ನನಗೆ ವಯಕ್ತಿಕವಾಗಿ ನಾನು ನೆಲೆಸಿರುವ ಜರ್ಮನಿ ಹಾಗೂ ಸುತ್ತಲಿನ ದೇಶಗಳ ಇತಿಹಾಸ ಬಹಳ ಸಪ್ಪೆ ಎನ್ನಿಸುತ್ತದೆ. ಇವರು ಅರಮನೆ ಎಂದು ಕರೆಯುವ ಕಟ್ಟಡಗಳನ್ನು ಮೀರಿಸುವ ಮನೆಗಳನ್ನು ನಮ್ಮ ದೇಶದಲ್ಲಿ ಈಗಿನ ರಾಜಕಾರಣಿಗಳು, ಉದ್ಯಮಿಗಳು ಹೊಂದಿದ್ದಾರೆ. ಇಷ್ಟು ವರ್ಷಗಳ ಪ್ರವಾಸದಲ್ಲಿ ನಮ್ಮ ಮೈಸೂರಿನ ಭವ್ಯ ಅರಮನೆಯಂತಹ ಮತ್ತೊಂದನ್ನು ಇಲ್ಲಿ ನೋಡಲಿಲ್ಲ. ಸಾವಿರಾರು ವರ್ಷಗಳ ಹಿಂದಿನ, ಗತ-ವೈಭವಗಳಿಂದ ಕೂಡಿದ ಇತಿಹಾಸ ಅತಿ ವಿರಳ. ಆದರೆ ಯೂರೋಪಿನ ದಕ್ಷಿಣಕ್ಕೆ ಚಲಿಸಿದಂತೆ ಗ್ರೀಕ್, ರೋಮನ್ ಸಾಮ್ರಾಜ್ಯಗಳ ಕುರುಹುಗಳು ಕಾಣುತ್ತಿದ್ದಂತೆ ಕಣ್ಣು, ಕಿವಿ ಅರಳಿಬಿಡುತ್ತದೆ.
‘ದೂರದ ಹಸಿರು’ ಅಂಕಣದಲ್ಲಿ ಸಿಸಿಲಿಯನ್‌ ಓಡಾಟದಲ್ಲಿ ಅಲ್ಲಿ ಕಂಡ ದೇವಾಲಯಗಳ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

ಮನುಷ್ಯ ತನ್ನ ತರ್ಕಕ್ಕೆ ನಿಲುಕದ ಧನಾತ್ಮಕ ಶಕ್ತಿಯನ್ನು ದೈವವೆಂದು ಮತ್ತು ಋಣಾತ್ಮಕ ಶಕ್ತಿಯನ್ನು ದೆವ್ವವೆಂದು ನಂಬಿರುವುದು ಪುರಾತನ ಕಾಲದಿಂದ ಬಂದಿರುವ ಪ್ರತೀತಿ. ಆಯಾ ಮತಗಳಲ್ಲಿ ಸಾಕ್ಷಾತ್ಕಾರ ಪಡೆದ ಜ್ಞಾನಿಗಳು ಒಂದೊಂದು ಶಕ್ತಿಗೂ ಒಂದೊಂದು ರೂಪ ಕೊಟ್ಟು ವಿಶಿಷ್ಟ ಆಚರಣೆಗಳನ್ನು, ಮೂರ್ತಿ ಪೂಜೆಯನ್ನು ಹುಟ್ಟು ಹಾಕಿದರು. ಸಿಂಧೂ ನದಿಯ ಕೆಳಗೆ ಅರಳಿದ ಎಲ್ಲ ಧರ್ಮಗಳಲ್ಲಿಯೂ ಮೂರ್ತಿ ಪೂಜೆ ಒಂದು ಅವಿಭಾಜ್ಯ ಅಂಗ. ಬಹು ದೈವ ಆರಾಧನೆಯೂ ಸಹ ಇವುಗಳ ಇನ್ನೊಂದು ವೈಶಿಷ್ಟ್ಯ. ಇಂಥಹುದೇ ಪರಿಕಲ್ಪನೆಯಿದ್ದ ಆಚರಣೆಗಳು ಪಾಶ್ಚಿಮಾತ್ಯದ ಯೂರೋಪಿನ ಭಾಗದಲ್ಲಿ ಸಹ ಇತ್ತು. ಕ್ರೈಸ್ತ ಮತ ಹುಟ್ಟಿದ ನಂತರ ಅದು ವ್ಯಾಪಕವಾಗಿ ಹರಡಿದ ಪರಿಣಾಮವಾಗಿ ಇಂದು ಕೇವಲ ಇತಿಹಾಸದ ಕುರುಹುಗಳಾಗಿ ಮಾತ್ರ ಉಳಿದಿವೆ.

ನಾಲ್ಕನೇ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳು ಬಹು ದೈವಾರಾಧಕರನ್ನು ಬೇರ್ಪಡಿಸಲು, ಈ ಆಚರಣೆಗಳನ್ನು ನಡೆಸುತ್ತಿದ್ದ ಜನರನ್ನು “ಪೆಗಾನ್” ಎಂದೂ, ಆಚರಣೆಯ ಪದ್ಧತಿಯನ್ನು “ಪೆಗಾನಿಸಮ್” ಎಂದು ಕರೆದರು. ಪೆಗಾನ್ ಎಂದರೆ ನಾಗರಿಕತೆ ಅರಿಯದ ಹಳ್ಳಿ ಮುಕ್ಕ ಎನ್ನುವ ಅರ್ಥ ಬರುವಂತೆ ಇಟ್ಟಂತಹ ಹೆಸರು. ಏಕ ದೈವಾರಾಧಕರಲ್ಲದ ಇವರಲ್ಲಿ ಕೀಳರಿಮೆ ಬರಲಿ ಎಂದು ಈ ಹೆಸರು ಇಟ್ಟಿದ್ದರು ಎನ್ನುವ ಉಲ್ಲೇಖಗಳು ಇವೆ.(೧) ಅದಕ್ಕೂ ಮುಂಚೆ ಇದಕ್ಕೆ ಏನು ಹೆಸರಿತ್ತೋ ಗೊತ್ತಿಲ್ಲ. ಈಗಲೂ ಸಹ ಪ್ರಪಂಚದ ಕೆಲವು ಭಾಗಗಳಲ್ಲಿ ಭಾರತೀಯ ನೆಲದ ಮೂಲ ಧರ್ಮಗಳನ್ನು ಬಹು ದೈವಾರಾಧನೆಯ ಕಾರಣಕ್ಕೆ “ಪೆಗಾನಿಸಮ್” ಎಂದು ಭಾವಿಸಲಾಗುತ್ತದೆ. ಹಾಗಾಗಿ ಪೆಗಾನಿಸಮ್ ಎನ್ನುವುದು ಒಂದು ಹಣೆ ಪಟ್ಟಿ ಎಂದರೂ ತಪ್ಪಾಗಲಾರದು.

ಇರಲಿ, ಸದ್ಯಕ್ಕೆ ಗೊಂದಲಗಳಿಗೆ ಎಡೆಮಾಡದೆ ಅದೇ ಹೆಸರಿನಲ್ಲಿ ಮುಂದುವರೆಸೋಣ. ಗತ ವೈಭವ ಕಂಡ ಗ್ರೀಕ್ ಹಾಗು ರೋಮನ್ ಸಾಮ್ರಾಜ್ಯಗಳ ಕಾಲದಲ್ಲಿ ಪೆಗಾನಿಸಮ್ ಚಾಲ್ತಿಯಲ್ಲಿತ್ತು. ಈ ಧರ್ಮದಲ್ಲಿಯೂ ಸಹ ಮನುಷ್ಯನ ಹುಟ್ಟು, ಸಾವು ಮತ್ತು ನಡುವಿನ ಎಲ್ಲ ಘಟನೆಗಳಿಗೂ ಆಧ್ಯಾತ್ಮಿಕ ಲೋಕದ ಬಲವಾದ ಕಾರಣಗಳಿವೆ ಎಂದು ನಂಬಲಾಗಿತ್ತು. ಪುನರ್ಜನ್ಮದ ಪರಿಕಲ್ಪನೆಯಿತ್ತು. ಮೂರ್ತಿ ಪೂಜೆಯ ಜೊತೆಗೆ ಬಹು ದೈವಾರಾಧಕರಾಗಿದ್ದರು. ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು. ಪ್ರಾಣಿ ಪಕ್ಷಿಗಳನ್ನು ದೈವ ಸ್ವರೂಪವೆಂದು ಪೂಜಿಸುತ್ತಿದ್ದರು. ಹಿಂದೂ, ಬೌದ್ಧ ಹಾಗು ಜೈನ ಧರ್ಮಗಳಿಗೆ ಪವಿತ್ರವಾದ ಸ್ಥಳ “ಕೈಲಾಸ ಪರ್ವತ”. ಅದರಂತೆಯೇ ಗ್ರೀಸ್ ನಲ್ಲಿ ಪವಿತ್ರವಾದ ಪರ್ವತ “ಒಲಂಪಸ್”!

ನಾಲ್ಕನೇ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳು ಬಹು ದೈವಾರಾಧಕರನ್ನು ಬೇರ್ಪಡಿಸಲು, ಈ ಆಚರಣೆಗಳನ್ನು ನಡೆಸುತ್ತಿದ್ದ ಜನರನ್ನು “ಪೆಗಾನ್” ಎಂದೂ, ಆಚರಣೆಯ ಪದ್ಧತಿಯನ್ನು “ಪೆಗಾನಿಸಮ್” ಎಂದು ಕರೆದರು. ಪೆಗಾನ್ ಎಂದರೆ ನಾಗರಿಕತೆ ಅರಿಯದ ಹಳ್ಳಿ ಮುಕ್ಕ ಎನ್ನುವ ಅರ್ಥ ಬರುವಂತೆ ಇಟ್ಟಂತಹ ಹೆಸರು. ‌

ಗ್ರೀಕ್ ಇತಿಹಾಸದಲ್ಲಿ ದೇವ-ದೇವತೆಗಳನ್ನು “ಒಲಂಪಿಯನ್ಸ್” ಎಂದು ಕರೆದರು. ಒಟ್ಟು ಹನ್ನೆರಡು ಒಲಂಪಿಯನ್ಸ್ ಗಳನ್ನ ಪೂಜಿಸುತ್ತಿದ್ದರು.
Zeus – ಒಲಂಪಸ್ ಪರ್ವತದ ಒಡೆಯ. ಆಕಾಶ, ಮಿಂಚು, ಗುಡುಗು, ಕಾನೂನು, ಸುವ್ಯವಸ್ಥೆ ಮತ್ತು ನ್ಯಾಯದ ದೇವರು.
Hera – ದೇವತೆಗಳ ರಾಣಿ. ವಿವಾಹ, ಸ್ತ್ರೀ, ಹೆರಿಗೆ ಮತ್ತು ಕುಟುಂಬ ವ್ಯವಸ್ಥೆಯ ದೇವತೆ.
Demeter- ಸುಗ್ಗಿ, ಫಲವತ್ತತೆ, ಕೃಷಿ, ಪ್ರಕೃತಿ ಮತ್ತು ಋತುಗಳ ದೇವತೆ
Aphrodite – ಪ್ರೇಮ, ಕಾಮ ಮತ್ತು ಸೌಂದರ್ಯಗಳ ಸಂಕೇತವಾದ ದೇವತೆ.
Athena – ತರ್ಕ, ಬುದ್ಧಿ ಮತ್ತು ಯುದ್ಧಗಳ ದೇವತೆ.
Artemis- ರೌದ್ರ ರೂಪಕದ ಸೂಚಕವಾಗಿದ್ದ ಬೇಟೆ, ಬಿಲ್ಲುಗಾರಿಕೆ ಮತ್ತು ಅಡವಿಯ ದೇವಿ
Ares- ಯುದ್ಧ, ಹಿಂಸೆ, ರಕ್ತಪಾತ ಮತ್ತು ಪುರುಷ ಗುಣಗಳ ದೇವರು
Apollo- ಬೆಳಕು, ಸೂರ್ಯ, ಆರೋಗ್ಯ , ಬಿಲ್ಲುಗಾರಿಕೆ, ಶೌರ್ಯ, ಕಲೆ, ಸಾಹಿತ್ಯ ಪ್ರತೀಕವಾದ ದೇವರು.
Poseidon – ಸಮುದ್ರ, ನೀರು, ಬಿರುಗಾಳಿ, ಚಂಡಮಾರುತ, ಭೂಕಂಪಗಳು ಮತ್ತು ಕುದುರೆಗಳ ದೇವರು.
Hephaestus – ಕಮ್ಮಾರ, ಕರಕುಶಲತೆ, ಆವಿಷ್ಕಾರ, ಬೆಂಕಿ ಮತ್ತು ಜ್ವಾಲಾಮುಖಿಗಳ ದೇವರು
Hermes – ಪ್ರಯಾಣ, ವಾಣಿಜ್ಯ ವಿನಿಮಯ, ಸಂವಹನ ಮತ್ತು ಸಂಪರ್ಕ ವ್ಯವಸ್ಥೆಯ ದೇವರು
Hestia – ಬೆಂಕಿ, ಓಲೆ ಮತ್ತು ಕುಟುಂಬ ವ್ಯವಸ್ಥೆಯ ದೇವತೆ.

ಈ ಎಲ್ಲ ದೇವ-ದೇವತೆಗಳು ಒಂದು ವಂಶ ವೃಕ್ಷದ ಭಾಗವಾಗಿದ್ದಾರೆ. ಈ ವಂಶ ವೃಕ್ಷದ ಎಲ್ಲರೂ ಚಿರಾಯುಗಳಾಗಿದ್ದರು. ಈ ಹನ್ನೆರಡು ಒಲಂಪಿಯನ್ಸ್ ಹಿಂದಿನ ತಲೆಮಾರು “ಟೈಟಾನ್ಸ್”.

ಈ ಪಟ್ಟಿಯನ್ನು ಗಮನಿಸಿದರೆ ನಿಮಗೆ ಹಲವಾರು ಹೆಸರಾಂತ ಕಂಪನಿಗಳು ಹೊಳೆಯಬಹುದು. ಈಗ ಅದರ ಹೆಸರಿಗೂ ಮತ್ತು ಗ್ರೀಕ್ ಪರಂಪರೆಯ ಹೆಸರುಗಳಿಗೂ ಥಳುಕು ಹಾಕಿ ನೋಡಿ. ಹೊಸದೊಂದು ಆಯಾಮವೇ ಕಣ್ಣೆದುರಿಗೆ ಬರುತ್ತದೆ. ಅಪೋಲೋ ಆರೋಗ್ಯ ಸಂಸ್ಥೆ (ಅಪೋಲೋ ಎಂದರೆ ಆರೋಗ್ಯದ ದೇವರು). ಭಾರತದ ಅತ್ಯಂತ ಜನಪ್ರಿಯ ಕೈ ಗಡಿಯಾರದ ಕಂಪನಿ “ಟೈಟಾನ್” (ಟೈಟಾನ್ ಎಂದರೆ ಅಸಾಮಾನ್ಯ ಶಕ್ತಿ, ಬುದ್ದಿ ಮತ್ತೆ ಹಾಗೂ ಮಹತ್ವವುಳ್ಳದ್ದು). ಹರ್ಮೆಸ್ ಎನ್ನುವ ಬೃಹತ್ ಕೊರಿಯರ್ ಕಂಪೆನಿಯಿದೆ (ಹರ್ಮೆಸ್ ಎಂದರೆ ಸಂವಹನ ಮತ್ತು ಸಂಪರ್ಕ ವ್ಯವಸ್ಥೆಯ ದೇವರು). ಡಿಮೀಟರ್ ಎನ್ನುವ ದೊಡ್ಡ ಸಾವಯವ ಕೃಷಿ ಉತ್ಪನ್ನಗಳ ಕಂಪೆನಿಯಿದೆ (ಡಿಮೀಟರ್ ಎಂದರೆ ಕೃಷಿಯ ದೇವರು). ಪ್ರಸ್ತುತ ಈ ದೇವರುಗಳ ಆರಾಧಕರು ಇಲ್ಲದಿದ್ದರೂ, ಪ್ರಪಂಚದ ಉದ್ದಗಲಕ್ಕೂ ಹೆಸರುಗಳು ಮಾತ್ರ ಚಿರಾಯುವಾಗಿವೆ.

ನನಗೆ ವಯಕ್ತಿಕವಾಗಿ ನಾನು ನೆಲೆಸಿರುವ ಜರ್ಮನಿ ಹಾಗೂ ಸುತ್ತಲಿನ ದೇಶಗಳ ಇತಿಹಾಸ ಬಹಳ ಸಪ್ಪೆ ಎನ್ನಿಸುತ್ತದೆ. ಇವರು ಅರಮನೆ ಎಂದು ಕರೆಯುವ ಕಟ್ಟಡಗಳನ್ನು ಮೀರಿಸುವ ಮನೆಗಳನ್ನು ನಮ್ಮ ದೇಶದಲ್ಲಿ ಈಗಿನ ರಾಜಕಾರಣಿಗಳು, ಉದ್ಯಮಿಗಳು ಹೊಂದಿದ್ದಾರೆ. ಇಷ್ಟು ವರ್ಷಗಳ ಪ್ರವಾಸದಲ್ಲಿ ನಮ್ಮ ಮೈಸೂರಿನ ಭವ್ಯ ಅರಮನೆಯಂತಹ ಮತ್ತೊಂದನ್ನು ಇಲ್ಲಿ ನೋಡಲಿಲ್ಲ. ಸಾವಿರಾರು ವರ್ಷಗಳ ಹಿಂದಿನ, ಗತ-ವೈಭವಗಳಿಂದ ಕೂಡಿದ ಇತಿಹಾಸ ಅತಿ ವಿರಳ. ಆದರೆ ಯೂರೋಪಿನ ದಕ್ಷಿಣಕ್ಕೆ ಚಲಿಸಿದಂತೆ ಗ್ರೀಕ್, ರೋಮನ್ ಸಾಮ್ರಾಜ್ಯಗಳ ಕುರುಹುಗಳು ಕಾಣುತ್ತಿದ್ದಂತೆ ಕಣ್ಣು, ಕಿವಿ ಅರಳಿಬಿಡುತ್ತದೆ. ಅವರದ್ದೂ ಸಹ ಸಹಸ್ರಾರು ವರ್ಷಗಳ ಇತಿಹಾಸ ಹಾಗೂ ಪರಂಪರೆ.

ಸಿಸಿಲಿಯ ಪ್ರವಾಸದಲ್ಲಿ ನೋಡಬಹುದಾದ ಸ್ಥಳಗಳ ಪಟ್ಟಿಯನ್ನು ಮಾಡುವಾಗ ಕಂಡ ಒಂದು ಪ್ರಮುಖ ಆಕರ್ಷಣೆ “ದೇವಾಲಯಗಳ ಕಣಿವೆ”. ಸಿಸಿಲಿಯ ದಕ್ಷಿಣ ಭಾಗದಲ್ಲಿರಿವ ಈ ಪ್ರದೇಶದಲ್ಲಿ ಗ್ರೀಕರು ಕಟ್ಟಿದ ಹಲವಾರು ದೇವಾಲಯಗಳನ್ನು ಕಾಣಬಹುದು. ಗ್ರೀಸ್ ದೇಶದ ಹೊರಗೆ ಕಾಣ ಸಿಗುವ ಅತೀ ದೊಡ್ಡ ಗ್ರೀಕ್ ಸಾಮ್ರಾಜ್ಯದ ಕುರುಹು ಇಂದಿನ ಇಟಲಿಯ ಸಿಸಿಲಿ ಪ್ರಾಂತ್ಯದಲ್ಲಿದೆ! ಇದನ್ನು ಗ್ರೀಕರ “ಹಾಳು ಹಂಪೆ” ಎಂದು ಬಣ್ಣಿಸಬಹುದು. ಈಗ ಈ ಊರಿನ ಹೆಸರು “ಅಗ್ರಿಜೇಂಟೋ”. ಇಲ್ಲಿಗೆ ಸಿಸಿಲಿಯ ರಾಜಧಾನಿಯಾದ ಪಲೆರ್ಮೊ ಇಂದ ರೈಲು, ಬಸ್ಸಿನ ವ್ಯವಸ್ಥೆ ಇದೆ. ಎರಡು ಘಂಟೆಯ ಪ್ರಯಾಣ. ಎರಡು ನದಿಗಳ ನಡುವೆ ಎತ್ತರದ ಸ್ಥಳದಲ್ಲಿರುವ ಅಗ್ರಿಜೇಂಟೋ ಸಮುದ್ರ ತೀರದಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿದೆ. ಸುಂದರ ನೀಲ ವರ್ಣದ ಕಡಲ ಕಿನಾರೆಗಳು. ಪ್ರವಾಸಿಗರು ಇಲ್ಲಿ ಒಂದೆರಡು ದಿನ ಉಳಿದರೆ, ಇತಿಹಾಸದ ಜೊತೆಜೊತೆಗೆ ಸಮುದ್ರದಲ್ಲಿ ಮಿಂದೇಳಬಹುದು.

(ಹೀರಾ ಟೆಂಪಲ್)

“ವ್ಯಾಲಿ ಆಫ್ ಟೆಂಪಲ್ಸ್” ದೇವಾಲಯಗಳ ಸಂಕೀರ್ಣದ ಇತಿಹಾಸ ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರಿ.ಪೂ. ಐನೂರರ ಆಸುಪಾಸಿನಿಂದ ಪ್ರಾರಂಭವಾಗುತ್ತದೆ. ಮೊದಲು ಸಿಗುವುದು “ಟೆಂಪಲ್ ಆಫ್ ಹೇರಾ (ದೇವತಗಳ ರಾಣಿಯ ದೇವಾಲಯ)”. ಇಂದಿಗೆ ಇದರ ಅಡಿಪಾಯ ಮತ್ತು ಕಂಬಗಳು ಮಾತ್ರ ಉಳಿದಿವೆ. ಕ್ರಿ. ಪೂ. ನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯ ಇಲ್ಲಿಗೆ ಬರುವ ಪ್ರವಾಸಿಗರಿಗೆ ಗ್ರೀಕ್ ಪುರಾಣದ ಕಥೆಯನ್ನು ಹೇಳುತ್ತದೆ. ಹದಿನೆಂಟನೇ ಶತಮಾನದಿಂದೀಚೆಗೆ ಹಲವಾರು ಪುನರುಜ್ಜೀವನ ಕಾರ್ಯಗಳು ನಡೆದಿವೆ.

ನಂತರ ಸಿಗುವುದೇ ಇಲ್ಲಿನ ಪ್ರಮುಖ ಆಕರ್ಷಣೆ “ಟೆಂಪಲ್ ಆಫ್ ಕನ್ಕಾರ್ಡಿಯಾ”. ಈ ಗ್ರೀಕ್ ದೇವಾಲಯದ ಕಾಲಮಾನ ಸುಮಾರು ಕ್ರಿ.ಪೂ. ನಾಲ್ಕನೇ ಶತಮಾನ. ಪ್ರಪಂಚದಾದ್ಯಂತ ಇರುವ ಎಲ್ಲ ಗ್ರೀಕ್ ದೇವಾಲಯಗಳಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ ದೇವಾಲಯ. ಇದಕ್ಕೂ ಒಂದು ಕಾರಣವಿದೆ. ಸುಮಾರು ಕ್ರಿ.ಶ. ಐದನೇ ಶತಮಾನದಲ್ಲಿ ನಡೆದ ಯುದ್ಧದಲ್ಲಿ ಬೇರೆಲ್ಲ ದೇವಾಲಯಗಳನ್ನು ಕೆಡವಿದರೂ, ಈ ಭವ್ಯ ದೇವಾಲಯದ ಕೆತ್ತನೆಗೆ ಮಾರುಹೋಗಿ ಇದನ್ನು ಕೆಡವದೆ ಮುಂದೆ ಚರ್ಚ್ ಆಗಿ ಮಾರ್ಪಡಿಸಲಾಯಿತು. ಇಂದಿನ ದುರ್ದೈವ ಎಂದರೆ ಮೂಲ ದೇವಾಲಯದಲ್ಲಿ ಯಾವ ದೇವರನ್ನು ಪೂಜಿಸುತ್ತಿದ್ದರು ಎನ್ನುವ ಯಾವ ದಾಖಲೆಗಳಾಗಲಿ, ಪುರಾವೆಗಳಾಗಲಿ ಇಲ್ಲ! ಪ್ರಪಂಚದಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ ಗ್ರೀಕ್ ದೇವಾಲಯದ ದೇವರು ಯಾರೆಂದು ಯಾರಿಗೂ ಗೊತ್ತಿಲ್ಲ. ಒಬ್ಬ ಶಿಲ್ಪಿಯ ದೂರ ದೃಷ್ಟಿ, ಕನಸು, ಮಹದಾಸೆ ಹೇಗಿರಬೇಕೆಂದರೆ ಕೆಡವಲು ಬಂದ ವೈರಿಗಳೂ ಸಹ ಅದಕ್ಕೆ ಮಾರುಹೋಗಿ ಕೆಡವಲು ಮನಸ್ಸಾಗದೆ ಉಳಿಸಿಕೊಳ್ಳುವಷ್ಟು! ಈ ರೀತಿಯ ಉದಾಹರಣೆಗಳು ಪ್ರಪಂಚದಲ್ಲಿ ಬೆರಳೆಣಿಕೆಯಷ್ಟಿರಬಹುದು.

(Temple of Concardia)

ಈ ದೇವಾಲಯಗಳ ಸಂಕೀರ್ಣದಲ್ಲಿ ಏನೇನಿತ್ತೆಂದು ಪಟ್ಟಿ ಮಾಡಿದರೆ ಆಶ್ಚರ್ಯವಾಗುವುದರಲ್ಲಿ ಅನುಮಾನವಿಲ್ಲ. ಎರಡೂವರೆ ಸಾವಿರ ವರ್ಷಗಳ ಹಿಂದೆ ನಿರ್ಮಾಣವಾದ ಈ ಸಂಕೀರ್ಣದಲ್ಲಿ ಡೋರಿಕ್ ಶೈಲಿಯಲ್ಲಿ ಕಟ್ಟಲಾಗಿರುವ ಒಟ್ಟು ಏಳು ದೇವಾಲಯಗಳ ಅವಶೇಷಗಳು ಕಾಣಸಿಗುತ್ತವೆ. ಸುತ್ತಲೂ ಕಟ್ಟಲಾದ ತಡೆ ಗೋಡೆಯ ಭಾಗಗಳು ಇಂದಿಗೂ ಇವೆ. ಈಗ ಉಳಿದಿರುವ ತಡೆ ಗೋಡೆಯ ಉದ್ದ ಸುಮಾರು 12 ಕಿ.ಮೀ.! ಆಗಿನ ಕಾಲದಲ್ಲಿಯೇ ನಿರ್ಮಾಣವಾಗಿದ್ದ ಗ್ರೀಕ್ ಥೀಯೇಟರ್, ಗರಡಿ ಮನೆಯ ಅವಶೇಷಗಳಿವೆ. ಹತ್ತು ಸಾವಿರ ಚದರ ಮೀಟರ್ ವಿಸ್ತಾರವುಳ್ಳ ವಸತಿ ಸಮುಚ್ಛಯಗಳ ಕುರುಹು ಇವೆ. ಅಮೃತ ಶಿಲೆಯಿಂದ ನಿರ್ಮಾಣವಾಗಿದ್ದ ಈಜು ಕೊಳ, ಸಾರ್ವಜನಿಕ ಸ್ನಾನ ಗೃಹಗಳಿವೆ. ಆಸಕ್ತರಿಗೆ ಇದೊಂದು ಅತಿ ಅಪರೂಪದ ಇತಿಹಾಸದ ಗಣಿ! ಕೌತುಕದಿಂದ ಅಗೆದಷ್ಟೂ ಕಾಲ ಚಕ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೋಗಿ ಬರಬಹುದು.

ಹಂಪೆಗೆ ಹೋಗಿ, ಅಲ್ಲಿನ ಇತಿಹಾಸವನ್ನು ಕೇಳುತ್ತಾ ಕಣ್ಣು ಮುಚ್ಚಿ ಕಲ್ಪನಾ ಲೋಕದಲ್ಲಿ ವಿಹರಿಸಿದರೆ ಅಂದಿನ ದಿನಗಳು ಕಣ್ತುಂಬಿ ಬಂದಂತಾಗಿ, ಮತ್ತೆ ವಾಸ್ತವಕ್ಕೆ ಇಳಿದಾಗ ಹೇಳತೀರದ ಬೇಸರವೊಂದು ಮನಸಿನಲ್ಲಿ ಮೂಡುವುದು ಖಚಿತ. ಇಲ್ಲಿಯೂ ನನಗೆ ಅದೇ ಅನುಭವ! ದಿನವಿಡೀ ತಿರುಗಿದರೂ ಮುಗಿಯದ ದೇವಾಲಯಗಳ ಬೀಡು. ಉಳಿದಿರುವ ಅವಶೇಷಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಬರುವ ಪ್ರವಾಸಿಗರಿಗೆ ಇಂತಿಷ್ಟು ಶುಲ್ಕ ವಿಧಿಸಿದರೂ, ಅವರ ಶ್ರಮಕ್ಕೆ ಅದು ಸರಿಸಮಾನವಲ್ಲ. ಬರುವ ಪ್ರವಾಸಿಗರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಯಾವ ಕಲ್ಲಿನ ಮೇಲೂ ಈಗಿನ ಪ್ರೇಮಿಗಳ ಕುರುಹುಗಳು ಕಾಣಿಸಲಿಲ್ಲ ಎನ್ನುವುದನ್ನು ನೋಡಿ ನಮ್ಮಲ್ಲಿ ಜನ ಯಾಕೆ ಹೀಗಿಲ್ಲ ಎನ್ನುವ ಪ್ರಶ್ನೆ ಮೂಡಿತು.

ಮುಂದಿನ ಸಂಚಿಕೆಯಲ್ಲಿ ಸಿಸಿಲಿಯ ಕೊನೆಯ ಪ್ರವಾಸ ಕಥನ ‌ 

೧. ( https://en.wikipedia.org/wiki/Paganism).