ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.
ಮಲ್ಲಿಕಾರ್ಜುನ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ

ನನಗೆ ಮೊದಲ ಆಶ್ಚರ್ಯ ಮತ್ತು ಇವರ ಬಗ್ಗೆ ವೈಶಿಷ್ಟತೆಯ ಸೋಜಿಗ ಏನೆಂದರೆ ಇವರು ಹೇಗೆ ಕಥೆ ಬರೆಯುವದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂಬುದು. ಯಾಕೆ ಈ ಮಾತು ಅಂದ್ರೆ ಶೆಲ್ಲಿಕೇರಿಯವರು ಕೆ ಎ ಎಸ್ ಪಾಸಾಗಿ ಉನ್ನತ ಹುದ್ದೆಯಲ್ಲಿರುವವರು. ಕಚೇರಿಯ ಕೆಲಸದಿಂದ ವೇಳೆ ಸಿಗುವುದೇ ಕಷ್ಟ ಅನ್ನುವಾಗ ಇವರು ಕಥೆ, ಕವನ ಎಂದು ಬರೆಯುವುದರಲ್ಲಿ ತೊಡಗಿಸಿಕೊಂಡದ್ದು ಸ್ವಲ್ಪ ವಿಸ್ಮಯವೇ ಸರಿ.

(ಮಲ್ಲಿಕಾರ್ಜುನ ಶೆಲ್ಲಿಕೇರಿ)

ಸಂಕಲನದಲ್ಲಿರುವ ಎಂಟೂ ಕಥೆಗಳು ಗ್ರಾಮದ ಜೀವನ, ಭಾಷೆ, ವೃತ್ತಿ, ಹವ್ಯಾಸ ಮತ್ತು ಸಂಪ್ರದಾಯಗಳಿಗೆ ಸಂಬಂಧಪಟ್ಟವುಗಳಾಗಿವೆ. ನಾನು ಓದಿದ ಹಲವು ಕಥೆಗಾರರು ಗ್ರಾಮ ಜೀವನವನ್ನು ಬಹಳ ಶಕ್ತಿಯುತವಾಗಿ ಕಥೆಗಳಲ್ಲಿ ಚಿತ್ರಿಸುತ್ತಿದ್ದಾರೆ. ಅವರಲ್ಲಿ ಶೆಲ್ಲಿಕೇರಿಯವರು ಒಬ್ಬರು. ಆ ತರಹದ ಗ್ರಾಮ್ಯ ಜೀವನ ಅನುಭವವಿದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ.

ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ. “ದೀಡೆಕರೆ ಜಮೀನು” ಕಥೆಯಲ್ಲಿ ಪಾತ್ರ ಹೆಚ್ಚಿನ ಜಮೀನನ್ನು ನಿರಾಕರಿಸಿ, ಬರೀ ಸ್ವಲ್ಪದರಲ್ಲೇ ತೃಪ್ತಿಹೊಂದುವುದು ಅನುಕರಣೀಯವಾದರೂ ಕೊನೆಗೆ ಪ್ರಾಮಾಣಿಕತೆ ಮತ್ತು ಸರಳತೆಯ ಸೋಲುಂಟಾಗುತ್ತದೆ.


“ದಿವ್ಯ ಮೌನದ ಸಂತ” ಕಥೆಯಲ್ಲಿ ಕಥೆಗಾರರು ಅಧ್ಯಾತ್ಮದೊಂದಿಗೆ ಮೌನದ ಬಗ್ಗೆ ಅತಿ ವಿವರವಾಗಿ ವಿಶ್ಲೇಷಿಸಿದ್ದು ಸಂತೋಷ ಕೊಡುತ್ತದೆ. ಕೆಲವು ಕಥೆಗಳಲ್ಲಿ ಕಥೆಯ ವಿಷಯ ಕಡಿಮೆ ಅನಿಸಿದರೂ ಅವುಗಳಿಗೆ ಸಂಭಾಷಣೆಯು ಪುಷ್ಟಿ ನೀಡಿದೆ. ಈ ಎಲ್ಲಾ ಕಥೆಗಳಲ್ಲಿ ಇನ್ನೊಂದು ವೈಶಿಷ್ಟವೇನೆಂದರೆ ಎಲ್ಲವೂ ವರ್ತಮಾನದಲ್ಲಿ ಇದ್ದುಕೊಂಡೇ ಭೂತಕಾಲಕ್ಕೆ ಹೋಗಿ ಕಥೆ ಹೇಳುವ ಫ್ಲ್ಯಾಷ್‌ಬ್ಯಾಕ್ ತಂತ್ರವನ್ನು ಕಥೆಗಾರ ಬಳಸಿದ್ದಾರೆ. ಪ್ರತೀ ಕಥೆಯಲ್ಲಿ ನೋವು, ಸಂಕಟ, ಕ್ರೌರ್ಯ, ದುರಂತಗಳೇ ರಾರಾಜಿಸುತ್ತವೆ. ಒಳ್ಳೆತನವೆನ್ನುವುದು ಕಸಕಸೆಯಷ್ಟು ಮಾತ್ರ ಈ ಜಗತ್ತಿನಲ್ಲಿ ಉಳಿಯುತ್ತಿದೆ ಎನ್ನುವುದು ಸಾಬೀತಾಗುತ್ತಿದೆ. ಇದು ಸಮಾಧಾನಕರವೂ ಹೌದು.

(ಕೃತಿ: ದೀಡೆಕರೆ ಜಮೀನು(ಕಥಾ ಸಂಕಲನ), ಲೇಖಕರು: ಮಲ್ಲಿಕಾರ್ಜುನ ಶೆಲ್ಲಿಕೇರಿ, ಪ್ರಕಾಶಕರು: ಕಾಚಕ್ಕಿ ಪ್ರಕಾಶನ, ಪುಟಗಳು : 168, ಬೆಲೆ – 150/-)