ಈಕೆಯ ನೋವು-ಗೋಳುಗಳ ನಿರಂತರ ಪ್ರವಾಹದಲ್ಲಿ ನಾನು ಮುಳುಗೇ ಹೋಗುತ್ತೇನೆ. ಸಾಕು ಇಷ್ಟಕ್ಕೇ ನಿಲ್ಲಿಸಿಬಿಡಬಾರದೇ?  ಊಹೂಂ… ಮುಂದುವರಿಯುತ್ತಲೇ ಇದೆ. ಒಂದೊಂದು ರೋಗಲಕ್ಷಣವನ್ನೂ ಚ್ಯೂಯಿಂಗಮ್ಮಂತೆ ಅಗಿಯುತ್ತಾ, ಹಿಗ್ಗುತ್ತಾ, ಅನುಭವಿಸುತ್ತಾ… ನನ್ನ ಬೆನ್ನು ಹುರಿಯಲ್ಲೊಂದು ಸಣ್ಣ ನಡುಕ ಶುರುವಾಗಿದೆ. ಇವಳನ್ನು ನಿಯಂತ್ರಿಸುವುದು ಹೇಗೆ? ಇಲ್ಲ ನಾನು ತಾಳ್ಮೆ ಕಳೆದುಕೊಳ್ಳಬಾರದು, ಅದು ನನ್ನ ವೃತ್ತಿಗೆ ಅಗತ್ಯವಾದ ಕನಿಷ್ಠ ಬದ್ಧತೆ. ಈಕೆಗೆ ಔಷಧಿಗಿಂತ ಅದೇ ಮುಖ್ಯ. ಆದರೆ ಇನ್ನೂ ಎಷ್ಟು ಹೊತ್ತು ಹೀಗೆ?
ಖ್ಯಾತ ಆಯುರ್ವೇದ ವೈದ್ಯ ವಿ.ರಾಜೇಂದ್ರ ಬರೆದ ಒಂದು ಮನೋಬೇನೆಯ ನಿರೂಪಣೆ

ಸಂಜೆ ಅಪಾಯಿಂಟ್ಮೆಂಟ್ ಗಳ ಪಟ್ಟಿ ಹಿಡಿದು ಕೋಣೆಯೊಳಗೆ ಬಂದ ರಿಸೆಪ್ಷನಿಸ್ಟಳ ಮುಖದಲ್ಲಿ ಒಂದು ಸಣ್ಣ ಕೀಟಲೆಯ ನಗು.
“ಯಾಕೆ, ಏನು ವಿಶೇಷ?” ಅನ್ನುವಂತೆ ತಲೆ ಎತ್ತುತ್ತೇನೆ.
“ಸ್ವಲ್ಪ ತಾಳಿ, ನಿಮಗೇ ಗೊತ್ತಾಗುತ್ತದೆ” ಅನ್ನುವ ಭಾವದ ನಗೆ ಬೀರಿ ಕೈಲಿದ್ದ ಪಟ್ಟಿಯನ್ನು ನನ್ನ ಕೈಗೆ ದಾಟಿಸಿ ಬಾಗಿಲು ತೆರೆದು ಹೊರಟೇಹೋಗುತ್ತಾಳೆ.

ಅಪಾಯಿಂಟ್ಮೆಂಟ್ಗಳ ಪಟ್ಟಿಯನ್ನು ಕೈಗೆತ್ತಿಕೊಳ್ಳುತ್ತೇನೆ, ಸ್ವಲ್ಪ ಉದ್ದವಾಗೇ ಇದೆ, ಆದರೂ ಪರವಾಗಿಲ್ಲ ನಿಭಾಯಿಸಬಹುದು ಅನ್ನುವಷ್ಟರಲ್ಲಿ ಪಟ್ಟಿಯಲ್ಲಿದ್ದ ಮೊದಲ ಹೆಸರು ನೋಡಿ ನನಗೇ ಗೊತ್ತಾಗದಂತೆ ಸಣ್ಣಗೆ ನರಳುತ್ತೇನೆ. ಮಧುಮಾಲತಿ – ಅಷ್ಟು ಸುಲಭವಾಗಿ ಮರೆಯಲಾಗದ ಸುಂದರ ಹೆಸರು. ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ ಹತ್ತಿಪ್ಪತ್ತು ಬಾರಿಯಾದರೂ ನೋಡಿರುವ, ಎಲ್ಲ ಬಗೆಯ ನೋವುಗಳ ಮೇಕಪ್ ತೊಡಿಸಿದಂತಹ, ಅಷ್ಟೇ ಸುಲಭವಾಗಿ ಮರೆಯಲಾಗದ ಮುಖ.

ಇತ್ತೀಚೆಗಷ್ಟೇ ಬಂದಿದ್ದ ನೆನಪು, ಬಹುಷಃ ಒಂದು ತಿಂಗಳು ಕೂಡ ಆಗಿಲ್ಲ. ಕಳೆದ ಭೇಟಿಯಲ್ಲೇ ಸ್ಪಷ್ಟವಾಗಿ ಹೇಳಿದ್ದೆ; ಈಗಿರುವ ಔಷಧಿಗಳೇ ಸಾಕು, ಯಾವುದೇ ಹೊಸ ಟೆಸ್ಟ್ಗಳೂ ಬೇಡ, ಪದೇ ಪದೇ ಡಾಕ್ಟರುಗಳನ್ನು ಭೇಟಿಯಾಗುವುದನ್ನುಕಡಿಮೆ ಮಾಡಿಕೊಳ್ಳಿ, ಇನ್ನು ಕನಿಷ್ಠ ಮೂರು ತಿಂಗಳವರೆಗೆ ನನ್ನ ಭೇಟಿಗೂ ಬರುವ ಅಗತ್ಯವಿಲ್ಲ… ಆದರೂ, ಇನ್ನು ಸ್ವಲ್ಪ ಹೊತ್ತಿಗೆ ಒಳಗೆ ಬರುತ್ತಾಳೆ, ತನ್ನ ಅಸಂಖ್ಯಾತ ನೋವುಗಳ ಮೂಟೆಹೊತ್ತು. ತನ್ನ ನೋವುಗಳ ಸಾಚಾತನಕ್ಕೆ ಸಾಕ್ಷಿ ಅನ್ನುವಂತೆ ಹತ್ತು ಹಲವು ವೈದ್ಯಕೀಯ ತಪಾಸಣೆಗಳ ರಿಪೋರ್ಟು ಹೊತ್ತು. ಬಂದವಳೇ ತನ್ನ ನೋವಿನ ಮೂಟೆಯಿಂದ ಒಂದೊಂದೇ ಸರಕು ತೆಗೆಯುತ್ತಾಳೆ. ಒಂದೊಂದಾಗಿ, ವಿವರವಾಗಿ ಅವುಗಳ ವರ್ಣನೆಗೆ ತೊಡಗುತ್ತಾಳೆ. ದೇಹದ ಯಾವ ನಿರ್ಧಿಷ್ಟ ಕಾಯಿಲೆಗೂ ತಾಳೆಯಾಗದ, ಒಂದಕ್ಕೊಂದು ಹೊಂದಿಕೆಯಾಗದ ವಿಚಿತ್ರ ರೋಗಲಕ್ಷಣಗಳು, ಒಮ್ಮೆ ಒಂದಾದರೆ ಮತ್ತೊಮ್ಮೆ ಇನ್ನೊಂದು.

ಆಕೆ ನೋವಿನ ಸರಕು ಚೆಲ್ಲಿದಂತೆಲ್ಲಾ ನಾನು ಅದನ್ನು ಜೋಪಾನವಾಗಿ ಆರಿಸಿಕೊಳ್ಳುತ್ತಾ ಹೋಗಬೇಕು. ಕೊನೆಯೇ ಇಲ್ಲದಂತೆ ತೋರುವ ನೋವುಗಳಿಗೆ ಪರಿಹಾರ ಸೂಚಿಸಬೇಕು, ಸಮಾಧಾನ ಹೇಳಬೇಕು. ನಾನು ಸರಿಯಾಗಿ ಕೇಳಿಸಿಕೊಳ್ಳುತ್ತಿಲ್ಲ ಅನ್ನಿಸಿದರೆ ಸಾಕು, “ಇಲ್ಲಿ ಕೇಳಿ ಡಾಕ್ಟ್ರೇ..” ಅಂದು ಮತ್ತೆ ಮೊದಲಿಂದ ಶುರುಮಾಡುತ್ತಾಳೆ. ಕೇಳಿಸಿಕೊಳ್ಳುತ್ತಾ, ಕೇಳಿಸಿಕೊಳ್ಳುತ್ತಾ ಸುಸ್ತಾಗಿಬಿಡುತ್ತದೆ. ನನ್ನೊಳಗೇ ಒಂದು ಆತಂಕ, ತಹತಹ ಶುರುವಾಗಿಬಿಡುತ್ತದೆ. ಆಕೆಯ ಭೇಟಿ ಮುಗಿಯುವ ವೇಳೆಗೆ, ಇನ್ನುಳಿದ ರೋಗಿಗಳನ್ನು ನೋಡಲು ಬೇಕಾದ ಎನರ್ಜಿಯನ್ನು ಮತ್ತೆ ಮೈಗೂಡಿಸಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಹೌದು! ಇವತ್ತು ಆಗುವುದೂ ಅದೇ.

ಎದುರಿಗೆ ಕುಳಿತ ಆಕೆಯನ್ನೊಮ್ಮೆ ನೋಡುತ್ತಾ, ಕೇಸ್ ಶೀಟಿನ ವಿವರಗಳ್ನು ಗಮನಿಸುತ್ತಿದ್ದೇನೆ. ಈಕೆಗಿನ್ನೂ ಮುವ್ವತ್ತು ವರ್ಷವೂ ಆಗಿಲ್ಲ ಅಂದರೆ ನಂಬುವುದು ಕಷ್ಟ. ಮುಖದಲ್ಲಿ ಅಚ್ಚೊತ್ತಿರುವ ಶೋಕದ ಭಾವನೆಗಳು ವಯಸ್ಸನ್ನು ಹೆಚ್ಚಿಸಿಬಿಡುತ್ತವೆ, ಬಹುಷಃ. ಛೇ ಪಾಪ ಅನ್ನಿಸುತ್ತದೆ, ಜೊತೆಗೇ ಒಂದು ಸಣ್ಣ ಬೇಸರ ಸಹ. ಹೇಳಿಕೊಳ್ಳಬಹುದಾದ ಯಾವ ದೊಡ್ಡ ಕಾಯಿಲೆಯೂ ಇಲ್ಲದೇ ಇಷ್ಟೊಂದು ನರಳುತ್ತಿದ್ದಾಳಲ್ಲ ಈಕೆ. ನನ್ನ ಭಾವನೆಗಳ ಗುಟ್ಟು ಬಿಟ್ಟುಕೊಡದೇ ಪರಿಚಯದ ನಗೆ ಬೀರಿ ಮಾತು ಶುರುಮಾಡುತ್ತೇನೆ.

“ಹೇಳಿ ಮಧುಮಾಲತಿ, ಹೇಗಿದ್ದೀರಿ?”
ಅಷ್ಟು ಸಾಕಾಯ್ತು ಈಕೆಗೆ, ತನ್ನೊಳಗೆ ಕಟ್ಟಿಟ್ಟುಕೊಂಡ ನೋವಿನ ಪ್ರವಾಹವನ್ನು ಹರಿಬಿಡಲು.
“ಒಂದು ಚೂರೂ ಕಡಿಮೆ ಇಲ್ಲ ಡಾಕ್ಟ್ರೇ, ಸಿಕ್ಕಾಪಟ್ಟೆ ಹೊಟ್ಟೆನೋವು, ಸ್ವಲ್ಪಾನೂ ಹಸಿವೆ ಇಲ್ಲ, ಇಷ್ಟೇ ಇಷ್ಟು ಆಹಾರ ತಗೊಂಡ್ರೂ ತಕ್ಷಣ ಬಾತ್ರೂಂ ಹೋಗಬೇಕು, ಹೋಗಿಬಂದ ತಕ್ಷಣ ತುಂಬಾ ಸುಸ್ತಾಗಿ ಬಿಡುತ್ತೆ… ಕೂತಿದ್ದು ಎದ್ದರೆ ತಲೆ ಸುತ್ತು ಈ ತಲೆನೋವಂತೂ ತಡೆಯೋಕ್ಕೆ ಆಗಲ್ಲ ಬೆನ್ನು ನೋವಂತೂ… ಪೀರಿಯಡ್ಸ್ ಸಮಯದಲ್ಲಂತೂ ಸತ್ತೇ ಹೋಗ್ತೀನೇನೋ ಅನ್ನುವಷ್ಟು ಸುಸ್ತು. ರಾತ್ರಿ ಮಲಗಿಕೊಂಡರೆ ನಿದ್ರೆ ಬರಲ್ಲ …”
ಹೇಳುತ್ತಲೇ ಇದ್ದಾಳೆ… ಒಂದೊಂದು ನೋವನ್ನೂ, ಒಂದು ರೋಗಲಕ್ಷಣವನ್ನೂ, ಅದರ ತೀವ್ರತೆಯನ್ನೂ, ಅದರಿಂದ ಹೊರಬರಲಾಗದ ತನ್ನ ತೊಳಲಾಟವನ್ನೂ… ಈ ಕ್ಷಣ, ಅದನ್ನು ವಿವರಿಸುವ ಕ್ಷಣದಲ್ಲೂ ಅನುಭವಿಸುತ್ತಾ…

ಈಕೆ ಸಧ್ಯಕ್ಕೆ ನಿಲ್ಲಿಸುವುದಿಲ್ಲ. ಈಕೆಯ ನೋವು-ಗೋಳುಗಳ ನಿರಂತರ ಪ್ರವಾಹದಲ್ಲಿ ನಾನು ಮುಳುಗೇ ಹೋಗುತ್ತೇನೆ. ಸಾಕು ಇಷ್ಟಕ್ಕೇ ನಿಲ್ಲಿಸಿಬಿಡಬಾರದೇ? ಊಹೂಂ… ಮುಂದುವರಿಯುತ್ತಲೇ ಇದೆ. ಒಂದೊಂದು ರೋಗಲಕ್ಷಣವನ್ನೂ ಚೀವಿಂಗ್ ಗಮ್ನಂತೆ ಅಗಿಯುತ್ತಾ, ಹಿಗ್ಗುತ್ತಾ, ಅನುಭವಿಸುತ್ತಾ… ನನ್ನ ಬೆನ್ನು ಹುರಿಯಲ್ಲೊಂದು ಸಣ್ಣ ನಡುಕ ಶುರುವಾಗಿದೆ. ಇವಳನ್ನು ನಿಯಂತ್ರಿಸುವುದು ಹೇಗೆ? ತಾಳ್ಮೆ ಕಳೆದುಕೊಳ್ಳದೇ ಕೇಳಿಸಿಕೊಳ್ಳುವುದು ಎಷ್ಟು ಹೊತ್ತು? ಇಲ್ಲ ನಾನು ತಾಳ್ಮೆ ಕಳೆದುಕೊಳ್ಳಬಾರದು, ಅದು ನನ್ನ ವೃತ್ತಿಗೆ ಅಗತ್ಯವಾದ ಕನಿಷ್ಠ ಬದ್ಧತೆ. ಈಕೆ ಕೇಳಿಸಿಕೊಳ್ಳುವ ಕಿವಿಗಳ ಅಗತ್ಯವಿರುವ ಒಂದೆರಡು ಸಾಂತ್ವನದ ಮಾತುಗಳ ಅಗತ್ಯವಿರುವ ರೋಗಿ. ಈಕೆಗೆ ಔಷಧಿಗಿಂತ ಅದೇ ಮುಖ್ಯ. ಆದರೆ ಇನ್ನೂ ಎಷ್ಟು ಹೊತ್ತು ಹೀಗೆ?

“ಡಾಕ್ಟ್ರೇ ಕಳೆದ ಸಾರಿ ನಿಮ್ಮಲ್ಲಿಗೆ ಬಂದು ಹೋದ ಮೇಲೆ ತಲೆನೋವು ತುಂಬಾ ಜಾಸ್ತಿಯಾಗಿ, ನರದ ತೊಂದರೆ ಇರಬಹುದು ಅಂಥ ನ್ಯೂರಲಾಜಿಸ್ಟ್ ಹತ್ತಿರ ಹೋಗಿದ್ದೆ. ನರದ್ದೇನೂ ತೊಂದರೆ ಇಲ್ಲ ಅಂದರು. ಆದ್ರೂ ಇದೊಂದು ಮಾತ್ರೆ ಬರೆದುಕೊಟ್ಟಿದ್ದಾರೆ. ಇಪ್ಪತ್ತು ದಿನದಿಂದ ತೆಗೆದುಕೊಳ್ತಾ ಇದ್ದೇನೆ. ಒಂದು ವಾರ ಸ್ವಲ್ಪ ಪರವಾಗಿಲ್ಲ ಅನ್ನಿಸ್ತು. ಆಮೇಲೆ ತಲೆನೋವು ಜಾಸ್ತೀನೇ ಆಯ್ತು. ರಾತ್ರಿ ಮಾತ್ರೆ ತಗೊಂಡು ಮಲಗಿದರೆ ಬೆಳಿಗ್ಗೆ ಏಳುವಾಗಲೇ ತಲೆಭಾರ…”

ಈ ಎರಡು ವರ್ಷಗಳಲ್ಲಿ ಈಕೆ ನೋಡಿರುವ ವೈದ್ಯರ ಸಂಖ್ಯೆ ಎಷ್ಟೋ, ಬಹುಷಃ ಆಕೆಗೂ ಲೆಕ್ಕ ಸಿಕ್ಕಲಿಕ್ಕಿಲ್ಲ. ನ್ಯೂರಾಲಜಿಸ್ಟು, ಗೈನಕಾಲಜಿಸ್ಟು, ಫಿಸಿಷಿಯನ್ಗಳು, ಸರ್ಜನ್ ಗಳು, ಮೂಳೆ ತಜ್ಞರು… ಆದರೆ ಯಾರನ್ನೂ ಹೆಚ್ಚು ಕಾಲ ಒಪ್ಪಿಕೊಳ್ಳುವುದಿಲ್ಲ.

ನಿರ್ದಿಷ್ಟ ದಿಕ್ಕುದೆಸೆಯಿಲ್ಲದ ನಿರಂತರ ರೋಗಲಕ್ಷಣಗಳ ಕುದಿನೀರಿನ ಕಡಾಯಿಯಲ್ಲಿ ದೇಹಪೂರ್ತಿ ಮುಳುಗಿಹೋಗಿರುವ ಈ ಪಾಪದ ಹೆಂಗಸಿಗೆ ಪರಿಚಯವಿಲ್ಲದ ವೈದ್ಯಪ್ರಕಾರ ಯಾವುದಾದರೂ ಬಾಕಿ ಉಳಿದಿದೆಯೆ? ಅಲೋಪತಿ, ಹೋಮಿಯೋಪತಿ, ಆಯುರ್ವೇದ, ನಾಟಿ ಔಷಧಿ, ಜೊತೆಗೆ ಆಗಿಂದಾಗ್ಗೆ ರೇಖಿ, ಪ್ರಾಣಿಕ್ ಹೀಲಿಂಗ್… ಊಹೂಂ, ಯಾವುದಕ್ಕೂ ಜಗ್ಗುವುದಿಲ್ಲ. ಯಾವುದಾದರೂ ಒಂದು ನೋವು ಕಡಿಮೆಯಾಯ್ತು ಅಂದರೆ ಇನ್ನೊಂದು ಅದಕ್ಕಿಂತ ಜೋರಾಗಿ ತಲೆಎತ್ತಿ ನಿಲ್ಲುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಹಾಕುವಂತೆ. ನೋಡಿದ ಎಲ್ಲಾ ವೈದ್ಯರ ಮೇಲೆ ಯುದ್ಧಸಾರುವಂತೆ. ಆದರೆ, ಅಷ್ಟೆಲ್ಲಾ ವೈದ್ಯರನ್ನು ಬಿಟ್ಟು ಈ ಹೆಂಗಸು ಇಲ್ಲೇ ಯಾಕೆ ಆಸರೆಗೆ ಕೈಚಾಚುತ್ತಾಳೆ? ಒಬ್ಬ ವೈದ್ಯರನ್ನು ಒಂದೆರಡು ಸಾರಿ ನೋಡಿದರೆ ಸಾಕು, ಅಲ್ಲಿಗೆ ಅವರನ್ನು ಕೈಬಿಡುವ ಈಕೆ ನನ್ನನ್ನು ಮಾತ್ರ ಯಾಕೆ ಪದೇ ಪದೇ ಗೋಳುಹೊಯ್ದುಕೊಳ್ಳಬೇಕು? ಗೊತ್ತಿಲ್ಲ, ಆದರೆ ನಾನು ಮಾತ್ರ ತಾಳ್ಮೆಗೆಡಬಾರದು. ಇದು ನನ್ನ ವೃತ್ತಿಯ  ಮತ್ತು ವೈಯುಕ್ತಿಕವಾಗಿ ಇಂಥದನೆಲ್ಲಾ ತಾಳಿಕೊಳ್ಳುವ ನನ್ನ ಸಾಮರ್ಥ್ಯದ ಪರೀಕ್ಷೆ.

“ಇಲ್ಲಿ, ಹೊಟ್ಟೆಯ ಈ ಬಲ ಬದಿಯಲ್ಲಿ ತುಂಬಾ ನೋವು ಡಾಕ್ಟ್ರೇ, ಅಪೆಂಡಿಸೈಟಿಸ್ಗೆ ಆಪರೇಶನ್ ಸಹ ಆಗಿದೆ, ಆದರೂ ಯಾಕೆ ನೋವು ಕಡಿಮೆ ಆಗಿಲ್ಲ?”
ಈಕೆಗೆ ನಿಜಕ್ಕೂ ಅಪೆಂಡಿಸೈಟಿಸ್ ಇತ್ತಾ? ಸರ್ಜರಿಯ ಅಗತ್ಯ ಇತ್ತಾ? ಗೊತ್ತಿಲ್ಲ.
“ತುಂಬಾ ನೋವು ಡಾಕ್ಟ್ರೇ…” ಕಳೆದ ಹತ್ತಿಪ್ಪತ್ತು ನಿಮಿಷಗಳಲ್ಲಿ ಈ ತುಂಬಾ ನೋವು ಅನ್ನುವ ಮಾತು ಎಷ್ಟು ಸಾರಿ ಬಂದುಹೋಗಿದೆಯೋ? ಇಡೀ ದೇಹದ ನೋವು. ಮಾತಿನಲ್ಲಿ ಸಾಂದ್ರವಾಗಿ. ಅತೃಪ್ತ ಆತ್ಮದ ಅಶರೀರ ವಾಣಿಯಂತೆ. ಆಕೆಯ ತುಟಿಗಳು ಚಲಿಸುತ್ತಲೇ ಇವೆ. ಈಕೆಯ ಶರೀರವೊಂದು ನೋವಿನ ಅಕ್ಷಯ ಪಾತ್ರೆಯಾ? ನಾನು ಕೇಳಿಸಿಕೊಳ್ಳುತ್ತಿದ್ದೇನೆ, ಯಾಂತ್ರಿಕವಾಗಿ ಹೂಂಗುಡುತ್ತಿದ್ದೇನೆ.

ನನ್ನ ಏಕಾಗ್ರತೆ ಕಮ್ಮಿಯಾಗುತ್ತಿದೆ, ಅದು ಆಕೆಗೆ ಗೊತ್ತಾಗುವ ಹಾಗೇ.
“ಇಲ್ಲಿ ಕೇಳಿ ಡಾಕ್ಟ್ರೇ…”
ನೀನು ಸರಿಯಾಗಿ ಕೇಳಿಸಿಕೊಳ್ಳುತ್ತಿಲ್ಲ ಅನ್ನುವ ಭಾವ ಕಣ್ಣುಗಳಲ್ಲಿ. ನೋಟ ನನ್ನ ಮೇಲೆ ನೆಟ್ಟಿರುವುದನ್ನು ಅರಿತು ದೃಷ್ಟಿ ಬದಲಾಯಿಸುತ್ತಿದ್ದೇನೆ.
“ಕೇಳುತ್ತಿದ್ದೇನೆ, ಆದರೆ ನಿಮಗೆ ಎಷ್ಟು ಹೇಳಿದರೂ ಅರ್ಥವಾಗುವುದಿಲ್ಲವಲ್ಲ, ನೀವು ಸುಮ್ಮನೆ ಕಡ್ಡಿಯನ್ನು ಗುಡ್ಡಮಾಡಿಕೊಂಡು ಒದ್ದಾಡುತ್ತಿದ್ದೇರಿ ಅಷ್ಟೇ…”

“ಹೌದು, ಹಾಗಾದ್ರೆ ನಾನೇ ನಾಟಕ ಆಡ್ತಾ ಇದೀನಿ, ನಿಮಗೆಲ್ಲಾ ಸುಳ್ಳು ಹೇಳ್ತಾ ಇದೀನಿ, ಬೇಕಂತ ಕಾಯಿಲೆ ಬರಿಸಿಕೊಂಡು ಒದ್ದಾಡ್ತಾ ಇದೀನಿ. ನನಗೆ ಒದ್ದಾಡಬೇಕು ಅಂತ ಆಸೆ ಅಲ್ವಾ? ಸರಿ ಬಿಡಿ ನೀವೊಬ್ಬರು ಇದನ್ನು ಹೇಳುವುದು ಬಾಕಿ ಇತ್ತು!”
ಹೊರಗೆ ರಿಸೆಪ್ಷನ್ನಿನಲ್ಲಿ ಯಾರೋ ಅಸಮಾಧಾನದ ಧ್ವನಿಯಲ್ಲಿ ರಿಸೆಪ್ಷನಿಸ್ಟ್ಳೊಂದಿಗೆ ಗೊಣಗುತ್ತಿದ್ದಾರೆ, “ಇನ್ನೂ ಎಷ್ಟು ಹೊತ್ತಾಗುತ್ತೆ? ಎಷ್ಟು ಹೊತ್ತು ಕಾಯ್ಬೇಕು? ನೀವು ಅಪಾಯಿಂಟ್ಮೆಂಟ್ ಕೊಟ್ಟಿದ್ದು ಆರು ಗಂಟೆಗೆ, ಆದರೆ ಆಗಲೇ ಆರುವರೆ ಆಯ್ತು.”
ರಿಸೆಪ್ಷನಿಸ್ಟ್ ಅವರ ಸಮಾಧಾನಕ್ಕೆ ಏನನ್ನೋ ಹೇಳುತ್ತಿದ್ದಾಳೆ. ನನ್ನೊಳಗಿನ ಆತಂಕ ಜಾಸ್ತಿಯಾಗುತ್ತಿದೆ.

“ನೋಡಮ್ಮ ಈ ಮಾತನ್ನು ನೀವು ನೂರು ಸಾರಿ ಹೇಳಾಗಿದೆ. ನಾನು ನೂರು ಸಲವೂ ಕೇಳಿಸಿಕೊಂಡಿದ್ದೇನೆ. ನೀವು ನಾಟಕ ಮಾಡ್ತಿದೀರಿ ಅಂತ ಅಲ್ಲ, ಆದರೆ ನಿಮಗೆ ದೇಹದಲ್ಲಿ ಯಾವ ದೊಡ್ಡ ಕಾಯಿಲೇನೂ ಇಲ್ಲಾ, ಎಲ್ಲ ನಿಮ್ಮ ಟೆನ್ಷನ್ನಿಂದ ಬಂದಿದ್ದು. ನಿಮಗೆ ಎಷ್ಟು ಹೇಳಿದರೂ ಅರ್ಥವಾಗಿಲ್ಲವಲ್ಲ!”
ನನ್ನೊಳಗಿನ ಕಿರಿಕಿರಿ ಮಾತಿನಲ್ಲೂ ಇಣುಕುತ್ತಿದೆ. ಇದು ಇಲ್ಲಿಗೇ ಮುಗಿದರೆ ಸಾಕು ಅನ್ನಿಸುತ್ತಿದೆ.
“ಆಯ್ತು ಸಧ್ಯಕ್ಕೆ ಈ ಔಷಧಿ ತೆಗೆದುಕೊಳ್ಳಿ ನೋಡೋಣ…”

ಅಸಂಖ್ಯಾತ ದೇಹದ ನೋವುಗಳು ಕಣ್ಣಿನಲ್ಲಿ ಮಡುಗಟ್ಟಿದ ದುಃಖವಾಗಿ ಎಲ್ಲಿ ಇನ್ನೊಂದು ಕಟು ಮಾತಾಡಿದರೆ ತಳಕ್ಕನೆ ಕಣ್ಣೀರಾಗಿ ಸುರಿದುಬಿಡುತ್ತದೋ ಅನ್ನುವಂತೆ ದುಃಖ ಮಡುಗಟ್ಟಿದ ಕಣ್ಣುಗಳಲ್ಲೇ ಒಮ್ಮೆ ನನ್ನನ್ನು ದುರುಗುಟ್ಟಿನೋಡಿ,
“ನನ್ನ ದುರದೃಷ್ಠ, ಯಾರೂ ನನ್ನ ತೊಂದರೆಗಳನ್ನು ಸೀರಿಯಸ್ಸಾಗೇ ತೆಗೆದುಕೊಳ್ಳಲ್ಲ, ನನ್ನ ನೋವು ನಿಮಗೆ ಹೇಗೆ ಅರ್ಥವಾಗುತ್ತೇ? ಮನೆಯಲ್ಲೂ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ನಿನಗೇನೋ ಕಾಯಿಲೆಯ ಭ್ರಾಂತಿ ಅಂದು ಬಿಡುತ್ತಾರೆ. ಯಾರೂ ಕೇರ್ ಮಾಡುವುದಿಲ್ಲ, ನನಗೇನೂ ಎಲ್ಲರಂತೆ ಸಹಜವಾಗಿ ಜೀವನ ನಡೆಸಲು ಆಸೆ ಇಲ್ವಾ? ಈ ನೋವೊಂದು ಕಡಿಮೆಯಾಗಿಬಿಟ್ಟರೆ…”

ಆಡುತ್ತಿದ್ದ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿ ಹೊರಟೇಬಿಟ್ಟಳು, ಔಷಧಿಯ ಚೀಟಿಯನ್ನೂ ಕೈಗೆತ್ತಿಕೊಳ್ಳದೇ. ನಿಜಕ್ಕೂ ನಾನು ನಿರೀಕ್ಷಿಸಿರಲಿಲ್ಲ, ಆದರೆ ಈ ಕ್ಷಣಕ್ಕೆ ಇದನ್ನು ಅಪೇಕ್ಷಿಸಿದ್ದೆ. ಹೇಗಾದರಾಗಲಿ, ಸಧ್ಯಕ್ಕೆ ಈ ಹೊತ್ತಿಗೆ ಟೆನ್ಷನ್ ಮುಗಿಯಿತಲ್ಲ, ಇನ್ನು ಈ ಸಂಜೆಯ ಮಟ್ಟಿಗೆ ನಾನು ನಿರಾಳವಾಗಿ ಉಳಿದವರನ್ನು ನೋಡಬಹುದು. ಆ ಕ್ಷಣಕ್ಕೆ ನಿರಾಳ ಅನ್ನಿಸಿದರೂ ಪೇಷಂಟುಗಳನ್ನೆಲ್ಲಾ ನೋಡಿ ಮುಗಿಸಿ ರಾತ್ರಿ ಮನೆಗೆ ಹೋಗುವ ವೇಳೆಗೆ ಬಂದು ಸಣ್ಣ ಚಡಪಡಿಕೆ ಶುರುವಾಯ್ತು. ಸ್ವಲ್ಪ ಸಂವೇದನೆ ಇರುವ ಯಾವುದೇ ವೈದ್ಯ ಆಗಾಗ ಅನುಭವಿಸುವ ವೈಯಕ್ತಿಕ ಟೆನ್ಷನ್ ಅದು. ಆಕೆ ಒಂದಿಷ್ಟು ಒತ್ತಾಸೆಯ ಅಗತ್ಯವಿರುವ ರೋಗಿ. ಆಕೆಯ ಭೇಟಿ ನನಗೆ ಕೊಂಚ ಕಿರಿಕಿರಿ ಅನ್ನಿಸಿದರೂ ಆಕೆಗೆ ಒಂದಿಷ್ಟು ಸಾಂತ್ವನ ನೀಡುತ್ತದೆ ಅನ್ನುವುದಾದರೆ, ಆಕೆಯ ನೋವಿನ ಗಾಯಕ್ಕೆ ವೈದ್ಯನೊಬ್ಬ ಹಚ್ಚುವ ಮಾತಿನ ಮುಲಾಮು ಸ್ವಲ್ಪವಾದರೂ ಸಹಾಯ ಮಾಡುತ್ತದೆ ಅನ್ನುವುದಾದರೆ, ನಾನು ಇನ್ನಷ್ಟು ಸಹಾನುಭೂತಿಪರ ಆಗಿರಬಹುದಿತ್ತಾ?

ನಿಜಕ್ಕೂ, ನಮ್ಮ ಮೊದಲ ಹಲವು ಭೇಟಿಗಳಲ್ಲಿ ನಾನು ಇಷ್ಟು ತಾಳ್ಮೆಯಿಲ್ಲದವನಾಗಿರಲಿಲ್ಲ. ಆಕೆಯ ಎಲ್ಲ ಮಾತುಗಳನ್ನೂ ಸಮಾಧಾನದಿಂದ ಕೇಳಿಸಿಕೊಂಡಿದ್ದೆ. ಕೇಳಿದ ಎಲ್ಲ ಪ್ರಶ್ನೆಗಳಿಗೆ, ಇದ್ದ ಎಲ್ಲ ಗೊಂದಲಗಳಿಗೆ ತಾಳ್ಮೆಯಿಂದ ಉತ್ತರಿಸಿದ್ದೆ. ಕಾಯಿಲೆ ತೀವ್ರವಾಗಿಬಿಡುವ ಭಯಕ್ಕೆ ಭರವಸೆಯ ಮದ್ದು ನೀಡಿದ್ದೆ. ಅಪೇಕ್ಷಿಸಿದ್ದ ಹಲವಾರು ಟೆಸ್ಟ್ಗಳಲ್ಲಿ ಅಗತ್ಯವೆನ್ನಿಸಿದ್ದನ್ನು ಮಾಡಿಸಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದೆ. ಆಕೆಯ ರೋಗಲಕ್ಷಣಗಳಿಗೂ ಆಂತರಿಕ ತಲ್ಲಣಗಳಿಗೂ ಇರುವ ಸಂಬಂಧದ ಅರಿವು ಮೂಡಿಸಲು ಪ್ರಯತ್ನಿಸಿದ್ದೆ.
ಆದರೆ ಇಷ್ಟು ದಿನಗಳ, ಇಷ್ಟೊಂದು ಭೇಟಿಗಳಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಪ್ರತೀಬಾರಿಯೂ ಮತ್ತದೇ ಅಸಂಖ್ಯಾತ ದೇಹದ ನೋವುಗಳು, ಮಾತಿನಲ್ಲಿ ಸಾಂದ್ರವಾಗಿ ಕಣ್ಣಿನಲ್ಲಿ ಮಡುಗಟ್ಟಿದ ದುಃಖವಾಗಿ…

ಈ ಎಲ್ಲ ಕ್ರಿಯೆ-ಪ್ರತಿಕ್ರಿಯೆಗಳ ಪರಿಣಾಮವಾಗಿ ಇತ್ತೀಚಿಗೆ ನಾನು ಅಸಹಾಯಕನಾಗಿಬಿಡುತ್ತೇನೆ. ಆಕೆಯ ಭೇಟಿಯ ಪ್ರತಿಸಂದರ್ಭದಲ್ಲೂ ಆಕೆಯ ನೋವನ್ನು ನಿರ್ವಹಿಸಲಾಗದ ನನ್ನ ಅಸಾಮರ್ಥ್ಯ ನನ್ನನ್ನು ಕಂಗೆಡಿಸುತ್ತದೆ. ವೈದ್ಯನಾಗಿ ನನ್ನ ಕೌಶಲ ಎಷ್ಟು ಮಿತಿಯುಳ್ಳದ್ದು ಅನ್ನುವುದನ್ನು ಈ ಹೆಂಗಸು ಪ್ರತಿಭಾರಿಯೂ ನನಗೆ ಇನ್ನಷ್ಟು ಸ್ಪಷ್ಟಪಡಿಸುತ್ತಾಳೆ. ಹಾಗಾಗಿ, ಇತ್ತೀಚೆಗೆ ಆಕೆಯನ್ನು ನೋಡುವುದೆಂದರೆ ನನಗೆ ಸುಖಾಭಾವವುಂಟಾಗುತ್ತದೆ. ನನ್ನ ಧಾರಣ ಶಕ್ತಿ ಕುಸಿಯುತ್ತದೆ. ಬಹುಷಃ ಅದರ ಅಂತಿಮ ಪರಿಣಾಮವೇ ಇವತ್ತು ನಾನು ತಾಳ್ಮೆ ಕಳೆದುಕೊಂಡದ್ದು. ಹೆಚ್ಚು ಕೇಳಿದರೆ, ಕೇಳಿಸಿಕೊಂಡರೆ ಇನ್ನೇನು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೋ ಏನೋ ಅನ್ನುವ ಭಯಕ್ಕೋ ಏನೋ ನಾನು ಹೆಚ್ಚು ಮಾತು ಕೇಳಿಸಿಕೊಳ್ಳದ ತಾಳ್ಮೆಯಿಲ್ಲದ ವೈದ್ಯನ ಪಾತ್ರ ಹಾಕುತ್ತಿದ್ದೀನಾ? ಗೊತ್ತಿಲ್ಲ. ಆದರೆ ಇಷ್ಟಕ್ಕೂ ನಾನು ಇನ್ನೇನು ಮಾಡಬಹುದಿತ್ತು?

ಇದು ಯಾವ ಮನೋಬೇನೆಯಾಗಿರಬಹುದು?

ಕ್ರಿ.ಶ. ೧೯೫೦ರಲ್ಲಿ ಈ ಕಾಯಿಲೆಯನ್ನು ಹೆಸರಿಸಿದ ಫ್ರೆಂಚ್ ವೈದ್ಯ ಪಾಲ್ ಬ್ರೆಕ್ವೆಟ್ನ ನೆನಪಿಗೆ ಇದನ್ನು ಬ್ರೆಕ್ವೆಟ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಶರೀರದ ಮೇಲೆ ತನ್ನಾಟ ತೋರಿಸಬಲ್ಲ ಮನಸ್ಸು ಸೃಷ್ಟಿಸುವ ಸರ್ವಸಾಧಾರಣವಾದ ಕಾಯಿಲೆ. ವಿಚಿತ್ರವೆಂದರೆ ಅನುಭವಿಸುವ ಬಹುಪಾಲು ಜನರಿಗೆ ಇದೊಂದು ಮನೋಬೇನೆ ಅನ್ನುವುದು ಅರಿವಿಗೇ ಬರುವುದಿಲ್ಲ, ಯಾಕೆಂದರೆ ರೋಗ ಲಕ್ಷಣಗಳೆಲ್ಲಾ ವ್ಯಕ್ತವಾಗುವುದು ದೈಹಿಕ ತೊಂದರೆಗಳ ರೂಪದಲ್ಲೇ. ಈ ಕಾಯಿಲೆಯ ಮುಖ್ಯ ಸ್ವರೂಪವೆಂದರೆ ಪದೇ ಪದೇ ಮರುಕಳಿಸುವ, ವರ್ಷಗಟ್ಟಲೆ ಬೇರೂರಿದ ದೈಹಿಕ ತೊಂದರೆಗಳು, ಆದರೆ ರೋಗಲಕ್ಷಣಗಳೂ ಯಾವ ನಿರ್ದಿಷ್ಟ ದೈಹಿಕ ಕಾಯಿಲೆಗಳಿಗೂ ಸಂಪೂರ್ಣ ಹೊಂದುವುದಿಲ್ಲ. ನಿದರ್ಶನ ಸಾಧ್ಯವಾದ ಯಾವುದೇ ಋಜುವಾತುಗಳಿರುವುದಿಲ್ಲ, ಬೇರೆ ಬೇರೆ ಕಾಯಿಲೆಗಳ ಸಾಧ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವೈದ್ಯರು (ಕೆಲವೊಮ್ಮೆ ಸ್ವತಃ) ಮಾಡಿಸುವ ಬಗೆಬಗೆಯ ಪರೀಕ್ಷೆಗಳೆಲ್ಲಾ ನಾರ್ಮಲ್ಲಾಗಿರುತ್ತವೆ, ಆದರೆ ಅನುಭವಿಸುವ ನೋವು-ನರಳಾಟ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ.

ಯಾವುದೇ ವೈದ್ಯಕೀಯ ಋಜುವಾತುಗಳಿಲ್ಲ ಅಂದ ಮಾತ್ರಕ್ಕೇ ಇದು ಬರೀ ಕಾಯಿಲೆಯ ನಟನೆಯೇ ಅಂದರೆ ಅದೂ ಅಲ್ಲ. ಅನುಭವಿಸುವ ಎಲ್ಲಾ ನೋವುಗಳೂ ಸಾಚಾ genuine. ಯಾವುದೂ ಉದ್ದೇಶಪೂರ್ವಕವಾಗಿ ಬೆಳೆಸಿಕೊಂಡಿದ್ದಲ್ಲ, ಅಷ್ಟಕ್ಕೂ ಎಂಥಾ ಅದ್ಭುತ ನಟನೂ ದಿನಕ್ಕೆ ಇಪ್ಪತ್ನಾಲ್ಕು ಗಂಟೆ, ವರ್ಷವಿಡೀ ಸತತವಾಗಿ ನಟಿಸಲಾರ. ಬಹುರೂಪೀ ಆತಂಕ, ತಲ್ಲಣ ಮತ್ತು ಅದರ ಪರಿಣಾಮವಾದ ಮಾನಸಿಕ ಒತ್ತಡಗಳು ಆಧುನಿಕ ಬದುಕಿನ ಒಂದು ಭಾಗವೇ ಆಗಿಹೋಗಿ ಎಲ್ಲರ ಬದುಕಿನ ಸಾಮಾನ್ಯ ಸಂಗತಿಯಾಗಿರುವಾಗ ಈ ಕಾಯಿಲೆ ಹಲವರನ್ನು ಮಾತ್ರ ಯಾಕೆ ಕಾಡುತ್ತದೆ?

ಇದಕ್ಕೆ ಮೂರು ಪರ್ಯಾಯ ಸಿದ್ದಾಂತಗಳಿವೆ.

ಹೆಚ್ಚಿನ ಸಾಮರ್ಥ್ಯವುಳ್ಳವರು ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು. ಆದರೆ ಒತ್ತಡವನ್ನು ತಾಳಿಕೊಡುವ ಶಕ್ತಿ ಕಡಿಮೆ ಇದ್ದವರಲ್ಲಿ ಮನಸ್ಸು ಅದರಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಒತ್ತಡದ ಪರಿಣಾಮವು ಯಾವುದಾದರೊಂದು ರೂಪದಲ್ಲಿ ವ್ಯಕ್ತವಾಗಲೇಬೇಕಾದ ಕಾರಣಕ್ಕೆ ದೇಹವನ್ನು ಅವಲಂಬಿಸುತ್ತದೆ. ವಿವಿಧ ಸಾಮಾಜಿಕ, ಭಾವನಾತ್ಮಕ ಮತ್ತು ವೈಯಕ್ತಿಕ ಸಮಸ್ಯೆಗಳ ಪರಿಣಾಮಗಳು ದೈಹಿಕ ರೋಗಲಕ್ಷಣಗಳಾಗಿ ರೂಪಾಂತರಗೊಂಡು ನೆಲೆಕಂಡುಕೊಳ್ಳುತ್ತವೆ, ಕಾಲ ಕಳೆದಂತೆಲ್ಲಾ ಇದು ರೂಢಿಯಾಗಿಬಿಡುತ್ತದೆ.

ಎರಡು- ವ್ಯಕ್ತಿತ್ವಕ್ಕನುಗುಣವಾಗಿ ಕೆಲವರಿಗೆ ಆಂತರಿಕ ಸಂವೇದನೆಗಳು ಅತಿಸೂಕ್ಷ್ಮ (sensitive) ಆಗಿರುತ್ತವೆ. ಸ್ವಲ್ಪ ಮಾತ್ರದ ನೋವು ಕ್ಲೇಶಗಳನ್ನೂ ಶರೀರ ಅತಿಯಾಗಿ ಉತ್ಪ್ರೇಕ್ಷಿಸಿಕೊಂಡು ಅಸ್ವಸ್ಥವಾಗಿಬಿಡುತ್ತದೆ.

ಮೂರು- ಇದೊಂದು ವೈಯುಕ್ತಿಕ ನಕಾರಾತ್ಮಕ ಚಿಂತನೆಯ ಫಲ. ದೇಹದ ಆರೋಗ್ಯ ಮತ್ತು ರೋಗ ಸಾಧ್ಯತೆಗಳ ಬಗ್ಗೆ ಬೆಳೆಸಿಕೊಂಡ ಅತಿ ಕಾಳಜಿ ಮತ್ತು ಭಯಗಳ ಪ್ರತೀಕ.

ಈ ಮೂರು ಸಿದ್ಧಾಂತಗಳಲ್ಲಿ ಹೆಚ್ಚು ನಿಖರವಾದದ್ದು ಯಾವುದು ಅನ್ನುವುದನ್ನು ಹೇಳುವುದು ಕಷ್ಟ. ಬಹುಷಃ ಎಲ್ಲವೂ ಸತ್ಯ ಅಥವಾ ಎಲ್ಲ ಸಿದ್ಧಾಂತಗಳೂ ಪರಸ್ಪರ ಪೂರಕವಾಗಿ ಕಾಯಿಲೆಗೆ ಕಾರಣವಾಗುತ್ತವೆ. ಥಿಯರಿಗಳೇನೇ ಇರಲಿ, ಈ ಕಾಯಿಲೆಯ ರೋಗಿಗಳನ್ನು ದೀರ್ಘಕಾಲೀನ ಯಶಸ್ವಿಯಾಗಿ ಚಿಕಿತ್ಸೆ ಮಾಡುವುದು ಬಹು ಕಷ್ಟದ ಕೆಲಸ ಅನ್ನುವುದು ವೈದ್ಯಕೀಯವಾಗಿ ಎಲ್ಲರೂ ಒಪ್ಪುವ ಸಂಗತಿ.

ಕಾಯಿಲೆಯ ಪ್ರಾರಂಭದಲ್ಲಿ ಯಾವುದೇ ದೈಹಿಕ ತೊಂದರೆಗಳಂತೆ ಈ ರೋಗಿಗಳೂ ವೈದ್ಯರನ್ನು ಭೇಟಿಮಾಡುತ್ತಾರೆ. ಮಾಮೂಲಿನಂತೆ ತಪಾಸಣೆ, ಔಷಧೋಪಚಾರಗಳು ನಡೆಯುತ್ತವೆ. ಇದರಿಂದ ಕಾಯಿಲೆ ವಾಸಿಯಾಗುತ್ತದೆ ಅನ್ನುವ ಭರವಸೆ ರೋಗಿಗೂ ಇರುತ್ತದೆ, ವೈದ್ಯರಿಗೂ ಇರುತ್ತದೆ. ಶುರುವಿನಲ್ಲಿ ಒಂದಷ್ಟು ಒಳ್ಳೆಯ ಪರಿಣಾಮವೂ ಕಾಣಬಹುದು. ಆದರೆ ಸಮಯ ಕಳೆದಂತೆಲ್ಲಾ ರೋಗಲಕ್ಷಣಗಳು ಮತ್ತೆ ಮರುಕಳಿಸುತ್ತವೆ. ಒಂದು ತೊಂದರೆ ಶಮನವಾದರೆ ಇನ್ನೊಂದು ಉಲ್ಬಣಿಸುತ್ತದೆ. ಯಾವುದೋ ಒಂದು ಹಂತದಲ್ಲಿ ರೋಗಿ-ವೈದ್ಯ ಇಬ್ಬರಿಗೂ ಭರವಸೆ ಕರಗುತ್ತದೆ. ನಿರೀಕ್ಷಿತ ಪರಿಣಾಮ ಕಾಣದ ರೋಗಿ ಇನ್ನೊಬ್ಬ ವೈದ್ಯರನ್ನು ಹುಡುಕಿಕೊಂಡು ಹೋಗುತ್ತಾನೆ ಅಥವಾ ವೈದ್ಯರೇ ಇನ್ಯಾರೋ ಸ್ಪೆಷಲಿಸ್ಟರಿಗೆ ರೋಗಿಯನ್ನು ದಾಟಿಸಿ ಕೈತೊಳೆದುಕೊಂಡುಬಿಡುತ್ತಾರೆ.

ಮತ್ತೆ ಇನ್ನೊಂದಿಷ್ಟು ಟೆಸ್ಟುಗಳು, ಬಗೆಬಗೆಯ ಮಾತ್ರೆಗಳು, ಕೆಲವೊಮ್ಮೆ ಅನಗತ್ಯ ಸರ್ಜರಿಗಳು. ಅಲ್ಲಿಂದ ಮತ್ತೊಬ್ಬ ವೈದ್ಯನನ್ನೋ, ಇನ್ನೊಂದು ವೈದ್ಯಪದ್ಧತಿಯನ್ನೋ… ಹೀಗೆ ಕಾಯಿಲೆಯ ಸೂಕ್ತ ಕಾರಣದ ನಿರಂತರ ಹುಡುಕಾಟ. ಫುಟ್ಬಾಲ್ ಚೆಂಡಿನ ತರಹ ವೈದ್ಯರಿಂದ ವೈದ್ಯರಿಗೆ… ಪ್ರತಿಬಾರಿಯೂ ಒಂದಿಷ್ಟು ಹೊಸಭರವಸೆ, ಕಾಲಕಳೆದಂತೆ ಮತ್ತೆ ಭ್ರಮನಿರಸನ… ಕಡೆಗೊಮ್ಮೆ, ವೈದ್ಯರೂ, ಮನೆಯವರೂ, ಮಿತ್ರರೂ ಎಲ್ಲರೂ ಬಾಗಿಲು ಮುಚ್ಚಿಬಿಡುತ್ತಾರೆ.

ವೈದ್ಯರು, ಇವರ ನೋವುಗಳ ನೈಜತೆಯನ್ನು ತನಿಖೆ ಮಾಡುವುದಿಲ್ಲ.

ಮನೆಯವರು, ಯಾವುದೇ ಗಂಭೀರ ಕಾಯಿಲೆಯ ಧೃಡೀಕರಣ ಇಲ್ಲದಿದ್ದರೂ ಸದಾ ನರಳುವ ಇವರ ನಡವಳಿಕೆಯಿಂದ ಹತಾಶರಾಗುತ್ತಾರೆ. ಸದಾ ಸುಖಾಭಾವದಲ್ಲಿರುವ ಇವರ ಬಗ್ಗೆ ಬಂಧುಮಿತ್ರರು ಆಸಕ್ತಿ ಕಳೆದುಕೊಳ್ಳುತ್ತಾರೆ. ಸೂಕ್ತ ಭರವಸೆ, ಸಾಂತ್ವನ ಸಿಗದ ಮನಸ್ಸು ಇನ್ನಷ್ಟು ತೀವ್ರವಾಗಿ ತನ್ನ ಕಾಯಿಲೆಯ ಸ್ವಮಗ್ನತೆಯಲ್ಲಿ ತೊಡಗಿಬಿಡುತ್ತದೆ. ಯಾರೂ ಪತ್ತೆಹಚ್ಚದ ಅಥವಾ ವೈದ್ಯಕೀಯ ವಿವರಣೆಗೆ ದಕ್ಕದ ಅಪರೂಪದ ಕಾಯಿಲೆಯೊಂದು ತಮಗೆ ತಗಲಿರಬಹುದೆನ್ನುವ ಅನುಮಾನ ಶುರುವಾಗುತ್ತದೆ. ಸದಾ ತನ್ನ ನೋವುಗಳನ್ನು, ರೋಗಲಕ್ಷಣಗಳನ್ನು ಗಮನಿಸಿಕೊಳ್ಳುವ, ಇರುವ ನೋವನ್ನು ಉತ್ಪ್ರೇಕ್ಷಿಸಿಕೊಂಡು ಆತ್ಮಾನುಕಂಪ ಅನುಭವಿಸುವ ಚಾಳಿಗೆ ಮನಸ್ಸು ತುತ್ತಾಗುತ್ತದೆ. ಮಧ್ಯವ್ಯಸನಿಯೊಬ್ಬ ಯಾವ ಕೆಲಸ ಮಾಡುತ್ತಿದ್ದರೂ ಸದಾ ಮದ್ಯದ ಧ್ಯಾನದಲ್ಲೇ ಕಾಲಕಳೆಯುವ ಹಾಗೆ ಮನಸ್ಸು ತನ್ನ ಕಾಯಿಲೆಯ ವಿವರಗಳಲ್ಲೇ ಮಗ್ನವಾಗಿಬಿಡುತ್ತದೆ. ಸಹಜವಾಗಿಯೇ ಕೆಲಸ, ಕಾರ್ಯ, ಹವ್ಯಾಸ, ಸಂಬಂಧಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.

ತಮ್ಮ ಕಾಯಿಲೆಯಿಂದ ಹೊರಬರುವ ದಾರಿ ಗೊತ್ತಿಲ್ಲದ ಚಡಪಡಿಕೆ. ಮತ್ತದೇ ಹೊಸ ಪ್ರಯತ್ನಗಳು, ಅದೇ ಹತಾಶೆ. ಇನ್ನಷ್ಟು ಸ್ವಮಗ್ನತೆ, ಮತ್ತಷ್ಟೂ ಹೊಸರೋಗಲಕ್ಷಣಗಳು. ಕೊನೆಯೇ ಇಲ್ಲದ ಕಾಯಿಲೆಯ ಪಯಣ. ಇದೆಂಥಾ ವಿಚಿತ್ರ ಕಾಯಿಲೆ! ನನಗೆ ಗೊತ್ತು, ವೈದ್ಯನಾಗಿ ನಾನು ಮಾಡಿದ್ದು ಅಂಥಾ ದೊಡ್ಡ ತಪ್ಪೇನಲ್ಲ. ಕೆಲಸದ ಒತ್ತಡವಿದ್ದಾಗ ಯಾವ ವೈದ್ಯನಾದರೂ ತೋರಬಹುದಾದ ಒಂದು ಸಣ್ಣ ಅಸಹನೆ, ಒಂದಿಷ್ಟು ತೀಕ್ಷ್ಣ ಪ್ರತಿಕ್ರಿಯೆ. ಆದರೂ ಮನಸ್ಸಿನಲ್ಲಿ ಒಂದು ಅಪರಾದಿ ಭಾವ. ಎಲ್ಲ ಬಗೆಯ ನೆರವಿನ ಆಧಾರ ಕಳೆದುಕೊಂಡು ತನ್ನ ನೋವುಗಳಲ್ಲೇ ಮುಳುಗಿಹೋಗಿರುವ ಜೀವಕ್ಕೆ ಒಂದಿಷ್ಟಾದರೂ ನೆಮ್ಮದಿ ನೀಡಲು ನಾನು ಇನ್ನೂ ಏನಾದರೂ ಮಾಡಬಹುದಿತ್ತಾ? ಗೊತ್ತಿಲ್ಲ! ಆದರೂ ಇನ್ನೊಮ್ಮೆ ಪ್ರಯತ್ನಿಸಬಹುದು.

ಬೆಳಿಗ್ಗೆ ರಿಸೆಪ್ಷನಿಸ್ಟಳ ಹತ್ತಿರ ಮಧುಮಾಲತಿಯ ಫೋನ್ ನಂಬರ್ ತೆಗೆದುಕೊಂಡು ನೇರವಾಗಿ ನಾನೇ ಆಕೆಗೊಂದು ಕರೆಮಾಡಿದೆ.

“ತಪ್ಪುತಿಳಿಯಬೇಡಿ ಮಧುಮಾಲತಿ, ನಿನ್ನೆ ಕೆಲಸದ ಒತ್ತಡ ಸ್ವಲ್ಪ ಜಾಸ್ತಿ ಇತ್ತು. ಹಾಗಾಗಿ ನಿಮಗೆ ಹೆಚ್ಚು ಸಮಯ ಕೊಡಲಾಗಲಿಲ್ಲ. ನಮ್ಮ ಭೇಟಿ ಪೂರ್ತಿಯಾಗಲಿಲ್ಲ. ಇವತ್ತು ಭಾನುವಾರ ಬೇರೆ ಅಪಾಯಿಂಟ್ಮೆಂಟುಗಳಿಲ್ಲ. ನಿಮಗೆ ಅಗತ್ಯ ಇದೆ ಅನ್ನಿಸಿದರೆ ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಬನ್ನಿ. ನಿಮ್ಮ ಸಲುವಾಗಿ ಸ್ವಲ್ಪ ಸಮಯ ತೆಗೆದಿಡುತ್ತೇನೆ” ಅಂದೆ.
“ಇಲ್ಲ ಡಾಕ್ಟ್ರೇ, ಭಾನುವಾರ ನಿಮಗ್ಯಾಕೆ ತೊಂದರೆ, ನಿಮಗೂ ಬಿಡುವು ಸಿಕ್ಕುವುದು ಅಪರೂಪ, ನನ್ನ ಗೋಳು ಇದ್ದದ್ದೇ ಅಲ್ವಾ?” ಮಾತಿನ ದಾಟಿ ಸೌಜನ್ಯದಿಂದ ಕೂಡಿದ್ದರೂ ಗಮನಿಸಿದರೆ ಅದರಲ್ಲೊಂದು ಮೊನಚಿತ್ತು.
“ತೊಂದರೆ ಹೌದು, ಆದರೂ ಪರವಾಗಿಲ್ಲ, ನಿಮ್ಮ ಸಲುವಾಗಿ ಸ್ವಲ್ಪ ತೊಂದರೆ ತೆಗೆದುಕೊಳ್ಳುತ್ತೇನೆ, ದಯವಿಟ್ಟು ಬನ್ನಿ” ಅಂದೆ, ಲಘುವಾಗಿ, ನಗುವಾಗಿ.

ಇಂದು ಮುಂಜಾನೆ ಹನ್ನೊಂದಕ್ಕೆ ಮತ್ತದೇ ಭೇಟಿ. ಮತ್ತದೇ ತನ್ನ ನೋವುಗಳ ವಿವರಣೆಯಲ್ಲಿ ತೀವ್ರವಾಗಿ ವಿವಶವಾಗಿಬಿಡುವ ಮನಸ್ಸು. ನಾನು ಸಂಕ್ಷಿಪ್ತವಾಗಿರಬೇಕು ಆದರೆ ಸಂಪೂರ್ಣ ತೊಡಗಿಸಿಕೊಳ್ಳಬೇಕು. ಸುದೀರ್ಘವಾದ ಎಲ್ಲ ದೈಹಿಕ ನೋವುಗಳ ವಿವರಗಳನ್ನು ಆಕೆಯ ಭಾವನಾತ್ಮಕ ಸಮಸ್ಯೆಗಳ ಅಭಿವ್ಯಕ್ತಿಯಾಗಿ ಕೇಳಿಸಿಕೊಳ್ಳಬೇಕು. ಕ್ರಮೇಣ ಆಕೆಯ ಎಲ್ಲ ದುಃಖಗಳ ಮೂಲಸ್ರೋತವಾದ ಮನಸ್ಸಿನ ಒತ್ತಡಗಳ ಬಗ್ಗೆ, ಕಾಯಿಲೆಯಲ್ಲಿ ಅದರ ಪಾತ್ರದ ಬಗ್ಗೆ ಆಕೆಗೆ ಅರಿವು ಹೆಚ್ಚಿಸಲು ಪ್ರಯತ್ನಿಸಬೇಕು. ಇನ್ನೊಂದು ಹೊಸ ವೈದ್ಯಕೀಯ ತಪಾಸಣೆಗೆ, ಬೇರೊಬ್ಬ ಸ್ಪೆಷಲಿಸ್ಟರ ಭೇಟಿಗೆ ನಯವಾಗಿ ಆದರೆ ಧೃಡವಾಗಿ, ಸಕಾರಣವಾಗಿ ನಿರಾಕರಿಸಬೇಕು. ನಿಜಕ್ಕೂ ಎಷ್ಟು ಪ್ರಯೋಜನವಾಗುತ್ತದೆಯೋ ಗೊತ್ತಿಲ್ಲ. ಆದರೆ ನನಗೆ ಆಕೆಯನ್ನು ನಿರ್ವಹಿಸುವುದು ಅಷ್ಟು ಕಷ್ಟವಾಗಲಿಕ್ಕಿಲ್ಲ, ಬಹುಷಃ!

 

(ಮುಖಪುಟ ಚಿತ್ರ: ರೂಪಶ್ರೀ ಕಲ್ಲಿಗನೂರ್)