ಯುದ್ಧದ ಸಮಯದಲ್ಲಿ ಸೌಂದರ್ಯಕ್ಕಾಗಿ ಹಸಿದು ಜಪಾನಿನ ಸಾಂಪ್ರದಾಯಿಕ ಕಲೆಗಳತ್ತ ನಡೆದಿದ್ದೆ. ಬಹುಶಃ ಸುತ್ತಲಿನ ವಾಸ್ತವದಿಂದ ಓಡಿಹೋಗುವ ಇಚ್ಛೆಯಿಂದ ಹೀಗೆ ಮಾಡಿರಬಹುದು. ಆದರೆ ಪಲಾಯನದ ಉದ್ದೇಶವು ಮಹತ್ವವಾದದ್ದನ್ನು ನೀಡಿತು. ಮೊಟ್ಟಮೊದಲ ಬಾರಿಗೆ ನೊಹ ನಾಟಕವನ್ನು ನೋಡಲು ಹೋದೆ. ಹದಿನಾಲ್ಕನೆಯ ಶತಮಾನದ ನೊಹ ನಾಟಕಕಾರ ಜಿಯಾಮಿಯು ಬರೆದಿದ್ದ ಸಿದ್ಧಾಂತಗಳನ್ನು ಓದಿದೆ. ಜಿಯಾಮಿಯ ಬಗ್ಗೆ ಇದ್ದ ಪುಸ್ತಕಗಳನ್ನು ಕೂಡ ಓದಿಕೊಂಡೆ. ನೊಹ ಪ್ರಕಾರದ ಅನನ್ಯತೆ ಅದರ ಅಭಿವ್ಯಕ್ತಿ ರೀತಿಯು ಸಿನಿಮಾಕ್ಕಿಂತ ಬಹಳ ಭಿನ್ನವಾಗಿತ್ತು. ಆದ್ದರಿಂದ ಪ್ರಕಾರವು ಬಹಳ ಇಷ್ಟವಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ನೊಹ ಪ್ರಕಾರದ ಬಗ್ಗೆ ತಿಳಿದುಕೊಂಡೆ.
ಹೇಮಾ. ಎಸ್ ಅನುವಾದಿಸಿದ ಅಕಿರ ಕುರೊಸಾವನ ಆತ್ಮಕತೆಯ ಪುಟ

 

ಯುದ್ಧದ ನಂತರ ನನ್ನೆಲ್ಲ ಕೆಲಸಗಳು ಸುಲಲಿತವಾಗಿ ನಡೆಯಲಾರಂಭಿಸಿದವು. ಅವುಗಳ ಬಗ್ಗೆ ಬರೆಯುವುದಕ್ಕೆ ಮುನ್ನ ಯುದ್ಧದ ಸಮಯದಲ್ಲಿ ನಾನು ಹೇಗಿದ್ದೆ ಎಂದು ಹಿಂತಿರುಗಿ ನೋಡಿಕೊಳ್ಳಬಯಸುತ್ತೇನೆ. ಜಪಾನಿನ ಮಿಲಿಟರಿಯಿಸಂಗೆ ಯಾವುದೇ ರೀತಿಯಲ್ಲೂ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ನನಗಷ್ಟು ಧೈರ್ಯವಿರಲಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಅವಶ್ಯಕತೆಯಿದ್ದಾಗ ಕೃತಜ್ಞನಾಗಿರುತ್ತ ಉಳಿದಂತೆ ಖಂಡನೆಯಿಂದ ತಪ್ಪಿಸಿಕೊಳ್ಳುತ್ತಿದ್ದೆ. ಹೀಗೆ ನಡೆದುಕೊಂಡ ಬಗ್ಗೆ ನಾಚಿಕೆ ಎನಿಸಿದರೂ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.

ನನ್ನ ಈ ನಡವಳಿಕೆಯಿಂದಲೇ ಯುದ್ಧದ ಸಮಯದಲ್ಲಿ ಏನಾಯಿತು ಎನ್ನುವುದನ್ನು ಸ್ವಪ್ರೇರಣೆಯಿಂದ ಪ್ರಾಮಾಣಿಕವಾಗಿ ಹೇಳಲಾರೆ, ವಿಮರ್ಶಿಸಲಾರೆ. ಯುದ್ಧಾನಂತರ ದಕ್ಕಿದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ನಾನು ಹೋರಾಡಿಗಳಿಸಿರಲಿಲ್ಲ. ನನ್ನನ್ನು ಮೀರಿದ ಶಕ್ತಿಗಳು ಅವುಗಳನ್ನು ನನಗೆ ನೀಡಿದ್ದವು. ಆದ್ದರಿಂದಲೇ ಅವುಗಳನ್ನು ಶ್ರದ್ಧೆ ಮತ್ತು ವಿನಯದಿಂದ ಕಲಿತು ನನ್ನದಾಗಿಸಿಕೊಳ್ಳಬೇಕೆನಿಸಿತು. ಯದ್ಧಾನಂತರದಲ್ಲಿ ಹಲವು ಜಪಾನಿಯರು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳ ಅರ್ಥ ತಿಳಿಯದೆ ಕೇವಲ ಘೋಷಣೆ ಕೂಗಿದರು.

ಆಗಸ್ಟ್ 15, 1945ರಂದು ರೇಡಿಯೊದಲ್ಲಿ ಆಗಲಿರುವ ಪ್ರಕಟಣೆಯನ್ನು ಕೇಳಲು ಎಲ್ಲರಂತೆ ನನಗೂ ಸ್ಟುಡಿಯೋಗೆ ಬರುವಂತೆ ಹೇಳಿದರು. ಅಂದು ಚಕ್ರವರ್ತಿಗಳು ಸ್ವತಃ ರೇಡಿಯೊದಲ್ಲಿ ಮಾತಾಡಲಿದ್ದರು. ಅಂದು ರಸ್ತೆಯುದ್ದಕ್ಕೂ ನಡೆಯುತ್ತ ಕಂಡ ದೃಶ್ಯಗಳನ್ನು ಮರೆಯುವುದು ಸಾಧ್ಯವೇ ಇಲ್ಲ. ಸೋಶಿಗಯಾದಿಂದ ಕಿನುಟದಲ್ಲಿದ್ದ ಸ್ಟುಡಿಯೊಕ್ಕೆ ಹೋಗುವ ಹಾದಿಯಲ್ಲಿದ್ದ ಮಾರುಕಟ್ಟೆ ಬೀದಿ ನೂರು ಮಿಲಿಯನ್ ಮಂದಿ ಗೌರವದ ಸಾವಿಗೆ ಸಿದ್ಧವಾದಂತಿತ್ತು. ಇಡೀ ವಾತಾವರಣದಲ್ಲಿ ಹೆದರಿಕೆ, ಆತಂಕವಿತ್ತು. ವ್ಯಾಪಾರಿಗಳು ತಮ್ಮ ಒರೆಗಳಿಂದ ಕತ್ತಿಗಳನ್ನು ಸೆಳೆದು ಅದರ ಅಲಗನ್ನೇ ನೋಡುತ್ತಿದ್ದರು.

ಚಕ್ರವರ್ತಿಗಳ ಪ್ರಕಟಣೆಯನ್ನು ಕೇಳಿ ಮನೆಗೆ ಹಿಂತಿರುಗುವ ಹಾದಿಯಲ್ಲಿ ಇಡೀ ದೃಶ್ಯ ಬದಲಾಗಿತ್ತು. ಮಾರುಕಟ್ಟೆಯ ಹಾದಿಯಲ್ಲಿನ ಜನರು ಉಲ್ಲಾಸದ ಮೊಗದೊಂದಿಗೆ ಮಾರನೆಯ ದಿನ ಹಬ್ಬಕ್ಕೆ ತಯಾರಿ ಮಾಡುವವರಂತೆ ಹುಮ್ಮಸ್ಸಿನಿಂದ ಓಡಾಡುತ್ತಿದ್ದರು. ಇದು ಜಪಾನಿಯರ ಹೊಂದಾಣಿಕಾ ಸಾಮರ್ಥ್ಯವನ್ನು ತೋರುತ್ತದೆಯೋ ಅಥವ ಅಸಮರ್ಥತೆಯನ್ನೋ ತಿಳಿಯದು. ಜಪಾನಿಯರ ವ್ಯಕ್ತಿತ್ವದಲ್ಲಿ ಇವೆರೆಡೂ ಇರುವುದನ್ನು ಗಮನಿಸಿದ್ದೇನೆ. ನನ್ನ ವ್ಯಕ್ತಿತ್ವದಲ್ಲೂ ಇವೆರೆಡೂ ಇವೆ.

ಒಂದು ವೇಳೆ ಚಕ್ರವರ್ತಿಯು ಜಪಾನಿಯರಿಗೆ ತಮ್ಮ ಖಡ್ಗಗಳನ್ನು ತ್ಯಜಿಸಲು ಹೇಳುವ ಬದಲು ನೂರು ಮಿಲಿಯನ್ ಮಂದಿಯ ಗೌರವದ ಸಾವಿಗೆ ಕರೆಕೊಟ್ಟಿದ್ದರೆ ಅವರು ಆ ಮಾತಿನಂತೆ ನಡೆದುಕೊಂಡು ಸಾಯುತ್ತಿದ್ದರು. ಬಹುಶಃ ನಾನು ಕೂಡ ಹಾಗೆಯೇ ಮಾಡುತ್ತಿದ್ದೆ. ಜಪಾನಿಯರು ಆತ್ಮಸಮರ್ಥನೆಯನ್ನು ಅನೈತಿಕವೆಂದು ಆತ್ಮತ್ಯಾಗವೇ ಅತ್ಯುತ್ತಮವೆಂದು ತಿಳಿದಿದ್ದಾರೆ. ನಾವೆಲ್ಲರೂ ಈ ಬೋಧನೆಗೆ ಒಗ್ಗಿಕೊಂಡುಬಿಟ್ಟಿದ್ದೇವೆ. ಎಂದೂ ಇದನ್ನು ಪ್ರಶ್ನಿಸಬೇಕೆಂದು ಕೂಡ ಯೋಚಿಸಿಲ್ಲ.

ಸಕಾರಾತ್ಮಕವಾಗಿ ತನ್ನತನವನ್ನು ಕೊಂದುಕೊಳ್ಳದೆ ಯಾವುದೇ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸಾಧ್ಯವಿಲ್ಲ ಎನ್ನಿಸಿತು. ಯುದ್ಧಾನಂತರದ ನನ್ನ ಮೊದಲ ಚಿತ್ರ ವಾಗ ಸೀಶುನ್ ನಿ ಕುಯಿ ನಾಶಿ (ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್) ನ ವಸ್ತುವೇ ತನ್ನತನದ ಸಮಸ್ಯೆ.

ಅದರ ಬಗ್ಗೆ ಹೇಳುವುದಕ್ಕೆ ಮುಂಚೆ ಯುದ್ಧದ ಸಮಯದಲ್ಲಿ ನಾನು ಹೇಗಿದ್ದೆ ಎನ್ನುವುದನ್ನು ಇನ್ನೂ ಸ್ವಲ್ಪ ವಿವರವಾಗಿ ಹಂಚಿಕೊಳ್ಳುತ್ತೇನೆ. ಯುದ್ಧದ ಸಮಯದಲ್ಲಿ ನಾವೆಲ್ಲ ಮೂಕರಾಗಿದ್ದೆವು. ನಾವೇನೂ ಮಾತಾಡುವಂತಿರಲಿಲ್ಲ ಅಥವ ಮಾಡುವಂತಿರಲಿಲ್ಲ. ಮಿಲಿಟರಿ ಸರ್ಕಾರ ನಮಗೆ ಏನು ಹೇಳಿಕೊಟ್ಟಿತೋ ಅದನ್ನು ಮಾತ್ರ ಗಿಣಿಗಳಂತೆ ಹೇಳಬೇಕಿತ್ತು. ನಮ್ಮನ್ನು ಅಭಿವ್ಯಕ್ತಿಸಿಕೊಳ್ಳಲು ಯಾವುದೇ ಸಾಮಾಜಿಕ ಸಮಸ್ಯೆಯನ್ನು ಮುಟ್ಟದೆ ನಮ್ಮದೇ ದಾರಿಯನ್ನು ಹುಡುಕಿಕೊಳ್ಳಬೇಕಿತ್ತು. ಆದ್ದರಿಂದಲೇ ಹಾಯ್ಕು ಕಾವ್ಯ ಯುದ್ಧದ ಸಮಯದಲ್ಲಿ ಜನಪ್ರಿಯವಾಯಿತು.

ಆಧುನಿಕ ಹಾಯ್ಕು ಕವಿ ಟಕಹಾಮಾ ಕ್ಯೋಶಿ ಮುನ್ನಲೆಗೆ ತಂದ “ಫ್ಲವರ್ಸ್, ಬರ್ಡ್ಸ್ ಅಂಡ್ ಸಜೆಶನ್ ಇನ್ ಪೊಯೆಟ್ರಿ” ಎನ್ನುವ ಸಿದ್ಧಾಂತ ಚೊಕ್ಕವಾಗಿ ಹೇಳಬೇಕೆಂದರೆ ಸೆನ್ಸಾರ್ ನವರಿಂದ ತಪ್ಪಿಸಿಕೊಳ್ಳುವ ವಿಧಾನವಾಗಿತ್ತು. ತೊಹೊ ಸ್ಟುಡಿಯೋದಲ್ಲಿ ನಾವು ಹಾಯ್ಕು ಕ್ಲಬ್ ಕೂಡ ಹೊಂದಿದ್ದೆವು. ಟೊಕಿಯೊದ ಹೊರಗಿನ ಬುದ್ಧ ಮಂದಿರದಲ್ಲಿ ಹೊಸ ಪದ್ಯಗಳನ್ನು ಹೊಸೆಯಲು ಆಗಾಗ ಸೇರುತ್ತಿದ್ದೆವು. ಇದರ ಉದ್ದೇಶ ಕೇವಲ ಹಾಯ್ಕು ಬರೆಯುವ ಸಂತೋಷವನ್ನು ಪಡೆಯುವುದಷ್ಟೇ ಆಗಿರಲಿಲ್ಲ. ಟೊಕಿಯೊದಿಂದ ಹೊರಗೆ ಸ್ವಲ್ಪವಾದರೂ ತಿನ್ನಲು ಆಹಾರ ಸಿಗುವ ನಂಬಿಕೆಯಿತ್ತು.

ಹಸಿದ ಹೊಟ್ಟೆಯೊಂದಿಗೆ ಕೇವಲ ಭಾವನೆಯನ್ನಷ್ಟೇ ಇಟ್ಟುಕೊಂಡು ಎಷ್ಟೇ ತಲೆಚಚ್ಚಿಕೊಂಡರು ಹಾಯ್ಕು ಬರೆಯುವುದು ಸಾಧ್ಯವಿರಲಿಲ್ಲ. ನಿಮ್ಮಿಡೀ ಸಾಮರ್ಥ್ಯ ಮತ್ತು ಚೈತನ್ಯವನ್ನು ಧಾರೆಯೆರೆಯದೆ ನೀವೇನೂ ಮಾಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ನಾನು ಕೂಡ ಹಾಯ್ಕು ಬರೆದೆ. ಅವು ಯಾವುವೂ ಇಲ್ಲಿ ಉಲ್ಲೇಖಿಸಲು ಅರ್ಹವಾದುದಲ್ಲ. ಅವೆಲ್ಲವೂ ತೆಳುವಾದ ರಚನೆಗಳು.

ಚಕ್ರವರ್ತಿಗಳ ಪ್ರಕಟಣೆಯನ್ನು ಕೇಳಿ ಮನೆಗೆ ಹಿಂತಿರುಗುವ ಹಾದಿಯಲ್ಲಿ ಇಡೀ ದೃಶ್ಯ ಬದಲಾಗಿತ್ತು. ಮಾರುಕಟ್ಟೆಯ ಹಾದಿಯಲ್ಲಿನ ಜನರು ಉಲ್ಲಾಸದ ಮೊಗದೊಂದಿಗೆ ಮಾರನೆಯ ದಿನ ಹಬ್ಬಕ್ಕೆ ತಯಾರಿ ಮಾಡುವವರಂತೆ ಹುಮ್ಮಸ್ಸಿನಿಂದ ಓಡಾಡುತ್ತಿದ್ದರು. ಇದು ಜಪಾನಿಯರ ಹೊಂದಾಣಿಕಾ ಸಾಮರ್ಥ್ಯವನ್ನು ತೋರುತ್ತದೆಯೋ ಅಥವ ಅಸಮರ್ಥತೆಯನ್ನೋ ತಿಳಿಯದು.

ಇದೇ ಸಮಯದಲ್ಲಿ ಟಕಹಾಮಾ ಕ್ಯೋಶಿಯ ಕಾವ್ಯ ಸಿದ್ಧಾಂತಗಳ ಪುಸ್ತಕದಲ್ಲಿ ಈ ಹಾಯ್ಕುವನ್ನು ನೋಡಿದೆ. ಅದರ ಹೆಸರು “ಜಲಪಾತ”

ಪರ್ವತದ ನೆತ್ತಿಯಲ್ಲಿ
ನೀರು ಕಾಣಿಸಿತು
ಉರುಳಿತು.

ಮೊದಲ ಸಲ ಇದನ್ನು ಓದಿದಾಗ ರೋಮಾಂಚನವಾಯಿತು. ಇದೊಬ್ಬ ಹವ್ಯಾಸಿ ಬರಹಗಾರ ಬರೆದಿದ್ದು. ಇದರ ಸರಳವಾದ ನೇರ ಭಾವಾಭಿವ್ಯಕ್ತಿ ಹಾಗೂ ದೃಷ್ಟಿಕೋನ ಮನಸೆಳೆಯಿತು. ಬರಿ ಪದಗಳನ್ನು ಪೋಣಿಸಿದ ಸುತ್ತಿಬಳಸಿದ ನನ್ನ ಸ್ವರಚಿತ ಕವನಗಳ ಕಡೆಗಿನ ಆಸಕ್ತಿ ಬತ್ತಿಹೋಯಿತು. ಜೊತೆಗೆ ನನ್ನ ಪ್ರತಿಭೆ ಹಾಗೂ ತಿಳುವಳಿಕೆಯ ಮಿತಿ ಅರಿವಾಗಿ ನಾಚಿಕೆಯಾಯಿತು. ಬಹಳ ವಿಷಯಗಳ ಕುರಿತು ಯೋಚಿಸಿರಬಹುದು, ಅರ್ಥಮಾಡಿಕೊಂಡಿರಬಹುದು ಆದರೂ ಏನೂ ತಿಳಿದುಕೊಂಡಿರಲಿಲ್ಲ. ಸಾಂಪ್ರದಾಯಿಕ ಜಪಾನಿ ಸಂಸ್ಕೃತಿಯನ್ನು ಅಧ್ಯಯನ ಮಾಡಲು ನಿರ್ಧರಿಸಿದೆ. ಅಲ್ಲಿಯವರೆಗೂ ಕುಂಬಾರಿಕೆ ಮತ್ತು ಪಿಂಗಾಣಿಯ ಕುರಿತು ನನಗೇನೂ ತಿಳಿದಿರಲಿಲ್ಲ. ಜಪಾನಿನ ಇತರ ಗುಡಿಕೈಗಾರಿಕೆ ಕಲೆಗಳ ಕುರಿತ ನನ್ನ ತಿಳುವಳಿಕೆ ಮೇಲ್ಪದರದ್ದಾಗಿತ್ತು. ಯಾವುದಾದರೂ ಕಲೆಯನ್ನು ಸೌಂದರ್ಯಪ್ರಜ್ಞೆಯೊಂದಿಗೆ ಪ್ರಶಂಸಿಸಬಲ್ಲೆನಾಗಿದ್ದರೆ ಅದು ಚಿತ್ರಕಲೆ ಮಾತ್ರವಾಗಿತ್ತು. ಪ್ರದರ್ಶನ ಕಲೆಗಳಲ್ಲಿ ಜಪಾನಿನ ವಿಶಿಷ್ಟ ನಾಟಕ ರೂಪ ನೊಹ್ ಕೂಡ ನೋಡಿರಲಿಲ್ಲ. ಪುರಾತನ ಜಪಾನಿನ ಕಲೆ ಸಂಸ್ಕೃತಿಗಳ ಕುರಿತು ತಿಳಿದಿದ್ದ ನನ್ನ ಸ್ನೇಹಿತನಲ್ಲಿಗೆ ಹೋಗಿ ಕಾವ್ಯ ಕುರಿತು ಹೇಳಿಕೊಡುವಂತೆ ಕೇಳಿದೆ.

ನನ್ನ ಈ ಸ್ನೇಹಿತನ ಕುತುಹೂಲಗಳು, ಆಸಕ್ತಿಯ ಕಡೆಗೆ ಅದೇಕೋ ಗೊತ್ತಿಲ್ಲ ನನ್ನೊಳಗೊಂದು ತಿರಸ್ಕಾರವಿತ್ತು. ಅವನು ನೀಡುತ್ತಿದ್ದ ಸೂಚನೆಗಳನ್ನು ಕೇಳುತ್ತಾ ಕೇಳುತ್ತಾ ಕ್ರಮೇಣ ಎಲ್ಲವನ್ನೂ “ಬರೀ ಕುತೂಹಲಕ್ಕಾಗಿ ಹುಟ್ಟಿದ ಆಸಕ್ತಿ” ಎಂದು ನಿರಾಕರಿಸಿಬಿಡುವುದು ಸರಿಯಲ್ಲ ಅನ್ನಿಸಿತು. ಪುರಾತನ ಎನ್ನುವುದರಲ್ಲೂ ಉಳಿದ ಕ್ಷೇತ್ರಗಳಲ್ಲಿರುವಂತೆ ಗಟ್ಟಿ ಮತ್ತು ಜೊಳ್ಳು ಕಾಳುಗಳಿವೆ. ಜಪಾನಿ ಕಲೆ ಮತ್ತು ಸಂಸ್ಕೃತಿಗಳನ್ನು ರಸಿಕತೆಯಿಂದ ಆಸ್ವಾದಿಸುವವರಲ್ಲಿ ತೇಲುಮಾತಿನ ಮಲ್ಲರಿರುವಂತೆ ಘನವಿದ್ವಾಂಸರು ಇದ್ದಾರೆ. ಆಯಾ ಕಾಲದ ಚೈತನ್ಯ ಆ ಕಾಲದ ಜನರ ಜೀವನಶೈಲಿ ಎರಡೂ ಒಂದೇ ಮೂಲದಿಂದ ಹೊಮ್ಮಿರುತ್ತದೆ. ನನ್ನ ಸ್ನೇಹಿತ ಪಿಂಗಾಣಿ ಕಲೆ ಕುರಿತು ಹೇಳಿಕೊಡುತ್ತಿದ್ದಂತೆ ನಾನು ಕಲಿಯಬೇಕಿರುವ ಸಂಗತಿಗಳು ಅನಂತವಾಗಿವೆ ಎನ್ನುವುದು ಅರಿವಾಯಿತು.

ಯುದ್ಧದ ಸಮಯದಲ್ಲಿ ಸೌಂದರ್ಯಕ್ಕಾಗಿ ಹಸಿದು ಜಪಾನಿನ ಸಾಂಪ್ರದಾಯಿಕ ಕಲೆಗಳತ್ತ ನಡೆದಿದ್ದೆ. ಬಹುಶಃ ಸುತ್ತಲಿನ ವಾಸ್ತವದಿಂದ ಓಡಿಹೋಗುವ ಇಚ್ಛೆಯಿಂದ ಹೀಗೆ ಮಾಡಿರಬಹುದು. ಆದರೆ ಈ ಪಲಾಯನದ ಉದ್ದೇಶವು ಮಹತ್ವವಾದದ್ದನ್ನು ನೀಡಿತು. ಮೊಟ್ಟಮೊದಲ ಬಾರಿಗೆ ನೊಹ ನಾಟಕವನ್ನು ನೋಡಲು ಹೋದೆ. ಹದಿನಾಲ್ಕನೆಯ ಶತಮಾನದ ನೊಹ ನಾಟಕಕಾರ ಜಿಯಾಮಿಯು ಬರೆದಿದ್ದ ಸಿದ್ಧಾಂತಗಳನ್ನು ಓದಿದೆ. ಜಿಯಾಮಿಯ ಬಗ್ಗೆ ಇದ್ದ ಪುಸ್ತಕಗಳನ್ನು ಕೂಡ ಓದಿಕೊಂಡೆ.

ನೊಹ ಪ್ರಕಾರದ ಅನನ್ಯತೆ ಅದರ ಅಭಿವ್ಯಕ್ತಿ ರೀತಿಯು ಸಿನಿಮಾಕ್ಕಿಂತ ಬಹಳ ಭಿನ್ನವಾಗಿತ್ತು. ಆದ್ದರಿಂದ ಈ ಪ್ರಕಾರವು ಬಹಳ ಇಷ್ಟವಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ನೊಹ ಪ್ರಕಾರದ ಬಗ್ಗೆ ತಿಳಿದುಕೊಂಡೆ. ಈ ಕಲೆಯ ದೊಡ್ಡ ಕಲಾವಿದರಾದ – ಕಿಟಾ ರೊಪ್ಪಿತಾ, ಉಮೆವಾಕಾ ಮಾಂಜಾಬುರೊ ಮತ್ತು ಸಕುರಾಮಾ ಕಿಂಟಾರೊ ಇವರೆಲ್ಲರ ರಂಗಪ್ರದರ್ಶನಗಳನ್ನು ನೋಡಿದೆ.

ಇವರೆಲ್ಲರ ನಾಟಕಗಳಲ್ಲಿ ನಾನೆಂದಿಗೂ ಮರೆಯಲಾಗದ ನಾಟಕವೆಂದರೆ ಮಂಜಾಬುರೊನ ಹಾನ್ ಜೊ (ದಿ ಲೇಡಿ ಹಾನ್). ಹೊರಗಡೆ ಗುಡುಗು ಸಹಿತವಾಗಿ ಧಾರಾಕಾರ ಮಳೆ ಸುರಿಯುತ್ತಿತ್ತು. ಆದರೆ ರಂಗದ ಮೇಲಿನ ಆತನ ನಟನೆಯನ್ನು ನೋಡುತ್ತಿದ್ದಾಗ ಹೊರಗಿನ ವಾತಾವರಣದ ಯಾವ ಸದ್ದುಗಳು ನನಗೆ ಕೇಳಿಸಲಿಲ್ಲ. ಆತ ರಂಗದ ಮೇಲೆ ಬಂದು ಜೊ ಪಾತ್ರ ಪರಿಚಯದ ನೃತ್ಯ ಶುರುಮಾಡುತ್ತಿದ್ದಂತೆ ಸಂಜೆಯ ಸೂರ್ಯ ಅವನಲ್ಲಿ ಪ್ರತಿಫಲಿಸಿದಂತಾಯಿತು. “ಓಹ್ ಚಂದ್ರಕಾಂತಿ ಹೂವರಳಿತು” ಎಂದುಕೊಂಡೆ. ಅದರ ಸೌಂದರ್ಯದಲ್ಲಿ ತೇಲಿಹೋದೆ. ದಿ ಟೇಲ್ ಆಫ್ ಗೆಂಜಿಯ ಚಂದ್ರಕಾಂತಿ ಹೂವಿನ ಅಧ್ಯಾಯದಲ್ಲಿನ ವಿಷಣ್ಣತೆಯ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ಆಸ್ವಾದಿಸಿದೆ.

ಜಪಾನಿನವರಲ್ಲಿ ಅಪರೂಪದ ಪ್ರತಿಭೆ ಇದೆ. ಯುದ್ಧದ ನಡುವೆ ಮಿಲಿಟರಿಯವರ ರಾಷ್ಟ್ರೀಯ ನೀತಿಗಳು ನಮ್ಮ ಸಂಪ್ರದಾಯಗಳನ್ನು ಕಲೆಗಳನ್ನು ಪ್ರಶಂಸಿಸಲು ಪ್ರೋತ್ಸಾಹಿಸಿದವು. ಆದರೆ ಈ ರಾಜಕೀಯ ಪ್ರಾಯೋಜಕತ್ವವು ಅಗತ್ಯವಿರಲಿಲ್ಲ. ತನ್ನದೇ ಆದ ಅನನ್ಯ ಸೌಂದರ್ಯ ಪ್ರಪಂಚವನ್ನು ಹೊಂದಿರುವುದಕ್ಕೆ ಜಪಾನ್ ಯಾವಾಗಲೂ ಹೆಮ್ಮೆ ಪಡಬಹುದೆನಿಸುತ್ತದೆ. ಇದನ್ನು ಗುರುತಿಸಿಕೊಂಡಿದ್ದರಿಂದ ನನ್ನನ್ನು ನಾನು ಅರಿಯಲು ಸಾಧ್ಯವಾಯಿತು. ಜೊತೆಗೆ ಆತ್ಮವಿಶ್ವಾಸ ಕೂಡ ಹೆಚ್ಚಿತು.