ಆ ಹುಡುಗಿಯರು ನಿಸ್ವಾರ್ಥದಿಂದ ದೇಶಪ್ರೇಮಿಗಳಂತೆ ವರ್ತಿಸಬೇಕೆಂದು ನಾನೇನು ಪ್ರಜ್ಞಾಪೂರ್ವಕವಾಗಿ ಬಯಸಿರಲಿಲ್ಲ. ಆ ಚಿತ್ರದ ಥೀಮ್ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವುದು. ನಾವು ಈ ರೀತಿಯಲ್ಲಿ ತಯಾರಿ ಮಾಡಿಕೊಳ್ಳದಿದ್ದರೆ ಪಾತ್ರಗಳು ನೈಜವಾಗಿರದೆ ಕೇವಲ ಕಾರ್ಡ್ಬೋರ್ಡ್ನ ಕಟೌಟ್ ಗಳಂತಾಗಿಬಿಡುತ್ತಿದ್ದವು. ಕಾರ್ಖಾನೆಯ ಡಾರ್ಮಿಟರಿಯ ಮೇಲ್ವಿಚಾರಿಕೆ ನೋಡಿಕೊಳ್ಳುವ ಪಾತ್ರವನ್ನು ಐರಿ ಟಕಾಕಿ ಎನ್ನುವ ನಟಿ ನಿರ್ವಹಿಸುತ್ತಿದ್ದಳು. ಆಕೆಯದು ಸ್ವಭಾವ ಸಹಜವಾಗಿಯೇ ಮಾತೃಹೃದಯ. ಹೀಗಾಗಿ ಆಕೆ ಆ ಯುವನಟಿಯರ ನಡುವೆ ಪ್ರಸಿದ್ಧಳಾಗಿದ್ದಳು. ಆಕೆ ಇದ್ದುದರಿಂದ ನನಗೆ ಬಹಳ ಸಹಾಯವಾಗಿತ್ತು.
ಹೇಮಾ ಎಸ್. ಅನುವಾದಿಸಿದ ಅಕಿರ ಕುರೊಸಾವ ಆತ್ಮಕತೆಯ ಮತ್ತೊಂದು ಪುಟ

 

ನಿರ್ದೇಶಕನಾದ ಮೇಲೆ ನನ್ನ ಬದುಕು ಹೇಗಿತ್ತು ಎನ್ನುವುದನ್ನು ಹೇಳುವ ಸುಲಭ ವಿಧಾನವೆಂದರೆ ಬಹುಶಃ ನನ್ನ ಸಿನಿಮಾಗಳನ್ನು ಕುರಿತು ಹೇಳುವುದು ಅನ್ನಿಸುತ್ತದೆ. ಸುಗತ ಸಂಶಿರೊ ೧೯೪೩ರಲ್ಲಿ ಬಿಡುಗಡೆಯಾಯಿತು. ನನಗಾಗ ೩೩ ವರ್ಷ. The Most Beautiful ೧೯೪೪ರಲ್ಲಿ ಬಿಡುಗಡೆಯಾದಾಗ ೩೪ ವರ್ಷ. ಆದರೆ ಸಾಮಾನ್ಯವಾಗಿ ಸಿನಿಮಾ ಚಿತ್ರೀಕರಣಗೊಂಡ ಒಂದು ವರ್ಷದ ನಂತರ ಬಿಡುಗಡೆಯಾಗುತ್ತದೆ. ಉದಾಹರಣೆಗೆ The Most Beautiful ಚಿತ್ರದ ಚಿತ್ರೀಕರಣ ಆರಂಭಿಸಿದ್ದು ೧೯೪೩ರಲ್ಲಿ.

The Most Beautiful ಚಿತ್ರ ಆರಂಭಿಸುವುದಕ್ಕೆ ಮುಂಚೆ ನೌಕಾದಳದ ಮಾಹಿತಿ ಇಲಾಖೆಯು ಜೀರೋ ಯುದ್ಧ ವಿಮಾನಗಳ ಕುರಿತು ಸಿನಿಮಾ ಮಾಡಿಕೊಡಲು ಸಾಧ್ಯವೇ ಎಂದು ಕೇಳಿದರು. ಅಮೆರಿಕನ್ ಪೈಲಟ್ಗಳು ಜೀರೊ ಫೈಟರ್ ಗಳನ್ನು “ಕಪ್ಪು ರಾಕ್ಷಸರು” (ಬ್ಲ್ಯಾಕ್ ಮಾನ್ಸಟರ್ಸ್) ಎಂದು ಕರೆಯುತ್ತಿದ್ದರು. ಅವರಿಗೆ ಈ ವಿಮಾನದ ಸೈನಿಕರ ಬಗ್ಗೆ ಭಯವಿತ್ತು. ಬಹುಶಃ ನೌಕಾದಳದವರು ಜಪಾನಿಯರ ಯುದ್ಧದ ಹುಮ್ಮಸ್ಸನ್ನು ಹೆಚ್ಚಿಸುವ ಪ್ರಚಾರ ಚಿತ್ರವಾಗಿ (propaganda film) ಬಳಸಬೇಕೆಂದುಕೊಂಡಿದ್ದರು ಅನ್ನಿಸುತ್ತದೆ. ಆದರೆ ಆ ವೇಳೆಗಾಗಲೇ ಜಪಾನ್ ಯುದ್ಧದಲ್ಲಿ ಸೋಲುವ ಹಂತ ತಲುಪಿತ್ತು. ಚಿತ್ರ ಮಾಡಲು ಜೀರೋ ಸೈನಿಕರು ಉಳಿದಿರಲಿಲ್ಲ. ಆ ಯೋಜನೆ ಕೈಗೂಡಲಿಲ್ಲ.

ಜೀರೊ ಚಿತ್ರದ ಬದಲಿಗೆ The Most Beautiful ಯೋಜನೆ ಆರಂಭವಾಯಿತು. ಈ ಚಿತ್ರವು ಸ್ವಯಂಸೇವಕರಂತೆ ಕಾರ್ಪ್ ಗಳಾಗಿ ಕಾರ್ಯನಿರ್ವಹಿಸುತ್ತ ಕಾರ್ಮಿಕರಾಗಿ ದುಡಿಯುತ್ತಿದ್ದ ಹದಿಹರೆಯದ ಹುಡುಗಿಯರ ಕುರಿತಾಗಿತ್ತು. ಈ ಚಿತ್ರ ನಡೆಯುವ ಸ್ಥಳ ಹಿರಾಟ್ಸುಕಾದಲ್ಲಿದ್ದ ನಿಪ್ಪಾನ್ ಕೊಗಾಕು ಕಂಪನಿ. ಈ ಕಾರ್ಖಾನೆಯಲ್ಲಿ ಮಿಲಿಟರಿ ಲೆನ್ಸುಗಳನ್ನು ತಯಾರಿಸಲಾಗುತ್ತಿತ್ತು. ಈ ಹುಡುಗಿಯರು ಇಲ್ಲಿ ಕೆಲಸ ಮಾಡುತ್ತಿದ್ದರು.

ಈ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಾಗ ಇದನ್ನು ಸ್ವಲ್ಪಮಟ್ಟಿಗೆ ಡ್ಯಾಕ್ಯುಮೆಂಟರಿ ಶೈಲಿಯಲ್ಲಿ ತೆಗೆಯಬೇಕೆಂದು ನಿರ್ಧರಿಸಿದೆ. ಇದಕ್ಕಾಗಿ ಆಯ್ಕೆಮಾಡಿಕೊಂಡ ಯುವನಟಿಯರಲ್ಲಿ ಮೊದಲಿಗೆ ದೈಹಿಕ ಹಾಗೂ ಮಾನಸಿಕವಾಗಿ ಬೇರೂರಿದ್ದ ರಂಗಭೂಮಿಯ ಪ್ರಭಾವವನ್ನು ತೆಗೆದುಹಾಕಬೇಕೆಂದು ನಿರ್ಧರಿಸಿದೆ. ಮೇಕಪ್ಪಿನ ಘಮಲು, ನಾಟಕೀಯತೆ, ರಂಗದ ಬಗೆಗಿನ ಪ್ರೀತಿ, ನಟರಲ್ಲಿ ವಿಶೇಷವಾಗಿರುವ ಸ್ವ-ಪ್ರಜ್ಞೆ ಇವೆಲ್ಲವೂ ಅವರಿಂದ ಹೋಗಬೇಕಿತ್ತು. ಅವರು ಸಾಮಾನ್ಯ ಹುಡುಗಿಯರಂತಾಗಿ ಅವರು ನಿಜಕ್ಕೂ ಹೇಗಿದ್ದಾರೋ ಹಾಗೆ ಇರಬೇಕೆಂದು ಬಯಸಿದೆ.

ಇದಕ್ಕೆ ಪೂರ್ವಭಾವಿಯಾಗಿ ಮೊದಲಿಗೆ ಓಡುವ ಅಭ್ಯಾಸ ಆರಂಭಿಸಿದೆ. ನಂತರ ವಾಲಿಬಾಲ್ ಶುರುಮಾಡಿದೆ. ನಂತರ ಅವರೊಂದು ಬ್ಯಾಂಡ್ಸೆಟ್ ಕಾರ್ಪ್ ತಂಡವಾಗಿ ಕವಾಯತು ಅಭ್ಯಾಸ ಮಾಡುತ್ತಾ, ವಾದ್ಯಗಳನ್ನು ನುಡಿಸುತ್ತಾ ರಸ್ತೆಗಳಲ್ಲಿ ಕವಾಯತು ಮಾಡುತ್ತಾ ಹೋಗಬೇಕು ಎಂದು ಸೂಚಿಸಿದೆ. ನಟಿಯರು ಓಡಲು, ವಾಲಿಬಾಲ್ ಆಡಲು ವಿರೋಧಿಸಲಿಲ್ಲ. ಆದರೆ ರಸ್ತೆಗಳಲ್ಲಿ ವಾದ್ಯ ನುಡಿಸುತ್ತಾ ಎಲ್ಲರ ಗಮನ ಸೆಳೆಯುವಂತೆ ಕವಾಯತು ಮಾಡಬೇಕು ಎನ್ನುವ ಆಲೋಚನೆಯೇ ಅವರಿಗೆ ಅವಮಾನ ಎನ್ನಿಸಿತು. ಆದರೆ ಇದು ಹೀಗೆ ಆಗಬೇಕೆಂದು ಪಟ್ಟುಹಿಡಿದು ಮಾಡಿಸಬೇಕಾಯಿತು.

ಅಭ್ಯಾಸ ಮಾಡುತ್ತಾ ಹೋದಂತೆ ಕವಾಯತಿಗೆ ಹೊಂದಿಕೊಂಡರು. ಅವರ ಮೇಕಪ್ ಮಾಸಿಹೋಯಿತು. ಮೊದಲ ನೋಟಕ್ಕೆ ಅಥವ ಗಮನವಿಟ್ಟು ನೋಡಿದಾಗ ಅವರೆಲ್ಲ ಆರೋಗ್ಯವಂತ ಕ್ರಿಯಾಶೀಲ ತಂಡದ ಯುವತಿಯರಂತೆ ಕಾಣುತ್ತಿದ್ದರು. ನಂತರ ಈ ತಂಡಕ್ಕೆ ನಿಪ್ಪಾನ್ ಕೊಗಾಕು ಕಂಪನಿಯ ಡಾರ್ಮಿಟರಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಸಿದೆ. ಅವರನ್ನು ಕಾರ್ಖಾನೆಯ ವಿವಿಧ ವಿಭಾಗಗಳಿಗೆ ಕಳಿಸಿದೆ. ಅವರೆಲ್ಲ ಅಲ್ಲಿನ ಕಾರ್ಮಿಕರ ದಿನಚರಿ ಏನಿತ್ತೋ ಅದರಂತೆ ನಡೆದುಕೊಳ್ಳಲು ಶುರುಮಾಡಿದರು.

ಆ ವೇಳೆಗೆ ನನ್ನಂತಹ ನಿರ್ದೇಶಕನೊಂದಿಗೆ ಕೆಲಸ ಮಾಡುವುದು ಸುಲಭವಲ್ಲ ಎನ್ನುವುದನ್ನು ನನ್ನ ಕಾರ್ಯವೈಖರಿ ಮನದಟ್ಟು ಮಾಡಿಸಿತ್ತು. ಅವರೆಲ್ಲ ಒಂದೇ ಒಂದು ಪ್ರಶ್ನೆ ಕೂಡ ಕೇಳದೆ ಹೇಳಿದ್ದೆಲ್ಲವನ್ನು ಹೇಗೆ ಮಾಡಿದರು ಎನ್ನುವುದೇ ಅಚ್ಚರಿ. ಆಗ ಯುದ್ಧದ ಸಮಯವಾದ್ದರಿಂದ ಎಲ್ಲರೂ ಆಜ್ಞೆಗಳನ್ನು ಮರುಮಾತಿಲ್ಲದೆ ಪಾಲಿಸುವುದು ರೂಢಿಯಾಗಿತ್ತು.

ಆ ಹುಡುಗಿಯರು ನಿಸ್ವಾರ್ಥದಿಂದ ದೇಶಪ್ರೇಮಿಗಳಂತೆ ವರ್ತಿಸಬೇಕೆಂದು ನಾನೇನು ಪ್ರಜ್ಞಾಪೂರ್ವಕವಾಗಿ ಬಯಸಿರಲಿಲ್ಲ. ಆ ಚಿತ್ರದ ಥೀಮ್ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವುದು. ನಾವು ಈ ರೀತಿಯಲ್ಲಿ ತಯಾರಿ ಮಾಡಿಕೊಳ್ಳದಿದ್ದರೆ ಪಾತ್ರಗಳು ನೈಜವಾಗಿರದೆ ಕೇವಲ ಕಾರ್ಡ್ಬೋರ್ಡ್ನ ಕಟೌಟ್ ಗಳಂತಾಗಿಬಿಡುತ್ತಿದ್ದವು. ಕಾರ್ಖಾನೆಯ ಡಾರ್ಮಿಟರಿಯ ಮೇಲ್ವಿಚಾರಿಕೆ ನೋಡಿಕೊಳ್ಳುವ ಪಾತ್ರವನ್ನು ಐರಿ ಟಕಾಕಿ ಎನ್ನುವ ನಟಿ ನಿರ್ವಹಿಸುತ್ತಿದ್ದಳು. ಆಕೆಯದು ಸ್ವಭಾವ ಸಹಜವಾಗಿಯೇ ಮಾತೃಹೃದಯ. ಹೀಗಾಗಿ ಆಕೆ ಆ ಯುವನಟಿಯರ ನಡುವೆ ಪ್ರಸಿದ್ಧಳಾಗಿದ್ದಳು. ಆಕೆ ಇದ್ದುದರಿಂದ ನನಗೆ ಬಹಳ ಸಹಾಯವಾಗಿತ್ತು.

ಈ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಾಗ ಇದನ್ನು ಸ್ವಲ್ಪಮಟ್ಟಿಗೆ ಡ್ಯಾಕ್ಯುಮೆಂಟರಿ ಶೈಲಿಯಲ್ಲಿ ತೆಗೆಯಬೇಕೆಂದು ನಿರ್ಧರಿಸಿದೆ. ಇದಕ್ಕಾಗಿ ಆಯ್ಕೆಮಾಡಿಕೊಂಡ ಯುವನಟಿಯರಲ್ಲಿ ಮೊದಲಿಗೆ ದೈಹಿಕ ಹಾಗೂ ಮಾನಸಿಕವಾಗಿ ಬೇರೂರಿದ್ದ ರಂಗಭೂಮಿಯ ಪ್ರಭಾವವನ್ನು ತೆಗೆದುಹಾಕಬೇಕೆಂದು ನಿರ್ಧರಿಸಿದೆ.

ನಟಿಯರು ಕಾರ್ಖಾನೆಯ ಮಹಿಳಾ ಡಾರ್ಮಿಟರಿಗೆ ಹೋದರು. ನಾನು ಮತ್ತು ಉಳಿದ ತಂಡ ಪುರಷರ ಡಾರ್ಮಿಟರಿಯಲ್ಲಿ ಉಳಿದುಕೊಂಡೆವು. ದೂರದಲ್ಲಿ ಬ್ಯಾಂಡ್ ಸೆಟ್ ನ ದನಿಯೊಂದಿಗೆ ನಮ್ಮ ದಿನ ಶುರುವಾಗುತ್ತಿತ್ತು. ಈ ಸಂಗೀತ ಕಿವಿಗೆ ಬೀಳುತ್ತಿದ್ದಂತೆ ಹಾಸಿಗೆಯಿಂದ ಎದ್ದು ಬಟ್ಟೆಗಳನ್ನು ಹಾಕಿಕೊಂಡು ಹಿರಾಟ್ಸುಕಾದ ರೈಲ್ವೇ ಕ್ರಾಸಿಂಗ್ ಬಳಿಗೆ ಓಡುತ್ತಿದ್ದೆವು. ಬಿಳಿಮಂಜು ಹೊದ್ದ ಹಾದಿಯಲ್ಲಿ ಹೆಡ್ ಬ್ಯಾಂಡ್ ಧರಿಸಿ ಸರಳವಾದ ಸ್ಪೂರ್ತಿದಾಯಕ ರಾಗ ನುಡಿಸುತ್ತಾ ಕವಾಯತು ಮಾಡುತ್ತಿದ್ದರು. ತಮ್ಮ ವಾದ್ಯಗಳನ್ನು ನುಡಿಸುವಾಗ ಅವರು ನಮ್ಮತ್ತ ಕುಡಿನೋಟದಲ್ಲಿ ನೋಡುತ್ತಾ ಸಾಗುತ್ತಿದ್ದರು.

ರೈಲ್ವೆಟ್ರ್ಯಾಕನ್ನು ದಾಟಿ ನಿಪ್ಪಾನ್ ಕೊಗಾಕು ಕಂಪನಿಯ ಗೇಟಿನೊಳಗೆ ಹೋಗುತ್ತಿದ್ದರು. ಅವರು ಕಣ್ಮರೆಯಾಗುವುದನ್ನೇ ನೋಡುತ್ತಿದ್ದು ನಾವು ತಿಂಡಿ ತಿನ್ನಲು ಡಾರ್ಮಿಟರಿಗೆ ಹಿಂತಿರುಗುತ್ತಿದ್ದೆವು. ತಿಂಡಿ ತಿಂದ ನಂತರ ನಮ್ಮ ಉಪಕರಣಗಳನ್ನು ತೆಗೆದುಕೊಂಡು ಚಿತ್ರೀಕರಣ ನಡೆಸಲು ಕಾರ್ಖಾನೆಗೆ ಹೋಗುತ್ತಿದ್ದೆವು.

ಡಾಕ್ಯುಮೆಂಟರಿ ಚಿತ್ರವನ್ನು ತೆಗೆಯುತ್ತಿದ್ದೇವೆ ಎನ್ನುವ ರೀತಿಯಲ್ಲೇ ಚಿತ್ರವನ್ನು ಚಿತ್ರೀಕರಿಸಿದೆವು. ಪ್ರತಿ ವಿಭಾಗದಲ್ಲಿನ ಹುಡುಗಿಯರು ಚಿತ್ರಕಥೆಯಲ್ಲಿದ್ದಂತೆ ಮಾತುಗಳನ್ನು ಹೇಳಿದರು. ಆದರೆ ಕ್ಯಾಮೆರ ಕಡೆ ಅವರ ಗಮನವಿರಲಿಲ್ಲ. ತಾವು ಕಲಿಯುತ್ತಿದ್ದ ಕಾರ್ಖಾನೆಯ ಕೆಲಸಗಳನ್ನು ಏಕಾಗ್ರಚಿತ್ತರಾಗಿ ಮಾಡುತ್ತಾ ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ಮುಳುಗಿರುತ್ತಿದ್ದರು. ಅವರು ಆ ರೀತಿ ಏಕಾಗ್ರಚಿತ್ತರಾಗಿ ಕೆಲಸ ಮಾಡುತ್ತಿದ್ದ ರೀತಿಯಲ್ಲಿ ಕೆಲಸದಲ್ಲಿ ತನ್ಮಯರಾಗಿರುತ್ತಿದ್ದ ವ್ಯಕ್ತಿಗಳ ಸೌಂದರ್ಯವಿತ್ತೇ ವಿನಃ ನಟರಿಗಿರುತ್ತಿದ್ದ ಸ್ವಪ್ರಜ್ಞೆ ಇರಲಿಲ್ಲ.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರತಿ ಹುಡುಗಿಯ ಹಲವು ಕ್ಲೋಸ್ ಅಪ್ ಗಳನ್ನು ಸಂಕಲನದಲ್ಲಿ ಒಂದರ ಹಿಂದೊಂದರಂತೆ ಜೋಡಿಸಿರುವುದರಲ್ಲಿ ಈ ಭಾವವನ್ನು ಕಾಣಬಹುದು. ಈ ಕ್ಲೋಸ್ಅಪ್ ದೃಶ್ಯಗಳಿಗೆ ಜಾನ್ ಫಿಲಿಪ್ ಸೌಸ ಅವರ “ಸೆಂಪರ್ ಫಿಡೆಲಿಸ್” ಎನ್ನುವ ಸ್ಪೂರ್ತಿದಾಯಕವಾದ ಬ್ಯಾಟಲ್ ಡ್ರಮ್ ನ ಸಂಗೀತ ಬಳಸಿದ್ದೆ. ಈ ಸಂಗೀತ ಯುದ್ಧಭೂಮಿಯಲ್ಲಿ ಮೊದಲನೆಯ ಸಾಲಿನಲ್ಲಿ ನಿಂತು ಹೋರಾಡುವ ಯೋಧರಿಗೆ ಹೀರೋಯಿಸಂ ಮತ್ತು ಧೈರ್ಯವನ್ನು ಕೊಟ್ಟಿತು. (ವಿಚಿತ್ರವೆಂದರೆ ಈ ಸನ್ನಿವೇಶಕ್ಕೆ ಅಮೇರಿಕನ್ ಸಂಗೀತ ನಿರ್ದೇಶಕನ ಸಂಗೀತವನ್ನು ಬಳಸಿಕೊಂಡಿದ್ದರೂ ಕೂಡ ಆಂತರಿಕ ಸಚಿವಾಲಯದ ಸೆನ್ಸಾರ್ ಮಂಡಳಿಯವರು “ಬ್ರಿಟೀಷ್ ಅಮೆರಿಕನ್” ಹಣೆಪಟ್ಟಿ ಹಚ್ಚಲಿಲ್ಲ).

ಕಾರ್ಖಾನೆಯಲ್ಲಿನ ಊಟ ಮಾತ್ರ ಭಯಂಕರವಾಗಿತ್ತು. ಊಟ ಎಂದರೆ ಸಾಮಾನ್ಯವಾಗಿ ನುಚ್ಚಕ್ಕಿಯ ಜೊತೆಗೆ ಯಾವುದಾದರೂ ಕಾಳು ಇಲ್ಲವೆ ಧಾನ್ಯವನ್ನು ಸೇರಿಸುತ್ತಿದ್ದರು ಅಥವ ನುಚ್ಚಿನ ಜೊತೆಗೆ ಕಾಳನ್ನು ಬೆರೆಸುತ್ತಿದ್ದರು. ಹೆಚ್ಚಾಗಿ ಹತ್ತಿರದ ಸಮುದ್ರದ ದಂಡೆಯಲ್ಲಿ ಸಿಗುತ್ತಿದ್ದ ಸಮುದ್ರಸಸ್ಯಗಳನ್ನು ಬಳಸಿ ಅಡುಗೆ ಮಾಡುತ್ತಿದ್ದರು. ಚಿತ್ರತಂಡದಲ್ಲಿದ್ದ ನಮಗೆಲ್ಲ ನಟಿಯರನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತಿತ್ತು. ಅವರು ಇಷ್ಟು ಕೆಟ್ಟ ಊಟ ಮಾಡಿ ದಿನವೂ ಎಂಟು ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡಬೇಕಿತ್ತು. ನಾವೆಲ್ಲರೂ ಸೇರಿ ನಮ್ಮ ಹಣದಿಂದ ದಿನವೂ ಗೆಣಸನ್ನು ಕೊಂಡು ತರುತ್ತಿದ್ದೆವು. ಅದನ್ನು ಡಾರ್ಮಿಟರಿಯ ಸ್ನಾನದ ಟಬ್ಬಿನಲ್ಲಿ ಕೆಟಲ್ನಲ್ಲಿ ಬೇಯಿಸಿದಂತೆ ಬೇಯಿಸಿ ಹುಡುಗಿಯರಿಗೆ ಕೊಡುತ್ತಿದ್ದೆವು.

ನಂತರ ಆ ಹುಡುಗಿಯರ ತಂಡದ ನಾಯಕಿಯಂತಿದ್ದ ಯಗುಚಿ ಯೊಕೊಳನ್ನು ಮದುವೆಯಾದೆ. ಆ ಸಮಯದಲ್ಲಿ ಆಕೆ ನಟಿಯರ ಪರವಾಗಿ ಆಗಾಗ ನನ್ನ ಹತ್ತಿರ ಬಂದು ವಾದಿಸುತ್ತಿದ್ದಳು. ಆಕೆ ಬಹಳ ಹಠಮಾರಿ ಮತ್ತು ಯಾವ ಕಾರಣಕ್ಕೂ ರಾಜಿಯಾಗದ ವ್ಯಕ್ತಿ. ನನ್ನದು ಅದೇ ಸ್ವಭಾವವಾದ್ದರಿಂದ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಕಾದಾಟಗಳು ಐರಿ ಟಕಾಕೊ ಮಧ್ಯಸ್ಥಿಕೆಯಿಂದ ಶಾಂತಿಯುತವಾಗಿ ಮುಗಿಯುತ್ತಿತ್ತು. ಆದರೆ ಈ ಸಂಧಾನ ಅಷ್ಟು ಸುಲಭವಾಗಿರಲಿಲ್ಲ.

The Most Beautiful ಸಿನೆಮಾ ವಿಶೇಷ ಎನ್ನಿಸುವಂತಹ ಸವಾಲುಗಳನ್ನು ಎದುರಿಸಿತು. ನನಗಿಂತ ಅಥವ ನನ್ನ ಚಿತ್ರತಂಡಕ್ಕಿಂತ ಅದು ಯುವನಟಿಯರ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಮತ್ತೆಂದೂ ಅವರು ಇಂತಹದ್ದನ್ನು ನೋಡಲು ಸಾಧ್ಯವಾಗಲಿಲ್ಲ. ಅದೇನೋ ಗೊತ್ತಿಲ್ಲ ಈ ಸಿನೆಮಾದಲ್ಲಿ ನಟಿಸುವಾಗ ಎದುರಿಸಿದ ಒತ್ತಡದಿಂದಲೋ ಅಥವ ಬೇರೆ ಕಾರಣಗಳಿಂದಲೋ ಈ ಸಿನೆಮಾದಲ್ಲಿ ನಟಿಸಿದ ಬಹುತೇಕ ನಟಿಯರು ತಮ್ಮ ವೃತ್ತಿಯನ್ನು ಬಿಟ್ಟುಕೊಟ್ಟು The Most Beautiful ಮುಗಿಯುತ್ತಿದ್ದಂತೆ ಮದುವೆಯಾಗಿಬಿಟ್ಟರು. ಅವರಲ್ಲಿ ಬಹಳಷ್ಟು ಹುಡುಗಿಯರಿಗೆ ಅದ್ಭುತ ನಟನಾ ಸಾಮರ್ಥ್ಯವಿತ್ತು. ಭವಿಷ್ಯದಲ್ಲಿ ಅವರು ಉತ್ತಮ ನಟಿಯರಾಗುತ್ತಾರೆ ಎನ್ನುವ ಭರವಸೆಯಿತ್ತು. ಖುಷಿ ಪಡಬೇಕೋ ಅಥವ ದುಃಖಿಸಬೇಕೋ ತಿಳಿಯುತ್ತಿಲ್ಲ. ನಾನಷ್ಟು ಒರಟಾಗಿ ಸ್ವಾರ್ಥದಿಂದ ನಡೆದುಕೊಂಡಿದ್ದರಿಂದಲೇ ಅವರು ನಟನಾ ವೃತ್ತಿಯನ್ನು ಬಿಟ್ಟರು ಎನ್ನುವುದನ್ನು ನಂಬುವುದು ನನ್ನಿಂದ ಸಾಧ್ಯವಿಲ್ಲ.

ನಂತರದ ವರ್ಷಗಳಲ್ಲಿ ನಟನೆಯನ್ನು ಬಿಡಲು ಕಾರಣವೇನೆಂದು ಅವರಲ್ಲಿ ಕೆಲವರನ್ನು ಕೇಳಿದಾಗ ನಾನು ಅವರಿಂದ ಕೆಲಸ ತೆಗಿಸಿದ ರೀತಿಯಿಂದ ಅವರು ಈ ವೃತ್ತಿಯನ್ನು ಬಿಡಲಿಲ್ಲ ಎಂದು ಹೇಳಿದರು. ನನ್ನ ಚಿತ್ರದಲ್ಲಿ ನಟಿಸಿದ್ದು ಅವರಿಗೆ ಸಾಮಾನ್ಯ ಹೆಂಗಸರಾಗಲು ಸಿಕ್ಕ ಮೊದಲ ಅವಕಾಶ ಎಂದು ಹೇಳಿದರು. ನಟಿಯರಾಗಿ ತಮ್ಮಎಲ್ಲ ಸುಮ್ಮಾನಗಳನ್ನು ಬದಿಗಿಟ್ಟು ಸಾಮಾನ್ಯ ಮಹಿಳೆಯರಂತೆ ಕೆಲಸ ಮಾಡಿದರೆಂದು ಹೇಳಿದರು. ಅವರ ಮಾತುಗಳನ್ನು ಕೇಳಿದಾಗ ಅವರೆಷ್ಟೇ ಇಲ್ಲವೆಂದರೂ ನನ್ನ ಮನಸ್ಸಿಗೆ ನೋವಾಗಬಾರದೆಂದು ಹಾಗೆ ಹೇಳಿದರು ಎನ್ನಿಸಿತು. ಅವರಿಂದ ಅದೆಷ್ಟು ಕೆಲಸ ಮಾಡಿಸಿದೆನೆಂದರೆ ಅವರು ನಟನೆಯನ್ನು ಬಿಡುವ ನಿರ್ಧಾರ ಮಾಡುವುದರ ಹಿಂದೆ ಆ ಕಾರಣವೂ ಕೆಲಸ ಮಾಡಿತ್ತು ಎನ್ನುವುದು ಸತ್ಯ.

ಆ ನಟಿಯರು ನಿಜಕ್ಕೂ ತಮ್ಮ ಅತ್ಯುತ್ತಮ ನಟನಾ ಸಾಮರ್ಥ್ಯದೊಂದಿಗೆ ನನ್ನ ಚಿತ್ರದಲ್ಲಿ ನಟಿಸಿದರು. The Most Beautiful ಪ್ರಮುಖ ಚಿತ್ರವಲ್ಲದಿದ್ದರೂ ವೈಯುಕ್ತಿಕವಾಗಿ ನನಗೆ ಬಹಳ ಪ್ರಿಯವಾದದ್ದು.