“ತಮ್ಮನ್ನು ಪ್ರೀತಿಸಿದವರನ್ನು, ಆದರಿಸಿದವರನ್ನು,  ಅನುಸರಿಸಿದವರನ್ನೆಲ್ಲ ಬಿಟ್ಟು ಚಿಟ್ಟಾಣಿಯವರು ಈಗ ನೆನಪಾಗಿ ನಿಂತಿದ್ದಾರೆ; ನಾವು ಕಾಣದಲ್ಲೆಲ್ಲೋ ಕರಗಿ ಹೋಗಿದ್ದಾರೆ. ಇನ್ಯಾವುದೋ ಲೋಕದಲ್ಲಿ ಕುರಿಯದವರು, ಕೆರೆಮನೆಯವರು, ಕಡತೋಕರು ಉಪ್ಪೂರರು ನಾವುಡರನ್ನು ಸೇರಿಕೊಂಡಿದ್ದಾರೆ. ಯಕ್ಷಗಾನವನ್ನು ಪ್ರತಿ ದಿನವೂ ಪ್ರತಿಕ್ಷಣವೂ ಪ್ರೀತಿಸಿದ ಚಿಟ್ಟಾಣಿಯವರೂ ಎಲ್ಲೇ ಇದ್ದರೂ ಕುಣಿಯುವುದನ್ನು, ಪಾತ್ರ ಮಾಡುವುದನ್ನು ಬಿಡುವುದು ಸಾಧ್ಯ ಇಲ್ಲ. ಈಗ ಅಲ್ಲೆಲ್ಲೋ ಚಿಟ್ಟಾಣಿಯವರ ಸಿಡಿಲಿನ ಪ್ರವೇಶಕ್ಕೆ ದೇವತೆಗಳೂ ಯಕ್ಷರೂ ಗಂಧರ್ವರೂ ಕಿನ್ನರ ಕಿಂಪುರಷರೂ ಕಿವಿಗಡಚಿಕ್ಕುವ ಕರತಾಡನದ ಸ್ವಾಗತ ನೀಡಿರಬಹುದು”
ಇಂಗ್ಲೆಂಡಿನಿಂದ ಯೋಗೀಂದ್ರ ಮರವಂತೆ ಬರೆದ ಚಿಟ್ಟಾಣಿ ಸ್ಮರಣೆ. .

 

ಜಗತ್ತಿನಲ್ಲಿ ಪ್ರಚಲಿತ ಇರುವ ಶಾಸ್ತ್ರೀಯ, ಜಾನಪದ, ಅಥವಾ ನೃತ್ಯ, ನಾಟಕ ಹೀಗೆ ಯಾವ ಬಗೆಯ ಕಲೆಗಳನ್ನು ಗಮನದಲ್ಲಿಟ್ಟರೂ ಯಕ್ಷಗಾನಕ್ಕೆ ತನ್ನದೇ ಆದ ವಿಶೇಷತೆ ಇದೆ. ಮತ್ತೆ ಕಲೆಯ ಪ್ರಸ್ತುತಿಯ ಅಥವಾ ಪ್ರದರ್ಶನದ ನಿಟ್ಟಿನಲ್ಲಿ ಯೋಚಿಸಿದರೆ ಯಕ್ಷಗಾನಕ್ಕೆ ತನ್ನದೇಆದ ಕೆಲವು ಗುಣ ಲಕ್ಷಣಗಳಿವೆ; ಅಂತಹ ಲಕ್ಷಣಗಳಲ್ಲಿ ನನಗೆ ಅಪೂರ್ವ ಎನಿಸುವುದು ಪಾತ್ರ ಅಥವಾ ವೇಷದ ವೈಶಿಷ್ಟ್ಯಪೂರ್ಣವಾಗಿ ರಂಗಕ್ಕೆ ಪ್ರವೇಶಿಸುವ ರೀತಿ. ಪ್ರವೇಶ ಮಾತ್ರದಲ್ಲೇ ಪಾತ್ರದ ವ್ಯಕ್ತಿತ್ವದ ಪರಿಚಯ ಮಾಡಿ ಕೊಡಬಲ್ಲ ಶಕ್ತಿ ಇನ್ನೊಂದು ನೃತ್ಯ ಅಥವಾ ನಾಟಕ ಕಲೆಗೆ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಯಕ್ಷಗಾನಕ್ಕೆ ಖಂಡಿತ ಇದೆ. ಪಾತ್ರದ ಪ್ರವೇಶವೇ ಇಡೀ ರಂಗಸ್ಥಳಕ್ಕೊಂದು ಕಾವು ಕೊಡುವುದು, ಪ್ರೇಕ್ಷಕ ಸಮುದಾಯಕ್ಕೊಂದು ಮಿಂಚು ಹೊಡೆಯುವುದು ಯಕ್ಷಗಾನದಲ್ಲಿ ಸಾಧ್ಯ. ಮತ್ತೆ ಅಂತಹ ಸಾಧ್ಯತೆಯನ್ನು ಪರಿಪೂರ್ಣವಾಗಿ ಸಿದ್ಧಿಸಿಕೊಂಡ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು. ನನ್ನ ತಲೆಮಾರಿನ ಪ್ರೇಕ್ಷಕರ ಮಟ್ಟಿಗೆ ಪಾತ್ರ ಪ್ರವೇಶ ಮಾತ್ರದಲ್ಲಿ ಪುಳಕ ನೀಡುವ ಸಾಮರ್ಥ್ಯ ಇದ್ದ, ಕೆಲವೇ ಕ್ಷಣಗಳ ಪ್ರವೇಶದ ಅಭಿವ್ಯಕ್ತಿ, ಹೆಜ್ಜೆಗಾರಿಕೆ, ನಿಲುವಿನಲ್ಲಿ ನಮ್ಮ ಹೃದಯದ ಬಡಿತವನ್ನು ಒಮ್ಮೆಗೆ ಹೆಚ್ಚಿಸುತ್ತಿದ್ದ ಕಲಾವಿದರು ಚಿಟ್ಟಾಣಿಯವರೇ. ಚಿಟ್ಟಾಣಿಯವರನ್ನು ನಾವು ಕಳೆದುಕೊಳ್ಳುವುದು ಎಂದರೆ ಮಿಂಚಿನ ಸಂಚಾರದ ಪ್ರವೇಶವನ್ನು ಯಕ್ಷಗಾನ ಮತ್ತು ಅದರ ಪ್ರೇಕ್ಷಕರು ಕಳೆದುಕೊಳ್ಳುವುದು.

(ಫೋಟೋ: ದಿನೇಶ್ ಹೆಗಡೆ ಮಾನೀರ)

 

ನನ್ನ ಪೀಳಿಗೆಯ ಪ್ರೇಕ್ಷಕರು ಯಕ್ಷಗಾನದ ಅನುಪಮ ಪ್ರತಿಭಾನ್ವಿತರಾದ ಶಿವರಾಮ ಹೆಗಡೆಯವರನ್ನು, ಮೂಡ್ಕಣಿ ನಾರಾಯಣ ಹೆಗಡೆಯವರನ್ನು, ಮೂರೂರು ದೇವರು ಹೆಗಡೆಯವರನ್ನು, ಕುರಿಯ ವಿಠ್ಠಲ ಶಾಸ್ತ್ರಿಗಳನ್ನು ಕಂಡವರಲ್ಲ. ನಮ್ಮ ಕಣ್ಣಿಗೆ ಚಿಟ್ಟಾಣಿಯವರು ಆ ಎಲ್ಲ ಹಿರಿಯ ಕಲಾವಿದರ ಪಾಕವನ್ನು ತಮ್ಮ ಸ್ವಂತಿಕೆಯಲ್ಲಿ ಬೆರೆಸಿ ಉಣಿಸುತ್ತಿದ್ದರು; ಗತಕಾಲದ ಯಕ್ಷಗಾನದ ವೈಭವದ ಝಲಕ್ ಅನ್ನು ಕಟ್ಟಿ ಕೊಡುತ್ತಿದ್ದರು

 

 

“ಜ … ನ.. ಪ… ಮತ್ಸೇಶ್ವರನ…..” ಎಂದು ಹಾಡುತ್ತ ಭಾಗವತರು ಕೀಚಕ ವಧೆ ಪ್ರಸಂಗದಲ್ಲಿ ಕೀಚಕನ ಪ್ರವೇಶ ಮಾಡಿಸುತ್ತಾರೆ ಮತ್ತು ಚಿಟ್ಟಾಣಿಯವರು ಆ ಪದಕ್ಕೆ ಪ್ರವೇಶ ನೀಡುವಾಗ ಇಡೀ ಸಭೆ ರೋಮಾಂಚನಗೊಂಡು ಹಾಕುವ ಚಪ್ಪಾಳೆ ಶಿಳ್ಳೆಗಳ ಮೊರೆತದಲ್ಲಿ ಧ್ವನಿವರ್ಧಕಗಳ ಮೂಲಕ ಬರುವ ಭಾಗವತರ ಸ್ವರವೂ ಕೇಳಿಸದಿರುವ ಸಾಧ್ಯತೆಗಳೇ ಹೆಚ್ಚು. ತ್ರಿವುಡೆ ತಾಳದ ವಿಳಂಬ ಲಯದಲ್ಲಿ ಆರಂಭವಾಗುವ ಈ ಹಾಡಿಗೆ “ತಾ ಕಿಟತಕ ತರಿಕಿಟ ಕಿಟತಕ..” ಚಂಡೆ ಪೆಟ್ಟು ಬೀಳುವಾಗ ತಾಳದ ಪ್ರತಿ ಮಾತ್ರೆಗೂ ಒಂದೊಂದು ಹೆಜ್ಜೆ ಇಡುತ್ತ ಆವೇಶ ಸಹಿತ ಗತ್ತು, ಹೊಳೆಯುವ ಕಣ್ಣುಗಳು ಮತ್ತು ಸಂದರ್ಭಕ್ಕೆ ಸೂಕ್ತ ಜೀವಂತಿಕೆ ತುಂಬುವ ಮುಖ ಭಾವಗಳೊಡನೆ ನಮ್ಮ ಮುಂದೆ ತೆರೆಯೊಡೆದು ಪ್ರತ್ಯಕ್ಷ ಆಗುತ್ತಿದ್ದರು. ಅವರ ಹೆಚ್ಚಿನ ಪಾತ್ರಗಳ ಪ್ರವೇಶದಲ್ಲಿ ರಂಗಕ್ಕೆ, ಟೆಂಟಿಗೆ ವಿದ್ಯುತ್ ಸಂಚಾರ ಆಗುತ್ತಿತ್ತು.

(ಫೋಟೋ: ಜಿ.ಆರ್.ಹೆಗ್ಡೆ)

ಅದು ಭಸ್ಮಾಸುರನ ಹುಟ್ಟಿನ ಆರ್ಭಟ ಸಹಿತ ವೇಗದ ಪ್ರವೇಶ ಇರಬಹುದು, ಲಂಕಾ ದಹನದಲ್ಲಿ ಸುಂದರ ರಾವಣ ನಿದ್ದೆಯಿಂದ ಕಣ್ಣುಜ್ಜಿಕೊಳ್ಳುತ್ತ ಮೈಮುರಿಯುತ್ತ ನಿಧಾನವಾಗಿ ಎದ್ದು ಬರುವ ಸಂದರ್ಭ ಇರಬಹುದು, ಗದಾಯುದ್ಧದ ಕುರುರಾಯನ ಭಾರದ ಹೆಜ್ಜೆಯ ನಡಿಗೆ ಇರಬಹುದು, ಭೇರಿ ಹರಿದ ಭೀಕರ ಸದ್ದಿಗೆ ಬೆದರಿ ಬರುವ ಮಾಗಧ ಇರಬಹುದು ಅಥವಾ ಮಧ್ಯರಾತ್ರಿಗೆ ರಾಮ ಕೃಷ್ಣರ ನೆನಪಲ್ಲಿ ಬೆಚ್ಚುವ ಕಂಸ ಇರಬಹುದು… ಚಿಟ್ಟಾಣಿ ಅವರ ಪ್ರವೇಶ ಎಂದರೆ ಅದೊಂದು ಸೆಳೆಮಿಂಚು. ಈ ಗುಣಸಿದ್ಧಿಯನ್ನು ಅವರು ಕೆರೆಮನೆ ಶಿವರಾಮ ಹೆಗಡೆಯವರಿಂದ ಪಡೆದರು ಎಂದು ಅವರು ಹೇಳುವುದನ್ನು ಕೇಳಿದ್ದೇವೆ. ಆದರೆ ನನ್ನ ಪೀಳಿಗೆಯ ಪ್ರೇಕ್ಷಕರು ಯಕ್ಷಗಾನದ ಅನುಪಮ ಪ್ರತಿಭಾನ್ವಿತರಾದ ಶಿವರಾಮ ಹೆಗಡೆಯವರನ್ನು, ಮೂಡ್ಕಣಿ ನಾರಾಯಣ ಹೆಗಡೆಯವರನ್ನು, ಮೂರೂರು ದೇವರು ಹೆಗಡೆಯವರನ್ನು, ಕುರಿಯ ವಿಠ್ಠಲ ಶಾಸ್ತ್ರಿಗಳನ್ನು ಕಂಡವರಲ್ಲ. ನಮ್ಮ ಕಣ್ಣಿಗೆ ಚಿಟ್ಟಾಣಿಯವರು ಆ ಎಲ್ಲ ಹಿರಿಯ ಕಲಾವಿದರ ಪಾಕವನ್ನು ತಮ್ಮ ಸ್ವಂತಿಕೆಯಲ್ಲಿ ಬೆರೆಸಿ ಉಣಿಸುತ್ತಿದ್ದರು; ಗತಕಾಲದ ಯಕ್ಷಗಾನದ ವೈಭವದ ಝಲಕ್ ಅನ್ನು ಕಟ್ಟಿ ಕೊಡುತ್ತಿದ್ದರು. ಚಿಟ್ಟಾಣಿಯವರು ಇಲ್ಲದಿರುವುದು ಎಂದರೆ ನನ್ನಂತಹ ಪ್ರೇಕ್ಷಕನ ಮಟ್ಟಿಗೆ ಯಕ್ಷಗಾನದ ಪುರಾತನ ಯುಗ ಸ್ತಬ್ಧವಾದಂತೆ.

ಸುಮಾರು ಎಪ್ಪತ್ತು ವರ್ಷಗಳ ಅವರ ಸುದೀರ್ಘ ಕಲಾಯಾನದಲ್ಲಿ ಅವರ ಎಲ್ಲ ಪಾತ್ರಗಳೂ ಪ್ರೇಕ್ಷಕರ ಮೆಚ್ಚುಗೆ ಪಡೆದವೇ. ಅವೆಲ್ಲ ಪಾತ್ರಗಳಲ್ಲಿ ಕೀಚಕ ಮತ್ತು ಭಸ್ಮಾಸುರ ಅವರನ್ನು ಕೀರ್ತಿಯ ಉತ್ತುಂಗಕ್ಕೆ ಕೊಂಡೊಯ್ದ ಪಾತ್ರಗಳು ಅಥವಾ ಅವು ಚಿಟ್ಟಾಣಿಯವರ ಅಧಿಕಾರದ ಪಾತ್ರಗಳಾಗಿದ್ದವು; ಯಾವ ಚಲನಚಿತ್ರದ, ದೂರದರ್ಶನ ಧಾರಾವಾಹಿಯ ಯಾವ ಕಥೆ ಪುಸ್ತಕದ ಅಷ್ಟೇ ಯಾಕೆ ಪುರಾಣದಲ್ಲಿ ಬರೆದಿಟ್ಟ ಕೀಚಕ ಮತ್ತು ಭಸ್ಮಾಸುರರನ್ನು ನಾವು ಓದಿದರೂ ನೋಡಿದರೂ ಅವೆಲ್ಲ ಚಿಟ್ಟಾಣಿಯವರ ಕೀಚಕ, ಭಸ್ಮಾಸುರರ ಮುಂದೆ ಸೋಲುತ್ತಿದ್ದವು; ಚಿಟ್ಟಾಣಿಯವರ ಕಲ್ಪನೆಯಲ್ಲಿ ಪ್ರೇಮ, ವೀರ, ಶೃಂಗಾರ ರಸಗಳು ಅಸಾಮಾನ್ಯವಾಗಿ ಮರುಸೃಷ್ಟಿಗೊಂಡು ಪ್ರೇಕ್ಷಕರಿಗೆ ರೋಚಕ ಅನುಭವ ನೀಡುತ್ತಿದ್ದವು. ಆ ಪಾತ್ರಗಳನ್ನು ಚಿಟ್ಟಾಣಿಯವರ ನಂತರ ಮಾಡಿದವರು ಬಯಸಿದರೂ ಬಯಸದಿದ್ದರೂ ಚಿಟ್ಟಾಣಿಯವರ ವರ್ಚಸ್ಸಿನಿಂದ, ಅನುಕರಣೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯ ಆಗದಿರುವಷ್ಟು ಪ್ರಭಾವಶಾಲಿಯಾಗಿ ಆ ಎರಡು ಪಾತ್ರಗಳ ಚಿತ್ರಣ ಮಾಡುತ್ತಿದ್ದರು. ಚಿಟ್ಟಾಣಿಯವರ ಭಸ್ಮಾಸುರನ ಪಾತ್ರಕ್ಕೆ ಪ್ರೇರಣೆಯಾದವರು ಕುರಿಯ ವಿಠ್ಠಲ ಶಾಸ್ತ್ರಿಗಳು. ವಿಠ್ಠಲ ಶಾಸ್ತ್ರಿಗಳ ಭಸ್ಮಾಸುರನ ಪಾತ್ರವನ್ನು ಕಂಡು ಮರುಳಾದ ಚಿಟ್ಟಾಣಿಯವರು ಬೆನ್ನು ಬೆನ್ನಿಗೆ ಐದು ಪ್ರದರ್ಶನಗಳನ್ನು ನೋಡಿದ್ದರಂತೆ. ನಂತರ ಸ್ವಲ್ಪ ಬದಲಾವಣೆಗಳೊಡನೆ ಬಡಗಿನಲ್ಲಿ ತಮ್ಮ ಪಾತ್ರ ನಿರೂಪಿಸಿದರಂತೆ; ಆಮೇಲೆ ಚಿಟ್ಟಾಣಿಯವರ ಅಭಿನಯದ ಭಸ್ಮಾಸುರ ಯಕ್ಷಗಾನದ ದಂತಕತೆಯೇ ಆಗಿಹೋಯಿತು.

ಯಕ್ಷಗಾನದಲ್ಲಿ ಅತಿ ಎತ್ತರಕ್ಕೆ ಏರಿದ ಕಲಾವಿದರೆಲ್ಲ ತಮ್ಮ ಕುಣಿತದ ಜೊತೆಗೆ ಅಥವಾ ಕೆಲವರು ಕುಣಿತಕ್ಕಿಂತ ಹೆಚ್ಚು ಮಾತಿನ ಬಲದಿಂದ ಪಾತ್ರ ಚಿತ್ರಣ ಮಾಡುತ್ತಿದ್ದವರೇ. ಆದರೆ ಅರ್ಥದಾರಿಕೆ ತಮ್ಮ ಬಲ ಅಲ್ಲದಿರುವಾಗ ಅಪ್ರತಿಮ ಆಂಗಿಕ ಅಭಿನಯ, ಮುಖ ಭಾವ ಮತ್ತು ನರ್ತನ ಕೌಶಲ್ಯದಿಂದ ಎದುರು ನಿಂತ ಯಾವ ಕಲಾವಿದರನ್ನು ಸಪ್ಪೆ ಆಗುವಂತೆ ಮಾಡಬಲ್ಲ ಶಕ್ತಿ ಚಿಟ್ಟಾಣಿಯವರಲ್ಲಿತ್ತು. ಅವರು ಎಂಭತ್ತನೆಯ ವಯಸ್ಸಿನಲ್ಲಿ ವೇಷ ಮಾಡಿದರೂ ಬರಿಯ ಒಂದೇ ಪದ್ಯಕ್ಕೆ ಕುಣಿದರೂ ಅವರು ರಂಗದಲ್ಲಿರುವಷ್ಟು ಹೊತ್ತು ಆಕರ್ಷಣೆಯ ಕೇಂದ್ರವಾಗಿರುತ್ತಿದ್ದರು; ಇಳಿ ವಯಸ್ಸಿನಲ್ಲೂ ಅವರ ಉತ್ಸಾಹ ಪ್ರೇಕ್ಷಕರಲ್ಲಿ ಭಾವೋದ್ರೇಕವನ್ನು ಹುಟ್ಟಿಸುತ್ತಿತ್ತು.

(ಫೋಟೋ:ದಿಗ್ವಾಸ್ ಬೆಳ್ಳೆಮನೆ)

ಚಿಟ್ಟಾಣಿಯವರ ಪಾತ್ರ ನಿರೂಪಣೆಗೆ, ಪಾತ್ರದ ಒಳಗಿನ ಉತ್ಸಾಹಕ್ಕೆ ಅಂದಿನ ಪ್ರೇಕ್ಷಕರು ಯಾರು ಮತ್ತು ಎಷ್ಟು ಎನ್ನುವುದು ಬೇಕಾಗುತ್ತಿರಲಿಲ್ಲ. ಎದುರಿಗೆ ಹತ್ತು ಜನರಿದ್ದರೂ ಐದು ನೂರಿದ್ದರೂ ಚಿಟ್ಟಾಣಿಯವರ ಪ್ರವೇಶ ಮತ್ತು ನಂತರದ ಉಮೇದು ಯಾವಾಗಲೂ ಒಂದೇ ತರ ಇರುತ್ತಿತ್ತು. ಯಕ್ಷಗಾನವನ್ನು ರಂಗಸ್ಥಳವನ್ನು ಅತ್ಯಂತ ಪ್ರೀತಿಸಿದ ಕಲಾವಿದರವರು. ಆ ಕಾರಣಕ್ಕೆ ಅವರಿಗೆ ನಿವೃತ್ತಿ ಅಂತಲೇ ಇರಲಿಲ್ಲವೇನೋ. ಕೊನೆ ಉಸಿರಿರುವವರೆಗೂ ತಾನು ಪಾತ್ರ ಮಾಡುತ್ತಲೇ ಬದುಕಬೇಕೆಂದು ಅವರು ಬಯಸಿದ್ದರು. ಯಕ್ಷಗಾನದಿಂದ ದೂರ ಇರುವುದು ಅವರಿಗೆ ಸಾಧ್ಯವೇ ಇರಲಿಲ್ಲ. ತಿರುಗಾಟದ ಮೇಳ ಬಿಟ್ಟು ಅವರು ಮನೆಯಲ್ಲಿರುವಾಗ ಫೋನ್ ಸದ್ದು ಮಾಡಿದರೆ ಬಹುಶಃ ಒಂದು ಆಟದ ಬುಕಿಂಗ್ ಬಂದಿರಬೇಕು ಎಂದು ಖುಷಿ ಪಡುತ್ತಿದ್ದರು. ಯಕ್ಷಗಾನವನ್ನು ಇಷ್ಟು ತೀವ್ರವಾಗಿ ಪ್ರೀತಿಸಿದ ಕಲಾವಿದರು ಬಹುಷ ತೀರಾ ಕಡಿಮೆ ಇರಬಹುದು ಅಥವಾ ಇರಲಿಕ್ಕಿಲ್ಲ.

ಚಿಟ್ಟಾಣಿಯವರ ಪಾತ್ರ ನಿರೂಪಣೆ ಅಲ್ಲದೆ ಯಕ್ಷಗಾನವನ್ನು ಅವರು ಹಚ್ಚಿಕೊಂಡ ರೀತಿಯೂ ಅವರಿಗೆ ಯಕ್ಷಗಾನ ಪ್ರೇಕ್ಷಕರಿಂದ ಗಾಢವಾದ ಪ್ರೀತಿ ಆದರ ದೊರೆಯಲು ಕಾರಣ ಆಯಿತು. ಅವರು ಅಮೃತೇಶ್ವರಿ ಮೇಳದಲ್ಲಿದ್ದ ಕಾಲದ ಸುಮಾರು ಹದಿನಾಲ್ಕು ವರ್ಷಗಳು ಕುಂದಾಪುರ ಕೋಟ ಸಾಲಿಗ್ರಾಮ ಉಡುಪಿಯ ಮನೆ ಮನೆಯ ಪ್ರೇಕ್ಷಕರು ಚಿಟ್ಟಾಣಿಯವರ ಮೋಡಿಗೆ ವಶವಾಗಿದ್ದರು; ಊರೂರಿನಲ್ಲಿ ಮೇಳ ಮೇಳಗಳಲ್ಲಿ ಮರಿ ಚಿಟ್ಟಾಣಿಗಳು ತಯಾರಾಗುತ್ತಿದ್ದರು; ಯಕ್ಷಗಾನ ಇತಿಹಾಸದಲ್ಲಿ ಗಾಢ ಪ್ರಭಾವನ್ನೂ, ಬೃಹತ್ ಅಲೆಗಳನ್ನೂ ಸೃಷ್ಟಿಸಿದ ಕಲಾವಿದರ ಸಾಲಿಗೆ ಚಿಟ್ಟಾಣಿಯವರೂ ಸೇರಿಹೋದರು. ಮತ್ತೆ ಅಂತಹ ಯಾವುದೊ ಒಂದು ಅಲೆಯಲ್ಲೇ ತಾವೂ ತೇಲುತ್ತ ತೇಲುತ್ತ ನಮ್ಮ ಕಣ್ಣಳತೆಯಿಂದ ದೂರಸರಿದರು.

(ಫೋಟೋ: ದಿನೇಶ್ ಹೆಗಡೆ ಮಾನೀರ)

ಚಿಟ್ಟಾಣಿಯವರ ಕಲ್ಪನೆಯಲ್ಲಿ ಪ್ರೇಮ, ವೀರ, ಶೃಂಗಾರ ರಸಗಳು ಅಸಾಮಾನ್ಯವಾಗಿ ಮರುಸೃಷ್ಟಿಗೊಂಡು ಪ್ರೇಕ್ಷಕರಿಗೆ ರೋಚಕ ಅನುಭವ ನೀಡುತ್ತಿದ್ದವು. ಆ ಪಾತ್ರಗಳನ್ನು ಚಿಟ್ಟಾಣಿಯವರ ನಂತರ ಮಾಡಿದವರು ಬಯಸಿದರೂ ಬಯಸದಿದ್ದರೂ ಚಿಟ್ಟಾಣಿಯವರ ವರ್ಚಸ್ಸಿನಿಂದ, ಅನುಕರಣೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯ ಆಗದಿರುವಷ್ಟು ಪ್ರಭಾವಶಾಲಿಯಾಗಿ ಆ ಎರಡು ಪಾತ್ರಗಳ ಚಿತ್ರಣ ಮಾಡುತ್ತಿದ್ದರು

ತಮ್ಮನ್ನು ಪ್ರೀತಿಸಿದವರನ್ನು, ಆದರಿಸಿದವರನ್ನು, ಅನುಕರಿಸಿದವರನ್ನು ಅನುಸರಿಸಿದವರನ್ನೆಲ್ಲ ಬಿಟ್ಟು ಚಿಟ್ಟಾಣಿಯವರು ಈಗ ನೆನಪಾಗಿ ನಿಂತಿದ್ದಾರೆ; ನಾವು ಕಾಣದಲ್ಲೆಲ್ಲೋ ಕರಗಿ ಹೋಗಿದ್ದಾರೆ.ಇನ್ಯಾವುದೋ ಲೋಕದಲ್ಲಿ ಕುರಿಯದವರು, ಕೆರೆಮನೆಯವರು, ಕಡತೋಕರು ಉಪ್ಪೂರರು ನಾವುಡರನ್ನು ಸೇರಿಕೊಂಡಿದ್ದಾರೆ. ಯಕ್ಷಗಾನವನ್ನು ಪ್ರತಿ ದಿನವೂ ಪ್ರತಿಕ್ಷಣವೂ ಪ್ರೀತಿಸಿದ ಚಿಟ್ಟಾಣಿಯವರೂ ಎಲ್ಲೇ ಇದ್ದರೂ ಕುಣಿಯುವುದನ್ನು, ಪಾತ್ರ ಮಾಡುವುದನ್ನು ಬಿಡುವುದು ಸಾಧ್ಯ ಇಲ್ಲ. ಈಗ ಅಲ್ಲೆಲ್ಲೋ ಉಪ್ಪೂರರು “ಜ … ನ.. ಪ … ಮತ್ಸೇಶ್ವರನ…..” ಪದ ಹಾಡುತ್ತಿರಬಹುದು, ಕತ್ತಿಯನ್ನು ಝಳಪಿಸುತ್ತಾ ರಂಗಸ್ಥಳಕ್ಕೆ ಕೀಚಕನ ಪ್ರವೇಶ ಆಗಿರಬಹುದು, ಚಿಟ್ಟಾಣಿಯವರ ಸಿಡಿಲಿನ ಪ್ರವೇಶಕ್ಕೆ ದೇವತೆಗಳೂ ಯಕ್ಷರೂ ಗಂಧರ್ವರೂ ಕಿನ್ನರ ಕಿಂಪುರಷರೂ ಕಿವಿಗಡಚಿಕ್ಕುವ ಕರತಾಡನದ ಸ್ವಾಗತ ನೀಡಿರಬಹುದು; ನಾವು ಮತ್ತು ಯಕ್ಷಗಾನ ಜೊತೆಜೊತೆಗೆ ಕಳೆದುಕೊಂಡ ಚಿಟ್ಟಾಣಿಯವರ ಮಿಂಚಿನ ಪ್ರವೇಶ ಇನ್ನೆಲ್ಲೋ ಇನ್ಯಾರನ್ನೋ ಮೈಮರೆಸಿರಬಹುದು.

ಚಿಟ್ಟಾಣಿ ರಾಮಚಂದ್ರ ಹೆಗಡೆ: ಒಂದು ಸಾಕ್ಷ್ಯಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ