ಈ ಹುಡುಗರಿಗೆ ಲವ್‌ಲೈಫ್‌, ಸೆಕ್ಸ್‌ಲೈಫ್‌, ಮದುವೆ ಎಲ್ಲವೂ ಒಂದಕ್ಕೊಂದರಿಂದ ಎಕ್ಸ್‌ಕ್ಲೂಸಿವ್ ಎಂದು ಗೊತ್ತಿರಲಾರದ ದಡ್ಡಿ ಆಕೆಯಲ್ಲ. ಆದರೆ, ತನ್ನ ಮನೆಯಲ್ಲಿ ಇದು ಅಪ್ಪ ಅಮ್ಮನ ಜತೆ ಕೂತು ಮಾತಾಡೋ ಡಿನ್ನರ್ ಟೇಬಲ್ ಮಾತುಕತೆಯಾದದ್ದು ಯಾವಾಗ? ಒಂದಾದ ನಂತರ ಒಂದರಂತೆ ಮೂರು ಮಕ್ಕಳನ್ನು ಮಾಡಿಕೊಂಡು ನಂತರ ತಮ್ಮತಮ್ಮ ಕೆಲಸ, ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇವಲ ಒಂದು ದಿನದ ಹಿಂದೆ ಮಾತಾಡಿದ್ದಷ್ಟೇ ಅಲ್ಲ, ಮನೆಗೆ ಬಂದು ಸಹಾಯ ಮಾಡಬೇಕು ಎಂದು ನನ್ನನ್ನು ದುಂಬಾಲುಬಿದ್ದ ಅಪ್ಪಟ ಶ್ರೀಸಂಸಾರಿಯಂತೆ ಕಾಣುವ ವಿನಯ, ಅಲಿಶಾ ಜತೆ ನಿಜವಾಗಿಯೂ ಒಂದು ಬದ್ಧ ಸಂಬಂಧದಲ್ಲಿದ್ದಾನೆಯೇ?
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಆರನೆಯ ಕಂತು ನಿಮ್ಮ ಓದಿಗಾಗಿ

ಮಾರನೆಯ ದಿನ ಸಂಜೆ ಎಲ್ಲರೂ ಅರವಿಂದನ ಗೆಳೆಯ ಸ್ಟುಅರ್ಟ್ ಸ್ವಾಮಿಯ ಮನೆಗೆ ಊಟಕ್ಕೆ ಹೋಗುವ ಕಾರ್ಯಕ್ರಮವಿತ್ತು. (ಸ್ಟುಅರ್ಟ್ ಸ್ವಾಮಿಯ ಮುಂಚಿನ ಹೆಸರು ಶ್ರೀನಿವಾಸ ಸ್ವಾಮಿ. ಆತ ಮೂಲತಃ ಕದಿರೇನಹಳ್ಳಿಯವ. ಬೆಟ್ಟಿ ಎಂಬ ನಾರ್ವೇಜಿಯನ್ ಹುಡುಗಿಯನ್ನು ಮದುವೆಯಾದ ನಂತರ ಹೆಸರನ್ನು ಅಧಿಕೃತವಾಗಿ ಶ್ರೀನಿವಾಸನಿಂದ ಸ್ಟುಅರ್ಟ್ ಆಗಿ ಬದಲಿಸಿಕೊಂಡಿದ್ದ.) ಆಂದಿನ ದಿನ ಸ್ವಾಮಿಯ ಮನೆಯಲ್ಲಿ ಬ್ರೆಸ್ಟ್ ಕ್ಯಾನ್ಸರ್‌ಗೆಂದು ಫಂಡ್ ರೈಸರು, ಸೈಲೆಂಟ್ ಆಕ್ಷನ್ ಎಲ್ಲ ಇತ್ತು. ಆತನ ಹೆಂಡತಿ ಬೆಟ್ಟಿಗೆ ಬ್ರೆಸ್ಟ್ ಕ್ಯಾನ್ಸರ್ ಪ್ರಾಥಮಿಕ ಘಟ್ಟದಲ್ಲಿಯೇ ಪತ್ತೆಯಾಗಿ ಪೂರಾ ವಾಸಿಯಾಗಿ ಇಂದಿಗೆ ಹದಿನೈದು ವರ್ಷಗಳಾಗಿವೆ. ಹಾಗಾಗಿ ಪ್ರತಿವರ್ಷ ಆತ ಥ್ಯಾಂಕ್ಸ್‌ಗಿವಿಂಗ್ ಹಿಂದಿನ ದಿನದಂದು ಮನೆಯಲ್ಲಿ ಒಂದು ಫಂಡ್‌ರೈಸರ್ ಊಟ ಏರ್ಪಾಡು ಮಾಡಿರುತ್ತಾನೆ. ಒಂದು ಊಟಕ್ಕೆ ಇನ್ನೂರ ಐವತ್ತು ಡಾಲರ್‌ಗಳು. ಬೆಟ್ಟಿಯ ಅಪ್ಪ ಮಿನೆಸೊಟದ ವೈಕಿಂಗ್ ಫುಟ್‌ಬಾಲ್ ಟೀಮಿನಲ್ಲಿ ದೊಡ್ಡ ಕುಳ. ಸ್ವಾಮಿಯೂ ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾನೆ. ಹಾಗಾಗಿ ಮಿನೆಸೊಟಾದ ಗವರ್ನರಿಂದ ಹಿಡಿದು ವೈಕಿಂಗ್ ಟೀಮಿನ ಅನೇಕ ಆಟಗಾರರ ತನಕ ಎಲ್ಲ ಖ್ಯಾತನಾಮರೂ ಅಂದು ಬುಧವಾರವಾದರೂ ಬೇಗ ಕೆಲಸ ಮುಗಿಸಿ ಊಟಕ್ಕೆ ಬಂದಿರುತ್ತಾರೆ. ಮೊದಲಿನಿಂದಲೂ ಥ್ಯಾಂಕ್ಸ್‌ಗಿವಿಂಗ್ ಹಿಂದಿನ ದಿನದಂದು ಸ್ವಾಮಿಯ ಮನೆಗೆ ಊಟಕ್ಕೆ ಹೋಗುವುದು ಒಂದು ಸಂಪ್ರದಾಯವಾಗಿ ಹೋಗಿತ್ತು. ಈ ಬಾರಿಯೂ ಮೊದಲೇ ಒಂದೂವರೆ ಸಾವಿರ ಡಾಲರ್‌ಗಳನ್ನು ಕೊಟ್ಟು ಆರು ಟಿಕೇಟುಗಳನ್ನು ಖರೀದಿಸಿದ್ದರಿಂದ ಆರೂ ಜನರೂ ಹೋಗಲೇ ಬೇಕಾಗಿತ್ತು.

ಸುಪ್ರೀತ ವಿಶೂಗೆ ‘ವಿಶೂ, ನಾನ್ಯಾಕೆ ಬರಲಿ. ನೀವು ಇಡೀ ಕುಟುಂಬದವರು ಹೋಗಿ ಬನ್ನಿ. ನಾನು ಡೌನ್‌ಟೌನಿನಲ್ಲಿ ನನ್ನೊಬ್ಬ ಸ್ನೇಹಿತನನ್ನು ಭೇಟಿ ಮಾಡಿ ಬರ್ತೀನಿ’ ಎಂದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದರೂ ವಿಶೂ ‘ನೀನು ಬರಲೇಬೇಕು. ನಾನೊಬ್ಬನೇ ಈ ಪಾರ್ಟಿಗೆ ಹೋಗಕ್ಕೆ ಸಾಧ್ಯವೇ ಇಲ್ಲ.’ ಎಂದು ಬಲವಂತಮಾಡಿ ಕರಕೊಂಡು ಬಂದಿದ್ದ.

ಮಿನಿಯಾಪೊಲಿಸ್‌ನ ಅತಿ ಶ್ರೀಮಂತರ ಪಾರ್ಟಿ ಅದು. ಸ್ಟುಅರ್ಟ್ ಸ್ವಾಮಿಯ ಮನೆಯ ಹಿಂದೆ ದೊಡ್ಡ ಟೆಂಟು ಹಾಕಿದ್ದರು. ಎಲ್ಲ ಕಡೆ ಬಿಳಿ ಬಟ್ಟೆಯಿಂದ ಆವರಿಸಿದ್ದ ಆ ಟೆಂಟಿನಲ್ಲಿ ಓಡಾಡುತ್ತಿದ್ದ ಟಕ್ಸಿಡೋ, ಸೀರೆ, ಬೆನ್ನಿಲ್ಲದ, ತೋಳಿಲ್ಲದ, ವಿವಿಧ ಪೋಷಾಕುಗಳೊಳಗಿನ ಬಿಳಿ, ಕರಿ, ಕಂದು ಮೈಗಳನ್ನು ಹೊರಗಿನ ಚುಮುಚುಮು ಚಳಿಯಿಂದ ಕಾಪಾಡಲು ಪ್ರತಿ ಹತ್ತಡಿಗೊಂದು ದೈತ್ಯಗಾತ್ರದ ಹೀಟರು. ಒಳಗೆ ಸಾಲಾಗಿ ಜೋಡಿಸಿದ ತರಹೇವಾರಿ ಅಡುಗೆಗಳು ಮತ್ತು ಪಾನೀಯಗಳು. ಹಿಂದೆ ಒಂದು ವೇದಿಕೆ, ವೇದಿಕೆಯ ಮೇಲಿನ ಪರದೆಗೆ ಕಟ್ಟಿದ ದೊಡ್ಡ ಗುಲಾಬಿ ಬಣ್ಣದ ರಿಬ್ಬನು. ಟೆಂಟಿನ ಪ್ರತಿ ಕಂಬಗಳಿಗೂ ಕಟ್ಟಿದ ಗುಲಾಬಿ ಟೇಪು, ಬಲೂನುಗಳು. ಒಂದು ಮೂಲೆಯಲ್ಲಿ ಹತ್ತೋ ಹನ್ನೆರಡೋ ಬ್ರಾಗಳಿಗೆ ಡಿಸೈನು ಡಿಸೈನು ಎಂಬ್ರಾಯಿಡರಿ ಮಾಡಿ ಪ್ರದರ್ಶನಕ್ಕೆ, ಹರಾಜಿಗೆ ಇಡಲಾಗಿತ್ತು. ಒಂದೆರಡಕ್ಕಂತೂ ಚಿನ್ನದ ಎಸಳಿನ ಕಸೂತಿ. ಎಲ್ಲವನ್ನೂ ಗಾಜಿನ ಡಬ್ಬದಲ್ಲಿ ಬೀಗ ಹಾಕಿ ಇಡಲಾಗಿತ್ತು. ಅವನ್ನು ಹರಾಜಿಗೇ ಎಂದು ಡಿಸೈನು ಮಾಡಿದ್ದು ವಿಕ್ಟೋರಿಯಾ ಸೀಕ್ರೆಟ್ ಕಂಪೆನಿಯವರಂತೆ. ಮೇಲೆ ಚೊಕ್ಕಾದ ಅಕ್ಷರಗಳಲ್ಲಿ ಬರೆದ ಒಕ್ಕಣೆ ‘ಸಪೋರ್ಟ್ ದ ಸಪೋರ್ಟ್’. ಒಂದೊಂದು ಬ್ರಾಗಳಿಗೂ ಸೂಚಿಸಲಾದ ಬೆಲೆ ಎರಡೂವರೆ ಸಾವಿರದಿಂದ ಇಪ್ಪತ್ತು ಸಾವಿರ ಡಾಲರುಗಳು!

ಒಂದು ಕಡೆಯಿಂದ ಎಲ್ಲ ನೋಡಿಕೊಂಡು ತಮಗೆಂದು ಕಾದಿರಿಸಿದ್ದ ಜಾಗದಲ್ಲಿ ಎಲ್ಲ ಬಂದು ಕೂತುಕೊಂಡರು. ಸುಪ್ರೀತ ‘ವಾವ್. ಬ್ರೆಸ್ಟ್ ಕ್ಯಾನ್ಸರ್ ಇಷ್ಟು ಸೆಕ್ಸಿ ಅಂತ ನನಗೆ ಗೊತ್ತಿರಲಿಲ್ಲ’ ಎಂದ, ನಗುತ್ತಾ. ‘ನಿನಗೆ ಹೇಗೆ ಗೊತ್ತಿರುತ್ತೆ ಹೇಳು’ ಎಂದ, ವಿಶೂ. ವಿನಯನನ್ನು ನೋಡಿ ‘ವಿನಯ್. ಇಲ್ಲಿರೋ ಹೆಂಗಸರನ್ನು ಗಮನಿಸಿದೆಯಾ. ಎಲ್ಲರೂ ಓವರ್ಸೈಝ್‌ ಅನಿಸೋದಿಲ್ವ? ಅದೇನು ಪುಶಪ್ಪೋ, ಸಿಲಿಕಾನೋ ಅಥವಾ ಹಾರ್ಮೋನೋ. ಒಂಥರಾ ಒಂದು ಹಟಕ್ಕೆ ಬಿದ್ದು ಎದ್ದು ನಿಂತಹಾಗೆ ಕಾಣಲ್ವಾ, ಕ್ಯಾನ್ಸರಿಗೂ ನಮ್ಮನ್ನು ಏನೂ ಮಾಡಕ್ಕಾಗಲ್ಲ ಅಂಥ. ಐಮೀನ್ ಟು ಮೇಕ್ ಅ ಸ್ಟೇಟ್‍ಮೆಂಟ್. ಟು ಮೇಕ್ ಅ ಪಾಯಿಂಟ್’ ಅಂದ.

ಅಲಿಶಾ ‘ಅಫ್ ಕೋರ್ಸ್, ದೆ ಆರ್ ಮೇಕಿಂಗ್ ಅ ಸ್ಟೇಟ್‍ಮೆಂಟ್. ಇದು ಬ್ರೆಸ್ಟ್‌ಕ್ಯಾನ್ಸರ್ ಫಂಡ್‌ರೈಸರ್’ ಎಂದಳು, ವಿಶೂನ ನೋಡುತ್ತಾ.

‘ಸಿಟ್ಟು ಮಾಡ್ಕೋಬೇಡ ಅಲಿಶಾ. ದೊಡ್ಡ ಬೂಬುಗಳನ್ನು ತೋರಿಸ್ಕೊಂಡು ಫಂಡ್‌ರೈಸರಿನಲ್ಲಿ ಓಡಾಡೋದು ಸೊಗಸಿಗೋ, ಅರಿವು ಮೂಡಿಸಲಿಕ್ಕೋ? ಗಂಡಸರಿಗೆ ಕ್ಯಾನ್ಸರ್ ಬರೋಲ್ವ. ಅಥವಾ ಹೆಂಗಸರ ಬೇರೆ ಯಾವ ಅಂಗಕ್ಕೂ ಕ್ಯಾನ್ಸರ್ ಬರೋಲ್ವ. ಪ್ರಾಸ್ಟೇಟ್ ಕ್ಯಾನ್ಸರಿನ ಅಥವಾ ನಿಮ್ಮದೇ ಯುಟೆರಿನ್ ಕ್ಯಾನ್ಸರಿನ ಫಂಡ್‌ರೈಸರುಗಳು ಯಾಕೆ ಇಷ್ಟು ಗ್ಲಾಮರಸ್ ಆಗಿರೊಲ್ಲ.’

‘ಯಾಕಿರೊಲ್ಲ. ಪ್ರಾಸ್ಟೇಟ್ ಕ್ಯಾನ್ಸರಿನ ಬಗ್ಗೆ ಜನಕ್ಕೆ ಅರಿವು ಮೂಡಿಸಬೇಕೆಂದು ನವೆಂಬರ್ ತಿಂಗಳಿಡೀ ಮೀಸೆ ಬಿಟ್ಕೊಂಡು ಓಡಾಡ್ತೀರಾ’ ಎಂದಳು.
ಸುಪ್ರೀತ ‘ಮೀಸೆ, ದಟ್ ಈಸ್ ಸೆಕ್ಸಿ’ ಎಂದು ನಕ್ಕ.

ವಿಶೂ ‘ಐ ಹೇಟ್ ಮೀಸೆ. ನೀನು ಮೀಸೆ ಬಿಟ್ಟರೆ ಅದೊಂದು ಕಾರಣ ಸಾಕು, ನಿನ್ನನ್ನ ಮನೆ ಬಿಟ್ಟು ಓಡಿಸೋಕೆ’ ಎಂದ, ಸುಪ್ರೀತನನ್ನು ತುಂಟಗಣ್ಣುಗಳಿಂದ ನೋಡುತ್ತಾ.

ಅಲಿಶಾ ‘ನಿನ್ನಣ್ಣನಿಗೂ ನಾನು ಯಾವತ್ತೋ ಈ ಮಾತು ಹೇಳಿದ್ದೀನಿ’ ಎಂದಳು.

ನಶೆ ಏರುತ್ತಿದ್ದಂತೆ ಎಲ್ಲರ ಮಾತೂ ಸ್ವಲ್ಪ ಸಡಿಲವಾಗುತ್ತಿತ್ತು. ಸುಕನ್ಯಾಗೆ ಅನಿಸುತ್ತಿತ್ತು. ಇದೇನು ಹುಡುಗರು, ಇದೇ ತರ ಮಾತಾಡ್ತಾರಾ, ದೊಡ್ಡವರು ನಾವಿದೀವಿ ಅನ್ನೋ ಪರಿವೆ ಬೇಡವಾ? ಪಕ್ಕದಲ್ಲಿದ್ದ ಅರವಿಂದನನ್ನು ನೋಡಿದಳು. ಆತ ಆಕಡೆ ಈಕಡೆ ನೋಡಿ ಏನೋ ನಿರ್ಧರಿಸಿದವನಂತೆ ಒಂದೇ ಗುಟುಕಲ್ಲಿ ಸ್ಕಾಚು ಮುಗಿಸಿ ‘ನಾನು, ನಿಮ್ಮಮ್ಮ ಒಂದು ಬಹಳ ಮುಖ್ಯವಾದ ವಿಷಯ ಮಾತಾಡಬೇಕು ಅಂತಂದುಕೊಂಡಿದ್ದೆವು’ ಎಂದ.

ಸುಕನ್ಯಾ ‘ಓಕೆ, ಒಂದು ವಿಷಯ ಗಮನಿಸಿದ್ದೀರಾ, ನೀವೆಲ್ಲ. ಹದಿನೈದು ವರ್ಷದ ಹಿಂದೆ ಈ ಪಾರ್ಟಿಯಲ್ಲಿ ಬರೇ ಬಿಳಿಯರು ಇರ್ತಿದ್ದರು. ನಾನು, ಅರವಿಂದ ಮತ್ತಿನ್ನೊಂದಿಷ್ಟು ಜನ ಮಾತ್ರ ಬೇರೆಯವರು. ಆಗ ನಾವೆಲ್ಲ ಈ ಊರಿಗೆ ಬಂದ ಹೊಸತು. ಸ್ವಾಮಿ ಆಗತಾನೆ ಹೆಸರನ್ನು ಸ್ಟೂಅರ್ಟ್ ಅಂತ ಬದಲಿಸಿಕೊಂಡಿದ್ದ. ಇನ್ನೂ ವೈ ಆದಮೇಲೆ ಯಾವಕ್ಷರನೋ ಸ್ವಾಮಿ ಅಂತ ಕೇಳಿದರೆ ಝಡ್ ಅನ್ನೋಅಷ್ಟು ಭಾರತೀಯ. ಆದರೆ ಪಾರ್ಟಿಗಳಲ್ಲಿ ಭಾರತೀಯ ಸ್ನೇಹಿತರಿರುತ್ತಿರಲಿಲ್ಲ. ಈಗ ನೋಡು. ಎಲ್ಲಕಡೆ ನಾವೇ.’ ಎಂದು ಮಾತು ಬದಲಿಸೋಕೆ ನೋಡಿದಳು.

ವಿಶೂ ‘ಹೌದಮ್ಮ. ನಾನೂ ಅದನ್ನೇ ಗಮನಿಸಿದೆ. ಎಲ್ಲ ಕಡೆ ನಾವೇ ಇದ್ದೀವಿ.’ ಎಂದ. ಆತ ಸುಕನ್ಯಾಳ ಅನ್ಯಮನಸ್ಕತೆಯನ್ನು ಗಮನಿಸಿದಂತೆ ‘ಅಮ್ಮ ಸಾರಿ. ನಾವು ಏನೇನೋ ಮಾತಾಡ್ತಾ ಇದೀವಿ. ಇಂಥ ಒಂದು ಒಳ್ಳೇ ಕೆಲಸ ನಡೀತಾ ಇದೆ. ನಾವು ಈ ತರ ಉಡಾಫೆ ಮಾತಲ್ಲಿ ತೇಲಿಸೋದು ತಪ್ಪು. ನಾನು ಹೇಳ್ತಾ ಇರ್ತೀನಿ. ಎಲ್ಲದರಲ್ಲಿಯೂ ಉಡಾಫೆ ಇರಬಾರದು ಅಂತ. ಆದರೆ, ಈ ಸುಪ್ರೀತನಿಗಂತೂ ಗೊತ್ತಾಗೋದೆ ಇಲ್ಲ.’

ಸುಕನ್ಯಾ ಮಾತಾಡದೇ ಉಗುಳು ನುಂಗಿದಳು. ಸುಪ್ರೀತನ ಮೇಲಿನ ಈ ಫಿರ್ಯಾದಿನಲ್ಲಿ ಕೇವಲ ಪರಿಚಯ, ಸ್ನೇಹಕ್ಕಿಂತ ಸಾಂಗತ್ಯವನ್ನೂ ಮೀರಿದ ಒಂತರಾ ಸಾಂಸಾರಿಕತೆಯನ್ನು ಗಮನಿಸಿದಳು.

ಅದ್ಯಾವುದನ್ನೂ ಗಮನಿಸದೇ ಸುಪ್ರೀತ ‘ಹೌದು ಹೌದು. ನೀ ಹೇಳ್ತಾ ಇರ್ತೀಯಾ. ನಾ ಕೇಳ್ತಾ ಇರ್ತೀನಿ. ಇಲ್ಲಿ ನೋಡಿ. ಇಷ್ಟು ದೊಡ್ಡ ದೊಡ್ಡ ಡಿನ್ನರು, ಪಾರ್ಟಿ, ಹರಾಜು, ಎಲ್ಲ ಯಾಕೆ ಬೇಕು. ಸುಮ್ಮನೆ ಒಂದು ಮೆರಥಾನ್ ಮಾಡ್ಲಿ. ವಾಕಿಂಗ್ ಮಾಡ್ಲಿ. ಜನಕ್ಕೆ ಒಳ್ಳೇ ಅಭ್ಯಾಸ ಹೇಳಿಕೊಟ್ಟಹಾಗೂ ಆಗುತ್ತೆ. ಇದರ ಬಗ್ಗೆ ಅರಿವೂ ಮೂಡುತ್ತೆ. ಅದು ಬಿಟ್ಟು ಈ ಶ್ರೀಮಂತಿಕೆಯ ಪ್ರದರ್ಶನ ಯಾಕೆ.’ ಕೇಳಿದ.

‘ನೀ ಯಾಕೆ ಬಂದಿದಿ, ಈ ಶ್ರೀಮಂತರ ಮನೇ ಪಾರ್ಟಿಗೆ’ ಅಲಿಶಾ ಸುಪ್ರೀತನನ್ನು ಉದ್ದೇಶಿಸಿ ಕೇಳಿದಳು.

‘ಅದನ್ನೇ ನಾನೂ ಬಹಳ ಬಾರಿ ನನಗೇ ಕೇಳ್ಕೋತೀನಿ. ನಿಮಗೇನೋ ಮೊದಲಿಂದ ಅಭ್ಯಾಸ ಆಗಿಹೋಗಿದೆ. ನಾನು ಬರಲ್ಲ ಅಂದೆ. ವಿಶೂನೇ ಬಲವಂತ ಮಾಡಿ ಎಳಕೊಂಡು ಬಂದ’

‘ಅಬ್ಬಾ, ದೊಡ್ಡ ಮನುಷ್ಯ. ಈ ದುಡ್ಡಿರೋರ ಮೇಲೆ ಯಾಕೆ ನಿನಗೆ ಸಿಟ್ಟು. ನೀನೂ ಅಪ್ಪ, ಅಮ್ಮನ ದುಡ್ಡಲ್ಲೇ ಕಾಲೇಜಿಗೆ ಹೋಗ್ತಾ ಇರೋದು. ನೀನೇನು ದೊಡ್ಡ ಕಮ್ಯುನಿಸ್ಟಾ. ಇಂಥ ದೊಡ್ಡದೊಡ್ಡೋರು ನೀನು ಹೋಗೋಂತ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳಿಗೆ ದಾನ, ದತ್ತಿ ಕೊಟ್ಟಿರೋದರಿಂದಲೇ ಅವು ನಡಕೊಂಡು ಹೋಗೋಕೆ ಸಾಧ್ಯ. ಬೆಟ್ಟಿ ಮಗಾನೂ ನಮ್ಮ ಯೂನಿವರ್ಸಿಟೀನೇ. ಯೂನಿವರ್ಸಿಟೀಗೆ ಆಕೆ ಎಷ್ಟು ದುಡ್ಡು ಕೊಟ್ಟಿದಾಳೆ ಗೊತ್ತಾ. ಕಳೆದ ಹದಿನೈದು ವರ್ಷಗಳಲ್ಲಿ ಆಕೆ ಬರೇ ಬ್ರೆಸ್ಟ್ ಕ್ಯಾನ್ಸರ್‌ಗಾಗಿ ಮಾತ್ರ ಫಂಡ್‍ರೈಸ್ ಮಾಡ್ತಾ ಇಲ್ಲ. ಬೇಕಾದಷ್ಟು ಬೇರೆ ಒಳ್ಳೇ ಕೆಲಸಾನೂ ಮಾಡ್ತಾ ಇದಾಳೆ.’ ವಿಶೂ ಹೇಳಿದ.

‘ವಾವ್. ನನ್ನ ಪರವಾಗಿ ಥ್ಯಾಂಕ್ಸ್ ಹೇಳು, ನೀನು ಆಕೆಗೆ’ ಎಂದು ಮಾತು ಮುಂದುವರೆಸಲು ಇಷ್ಟವಿಲ್ಲದಂತೆ ಈ ಕಡೆ ಮುಖ ಮಾಡಿ ಊಟ ಮಾಡಲು ಶುರುಮಾಡಿದ.

ಅರವಿಂದನಿಗೆ ತಾನು ಹೇಳಬೇಕೆಂದಿದ್ದ ಮಾತು ಈ ಕ್ಯಾನ್ಸರಿನ ಅರಿವು, ಸೈಲೆಂಟ್ ಆಕ್ಷನುಗಳ ಭರಾಟೆಯಲ್ಲಿ ಕರಗಿಹೋಗಿದ್ದು ನೋಡಿ ಸಿಟ್ಟು ಬಂತು. ಮತ್ತೆ ಹೇಳಬೇಕೆಂದುಕೊಂಡಾಗ ಬೆಟ್ಟಿ ಅವರ ಟೇಬಲ್ಲಿಗೆ ಬಂದಳು. ‘ಹಾಯ್, ಬಂದದ್ದಕ್ಕೆ ಸಂತೋಷ. ಓ ಅಲಿಶಾ. ಯಾವಾಗ ಡೆಲಿವರಿ. ಡಿಸೆಂಬರ್ ಕೊನೇವಾರ ಅಂತಲ್ಲ? ಸುಕನ್ಯಾ ಹೇಳ್ತಾ ಇದ್ದಳು. ನಿಂಗೇನೂ ಯೋಚನೆ ಇಲ್ಲ. ಸುಕನ್ಯಾ ಇದ್ದಳಲ್ಲ. ನೀನೇನಾ ಸುಪ್ರೀತ. ನನ್ನ ಮಗ ಟಾಮಿ, ನಿಮ್ಮಬ್ಬರ ಬಗ್ಗೆ ಬಹಳ ಹೇಳ್ತಾ ಇರ್ತಾನೆ. ಆತ ಕೂಡ ಇಲ್ಲೇ ಬಂದಿರಬೇಕು. ಅವನ ಗರ್ಲ್‌ಫ್ರೆಂಡೂ ಬಂದಿದ್ದಾಳೆ. ಯು ನೋ ಟಾಮಿ ಪ್ರಪೋಸ್ಡ್ ಟು ಹರ್. ಆಕೆ ಯಸ್ ಅಂತ ಹೇಳಿಯೂ ಆಯ್ತು. ಮುಂದಿನ ವರ್ಷ ಮದುವೆ ಅಂತೆ. ಡೊಮಿನಿಕನ್ ರಿಪಬ್ಲಿಕ್ಕಲ್ಲಿ ಸರಳವಾಗಿ ಮಾಡ್ಕೋತಾರಂತೆ.’

‘ಯಾವಾಗ. ನಾನು ಇಂಡಿಯಾಕೆ ಹೋಗಿಬರೋಣ ಅಂತ ಇದ್ದೀನಿ. ನಮ್ಮ ಶಾರದತ್ತೆ ಗೊತ್ತಲ್ಲ. ಅವಳಿಗೆ ಹುಷಾರಿಲ್ಲ.’ ಎಂದಳು, ಸುಕನ್ಯಾ
‘ಓ ಸುಕನ್ಯಾ, ಇದು ಸರಳವಾದ ಮದುವೆ ಅಂದನಲ್ಲ. ಪ್ರಾಯಶಃ ನಮ್ಮ ಕುಟುಂಬ ಮತ್ತು ಇನ್ನೊಂದಿಷ್ಟು ತೀರ ಹತ್ತಿರದ ಸ್ನೇಹಿತರನ್ನು ಬಿಟ್ಟರೆ ಬೇರೆ ಯಾರನ್ನೂ ಮದುವೆಗೆ ಕರೀತಾ ಇಲ್ಲ. ನಾನು ಟಾಮಿಗೆ ಹೇಳ್ತೀನಿ. ನಿಮ್ಮನ್ನು ಗೆಸ್ಟ್ ಲಿಸ್ಟಿಗೆ ಹಾಕ್ಕೋ, ಅಂತ. ಆದರೆ, ಈಗಿನ ಕಾಲದ ಹುಡುಗರು. ನಮ್ಮಾತು ಕೇಳಬೇಕಲ್ಲ. ಬೇಜಾರು ಮಾಡಿಕೋಬೇಡ. ಮದುವೆ ಆದಮೇಲೆ ಇಲ್ಲೊಂದು ಪಾರ್ಟಿ ಇಟ್ಟುಕೋತೀವಲ್ಲ.’ ಎಂದಳು.

ಕೈತೋರಿಸಿ ಅವಲಕ್ಷಣ ಮಾಡಿಕೊಂಡೆ ಎನಿಸಿತು, ಸುಕನ್ಯಾಳಿಗೆ. ಪೆಚ್ಚಾಗಿ ಸುಮ್ಮನಾದಳು.

‘ವಾಟ್ ಅಬೌಟ್ ಯು, ವಿಶೂ.. ಡು ಐ ಹಿಯರ್ ಅನಿ ವೆಡ್ಡಿಂಗ್ ಬೆಲ್ಸ್’ ಎಂದಳು.

ಒಂದು ಮೂಲೆಯಲ್ಲಿ ಹತ್ತೋ ಹನ್ನೆರಡೋ ಬ್ರಾಗಳಿಗೆ ಡಿಸೈನು ಡಿಸೈನು ಎಂಬ್ರಾಯಿಡರಿ ಮಾಡಿ ಪ್ರದರ್ಶನಕ್ಕೆ, ಹರಾಜಿಗೆ ಇಡಲಾಗಿತ್ತು. ಒಂದೆರಡಕ್ಕಂತೂ ಚಿನ್ನದ ಎಸಳಿನ ಕಸೂತಿ. ಎಲ್ಲವನ್ನೂ ಗಾಜಿನ ಡಬ್ಬದಲ್ಲಿ ಬೀಗ ಹಾಕಿ ಇಡಲಾಗಿತ್ತು. ಅವನ್ನು ಹರಾಜಿಗೇ ಎಂದು ಡಿಸೈನು ಮಾಡಿದ್ದು ವಿಕ್ಟೋರಿಯಾ ಸೀಕ್ರೆಟ್ ಕಂಪೆನಿಯವರಂತೆ. ಮೇಲೆ ಚೊಕ್ಕಾದ ಅಕ್ಷರಗಳಲ್ಲಿ ಬರೆದ ಒಕ್ಕಣೆ ‘ಸಪೋರ್ಟ್ ದ ಸಪೋರ್ಟ್’. ಒಂದೊಂದು ಬ್ರಾಗಳಿಗೂ ಸೂಚಿಸಲಾದ ಬೆಲೆ ಎರಡೂವರೆ ಸಾವಿರದಿಂದ ಇಪ್ಪತ್ತು ಸಾವಿರ ಡಾಲರುಗಳು!

ವಿಶೂ, ಸುಪ್ರೀತರೇ ಇದನ್ನು ನಿರೀಕ್ಷಿಸಿರಲಿಲ್ಲ ಎನ್ನಿಸುತ್ತದೆ. ಇಬ್ಬರೂ ಮುಖ ಮುಖ ನೋಡಿ ‘ಅಂತದ್ದೇನೂ ಇಲ್ಲ, ಬೆಟ್ಟಿ’ ಎಂದ, ವಿಶೂ.

‘ಇಟ್ ಈಸ್ ಕ್ಯೂಟ್ ದಟ್ ಯು ಫೌಂಡ್ ಸಮ್‌ಬಡಿ ವಿಶೂ. ಈಗ ಮಿನೆಸೊಟಾದಲ್ಲಿಯೂ ಇದು ಕಾನೂನುಬದ್ಧ ಗೊತ್ತಲ್ಲ. ಲೆಟ್ ಮಿ ನೋ ವೆನ್ ಯು ಅರ್ ರೆಡಿ. ನಾನು ಸಹಾಯ ಮಾಡ್ತೀನಿ. ಸೂ.. ಟಾಮಿ ನಿನ್ನನ್ನು ಅವನ ಮದುವೆಗೆ ಕರೀಲಿಲ್ಲ ಅಂತ ನೀನು ವಿಶೂ ಮದುವೆಗೆ ಕರೀದೇ ಇರಬೇಡ.’ ಎಂದು ಸುಕನ್ಯಾಳ ಕೆನ್ನೆ ತಟ್ಟಿ ‘ಎಂಜಾಯ್ ದ ಡಿನ್ನರ್. ಥ್ಯಾಂಕ್ಸ್ ಫಾರ್ ಸಪೊರ್ಟಿಂಗ್ ಅ ಗ್ರೇಟ್ ಕಾಸ್’ ಎಂದು ಅಲ್ಲಿಂದ ಹೋದಳು.

ಒಂದು ಐದು ನಿಮಿಷ ದೀರ್ಘ ಮೌನ, ಆ ಟೇಬಲಿನಲ್ಲಿ. ವಿಶೂ, ಸುಪ್ರೀತ ತಮ್ಮ ಮುಂದಿನ ನಲವತ್ತು ವರ್ಷಗಳು ಹೇಗಿರಬೇಕು ಎಂದು ಯೋಚಿಸಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ. ಸುಕನ್ಯಾ ಮದುವೆ ಎಂಬ ವ್ಯವಸ್ಥೆಯಡಿಗೆ ಈ ಸಂಬಂಧ ಬರಬಹುದು ಎಂದು ಕಲ್ಪಿಸಿಕೊಂಡೂ ಇರಲಿಲ್ಲ. ಈಗ ಏನು ಮಾತಾಡಿದರೂ ಎಲ್ಲರಿಗೂ ರೇಜಿಗೆಯೆನಿಸಬಹುದು. ಏನೂ ಸಾಧಿಸದ ಕೆಲಸಕ್ಕೆ ಬಾರದ ಮಡಿವಂತಳಾಗಿಬಿಡುವ ಅಪಾಯವಿದೆ ಎನಿಸಿತು.

ಎಲ್ಲರೂ ಗಂಭೀರವಾಗಿಬಿಟ್ಟಿದ್ದನ್ನು ನೋಡಿ ವಿಶೂ ಜೋರಾಗಿ ನಕ್ಕುಬಿಟ್ಟ. ಸುಪ್ರೀತನನ್ನು ನೋಡಿ ‘ಏನಂತೀ. ಬೆಟ್ಟಿ ಮದುವೆ ಮಾಡಿಸ್ತಾಳಂತೆ. ಮಾಡಿಕೊಳ್ಳೋಣವಾ?’ ಎಂದ.

ಸುಪ್ರೀತ ‘ನೋ ವೇ. ನಿನ್ನನ್ನು ಯಾರು ಮಾಡ್ಕೋತಾರೆ’ ಎಂದು ನಕ್ಕ. ಆ ನಗುವಿನಲ್ಲಿ ಕೊಂಚವಾದರೂ ಅಪ್ರಾಮಾಣಿಕತೆ ಇದೆಯಾ ಎಂದು ಎಲ್ಲರೂ ಪರೀಕ್ಷಿಸಿದಾಗ, ಆತ ಕೊಂಚ ಪೆಚ್ಚಾದ.

ಸುಕನ್ಯಾ ಬಾಯಿಬಿಟ್ಟು ನೋಡುತ್ತಿದ್ದಳು. ವಿಶೂ ‘ಅಮ್ಮ, ಹೆದರಿಕೋಬೇಡ. ನಾವು ಮದುವೆ, ಗಿದುವೆ ಮಾಡ್ಕೊಳಲ್ಲ. ಮದುವೆ ಅನ್ನುವ ಕಾನ್ಸೆಪ್ಟಿನ ಮೇಲೆಯೇ ನನಗೆ ನಂಬಿಕೆ ಇಲ್ಲ. ಜೀವನ ಪೂರ್ತಿ ಒಂದೇ ವ್ಯಕ್ತಿಯನ್ನು ಪ್ರೀತಿಸಿ ಜತೆಗಿರೋದು ನಮ್ಮ ಸ್ಟೈಲಲ್ಲ. ನಮ್ಮಿಬ್ಬರಿಗೂ ನಾವು ಒಂದಲ್ಲ ಒಂದಿನ ಒಬ್ಬರಿಂದ ಇನ್ನೊಬ್ಬರು ದೂರವಾಗ್ತೀವಿ ಅಂತ ಚೆನ್ನಾಗಿ ಗೊತ್ತಿದೆ. ಇದಕ್ಕೆ ಮತ್ತೆ ನೀ ಗೇ ಫ್ಯಾಕ್ಟರನ್ನು ತಂದಿಟ್ಟು ಏನೇನೋ ಅಪಾರ್ಥ ಮಾಡಿಕೋಬೇಡ. ಈ ಸಾಯೋತನಕ ಒಬ್ಬನನ್ನೇ ಪ್ರೀತಿಸೋದು, ಸೌಲ್‌ಮೇಟುಗಳು ಅನ್ನೋದರ ಬಗ್ಗೆ ನಮಗ್ಯಾರಿಗೂ ನಂಬಿಕೇನೆ ಇಲ್ಲ ಅಂತ ಕಾಣುತ್ತೆ. ವಿನಯ ಈ ಸೌಲ್‌ಮೇಟು, ಪ್ಲೆಟಾನಿಕ್ ಲವ್ವು ಇಂಥವುಕ್ಕೆಲ್ಲ ಬಹಳ ತಲೆ ಕೆಡಿಸಿಕೋತಾನೆ. ಅಲಿಶಾ, ನೀವಿಬ್ಬರೂ ಡೇಟ್ ಮಾಡುತ್ತಿದ್ದಾಗ ಅಲಿಶಾಳೇ ನನ್ನ ಸೌಲ್‌ಮೇಟು ಅಂತೆಲ್ಲ ಬಹಳ ಹೇಳ್ತಾ ಇದ್ದ. ಆಗ ನಾನು ಚಿಕ್ಕ ಹುಡುಗ. ನಾನೂ ಸಂಬಂಧಗಳು ಹಾಗೇ ಇರಬೇಕೂ ಅಂತ ನಂಬಿಕೊಂಡೇ, ನನ್ನ ಲವ್‌ಲೈಫ್‌ ಶುರುಮಾಡಿದ್ದು. ಆಮೇಲೆ, ಸತ್ಯ ಏನಂತ ನಾನಾಗೆನಾನೇ ತಿಳಿದುಕೊಂಡಮೆಲೆ ಒಬ್ಬರಿಗೊಬ್ಬರು ಬದ್ಧರಾಗಿರೋದು, ಕೊನೆತನಕ ಸಂಬಂಧ ಉಳಕೊಳ್ಳಲಿ ಅಂತ ಮದುವೆ, ಮಕ್ಕಳ ಬಂಧನದಲ್ಲಿ ಬೀಳೋದು ಇವೆಲ್ಲ ನನಗಲ್ಲ ಅನಿಸಿಬಿಟ್ಟಿತು. ವಿನಯ, ಅಲಿಶಾ, ನೀವಿಬ್ಬರೂ ಕಡೆತನಕ ಜತೆಗಿರ್ತೀವಿ ಅಂತ ತಾನೆ ಮದುವೆ ಮಾಡಿಕೊಂಡಿರೋದು. ಎಂಟು ಹತ್ತು ವರ್ಷಗಳಿಂದೇನೋ ಜತೆಗಿದೀರ. ಆದರೆ, ಸಾಯೋತನಕ ಜತೇಗಿರ್ತೀರಾ? ಡು ಯು ಸ್ಟಿಲ್ ಬಿಲೀವ್ ಇನ್ ದಿಸ್ ಸೌಲ್ ಮೇಟ್ ಥಿಂಗ್’
ಸುಕನ್ಯಾಳಿಗೆ ಒಂದೇ ಒಂದು ಕ್ಷಣ ಕಣ್ಣರಳಿತು. ಸುಪ್ರೀತ ಅದನ್ನು ಗಮನಿಸಿದ. ಅದು ಆಶ್ಚರ್ಯವೋ, ಸಂತೋಷವೋ ಪೂರಾ ಅರ್ಥವಾಗಲಿಲ್ಲ.

ಅಲಿಶಾ ‘ವಾವ್, ಇಂಥ ಕಾರಣಕ್ಕೇ ನನಗೆ ನಿಮ್ಮ ಪೀಳಿಗೆ ಇಷ್ಟ ಆಗೋದು. ನಮಗಿಂತ ಒಂದ್‌ಹತ್ತು ವರ್ಷ ಚಿಕ್ಕವರಾದ್ರೂ ನಿಮಗೆ ಏನು ಬೇಕು ಅಂತ ನಿಮಗೆ ಚೆನ್ನಾಗಿ ಗೊತ್ತಿದೆ. ಗೊತ್ತಿರೋದಷ್ಟೇ ಅಲ್ಲ, ಅದನ್ನು ಪಡಕೊಳ್ಳೋದು ಹೇಗೆ ಅಂತಲೂ ಗೊತ್ತಿದೆ. ನಿಮ್ಮನ್ನೆಲ್ಲ ನೋಡಿದರೆ, ಕೆಲವೊಮ್ಮೆ ಹೊಟ್ಟೆಯುರಿ ಆಗುತ್ತೆ.’ ಅಂದು ವಿನಯನ ಮುಖ ನೋಡಿದಳು.

‘ಅಂದರೇನು ಅಲಿಶಾ, ನಾವು ಇನ್ನು ಹತ್ತು ವರ್ಷ ಚಿಕ್ಕವರಾಗಿದ್ರೆ ಮದುವೆ ಮಾಡ್ಕೋತ ಇರ್ಲಿಲ್ಲ, ಅಂತಾನಾ?’ ವಿನಯ ಅಲಿಶಾಳನ್ನು ಕೇಳಿದ.

‘ಹಂಗಲ್ಲ, ಡಾರ್ಲಿಂಗ್. ಆತರ ಯೋಚನೆ ಕೂಡ ನಾವು ಮಾಡೋದಿಲ್ಲ ಅಲ್ಲವಾ? ನಾವು ಪರಸ್ಪರರಿಗೆ ಕಮಿಟ್ ಆಗಿರ್ತೀವಿ ಆನ್ನೋ ಒಂದು ನಂಬಿಕೇ ಮೇಲೆಯೇ ನಮ್ಮ ಸಂಬಂಧ ಶುರು ಆಗಿದ್ದು. ನಾನು, ನೀನಂತೂ ತೀರ ಹಳೆಕಾಲದವರಂತೆ ಹೈಸ್ಕೂಲಿನಲ್ಲಿ ಮೀಟ್ ಮಾಡಿಯಾದ ಮೇಲೆ ಬೇರೊಬ್ಬರನ್ನು ಕಣ್ಣೆತ್ತೂ ನೋಡಿಲ್ಲ. ಅನ್‌ಲೆಸ್ ವಿ ಆರ್ ಚೀಟಿಂಗ್ ಆನ್ ಈಚ್ ಅದರ್?’ ಎಂದು ಕಣ್ಣು ಹೊಡೆದಳು.

‘ನನ್ನ ಪರೀಕ್ಷೆ ಮಾಡಬೇಡ. ನನಗೂ ಆಗ ವಯಸ್ಸು, ನಿಕೊಲಸ್ ಸ್ಪಾರ್ಕಿನ ಕಾದಂಬರಿಗಳನ್ನು ಓದಿ ಅಂಥವೆಲ್ಲ ಯೋಚನೆಗಳಿತ್ತು, ಅನಿಸುತ್ತೆ. ಆದರೆ, ಆ ಭ್ರಮೆಗಳು ಈಗ ನನಗೂ ಇಲ್ಲ. ಆದರೆ, ಈಗ ನಾನು ಡೈವೋರ್ಸ್ ಗಿವೊರ್ಸ್ ಮಾಡಲ್ಲ. ಸಾಯೋತನಕ ನಿನ್ನ ಜತೇಗಿರಬೇಕು ಅಂತಲ್ಲ. ಡೈವೊರ್ಸ್ ದಿವಾಳಿ ಮಾಡಿಬಿಡುತ್ತೆ. ಮಕ್ಕಳೆಲ್ಲ ಬೆಳೆದು ದೊಡ್ಡವರಾಗಿ ಕಾಲೇಜಿಗೆ ಕಳಿಸಿದ ಮೇಲೆ ಅದರ ಬಗ್ಗೆ ಯೋಚಿಸೋಣ. ಆದರೂ, ಕಳೆದ ಎಂಟು ತಿಂಗಳಲ್ಲಿ ನಾಲ್ಕುಪಟ್ಟು ದಪ್ಪವಾಗಿರೋ ನಿನ್ನ ಹತ್ತಿರ ಬಂದಾಗಲೆಲ್ಲ ಬಹಳ ಬಾರಿ ಬೇರೆ ಯಾರನ್ನಾದ್ರೂ ನೋಡಿಕೋಬೇಕು ಅನ್ನಿಸುತ್ತೆ.’ ಎಂದು ಅಲಿಶಾಳನ್ನು ಕಣ್ಣು ಹೊಡೆಯುತ್ತಾ ನೋಡಿ, ವಿಶೂಗೆ ‘ವಿಶೂ ಶಾರದತ್ತೆ ಹೇಳ್ತಾ ಇದ್ರು ನೆನಪಿದ್ಯಾ, ಹಿಂದೆ ರಾಜನಿಗೆ ಪಟ್ಟದರಾಣಿ ಜತೆಗೆ ಇನ್ನೂ ಅನೇಕ ರಾಣಿಯರಿರ್ತಾ ಇದ್ದರು, ಅಂತ. ಹಾಗೆ ಅಲಿಶಾ, ನೀನು ಯಾವಾಗಲೂ ನನ್ನ ಪಟ್ಟದರಾಣಿ’ ಎಂದ, ಕನ್ನಡದಲ್ಲಿ.

ವಿಶೂ ‘ಯಾ ಐ ನೋ. ಐ ಆಮ್ ವಿಥ್ ಯು, ಬ್ರೋ. ಬಟ್ ನನ್ನ ಕೇಸಲ್ಲಿ ಏನನ್ನಬೇಕು, ಪಟ್ಟದ ರಾಜ ಅನ್ನಬಹುದಾ’ ಎಂದು ಮತ್ತೊಮ್ಮೆ ಹೈಫೈ ಮಾಡಿದರು.

ಅಲಿಶಾ, ಸುಪ್ರೀತ ಇಬ್ಬರಿಗೂ ಇವರಿಬ್ಬರ ಮಾತುಕತೆ ಅರ್ಥವಾಗದಿದ್ದರೂ ಸುಮ್ಮನೆ ನಕ್ಕರು.

ಸುಕನ್ಯಾಗೆ ಈ ಮಾತಿನಲ್ಲಿ ಯಾವುದು ಗಂಭೀರವಾದದ್ದು, ಯಾವುದು ಉಡಾಫೆ ಎಂದು ಗೊತ್ತಾಗಲಿಲ್ಲ. ಈ ಹುಡುಗರಿಗೆ ಲವ್‌ಲೈಫ್‌, ಸೆಕ್ಸ್‌ಲೈಫ್‌, ಮದುವೆ ಎಲ್ಲವೂ ಒಂದಕ್ಕೊಂದರಿಂದ ಎಕ್ಸ್‌ಕ್ಲೂಸಿವ್ ಎಂದು ಗೊತ್ತಿರಲಾರದ ದಡ್ಡಿ ಆಕೆಯಲ್ಲ. ಆದರೆ, ತನ್ನ ಮನೆಯಲ್ಲಿ ಇದು ಅಪ್ಪ ಅಮ್ಮನ ಜತೆ ಕೂತು ಮಾತಾಡೋ ಡಿನ್ನರ್ ಟೇಬಲ್ ಮಾತುಕತೆಯಾದದ್ದು ಯಾವಾಗ? ಒಂದಾದ ನಂತರ ಒಂದರಂತೆ ಮೂರು ಮಕ್ಕಳನ್ನು ಮಾಡಿಕೊಂಡು ನಂತರ ತಮ್ಮತಮ್ಮ ಕೆಲಸ, ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇವಲ ಒಂದು ದಿನದ ಹಿಂದೆ ಮಾತಾಡಿದ್ದಷ್ಟೇ ಅಲ್ಲ, ಮನೆಗೆ ಬಂದು ಸಹಾಯ ಮಾಡಬೇಕು ಎಂದು ನನ್ನನ್ನು ದುಂಬಾಲುಬಿದ್ದ ಅಪ್ಪಟ ಶ್ರೀಸಂಸಾರಿಯಂತೆ ಕಾಣುವ ವಿನಯ, ಅಲಿಶಾ ಜತೆ ನಿಜವಾಗಿಯೂ ಒಂದು ಬದ್ಧ ಸಂಬಂಧದಲ್ಲಿದ್ದಾನೆಯೇ? ಸುಪ್ರೀತ, ವಿಶೂ ಸಂಬಂಧಕ್ಕೆ ಪರಸ್ಪರ ಬದ್ಧತೆ ಎಂದಾದರೂ ಇರಬಲ್ಲದೇ? ಅವರಿಬ್ಬರ ಸಂಬಂಧದ ಹಂಗಾಮಿತನ ತನಗೆ ಯಾಕೆ ಕೊಂಚ ಸಮಾಧಾನ ತರಬೇಕು? ವಿಶೂಗೆ ಬೇಲಿ ದಾಟುವ ಅವಕಾಶ ಇದೆ ಅಂತಲಾ?

ತಾನು ಬಲು ಕೆಟ್ಟ ಅಮ್ಮ.. ಅನಿಸಿತು.

ಬಾತ್‌ರೂಮಿಗೆ ಹೋಗಿ ಬರೋಣ ಎಂದು ಎದ್ದಳು. ನಿಂತ ತಕ್ಷಣ ಬವಳಿ ಬಂದಂತಾಗಿ ಕೈ ಕಾಲು ನಡುಗಿದವು. ಮತ್ತೆ ಆಭಾಸವಾದೀತು ಎಂದು ಹಾಗೇ ಖುರ್ಚಿಯಲ್ಲಿ ಧಪ್ಪನೆ ಕೂತಳು. ತುಟಿ, ಬೆರಳುಗಳು ಪೇಲವವಾಗಿದ್ದವು, ನಡುಗುತ್ತಿದ್ದವು. ಯಾರಾದರೂ ತನ್ನನ್ನು ಗಮನಿಸಿದರಾ ಎಂದು ಸುತ್ತಲೂ ನೋಡಿದಳು.

ಸುತ್ತಲಿದ್ದವರಿರಲಿ, ತನ್ನ ಟೇಬಲ್‌ನಲ್ಲಿ ಕೂತಿದ್ದವರೇ ತನ್ನನ್ನು ಗಮನಿಸಿರಲಿಲ್ಲ. ಪರ್ಸಿನಿಂದ ಲಿಪ್‌ಗ್ಲಾಸ್ ತೆಗೆದು ಹಚ್ಚಿ ತುಟಿಯನ್ನು ತೇವ ಮಾಡಿಕೊಂಡಳು. ಒಂದು ತುಂಡು ಐಸನ್ನು ಬಾಯಿಯಲ್ಲಿ ಹಾಕಿಕೊಂಡಳು.

ಅರವಿಂದ ಟೇಬಲನ್ನು ಕುಟ್ಟುತ್ತಾ ‘ನೀವೆಲ್ಲ ಒಂದು ಕ್ಷಣ ಸುಮ್ಮನಿದ್ದರೆ ನಾನು ಒಂದು ಮಾತಾಡಬೇಕು. ನಾನು, ನಿಮ್ಮಮ್ಮ ಒಂದು ಏನೋ ವಿಷಯವನ್ನು ಅನೌನ್ಸ್ ಮಾಡಬೇಕು’ ಎಂದ. ಅರವಿಂದ ತನ್ನ ಅವಕಾಶಕ್ಕೆ ಕಾದು ಕಾದು ರೋಸಿಹೋದವನಂತೆ ಟೇಬಲನ್ನು ಕುಟ್ಟುತ್ತಿದ್ದ. ಸ್ಕಾಚು ತನ್ನ ಕೆಲಸ ಮಾಡುತಿತ್ತು. ಆತ ಏನು ಹೇಳಬಹುದು ಎಂದು ಸುಕನ್ಯಾಳಿಗೆ ಒಂದು ಅಂದಾಜಿತ್ತು. ಅವನನ್ನು ತಡೆಯಲು ಅವನ ತೋಳನ್ನು ಹಿಡಿಯಲು ನೋಡಿದಳು. ಆದರೆ ಅರವಿಂದ ಅವಳ ಕೈಕೊಸರಿಕೊಂಡು ಹೇಳಿದ. ‘ಸುಕನ್ಯಾ ಈಗ ನನ್ನನ್ನು ನೀ ತಡೆಯಬೇಡ. ಮಕ್ಕಳಾ, ನೀವೆಲ್ಲ ಖುಷಿಯಾಗಿದ್ದೀರಾ ಅನಿಸುತ್ತಾ ಇದೆ. ನಾನು ಬಹಳ ಮುಖ್ಯವಾದ ವಿಷಯವೊಂದನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ. ನಿಮ್ಮಮ್ಮ ಈಗ ಅದು ಸಮಯವಲ್ಲ ಎಂದು ತಡೆದಿದ್ದಳು. ಆದರೆ, ಈ ವಿಷಯವನ್ನು ಹೇಳೋದಕ್ಕೆ ಪ್ರಶಸ್ತವಾದ ಸಮಯ ಬರೋದೇ ಇಲ್ಲ. ನಿಮಗೆಲ್ಲ ಗೊತ್ತಿರೋ ಹಾಗೆ ಶಾರದಜ್ಜಿಗೆ ತೀರ ಹುಷಾರಿಲ್ಲ. ಅಮ್ಮ ಒಂದೆರಡು ತಿಂಗಳು ಆಕೆಯ ಜತೆಗೆ ಇದ್ದು ಬರಬೇಕು ಅಂತ ಇದ್ದಾಳೆ. ಅಲಿಶಾಳಿಗೆ ಮಗು ಆಗುವ ಸಮಯಕ್ಕೆ ಅಮ್ಮ ವಾಪಸ್ಸು ಬಂದುಬಿಡಬಹುದು ಅಂದುಕೊಂಡಿದ್ದಾಳೆ. ಆದರೆ, ಅದಕ್ಕಿಂತಾ ಮುಖ್ಯವಾದ ವಿಷಯ ಇದೆ, ನೀವೆಲ್ಲ ಕೇಳೋಕೆ ಸಿದ್ಧರಿದ್ದೀರಾ?’ ಯಾವುದೋ ಶಾಕ್ ಕೊಡುವ ವಿಷಯ ಹೇಳುವ ಹಾಗೆ ಎಲ್ಲರ ಮುಖ ನೋಡಿದ.

‘ಡ್ಯಾಡಿ, ಏನದು? ನೀವಿಬ್ಬರೂ ಡೈವೋರ್ಸ್ ಮಾಡ್ತಾ ಇದ್ದೀರಾ?’ ಕೇಳಿದ, ವಿನಯ. ಪ್ರಶ್ನೆ ಬಹಳ ಸಹಜವಾಗಿತ್ತು. ಆತನ ಮಾತಿನಲ್ಲಿ ಪ್ರಾಮಾಣಿಕವಾದ ದುಗುಡ ಎದ್ದು ಕಾಣುತ್ತಿತ್ತು. ತಾವು ಈಗತಾನೆ ಮಾತಾಡುತ್ತಿದ್ದ ವಿಷಯಕ್ಕೆ ಪೂರಕವಾಗಿಯೇ ಈ ವಿಷಯವೂ ಇರಬಹುದು ಎನ್ನುವುದು ಅವನ ಎಣಿಕೆಯಾಗಿತ್ತು.

ಒಂದು ಕ್ಷಣ ಆಘಾತಗೊಂಡ ಅರವಿಂದ ‘ನಿಮ್ಮೆಲ್ಲರಿಗೆ ಮಾತಾಡೊಕ್ಕೆ ಬೇರೆ ಏನೂ ವಿಷಯ ಇಲ್ಲವಾ? ನಾನು ಮತ್ತು ನಿಮ್ಮಮ್ಮ ಸಾಯೋತನಕ ಜತೇಗಿರೋದಕ್ಕೆ ಅಂತಾನೇ ಮದುವೆಯಾಗಿರೋದು. ವಿಷಯ ಅದಲ್ಲ. ಇಬ್ಬರೂ ಈ ಮನೆಯನ್ನು ಮಾರಿ ಶಾಶ್ವತವಾಗಿ ಭಾರತಕ್ಕೆ ಹೋಗುವುದು ಎಂದು ಅಂದುಕೊಂಡಿದ್ದೇವೆ. ಅಲ್ಲಿ ಮೈಸೂರಿನ ರಮಾನಂದಾಶ್ರಮದಲ್ಲಿ ನಾವಿಬ್ಬರೂ ಇರ್ತೀವಿ. ನಮ್ಮ ಎಲ್ಲ ಆಸ್ತಿಯನ್ನೂ ಆಶ್ರಮಕ್ಕೆ ಕೊಟ್ಟುಬಿಡೋಣ ಎಂದು ನಿರ್ಧಾರ ಮಾಡಿದೀವಿ. ಅಲಿಶಾ, ನಿಮ್ಮ ಮೊದಲನೆಯ ಮಗುವಿನ ಬಾಣಂತನಕ್ಕೆ ಅಮ್ಮ ಇರ್ತಾಳೆ. ವಿನಯ, ನಿಮ್ಮ ಮುಂದಿನ ಮೂರು ವರ್ಷದಲ್ಲಿ ಮೂರು ಮಕ್ಕಳು ಮಾಡಿಕೋಬೇಕು ಅಂತ ಆಸೆ ಇದ್ದರೆ ಅದಕ್ಕೆ ಆ ಸಮಯದಲ್ಲೂ ಅಮ್ಮ ಬೇಕಾದರೆ ಬಂದು ಸಹಾಯ ಮಾಡ್ತಾಳೆ. ವಿಶೂ, ಸುಪ್ರೀತ. ನಿಮಗೆ ನಮ್ಮ ಆಶೀರ್ವಾದ ಇದ್ದೇ ಇದೆ. ನಿಮ್ಮ ಮುಂದಿನ ಜೀವನದ ಬಗ್ಗೆ ನೀವು ಯೋಚಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಇನ್ನೂ ಯೋಚಿಸದಿದ್ದರೆ, ಯೋಚನೆ ಮಾಡೋಕೆ ಶುರುಮಾಡಿ. ಶವ್ ಆಲ್ ದಟ್ ನಾನ್‌ಕಮಿಟಲ್ ಬುಲ್ ಅಪ್ ಯುವರ್ ಆ್ಯಸ್. ಕೊನೆತನಕ ಜತೆಗಿರೊಲ್ಲವಂತೆ. ಮತ್ಯಾಕೆ ಈಗ ಜತೆಗಿದೀರ? ನಿಮ್ಮಂತವರು ಜತೆಗಿರಲಿ ಅಂತಲೇ ಕಾನೂನು ಕಾಮನ್ ಲಾ ದಾಟಿ ಮದುವೆಯನ್ನೂ ಒಪ್ಪಿಕೊಂಡಿದೆ. ಪ್ರಪಂಚದಲ್ಲಿ ಯಾವತ್ತಿಗಿಂತ ಗೇ ಗಳಾಗಿರೋಕೆ ಇಂದು ಪ್ರಶಸ್ತವಾದ ಸಮಯ. ಈ ಕಾಲದ, ಕಾನೂನುಗಳ ಅನುಕೂಲವನ್ನು ಪಡಕೊಳ್ಳಿ. ಎಲ್ಲಕ್ಕಿಂತ ಮುಖ್ಯ, ವಿನಯ, ಸುಪ್ರೀತ- ಕಾಲೇಜು ಬೇಗ ಮುಗಿಸಿ. ನೆಟ್ಟಗೆ ಒಂದು ಕೆಲಸ ಹುಡುಕಿಕೊಳ್ಳಿ. ಈ ಸಿನೆಮಾ ಮಾಡಬೇಕು ಅನ್ನೋ ಆಸೆ ಇದ್ದರೆ ನಾನು ಸಹಾಯ ಮಾಡ್ತೀನಿ. ಆದರೆ, ಜೀವಮಾನ ಇಡೀ ಸಪೊರ್ಟ್ ಮಾಡೋಕೆ ನಾವಿಲ್ಲಿರೋದಿಲ್ಲ.’

ಬಹಳ ಕಾಲ ಮಾತಾಡದೇ ಇದ್ದವ ಒಮ್ಮೆಲೇ ಎಲ್ಲವನ್ನೂ ಮಾತಾಡಿ ಮುಗಿಸಬೇಕು ಎನ್ನುವಂತೆ ಮನಸ್ಸಿನಲ್ಲಿ ಇರುವುದನ್ನೆಲ್ಲ ಒಮ್ಮೆಲೇ ಹೇಳಿ ಮುಗಿಸಿದ್ದ. ಸ್ಕಾಚು ಸಹಾಯಕ್ಕೆ ಬಂದಿತ್ತು.

‘ಇನ್ನೂ ಅಂದುಕೊಂಡಿದೀವಿ ಅಷ್ಟೇ. ಯಾವುದೂ ಗ್ಯಾರಂಟಿ ಇಲ್ಲ. ನಾನು, ಡ್ಯಾಡೀನೇ ಇದರ ಬಗ್ಗೆ ಸರಿಯಾಗಿ ಮಾತಾಡಿಲ್ಲ, ಇನ್ನೂ. ನಿಮ್ಮ ಡ್ಯಾಡಿ ಬಿಡು ಎಲ್ಲ ಉತ್ಪ್ರೇಕ್ಷೆ ಮಾಡಿ ಹೇಳ್ತಾರೆ. ಅಲ್ಲ ಕಣೋ ವಿನಯ, ನೀನೇ ಹೇಳು, ನೀನು ಡಾಕ್ಟ್ರು. ಇವ್ರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಇವರು ಹೋಗಿ ಅಲ್ಲಿರಬಹುದಾ? ಅಲ್ರೀ ನೀವು ಅಂಥಾ ಧರ್ಮಶ್ರದ್ಧೆಯುಳ್ಳವರೇನಲ್ಲ. ನೀವು ಅಲ್ಲಿ ಹೋಗಿ ಏನು ಮಾಡ್ತೀರಾ?’ ಕೊಂಚ ತೊಡರಿದ ಮಾತಿಗೆ ಬಾಯಲ್ಲಿನ ಐಸು ಕಾರಣವಿರಬಹುದು ಎಂದುಕೊಂಡಳು ಸುಕನ್ಯಾ.

‘ಆ ಆಶ್ರಮದಲ್ಲಿ ಕೆಲಸ ಮಾಡೋಕೆ ಸ್ವಯಂಸೇವಕರಿಗೆ ಬೇಕಾದಷ್ಟು ಅವಕಾಶ ಇದೆ. ಬರೇ ಭಜನೆ ಮಾಡೋದಷ್ಟೇ ಅಲ್ಲ.’

‘ಏನು ಸ್ವಯಂಸೇವನೆ ಮಾಡ್ತೀರಾ, ನೀವಲ್ಲಿ ಈ ವಯಸ್ಸಲ್ಲಿ.’

‘ಏನೋ ಮಾಡ್ತೀನೇ. ಪ್ರತೀವಾರ ಅಶ್ರಮದವರು ರಕ್ತದಾನ, ಕಣ್ಣಿನ ಆಪರೇಶನ್, ಪುಕ್ಕಟೆ ಕ್ಲಿನಿಕ್ಕು, ಹೀಗೆ ಏನೇನೋ ಯೋಜನೆಗಳನ್ನು ಇಟ್ಕೊಂಡಿದಾರೆ. ಅಲ್ಲಿಗೆ ಹೋಗ್ತೀನಿ. ಇಲ್ದಿದ್ದರೆ ಆಶ್ರಮಕ್ಕೆ ಬರೋ ಜನಕ್ಕೆ ಚರ್ಪು ಹಂಚ್ತೀನಿ. ಅಲ್ಲಿದ್ದರೆ ಸುತ್ತ ಜನ ಇರ್ತಾರೆ, ಏನಾದರೂ ಮಾಡಬಹುದು.’ ತಾಳ್ಮೆ ಕಳಕೊಂಡವನಂತೆ ಹೇಳಿದ, ಕೊಂಚ ಗಡುಸಾಗಿ.

‘ಸಂಜೆ ಸ್ಕಾಚಿಗೆ ಏನು ಮಾಡ್ತೀರೀ’ ಸುಕನ್ಯಾ ಮೆದುವಾಗಿ ಕೇಳಿದಳು. ಸುತ್ತಲಿದ್ದವರಿಗೆ ಕೊಂಚ ನಗು ಬಂದಿತಾದರೂ ಆಕೆಯ ಪ್ರಶ್ನೆ ಪ್ರಾಮಾಣಿಕವಾಗಿತ್ತು.

‘ಥಾಂಕ್ಸ್ ಸೂ.. ನನ್ನ ಅವಶ್ಯಕತೆಗಳನ್ನು ಅರ್ಥ ಮಾಡಿಕ್ಕೊಂಡಿರೋದಕ್ಕೆ. ಅದೇನಾ ನನ್ನ ಮುಖ್ಯ ಸಮಸ್ಯೆ? ಸ್ಕಾಚಿನ ಜಾಗದಲ್ಲಿ ಭಜನೆ ಬರುತ್ತೆ.’ ಅವನ ಮಾತಿನಲ್ಲಿ ತನಗೆ ಭಜನೆ ಮಾಡಲಿಕ್ಕೆ ಅವಕಾಶ ಇಲ್ಲದೇ ಇರೋದರಿಂದ ಸಂಜೆ ಕುಡಿಯುತ್ತಿದ್ದೇನೆ ಎನ್ನುವ ಇರಾದೆಯಿತ್ತು.

ವಿನಯ ‘ಅಮ್ಮಾ, ಡ್ಯಾಡಿ. ನೀವಿಬ್ಬರೂ ನಿರ್ಧಾರ ಮಾಡಿದ್ದೀರೋ. ಅಥವಾ ಇನ್ನೂ ಯೋಚನೆ ಮಾಡ್ತಾ ಇದ್ದೀರೋ?’ ತಮ್ಮ ನಿರ್ಧಾರದ ಅನಿಶ್ಚತತೆ ಸುಕನ್ಯಾ, ಅರವಿಂದ ಇಬ್ಬರ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು.

ಸುಪ್ರೀತ, ಅಲಿಶಾ ಇಬ್ಬರೂ ಏನು ಮಾಡಬೇಕು ಎಂದು ಗೊತ್ತಾಗದೇ ಸುಮ್ಮನೇ ಕೂತಿದ್ದರು. ತಮಗೆ ತೀರ ಅಪರಿಚಿತವಾದ, ತಮ್ಮ ಉಪಸ್ಥಿತಿಯ ಯಾವ ಅವಶ್ಯಕತೆಯೂ ಇಲ್ಲದ ಸನ್ನಿವೇಶ, ಸಂದರ್ಭದಲ್ಲಿ ಬಲವಂತವಾಗಿ ಬಂದು ಇದ್ದೇವೆ, ಅನ್ನಿಸಿಬಿಟ್ಟಿತ್ತು, ಅವರಿಗೆ.

ಸುಕನ್ಯಾಳಿಗೆ ಅರವಿಂದನ ಈ ನಿಷ್ಠುರಮಾತು ಈ ಸಂಜೆಯ ಮಾತುಕತೆಯ ಮುಜುಗರದಿಂದ ಬಂದಿದೆ ಎಂದನ್ನಿಸಿತು. ಇಷ್ಟು ದಿನ ತನ್ನ ಹತ್ತಿರವೇ ಇಷ್ಟು ನಿಶ್ಚಯವಾಗಿ ಮಾತಾಡದ ಆತ ಇಲ್ಲಿ, ಬೆಟ್ಟಿಯ ಮನೆಯಲ್ಲಿ ಈ ವಿಷಯವನ್ನು ಎಲ್ಲರ ಮುಂದೆ ಹೇಳಿದ್ದರ ಉದ್ದೇಶವಾದರೂ ಏನು? ಅದೂ ಮಕ್ಕಳ ಹತ್ತಿರ ಈ ನಾಲ್ಕು ದಿನದ ರಜೆಯಲ್ಲಿ ಈ ವಿಷಯದ ಬಗ್ಗೆ ಏನೂ ಮಾತಾಡಬಾರದು ಎಂದು ತಾವಿಬ್ಬರೂ ಮಾತಾಡಿಕೊಂಡಿದ್ದಾಗ್ಯೂ?

ಅಕಸ್ಮಾತ್ ಈತ ತನ್ನ ನಿರ್ಧಾರ ನಿಶ್ಚಯವೇ ಆಗಿದ್ದಲ್ಲಿ ತಾನು ಅರವಿಂದನ ಜತೆ ಹೋಗದೇ ಇರಲಾಗುತ್ತದೆಯಾ?

ವಿಶೂ ‘ಡ್ಯಾಡಿ, ನೀನು, ಅಮ್ಮ ಇಬ್ಬರೂ ಇಂಡಿಯಾಕ್ಕೆ ಹೋಗಿಬಿಟ್ಟರೆ ಇಲ್ಲಿ ನಮಗೆ ಯಾರಿರ್ತಾರೆ?’

‘ನಿಮಗೆ ನೀವೇ ಇರ್ತೀರಾ. ನಾವೆಷ್ಟು ದಿನ ಇರ್ತೀವಿ ಅಂತಂದುಕೊಂಡಿದ್ದೀರ?’

‘ಡ್ಯಾಡಿ, ದಟ್ ಈಸ್ ಸೋ ನಾಟ್ ಫೇರ್. ನಾವು ಎಲ್ಲಿಯೇ ಇದ್ದರೂ ಈ ಮನೇಗೇ ವಾಪಸ್ ಬರೋದು. ನಾವು ಬೆಳೆದ ಮನೆ. ಇಲ್ಲಿನ ಸರೋವರಗಳು, ಬೇಸಗೆಯ ಕ್ಯಾಂಪುಗಳು, ಮನೆಯ ಹಿಂದೆ ಬರುವ ಜಿಂಕೆ, ವೈಕಿಂಗ್ಸು, ಟ್ವಿನ್ಸ್ ಟೀಮುಗಳು, ಬೇಸ್‌ಮೆಂಟಿನ ನನ್ನ ಪ್ಲೇಸ್ಟೇಷನ್ ಸೆಟ್ಟು ಎಲ್ಲ ಹಾಗೇ ಇರಬೇಕು. ನಾನು ಎಲ್ಲೇ ಹೋದರೂ ಮಿನೆಸೊಟಾದವ್ನು ಅಂತ ಹೇಳ್ಕೊಂಡು ತಿರುಗ್ತೀನಿ. ನೀವು ಇಲ್ಲಿಂದ ಹೋಗಿಬಿಟ್ರೆ ನಾನೇನು ಮಾಡೋದು. ಎಲ್ಲದಕ್ಕಿಂತ ನ್ಯೂಯಾರ್ಕಿನ ಅಪಾರ್ಟ್‌ಮೆಂಟಿನಲ್ಲಿ ವರ್ಷ ಇಡೀ ಇರೋದು ಹೇಗಮ್ಮಾ? ನೋ.. ನೋ.. ದಿಸ್ ಈಸ್ ನಾಟ್ ಫೇರ್.’

‘ಅಲ್ಲವೋ, ವರ್ಷಕ್ಕೆ ನಾಲ್ಕು ದಿನ ಬಂದು ಹೋಗ್ತೀರಾ. ನಾವಿಬ್ಬರು ಇಲ್ಲಿ ಇಷ್ಟು ದೊಡ್ಡ ಮನೇಲಿ ಇದ್ದುಕೊಂಡು ಮಾಡೋದಾದರೂ ಏನು?’

‘ಅದಕ್ಕೆ ದೇಶ ಬಿಟ್ಟು ಯಾಕೆ ಹೋಗಬೇಕು? ಮಕ್ಕಳನ್ನು ಕಾಲೇಜಿಗೆ ಕಳಿಸಿದ ತಕ್ಷಣ ನಿಮ್ಮೆಲ್ಲ ಜವಾಬ್ದಾರಿ ಮುಗೀತಂತಾನಾ? ನಮಗೆ ಈಗಲೇ ನಿಮ್ಮ ಅವಶ್ಯಕತೆ ಜಾಸ್ತಿ ಇರೋದು. ವಿನಯನ್ನ, ಅಲಿಶಾನ್ನ ನೋಡಿ. ಅವರು ಪೂರಾ ಕಳೆದುಹೋಗಿದಾರೆ ಅನ್ನಿಸೋದಿಲ್ವ. ನಾನಿನ್ನೂ ಬಹಳ ಸಾಧಿಸೋದಿದೆ, ಜೀವನದಲ್ಲಿ.’

‘ಬರೀ ನಿಮ್ಮ ಬಗ್ಗೆ ಯೋಚಿಸುತ್ತೀರಲ್ಲೋ. ಇನ್ನಿಪ್ಪತ್ತು ವರ್ಷಕ್ಕೆ ನಾನು, ಅಮ್ಮ ಶಾರದತ್ತೆ ತರ ಆದರೆ ನಿಮ್ಮನ್ನು ನಂಬಿಕೊಳ್ಳೋಕೆ ಆಗುತ್ತಾ? ನಾವು ನಮ್ಮ ಮುಂದಿನ ವ್ಯವಸ್ಥೆ ಮಾಡಿಕೋಬೇಕು.’

‘ಅದಕ್ಕೆ ಇಂಡಿಯಾಕೆ ಯಾಕೆ ಹೋಗಬೇಕು? ವಯಸ್ಸಾದವರಿಗೆ ಸವಲತ್ತುಗಳು ಇಲ್ಲಿ ಚೆನ್ನಾಗಿದೆಯೋ, ಅಲ್ಲಿಯೋ?’

‘ಅಪ್ಪಾ ಮಾರಾಯ. ಅಲ್ಲಿ ಆಶ್ರಮದಲ್ಲಿ ನಮಗೆ ಹೇಗೆ ಬೇಕೋ ಹಾಗಿರಬಹುದು. ಇಲ್ಲಿನ ನರ್ಸಿಂಗ್ ಹೋಮ್‌ಗಳನ್ನು ನೋಡಿದ್ದೀಯಾ? ಬರೇ ಆಲೂಗೆಡ್ಡೆ, ಒಂದಿಷ್ಟು ಸೊಪ್ಪು ತಿಂದುಕೊಂಡು, ಬಿಂಗೊ ಆಡಿಕೊಂಡು ಉಳಿದೆಲ್ಲ ಜೀವನಾನ ನಾವು ಸಾಗಿಸೋಕೆ ಆಗೊಲ್ಲ.’

ಅಷ್ಟು ಹೊತ್ತು ಸುಮ್ಮನಿದ್ದ ವಿನಯ ಈಗ ಹೇಳಿದ ‘ಡ್ಯಾಡಿ, ನರ್ಸಿಂಗ್ ಹೋಮಿಗೆ ಹೋಗುವಂಥಾದ್ದು ಏನಾಗಿದೆ, ನಿಮ್ಮಿಬ್ಬರಿಗೆ ಈಗ? ಸುಮ್ಮನೆ ಎಲ್ಲ ಉತ್ಪ್ರೇಕ್ಷೆ ಮಾಡಿಬಿಡಬೇಡಿ. ಸ್ವಲ್ಪ ದಿನ ಬೇಕಾದರೆ ಇಂಡಿಯಾಕ್ಕೆ ಹೋಗಿ ಬನ್ನಿ. ನಂತರ ಇದರ ಬಗ್ಗೆ ಮಾತಾಡೋಣವಂತೆ. ಈಗಲೇ ಮನೆ ಗಿನೆ ಮಾರೋದು ಬೇಡ ಅನ್ನಿಸುತ್ತೆ. ಆದರೆ ಅದು ನಿಮ್ಮ ಮನೆ. ಅದನ್ನು ಮಾರೋದು, ಬಿಡೋದು ಎಲ್ಲ ನಿಮಗೆ ಬಿಟ್ಟಿದ್ದು. ಅದರಿಂದ ಬರೋ ಅಷ್ಟೂ ದುಡ್ಡನ್ನೂ ಆಶ್ರಮಕ್ಕೆ ಕೊಡಬೇಕಂತಿದ್ದೀರ? ನಂದೂ ಅಲಿಶಂದೂ ಎಲ್ಲ ಸೆಟಲ್ ಆಗಿದೆ. ಆದರೆ, ವಿಶೂದು ಇನ್ನೂ ಈಗ ಕಾಲೇಜು ಮುಗೀತಾ ಇದೆ, ಗೊತ್ತಲ್ಲ’ ವ್ಯವಹಾರಸ್ಥನಂತೆ ಮಾತಾಡಿದ, ವಿನಯ.

‘ವಿಶೂಗೆ ಒಂದು ವ್ಯವಸ್ಥೆ ಮಾಡಿಯೇ ನಾವು ಮುಂದುವರಿಯುವುದು. ಅದರ ಯೋಚನೆ ನೀ ಮಾಡಬೇಡ. ನೀನು ನಿನ್ನ ಸಂಸಾರದ ಯೋಚನೆ ಮಾಡಿಕೋ’ ಅರವಿಂದ ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟ.

ಎಲ್ಲರೂ ಮಾತಾಡದೇ ಸುಮ್ಮನಾದರು.

ಪಾರ್ಟಿ ನಿಧಾನವಾಗಿ ಖಾಲಿಯಾಗುತ್ತಿತ್ತು. ಹೀಟರುಗಳನ್ನು ಒಂದು ಕಡೆಯಿಂದ ಆರಿಸುತ್ತಾ ಬರುತ್ತಿದ್ದರು. ಎಲ್ಲರೂ ನಿಧಾನವಾಗಿ ಎದ್ದು ಮನೆಗೆ ಹೊರಡುತಿದ್ದರು. ಸುಕನ್ಯಾ ಎದ್ದು ಅರವಿಂದನ ಕೈಹಿಡಿದು ಕೂರಿಸಲಿಕ್ಕೆ ಪ್ರಯತ್ನ ಮಾಡಿದಳು. ಆದರೆ, ಅರವಿಂದ ಕೊಸರಿಕೊಂಡು ಎದ್ದು ಮನೆಕಡೆ ಹೊರಟ.

(ಮುಂದುವರೆಯುವುದು…)