ಕನ್ನಡದ ಪ್ರಮುಖ ಅನುವಾದಕರಲ್ಲಿ ಒಬ್ಬರಾದ ಹಸನ ನಯೀಮ ಸುರಕೋಡ ಅವರು, ಒಮ್ಮೆ ಸ್ವಾರಸ್ಯಕರ ಸಂಗತಿ ಹೇಳಿದರು: ಪಟ್ಟಣದಲ್ಲಿ ಬೆಳೆದ ಅವರಪ್ಪ ಉರ್ದುಭಾಷಿಕನಂತೆ; ಗ್ರಾಮೀಣ ಹಿನ್ನೆಲೆಯಿಂದ ಬಂದ ಅವರ ಅವ್ವ ಕನ್ನಡ ಭಾಷಿಕಳಂತೆ; ಹೀಗಿರುವಾಗ, ಸುರಕೋಡರ ಅವ್ವ-ತನ್ನ ಗಂಡ ಸರಿಯಾದ ವಿಚಾರಣೆ ಮಾಡದೆ ಯಾರೋ ಒಬ್ಬನಿಗೆ ಕೊಟ್ಟು, ಮಗಳ ಬಾಳು ಹಾಳುಮಾಡಿದನೆಂದು-ಮಾತುಬಿಟ್ಟಳು. ಆಗ ಸುರಕೋಡರಿಗೆ ಅವ್ವನ ಮಾತನ್ನು ಅಪ್ಪನಿಗೂ ಅಪ್ಪನ ಮಾತನ್ನು ಅವ್ವನಿಗೂ ಅನುವಾದಿಸಿ ಹೇಳಬೇಕಾಗಿ ಬಂತು. ಇದುವೇ ಅವರಿಗೆ ಅನುವಾದದ ಪ್ರಥಮ ಪಾಠಗಳನ್ನು ಕಲಿಸಿತಂತೆ.

ಈ ಸನ್ನಿವೇಶವನ್ನು ವಿವರಿಸುವಾಗ ಸುರಕೋಡರಿಗೆ ಗಂಟಲು ತುಂಬಿಬಂದಿತ್ತು. ಈ ಎರಡು ಭಾಷೆಗಳ ನಡುವೆ ಅನುವಾದ ಮಾಡುವುದು ಸುಲಭ; ಮನಸ್ಸು ಮುರಿದುಕೊಂಡು ಮಾತುಬಿಟ್ಟ ಜೀವಗಳ ಭಾವನೆಗಳನ್ನು ಅನುವಾದಿಸುವುದು ಕಷ್ಟದ ಕೆಲಸ. ಸಾಹಿತ್ಯಕ ಶೈಕ್ಷಣಿಕವಾದ ಕೆಲಸವೆಂದು ಸಾಮಾನ್ಯವಾಗಿ ಭಾವಿಸಿರುವ ಕೆಲಸದ ಹಿಂದೆ ಏನೆಲ್ಲ ಪ್ರೇರಣೆ ಇದ್ದಾವೊ ಎಂದು ಸೋಜಿಗವಾಗುತ್ತದೆ. ಈ ಪ್ರಸಂಗವು ಅನುವಾದದಲ್ಲಿರುವ ಪರಿಕಲ್ಪನಾತ್ಮಕ ಕಷ್ಟಗಳನ್ನೂ ಸೂಚಿಸುತ್ತಿದೆ. ಚಿಕ್ಕ ಹುಡುಗನೊಬ್ಬ ಭಗ್ನಗೊಂಡ ತಂದೆತಾಯಂದಿರ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡಿದ್ದು ಅನುವಾದದ ವಿಚಿತ್ರ ಸವಾಲುಗಳಲ್ಲಿ ಒಂದಿರಬೇಕು.

ಸುರಕೋಡರಿಗೆ ಈಚೆಗೆ ೬೦ ವರ್ಷ ತುಂಬಿದವು. ಅವರು ಅನುವಾದಿಸಿದ ಅಮೃತಾ ಪ್ರೀತಮರ ಆತ್ಮಕತೆ ‘ರಸೀದಿ ತಿಕೀಟು’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಯೂ ಬಂದಿತು. ಅವರ ಕೃತಿಗಳನ್ನು ಪ್ರಕಟಿಸಿರುವ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ, ಈ ನೆಪದಲ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು-ಹಾವೇರಿಯಲ್ಲಿ. ಅದು ಲೋಹಿಯಾ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಕೂಡ ಆಗಿತ್ತು. ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಇರುವ ಸುರಕೋಡರ ಸಂಗಾತಿಗಳು ಬಂದಿದ್ದರು. ಲೋಹಿಯಾರ ‘ಜಾತಿಪದ್ಧತಿ’ಯನ್ನು ಅನುವಾದಿಸಿದ ಸುರಕೋಡರ ರಾಜಕೀಯ ಹಿನ್ನೆಲೆಯನ್ನೂ ಸೈದ್ಧಾಂತಿಕ ಬದ್ಧತೆಯನ್ನೂ ಜಾತ್ಯತೀತ ಸ್ವರೂಪವನ್ನೂ ಸೂಚಿಸುವಂತಹ ಗೆಳೆಯರ ಬಳಗವದು. ಅವರು ತಮ್ಮ ಮುನ್ನುಡಿಗಳಲ್ಲಿ ನೆನೆಯುವ ಸಂಗಾತಿಗಳ ಪಟ್ಟಿ ನೋಡಿದರೂ ಇದು ಸ್ಪಷ್ಟವಾಗುತ್ತದೆ. ಜಾತಿಧರ್ಮಗಳು ಸೂಕ್ಷ್ಮವಾಗಿ ನಮ್ಮ ದೈನಿಕ ವರ್ತನೆಗಳನ್ನು ನಿಯಂತ್ರಿಸುವ ಸಮಾಜದಲ್ಲಿ ಬದುಕುವಾಗ, ನಮ್ಮ ಒಟನಾಟ ಯಾರ ಜತೆಗಿರುತ್ತದೆ ಎಂಬುದು ಯಾವಾಗಲೂ ಅಗ್ನಿಪರೀಕ್ಷೆಯ ಸಂಗತಿ.

ಸುರಕೋಡರ ಜಾತ್ಯತೀತ ಸಂಗಾತಿಗಳ ಸಹವಾಸ ನನ್ನ ಅನುಭವಕ್ಕೂ ಬಂದಿದೆ. ಒಮ್ಮೆ ಒಬ್ಬ ಜನಪದ ಗಾಯಕನನ್ನು ಹುಡುಕಿಕೊಂಡು ರಾಮದುರ್ಗಕ್ಕೆ ಹೋಗಿದ್ದೆ. ಅವನು ಮನೆಯಲ್ಲಿರಲಿಲ್ಲ. ಸಿರಸಂಗಿಗೆ ಹೋಗಿದ್ದೆ. ಏನೂ ತೋಚದೆ ಚಾದಂಗಡಿಯಲ್ಲಿ ಕುಳಿತು, ಸುರಕೋಡರಿಗೆ ಫೋನು ಮಾಡಿದೆ. ಕೂಡಲೇ ಕಿಂದರಿಜೋಗಿಯಂತೆ ತಮ್ಮ ಶಿಷ್ಯರ ಮತ್ತು ಗೆಳೆಯರ  ದಂಡಿನ ಜತೆ ಪ್ರತ್ಯಕ್ಷವಾದರು. ಅವರ ಶಿಷ್ಯರು ಸಮಸ್ತ ಧರ್ಮಜಾತಿಗಳಿಗೆ ಸೇರಿದವರು. ಮಾಜಿ ಶಾಸಕರಿಂದ ಹಿಡಿದು, ಮುನಿಸಿಪಾಲಿಟಿ ಸದಸ್ಯರು, ಶಿಕ್ಷಕರು, ವ್ಯಾಪಾರಿಗಳ ತನಕ ಎಲ್ಲ ಕ್ಷೇತ್ರದಲ್ಲಿರುವವರು. ಎಲ್ಲರೂ ಸೇರಿ, ಊಟ ಮಾಡಿ, ಮಾತುಕತೆ ಆಡಿದೆವು. ಚರ್ಚೆಯಲ್ಲಿ ಸಾಹಿರ್ ಅವರ ಕಾವ್ಯ, ಮಹಮದ್ ರಫಿಯ ಹಾಡು, ಲೋಹಿಯಾರ ಹೋರಾಟ, ಲಂಕೇಶರ ಬರವಣಿಗೆ, ಬಿ.ಸಿ.ದೇಸಾಯರ ಘನತೆವೆತ್ತ ವ್ಯಕ್ತಿತ್ವ, ಪ್ರೇಮಚಂದರ ಕತೆ, ಗೋಪಾಲಗೌಡರ ದೊಡ್ಡತನ, ಮುಸ್ಲಿಂ ಪುರೋಹಿತಶಾಹಿ, ಹಿಂದೂ ಕೋಮುವಾದ, ಸರ್ಕಾರದ ಕಾರ್ಯವೈಖರಿ -ಎಲ್ಲವೂ ಬಂದು ಹೋದವು. ಚರ್ಚೆ ಮುಗಿಯುವಾಗ ಬೆಳಗಿನ ಜಾವ. ಬಹಳ ಸಂಕೋಚ ಸ್ವಭಾವದ, ಅಂತರ್ಮುಖಿಯಾದ, ಮೆದುಮಾತಿನ, ಸುಲಭಕ್ಕೆ ಬಿಚ್ಚಿಕೊಳ್ಳದ ಸುರಕೋಡರು, ತಮ್ಮ ಆಪ್ತರಿದ್ದಾಗ ಮತ್ತು ಕೊಂಚ ಗುಂಡು ಬಿದ್ದಾಗ, ಮಹಾ ವಾಚಾಳಿ. ಕೆಲವೊಮ್ಮೆ ಮಾತು ಅತಿಯ ಅಂಚನ್ನೂ ಮುಟ್ಟಿ ಬರುವುದುಂಟು. ಹಗಲಲ್ಲಿ ಸಾರ್ವಜನಿಕವಾಗಿ ಆಡಲಾಗದ್ದನ್ನೆಲ್ಲ ನಸುಗತ್ತಲಿನಲ್ಲಿ ಸುರಕೋಡರು ತೆರೆದು ಸುರಿಯುತ್ತಾರೆ. ಅವರ ಮಾತು ಮತ್ತು ಹಾಡು ಕೇಳಲೆಂದೇ ಅವರ ಗೆಳೆಯರು ಅವರಿಗೆ ಪಾರ್ಟಿ ಕೊಡುತ್ತಾರೇನೊ ಅನಿಸುತ್ತದೆ.

ಆದರೆ ಸುರಕೋಡರು ಲೌಕಿಕ ಲೆಕ್ಕಾಚಾರದಲ್ಲಿ ಅಷ್ಟು ಚತುರರಲ್ಲ. ರಾಮದುರ್ಗದ ಮಾಜಿಸ್ಲಮ್ಮಿನಂತಹ ಮಡ್ಡಿಗಲ್ಲಿಯಲ್ಲಿರುವ ಅವರ ಝಿಂಕ್‌ಶೀಟಿನ ಮನೆಯನ್ನು ನೋಡಿದರೇ ಇದು ಹೊಳೆಯುತ್ತದೆ. ಕುಟುಂಬದಲ್ಲಿ ಅನೇಕ ಅಕಾಲಿಕ ಸಾವುಗಳನ್ನೂ  ದುರಂತಗಳನ್ನೂ ಕಂಡು ಹಣ್ಣಾಗಿರುವ ಸುರಕೋಡರದು, ನಿಶ್ಚಿತವಾದ ಆದಾಯವಿರದ ನಿತ್ಯ ಹೋರಾಟದ ಬದುಕು. ಶಾಲೆ ಕಲಿಯದ ಅವರ ಮಡದಿ, ತಲೆಯಲ್ಲಿ ಏನೇನೊ ಆದರ್ಶ ಹುಚ್ಚುಗಳನ್ನು ತುಂಬಿಕೊಂಡು ತಿರುಗಾಡುವ ವ್ಯಕ್ತಿಯನ್ನು ಲಗ್ನವಾಗಿ, ಮನೆಯನ್ನು ಕಷ್ಟಪಟ್ಟು ಸಂಭಾಳಿಸಿದ್ದಾರೆ ಎಂದು ಯಾರೂ ಊಹಿಸಬಹುದು. ಎಂ.ಡಿ. ನಂಜುಂಡಪ್ಪನವರ ಶಿಷ್ಯರಾಗಿ, ಕರ್ನಾಟಕ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿಯನ್ನು ಪಡೆದಿರುವ ಸುರಕೋಡರು, ಲೆಕ್ಚರರ್ ಆಗಿದ್ದರೆ ಇಷ್ಟುಹೊತ್ತಿಗೆ ಎಲ್ಲಾದರೂ ಪ್ರಿನ್ಸಿಪಾಲರಾಗಿ ನಿವೃತ್ತರಾಗುತ್ತಿದ್ದರು. ಆದರೆ ಅವರ ಅಂಕಪಟ್ಟಿ ಬಡಕಲಾಗಿತ್ತು. ಬಹುಶಃ ಈ ಯಜಮಾನರು ಸರಿಯಾಗಿ ಕ್ಲಾಸಿಗೇ ಹೋದಂತಿಲ್ಲ. ‘ನೀವು ನೋಡಿದರೆ ಎಕನಾಮಿಕ್ಸ್‌ನವರು. ಈ ಸಾಹಿತ್ಯ ಸಿನಿಮಾಗಳತ್ತ ಹೇಗೆ ಬಂದಿರಿ?’ ಎಂದು ನಾನೊಮ್ಮೆ ಕೇಳಿದೆ. ‘ನಮ್ಮ ಯೂನಿವರ್ಸಿಟಿಗಳಲ್ಲಿ ಕಲಿಸೋದು ಅರ್ಥಶಾಸ್ತ್ರವಲ್ಲ ಸಾರ್, ಅದು ಅನರ್ಥಶಾಸ್ತ್ರ. ಅದು ಬರೇ ಬಂಡವಾಳಶಾಹಿಯ ವಿಜೃಂಭಣೆ ಮಾಡ್ತದ. ನನಗೂ ಅದಕ್ಕೂ ಸರಿಹೋಗಲಿಲ್ಲ’ ಎಂದರು. ಅವರು ಯೂನಿವರ್ಸಿಟಿಯಲ್ಲಿದ್ದಾಗ ತರಗತಿ ತಪ್ಪಿಸಿ ಮಾಡುತ್ತಿದ್ದ ಘನಕಾರ್ಯಗಳೆಂದರೆ, ಸಿನಿಮಾ ನೋಡುವುದು, ಲೈಬ್ರರಿಗೆ ಹೋಗಿ ತಮಗೆ ಪ್ರಿಯವಾದ ಅನಕೃ ಕಾದಂಬರಿ ಹಿಡಿದು ಕೂರುವುದು ಮತ್ತು ಹಾಲಿ ಅರ್ಥಶಾಸ್ತ್ರವನ್ನ ಕಟುವಾಗಿ ಟೀಕಿಸುವ ಪಾರ್ಕಿನ್ಸನ್ನನ ಮುಂತಾದ ಕೃತಿಗಳನ್ನು ಓದುವುದು.

ರಾಮದುರ್ಗದ ಸುರಕೋಡರುಸುರಕೋಡರ ಪ್ರಮುಖ ಆಸಕ್ತಿಗಳು ರಾಜಕಾರಣ, ಸಾಹಿತ್ಯ, ಸಿನಿಮಾ. ಇವು ಭಾರತದ ಬಹುತೇಕ ಸಮಾಜವಾದಿಗಳ ಟಿಪಿಕಲ್ ಆಯ್ಕೆಗಳು ಕೂಡ. ಅನೇಕ ಸಮಾಜವಾದಿಗಳ ಜೀವನದಲ್ಲಿ ರಾಜಕಾರಣವು ಎಲ್ಲಿ ಮುಗಿದು ಸಾಹಿತ್ಯ ಸಂಗೀತ ಸಿನಿಮಾಗಳು ಎಲ್ಲಿ ಆರಂಭವಾಗುತ್ತವೆ ಎಂದು ಹೇಳುವುದೇ ಸಂದಿಗ್ಧ. ಸುರಕೋಡರಿಗೆ ‘ಸಾಹಿತ್ಯ ಮತ್ತು ರಾಜಕಾರಣದಲ್ಲಿ ನಿಮ್ಮ ಆಯ್ಕೆ ಯಾವುದು?’ ಎಂದು ಕೇಳಿದೆ. ತಟ್ಟನೆ ಹೇಳಿದರು: ‘ಲಂಕೇಶ್ ಮತ್ತು ಶಾಂತವೇರಿ ಗೋಪಾಲಗೌಡ’. ಕೆಲವರು ಸೇರಿ ತಮ್ಮನ್ನು ಮುಖ್ಯಮಂತ್ರಿ ಮಾಡಲು ಯತ್ನಿಸುವಾಗ ಗೋಪಾಲಗೌಡರು  ತಿರಸ್ಕರಿಸಿದ್ದು; ಅಧ್ಯಾಪಕನಾಗಿ ವಿಶ್ವವಿದ್ಯಾಲಯದಲ್ಲಿ ಇರಬಹುದಾಗಿದ್ದ ಲಂಕೇಶ್ ಪತ್ರಕರ್ತನಾಗಿ ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು, ಇವರಿಗೆ ದೊಡ್ಡ ಆದರ್ಶದಂತೆ ಕಂಡವಂತೆ.
ಸುರಕೋಡರ ಈ ಎರಡು ವ್ಯಕ್ತಿತ್ವಗಳ ಆಯ್ಕೆಗಳಲ್ಲಿ ಕೆಲವು ವಿಚಿತ್ರ ಸಾಮ್ಯಗಳಿವೆ. ಇಬ್ಬರೂ ಆದರ್ಶವಾದಿಗಳು; ನಾಡನ್ನು ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಂಡವರು; ಹೊಂದಾಣಿಕೆಯಾಗದ ವೈರುಧ್ಯಗಳಿದ್ದವರು; ತಪ್ಪುಮಾಡುತ್ತಿದ್ದವರು; ಪರಿತಾಪ ಪಡುತ್ತಿದ್ದವರು. ಸುರಕೋಡರ ಮೇಲೆ ಪ್ರಭಾವ ಬೀರಿರುವ ಇತರರೆಂದರೆ, ಕಿಶನ್ ಪಟ್ನಾಯಕ್, ಅಸಘರಲಿ ಇಂಜಿನಿಯರ್, ಮಧುಲಿಮಯೆ, ಕರ್ಪೂರಿ ಠಾಕೂರ್. ಸುರಕೋಡರ ಪ್ರಕಾರ ಕರ್ಪೂರಿ ಠಾಕೂರರು ಬಿಹಾರದ ಗೋಪಾಲಗೌಡರು.

ಸುರಕೋಡರ ಅಭಿರುಚಿಗಳಂತೆ ಅವರ ಬದುಕಿನ ವಿದ್ಯಮಾನಗಳೂ ವೈವಿಧ್ಯಮಯ. ಬಹುಶಃ ಇದು ಅವರ ಅಜ್ಜನಿಂದ ಬಂದ ಗುಣವಿರಬೇಕು. ಅವರ ಅಜ್ಜ ಬಡಗಿ, ಗೌಂಡಿ, ನೇಕಾರ ಮತ್ತು ರೈತ ಎಲ್ಲವೂ ಆಗಿದ್ದನಂತೆ. ಮರಾಠಿ ಉರ್ದು ಕನ್ನಡ ಫಾರಸಿ ಬಲ್ಲವನಾಗಿದ್ದ ಆತ, ಎಂ.ಎನ್. ರಾಯ್ ಅವರ ಅನುಯಾಯಿಯಂತೆ. ತೀರಿಕೊಂಡಾಗ ಆತನ ದೊಡ್ಡ ಸಂದೂಕದಲ್ಲಿ ಬರಿಯ ಪುಸ್ತಕಗಳೇ ಇದ್ದವಂತೆ. ಸುರಕೋಡರು ಬಹಳ ಇಷ್ಟಪಡುವ ಕಾರಂತರ ‘ಹುಚ್ಚುಮನಸ್ಸಿನ ಹತ್ತುಮುಖಗಳಂ’ತೆಯೇ ಅವರ ಮತ್ತು ಅವರಜ್ಜನ ಅಭಿರುಚಿಗಳಿಗೆ ಹರಿದು ಕ್ಷೇತ್ರಗಳಲ್ಲಿ ಹಂಚಿಹೋಗಿವೆ. ಸಮಾಜವಾದಿ ಆದರ್ಶಗಳಿಂದ ತುಡಿಯುತ್ತಿದ್ದ ಸುರಕೋಡರು, ರಘುರಾಮಶೆಟ್ಟರ ಸಂಪಾದಕತ್ವದ ‘ಮುಂಗಾರು’ ಪತ್ರಿಕೆಗೆ ಸೇರಿದರು. ತಾತ್ವಿಕ ಭಿನ್ನಮತದಿಂದ ಗೆಳೆಯರೆಲ್ಲ ಪತ್ರಿಕೆಗೆ ಸಾಮೂಹಿಕ ರಾಜಿನಾಮೆ ನೀಡಿ ಹೊರಬಂದಾಗ, ಸುರಕೋಡರು ಮಂಗಳೂರಿನಿಂದ ರಾಮದುರ್ಗಕ್ಕೆ ಬಂದರು; ಬಂದವರೇ ಹಾಲು, ಪೇಪರ್, ಎಲ್‌ಐಸಿಗಳ ಏಜೆನ್ಸಿ ತೆಗೆದುಕೊಂಡು ಹೊಸ ಜೀವನ ಶುರುಮಾಡಿದರು. ಕೆಲವು ದಿನ ಜಮಖಾನೆಗಳ ವ್ಯಾಪಾರ; ಮತ್ತೆ ಕೆಲಕಾಲ ನೇಂಪ್ಲೇಟ್ ಮಾಡಿಸುವ ಕೆಲಸ. ಜತೆಗೆ, ಊರ ಹೊರಗೆ ಪಾಳುಬಿದ್ದ ಸುಂಕದಕಟ್ಟೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಟೂಶನ್ ಹೇಳುವುದು. ‘ಅಂಗ್ರೇಜಿ ಹಟಾವೊ’ ಚಳುವಳಿ ಮಾಡಿದ ಲೋಹಿಯಾರ ಅನುಯಾಯಿಯೊಬ್ಬರು, ಇಂಗ್ಲೀಷಿನಲ್ಲಿ ಫೇಲಾಗುವ ಗ್ರಾಮೀಣ ಮಕ್ಕಳಿಗೆ ಪಾಠಹೇಳಬೇಕಾಗಿದ್ದು ಚಾರಿತ್ರಿಕ ವ್ಯಂಗ್ಯವೊ, ಇಂಗ್ಲೀಶನ್ನು ಎದುರಿಸಲು ತುಂಬಿದ ನೈತಿಕ ಧೈರ್ಯವೊ ಹೇಳುವುದು ಕಷ್ಟ. ಅದರ ಸುದ್ದಿ ಬಂದಾಗ ಮಾತ್ರ ಅವರು ‘ಸಾರ್, ನನ್ನ ವಿದ್ಯಾರ್ಥಿಗಳ್ಯಾರೂ ಫೇಲ್ ಆಗಲಿಲ್ಲ’ ಎಂದು ಎದೆತಟ್ಟಿ ಹೇಳುವುದುಂಟು. ಒಟ್ಟಿನಲ್ಲಿ ಸುರಕೋಡರದು ಭುಜಂಗಯ್ಯನ ದಶಾವತಾರಗಳು.

ವಿಶೇಷ ಸಂಗತಿಯೆಂದರೆ, ರಾಮದುರ್ಗದಂತಹ ತಾಲೂಕು ಪಟ್ಟಣದಲ್ಲಿದ್ದ ಸುರಕೋಡರು ಭಾರತದಾದ್ಯಂತ ಅನೇಕ ಲೇಖಕರ ಜತೆ ಸಂಬಂಧ ಇರಿಸಿಕೊಂಡಿದ್ದು. ತಮಗೆ ಪ್ರಿಯರಾದ ಗೋಪಾಲಗೌಡರನ್ನಾಗಲಿ, ಲೋಹಿಯಾರನ್ನಾಗಲಿ ಜೀವನದಲ್ಲಿ ಕಂಡಿರದ ಸುರಕೋಡರು, ಮಧುಲಿಮಯೆ ಹಾಗೂ ಕಿಶನ್ ಪಟ್ನಾಯಕ್ ಜತೆ ಪತ್ರವ್ಯವಹಾರ ಇರಿಸಿಕೊಂಡಿದ್ದರು. ಕರ್ನಾಟಕದ ಸಮಾಜವಾದಿಗಳಲ್ಲಿ ಜೆ.ಎಚ್.ಪಟೇಲ್ ಮುಂತಾದ ಉಳ್ಳವರೂ ಇದ್ದಾರೆ. ಅಬ್ಬಿಗೇರಿಯಂತಹ ಇಲ್ಲದವರೂ ಇದ್ದರು. ತಾವಿದ್ದ ಊರಿಗೆ ಲೋಹಿಯಾ ಅವರನ್ನೇ ಕರೆಸಿಕೊಂಡಿದ್ದ ಅಬ್ಬಿಗೇರಿ, ಹರಿದು ಹೋದ ಹವಾಲಿ ಚಪ್ಪಲಿ ಹಾಕಿಕೊಂಡು ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಾಗ, ಕೆಲವರಿಗೆ ಶಾಕ್ ಆಗಿತ್ತು. ನೀಲಗಂಗಯ್ಯ ಪೂಜಾರರನ್ನು ನೋಡಲು ಧಾರವಾಡದ ಅವರ ಮನೆಗೆ ಹೋದಾಗ, ಇವರು ಹಿಂದೆ ಶಾಸಕರಾಗಿದ್ದರೇ ಎಂದು ಸೋಜಿಗ ಪಡುವಷ್ಟು ಸಾಧಾರಣ ಸ್ಥಿತಿಯಲ್ಲಿದ್ದರು. ನಂಬಿದ ಆದರ್ಶಕ್ಕಾಗಿ ಜೀವನದಲ್ಲಿ ರಿಸ್ಕ್ ತೆಗೆದುಕೊಂಡು ಬದುಕಿದ ಸಮಾಜವಾದಿಗಳಲ್ಲಿ ಸುರಕೋಡರೂ ಒಬ್ಬರೆನ್ನಬಹುದು. ಇವರು ಬೇಕೆಂದೇ ಇಂಥಾ ಜೀವನ ಆರಿಸಿಕೊಂಡರೊ ಅಥವಾ ಜೀವನದ ಸಂದರ್ಭಗಳೇ ಇವರನ್ನು ಅಲ್ಲಿಗೆ ಕರೆದೊಯ್ದವೊ ತಿಳಿಯುತ್ತಿಲ್ಲ.

ಕರ್ನಾಟಕದಲ್ಲಿ ಬಹುತೇಕ ಲೇಖಕರು, ಚಿಂತಕರು, ವಾಗ್ಮಿಗಳು ತಂಪಾಡಿಗೆ ತಾವಿದ್ದುಕೊಂಡು ಕೆಲಸ ಮಾಡುವವರು. ಆದರೆ ಮತ್ತೆ ಕೆಲವರು ತಮ್ಮ ಜತೆಗೆ ತಮ್ಮ ಪರಿಸರವನ್ನೂ ಬದಲಿಸಲು ಯತ್ನಿಸುವವರು; ಗೆಳೆಯರಲ್ಲಿ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಅಭಿರುಚಿ, ಸಾಮಾಜಿಕ ಕಾಳಜಿ, ರಾಜಕೀಯ ಪ್ರಜ್ಞೆ ಬೆಳೆಸುವ, ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವವರು. ಇವರು ಇದಕ್ಕಾಗಿ ತಮ್ಮ ಸಮಯ ಮತ್ತು ಶಕ್ತಿ ವ್ಯಯಿಸಬಲ್ಲರು. ಸುರಕೋಡರು ತಮ್ಮ ಸಮಾಜವಾದಿ ಬದ್ಧತೆಯಿಂದಲೂ ಅಪಾರ ಓದಿನಿಂದಲೂ ರಾಜಕೀಯ ಪ್ರಜ್ಞೆಯಿಂದಲೂ ಸದಭಿರುಚಿಯಿಂದಲೂ ರಾಮದುರ್ಗದ ಪರಿಸರವನ್ನು ಸೃಜನಶೀಲವಾಗಿ ವೈಚಾರಿಕವಾಗಿ ಇಡಲು ಯತ್ನಿಸಿದವರು. ಅವರ ಪಾಠವೆಂದರೆ, ಒಂದು ಸಾಂಸ್ಕೃತಿಕ ತರಬೇತಿ ಎಂದು ಈಗ ಶಿಕ್ಷಕರಾಗಿರುವ ಅನೇಕರು ಅಪಾರ ಗೌರವದಿಂದ ಹೇಳಿದ್ದನ್ನು ನಾನು ಕೇಳಿದ್ದೇನೆ.

ಆದರೆ ತಮ್ಮ ಹುಚ್ಚು ಮತ್ತು ಅಭಿರುಚಿಗಳನ್ನು ಇತರರಿಗೂ ಹತ್ತಿಸಲು ಹೋಗಿ ಸುರಕೋಡರು ಪೆಚ್ಚಾಗಿರುವ ಕತೆಗಳಿವೆ. ಅವರಿಗೆ ಒಮ್ಮೆ ಪ್ರೇಮಚಂದ್ ಆರಂಭಿಸಿದ ‘ಹಂಸ್’ ಪತ್ರಿಕೆಯನ್ನು ತರಿಸಿ ರಾಮದುರ್ಗದ ಜನಕ್ಕೆ ಓದಿಸಬೇಕು ಅನಿಸಿತು. ತರಿಸುತ್ತಿದ್ದ ಐದು ಪ್ರತಿಯಲ್ಲಿ ತಾವೊಂದು ಇಟ್ಟುಕೊಂಡು ಉಳಿದ ನಾಲ್ಕನ್ನು ಮಾರಲು ಬ್ಯಾಗಿನಲ್ಲಿಟ್ಟುಕೊಂಡು ಮನೆಮನೆಗೆ ತಿರುಗುತ್ತಿದರು. ದಿನಪತ್ರಿಕೆಯನ್ನೂ ಓದದ ಕೆಲವು ಅಧ್ಯಾಪಕರು ಇರುವಾಗ, ಹಿಂದಿ ಪತ್ರಿಕೆಯನ್ನು ಯಾರು ಕೇಳಬೇಕು? ಸುರಕೋಡರು ತಮ್ಮ ಅಭಿರುಚಿಯನ್ನೇ ಊರಿನದಾಗಬೇಕು ಎಂದು ತಿಳಿದಿದ್ದರಲ್ಲೂ ತಪ್ಪಿರಬಹುದು.

ಸುರಕೋಡರು, ಪ್ರಗತಿಶೀಲ ಉರ್ದು ಮತ್ತು ಹಿಂದಿ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿರುವರು. ಇದಕ್ಕಾಗಿ ಅವರು ಉರ್ದು ಲಿಪಿಯನ್ನು ಓದಲು ಕಲಿತರು. ಒಮ್ಮೆ ಅವರು ರಾಜೇಂದ್ರಸಿಂಗ್ ಯಾದವ್ ದೊಡ್ಡ ಲೇಖಕ ಎಂದರು. ಸಾಹಿತ್ಯದ ಅಧ್ಯಾಪಕನಾಗಿ ನಾನು ಆ ಹೆಸರನ್ನೇ ಕೇಳಿರಲಿಲ್ಲ. ಲಂಕೇಶ್, ಕುವೆಂಪು, ಶಿವರಾಮ ಕಾರಂತ, ಲೋಹಿಯಾ, ಅಮೃತಾ ಪ್ರೀತಂ, ಸಾದತ್ ಹಸನ್ ಮಂಟೂ, ಸಾಹಿರ್ ಲುಧಿಯಾನ್ವಿ, ಫೈಜ್ ಅಹಮದ್ ಫೈಜ್ ಕುರಿತು ಸುರಕೋಡರಿಗೆ ವಿಶೇಷ ಅಭ್ಯಾಸವಿದೆ. ಅವರ ಪ್ರಿಯ ಪ್ರಕಾರಗಳೆಂದರೆ ಆತ್ಮಚರಿತ್ರೆ-ಜೀವನಚರಿತ್ರೆ. ಒಮ್ಮೆ ಅವರು ಅಮೃತರಾಯ್ ತಮ್ಮ ತಂದೆ ಪ್ರೇಮಚಂದರ ಮೇಲೆ ಬರೆದ ‘ಕಲಂ ಕ ಸಿಪಾಹಿ’ ಕೃತಿಯ ಬಗ್ಗೆ ಮಾತಾಡಿದರು. ಅವರ ಪ್ರಕಾರ ಅದು ಶ್ರೇಷ್ಠ ಜೀವನ ಚರಿತ್ರೆಗಳಲ್ಲಿ ಒಂದು. ವೈಭವೀಕರಣವಿಲ್ಲದೆ ನಿಷ್ಠುರ ವಿಮರ್ಶೆಯ ಸಮೇತ ಬರೆಯಲಾಗಿರುವ ಈ ಕೃತಿಯಲ್ಲಿ ಕೇವಲ ಪ್ರೇಮಚಂದರ ಬಗ್ಗೆ ಮಾತ್ರವಲ್ಲ, ಅವರ ಕಾಲದ ಇಡೀ ಪ್ರಕ್ಷುಬ್ಧ ಇತಿಹಾಸವೇ ಇದೆಯಂತೆ.
ಮೂಲತಃ ಅನುವಾದಕರಾದ ಸುರಕೋಡರು ಸ್ವತಂತ್ರವಾಗಿ ಬರೆದಿದ್ದು ಕಡಿಮೆ. ಬರೆದಿರುವ ಎರಡು ಸ್ವತಂತ್ರ ಲೇಖನಗಳಲ್ಲಿ ಒಂದು- ತಮಗೆ ಆಪ್ತರಾಗಿದ್ದ ಕತೆಗಾರ ಬಿ.ಸಿ.ದೇಸಾಯರ ಬಗ್ಗೆಯಿದೆ. ಇನ್ನೊಂದು- ರಾಮದುರ್ಗದ ಒಂದು ಪ್ರೇಮದುರಂತ ಕುರಿತಿದೆ. ಎರಡನೆಯ ಲೇಖನ ಅಂತರಧರ್ಮೀಯ ಪ್ರೇಮಕ್ಕೆ ಸಂಬಂಧಿಸಿದ ಕತೆ. ಪೋಸ್ಟ್‌ಮ್ಯಾನ್ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಬೇರೆ ಜಾತಿಗೆ ಸೇರಿದ ಹುಡುಗಿಯನ್ನು ಪ್ರೇಮಿಸಿದ. ಇವರ ಪ್ರೇಮವನ್ನು ಒಪ್ಪದ ಹುಡುಗಿಯ ಕಡೆಯವರು ರೊಚ್ಚಿನಿಂದ ಹುಡುಗನ ಎರಡು ಕಣ್ಣುಗಳನ್ನು ಚಾಕುವಿನಿಂದ ಚುಚ್ಚಿದರು. ಆದರೆ ಕುರುಡನಾದ ತನ್ನ ಪ್ರಿಯತಮನ ಜತೆ ಬಾಳಲು ಆ ಧೀರಯುವತಿ ನಿರ್ಧರಿಸಿದಳು. ಜಾತಿಧರ್ಮವನ್ನು ಮೀರಿದ ಪ್ರೇಮವು ಸುರಕೋಡರಿಗೆ ಯಾವಾಗಲೂ ದೊಡ್ಡ ಜೀವನತತ್ವವಾಗಿ ಕಂಡಿದೆ. ಅವರು ಅಮೃತಾಪ್ರೀತಂ ಹಾಗೂ ಕವಿ ಸಾಹಿರ್ ಲುಧಿಯಾನ್ವಿಯರ ಪ್ರೇಮಗಾಥೆಯಾಗಿರುವ ‘ರಸೀದಿ ತಿಕೇಟು’ ಅನುವಾದಿಸಲು ಇದೂ ಒಂದು ಕಾರಣವಿರಬೇಕು.

ಸಾಹಿರ್ ಅವರ ಪ್ರಿಯ ಕವಿ. ಅವರು ಸಾಹಿರ್ ಕುರಿತು ಬರೆದ ಕೃತಿಯ ಹೆಸರು ಮಾರ್ಮಿಕವಾಗಿದೆ: ‘ಪ್ರೇಮಲೋಕದ ಮಾಯಾವಿ’. ಸಾಹಿರರ ಒಂದು ಹಾಡನ್ನು ಕೇಳಿ, ಅವರ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ಸುರಕೋಡರು, ಸಂಶೋಧನೆ ಮಾಡುತ್ತ ಅವರ ಜೀವನ ಕಥೆಯನ್ನೇ ಬರೆದರು. ಪ್ರೇಮ ಮತ್ತು ಅದರ ಭಗ್ನತೆಯ ದುರಂತವು ಅವರ ಎಲ್ಲ ಬರೆಹಗಳಲ್ಲಿ ಮತ್ತು ಅನುವಾದಗಳಲ್ಲಿ ನಾನಾ ತೆರನಾಗಿ ಹಬ್ಬಿಕೊಂಡಿದೆ. ಇದಕ್ಕೆ ಪ್ರೇರಣೆ ಪ್ರೇಮದಿಂದ ಬಾಳಲಾಗದ ತಮ್ಮ ತಾಯ್ತಂದೆಯರ ಬಾಳುವೆಯೋ ಏನೋ? ಅವರ ನೆಚ್ಚಿನ ಹೀರೋಗಳಾದ ಪ್ರೇಮಚಂದ್, ಸಾದತ್ ಹಸನ್ ಮಂಟೂ, ರಾಜೇಂದ್ರಸಿಂಗ್, ಅಮೃತಾಪ್ರೀತಂ, ಲಂಕೇಶ್, ಲೋಹಿಯಾ, ಕಿಶನ್ ಪಟ್ನಾಯಕ್, ಬಿ.ಸಿ.ದೇಸಾಯಿ, ಗೋಪಾಲಗೌಡ ಎಲ್ಲರೂ ಬದುಕನ್ನು ಗಾಢವಾಗಿ ಪ್ರೀತಿಸಿದವರು; ಅದನೊಂದು ದೀವಟಿಗೆ ಮಾಡಿ ಉರಿದುಹೋದವರು; ತಮ್ಮ ಪರಿಸರದ ಕೇಡಿನ ಬಗ್ಗೆ ಆಕ್ರೋಶಗೊಂಡವರು. ದುರಂತಪ್ರಜ್ಞೆಯವರು. ಜಾತಿ ಧರ್ಮಗಳಿಗೆ ಅತೀತರಾದವರು. ಕಂಪನಶೀಲ ಮನಸ್ಸು ಹೊಂದಿದ್ದವರು. ಪ್ರೇಮವು ಅವರಿಗೆಲ್ಲ ಬದುಕನ್ನು ನೋಡುವ ಒಂದು ತತ್ವವಾಗಿತ್ತು. ಸುರಕೋಡರು ರಾಜೇಂದ್ರಸಿಂಗ್ ಬೇಡಿ, ಗುರುಭಕ್ಷ್ ಸಿಂಗ್, ಸಾಹಿರ್ ಲುಧಿಯಾನ್ವಿ, ಅಮೃತಾ ಪ್ರೀತಂ ಮುಂತಾದವರು, ಅಮೃತಸರದ ಬಳಿ ಕಮ್ಯೂನ್ ಮಾದರಿಯಲ್ಲಿ ಕಟ್ಟಿಕೊಂಡಿದ್ದ ಪ್ರೀತನಗರದ ಬಗ್ಗೆ ಬಹಳ ಭಾವುಕವಾಗಿ ಈಗಲೂ ಮಾತಾಡುವುದುಂಟು. ಇಂತಹ ಪ್ರೀತನಗರಗಳು ಪಂಜಾಬಿನಲ್ಲಿ ಮಾತ್ರವಲ್ಲ, ಎಲ್ಲ ಊರುಗಳಲ್ಲೂ ಇವೆ ಎಂಬುದು ಅವರ ನಂಬಿಕೆ.

ಅನುವಾದಕ್ಕೆ ಕೃತಿಯೊಂದನ್ನು ಆಯ್ಕೆ ಮಾಡಿಕೊಳ್ಳುವಾಗ, ಕೆಲಸ ಮಾಡುವುದು ವೈಯಕ್ತಿಕ ಅಭಿರುಚಿಗಳೊ, ಒಂದು ನಾಡಿನ ಸಾಂಸ್ಕೃತಿಕ  ಅಗತ್ಯಗಳೋ? ಬಹುಶಃ ಅತ್ಯುತ್ತಮ ಮನಸ್ಸಿನ ಅನುವಾದಕರಲ್ಲಿ ಇವೆರಡೂ ಬೇರೆಯಾಗುವುದಿಲ್ಲ. ಸುರಕೋಡರು ಅನುವಾದಕ್ಕೆ ಆರಿಸಿಕೊಂಡ ಕೃತಿಗಳು ಲೋಹಿಯಾ, ಮಧುಲಿಮಯೆ, ಅಸಘರ ಅಲಿ ಇಂಜಿನಿಯರ್, ಸಾದತ್ ಹಸನ್ ಮಂಟೂ, ಕಿಶನ್ ಪಟ್ನಾಯಕ್, ಅಮೃತಾ ಪ್ರೀತಮರವು. ಇವು ಸುರಕೋಡರ ಜಾತ್ಯತೀತ ಮನಸ್ಸಿನ, ಧಾರ್ಮಿಕ ಸಮುದಾಯಗಳ ಸಂಬಂಧ ಬೆಸೆಯುವ ಕಾಳಜಿಯ ದ್ಯೋತಕಗಳಂತಿವೆ.

ಸುರಕೋಡರು, ಕರ್ನಾಟಕದ ಅನೇಕ ಪ್ರಗತಿಪರ ಸಂಘಟನೆಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡರು. ಅವರದು ನೆಲದೊಳಗಡೆ ಎರೆಯ ಹುಳುವಿನಂತೆ ಕೆಲಸ ಮಾಡುವ ಸ್ವಭಾವ. ಅವರು ಸಾಂಸ್ಥಿಕ ಬೆಂಬಲವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ, ಅಭಿರುಚಿ ನಿರ್ಮಾಣದ ಉಪಯುಕ್ತ ಮಾಡಿದವರು. ಆದರೂ ಅವರಲ್ಲಿ ಉತ್ತರ ಕರ್ನಾಟಕದ ಜನಪದ ಪರಂಪರೆಯ ಪ್ರೇರಣೆ ಕಡಿಮೆ. ಅಭದ್ರತೆಯೊಳಗೇ ಸಾಹಸ ಮಾಡುವ ದುಡುಕತನವಾಗಲಿ, ಸಾರ್ವಜನಿಕ ಪ್ರತಿರೋಧಗಳಲ್ಲಿ ಭಾಗವಹಿಸುವಿಕೆಯಾಗಲಿ ಅವರ ಬದುಕಿನಲ್ಲಿ ಹೆಚ್ಚಿಲ್ಲ. ಆದರೆ ಹಾಗೆ ದುಡುಕುವವರಿಗೆ ಬೇಕಾದ ಮನಸ್ಸನ್ನು ಕಟ್ಟಲು ಚಿಂತನೆಯನ್ನು ಹತ್ತುಕಡೆಯಿಂದ ತಂದು ಒದಗಿಸುವುದಕ್ಕೂ, ನೈತಿಕ ಬೆಂಬಲ ನೀಡುವುದಕ್ಕೂ ಅವರು ಸಿದ್ಧರು.

ಅಂತರ್ಮುಖಿಗಳಾದ ಸುರಕೋಡರದು ಕೋಮಲವಾದ ಮನಸ್ಸು. ಲೋಹಿಯಾರ ಬದ್ಧತೆ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಅವರು ಸೈದ್ಧಾಂತಿಕ ಭಿನ್ನಮತ ಬಂದಾಗ ನಿಷ್ಠುರ ಮಾತಾಡುವುದುಂಟು. ಆದರೆ ಬಾಳಿನಲ್ಲಿ ಅಬ್ಬರವಿಲ್ಲದ, ಮಕ್ಕಳಂತೆ ಮುಕ್ತವಾಗಿ ನಗುವ, ಸಂತೃಪ್ತಿಯನ್ನು ತುಳುಕಿಸುವ ವ್ಯಕಿತ್ವ ಅವರದು. ಕಷ್ಟಗಳಲ್ಲಿ ತೊಳಲಾಡುತ್ತಿದ್ದರೂ ತನ್ನ ನೋವನ್ನು ಯಾರಲ್ಲೂ ಹೇಳಿಕೊಳ್ಳದೆ ತಾವೇ ನುಂಗುವ ಗುಣವಿದೆ ಅವರಲ್ಲಿ. ಒಮ್ಮೊಮ್ಮೆ ಅವರ ಹಿಂಜರಿಕೆಯ ಸ್ವಭಾವವು ಕೀಳರಿಮೆಯದೊ ಸ್ವಾಭಿಮಾನದ್ದೊ ಸಜ್ಜನಿಕೆಯದೊ-ನನಗೆ ಗೊಂದಲ.

ಸುರಕೋಡರಿಗೆ ರಾಮದುರ್ಗವೇ ಜಗತ್ತು. ಅದನ್ನು ಬಿಟ್ಟು ಅವರು ಎಲ್ಲೂ ಹೆಚ್ಚು ಹೋಗುವುದಿಲ್ಲ. ಸೇದಲೊಂದು ಕಟ್ಟು ಗಣೇಶ ಬೀಡಿ, ಗಂಟೆಗೊಂದು ಕಪ್ಪು ಚಹಾ, ಹರಟಲು ಸುತ್ತ ಗೆಳೆಯರು, ತಮಗೆ ಬೇಕಾದ ಪುಸ್ತಕ-ಇಷ್ಟಿದ್ದರೆ ಅವರಿಗೆ ತಮ್ಮೂರು ಸ್ವರ್ಗ. ಸವುಡು ಸಿಕ್ಕಾಗ ಸುರಕೋಡರ ಬಾಯಲ್ಲಿ, ಬಿ.ಸಿ. ದೇಸಾಯರ ಮೇಲಿನ ಕತೆಗಳನ್ನು ಕೇಳಬೇಕು; ದೇಶವಿಭಜನೆಯ ಹೊತ್ತಲ್ಲಿ ಬಂದ ಮಾನವೀಯ ದುರಂತ ಹಾಗೂ ಮನುಷ್ಯ ಪ್ರೀತಿಯನ್ನು ಪ್ರಕಟಿಸುವ ಸಾಹಿತ್ಯದ ಚರ್ಚೆ ಕೇಳಬೇಕು; ಆರ‍್ಕೆ ನಾರಾಯಣ್ ಕಾದಂಬರಿ ಆಧರಿಸಿದ ತೆಗೆದ ‘ಗೈಡ್’ ಸಿನಿಮಾ ಬಗೆಗಿನ ವಿಶ್ಲೇಷಣೆ ಕೇಳಬೇಕು. ಅವು ಸಂವೇದನಶೀಲ ವಿದ್ವಾಂಸನೊಬ್ಬ ಮಾಡಬಹುದಾದ ಪಾಂಡಿತ್ಯಪೂರ್ಣ ಉಪನ್ಯಾಸಗಳು.

ಒಮ್ಮೆ ಸುಮ್ಮನೆ ಕೇಳಿದೆ: ‘ನಿಮಗೆ ಬೇಜಾರಾಗುವ ಸಂಗತಿ ಯಾವುದು?’. ಅವರೆಂದರು: ‘ನನಗೆ ಬೇಕಾದ ಪುಸ್ತಕ ಕೊಳ್ಳೋಕೆ ಆಗದೆ ಇರೋದು’. ಪುಸ್ತಕ ರಾಶಿಬಿದ್ದಿರುವ ವಿಶ್ವವಿದ್ಯಾಲಯಗಳಲ್ಲಿ ಅವನ್ನು ಓದುವವರಿಲ್ಲ. ಓದುವ ದಾಹದ ಇವರಿಗೆ ಕೊಳ್ಳುವುದಕ್ಕೆ ಶಕ್ತಿಯಿಲ್ಲ. ಎಂತಹ ವೈರುಧ್ಯ? ನಾಡಿನ ಮೇಲಣ ಪ್ರೀತಿಯಿಂದ, ಸಾಂಸ್ಕೃತಿಕವಾದ ಕಾಳಜಿಯಿಂದ ಮತ್ತು ಸಮಾಜವಾದಿ ಬದ್ಧತೆಯಿಂದ ಇಂತಹ ಅನೇಕರು ತಮ್ಮಪಾಡಿಗೆ ತಾವು ಕೆಲಸ ಮಾಡುತ್ತಿದ್ದಾರೆ-ಅದೂ ತಮ್ಮ ಜೀವನವನ್ನು ಅಭದ್ರತೆ ಮತ್ತು ಅನಿಶ್ಚಿತತೆಗಳಿಗೆ ಒಡ್ಡಿಕೊಂಡು.

ಇನ್ನೊಮ್ಮೆ ಕೇಳಿದೆ: ‘ನೀವು ಜನಪರ ಸಂಘಟನೆಗಳಲ್ಲಿ ಕೆಲಸ ಮಾಡಿದ್ದೇನೆ ಅಂತೀರಿ. ಆದರೆ ನಾನು ಭಾಗವಹಿಸಿದ ಯಾವ ಸಮ್ಮೇಳನಗಳಲ್ಲೂ ನಿಮ್ಮನ್ನು ಕಂಡಂತಿಲ್ಲ’. ಅವರು ಮೆಲುದನಿಯಲ್ಲಿ ನುಡಿದರು: ‘ನನಗೂ ಸಮಾವೇಶಗಳಿಗೆ ಬರಲು ಆಸೆಯಿರುತ್ತಿತ್ತು ಸಾರ್, ಬಟ್ ಮೈ ಪಾಕೆಟ್ ಡಿಡ್ ನಾಟ್ ಪರ್ಮಿಟ್ ಮಿ.’

ನಾನು ಆ ವಿಷಯ ಮತ್ತೆ ಮಾತಾಡಲಿಲ್ಲ.

[ಚಿತ್ರ ಸೌಜನ್ಯ- ಸಂವಾದ ಪತ್ರಿಕೆ]