Advertisement
ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ

ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ

ಸ್ವಭಾವತಃ ಚಲನಾಶಕ್ತಿಯಿಲ್ಲದ ಮರ-ಗಿಡ ಸಸ್ಯಗಳು ತಮ್ಮ ಸಂತಾನೋತ್ಪತ್ತಿಗಾಗಿ ಅವಶ್ಯವಿರುವ ಬೀಜಪ್ರಸರಣ ಕಾರ್ಯಕ್ಕಾಗಿ ಇತರ ಜೀವಿಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ವಿವಿಧ ಬಣ್ಣಗಳಿಂದ ಕೂಡಿದ, ರುಚಿಕರವಾದ, ಮತ್ತು ಇವೆಲ್ಲಕಿಂತ ಮಿಗಿಲಾಗಿ ಎಲ್ಲ ಪೌಷ್ಟಿಕ ಅಂಶಗಳಿಂದಲೂ ಕೂಡಿದ ಸುಮಧುರ ಹಣ್ಣುಗಳ ಮೂಲಕ ಆಕರ್ಷಿಸುತ್ತವೆ. ಈ ಕಾರ್ಯದಲ್ಲಿ ಕೂಡ ಉಳಿದ ಜೀವಿಗಳಿಗಿಂತ ಹಕ್ಕಿಗಳ ಪಾತ್ರ ಗಮನೀಯ. ತಿಂದ ಹಣ್ಣಿನ ಬೀಜವನ್ನು ದೂರದೂರದೆಡೆಗಳಲ್ಲಿ ಉಗಿಯುವುದು ಒಂದು ರೀತಿಯಾದರೆ, ತಿಂದ ಹಣ್ಣಿನ ಬೀಜ ಹಕ್ಕಿಯ ಉದರ ಸೇರಿ, ಹಿಕ್ಕೆಯ ಮೂಲಕವೂ ಹರಡಬಲ್ಲದು.
ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ಪಕ್ಷಿಗಳಿಂದ ನಮಗಾಗುವ ಪ್ರಯೋಜನಗಳೇನು?

ಭೂಮಿಗೆ ಪಕ್ಷಿಗಳಿಗಿಂತ ಮುಂಚೆ, ಅಂದರೆ 25 ಕೋಟಿ ವರ್ಷಗಳ ಹಿಂದೆಯೇ, ವಿಕಾಸ ಹೊಂದಿ ಉದಿಸಿದ ಕೀಟವರ್ಗ ಸಂಖ್ಯಾಬಾಹುಳ್ಯದಲ್ಲೂ, ಒಟ್ಟು ಮೊತ್ತದಲ್ಲೂ, ಬೇರೆಲ್ಲ ಸಸ್ಯ-ಪ್ರಾಣಿ ಬಾಹುಳ್ಯವನ್ನು ಮೀರುತ್ತವೆ. ಒಂದು ವರ್ಷದ ಅವಧಿಯಲ್ಲಿಯೇ ತಮ್ಮ ಸಂತತಿಯನ್ನು ಹದಿಮೂರು ತಲೆಮಾರಿನಷ್ಟು ಬೆಳೆಸುವ ಕೀಟಗಳಿವೆ. ಕೀಟಗಳು ಎಲ್ಲ ಜೀವಿಗಳಿಗೂ ಒಂದಲ್ಲ ಒಂದು ರೀತಿ ಆಹಾರವಸ್ತುವಾಗಿವೆ. ಈ ಮೂಲಕ ಅವುಗಳ ಸಂಖ್ಯೆ ನಿಯಂತ್ರಣದಲ್ಲಿದ್ದು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಹಕ್ಕಿಗಳು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಕೀಟಭಕ್ಷಕಗಳಾಗಿ ಅವುಗಳನ್ನು ಸಮರ್ಥವಾಗಿ ಹತೋಟಿಯಲ್ಲಿಡುತ್ತವೆ. ಪೂರ್ಣ ಸಸ್ಯಾಹಾರೀ ಹಕ್ಕಿಗಳೂ ಕೀಟಗಳನ್ನು ಹಿಡಿದು ತಮ್ಮ ಮರಿಗಳಿಗೆ ಉಣಿಸುವುದನ್ನು ಕಾಣಬಹುದು. ಅಲ್ಲದೆ, ನಿರಂತರವಾಗಿ ಹಾರಾಟದಲ್ಲಿರುವ ಹಕ್ಕಿಗಳಿಗೆ ಹೆಚ್ಚು ಶಕ್ತಿ ವ್ಯಯವಾಗುವುದರಿಂದ ಅದನ್ನು ಪುನಃ ಅರ್ಜಿಸಲು ಕೀಟಭಕ್ಷಣೆ ಉತ್ತಮ ಮಾರ್ಗವಾಗಿ ಪರಿಣಮಿಸಿದೆ. ಹೊಲ-ಗದ್ದೆಗಳಲ್ಲಿ ನಷ್ಟವನ್ನುಂಟುಮಾಡುವ ಕ್ರಿಮಿ-ಕೀಟಗಳನ್ನು, ನೊಣಹಿಡುಕ, ಬೇಲಿಚಟಕ, ಕಾಜಾಣ, ಕಳಿಂಗ ಮುಂತಾದ ಹಕ್ಕಿಗಳು ತಿಂದು ಹತೋಟಿಯಲ್ಲಿಡುತ್ತವೆ. ಮರದ ಕಾಂಡ ಕೊರೆಯುವ ಕೀಟ, ಗೆದ್ದಲು ಮುಂತಾದ ಹುಳಗಳನ್ನು, ಅವುಗಳ ಮೊಟ್ಟೆ, ಮರಿಹುಳಗಳನ್ನೂ ತಿಂದು ಮರಕುಟ್ಟಿಗ ತಿಂದು ವೃಕ್ಷದ ಆರೋಗ್ಯವನ್ನು ರಕ್ಷಿಸಿದರೆ, ಕಾಡುಕೋಳಿ ಮರದ ಬೇರನ್ನು ನಾಶಮಾಡುವ ಕೀಟಗಳನ್ನು ತಿನ್ನುತ್ತದೆ. ಗುಡುಗಾಡು ಹಕ್ಕಿಗಳು ಹೊಲ-ಗದ್ದೆಗಳಲ್ಲಿ ಬೆಳೆಯುವ ಕಳೆ ಬೀಜಗಳನ್ನು ತಿಂದು ರೈತನಿಗೆ ಕಳೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಆದ್ದರಿಂದ ಕೀಟನಿಯಂತ್ರಣ, ಹಕ್ಕಿಗಳ ಅತಿಮುಖ್ಯ ಕಾರ್ಯವೆಂದು ಹೇಳಬಹುದು.

ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಪರಾಗಸ್ಪರ್ಶ ಅತಿ ಮಹತ್ತರವಾದ ಘಟ್ಟ. ಇದಕ್ಕೆ ಪೂರಕವಾಗಿ ಮರ-ಗಿಡಗಳು ಬಣ್ಣಬಣ್ಣದ ಹೂತಳೆದು, ಪರಿಮಳ ಮತ್ತು ಮಕರಂದವನ್ನು ಸೂಸಿ, ಹಕ್ಕಿಗಳನ್ನು ಆಕರ್ಷಿಸುತ್ತವೆ. ಗಾಳಿ, ಕೀಟಗಳು, ಸ್ತನಿಗಳು ಇನ್ನಿತರ ಜೀವಿಗಳು ಪರಾಗಸ್ಪರ್ಶಕ್ರಿಯೆಯಲ್ಲಿ ಭಾಗವಹಿಸಿದರೂ ಹಕ್ಕಿಗಳ ಪಾತ್ರ ಮಹತ್ತರವಾದದ್ದು. ಹಕ್ಕಿಗಳ ಕೊಕ್ಕಿನ ಮೇಲಿರುವ ಕುಂಚದಂತಹ ಗರಿಗಳ ಮೇಲೆ ಪರಾಗಗಳು ಅಂಟಿಕೊಳ್ಳುತ್ತವೆ. ಮೈನಾಹಕ್ಕಿ, ಎಲೆಹಕ್ಕಿ, ಗಿಣಿ, ಸೂರಕ್ಕಿ, ಬಾಳೆಗುಬ್ಬಿ ಮುಂತಾದ ಅನೇಕ ಪ್ರಭೇದದ ಪಕ್ಷಿಗಳು ಹೂವುಗಳ ಮಕರಂದ ಕುಡಿಯುವ ನೆಪದಲ್ಲಿ ಅಸಂಖ್ಯ ಪರಾಗಗಳನ್ನು ಇತರ ಹೂವುಗಳಿಗೆ ಹರಡುವುದರ ಮೂಲಕ ಪರಾಗಸ್ಪರ್ಶದಲ್ಲಿ ಭಾಗವಹಿಸಿ, ಸಸ್ಯ ಸಂಪತ್ತು ಹೆಚ್ಚುವುದಕ್ಕೆ ಕಾರಣವಾಗುತ್ತವೆ.

ಸ್ವಭಾವತಃ ಚಲನಾಶಕ್ತಿಯಿಲ್ಲದ ಮರ-ಗಿಡ ಸಸ್ಯಗಳು ತಮ್ಮ ಸಂತಾನೋತ್ಪತ್ತಿಗಾಗಿ ಅವಶ್ಯವಿರುವ ಬೀಜಪ್ರಸರಣ ಕಾರ್ಯಕ್ಕಾಗಿ ಇತರ ಜೀವಿಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ವಿವಿಧ ಬಣ್ಣಗಳಿಂದ ಕೂಡಿದ, ರುಚಿಕರವಾದ, ಮತ್ತು ಇವೆಲ್ಲಕಿಂತ ಮಿಗಿಲಾಗಿ ಎಲ್ಲ ಪೌಷ್ಟಿಕ ಅಂಶಗಳಿಂದಲೂ ಕೂಡಿದ ಸುಮಧುರ ಹಣ್ಣುಗಳ ಮೂಲಕ ಆಕರ್ಷಿಸುತ್ತವೆ. ಈ ಕಾರ್ಯದಲ್ಲಿ ಕೂಡ ಉಳಿದ ಜೀವಿಗಳಿಗಿಂತ ಹಕ್ಕಿಗಳ ಪಾತ್ರ ಗಮನೀಯ. ತಿಂದ ಹಣ್ಣಿನ ಬೀಜವನ್ನು ದೂರದೂರದೆಡೆಗಳಲ್ಲಿ ಉಗಿಯುವುದು ಒಂದು ರೀತಿಯಾದರೆ, ತಿಂದ ಹಣ್ಣಿನ ಬೀಜ ಹಕ್ಕಿಯ ಉದರ ಸೇರಿ, ಹಿಕ್ಕೆಯ ಮೂಲಕವೂ ಹರಡಬಲ್ಲದು. ಮತ್ತೊಂದು ಅಂಶವೆಂದರೆ, ಕೆಲವು ಬೀಜಗಳಿಗೆ ಕಠಿಣವಾದ ಹೊರಕವಚವಿದ್ದು ಇವು ಪಕ್ಷಿಗಳ ಜಠರದಲ್ಲಿ ಪಚನವಾಗಿ ಕರಗುವುದರಿಂದ ಭೂಮಿಯ ಮೇಲೆ ಮೊಳಕೆಯೊಡೆಯಲು ಸಾಧ್ಯವಾಗುತ್ತದೆ ಮತ್ತು ಹೊಸ ಮರಗಿಡಗಳ ಹುಟ್ಟಿಗೆ, ಕಾಡು-ವನಗಳ ಬೆಳವಣಿಗೆಗೆ ಕಾರಣವಾಗುತ್ತವೆ.

ನಮ್ಮ ದೇಶದ ಆಹಾರ ಧಾನ್ಯಗಳ ಉತ್ಪತ್ತಿಯಲ್ಲಿ ಶೇಕಡ ಹತ್ತು-ಹದಿನೈದರಷ್ಟು ಪಾಲು ದಂಶಕ (ಇಲಿ, ಅಳಿಲು…)ಗಳ ಕುಟುಂಬಕ್ಕೆ ಸೇರಿದ ಇಲಿ-ಹೆಗ್ಗಣಗಳ ಪಾಲಾಗುತ್ತಿದೆ ಎಂಬುದು ತಜ್ಞರ ಅಂದಾಜು. ಸುಗ್ಗಿಯ ಸಮಯದಲ್ಲಿ ಈ ಪ್ರಾಣಿಗಳ ಸಂತಾನೋತ್ಪತ್ತಿಯೂ ಅಷ್ಟೇ ವೇಗ. ಅಲ್ಲದೆ ಇವುಗಳಿಂದ ರೋಗ-ರುಜಿನಗಳೂ ಹರಡುತ್ತವೆ. ಇಂತಹ ವಿನಾಶಕಾರಿ ಜಂತುಗಳನ್ನು ತಿಂದು ಅವುಗಳ ಸಂಖ್ಯೆಯನ್ನು ಹತೋಟಿಯಲ್ಲಿಡುವ ಕೆಲಸ ಸಾಮಾನ್ಯವೇನಲ್ಲ. ದಂಶಕಗಳಲ್ಲದೆ ಮೊಲ ಮುಂತಾದ ಪ್ರಾಣಿಗಳನ್ನು ಹದ್ದು, ಗೂಬೆ ಇನ್ನಿತರ ಬೇಟೆಪಕ್ಷಿಗಳು ತಿಂದು ನಿಯಂತ್ರಣದಲ್ಲಿಡುತ್ತವೆ. ಒಂದು ಗೂಬೆ ಒಂದೇ ರಾತ್ರಿಯಲ್ಲಿ ನಾಲ್ಕರಿಂದ ಎಂಟು ಇಲಿಗಳನ್ನು ಕೊಂದು ತಿನ್ನುತ್ತದೆ!

ಕಾಡಿನಲ್ಲಿ ಪ್ರಾಣಿ-ಪಕ್ಷಿಗಳು ಸಾಯುವುದೇ ಇಲ್ಲವೆ? ಸತ್ತರೆ, ಅವುಗಳ ಕೊಳೆತ ವಾಸನೆ ಎಲ್ಲಿಯೂ ಕಾಣಿಸುವುದಿಲ್ಲವಲ್ಲ? ಅಲ್ಲೇನಿದ್ದರೂ ಹೂ-ಹಣ್ಣುಗಳ ಪರಿಮಳಯುಕ್ತ ಪರಿಸರ! ಸತ್ತು ಕೊಳೆಯುವ ಪ್ರಾಣಿಗಳನ್ನು ರಣಹದ್ದು, ಗಿಡುಗ, ಕಾಗೆಗಳು ಆಗಿಂದಾಗ್ಯೆ ತಿಂದು ಕಾಡಿನ ವಾತಾವರಣವನ್ನು ನಿರ್ಮಲವಾಗಿಡುವುವು. ಅಲ್ಲದೆ, ಊರ ಹೊರಗಿನ ಕಸದ ತೊಟ್ಟಿಗಳನ್ನು ಸ್ವಚ್ಛವಾಗಿರಿಸಲೂ ಈ ಹಕ್ಕಿಗಳು ಸಹಾಯ ಮಾಡುತ್ತವೆ. ಹೀಗೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ಈ ಹಕ್ಕಿಗಳು ಸಮರ್ಥವಾಗಿ ತಡೆಗಟ್ಟುತ್ತವೆ.

ಸಮುದ್ರ ತೀರದಲ್ಲಿ ಅಗಾಧ ಪ್ರಮಾಣದಲ್ಲಿ ಸಂಗ್ರಹವಾಗುವ ಮೀನು ಹಿಡಿಯುವ ಹಕ್ಕಿಗಳ ಹಿಕ್ಕೆ, ಸಾರಯುಕ್ತ ನೈಸರ್ಗಿಕ ರಸಗೊಬ್ಬರ ಕೂಡ. ಅರಣ್ಯದಲ್ಲಿ ಕೂಡ ಅಸಂಖ್ಯ ಹಕ್ಕಿಗಳ ಹಿಕ್ಕೆ ನೆಲದ ಸಾರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.

ಮಾಂಸ-ಮೊಟ್ಟೆಗಾಗಿ, ಬಾತುಕೋಳಿ, ಕೋಳಿ ಇತ್ಯಾದಿ ಪಕ್ಷಿಗಳ ಸಾಕಣೆ, ಅನೇಕ ಜನಗಳಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ಇಂದು ಪ್ರಪಂಚದಾದ್ಯಂತ ಬೆಳೆಸುತ್ತಿರುವ ಸಾಕು ಕೋಳಿಗಳಿಗೆಲ್ಲ ಭಾರತದ ಉತ್ತರ ಮತ್ತು ಪೂರ್ವಭಾಗದ ಒತ್ತಾದ ಕಾಡುಗಳಲ್ಲಿ ವಾಸವಾಗಿರುವ ಕೆಂಪು ಕಾಡುಕೋಳಿಯ ಸಂತತಿಯೇ ಮೂಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು!

ಅರಣ್ಯದಲ್ಲಿ ಹಲವು ಪ್ರಾಣಿಗಳು ಹಕ್ಕಿಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡು ಬೆಳೆಯುತ್ತವೆ. ಅಲ್ಲದೆ ಸತ್ತ ಹಕ್ಕಿಗಳೂ ಇತರ ನಿಕೃಷ್ಟ ಜೀವಿಗಳಿಗೆ ಆಹಾರವಾಗುತ್ತವೆ.

ಇವೆಲ್ಲಕ್ಕೂ ಮಿಗಿಲಾಗಿ, ಪಕ್ಷಿಗಳ ಮಧುರಧ್ವನಿ, ಚಿತ್ತಾಕರ್ಷಕ ಬಣ್ಣಗಳು ಪ್ರಕೃತಿಯ ಸೊಬಗಿಗೆ ಕಿರೀಟಪ್ರಾಯವಾಗಿದೆ.

ಹೀಗೆ ಹಕ್ಕಿಗಳ ಜೀವನಚಕ್ರಗಳು ಪರಿಸರದ ಎಲ್ಲ ಗಿಡಮರಬಳ್ಳಿಗಳ ಜೀವನಚಕ್ರದೊಂದಿಗೆ ಬೆಸೆದುಕೊಂಡು ಪ್ರಕೃತಿಯ ಸಮತೋಲನವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಅಂಗೈ ಅಗಲದ ಕಾಡು ಬೆಳೆಸಲು ನಾವು ಹಾಕುವ ಯೋಜನೆಗಳೇನು? ಖರ್ಚೇನು? ಶ್ರಮವೇನು? ಆದರೆ ಪ್ರಪಂಚದ ಮೂರನೇ ಎರಡು ಭೂಭಾಗದಷ್ಟು ವಿಶಾಲವಾದ, ಸಮೃದ್ಧವಾದ, ವೈವಿಧ್ಯಮಯ ಕಾಡನ್ನು ಬೆಳೆಸಲು ಹಕ್ಕಿಗಳು ಮತ್ತು ಅವುಗಳಂತಹ ಇತರ ಸಣ್ಣಸಣ್ಣ ಜೀವಿಗಳೇ ಕಾರಣ ಎಂಬುದನ್ನು ನಾವು ಅರಿಯಬೇಕು. ಇವೆಲ್ಲವೂ, ಪಕ್ಷಿಗಳು ಪ್ರತಿದಿನ ನಾಲ್ಕಾರು ಹನಿ ಮಕರಂದ ಕುಡಿದು, ಹತ್ತಾರು ಕಾಡು ಹಣ್ಣುಗಳನ್ನು ತಿಂದು ಆ ಮೂಲಕ ಬೆಳೆಸಿದ ಅತ್ಯಪೂರ್ವ ಸಸ್ಯಸಂಪತ್ತು!

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ