ವೀಣಾ ತರುಣಿಯಾಗಿದ್ದಾಗ

“ಬಹಳ ಜನ ಕೇಳಿದರು – ನಿಮಗೆ ಎಲ್ಲಾ ಗಂಡಸರ ಮೇಲೆ ಇಷ್ಟೇಕೆ ಸಿಟ್ಟು ದ್ವೇಷ? ನಾನಂದೆ – ಇಲ್ಲ, ಎಲ್ಲಾ ಗಂಡಸರ ಮೇಲೆ ದ್ವೇಷವಿಲ್ಲ, ಹೆಣ್ಣು ಮಕ್ಕಳ ಶೋಷಣೆ ಮಾಡುವಂಥ ಗಂಡಸರನ್ನು ಮಾತ್ರ ಟೀಕಿಸುತ್ತೇನೆ. ಕೆಲವರು ಕೇಳಿಯೂ ಕೇಳಿದರು – ಇದೆಲ್ಲಾ ನಿಮ್ಮದೇ ಜೀವನದ ಕತೆಯಂತೆ, ಹೌದೆ? ನಾನು ನಕ್ಕು ಉತ್ತರಿಸಿದ್ದೆ – ಶೇಕ್ಸ್‌ಪಿಯರ್ ಬರೆದ ಮೂವತ್ತಾರು ನಾಟಕಗಳಲ್ಲಿ ಎಂತೆಂತಹವೋ ಘಟನೆಗಳು ಎಷ್ಟು ನೈಜವಾಗಿ ಚಿತ್ರಿತವಾಗಿವೆ, ಅಂದಮಾತ್ರಕ್ಕೆ ಅವೆಲ್ಲಾ ಆತನ ಜೀವನದಲ್ಲಿ ನಡೆದಿವೆ ಅನ್ನಲಿಕ್ಕಾಗುತ್ತದೆಯೇ?” ಲೇಖಕಿ ವೀಣಾ ಶಾಂತೇಶ್ವರ ಬರೆದ ಆತ್ಮಕಥನದ ತುಣುಕುಗಳು..

 

ಲವತ್ತೆರಡು ವರ್ಷಗಳ ಹಿಂದೆ, ೧೯೭೫ರ ಅಕ್ಟೋಬರ್ – ನವೆಂಬರ್ ನಡುವೆ, ಹಲವಾರು ಕಾರಣಗಳಿಂದ ಮನಸ್ಸಿಗೆ ಬಹಳ ಬೇಸರವಾಗಿ ಯಾರೊಂದಿಗೂ ಏನೂ ಹೇಳಿಕೊಳ್ಳಲೂ ಆಗದ ಪರಿಸ್ಥಿತಿಯಲ್ಲಿ, ಮನಸ್ಸಿನ ಶಾಂತಿಯನ್ನೂ ಹಾಗೂ ಸಮಸ್ಯೆಗೆ ಪರಿಹಾರವನ್ನು ಅರಸುತ್ತಾ ನಾನು ಮಂತ್ರಾಲಯಕ್ಕೆ ಹೋಗಿ ಕೆಲದಿನ ಇದ್ದೆ. ಕಾಲೇಜಿಗೆ ರಜವಿತ್ತು. ಜೊತೆಗೆ ವನಜಾ ಅಂತ ಕೆಲಸದ ಹುಡುಗಿಯೊಬ್ಬಳಿದ್ದಳು. ಏನು, ನವ್ಯಸಾಹಿತಿಗಳು ಮಂತ್ರಾಲಯದ ರಾಯರ ಸೇವೆಗೆ ಹೋಗುತ್ತಿದ್ದೀರಲ್ಲ, ಇದೆಂತಹ ಕಾಂಟ್ರಡಿಕ್ಷನ್ ಅಂತ ಜೊತೆಯವರು ಕಟಕಿಯಾಡಿದ್ದರು. ಹೌದಪ್ಪಾ, ನೀವು ಕುಡಿಯುತ್ತೀರಿ, ಏನೆಲ್ಲಾ ತಿನ್ನುತ್ತೀರಿ, ಇಸ್ಪೀಟಾಡುತ್ತೀರಿ, ಅದ್ಯಾವುದೂ ತಪ್ಪಲ್ಲ, ನಾನು ಮಂತ್ರಾಲಯಕ್ಕೆ ಹೋದರೆ ದೊಡ್ಡ ಅಪರಾಧವೆಂಬಂತೆ ಮಾತಾಡುತ್ತೀರಲ್ಲ, ಸರಿಯೇ – ಅಂತ ಕೇಳಿದ್ದೆ. ಆದರೆ ಅಲ್ಲಿ ಹೋದ ನಂತರವೂ ಸಮಸ್ಯೆಗೆ ಪರಿಹಾರವಾಗಲೀ ಮನಸ್ಸಿಗೆ ಶಾಂತಿಯಾಗಲೀ ದೊರಕಿರಲಿಲ್ಲ. ನಾನಿಳಿದುಕೊಂಡಿದ್ದ ಕಾಟೇಜಿನ ಪಕ್ಕದ ಕಾಟೇಜಿನಲ್ಲಿ ಬೆಂಗಳೂರಿನಿಂದ ಬಂದಿದ್ದ ಒಂದು ದೊಡ್ಡ ಕುಟುಂಬ ಉಳಿದುಕೊಂಡಿತ್ತು. ಸದಾ ಮಾತು, ನಗೆ, ಕಲರವ. ಅವರಲ್ಲೊಬ್ಬಾತ ಲಕ್ಷಣವಾಗಿದ್ದ ಯುವಕ. ಆತನ ಮೂರು ವರ್ಷದ ಮಗು ಸದಾ ನನ್ನ ಕಾಟೇಜಿಗೆ ಬಂದು ಆಟವಾಡುತ್ತಿತ್ತು. ಹೀಗಾಗಿ ಹೋಗುತ್ತ ಬರುತ್ತ ಆ ಯುವಕ ನಕ್ಕು ಮಾತಾಡಿ ಹೋಗುತ್ತಿದ್ದ. ಯಾರೋ ಏನೋ, ಆದರೂ ಪರವೂರಿನಲ್ಲಿದ್ದಾಗ ಆತನ ಆ ಸದ್ವರ್ತನೆ ನಾನು ಒಂಟಿಯೆಂಬ ಬೇಸರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತಿತ್ತು.

ನಾನೊಂದು ವಿಚಿತ್ರವಾದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ನನ್ನ ಅಂತರಂಗದ ಒಡನಾಡಿಯಾಗಿದ್ದ ತಾಯಿ ತೀರಿಹೋಗಿ ಅದಾಗಲೇ ನಾಲ್ಕು ವರ್ಷಗಳು ಕಳೆದಿದ್ದವು. ಈ ಅವಧಿಯಲ್ಲಿ ಅಂತಹದೇ ಪ್ರೀತಿಯನ್ನು ಕಾಳಜಿಯನ್ನು ತೋರಿದ್ದ ಶಾಂತೇಶ್ವರ ನನಗೆ ಹತ್ತಿರವಾಗಿದ್ದರು. ಆದರೆ ಕಟ್ಟಾ ವೈದಿಕ ಸಂಪ್ರದಾಯದ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿ ಜಾತಿ-ಕುಲ ಬಿಟ್ಟು ಹೀಗೆ ಅಡ್ಡದಾರಿ ಹಿಡಿಯುವುದೇ? ನನ್ನನ್ನು ತುಂಬ ಪ್ರೀತಿಸುವ ತಂದೆ, ತಮ್ಮಂದಿರು, ತಂಗಿಯರು, ಅವರ ಭವಿಷ್ಯ – ಈ ಎಲ್ಲಾ ಇತ್ತಲ್ಲ. ಹೀಗಾಗಿ ನಮ್ಮ ಸಂಬಂಧ ಗುಟ್ಟಾಗಿಯೇ ಮುಂದುವರಿದಿತ್ತು. ಆದರೀಗ ನಾನು ಮೂರು ತಿಂಗಳ ಬಸುರಿಯಾಗಿದ್ದೆ. ಯಾವುದೇ ಕಾರಣಕ್ಕೂ ನಾನು ಅಬಾರ್ಶನ್ ಮಾಡಿಸಿಕೊಳ್ಳಲು ತಯಾರಿರಲಿಲ್ಲ. ಏನೇ ಆಗಲಿ, ನಾನು ಈ (ನನ್ನ ಪಾಲಿಗೆ) ಅಮೂಲ್ಯವಾದ ಮಗುವಿಗೆ ಜನ್ಮ ನೀಡುವವಳೇ ಅಂತ ನಿರ್ಧರಿಸಿದ್ದೆ. ಇನ್ನು ಎಲ್ಲಿ, ಹೇಗೆ, ಯಾವಾಗ ಅಂತ ಮದುವೆಯ ಬಗ್ಗೆ ಹೇಳುವುದು, ಹೇಳಿದರೆ ಮುಂದೇನಾದೀತು, ಇದೇ ಚಿಂತೆಯಾಗಿತ್ತು.

ಅಂಥದರಲ್ಲಿ ಮಂತ್ರಾಲಯದಲ್ಲಿ ಒಂದು ಮುಂಜಾನೆ ಅಲ್ಲಿದ್ದ ಸಣ್ಣ ಪುಸ್ತಕದ ಅಂಗಡಿಯ ಮುಂದೆ ನಿಂತು ಪುಸ್ತಕಗಳನ್ನು ನೋಡುತ್ತಿದ್ದಾಗ ಕಣ್ಣಿಗೆ ಬಿತ್ತು – ದೀಪಾವಳಿ ಪ್ರಜಾವಾಣಿ, ೧೯೭೫. ಹಲವು ದಿನಗಳಿಂದ ಸುತ್ತಲೆಲ್ಲ ಬೇರೆ ಭಾಷೆಗಳ ಅಕ್ಷರಗಳನ್ನೇ ನೋಡಿ ನೋಡಿ ಕನ್ನಡವನ್ನು ಕಳಕೊಂಡಂತಾಗಿದ್ದ ನನಗೆ ತುಂಬ ಖುಶಿಯಾಗಿ ಒಮ್ಮೆಲೇ ಆ ವಿಶೇಷಾಂಕವನ್ನು ಕೊಂಡುಕೊಂಡೆ. ವೇಗವಾಗಿ ನಡೆದುಕೊಂಡು ನನ್ನ ಕಾಟೇಜಿಗೆ ಬಂದು ಹೊರಬಾಗಿಲು ಮೆಟ್ಟಿಲ ಮೇಲೆ ಕೂತು ಅದನ್ನು ಬಿಡಿಸಿ ನೋಡಿದೆ – ನನ್ನ ’ಗಂಡಸರು’ – ಕೃತಿಗೆ ದೀಪಾವಳಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತ್ತು. ತೀರ್ಪುಗಾರರು ತುಂಬ ಹೊಗಳಿ ಬರೆದಿದ್ದರು.

(ಫೋಟೋ:ರಶೀದ್)

“ಕೆಲವರು ಕೇಳಿಯೂ ಕೇಳಿದರು – ಇದೆಲ್ಲಾ ನಿಮ್ಮದೇ ಜೀವನದ ಕತೆಯಂತೆ, ಹೌದೆ? ನಾನು ನಕ್ಕು ಉತ್ತರಿಸಿದ್ದೆ – ಶೇಕ್ಸ್‌ಪಿಯರ್ ಬರೆದ ಮೂವತ್ತಾರು ನಾಟಕಗಳಲ್ಲಿ ಎಂತೆಂತಹವೋ ಘಟನೆಗಳು ಎಷ್ಟು ನೈಜವಾಗಿ ಚಿತ್ರಿತವಾಗಿವೆ, ಅಂದಮಾತ್ರಕ್ಕೆ ಅವೆಲ್ಲಾ ಆತನ ಜೀವನದಲ್ಲಿ ನಡೆದಿವೆ ಅನ್ನಲಿಕ್ಕಾಗುತ್ತದೆಯೇ?”

ನಿಜವಾಗಿ ಹೇಳಬೇಕೆಂದರೆ ಆ ದಿನ ಆ ಕ್ಷಣ ನನಗಾದ ಥ್ರಿಲ್, ಆ ಖುಶಿ ಮತ್ತೆಂದೂ ಮುಂದೆಂದೂ – ನನ್ನ ಬರವಣಿಗೆ ಸಂಬಂಧಿಸಿದಂತೆ – ಆಗಲಿಲ್ಲ. ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗಲೂ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಬಂದಾಗಲೂ ಆಗಲಿಲ್ಲ. ಬಹುಶಃ ವಯಸ್ಸು ಒಂದು ಕಾರಣವಿರಬಹುದು. ಇನ್ನೊಂದು ಕಾರಣ – ನನ್ನ ಮನಸ್ಸಿನ ಆಳದೊಳಗೆ ಬಹುಕಾಲ ಹುದುಗಿದ್ದ ವಸ್ತುವಿಗೆ ಸೂಕ್ತವಾದ ಕಲಾತ್ಮಕ ಅಭಿವ್ಯಕ್ತಿ ನೀಡಲು ಸಾಧ್ಯವಾಗಿದ್ದು ಇರಬಹುದು. ಸೂಕ್ಷ್ಮ ಸಂವೇದನಾಶೀಲೆಯಾಗಿದ್ದ ಮೃದು ಮನಸ್ಸಿನ ಸುಮಧುರ ಭಾವನೆಗಳ ಹೆಣ್ಣೊಬ್ಬಳು ಅದು ಹೇಗೆ ಗಂಡಸಿನ ನಾಜೂಕಾದ ಶೋಷಣೆಗೆ ಬಲಿಯಾಗಿ ಸಂಪೂರ್ಣ ಸಂವೇದನಾರಹಿತಳಾಗಿ ಮಾರ್ಪಡುತ್ತಾಳೆಂಬುದು ಆ ಕಾದಂಬರಿಯ ವಸ್ತು. ನನ್ನ ಸುತ್ತಲೂ ನಾನು ದಿನವೂ ಕಾಣುತ್ತಿದ್ದ ಹೆಣ್ಣುಮಕ್ಕಳ ಜೀವನದ್ದೇ ಕತೆ. ನಮ್ಮ ಮನೆಯ ಅಕ್ಕಪಕ್ಕದಲ್ಲಿ, ಕಾಲೇಜಿನಲ್ಲಿ, ಜೀವನದ ಬೇರೆ ಬೇರೆ ಪ್ರಸಂಗಗಳಲ್ಲಿ, ನಾನು ಅತಿ ಹತ್ತಿರದಿಂದ ನೋಡಿದ್ದ ಛದ್ಮವೇಷಧಾರೀ ಗೋಮುಖವ್ಯಾಘ್ರರಾಗಿದ್ದ ಗಂಡಸರದ್ದೇ ಕತೆ. ಎರಡು ತಿಂಗಳ ಹಿಂದೆ ಕಾದಂಬರಿ ಸ್ಪರ್ಧೆಯ ಬಗ್ಗೆ ಪ್ರಜಾವಾಣಿಯಲ್ಲಿ ಓದಿದ್ದೆ. ಕೂಡಲೇ ಬರೆಯಲು ಪ್ರಾರಂಭಿಸಿದ್ದೆ. ಸುಮಾರು ಒಂದು ತಿಂಗಳ ಅವಧಿಯಲ್ಲಿ ಬರೆದು ಮುಗಿಸಿದ್ದೆ. ಕಳಿಸಿಯಾದ ನಂತರ ಮರೆತೂಬಿಟ್ಟಿದ್ದೆ. ಈಗ ಒಮ್ಮೆಲೇ ಹೀಗೆ ಅದು ಪ್ರತಿಷ್ಠಿತವಾದ ಪ್ರಶಸ್ತಿಯೊಂದನ್ನು ಹೊತ್ತು ತಂದಿತ್ತು. ನನಗೆ ಖುಶಿಯಾಗಿತ್ತು. ಎಲ್ಲ ಚಿಂತೆಗಳೂ ಒಮ್ಮೆಲೇ ದೂರವಾಗಿದ್ದವು. ಮುಂದೇನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿತ್ತು. ಎಲ್ಲಾ ಆತಂಕಗಳು ದೂರವಾಗಿ ಆತ್ಮವಿಶ್ವಾಸ ಬಂದಿತ್ತು. ತಕ್ಷಣಕ್ಕೆ ಈ ಸಂತೋಷವನ್ನು ಯಾರಲ್ಲಿ ಹಂಚಿಕೊಳ್ಳುವುದು? ಯಾರಿಗಾದರೂ ಸರಿ. ಇದನ್ನು ಹೇಳಬೇಕು. ‘ವನಜಾ, ಇಲ್ಲಿ ಬಾ, ಇದು ನೋಡು, ನನ್ನ ಕಾದಂಬರಿಗೆ ಮೊದಲ ಬಹುಮಾನ ಬಂದಿದೆ…’ ವನಜಾ ಕಣ್ಣರಳಿಸಿ ‘ಹೌದಲ್ರಿ ಅಕ್ಕಾವ್ರೆ’ ಅಂದಳು. ನಾನಂದೆ – ತಗೋ ಇದನ್ನ, ಅಲ್ಲಿ ಪಕ್ಕದ ಮನೆಯಲ್ಲಿ ಮಗು ಎತ್ತಿಕೊಂಡು ಕೂತಿದ್ದಾರಲ್ಲ, ಅವರಿಗೆ ತೋರಿಸಿ ಹೇಳಿ ಬಾ ಅಂದೆ. ಆಕೆ ಓಡಿ ಹೋದಳು. ತಿರುಗಿ ಅವಳೊಂದಿಗೆ ಆ ಮನೆಯ ನಾಲ್ಕಾರು ಜನ ಬಂದರು. ನೀವು ಇಷ್ಟು ಒಳ್ಳೇ ಸಾಹಿತಿಗಳೇ? ನಮಗೆ ಗೊತ್ತೇ ಆಗಲಿಲ್ಲವಲ್ಲ, ಕಂಗ್ರಾಜುಲೇಶನ್ಸ್ ಅಂದರು. ಇನ್ನೂ ಖುಶಿಯಾಯಿತು.

‘ಗಂಡಸರು’ ನನಗೆ ಬರಿ ಖುಶಿಯನ್ನಷ್ಟೇ ಅಲ್ಲ, ಎಲ್ಲ ಕಷ್ಟಗಳನ್ನು ಎದುರಿಸುವ ಧೈರ್ಯವನ್ನೂ, ಸವಾಲುಗಳನ್ನು ಸ್ವೀಕರಿಸಿ ಗೆಲ್ಲುವ ಛಲವನ್ನೂ ತಂದುಕೊಟ್ಟಿತ್ತು. ಮುಂದೆರಡು ದಿನಗಳಿಗೆ ನನ್ನನ್ನು ತಿರುಗಿ ಕರೆದೊಯ್ಯಲೆಂದು ಬಂದ ನನ್ನ ಗಂಡನಿಗೆ ಹೇಳಿದೆ – ನಾವು ಯಾರಿಗೂ ಅಂಜಬೇಕಾಗಿಲ್ಲ. ಇದ್ದುದನ್ನು ಇದ್ದಂತೆಯೇ ಹೇಳೋಣ. ಏನು ಬಂದರೂ ಎದುರಿಸೋಣ. ಮತ್ತು ನಾವು ಹಾಗೇ ಮಾಡಿದೆವು ಸಹ.

ಮುಂದೆ ‘ಗಂಡಸರು’ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಗುರುತಿನವರು, ಹಿರಿಯರು, ಬಂಧುಬಳಗದವರು ಮಾತಾಡಿಕೊಂಡರು – ಛೆ, ಇದೆಂತಹ ಕಲೆ! ನಾಚಿಕೆಗೇಡು. ಒಬ್ಬ ಹೆಂಗಸರು ಡಜನ್‌ಗಟ್ಟಲೆ ಗಂಡಸರೊಂದಿಗೆ ಸಂಬಂಧ ಹೊಂದುವುದೆ? ನೈತಿಕತೆ ಅನ್ನುವುದು ಸತ್ತೇ ಹೋಯಿತೇ ಈ ಕಲಿಯುಗದಲ್ಲಿ? ಇಂಥದನ್ನು ಬರೆದಾಕೆಗಾದರೂ ಒಂದಿಷ್ಟು ನಾಚಿಕೆ ಬೇಡವೆ? ಎಂತಹ ದೊಡ್ಡಮನೆತನದ ಮಗಳು. ಇವಳೆಂತಹ ಸಾಹಿತಿಯಪ್ಪಾ. ಬೇರೆ ವಿಷಯವೇ ಸಿಗಲಿಲ್ಲವೇ ಈಕೆಗೆ? ಅಥವಾ ಇದೆಲ್ಲಾ ಆದದ್ದು ಈಕೆಯ ನಿಜಜೀವನದಲ್ಲೇ ಇದ್ದರೂ ಇದ್ದೀತು. ಯಾರಿಗೆ ಗೊತ್ತು? ಇಂಥ ಪುಸ್ತಕ ಓದಿದರೆ ನಮ್ಮ ಹೆಣ್ಣುಮಕ್ಕಳು ಹಾಳಾಗುತ್ತಾರಷ್ಟೇ….

(ಫೋಟೋ: ಕೆ.ಜಿ.ಸೋಮಶೇಖರ್)

 

“ಮುಂದೆ ‘ಗಂಡಸರು’ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಗುರುತಿನವರು, ಹಿರಿಯರು, ಬಂಧುಬಳಗದವರು ಮಾತಾಡಿಕೊಂಡರು – ಛೆ, ಇದೆಂತಹ ಕಲೆ! ನಾಚಿಕೆಗೇಡು. ಒಬ್ಬ ಹೆಂಗಸರು ಡಜನ್‌ಗಟ್ಟಲೆ ಗಂಡಸರೊಂದಿಗೆ ಸಂಬಂಧ ಹೊಂದುವುದೆ? ನೈತಿಕತೆ ಅನ್ನುವುದು ಸತ್ತೇ ಹೋಯಿತೇ ಈ ಕಲಿಯುಗದಲ್ಲಿ? ಇಂಥದನ್ನು ಬರೆದಾಕೆಗಾದರೂ ಒಂದಿಷ್ಟು ನಾಚಿಕೆ ಬೇಡವೆ? ಎಂತಹ ದೊಡ್ಡಮನೆತನದ ಮಗಳು. ಇವಳೆಂತಹ ಸಾಹಿತಿಯಪ್ಪಾ. ಬೇರೆ ವಿಷಯವೇ ಸಿಗಲಿಲ್ಲವೇ ಈಕೆಗೆ?”

ಕೆಲವರು ಕೇಳಿಯೂ ಕೇಳಿದರು – ಇದೆಲ್ಲಾ ನಿಮ್ಮದೇ ಜೀವನದ ಕತೆಯಂತೆ, ಹೌದೆ? ನಾನು ನಕ್ಕು ಉತ್ತರಿಸಿದ್ದೆ – ಶೇಕ್ಸ್‌ಪಿಯರ್ ಬರೆದ ಮೂವತ್ತಾರು ನಾಟಕಗಳಲ್ಲಿ ಎಂತೆಂತಹವೋ ಘಟನೆಗಳು ಎಷ್ಟು ನೈಜವಾಗಿ ಚಿತ್ರಿತವಾಗಿವೆ, ಅಂದಮಾತ್ರಕ್ಕೆ ಅವೆಲ್ಲಾ ಆತನ ಜೀವನದಲ್ಲಿ ನಡೆದಿವೆ ಅನ್ನಲಿಕ್ಕಾಗುತ್ತದೆಯೇ? ಬಹಳ ಜನ ಕೇಳಿದರು – ನಿಮಗೆ ಎಲ್ಲಾ ಗಂಡಸರ ಮೇಲೆ ಇಷ್ಟೇಕೆ ಸಿಟ್ಟು ದ್ವೇಷ? ನಾನಂದೆ – ಇಲ್ಲ, ಎಲ್ಲಾ ಗಂಡಸರ ಮೇಲೆ ದ್ವೇಷವಿಲ್ಲ, ಹೆಣ್ಣು ಮಕ್ಕಳ ಶೋಷಣೆ ಮಾಡುವಂಥ ಗಂಡಸರನ್ನು ಮಾತ್ರ ಟೀಕಿಸುತ್ತೇನೆ. ನನ್ನ ತಂದೆ – ತಮ್ಮಂದಿರು – ಗಂಡ – ಸ್ನೇಹಿತರು ಇವರನ್ನೆಲ್ಲಾ ಪ್ರೀತಿಸುತ್ತೇನೆ. ನಾನು ಪುರುಷದ್ವೇಷಿಯಲ್ಲ. ಆದರೂ ಎಷ್ಟು ತಪ್ಪು ತಿಳುವಳಿಕೆಗಳು, ಎಷ್ಟು ಅಪವಾದಗಳು, ಎಷ್ಟು ಟೀಕೆಗಳು..

ನಾನು ಕೇರ್ ಮಾಡಲಿಲ್ಲ. ಯಾಕೆಂದರೆ ಸಮಕಾಲೀನ ವಿಮರ್ಶಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಕನ್ನಡ ಮಹಿಳಾ ಸಾಹಿತ್ಯದಲ್ಲಿ ಹೊಸ ಮಾರ್ಗ ನಿರ್ಮಿಸಿದ ಕಾದಂಬರಿ – ಎಂಬ ಮೆಚ್ಚುಗೆ ದೊರೆತಿತ್ತು. ನಾನು ಆಗ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ – ಮಹಿಳಾ ಸಾಹಿತ್ಯ ಅಂತ ಪ್ರತ್ಯೇಕಿಸುವುದು ಬೇಡ. ಸಾಹಿತ್ಯ ಒಂದೇ. ಅಳತೆಗೋಲೂ ಒಂದೇ ಇರಲಿ. ನನ್ನ ಜೊತೆಯ ಬಹುಪಾಲು ಲೇಖಕರೂ ಈ ಅಭಿಪ್ರಾಯವನ್ನೇ ಹೊಂದಿದ್ದರು. ಆದರೆ ಹೆಚ್ಚಿನ ಸಂಖ್ಯೆಯ ಲೇಖಕಿಯರು ಮಾತ್ರ ಪ್ರತ್ಯೇಕತೆ ಬೇಕು ಅನ್ನುತ್ತಿದ್ದರು. ಈ ಭಿನ್ನಾಭಿಪ್ರಾಯ ಅನೇಕ ವರ್ಷಗಳವರೆಗೂ ಇದ್ದಿತು.

“ಆದರೆ ಹಾಗಂತ ನಾನು ಸಂತೃಪ್ತ ಲೇಖಕಿಯಲ್ಲ. ನಾನಿನ್ನೂ ನಿಜವಾದ ಅರ್ಥದಲ್ಲಿ ಶ್ರೇಷ್ಠವಾದ ಕೃತಿಯನ್ನು ರಚಿಸಬೇಕಾಗಿದೆ – ಅಂತ ನನಗೆ ಯಾವಾಗಲೂ ಅನ್ನಿಸುತ್ತ ಬಂದಿದೆ.”

‘ಗಂಡಸರು’ ಕಾದಂಬರಿಯಲ್ಲಿ ನಾನು ನನ್ನ ಅಂತಃಸತ್ವವನ್ನೆಲ್ಲಾ ಬರಿದುಗೊಳಿಸಿದ್ದೆನೆಂದು ಕಾಣುತ್ತದೆ, ಮುಂದೆ ಬಹುಕಾಲ ನನಗೆ ಏನೂ ಬರೆಯಲಾಗಲಿಲ್ಲ. ಹಾಗೆ ನಾನು ಯಾವಾಗಲೂ ವಲ್ಯೂಮಿನಸ್ ಲೇಖಕಿಯಲ್ಲ. ಬಹಳ ಸಮಯ ಯೋಜಿಸುವುದರಲ್ಲೇ ಕಳೆಯುತ್ತೇನೆ. ಇಮೋಶನ್ಸ್ ರಿಕಲೆಕ್ಟೆಡ್ ಇನ್ ಟ್ರಾಂಕವಿಲಿಟಿ ಅಂತ ವರ್ಡ್ಸ್‌ವರ್ಥ್ ಹೇಳುವ ಹಾಗೆ ನನ್ನದೂ ಅನುಭವ. ಈಗಲೂ ನನಗೆ ಬಹಳ ಬರೆಯಲಾಗುವುದಿಲ್ಲ. ಮುಂದಿನ ವರ್ಷಗಳಲ್ಲಿ ಕನ್ನಡದಲ್ಲಿ ಧೈರ್ಯಶಾಲೀ ಲೇಖಕಿಯರ ಪಡೆಯೇ ಹೊರಹೊಮ್ಮಿತು. ವಿಶೇಷವಾಗಿ ಕಾವ್ಯದಲ್ಲಿ ನಮ್ಮ ಲೇಖಕಿಯರು ತುಂಬ ಮುಕ್ತ ಅಭಿವ್ಯಕ್ತಿ ನೀಡಿದರು. ಮೊದಲಬಾರಿಗೆ ಎಲ್ಲ ಮೈಚಳಿ ಬಿಟ್ಟು ಮಾತಾಡಿದರು. ಅವರೆಲ್ಲ ನನ್ನ ಬಗ್ಗೆ ತುಂಬ ಅಭಿಮಾನ ಹೊಂದಿದ್ದರು. ಒಬ್ಬ ಲೇಖಕರಿಗೆ ಇದಕ್ಕೂ ಹೆಚ್ಚಿನ ಮಾನ್ಯತೆ ಇನ್ನೇನು ಬೇಕು? ಆದರೆ ಹಾಗಂತ ನಾನು ಸಂತೃಪ್ತ ಲೇಖಕಿಯಲ್ಲ. ನಾನಿನ್ನೂ ನಿಜವಾದ ಅರ್ಥದಲ್ಲಿ ಶ್ರೇಷ್ಠವಾದ ಕೃತಿಯನ್ನು ರಚಿಸಬೇಕಾಗಿದೆ – ಅಂತ ನನಗೆ ಯಾವಾಗಲೂ ಅನ್ನಿಸುತ್ತ ಬಂದಿದೆ.