ನಾನು ಮತ್ತು ಬಾನು, ಕಲಕತ್ತೆಯ ಒಂದು ತುದಿಯಲ್ಲಿರುವ ಬಾಗ್‌ಬಜಾರ್ ಘಾಟಿನಿಂದ ಕಲಕತ್ತೆಯ ಹೃದಯಭಾಗದಲ್ಲಿರುವ ಫೈರಿಘಾಟಿಗೆ ಹೂಗ್ಲಿಹೊಳೆಯಲ್ಲಿ ಜಲಪ್ರಯಾಣ ಮಾಡಿಕೊಂಡು ಬರುತ್ತಿದ್ದೆವು. ನಡುವೆ ನಮ್ಮ ಸ್ಟೀಮರ್ ಹೌರಾಘಾಟಿನಲ್ಲಿ ನಿಲುಗಡೆ ಕೊಡಬೇಕಿತ್ತು. ಜೆಟ್ಟಿಯಲ್ಲಿ ಹಿಂಡುಜನ ನಿಂತು ಕಾಯುತ್ತಿರುವುದು ದೂರದಿಂದಲೇ ಕಾಣುತ್ತಿತ್ತು. ದಡದುದ್ದಕ್ಕೂ ನೂರಾರು ಜನ ಜಳಕ ಮಾಡುವ, ಬಟ್ಟೆ ತೊಳೆಯುವ, ಸರಸ್ವತಿ ಮೂರ್ತಿಗಳನ್ನು ವಿಸರ್ಜಿಸುವ, ಪಿತೃಗಳಿಗೆ ಪಿಂಡಬಿಡುವ ಚಟುವಟಿಕೆಯಲ್ಲಿ ಮುಳುಗಿದ್ದರು. ಸ್ಲಂ ಹುಡುಗರು ಅಯಸ್ಕಾಂತದ ಗುಂಡಿಗೆ ಹುರಿಕಟ್ಟಿ ಗಾಳದಂತೆ ನೀರಿಗೆಸೆದು ಹೊಳೆಯ ತಳದಲ್ಲಿರುವ ನಾಣ್ಯಗಳನ್ನು ಹೆಕ್ಕುತ್ತಿದ್ದರು.

ಇದ್ದಕ್ಕಿದ್ದಂತೆ ನಮ್ಮ ಸ್ಟೀಮರಿನಲ್ಲಿ ಹೋಹೋ ಎಂಬ ಹಾಹಾಕಾರ ಎದ್ದಿತು. ಲಾಠಿಚಾರ್ಜು ಸಂದರ್ಭದಲ್ಲಿ ಆಗುವಂತೆ ನಾನಾ ಕಾರ್ಯಗಳಲ್ಲಿ ತೊಡಗಿದ್ದ ಜನವೆಲ್ಲ ದಡಹತ್ತಿ ದಿಕ್ಕಾಪಾಲಾಗತೊಡಗಿತು. ಮೀನುಗಾರರು ತಮ್ಮ ದೋಣಿಗಳನ್ನು ದಡಕ್ಕೆ ಕಟ್ಟಿ ಮೇಲಕ್ಕೆ ಓಡಿದರು. ಪ್ರಯಾಣಿಕರ ಜತೆಗೆ ಕೆಳಂತಸ್ತಿನಲ್ಲಿ ನಿಂತಿದ್ದ ನಮ್ಮ ಸ್ಟೀಮರ್ ನಿರ್ವಾಹಕನು, ಬಂಗಾಳಿಯಲ್ಲಿ ಕೂಗುತ್ತ ಮೇಲಿದ್ದ ವ್ಹೀಲ್‌ಮಾನಿಗೆ ಏನನ್ನೂ ಹೇಳಲು ಏಣಿಹತ್ತಿ ದಡದಡ ದೌಡಿದನು. ಹೌರಾ ಸೇತುವೆಯ ಫೋಟೊ ತೆಗೆಯುವುದರಲ್ಲಿ ಮಗ್ನವಾಗಿದ್ದ ನನಗೆ ಇದೇನೆಂದೇ ತಿಳಿಯಲಿಲ್ಲ. ‘ಕ್ಯಾಹುವಾ’ ಎಂದು ಪಕ್ಕದವನಿಗೆ ಕೇಳಲು ಆತ ಹೊಳೆ ಹರಿಯುವ ದಿಕ್ಕನ್ನು ತೋರಿಸಿ ‘ಭಾಟಾ ಭಾಟಾ’ ಎಂದನು.

ಅವನು ತೋರಿದತ್ತ ನೋಡಿದೆ. ಹೊಳೆಯ ನೀರಿನ ಎತ್ತರ ಇದ್ದಕ್ಕಿದ್ದಂತೆ ಹೆಚ್ಚುಗೊಳ್ಳತೊಡಗಿತ್ತು. ನದಿಯಲ್ಲಿ ಹಿಂದೆ ತೇಲಿ ಹೋಗಿದ್ದ ನೀರ್ಕಳೆಯ ಗಿಡಗಳೆಲ್ಲ, ಮಂತ್ರಿಗಳ ಕಾರಿನ ಮುಂದೆ ಪೋಲಿಸರ ಪೈಲಟ್‌ಜೀಪು ಬಿರುಗಾಳಿಯ ತರಹ ನುಗ್ಗುವಂತೆ, ಹೊರಳಿ ಬರುತ್ತಿದ್ದವು. ಅಲ್ಲೊಂದು ಯಾವುದೊ ಪ್ರಾಣಿಯ ಕಳೇಬರವೂ ತೇಲುತ್ತಿತ್ತು. ಕಾಗೆಗಳು ಆ ಭರಾಟೆಯಲ್ಲೂ ಅದರ ಮೇಲೆ ಕೂರುವುದಕ್ಕೆ ಯತ್ನಿಸುತ್ತಿದ್ದವು. ಮತ್ತೂ ದೂರದಲ್ಲಿ ಹೊಳೆಯೊಳಗೆ ಆಳೆತ್ತರದ ಅಲೆಗಳು ಹಾವಿನ ಹೆಡೆಯಂತೆ ಎದ್ದು, ದಡದಲ್ಲಿದ್ದ ಕಸವನ್ನೆಲ್ಲ ಬಾಚಿಕೊಂಡು, ಸಣ್ಣದೋಣಿಗಳನ್ನು ಮುರಿದು ದಡಕ್ಕೆ ಅಪ್ಪಳಿಸುತ್ತ ಬರುತ್ತಿದ್ದವು. ಇದೆಲ್ಲವೂ ಬಂಗಾಳಕೊಲ್ಲಿಯಲ್ಲಿ ಸಮುದ್ರವು ಉಕ್ಕಿ, ಹೂಗ್ಲಿ ಹೊಳೆಯಲ್ಲಿ ಭರತ ಎಬ್ಬಿಸಿದ್ದರ ಪರಿಣಾಮವಾಗಿತ್ತು. ಅಂದು ಹುಣ್ಣಿಮೆಯಾಗಿತ್ತು.

ನಮ್ಮ ಸ್ಟೀಮರು ಜೆಟ್ಟಿಯಿಂದ ದೂರಸರಿದು ನಡುಹೊಳೆಗೆ ಹೋಗಿ ನಿಂತು ದಡದ ಅಲೆಗಳಿಂದ ತಪ್ಪಿಸಿಕೊಂಡು ತೇಕುತ್ತ ಸುಧಾರಿಸಿಕೊಳ್ಳತೊಡಗಿತು. ಆಲೆಮನೆಯ ಕೊಪ್ಪರಿಗೆಯಲ್ಲಿ ಕುದಿವ ಕಬ್ಬಿನ ಹಾಲಿನಂತೆ ಹೊಳೆ ತಳಮಳಿಸುತ್ತಿತ್ತು. ಅರ್ಧಗಂಟೆಯ ಕಾಲ ತನಕ ತಾಂಡವ ಮಾಡಿದ ಹೊಳೆ ಶಾಂತವಾಗತೊಡಗಿತು. ಸ್ಟೀಮರ್ ಚಲಿಸಿತು. ಜನರ ಮುಖದಲ್ಲಿ  ಇದೆಲ್ಲ ಮಾಮೂಲಿ ಎಂಬ ಭಾವವಿತ್ತು. ನನಗೆ ಹೂಗ್ಲಿ ಕಲ್ಕತ್ತೆಯ ಜನರಿಗೆ ಕೇವಲ ಕುಡಿನೀರನ್ನು ಒದಗಿಸುತ್ತಿಲ್ಲ, ಅದು ಆ ಊರಿನ ದೈನಿಕದೊಡನೆ ಹೋಗಿ ಸೇರಿಬಿಟ್ಟಿದೆ ಅನಿಸಿತು.

ಕಲ್ಕತ್ತೆಗೂ ಬಂಗಾಳಕೊಲ್ಲಿಯ ಸಮುದ್ರಕ್ಕೂ ನೂರಕ್ಕಿಂತಲೂ ಹೆಚ್ಚು ಕಿಮಿ ಫಾಸಲೆ. ಅಲ್ಲೆದ್ದ ಅಲೆಗಳು ಇಷ್ಟು ದೂರದವರೆಗೆ ಬರುತ್ತವೆಯೇ? ಈ ಮಹಾಹೊಳೆಯ ಗತಿಯನ್ನು ಬದಲಿಸಿ ಅದನ್ನು ಹಿಮ್ಮುಖವಾಗಿ ಹರಿಯುವಂತೆ ಮಾಡುತ್ತವೆಯೇ? ನನಗೆ ನಂಬಲಾಗಲಿಲ್ಲ. ಕಡಲು ಹೊಳೆಯನ್ನು ಹಿಂದೂಡುವ ಆಟವನ್ನು ಶರಾವತಿ ಕಾಳಿ ಅಘನಾಶಿನಿಯರ ಮುಖಜದಲ್ಲಿ ಕಂಡಿರುವೆ. ಆದರೆ ಇಲ್ಲಿನ ಪರಿಯೇ ಬೇರೆ. ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿ ಇದ್ದಾಗ, ಹೂಗ್ಲಿಯನ್ನು ಕಂಡು ಹುಚ್ಚರಂತೆ ಕುಣಿದಾಡುತ್ತಿದ್ದುದು ಇದೇ ಉಬ್ಬರ ಕಂಡೇನು?

ಹೂಗ್ಲಿ- ಇದರ ನಿಜವಾದ ಹೆಸರೇನಲ್ಲ. ಅದರ ದಡದಲ್ಲಿದ್ದ ಒಂದು ಊರಿನ ಹೆಸರನ್ನು ಬ್ರಿಟಿಶರು ಹೊಳೆಗೂ ಇಟ್ಟರು ಅಷ್ಟೆ. ಈಗಲೂ ಬಂಗಾಳಿಗಳು ಇದನ್ನು ಭಾಗೀರಥಿ ಎಂದೇ ಕರೆಯುವುದು. ಹಿಮಶಿಖರಗಳಲ್ಲಿ ಹುಟ್ಟುವ ಗಂಗೆಯು ಇಕ್ಕಟ್ಟಾದ ಕಣಿವೆಗಳಲ್ಲಿ ಹರಿಯುತ್ತ, ನೂರಾರು ಕಿರುಹೊಳೆಗಳನ್ನು ಕೂಡಿಕೊಂಡು, ದೆಹಲಿ ಕಾನ್ಪುರ ಅಲಹಾಬಾದ್ ಪಟ್ನಾ ಮುಂತಾದ ದೊಡ್ಡದೊಡ್ಡ ನಗರಗಳ ಎದೆಯ ಮೇಲೆ ಹಾದು, ಬಯಲು ಪ್ರದೇಶಗಳಲ್ಲಿ ಹರಿದು, ಕಡಲು ಕೂಡುವ ಕೊನೆಯ ಹಂತದಲ್ಲಿ ಪದ್ಮಾ ಎಂಬ ಹೊಸ ಹೆಸರನ್ನು ಪಡೆದು ಬಾಂಗ್ಲಾದೇಶದಲ್ಲಿ ಹರಿಯುತ್ತದೆ. ಗಂಗೆ ಹಾಗೆ ಬಾಂಗ್ಲಾಕ್ಕೆ ಹೊರಳಿಕೊಳ್ಳುವ ಜಾಗದಲ್ಲಿ ಅದಕ್ಕೊಂದು ಅಣೆಯನ್ನು ಕಟ್ಟಿಗೆ ಹೂಗ್ಲಿಗೆ ನೀರು ಹಾಯಿಸಲಾಗಿದೆ. ಹೀಗೆ ಗಂಗೆಯಿಂದ ನೀರನ್ನು ಕಡವಾಗಿ ಪಡೆದುಕೊಂಡ ಹೂಗ್ಲಿ, ಪಶ್ಚಿಮ ಬಂಗಾಳವನ್ನು ಎರಡು ಭಾಗವಾಗಿ ವಿಂಗಡಿಸಿ, ಅದರ ಬೆನ್ನಹುರಿಯಂತೆ ೨೬೦ ಕಿಮಿ ದೂರಕ್ಕೆ ಹರಿಯುತ್ತದೆ. ಉದ್ದಕ್ಕೂ ಅದರ ದಡವೆಲ್ಲ ಮರಗಿಡಗಳಿಂದಲೂ ತೋಟ ಗದ್ದೆಗಳಿಂದಲೂ ಕೂಡಿ ಬಂಗಾಳವು ಸುಜಲಾಂ ಸುಫಲಾಂ ಆಗಿದೆ. ಹೂಗ್ಲಿ ಬಂಗಾಳದ ಜೀವನಾಡಿ.

ನಾವು ಬಂಗಾಳದಲ್ಲಿದ್ದಷ್ಟೂ ದಿನ ಹೂಗ್ಲಿಹೊಳೆಯಲ್ಲಿ ಅತ್ತಿಂದಿತ್ತ ಪಯಣ ಮಾಡಿದೆವು. ಹೌರಾದಿಂದ ಕಲ್ಕತ್ತೆಗೆ, ದಕ್ಷಿಣೇಶ್ವದಿಂದ ಬೇಲೂರು ಮಠಕ್ಕೆ, ಆಜೀಂಗಢದಿಂದ ಮುರ್ಶಿದಾಬಾದಿಗೆ, ಮೇನ್‌ಲ್ಯಾಂಡಿನಿಂದ ಸಾಗರದ್ವೀಪಕ್ಕೆ- ಬಗೆಬಗೆಯಲ್ಲಿ ಹೊಳೆಯನ್ನು ಕ್ರಾಸು ಮಾಡಿದೆವು. ಕಲ್ಕತ್ತೆಯಲ್ಲಿ ಮನುಷ್ಯರು ಎಳೆಯುವ ಕೈಗಾಡಿಯಿಂದ ಹಿಡಿದು ಕುದುರೆ ಗಾಡಿ, ಸೈಕಲ್‌ರಿಕ್ಷಾ, ಆಟೊ, ಟ್ಯಾಕ್ಸಿ, ಸಿಟಿಬಸ್ಸು, ಟ್ರ್ಯಾಮು, ಲೋಕಲ್ ಟ್ರೈನು ಹಾಗೂ ಮೆಟ್ರೋರೈಲುಗಳಿವೆ. ಇಷ್ಟೊಂದು ವೈವಿಧ್ಯಮಯ ಸಾರಿಗೆವ್ಯವಸ್ಥೆ ಉಳಿಸಿಕೊಂಡಿದ್ದರೂ ಕಲ್ಕತ್ತೆಯ ಜನರಿಗೆ ಜಲಪಯಣದ ಆಕರ್ಷಣೆ ಕಡಿಮೆಯಾಗಿಲ್ಲ. ಇದರಲ್ಲಿ ಸಿಗುವ ಖುಷಿಯೇ ಬೇರೆ. ಬಂಗಾಳದಲ್ಲಿ ಈ ಜಲಪಯಣ ಬಹಳ ಸೋವಿ ಕೂಡ. ಹೊಳೆ ಅಡ್ಡದಾಟಲು ೧ ರೂಪಾಯಿ. ಘಾಟಿನಿಂದ ಘಾಟಿಗೆ ಐದುರೂಪಾಯಿ. ಇದನ್ನೆಲ್ಲ ನಿರ್ವಹಿಸುವ ಸಂಸ್ಥೆ ಹೆಸರು ಉಚ್ಚರಿಸಲು ಕಷ್ಟವಾಗುವಷ್ಟು ಸಂಸ್ಕೃತಮಯವಾಗಿತ್ತು: “ಹೂಗ್ಲಿನದಿ ಜಲಪತ್ ಪರಿವಾಹನ ಸಂವಿವಾಯ್ ಸಮಿತಿ”!

ವಿಶೇಷವೆಂದರೆ ಹುಟ್ಟುವ ಮೂಲದಲ್ಲಿ ಫರ್ಲಾಂಗು ಅಗಲವಿರುವ ಹೂಗ್ಲಿ ಬರುಬರುತ್ತ ತನ್ನ ಪಾತ್ರ ವಿಸ್ತಾರಗೊಳಿಸಿಕೊಳ್ಳುತ್ತ ಹೋಗುವುದು. ಕಲ್ಕತ್ತೆಯಲ್ಲಿ ಅದರ ಅಗಲ ಅರ್ಧ ಕಿಮಿಯಷ್ಟಾಗುತ್ತದೆ; ಡೈಮಂಡ್ ಹಾರ್ಬರಿನಲ್ಲಿ ಮೂರು ಕಿಮಿಯಾಗುತ್ತದೆ. ಇನ್ನು ಅದು ಕಡಲನ್ನು ಸಂಗಮಿಸುವ ಸಾಗರದ್ವೀಪದಲ್ಲಿ ಆಚೆಯ ದಡವೇ ಕಾಣದು. ಎಲ್ಲಿಯ ಕಡಲು ಎಲ್ಲಿಯ ಹೊಳೆ-ಗಡಿ ಗುರುತಿಸುವುದೇ ವ್ಯರ್ಥ. ಅದಕ್ಕೆಂದೇ ಜನ ಗಂಗಾಸಾಗರ್ ಎಂಬ ಹೆಸರನ್ನು ಕೊಟ್ಟಿರಬೇಕು. ಗಂಗೆಯೆಂದರೆ ಗಂಗೆ. ಸಾಗರವೆಂದರೆ ಸಾಗರ. ದಕ್ಷಿಣ ಭಾರತದ ಯಾವ ಹೊಳೆಯನ್ನೂ ಹೂಗ್ಲಿಗೆ ಹೋಲಿಸುವಂತಿಲ್ಲ. ನಮ್ಮ ಕಾವೇರಿ ತುಂಗಭದ್ರೆ ಕೃಷ್ಣೆಯರು ಕಲ್ಲರೆಗಳ ಮೇಲೆ ಧುಮುಕುವವರು. ಅವರಲ್ಲಿ ಜಲಪ್ರಯಣ ಸಾಧ್ಯವಿಲ್ಲ. ಆದರೆ ಹಿಮಾಲಯದ ಹೊಳೆಗಳು ನುಣ್ಣನೆಯ ಮಣ್ಣಿನ ಬಯಲುಗಳಲ್ಲಿ ಶಾಂತವಾಗಿ ಆಳವಾಗಿ ವಿಸ್ತಾರವಾಗಿ ಹರಿಯುತ್ತವೆ.  ಕಡಲನ್ನು ಸಮೀಪಿಸುವಾಗ ಅವುಗಳ ಗತಿ ಮತ್ತೂ ನಿಧಾನ. ಕಡಲು ಉಕ್ಕೇರಿದಾಗ ಅವು ಮೈತುಂಬಿಕೊಂಡು ಹಿಮ್ಮುಖ ಹರಿಯತೊಡಗುತ್ತವೆ. ಹೀಗಾಗಿ ಬೇಸಗೆಯಲ್ಲೂ ಹಡಗುಗಳು ಓಡಾಡುವಷ್ಟು ಆಳ ಅಲ್ಲಿ. ಇದೇ ಹೊತ್ತಲ್ಲಿ ಕಡಲೊಳಗೆ ನಿಂತು ಕಾಯುವ ಹಡಗುಗಳೆಲ್ಲ ಒಳಗೆ ನುಸುಳತೊಡಗುತ್ತವೆ.

ಹೂಗ್ಲಿಯ ಹಿಮ್ಮುಖ ಹರಿವು ಸರಕಿನ ಹಡಗುಗಳ ೨೫೦೦ ಕಿಮಿಯಷ್ಟು ಒಳನಾಡಿಗೆ ಚಲಿಸಲು ಅನುವು ಮಾಡಿಕೊಟ್ಟಿದೆ. ಹೂಗ್ಲಿಯ ಈ ಗುಣ ಬಂಗಾಳದ ವಿಧಿಯನ್ನು ಬದಲಿಸಿಬಿಟ್ಟಿತು. ಕಾಳಿಕಟ ಎಂಬ ಸಣ್ಣಹಳ್ಳಿಯೊಂದು ಮಹಾನಗರವಾಗಿ ಬೆಳೆಯಲು ಹೂಗ್ಲಿ ಕಡಲ ಜತೆ ಆಡುವ ತಳ್ಳಾಟವೇ ಕಾರಣವೆನ್ನಬಹುದು. ಅದರಲ್ಲೂ ೧೬೯೦ರಲ್ಲಿ ಈಸ್ಟಿಂಡಿಯಾ ಕಂಪನಿಯ ಏಜೆಂಟನಾದ ಜಾಬ್ ಚಾರನಾಕ್ ಎಂಬ ಯೂರೋಪಿಯನ್ ಮನುಷ್ಯ, ಹೂಗ್ಲಿ ಹೊಳೆಯ ಮೂಲಕ ಕಾಳಿಕಟಕ್ಕೆ ಬಂದ ದಿನವನ್ನು ಚಾರಿತ್ರಿಕ ಘಟನೆಯೆಂದು ಇತಿಹಾಸಕಾರರು ಭಾವಿಸಿದ್ದಾರೆ. ಡಚ್ಚರು ಪೋರ್ಚುಗೀಸರು ಫ್ರೆಂಚರು ಬ್ರಿಟಿಶರು ಹೂಗ್ಲಿ ಹೊಳೆಯೊಳಗೆ ಹಾದುಬಂದು ಅದರ ದಡದುದ್ದಕ್ಕೂ ವ್ಯಾಪಾರಿ ಕೋಠಿಗಳನ್ನು ಸ್ಥಾಪಿಸುತ್ತಲೆ ಹೋದರು. ಮುರ್ಶಿದಾಬಾದ್, ಪ್ಲಾಸಿ, ಡೈಮಂಡ್‌ಹಾರ್ಬರ್, ಹೌರಾ, ಕಲ್ಕತ್ತ- ಹೀಗೆ ಬಂಗಾಳದ ನಗರಗಳೆಲ್ಲ ಬೆಳೆದಿದ್ದು ಇದೇ ಹೂಗ್ಲಿಯ ದಡದಲ್ಲಿ. ಇದೇ ಪರದೇಶಿಗಳ ವ್ಯಾಪಾರದಲ್ಲಿ. ಯೂರೋಪಿನ ಹಡಗುಗಳು ಬಂಗಾಳಿ ರೈತರು ಬೆಳೆದ ನೀಲಿ ಸೆಣಬು ಹತ್ತಿಗಳನ್ನು ಢಾಕಾದ ನೇಕಾರರು ನೇದ ಮಸ್ಲಿನ್ ಬಟ್ಟೆಯನ್ನು  ಒಯ್ಯತೊಡಗಿದವು. ಯೂರೋಪಿನ ಕೈಗಾರಿಕಾ ಉತ್ಪನ್ನಗಳು ಹೂಗ್ಲಿ ದಡದ ಊರುಗಳಿಗೆ ಬಂದು ಇಳಿಯತೊಡಗಿದವು. ಮುಂದೆ ಹೂಗ್ಲಿ ಕಡಲ ವ್ಯಾಪಾರಿಗಳ ಪೈಪೋಟಿಗೂ ಘನಘೋರ ಕದನಗಳಿಗೂ  ಮೂಕಸಾಕ್ಷಿಯಾಗಬೇಕಾಯಿತು.

ಭಾರತದಲ್ಲಿ ಬ್ರಿಟಿಶರ ಆಳ್ವಿಕೆಗೆ ನಾಂದಿಹಾಡಿದ ಬ್ರಿಟಿಶರಿಗೂ ಫ್ರೆಂಚರಿಗೂ ನಿರ್ಣಾಯಕ ಕದನ ನಡೆದ ಪ್ಲಾಸಿ ಹೂಗ್ಲಿ ದಡದಲ್ಲಿದೆ. ಮುರ್ಶಿದಾಬಾದಿನಿಂದ ಕಲ್ಕತ್ತೆಗೆ ಬರುತ್ತ ರೈಲು ಪ್ಲಾಸಿಯಲ್ಲಿ ನಿಂತಾಗ, ನಾನು ನೆಲಕ್ಕಿಳಿದು ಈ ಚಾರಿತ್ರಿಕ ಮಹತ್ವದ ನೆಲವನ್ನು ಮೆಟ್ಟಿದೆ. ಇದೇ ಪ್ಲಾಸಿಯ ವಿಜಯದ ಬಳಿಕ ತಾನೇ ಬ್ರಿಟಿಶರು ಬಂಗಾಳದ ನವಾಬರ ಜತೆ ಸೈನಿಕ ಒಪ್ಪಂದ ಮಾಡಿಕೊಂಡಿದ್ದು? ಒಂದೊಂದೇ ರಾಜ್ಯಗಳನ್ನು ಗೆಲ್ಲುತ್ತ, ಕ್ರಮೇಣ ಭರತ ಖಂಡವನ್ನೇ ಆಕ್ರಮಿಸಿಕೊಂಡಿದ್ದು? ಈಸ್ಟ್ ಇಂಡಿಯಾ ಕಂಪನಿ ಸರ್ಕಾರ ಕಲ್ಕತ್ತೆಯಲ್ಲಿ ಕೂತು ಪೇಶಾವರ ಸಿಂಧ್ ಮುಂಬೈ ಚೆನ್ನೈ ಪರ್ಯಂತ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ, ಎರಡು ಶತಮಾನಗಳ ಕಾಲ ಆಳ್ವಿಕೆ ಮಾಡಿದ್ದು? ಇದಕ್ಕೆಲ್ಲ ಕಾರಣಕರ್ತೆಯಾದ ಹೂಗ್ಲಿ ಹೊಳೆ ಪ್ಲಾಸಿಯಲ್ಲಿ ಎಲ್ಲ ಗುಟ್ಟುಗಳನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಏನೂ ಅರಿಯದ ಮುಗ್ಧತೆಯಲ್ಲಿ ಹರಿಯುತ್ತಿತ್ತು.

ಬ್ರಿಟಿಶರು ವ್ಯಾಪಾರ ಮತ್ತು ಆಡಳಿತವಷ್ಟೇ ಮಾಡಿದ್ದರೆ ಕತೆ ಲಂಬಿಸುತ್ತಿರಲಿಲ್ಲ. ಅವರ ವ್ಯಾಪಾರ ಮತ್ತು ಆಳ್ವಿಕೆಯ ಭಾಗವಾಗಿ ಯೂರೋಪಿನ ಧರ್ಮ ಸಂಸ್ಕೃತಿ ಕಲೆ ವಿಚಾರಗಳು ಬಂಗಾಳದ ನರನಾಡಿಗಳಿಗೆ ನೇರವಾಗಿ ಬಂದು ತಾಕಿ ಅನುಸಂಧಾನ ಆರಂಭಿಸಿದವು; ಯೂರೋಪಿಯನ್ ಆಧುನಿಕತೆ ನಮ್ಮ ಸಮಾಜದ ಬದುಕಿನಲ್ಲಿ ಹೊಕ್ಕು ಅಲ್ಲೋಲ ಕಲ್ಲೋಲ ಮಾಡಿತು. ಇದಕ್ಕೆಲ್ಲ ಕಾರಣವಾದ ಅಂಗ್ರೇಜಿ ಶಿಕ್ಷಣ ಪಡೆದ  ಮೊದಲ ತಲೆಮಾರು ಹುಟ್ಟಿದ್ದು ಇದೇ ಹೂಗ್ಲಿ ದಡದ ಕಲ್ಕತ್ತೆಯಲ್ಲಿ. ಇಲ್ಲಿ ಎದ್ದ ಸುಧಾರಣೆಯ ಅಲೆಗಳು ಇಡೀ ಭಾರತವನ್ನು ಆವರಿಸಿಕೊಂಡವು. ಇದರ ಪರಿಣಾಮಗಳು ಬ್ರಿಟಿಶರ ವಿರುದ್ಧ ನಡೆದ ಹೋರಾಟದಿಂದ ಹಿಡಿದು ಇಂಗ್ಲಿಶಿನಲ್ಲಿ ಫೇಲಾದ ಹುಡುಗ ಹೊಳೆಗೆ ಹಾರಿ ಪ್ರಾಣಕೊಡುವ ತನಕ ಇವೆ. ಇವೆಲ್ಲ ಶಾಪವೊ ವರವೊ, ಕತ್ತಲೊ ಬೆಳಕೊ ಎಂಬುದನ್ನು ಒಂದು ವಾಕ್ಯದಲ್ಲಿ ಹೇಳಿ ಮುಗಿಸುವ ಸ್ಥಿತಿಯಲ್ಲಿ ನಾವೀಗ ಇಲ್ಲ. ಇದಕ್ಕೆಲ್ಲ ಪರೋಕ್ಷ ಸಾಕ್ಷಿಯಂತಿರುವ ಹೂಗ್ಲಿಯನ್ನು ದೂರುವುದರಲ್ಲಿ ಏನರ್ಥ?

ಹೂಗ್ಲಿ ಹೊಳೆಯಾಗಿ ಒಂದೊಂದು ಕಡೆ ಒಂದೊಂದು ತೆರನಾಗಿ ಹರಿಯುತ್ತದೆ. ಮುರ್ಶಿದಾಬಾದಿನಲ್ಲಿ ಅಷ್ಟು ಮಲಿನವಿಲ್ಲ. ಬೊಗಸೆಯಲ್ಲಿ ತುಂಬಿ ನೀರುಕುಡಿಯಬೇಕು ಅನಿಸುವಂತೆ ಜಲ ತಿಳಿಯಾಗಿದೆ. ಕಲ್ಕತ್ತೆಯಲ್ಲಿ ಮಾತ್ರ ಆಕೆಯದು ಮಲಿನ ಚಾದರ. ಹಿಮಕರಗಿದ ನೀರು ಬರುತ್ತಿರುವುದರಿಂದಲೊ ಕಲ್ಕತ್ತೆಯ ಚರಂಡಿಗಳು ಹೂಗ್ಲಿದಡದ ಉದ್ಯಮಗಳು ಬಿಡುತ್ತಿರುವ ಕೆಸರೊ, ದೆಹಲಿ ಕಾನ್ಪುರ ಪಟ್ನಾ ಅಲಹಾಬಾದ್ ಮುಂತಾದ ಮಹಾನಗರಗಳ ಕೊಳೆಯೊ ತಿಳಿಯದು. ಅಂತೂ ಭಾರತದ ಕಲುಷಿತ ಹೊಳೆಗಳಲ್ಲಿ ಹೂಗ್ಲಿಗೂ ಜಾಗ ಸಿಕ್ಕಿದೆ. ಹೂಗ್ಲಿ ನೀರೊಳಗೆ ಒಳ್ಳೇ ಮೀನು ಕೂಡ ಸಿಗುವುದಿಲ್ಲವಂತೆ. ಬಂಗಾಳದ ಪ್ರಸಿದ್ಧ ಹಲ್ಸಾ ಮೀನು ಸಿಗಬೇಕೆಂದರೆ ಹೂಗ್ಲಿಯ ಉಪನದಿಯಾದ ರೂಪನಾರಾಯಣಕ್ಕೆ ಹೋಗಬೇಕು. ಈಗಲೂ ಕಲ್ಕತ್ತೆಯ ಜನರ ಪ್ರಿಯವಾದ ಮೀನು ಹೋಗುವುದು ಆಂಧ್ರದ ಕೆರೆಗಳಿಂದ. ತನ್ನದಲ್ಲದ ತಪ್ಪಿಗಾಗಿ ಮಲಿನಗೊಂಡ  ವಿಷಾದವನ್ನೂ ಬಂಗಾಳದ ಗದ್ದೆಗಳಿಗೆ ನೀರುಣಿಸಿದ ಸಂತೋಷವನ್ನೂ ಹೊತ್ತು ಹೂಗ್ಲಿ ಹರಿಯುತ್ತದೆ.

ಹೂಗ್ಲಿಯ ನಿಜವಾದ ಚೆಲುವು ಕಾಣುವುದು ಮುರ್ಶಿದಾಬಾದಿನಲ್ಲಿ. ನವಾಬರಾಳಿದ ಈ ರಾಜಪಟ್ಟಣವನ್ನೂ ಅದರ ಪಾಳಾದ ಅರಮನೆಗಳನ್ನು ರಾಜದ್ರೋಹ ಮಾಡಿದವರ ಖಬರಸ್ಥಾನವನ್ನೂ ದಡದ ಸಾಸಿವೆಯ ಹಳದಿಹೊಲಗಳನ್ನೂ ಸಮಾನವಾದ ಕರುಣೆಯಿಂದ ನೋಡುತ್ತ, ಚರಿತ್ರೆಯ ಸಮಸ್ತ ಘಟನೆಗಳಿಗೂ ವರ್ತಮಾನದ ನಾಗರಿಕ ಸಮಾಜದ ಸಮಸ್ತ ತಲ್ಲಣಗಳಿಗೂ ತನ್ನನ್ನು ಒಡ್ಡಿಕೊಂಡಂತೆ ಹೂಗ್ಲಿ ತಾಳ್ಮೆಯಿಂದ  ಇಲ್ಲಿ ಚಲಿಸುತ್ತದೆ. ಕಲ್ಕತ್ತೆಯಲ್ಲಿ ಹೊಳೆಗೆ ಕಾವಲಿಟ್ಟ ದೈತ್ಯರಂತಿರುವ ಕಾರ್ಖಾನೆಗಳನ್ನೂ, ದಬ್ಬುಹಾಕಿದ ಡಬ್ಬಗಳಂತಿರುವ ಬ್ರಿಟಿಶರ ವ್ಯಾಪಾರಿ ಕೋಠಿಗಳನ್ನೂ ನಿರ್ಲಿಪ್ತವಾಗಿ ನೋಡುತ್ತ, ಸ್ಮಶಾನಗಳಲ್ಲಿ ಉರಿಯುವ ಚಿತೆಗಳನ್ನು ಕಾಣುತ್ತ ಅದು ಹರಿಯುತ್ತದೆ. ದಕ್ಷಿಣೇಶ್ವರದ ಬಳಿ ಕಾರ್ಖಾನೆಯ ಎತ್ತರದ ಚಿಮಿಣಿಯ ಮೇಲೆ ಹೊಳೆಯನ್ನು ನೋಡಲು ಹತ್ತಿಕೂತಂತೆ ಬೆಳೆದ ಆಲದ ಮರವನ್ನು ನೋಡುತ್ತ ಹರಿಯುತ್ತದೆ. ಕೊನೆಗೆ ಕಡಲನ್ನು ಕೂಡುವ ಕಡೆ ನೂರಾರು ದ್ವೀಪಗಳನ್ನು ನಿರ್ಮಿಸಿ, ಹರಿದು ಬಂದ ನೆಲಕ್ಕೆ ವಿದಾಯ ಹೇಳಿ ಬಂಗಾಳಕೊಲ್ಲಿಯಲ್ಲಿ ವಿಲೀನವಾಗುತ್ತದೆ.

ನಾಳೆ ಬೆಂಗಳೂರಿಗೆ ಹೊರಡಬೇಕು. ಯಾಕೊ ಸಂಜೆ ಮತ್ತೆ ಹೂಗ್ಲಿಯಲ್ಲಿ ಹೋಗುವ ಆಸೆಯಾಯಿತು. ಗೋಲಬಾಡಿ ಘಾಟಿನಿಂದ ಬಾಬುಘಾಟಿಗೆ ಹೋದೆವು. ದೋಣಿಯ ಕೊನೆಯ ಟ್ರಿಪ್ಪಿರಬೇಕು. ನಾನು ಬಾನು ಇಬ್ಬರೇ ದೋಣಿಯೊಳಗೆ. ದಿನವೆಲ್ಲ ಅಯಸ್ಕಾಂತ ಎಸೆದು ಕಾಸು ಹೆಕ್ಕುತ್ತಿದ್ದ ಹುಡುಗರು, ಮೀನು ಹಿಡಿಯುವ ಬೆಸ್ತರು, ಸೊಂಟದುದ್ದ ನೀರೊಳಗೆ ನಿಂತು ತರ್ಪಣ ಬಿಟ್ಟವರು, ಬಟ್ಟೆಒಗೆದು ಮೈತೊಳೆದುಕೊಳ್ಳುವ  ಭಿಕ್ಷುಕರು ಯಾರೂ ದಡಗಳಲ್ಲಿ ಇರಲಿಲ್ಲ. ದಡದಲ್ಲಿ ರಾಶಿಬಿದ್ದ ಕಸದ ರಾಶಿ ಕಾಣುತ್ತಿರಲಿಲ್ಲ. ಎಲ್ಲವನ್ನು ಕಲ್ಕತ್ತ ನಗರದ ಮಂದಬೆಳಕು ಅಡಗಿಸಿಬಿಟ್ಟಿತ್ತು. ಆದರೂ ನಿರಾಶ್ರಿತರು ಭಿಕ್ಷುಕರು, ರಟ್ಟುಪೇಪರು ಹೊತ್ತಿಸಿ ಚಳಿಕಾಯಿಸಿಕೊಳ್ಳುತ್ತ, ಅಡುಗೆ ಮಾಡಿಕೊಳ್ಳುತ್ತ ಬೆಂಕಿಯ ಹೂವುಗಳನ್ನು ದಡದುದ್ದಕ್ಕೂ ಹತ್ತಿಸಿದ್ದು ಕಾಣಬಹುದಿತ್ತು. ಹೂಗ್ಲಿಯ ಎರಡು ದಡಗಳನ್ನು ಕೂಡಿಸಿ ಇರುವೆ ರಾಶಿಯಂತಿರುವ ಜನಪ್ರವಾಹವನ್ನೂ ಬೆಳಕಿನ ಹುಳಗಳಂತಿರುವ ವಾಹನ ಪ್ರವಾಹವನ್ನೂ ಅತ್ತಿಂದಿತ್ತ ದಾಟಿಸುತ್ತಿರುವ ಕಬ್ಬಿಣದ ತೊಟ್ಟಿಲು ಹೌರಾ ಸೇತುವೆ ನಸುಗೆಂಪು ಬಣ್ಣದಿಂದ ಝಗಮಗಿಸುವುದು ಎದ್ದು ಕಾಣುತ್ತಿತ್ತು. ಸೇತುವೆ ಮೇಲಿನ ಬೆಳಕು ಅಲೆಗಳ ಮೇಲೆ ಬಿದ್ದು ಸಣ್ಣಗೆ ಮಿನುಗುವ ಹೊಳೆ. ಬಾಗಿ ನೋಡಿದೆ. ಕಡಲಿಗೆ ಉಬ್ಬರ ಬಂದಿರಬೇಕು, ಹೂಗ್ಲಿ ಹಿಮ್ಮುಖವಾಗಿ ಹರಿಯುತ್ತಿತ್ತು.

(ಚಿತ್ರಗಳು: ಲೇಖಕರವು)