Advertisement
ತಡಿಯಂಡ ಮೋಳ್‌ನ ಥಂಡಿಯಲ್ಲಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ತಡಿಯಂಡ ಮೋಳ್‌ನ ಥಂಡಿಯಲ್ಲಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ತೆರೆದ ಜೀಪಿನಲ್ಲಿ ಯಾವುದೋ ಕಪ್ಪು ಬಿಳುಪು ಚಿತ್ರದಂತೆ ತೆರೆ ತೆರೆಯಾಗಿ ಹಾಯುವ ಹಳ್ಳಿಗಳು. ಹೋದವಾಡ, ನಾಪೋಕ್ಲು ನರಿಯಾಂದ, ಕೋಕೇರಿ ಮುಂತಾದ ವಿಚಿತ್ರ ಹೆಸರಿನ ಊರುಗಳು ನಮ್ಮ ಹಿಂದೆ ಓಡಿ ಬರತೊಡಗಿದವು! ನಾವು ಅವುಗಳನ್ನೆಲ್ಲಾ ಬರ ಸೆಳೆವ ತವಕದಲ್ಲಿದ್ದರೂ ಜಲಪಾತವೊಂದರ ಆಕರ್ಷಣೆಗೆ ಮನಸೋತು ಮುಂದೋಡ ತೊಡಗಿದೆವು. ಅಲ್ಲಿನ ಪುಟಾಣಿ ಅಂಗಡಿಗಳು ಯಾವುದೋ ಕಾಲಕ್ಕೆ ನಮ್ಮನ್ನು ಕೊಂಡೊಯ್ದವು. ಬೆಚ್ಚಗಿನ ಹಳ್ಳಿಗಳ ಸುಖವೇ ಸುಖ. ಅಲ್ಲಿನವರ ಭಾಷೆ ಮತ್ತು ಅದರೆಡಗಿನ ಪ್ರೇಮ, ಹಾಕಿ ಹಾಗೂ ಸೈನ್ಯಕ್ಕೆ ಸೇರುವ ಅಭಿಲಾಷೆಗಳನ್ನು ಕಂಡು ನಿಬ್ಬೆರಗಾದೆ. ಪ್ರತಿ ಮನೆಯಲ್ಲೂ ಒಬ್ಬ ಯೋಧ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕೊಡಗಿನ ಪ್ರವಾಸದ ಕುರಿತ ಬರಹ ಇಲ್ಲಿದೆ

ವಯಸ್ಸಿನ `ಚರ್ಬಿ’ ಇದ್ದ ಕಾಲ. ಅಲೆಮಾರಿ ಮನಸ್ಸಿನ ತುಂಬಾ ನೂರಾರು ಪ್ರಶ್ನೆಗಳು. ಚಾರಣ ಏಕೆ ಮಾಡಬೇಕು? ಏಕೆ ಇಷ್ಟೊಂದು ತಿರುಗಾಟ? ಮುಂತಾದ ನೂರಾರು ಪ್ರಶ್ನೆ ಮೆದುಳ ಬತ್ತಳಿಕೆಯಲ್ಲಿ. ಹಾಗಾಗಿ ಎರಡು ವರ್ಷ ಯಾವುದೇ ಪ್ರವಾಸದ ಪ್ರಸವ ವೇದನೆ ಅನುಭವಿಸದೇ ಸುಮ್ಮನಿದ್ದೆ. ಯಾಕೋ ಬೇಜಾರು ಕವಿದ ವಾತಾವರಣ!

ಚಾರಣ ದಾರಿಯ ಕೈ ಹಿಡಿಸಿದ ಕತೆ ಪುಸ್ತಕ

ಸುಮ್ಮನೆ ಮನೆಯಲ್ಲಿ ಕುಳಿತು ಕಾಲಹರಣ ಮಾಡಿದ್ದೆ. ಅಂತಹ ತುಡಿತವೂ ಇದ್ದಿರಲಿಲ್ಲ! ಆದರೆ ಬಿಡದೆ ಚಾರಣ ಲೇಖನಗಳ ಸಂಗ್ರಹ ಮಾಡುತಲಿದ್ದೆ!! ಕತೆಯ ಪುಸ್ತಕವೊಂದು ಕಾನನದ ದಾರಿಯ ಕೈಹಿಡಿದು ಹೊರಟಿತ್ತು. ಪುಸ್ತಕ ಒಂದು ನನ್ನನ್ನು ಎರಡು ದೊಡ್ಡ ಚಾರಣ ದಾರಿಗೆ ಎಳೆದು ತಂದಿತು. ಚಿಕ್ಕ ವೀರರಾಜೇಂದ್ರ ಪುಸ್ತಕ ಓದಿದ ಪಾರ್ಶ್ವ ಪರಿಣಾಮವೇ ಈ ಚಾರಣ ಮತ್ತು ಲೇಖನ. ಅಂದು ಸಪ್ನ ಪುಸ್ತಕ ಮಳಿಗೆಯಲ್ಲಿ ಓದಿದ ಈ ಕೃತಿಯು ನನ್ನನ್ನು ಇಲ್ಲಿಗೆ ಎಳೆದು ತಂದಿತು. ಚಿಕ್ಕ ವೀರ ರಾಜೇಂದ್ರನ ಕೃರ್ತ ವಿ.ಕೃ. ಗೋಕಾಕ್ ನಾಲ್ಕುನಾಡು ಅರಮನೆ ಮತ್ತು ಇದರ ಇತಿಹಾಸವೇ ನನ್ನ ಈ ಬೃಹತ್ ಕಾದಂಬರಿ ರಚನೆಗೆ ಕಾರಣ ಎಂದಾಗ ಸಖತ್ ಅಚ್ಚರಿಯಾಗಿತ್ತು. ಒಂದು ಸುಂದರ ಅರಮನೆ ಕಾದಂಬರಿ ರಚನೆಗೆ ಕಾರಣವಾಗುತ್ತದಲ್ಲಾವೆಂದೂ ಅಚ್ಚರಿ ಪಟ್ಟಿದ್ದೆ.

ಯಾಕೊಮ್ಮೆ ನೋಡಿ ಬರಬಾರದೆಂದು ಲೆಕ್ಕಾಚಾರ ಹಾಕಿದೆ. ಇಲ್ಲಿನ ಇತಿಹಾಸ ಓದಿಕೊಂಡಾಗ ಕೊಡಗಿನ ಹಾಲೇರಿ ವಂಶದ ದೊಡ್ಡ ವೀರ ರಾಜೇಂದ್ರ ರಾಜನ ಕಾಲದಲ್ಲಿ ನಿರ್ಮಿತವಾದ ಈ ಅರಮನೆ ಅಂದಿನ ಕಾಲದ ಅಡಗುತಾಣ. ಟಿಪ್ಪುವಿನ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಇದನ್ನು ಸದಾ ಬಳಸಲಾಗುತ್ತಿತ್ತು. ಚಿಕ್ಕವೀರ ರಾಜೇಂದ್ರನೇ ಇಲ್ಲಿ ಅಡಗಿದ ಕೊನೆಯ ರಾಜ! ನಿರ್ಮಿತಿಯ ರೀತಿಯಲ್ಲಿ ಇದೊಂದು ಕಲಾಕೃತಿ! ವಿಶಿಷ್ಟ ಅಡುಗುತಾಣವಾದ ಇದು ಯಾವಕ ಪಾಡಿ ಹಳ್ಳಿಯ ಸನಿಹದಲ್ಲಿದೆ. ದೂರದಿಂದ ಕಾಣುವವರಿಗೆ ಬೃಹತ್ ಹೆಂಚಿನ ಮನೆಯಂತಷ್ಟೇ ಗೋಚರ. ಬ್ರಿಟಿಷರು 1834ರಲ್ಲಿ ಕೊಡಗಿನ ಕೊನೆಯ ರಾಜ ಚಿಕ್ಕ ವೀರ ರಾಜೇಂದ್ರನನ್ನು ಸೋಲಿಸಿ ತಮ್ಮ ಅಧಿಪತ್ಯ ಸ್ಥಾಪಿಸುತ್ತಾರೆ. ಇಲ್ಲಿಯವರೆಗೆ ತಿಳಿದ ವಿಚಾರಗಳಿಂದ ಪ್ರೇರಿತನಾಗಿ ನಾನು ಅವಕಾಶಕ್ಕಾಗಿ ಕಾಯುತ್ತಿದ್ದೆ.

ಮಧುರ ಮಾಂದಲ ಪಟ್ಟಿಯಿಂದ…

ತಡಿಯಂಡ ಮೋಳ್‌ ಪರ್ವತದ ನೆತ್ತಿಯಲ್ಲಿ ರಾತ್ರಿ ಕಳೆವ ಇರಾದೆ ಮೂಡಿತು. ಆಗಲೇ ಗೆಳೆಯನ ಗೆಳೆಯನೊಬ್ಬ ಬಂಗಾಳದಿಂದ ಬಂದಿದ್ದ. ಆತನಿಗೆ ಕರ್ನಾಟಕದ ಕೆಲವು ಚಾರಣ ಪ್ರದೇಶ ತೋರಿಸುವ ದಿಗ್ದರ್ಶಕನನಾಗಿ ಅವರ ಜೊತೆ ಹೊರಟೆ. ಇರಲಿ ಹೀಗಾದರೂ ಒಂದಿಷ್ಟು ಜಾಗ ನೋಡುವ ಅವಕಾಶವಾಯಿತೆಂದು ನಮ್ಮ ಪಟಾಲಂನ್ನು ಕರೆದುಕೊಂಡು ಕೊಡಗಿನಲ್ಲಿಳಿದೆ. ಇಳಿ ಹಗಲಿಗೆ ಹೆಗಲೊಡ್ಡಿ ಒಂದು ಹೋಸ್ಟೇಂನಲ್ಲಿ ಉಳಿದು ಕೊಡಗು ಸುತ್ತಿಸುವ ಯೋಜನೆ ಹಾಕಿದೆ.

ನಮ್ಮ ಪ್ರಣವ ಪಟ್ಟು ಮಾಂದಲ ಪಟ್ಟಿಯಂತಹ. ಆಗಾಗ ಇದರ ಅನನ್ಯ ಸೌಂದರ್ಯ ನೋಡಲು ಸಿಕ್ಕಿ ನಾಲಿಗೆಯಲ್ಲಿ ನೀರು ತರಿಸುತ್ತಿತ್ತು. ಹಾಗಾಗಿ ಮೊದಲ ದಿನ ಮಾಂದಲಪಟ್ಟಿ ಎಂಬ ಸುಂದರ ಬೆಟ್ಟಕ್ಕೆ ಜೀಪಿನಲ್ಲಿ ಲಗ್ಗೆ ಇಟ್ಟೆವು. ಅಲ್ಲಿನ ಸೂರ್ಯೋದಯವನ್ನು ಸವಿದು ನಾವು ಮೂವರೂ ಹೊಟ್ಟೆ ಮಗಚುವ ದಾರಿಯಲ್ಲಿ ಹಾಡು ಕೇಳುತ್ತಾ ಕೊಡಗಿನ ತುದಿಯೂರ ಜಲಪಾತದ ಸೋಗಿಗೆ ಮಾರು ಹೋಗಿ ಜ್ಯೋತಿ ಎನ್ನುವವರ ಜೀಪಿನಲ್ಲಿ ಬೆಳಿಗ್ಗೆ 10 ರ ಸುಮಾರಿಗೆ ಹೊರಟು ನಿಂತೆವು.

ದಾರಿಯುದ್ದಕ್ಕೂ ನಮ್ಮ ಡ್ರೈವರ್ ಕೇಳಿಸಿದ ಕೊಡಗಿನ ಅದ್ಭುತ ಹಾಡಿಗೆ ಕಿವಿಯಾದೆವು. ಕೆಲವು ಹಾಡನ್ನು ರೆಕಾರ್ಡ್ ಕೂಡ ಮಾಡಿಕೊಂಡೆ. “ಹುಳಿ ಕಳ್ಳವ್ವಾ” ಎಂಬ ಹಾಡು ಇನ್ನೂ ನನ್ನ ಸ್ಮೃತಿ ಪಟಲದ ಮೇಲೆ ನಲಿಯುತ್ತಿದೆ.  ಕನ್ನಡ, ಮಲಯಾಳಂ ನಡುವೆ ಜನಿಸಿದ ಭಾಷೆ ಕೊಡವ. ಕನ್ನಡದ ಕೆಲವು ಪದಗಳಿಲ್ಲಿ ಅತಿಥಿ ಕಲಾವಿದರಾಗಿ ಹೋಗಿ ಬಂದು ಮಾಡಿವೆ. ಉದಾಹರಣೆಗೆ ಅನ್ನಕ್ಕೆ ನಾವು ಬಳಸುವ ‘ಕೂಳುʼ ಅಲ್ಲಿಯೂ ಅದೇ ಪದವಾಗಿ ಉಳಿದಿದೆ. ಕೆಲ ಪದಗಳ ಸಾಮ್ಯತೆ ನಮ್ಮ ತುಳುವಿನಂತಿದೆ! ಅತ್ಯಂತ ಅದ್ಭುತವಾದ ಇವರ ಭಾಷೆಗೆ ಒಂದು ಲಯವಿದೆ, ಸಂಗೀತವಿದೆ. ಹೀಗೆ ಬೆಟ್ಟವಿಳಿದು ಕಚ್ಛಾ ರಸ್ತೆಯಲ್ಲಿ ಬರುತ್ತಾ ಮಡಿಕೇರಿಯ ಭಟ್ಟರ ಹೋಟೆಲಿನ ಕಾಫಿ ನಮಗಾಗಿ ಕಾದಿತ್ತು. ಇದು ಮಡಿಕೇರಿಯ ಅತ್ಯಂತ ಹಳೆಯ ಹೋಟೆಲ್. ಇಲ್ಲಿ ತಯಾರಿಸಲಾಗುವ ತಿಂಡಿಗಳ ರುಚಿಯಂತೂ ಅದ್ಭುತ. ಉಪ್ಪಿಟ್ಟು ಎಂದರೆ ಕಾಂಕ್ರೀಟು ಎಂದು ಮನೆಯಲ್ಲಿ ಎಂದೂ ತಿನ್ನದೇ ಬೇಡವೆನ್ನುವ, ಮೊಸಳೆ ಕಣ್ಣೀರು ಹಾಕುವ ನಾನೂ ಮೆಚ್ಚುವಂತೆ ಮಾಡಿದ ಉಪ್ಪಿಟ್ಟು ಅನುಪಮ ರುಚಿ ಹೊಂದಿತ್ತು! ತಿಂದಾದ ಮೇಲೆ ಬರುವ ತಲೆ ನೋವು ಇದು ತಿಂದ ಮೇಲೆ ಬರಲೇ ಇಲ್ಲ. ಇಷ್ಟು ರುಚಿಕಟ್ಟಾದ ಉಪ್ಪಿಟ್ಟು ನಾನಿಲ್ಲಿಯವರೆಗೆ ಸವಿದದ್ದೇ ಇಲ್ಲ. ಕಾಫಿಯಂತೂ ಕೇಳಲೇಬೇಡಿ! ವರ್ಷಗಳ ಕಾಲದ ಅವರ ಕೈ ಬಳಸು ಫಿಲ್ಟರ್‌ ಕಾಫಿಯ ರುಚಿಯಲ್ಲಿ ಹೊರಹೊಮ್ಮಿತ್ತು. ಭಟ್ಟರ ಪುಟಾಣಿ ಹೋಟೆಲ್‌ನಲ್ಲಿ ಉಪ್ಪಿಟ್ಟು ಹೊಟ್ಟೆಗಿಳಿಸಿ ಮಡಿಕೇರಿಯ ಚೆಲುವ ಹೀರುತ್ತಾ ಚೇಲಾವರದತ್ತ  ಮುಖ ಮಾಡಿದೆವು. ಕಡಿಮೆ ಜನಸಂಖ್ಯೆಯ ಅಂದಿನ ಕೊಡಗೊಂದು ನಮಗೆ ರೋಚಕ ಅನುಭೂತಿಯನ್ನು ಉಣಬಡಿಸಿತ್ತು.

ಕಾತರದ ಕಾವ್ಯ ತೆರೆ

ತೆರೆದ ಜೀಪಿನಲ್ಲಿ ಯಾವುದೋ ಕಪ್ಪು ಬಿಳುಪು ಚಿತ್ರದಂತೆ ತೆರೆ ತೆರೆಯಾಗಿ ಹಾಯುವ ಹಳ್ಳಿಗಳು. ಹೋದವಾಡ, ನಾಪೋಕ್ಲು ನರಿಯಾಂದ, ಕೋಕೇರಿ ಮುಂತಾದ ವಿಚಿತ್ರ ಹೆಸರಿನ ಊರುಗಳು ನಮ್ಮ ಹಿಂದೆ ಓಡಿ ಬರತೊಡಗಿದವು! ನಾವು ಅವುಗಳನ್ನೆಲ್ಲಾ ಬರ ಸೆಳೆವ ತವಕದಲ್ಲಿದ್ದರೂ ಜಲಪಾತವೊಂದರ ಆಕರ್ಷಣೆಗೆ ಮನಸೋತು ಮುಂದೋಡ ತೊಡಗಿದೆವು. ಅಲ್ಲಿನ ಪುಟಾಣಿ ಅಂಗಡಿಗಳು ಯಾವುದೋ ಕಾಲಕ್ಕೆ ನಮ್ಮನ್ನು ಕೊಂಡೊಯ್ದವು. ಬೆಚ್ಚಗಿನ ಹಳ್ಳಿಗಳ ಸುಖವೇ ಸುಖ. ಅಲ್ಲಿನವರ ಭಾಷೆ ಮತ್ತು ಅದರೆಡಗಿನ ಪ್ರೇಮ, ಹಾಕಿ ಹಾಗೂ ಸೈನ್ಯಕ್ಕೆ ಸೇರುವ ಅಭಿಲಾಷೆಗಳನ್ನು ಕಂಡು ನಿಬ್ಬೆರಗಾದೆ. ಪ್ರತಿ ಮನೆಯಲ್ಲೂ ಒಬ್ಬ ಯೋಧ.

ಮೈ ಮೂಳೆಗಳ ಲೆಕ್ಕ ಸಿಗುವ ಚೆಲುವಾದ ಜಲಪಾತದ ದಾರಿ (2012). ಎದುರಿಂದ ಯಾವುದೇ ವಾಹನ ಬಂದರೂ ನಮ್ಮನ್ನು ಧೂಳ ಸ್ನಾನವ ಮಾಡಿಸಿ ಹೋಗುತ್ತಿತ್ತು. ನಡು ನಡುವೆ ಹಾದ ವಾಹನಗಳ ಧೂಳು ನಮ್ಮ ಮೇಲೆ ಕೂರದಿರಲೆಂದು ಜೀಪಿನ ಮುಂದಿನ ಗಾಜನ್ನು ಎತ್ತಿ ಸಹಜ ಗಾಳಿ ಸಂಚಾರವಾಗುವಂತೆ ನೋಡಿಕೊಂಡರು. ಸ್ವಲ್ಪವೂ ಜೀಪಿನೊಳಗೆ ನುಗ್ಗದೆ ಹಾರಿ ಹೋದವು. ಇವರಿಗೆ ಭೌತಶಾಸ್ತ್ರವನ್ನು ಹೇಳಿಕೊಟ್ಟವರು ಯಾರು? ಇಲ್ಲಿನ ಸ್ಥಳೀಯ ಜ್ಞಾನ ಅನನ್ಯ. ನಡು ಮಧ್ಯಾಹ್ನವ ದಾಟಿದ ಮೇಲೆ ನಾವು ಚೆಲುವಾರದ ಚೆಲುವು ಸವಿಯುತ್ತಾ ಕುಳಿತೆವು. ಎರಡು ಮೂರು ಕಡೆ ನಮ್ಮ ಖುಷಿಗಾಗಿ ಲಗಾಟಿ ಹೊಡೆವ ಈ ಜಲಧಾರೆ ಧ್ಯಾನಸ್ಥರಾಗಲೊಂದು ಅನುಪಮ ಸ್ಥಳ. ಅದೃಷ್ಟವಂತರ ಎರಡು ಮನೆಗಳು ದೊಡ್ಡದೊಂದು ಎಸ್ಟೇಟ್‌ ಮನೆ ಸನಿಹದಲ್ಲಿದೆ. ಗಂಟೆಗಟ್ಟಲೆ ಸುಮ್ಮನೆ ಕೂತೆವು. ನಾವು ಬರದಿದ್ದನ್ನು ಕಂಡ ಜೀಪ್‌ ಡ್ರೈವರ್‌ ಅಬು ನಮ್ಮನ್ನು ಹುಡುಕಿಕೊಂಡು ಬಂದ!

ನಮ್ಮ ಜೊತೆಗೆ ಅಂದು ಜೀಪಿನಲ್ಲಿ ಬಂದವ ಒಬ್ಬ ಪಾರಂಪರಿಕ ವೈದ್ಯ ಮಾಡುವ ವ್ಯಕ್ತಿ. ಹಾಗೆ ನಾವು ಅವನೊಂದಿಗೆ ಸ್ಥಳೀಯ ಭಾಷೆ, ತಿಂಡಿ, ಆಹಾರ ಮತ್ತು ಔಷಧಗಳ ಕುರಿತು ಚರ್ಚಿಸಿದೆವು. ಇಳಿ ಸಂಜೆಗೆ ನಮ್ಮನ್ನು ಹೊತ್ತ ಜೀಪು ಮೂರ‍್ನಾಡು ಸಮೀಪದ ಪುಟಾಣಿ ಹೋಂ ಸ್ಟೇನಲ್ಲಿ ಇಳಿಸಿ ಹೋಯಿತು. ನಾಳೆಯ ಚಾರಣಕ್ಕೆ ಬೇಕಾದ ಅನೇಕ ವಸ್ತುಗಳ ಖರೀದಿಸಿ ಸಜ್ಜಾದೆವು. ಅಂದಿನ ದಿನಚರಿಯು ಗೆಳೆಯ ಸುಭಾಶ್‌ನ ಕಡತಗಳಲ್ಲಿ ಕರಗುತ್ತಲೇ ನಾನೂ ಕತ್ತಲೆಯೊಂದಿಗೆ ಕರಗಿದೆ.

ಪಂದಿ ಕರಿ ಕೊಡವರ ವಿಶಿಷ್ಟ ರುಚಿ ಮೊಗ್ಗು

ಅಂದು ಮೂರ್ನಾಡಿನ ಪುಟಾಣಿ ಹೋಂಸ್ಟೇಯ ಮನೆ ಒಡತಿ ಮತ್ತು ಅಡುಗೆ ಸಹಾಯಕಿ ಬಡಿಸಿದ ವಿಶೇಷ ಊಟ ಜೀವಮಾನದ ಅದ್ಭುತ ಊಟ. ಕೇರಳದ ಪುಟ್ಟುವಿನಂತಹ ಚಿಕ್ಕ ಅಕ್ಕಿ ಉಂಡೆ ಇಲ್ಲಿನವರು ಇದನ್ನು ಕಡಂಬುಟ್ಟು ಎನ್ನುತ್ತಾರೆ. ಅದಕ್ಕೆ ಸಂವಾದಿಯಾಗಿ ಪಂದಿಕರಿ ಮತ್ತು ಕಾಚಂಪುಳಿ ಮಾಡಿ ಬಡಿಸಿದ್ದರು. ಬೆಳಗಿನ ತಿಂಡಿಗೆ ಪಾಪುಟ್ಟು, ಅಕ್ಕಿ ರೊಟ್ಟಿ (ಚಪಾತಿ ತರಹದ್ದು). ಇಲ್ಲಿನ ವಿಶಿಷ್ಟ ಅಕ್ಕಿ ರೊಟ್ಟಿ ಜೊತೆಗೆ ವಿಶಿಷ್ಟ ಅಣಬೆ ಗಸಿ ಮಾಡಿದ್ದರು. ರೊಟ್ಟಿ ಬೇಯುವಾಗಲಿನ ಅಕ್ಕಿಯ ಘಮ ನಮ್ಮ ನಾಸಿಕಾಗ್ರವನ್ನು ತುಂಬಿ ಹೊಟ್ಟೆಯ ತಾಳ ಹೆಚ್ಚಿಸಿತ್ತು. ಉಬ್ಬುವ ಅಕ್ಕಿ ರೊಟ್ಟಿಯನ್ನು ಕಂಡಿದ್ದೇ ಇಲ್ಲೇ. ಇಂತಹ ವಿಶಿಷ್ಟ ರುಚಿಗಾಗಿ ಸ್ಥಳೀಯ ಹೋಂ ಸ್ಟೇಗಳಿಗೆ ಎಡತಾಕಬೇಕು. ರುಚಿ ಮೊಗ್ಗು ಅರಳಿಸುವ ಬಾಣಸಿಗರಿದ್ದರಂತೂ ಮುಗಿದೇ ಹೋಯಿತು. ಹೋಂ ಸ್ಟೇ ಮಾಲೀಕ ಇಲ್ಲಿನ ಸ್ಥಳೀಯ ಜನರ ವೇಷ ಭೂಷಣಗಳನ್ನು ನಮಗೆ ಪರಿಚಯಿಸಿದರು. ಹಳೆ ಕಾಲದ ಓಣಿಯಲ್ಲಿ ಕಳೆದು ಹೋದ ಜಟಕಾಬಂಡಿ ಮತ್ತಿತರ ಸಾಮಾಗ್ರಿಗಳು ನಮ್ಮನ್ನು ಆಪ್ತವಾಗಿ ಸ್ವಾಗತಿಸಿದವು. ಜೊತೆಗಿದ್ದ ಎರಡು ಹಳೆಯ ಬಂದೂಕುಗಳು ನಮ್ಮನ್ನು ಎಚ್ಚರಿಸಿದವು ಕೂಡ! ಮನೆಯ ಯಜಮಾನನ ಅಭಿರುಚಿ ಕಂಡು ಖುಷಿಯಾಯಿತು. ಕೊಡಗಿನ ಕಾಫಿ ಕೊಟ್ಟು ನಮಗೆ ಶುಭವಿದಾಯ ಕೋರಿದರು.

ನಮ್ಮೆಲ್ಲಾ ಸರಂಜಾವಲು ತುಂಬಿಕೊಂಡು ಅಬು ಅವರ ಜೀಪ್ ಹತ್ತಿ ನಾಲ್ನಾಡು ತಲುಪಿದೆವು. ಅಲ್ಲಿಂದ ಬುತ್ತಿಗಂಟು ಹಿಡಿದು ತಡಿಯಂಡ ಮೋಳ್ ಪರ್ವತದ ನೆತ್ತಿ ತಡವಲು ಹೊರಟು ನಿಂತೆವು. 1750ಮೀ ಎತ್ತರವಿರುವ ಕರ್ನಾಟಕದ ಎರಡನೆಯ ದೊಡ್ಡ ಶಿಖರವೇರುವ ಸಂಭ್ರಮ. ಜೊತೆಗೆ ಹೊಸ ಗೆಳೆಯರು.

ತಡಿಯಂಡ ಮೋಳ್‌

ಕಾಡಿನೊಳಗೆ ಬಚ್ಚಿಟ್ಟುಕೊಂಡ ಅರಮನೆ ಇಲ್ಲಿಂದ ಕೆಲವೇ ಕಿಲೋಮೀಟರ್. ಸನಿಹದಲ್ಲಿ ತಡಿಯಂಡ ಮೋಳ್ ಎಂಬ ಪರ್ವತದ ಚಾರಣ ದಾರಿ ತೆರೆದುಕೊಳ್ಳುತ್ತದೆ. ಅದಾಗಲೇ ಹಲವು ರೆಸಾರ್ಟ್‌ಗಳು ದಾರಿ ಉದ್ದಕ್ಕೂ  ಮನೆ ಮಾಡಿದ್ದವು.  ಚಿಕ್ಕವೀರರಾಜೇಂದ್ರ ಕಾದಂಬರಿಯ ಪಾತ್ರಗಳು  ನಮ್ಮ ಜೊತೆಗೇ ಬಂದುವು. ಅರಮನೆಯಿಂದ ಕಾದಂಬರಿ, ಕಾದಂಬರಿಯಿಂದ ಮುಂಬರಿದ ಹೊಸ ಚಾರಣ! ಎಲ್ಲವೂ ವಿಚಿತ್ರ.

ಮರುದಿನ ಬೆಳಿಗ್ಗೆ ನಮ್ಮ ಪಯಣ ತಡಿಯಂಡ ಮೋಳ್ ಕೆಡೆಗೆ. ಸುತ್ತಲು ಗವ್ ಎನ್ನುವ ಮೌನ. ಎಲ್ಲೆಲ್ಲೂ ಸಿಗದ ನೆಟ್‌ವರ್ಕ್. ತಾಪವಂತು ೦ ಸೊನ್ನೆಯ ಸನಿಹ ಇಳಿದಿತ್ತು. ಇಂತಹ ಚಳಿಯ ಪರಿಸ್ಥಿತಿಯಲ್ಲಿ ನಾವೊಂದು ಮೂರು ಜನ ಬೆಳಕು ಹರಿಯುತ್ತಲೇ ಬುತ್ತಿ ಗಂಟು ಹಿಡಿದು ತಡಿಯಂಡ ಮೋಳ್‌ನ ನೆತ್ತಿಯತ್ತ ಹೊರಟೆವು. ಪ್ರಾರಂಭದಲ್ಲಂತೂ ತೀರ ಸಪಾಟಾದ ಗುರುತಿಸಬಲ್ಲಂತಹ ದಾರಿ. ಬೆಟ್ಟದ ಬುಡದಲ್ಲಿ ಒಂದೆರಡು ಹೋಮ ಸ್ಟೇಯನ್ನು ನೋಡಿದೆ. ನಮಗಿಂತಲೂ ಮುಂಚೆ ಹೊರಟ ತಂಡ ಒಂದು ನಡು ದಾರಿಯಲ್ಲಿ ವಾಪಸ್ ಬರುತ್ತಿತ್ತು. ಯಾವುದೋ ಹೋಂ ಸ್ಟೇಯಲ್ಲಿ ಅವರು  ತಂಗಿದ್ದರು. ಮುದುಕನೊಬ್ಬನನ್ನು ಜೊತೆ ಮಾಡಿಕೊಂಡು ಹೊರಟಿದ್ದರು. ನಡುವೆ ಸಿಗುವ ಮನೆಯೊಂದನ್ನು ದಾಟಿ ನೇರವಾಗಿ ಚಾರಣದಾರಿಗೆ ಬಿದ್ದೆವು. ಸಾವಿರಾರು ಜೀರುಂಡೆಗಳು ನಮಗೆ ಸ್ವಾಗತಕ್ಕೆ ನಿಂತಿದ್ದವು. ಹತ್ತಾರು ಜಾತಿಯ ಫರ್ನ್‌ಗಳು ದಾರಿಯುದ್ದಕ್ಕೂ. ಏನೆಲ್ಲಾ ನೋಡಲಿ ಎಂಬ ಚಿಕ್ಕ ಜಿಜ್ಞಾಸೆ.  ಜಿಪಿಎಸ್ ಇಲ್ಲದ ಕಾಲದಲ್ಲಿ ನಾವು ಮೂವರು ಅಬ್ಬೆ ಪಾರಿಗಳಂತೆ ತಡಿಯಂಡ ಮೋಳ್‌ನ ನೆತ್ತಿ ಸವರಲು ಹೊರಟದ್ದೇ ಒಂದು ಅಚ್ಚರಿ. ಈಗಿನವರಂತೆ ನಮ್ಮಲ್ಲಿ ಯಾರು ದಾರಿತಪ್ಪಿದ್ದೇ ಇಲ್ಲ. ಜೇನುಕಲ್ಲು ಗುಡ್ಡದಲ್ಲಂತೂ ಅಸಾಧ್ಯವಾದ ದಾರಿಯಲ್ಲಿ ಹೋಗಿ ಮತ್ತೆ ಸರಿದಾರಿ ತುಳಿದು ಬೆಟ್ಟವೇರಿ ಮರಳಿದ್ದು ವಿಶೇಷ. ಹೀಗಿರುವಾಗ ಸರಳವಾದ ಏರುದಾರಿಯಲ್ಲಿ ಜನ ದಾರಿ ತಪ್ಪುತ್ತಾರೆ ಎನ್ನುವುದೇ ನಮಗೆ ಅಚ್ಚರಿಯಾಗಿ ಕಾಣುತ್ತದೆ. ಮೊನ್ನೆ ಒಬ್ಬಳು ಸುರಸುಂದರಿ ತಡಿಯಂಡ ಮೋಳ್‌ನ ದಾರಿಯಲ್ಲಿ ದಾರಿ ತಪ್ಪಿದ್ದಳಂತೆ. ಕೇಳಿಯೇ ಅಚ್ಚರಿ.  ಸುಮಾರು ಮೂರು ಗಂಟೆಯ ನಡಿಗೆಯ ತರುವಾಯ ನೆತ್ತಿಯ ತುದಿಯಲ್ಲಿದ್ದೆವು. ನಮ್ಮ ಜೊತೆಗೆ ಬಂದ ಗೆಳೆಯ ಹಿಂದಿನ ದಿನ ಇದೇ ದಾರಿಯಲ್ಲಿ ಹಾದು ಹೋದ ಪ್ರಾಣಿಗಳ ಪ್ರವರವನ್ನು ಒಪ್ಪಿಸಿದ. ಚಿರತೆ, ಕಾಡು ಹಂದಿ, ಆನೆ, ಮುಳ್ಳು ಹಂದಿ ಮುಂತಾದವೂ ತಡಿಯಂಡಮೋಳ್ ಚಾರಣ ಮುಗಿಸಿ ಹೊರಟು ಹೋಗಿದ್ದವು. ಕೊನೆಯ ಏರು ದಾರಿ ಏರಲು ಬಲು ಕಷ್ಟ ಪಟ್ಟೆವು. ಗೆಳೆಯ ಸುಭಾಸ್‌ ಬಿಸ್ವಾಸ್‌ ಸಹಾಯ ಮಾಡಿದ. ತುದಿ ತಲುಪುತ್ತಲೇ ಬೀಸುವ ತಣ್ಣನೆಯ ಗಾಳಿಯ ಉಪಚಾರ. ನೆತ್ತಿಯಲ್ಲಂದು ಮೈನಸ್ ಮೂರು ಡಿಗ್ರಿ ಇತ್ತೆಂಬ ಸಮಾಚಾರ ತಿಳಿದು ನೆತ್ತಿಯಲ್ಲೇ ಕ್ಯಾಂಪ್ ಮಾಡುವ ವಿಚಾರ ಕೈಬಿಟ್ಟೆವು. ಕೊಂಡ ಟೆಂಟು ದಾರಗಳು, ಗ್ಲೌಸು ಎಲ್ಲವೂ ಮರಳಿ ತಮ್ಮ ದಾರಿ ಹಿಡಿದವು. ಇವೆಲ್ಲವೂ ಮುಂದಿನ ಕುಮಾರ ಪರ್ವತ ಚಾರಣದಲ್ಲಿ ಉಪಯೋಗಕ್ಕೆ ಬಂತು.

ನೆತ್ತಿಯಲಿ ನೀಲ ಚಿತ್ತಾರ

ಆಕಾಶಕ್ಕೆ ಬಳಿದ ನೀಲಿ ಬಣ್ಣ. ಅಲೆ ಅಲೆಯಂತೆ ನಿಂತ ಪರ್ವತ ಸಾಲು ಚಿತ್ರಕ್ಕೊಂದು ಹೊಸ ಆಯಾಮವನ್ನು ತಂದು ಕೊಡುತ್ತದೆ. ತಡಿಯಂಡ ಮೋಳ್‌ನ ತಂಗಿ ಬ್ರಹ್ಮಗಿರಿ ಶಿಖರ ಅಲ್ಲೇ ಸನಿಹದಲ್ಲಿದ್ದಳು. ಪರ್ವತದ ಪದತಲದಲ್ಲಿ ಪವಡಿಸಿದ ಮನೆಗಳಿಂದ ಎದ್ದುಬರೋ ಧೂಮ ಪ್ರಕೃತಿಗೊಂದು ಹೊಸ ಬಗೆಯ ಚೌಕಟ್ಟು ಒದಗಿಸಿತ್ತು. ಚದುರಿದ ಮೋಡಗಳು ಹತ್ತಿ ಹಿಂಜಿದಂತೆ ಕಾಣುತ್ತಿದ್ದವು. ನಡೆದಾಡಲು ಕಷ್ಟ ಪಡುತ್ತಿದ್ದ ಜಾಗಗಳಲ್ಲಿ ಒಂದಿಬ್ಬರು ತಮ್ಮ ಎಂಟಿಬಿ ಸೈಕಲ್ ಹೊತ್ತು ಬಂದಿದ್ದರು. ಅವರಿಗೆ ನನ್ನ ಅನುಕಂಪ ಮತ್ತು ಅಚ್ಚರಿ. ಮುಂಬಯಿ ಫೋಟೋಗ್ರಾಫರ್‌ ನೊಬ್ಬ ತನ್ನ ಸರಕು ಸರಂಜಾಮಿನ ಜೊತೆಗೆ ತನ್ನ ಜಂಭದೊಂದಿಗೆ ಬಂದಿದ್ದ. ನಾವು ನಾಳೆ ಮತ್ತೊಂದು ಚಾರಣ ಮಾಡಬೇಕಾಗಿರುವುದರಿಂದ ಲಗು ಬಗೆಯಿಂದ ಇಳಿದು ನಾಲ್ನಾಡ್ ಅರಮನೆಗೆ ಕಾಲಿಟ್ಟೆವು. ನಾಲ್ನಾಡ್ ಇದನ್ನು ನಾಲ್ಕು ನಾಡು ಎಂದು ಸಹ ಕರೆಯುತ್ತಾರೆ. ಇಲಿಯಾಡ ಹಳ್ಳಿಯ ಸನಿಹದ ಅಪೂರ್ವ ಅರಮನೆ ಕೊಡಗಿನ ರಾಜ ದೊಡ್ಡವೀರರಾಜೇಂದ್ರ ಇದನ್ನು 1782 ರಲ್ಲಿ ನಿರ್ಮಿಸಲು  ಪ್ರಾರಂಭಿಸಿದ. ಈ ಅರಮನೆಯ ಉದ್ದೇಶ ಆಗಿನ ಕಾಲದಲ್ಲಿ ಇವರ ಮೇಲೆ ನಡೆಯುತ್ತಿದ್ದ ಹೈದರಾಲಿ ಮತ್ತು ಟಿಪ್ಪುವಿನ ದಾಳಿಗಳು. ಇವರಿಂದ ತಪ್ಪಿಸಿಕೊಳ್ಳಲು ದೊಡ್ಡ ರಾಜೇಂದ್ರ ಇದನ್ನು ಬಳಸಿಕೊಳ್ಳುತ್ತಾರೆ. ಗಂಡು ಸಂತಾನವಿಲ್ಲದ ಇವರು ಮೊಮ್ಮಾಜಿಯನ್ನು ಎರಡನೇ  ಮದುವೆಯಾಗುತ್ತಾರೆ. ಅವರ ಎರಡನೇ ಮದುವೆಯು ನಾಲ್ನಾಡ್‌ ಅರಮನೆಯಲ್ಲೇ ನಡೆಯುತ್ತದೆ. ಆಗಿನ ಕಾಲದಲ್ಲಿ ಸುತ್ತಲೂ ಊಹಿಸಲಸದಳವಾದ ಕಗ್ಗಾಡಿನಿಂದ ಕೂಡಿತ್ತು. ಮದುವೆಗಾಗಿ ಇಲ್ಲೊಂದು ಮದುವೆ ಮಂಟಪವನ್ನು ರಚಿಸಿದ್ದರು. ನೋಡಲು ಬಹು ಲಾಯಕ್ಕಾದ ಮಂಟಪ. ದಾರಿ ಗೊತ್ತಿಲ್ಲದವರಿಗೆ ತಲುಪುವುದು ಅಸಾಧ್ಯವಾಗಿತ್ತು. ಅರಮನೆಯ ಹೆಬ್ಬಾಗಿಲು ನಾವು ಹೋದಾಗ ಶಿಥಿಲಾವಸ್ಥೆಯಲ್ಲಿತ್ತು. ಮಾಡಿಗೆ ಶೀಟು ಹೊದಿಸಿದ್ದರು. ಉಳಿದೆಲ್ಲಾ ಕಟ್ಟಡಗಳು ಸುಸ್ಥಿತಿಯಲ್ಲಿದ್ದವು. ಎರಡು ಅಂತಸ್ತಿನ ಬೃಹತ್ ಮನೆಯಾಗ ಈಗಲೂ ನಮ್ಮನ್ನು ಕೈಬೀಸಿ ಕರೆಯುತ್ತದೆ. ಪ್ರಕೃತಿ ಸೌಂದರ್ಯದ ನಡುವೆ ಇರುವ ಈ ಮೂರು ನಾಲ್ಕು ತಾಣಗಳ ಸೌಂದರ್ಯವನ್ನು ಹಾಗೂ ಕೊಡವ ಎಂಬ ವಿಶಿಷ್ಟ ಜನರ ವಿಶಿಷ್ಟ ಭಾಷೆಯು  ಉಳಿದು ಬೆಳೆಯಲಿ. ಇಲ್ಲಿನವರ ವಿದ್ಯೆ ಅದೇ ಭಾಷೆಯಲ್ಲಿ ನಡೆಯಲಿ ಎಂಬುದು ನನ್ನ ಆಶಯ. ಮೂಲ ಸಂಸ್ಕೃತಿಯ ಬೇರುಗಳು ಉಳಿದರೆ ಕರ್ನಾಟಕವೆಂಬ ಮರದ ಸೊಬಗು ಅನನ್ಯವಾಗುವುದರಲ್ಲಿ ಅಚ್ಚರಿಯಿಲ್ಲ.  ಮುಂದಿನ ತಲೆಮಾರು ಪರಂಪರೆಯ ಈ ಕೊಂಡಿಯನ್ನು ಕಾಪಾಡಿಕೊಂಡು ಮುಂದುವರಿಸಲಿ ಎಂಬ ಸದಾಶಯದೊಂದಿಗೆ ತಡಿಯಂಡ ಮೋಳ್ ಮತ್ತು ನಾಲ್ನಾಡ್‌ ಅರಮನೆಗೆ ಬೆವರಿದ ಕೈ ಬೀಸಿದೆ. ಜೀರುಂಡೆ ಗಾಯನ ಕೇಳುತ್ತಾ ಕೊಡಗಿನ ಕತ್ತಲೆಯಲ್ಲಿ ಕರಗಲು, ವಿಶಿಷ್ಟ ಊಟ ಉಣ್ಣಲು ನೀವೆಂದು ಬರುವಿರಿ?

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ