ಒಂದ ರವಿವಾರ ಭವಾನಿ ನಗರ ರಾಯರ ಮಠಕ್ಕ ನಮ್ಮ ಗೆಳ್ಯಾ ಪಚ್ಚ್ಯಾನ ಮಗನ ಜವಳಕ್ಕ ಹೋಗಿದ್ದೆ. ಹೋಗೊದರಾಗ ಜವಳ ಮುಗದು ರಾಯರ ಕನಕಾಭಿಷೇಕ ಬಾಕಿ ಇತ್ತು. ಕನಕಾಭಿಷೇಕ ಆದ ಮ್ಯಾಲೇನ ಎಲಿ ಹಾಕೋದು ಅಂತ ಧಾಬಳಿ ಉಟಗೊಂಡ ಭಟ್ಟರು ಹೇಳಿದ ಮ್ಯಾಲೇ, ಹಂಗರ ರಾಯರ ದರ್ಶನಾನರ ಮಾಡಿ ಬರೋಣ ಅನಾಯಸ ಇಲ್ಲಿ ತನಕ ಬಂದೇನಿ ಅಂತ ಹೋದೆ. ಮೊದ್ಲಿಂದ ನನಗು ರಾಯರಗು ಅಷ್ಟ – ಕಷ್ಟ, ಆದ್ರೂ ನಾ ನಮ್ಮ ಶಂಕರಮಠದಕ್ಕಿಂತಾ ವೈಷ್ಣವರ ರಾಯರ ಮಠಕ್ಕ ಜಾಸ್ತಿ ಹೋಗಿರ್ತೇನಿ. ಎಲ್ಲಾ ಸಂಗತಿ ದೋಷ.

ಹಿಂಗ ಒಂದ ಸುತ್ತ ಪ್ರದಕ್ಷಿಣಿ ಹೊಡದ ಬರಬೇಕಾರ ಕಣ್ಣು ಎದರಗಿದ್ದ ವೈಟ ಬೋರ್ಡ ಮ್ಯಾಲೆ ಹೋತು. ಅದರ ಮ್ಯಾಲೆ ನಿಲಿ ಬಣ್ಣದ ಮಾರ್ಕರ ಪೆನ್‌ಲೆ ಬರದಿದ್ದರು ದಿನಾಂಕ್ ೧೫, ಬುಧವಾರ್ ರಾತ್ರಿ ಖಗ್ರಾಸ ಚಂದ್ರ ಗ್ರಹಣ ಅಂತ. ’ರಾತ್ರಿ ಖಗ್ರಾಸ ಚಂದ್ರ ಗ್ರಹಣ’ ಅನ್ನೊ ಶಬ್ದ ಓದಿ ನಗು ಬಂತು, ನಾ ಅಂತು ಹಗಲ ಹೊತ್ತನ್ಯಾಗ ಚಂದ್ರ ಗ್ರಹಣ ಆಗೋದು ಕೇಳಿಲ್ಲ, ಆಗಿದ್ರು ಅದು ನಮಗ ಗೊತ್ತಾಗಂಗಿಲ್ಲ. ಜನಾ ಯಾಕ ತಲಿ ಕೆಡಿಸ್ಕೊಳ್ಳತಾರೋ ಅನ್ನಸ್ತ. ಹಂಗ ನೋಡಿದ್ರ ಗ್ರಹಣ ಏನ ನಮಗ ಹೊಸಾದಲ್ಲ ಬಿಡ ಅಂತ ಎರಡನೇ ಮತ್ತ ಲಾಸ್ಟ ಸುತ್ತ ಪ್ರದಕ್ಷಿಣೆ ಶುರು ಮಾಡಿದೆ. ಇತ್ತೀಚಿಗೆ ಅಂತೂ ಮಿಡಿಯಾದವರು ಎಲ್ಲಾ ಗ್ರಹಣಕ್ಕು ಇದು ಶತಮಾನದ ಗ್ರಹಣ, ದಶಮಾನದ ಗ್ರಹಣ, ಇಂತಹ ಗ್ರಹಣಾ ನಿಮ್ಮ ಜೀವಮಾನದಾಗ ಇನ್ನೊಮ್ಮೆ ಬರಂಗಿಲ್ಲಾ ಹಂಗ- ಹಿಂಗ ಅಂತ ಸ್ಟೋರಿ ಮ್ಯಾಲೆ ಸ್ಟೊರಿ ಮಾಡಿ ತೋರಸ್ತಾರ. ಗ್ರಹಣದ ಬಗ್ಗೆ ಕುತುಹಲದಿಂದ ನೋಡೋರಿಗೆ ಗ್ರಹಣ ಹಿಡಿಯೋ ಹಂಗ ಕಥಿ ಕಟ್ಟತಾರ ಅಂತ ಮನಸ್ಸಿನ್ಯಾಗ ಅನ್ಕೊಂಡೆ, ಅಷ್ಟರಾಗ ಪೂಜ್ಯಾಯ ರಾಘವೇಂದ್ರಾಯ ಮನದಾಗ ಮುಗದಿತ್ತೊ ಅಥವಾ ಮರತಿತ್ತೊ ಗೊತ್ತಿಲ್ಲ ಪ್ರದಕ್ಷಿಣಿ ಅಂತು ಮುಗಿಲಿಕ್ಕೆ ಬಂದಿತ್ತು. ನನ್ನ ದೃಷ್ಟಿ ಮತ್ತ ಆ ವೈಟ ಬೊರ್ಡ್ ಮ್ಯಾಲೆ ಹೋತು, ಈ ಸಲಾ ಕೆಳಗಿನ ಲೈನ್ ಓದಿದೆ ಗ್ರಹಣದ ರಾಶಿ ಫಲಾ ಅಂತ ಬರದಿದ್ದರು.

ಒಂದನೇ ಸಾಲಿನ ರಾಶಿಗಳಿಗೆ ಶುಭ ಫಲಾ, ಏರಡನೇ ಸಾಲಿನ ರಾಶಿ ಗೆ ಮಿಶ್ರ ಫಲಾ ಮತ್ತ ಕೆಳಗಿನ ಸಾಲಿನ ರಾಶಿಗೆ ಅಶುಭ ಫಲ ಅಂತ ಬರದಿದ್ದರು. ಸಟಕ್ಕನ ನನ್ನ ರಾಶಿ ಯಾವುದು ಅಂತ ವಿಚಾರಮಾಡಿದೆ, ಲಗೂನ ನೆನಪಾಗಲಿಲ್ಲ. ಫ್ಲ್ಯಾಶ್ ಬ್ಯಾಕ್‌ಗೆ ಹೋದೆ. ಲಾಸ್ಟ ಗ್ರಹಣದ ಟೈಮನಾಗ ನಮ್ಮಪ್ಪ ನಂದ ರಾಶಿ ’ಮೇಷ’ ಅಂತ ಹೇಳಿದ್ದ ನೆನಪಾತು. ರಾಘವೇಂದ್ರ ಸ್ವಾಮಿಗೆ ನಮಸ್ಕಾರ ಮಾಡಿ, ತೀರ್ಥಾ ತಗೊಂಡ ತಲಿ ಮ್ಯಾಲೆ ಮಂತ್ರಾಕ್ಷಿ ಹಾಕ್ಕೊಂಡ ಬೊರ್ಡ್ ಮ್ಯಾಲೆ ಮತ್ತ ನೋಡಿದೆ ಮೇಷ ರಾಶಿ ಅಶುಭ ಫಲದ ಲಿಸ್ಟನಾಗ ಇತ್ತು… ಮುಂದ ಓದ್ಲಿಲ್ಲ, ಓದಿದ್ದರ ಅಶುಭ ಫಲಕ್ಕ ಪರಿಹಾರನೂ ಬರದಿರತಾರ ಅಂತ ಗೊತ್ತಿತ್ತು, ಪರಿಹಾರದ ಖರ್ಚ ನಮಗ ಇರುವ ಅಶುಭ ಫಲದ ಮೊದಲ ಸಂಕೇತ ಅಂತ ಗೊಣಗಿ ಸುಮ್ಮನ ಹೋಗಿಬಿಟ್ಟೆ. ಹೆಂಗಿದ್ರು ಗ್ರಹಣ ಇನ್ನೂ ಹನ್ನೊಂದ ದಿವಸ ಇತ್ತು, ಅಷ್ಟರಾಗ ಎಲ್ಲಾ ಮರಿತೇನಿ ಅನ್ನೋ ವಿಶ್ವಾಸನು ಇತ್ತು.
ಮೊನ್ನೆ ಬುಧವಾರ ೧೫ನೇ ತಾರೀಖ, ಎದ್ದ ಇನ್ನು ಮಾರಿ ತೊಳ್ಕೋಂಡಿದ್ದಿಲ್ಲಾ, ನಮ್ಮವ್ವಾ ಅಡಗಿಮನ್ಯಾಗಿಂದ ದೇವರ ಮಂತ್ರಾ ಬ್ರೆಕ್ ಮಾಡಿ ಒದರಿದ್ಲು ” ಪ್ರಶಾಂತಾ ಇವತ್ತ ಗ್ರಹಣ, ನಿನ್ನ ರಾಶಿ ಮ್ಯಾಲೆ ಬಂದದ, ನಿನಗ ಅಶುಭ ಫಲಾ ಅದ” ಅಂತ. ಇಷ್ಟ ದಿವಸ ಮರತ ಹೊಗಿದ್ದ ವಿಷಯಾನ ನಮ್ಮವ್ವಾ ಟೊಟಲ್ ರಿಕಾಲ್ ಮಾಡಿದ್ಲು.

ಇಂಥಾ ಸುದ್ದಿ ನಮ್ಮವ್ವಗ ಎದ್ದಕೂಡ್ಲೆನ ಹೇಳ್ಳಿಕ್ಕೆ ಭಾಳ ಖುಷಿ. ನಮ್ಮವ್ವಾ ಹಂಗ ಮುಂದವರದ ಗ್ರಹಣದ ವರದಿ ಶುರು ಮಾಡಿದ್ಲು, ಮನ್ಯಾಗ ಇರೊ ಆರ ಮಂದಿ ಒಳಗ ಯಾರಿಗೆ ಶುಭಾ, ಯಾರಿಗೆ ಅಶುಭಾ ಮತ್ತ ಯಾರಿಗೆ ಮಿಶ್ರ ಫಲಾ ಅಂತ ರಾಯರ ಮಠದಾಗ ಬರದಂಗನ ಬಡ ಬಡಿಸಿದ್ಲು. ಅಷ್ಟರಾಗ್ ನನ್ನ ಹೆಂಡತಿ ಬಚ್ಚಲದಾಗಿಂದ ” ರ್ರಿ ನನಗ ಶುಭ ಫಲ” ಅಂತ ಒದರಿದ್ಲು. ನಾ ಅನ್ಕೊಂಡೆ ಇದ ಯಾ ಆಚಾರ್ಯರ ಬರದದ್ದ ಪಂಚಾಂಗ ಅಂತ. ಗಂಡಗ ಅಶುಭ ಫಲ ಇದ್ದರ ಹೆಂಡತಿಗೆ ಶುಭ ಫಲ ಹೆಂಗ ಇರತದ ಅಂತ. ಬಹುಶಃ ಗಂಡಗ ಅಶುಭ ಇರೋದ ಹೆಂಡತಿಗೆ ಶುಭ ಇರಬೇಕು ಅಂತ ಅನ್ಕೊಂಡ ಸುಮ್ಮನಾದೆ. ಇಷ್ಟಕ್ಕ ನಮ್ಮವ್ವನ ಗ್ರಹಣ ಪುರಾಣಾ ಮುಗಿಲಿಲ್ಲಾ, ಮತ್ತ ಹೇಳಿದ್ಲು ” ಮಧ್ಯಾಹ್ನ ೧೨.೩೦ರ ವಳಗ ಎಲ್ಲಾರು ಊಟಾ ಮಾಡಬೇಕು, ನಾಳೆ ಬೆಳಿಗ್ಗೆ ತನಕ ಏನು ತಿನ್ನಂಗಿಲ್ಲಾ” ಅಂದ್ಲು. ವಯಸ್ಸಾದವರು, ಚಿಕ್ಕಮಕ್ಕಳು,ಅಶಕ್ತರು ಮತ್ತ ಆರಾಮ ಇಲ್ಲದವರು ಸಂಜಿ ೭.೩೦ರ ತನಕ ತಿನ್ನಬಹುದು ಅಂತ ರಿಯಾಯತಿ ಘೋಷಣೆ ಮಾಡಿದ್ಲು. ನನ್ನ ನಿದ್ದಿ ಗಣ್ಣಾಗ ಇರೋ ಕ್ಯಾಮಾರಿ ಮಾರಿ ನೋಡಿ “ನೀ ಬೇಕಾರ ಸಂಜೆ ೭ ಘಂಟೆಕ್ಕ ಬಂದ ಮ್ಯಾಲೆ ಊಟಾ ಮಾಡು” ಅಂದ್ಲು. ಅಂದರ ನಾ ಎನ ಅಶಕ್ತನೊ, ಅನರೊಗ್ಯದವನೋ ಅಂತ ಕೇಳ್ಲಿಕ್ಕೆ ಹೋಗ್ಲಿಲ್ಲಾ. ಸುಮ್ಮನ ಆ ವಿಷಯ ತಲಿಕೆಡಿಸಿಕೊಳ್ಳದ ಸ್ನಾನಕ್ಕ ಹೋದೆ. ಸ್ನಾನ ಮಾಡಿ ದೇವರಿಗೆ ಹಾಜರಿಕೊಟ್ಟ ಕಪಾಟನಾಗಿಂದ ಶರ್ಟ ತಕ್ಕೊಬೇಕಾರ ಸಟಕ್ಕನ ಒಂದ ಹಲ್ಲಿ ಮರಿ ಎದಿ ಮ್ಯಾಲೆ ಬಿದ್ದ ಹೋತು. ಛಟ್ಟನ ಮೈ ಝಾಡಿಸಿದೆ, ನನ್ನ ಹೆಂಡತಿ ಕೇಳಿದ್ಲು ಏನಾತರಿ ಅಂತ, ಹಲ್ಲಿ ಮರಿ ಮೈ ಮ್ಯಾಲೆ ಬಿತ್ತು ಅಂದೆ. ಅದಕ್ಕ ಅಕಿ ಕೈ ಕಾಲ ತೊಳ್ಕೊಂಡು ದೇವರಿಗೆ ನಮಸ್ಕಾರ ಮಾಡ್ರಿ ಅಂದ್ಲು. ನಾ ಅಂದೆ “ಈಗರ ಸ್ನಾನ ಮಾಡಿ, ಅದು ಅಭ್ಯಂಗ ಸ್ನಾನ ಮಾಡಿ, ನವಗ್ರಹ ಮಂತ್ರಾ ಹೇಳಿ ದೇವರಿಗೆ ನಮಸ್ಕಾರ ಮಾಡಿ ಬಂದೇನಿ ಮತ್ತ ಕೈ ಕಾಲ ತೊಳ್ಕೊಳ್ಳಿ ?”

“ಅದ ಏನರ ಆಗಲಿ ಇನ್ನೊಮ್ಮೆ ಕೈ ಕಾಲ ತೊಳ್ಕೊಳ್ರಿ” ಅಂದ್ಲು. ಮೊದ್ಲ ಇವತ್ತ ಗ್ರಹಣ ಬ್ಯಾರೆ, ಅದು ನಿಮ್ಮ ರಾಶಿ ಮ್ಯಾಲೆ ಬಂದದ ಅಂತ ಮತ್ತ ನೆನಪ ಮಾಡಿ ಕೊಟ್ಲು. ಅಕಿ ಜೋತಿಗೆ ನಮ್ಮವ್ವನು ಸೋ ಅಂದ್ಲು. ಅಂತು-ಇಂತು ನಾ ನಂಬಲಿ ಬಿಡಲಿ ಯಾಕ ರಿಸ್ಕ ತೊಗೋಬೇಕು ಅಂತ ದೇವರಿಗೆ ಅಡ್ಡ ಬಿದ್ದು ಆಫೀಸ ದಾರಿ ಹಿಡದೆ. ಎಂಟತಾಸ ಆಫೀಸನಾಗ ಗ್ರಹಣದ ಬಗ್ಗೆ ಎಷ್ಟ ಮರತರು ಮನಸ್ಸಿನ ಒಂದ ಮೂಲ್ಯಾಗ ಇವತ್ತ ಎನರ ಅಶುಭ ಆಗ್ತದ ಏನೋ ಅಂತ ಕಾಯ್ತಿದ್ದೆ. ಹಂತಾದ ಏನು ಆಗ್ಲಿಲ್ಲ. ಪಂಚಾಂಗ ಬರದ ಆಚಾರ್ಯರಿಗೆ ನೀರಾಶೆ ಆತೇನೋ.
ಸಂಜಿಗೆ ಸೀದಾ ಮನಿಗೆ ಬಂದೆ, ಇನ್ನು ಒಳಗ ಕಾಲ ಇಡೊ ಮುಂಚೆನ ನನ್ನ ಹೆಂಡತಿ ಹೇಳಿದ್ಲು
“ರ್ರಿ ಲಗೂನ ಬೂಟ ತಗದ ಕೈ ಕಾಲ ತೊಳ್ಕಳ್ರಿ, ನಾ ನಮಸ್ಕಾರ ಮಾಡಬೇಕು ” ಅಂದ್ಲು. ನಾ ಒಮ್ಮೆಲೇ ಗಾಬರಿಯಾದೆ. ಅಕಿ ಮೈ ಮ್ಯಾಲೂ ಬಹುಶಃ ಹಲ್ಲಿ ಬಿದ್ದಿರಬೇಕು ಅನ್ಕೊಂಡೆ. ಅಲ್ಲಾ ಹಂಗ ನನಗ ದೇವರಂತ ತಿಳ್ಕೊಂಡ ನಮಸ್ಕಾರ ಮಾಡವಳ್ಳಾಕ ಆದರ ನಾ ಯಾಕ ಕೈ ಕಾಲ ತೊಳ್ಕೊಳ್ಳಬೇಕು ತಿಳಿಲಿಲ್ಲಾ. ಆದರ ಹಂಗ ಕೇಳಲಿಕ್ಕೆ ಆಗದ “ಯಾಕವಾ ನಮಸ್ಕಾರ” ಅಂದೆ “ರ್ರಿ ಇವತ್ತ ಕಾರ್ ಹುಣ್ಣಿಮೆ, ನಾ ವಟ ಸಾವಿತ್ರಿ ಪೂಜಾ ಮಾಡೇನಿ” ಅಂದ್ಲು. ಅದಕ್ಕ ಏನು ಅಂದೆ, ಅದಕ್ಕ ಗಂಡಗ ನಮಸ್ಕಾರ ಮಾಡಬೇಕು ಅಂದ್ಲು. ಇದು ಒಂದು ಗ್ರಹಣದ ಅಶುಭ ಸಂಕೇತನ ಇರಬೇಕು ಅಂತ ಸುಮ್ಮನಾದೆ. ದಿವಸಾ ಮನಿಗೆ ಬಂದ ಕೂಡ್ಲೇನ ವಟಾ ವಟಾ ಅಂತಿದ್ದ ನನ್ನ ’ವಟ ಸಾವಿತ್ರಿ’ ಇವತ್ತ ವಟ-ಸಾವಿತ್ರಿ ಪೂಜಾ ಮಾಡ್ಯಾಳ ಅಂತ ಹೇಳಿ ನನಗ ನಮಸ್ಕಾರ್ ಮಾಡಿಸಿಕೊಳ್ಳುವ ಭಾಗ್ಯ್ ಒದಗಿ ಬಂತು. ಪಾಪ, ಅಲ್ಲೆ ನಿಂತಿದ್ದ ನನ್ನ ಎರಡ ವರ್ಷದ ಮಗಳು ಏನು ತಿಳಿಯದ ಅವರವ್ವ ಹಿಂಗ್ಯಾಕ ಮಾಡ್ಲಿಕತ್ತಾಳ ಅಂತ ಗಾಬರಿಯಾಗಿ ಅಕಿನು ನನಗ ನಮಸ್ಕಾರ ಮಾಡಿ ಬಿಟ್ಲು. ಬಹುಶಃ ಕೂಸ ಅವರವ್ವ ನನಗ ನಮಸ್ಕಾರ ಮಾಡಿದ್ದ ನೊಡೇ ಇರಲಿಲ್ಲ ಅನಸ್ತದ. ವರ್ಷಕ್ಕೊಮ್ಮೆ ಆವಾಗ ಇವಾಗ ಮಾಡಿದ್ರ ಪಾಪ ಕೂಸಿಗರ ಏನ ಗೋತ್ತಾಗಬೇಕು.

“ಸರಿ ನನಗ ಈಗ ಭಾಳ ಹೊಟ್ಟಿ ಹಸ್ತದ ಮಧ್ಯಾಹ್ನ ಬ್ಯಾರೆ ಊಟಾ ಮಾಡಿಲ್ಲಾ ಊಟಕ್ಕ ಹಾಕು” ಅಂದೆ. ” ಒಂದ ಎರಡ ನಿಮಿಷ ತಡ್ಕೊಳ್ರಿ, ಇಲ್ಲೇ ಒಂದ್ಯಾರಡ ಮನಿಗೆ ಅರಷಣಾ-ಕುಂಕಮಕ್ಕ ಕರದಾರ ಹೋಗಿ ಬಂದ್ ಊಟಕ್ಕ ಹಾಕತೇನಿ” ಅಂದ್ಲು. “ಲೇ, ನಾ ಇಲ್ಲೆ ಹೊಟ್ಟಿ ಹಸ್ತ ಸಾಯಲಿಕ್ಕೆ ಹತ್ತೇನಿ, ನೀ ಅರಷಣಾ-ಕುಂಕಮಕ್ಕ ಹೊಂಟಿಯಲ್ಲಾ, ಊಟಕ್ಕ ಹಾಕಿ ಹೋಗು” ಅಂದೆ. ಅಷ್ಟರಾಗ ನಮ್ಮವ್ವ ಒಳಗಿಂದ ಬಂದ ’ ಇಲ್ಲೆ, ಎರಡ ಮನಿಗೆ ಹೋಗಿ ಬರ್ತೇವಿ, ಸ್ವಲ್ಪ ತಡ್ಕ’ ಅಂದ್ಲು. ಏನ್ ಬಂತಪಾ ಇದು ಅನ್ಕೋಂಡೆ, ಮುಂಜಾನೆದ್ದ ಯರಕೊಂಡ , ವಟ-ಸಾವಿತ್ರಿ ಪೂಜಾ ಮಾಡಿ, ಗಂಡನ ಬಗ್ಗೆ ಏನೆಲ್ಲಾ (ಏನೇನರ) ಬೇಡ್ಕೋಂಡ, ಹಸದ ಬಂದ ಗಂಡ ಬಡ್ಕೋಂಡರು ಊಟಕ್ಕ ಹಾಕಲಾರದ ಮಂದಿ ಮನಿಗ ಅರಷಣಾ-ಕುಂಕಮಕ್ಕ ಹೊಂಟಾಳಲಾ ಏನ್ ಹೇಳ್ಬೇಕು? ಯಾರಿಗೆ ಹೇಳ್ಬೇಕು? ಒಂದು ತಿಳಿಲಿಲ್ಲಾ. ಬಹುಶಃ ಇದೂ ಒಂದ ಗ್ರಹಣದ ಅಶುಭ ಫಲನ ಇರಬೇಕು ಅಂತ ಸುಮ್ಮನ ನಾನ ತಾಟ ಹಾಕ್ಕೋಂಡ ಊಟಾ ಮಾಡಿದೆ.

ರಾತ್ರಿ ಕನಸ್ಸಿನಾಗ ಯಾರೋ ’ಗ್ರಹಣ ಬಿಡ್ತು ಗ್ರಹಣ’ ಅಂದಂಗ ಆತು, ಖುಶೀಲೆ ಎದ್ದೆ, ಹೊರಗ ನೋಡಿದ್ರ ಬೆಳಕ ಆಗಿತ್ತ, ಹಳೇ ಅರಬಿ ಒಯ್ಯೊಕೀ ಗ್ರಹಣ ಬಿಡ್ತು ಗ್ರಹಣ ಅಂತ ಎಲ್ಲಾರ ಮನ್ಯಾಗು ಎಬ್ಬಸಲಿಕತ್ತಿದ್ಲು. ನನ್ನ ಹೆಂಡತಿ ಕೇಳಿದ್ಲು “ರ್ರಿ, ನಿಂಬದ ಯಾ ಹಳೆ ಅರಬಿ ಕೊಡ್ಲಿ”.. ನಾ ಅಂದೆ “ಹಾಕ್ಕೊಂಡಿದ್ದ ಅಂಡರವೆರ್ ಬನಿಯನ್ ಬಿಟ್ಟ ಬೇಕಾದ್ದ ಕೊಡವಾ..”..
ವಟ್ಟ ಗ್ರಹಣ ಬಿಟ್ಟರ ನನಗ ಸಾಕಾಗಿತ್ತ.