇರಿಸಿಕೊಳ್ಳಬೇಕಾದ ಪರಿಸ್ಥಿತಿ ಒತ್ತಡ ಎದುರಿಸಬೇಕಾಗುತ್ತವೆ ಎನ್ನುವ ಕಾರಣಕ್ಕೆ ಸರಕಾರ ಕಟು ನಿಲುವನ್ನು ತಳೆದಿದ್ದರೂ ಯಾವುದೇ ಬಂಧನವನ್ನು ಇಷ್ಟಪಡದವರು, ಬಂಧನವೋ ಬಿಡುಗಡೆಯೋ ತಮಗೆ ಸಾಕಷ್ಟು ಪೂರ್ವ ಸೂಚನೆ ನೀಡಬೇಕು ಎಂದು ಬಯಸುವವರು, ಹಬ್ಬವನ್ನು ಹಿಂದಿನ ವರ್ಷಗಳಂತೆ ಆಚರಿಸಲು ಹಾತೊರೆಯುವವರು ತೀವ್ರ ಅಸಮಾಧಾನದಲ್ಲಿಯೇ ನಿಯಮಾವಳಿಗಳನ್ನು ಸ್ವೀಕರಿಸಿದ್ದಾರೆ. ಹೊಸ ಬಗೆಯ ಕ್ರಿಸ್ಮಸ್ ಆಚರಣೆಗೆ ಒತ್ತಾಯದಲ್ಲಿ ಒಗ್ಗಿಕೊಂಡಿದ್ದಾರೆ.

ಬಹುತೇಕ ಇಂಗ್ಲೆಂಡ್ ನಲ್ಲಿ ಇವತ್ತೊಂದು ದಿನ, ಹೆಚ್ಚು ಎಂದರೆ ಮೂರು ಕುಟುಂಬಗಳು ಅಥವಾ ಮೂರು ಭಿನ್ನ ಮನೆಗಳಲ್ಲಿ ವಾಸಿಸುವವರು ಒಂದೆಡೆ ಕೂಡಬಹುದು ಕ್ರಿಸ್ಮಸ್ ಆಚರಿಸಬಹುದು. ಈ ವರ್ಷದ ಹಬ್ಬದ ಕನವರಿಕೆ ಕಾಯುವಿಕೆಗಳಿಗೆ ಉದ್ವೇಗವನ್ನೂ ಉನ್ಮಾದವನ್ನೂತೊಡಿಸಿರುವ ಈ ದೀರ್ಘ ಬಂಧನ ಮತ್ತದರ ನಡುವಿನ ಒಂದು ದಿನದ ತಾತ್ಕಾಲಿಕ ಬಿಡುಗಡೆ ಇದೀಗ ಹಬ್ಬವನ್ನು ಆಚರಿಸುತ್ತಿರುವವರಿಗೆ ಕ್ರಿಸ್ಮಸ್ ನ ಇರವನ್ನು ಕ್ಷಣಗಳಲ್ಲಿ ಎಣಿಸುವಂತೆ ಮಾಡಿದೆ. ಒಂದು ದಿನದ ಮಟ್ಟಿಗೆ ಸಿಂಹಾಸನವನ್ನೋ ಐಶ್ವರ್ಯವನ್ನೋ ಪಡೆದವರ ಕತೆಗಳನ್ನು ನೆನಪಿಸುತ್ತಿವೆ.

ದೃಶ್ಯದಿಂದ ದೃಶ್ಯಕ್ಕೆ ಅನಿರೀಕ್ಷಿತ ತಿರುವನ್ನು ಪಡೆಯುವ ಗಂಭೀರ ಸಿನೆಮಾದ ಮಧ್ಯಂತರದ ಕಿರುವಿರಾಮ ಕಳೆಯುವಂತೆ ಕ್ರಿಸ್ಮಸ್ ನ ಇಪ್ಪತ್ನಾಲ್ಕು ತಾಸುಗಳು ಇದೀಗ ಟಿಕ್ ಟಿಕ್ ಎನ್ನುತ್ತ ಸರಿದು ಹೋಗುತ್ತಿವೆ. ನಿಯಮ ಲೆಕ್ಕಾಚಾರದಂತೆ ಒಟ್ಟಾಗಿರುವ ಅತಿಥಿಗಳು ಒಂದು ಮನೆಯಲ್ಲಿ ಸೇರುವುದು ಅವರ ಚಡಪಡಿಕೆ ಮತ್ತೆ ಅವರು ಮರುದಿನಕ್ಕೆ ನಿರ್ಗಮಿಸಲೇಬೇಕಾಗಿರುವ ಕಾರಣದ ಅವಸರ ಎಲ್ಲವೂ ಸೇರಿ ಕ್ರಿಸ್ಮಸ್ ನ ಉತ್ಸಾಹವನ್ನು ತಗ್ಗಿಸಿರಬಹುದು ಅಥವಾ ನಿರಾಶೆಯನ್ನೂ ತಂದಿರಬಹುದು. ಮತ್ತೆ ಈ ಎಲ್ಲ ಅನಿರೀಕ್ಷಿತ ಚಿತ್ರಗಳ ಜೋಡಣೆಯ ನಡುವೆ ಈ ಸಲದ ಹಬ್ಬದಲ್ಲಿ ಕಳೆದ ವರ್ಷ ಹಾಜರಿ ಹಾಕಿದವರೆಲ್ಲರೂ ಪಾಲ್ಗೊಳ್ಳದಿರುವುದು ಕ್ರಿಸ್ಮಸ್ ನ ಆಶಾಭಂಗವನ್ನು ಆಘಾತವಾಗಿಯೂ ಬದಲಿಸಿರಬಹುದು.

ಹಿಂದಿನ ಕ್ರಿಸ್ಮಸ್ ನಲ್ಲಿ ಭಾಗವಹಿಸಿದ್ದ ಸುಮಾರು ಎಂಭತ್ತು ಸಾವಿರ ಮಂದಿ ಈ ಸಲ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಯು.ಕೆ. ಯ ಕೋವಿಡ್ ಡೈರಿಯೊಳಗಿನ ಕಠೋರ ಕರಾಳ ನಿಷ್ಕಾರುಣ ಸತ್ಯ. ಹುಟ್ಟು ಸಾವುಗಳ ಲೆಕ್ಕ ಇಡುವುದೇ ಕರ್ತವ್ಯವಾಗಿರುವ ಸಂಬಂಧಿತ ಇಲಾಖೆ ಕೋವಿಡ್ ಕಾರಣಕ್ಕೆ ಜಾರಿ ಮಾಡಿರುವ ಮರಣ ಪ್ರಮಾಣ ಪತ್ರಗಳ ಸಂಖ್ಯೆ ಇಂತಿಷ್ಟು ದಶಸಾವಿರ ಎಂದು ಮೊನ್ನೆಮೊನ್ನೆ ದೃಢೀಕರಿಸಿತ್ತು. ಮತ್ತೆ ಇಂತಹ ಗಣತಿಯ ಭಾಗವಾದ ಮರಣ ಪತ್ರಗಳಲ್ಲಿ ಹೆಸರು ನಮೂದಿಸಿಕೊಂಡವರೆಲ್ಲರೂ ಕೊರೊನ ಕಾರಣಕ್ಕೇ ಇಲ್ಲವಾದವರು, ಇನ್ನೂ ಇಲ್ಲೇ ವ್ಯಾಪಕವಾಗಿ ಹಬ್ಬಿ ಹಾಯಾಗಿ ಹರಿದಾಡಿ ಹಾರಾಡಿಕೊಂಡಿರುವ ಅಸಾಧಾರಣ ವಿನಾಶಶಕ್ತಿಯ ಕ್ರಿಮಿ ಜಂತುವಿನ ಹಾವಳಿಯೊಂದಿಲ್ಲದಿದ್ದಿದ್ದರೆ ಬಹುಷಃ ಇವತ್ತಿನದನ್ನೂ ಸೇರಿಸಿ ಮುಂದಿನ ಇನ್ನೂ ಕೆಲವು ಹಲವು ಕ್ರಿಸ್ಮಸ್ ಗಳನ್ನು ಉಲ್ಲಾಸದಲ್ಲಿ ಎದುರುಗೊಳ್ಳುತ್ತಿದ್ದವರು.

ಒಂದು ಟೇಬಲ್ ನ ಸುತ್ತ ಕುಳಿತು ಕುಟುಂಬವೆಲ್ಲ ಸುಖಭೋಜನ ಹರಟೆ ನಗೆ ಮೋಜಿನಲ್ಲಿ ತೇಲಿ ತಣಿಯಬೇಕಾದ ಇಂದಿನ ಆಪ್ತದಿನದಲ್ಲಿ, ವಾರಗಟ್ಟಲೆ ತಿಂಗಳುಗಟ್ಟಲೆ ಮೊದಲಿನಿಂದಲೇ ಯಾರಿಗೆ ಯಾವ ಉಡುಗೊರೆ ಎನ್ನುವುದನ್ನು ಯೋಜಿಸಿ ಚರ್ಚಿಸಿ ಖರೀದಿಸಿ ಮತ್ತೆ ಇಂದು ಒಬ್ಬರಿನ್ನೊಬ್ಬರಿಗೆ ಕೊಟ್ಟು ಬದಲಿಸಿಕೊಳ್ಳಬೇಕಾದ ರಸಘಳಿಗೆಯಲ್ಲಿ, ಇಲ್ಲಿನ ಹಲವು ಮನೆಗಳಲ್ಲಿ ಕಳೆದ ವರ್ಷವೂ ಬಳಕೆಯಾಗಿದ್ದ ಅದೇ ಊಟದ ಟೇಬಲಿನ ಸುತ್ತ ಆಂಗ್ಲ ಶಿಸ್ತು ಸಂಪ್ರದಾಯಗಳ ಬಿಗಿಮುಖ ಹೊತ್ತು ಅಣಿಯಾಗಬೇಕಿದ್ದ ಒಂದೊಂದು ಖಾಲಿ ಕುರ್ಚಿಯಿದೆ ಅಥವಾ ಕುರ್ಚಿ ಇಟ್ಟಿರಬೇಕಾದಲ್ಲಿ ಖಾಲಿ ಜಾಗ ಇದೆ. ಮನೆಯಲ್ಲಿ ಇದ್ದವರು, ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿದ್ದವರು, ವೈದ್ಯರು, ಶುಶ್ರೂಷೆ ಮಾಡುವವರು, ಚಾಲಕರು, ಸೇವಕರು, ಉದ್ಯಮಿಗಳು, ನಿರುದ್ಯೋಗಿಗಳು, ಆರೋಗ್ಯವಂತರು ದುರ್ಬಲ ದೇಹಿಗಳು ಹೀಗೆ ಎಲ್ಲ ಬಗೆಯ ಎಲ್ಲ ತರಹದ ಸಾಮಾಜಿಕ ಸ್ಥರ ಬದುಕಿನ ಮಗ್ಗುಲುಗಳಲ್ಲಿ ಇದ್ದ ಸಹಸ್ರ ಸಹಸ್ರ ಜನರು ಬ್ರಿಟನ್ನಿನ ಮೂಲೆಮೂಲೆಗಳಿಂದ ಕೋವಿಡ್ ಕಾರಣಕ್ಕೆ ಇನ್ನಿಲ್ಲವಾಗಿದ್ದರೆ. ಇವತ್ತು ಅಂತಹವರೆಲ್ಲರ ನೆನಪು ಆಯಾ ಮನೆಗಳವರಿಗೆ ಬಂಧುಗಳಿಗೆ ಮಿತ್ರರಿಗೆ ಕಾಡಬಹುದು ಮತ್ತೆ ಅಂತಹಲ್ಲೆಲ್ಲ ಕ್ರಿಸ್ಮಸ್ ಹಬ್ಬವೂ ವಿಷಾದದಲ್ಲಿ ಮುಳುಗಿರಬಹುದು.

ಇನ್ನು ಈ ಕಾಲದ ಕಹಿ ಅನುಭವಗಳನ್ನು ದೈನಿಕದ ಸವಾಲುಗಳನ್ನು ಕೆಲ ಹೊತ್ತಿದಾಗರೂ ಮರೆತು ಖುಷಿಯಲ್ಲಿ ಇರುವವರ ಜೊತೆ ಕ್ರಿಸ್ಮಸ್ ಕೂಡ ತನ್ನ ಹತಾಶೆಯನ್ನು ಸರಿಸಿ ಉತ್ಸಾಹದಲ್ಲಿ ಕಳೆಯುತ್ತಿರಬಹುದು. ಮತ್ತೆ ಕೆಲವು ವಸತಿಗಳಲ್ಲಿ ಕೋವಿಡ್ ಕಾಲದ ಯಾವುದೇ ಬಾಧೆಗಳೂ ತಟ್ಟದೇ ಹಿಂದಿನ ವರ್ಷಗಳಂತಹದೇ ಸಂಭ್ರಮದ ವಾತಾವರಣ ಇರುವಾಗ ಎಲ್ಲ ಮನೆಗಳ ಸಮಗ್ರ ಒಳನೋಟವೂ ಇರುವ ಕ್ರಿಸ್ಮಸ್ ಮುಜಗರದಲ್ಲಿ ತನ್ನ ದಿನವನ್ನು ಮುಗಿಸುತ್ತಿರಬಹುದು.

ಅನಿರೀಕ್ಷಿತ ಖಾಲಿತನ, ಕಟ್ಟುನಿಟ್ಟಿನ, ಸಮಯಮಿತಿ, ನಿಯಮ ನಿಬಂಧನೆಗಳ ಭಾರ, ಆತುರ ಉದ್ವೇಗಗಳಲ್ಲಿ ಇವತ್ತನ್ನು ಹೇಗೋ ಕಳೆದು ಹೊರಡುವ ಸಿದ್ಧತೆಯಲ್ಲಿರಬಹುದು. ಮತ್ತೆ ಮುಂದಿನ ಬಾರಿ ತಾನು ಮರಳುವಾಗಲಾದರೂ, ಈ ಸಲದ ತೀಕ್ಷ್ಣ ನೆನಪುಗಳು ಮಾಸಿ, ಪ್ರಕ್ಷುಬ್ಧತೆಗಳು ತಿಳಿಯಾಗಿ, ಬಿಗಿಬಂಧನಗಳು ಇಲ್ಲದಾಗಿ ಎಂದಿನಂತಹ ಹಿಂದಿನಂತಹ ನಿರೀಕ್ಷಿತ ದಿನ ಇಂದಿನದಾಗಿರಲಿ ಎಂದೂ ಹಾರೈಸುತ್ತಿರಬಹುದು; ಪ್ರತೀಕ್ಷೆಯಲ್ಲಿರಬಹುದು.