ಇಡಿಯಾಗಿ ಕವಿತೆ ನಮ್ಮೊಳಗಿನ ಅರಿವಿನ ಅನುಪಸ್ಥಿತಿಯ ಕಾರಣವಾಗಿ ಮನುಕುಲಕ್ಕೆ ಮಾರಕವಾಗಿರುವ, ಸ್ವಯಂ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಪಂಥಗಳೆಂಬ ರುಗ್ಣಗಳಿಂದ ಬಾಧೆಗೊಳಗಾಗಿರುವ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತದೆ. ಇಡಿಯಾಗಿ ಕವಿತೆ ರೂಪಕಗಳ ಮೂಲಕವೇ ಓದುಗನೊಂದಿಗೆ ಮುಖಾಮುಖಿಯಾಗುತ್ತ, ನಾವೆಲ್ಲ ಕಂಡೂ ಕಾಣದಂತಿರುವ ಲೋಕದ ಅಸಹ್ಯಗಳನ್ನು ಕಾಣಿಸುತ್ತ ಹೋಗುತ್ತದೆ! ಹಾಗೆ ನೋಡಿದರೆ ಈ ಕವಿತೆಯಲ್ಲಿ ಬರುವ ‘ಫಕೀರ’ ಬೇರಾರೂ ಆಗಿರದೆ ಸಮಾಜವನ್ನು ನೈತಿಕತೆಯ ಪಾತಳಿಯ ಮೇಲೆ ಮುನ್ನಡೆಸಲು ಬೇಕಾಗಿರುವ ‘ಅರಿವು’ ಎಂಬ ಪ್ರಖರವಾದ ಬೆಳಕೇ ಆಗಿದೆ.
ದೇವು ಮಾಕೊಂಡ ಕವನ ಸಂಕಲನ ‘ಗಾಳಿಗೆ ತೊಟ್ಟಿಲು ಕಟ್ಟಿ’ ಪುಸ್ತಕದ ಕುರಿತು ಕಲ್ಲೇಶ್ ಕುಂಬಾರ್, ಹಾರೂಗೇರಿ ಬರಹ

‘ಗಾಳಿಗೆ ತೊಟ್ಟಿಲು ಕಟ್ಟಿ’- ಯುವಕವಿ ದೇವು ಮಾಕೊಂಡರ ಹೊಸ ಕವನಸಂಕಲನ. ಈ ಕವನಸಂಕಲನ ವಿಶಿಷ್ಟವೂ ಮತ್ತು ವಿಭಿನ್ನವೂ ಎನಿಸುವುದಕ್ಕೆ ಕಾರಣ ಇಲ್ಲಿನ ಕವಿತೆಗಳು ಓದುಗನನ್ನು ಗಾಢವಾಗಿ ಆವರಿಸಿಕೊಂಡು, ಬಿಡದೇ ಕಾಡುವ ಗುಣವನ್ನು ಹೊಂದಿವೆ. ಈ ನಿಟ್ಟಿನಲ್ಲಿ ಕವಿ ದೇವು ಮಾಕೊಂಡರನ್ನು ಅಭಿನಂದಿಸಬೇಕು. ಏಕೆಂದರೆ, ಕವಿಯಾಗಿ ಅವರು ತುಂಬಾ ತಾಳ್ಮೆಯಿಂದ ಕಟ್ಟಿಕೊಟ್ಟಿರುವ ಇಲ್ಲಿನ ಕವಿತೆಗಳು ಕವಿಯು ಕಂಡುಂಡ ಅನುಭವಗಳನ್ನು ವಿಭಿನ್ನ ಮತ್ತು ವಿಶಿಷ್ಟವಾದ ರೀತಿಯಲ್ಲಿ ಓದುಗನ ಎದೆಗೆ ದಾಟಿಸುತ್ತವೆ ಎಂದರೆ ಉತ್ಪ್ರೇಕ್ಷೆಯ ಮಾತಾಗಲಾರದು. ಅಷ್ಟಕ್ಕೂ ಈ ಕವನಸಂಕಲನದ ಶೀರ್ಷಿಕೆಯೂ ಸಹ ಅದೆಷ್ಟು ಆಪ್ಯಾಯಮಾನವಾಗಿದೆಯೆಂದರೆ ಸುಳಿದು ಸುತ್ತುವ ಗಾಳಿಗೇನೆ ತೊಟ್ಟಿಲು ಕಟ್ಟಬೇಕೆನ್ನುವ ಕನಸು ಕಾಣುವ ದೇವು ಮಾಕೊಂಡ ಅವರು ತಮ್ಮ ಅನುಭವಕ್ಕೆ ಬಂದ ಅನೇಕ ಸಂಗತಿಗಳನ್ನು ಅಂಥದ್ದೇ ತೊಟ್ಟಿಲಲ್ಲಿಟ್ಟು ತೂಗಿ ತೂಗಿ, ಆ ಸಂಗತಿಗಳನ್ನು ಪರಾಮರ್ಶಿಸಿ ನೋಡಿ, ಅವುಗಳಿಗೆ ಮುಖಾಮುಖಿಯಾಗುವಂಥ ಹೊಸದೊಂದು ಸಾಧ್ಯತೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಇಲ್ಲಿನ ಕವಿತೆಗಳಲ್ಲಿ ಮಾಡಿದ್ದಾರೆ ಎಂಬ ಮಾತನ್ನು ಪುಷ್ಟೀಕರಿಸುತ್ತದೆ!

(ದೇವು ಮಾಕೊಂಡ)

ಈ ಮಾತಿಗೆ ಪೂರಕವಾಗಿ ಈ ಸಂಕಲನದಲ್ಲಿನ ‘ನೀ ಬಿಟ್ಟು ಹೋದ ದಾರಿಗಳ ಮೇಲೆ’ ಎಂಬ ಮೊದಲ ಕವಿತೆ ಸಹಜವಾಗಿಯೇ ಗಮನ ಸೆಳೆಯುತ್ತದೆ. ಏಕೆಂದರೆ, ಇಡಿಯಾಗಿ ಕವಿತೆ ನಮ್ಮೊಳಗಿನ ಅರಿವಿನ ಅನುಪಸ್ಥಿತಿಯ ಕಾರಣವಾಗಿ ಮನುಕುಲಕ್ಕೆ ಮಾರಕವಾಗಿರುವ, ಸ್ವಯಂ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಪಂಥಗಳೆಂಬ ರುಗ್ಣಗಳಿಂದ ಬಾಧೆಗೊಳಗಾಗಿರುವ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತದೆ. ಇಡಿಯಾಗಿ ಕವಿತೆ ರೂಪಕಗಳ ಮೂಲಕವೇ ಓದುಗನೊಂದಿಗೆ ಮುಖಾಮುಖಿಯಾಗುತ್ತ, ನಾವೆಲ್ಲ ಕಂಡೂ ಕಾಣದಂತಿರುವ ಲೋಕದ ಅಸಹ್ಯಗಳನ್ನು ಕಾಣಿಸುತ್ತ ಹೋಗುತ್ತದೆ! ಹಾಗೆ ನೋಡಿದರೆ ಈ ಕವಿತೆಯಲ್ಲಿ ಬರುವ ‘ಫಕೀರ’ ಬೇರಾರೂ ಆಗಿರದೆ ಸಮಾಜವನ್ನು ನೈತಿಕತೆಯ ಪಾತಳಿಯ ಮೇಲೆ ಮುನ್ನಡೆಸಲು ಬೇಕಾಗಿರುವ ‘ಅರಿವು’ ಎಂಬ ಪ್ರಖರವಾದ ಬೆಳಕೇ ಆಗಿದೆ. ಮನುಷ್ಯ ಯಾವಾಗ ಅರಿವುಗೇಡಿಯಾಗುತ್ತಾನೋ ಆಗ ಬದುಕನ್ನು ಸಹ್ಯವಾಗಿಸುವ ಪ್ರೀತಿಗೆ ಬರ ಬೀಳುತ್ತದೆ. ಜೊತೆಗೆ ಅಹಮ್ಮಿಕೆ ಎಂಬ ವಿಷ ಸರ್ಪವನ್ನು ದಾಟಿಕೊಂಡು ಮುನ್ನಡೆಯಲಾಗದ ಸಂದಿಗ್ಧವೂ ಎದುರಾಗುತ್ತದೆ. ಆಗಲೇ, ಅರುಣೋದಯದ ಕನಸು ಕಾಣುವ ಹೊತ್ತಲ್ಲೇ ಕರಾಳ ಕತ್ತಲು ಆವರಿಸುವುದರ ಮೂಲಕ ಮನುಷ್ಯ ಬದುಕು ರೌರವ ನರಕವಾಗಿ ಬಿಡುತ್ತದೆ! ಕವಿತೆಯ ಈ ಸಾಲುಗಳನ್ನು ಗಮನಿಸಿ:

ಅಂಹಿಸೆ ಬೀಜ ಬಿತ್ತಲು ನೀನೊಮ್ಮೆ
ಬಂದರಿಲ್ಲಿ
ಮುಳ್ಳು ಕಂಟಿಗಳ ಮೇಲೆ ನಿನ್ನ
ನೋಡಬೇಕಾಗುತ್ತದೆ
ನೆತ್ತರು ಹರಿಸುವ ಗದ್ದೆಗೆ ಮುಖ ಮಾಡಿ

ಇಲ್ಲಿ, ಅಂಹಿಸೆಯನ್ನು ಅರಿವಿಗೆ ಸಮೀಕರಿಸಿ ನೋಡಿದಾಗ, ನಮ್ಮೊಳಗಿನ ಅರಿವನ್ನು ಜಾಗೃತಗೊಳಿಸಿಕೊಳ್ಳದಿದ್ದರೆ ನಮ್ಮನ್ನು ನಾವೇ ಮುಳ್ಳುಬೇಲಿಯ ಮೇಲೆ ನೋಡಬೇಕಾದ ಅಸಹಾಯಕತೆ ಬಂದೊದಗುತ್ತದೆ- ಎಂದು ಕವಿಯಾಗಿ ದೇವು ಮಾಕೊಂಡ ಅವರು ವಿಷಾದ ವ್ಯಕ್ತಪಡಿಸುತ್ತಾರೆ ಎಂದೆನಿಸುತ್ತದೆ. ಅಂತೆಯೇ, ಅವ್ವನಂತೆ ಸದಾ ಪೊರೆಯುವ ನಮ್ಮೊಳಗಿನ ಅರಿವಿನ ದೀಪವನ್ನು ಆರಿಸಿಕೊಂಡು ಅರಿವುಗೇಡಿಯಂತಾಗಿ ನರಕ ಸದೃಶ್ಯವಾದ ಬಾಳನ್ನು ಬಾಳುವುದು ದುರಂತವೇ ಸರಿ ಎಂಬುದು ಈ ಸಾಲುಗಳ ಆಶಯವಾಗಿದೆ.

ಹಾಗೆನೋಡಿದರೆ, ಈ ಲೋಕದಲ್ಲಿ ಮತ್ತೊಬ್ಬ ‘ಫಕೀರ’ ಹುಟ್ಟಿ ಬರುವುದೆಂದರೆ ಅದು ನಮ್ಮೊಳಗಿನ ‘ಅರಿವು’ ಎಂಬ ದೀಪವನ್ನು ಸ್ವಯಂ ನಾವೇ ಬೆಳಗಿಸಿಕೊಳ್ಳುವುದೇ ಆಗಿದೆ! ಆಗಲೇ ಪ್ರೀತಿಯ ಹಾಡು ನುಡಿಸುವ ವೀಣೆಯ ತಂತಿ ಮಿಡಿಯಲಾರಂಭಿಸುತ್ತದೆ. ಇಡಿಯಾಗಿ ಕವಿತೆ ನಮ್ಮೊಳಗಿನ ಅರಿವನ್ನು ಸದಾ ಜಾಗೃತವಾಗಿರಿಸಿಕೊಂಡು ಮಾನವೀಯ ನೆಲೆಯ ಮೇಲೆ ನಮ್ಮ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ ಎಂಬರ್ಥವನ್ನು ಧ್ವನಿಸುತ್ತದೆ.

ಕವಿ ದೇವು ಮಾಕೊಂಡ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಚಾರದಲ್ಲಿ ನಮ್ಮ ರಾಜಕಾರಣಿಗಳು ಹೊಂದಿರುವ ಧೋರಣೆಯ ಬಗ್ಗೆ ಆಕ್ರೋಶವಿದೆ. ತಮ್ಮ ಈ ಆಕ್ರೋಶವನ್ನು ‘ದೇವರು ಸತ್ತಿದ್ದಾನೆ’ ಎಂಬ ಕವಿತೆಯಲ್ಲಿ ತೋಡಿಕೊಂಡಿದ್ದಾರೆ ಎನ್ನಬಹುದು. ಹಾಗೆ ನೋಡಿದರೆ ಈ ಕವಿತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇವರ ಇರುವಿಕೆಯ ಕುರಿತಾಗಿ ಪ್ರಜೆಗಳಿಗಿರಬಹುದಾದ ನಂಬಿಕೆಯನ್ನು ವೋಟ್ ಬ್ಯಾಂಕ್’ನ ಸರಕಾಗಿಸಿಕೊಂಡು ನಮ್ಮ ರಾಜಕಾರಣಿಗಳು ಮಾಡುತ್ತಿರುವ ‘ಧರ್ಮ ರಾಜಕಾರಣ’ದ ಕುರಿತಾಗಿ ವಿವರಿಸುತ್ತದೆ. ಇಲ್ಲಿ, ದೇವರನ್ನು ‘ಭಾರತದ ಸಂವಿಧಾನ’ಕ್ಕೆ ರೂಪಕವಾಗಿರಿಸಿಕೊಂಡಿರುವ ಕವಿಯು ಗುಡಿಯೊಳಗಿರುವ ದೇವರು ಸತ್ತು ಹೋಗಿದ್ದಾನೆ ಎಂದು ಹೇಳುವುದರ ಮೂಲಕ ಧರ್ಮದ ಹೆಸರಿನಲ್ಲಿ ನಮ್ಮ ರಾಜಕಾರಣಿಗಳು ನಡೆಸುತ್ತಿರುವ ರಾಜಕಾರಣದ ಕಾರಣವಾಗಿ ಈ ದೇಶದ ಸಂವಿಧಾನದ ಆಶೋತ್ತರಗಳೆಲ್ಲ ನಿಷ್ಕ್ರಿಯವಾಗಿ ಹೋಗುತ್ತಿವೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾನೆ.

ಇಲ್ಲಿ, ಅಂಹಿಸೆಯನ್ನು ಅರಿವಿಗೆ ಸಮೀಕರಿಸಿ ನೋಡಿದಾಗ, ನಮ್ಮೊಳಗಿನ ಅರಿವನ್ನು ಜಾಗೃತಗೊಳಿಸಿಕೊಳ್ಳದಿದ್ದರೆ ನಮ್ಮನ್ನು ನಾವೇ ಮುಳ್ಳುಬೇಲಿಯ ಮೇಲೆ ನೋಡಬೇಕಾದ ಅಸಹಾಯಕತೆ ಬಂದೊದಗುತ್ತದೆ.

ಹೀಗಾಗಿ, ರಾಜಕಾರಣಿಗಳ ಅಗಾಧವಾದ ಅಧಿಕಾರದ ಲಾಲಸೆಗೆ ಸಿಲುಕಿ ಪ್ರಜಾಪ್ರಭುತ್ವ ವ್ಯವಸ್ಥೆಯ ಫಲಾನುಭವಿಗಳು ಕೇವಲ ಉಳ್ಳವರಷ್ಟೇ ಆಗಿರುವುದು ಈ ದೇಶದ ದುರಂತವೇ ಸರಿ. ಇದರ ನಡುವೆ, ಈ ಮಿನಾರು- ಗೋಪುರಗಳ ವಿಚಾರಗಳನ್ನೇ ಮುಂದಿಟ್ಟುಕೊಂಡು ಪ್ರಜೆಗಳ ಹೆಡಮುರಿಕಟ್ಟಿ ಈ ವ್ಯವಸ್ಥೆಯ ಒಂದು ಪ್ರಬಲ ವರ್ಗ ಮತ್ತೆ ಮತ್ತೆ ನಮ್ಮನ್ನು ಆಳುತ್ತಿರುವವುದು ವಿಪರ್ಯಾಸದ ಸಂಗತಿ. ಅಂತೆಯೇ, ಪ್ರಜೆಗಳು ಮತ್ತು ಆಳುವ ಪ್ರಭುಗಳ ನಡುವಿನ ಒಡಂಬಡಿಕೆಯಂತಿರುವ ಸಂವಿಧಾನದ ದನಿಯನ್ನು ಹತ್ತಿಕ್ಕಲು ಪ್ರಜೆಗಳ ಭಾವನಾತ್ಮಕ ನಂಬಿಕೆಯನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ನಡೆಸುತ್ತಿರುವ ‘ಧರ್ಮರಾಜಕಾರಣ’ದ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಿ, ಅಲ್ಲಿ ‘ನೈತಿಕ ರಾಜಕಾರಣ’ದ ಹೊಸ ಗಿಡವನ್ನು ನೆಡಬೇಕಾಗಿರುವುದು ಈ ಹೊತ್ತಿನ ತುರ್ತು ಎಂದು ಎಂದು ಹೇಳುತ್ತದೆ.

ಹಾಗೆಯೇ, ಈ ಸಂಕಲನದಲ್ಲಿ ‘ಫ್ಯೂಡಲ್ ಸಂಸ್ಕೃತಿ’ಯ ಬಗ್ಗೆ ಮಾತನಾಡುವ ‘ಪೋಟ್ರೇಟ್ ಹಿಡಿದು ಅಲೆತ’ ಎಂಬ ಗಹನವಾದ ಕವಿತೆಯೊಂದಿದೆ. ಗ್ರಾಮ ಜಗತ್ತಿನಲ್ಲಿ ಇಂದಿಗೂ ಜೀವಂತವಾಗಿರುವ ‘ಫ್ಯೂಡಲ್ ಸಂಸ್ಕೃತಿ’ಯು ತನ್ನೊಳಗೆ ಅಳವಡಿಸಿಕೊಂಡಿರುವ ಕ್ರೌರ್ಯ ಪ್ರೇರಿತ ವಿಚ್ಛಿದ್ರಕಾರಿ ಮನಸ್ಥಿತಿಯನ್ನು ಈ ಕವಿತೆ ಅನಾವರಣಗೊಳಿಸುತ್ತದೆ. ಇಲ್ಲಿ, ಕವಿಗೆ ಪದೆ ಪದೆ ನೆನಪಾಗುವ ‘ಕಾಳಿ’ಯು ವಾಸ್ತವದಲ್ಲಿ ಜಮೀನ್ದಾರಿ ಕುಟುಂಬಗಳು ಜೀತ ಪದ್ಧತಿಯ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಘೋರವಾದ ಕ್ರೌರ್ಯವನ್ನು ಸಂಕೇತಿಸುತ್ತಾಳೆ. ಈ ಮಾತಿಗೆ ಪೂರಕವಾಗಿ ಕವಿತೆಯ ಈ ಸಾಲುಗಳನ್ನು ನೋಡಿ:

ಹಾಳಾದ ರಸ್ತೆಯಲಿ
ಕೊರಚು ಕಲ್ಲು ಸಂದಿನಲಿ
ನನ್ನವರ ಪಾದದ ರಕ್ತ ಮೊಹರು ಬಿಟ್ಟಿವೆ
ಅದನ್ನು ಹಣೆಗೊರಚಿಕೊಂಡು ಇರುಳೆಲ್ಲ ತಿರುಗುತ್ತಿದ್ದೇನೆ
ನನ್ನ ಪಾದದಡಿ ಸಿಲುಕಿ ನಲುಗುವ ಗರಿಕೆಯ
ಎದೆಗವುಚಿಕೊಂಡು ಅಲೆಯುತ್ತಿದ್ದೇನೆ

ಇಲ್ಲಿ, ಜೀತದ ಚಕ್ರಸುಳಿಗೆ ಸಿಲುಕಿ, ಅದರಿಂದ ಹೊರ ಬರಲಾಗದೆ ನರಳಿ ನರಳಿ ಸತ್ತು ಹೋದವರ ನೆತ್ತರಿನ ಕಲೆ ಎಂದಿಗೂ ಅಳಿಸಿ ಹೋಗದು ಎನ್ನುವ ದೇವು ಮಾಕೊಂಡ ಅವರು ಅದನ್ನೇ ಹಣೆಗೊರಚಿಕೊಂಡು ಹಾಗೆ ಸತ್ತವರಿಗಾಗಿ ಮಿಡಿಯುತ್ತ ಅಂಡಲೆಯುತ್ತಿದ್ದೇನೆ ಎನ್ನುವಲ್ಲಿಗೆ ಫ್ಯೂಡಲ್ ಸಂಸ್ಕೃತಿಯ ಕ್ರೌರ್ಯದ ಇನ್ನೊಂದು ಕರಾಳ ಮುಖ ಓದುಗನ ಕಣ್ಮುಂದೆ ತೆರೆದುಕೊಳ್ಳುತ್ತ ಹೋಗುತ್ತದೆ! ಕಡೆಗೂ, ಹೀಗೆ ಶೋಷಣೆಗೊಳಗಾಗುತ್ತಿರುವ ತನ್ನವರ ಪಾಲಿಗೆ ಬೀಸುವ ತಂಗಾಳಿಯಾಗುವ ಆಶೆಯನ್ನು ಕವಿಯು ವ್ಯಕ್ತಪಡಿಸುತ್ತಾನೆ. ಅಲ್ಲಿಗೆ ಇಡಿಯಾಗಿ ಕವಿತೆ ಜೀತ ಮಾಡುವವರಿಗೆ ಜೀತಮುಕ್ತ ಬದುಕಿನ ಸಂಭ್ರಮವನ್ನು ಅರಿವಿಗೆ ತರುವ ಸಾರ್ಥಕ್ಯವನ್ನು ಮೆರೆಯುತ್ತದೆ.

ಇನ್ನು, ಈ ಸಂಕಲನದ ಶೀರ್ಷಿಕೆಯೂ ಆಗರಿರುವ ‘ಗಾಳಿಗೆ ತೊಟ್ಟಿಲು ಕಟ್ಟಿ’ ಕವಿತೆ ವಿಭಿನ್ನವಾದ ಅರ್ಥವನ್ನು ಧ್ವನಿಸುವುದರ ಮೂಲಕ ಓದುಗನನ್ನು ಚಿಂತನೆಗೀಡು ಮಾಡುತ್ತದೆ. ಈ ಲೋಕವನ್ನೇ ಅಮಾನತ್ತಿನಲ್ಲಿಡುವಂಥ ಆಡಳಿತಶಾಹಿ ಮತ್ತು ಅಧಿಕಾರಶಾಹಿಯಂಥ ಕ್ಷುದ್ರ ಶಕ್ತಿಯೊಂದು ನಮ್ಮೆಲ್ಲರ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಅಸಹಾಯಕರನ್ನಾಗಿಸಿರುವುದು ಪರಿಸ್ಥಿತಿಯ ವ್ಯಂಗ್ಯದಂತಿದೆ. ಆಡಳಿತಶಾಹಿ ಮತ್ತು ಅಧಿಕಾರಶಾಹಿಗಳ ಆಜ್ಞೆಯನ್ನು ಕೇಳಿಸಿಕೊಳ್ಳುತ್ತ ಸುಮ್ಮನೆ ತಲೆ ತಗ್ಗಿಸಿ ಮುನ್ನಡೆಯಬೇಕಾಗಿರುವುದು ದುರಂತ. ಇಂಥ ನೋವು, ಹತಾಶೆ, ಸಂಕಟಗಳನ್ನು ಹೇಳಿಕೊಳ್ಳಬೇಕೆಂದರೆ ಪ್ರಜಾಪ್ರಭುತ್ವ ಆಶಯಗಳಿಗೇನೆ ತುಕ್ಕು ಹಿಡಿದಂತಿದೆ. ಅಷ್ಟಕ್ಕೂ ನಮ್ಮ ನೋವಿಗೆ ಮಿಡಿಯುವ ಶಕ್ತಿ ಇರುವ ಸಂವಿಧಾನವನ್ನೇ ನಿಶಬ್ಧವಾಗಿಸಿರುವ ಆಗುಂತಕ ಶಕ್ತಿಯನ್ನು ಎದುರಿಸಲಾಗದ ಸಂದಿಗ್ಧತೆ ಎದುರಾಗಿದೆ! ಇಂಥ ಚರಿತ್ರೆಯನ್ನು ಕಾಲಾಂತರದಲ್ಲಿ ದಾಖಲಿಸಬಹುದಾದ ಪೆನ್ನನ್ನು ಸಹ ಗಡಿಪಾರು ಮಾಡಲಾಗಿದೆ. ಕಡೆಗೂ ಇಂಥ ದುಃಖಕ್ಕೂ ಸಹ ಗೌರವದ ಸಾವಿದೆ; ಅಲ್ಲಿ ನಾವೆಲ್ಲ ಒಂದಾಗಿ, ನಮ್ಮ ಬದುಕನ್ನು ಹಾಳುಗೆಡವಿದ ಕ್ಷುದ್ರಶಕ್ತಿಗಳ ಅನುಪಸ್ಥಿತಿಯಲ್ಲಿ ಸುಖ ದುಃಖಗಳನ್ನು ಹಂಚಿಕೊಂಡು ನಮ್ಮ ನಾವೇ ಸಮಾಧಾನಪಡಿಸಿಕೊಳೋಣ ಎಂಬರ್ಥವನ್ನು ಈ ಕವಿತೆ ಧ್ವನಿಸುತ್ತದೆ. ಕವಿತೆ, ಪ್ರತಿಮೆ, ರೂಪಕಗಳ ಮೂಲಕವೇ ಅಗಾಧವಾದುದನ್ನು ಹೇಳಲು ಪ್ರಯತ್ನಿಸುತ್ತದೆ.

ಕವಿಯಾದವನು ತನ್ನ ಕಣ್ಣ ಮುಂದಿನ ಸಂಗತಿಗಳಿಗೆ ಕಿವಿ ಮತ್ತು ಮನಸ್ಸನ್ನು ಕೀಲಿಸಿ ನಡೆಸುವ ಧ್ಯಾನದಿಂದ ಮಾತ್ರ ಕವಿತೆ ಹುಟ್ಟುತ್ತದೆ! ಅಂದರೆ ಕವಿಗೆ ಸೃಷ್ಟಿಯ ಚರಾಚರ ವಸ್ತುಗಳು ಭಾವನೆಗಳನ್ನು ಅರಿತುಕೊಳ್ಳುವ ಗುಣವಿದ್ದಲ್ಲಿ ಮಾತ್ರ ಆ ಕವಿಯು ಮತ್ತು ಆತನ ಕವಿತೆ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಈ ಮಾತಿಗೆ ಸಾಕ್ಷಿಯಾಗಿ ದೇವು ಮಾಕೊಂಡ ಅವರು ‘ಮಳೆ ಪುರಾಣ’ ಎಂಬ ಕವಿತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ, ಹರಿವ ನೀರಿಗೂ ಒಂದು ಭಾವವಿದೆ ಎಂದು ಹೇಳುವ ಅವರು, ಆ ಭಾವವನ್ನು ಅರಿತುಕೊಳ್ಳುವ ಗುಣವಿದ್ದಲ್ಲಿ ಮಾತ್ರ ಅದು ಹರಿಯುವ ನೆಲದ ಬಗೆಗೆ ಅರಿತುಕೊಳ್ಳಲು ಸಾಧ್ಯ ಎನ್ನುತ್ತಾರೆ. ಏಕೆಂದರೆ, ನೆಲ, ಜಲದ ವಿಚಾರದಲ್ಲಿ ರಕ್ತಪಾತವೇ ಆಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯ ನೀರು- ನೆಲದ ಅಂತರಂಗದ ಮಿಡಿತವನ್ನು ತಿಳಿದುಕೊಂಡಾಗಲೇ ಅವುಗಳು ಗರ್ಭೀಕರಿಸಿಕೊಂಡ ಸಹಸ್ರ ಮೌನಗಳ ಸ್ವರಗಳನ್ನು ಕೇಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ!

ಅಲ್ಲದೇ, ಧರ್ಮದ ಕುರಿತು ಮಾತನಾಡುವ ‘ನಾಲೆಯಾಗಿ ಹರಿಯುತ್ತಿದೆ ಕಣ್ಣೀರು’ ಎಂಬ ಕವಿತೆ, ಯಾವತ್ತಿಗೂ ಕೂಡ ಅರಿವುಗೇಡಿ ಧರ್ಮವು ದಾರಿ ತಪ್ಪಿಸುತ್ತದೆ ಎಂಬರ್ಥವನ್ನು ಧ್ವನಿಸುತ್ತದೆ:

ನೀನು ಹಚ್ಚಿಟ್ಟು ಹೋದ
ಸಾಲು ಮರದ ಕೆಳಗಿನ ದೀಪಗಳು
ಉರಿಯದೇ ನಿಂತಿವೆ
ಸ್ತಬ್ಧ
ನಿಶ್ಯಬ್ದ!

ತನ್ನೊಳಗಿನ ಅರಿವನ್ನು ಶೂನ್ಯವಾಗಿಸಿಕೊಂಡು ಗಾಳಿಗೆ ಮುಖ ಮಾಡಿ ನಿಂತಿರುವ ಧರ್ಮವು ಮನುಷ್ಯನ ಎದೆಯೊಳಗೆ ಅರಿವಿನ ದೀಪ ಹಚ್ಚುವ ಬದಲಿಗೆ ಬರೀ ಅಂಧ ಶ್ರದ್ಧೆಯನ್ನು ತುಂಬುತ್ತದೆ ಎಂದು ವಿವರಿಸುತ್ತದೆ. ಧರ್ಮವು ಜ್ಞಾನವನ್ನು ಉದ್ದೀಪನಗೊಳಿಸಬೇಕೆ ವಿನಃ ಜಾತಿಯ ಸಂಕೋಲೆಯನ್ನು ತೊಡಿಸುವಂತಾಗಬಾರದು ಎಂಬ ಮಾತನ್ನು ಮೇಲಿನ ಸಾಲುಗಳು ಸಾಕ್ಷೀಕರಿಸುತ್ತವೆ. ಅಂತೆಯೇ ಅರಿವಿನ ದೀಪವನ್ನು ಹಚ್ಚಬಲ್ಲ ಧರ್ಮದ ಅನಿವಾರ್ಯತೆ ಈ ಲೋಕಕ್ಕಿದೆ ಎಂಬುದು ಕವಿತೆಯ ಆಶಯವಾಗಿದೆ. ಇದರೊಂದಿಗೆ ‘ಚರಿತ್ರೆಯ ಚಿರನಿದ್ರೆ’ ಎಂಬ ಕವಿತೆ, ಮನುಕುಲದ ಶಾಂತಿಯನ್ನು ಕದಡುವ ಯುದ್ಧ ನೀತಿಯನ್ನು ವಿರೋಧಿಸುವ ನಿಟ್ಟಿನಲ್ಲಿದ್ದು, ಚರಿತ್ರೆಯಲ್ಲಿ ಲೀನವಾಗಿ ಹೋಗಿರುವ ಅದೆಷ್ಟೋ ಯುದ್ಧಗಳಿಂದ ಉಂಟಾದ ನೋವುಗಳಿಗಾಗಿ ಕಂಬನಿ ಮಿಡಿಯುವಂತಿದೆ.

ಇದಲ್ಲದೇ, ಇನ್ನಷ್ಟು ಬಹು ಮುಖ್ಯವಾದ ಕವಿತೆಗಳು ಈ ಸಂಕಲನದಲ್ಲಿದ್ದು ಈ ವ್ಯವಸ್ಥೆಯಲ್ಲಿನ ಅನೇಕ ವಿಚಾರಗಳೊಂದಿಗೆ ಮುಖಾಮುಖಿಯಾಗುತ್ತವೆ. ಇನ್ನು ಕವಿಯಾಗಿ ದೇವು ಮಾಕೊಂಡ ಅವರು ಲೋಕವನ್ನು ನೋಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಈ ಕವನಸಂಕಲನವಿದೆ. ಆದರೂ ತನ್ನನ್ನು ಬಹುವಾಗಿ ಕಾಡುವ ವಿಚಾರವೊಂದನ್ನು ಕವಿತೆಯ ವಸ್ತುವಾಗಿಸುವಾಗ ಕವಿಯಾದವನಿಗೆ ಅಗಾಧವಾದ ಸಂಯಮವಿರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆ ವಸ್ತುವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುವಲ್ಲಿ ಕವಿಯು ವಿಫಲನಾಗುವ ಸಾಧ್ಯತೆಯಿದೆ. ಅದಕ್ಕೇ, ಕವಿತೆ ಕಟ್ಟಲು ಕವಿಗೆ ಉಮ್ಮೇದಿಗಿಂತ ತಾಳ್ಮೆ ಇರಬೇಕು. ದೇವು ಮಾಕೊಂಡರ ಈ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಅವರು ಉಮ್ಮೇದಿಗೆ ಬಿದ್ದು ಬರೆದ ವಾಚ್ಯವೆನಿಸುವ ಕವಿತೆಗಳು ಸಹ ಇಲ್ಲಿವೆ! ಅವು ಗಂಭೀರ ಓದಿಗೆ ತೊಡಕನ್ನುಂಟುಮಾಡುವ ಸಾಧ್ಯತೆ ಇದೆ. ಈ ಮಾತನ್ನು ಮೀರಿ ದೇವು ಮಾಕೊಂಡ ಅವರು ಭವಿಷ್ಯದಲ್ಲಿ ಗಹನವಾದ ಕವಿತೆಗಳನ್ನು ಓದುಗರಿಗೆ ಕೊಡುತ್ತಾರೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ!

(ಕೃತಿ: ಗಾಳಿಗೆ ತೊಟ್ಟಿಲು ಕಟ್ಟಿ (ಕವನಸಂಕಲನ), ಲೇಖಕರು: ದೇವು ಮಾಕೊಂಡ, ಪ್ರಕಾಶನ: ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ, ಪ್ರಕಟಣೆ: 2021; ಪುಟಗಳು: 76; ಬೆಲೆ: 90/-)