“ಈ ಕವಿತೆಗಳನ್ನು ಓದುತ್ತಿದ್ದರೆ ಉಗುಳು ನುಂಗುವ ಹಾಗಾಗುತ್ತದೆ. ಎಷ್ಟೆಲ್ಲ ಸೊಗಸಿದೆ ಈ ಲೋಕದಲ್ಲಿ ಭಗವಂತಾ…ಸಖ್ಯವೆಂದರೆ ಇದೆಯೋ ಎನಿಸುತ್ತದೆ. ಇದನ್ನು ಬರೆದ ಕಾಲಕ್ಕೆ ಇದನ್ನು ಬರೆದವಳು ಖಂಡಿತ ಹೆಣ್ಣಲ್ಲ, ಹೆಣ್ಣು ಹೀಗೆ ಬರೆಯಲೇ ಆರಳು ಎಂದೆಲ್ಲ ವಾಗ್ವಾದಗಳಾಗಿದ್ದವು. ನನಗೆ ಬರೆದವರು ಯಾರೆಂದು ಗೊತ್ತಿರದೆ ಇದ್ದರೂ.. ಇದನ್ನು ಹೆಣ್ಣೆ ಬರದಿರಲಿ ದೇವರೆ.. ಗಂಡಾದರೆ ಇವೂ ಮತ್ತೆ ಸುಳ್ಳು ಪೊಳ್ಳು ಆರೋಪಿತ ಕನವರಿಕೆಗಳಾಗುತ್ತವೆಯಲ್ಲಾ ಅನಿಸಿತ್ತು”
ಕ್ಯಾನ್ಸರ್ ಎಂಬ ಕಾಲನ ಎದುರು ಕಾವ್ಯಗುಬ್ಬಚ್ಚಿಯಂತೆ ಹೋರಾಡುತ್ತಾ ನಿನ್ನೆ ಮುಂಜಾನೆ ಸೋಲೊಪ್ಪಿಕೊಂಡ ನಾಗಶ್ರೀ ಶ್ರೀರಕ್ಷ ಕವಿತೆಗಳ ಕುರಿತು ಸಿಂಧು ಬರೆದಿಟ್ಟುಕೊಂಡಿದ್ದ ಸಾಲುಗಳು.

 

`ಜಗವೂ ಸುಖಿಸಿದೆ ನಾವು ಸಿಕ್ಕಿರುವುದಕ್ಕೆ
ನನ್ನ ನೆತ್ತಿಯ ಮೇಲೆ ನೀನು ಹರಸಿ ಹೋಗಿರುವುದಕ್ಕೆ
ನಾನು ನನ್ನನ್ನು ಈ ಕ್ಷಣವೂ ಬಿಟ್ಟಿರಲಾರೆ
ನನ್ನ ಅತೀವ ಸುಖ ತಡೆಯಲಾರೆ’

ಈ ಕವಿತೆಯನ್ನು ಮೊದಲಬಾರಿಗೆ ಬಹಳ ವರ್ಷಗಳ ಹಿಂದೆ ಓದಿದಾಗ ಮೊದಮೊದಲ ಪ್ಯಾರಾಗಳನ್ನು ಓದಿ ಒಂದು ಸುಖದ ರೋಮಾಂಚನವೆದ್ದಿತ್ತು. ಆಹಾ ಎನಿಸಿತ್ತು. ಮತ್ತೆ ಓದಿದಾಗ ಈ ಕೊನೆಯ ಸಾಲಿನಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟೆ. ಸುಖವುಂಡು ತೃಪ್ತ ಮನದ ಹಾಡು ಇದು ಅನ್ನಿಸಿ ಈ ನಕ್ಷತ್ರಕ್ಕೆ ಸದಾ ಸುಖವಿರಲಿ, ಇನ್ನಷ್ಟು ಬರೆಯುತಿರಲಿ ಎನಿಸಿತು. ಇಲ್ಲಿಯ ಹಲವಾರು ಕವಿತೆಗಳನ್ನು ಈ ಮೊದಲೆ ಕೆಂಡಸಂಪಿಗೆಯಲ್ಲಿ ಓದಿದ್ದೆ. ಕೆಂಡಸಂಪಿಗೆಯ ಅನಾಮಿಕತೆ, ಅನಾಮಿಕ ಕಮೆಂಟುಕೋರತೆ, ತುಂಟತನ, ಈ ನಕ್ಷತ್ರಳ ಕವಿತೆ ಓದಿ ಮಡಿಹುಡಿಯೆಲ್ಲ ಹಪ್ಪಹಗುರಾಗಿ ಉದುರಿ ಬಿದ್ದು ಗಾಬರಿಯಾಗುತ್ತಿದ್ದವರ ಪರದಾಟ ಎಲ್ಲ ಮಜವೆನಿಸುತ್ತಿತ್ತು. ಒಂದೊಂದು ಸಲ ಮೋಹಿತನೆ ನಕ್ಷತ್ರಳನ್ನ ಆವಾಹಿಸಿ ಬರೆದನೋ ಎನಿಸುವ ಹಾಗೆ ಬರೆದರೂ… ಇದು ಹೆಣ್ಣಿನ ತೀವ್ರತೆ ಮತ್ತು ಪೂರ್ಣತೆ ಅನಿಸುವ ಹಾಗಿನ ಸಾಲುಗಳು. ಈ ನಕ್ಷತ್ರ ನಾಗಶ್ರೀ ಎಂದು ಗೊತ್ತಾದಾಗ ಸಕ್ಕತ್ ಖುಷಿಯಾಗಿತ್ತು. ಯಾಕೆಂದರೆ ಕಾವ್ಯ ಶಿಲ್ಪ ಮತ್ತು ಕಾಷ್ಟ (ಕಷ್ಟ..?!) ಇತ್ಯಾದಿಗಳ ಅರಿವಿಲ್ಲದ ಕಾವ್ಯ ಮೋಹಿ ನಾನು. ಕವಿತೆಯೆಂದರೆ ರಾತ್ರಿಯಲ್ಲೂ ಎದ್ದು ಹಗಲುಗನಸು ಕಾಣುವಷ್ಟು ಹುಕಿಯಿರುವ ನನಗೆ ಈ ಕವಿತೆಗಳ ಅಪ್ಪಟ ಮತ್ತು ತಾಜಾ ಪುಳಕಗಳು, ಸಿಟ್ಟು ಸೆಡವುಗಳು, ಹಂಬಲಗಳು, ಕೈತಿರುವಿ ನಡೆದು ಆ ಕಡೆ ಕೂತು ಮತ್ತೆ ತೀವ್ರತೆಯಿಂದ ಬಯಸಿ ಸುರಿವ ಕಣ್ಣೀರು, ಇದೆಲ್ಲ ಸಂತಸ ಸಂಕಟಗಳನ್ನು ಅನುಭವಿಸುತ್ತಲೇ ಸುತ್ತಲ ಆಕಾಶವನ್ನ, ಕತ್ತಲನ್ನ, ಆ ಕತ್ತಲಿನಿಂದಾಗಿಯೇ ಮಿನುಗುವ ಚುಕ್ಕೆಯನ್ನ, ಮುಖವೂದಿಸಿ ಕೂತ ಚಂದಿರನನ್ನ, ಈ ಎಲ್ಲವುಗಳ ನಡುವೆ ಆಡುವ ಮೋಡಗಳನ್ನ, ಮೋಡಗಳನ್ನ ಓಡಿಸಿ ಉಸ್ಸೆನುವ ಗಾಳಿಯನ್ನ, ಗಾಳಿಯನ್ನೇ ಭಾರವಾಗಿಸಿ ಸುರಿವ ಹನಿಗಳನ್ನ, ಸುರಿದದ್ದು ಸಾಲದೇ ಹರಿವ ತೊರೆಯನ್ನ, ತೊರೆಯಂಚಿನ ಕೆಸರನ್ನ, ಕೆಸರು ಮುಗಿದಲ್ಲಿ ಹಸಿರಾದ ಕಾಡನ್ನ, ಕಾಡು ಹಕ್ಕಿಗಳ ಕೂಜನವನ್ನ, ಕೂಜನಕೆ ಮರುಳಾಗಿ ನೆರಳಲ್ಲಿ ಕೂತ ನಮ್ಮೊಳಗನ್ನ ಪದಪದಗಳಲ್ಲಿ ನೇಯ್ದು ಕಟ್ಟಿದ ಪರಿಮಳದ ಮೊಗ್ಗುಮಾಲೆಯಾಗಿದ್ದವು ಈ ಕವಿತೆಗಳು. ತೀರಾ ಇತ್ತೀಚೆಗೆ ಅಥವಾ ಕೆಂಡಸಂಪಿಗೆ ನಿಂತ ಮೇಲೆ ನಾಗಶ್ರೀಯನ್ನು ಓದಿದ್ದು ತುಂಬ ಅಪರೂಪ. ಒಂದಷ್ಟು ದಿನ ಅವಧಿಯಲ್ಲಿ ಏಲಾಗೀತೆ ಹಾಡಿದರೂ ಅಲ್ಲಿನ ಪುಟಗಳಲ್ಲಿ ಪುಟ್ಟ ಸೀಟಲ್ಲಿ ಕಷ್ಟಪಟ್ಟು ಮೈದೂರಿಸಿ ಕೂತ ದೊಡ್ಡ ಹುಡುಗಿಯ ಹಾಗೆ ಅನಿಸಿಬಿಟ್ಟಿತು.

ನಾಗಶ್ರೀ ನಖಶಿಖಾಂತ ಕವಿ. ಅವಳಿಗೆ ಕಂಡಿದ್ದು ಕವಿತೆ ಮಾತ್ರ. ಬರೆದಿದ್ದು, ಬರೆಯದೆ ಬಿಟ್ಟಿದ್ದು, ಬರೆಯಲಾಗದೆ ಹೋಗಿದ್ದು, ಬದುಕಿರುವುದು, ಸುಖಿಸಿರುವುದು, ಸಿಟ್ಟಾಗಿರುವುದು, ನಗುವುದು ಮತ್ತು ನಗಿಸುವುದು, ಗುಟ್ಟಾಗಿಯೇ ಅಳುಬಂದರೂ ಅಳದೆ ಇರುವುದು ಎಲ್ಲದರಲ್ಲು ಕವಿತೆಯೇ. ಅವಳು ಆಗಿಷ್ಟು ದಿನ ಅಪ್ಲೋಡ್ ಮಾಡುತ್ತಿದ್ದ ಪ್ರೊಫೈಲ್ ಫೋಟೋಗಳಂತೂ ಆ ಕವಿತೆಗಳ ಅಧಿನಾಯಕಿಯೇ ಮೈದಳೆದಳೋ ಎಂಬಂತೆ. ಇವತ್ತಿಗೂ ಪೆಜತ್ತಾಯ ಅಂಕಲ್..ನೋಡಮ್ಮ ಇವಳು ನಾಗಶ್ರೀ ಇವನು ಶ್ರೀರಕ್ಷ ಅಂತ ಪರಿಚಯಿಸಿದಾಗ ನನ್ನ ಮುಖದಲ್ಲಿ ಕಂಡ ಗಲಿಬಿಲಿ ಕಂಡು ಅವರು ನಕ್ಕಿದ್ದು ಕಿವಿಯಲ್ಲಿ ಅನುರಣಿಸುತ್ತದೆ. ಶ್ರೀರಕ್ಷಾ ಅಂದರೆ ಅವಳ ಹೆಸರೇ ಅಂದುಕೊಂಡಿದ್ದೆ. ಆದರೆ ಅವನು ಅವಳ ಹೆಸರೂ ಹೌದು ಉಸಿರೂ ಹೌದು ಅಂತ ನಕ್ಕಿದ್ದರು. ಆಮೇಲೆ ಅವಳ ಮುದ್ದು ಮಗಳು. ಅಮ್ಮ ಮಗಳು ಇಬ್ಬರು ಇರುವ ಫೋಟೊ ನೋಡಿದರೆ ಯಾರು ಹೆಚ್ಚು ಮುದ್ದಾದ ಕವಿತೆ ಅಂತ ಯೋಚಿಸುವಾಗ ನಾಗಶ್ರೀಯ ಒಂದು ಚೂರು ಉತ್ತೇಜಿತ ಮುಖಮುದ್ರೆಯು ಮುಗ್ಧ ಮುಖದ ಮಗಳನ್ನೇ ಗೆಲ್ಲಿಸಿದ್ದು ನೆನಪಾಗುತ್ತಿದೆ. ಒಟ್ಟಿನಲ್ಲಿ ನನಗೆ ಇಷ್ಟವಾದ ಮಳೆಯಂತಹ ಕವಿ ಇವಳು.

ಪ್ರತೀ ಸಲ ಮಳೆ ಬಂದಾಗಲೂ ಅದೇ ಆಕಾಶ, ಅದೇ ನೆಲ, ಆದರೆ ಹೊಸಾ ಮೋಡ ಹೊಸಾ ಮಳೆ. ಮತ್ತು ಅಪ್ಪಟ ಒದ್ದೆ ಮಾರ್ದವ.

ಕೆಲವು ಕವಿತೆಗಳು ಇತ್ತೀಚಿನವು ತುಂಬ ಗದ್ಯಾನುಸಾರಿ ಲಯವನ್ನ ಹಿಡಿದಿವೆ. ಮುಂಚೆ ಮುಟ್ಟಿದರೆ ಕವಿತೆ ಸೊಲ್ಲು ಉದುರುವ ಹಾಗಿದ್ದ ಚುರುಕು ಚುರುಕಾಗಿ ಚಿಗುರಿ ಹಬ್ಬುತಿದ್ದ ಬದುಕಿನ ಮರದ ಗೆಲ್ಲುಗಳಲ್ಲೀಗ ಮಾಗಿದ, ಪುಟಿಯಲು ಹಿಂದೆ ಮುಂದೆ ನೋಡುವ ಹಣ್ಣಿಡಿಕಿರಿದ ಮರದ ಮಂದತನ ಬಂದ ಹಾಗೆನಿಸಿದೆ ನನಗೆ. ನಾಗಶ್ರೀಯ ಆರೋಗ್ಯ ಅನಾರೋಗ್ಯ ಎರಡಕ್ಕೂ ಮತ್ತು ಅವಳ ಕವಿತೆಗಳಿಗೂ ಸಂಬಂಧವಿಲ್ಲ ಅನಿಸುತ್ತದೆ ನನಗೆ. ಆ ಕವಿತೆಗಳು ನಾಗಶ್ರೀಯಲ್ಲಿ ಮೂಡಲು ಕಾಯುತ್ತಿದ್ದವು. ಕಾಯುತ್ತಿವೆ. ತುಂಬ ಚಂದದ ಕವಿತೆಗಳು ಒಳ್ಳೆಯ ಕವಿಗೆ ಕಾದು ಕೂತಿರುತ್ತವೆ. ಒಳ್ಳೆಯ ಕವಿ ಅಂದರೆ ಸಾಹಿತ್ಯ ಅರೆದು ಕುಡಿದು, ಮಾತ್ರೆಗಳನ್ನೆಲ್ಲ ಜೇಬಲ್ಲಿಟ್ಟು, ಸೊಲ್ಲು ಸೊಲ್ಲಿಗೆ ಛಂದಸ್ಸು ನಿರುಕಿಸುವುದು ಅಲ್ಲ ಅಂತ ನನಗೆ ಸದಾ ಅನಿಸುತ್ತಿರುತ್ತದೆ. ಆದರೆ ಹಾಗಂತ ಈ ಕಾವ್ಯೋಪಕರಣಗಳ ಉಪಯೋಗ ಗೊತ್ತಾದ ಒಳ್ಳೆಯ ಕವಿಯ ಕೈಯಲ್ಲಿ ಕವಿತೆ ಹೇಗೆಲ್ಲ ಮಣಿಯುತ್ತದೆ, ನಲಿಯುತ್ತದೆ ಮತ್ತು ಆ ನಲಿವು ಓದುಗರ ಹಿಗ್ಗಿನ ಕೋಶವನ್ನ ಹೇಗೆ ಅರಳಿಸುತ್ತದೆ ಎಂಬುದನ್ನು ಬಲ್ಲೆ. ಆದರೂ ಅಲ್ಲೊಂದು ಇಲ್ಲೊಂದು ಬಂಧಕ್ಕೊಳಪಡದ ನಿಶ್ಚಿಂತ ನಿರಭ್ರ ಕವಿಯ ಮರವೊಂದು ವಸಂತ ಬಂದಿದ್ದು ಗೊತ್ತಾದ ಕೂಡಲೆ ಸಡನ್ನಾಗಿ ಹಸಿರುಹೊದ್ದು ನಿಲ್ಲುವ ಹೊಂಗೆಯ ಮರದ ಹಾಗೆ ನಳನಳಿಸಿ ಓದುಪಯಣದ ಹಾಯಾದ ನೆರಳ್ಗೊಡೆಯಾಗುತ್ತದೆ. ಗಾಳಿಯಲ್ಲಿ ಪರಿಮಳ. ನೋಡಿ ನಾಗಶ್ರೀಯ ಕವಿತೆಯಲ್ಲಂತು ಅನೇಕ ಪರಿಮಳವಿದೆ. ಕೆಲವಂತೂ ಈ ಪರಿಮಳದ ಹಾಲು ಕವಿತೆಯಲ್ಲಿ ಮಾತ್ರ ಯಾಕೆ ಸುರಿಯುವುದು ಎಂದು ಯೋಚಿಸುವ ಹಾಗೆ ಮಾಡುತ್ತವೆ.

ನಾನು ನನ್ನ ಮಾತುಗಳಲ್ಲಿ ನಾಗಶ್ರೀಯ ಕವಿತೆಯ ಬಗ್ಗೆ ಹೇಳಲು ಹೊರಟು ಸೋತೆ. ಯಾಕೆಂದರೆ ಈ ಕವಿತೆಗಳ ಬಗ್ಗೆ ನಿಜಕ್ಕೂ ಹೇಳಲು ಆ ಕವಿತೆಗಳು ಏನನ್ನೂ ಉಳಿಸಿಲ್ಲ. ಆ ಕವಿತೆಗಳೆ ಅವುಗಳ ಭಾಷ್ಯ. ಒಂದ್ನಾಲ್ಕು ಕವಿತೆಗಳಿಂದ ಆಯ್ದ ಸಾಲುಗಳನ್ನು ಹೇಳುವೆ. ಇದು ಆ ಇಡೀ ಕವಿತೆ ಓದಲೇಬೇಕು ಈಗಲೇ ಎಂದು ನಿಮಗನ್ನಿಸಲಿ ಎಂದು:

(ಇಲ್ಲೊಂದು ಎಲೆ ಗಾಳಿಯಲ್ಲಿ ಬಳುಕಿಕೊಂಡು ಕವಿತೆ)

ತೊಟ್ಟಿಗೆ ತೊಟ್ಟು ತಾಗಿಸಿ
ಮೆತ್ತಗೆ ಆಡುವಷ್ಟು ಕಾಲವಿದೆ ನಮಗೆ
ನನ್ನ ಸಂದಿ ಸಂದಿಗಳಲ್ಲಿ ನಿನ್ನನ್ನು ಹಡೆದೇ ತೀರುವೆ
ಏನಾದರೂ ಪರಿಮಳದ ಮಾತಾಡು
ನನಗೆ ಅವಸರಿಲ್ಲ, ನಿನಗೂ?
ನಮ್ಮ ಉಸಿರು ಇನ್ನಷ್ಟು ದೂರ
ಓಡುವುದಿದೆ…

ಈ ಕವಿತೆಯನ್ನು ಓದುತ್ತಿದ್ದರೆ ಉಗುಳು ನುಂಗುವ ಹಾಗಾಗುತ್ತದೆ. ಎಷ್ಟೆಲ್ಲ ಸೊಗಸಿದೆ ಈ ಲೋಕದಲ್ಲಿ ಭಗವಂತಾ…ಸಖ್ಯವೆಂದರೆ ಇದೆಯೋ ಎನಿಸುತ್ತದೆ. ಇದನ್ನು ಬರೆದ ಕಾಲಕ್ಕೆ ಇದನ್ನು ಬರೆದವಳು ಕಂಡಿತ ಹೆಣ್ಣಲ್ಲ, ಹೆಣ್ಣು ಹೀಗೆ ಬರೆಯಲೇ ಆರಳು ಎಂದೆಲ್ಲ ವಾಗ್ವಾದಗಳಾಗಿದ್ದವು. ನನಗೆ ಬರೆದವರು ಯಾರೆಂದು ಗೊತ್ತಿರದೆ ಇದ್ದರೂ.. ಇದನ್ನು ಹೆಣ್ಣೆ ಬರದಿರಲಿ ದೇವರೆ.. ಗಂಡಾದರೆ ಇವೂ ಮತ್ತೆ ಸುಳ್ಳು ಪೊಳ್ಳು ಆರೋಪಿತ ಕನವರಿಕೆಗಳಾಗುತ್ತವೆಯಲ್ಲಾ ಅನಿಸಿತ್ತು.

ನಾವು ಕೂಡುವುದನ್ನು ಹೇಗೆ ಎಂದರೆ
ಏನನ್ನುವುದು?
ಒಂದಷ್ಟು ಆಕಾಶವಾದರೆ ಸಾಕು
ನಾನು ಹೂವಾಗುವೆ
ನಾವು ಕೂಡುವುದನ್ನು ಹೀಗಲ್ಲದೆ
ಹೇಗೆ ಹೇಳುವುದು? (ನೀನು ಎಂದರೆ ಏನು ನನಗೆ ಕವಿತೆ) ಈ ಕವಿತೆಯ ಮೋಹಪರವಶತೆ ಓದಿದವರನ್ನು ಆವರಿಸಿಬಿಡುತ್ತದೆ.

ನಾಗಶ್ರೀಯ ಉಡುಪಿ ದೊಡ್ಡಣಗುಡ್ಡೆಯ ಮನೆ

(ಎತ್ತರದ ದಂಡೆಯ ಮೇಲೆ ಕವಿತೆ)

ಬಯಲಿನ ಮೇಲೆ ನೀನು ಮಲಗು
ನಿನ್ನ ಮೇಲೆ ನಾನು ಮಲಗಿ
ಆಕಾಶ ನೋಡುವೆ
ಈ ಕೊನೆಯಿರದ ನೆಲದ ತುಂಬಾ ಉರುಳಿಬಿಡು
ಒಂದು ಸಲ ನೀನು, ಒಂದು ಸಲ ನಾನು
ಕನ್ನಡಿಯ ಹಾಗಿರುವ ಆಕಾಶಕ್ಕೆ
ಬೆನ್ನು ತೋರಿಸಿ
ಮಳೆ ಸುರಿದರೆ ನಾವೂ ಮಳೆ
ಬಿಸಿಲಿಗೆ ನಾವೂ ಬಿಸಿಲು …ಎಂದು ಉತ್ತೇಜಿಸುವ ಮೋಹೋನ್ಮತ್ತ ಕವಿ ಮುಂದಿನ ಸಾಲಿನಲ್ಲಿ ದಿವ್ಯಕ್ಕೆ ಹೊರಳುತ್ತಾಳೆ:

ಬಯಲಿನ ತುಂಬ ದಾರಿಮಾಡಿಕೊಂಡು
ನಡೆದು ಹೋಗುವಂತಹವನು ನೀನು
ಅಲ್ಲೆ ನಿಂತು ನೋಡುವಂತಹವಳು ನಾನು.
ಇದು ನಾನೆ. ಇದು ಅವನೆ ಅನ್ನಿಸಿಬಿಟ್ಟಿತು ನನಗೆ ಓದಿ.

ಆದಷ್ಟೂ ಮೋಹದಿಂದಲೇ ಈ ಕವಿತೆಗಳನ್ನು ಈ ಮೊದಲು ಓದಿದ್ದ ನನಗೆ ನಾಗಶ್ರೀ ಕವನ ಸಂಕಲನ ತಂದ ಹಿನ್ನೆಲೆ ಸ್ವಲ್ಪ ಹೈರಾಣಾಗಿಸಿತ್ತು. ಮರೆತು ಓದಿದೆ. ಈ ಪದ್ಯ ಓದುತ್ತ ಕಣ್ಣೀರಾದೆ.

“ಮಗುವೇ,
ಆದರೂ,
ಮಡಚಿದ್ದ ಮೆಟ್ಟಲೇರಿ ಎಲ್ಲಿಂದ ಬಂದೆ” (ಮಡಚಿದ್ದ ಮೆಟ್ಟಲೇರಿ ಎಲ್ಲಿಂದ ಬಂದೆ ಕವಿತೆ)

ಬೊಗಸೆಯಲ್ಲಿಯೇ ಇರುವ ಭಾಗ್ಯವನ್ನ ಹಿಡಿದಿಡಲಾಗದ ಈ ಸಾಲುಗಳ ಅಸಹಾಯಕತೆ ನನ್ನನ್ನು ಅಳಿಸುತ್ತಿದೆ. ಅಥವಾ ಯಾರಿಗ್ಗೊತ್ತು ಈ ಸಾಲುಗಳೇ ಎಷ್ಟೋ ಅಸಹಾಯ ಕ್ಷಣಗಳ ದುರ್ಭರತೆಯನ್ನು ಹಗುರಾಗಿಸಿ ಬೊಗಸೆಯಿಂದ ಜಾರುತ್ತಾ ಮತ್ತೆ ತುಂಬಿಕೊಳ್ಳಲು ಕಾಯಬಹುದು.

(ನನಗೆ ಯಾರೂ ಅಲ್ಲದ ನನ್ನ ಹಕ್ಕಿಯೇ ಕವಿತೆ)

ಮತ್ತೆ ಬೆಳಗಾಗಿದೆ
ನನ್ನ ಬೆಳಗೇ!! ನಿನ್ನ ಪದತಲದಲ್ಲಿ
ನನ್ನ ನವಿರು ಭಕುತಿಗೆ
ಇರುವೆ ನಾನು ಹಾಗೆಯೇ
ಬೇಕಾದರೆ ಈ ರಾತ್ರಿಯ ಆಣೆ
ಕೃಷ್ಣಯ್ಯನ ಆಣೆ..

*******

ನಿನ್ನ ರಥದ ತುದಿಯಲ್ಲಿ
ನಾನು ನೋಡುವ ನನ್ನ ಒಳಬೆಳಕು
ನಿನ್ನ ಹೊಳೆಯುವ ದೊಂದಿಗೆ
ನಿನಗೇ ಹೆಣೆದ ನನ್ನ ಕರುಳಿದೆ
ಎಂದು ನಾನು ರಮಿಸಿ ಬೇಡಿರುವೆ.

ಈ ಸೊಗಸಾದ ಪದ್ಯಗಳ ಒಡತಿಯ ಸಂಕಲನದ ಕೊನೆಯ ಕವಿತೆಯ ಸೊಲ್ಲು “ಇನ್ನೂ ಬೆಳಗಾಗಲಿಲ್ಲ, ಬೆಳಗೇ ಇಲ್ಲದ ಈ ಇರುಳು ಮುಗಿಯುವುದೂ ಇಲ್ಲ” ಓದಿ ಬೇಸರಾಯಿತು. ಪ್ರಕಾಶಕರಲ್ಲಿ ವಿನಂತಿ. ಮುಂದಿನ ಮುದ್ರಣದಲ್ಲಿ ದಯವಿಟ್ಟು ಇದನ್ನು ಕೊನೆಯ ಕವಿತೆಯಾಗಿ ಹಾಕಬೇಡಿ. ಅವಳ ಒದ್ದೆ ಮುದ್ದೆ ಮಾರ್ದವ ಹಂಬಲಗಳಲ್ಲಿ ಸಂಕಲನ ಕೊನೆಯಾಗಲಿ. ಈ ಮೆದು ಮಾರ್ದವಗಿತ್ತಿ, ಗಟ್ಟಿಗಿತ್ತಿಯಾಗಲೆಂದು ಒಣಗಬೇಕಿಲ್ಲ. ಸುಳ್ಳೆಪಳ್ಳೆ ನಕ್ಕಂತೆ ನಟಿಸಬೇಕಿಲ್ಲ. ಆ ಮಾರ್ದವ ಸಿಟ್ಟಾಗಲಿ, ಕನವರಿಕೆಯಾಗಲಿ ಅದು ಕವಿಯ ಬಳಲಿಕೆಯನ್ನು ನೀಗುತ್ತದೆ. ಓದುಗರ ಬಾಯಾರಿಕೆಯನ್ನು ತಣಿಸುತ್ತದೆ. ನಮ್ಮ ಕಣ್ಣಲ್ಲಿ ತುಂಬುವ ಹನಿ ಅವಳ ಹಕ್ಕಿಗೆ ನೀರೂಡುವುದು ನನಗೆ ಚೂರೂ ಇಷ್ಟವಿಲ್ಲ. ನಮ್ಮ ಉಹ್ ಮತ್ತು ಆಹ್ ಗಳು ಅವಳ ಕವಿಮನದ ಅಂಗಳದಲ್ಲಿ ಓಲಾಡಲಿ… ಮತ್ತಷ್ಟು ಕವಿತೆ ಲವಲವಿಕೆ ಪುಟಿದು ಬರಲಿ.ನಾಗಶ್ರೀ ಎಂಬ ಕವಿಯೇ ನೀನಿನ್ನೂ ನಮ್ಮನ್ನು ಚಕಿತಗೊಳಿಸಬೇಕಿದೆ. ಉಗುಳು ನುಂಗುವಂತೆ, ಮಡಿ ಮಿಡುಕಾಡುವಂತೆ ಬರೆಯಬೇಕಿದೆ. ಓದಿ ನಾವು ಆಹ್ ಎನ್ನಲೇಬೇಕಿದೆ ಎಂದು ಈ ಲೇಖನದ ಕೊನೆಯ ಸಾಲು ಬರೆದು ನನ್ನಲ್ಲೇ ಇಟ್ಟುಕೊಂಡಿದ್ದೆ. ಈಗ ನೀವು ಇದನ್ನು ಓದುವ ಹೊತ್ತಿಗೆ ಕವಯಿತ್ರಿ ನಕ್ಷತ್ರವಾಗಿ ಹೋಗಿದ್ದಾಳೆ.