ಹೆಸರ ಓದಿ ಕನಫ್ಯೂಸ್ ಆಗಬ್ಯಾಡ್ರಿ,  ನಮ್ಮ ಪಾಚಾಪುರ ಡಾಕ್ಟರಗೆ ಈ ಹೆಸರ ಬಂದದ್ದು ಅವನ ‘ಧಂಧೆ’ ಮ್ಯಾಲೇ, ಕಲತದ್ದು ಡಾಕ್ಟರಕಿ ಅಂತ ಹೆಸರ ಹಿಂದ ‘ಡಾ||’ ಅಂತ ಬರದೇನಿ, ಆದರ ಅವನ ಉಪಜೀವನ ನಡೇಯೋದು ‘ರಿಯಲ್ ಎಸ್ಟೇಟ್’ಮ್ಯಾಲೆ ಅಂತ ಅದನ್ನ ಮೊದಲ ಸೇರಿಸೇನಿ ಇಷ್ಟ.  ಹಂಗ ಸಣ್ಣ-ಪುಟ್ಟ ನೆಗಡಿ, ಕೆಮ್ಮು, ಜ್ವರಾ, ಹೊಟ್ಟಿ ಝಾಡಸ್ತದ ಹಿಂತಾವನೆಲ್ಲಾ ತೋರಸಬಹುದು. ಇಲ್ಲೇ ನಮ್ಮ ಘಂಟಿಕೇರಿ ತಬೀಬಲ್ಯಾಂಡ ಕ್ರಾಸನಾಗ  ಒಂದ ಹಳೇ ಗಬ್ಬ ನಾರೋ ಸಾರ್ವಜನಿಕ ಮೂತ್ರಿ ಇತ್ತಲಾ, ಆ ಜಗಾದ ಹಿಂದ ಈಗ ಇವನ ಕ್ಲಿನಿಕ್ ಅದ. ಒಣ್ಯಾಗ ಯಾರಿಗರ ‘ಮೂತ್ರಖಾನಿ ಹಿಂದಿನ ದಾವಾಖಾನಿ’ ಎಲ್ಲೇದ ಅಂತ ಕೇಳಿದ್ರ ಸಾಕ ತೋರಸತಾರ.
ಡಾಕ್ಟರಕಿಗೆ ’ಧಂಧೆ’ ಅನ್ನೋ ಶಬ್ದಾ ಓದಿ ಕೆಟ್ಟ ಅನಿಸಿಗೋ ಬ್ಯಾಡರಿ, ಯಾವಾಗ ಡಾಕ್ಟರಕಿ ಒಳಗ ಲಾಭ-ಲೂಕ್ಷಾನಿ ಅನ್ನೋದ ಹೊಕ್ಕತು ಆವಾಗಿಂದ ಅದೂ ಒಂದ ‘ಧಂಧೆ’ನ ಆಗೇದ ಅಂತ ಅನಸ್ತದ. ಪಾಪ ಲಕ್ಷಗಟ್ಟಲೇ ಕೊಟ್ಟ ಓದಿ ಡಾಕ್ಟರ ಆಗಿರತಾರ, ಜನಸೇವೆ – ಜನಾರ್ಧನ ಸೇವೆ ಅಂತ ಸಸ್ತಾದಾಗ ಡಾಕ್ಟರಕಿ ಮಾಡಕೋತ ಹೊಂಟರ ಈ ಕಾಲದಾಗ ‘ರಿಟರ್ನ್ ಆನ್ ಇನ್ವೆಸ್ಟಮೆಂಟ್’ ಎಲ್ಲೆ ಬರಬೇಕು. ಪೇಶಂಟ ‘ರಿಟರ್ನ್’ಬಂದರ ಇಷ್ಟ ಅಲಾ  ‘ರಿಟರ್ನ್ ಆನ್ ಇನ್ವೆಸ್ಟಮೆಂಟ್’. ಅದರಾಗ ಈಗ ಮದ್ಲಿನಂಗ ಒಂದ ನೌಕರಿ, ಒಂದ ಆದಾಯದ ಮ್ಯಾಲೇ ಬದಕಲಿಕ್ಕು ಆಗಂಗಿಲ್ಲಾ, ಏನರ ಇನ್ನೊಂದ ಸೈಡಿಗೆ ಮಾಡಕೋತ ಇರಬೇಕು, ಹಿಂಗಾಗಿ ಈ ಡಾಕ್ಟರಕಿ  ಜೊತಿಗೆ ಇತ್ತಿಚಿಗೆ ನಮ್ಮ ಪಾಚಾಪೂರಂದ ಇನ್ನೋಂದ ‘ಧಂಧೆ’ ಅಂದರ ‘ರಿಯಲ್ ಎಸ್ಟೇಟ್’.
 ಹಂಗ ನೋಡಿದ್ರ ನಮ್ಮ ಪಾಚಾಪೂರಂದ ‘ಹೋಮಿಯೋಪಥಿ’ ಕಲತ ‘ಅಲೋಪಥಿ’ ಪ್ರ್ಯಾಕ್ಟಿಸ್ ಮಾಡೋ ಡಾಕ್ಟರಕಿ. ಹಿಂಗ್ಯಾಕಲೇ ಅಂದರ ನನ್ನ ‘ಅಲೋಪಥಿ’ ಕೈ ಗುಣಾ ಛಲೋ ಅದ ಅಂತಾನ. ಅಲ್ಲಾ, ಇವನ ಪೇಶಂಟಗಳದ್ದ ‘ಕಾಲಗುಣಾ’ ಛಲೋ ಇದ್ದರ ಅವರಿಗೆ ಆರಾಮ ಆಗೆ ಆಗತದ ಅದರಾಗ ಇವನ ‘ಕೈ ಗುಣಾ’ ಏನ ಬಂತ ತಲಿ. ಇಂವಾ ಈ ಹೋಮಿಯೋಪಥಿ ಕಲಿಯೊದಕಿಂತ  ಮೂದಲ ಎರಡ ವರ್ಷ ಮೆಕ್ಯಾನಿಕಲ್ ಇಂಜನಿಯರಿಂಗ್ ಮಾಡಿ ‘ಪ್ರ್ಯಾಕ್ಟಿಕಲ್’ ಇಷ್ಟ್ ಪಾಸಾಗಿ ‘ನನಗ ಈ ಮಶೀನಗಿಂತಾ ಮನಷ್ಯಾರ ಛಲೊ’ ಅಂತ ಅನಿಸಿ ಡಾಕ್ಟರಕಿ ಲೈನ ಗೆ ಬಂದಿದ್ದಾ. ಇವನ ಕಾಲ್ಗುಣಾನೋ ಇವಂಗ ಕಲಿಸದವರ ಕೈಗುಣಾನೋ ಗೊತ್ತಿಲ್ಲಾ  ಒಂದ ಹೊಡತಕ್ಕ ಹೋಮಿಯೋಪಥಿ ಮುಗಿಸಿ ಹುಬ್ಬಳ್ಳಿಗೆ ಬಂದಾ. ಮೂದಲ  ಒಂದ ಆರ ತಿಂಗಳ ಇಲ್ಲೇ ಸತ್ತೂರ ಡಾಕ್ಟರ್ ಕಡೆ ‘ರಿಸೆಪ್ಶನಿಸ್ಟ ಕಮ್ ಅಸಿಸ್ಟಂಟ’ ಅಂತ ಕೆಲಸ ಮಾಡಿದಾ.ಇವಂಗ ಅಲ್ಲೇ ನೋಡ್ರಿ ಯಾ ಗುಳಗಿಗೆ ಯಾ ಜಡ್ಡು ಹೋಗ್ತದ ಅಂತ ಗೊತ್ತಾಗಿದ್ದು. ಅಷ್ಟ ತಿಳ್ಕೊಂಡಾ, ನಾಲ್ಕ ಸತ್ತೂರ ಡಾಕ್ಟರ್ ಪೇಶಂಟ್ ಹಚಗೊಂಡಾ, ಇಂಗ್ಲಿಷನಾಗ ಗುಳಗಿ ಹೆಸರ ಬರಿಲಿಕ್ಕ ಕಲತಾ, ಇಲ್ಲೇನ ಸಾಲ್ಯಾಗಿನ ಗತೆ ಬರಿಬೇಕಾರ ಸ್ಪೆಲಿಂಗ ಕರೆಕ್ಟ್  ಇರಬೇಕು, ಇಂವಾ ಬರದದ್ದ ಎಲ್ಲಾರಿಗೂ ತಿಳಿಬೇಕ ಅಂತೇನ ಇಲ್ಲಾ. ಸವಕಾಶ ಸತ್ತೂರ ಡಾಕ್ಟರ್ ಕಡೆ  ಬಂದ ಪೇಶಂಟದಾಗ ಅರ್ಧಾ  ಒಳಗ ಕಳಸ್ತಿದ್ದಾ ಇನ್ನ ಉಳದವರಿಗೆ ತಾನ ಚಿಟಿ ಬರದ ಕೊಟ್ಟ,
 “ಇವನ ತೋಗೊ ಹೋಗರಿ ಎಲ್ಲಾ ಆರಾಮ ಆಗ್ತದ, ಇಷ್ಟ-ಇಷ್ಟಕ್ಕೆಲ್ಲಾ  ಇಷ್ಟ ದೊಡ್ಡ ಡಾಕ್ಟರ್ ಕಡೆ ಯಾಕ ಬರತೀರಿ ತಲಿಕೆಟ್ಟದನ”, ಅಂತ ಅವರ ದಾವಾಖಾನ್ಯಾಗ ಹಗರಕ  ಸೈಡ್ ಪ್ರ್ಯಾಕ್ಟಿಸ್ ಶುರುಮಾಡಿದ್ದಾ,
ಮುಂದ ಒಂದ ದಿವಸ ‘ಸೈಡ ಪ್ರ್ಯಾಕ್ಟಿಸ್ ಸ್ಟೇಬಲ್’ ಆದ ಮ್ಯಾಲೆ ಮನಿ ಲೈನನಾಗ ಮೂಲ್ಯಾಗ ಇದ್ದಿದ್ದ ಸಾರ್ವಜನಿಕ ಮೂತ್ರಿ ಎಬಿಸಿಸಿ ಅದರ ಹಿಂದ ಇದ್ದ ತಮ್ಮ ಸ್ವಂತ ಜಗದಾಗ ಒಂದ ಕ್ಲಿನಿಕ್ ಮಾಡಿ ಬಿಟ್ಟಾ. ಈಗ ಆ ಓಣ್ಯಾಗ ಜನರಿಗೆ ಒತ್ತರ ಒಂದಕ್ಕ ಬಂದ್ರ ಒಂದ ಮೂತ್ರಖಾನಿ ಇಲ್ಲದಂಗ ಆಗೇದ, ಕೆಲವಬ್ಬರು ಗೊತ್ತಿಲ್ಲದವರು ಗಟ್ಟಿ ಹಿಡಕೊಂಡ ಅಲ್ಲಿ ಮಟಾ ಬಂದ ಬಿಡ್ತಾರ. ತಡಕೊಳ್ಳಿಕ್ಕೆ ಆಗಲಾರದವರು ದಾವಾಖಾನಿಗೆ ಬಂದ ‘ಯುರಿನ್ ಟೆಸ್ಟ’ ಮಾಡಸಿದಂಗ ಮಾಡಿ ತಮ್ಮ  ‘ಬಾವೆಲ್ ಭಾರ’ ಇಳಸಿಗೊಂಡ ” ಸಂಜಿಗೆ ರಿಪೊರ್ಟ ಒಯ್ಯಲಿಕ್ಕೆ ಬಂದಾಗ ರೊಕ್ಕಾ ಕೊಡತೇನ್ರಿ” ಅಂತ ಜಿಗದ ಬಿಡತಾರ. ಬಹುಶಃ ಆ ಮೂತ್ರಖಾನಿ, ದಾವಾಖಾನಿ ಮುಂದ ಹಂಗ ಇದ್ದಿದ್ದರ ಒಣ್ಯಾಗ ಒಂದ ನಾಲ್ಕ ಪೇಶಂಟರ ಜಾಸ್ತಿ ಆಗತಿದ್ದವೋ ಏನೊ? ಇತ್ತೀಚಿಗೆ ಅಂತೂ ಎಲ್ಲಾ ಒಣ್ಯಾಗೂ ಮೂತ್ರಖಾನಿ ಕಡಿಮಿ ದಾವಾಖಾನಿ ಜಾಸ್ತಿ ಆಗಲಿಕತ್ತಾವ.  ಹಿಂಗಾಗಿ ಪೇಶಂಟ್ ಕಡಿಮಿ, ಡಾಕ್ಟರ್ ಜಾಸ್ತಿಯಾಗಿ ಅವರವರ ಒಳಗ ಭಾಳ ಕಾಂಪಿಟೇಶನ್ ಶುರು ಆಗೇದ, ಆದಾಯ ಕಡಿಮೆ ಆಗಲಿಕತ್ತದ. ಕೆಲವೂಮ್ಮೆ ಅಂತೂ ಆ ‘ಮೆಡಿಕಲ್ ರೇಪ್’ ಗಳಿಸಿದಷ್ಟು ಈ ಸಂದ್ಯಾಗಿನ ಡಾಕ್ಟರ  ಗಳಸಂಗಿಲ್ಲ.
ನಮ್ಮ ಪಾಚಾಪೂರಂದ ‘ಕ್ಲಿನಿಕ್’ ಇಂವಾ ಅನ್ನಕೊಂಡಷ್ಟ ‘ಕ್ಲಿಕ್’ಆಗಲಿಲ್ಲ. ಸಾರ್ವಜನಿಕ ಮೂತ್ರಖಾನಿಗೆ ಬಂದಷ್ಟ ಮಂದಿ ದಾವಾಖಾನಿಗೆ ಬರಂಗಿಲ್ಲಾ ಖರೆ, ಆದರೂ ದಾವಾಖಾನ್ಯಾಗ ಒಂದ ಹೆಣ್ಣಾಳ ಇಡೋ ಮಟ್ಟಿಗರ  ಏಳಿಗಿ ಆಗಬೇಕಿತ್ತು. ಇವನ ಕಡೆ ಬರೋ ಪೇಶಂಟದ ಏಳಿಗಿ ಆಗಿದ್ದರ ಇವಂದು ಏಳಿಗಿ ಆಗತಿತ್ತೋ ಏನೋ? ಎಲ್ಲಾ ೧೦ ರೂಪಾಯಿ  ೨೦ ರೂಪಾಯಿ ಗಿರಾಕಿನ. ಏನೋ ಸ್ವಂತ ಕ್ಲಿನಿಕ್, ಅವರಪ್ಪಾ ಭಾಡಗಿ ಕೇಳಂಗಿಲ್ಲಾ ಅಂತ ನಡದಿತ್ತು,
 ” ನನ್ನ ಮಗಾ ಹುಬ್ಬಳ್ಳಾಗ ದೊಡ್ಡ ಡಾಕ್ಟರ್ ” ಅಂತ ಪಾಚಾಪೂರ ಮಾಸ್ತರು  ಬೆಳಗಾಂವ  ನಾಡಕರ್ಣಿಯವರನ ನಂಬಿಸಿ ಅವರ ಮನಿ ಕನ್ಯಾ ತಮ್ಮ ಮನಿ ಸೊಸಿ ಮಾಡಿಕೊಂಡಿದ್ದರು, ಆಕಿಗೆ ಇವನ ನಾಡಿ ಹಿಡದ ‘ಕಫಾ’ನೊ’ಪಿತ್ತೊ’ ಅಂತ ನೋಡೊದ್ರಾಗ  ಅಕಿಗೆ ‘ವಾಂತಿ’ಶುರು ಆಗಿತ್ತು. ನಮ್ಮ ಪಾಚಾಪುರಗ ದಾವಾಖಾನಿ ಹಿಂಗ ನಡದ್ರ ಬಗಿಹರಿಯಂಗಿಲ್ಲ ಇನ್ನ ಸಂಸಾರನೂ ಬೆಳಿತದ ಸುಮ್ಮನ ಏನರ ಸೈಡ್ ಧಂಧೆ ಮಾಡಬೇಕು ಅಂತ ತಲ್ಯಾಗ ಹೊಕ್ಕತು. ಇತ್ತೀಚಿಗೆ ಹುಬ್ಬಳ್ಳಿ ಮಾರ್ಕೆಟನಾಗ ಜಗಾದ್ದ ಧಾರಣಿ ಎತ್ತರಾ ಪತ್ತರಾ ಏರಿದ್ದು, ರಿಯಲ್ ಎಸ್ಟೇಟ್ ಎಜೆಂಟರು ಸಿಕ್ಕಾ-ಪಟ್ಟೆ ರೊಕ್ಕಾ ಮಾಡಕೋಳೋದು ಇದನ್ನೇಲ್ಲಾ ನೋಡಿ ಇವಂಗ ಈ ‘ದೀಡ ಬೈ ಐದ ಫಿಟ’ ಪೇಶಂಟನಾಗ ಏನ ಅದ ಮಣ್ಣ ಅಂತ ಅನಸ್ತು.  ಇವನೂ ಸ್ಕ್ವೆರ್ ಫೀಟ  ದಂಧೆಕ್ಕ ‘ತಲಿ ಕೊಟ್ಟ’ ಡಾಕ್ಟರಕಿಗೆ ಹಗರಕ ‘ಹೆಗಲ ಕೊಡಲಿಕತ್ತಾ’. ಅದರಾಗ ಇವರಪ್ಪ ಪಾಚಾಪುರ ಮಾಸ್ತರದು ಮೊದ್ಲಿಂದ ಹುಬ್ಬಳ್ಯಾಗ ಒಂದಿಷ್ಟ ಅಲ್ಲೆ- ಇಲ್ಲೆ ಬ್ರಾಹ್ಮಣರ ಓಣ್ಯಾಗ ಸಸ್ತಾದಾಗ ತೊಗಂಡ ಇಟ್ಟಿದ್ದ ಜಗಾ ಇದ್ದವು. ಈ ಮಗಾ ಅವನ್ನ ಈಗ ಮಾರಲಿಕ್ಕ ತಗದಾ, ಹಂಗ ಸವಕಾಶ ತಗೋಳೊದು – ಮಾರೋದು ಶುರು ಮಾಡಿದಾ.
ಡಾಕ್ಟರಕಿ ಒಳಗ ಒಂದ ವರ್ಷದಾಗ ಗಳಸೋದನ್ನ ಇದರಾಗ ಒಂದ ಡೀಲನಾಗ ಗಳಸಲಿಕತ್ತಾ. ಮಂದಿ ನಾಡಿ ಮುಟ್ಟಿ ತಿಳ್ಕೊಳ್ಳಲಾರದಾಂವ ಜಾಗದ್ದ ನಾಡಿ ಮಿಡಿತಾ ಅರ್ಥ ಮಾಡ್ಕೋಂಡಾ. ಇತ್ತಿಚಿಗೆ ಬೆಂಗಳೂರಾಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕ ಕೈ ಹಾಕ್ಯಾನ ಅಂತ ಸುದ್ದಿ ಹಬ್ಬೇದ. ಅಂತೂ ಡಾಕ್ಟರ್ ಆಗಿ ಗಳಸಲಾರದಾಂವ ರಿಯಲ್ ಎಸ್ಟೇಟ್ ಮಾಡಿ ಗಳಿಸಲಿಕ್ಕತ್ತಾನ. ತನ್ನ ಡಾಕ್ಟರಕಿ ಡಿಗ್ರಿ ಬಿ.ಎಚ್.ಎಮ್.ಎಸ್  ಮುಂದ ಕೆ.ಎಚ್.ಬಿ, ಸಿ.ಐ.ಟಿ.ಬಿ, ಹುಡಾ, ಬಿ.ಡಿ.ಒ. ಅಂತೇಲ್ಲಾ ಬರಕೊಂಡ ವಿಸಿಟಿಂಗ್ ಕಾರ್ಡ ಮಾಡಸ್ಯಾನ, ಭಾಳ ಮಂದಿ ಇವೇಲ್ಲಾ ಇಂವಾ ಕಲತಿದ್ದ ಡಿಗ್ರಿ ಅಂತ ತಿಳ್ಕೊಂಡಾರ. ಪಾಪ, ಅವರಿಗೇನ ಗೊತ್ತ ಇವೇಲ್ಲಾ ಇಂವಾ ದಲಾಲಿ ಮಾಡೊ ಸರ್ಕಾರಿ ಆಫಿಸ ಮತ್ತ ಲೇಔಟದ ಹೆಸರ ಅಂತ.
ಆದರ ಒಂದ ಅಂತು ಖರೇ ಇತ್ತೀಚಿಗೆ ಹುಬ್ಬಳ್ಯಾಗ ಜಗಾದ್ದ ರೇಟ್ ಸಿಕ್ಕಾ ಪಟ್ಟೆ – ಹುಚ್ಚಾ ಪಟ್ಟೆ ಜಾಸ್ತಿ ಆಗ್ಯಾವ. ತಿಂಗಳಿಗೆ ೧೫ -೨೦ ಸಾವಿರ ರೂಪಾಯಿ ದುಡಿಯೋ ಮಿಡಲ್ ಕ್ಲಾಸ್ ಮನುಷ್ಯಾ ಇವತ್ತ ಹುಬ್ಬಳ್ಯಾಗ ಪ್ಲಾಟ್ ಹಿಡಿಲಾರದಂನಗ ಆಗೇದ, ಸ್ಕೈರ ಫೀಟಗೆ  ೩೦೦ ರೂಪಾಯಿಕ್ಕ ಮೂಸ ನೋಡೋರು ಇಲ್ಲದ ಜಾಗಕ್ಕ ಇವತ್ತ ಕಡಮಿ ಕಡಮಿ ಅಂದರ ಸಾವಿರ ರೂಪಾಯಿ. ಇದಕ್ಕ ಕಾರಣ ಅಂದರ ಹುಬ್ಬಳ್ಯಾಗ ಹುಟ್ಟಿ ಬೆಳೆದ ಇವತ್ತ ಬ್ಯಾರೆ ದೊಡ್ಡ ಊರಾಗ ಸಂಪಾಗಿ ಗಳಸೋ ಮಂದಿ, ಅವರಿಗೆ ಅಲ್ಲೇ ಭೂಮಿಮ್ಯಾಲೇ ಒಂದ ಸ್ಕೈರ ಫೀಟ ಜಾಗಾನು ಸಿಗಂಗಿಲ್ಲ, ಏನಿದ್ದರು ಅಪಾರ್ಟಮೆಂಟ್, ಅದೂ ೫೦-೬೦ ಲಕ್ಷ್ಯ ಕೂಟ್ಟರ ೫೦೦-೬೦೦ ಸ್ಕೈರ ಫೀಟ ಸಿಕ್ಕರ ಭಾಳ, ಹಂತಾವರಿಗೆಲ್ಲಾ ಹುಬ್ಬಳ್ಳಿ ರೇಟ ಭಾಳ ಅನಸಂಗಿಲ್ಲಾ, ಹಿಂಗಾಗಿ ಒಬ್ಬಬ್ಬಾಂವಾ ಎರಡೆರಡ ಪ್ಲಾಟ ಹೇಳಿದ್ದ ರೇಟ ಕೊಟ್ಟ ಹಿಡದ ಹುಬ್ಬಳ್ಳಿ ಮಾರ್ಕೆಟ ಹಳ್ಳಾ ಹಿಡಿಸ್ಯಾರ. ಇದರಿಂದ ಲೋಕಲ್ ಹುಬ್ಬಳ್ಳಿ ಮಂದಿಗೆ, ’ಇಲ್ಲೇ ಹುಟ್ಟಿ-ಇಲ್ಲೇ ಸಾಯೋ’ ನಮ್ಮ ಹಂತಾವರಿಗೆ ಒಂದ  ಜಾಗಾ ಖರೀದಿ ಮಾಡಲಾರದಂಗ ಆಗೇದ.
ಇನ್ನ ಹುಬ್ಬಳ್ಳಿ ಆಜು-ಬಾಜು ಹೋಲದ ರೇಟ್ ಅಂತೂ ಕೇಳೋ ಹಂಗ ಇಲ್ಲಾ, ಮಾತ ಎತ್ತಿದರ ಎಕರೇಕ ೨೦ ಲಕ್ಷದ ಮ್ಯಾಲೆ ಅಂತಾರ, ಅದೂ ಏನರ ಹಾಯವೇಕ್ಕ ಇಲ್ಲಾ ಊರಿಗೆ ಹತ್ತಿತ್ತಂದರ ೫೦ ಲಕ್ಷದ ಕೆಳಗ ಸಿಗಂಗನ ಇಲ್ಲಾ. ಏನಿಲ್ಲಾಂದರು ೧೦೦೦-೨೦೦೦ ಎಕರೆ ಹೊಲಾ ಹುಬ್ಬಳ್ಳಿ ಸುತ್ತ-ಮುತ್ತಲ  ‘ಪಡಾ'(ಖಾಲಿ) ಬಿದ್ದದ, ಬಿತ್ತೋರಿಲ್ಲಾ – ಬೇಳೆಯೋರ ಇಲ್ಲಾ, ಎಲ್ಲಾ ಶ್ರಿಮಂತ ಮಂದಿ, ಒಕ್ಕಲತನ ಗೊತ್ತಿಲ್ಲದವರು ಹುಬ್ಬಳ್ಳಿ ಆಜು-ಬಾಜು ಹೊಲಾ ತೊಗಂಡ ‘ಇನ್ವೆಸ್ಟಮೆಂಟ’ ಅಂತ ಇಟ್ಕೊಂಡಾರ, ಇವರ ತಾವಂತೂ ಕಮತಾ ಮಾಡಂಗಿಲ್ಲಾ, ಮಾಡೋ ರೈತನೂ ಜಾಸ್ತಿ ರೂಕ್ಕಕ್ಕ ಹೊಲಾ ಮಾರಿ ದುಡ್ಡ ತೊಗಂಡ, ಕಮತಾ ಮರತ ‘ಚೈನಿ’ಗೆ ಬಿದ್ದಾನ, ಹುಬ್ಬಳ್ಯಾಗ ನಸಿಕಲೇ ಚಹಾದ ಅಂಗಡಿ ಶುರು ಆಗೂಕ್ಕಿಂತ ಮುಂಚೆ ಇತ್ತೀಚಿಗೆ ಶೆರೆ ಅಂಗಡಿ ಶುರು ಆಗಲಿಕತ್ತಾವ, ಜನಾ ಹಾಲ ತರಲಿಕ್ಕ ಹೋದಾಗ, ವಾಕಿಂಗ ಹೋದಾಗ ಕುಡದ ಬರೋ ಹಂಗ ಆಗೇದ, ವರ್ಷಗಟ್ಟಲೇ ದುಡದ ಎಕರೆಕ್ಕ ೧೦ ಸಾವಿರ ರೂಪಾಯಿಗಳಸೊ ರೈತಗ ಹೊಲಾ ಮಾರಿದ ಮ್ಯಾಲೇ ಲಕ್ಷಗಟ್ಟಲೇ ಬಂದದ, ಜೀವನದಾಗ ಒಮ್ಮೆನೂ ಅಷ್ಟ ರೊಕ್ಕಾ ಕಾಣಲಾರದ ರೈತರು ಇವತ್ತ ದುಂಧ ವೆಚ್ಚಕ್ಕ ಬಿದ್ದಾರ.
ದುಡಿಮೆ ಇಲ್ಲಾ ದುಪ್ಪಡಿ ಇಲ್ಲಾ, ಕಳೆ ಇಲ್ಲಾ – ಬೆಳೆ ಇಲ್ಲಾ, ಭೂಮಿ ತಗೊಂಡೊರಿಗೆ ಅದರ ಮಹತ್ವ ಗೊತ್ತಿಲ್ಲಾ, ಯಲ್ಲಾರೂ ಸೇರಿ ಬೆಳೆ ಬರೋ ಭೂಮಿನ ಬರಡ ಮಾಡಿ, ಹರದ ಪ್ಲಾಟ ಮಾಡಿ ಮಾರಾಕ ಹೊಂಟಾರ, ರೈತರಿಗೂ ಕಮತದಗಿಂತಾ ಪ್ಲಾಟ ಮಾಡೋದ ಭಾಳ ಫಾಯದೇ ಅನಸಲಿಕತ್ತದ,  ಶ್ರಿಮಂತರಿಗೆ ಊರ ಹೊರಗ ಒಂದ ‘ಪಾರ್ಮ ಹೌಸ’ ಮಾಡೋ ಚಟಾ ಹೊಕ್ಕೇದ,  ಅಲ್ಲೇನ ಸುಡಗಾಡ ಫಾರ್ಮಿಂಗೂ ಮಾಡಂಗಿಲ್ಲಾ, ಒಂದಿಷ್ಟ  ಮಾವು, ತೆಂಗು, ಚಿಕ್ಕು  ಹಚ್ಚಿ ವಾರಕ್ಕೊಮ್ಮೆ ದೋಸ್ತರನ್ನ ಕರಕೊಂಡ ಬಂದ ಚಟಾ ತೀರೀಸ್ಕೋಂಡ ಹೋಗೋದ ಬಿಟ್ಟರ ಬ್ಯಾರೇ ಎನು ಅಲ್ಲೇ ಮಾಡಂಗಿಲ್ಲ,
ಹಿಂಗ ಹೊಲಾ ಹೋಗಿ ಪ್ಲಾಟ್ ಆಗಕೋತ ಹೊಂಟ್ರ ಮುಂದ ಕಾಳು, ಕಡಿ ಎಲ್ಲಿಂದ ಬರತಾವ ಅನ್ನೋದನ್ನ ಯಾರೂ ವಿಚಾರ ಮಾಡವಲ್ಲರು. ಇತ್ತಲಾಗ ದೊಡ್ಡ-ದೊಡ್ಡ ಫ್ಯಾಕ್ಟರಿ ಮಾಲಕರೂ ಸಾವಿರಾರ ಎಕರೆ ಜಮೀನ ತೊಗಂಡ ಇಟಗೊಳ್ಳಿಕತ್ತಾರ, ಅದರಿಂದ ಊರಾಗಿನ ತುಂಡ -ತುಂಡ ಭೂಮಿಗೂ  ಸಿಕ್ಕಾ ಪಟ್ಟೆ ರೇಟ್ ಬರಲಿಕತ್ತದ, ಈ ಜಾಗದ್ದ, ಹೊಲದ್ದು  ದಲಾಲಿ ಮಾಡೋ ಮನಷ್ಯಾ ಇವತ್ತ ಕಿಸೆ ತುಂಬ ಗಳಸಲಿಕತ್ತಾನ.
ಇತ್ತೀಚಿಗ ಅಂತು ಹುಬ್ಬಳ್ಳ್ಯಾಗ ಹಜಾಮನಿಂದ ಹಿಡದು ಹಕೀಮನ ತನಕಾ ಎಲ್ಲಾರೂ ರಿಯಲ್ ಎಸ್ಟೇಟ ಮಾಡೋರ ಆಗ್ಯಾರ ಹಂತಾದರಾಗ ಪಾಪ ನಮ್ಮ ಪಾಚಾಪೂರನೂ ಒಬ್ಬಾಂವ, ಎನೋ ನಾಲ್ಕ ದುಡ್ಡ ಮಾಡ್ಕೊಳ್ಳಿಕತ್ತಾನ, ಮಾಡ್ಕೊಳ್ಳಿ, ಎದರಾಗ ಮಾಡ್ಕೊಂಡರ ಏನು ?ಒಟ್ಟ ದುಡ್ಡ  ಗಳಿಸಿದರ ಆತು. ಡಾಕ್ಟರಕಿ ಕಲತಾನ ಅಂದರ ಅದರಾಗ ಮುಂದ ಬರಬೇಕಂತ ಏನ ಇಲ್ಲಲಾ?
 ಪಾಚಾಪೂರ ಹಿಂಗ ಡಾಕ್ಟರಕಿ ಬಿಟ್ಟ ರಿಯಲ್ ಎಸ್ಟೇಟನಾಗ ಧುಮಕಿದ್ದ ನೋಡಿ ನಮ್ಮ ಇನ್ನೊಬ್ಬ ಡಾಕ್ಟರ್ ದೊಸ್ತ್  ‘ಮುತಾಲಿಕ ದೇಸಾಯಿ’ ತಾನೂ  ಅವರಪ್ಪನ ಹಳೇ ಮನಿನ ಬೀಳಿಸಿ ತೂರವಿಗಲ್ಯಾಗ ಅಪಾರ್ಟಮೆಂಟ್  ಕಟ್ಟಲಿಕ್ಕ ಹೊಂಟಾನ. ಪಾಪ ದೇಸಾಯರು ಮಗಾ  ಮನಿಮುಂದ ಒಂದ ಕ್ಲಿನಿಕ್ ಮಾಡಲಿ ಅಂತ ಬಿಟ್ಟಿದ್ದ ಪಿತ್ರಾರ್ಜಿತ ಆಸ್ತಿ ಇದು. ಇವಂಗ ನೋಡಿದ್ರ ಬಿ.ಎ.ಎಮ್. ಎಸ್  ಕಲಿಯೋದ್ರಾಗ ಏಳೂ ಹನ್ನೆರಡಾಣೆ ಆಗಿತ್ತು, ಇನ್ನೇಲ್ಲಿ ಕ್ಲಿನಿಕ್ ಮಾಡೋದ ಅಂತ ಡಾಕ್ಟರಕಿ ಕಲತದ ಸಂಕಟಕ್ಕೊ, ಅವರಪ್ಪನ ಕಾಟಕ್ಕೋ ಹೆಗ್ಗೇರಿ ‘ಆಯರ್ವೇದಿಕ್ಕ ಕಾಲೇಜನಾಗ’ ಲೇಕ್ಚರರ್ ಕಮ್ ಡಾಕ್ಟರ್ ಅಂತ ಫುಲ್ ಟೈಮ್ ಕೆಲಸಕ್ಕ ಸೇರಕೊಂಡಾನ,ಹಂಗ ನೋಡಿದ್ರ ಇಂವಾ ನಮ್ಮ ಇಡಿ ಹುಬ್ಬಳ್ಯಾಗ ‘ಪೈಲ್ಸ ಸ್ಪೆಶಲಿಸ್ಟ’ ಅಂತ ಹೆಸರ ಗಳಿಸ್ಯಾನ, ’ಪೈಲ್ಸ’ ಬಗ್ಗೆ ಭಾಳ ತಿಳಕೊಂಡಾನ, ‘ಬರೇ ಬೀರ ಕುಡದರು ಬುಡಕ ಪೈಲ್ಸ ಬೇರ ಬಿಡತದ’ ಅಂತ ಹೇಳತಿರತಾನ. ಆ ಪೈಲ್ಸ ಗಂಟ ಅಂತೂ ಬೆಣ್ಯಾಗಿಂದ ಬೆಣಚಕಲ್ಲ ತಗದಂಗ ತಗಿತಾನ
“ನೀ ಹುಂ ಅಂದರ ಟಾನ್ಸಿಲ್ಲೂ  ಇಲ್ಲಿಂದ ತಗದ ತೋರಸಲೇನು” ಅಂತ ನಮಗ  ಕೇಳತಿರತಾನ.
“ಲೇ, ನಿನ್ನೌನ.. ನೀ ಬೇಕಾರ ಟಾನ್ಸಿಲ್  ಎಲ್ಲಿಂದರ ತಗೀ, ಆದರ ಪೈಲ್ಸ ಗಂಟ ಮಾತ್ರ ಬಾಯಾಗಿಂದ ತಗಿಬ್ಯಾಡಾ ” ಅಂತ ಹೇಳೆನಿ,
ಈ ದೇಸಾಯರದೂ ಊರಿಗೆ ಹತ್ತಿ ಒಂದ ೨೦ ಎಕರೆ ಕಾರವಾರ ರೊಡಿಗೆ ಹೊಲಾ ಅವ. ಅವು ಇವತ್ತಿಲ್ಲಾ ನಾಳೆ ಪ್ಲಾಟ ಆಗೊವ. ಅವರ ಮಗಗ ಪೇಶಂಟದ್ದ ಪೈಲ್ಸ ಕೀಳಲಿಕ್ಕೆ ಟೈಮ ಇಲ್ಲಾ ಇನ್ನ ಅಂವಾ ಹೊಲದಾಗ ‘ಕಳೆ ‘ಯಾವಗ ಕೀಳಬೇಕು. ಅದರಾಗ ಊರಾಗಿನ ಆಜು ಬಾಜೂ, ದೇಹಕ್ಕ  ‘ಹಿತಾ’ ಆಗೋ ಕಾಯಿಪಲ್ಯಾ, ಉಳ್ಳಾಗಡ್ಡಿ, ಮೂಲಂಗಿ ಬೆಳೆಯೋ ಹೊಲಾ ಎಲ್ಲಾ ರೈತರ ಮಾರಿ  ಪ್ಲಾಟ ಮಾಡಿದ ಮ್ಯಾಲೆ ಮಂದಿಗೆ ತಳದಾಗ ‘ಹೀಟ’ ಜಾಸ್ತಿಯಾಗಿ ಪೈಲ್ಸ ಮೊಳಕಿ ಒಡೆಯೊದೂ ಸಹಜ ಆಗೇದ. ಹಿಂಗ ಹೊಲಾ ಮಾರಿ ಪ್ಲಾಟ / ಫ್ಯಾಕ್ಟರಿ ಮಾಡಕೋತ ಹೊಂಟರ ಒಂದ ದಿವಸ ಇಡಿ ಸಮಾಜಕ್ಕ ಪೈಲ್ಸ ಆಗೋದ ಅಂತು ಗ್ಯಾರಂಟಿ ಅಂತ ಅನಸ್ತದ.
ಅನ್ನಂಗ ಹುಬ್ಬಳ್ಳ್ಯಾಗ ನಿಮಗ ಎನರ ‘ಇನ್ವೆಸ್ಟಮೆಂಟ್’ಮಾಡಲಿಕ್ಕೆ ಜಗಾ ಬೇಕಂದರ, ಇಲ್ಲಾ ‘ಹುಬ್ಬಳ್ಳ್ಯಾಗ ಏನ ಐತಿ ಸುಡಗಾಡು’ ಅಂತ, ದೊಡ್ಡ ಊರಾಗ ಸೆಟ್ಲ ಆದವರದ ಯಾರದರ ಇಲ್ಲೆ ಏನರ ಜಗಾ/ಮನೆ ಮಾರೋದು ಇದ್ರ, ಹೇಳ್ರಿ ನಮ್ಮ ಪಾಚಾಪುರಗ, ಅಗದಿ ಛಲೋ ಗಿರಾಕಿ ಅವ ಅವನಕಡೆ, ಅಂವಾ ಏನ  ಒಂದ ೩ % ತೊಗೊತಾನ ಎರಡು ಪಾರ್ಟಿ ಕಡೆ. ಪಾಪ, ಅವಂದು ಮನಿ, ಸಂಸಾರ, ದಾವಾಖಾನಿ ಎಲ್ಲಾ ಈ ರಿಯಲ ಎಸ್ಟೇಟ ‘ಧಂಧೆ’ ಮ್ಯಾಲೆ ನಡಿಬೇಕ ನೋಡ್ರಿ ಮತ್ತ.