ತುಸು ಹೊತ್ತಿನ ಬಳಿಕ ರಾತ್ರಿಯ ನೀರವವನ್ನು ಭೇದಿಸಿಕೊಂಡು ‘ಧಡ್’ ಎಂದು ಏನೋ ಬಿದ್ದ ಸದ್ದು. ಬೆನ್ನಿಗೇ ಕ್ಷೀಣವಾಗಿ, ಎದೆಯನ್ನೇ ಕೊರೆಯುವಂಥ ಬಿಕ್ಕಳಿಕೆ ಕೇಳಿಸಿದಾಗ ದಡಕ್ಕನೆ ಎದ್ದು ಕುಳಿತೆ. ಏನೂ ಅರ್ಥವಾಗಲಿಲ್ಲ. ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಹೊರಗಿಳಿದು ನಡೆಯುತ್ತಿರುವ ಅಣ್ಣನನ್ನು ಕಂಡಾಗ ಮನೆಯಲ್ಲಿ ಬೀಡುಬಿಟ್ಟಿದ್ದ ವಿಷಣ್ಣ ಭಾವ ನನ್ನೊಳಗೂ ತುಂಬತೊಡಗಿತು. ಹೊಸ ರವಿಕೆಯನ್ನು ಕಂಡ ಅಣ್ಣ ‘ಯಾರು ತಂದ್ಕೊಟ್ಟದ್ದು?’ ಎಂದು ಕೇಳಿರಬೇಕು. ಅತ್ತಿಗೆ ಬಾಯಿತಪ್ಪಿ ‘ದಿನೇಶನಿಂದ ತರಿಸಿದೆ. ಪಕ್ಕದ ಮನೆ ಹುಡುಗಿ ಹೊಲಿದು ಕೊಟ್ಳು’ ಎಂದಿರಬೇಕು.
ಡಾ. ಸುಭಾಷ್‌ ಪಟ್ಟಾಜೆ ಬರೆದ ಕತೆ “ಗತಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ದಿನೇಶ

ಆ ದಿನವೂ ಸರಿಯಾಗಿ ನಿದ್ದೆ ಬರಲಿಲ್ಲ. ರಾತ್ರಿಯಿಡೀ ಅತ್ತಿಂದಿತ್ತ. ಇತ್ತಿಂದತ್ತ. ಯಾವ ನೆನಪೂ ಉಕ್ಕದಂತೆ ಕೈಕಾಲು ಮುದುಡಿ ಮಲಗಿದರೂ ಅರ್ಥವಾಗದ ಚಡಪಡಿಕೆ. ಯಾತನೆಯ ಭಾರ. ಸೂರಿನಲ್ಲೇನೋ ಸರಸರ. ಇಲಿ ಹೆಗ್ಗಣಗಳ ಕಿಚಕಿಚ. ತಿರುಗಣೆ ಬಿಗಿಯಿಲ್ಲದ ನಲ್ಲಿಯಿಂದ ನೀರು ಲೊಳಲೊಳ. ಸುತ್ತಲೂ ಗೋಜಲು ಗೋಜಲಾದ ವರ್ಣಜಾಲ.

“ಯಾಕೆ ಸಣ್ಣ ಮಕ್ಕಳಂತೆ ಆಡ್ತೀರಿ? ನಾನೇನು ದೇಶಾಂತರ ಹೋಗ್ತಿದ್ದೇನಾ? ವಾರಕ್ಕೊಮ್ಮೆ ಹೇಗೂ ಬಂದೇ ಬರ್ತೀರಿ. ಮತ್ತೇನು? ಇಷ್ಟು ಬೇಗ ಹೀಗಾಯ್ತಲ್ಲ ಅಂತ ಬೇಸರವಾ?”

“ಎಂಥ ಮಾತು ಶಾಲೂ! ನಿನ್ನ ಹೊಟ್ಟೆಯೊಳಗೆ ನಮ್ಮ ಪ್ರೀತಿಯ ಹೂ ಅರಳುತ್ತಿರುವಾಗ ಬೇಸರವಾ? ಇನ್ನೂ ಆರೇಳು ತಿಂಗಳು ನಿನ್ನನ್ನು ಬಿಟ್ಟಿರ್ಬೇಕಲ್ಲ ಅಂತ…”

“ನಂಗೂ ನಿಮ್ಮನ್ನು ಬಿಟ್ಟಿರೋದು ಇಷ್ಟವಾ? ಮೊದಲ ಬಾಣಂತನ ಅಲ್ಲೇ ಆಗ್ಬೇಕೂಂತ ಅಮ್ಮ ಬಯಸಿದ್ದರಿಂದಲ್ವಾ? ನೀವು ಎಲ್ಲಿದ್ರೂ ನನ್ನ ಹೃದಯದೊಳಗೇ ಇರ್ತೀರಿ. ನೀವು ಎಲ್ಲಿದ್ದೀರಿ, ಹೇಗಿದ್ದೀರಿ, ಏನು ಮಾಡ್ತಿದ್ದೀರಿ ಅಂತ ಮಾತ್ರವಲ್ಲ, ನಿಮ್ಮ ಎದೆಯ ಪ್ರತಿ ಮಿಡಿತವೂ ನಂಗೊತ್ತಾಗ್ತದೆ ತಿಳೀತಾ? ಮಗುವಿಗೆ ಮೂರು ತಿಂಗಳು ತುಂಬಿದ ಕೂಡಲೇ ನಿಮ್ಮತ್ರ ಹಾರಿ ಬರ್ತೇನೆ. ಅದರೆಡೆಯಲ್ಲಿ ನಂಗೇನಾದ್ರೂ…”

“ಶಾಲೂ!” ಮುಂದೆ ಮಾತನಾಡಲು ಆಗದಂತೆ ನಾನು ಅವಳ ಬಾಯಿಯನ್ನು ಕೂಡಲೇ ಮುಚ್ಚಿ ಬಿಟ್ಟೆ. ಕೈಗಳಿಂದಲ್ಲ; ತುಟಿಗಳಿಂದ.
“ಬಾಲಕೃಷ್ಣನನ್ನು ಎತ್ತಿಕೊಂಡು ಬೇಗ ಬರ್ಬೇಕು ಶಾಲಿನಿ” ಎಂಬ ದನಿ ಕೇಳಿದಾಗಲೇ ಎಚ್ಚರ. ಕಣ್ಣು ಬಿಟ್ಟು, ಕತ್ತು ಹೊರಳಿಸಿ ನೋಡಿದರೆ ಬಾಗಿಲ ಚೌಕಟ್ಟಿನ ಮರೆಯಲ್ಲಿ ನಿಂತಿದ್ದಳು ಅತ್ತಿಗೆ. ಆಕೆಯ ಬಳಿ ನಾಚುತ್ತಾ ಹೋದ ಶಾಲಿನಿ “ನಮ್ಮವರನ್ನು ಸ್ವಲ್ಪ ನೋಡ್ಕೊಳ್ಳಕ್ಕಾ” ಎನ್ನುತ್ತಿದ್ದಂತೆ ಕೊರಳು ಹಿಸುಕಿದಂತಾಗಿ ಅವಳ ಮುಖವನ್ನೇ ದಿಟ್ಟಿಸಿ ನೋಡಿದೆ. ವಿಶೇಷ ಭಾವವೇನೂ ಇರಲಿಲ್ಲ.

“ನಿಂದೊಂದು ತಮಾಷೆ. ನೀನು ಬರೋವರೆಗೂ ಇವನನ್ನು ನೋಡ್ಕೊಂಡಿದ್ದದ್ದು ಯಾರು?” ತನ್ನ ದನಿಯನ್ನು ಆದಷ್ಟು ಸಹಜವಾಗಿರಿಸಿಕೊಂಡು ಶಾಲಿನಿಯ ಮೈದಡವುತ್ತಾ ಹೇಳಿದಾಗ ಮಿಡುಕಿದಂತೆ ನೋಡಿದೆ ಅತ್ತಿಗೆಯ ಕಡೆಗೆ. ಅವಳೂ ಒಂದು ಗಳಿಗೆ ನನ್ನನ್ನು ನೋಡಿ ಬಹುಶಃ ನನ್ನ ನೋಟವನ್ನು ಎದುರಿಸಲಾರದೆ ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡಳು.

ಇನ್ನು ವಾರಕ್ಕೊಮ್ಮೆ ಮಾತ್ರ ಹೆಂಡತಿಯ ಭೇಟಿ. ಹಿಂತಿರುಗಿದಾಗ ಮತ್ತೆ ಕತ್ತಲೆ. ಬೇಸರದ ಸಪ್ಪೆಯನ್ನು ನೀಗಿಸುವ ಮಿಠಾಯಿಯಂತಿರುವ ಅಪ್ಪು ಈ ಮನೆಯಲ್ಲಿ ಇಲ್ಲದಿರುತ್ತಿದ್ದರೆ ನನ್ನ ಪರಿಸ್ಥಿತಿ ಏನಾಗಿರುತ್ತಿತ್ತು? ಹೋಗಲಿ, ಅವನು ಹುಟ್ಟುವ ಮೊದಲು ಅತ್ತಿಗೆ ಹೇಗಿದ್ದಳು?

ಮನೆಯಲ್ಲಿ ಅಣ್ಣನಿದ್ದಷ್ಟು ರಾತ್ರಿಯೂ ಅವಳ ಚೀತ್ಕಾರಗಳು ಕೇಳಿ ಬರುತ್ತಿದ್ದವು. ಬೆಳಗಾದಾಗ ಹೆಣದಂತೆ ಬಿಳುಚಿಕೊಂಡಿರುತ್ತಿದ್ದ ಅವಳ ಮುಖ, ತಾವರೆಯ ಎಸಳಿನಂಥ ಕಣ್ಣುಗಳ ಕೆಳಗೆ ಹರಡಿಕೊಂಡಿರುತ್ತಿದ್ದ ದಟ್ಟವಾದ ಛಾಯೆಯನ್ನು ನೋಡುವಾಗ, ನೋವಿನಿಂದ ಕಂದಿದ ಮನದ ಭಾರವನ್ನು ಹೊತ್ತು ನಡೆಯಲಾರದವಳಂತೆ ಅಲ್ಲಲ್ಲಿ ನಿಂತು ಹತ್ತಿರ ಬರುವಾಗ, ಅವಳು ಒಂದು ಕ್ಷಣ ತಲೆಯೆತ್ತಿ ನೋಡಿ ಹಾಗೇ ತಗ್ಗಿಸುವಾಗ ನನ್ನ ಬಾಯಿ ಕಟ್ಟಿಹೋಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲೂ ನಿತ್ಯಪುಷ್ಪದಂತೆ ಮುಖವನ್ನು ಅರಳಿಸಿ, ಕಲಶದೀಪದಂಥ ಮುಗುಳುನಗೆಯನ್ನು ನನ್ನತ್ತ ಬೀರಲು ಅವಳಿಗೆ ಹೇಗೆ ಸಾಧ್ಯವಾಗುತ್ತದೆ? ಇಂಥವಳನ್ನು ಬಿಟ್ಟು ಅಣ್ಣನಿಗೆ ಎಂಥ ಅಲೆದಾಟವೋ ಸಂಪಾದನೆಯೋ. ಒಂದು ಕೈಯಿಂದ ಕೂದಲನ್ನು ಹಿಡಿದು, ಇನ್ನೊಂದು ಕೈಯಿಂದ ಅವಳ ಬಾಯಿಯನ್ನು ಮುಚ್ಚಿ ಹೊರಗೆಳೆದು ಬೀಸಿ ಎಸೆದು ತಿರುಗಿಯೂ ನೋಡದೆ ಹೋಗುವ ಅಣ್ಣನ ಕಣ್ಣು ತಪ್ಪಿಸಿ ಮಣ್ಣುಧೂಳುಗಳಿಂದ ತೊಪ್ಪೆಯಾಗಿ ಬಿದ್ದು ನರಳುತ್ತಿದ್ದ ಆಕೆಯ ಕೈ ಹಿಡಿದೆಬ್ಬಿಸಿ, ಭುಜ ಬಳಸಿಕೊಂಡು ಒಳಗೆ ಕರೆದೊಯ್ಯುವಾಗ ಅನಿಸುತ್ತಿತ್ತು- ಗೋಧಿ ನಾಗರದಂತೆ ಮಿರುಗುವ ಅವಳ ಮೈ, ಬಂಡೆಯನ್ನು ಕಡಿದು ಮೂಡಿಸಿದಂಥ ಯೌವನ, ರಸ ಪುಟಿಯುವ ಅಂಗಾಂಗಗಳು ಅಣ್ಣನೆಂಬ ಹಳಸನ್ನದಿಂದ ತೃಪ್ತಿಗೊಂಡಾವೆ? ಆದ್ದರಿಂದಲೇ ಇರಬೇಕು ಮದುವೆಯಾದ ಬಳಿಕ ಇನ್ನೂ ಕವಲೊಡೆದಿಲ್ಲ. ಯಾವಾಗ ನೋಡಿದರೂ ಮೂದಲಿಕೆ. ಬೈಗುಳದ ಮಳೆ. ಹೊಡೆತದ ಸಿಡಿಲು.

ಆಳವಾದ ಕತ್ತಲೆಯ ಗವಿಯಲ್ಲಿ ಬಾವಲಿಗಳು ರೆಕ್ಕೆ ಬಡಿಯುವಂತೆ ಅಣ್ಣನ ಕೋಣೆಯೊಳಗೆ ಏನೇನೋ ಮಾತುಗಳು. “ಹೌದು. ನನ್ನ ರವಿಕೆಗಳೆರಡೂ ಹರಿದುಹೋಗಿವೆ. ಪೇಟೆಯಿಂದ ಬರುವಾಗ ತಂದುಕೊಡ್ತೀಯಾ ಅಂತ ದಿನೂನಲ್ಲಿ ಕೇಳಿದೆ. ಅದರಲ್ಲೇನು ತಪ್ಪು? ನಿಮ್ಮಲ್ಲಿ ಎಷ್ಟು ಹೇಳಿದ್ರೂ…” ಅಣ್ಣ ಅತ್ತಿಗೆಯರ ಮಾತುಗಳು ಪರಸ್ಪರ ಢಿಕ್ಕಿ ಹೊಡೆದು ಅರ್ಥ ಕಳೆದುಕೊಳ್ಳುತ್ತಿದ್ದವು. ತುಸು ಹೊತ್ತಿನ ಬಳಿಕ ರಾತ್ರಿಯ ನೀರವವನ್ನು ಭೇದಿಸಿಕೊಂಡು ‘ಧಡ್’ ಎಂದು ಏನೋ ಬಿದ್ದ ಸದ್ದು. ಬೆನ್ನಿಗೇ ಕ್ಷೀಣವಾಗಿ, ಎದೆಯನ್ನೇ ಕೊರೆಯುವಂಥ ಬಿಕ್ಕಳಿಕೆ ಕೇಳಿಸಿದಾಗ ದಡಕ್ಕನೆ ಎದ್ದು ಕುಳಿತೆ. ಏನೂ ಅರ್ಥವಾಗಲಿಲ್ಲ. ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಹೊರಗಿಳಿದು ನಡೆಯುತ್ತಿರುವ ಅಣ್ಣನನ್ನು ಕಂಡಾಗ ಮನೆಯಲ್ಲಿ ಬೀಡುಬಿಟ್ಟಿದ್ದ ವಿಷಣ್ಣ ಭಾವ ನನ್ನೊಳಗೂ ತುಂಬತೊಡಗಿತು. ಹೊಸ ರವಿಕೆಯನ್ನು ಕಂಡ ಅಣ್ಣ ‘ಯಾರು ತಂದ್ಕೊಟ್ಟದ್ದು?’ ಎಂದು ಕೇಳಿರಬೇಕು. ಅತ್ತಿಗೆ ಬಾಯಿತಪ್ಪಿ ‘ದಿನೇಶನಿಂದ ತರಿಸಿದೆ. ಪಕ್ಕದ ಮನೆ ಹುಡುಗಿ ಹೊಲಿದು ಕೊಟ್ಳು’ ಎಂದಿರಬೇಕು. ಆಗ ಅಣ್ಣನು ‘ಗಂಡನಾದ ನಾನಿರುವಾಗ ಅವನಿಂದ ಬಟ್ಟೆ ತರಿಸಿಕೊಳ್ಳುವಷ್ಟು ಧೈರ್ಯವೇ ನಿಂಗೆ?’ ಅಂತ ಮುಖಮೂತಿ ನೋಡದೆ ಚಚ್ಚಿರಬೇಕು ಎಂದುಕೊಂಡು ಒಳಗೊಳಗೆ ಅಂಜುತ್ತಾ ಅವಳ ಕೋಣೆಯ ಕಡೆಗೆ ಅದುರುವ ಹೆಜ್ಜೆಗಳನ್ನಿಡತೊಡಗಿದೆ. ಬಾಗಿಲ ಹಿಡಿಯನ್ನು ಮುಟ್ಟುತ್ತಲೇ ಎದೆ ದಡಬಡಿಸತೊಡಗಿತು. ಏನಾದರಾಗಲಿ ಎಂದುಕೊಂಡು ಬಾಗಿಲನ್ನು ಚೂರೇ ತೆರೆದು ಅದಕ್ಕೆ ಅಡ್ಡವಾಗಿ ನಿಂತು ನೋಡಿದೆ. ಪೂರ್ಣ ಕತ್ತಲಿದ್ದರೂ ಕಿಟಿಕಿ ಮುಚ್ಚದಿದ್ದುದರಿಂದ ಕೆದರು ಕೂದಲನ್ನು ತಲೆಯ ಸುತ್ತ ಹರಡಿಕೊಂಡು ಕುಳಿತಿದ್ದ ಅತ್ತಿಗೆ ಕಾಣಿಸಿದಳು. ನೀರೊಳಗೆ ಮುಗ್ಗರಿಸುವಂತೆ ನಡೆಯುತ್ತಾ ಹತ್ತಿರ ಹೋಗಿ ಸಣ್ಣಕ್ಕೆ ಕೆಮ್ಮಿದೆ. ತಲೆಯೆತ್ತಿ ನೋಡಿದಳು. ಮುಖದ ಮೇಲಿನ ನೋವನ್ನು ಮರೆಮಾಡಲೆಂದು ಕಷ್ಟಪಟ್ಟು ಬರಿಸಿಕೊಂಡ ನಗು ಹಾಗೇ ಒಣಗಿಹೋದರೂ ನೋಟದಲ್ಲಿ ಮುಗುಳ್ನಗೆ ಇನ್ನೂ ಉಳಿದಿತ್ತು. ಅವಳ ಕಣ್ಣುಗಳಲ್ಲಿ ತುಂಬಿದ್ದ ಭಾವವೇ ಹಠಾತ್ತನೆ ನನ್ನಲ್ಲೂ ಉಂಟಾಯಿತೋ ಅಥವಾ ನನ್ನ ಕಣ್ಣಿನಲ್ಲಿ ಮೂಡಿದ ಭಾವದ ಪ್ರತಿಬಿಂಬ ಅವಳಲ್ಲೂ ಮೂಡಿತೋ ಎಂದು ಗೊಂದಲಪಡುತ್ತಾ ತಲೆ ನೇವರಿಸುತ್ತಿದ್ದಂತೆ ಅವಳು ಮೊಣಕಾಲ ಸಂದಿಗೆ ಗಲ್ಲವನ್ನು ಕೊಟ್ಟು ಮುದ್ದೆಯಂತೆ ಕುಳಿತಳು. ಏನು ಮಾಡಲಿ? ಸಂತೈಸಲೇ? ಬೆಂದ ಭೂಮಿಗೆ ಮಳೆಯಾಗಿ ಸುರಿಯಲೇ? ಛಿ! ಏನೆಲ್ಲ ಯೋಚನೆಗಳು ಮುತ್ತುತ್ತಿದ್ದವು ಆಗ. ಥೂ! ಈಗ ಯಾಕೆ ಆ ನೆನಪುಗಳು?

*****

ಅಪ್ಪು ಹುಟ್ಟಿದ ಮೇಲೆ ಅಲ್ಲವೇ ಅತ್ತಿಗೆ ಮತ್ತಷ್ಟು ಬದಲಾದದ್ದು? ಅವನ ನಗು, ಪುಟ್ಟ ಹೆಜ್ಜೆ, ತೊದಲು ನುಡಿ, ಮಡಿಲಲ್ಲಿ ಮಲಗಿ ಮೈಗೆ ಹಿತವೆನಿಸುವಂತೆ ಬಡಿಯುವ ಕೈಕಾಲುಗಳು ಆಕೆಯ ಎಲ್ಲ ದುಃಖವನ್ನೂ ಒರೆಸಿ ತೆಗೆಯುತ್ತಿದ್ದವು “ಚಿಕ್ಕಪ್ಪನನ್ನು ನೋಡೋ ಮಾತಾಡ್ಸೋ ಏ ತುಂಟಾ” ಎನ್ನುವಾಗ ಅವನು ನನ್ನ ಕಡೆ ಕಣ್ಣರಳಿಸಿ ಗಜಿಲು ಬಿಜಿಲು ದನಿ ಮಾಡುತ್ತಾ, ಅವನೇ ಎತ್ತಿಕೊಳ್ಳಲಿ ಎಂಬಂತೆ ಪುಟ್ಟ ಕೈಗಳನ್ನು ಚಾಚಿ ಅಮ್ಮನ ಸೊಂಟದಿಂದ ಚಿಮ್ಮತೊಡಗುವಾಗ ಅದೆಷ್ಟು ಬಾರಿ ಅವನನ್ನು ಬರಸೆಳೆದು, ಎದೆಗವಚಿ, ಕೆನ್ನೆಗೆ ಮೊಗವಿಟ್ಟು ಮುದ್ದಿಸಿದ್ದೆನೋ. ‘ಪ್ರಿಯಾ, ನಿನ್ನ ಮಗನ ಮುಖ ನಿನ್ನ ಹಾಗೆ, ಮೈಯಿಡೀ ದಿನೇಶನ ಹಾಗೆ, ಹಣೆ-ಮೂಗು ಮಾತ್ರ ಅವನಣ್ಣನ ಹಾಗೆ’ ಎಂದು ಹೇಳಿದರೆ ಆಕೆ ಯಾವ ಭಾವನೆಯನ್ನೂ ವ್ಯಕ್ತಪಡಿಸದೆ ಮೌನವಾಗಿರುತ್ತಿದ್ದಳು. ‘ನೀನು ನನ್ನ ಮಗನೋ ಚಿಕ್ಕಪ್ಪನ ಮಗನೋ?’ ಎಂದು ಕೇಳುವಾಗ ‘ಉತ್ತರ ಹೇಳೋ ಮಾತಾಡೋ’ ಎಂದು ಮುದ್ದು ಮಾಡುತ್ತಿದ್ದಳು. ‘ದಿನೂ, ಇವನು ನಿನ್ನ ಕೈಹಿಡಿದೇ ಅತ್ತಿತ್ತ ತಿರುಗಾಡೋದು, ಬಾಲವಾಡಿಗೆ ಹೋಗೋದನ್ನೆಲ್ಲ ನೋಡಿದ್ರೆ ಇದು ನಿಂದೇ ಅನಿಸುತ್ತದಲ್ಲೋ’ ಎಂದಾಗ ಮುಗುಳ್ನಕ್ಕು ಸುಮ್ಮನಾಗುತ್ತಿದ್ದಳು.

ಅದೆಷ್ಟು ಬಾರಿ ಎತ್ತಿ ಆಡಿಸಿದ್ದೆ ಅಪ್ಪುವನ್ನು. ನಡೆಯಲು ಕಲಿತ ಮೇಲೆ ನನ್ನ ಹಿಂದೆಯೇ ಬರುತ್ತಿದ್ದ. ಗಾರೆ ಕೆಲಸ ಮುಗಿಸಿ ಬರುವಾಗ ಅವನಿಗಾಗಿ ಕೇಕ್, ಬಿಸ್ಕತ್ತು, ಹಣ್ಣು ಹಂಪಲು ಮತ್ತು ಮಿಠಾಯಿಗಳನ್ನು ತರುತ್ತಿದ್ದೆ. “ಬಾ ಅಪ್ಪೂ ಜಾರುಬಂಡಿಯ ಹತ್ತಿರ ಹೋಗಿ ಬರುವ” ಎಂದರೆ “ಬೇಡ ಚಿಕ್ಕಪ್ಪಾ. ನಾವು ಬೇರೆಲ್ಲಿಗಾದರೂ ಹೋಗುವ” ಎನ್ನುತ್ತಿದ್ದ. ಜಾರುಬಂಡಿಯಿಂದ ಜಾರಿ ಬಿದ್ದ ಬಳಿಕ ಅವನಿಗೆ ಜಾರುಬಂಡಿ ಅಂದರೆ ಭಯ. ಮೇಲಿನಿಂದ ಜಾರಿ ಬೀಳುವಾಗ ಹಿಡಿದುಕೊಳ್ಳಲು ನಾನು ಕೆಳಗಿರಲೇಬೇಕಿತ್ತು. ಬೇರೆ ಮಕ್ಕಳು ಯಾರ ನೆರವೂ ಇಲ್ಲದೆ ಅನಾಯಾಸವಾಗಿ ಜಾರುತ್ತಿದ್ದರೆ ಇವನು ಮಾತ್ರ ಮೇಲೇರಿ ಹೋಗಿ ಏನೋ ಯೋಚಿಸುತ್ತಾ ಕುಳಿತುಕೊಳ್ಳುತ್ತಿದ್ದ. ತಿರುಗು ಚಕ್ರವನ್ನು ಕಂಡರೂ ಹೆದರಿಕೆ. ತನ್ನ ಸುತ್ತ ಭೂತ ಸುಳಿದಾಡುತ್ತಿದೆಯೋ ಎಂಬಂತೆ ಮುದುಡಿ ಬಿಡುತ್ತಿದ್ದ. ಬಾಲವಾಡಿಗೆ ಸೇರಿಸಿದ ಮೇಲೂ ಅವನ ವರ್ತನೆಯಲ್ಲಿ ಬದಲಾವಣೆಯಾಗಲಿಲ್ಲ. ಮಕ್ಕಳೊಡನೆ ಬೆರೆಯುತ್ತಿರಲಿಲ್ಲ. ಆಟಪಾಠಗಳಲ್ಲಿ ಆಸಕ್ತಿಯಿರಲಿಲ್ಲ. ಉಳಿದ ಮಕ್ಕಳು ಪದ್ಯಗಳನ್ನು ಬಾಯಿಪಾಠ ಮಾಡಿ ಹಾಡಿದರೆ ಇವನು ಎಲ್ಲವನ್ನೂ ಮರೆಯುತ್ತಿದ್ದ. ಇವನನ್ನು ಹೇಳಿ ಪ್ರಯೋಜನವಿಲ್ಲ. ಮನೆಯ ಪರಿಸ್ಥಿತಿಯೇ ಹಾಗಿದೆಯಲ್ಲ. ಅಪ್ಪನಾದವನು ಮಾತನಾಡಿಸುವುದಿಲ್ಲ. ಇರುವಷ್ಟು ದಿನ ಜಗಳ ಹೊಡೆದಾಟ. ಅಂಥ ಸಂದರ್ಭಗಳಲ್ಲಿ ಇವನು ಅನ್ನದ ತಟ್ಟೆಯ ಮುಂದಿನಿಂದ ಓಡಿ ನನ್ನ ಹತ್ತಿರ ಬಂದು ಮಲಗುತ್ತಿದ್ದ. ಅಣ್ಣನಿಲ್ಲದ ದಿನಗಳಲ್ಲೂ ಮುಂದೆ ಸಂಭವಿಸಲಿರುವ ಅಪಾಯವನ್ನು ಮೊದಲೇ ಕಂಡುಕೊಂಡವನಂತೆ ದೊಡ್ಡಕ್ಕೆ ಕಣ್ಣು ತೆರೆದು ಎಚ್ಚರವಾಗಿರುತ್ತಿದ್ದ. ಅಪ್ಪ ಯಾಕೆ ಕುಡೀತಾನೆ? ತೂರಾಡುತ್ತಾ ಬಂದು ಜಗಳ ಮಾಡೋದ್ಯಾಕೆ? ಎಂಬುದೇ ಅವನ ತಲೆಯಲ್ಲಿರುವುದು.

*****

ಎಲ್ಲರ ಮಾತಿಗೆ ಕಟ್ಟುಬಿದ್ದು ಹುಡುಗಿಯನ್ನು ನೋಡಲು ಹೋದೆ. ಆಕೆ ಅತ್ತಿಗೆಯಷ್ಟು ಚೆಲುವೆಯಾಗಿರದಿದ್ದರೂ ಮೈಯ ಎತ್ತರದ ಪ್ರಮಾಣಕ್ಕೆ ತಕ್ಕಂತೆ ಬಳುಕುವ ಮೈಯನ್ನು ನೋಡಿದಾಗ ದೇವಾಲಯಗಳಲ್ಲಿ ನೋಡಿದ ಸ್ತ್ರೀ ವಿಗ್ರಹಗಳ ನೆನಪಾಗದಿರಲಿಲ್ಲ. ಅತ್ತಿಗೆಯ ಕಣ್ಣುಗಳಲ್ಲಿ ಸವಾಲು ಹಾಕುವ ಭಾವವಿದ್ದರೆ ಇವಳ ಮುಖದಲ್ಲಿ ತಟಕ್ಕನೆ ಸೆಳೆಯುವ ಸಮ್ಮೋಹಕತೆ ಇತ್ತು. ಅತ್ತಿಗೆಯು ಸುಲಿದ ಬಾಳೆಯ ದಿಂಡಾದರೆ ಇವಳು ರಸದಾಳೆ ಕಬ್ಬು ಎನಿಸಿತು. ಕೊಂಚ ನಿಧಾನವಾಗಿ ಎಳೆದೆಳೆದು ಮಾತನಾಡುವ ಅತ್ತಿಗೆಯ ದನಿ ತಂಬೂರಿಯ ಗಂಭೀರ ನಾದದಂತಿದ್ದರೆ ಇವಳದ್ದು ಚಪಲಗತಿಯಿಂದ ನುಡಿಯುವ ವೀಣಾವಾದನದಂತಿತ್ತು. ಇಷ್ಟವಾಗದೆ ಇಷ್ಟವಾಗದಿರಲಾರದೆ, ಒಪ್ಪಲಾಗದೆ ಒಪ್ಪದಿರಲಾರದೆ ಕೊನೆಗೂ ಒಪ್ಪಿದೆ. ಆದರೂ ಒಂಥರಾ ಅಸ್ವಸ್ಥತೆ. ಏನೋ ಕಳೆದುಕೊಂಡ ಭಾವ. ಅತೀವ ಯಾತನೆಯಲ್ಲಿದ್ದೇನೆ ಎಂದು ಭಾವಿಸಿಕೊಂಡ ದಿನಗಳಲ್ಲೇ ಅನುಭವಕ್ಕೆ ಬರುತ್ತಿರುವ ದುಃಖ ತಕ್ಕ ಪ್ರಮಾಣದಲ್ಲಿಲ್ಲ ಎಂದೆನಿಸುವುದೇಕೆ? ಎದೆಯೊಡೆಯುವುದಿಲ್ಲವೇಕೆ? ಬದುಕಿ ಫಲವಿಲ್ಲ ಎನಿಸದಿರುವುದೇಕೆ? ಭಾರವಾದ ಕಣ್ಣು, ಜೋಲುಮುಖ, ಅಡ್ಡಾದಿಡ್ಡಿ ಬೆಳೆದ ಗಡ್ಡ, ಸೋತ ನಡಿಗೆಗಳಲ್ಲಿ ನೋವನ್ನು ತೋರಿಸಿಕೊಂಡರೂ ತಾನು ಭಾವಿಸಿಕೊಂಡಷ್ಟು ಕಠೋರವಾಗಿಲ್ಲ ಎಂಬ ಅನುಮಾನ ಹುಟ್ಟುವುದೇಕೆ? ಇವರು ಯಾರೂ ಇನ್ನು ನನ್ನ ಪಾಲಿಗಿಲ್ಲ ಎಂದು ದುಃಖವಾಗುತ್ತಿದೆಯೇ? ಮೋಸಹೋದೆ ಎನಿಸಿ ಸಂಕಟವಾಗುತ್ತಿದೆಯೇ? ಒಳಗೆಲ್ಲೋ ನಿರಾಳತೆ ಹುಟ್ಟಿ ನೆಮ್ಮದಿಯನ್ನು ಅನುಭವಿಸುತ್ತಿದ್ದೇನೆಯೇ?
“ಚಿಕ್ಕಪ್ಪಾ”

ಕೊಂಡಿ ಕಳಚಿಕೊಂಡ ಲಿಫ್ಟ್ ದಿಢೀರನೆ ಇಳಿಯುವಂತೆ ವೇಗವಾಗಿ ಕೆಳಗೆ ಬಿದ್ದಂತಾಗಿ ಫಕ್ಕನೆ ಕಣ್ತೆರೆದೆ. ಸುತ್ತಲೂ ಕತ್ತಲು. ಕಿರ್ರನೆ ಬಾಗಿಲು ತೆರೆದ ಸದ್ದಾಯಿತು. ತಲೆಯೆತ್ತಿ ನೋಡಿದರೆ ಅಪ್ಪು ಕಣ್ಣುಗಳನ್ನು ಹೊಸಕುತ್ತಾ ಹತ್ತಿರ ಬರುತ್ತಿದ್ದ.

“ಅಪ್ಪೂ… ನನ್ನೊಂದಿಗೆ ತೋರಣಕಟ್ಟೆಗೆ ಬರ್ತಿಯಾ? ಚಿಕ್ಕಮ್ಮ ನಿನ್ನ ಮುದ್ದು ಮಾಡ್ತಾಳೆ. ಹಾಲು, ಬೆಣ್ಣೆ, ತುಪ್ಪ, ಮೊಸರು ತಿಂದು ದುಂಡಗಾಗುತ್ತೀ. ಅಲ್ಲೂ ಬಾಲವಾಡಿಯುಂಟು. ಶಾಲೆಗೂ ಹೋಗಬಹುದು”

“ಅಪ್ಪ ಬೇಡಾಂತ ಹೇಳ್ತಾನೆ ಚಿಕ್ಕಪ್ಪಾ”

“ನಿನ್ನಪ್ಪ ಯಾರು ಹೇಳಿದ್ರೂ ಕೇಳೋದಿಲ್ಲ. ‘ನೀನು ಇಲ್ಯಾಕೆ ಇರ್ತೀ? ಚಿಕ್ಕಮ್ಮನೊಟ್ಟಿಗೆ ಅಲ್ಲೇ ಇರು’ ಅಂತಾನೆ ನಂಗೆ. ಅಲ್ಲಿರುವಾಗ ಮೇಲಿಂದ ಮೇಲೆ ನಿನ್ನ ನೆನಪು. ನಿದ್ದೆ ಬರೂದಿಲ್ಲ”

“ನಂಗೂ ನಿದ್ದೆ ಬರೂದಿಲ್ಲ ಚಿಕ್ಕಪ್ಪಾ. ನೀನಾದ್ರೆ ನನ್ನ ತಿರುಗಾಡಲು ಕರ್ಕೊಂಡು ಹೋಗ್ತಿ. ತಿನ್ನಲು ತಂದುಕೊಡ್ತಿ. ಕತೆ ಹೇಳ್ತಿ. ಮಗ್ಗಿ ಕಲಿಸ್ತಿ. ನೀನಿಲ್ಲದಿದ್ದಾಗ ನಾನು ಒಬ್ಬನೇ ಆಗ್ತೇನೆ ಚಿಕ್ಕಪ್ಪಾ”

“ಬಾ ಮಗಾ. ನನ್ನ ಹತ್ತಿರ ಮಲಗು ಬಾ”

ಕವಿದ ಕತ್ತಲೆಯಲ್ಲಿ ದೀಪ ದೊಡ್ಡದು ಮಾಡಲು ಮನಸ್ಸು ಬಾರದೆ ಕಣ್ಣು ಬಿಗಿದುಕೊಂಡೆ. ಏನು ಮಾಡಲಿ? ನನ್ನ ಬದುಕು ತುಂಬಿದ್ದು, ಒಂಟಿತನ ಹಾರಿಹೋದದ್ದು ಶಾಲಿನಿಯನ್ನು ಮದುವೆಯಾದ ಬಳಿಕವೇ. ಆದರೆ ಆಕೆ ಅಪ್ಪುವನ್ನು ಹಚ್ಚಿಕೊಂಡದ್ದು ಕಾಣುವಾಗ ನಾನು ಕಪಟಿ, ವೇಷಧಾರಿ, ಹುಳ ಕೊರೆದ ಮರ ಎಂಬ ಭಾವನೆ ನನ್ನನ್ನು ಕೊಚ್ಚುತ್ತದೆ. ಶಾಲಿನಿಯನ್ನು ನನ್ನೆಲ್ಲ ಶಕ್ತಿಗಳಿಂದಲೂ ಪ್ರೀತಿಸುತ್ತೇನೆ ಎಂದು ಮನದಲ್ಲೇ ಗಟ್ಟಿ ಮಾಡಿಕೊಂಡರೂ ನಮ್ಮ ನಡುವೆ ಅಪ್ಪು ಬಂದಾಗ, ಅತ್ತಿಗೆಯ ದನಿ ಕೇಳಿದಾಗ ಬೆತ್ತಲೆ ನಿಲ್ಲಿಸಿ ಬೆತ್ತದಿಂದ ಬಾರಿಸಿದಂತಾಗುತ್ತದೆ. ಈ ಊರಿನಿಂದ ಬೇರೆ ಕಡೆ ಹೋಗಬೇಕು. ಪರಿಚಿತರಿಲ್ಲದ ಊರಿನಲ್ಲಿ, ಸುತ್ತಮುತ್ತ ಯಾವ ಮನೆಯೂ ಇಲ್ಲದ ಕಡೆ ಮನೆ ಮಾಡಿ, ಸದ್ದುಗದ್ದಲವಿಲ್ಲದೆ, ಯಾವುದೇ ಆತಂಕವಿಲ್ಲದೆ ಹೆಂಡತಿಯೊಡನೆ ದಿನ ಕಳೆಯಬೇಕು ಎನಿಸುತ್ತಿದೆ. ಇಲ್ಲಿಂದ ಹೊರಟುಬಿಡೋಣವೆಂದರೆ ಅಪ್ಪುವಿನ ಕಂದಿದ ಮುಖ ಕಣ್ಣೆದುರು. ನೊಂದ ಅತ್ತಿಗೆಯ ಮುಖ ಮನಸ್ಸಿನೆದುರು. ಈ ಕುಟುಂಬ ಮುನ್ನಡೆಯಬೇಕಿದ್ದರೆ ತನ್ನ ಸಂಪಾದನೆ ಮಾತ್ರ ಸಾಕಾಗುವುದಿಲ್ಲ ಎಂಬ ವಿಚಾರ ಅಣ್ಣನಿಗೆ ಏಕೆ ಅರ್ಥವಾಗುವುದಿಲ್ಲ? ಅವನು ಹೇಗಾದರೂ ಬದುಕಿಯಾನು. ಆದರೆ ಅತ್ತಿಗೆ ಮತ್ತು ಅಪ್ಪುವಿನ ಗತಿ? ಅವರ ಜೊತೆಯಲ್ಲಿ ಶಾಲಿನಿಯ ಮುಖವೂ ಮೂಡಿತು. ‘ನಿಮ್ಮಣ್ಣನ ನೋಟ ನಡವಳಿಕೆಗಳೊಂದೂ ಸರಿ ಇಲ್ಲ’ ಅಂತ ಅವಳು ಈಗಾಗಲೇ ಹೇಳಿದ್ದಾಳೆ. ಆದ್ದರಿಂದ ನಾನು ಹೊಸ ಮನೆಯನ್ನು ಕಟ್ಟಿಸದೆ ಇಲ್ಲೇ ಉಳಿದುಕೊಂಡರೆ ಇಲ್ಲಿ ಅವಳಿಗೆ ಯಾವ ಸ್ಥಾನ ಸಿಕ್ಕೀತು? ಅಕ್ಕರೆ-ನೆಮ್ಮದಿ ದೊರಕಬಹುದೇ? ತನ್ನ ಕಾರ್ಯ ಆದ ಬಳಿಕ ಅತ್ತಿಗೆಯೂ ಅವಳನ್ನು ದೂರ ಮಾಡಲಾರಳು ಎನ್ನಲು ಸಾಧ್ಯವಿಲ್ಲ. ಇತರರಿಗೆ ಒಳಿತು ಬಯಸಿ ಶಾಲಿನಿಯನ್ನು ಕಲಕಿದ ಮಡುವಿಗೆ ದೂಡಿ ಬಿಟ್ಟಂತಾದರೆ? ಪ್ರಶ್ನೆಗಳ ಬಲೆಯಲ್ಲಿ ಸಿಲುಕಿ ಒದ್ದಾಡತೊಡಗಿದೆ.

ಮನೆಯಲ್ಲಿ ಅಣ್ಣನಿದ್ದಷ್ಟು ರಾತ್ರಿಯೂ ಅವಳ ಚೀತ್ಕಾರಗಳು ಕೇಳಿ ಬರುತ್ತಿದ್ದವು. ಬೆಳಗಾದಾಗ ಹೆಣದಂತೆ ಬಿಳುಚಿಕೊಂಡಿರುತ್ತಿದ್ದ ಅವಳ ಮುಖ, ತಾವರೆಯ ಎಸಳಿನಂಥ ಕಣ್ಣುಗಳ ಕೆಳಗೆ ಹರಡಿಕೊಂಡಿರುತ್ತಿದ್ದ ದಟ್ಟವಾದ ಛಾಯೆಯನ್ನು ನೋಡುವಾಗ, ನೋವಿನಿಂದ ಕಂದಿದ ಮನದ ಭಾರವನ್ನು ಹೊತ್ತು ನಡೆಯಲಾರದವಳಂತೆ ಅಲ್ಲಲ್ಲಿ ನಿಂತು ಹತ್ತಿರ ಬರುವಾಗ, ಅವಳು ಒಂದು ಕ್ಷಣ ತಲೆಯೆತ್ತಿ ನೋಡಿ ಹಾಗೇ ತಗ್ಗಿಸುವಾಗ ನನ್ನ ಬಾಯಿ ಕಟ್ಟಿಹೋಗುತ್ತಿತ್ತು.

ಪ್ರಿಯಾ

ಮರದಡಿಯಲ್ಲಿ ನಿಂತು ದಿನೇಶನನ್ನೇ ಎವೆಯಿಕ್ಕದೆ ನೋಡುತ್ತಿರುವ ಅಪ್ಪುವನ್ನು ಕಂಡು ಒಳಗೊಳಗೇ ನಗು ಬರುತ್ತಿತ್ತು. ಬಾಯಿ ತುಂಬಾ ಕೋಡುಬಳೆ. ಕಣ್ಣು ತುಂಬಾ ಭಯ. ಅಯ್ಯೋ! ಕೊಂಬೆಯನ್ನೇರಿ ನಿಂತು ಮಾವಿನ ಹಣ್ಣಿಗಾಗಿ ಕೈಚಾಚುತ್ತಿರುವ ಚಿಕ್ಕಪ್ಪ ನೆಲಕ್ಕೆ ಬಿದ್ದರೆ? ಎಂದು ಹೆದರುತ್ತಿರಬೇಕು. ಅಗೋ! ದಿನೂ ಮರದ ಕೊಂಬೆ ಹಿಡಿದು ನೇತಾಡುತ್ತಾ ನೆಲಕ್ಕೆ ಕಾಲಿಡುವಷ್ಟರಲ್ಲಿ ಅಪ್ಪು ಓಡಿ ಹೋಗಿ ಅವನ ತೊಡೆಗಳನ್ನಪ್ಪಿ ಅಳಲಾರಂಭಿಸಿದ. ಅವನನ್ನು ತೋಳುಗಳಲ್ಲಿ ತುಂಬಿಕೊಂಡು ಮೇಲ್ಛಾವಣಿಯವರೆಗೂ ತೂರಿ ತೂರಿ ಹಿಡಿಯತೊಡಗಿದ ದಿನೇಶನನ್ನೂ, ತನ್ನ ಕಣ್ಣೀರನ್ನು ಮರೆತು ಸಂತಸ ಮತ್ತು ಭಯದ ನಗೆಯ ಹೊನಲನ್ನು ಹರಿಸತೊಡಗಿದ ಅಪ್ಪುವನ್ನೂ ಕಣ್ಣುಗಳಲ್ಲೇ ತುಂಬಿಕೊಳ್ಳುವಂತೆ ನೋಡುತ್ತಾ ಕೇಳಿದೆ. “ದಿನೂ, ಪೆರಡಾಲ ಜಾತ್ರೆಗೆ ಹೋಗ್ತೀಯೇನೋ? ಅವರಲ್ಲಿ ಹೇಳಿದ್ದೀಯಾ?” ಆದರೆ ಅವನು ಆ ಮಾತು ಕೇಳಿಯೂ ಕೇಳದಂತೆ ನನ್ನನ್ನು ಹಾದು ಒಳಗೆ ಹೋಗುವಾಗ ಕಣ್ಣುಗಳು ಪರಸ್ಪರ ಸಂಧಿಸಿದವು. ‘ನನ್ನನ್ನು ಇನ್ನೂ ಕ್ಷಮಿಸಿಲ್ಲವೇ?’ ಎಂಬಂತೆ ನೋಡಿದರೆ ‘ನಿನ್ನನ್ನೂ ಸೇರಿದಂತೆ ನಾನು ಎಲ್ಲರನ್ನೂ ದ್ವೇಷಿಸುತ್ತೇನೆ’ ಎಂದು ಅವನ ನೋಟ ಉತ್ತರಿಸಿತು. “ದಿನೂ, ನಿನ್ನಣ್ಣ ನಿಂಗೆ ಮದುವೆಯ ಏರ್ಪಾಡು ಮಾಡಿದ್ದು ಒಳ್ಳೇದಾಯ್ತು. ಆಗೋದೆಲ್ಲ ಒಳ್ಳೇದಕ್ಕೆ ಅಂದ್ಕೊಂಡು ಶಾಲಿನಿಯನ್ನು ಮದುವೆಯಾಗಿ ಅಲ್ಲೇ ಇದ್ದುಬಿಡು. ಅವಳ ತಂದೆತಾಯಿಯರಿಗೂ ಅಧಾರವಾದೀತು. ಅಂತೆಯೇ ನಿಂಗೂ ಬೇಡ್ವಾ ನಿಂದೇ ಆದ ಬದುಕು?” ಅಂತ ಹೇಳಿದಾಗ “ಈಗೀಗ ನಿಂಗೂ ನಾನು ಭಾರವಾದೆ. ಅಲ್ವಾ?” ಎನ್ನುವಷ್ಟು ಸಿಟ್ಟು ಏಕೆ ಬರಬೇಕಿತ್ತು ಅವನಿಗೆ? “ಅಣ್ಣನ ಕಿರಿಕಿರಿಯಿಂದ ನೀನಾದ್ರೂ ಬಚಾವಾಗು ಅಂತ ಭಾವಿಸಿದ್ರೆ ನಿನ್ನ ಬಾಯಿಂದ ಬರ್ಬೇಕಾದ ಮಾತು ಇದೇನಾ? ಹೀಗೆ ಹೇಳ್ಲಿಕೆ ನಾಚಿಕೆಯಾಗೋದಿಲ್ವಾ?” ಎಂದು ಸ್ವಲ್ಪ ಜೋರಾಗಿ ಹೇಳಿದಕ್ಕೆ ಮಾತೇ ಬಿಟ್ಟನಲ್ಲ. ಎಷ್ಟು ಬೇಕೋ ಅಷ್ಟೇ. ಮುಖ ನೋಡಿದರೆ ಆಯಿತು. ಇಲ್ಲದಿದ್ದರೆ ಇಲ್ಲ.

“ಚಿಕ್ಕಪ್ಪ ಹೋಗ್ತಾನೆ ಜಾತ್ರೆಗೆ. ನಾನೂ ಹೋಗ್ತೇನೆ. ಅಲ್ಲಿ ಪಾಯಸವುಂಟು. ಎರಡು ಸಲ ಕುಡೀಬೇಕು. ಆಟದ ಸಾಮಾನು ತೆಗೀಬೇಕು” ಎಂದ ಅಪ್ಪುವಿನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಮಡಿಲಲ್ಲಿದ್ದ ಬೀಡಿಯ ಗೆರಸೆಯನ್ನು ಬದಿಗಿಟ್ಟು ಗೋಡೆಗೊರಗಿಕೊಂಡು ಯಾತನೆಯಿಂದ ಕಣ್ಣುಮುಚ್ಚಿಕೊಂಡೆ.

ಅಂದೂ ಹೀಗೆಯೇ ತುಂಬಿಕೊಂಡಿತ್ತು ಕತ್ತಲು. ಹೂಮಾಲೆಯನ್ನು ಹಿಡಿದ ಕೈಗಳು ನಡುಗುತ್ತಿದ್ದವು. ಮದುವೆಯ ವಿಷಯದಲ್ಲಿ ನಾನು ಮೌನ ವಹಿಸಿದ್ದೇ ತಪ್ಪಾಯಿತೇ? ಒಂದುವೇಳೆ ವಿರೋಧಿಸಿದ್ದರೆ ನನ್ನ ಜತೆ ಯಾರಿದ್ದರು? ವರದಕ್ಷಿಣೆಯಿಲ್ಲದೆ ಮದುವೆಗೆ ಒಪ್ಪಿದ್ದೇ ದೊಡ್ಡದು ಎಂದು ಭಾವಿಸಿದ್ದ ಅಪ್ಪ ಏನು ಮಾಡಲು ಸಾಧ್ಯವಿತ್ತು? ಮುಂದೆ ನಿಂತಿದ್ದ ವರನ ಮುಖವನ್ನು ನೋಡದೆ ಅವನ ಕೊರಳಿಗೆ ಮಾಲೆ ಹಾಕಿಯೇ ಬಿಟ್ಟೆ. ಮದುವೆಯಾದ ಬಳಿಕ ಕೆಲವು ತಿಂಗಳು ಸಂತಸದಿಂದ ಇದ್ದೆ. ಸರಾಗ ಉಸಿರಾಡಿಕೊಂಡು ಕೆಲಸ ಮಾಡಿದೆ. ಎಲ್ಲಿಗೆ ಹೋದರೂ ಇವರು ಸಂಜೆ ಹೊತ್ತಿಗೆ ತಪ್ಪದೆ ಹಿಂತಿರುಗುತ್ತಿದ್ದರು. ನಗು ನಗುತ್ತಾ ಮಾತನಾಡುತ್ತಿದ್ದರು. ಆರು ತಿಂಗಳ ನಂತರ ಎರಡು ಮೂರು ದಿನಕ್ಕೊಮ್ಮೆ ಬರತೊಡಗಿದರು. ನಂತರ ಎಂಟು ದಿನಕ್ಕೊಮ್ಮೆ ಬಂದು ಎರಡು ದಿನ ಇದ್ದು ಹೋಗತೊಡಗಿದರು. ಮುಖ ಬಿರುಸಾಗಿರುತ್ತಿತ್ತು. ಮಾತನಾಡಿಸಲೂ ಭಯ. ಒಂದು ವರ್ಷ ಕಳೆದ ಮೇಲೆ ನನ್ನನ್ನು ಸಂಶಯದಿಂದ ಕಾಣುವುದೂ ಏನಾದರೊಂದು ನೆಪ ಹಿಡಿದು ಹರಾಮಿ ಹಾದರಗಿತ್ತಿ, ಅನಿಷ್ಟದ ಗರತಿ, ಬಂಜೆಮುಂಡೆ ಎಂದು ಬೈಯುವುದೂ ಮಾಮೂಲಾಯಿತು. ಇವರು ಬೈದಾಗ ಹೊಡೆದಾಗ ಅಥವಾ ಮತ್ತೇನಾದರೂ ಮಾಡಿದಾಗ ದಿನೂಗೆ ಎಲ್ಲಿ ಕೇಳಿಸೀತೋ, ನನ್ನ ಬಗ್ಗೆ ಅವನು ಏನು ತಿಳಿದುಕೊಳ್ಳುವನೋ ಎಂಬ ಕಲ್ಪನೆಯು ಹೆಚ್ಚು ನೋವನ್ನುಂಟು ಮಾಡುತ್ತಿತ್ತು. ಆಕಸ್ಮಾತ್ ದೃಷ್ಟಿ ಸಂಧಿಸಿದರೆ ‘ಅಪರಾಧಿ ನಾನಲ್ಲ’ ಎಂಬ ಭಾವ ಕಣ್ಣಲ್ಲಿ ತೇಲುತ್ತಿತ್ತು. ಕರುಳಲ್ಲಿ ಒಂದು ಹೂವಾದರೂ ಮೂಡಿದರೆ ಈ ಬೈಗುಳದಿಂದ ಪಾರಾದೇನು. ಅದರ ಮುಖ ನೋಡಿಕೊಂಡಾದರೂ ಈ ನರಕವನ್ನು ಸಹಿಸಿಯೇನು ಎಂದು ಮೊರೆಯಿಡುವುದೇ ನನ್ನ ಕೆಲಸವಾಯಿತು. ಲಹರಿಯಿದ್ದ ದಿನಗಳಲ್ಲಿ ಗಂಡನು ನನ್ನ ಸೊಂಟ, ತೊಡೆ, ಬೆನ್ನು, ಮೊಲೆಗಳನ್ನು ಕಚ್ಚಿ ಮುದ್ದಿಸುತ್ತಾ ಗರಿಷ್ಠ ಸುಖವನ್ನು ಹೀರುವಾಗ, ಶರೀರದ ರಂಧ್ರಗಳನ್ನು ಅಗಿಯುವಾಗ ಅನಿಸುತ್ತಿತ್ತು- ಓಹ್! ಈ ತೋಳುಗಳು ದಿನೂನದ್ದಾಗಿರುತ್ತಿದ್ದರೆ, ನನ್ನ ಮುಖ, ಕತ್ತುಗಳ ಮೇಲೆ ಕೂದಲನ್ನು ಹರಡಿ ಮಲಗಿದಾತ ಅವನಾಗಿರುತ್ತಿದ್ದರೆ ನಾನೀಗ ಒಂದುವೇಳೆ… ಎಂದುಕೊಳ್ಳುತ್ತಿದ್ದಂತೆ ಹೊಟ್ಟೆಯೊಳಗೆ ಸುಖದ ನೋವೊಂದು ಮೀಟಿದಂತಾಗುತ್ತಿತ್ತು.

ದಿನೂ ತಂದುಕೊಟ್ಟ ರವಿಕೆಯ ಕಣಗಳನ್ನು ಹೊಲಿಸಿ ಧರಿಸಿದ ರಾತ್ರಿ ನನಗೂ ಇವರಿಗೂ ಜಗಳವಾಗಿ, ಎಷ್ಟಾದರೂ ಇವರ ಬೊಬ್ಬೆ ನಿಲ್ಲದಿದ್ದಾಗ “ಮುಚ್ಚೋ ಬಾಯಿ. ಮಾತಾಡ್ತಿದ್ರೆ ಮರ್ಯಾದೆಯಿಂದ ಮಾತಾಡು. ದಿನೂ ರವಿಕೆ ತಂದುಕೊಟ್ಟ ಮಾತ್ರಕ್ಕೆ ಇಷ್ಟೆಲ್ಲ ಹಾರಾಡ್ತಿದ್ದೀಯಾ? ಇಲ್ಲಸಲ್ಲದ ಆರೋಪ ಹೊರಿಸ್ತಿದ್ದೀಯಾ ಮರ್ಯಾದೆಗೆಟ್ಟವನೇ” ಎಂದು ಬೊಬ್ಬಿರಿದೆ. ಆಗ ನನ್ನ ಸೊಂಟಕ್ಕೆ ಎಂಥ ಒದೆ ಬಿತ್ತೆಂದರೆ ‘ಅಯ್ಯೋ’ ಎಂದು ಕೂಗುವ ಮೊದಲೇ ನೆಲಕ್ಕೆ ಕುಸಿದೆ. ಗಳಿಗೆ ಗಳಿಗೆಗೂ ಬೆಳಕು ಕುಂದುತ್ತಿರುವಂತೆ, ಕಣ್ಣಿಗೆ ಕತ್ತಲು ಕವಿಯತೊಡಗಿದಂತೆ, ಯಾರೋ ಕೈಹಿಡಿದು ನೀರಿನೊಳಗೆ ಎಳೆಯುತ್ತಿರುವಂತೆ…
ಬಾಗಿಲಿನ ಪಕ್ಕದಲ್ಲಿ ಸಣ್ಣಕ್ಕೆ ಕೆಮ್ಮಿದ ಸದ್ದು. ಮೊಣಕಾಲುಗಳೆಡೆಯಲ್ಲಿ ಹುದುಗಿಸಿದ ಮುಖವನ್ನೆತ್ತಿ ನೋಡಿದರೆ ದಿನೂ!

“ಅತ್ತಿಗೇ”

“ದಿನೂ ನಿನ್ನಣ್ಣ ನನ್ನನ್ನು…” ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯಲಾರದೆ ಕುಳಿತಲ್ಲಿಂದಲೇ ಬಾಗಿ, ಅವನ ತೊಡೆಯ ಮೇಲೆ ತಲೆಯಿಟ್ಟು ಕಾಲುಗಳನ್ನು ತಬ್ಬಿಕೊಂಡೆ. “ಅಳಬೇಡ ಅತ್ತಿಗೇ” ಅವನು ನಿಂತಲ್ಲಿಂದಲೇ ನನ್ನ ಕೂದಲನ್ನು ಸವರಿದ. ನಾನು ಅವನನ್ನು ಅವಚಿಕೊಂಡು ಮೆಲ್ಲಗೆ ಕೂರಿಸಿ ಅವನ ಎದೆಗೊರಗಿ ಬಿಕ್ಕಿದೆ. “ನಾನು ಸಾಯ್ತೇನೆ ದಿನೂ.” ಅವನು ನನ್ನ ಭುಜ ಹಿಡಿದು ಮೈಗೊರಗಿಸಿ ತಬ್ಬಿಕೊಂಡ. ನೋವಿನ ಉರಿಯನ್ನು ಒರೆಸಿ ತೆಗೆಯುವಂತೆ ಅವನ ಕೈಗಳು ನನ್ನ ಬೆನ್ನಿನ ಮೇಲೆ ಹರಿದವು. ನನಗೆ ಹಿತವೆನಿಸಿ ದೀರ್ಘವಾಗಿ ಉಸಿರಾಡುತ್ತಾ ಅವನ ಕೊರಳನ್ನಪ್ಪಿ ಕಣ್ಣುಮುಚ್ಚಿಕೊಂಡೆ.

ದಿನೂನ ಕೋಣೆಯೊಳಗೆ ಶಾಲಿನಿ ಸುಖದಿಂದ ನರಳುವಾಗ ನಾನು ಸೆರಗನ್ನು ಬಾಯಿಗೊತ್ತಿಕೊಳ್ಳುತ್ತಿದ್ದೆ. ಸುಖವಾಗಿ ನಿದ್ದೆಹೋಗಿದ್ದ ಅಪ್ಪುವಿನ ಮೇಲೆ ಹಗುರಾಗಿ ಕೈಯಾಡಿಸಿ, ನೆತ್ತಿಗೆ ಮುತ್ತಿಟ್ಟು ‘ಈಗ ಅಳಬಾರದು. ಮಗನಿಗೆ ಎಚ್ಚರಾದೀತು’ ಎಂದುಕೊಳ್ಳುತ್ತಾ ಗಂಟಲಲ್ಲಿ ಕಟ್ಟಿಕೊಂಡಿದ್ದ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಳ್ಳುತ್ತಿದ್ದೆ. ಶಾಲಿನಿ ನನ್ನೊಡನೆ ಪ್ರೀತಿಯಿಂದ ಮಾತನಾಡುವಾಗ, ಆಕೆ ಬಸುರಾದ ಸುದ್ದಿ ಕೇಳಿದಾಗ ಮುಳ್ಳುಕೋಲಲ್ಲಿ ಅಪ್ಪಳಿಸಿದ ಅನುಭವ. ದಿನೂ ಅಪ್ಪುವನ್ನು ಎತ್ತಿಕೊಳ್ಳುವಾಗ ಮೈಗೆ ಮಂಜುಗಡ್ಡೆ ಬಿದ್ದಂತೆ. ಯಾರೋ ವ್ಯಂಗ್ಯವಾಗಿ ನಕ್ಕಂತೆ. ದೇವರೇ! ನನ್ನ ಮನಸ್ಸು ಮತ್ತೆ ದುರ್ಬಲವಾಗದಿರಲಿ. ಶಾಲಿನಿಗೆ ಅನ್ಯಾಯವಾಗದಿರಲಿ ಎಂದುಕೊಳ್ಳುತ್ತಿದ್ದಂತೆ ಜಗಲಿಯಲ್ಲಿಟ್ಟಿದ್ದ ಟಾರ್ಚ್ ತುಳಸಿಕಟ್ಟೆಗೆ ಬಡಿದ ಸದ್ದು. “ಯಾವ ಬೋಳೀಮಗ ಇದನ್ನು ಇಲ್ಲಿಟ್ಟದ್ದು?” ಊರಿಡೀ ಮೊಳಗುವಂತೆ ಕೂಗಿ ತೂರಾಡುತ್ತಾ ಒಳಗೆ ಬಂದ ಲೋಕೇಶ “ಓ! ಹೊಸಬಟ್ಟೆ ಧರಿಸಿಕೊಂಡೇ ನಿದ್ದೆ ಹೋಗಿದ್ದಾನಲ್ಲಾ ನನ್ನ ಮಗ. ಥೂ! ರಂಡೇಮಕ್ಕಳೇ! ಯಾರತ್ರ ಕೇಳಿ ಜಾತ್ರೆಗೆ ಹೊರಟದ್ದು ನೀವು?” ಎಂದು ಬೊಬ್ಬಿಡುತ್ತಾ ಎದುರಲ್ಲಿದ್ದ ಕುರ್ಚಿಯನ್ನು ದೂಡಿ ಬೀಳಿಸುವಾಗ ಮೇಜಿನ ಮೇಲಿದ್ದ ಅನ್ನ ಸಾಂಬಾರಿನ ಪಾತ್ರೆಗಳಿಗೆ ಕೈ ತಾಗಿ ಎಲ್ಲವೂ ತಲೆಕೆಳಗಾದವು. ಅವನು ಮತ್ತೆ ಕೈಬೀಸಿ ಅವುಗಳನ್ನು ಉರುಳಿಸಿದ. ಆಮೇಲೆ ಒಂದೇ ಬೀಸಿಗೆ ನನ್ನ ತುರುಬು ಹಿಡಿದು ವಿವಿಧ ಕೋನಗಳಲ್ಲಿ ಅಲ್ಲಾಡಿಸುತ್ತಾ “ಮೂರು ಕಾಸಿನ ಬೋಸಡಿ, ಇವ ಅಪ್ಪುವನ್ನು ಹೊರಡಿಸುವಾಗ ನೀನೇನು ಮಾಡ್ತಿದ್ದೆ? ಸೀರೆ ಉಡ್ತಿದ್ದೆಯಾ?” ಎನ್ನುತ್ತಿದ್ದಂತೆ ನನ್ನ ಮೈಯೊಳಗೆ ಕಂಪನವಾಯಿತು. ಚರ್ಮದ ರಂಧ್ರಗಳಿಂದ ಬೆವರಿನ ಸೂಕ್ಷ್ಮ ತುಂತುರುಗಳು ಹೊಮ್ಮಿ ನಿಂತವು. “ಹಾಳಾದೋನೇ! ನೀನೆಲ್ಲಿ ಸತ್ತು ಹೋಗಿದ್ದೆ? ಯಾವ ಗಡಂಗಲ್ಲಿ, ಜುಗಾರಿಕಟ್ಟೆಗಳಲ್ಲಿ ಹಾಳು ಬಿದ್ದಿದ್ದೆ? ಯಾರ ಸೆರಗು ಹಿಡಿದು ಮಲಗಿದ್ದೆ? ಹೆಂಡತಿ ಮಕ್ಕಳ ಮೇಲೆ ಅಷ್ಟೂ ಕಾಳಜಿ ಇರೋನಾಗಿದ್ರೆ ಕರ್ಕೊಂಡು ಹೋಗ್ಲಿಕ್ಕೇನಾಗ್ತಿತ್ತು ನಿಂಗೆ?”

“ಒಹೋ! ಮೈದುನನನ್ನು ಬೈದ್ರೆ ನಿಂಗೆ ಪಿತ್ತ ಏರ್ತದೆ ಅಲ್ವಾ?” ಎನ್ನುತ್ತಾ ಒಲೆಕಟ್ಟೆಯ ಕೆಳಗೆ ಪೇರಿಸಿಟ್ಟಿದ್ದ ರಾಶಿಯಿಂದ ಕಟ್ಟಿಗೆಯನ್ನು ಹೊರಗೆಳೆದು ಬೀಸುವಷ್ಟರಲ್ಲಿ ತಡೆಯಿತೊಂದು ಕೈ. ಕಣ್ಣರಳಿಸಿಕೊಂಡು ನೋಡಿದರೆ ದಿನೇಶ. ಹೊಗೆಯಾಡುವ ನೋಟ. ಹೊತ್ತಿ ಉರಿಯುವ ಕಣ್ಣು. “ಬೇವರ್ಸಿ! ನನ್ನನ್ನು ತಡೆಯಲು ನೀನ್ಯಾರೋ. ನಂಗೇ ಎದುರು ನಿಲ್ತೀಯೋ ನಾಯಿ!” ಎಂದು ಅವನ ಕೈಯಿಂದ ಕಟ್ಟಿಗೆಯನ್ನು ಎಳೆದುಕೊಳ್ಳಲು ಒದ್ದಾಡುತ್ತಿದ್ದಂತೆ ರೋಷ ಭುಗಿಲೆದ್ದ ದಿನೇಶ ಅಬ್ಬರಿಸಿದ.

“ಲೋಕೇಶಾ”

ಸಿಡಿಲಿನಂಥ ದನಿ ಮೈಗೆರಗಿದಾಗ ಉಸಿರೇ ಗಂಟಲಲ್ಲಿ ಸಿಕ್ಕಿಕೊಂಡಂತಾಯಿತು. ಹೊಡೆಯಲು ಎತ್ತಿದ ಕೈ ಮೆಲ್ಲನೆ ಕೆಳಗಿಳಿಯಿತು. ಗಲಾಟೆ ಕೇಳಿ ದಡಕ್ಕನೆ ಎದ್ದು ಮಿಕಿಮಿಕಿ ನೋಡುತ್ತಿದ್ದ ಅಪ್ಪುವನ್ನು “ಬಾರೋ ಹೋಗುವ” ಎಂದು ದಿನೂ ದನಿ ಎತ್ತರಿಸಿ ಕರೆದ. ಅದಕ್ಕೇ ಕಾಯುತ್ತಿದ್ದವನಂತೆ ಚಾಪೆಯಿಂದ ಹಾರಿಬಂದ ಅಪ್ಪುವನ್ನು ಎತ್ತಿಕೊಂಡು ತಿರುಗಿಯೂ ನೋಡದೆ ನಡೆದ. ಲೋಕೇಶ ಅವರನ್ನು ಅಟ್ಟಿಸುವವನಂತೆ ತೂರಾಡುತ್ತಾ ಗೋಡೆ, ಬಾಗಿಲು ಕಾಣದೆ ಕುರುಡನಂತೆ ತಡವರಿಸುತ್ತಾ, ಅವುಗಳಿಗೆ ಢಿಕ್ಕಿ ಹೊಡೆದು ಬೀಳುತ್ತಾ, ಏಳುತ್ತಾ ‘ಏಯ್ ಏಯ್’ ಎನ್ನುತ್ತಾ ಅಂಗಳಕ್ಕಿಳಿದು, ಮುಂದೆ ಸಾಗಲಾರದೆ ಅಲ್ಲೇ ಕುಕ್ಕರಿಸಿದ.

ಮೆಟ್ಟುಗತ್ತಿಯಲ್ಲಿ ಕುಳಿತು ಮೀನು ಕೊಯ್ಯುತ್ತಿದ್ದಂತೆ ಹತ್ತಿರ ಬಂದ ಅಪ್ಪು ನಿನ್ನೆ ನೋಡಿದ ಜಾತ್ರೆಯ ವರ್ಣನೆಯನ್ನು ಆರಂಭಿಸಿದ. ಮಗನಿಗೆ ಬೇಸರವಾಗಬಾರದೆಂದು ಸುಮ್ಮನೇ ಹೂಂಗುಡುತ್ತಿದ್ದರೂ ಮನದಲ್ಲಿನ್ನೂ ನಿನ್ನೆ ರಾತ್ರಿಯ ಘಟನೆಯೇ ತಾಂಡವವಾಡುತ್ತಿತ್ತು. ಮನಸ್ಸು ಎದ್ದುಬಿದ್ದು ಕುದಿಯುತ್ತಿತ್ತು. ಮೈಯಲ್ಲೆಲ್ಲ ವಿಚಿತ್ರ ಭಯ ಹರಿದಾಡುತ್ತಿತು. ಯೋಚನೆಗಳನ್ನು ಜಾಡಿಸುವಂತೆ ತಲೆ ಕೊಡವಿದರೂ ಕಿವಿಯೊಳಗೆ ಮೊಳಗುತ್ತಿತ್ತು- ಎಷ್ಟು ಓಡಿಸಿದರೂ ತಿರುತಿರುಗಿ ಬಂದು ಹುಣ್ಣಿನ ಮೇಲೆ ಕುಳಿತು ಕೆದಕುವ ನೊಣಗಳಂತೆ ಮುಕುರುವ ಗಂಡನ ಮಾತುಗಳು.
“ಅಮ್ಮಾ… ಅಪ್ಪ ಹಲ್ವಾ ಕತ್ತರಿಸ್ತಿದ್ದಾರೆ”

ಅಪ್ಪುವಿನ ಮಾತು ಕೇಳಿ ಪ್ರಜ್ಞೆ ತಪ್ಪುವುದೊಂದು ಬಾಕಿ. ತಟ್ಟೆಯಲ್ಲಿ ನಾಲ್ಕು ತುಂಡು ಹಲ್ವಗಳನ್ನಿಟ್ಟುಕೊಂಡು ‘ಚಿಕ್ಕಪ್ಪನಿಗೆ ಕೊಡು’ ಎಂದು ಅವರು ಮಗನ ಕೈಯಲ್ಲಿ ಕೊಟ್ಟು ಕಳುಹಿಸುವುದನ್ನು ಕಂಡಾಗ ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. “ಚಿಕ್ಕಪ್ಪ ಇಲ್ಲಿಲ್ಲ” ಎಂದ ಮಗನ ಬಳಿ “ಕೆಲಸಕ್ಕೆ ಹೋಗಿರ್ಬೇಕು. ಅಡುಗೆಮನೆಯಲ್ಲಿಡು. ಸಂಜೆ ಬಂದು ತಿಂದಾನು. ಛೆ! ಅವ ತಿಂಡಿಯೂ ತಿನ್ನದೆ ಹೋಗ್ತಾನೆ ಅಂತ ಗೊತ್ತಿರ್ತಿದ್ರೆ ನಿನ್ನೆಯೇ ಕೊಡ್ತಿದ್ದೆ” ಎಂದದ್ದು ಕೇಳಿಸಿತು. ದಿನೂ ಬರಿ ಹೊಟ್ಟೆಯಲ್ಲಿ ಹೋಗಿದ್ದಾನೆ ಎಂದು ತಿಳಿದಾಗ ಎದೆಯಾಳದಲ್ಲಿ ನೋವು ಉಕ್ಕಿ ಬರತೊಡಗಿತು. ಮೈಯಿಡೀ ಅಲುಗುವಂತೆ ನಿಟ್ಟುಸಿರು ಬಿಡುತ್ತಾ ಸಾರನ್ನು ಕುದಿಸಿ ಕೆಳಗಿಳಿಸುವಷ್ಟರಲ್ಲಿ ಯಾರೋ ಬಂದ ಸದ್ದಾಯಿತು. ತಿರುಗಿ ನೋಡಿದರೆ ಲೋಕೇಶ. ಮುಖದಲ್ಲಿ ಬಿಗುಹಿಲ್ಲ. ಸಿಟ್ಟು ಸೆಡವುಗಳಿಲ್ಲ.

“ಮದುವೆಯಾದಂದಿನಿಂದ ನನ್ನಿಂದ ಯಾರಿಗೂ ಸುಖವಿಲ್ಲ.” ಅವನ ಮಾತಿಗೆ ಅದು ಪೀಠಿಕೆಯಾಯಿತು. “ಏನಾದ್ರೊಂದು ಕಾರಣ ಹಿಡ್ದು ಗಲಾಟೆ ಮಾಡ್ತಿದ್ದೆ. ಏನು ಮಾಡೋದು? ನನ್ನ ಸ್ವಭಾವ ಹೀಗೆ ಆಗಿಹೋಯ್ತು. ದಿನೇಶ ನನ್ನ ತಮ್ಮ. ನನಗಿಂತಲೂ ಹೆಚ್ಚು ಪ್ರೀತಿಸ್ತಾನೆ ನಿಮ್ಮನ್ನು. ಅಪ್ಪುವನ್ನಂತೂ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ಹೆಚ್ಚು ಮುದ್ದು ಮಾಡ್ತಾನೆ. ತಪಸ್ಸು ಮಾಡಿದ್ರೂ ಸಿಗ್ತಾನಾ ಇಂಥ ತಮ್ಮ? ಅಂಥವನನ್ನು ನಾನು ಛೇ!” ಎನ್ನುತ್ತಿದ್ದಂತೆ ಮೈಗೆ ಹಾವು ಬಿದ್ದಂತಾಗಿ ತಟಕ್ಕನೆ ಕಣ್ಣೆತ್ತಿ ನೋಡಿದೆ. ಅಬ್ಬ! ಮುಖದಲ್ಲಿ ಸಂಶಯದ ನೆರಳಿಲ್ಲ. “ಹಲ್ವಾ ತಂದಿದ್ದೇನೆ. ಎಲ್ರೂ ತಿನ್ನಿ” ಎಂದು ಉಸಿರುಗಟ್ಟಿದಂತೆ ಹೇಳಿ ಹೊರಗಿಳಿದವನು ಅಂಗಳ ದಾಟುವ ಮೊದಲು ದನಿ ತಗ್ಗಿಸಿ “ಯಾರಾದ್ರೂ ಬಂದು ಕೇಳಿದ್ರೆ ‘ಅವರು ಹೋಗಿ ನಾಲ್ಕೈದು ದಿನ ಆಯ್ತು. ಬರುವಾಗ ಒಂದೆರಡು ವಾರ ಕಳೀಬಹುದು’ ಅಂತ ಹೇಳು” ಎಂದ. ನನಗೆ ಮತ್ತೂ ಬೆರಗು “ಸುಳ್ಳು ಯಾಕೆ ಹೇಳಲಿ? ಯಾವತ್ತೂ ಇಲ್ಲದ್ದು ಈಗ…” ಎನ್ನುತ್ತಿದ್ದಂತೆ ಅವನ ನೀಳ ಫೂತ್ಕಾರವು ನನ್ನ ಮಾತಿನ ಧಾರೆಯನ್ನು ಕತ್ತರಿಸಿತು “ಅದೆಲ್ಲ ಯಾಕೆ ನಿಂಗೆ? ಹೇಳಿದಷ್ಟು ಕೇಳು. ನೀನ್ಯಾರು ಹರಿಶ್ಚಂದ್ರನ ಮೊಮ್ಮಗಳೋ?” ಎಂದು ಗುರಾಯಿಸಿ ನೋಡುತ್ತಾ ಸದ್ದಿಲ್ಲದೆ ಮರೆಯಾದ. ಏನೆಂದರಿಯದೆ ಏಕೆಂದರಿಯದೆ ತಳಮಳಗೊಂಡು ತತ್ತರಿಸುತ್ತಿದ್ದ ನನಗೆ ಕೊನೆಗೂ ಎಚ್ಚರವಾದದ್ದು “ಅಮ್ಮಾ ನಂಗೂ ಬೇಕು ಹಲ್ವ” ಎಂಬ ದನಿ ಕೇಳಿದಾಗಲೇ.

ತನ್ನ ಪಾಡಿಗೆ ಆಡಿಕೊಳ್ಳುತ್ತಿದ್ದ ಅಪ್ಪು ಇದ್ದಕ್ಕಿದ್ದಂತೆ ಹೊಟ್ಟೆನೋವು ಎಂದು ನರಳತೊಡಗಿದಾಗ ನನ್ನ ಜೀವವೇ ಬಾಯಿಗೆ ಬಂದಂತಾಯಿತು.

“ಅಯ್ಯೋ! ಅದೇಕೆ ಮಗಾ?”

ಹತ್ತಿರ ಹೋಗಿ ನೋಡಿದರೆ ಅವನು ಕಣ್ಣುಮುಚ್ಚಿ ಬಾಯಿಯಲ್ಲಿ ಉಸಿರಾಡುತ್ತಿದ್ದ. ಅವನ ದೀರ್ಘ ಉಸಿರಾಟದ ಸದ್ದು ಸಿಡಿಯಲಿರುವ ಬಿರುಗಾಳಿಯ ಸದ್ದಿನಂತಿತ್ತು. ಸೆರಗಿನಿಂದ ಅವನ ಮುಖವನ್ನೊರೆಸಿ ತೊಡೆಯ ಮೇಲೆ ಮಲಗಿಸಿಕೊಂಡು ಕೇಳಿದೆ “ನೋವು ಜೋರಾಗಿದೆಯಾ?” ಅವನು ಅದಕ್ಕೆ ಉತ್ತರಿಸದೆ ‘ಅಯ್ಯೋ ಅಯ್ಯೋ’ ಎಂದು ಎರಡೂ ಕೈಗಳಿಂದ ಹೊಟ್ಟೆ ಹೊಸೆದು ಹೊರಳಾಡತೊಡಗಿದ. ಅತ್ತೂ ಅತ್ತೂ ಕೊರಳು ಕಟ್ಟಿತು. ಏನೂ ತೋಚದೆ ವಿಹ್ವಲಳಾಗಿ ಅವನ ಎದೆಯನ್ನು ನೀವುತ್ತಾ ಒಂದೇ ಸವನೆ ಬಿಕ್ಕುತ್ತಾ ಕರೆದೆ. “ಮಗಾ ನನ್ನನ್ನೊಮ್ಮೆ ನೋಡು ಮಗಾ”

“ನೋವು ಅಮ್ಮಾ” ಉಸಿರು ಮೇಲಕ್ಕೆ ಸಿಕ್ಕಿ ಕೈಕಾಲು ಬಡಿಯುತ್ತಿದ್ದಂತೆ ಬಳಕ್ಕನೆ ವಾಂತಿಯಾಯಿತು. ಮನೆಯ ಸಂದಿಗೊಂದಿಗಳನ್ನೆಲ್ಲ ತಡಕಾಡಿ ಮಾತ್ರೆಯನ್ನು ತೆಗೆದುಕೊಂಡು ಬರುವಾಗಲೇ ನಾನು ಅದನ್ನು ಗಮನಿಸಿದ್ದು! ವಾಂತಿಯೆಲ್ಲಾ ಹಸಿರು!

“ಏ ದೇವರೇ! ಇಲ್ಲ ಇಲ್ಲ ಬೇಡ” ಎಂದು ಹುಚ್ಚಿಯಂತೆ ಚೀರುತ್ತಾ ಮಗನನ್ನು ಬಾಚಿ ಎತ್ತಿಕೊಂಡು ಹೊರಗೆ ಓಡತೊಡಗಿದೆ.