ಪೂರ್ವಪಶ್ಚಿಮ ದೇಶಗಳಲ್ಲಿ, ಉತ್ತರದಕ್ಷಿಣ ಧ್ರುವಗಳಲ್ಲಿ, ಒಳನಾಡುಹೊರನಾಡಿನಲ್ಲಿ ಜನನುಡಿಗೆ ಬೆಲೆ ಸಂದ ಉದಾಹರಣೆಗಳು ನಮ್ಮಲ್ಲಿವೆ. ಜನನಾಯಕರು ಸಾಮಾನ್ಯಜನರ ಸತ್ಯಕ್ಕೆ ತಲೆಬಾಗಿದ ನಿದರ್ಶನಗಳಿವೆ. ಆದರೂಉರುಳುತ್ತಿರುವ ಕಾಲಚಕ್ರ ಕೆಲ ಕಹಿಸತ್ಯಗಳನ್ನು, ಕೆಲ ಗುರುತರ ಬದಲಾವಣೆಗಳನ್ನು ದಾಖಲಿಸುತ್ತಿದೆ. ಅಮೆರಿಕ ದೇಶದ ಹಿಂದಿನ ಅಧ್ಯಕ್ಷ ಒಬಾಮ ಹೇಳಿದಂತೆವಯಸ್ಸಾದ ಕೆಲ ಹಿರಿಯರು ಅದರಲ್ಲೂ ಗಂಡಸರುತಪ್ಪು ಮಾಡುತ್ತಿದ್ದಾರೆ. ದೊಡ್ಡ ದೇಶಗಳಲ್ಲಿ ನಡೆಯುತ್ತಿರುವ ತಪ್ಪುಗಳನ್ನು ಸರಿತೂಗಿಸಲೇನೋ ಎಂಬಂತೆ ಚಿಕ್ಕಚಿಕ್ಕ ದೇಶಗಳಲ್ಲಿ ಹೆಂಗಸರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಜನಪರ ದನಿಯನ್ನು ಕಿರಿಯರು ಮಾರ್ದನಿಸುತ್ತಿದ್ದಾರೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಎಂದೆಂದಿಗೂ ಇತ್ತು. ಎಂದೆಂದಿಗೂ ಇರುತ್ತದೆ – Always Was. Always Will Be. ಈ ಎರಡು ಘೋಷವಾಕ್ಯಗಳನ್ನು ಮುಂದಿನ ವರ್ಷ ೨೦೨೦ರ NAIDOC ಆಚರಣೆಗೆ ಮುಖ್ಯವಿಷಯವನ್ನಾಗಿ ಆರಿಸಲಾಗಿದೆ. ಹಾಗೆಂದು ಕಳೆದ ವಾರವಷ್ಟೇ ಪ್ರಕಟವಾಗಿದೆ. ಪ್ರಕಟವಾದ ಕೂಡಲೇ ನನ್ನ ಅಬರಿಜಿನಲ್ ಮಿತ್ರರೊಬ್ಬರು ಅದನ್ನು ತನ್ನ ಫೇಸ್ಬುಕ್ ಗೋಡೆಯಲ್ಲಿ ಬರೆದುಕೊಂಡು ‘ಇದಕ್ಕಾಗಿ ಬಹಳಷ್ಟು ಕಾದಿದ್ದೆ’ ಎಂದು ಹೇಳಿಕೊಂಡರು. NAIDOC ಅಂದರೆ National Aborigines and Islanders Day Observance Committee ಆಚರಿಸುವ ವಿವಿಧ ಕಾರ್ಯಕ್ರಮಗಳು. ಅವೆಲ್ಲವೂ ಆಸ್ಟ್ರೇಲಿಯಾ ದೇಶದ ಅಬರಿಜಿನಿಗಳು ಮತ್ತು ದ್ವೀಪವಾಸಿಗಳಿಗೆ ಮಾತ್ರ ಸಂಬಂಧಿಸಿದ್ದು.

ವರ್ಷದ ವ್ಯಕ್ತಿ ಬಿರುದು, ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಅಬರಿಜಿನಿಗಳು ಮತ್ತು ದ್ವೀಪವಾಸಿಗಳನ್ನು ಗುರುತಿಸುವುದು, ತಮ್ಮ ಕಪ್ಪು ಇತಿಹಾಸದ ಬಗ್ಗೆ ಮಾತನಾಡುವುದು, ತಮ್ಮ ಜನರ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಹೋರಾಟವನ್ನು ಒತ್ತಿ ಹೇಳುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳಿರುತ್ತವೆ. ಅವೆಲ್ಲವೂ ಜುಲೈ ತಿಂಗಳ ಮೊದಲ ಭಾನುವಾರದಿಂದ ಆರಂಭವಾಗಿ ಎರಡನೇ ಭಾನುವಾರ ಮುಗಿಯುತ್ತವೆ.

ನಿಜಾರ್ಥದಲ್ಲಿ ನೋಡಿದರೆ NAIDOC ಆಚರಣೆಯ ಮುಖ್ಯ ಉದ್ದೇಶ ತಾವುಗಳು ಅನುಭವಿಸುತ್ತ ಬಂದಿರುವ ನೂರಾರು ವರ್ಷಗಳ ತುಳಿತದ ಕರಾಳ ಇತಿಹಾಸವನ್ನು ಅಬರಿಜಿನಿಗಳು ನೆನಪಿಸಿಕೊಂಡು ತಮ್ಮ ನೆಲದಲ್ಲೇ ತಮ್ಮನ್ನು ಪರಕೀಯರನ್ನಾಗಿಸಿ, ಈಗಲೂ ಹಾಗೆಯೇ ನಡೆಸಿಕೊಳ್ಳುತ್ತಿರುವ ಅಧಿಕಾರಶಾಹಿ ಶಕ್ತಿಗಳನ್ನು ಪ್ರಶ್ನಿಸುವುದು. ಪ್ರತಿಯೊಬ್ಬರೂ ಹಾಗೆ ಪ್ರಶ್ನಿಸಿ, ನ್ಯಾಯವನ್ನು ಕೇಳುತ್ತ ಎಚ್ಚರದಿಂದಿರಿ ಎಂದು ತಮ್ಮ ಜನರನ್ನು ಕೇಳಿಕೊಳ್ಳುವುದು. ಯಾಕೋ ಆ ಎರಡು ‘ಎಂದೆಂದಿಗೂ ಇತ್ತು. ಎಂದೆಂದಿಗೂ ಇರುತ್ತದೆ’ ಘೋಷವಾಕ್ಯಗಳು ಎಡಬಿಡದೆ ಹಿಂಬಾಲಿಸುತ್ತಿವೆ. ಈ ಊರಿನಲ್ಲೂ, ಆ ಊರಿನಲ್ಲೂ.

ಇತ್ತೀಚೆಗೆ ಈ ಊರಿನ ಮುಖ್ಯಸ್ಥ ತನ್ನ ಖಾಸಗಿ ರಜೆಯನ್ನು ಕಳೆಯಲು ಪರದೇಶದ ಸುಂದರ ಸಮುದ್ರತಾಣಕ್ಕೆ ಕುಟುಂಬದೊಂದಿಗೆ ಹೋಗಿದ್ದರು. ಜಾಗವೇನೋ ಸೊಗಸಾಗಿತ್ತು, ಆದರೆ ಸಮಯ ಮಾತ್ರ ತಪ್ಪುಎಣಿಕೆಯಾಗಿತ್ತು. ಎಲ್ಲೆಲ್ಲೂ ಪೊದೆಬೆಂಕಿ ಹತ್ತಿಕೊಂಡು ಉರಿಯುತ್ತಿರುವ, ಜನ ಹಾಹಾಕಾರ ಮಾಡುತ್ತಿರುವ ಈ ಸಮಯದಲ್ಲಿ ಊರಿನಿಂದ ಕಾಲುಕಿತ್ತು ಅದೆಲ್ಲೋ ಸವಿಸಮಯಕ್ಕೆಂದು ಹೊರಟುಬಿಟ್ಟರೆ ಸರಿಯಾದೀತೇ, ಎಂದು ಜನ ಕೇಳಿಯೇಬಿಟ್ಟರು. ಬೆಂಕಿಯಿಂದ ಹೆಚ್ಚಿರುವ ತಾಪಮಾನದಿಂದ ಬಳಲುತ್ತಾ, ಮಳೆಯಿಲ್ಲದೆ ಬೆಂಗಾಡಾಗಿರುವ ನೆಲವನ್ನು, ಧೂಳು ಕವಿದ ಆಕಾಶವನ್ನ ನೋಡುತ್ತಾ ಎಲ್ಲರೂ ನಿಟ್ಟುಸಿರುಬಿಡುತ್ತಿದ್ದೀವಿ. ಬೆಂಕಿಯಿಂದ ಮನೆಮಠ ಕಳೆದುಕೊಂಡ ಕುಟುಂಬಗಳು, ಬರದಿಂದ ಕಂಗೆಟ್ಟಿರುವ ರೈತಾಪಿ ಜನರು, ಅವರ ಜಾನುವಾರುಗಳು ಬೇಗುದಿಯ ಬೆಂಕಿಯಲ್ಲಿ ಬೇಯುತ್ತಿವೆ. ಇವರುಗಳ ಕ್ರಿಸ್ಮಸ್ ದಿನವನ್ನು ಬೆಳಗಲು ಇಡೀ ದೇಶಕ್ಕೆ ದೇಶವೇ ಮುಂದೆಬಿದ್ದು ಚಂದಾ ಎತ್ತುತ್ತಿದೆ. ನಿಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂಬ ಅಹವಾಲು ಎಲ್ಲೆಲ್ಲೂ ಮಾರ್ದನಿಸುತ್ತಿದೆ. ಜೊತೆಗೆ ಹೇಗಾದರೂ ಮಾಡಿ ಆಹಾರ ನೀರು ಕೊಟ್ಟು ಮೃಗಪಕ್ಷಿಗಳನ್ನು ರಕ್ಷಿಸಿ, ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದಾರೆ. ಆಶೆ-ಹತಾಶೆ, ಅಳು-ನಗುವಿನ ಮಿಶ್ರಣವನ್ನು ಬೆರೆಸುತ್ತಲೇ ಮನೆಗಳಲ್ಲಿ ಕ್ರಿಸ್ಮಸ್ ಕೇಕ್ ಮತ್ತು ಪುಡ್ಡಿಂಗ್ ತಯಾರಾಗಿದೆ. ಇದೆಲ್ಲವನ್ನೂ ಬಿಟ್ಟು ರಜೆಗೆಂದು ದೂರದೂರಿಗೆ ಹೋದ ಪ್ರಧಾನಿಗೆ ಜನ ಛೀಮಾರಿ ಹಾಕೇಹಾಕಿದರು. ರೋಮ್ ನಗರ ಹತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸಿದನಂತೆ ಎಂಬ ಉದಾಹರಣೆಯನ್ನು ಕೊಟ್ಟು ‘ಸ್ವಾಮಿ, ನೀವು ರಜೆಗೆಂದು ಹೋದ ಸ್ಥಳದಲ್ಲೇ ಖಾಯಂ ಇದ್ದುಬಿಡಿ, ವಾಪಸ್ ಬರುವುದೇನೋ ಬೇಕಿಲ್ಲ,’ ಎಂದು ಅವಹೇಳನ ಮಾಡಿದ್ದಕ್ಕೆ ಪ್ರಧಾನಿಗಳು ಎಚ್ಚೆತ್ತುಕೊಂಡರು. ಸಮುದ್ರತೀರದಿಂದಲೇ ತಮ್ಮ ನಡೆಗೆ ಕ್ಷಮೆ ಕೇಳಿ, ರಜೆಯನ್ನು ಮೊಟಕುಗೊಳಿಸಿ ದಡಬಡಾಯಿಸಿ ಊರಿಗೆ ಮರಳಿದರು. ‘ಬಂದ್ಯಾ ಸರಿ, ನಿನ್ನ ಕೆಲಸ ಕರ್ತವ್ಯ ಸರಿಯಾಗಿ ನಿಭಾಯಿಸು,’ ಎಂದು ಜನ ಅವರಿಗೆ ಆಜ್ಞಾಪಿಸಿದ್ದಾರೆ.

ಎಂದೆಂದಿಗೂ ಜನದನಿ ಇತ್ತು. ಎಂದೆಂದಿಗೂ ಅದು ಇರುತ್ತದೆ. ದನಿಯಾಗಿ, ಅದರ ಹನಿಯಾಗಿ ಕಿವಿಗಡಚಿಕ್ಕುವಂತೆ ದನಿಯ ಶಕ್ತಿಯನ್ನು ಬೆಳೆಸಿದ ಅನೇಕ ಜನಪರ ದ್ವನಿಗಳು ನಮ್ಮ ಇತಿಹಾಸದಲ್ಲಿವೆ. ಪೂರ್ವ-ಪಶ್ಚಿಮ ದೇಶಗಳಲ್ಲಿ, ಉತ್ತರ-ದಕ್ಷಿಣ ಧ್ರುವಗಳಲ್ಲಿ, ಒಳನಾಡು-ಹೊರನಾಡಿನಲ್ಲಿ ಜನನುಡಿಗೆ ಬೆಲೆ ಸಂದ ಉದಾಹರಣೆಗಳು ನಮ್ಮಲ್ಲಿವೆ. ಜನನಾಯಕರು ಸಾಮಾನ್ಯಜನರ ಸತ್ಯಕ್ಕೆ ತಲೆಬಾಗಿದ ನಿದರ್ಶನಗಳಿವೆ. ಆದರೂ … ಉರುಳುತ್ತಿರುವ ಕಾಲಚಕ್ರ ಕೆಲ ಕಹಿಸತ್ಯಗಳನ್ನು, ಕೆಲ ಗುರುತರ ಬದಲಾವಣೆಗಳನ್ನು ದಾಖಲಿಸುತ್ತಿದೆ.

ಅಮೆರಿಕ ದೇಶದ ಈ ಹಿಂದಿನ ಅಧ್ಯಕ್ಷ ಒಬಾಮ ಹೇಳಿದಂತೆ ‘ವಯಸ್ಸಾದ ಕೆಲ ಹಿರಿಯರು ಅದರಲ್ಲೂ ಗಂಡಸರು’ ತಪ್ಪು ಮಾಡುತ್ತಿದ್ದಾರೆ. ದೊಡ್ಡ ದೇಶಗಳಲ್ಲಿ ನಡೆಯುತ್ತಿರುವ ತಪ್ಪುಗಳನ್ನು ಸರಿತೂಗಿಸಲೇನೋ ಎಂಬಂತೆ ಚಿಕ್ಕಚಿಕ್ಕ ದೇಶಗಳಲ್ಲಿ ಹೆಂಗಸರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಜನಪರ ದನಿಯನ್ನು ಕಿರಿಯರು ಮಾರ್ದನಿಸುತ್ತಿದ್ದಾರೆ. ಆದರೂ … ಎಂದೆಂದಿಗೂ ಇದ್ದ ಮೇಲು-ಕೀಳು ಏಣಿಯಾಟದ ಕಹಿ ಹೆಪ್ಪುಗಟ್ಟಿದೆ. ಸದಾಕಾಲವೂ ಮಾನವೀಯ ಮೌಲ್ಯಗಳು ಕಟ್ಟೆಚ್ಚರದಿಂದಿರಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಎಲ್ಲೆಲ್ಲೂ ಪೊದೆಬೆಂಕಿ ಹತ್ತಿಕೊಂಡು ಉರಿಯುತ್ತಿರುವ, ಜನ ಹಾಹಾಕಾರ ಮಾಡುತ್ತಿರುವ ಈ ಸಮಯದಲ್ಲಿ ಊರಿನಿಂದ ಕಾಲುಕಿತ್ತು ಅದೆಲ್ಲೋ ಸವಿಸಮಯಕ್ಕೆಂದು ಹೊರಟುಬಿಟ್ಟರೆ ಸರಿಯಾದೀತೇ, ಎಂದು ಜನ ಕೇಳಿಯೇಬಿಟ್ಟರು.

(ಆಂಟೋನಿಯೋ ಗ್ರಾಮ್ಷಿ)

ಶಿವರಾಮ ಕಾರಂತರ ಚೋಮ ತನ್ನ ದುಡಿಯನ್ನ ಬಾರಿಸುತ್ತ ತನ್ನವರರೆಲ್ಲರ ನೋವಿಗೆ ದನಿಯಾದ. ಅವನ ವರ್ಗ, ಹುಟ್ಟು, ಜಾತಿ-ಕುಲ, ಅನಕ್ಷರತೆ ಎಲ್ಲವೂ ಅವನ ದನಿಗಳೇ ಆದರೂ ಆ ದನಿಗಳನ್ನು ಪ್ರತ್ಯೇಕಿಸಿ ಪಕ್ಕಕ್ಕಿಟ್ಟು ನೋಡಿದ್ದು, ಆ ದನಿಗಳನ್ನು ಅಮುಕಿ ತುಳಿದಿದ್ದು ಸಮಾಜದ ಪ್ರಬಲ ಶಕ್ತಿಗಳು. ತನ್ನ ದನಿಗಳಲ್ಲಿ ನೋವು ತುಂಬಿರಬೇಕು ಎಂದು ಅವನೇನು ಬಯಸಿದ್ದಲ್ಲ. ಆದರೆ ಅವನಲ್ಲಿ ನೋವಿರಲೇಬೇಕು ಎಂದು ತೀರ್ಮಾನಿಸಿದವರು ಮೇಲ್ವರ್ಗ, ಜಾತಿ, ಹಣವಿದ್ದ ಬಣ ಮತ್ತು ಅಧಿಕಾರಕ್ಕೆ ಸೇರಿದ್ದವರು. ತಮ್ಮ ಧರ್ಮ ಮತ್ತು ಸಂಸ್ಕೃತಿಗಳ ಪೋಷಿಸುವ ವ್ಯವಸ್ಥೆಗಳನ್ನು ಬಳಸಿಕೊಂಡು ಹುಟ್ಟುಹಾಕುವ ಪ್ರಾಬಲ್ಯವನ್ನು ಮೇಲ್ವರ್ಗಗಳ ಜನರು ಇತರರ ಮೇಲೆ ಹೇರಿ ಅವರ ಜೀವನವನ್ನು ನಿಯಂತ್ರಿಸುವ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ತಮ್ಮಂತಿಲ್ಲದ, ತಮ್ಮ ಧರ್ಮ ಮತ್ತು ಸಂಸ್ಕೃತಿಗಳನ್ನು ಆಚರಿಸದ ಇತರರನ್ನು ಕೆಳಗಿನವರು ಎಂದು ಕರೆದು ಅವರ ಮೇಲೆ ಅಧಿಕಾರ ಸ್ಥಾಪಿಸುವುದರ ಬಗ್ಗೆ ಇಟಲಿಯ ಆಂಟೋನಿಯೋ ಗ್ರಾಮ್ಷಿ (Antonio Gramsci) ಎಂಬ ತತ್ವಶಾಸ್ತ್ರಜ್ಞ ಬರೆದುದನ್ನ ಓದಿದರೆ ದನಿಯ ಒಂದು ಬಿಂದುವಾಗುವ ಆಸೆ ತನ್ನಷ್ಟಕ್ಕೆ ತಾನೇ ಮೊಳಕೆಯೊಡೆಯುತ್ತದೆ.

ಗ್ರಾಮ್ಷಿ ಚಿಂತನೆಗಳಿಂದ ಪ್ರೇರಿತರಾಗಿ ಭಾರತೀಯ ವಿದ್ವಾಂಸರಾದ ರಣಜಿತ್ ಗುಹಾ, ಗಾಯತ್ರಿ ಚಕ್ರವರ್ತಿ-ಸ್ಪಿವಾಕ್, ಪಾರ್ಥ ಚಟರ್ಜಿ ಮುಂತಾದವರು Subaltern Studies ಎಂಬ ಬೋಧನ ವಿಷಯವನ್ನೇ ಹುಟ್ಟುಹಾಕಿ ಅದನ್ನು ವಿಶ್ವವಿದ್ಯಾನಿಲಯಗಳಲ್ಲಿ ಪೋಷಿಸಿ ಬೆಳೆಸಿದ್ದಾರೆ. ತುಳಿತಕ್ಕೊಳಪಟ್ಟವರ ದನಿಯ ಬಗ್ಗೆ ಅಪಾರ ಕೆಲಸ ನಡೆದಿದೆ.

ಅದನ್ನೆಲ್ಲ ನಾವಿಂದು ಮತ್ತು ಎಂದೆಂದೂ ನೆನಪಿಸಿಕೊಳ್ಳಬೇಕಿದೆ. ವರ್ಗ, ಜಾತಿ, ಲಿಂಗಬೇಧಗಳಿಂದ, ಅಂತಹುದೇ ಮತ್ತಿತರ ವಿಭಜಕಗಳಿಂದ ಪ್ರತ್ಯೇಕಿಸಲ್ಪಟ್ಟು ದಮನ, ತುಳಿತ ಮತ್ತು ತಾರತಮ್ಯಗಳಿಗೊಳಗಾದವರ ಬಗ್ಗೆ ಆ ಊರಿನಲ್ಲಿ ಸಾಕಷ್ಟು ಮಾತನಾಡಿದ್ದು ಅದು ಸವಕಲಾಗಿದ್ದರೂ ಅಧಿಕಾರ ಮತ್ತು ನಿಯಂತ್ರಣವೆಂಬ ಮಾನವ ಹಂಬಲ ತಲೆಯೆತ್ತಿದೆ. ಅದರ ಬಗ್ಗೆ ಯಾವುದೇ ರೀತಿಯ ನಾಚಿಕೆಯಾಗಲಿ, ಕಸಿವಿಸಿಯಾಗಲಿ ಕಂಡಿಲ್ಲ. ಈ ಊರಿನ ಮುಖ್ಯಸ್ಥ ಜನಾರೋಪಕ್ಕೆ, ಆಗ್ರಹಕ್ಕೆ ಗುರಿಯಾಗಿ ಕ್ಷಮಾಪಣೆ ಕೇಳುತ್ತಿದ್ದ ಹೊತ್ತಿನಲ್ಲೇ ಆ ಊರಿನ ಮುಖ್ಯಸ್ಥ ಜನನುಡಿಗಿಂತಲೂ ತನ್ನ ಮಾತೇ ಮುಖ್ಯ ಎಂದು ಹಠ ಹಿಡಿದಿರುವುದನ್ನು ನೋಡಿದರೆ ದನಿ-ಹನಿಗಳು ಇನ್ನಷ್ಟು ಹೆಚ್ಚಾಗಿ ಮಳೆಯಾಗಿ ಇಲ್ಲೂ ಅಲ್ಲೂ ಧೋ ಎಂದು ಸುರಿಯಬೇಕಿದೆ.

ಮಹಾಶ್ವೇತಾ ದೇವಿಯ ಕೃತಿಗಳನ್ನು ಭಾರತದ ಎಲ್ಲಾ ಭಾಷೆಗಳಲ್ಲೂ ಪ್ರಕಟಿಸಿ ಅವನ್ನು ದೇಶಪೂರ್ತಿ ಇರುವ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಕಡ್ಡಾಯವಾಗಿ ಸೇರಿಸಬೇಕು ಎಂಬ ಹಂಬಲ ನನಗೆ. ಜ್ಞಾನಪೀಠ ಪ್ರಶಸ್ತಿ ಪಡೆದ ಪುರುಷ ಲೇಖಕರ ಚಿತ್ರಗಳನ್ನು, ಹೆಸರುಗಳನ್ನು, ಅವರ ಬಗೆಗಿನ ನೆನಪುಗಳನ್ನು ಪ್ರಕಟಿಸುವವರಿಗೆ ದಯವಿಟ್ಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಿಳಾ ಲೇಖಕಿಯರನ್ನೂ ಕೂಡ ನೆನಪಿಸಿಕೊಳ್ಳಿ ಎಂದು ಹೇಳುವ ಹಂಬಲ ನನಗೆ. ಅವರಿಗೂ ಕೂಡ ಪ್ರಚಾರ ನೀಡಿ, ಅವರನ್ನೂ ಕೂಡ ಪ್ರಸಿದ್ಧರನ್ನಾಗಿಸಿ.

ಎದೆಯೊಳಗಿನ ನೋವು, ಆತಂಕ, ಅವಮಾನ, ನಿರಂತರವಾಗಿ ಅನುಭವಿಸುವ ತಾರತಮ್ಯಗಳು ಹೊರಬೀಳಲು ಕಾಗದದ ಮೇಲೆ ಬರೆಯುವ ಅಕ್ಷರದ ಜ್ಞಾನ ಇರಬೇಕೇ? ಶಾಲೆ-ಕಾಲೇಜಿಗೆ ಹೋಗಿ ಕಲಿತು ಓದು-ಬರಹ ಬಲ್ಲ ಜಾಣ್ಮೆ ಅವಶ್ಯವೇ? ನನ್ನ ದನಿಗೆ ಅಂತಸ್ತು, ವರ್ಗ ಇರಬೇಕೆ? ಇಲ್ಲ. ಬೇಕಿಲ್ಲ. ಅವಶ್ಯವಿಲ್ಲ. ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಶಾಲಾಶಿಕ್ಷಣ ಮಾತ್ರ ಕಡ್ಡಾಯ. ಸಮಾಜದಲ್ಲಿ ಶಾಲಾನಂತರದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯಿಲ್ಲ. ವಿಶ್ವವಿದ್ಯಾನಿಲಯದ ಪ್ರೊಫೆಸರುಗಳಿಗಿಂತಲೂ ದಿನನಿತ್ಯದ ಜೀವನದಲ್ಲಿ ಸದಾ ಬೇಕಿರುವ ಬಿಲ್ಡರ್, ಪ್ಲಂಬರ್, ಎಲೆಕ್ಟ್ರಿಷಿಯನ್ ಗಳಿಗೆ ಹೆಚ್ಚು ವರಮಾನವಿದೆ.

(ಮಹಾಶ್ವೇತಾ ದೇವಿ)

ಮತ್ತದೇ ಇಟಲಿ ದೇಶದ ಉದಾಹರಣೆ. ೧೯೬೭ರಲ್ಲಿ ಅಲ್ಲಿನ ಬಡ ರೈತಾಪಿ ಜನಸಮುದಾಯವನ್ನು ಪ್ರತಿನಿಧಿಸುತ್ತಾ ಎಂಟು ಹುಡುಗರು ‘ನಮ್ಮ ದನಿ ಹೊರಹೊಮ್ಮಲು ಅಕ್ಷರ ಜ್ಞಾನ ಬೇಕಿಲ್ಲ, ಅಂತಸ್ತು ಮತ್ತು ವರ್ಗವಿಲ್ಲದೆ ನಾವು ಮಾತನಾಡಬಲ್ಲೆವು, ನಮ್ಮ ಮಾತನ್ನು ಕೇಳಿಸಿಕೊಳ್ಳಲು ನಿಮ್ಮಲ್ಲಿ ತಕ್ಕ ಸಾಮರ್ಥ್ಯವಿರಬೇಕು,’ ಎಂದು ಬಹಳ ಸರಳವಾಗಿ ಹೇಳಿಬಿಟ್ಟರು. ಅವರ ದನಿಯ ಪುಸ್ತಕವೇ ‘Letter to a teacher – (by) Schoolboys of Barbiana’.

ಆ ಹುಡುಗರು ಹೇಳಿದ್ದು ಶಿಕ್ಷಣವ್ಯವಸ್ಥೆಯಲ್ಲಿದ್ದ ದೋಷಗಳ ಬಗ್ಗೆ, ಆ ಒಂದು ಬೃಹತ್ ವ್ಯವಸ್ಥೆ ಹೇಗೆ ಮತ್ತು ಎಷ್ಟು ನಿರ್ದಿಷ್ಟವಾಗಿ ಸಮಾಜದಲ್ಲಿ ತಾರತಮ್ಯಗಳನ್ನುಂಟು ಮಾಡುತ್ತದೆ, ಮೇಲು-ಕೀಳು ವರ್ಗ ಮತ್ತು ಅಂತಸ್ತು ಎಂಬ ಕಹಿಯನ್ನು ಹೇಗೆ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಉಣಿಸುತ್ತದೆ ಎಂದು. ಅವರ ಮಾತು ಅಂದಿಗೂ ಮತ್ತು ಇಂದಿಗೂ ಕೂಡ ಸತ್ಯ. ಯುರೋಪಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಫಲವಾಗಿ ಹೊಸದಾಗಿ ಕಂಡುಹಿಡಿಯಲಾಗಿದ್ದ, ತಯಾರಿಸುತ್ತಿದ್ದ ಯಂತ್ರಗಳನ್ನು ಬಳಸಲು ಕೈಪಿಡಿಗಳನ್ನು ಬರೆಯಲಾಗಿತ್ತು. ಅವನ್ನು ಸ್ವತಃ ಓದಿಕೊಂಡು ಯಂತ್ರಗಳನ್ನು ನಿಭಾಯಿಸುವ ಅವಶ್ಯಕತೆಯಿತ್ತು. ಅದರಿಂದಾಗಿ ಕೆಲಸಗಾರರಿಗೆ ಸಾಕ್ಷರತೆ ಬೇಕಿತ್ತು. ಆ ಸಂದರ್ಭಕ್ಕಾಗಿ, ಅಂತಹ ಕೈಗಾರಿಕಾ ಕೆಲಸಗಾರರಿಗಾಗಿ ಎಂದು ಹುಟ್ಟುಹಾಕಿದ ‘ಓದು-ಬರಹ ಮತ್ತು ಸರಳ ಗಣಿತ (literacy, numeracy)’ ಎಂಬ ಸೂತ್ರದ ಶಿಕ್ಷಣವ್ಯವಸ್ಥೆ ಮತ್ತು ಕ್ರಮವೇ ಇಂದಿಗೂ ಕೂಡ ಪ್ರಪಂಚದಾದ್ಯಂತ ಚಲಾವಣೆಯಲ್ಲಿರುವುದು. ಇದನ್ನು ಬದಲಿಸಲು ಅನೇಕರು ಪ್ರಯತ್ನಿಸಿದ್ದಾರೆ. ಆದರೂ … ಸಂಖ್ಯಾಬಲಕ್ಕೇ ಹೆಚ್ಚು ಬೆಲೆಕೊಡುವ ನಮ್ಮ ಸಮಾಜಗಳಲ್ಲಿ ಅನುಭವ ಕಲಿಕೆ ಮತ್ತು ಅನುಭವ ಜ್ಞಾನ ಅಲ್ಪರಿಗಷ್ಟೇ ಲಭ್ಯ.

ಅಂತಹ ಅನುಭವ ಜ್ಞಾನವನ್ನು ಕುರಿತು ಇಟಲಿಯ ಆ ಎಂಟು ಹುಡುಗರು ಹೇಳಿರುವುದು. ಇವತ್ತು ಹೆಚ್ಚುಕಡಿಮೆ ತನ್ನದೇ ಸ್ವಂತ ಅನುಭವದಿಂದ ಗ್ರೆಟ ಥುನ್ಬರ್ಗ್ ಮಾತನಾಡುತ್ತಿದ್ದಾಳೆ. ಅಂತಹುದೇ ಜೀವನಾನುಭವದಿಂದ ಭಾರತದ ಯುವಜನತೆ ಮಾತನಾಡುತ್ತಿದ್ದಾರೆ. ಕೇಳಿಸಿಕೊಳ್ಳುವ ಸಾಮರ್ಥ್ಯವಿರಬೇಕಾದ್ದು ಹಿರಿಯರಿಗೆ.

ಇಟಲಿಯ ಬಾರ್ಬಿಯಾನ ಶಾಲೆಯ ಹುಡುಗರು ೧೯೬೭ರಲ್ಲಿ ‘You don’t remember me or my name,’ ಅಂದರು. ಕೆಲವಾರಗಳ ಹಿಂದೆ ಗ್ರೆಟ ಥುನ್ಬರ್ಗ್ ‘ಹೌ ಡೇರ್ ಯು?’ ಅಂದಳು. ಹೋದವಾರವಷ್ಟೇ ಆಸ್ಟ್ರೇಲಿಯಾದ ಜನತೆ ಪ್ರಧಾನಿಯನ್ನು ‘ವೇರ್ ದ ಹೆಲ್ ಆರ್ ಯೂ?’ ಎಂದು ಕೇಳಿದರು. ಕೆಲದಿನಗಳ ಹಿಂದೆ ‘ನಮಸ್ಕಾರ ಸರ್, ನಾನು ಕೃಷ್ಣ’ ಎಂದು ಬೆಂಗಳೂರಿನಲ್ಲಿ ಟಿ.ಎಂ. ಕೃಷ್ಣ ಹೇಳಿದರು. ದನಿಯ ಹನಿಗಳು ಕೂಡುತ್ತಿವೆ. ಜನರು ಕೈಯಲ್ಲಿ ಸೂಜಿ-ದಾರ ಹಿಡಿದಿದ್ದಾರೆ. ತೂತುಬಿದ್ದ ಮನಸ್ಸುಗಳಿಗೆ ಪಂಕ್ಚರ್ ಹಾಕುತ್ತಾ ಹೊಸಬಟ್ಟೆ ನೇಯುತ್ತಿದ್ದಾರೆ.