ಟಪಾಲು

ಈಗಷ್ಟೇ ತಲುಪಿದ ಮಿಲಿಟರಿ
ಟಪಾಲಿಗೆ ಗಂಧಕದ ಘಾಟು ಇನ್ನೂ
ತೆರೆದು ಓದುವ ಧೈರ್ಯ ಯಾರಿಗೂ ಇಲ್ಲ
ಬಣ್ಣಗಳ ಕಲಿಸಿ ಕುಳಿತ ಪೋರನ ಕಣ್ಣುಗಳಲಿ
ಸಿಡಿ ಮದ್ದುಗಳ ಹೊಳಪು

ಊರ ಬೆಳಕನ್ನೇ ಉಡಿಯಲ್ಲಿಟ್ಟು ಒಳಗೊಮ್ಮೆ ಹೊರಗೊಮ್ಮೆ
ಸುಮ್ಮನೆ
ಇಣುಕಿ ಹಾಕಿ ನೋಡುವ ಮುದುಕಿಗೆ ಬೆಳಕಾಗಿಲ್ಲ ಇನ್ನೂ

ಮೇಲೆ ಅರಳಿದ ನಕ್ಷತ್ರಗಳ ಬೇರು ಇವಳ ಎದೆಯಲ್ಲಿ
ಬೆಳಕು ಉಡಿಯಲ್ಲಿ
ಮಳ್ಳ ಉಸಿರು ಮೆಲ್ಲನೆ
ಬೇನೆ ತುಂಬಿದೆ ಗಾಳಿಯೊಳಗೂ
ತಣ್ಣಗೆ ಉರಿವ ಚಂದ್ರನೆದೆಯಲ್ಲಿ
ಹರಿಯುತಿರಬಹುದೊಂದು ಬೆಂಕಿಯ ಹೊಳೆ

ಜ್ಞಾನೋದಯವಾಗಲು
ಬೋಧೀ ವೃಕ್ಷವೇ ಏಕೆ ?
ತಾಲೂಕಾಫೀಸು ಮ್ಯಾಟಿರ್ನಿಟಿ ವಾರ್ಡು
ರಿಮ್ಯಾಂಡು ಹೋಮ್ ಮಕ್ಕಳ ಕಣ್ಣಿನ ಹೊಳಪು
ಸರಳಿನಂಚಿನ ಕೈದಿಯ ಕೈಯ ನಡುಕು
ನಿಂತ ರೈಲಿನ ಕಿಟಕಿಯಾಚೆ ಯಾವುದೋ ಲೋಕದ ಸಂಕಟವ ಆರ್ತವಾಗಿ ಹಾಡುವ ಬಾಲೆ
ನಿಲ್ದಾಣ ಬಿಟ್ಟರೂ
ರೈಲಿನ ಬೆನ್ನಿಗೇ ಬಿದ್ದಂತೆ ಅವಳ ದನಿ

ಬಿಡುವಿದ್ದರೆ ಹೋಗಿ ಕುಳಿತು ಬನ್ನಿ ಒಂದು ಚಣ
ಸ್ಮಶಾನದಲ್ಲಿ
ಹಾಗು ವಿಧವೆಯಾದ ಯೋಧನ ಮನೆಯ ಜಗುಲಿಯಲ್ಲಿ
ನಿನ್ನೆ ಮೊನ್ನೆ ತಾನೇ
ಅವಳ
ಅಂಗಳದಲ್ಲಿ ಕುಂಟಾ ಬಿಲ್ಲೆ ಆಡಿದವಳು
ತಮ್ಮನ ದೊಗಳೆ ಅಂಗಿ
ಅವ್ವನ ಹಳೆಯ ಸೀರೆಯ ಹರಿದು
ನವಿಲು ಗರಿಯ ಕಣ್ಣ ಬಣ್ಣದ ಲಂಗ ಹೊಲಿಸಿಕೊಂಡವಳು
ಅಂಕಲಿಪಿಯ ಬರಹದಂತಹ ದಪ್ಪ ಕಣ್ಣುಗಳವಳು
ಅ ಆ ದ ಮುಂದೆ ಓದಿಲ್ಲ ಹೆಚ್ಚು

ಈಗ ಗಂಧಕದ ಘಾಟಿನ ಪತ್ರ ತೆರೆಯಲು
ಧೈರ್ಯ ಸಾಲುತ್ತಿಲ್ಲ ಯಾರೊಬ್ಬರಿಗೂ
ಬಣ್ಣಗಳ ಕಲಿಸಿ ಕುಳಿತ ಪೋರನ
ಬಿಳಿ ಹಾಳೆಯ ಮೇಲೆ ದುರಂತ ನಾಟಕದ ಪರದೆಯ ಬಣ್ಣಗಳು

ದೊರೆಯ ಕೈಗಳಲ್ಲೂ ಹರಿತ ಹತ್ಯಾರುಗಳಿವೆ
ಇಲ್ಲಿ ಯಾರಿಗೆ ದೂರು ಕೊಡುವುದು ದೇವರೆ ?

ನನ್ನ ಮದುವೆ ಆಲ್ಬಮಿನಲಿ ಅವ್ವ

ನನ್ನ ಮದುವೆ ಆಲ್ಬಮಿನಲಿ ಅವ್ವ
ಒಂಟಿಯಾಗಿರುವ ಫೋಟೊ ಹುಡುಕಿದೆ
ಉಹುಂ
ಒಂದೂ ಸಿಗಲಿಲ್ಲ ಅವಳ ಸಿಂಗಲ್ ಫೋಟೊ
ಹಾಂ ಇದ್ದಾಳೆ ಅಲ್ಲಲ್ಲಿ
ಅವಳೇ ಹೌದೋ ಎಂಬ ಅನುಮಾನದಲ್ಲಿ
ಮುಖದ ಮೇಲೆ ಬೆಳಕು ತುಸು ಕಡಿಮೆ
ಇರುವ ಜಾಗಗಳಲ್ಲಿ
ತನ್ನ ಆಲದ ಮರದಂತಹ ‘ಫ್ಯಾಮಿಲಿ’ ಗ್ರೂಪಿನ ಸಾಲಿನ ಎಡ ಕೊನೆಯಲ್ಲಿ
ಅಲ್ಲಲ್ಲ ಬಲ ಕೊನೆಯಲ್ಲಿ
ಎಡ ಕೊನೆಯಲ್ಲಿರುವವಳು ಹಿರಿಯಕ್ಕ
ಲಾಂಗ್ ಶಾಟಿನಲ್ಲಿ ಅಕ್ಕ ಕೂಡ ಥೇಟ್ ಅವ್ವನಂತೆ
ಬಹಳ ಮಜವಾಗಿರುತ್ತದೆ ಮದುವೆ ಮನೆಯಲ್ಲಿ
ಅಕ್ಕ ಅವ್ವ ನ ಪಾತ್ರ ಅದಲು ಬದಲಾಗುವುದು

ಮದುಮಕ್ಕಳಿಗೆ ಅರಿಷಿಣ ಹಚ್ಚುವಾಗ
ಭತ್ತ ಕುಟ್ಟುವಾಗ, ಧಾರೆ ಎರೆಯುವಾಗ
ಇವಳ ಸುತ್ತ ಸರಭರ ಸರಿಯುವ ರೇಷ್ಮೆ ನೂಲಿನ
ಚೆಲುವೆಯರು
ಬಾಟಲ್ ಪರಿಮಳದ ಬೆಡಗಿಯರ ನಡುವೆ ಅವ್ವ ಕಾಣಿಸುವುದೇ ಇಲ್ಲ ಅಥವ
ಫೋಟೋಗ್ರಾಫರ್ ಸರಿಯಾದ ಕೋನದಲ್ಲಿ ಫೋಕಸ್ ಮಾಡಿಲ್ಲ

ಬಂದ ನೆಂಟರಿಷ್ಟರ ಊಟ ಮುಗಿಯುವರೆಗೂ
ಇವಳು ಗ್ರೀನ್ ರೂಮಿನಲಿ
ಮೊಮ್ಮಕ್ಕಳ ಮರಿ ಮಕ್ಕಳ ಹೇಸಿಗೆ ತೊಳೆದು
ಹಸಿ ಚಡ್ಡಿಗಳ ಬದಲಾಯಿಸುತ್ತ
ಇವಳಿಗೆ ಫೋಟೊಗೆ
ಪೋಜು ಕೊಡುವ ಪುರುಸೊತ್ತಾದರೂ ಎಲ್ಲಿತ್ತು?

ತಿಥಿಯ ಕಾರ್ಡಿನ ಮೇಲೆ
ಫೋಟೊ ಬೇಕೇ ಬೇಕು ಎಲ್ಲಿ ಹುಡುಕುವುದು
ಈಗ ಇವಳ ಒಂಟಿಯಾಗಿರುವ ಫೋಟೊ?

ಡಾ. ಲಕ್ಷ್ಮಣ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು
ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ,
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ
ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ