“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ. ಕುದುರೆಮುಖದ ರಮಣೀಯ ಗಿರಿಶೃಂಗಗಳಿಗೆ ಬಿಸಿಲು ಬಿದ್ದು ಕಾಲೇಜು ಹುಡುಗಿಯೊಬ್ಬಳ ಹೊಚ್ಚ ಹೊಸ ಮೂಗುತಿ ಹೊಳೆದಂತೆ ಕಾಣುತ್ತದೆ. ಈ ಎಲ್ಲಾ ಸನ್ನಿವೇಶಗಳನ್ನು ಸುಖಿಸುತ್ತಾ, ನಮ್ಮ ದಾರಿ ಸಾಗುತ್ತಿತ್ತು. ಅಲ್ಲಲ್ಲಿ ಆಗಾಗ ಬೈಕ್ ನಿಲ್ಲಿಸಿ, ಕುದುರೆಮುಖದ ಮೌನವನ್ನು, ಪರಿಮಳವನ್ನೂ ಆಸ್ವಾದಿಸುತ್ತಾ ನಿಂತೆವು.”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಮೂರನೆಯ ಕಂತು.

 

ಕುದುರೆಮುಖವೆಂದರೆ ಹಾಗೇ, ಗಡದ್ದು ನಿದಿರೆಯ ಕನಸಲ್ಲಿ ಎಂದೂ ಕಾಣದ ವಿಹಂಗಮ ಲೋಕವೊಂದನ್ನು ನೋಡಿದ ಹಾಗೆ, ಇಷ್ಟು ದಿನ ಮಾತಾಡದೇ ಮುನಿಸಿಕೊಂಡಿದ್ದ ಅವಳು ಹುಡುಕಿಕೊಂಡು ಬಂದು ಬಾಯ್ತುಂಬಾ ಅಕ್ಕರೆ ಸೂಸಿ ನಗುತ್ತ ಮಾತಾಡಿದ ಹಾಗೆ. ಸ್ವರ್ಗವೊಂದು ಥಟ್ ಅಂತ ಕೈಗೆ ಸಿಕ್ಕಿ ಯಾರೂ ಈವರೆಗೂ ಹೋಗದ ಎತ್ತರದಲ್ಲಿದ್ದೇವೆ ಅಂತ ಹುಚ್ಚು ಸಂಭ್ರಮಪಡುವ ಹಾಗೆ, ನಾನೆಷ್ಟೇ ಕುದುರೆಮುಖದ ಕುರಿತು ಬರೆದರೂ ಕುದರೆಮುಖದ ಪೂರ್ತಿ ಚೆಲುವು ನಿಮಗೆ ದಕ್ಕುವುದಕ್ಕೆ ಸಾಧ್ಯವೇ ಇಲ್ಲ. ನಾ ಹೇಗೆ ಬರೆದರೂ ಅಲ್ಲಿನ ಸಮೃದ್ಧ ಹಸಿರು, ಕಾಡುಹಕ್ಕಿಯ ಸಿಳ್ಳೆ, ಜಲಧಾರೆಯ ಸ್ವಗತ, ಮೌನದ ಧ್ವನಿಗಳು ಅಕ್ಷರಗಳಿಗೂ ಸಿಕ್ಕುವುದಿಲ್ಲ. ಆದರೂ ಹೇಳದೇ ಇರುವುದು ಹೇಗೆ ಹೇಳಿ?

ನೀಲಿ ಮೋಡದ ತುಂಡುಗಳು ಆಕಾಶದಲೆಲ್ಲಾ ಹರಡಿ ಕುದುರೆಮುಖ ತಪ್ಪಲು ಎಂದಿಗಿಂತಲೂ ಮಾದಕವಾಗಿ ಕಾಣುತ್ತಿರಬೇಕು, ಕುಂಕುಮ ಬಣ್ಣದಂತಹ ಕೆಲವೊಂದು ಹಕ್ಕಿಗಳು ಆ ಬೆಳ್ಳಂಬೆಳಗ್ಗೆ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳ ಮೇಲೆ ಆರಾಮಾಗಿ ತೇಲುತ್ತಿರಬೇಕು, ಜಿಗ್ಗೆಂದು ಬೇಸಿಗೆಯ ಬಿಸಿಲೇರುತ್ತಿದ್ದರೂ ಬಿಸಿಲಿಗೆ ಬಾಡದ ಜಲಧಾರೆಗಳ ಸದ್ದು ತಣ್ಣಗೆ ಕೇಳಿಸುತ್ತಿರಬೇಕು, ಮರದಲ್ಲೆಲ್ಲಾ ಕೆಂಪಗೇ ಹೊಳೆಯುವ ಗೇರುಹಣ್ಣೋ, ಕಾಡು ಸಂಪಿಗೆ ಹಣ್ಣೋ ಕಾಣಬೇಕು, ಅದರ ಹಿನ್ನೆಲೆಯಲ್ಲಿ ಕುದುರೆಮುಖ ಪರ್ವತ ಶ್ರೇಣಿ ಇನ್ನಷ್ಟು ವಿಸ್ತಾರವಾಗಿ ಕಂಡು, ಬಿಸಿಲಿಗೆ ಹೊಳೆವ ಬೆಟ್ಟಗಳಿಗೆ ಹಚ್ಚೆ ಹಾಕಿದಂತಹ ಆ ತಿಳಿ ಹಸುರಿನತ್ತ ಒಮ್ಮೆ ಹೋಗಿಬಿಡಬೇಕು, ಬೇರೇನೂ ಬೇಡ ಅನ್ನಿಸಿಬಿಡುವ ಆ ಕ್ಷಣವಿದೆಯಲ್ವಾ? ಅದು  ಈ ದಾರಿಯಲ್ಲಿ ನಿಜವಾಗಿಯೂ ಸಿಗುವ ಅನುಪಮ ಪುಳಕಗಳಲ್ಲೊಂದು.

ಏ.೨೧ ರ ಶನಿವಾರದ ಬೆಳಗು ಯಾವಾಗ ಬರುತ್ತದೆಂದು ನಾವೆಲ್ಲ ಕಾತರದಿಂದ ಕಾಯುತ್ತಿದ್ದೆವು. ಕಾಡಿನ ಬಗ್ಗೆ ಪ್ರೀತಿ ಇರುವವರು, ಹಸಿರಿನಲ್ಲಿ ಇನ್ನಷ್ಟು ಧ್ಯಾನಸ್ಥರಾಗುವ ಆಸೆ ಇರುವವರಿಗೆ ಆ ದಿನ ಮಾತ್ರ ಗಂಗಾ ಮೂಲಕ್ಕೆ ಹೋಗುವ ಅವಕಾಶವಿದೆಯೆಂದೂ, ನಾಗತೀರ್ಥದ ಬಳಿ ನಾಗನಿಗೆ ವರ್ಷಂಪ್ರತೀ ಪೂಜೆ ಆ ದಿನ ಸರಳವಾಗಿ ನಡೆಯುದೆಂದೂ, ಗಂಗಾಮೂಲದ ಆ ವಿಹಂಗಮ ತಾಣವನ್ನು ಆ ದಿನ ನೋಡುವುದೇ ದೊಡ್ಡ ಖುಷಿ ಎಂದೂ ರಾಧಾಕೃಷ್ಣ ಜೋಶಿಯವರು ಮೂರು ತಿಂಗಳ ಮೊದಲೇ ನಮ್ಮಲ್ಲಿ ಬೆರಗು ಹುಟ್ಟಿಸಿದ್ದರು. ಆ ದಿನ ಊರ ಹಿರಿಯರೆಲ್ಲ ನಾಗತೀರ್ಥ ಅನ್ನೋ ನಾಗನ ಸನ್ನಿಧಿಯಲ್ಲಿ ಸೇರುತ್ತಾರೆ, ಸಂಭ್ರಮದಿಂದ ಪೂಜೆ ಮಾಡುತ್ತಾರೆ. ಮಧ್ಯಾಹ್ನ ಒಳ್ಳೆಯ ಊಟವೂ ಇರುತ್ತದೆ ನೀವು ಬರಲೇಬೇಕು ಎಂದಿದ್ದನ್ನು ಆಗಾಗ ನೆನಪು ಮಾಡಿಕೊಳ್ಳುತ್ತ, ಏ.೨೧ ಕ್ಕೆ ಯಾವ ಭಯಾನಕ ಮಳೆಯೇ ಬರಲಿ ನಾವು ಮಾತ್ರ ಹೋಗುವುದೇ ಎಂದು ಗಂಗಾಮೂಲ ನೋಡಲು ಕಾತರಿಸುತ್ತಲೇ ಇದ್ದೆವು. ಏ.೨೦ ರ ರಾತ್ರಿ, ನಾಳೆ ಕಾಡಲ್ಲಿ ಕರಗಿಹೋಗಲಿದ್ದೇನೆ. ತುಂಗೆ-ಭದ್ರೆಯ ಉಗಮ ಸ್ಥಾನ ಹೇಗಿರಬಹುದೋ ಎಂದು ಕಲ್ಪಿಸುತ್ತ ನಿದ್ದೆ ಹೋಗಿದ್ದೆ.

ನೀಲಿ ಮೋಡದ ತುಂಡುಗಳು ಆಕಾಶದಲೆಲ್ಲಾ ಹರಡಿ ಕುದುರೆಮುಖ ತಪ್ಪಲು ಎಂದಿಗಿಂತಲೂ ಮಾದಕವಾಗಿ ಕಾಣುತ್ತಿರಬೇಕು, ಕುಂಕುಮ ಬಣ್ಣದಂತಹ ಕೆಲವೊಂದು ಹಕ್ಕಿಗಳು ಆ ಬೆಳ್ಳಂಬೆಳಗ್ಗೆ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳ ಮೇಲೆ ಆರಾಮಾಗಿ ತೇಲುತ್ತಿರಬೇಕು, ಜಿಗ್ಗೆಂದು ಬೇಸಿಗೆಯ ಬಿಸಿಲೇರುತ್ತಿದ್ದರೂ ಬಿಸಿಲಿಗೆ ಬಾಡದ ಜಲಧಾರೆಗಳ ಸದ್ದು ತಣ್ಣಗೆ ಕೇಳಿಸುತ್ತಿರಬೇಕು, ಮರದಲ್ಲೆಲ್ಲಾ ಕೆಂಪಗೇ ಹೊಳೆಯುವ ಗೇರುಹಣ್ಣೋ, ಕಾಡು ಸಂಪಿಗೆ ಹಣ್ಣೋ ಕಾಣಬೇಕು, ಅದರ ಹಿನ್ನೆಲೆಯಲ್ಲಿ ಕುದುರೆಮುಖ ಪರ್ವತ ಶ್ರೇಣಿ ಇನ್ನಷ್ಟು ವಿಸ್ತಾರವಾಗಿ ಕಂಡು, ಬಿಸಿಲಿಗೆ ಹೊಳೆವ ಬೆಟ್ಟಗಳಿಗೆ ಹಚ್ಚೆ ಹಾಕಿದಂತಹ ಆ ತಿಳಿ ಹಸುರಿನತ್ತ ಒಮ್ಮೆ ಹೋಗಿಬಿಡಬೇಕು.

ಕಾಡು ಮಾತಾಡುವಂತೆ ಬೆಳಗಾಯಿತು. ನಾವು ಪರವಶರಾಗುತ್ತ ಬೈಕೇರಿ ಮಾಳ ಕಾಡ ದಾರಿ ಹಿಡಿದೆವು. ಆಗ ತಾನೇ ಬೆಳಗು ಹರಿದು ಹಸುರೆಲ್ಲ ಮಿಂಚುತ್ತಿದ್ದ ಹೊತ್ತು, ಘಟ್ಟದತ್ತ ಹೋಗುವ ದಾರಿ ಸ್ತಬ್ಧವಾಗಿತ್ತು. ದಾರಿಯಲ್ಲಿ ಬಿಮ್ಮನೇ ನಿಂತಿದ್ದ ಕಾಡು ಸಂಪಿಗೆ ಹಣ್ಣಿನ ಮರಗಳಲ್ಲಿ ಸೂರಕ್ಕಿಗಳು ಕೂತು ಫಲಾಹಾರ ಮಾಡುತ್ತಿದ್ದವು. ರಸ್ತೆ ಪಕ್ಕ ಇರುವ ಕಾಡು ಮಾವಿನ ಮರದ ಕೆಂಬಣ್ಣದ ಮಾವು ದಾರಿಯಲ್ಲೆಲ್ಲಾ ಚೆಲ್ಲಿ ಅದರ ರಸದ ಪರಿಮಳ ಸೋಕಿ ಮೂಗು, ಬಾಯಿ ಆಹಾ ಎನ್ನುತ್ತಿತ್ತು.

ಮಾಳದ ಚೆಕ್ ಪೋಸ್ಟಿನತ್ತ ಎಂದಿನ ಗದ್ದಲವಿರಲಿಲ್ಲ, ಅಲ್ಲೇ ರಾಧಾಕೃಷ್ಣ ಜೋಶಿಯವರು ಬೈಕ್ ನಲ್ಲಿ ನಮಗಾಗಿ ಕಾಯುತ್ತಾ ನಿಂತಿದ್ದರು. ಥ್ರಿಬಲ್ ರೈಡ್ ಕಾನೂನುಬಾಹಿರ ಎಂದು ಗೊತ್ತಿದ್ದರೂ, ಕಾರ್ಕಳದ ಕನ್ನಡ ಶಾಲೆಯ ಪುಟ್ಟ ಹುಡುಗನೂ ಕಾಡು ಸುತ್ತುವ ಉಮೇದಿನಿಂದ ನಮ್ಮ ಜೊತೆ ಸೇರುತ್ತೇನೆ ಎಂದಿದ್ದರಿಂದ ಅವನನ್ನು ಮಧ್ಯ ಕೂರಿಸಿದ್ದೆವು. ಯಾರಾದರೂ ನೋಡಿದರೂ ಅವನು ಪುಟ್ಟ ಹುಡುಗನೆಂದೂ ಭಾವಿಸಿ ನಮ್ಮನ್ನು ಮನ್ನಿಸುತ್ತಾರೆಂದೂ, ಪೊಲೀಸಣ್ಣ ಸಿಕ್ಕರೂ ಏನೂ ಹೇಳಲಿಕ್ಕಿಲ್ಲವೆಂದು ನಂಬುತ್ತ ಮೂರು ಜನ ಒಂದೇ ಸ್ಕೂಟರೇರಿ ಮಾಳ ಕಳೆದು ಕುದುರೆಮುಖದ ದಾರಿ ಹಿಡಿದೆವು.

(ಆರ್.ಕೆ. ಜೋಷಿ)

ನಮ್ಮ ಹಿಂದೆಯೇ ಬನ್ನಿರೆಂದು ರಾಧಾಕೃಷ್ಣರು ತಮ್ಮ ಹಳೆ ಬೈಕೇರುತ್ತ ಮುಂದೆ ಸಾಗಿದರು. ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ. ಕುದುರೆಮುಖದ ರಮಣೀಯ ಗಿರಿಶೃಂಗಗಳಿಗೆ ಬಿಸಿಲು ಬಿದ್ದು ಕಾಲೇಜು ಹುಡುಗಿಯೊಬ್ಬಳ ಹೊಚ್ಚ ಹೊಸ ಮೂಗುತಿ ಹೊಳೆದಂತೆ ಕಾಣುತ್ತದೆ. ಈ ಎಲ್ಲಾ ಸನ್ನಿವೇಶಗಳನ್ನು ಸುಖಿಸುತ್ತಾ, ನಮ್ಮ ದಾರಿ ಸಾಗುತ್ತಿತ್ತು. ಅಲ್ಲಲ್ಲಿ ಆಗಾಗ ಬೈಕ್ ನಿಲ್ಲಿಸಿ, ಕುದುರೆಮುಖದ ಮೌನವನ್ನು, ಪರಿಮಳವನ್ನೂ ಆಸ್ವಾದಿಸುತ್ತಾ ನಿಂತೆವು. ಅಪಾರ ಕೆಂಚಳಿಲುಗಳ ತಾಣವಾದ ಈ ಪಶ್ಚಿಮಘಟ್ಟದ ಕಾಡು ಮರಗಳಿಂದ ಹೈ ಜಂಪ್ ಮಾಡುತ್ತಿರುವ ಕೆಂಚಳಿಲು ನಮ್ಮನ್ನೊಮ್ಮೆ ನೋಡುತ್ತಾ ನಾಚಿಕೊಂಡು ಕಾಡಿನ ಹಸಿರಿನಲ್ಲಿ ಲೀನವಾಯಿತು. ಮತ್ಯಾವುದೋ ಹಕ್ಕಿ ತನ್ನ ಅತ್ಯಪರೂಪದ ಮೈ ಬಣ್ಣವನ್ನು ತೋರಿಸುವ ಮೊದಲೇ ಅಲ್ಲಿಂದ ಪರಾರಿಯಾಯಿತು. ಒಮ್ಮೆ ಬೈಕ್ ನಿಲ್ಲಿಸಿದಾಗ ಯಾವ ಆಧುನಿಕ ಪ್ರಪಂಚದ ಹಂಗಿಲ್ಲದೇ ಹೊಚ್ಚ ಹೊಸತು ಮೌನವೇ ಮೈಯಲ್ಲೆಲ್ಲಾ ನೆರೆದು ಅಗಾಧ ಸಂಭ್ರಮವಾಗುತ್ತಿತ್ತು. ಈ ಮೌನವೇ ನಮಗೆ ಎಲ್ಲೂ ಸಿಗದಿದ್ದ ರೋಮಾಂಚನವನ್ನು, ಸಾವಿರ ಶಬ್ಧಗಳಲ್ಲೂ ಸಿಗಲಾರದ ಪುಲಕವನ್ನು ಕೊಡುತ್ತಿತ್ತು. ಎಷ್ಟೋ ದೂರ ಕಳೆದ ಮೇಲೆ ಮಂದವಾಗಿ ಸಾಗುತ್ತಿದ್ದ ಜೋಶಿಯವರ ಬೈಕಿನ ಸದ್ದು ಹಗುರನೇ ನಿಂತು, ಬೆಟ್ಟದ ಬುಡದ ಕೆಳಗಿದ್ದ ನಾಗತೀರ್ಥದ ಬಳಿ ತಲುಪಿದಾಗ ಎದೆಗೆ ಮತ್ತೊಂದಿಷ್ಟು ಮೌನ ಬಿದ್ದಿತ್ತು. ಅಲ್ಲಿ  ದೇವರಿಗೆ ಕೈ ಮುಗಿದು ಮತ್ತೆ ಬೈಕೇರಿ ತಿರುವು ಮುರುವು ದಾರಿಯನ್ನು ಹಾಯುತ್ತ ಗಂಗಾಮೂಲಕ್ಕೆ ಸಾಗುವ ದಾರಿಯತ್ತ ಬೈಕ್ ನಿಲ್ಲಿಸಿ ಕಾಡಿನ ಸೆರಗನ್ನೇರಿದೆವು.

ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ. ಕುದುರೆಮುಖದ ರಮಣೀಯ ಗಿರಿಶೃಂಗಗಳಿಗೆ ಬಿಸಿಲು ಬಿದ್ದು ಕಾಲೇಜು ಹುಡುಗಿಯೊಬ್ಬಳ ಹೊಚ್ಚ ಹೊಸ ಮೂಗುತಿ ಹೊಳೆದಂತೆ ಕಾಣುತ್ತದೆ. ಈ ಎಲ್ಲಾ ಸನ್ನಿವೇಶಗಳನ್ನು ಸುಖಿಸುತ್ತಾ, ನಮ್ಮ ದಾರಿ ಸಾಗುತ್ತಿತ್ತು. ಅಲ್ಲಲ್ಲಿ ಆಗಾಗ ಬೈಕ್ ನಿಲ್ಲಿಸಿ, ಕುದುರೆಮುಖದ ಮೌನವನ್ನು, ಪರಿಮಳವನ್ನೂ ಆಸ್ವಾದಿಸುತ್ತಾ ನಿಂತೆವು.

ಸುತ್ತಲೂ ಅರಣ್ಯದ ಗವ್ವೆನ್ನುವ ಮೌನ, ಆ ಮೌನದಲ್ಲಿ ಜಾರುತ್ತಿರುವ ನಮ್ಮ ಅಷ್ಟೂ ಕಾಲುಗಳ ತಣ್ಣಗಿನ ಸಪ್ಪಳ, ಬೀಸುಗಾಳಿಯಲ್ಲಿ ನುಣ್ಣಗೇ ಹರಿದಂತಿರುವ ಹುಲ್ಲುಹಾಸಿನ ದಾರಿಯಲ್ಲಿ ನಡೆಸುತ್ತ ಜೋಶಿಯವರು-

“ನೋಡಿ, ಈ ದಾರಿಯಲ್ಲೆಲ್ಲಾ ಈ ಮಿನುಗುವ ಕಲ್ಲುಗಳು ಬಿದ್ದಿವೆ. ಇದು ಬರೀ ಕಲ್ಲಲ್ಲ, ಎಷ್ಟೋ ವರ್ಷಗಳದ ಬಳಿಕ ಈ ಕಲ್ಲು ಚಿನ್ನವಾಗುತ್ತದಂತೆ. ಚಿನ್ನದ ಅಂಶವೇ ಇರುವ ಕಲ್ಲಿದು ಎಂದು ಕಲ್ಲೊಂದನ್ನು ಹಿಡಿದು ತೋರಿಸಿದರು. ಆ ಕಲ್ಲು, ಚಿನ್ನದ ನುಣುಪು ಬಣ್ಣದಿಂದಲೇ ಹೊಳೆಯುತ್ತಿತ್ತು. ದೂರ ಬೆಟ್ಟದ ಮೇಲೆ ತೇಲುವ ಮೋಡಗಳ ಜೊತೆ ಗಾಳಿ ಯಾರೋ ಸುಂದರಿಯೊಬ್ಬಳು ವೀಣೆ ಮೀಟಿದಂತೆ ಹಾಡುತ್ತಿತ್ತು. ದಟ್ಟ ಹಸುರಾಗಿದ್ದ ಹುಲ್ಲೇ ತುಂಬಿದ್ದ ದಾರಿಯ ಬೆಟ್ಟವೇರುತ್ತ, ಏರಿದ್ದಷ್ಟೇ ಆಳ ಇಳಿಯುತ್ತ ಹೋದಾಗ ದೂರದಲ್ಲಿ ಕತ್ತಲನ್ನೇ ತಿನ್ನುತ್ತ ಕೂತ ಕಾಡಿನ ಜಾಡೊಂದು ಕಾಣಿಸಿತು. ಆ ಜಾಡಿನೊಳಗೆ ನುಸುಳಿದ್ದೇ, ಅಷ್ಟೊತ್ತು ಹೊಳೆಯುತ್ತಿದ್ದ ಬಿಸಿಲೆಲ್ಲಾ ಆವಿಯಾಗಿ  ಘೋರ ಕತ್ತಲು ಕವಿದಿತ್ತು.

“ಇಲ್ಲೇ ನೋಡಿ, ತುಂಗೆ-ಭದ್ರೆಯರು ಹುಟ್ಟೋದು, ಭದ್ರಾ ನದಿಯು ಹುಟ್ಟುವ ಸ್ಥಳಕ್ಕೆ ವರಾಹ ತೀರ್ಥವೆಂದೂ, ತುಂಗೆ ಹುಟ್ಟುವ ಸ್ಥಳಕ್ಕೆ ನಾಗತೀರ್ಥ ಎಂದೂ ಕರೆಯುತ್ತಾರೆ. ಈ ಗಂಗಾಮೂಲದ ಗುಹೆಯೊಳಗೆ ತೀರ್ಥವೊಂದು ತೊಟ್ಟಿಕ್ಕುತ್ತದೆ; ಅದು ಅತ್ಯಂತ ಪವಿತ್ರ. ಈ ಕಾಡಿನಲ್ಲೇ  ಉಗಮಗೊಂಡ ತುಂಗೆಯು ಕಿರುಬೆಟ್ಟದ ಕಿಬ್ಬಿನಿಂದ ಸಹ್ಯಾದ್ರಿಯ ಊರಾದ ಶೃಂಗೇರಿಯತ್ತ ಸಾಗಿ ಸೀದಾ ಮಲೆನಾಡಿಗೆ ಹರಿಯುತ್ತಾಳೆ. ಭದ್ರೆಯು ಪೂರ್ವ ದಿಕ್ಕಿಗೆ ಹರಿದು ಹೊರನಾಡಿನತ್ತ ಸಾಗುತ್ತಾಳೆ. ಹೀಗೆ ಬೇರೇ ಬೇರೆ ದಿಕ್ಕಿಯಲ್ಲಿ ಹರಿಯುವ ಈ ಅಕ್ಕ-ತಂಗಿಯರು ಜೀವನದಿಯಾಗಿ ಶಿವಮೊಗ್ಗದ ಕೂಡಲಿ ಎಂಬಲ್ಲಿ ತುಂಗಭದ್ರೆಯಾಗಿ ಸಂಗಮಿಸಿ, ಉತ್ತರ ಕರ್ನಾಟಕ ಸೇರುತ್ತಾರೆ. ಅಲ್ಲಿಂದ ಹಂಪಿ, ಮಂತ್ರಾಲಯ, ಆಂಧ್ರಪ್ರದೇಶದ ಕೃಷ್ಣ ನದಿಯನ್ನು ಕೂಡಿ, ಸೀದಾ ಬಂಗಾಳಕೊಲ್ಲಿಗೆ ಜಾರುತ್ತಾರೆ. ಎಂದು ಜೋಶಿಯವರು ನದಿಯ ಕತೆ ಶುರುಮಾಡಿದಾಗ ತುಂಗ ಭದ್ರೆಯರ ಜುಲುಕಿನಲ್ಲಿ ಹಾಯಾಗಿ ತೇಲಿದಂತೆನ್ನಿಸಿತು. ನದಿಯು ಹುಟ್ಟುವ, ಬೆಳೆಯುವ, ಸಾಗುವ, ಸೇರುವ ಪಯಣ ನೆನೆದಾಗೆಲ್ಲ ಮೈ ಕಂಪಿಸಿತು,ರೋಮಾಂಚನವಾಯ್ತು.

ಅಷ್ಟೊತ್ತಿಗೆ ಅಲ್ಲೇ ದೈತ್ಯದೇಹದ ಭಾರೀ ಬಂಡೆಯೊಂದು ಬಿಮ್ಮಗೇ ನಿಂತಿತ್ತು. ಅದರ ಬುಡದಲ್ಲಿ ಕಗ್ಗತ್ತಲ ಗುಹೆ, ಸುತ್ತಲೂ ಪರ್ವತರಣ್ಯಗಳ ನಿಬಿಡ ಸದ್ದು, ಮೈ ಮೇಲೆ ಇನ್ನೇನು ಬಿತ್ತು.. ಅಯ್ಯೋ ಬೀಳುತ್ತಿದೆ ಅಂತನ್ನಿಸುವ ದೊಡ್ಡ ಕೋಡುಗಲ್ಲೊಂದು ನಿಂತಿತ್ತು. ಗುಹೆಯ ಹತ್ತಿರತ್ತಿರ ಬಂದಾಗ ಗುಹೆಯೊಳಗಿದ್ದ ಬಾವಲಿಗಳೋ, ಜೀರುಂಡೆಗಳೋ ಏಕತಾಳದಲ್ಲಿ ಕೂಗಿ ಅಷ್ಟೇ ಹುಗುರನೇ ಮೌನವಾಗಿಬಿಟ್ಟವು.

“ಇದೇ ನೋಡಿ, ಗಂಗಾಮೂಲ.” ಅಂತ ಒಮ್ಮೇಲೆ  ಜೋಶಿಯವರು ಸಣ್ಣಗೇ ಹೇಳಿದ್ದು ಆ ಗಂಗಾಮೂಲದ ಕತ್ತಲ ಗುಹೆಯಲ್ಲಿ ಪ್ರತಿಧ್ವನಿಸಿ… ಅನುರಣಿಸಿ ಕೊನೆಗೆ ಮೌನವಾದವು.

“ಇದು ಅತ್ಯಂತ ಪ್ರಾಚೀನ ಜಾಗ, ಎಳ್ಳಮವಾಸ್ಯೆಗೆ ಇಲ್ಲಿ ಯಾತ್ರಾರ್ಥಿಗಳು ಬರುತ್ತಾರೆ, ಮೈಸೂರಿನ ಮಹಾರಾಜರು ಇಲ್ಲಿಗೆ ಬಂದು, ಇಲ್ಲಿನ ಪರಿಸರಕ್ಕೆ ಮಾರುಹೋಗಿದ್ದರಂತೆ” ಎಂದರು ಜೋಶಿಯವರು.  ಗಟ್ಟಿಯಾಗಿ ಮಾತಾಡಿದರೆ ಕಾಡಿನ ಮೌನ ಹಾಳಾಗುತ್ತದೆಂದು ಹಗುರನೇ ಮಾತು ಮುಂದುವರಿಸಿದರು.


ಈ ಕಾಡಿನಲ್ಲೇ  ಉಗಮಗೊಂಡ ತುಂಗೆಯು ಕಿರುಬೆಟ್ಟದ ಕಿಬ್ಬಿನಿಂದ ಸಹ್ಯಾದ್ರಿಯ ಊರಾದ ಶೃಂಗೇರಿಯತ್ತ ಸಾಗಿ ಸೀದಾ ಮಲೆನಾಡಿಗೆ ಹರಿಯುತ್ತಾಳೆ. ಭದ್ರೆಯು ಪೂರ್ವ ದಿಕ್ಕಿಗೆ ಹರಿದು ಹೊರನಾಡಿನತ್ತ ಸಾಗುತ್ತಾಳೆ. ಹೀಗೆ ಬೇರೇ ಬೇರೆ ದಿಕ್ಕಿಯಲ್ಲಿ ಹರಿಯುವ ಈ ಅಕ್ಕ-ತಂಗಿಯರು ಜೀವನದಿಯಾಗಿ ಶಿವಮೊಗ್ಗದ ಕೂಡಲಿ ಎಂಬಲ್ಲಿ ತುಂಗಭದ್ರೆಯಾಗಿ ಸಂಗಮಿಸಿ, ಉತ್ತರ ಕರ್ನಾಟಕ ಸೇರುತ್ತಾರೆ. ಅಲ್ಲಿಂದ ಹಂಪಿ, ಮಂತ್ರಾಲಯ, ಆಂಧ್ರಪ್ರದೇಶದ ಕೃಷ್ಣ ನದಿಯನ್ನು ಕೂಡಿ, ಸೀದಾ ಬಂಗಾಳಕೊಲ್ಲಿಗೆ ಜಾರುತ್ತಾರೆ. ಎಂದು ಜೋಶಿಯವರು ನದಿಯ ಕತೆ ಶುರುಮಾಡಿದಾಗ ತುಂಗ ಭದ್ರೆಯರ ಜುಲುಕಿನಲ್ಲಿ ಹಾಯಾಗಿ ತೇಲಿದಂತೆನ್ನಿಸಿತು.

“೨೦೦ ವರ್ಷಗಳ ಹಿಂದೆ ಸಂಸ್ಕೃತ ವೇದಶಾಸ್ತ್ರಗಳಲ್ಲಿ ಪಾರಂಗತನಾದ ಅನಂತಶಾಸ್ತ್ರಿ ಡೋಂಗ್ರೆ, ಇಲ್ಲೊಂದು ಗುರುಕುಲವನ್ನು ನಿರ್ಮಿಸಬೇಕೆಂದು ಕನಸುಕಂಡಿದ್ದ, ಆ ಮೇಲೆ ಅಲ್ಲೇ ಗುಹೆಯ ಬಳಿಯೇ ಬಿಡಾರ ನಿರ್ಮಿಸಿ, ಬ್ರಾಹ್ಮಣ ವಟುಗಳಿಗೆ ಸಂಸ್ಕೃತ ಹೇಳಿಕೊಡುತ್ತಿದ್ದನಂತೆ, ಬಳಿಕ ಇಲ್ಲೇ ದೇವಸ್ಥಾನವೊಂದನ್ನು ನಿರ್ಮಿಸುವ ಅವನ ಕನಸು ಸ್ವಲ್ಪ ನನಸಾದರೂ ಕೊನೆಗೆ ಅದರ ಕೆಲಸ ಅರ್ಧದಲ್ಲಿಯೇ ನಿಂತಿತು, ನೋಡಿ ಅವನು ದೇವಸ್ಥಾನಕ್ಕೆ ಬಳಸಿದ ಹಳೆಯ ಕಲ್ಲುಗಳು ಇಲ್ಲೇ ಇವೆ ಎಂದು ಚಿತ್ತಾಕರ್ಷಕವಾಗಿದ್ದ ಕಲ್ಲುಗಳನ್ನು ತೋರಿಸಿದರು ಜೋಶಿಯವರು.ಆ ಪಂಡಿತನ ಪುತ್ರಿಯೇ ಭಾರತದ ಪ್ರಖ್ಯಾತ ಮಹಿಳೆ ಪಂಡಿತಾ ರಮಾಬಾಯಿ. ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದವಳು ರಮಾಬಾಯಿ’’ ಎಂದಾಗ, ನೋಡೇ ಇರದ ಆ ಮಹಾನುಭಾವರ ಚಿತ್ರವೊಂದು ಆ ಕಾಡಿನ ನಡುವೆಯೇ ಹ್ಯಾಗೋ ಬಂದಂತಾಗಿ ರೋಚಕವೆನ್ನಿಸಿತು.

ನಾನು ಇನ್ನೇನೋ ಕೇಳಬೇಕು ಎನ್ನುವಷ್ಟರಲ್ಲಿ ಜೋಶಿಯವರು, “ಶೂ.. ಮಾತಾಡಬೇಡಿ, ಗುಹೆಯ ಬಂಡೆಗೆ ಕಿವಿಕೊಡಿ ಒಳಗೆ ತೀರ್ಥ ತೊಟ್ಟಿಕ್ಕುತ್ತಿರುವುದು, ತುಂಗೆ-ಭದ್ರೆಯರು ಪಿಸುಗುಡುವುದು ಕೇಳಿಸುತ್ತದೆ ಎಂದು ಬಂಡೆಗೆ ಕಿವಿಗೊಟ್ಟು ನೀರವರಾದರು. ನಾವೂ ಬಂಡೆಗೆ ಹಗುರನೇ ಕಿವಿಯಾನಿಸಿದೆವು. ಆ ದೈತ್ಯ ಬಂಡೆಗಳ ಸಂದಿನಿಂದ ತುಂಗ-ಭದ್ರೆ ತೊಟ್ಟಿಕ್ಕುತ್ತಿರುವ ಸದ್ದು ಸಣ್ಣಗೇ ಕೇಳತೊಡಗಿತು. ಆ ಹನಿಗಳು ಗುಟ್ಟುಗುಟ್ಟಾಗಿ ಮಾತಾಡುತ್ತಿರುವುದು ನಮಗಷ್ಟೇ ಕೇಳುತ್ತಿರುವಂತೆ ಅನ್ನಿಸಿ ಭಾವಪರವಶರಾದಾಗ ಐಸಿಹಾಸಿಕವಾದ ಯಾವುದೋ ತಣ್ಣನೆಯ ಗಾಳಿಯೊಂದು ಸೋಕಿದಂತಾಯಿತು. ಅಲ್ಲೇ ಸ್ವಲ್ಪ ಹೊತ್ತು ನಿಂತು ವಿಶ್ರಮಿಸಿ ಮತ್ತೆ ಕಾಡಲ್ಲಿ ಕರಗಿ ಹೋಗಲು ದಾರಿ ಸಾಗಿದೆವು. ಅಷ್ಟೊತ್ತಿಗೆ ಸೂರ್ಯ ಕುದುರೆಮುಖದ ನೆತ್ತಿಗೆ ಬಂದಿದ್ದ. ಹೊಟ್ಟೆ ಹಸಿದರೂ ಅಲ್ಲಿನ ತಣ್ಣಗಿನ ಹವೆ, ಹಸಿರ ಪರಿಮಳ ಎದೆ ತುಂಬಿದಂತಾಗಿ ಹಸಿವು ಮರೆತೇ ಹೋಯಿತು.

“ತುಂಗೆ ಮತ್ತು ಭದ್ರೆಯ ಬಳಕು ಇನ್ನೂ ಚೆಂದವಾಗಿ ಕಾಣಬೇಕೆಂದರೆ ವರಾಹ ತೀರ್ಥ, ನಾಗತೀರ್ಥದತ್ತ ಹೋಗಬೇಕು” ಎಂದು ಜೋಶಿಯವರು ಇನ್ನೂ ದಟ್ಟವಾಗಿ ಹಸಿರು ತುಂಬಿದ ವರಾಹ ತೀರ್ಥ, ನಾಗತೀರ್ಥದತ್ತ ನಡೆಸಿದರು. ಅದು ನೀಳವಾದ, ಆಳವಾದ ಕಾಡು, ಚಿಕ್ಕಂದಿನಲ್ಲಿ ಯಾವುದೋ ಕತೆಯಲ್ಲಿ ಕಂಡ ಕಾಡಂತಿತ್ತು. ಬಂಡೆಗಳ ನಡುವೆ ಉದ್ದಕ್ಕೆ ಹರಿಯುತ್ತಿರುವ ಭದ್ರೆ, ಅಲ್ಲಿ ನಿಂತು ನೋಡಿದರೆ ಇಡೀ ಕುದರೆಮುಖ ಗಿರಿತಪ್ಪಲು ಒಂದು ನಿಗೂಢ ಕನಸಿನಂತೆ ಕಾಣುತ್ತಿತ್ತು. ಆ ಕಾಡಲ್ಲಿ ಎಲ್ಲಿ ದಾರಿ ತಪ್ಪಿ ಹೋದರೂ ಭದ್ರೆ ನಮ್ಮ ಜೀವಕ್ಕೆ ಏನೂ ಆಗಲು ಬಿಡದೇ ಭದ್ರವಾಗಿ ನಮ್ಮನ್ನು ಕೈಹಿಡಿದು ದಾರಿ ತೋರಿಸುತ್ತಿದ್ದಳು.

(ಚಿತ್ರಗಳು: ಪ್ರಸಾದ್ ಶೆಣೈ)

ನಾನು ಇನ್ನೇನೋ ಕೇಳಬೇಕು ಎನ್ನುವಷ್ಟರಲ್ಲಿ ಜೋಶಿಯವರು, “ಶೂ.. ಮಾತಾಡಬೇಡಿ, ಗುಹೆಯ ಬಂಡೆಗೆ ಕಿವಿಕೊಡಿ ಒಳಗೆ ತೀರ್ಥ ತೊಟ್ಟಿಕ್ಕುತ್ತಿರುವುದು, ತುಂಗೆ-ಭದ್ರೆಯರು ಪಿಸುಗುಡುವುದು ಕೇಳಿಸುತ್ತದೆ ಎಂದು ಬಂಡೆಗೆ ಕಿವಿಗೊಟ್ಟು ನೀರವರಾದರು. ನಾವೂ ಬಂಡೆಗೆ ಹಗುರನೇ ಕಿವಿಯಾನಿಸಿದೆವು. ಆ ದೈತ್ಯ ಬಂಡೆಗಳ ಸಂದಿನಿಂದ ತುಂಗ-ಭದ್ರೆ ತೊಟ್ಟಿಕ್ಕುತ್ತಿರುವ ಸದ್ದು ಸಣ್ಣಗೇ ಕೇಳತೊಡಗಿತು. ಆ ಹನಿಗಳು ಗುಟ್ಟುಗುಟ್ಟಾಗಿ ಮಾತಾಡುತ್ತಿರುವುದು ನಮಗಷ್ಟೇ ಕೇಳುತ್ತಿರುವಂತೆ ಅನ್ನಿಸಿ ಭಾವಪರವಶರಾದಾಗ ಐಸಿಹಾಸಿಕವಾದ ಯಾವುದೋ ತಣ್ಣನೆಯ ಗಾಳಿಯೊಂದು ಸೋಕಿದಂತಾಯಿತು. ಅಲ್ಲೇ ಸ್ವಲ್ಪ ಹೊತ್ತು ನಿಂತು ವಿಶ್ರಮಿಸಿ ಮತ್ತೆ ಕಾಡಲ್ಲಿ ಕರಗಿ ಹೋಗಲು ದಾರಿ ಸಾಗಿದೆವು. 

“ಭದ್ರೆಯಲ್ಲಿದ್ದ ವರಹಾ ಮೂರ್ತಿಯೊಂದನ್ನು ಕೆಲವು ವರ್ಷಗಳ ಹಿಂದೆ ಕಳ್ಳನ್ನೊಬ್ಬ ಗೋಣಿ ಚೀಲದಲ್ಲಿ ಯಾರಿಗೂ ಗೊತ್ತಾಗದಂತೆ ಸುತ್ತಿಕೊಂಡು ಕಾರ್ಕಳದತ್ತ ಹೋಗುವ ಬಸ್ಸೊಂದರಲ್ಲಿ ಸಾಗಿಸುತ್ತಿದ್ದನಂತೆ. ಆ ವ್ಯಕ್ತಿಯ ಅನುಮಾನಾಸ್ಪದ ಚಹರೆ ನೋಡಿದ ಯಾರೋ ಊರವರು ಅವನನ್ನು ವಿಚಾರಿಸಿದಾಗ, ಅವನು ಐತಿಹಾಸಿಕ ವರಾಹ ಮೂರ್ತಿ ಕದ್ದಿದ್ದು ಬಯಲಾಯ್ತು. ಬಳಿಕ ಅದನ್ನು ಅಧಿಕಾರಿಗಳು ವಶಪಡಿಸಿಕೊಂಡು ಮೈಸೂರಿನಲ್ಲಿರಿಸಿದ್ದಾರೆ” ಎಂದು ಜೋಶಿಯವರು ಭದ್ರೆಯ ನೀರನ್ನು ಕುಡಿಯುತ್ತ ಕತೆ ಹೇಳಿದರು. ನಾವೂ ಹೊಟ್ಟೆ ತುಂಬಾ ನೀರು ಕುಡಿದೆವು. ಅವರು ಹೇಳಿದ ಕತೆಗಳು ಮನಸ್ಸಲ್ಲಿ ಅದರ ಪಾಡಿಗದು ಬೆಳೆಯುತ್ತಾ, ಹೊಳೆಯುತ್ತಾ ಸಾಗುತ್ತಿದ್ದವು; ಅದೇ ಭದ್ರೆಯ ಹರಿವಿನಂತೆ. ಘೋರಾರಣ್ಯಗಳ ಮೌನದಲ್ಲಿ ಭದ್ರೆಯ ಮಡಿಲಲ್ಲಿದ್ದ ಮೀನುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮಾತಾಡುತ್ತಿರುವಂತೆ ಚಿಮ್ಮುತ್ತಿದ್ದುವು. ಆ ಭದ್ರೆಯ ಬಳುಕು, ಮೀನುಗಳ ಜುಳುಕು, ನೋಡುತ್ತಾ ನೋಡುತ್ತಾ ಸುಮ್ಮನೇ ಮಾತಿಲ್ಲದೇ ಕೂರೋಣವೆನ್ನಿಸಿತು. ಕೊಂಚ ಕೂತು ಮತ್ತೆ ದಾರಿ ಸಾಗಿದ್ದು ನಾಗತೀರ್ಥದತ್ತ. ಅಲ್ಲಿಯೂ ಭದ್ರೆಯಂತೆಯೇ ಹರಿಯುತ್ತಿದ್ದ ಭದ್ರೆಯ ಅಕ್ಕ ತುಂಗೆಯನ್ನು ನೋಡಿದ್ದೇ.. ಗೊತ್ತಾಗದೇ ಬಾಯಲ್ಲಿ.. “ತುಂಗೆಯ ತೆನೆ ಬಳುಕಿನಲ್ಲಿ.. ಸಹ್ಯಾದ್ರಿಯ ಲೋಹದತಿರ ಉತ್ತುಂಗದ ನಿಲುಕಿನಲ್ಲಿ… ನಿತ್ಯ ಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ ನಿತ್ಯೋತ್ಸವ.. ತಾಯೇ ನಿತ್ಯೋತ್ಸವ ಹಾಡು ಹರಿಯಿತು. ಆ ಹಾಡಿನ ಸಾಲಲ್ಲಿದ್ದ ಪ್ರತೀ ಒಂದು ಲೋಕವೂ ವಾಸ್ತವದಲ್ಲೇ ಸಿಕ್ಕಾಗ ಆ ಹಾಡು ಬರೀ ಹಾಡಾಗಿ ಇರುವುದಿಲ್ಲ, ನಮ್ಮ ಮೈ ಮನಸ್ಸೇ ಆಗಿಬಿಡುತ್ತದೆ ಅಲ್ವಾ? ಹಾಗೇ ಆಯಿತು ಈ ತುಂಗೆ ತನ್ನ ಬದುಕು ಶುರುಮಾಡುತ್ತಿರುವ ಈ ಕಾಡನ್ನು ನೋಡುತ್ತಿರುವಾಗ.

ಅಷ್ಟೊತ್ತಿಗೆ ಮಧ್ಯಾಹ್ನವಾಗಿ ತುಂಗೆ ಬಿಸಿಲಿಗೆ ಹೊಳೆಯುತ್ತಿದ್ದಳು. ನಾಗನ ಕಟ್ಟೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಪೂಜೆಗೆ ಒಂದಿಷ್ಟು ಜನ ಸೇರಿದ್ದರು. ಪೂಜೆ ಆಯ್ತು, ದೇವರ ಬಳಿ ಬೇರೇನೂ ಕೇಳಬೇಕು ಅನ್ನಿಸಲಿಲ್ಲ. ಆದರೆ “ಈ ನಿಗೂಢ ಕಾಡು, ಇಲ್ಲಿನ ಹಸಿರು ಇನ್ನೂ ಜಾಸ್ತಿಯಾಗುವಂತೆ ಮಾಡು ಸಾಕು ಕಾಡು ಕಡಿಯುವವರಿಗೆ ಬುದ್ದಿ ಕಲಿಸು” ಅಂತ ಒಳಗೊಳಗೇ ಬೇಡಿಕೊಂಡೆ. ಮಧ್ಯಾಹ್ನದ ಬಿಸಿಬಿಸಿ ಊಟ ಸಿದ್ಧವಾಗಿತ್ತು. ಅಡಿಕೆ ಹಾಳೆ ಮೇಲೆ ಮೊಸರನ್ನ, ಸಿಹಿ ಮಡ್ಡಿ , ಬಿಸಿಬಿಸಿ ಬಾತು, ಪಂಚಕಜ್ಜಾಯ ಕರೆಯುತ್ತಿತ್ತು. ತುಂಗೆಯ ಮಡಿಲಲ್ಲಿರುವ ಬಂಡೆಯೊಂದರ ಮೇಲೆ ಕೂತು ಅವನ್ನೆಲ್ಲಾ ಹೀರುತ್ತಿದ್ದಾಗ ಕಾಡು ಬೆಳಗ್ಗೇ ಹೊಳೆಯುತ್ತಿತ್ತು. ತುಂಗೆ ಸಹ್ಯಾದ್ರಿ ಪರ್ವತಗಳತ್ತ ಭಾರೀ ಬೀಸಿನಿಂದ ಹರಿಯುತ್ತಿದ್ದಳು.

(ಮುಂದುವರಿಯುವುದು)